ಅಖಂಡವಾದ ಕಾಲ ಪ್ರವಾಹದಲ್ಲಿ ಅದೆಷ್ಟೋ ಅಸಂಖ್ಯ ಅಲೆಗಳು. ಈ ಅಲೆಗಳನ್ನು ಲೆಕ್ಕವಿಟ್ಟವರಾರು? ಅಖಂಡ ಕಾಲವನ್ನು ಖಂಡಗಳಲ್ಲಿ ವಿಂಗಡಿಸಿ ನೋಡುವುದು ಅವರವರ ಅನುಕೂಲಕ್ಕೆ. ಒಂದೊಂದು ದೇಶಕ್ಕೆ, ಒಂದೊಂದು ಪ್ರದೇಶಕ್ಕೆ, ಒಂದೊಂದು ಧರ್ಮಕ್ಕೆ, ಒಂದೊಂದು ಮನಸ್ಸಿಗೆ ಈ ಕಾಲಖಂಡ ವಿಭಿನ್ನವಾದುದು. ಕ್ಯಾಲೆಂಡರಿಗೊಂದು, ಪಂಚಾಂಗಕ್ಕೆ ಇನ್ನೊಂದು. ಒಂದೇ ಕಾಲ, ಎಷ್ಟೊಂದು ರೂಪ!
ಇರುಳಿರುಳಳಿದು ಬರುತ್ತಿರೆ ಬೆಳಗು ದಿನದಿನವೂ ಹೊಸತು! ಈ ಕ್ಷಣದಲ್ಲಿ ಇನ್ನೊಂದು ಕ್ಷಣದಲ್ಲಿ ಇನ್ನೇನೋ ಸಂಭವಿಸಿ ಬಿಡಬಹುದು ಎಂಬ ನಿರೀಕ್ಷೆ. ಆ ಹೊಸದರ ಒಡಲಲ್ಲಿ ನಮ್ಮೆಲ್ಲ ನೋವಿನಂಧಕಾರವನ್ನು ದೂರಮಾಡುವ ಸೂರ್ಯ ಉದಯಿಸಬಹುದೆಂಬ ನಿರೀಕ್ಷೆ.
ಯಾರಿಗುಂಟು ಯಾರಿಗಿಲ್ಲ ಈ ನಿರೀಕ್ಷೆ? ರಾತ್ರಿ ಊಟವನ್ನೇ ಕಾಣದೆ ಇರುವವನಿಗೆ ಹೊಸ ಬೆಳಗಿನಲ್ಲಿ ಊಟ ದೊರೆಯಬಹುದೆಂಬ ನಿರೀಕ್ಷೆ, ಕೋಟಿ ಕೋಟಿ ಕೊಳೆಯುತ್ತಿದ್ದವನಿಗೋ ಹೇಗೆ ಆದಾಯ ಕರವನ್ನು ತಪ್ಪಿಸಿಕೊಳ್ಳುದು, ಹೇಗೆ ಲೋಕಾಯುಕ್ತ ಬಲೆಗೆ ಬೀಳದೆ ಇರುವುದು ಎಂಬ ಹೊಸ ಸಂಚಿನ ನಿರೀಕ್ಷೆ,
ಕಾಲವನ್ನು ಮೊಗೆಯುವ ಕ್ಯಾಲೆಂಡರನ್ನು ಎತ್ತಿ ಪಕ್ಕಕ್ಕಿಟ್ಟು ಹೊಸದನ್ನು ಮೊಳೆಗೆ ನೇತುಹಾಕುವ ದಿನ ಇಂದು. ಈ ಕ್ಯಾಲೆಂಡರಿನಲ್ಲೇ ತಿಂಗಳು ಮುಗಿದ ಕೂಡಲೆ ಒಂದೊಂದೇ ಪುಟವನ್ನು ಮಗುಚಿಯೂ ಹಾಕಿದ್ದೇವಲ್ಲ! ಒಂದೊಂದು ವಾರದ ಅಡ್ಡವೋ ನೇರವೋ ಆದ ಸಾಲುಗಳ ಪಟ್ಟಿಯೂ ಅದರಲ್ಲಿ ಇದೆಯಲ್ಲ! ನಿನ್ನೆಯ ದಿನ ಮುಗಿದ ಮೇಲೆ ಕಣ್ಣು ಇಂದಿನ ತೇದಿಯ ಮೇಲೆ ನೆಟ್ಟಿರುತ್ತದೆಯಲ್ಲ! ಕ್ಷಣ ಕéಣವೂ ಹೊಸತು ಈ ಕಾಲ.
ನಿತ್ಯ ಎದ್ದ ಕೂಡಲೆ ಹಸ್ತವನ್ನು ನೋಡಿಕೊಳ್ಳುತ್ತ ಕರಾಗ್ರೇ ವಸತೇ ಲಕ್ಷ್ಮೀ… ಮಂತ್ರವನ್ನು ಪಠಿಸುವ ಹಿಂದೂವಿದ್ದಾನೆ, ಯಾ ಅಲ್ಲಾ… ಎಂದು ಪ್ರಾಥರ್ಿಸುವ ಮುಸ್ಲಿಂ ಇದ್ದಾನೆ, ಶಿಲುಬೆಯಾಕಾರದಲ್ಲಿ ಕೈಯನ್ನು ಆಡಿಸಿ ಕ್ರಿಸ್ತನಿಗೆ ನಮಿಸುವ ಕ್ರೈಸ್ತನಿದ್ದಾನೆ, ಬುದ್ಧಂ ಶರಣಂ ಇಚ್ಚಾಮಿ ಎನ್ನುವ ಬೌದ್ಧನಿದ್ದಾನೆ. ಎಲ್ಲರ ಪ್ರಾರ್ಥನೆಯೂ ಒಂದೇ. ಇಂದಿನ ದಿನ ಯಾವುದೇ ಕಷ್ಟಗಳಿಲ್ಲದೆ ಕಳೆದುಹೋಗಲಿ ಎಂದು. ಆದರೆ ವರ್ಷದ ಕೊನೆ ಮತ್ತು ವರ್ಷದ ಆದಿಯ ದಿನ ಇದೆಯಲ್ಲ ಇದಕ್ಕಿಂತ ಸ್ವಲ್ಪ ಭಿನ್ನವಾದದ್ದು.
ಮನುಷ್ಯ ಜೀವನದಲ್ಲಿ ಒಂದು ವರ್ಷ ಎನ್ನುವುದು ಸಾಕಷ್ಟು ಸುದೀರ್ಘವಾದ ಅವಧಿಯೇ ಸರಿ. ಏನನ್ನಾದರೂ ಮಾಡುವುದಕ್ಕೆ ಮತ್ತು ಮಾಡಿರುವುದರ ಸಿಂಹಾವಲೋಕನಕ್ಕೆ ಇದೊಂದು ಸೂಕ್ತವೆನ್ನಿಸುವ ಅವಧಿ.
ಅದಕ್ಕಾಗಿಯೇ ಈ ಸಂಕ್ರಮಣ ಕಾಲದಲ್ಲಿ ನಿಂತು ಹೊಸ ಸಂಕಲ್ಪವನ್ನು ನಾವು ತೊಡಬೇಕಾಗಿದೆ, ಕಳೆದುಹೋದುದರ ವಿಶ್ಲೇಷಣೆ ಮಾಡಬೇಕಾಗಿದೆ. ಹಳೆಯ ಬಟ್ಟೆಯಲ್ಲಿ ಹೊಸ ಕೌದಿಯನ್ನು ಹೊಲಿಯಬೇಕಾಗಿದೆ. ಹಿಂದಿನ ದಾರಿಯಲ್ಲಿ ಎಲ್ಲಿ ಎಡವಿದೆ, ಮುಂದಿನ ದಾರಿಯಲ್ಲಿ ಎಲ್ಲಿ ತಿರುವಿದೆ ಎಂಬುದನ್ನು ಗಮನಿಸುವ ಕ್ಷಣ ಇದು.
