ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳ ಒಂದು ಪರಂಪರೆಯೇ ಇದೆ. ನವೋದಯದ ಆರಂಭದ ಕಾಲದಲ್ಲಿ ಬಂದ ಐತಿಹಾಸಿಕ ಕಾದಂಬರಿಗಳು ಪುನರುತ್ಥಾನ ಕಾಲದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿದ್ದವು. ನಾಡು-ನುಡಿ- ರಾಜ್ಯ- ದೇಶಗಳ ಬಗೆಗೆ ಅಭಿಮಾನ ಮೂಡಿಸುವಂಥ ಬರೆಹಗಳು ಬ್ರಿಟಿಷರ ವಿರುದ್ಧದ ಹೋರಾಟ ಗಟ್ಟಿಗೊಳ್ಳುತ್ತಿದ್ದ ಸಂದರ್ಭದಲ್ಲಿ ಅಗತ್ಯವಾಗಿತ್ತು. ರಾಷ್ಟ್ರೀಯತೆಯ ಪ್ರಚೋದನೆಯು ಒಂದು ಉದ್ದೇಶವಾದರೆ ಹಿಂದೂ ಸನಾತನವಾದದ ಸಮರ್ಥನೆ ಮತ್ತು ವಿರೋಧ ಇನ್ನೊಂದು ಮುಖವಾಗಿತ್ತು. ವಿಜಯನಗರ ಸಾಮ್ರಾಜ್ಯದ ೪೫೦ನೆ ವರ್ಷಾಚರಣೆಯನ್ನು ವೈಭವದಿಂದ ಮಾಡಲಾಯಿತು. ಈ ಸಂದರ್ಭದಲ್ಲಿಯೇ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಹೇಳುವ ಕೃತಿಗಳು ಬಂದವು. ಗಳಗನಾಥರ ಮಾಧವ ಕರುಣಾ ವಿಲಾಸ, ದುರ್ಗದ ಬಿಚ್ಚುಗತ್ತಿ, ಕನ್ನಡಿಗರ ಕರ್ಮಕಥೆ, ಬೆಟಗೇರಿ ಕೃಷ್ಣಶರ್ಮರ ರಾಜಯೋಗಿ, ಅಶಾಂತಿಪರ್ವ, ದೇವುಡು ಅವರ ಮಯೂರ, ಶ್ರೀನಿವಾಸ ಕೊರಟಿಯವರ ಪರಮೇಶ್ವರ ಪುಲಿಕೇಶಿ, ಮುದವೀಡು ಕೃಷ್ಣರಾವ್ ಅವರ ಕಿತ್ತೂರು ಮುತ್ತಿಗೆ, ನಾಗೇಶ ಅವರ ಎಚ್ಚಮ ನಾಯಕ, ಬಿ.ಪುಟ್ಟಸ್ವಾಮಯ್ಯ ಅವರ ನೂರ್ಮಡಿ ತೈಲಪ ಹೀಗೆ ದೊಡ್ಡ ಪಟ್ಟಿಯನ್ನೇ ನೀಡಬಹುದು. ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ದೌಲತ್ ಹಾಗೂ ಮೊಘಲರ, ವಿಜಯನಗರದ ಅರಸರ ಹಿನ್ನೆಲೆಯಲ್ಲಿ ಬರೆದ ಕಾದಂಬರಿಗಳ ಸರಣಿ, ಮಾಸ್ತಿಯವರು ಬರೆದ ‘ಚಿಕವೀರ ರಾಜೇಂದ್ರ’ ಕೃತಿಯೂ ಪ್ರಸಿದ್ಧವಾದದ್ದೇ. ಚಿತ್ರದುರ್ಗ ಮೂಲದವರಾದ ತರಾಸು ಅವರು ಬರೆದ ಐತಿಹಾಸಿಕ ಕಾದಂಬರಿಗಳ ಪರಂಪರೆಯೂ ನಮ್ಮ ಮುಂದಿದೆ. ಅವರು ತಮ್ಮ ಸಾಮಾಜಿಕ ಕಾದಂಬರಿಗಳಲ್ಲೂ ಎಲ್ಲಿ ಸಾಧ್ಯವೋ ಅಲ್ಲೆಲ್ಲ ಇತಿಹಾಸದ ಸ್ಪರ್ಶ ನೀಡಲು ಪ್ರಯತ್ನಿಸಿದ್ದಾರೆ. ‘ದುರ್ಗಾಸ್ತಮಾನ’ ಚಿತ್ರದುರ್ಗದ ಪಾಳೆಗಾರರ ಕುರಿತು ಅವರು ರಚಿಸಿದ ಪ್ರಖ್ಯಾತ ಕಾದಂಬರಿ. ತರಾಸು ಐತಿಹಾಸಿಕ ಘಟನೆಗಳನ್ನು ಆಧರಿಸಿ ಬರೆದ ಕಾದಂಬರಿಗಳಲ್ಲಿ ಸಂಘರ್ಷವನ್ನು ವಸ್ತುನಿಷ್ಠ ನೆಲೆಯಲ್ಲಿ ಗ್ರಹಿಸಲು ವಿಫಲರಾದರು ಎಂಬ ಅಭಿಪ್ರಾಯವೂ ಇದೆ. ಇತಿಹಾಸದ ಘಟನೆಗಳಲ್ಲೂ ಮಾನವ ಕ್ರಿಯೆಗಳು ಮೂರ್ತರೂಪವನ್ನು ಪಡೆಯುವಂಥದ್ದು ಎಂಬ ತಿಳಿವಳಿಕೆಯ ಅಭಾವವನ್ನು ವಿಮರ್ಶಕರು ಅವರಲ್ಲಿ ಗುರುತಿಸಿದ್ದಾರೆ. ‘ದುರ್ಗಾಸ್ತಮಾನ’ದ ಬಗೆಗೆ ಶಿವರಾಮು ಕಾಡನಕುಪ್ಪೆಯವರು ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ನಾವು ಇದನ್ನು ಕಾಣಬಹುದು. ‘‘ಆಧುನಿಕ ಲೇಖಕನಾಗಿ ಇತಿಹಾಸದ ವಸ್ತುವೊಂದನ್ನು ಎತ್ತಿಕೊಂಡು ನಾವು ಬರೆಯುವಾಗ ಸಮಕಾಲೀನ ಮೌಲ್ಯಗಳು ಅದರಲ್ಲಿ ವ್ಯಕ್ತವಾಗಬೇಕಾದ ಅಗತ್ಯ, ಗತಕಾಲದ ಚಿತ್ರಣ ವರ್ತಮಾನದ ದೃಷ್ಟಿಕೋನದಿಂದ ಹೊಸ ಅರ್ಥ-ರೂಪ ಪಡೆಯಬೇಕಾದ ಮಹತ್ವ, ವಸ್ತು ಇತಿಹಾಸವಾದರೂ ವರ್ತಮಾನದ ಬದುಕಿಗೆ ಅದು ಹೇಗೆ ಸಂಗತವೆನ್ನುವ ಪ್ರಶ್ನೆ ಇವ್ಯಾವವೂ ತರಾಸು ಅವರನ್ನು ಬಾಧಿಸದೆ ಒಂದು ಪುಟ್ಟ ಪಾಳೆಗಾರಿ ಸಂಸ್ಥಾನದ ರಾಜನೊಬ್ಬನ ಕುರಿತ ಭಾವುಕ ಅಭಿಪ್ರಾಯವೇ ಮುಖ್ಯವಾಗಿ ಲೇಖಕನ ವಸ್ತುನಿಷ್ಠ ದೃಷ್ಟಿ ತೀರಾ ಸಂಕುಚಿತವಾಗಿದೆ’’ ಎಂದಿದ್ದಾರೆ. ಈ ಅಭಿಪ್ರಾಯವನ್ನು ಅಂಥ ಎಲ್ಲ ಕಾದಂಬರಿಗಳಿಗೂ ಅನ್ವಯಿಸಬಹುದಾಗಿದೆ. ಲೇಖಕನೊಬ್ಬ ಐತಿಹಾಸಿಕ ವಸ್ತುವನ್ನು ಹೇಗೆ ಗ್ರಹಿಸುತ್ತಾನೆ ಅನ್ನುವುದರ ಮೇಲೆ ಆತನ ಕೃತಿಯ ಮೌಲ್ಯ ನಿಂತಿರುತ್ತದೆ. ತೀರ ಐತಿಹಾಸಿಕ ಘಟನೆಗಳು, ಅಂಕಿ ಅಂಶಗಳಿಗೆ ಜೋತುಬಿದ್ದರೆ ಅದು ಇತಿಹಾಸದ ಪಠ್ಯವಾಗುತ್ತದೆ. ವೈಭವೀಕರಣದ ನೆಪದಲ್ಲಿ ಬಹಳ ಕಾಲ್ಪನಿಕ ಅಂಶಗಳನ್ನು ಜೋಡಿಸಿದರೆ ಅದು ಐತಿಹಾಸಕ ಕೃತಿ ಅನ್ನಿಸಿಕೊಳ್ಳದು. ಐತಿಹಾಸಿಕ ವಿಷಯವನ್ನು ಒಳಗೊಂಡ ಕೃತಿಯನ್ನು ರಚಿಸುವುದೆಂದರೆ ಒಂದು ರೀತಿಯಲ್ಲಿ ಅಸಿಧಾರಾವ್ರತ. ಒಂದು ಕೃತಿ ಪ್ರತಿಗಾಮಿಯೋ ಪ್ರಗತಿಗಾಮಿಯೋ ಎಂದು