ಯಾರ ಸಂಕಲ್ಪ ಹೇಗೋ? ಆದರೆ ಸಂಕಲ್ಪ ಸಕಾರಾತ್ಮಕವಾಗಿ ಇರಬೇಕು ಎನ್ನುವುದು ನಮ್ಮ ಅಪೇಕ್ಷೆ. ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕಗಳನ್ನು ಗಳಿಸಬೇಕು ಎನ್ನುವುದು ವಿದ್ಯಾಥರ್ಿಯ ಸಹಜ ಸಂಕಲ್ಪವಾಗಿರುತ್ತದೆ. ಉತ್ತಮವಾಗಿ ಪಾಠ ಮಾಡುತ್ತೇನೆ, ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತೇನೆ ಎನ್ನುವುದು ಶಿಕ್ಷಕ ಸಹಜವಾದ ಸಂಕಲ್ಪವಾಗುತ್ತದೆ. ಬದುಕು ಜಟಕಾ ಬಂಡಿಯ ನೊಗ ಹೊತ್ತ ದಂಪತಿಯದು ಯಾವುದೇ ಘರ್ಷಣೆಯಿಲ್ಲದೆ ಸಂಸಾರವನ್ನು ತೂಗಿಸುವ ಸಂಕಲ್ಪವಾಗುತ್ತದೆ. ಇವೆಲ್ಲವೂ ಚಿರಂತನವಾದ ಸಂಕಲ್ಪಗಳೇ.
ಆದರೆ ವರ್ಷದ ಅನುಭವದಿಂದ ಉದಿಸುವ ಸಂಕಲ್ಪ ನವನವೀನವಾಗಿರುತ್ತದೆ. ಕಳೆದ ವರ್ಷವನ್ನು ನಾವು ಸಿಂಹಾವವಲೋಕನ ಮಾಡಿದಾಗ ಮುದ್ದು ಮಗುವಿನ ನಿರೀಕ್ಷೆಯಲ್ಲಿರುವ ನವ ದಂಪತಿಗಳು ಅದ್ಯಾವುದೋ ಕೋಲಾರದ ಮೂಲೆಯಲ್ಲಿ ಹುಟ್ಟಿ ಅದೆಲ್ಲಿಯದೋ ಉತ್ತರ ಪ್ರದೇಶದ ಮೂಲೆಯಲ್ಲಿ ಕಲಬೆರಕೆ ಪೆಟ್ರೋಲ್ ಮಾಫಿಯಾದ ವಿರುದ್ಧ ಹೋರಾಟ ನಡೆಸಿ ಅಸು ನೀಗಿದ ಮಂಜುನಾಥನಂಥ ಮಗ ನಮಗೆ ಜನಿಸಲಿ ಎಂದು ಸಂಕಲ್ಪ ತೊಡಬಹುದು. ಚಿಕ್ಕ ಮಗುವಿರುವ ಹೆತ್ತವರು ತಮ್ಮ ಮಗುವು, ಕಾಲ್ಸೆಂಟರ್ ಉದ್ಯೋಗಿ ಪ್ರತಿಭಾ ಎನ್ನುವ ಮುಗ್ಧೆಯ ಬದುಕನ್ನು ನಿರ್ದಯವಾಗಿ ಹೊಸಕಿ ಹಾಕಿದ ಅಪರಾಧಿಯಂತೆ ತಮ್ಮ ಮಗುವು ಆಗದಿರಲಿ ಎಂದು ಸಂಕಲ್ಪ ತೊಡಬಹುದು. ಅದ್ಯಾರಿಗೋ ಚೈತನ್ಯನಂತೆ ಎವರೆಸ್ಟ್ ಏರಬಲ್ಲ ಮಗ ನಮ್ಮವನಾಗಲಿ ಎಂಬ ಸಂಕಲ್ಪ ಮೂಡಬಹುದು.