ನಿರ್ಧರಿಸುವುದು ಲೇಖಕ ವಸ್ತುವನ್ನು ಯಾವ ರೀತಿಯಲ್ಲಿ ಅನುಸಂಧಾನ ಮಾಡಿದ್ದಾನೆ ಎನ್ನುವುದನ್ನು ಅವಲಂಬಿಸಿರುತ್ತದೆ. ಒಂದು ನಿರ್ದಿಷ್ಟ ಐತಿಹಾಸಿಕ ಬೆಳವಣಿಗೆಯಲ್ಲಿ ಸಂಭವಿಸುವ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳು ಪಡೆಯುವ ಆಯಾಮಗಳು ಲೇಖಕನ ನಿಲುವನ್ನು ಬಯಲು ಮಾಡುತ್ತವೆ. ಕೃತಿಯ ಚಲನಶೀಲತೆಗೆ ಯಾವವು ಅಡ್ಡಿಯಾಗುತ್ತವೆ, ಇದಕ್ಕೆ ಲೇಖಕ ಯಾವ ರೀತಿಯ ಪೋಷಣೆ ನೀಡಿದ್ದಾನೆ ಎಂಬುದರ ಮೇಲೆ ಅದರ ಪ್ರತಿಗಾಮಿತನ ಅಥವಾ ಪುರೋಗಾಮಿತನ ವ್ಯಕ್ತವಾಗುತ್ತವೆ. ತರಾಸು ಅವರ ಊರಿನವರೇ ಆದ ಬಿ.ಎಲ್.ವೇಣು ಅವರು ಹಲವಾರು ಕಾದಂಬರಿಗಳನ್ನು ಬರೆದವರು. ಚಿತ್ರದುರ್ಗದ ಇತಿಹಾಸವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಗಂಡುಗಲಿ ಮದಕರಿನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ ಎಂಬ ಕೃತಿಗಳನ್ನು ರಚಿಸಿದವರು. ಅವರ ಇನ್ನೊಂದು ಕೃತಿ ‘ಮಹಾಮಾತೋಶ್ರೀ ಚಿತ್ರದುರ್ಗದ ವೀರರಾಣಿ ಓಬಳವ್ವ ನಾಗತಿ’ ಈಗ ಬಂದಿದೆ. ಇತಿಹಾಸದ ಚೌಕಟ್ಟಿನಲ್ಲೇ ಕಲ್ಪನೆಯ ಕುದುರೆ ಓಡಿಸುತ್ತಾ ಕಥೆ ಕಟ್ಟುವ ಕೌಶಲ್ಯವನ್ನು ಪ್ರದರ್ಶಿಸುವುದರಲ್ಲಿ ವೇಣು ನಂಬಿಕೆ ಇಟ್ಟವರು. ಫ್ಯಾಂಟಸಿ ಹಾಗೂ ಮಾನವಾತೀತ ಕಲ್ಪನೆಗಳು ಕೂಡ ಎಪಿಕ್ ಸೃಷ್ಟಿಗೆ ಪೂರಕವಾಗಿರುತ್ತವೆ. ಐತಿಹಾಸಿಕ ಕಾದಂಬರಿಗಳನ್ನು ರಚಿಸುವವರು ಇತಿಹಾಸಕ್ಕೆ ಆದಷ್ಟೂ ಸಮೀಪವಾಗಿ ಬರೆಯುವ ಎಚ್ಚರದೊಂದಿಗೆ ಓದುಗರನ್ನು ರಂಜಿಸಲೂ ಹೆಣಗಾಡುವುದು ಅನಿವಾರ್ಯ. ಸಂಶೋಧಕರನ್ನು ಮೆಚ್ಚಿಸಲೆಂದು ಬರೆಯುವವನಲ್ಲ. ಅದರ ಅಗತ್ಯ ನನಗಿಲ್ಲ ಎಂದು ಅವರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಚಿತ್ರದುರ್ಗದ ಬಗೆಗೆ ಕುತೂಹಲ ಇರುವವರು ವೀರಮದಕರಿ ನಾಯಕ ಮತ್ತು ಒನಕೆ ಓಬವ್ವನ ಕುರಿತು ಅರಿತಿರುತ್ತಾರೆ. ಇವರನ್ನು ಹೊರತುಪಡಿಸಿಯೂ ದುರ್ಗದಲ್ಲಿ ವೀರರಿದ್ದಾರೆ. ವೀರ ನಾರಿಯರಿದ್ದಾರೆ. ಒನಕೆ ಓಬವ್ವಳಂತೆ ದುರ್ಗದಲ್ಲಿಯ ಮತ್ತೊಬ್ಬ ಪ್ರಸಿದ್ಧ ನಾರಿ ಓಬಳವ್ವ ನಾಗತಿ. ಇವಳು ಹಿರೇಮದಕರಿ ನಾಯಕರ ಪತ್ನಿ. ಗಂಡೋಬಳವ್ವ ಎಂದೇ ಇತಿಹಾಸದಲ್ಲಿ ಅವಳು ಪ್ರಸಿದ್ಧಳು. ಆಕೆಯ ರಾಜಕೀಯ ಮುತ್ಸದ್ದಿತನ, ಶೌರ್ಯ ಸಾಹಸಗಳು, ಯುದ್ಧತಂತ್ರಗಳು, ಅರಮನೆಯ ಒಳಗಿದ್ದೇ ಕುತಂತ್ರ ನಡೆಸುವವ ಹಿತಶತ್ರುಗಳ ವಿರುದ್ಧ ಆಕೆ ನಡೆಸುವ ತಂತ್ರಗಳು, ಹನ್ನೆರಡು ವರ್ಷದ ಬಾಲಕ ಮದಕರಿ ನಾಯಕನಿಗೆ ಪಟ್ಟಕಟ್ಟಲು ಆಕೆ ಎದುರಿಸಿದ ಸಮಸ್ಯೆಗಳು, ವೀರನಿಗೆ ಮಾತ್ರ ಪಟ್ಟ ಎಂಬ ಅವಳ ನಂಬಿಕೆ ಮತ್ತು ಅದನ್ನು ಸಾಧ್ಯವಾಗಿಸಲು ಆಕೆ ಪಟ್ಟಪಾಡು ಇವೆಲ್ಲವನ್ನೂ ತುಂಬ ಎಚ್ಚರಿಕೆಯಿಂದ, ಪ್ರೀತಿಯಿಂದ ಕಟ್ಟಿಕೊಟ್ಟಿದ್ದಾರೆ. ಇತಿಹಾಸ ವಿವರಗಳನ್ನು ಬಳಸಿಕೊಳ್ಳುವಲ್ಲಿ ಅವರು ಸಾಹಿತಿಯ ಸ್ವಾತಂತ್ರ್ಯವನ್ನು ಪಡೆದಿದ್ದಾರೆ. ದುರ್ಗದ ಸಹಜ ಭಾಷೆಗೆ ರಾಜಮನೆತನದ ಬಿಗುವನ್ನು ಸೇರಿಸಿ ಐತಿಹಾಸಿಕ ನಾಟಕೀಯತೆಯನ್ನು ತರುವಲ್ಲಿ ಹಾಗೂ ಅರಮನೆ ರಾಜಕೀಯದ ಷಡ್ಯಂತ್ರಗಳ ನಡುವೆಯೂ ಒಂದು ಕೌಟುಂಬಿಕ ವಾತಾವರಣವನ್ನು ಒದಗಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಸಂಬಂಧಗಳಿಗೆ ಒಂದು ಆದರ್ಶದ ಎಲ್ಲೆ ಇದೆ. ಅದನ್ನು ಮೀರದಂತೆ ಎಲ್ಲರ ನಡವಳಿಕೆ ಇದೆ. ಪಾತ್ರಗಳ ನಡುವೆ ಬಾಂಧವ್ಯದ ಬಂಧನವಿದೆ. ಪಾತ್ರಗಳೆಲ್ಲ ಈ ನೆಲದ ಮನುಷ್ಯರಾಗಿಯೇ ವರ್ತಿಸುತ್ತಾರೆ ಎಂಬುದು ಮುಖ್ಯ. ಹಲವು ಸಂಕಷ್ಟಗಳ ನಡುವೆ ಒಂದು ಗಟ್ಟಿ ವ್ಯಕ್ತಿತ್ವ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಓಬಳವ್ವ ನಾಗತಿ ಮತ್ತು ಮದಕರಿಯ ಪಾತ್ರದ ಮೂಲಕ ವೇಣು ಅವರು ಚಿತ್ರಿಸಿದ್ದಾರೆ. ಆರಂಭದಲ್ಲಿ ಪ್ರಸ್ತಾಪಿಸಿದ ನೆಲೆಯಲ್ಲಿ ಈ ಕೃತಿಯನ್ನು ಅನುಸಂಧಾನ ಮಾಡಲು ವಿಮರ್ಶಕರಿಗೆ ಅವಕಾಶಗಳಿವೆ. ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ, ಪುಟಗಳು ೩೩೬, ಬೆಲೆ ₹ ೨೫೦