ಅದೆಷ್ಟು ಮನಮಿಡಿಯುವ ಘಟನೆಗಳು, ಅದೆಷ್ಟು ತಲ್ಲಣಗಳು, ಅದೆಷ್ಟು ಕೊಳಕುಗಳು, ಅದೆಷ್ಟು ಘನತೆಗಳು, ಮೇರು ವ್ಯಕ್ತಿತ್ವ, ಪಾತಾಳ ಕಂಡ ಬದುಕು ಎಲ್ಲವೂ 2005ರ ಒಡಲಲ್ಲಿ. ಇವು ಇನ್ನು ಬೇಡ ಎನ್ನಿಸುವ ಹಾಗೆಯೇ ಭರವಸೆಯ ಕೊನರೂ ಅದರೊಡಲಲ್ಲಿಯೇ. ಪ್ರತಿ ನಾಶದ ತರುವಾಯ ಸೃಷ್ಟಿ. ಮರದಿಂದ ಬೀಳುವ ಹಣ್ಣಿನಲ್ಲಿಯೇ ಬೀಜ. ಇದು ಪ್ರಕೃತಿ ನಿಯಮ.
ಸಂಸತ್ತಿನ ಘನತೆಗೆ ಮಸಿ ಬಳಿಯುವ ಘಟನೆಗಳು ನಡೆದು ಹೋದವು. ಬರುವ ವರ್ಷಗಳಲ್ಲಿ ತಾವೆಂದೂ ಭ್ರಷ್ಟರಾಗುವುದಿಲ್ಲವೆಂದು ಸಾರ್ವಜನಿಕ ಬದುಕಿನಲ್ಲಿ ಇರುವವರು ಸಂಕಲ್ಪ ತೊಡಲು ಇದು ಸಕಾಲ. ರಾಜಕೀಯದಲ್ಲಿ ಅಧಿಕಾರವೇ ಮುಖ್ಯ. ಅಧಿಕಾರ ಗ್ರಹಣ ಮಾಡುವ ಮಾರ್ಗ ಸನ್ಮಾರ್ಗವಾಗಿರಬೇಕು ಎಂದು ರಾಜಕಾರಣಿಗಳು ಸಂಕಲ್ಪ ತೊಡಬಹುದು. ರಾಜಕಾರಣ ಮಾಡಲು ಹಣ ಬೇಕು ನಿಜ. ಆದರೆ ಆ ಹಣವನ್ನು ಬಿಳಿಯಾಗಿಯೇ ಪಡೆಯೋಣ, ಕಪ್ಪು ಹಣ ಬೇಡವೆಂದು ಅವರು ಸಂಕಲ್ಪ ತೊಡಬಹುದು. ಮತದಾರರ ಮುಂದೆ ಹೋಗಲು ಭರವಸೆಗಳ ಪ್ರಣಾಳಿಕೆ ಬೇಕು ನಿಜ. ಆದರೆ ತಾವು ನೀಡಿದ ಭರವಸೆಯನ್ನು ಈಡೇರಿಸಿಯೇ ತೀರುತ್ತೇವೆ ಎಂದು ಸಂಕಲ್ಪ ತೊಡಬಹುದು.
ನಾಡು ನುಡಿಯ ಘನತೆಗೆ ಕುಂದುಂಟು ಮಾಡುವ ಘಟನೆಗಳೂ ನಡೆದು ಹೋದವು. ನಾವಿರುವ ನೆಲದ ಭಾಷೆ, ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಗಡಿಭಾಗದ ಅನ್ಯಭಾಷಿಕರು ಸಂಕಲ್ಪ ತೊಡಬಹುದು. ಹಿಂಸೆಗೆ ನಾವೇಕೆ ಇಳಿದೆವು, ಹಿಂಸೆಯಿಂದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆಯೇ ಎಂದು ಉಗ್ರಗಾಮಿಗಳಾದವರು, ನಕ್ಸಲಿಸಂ ಒಪ್ಪಿಕೊಂಡವರು ಪ್ರಶ್ನೆಗಳನ್ನು ಹಾಕಿಕೊಳ್ಳಬಹುದು.
ಅಧಿಕಾರದಲ್ಲಿದ್ದವರು ಅದೆಷ್ಟು ಭರವಸೆಗಳನ್ನು ನಾವು ನೀಡಿ ಮರೆತುಬಿಟ್ಟೆವಲ್ಲ ಎಂದು ಪಶ್ಚತ್ತಾಪ ಪಡಲು ಇದು ಸಕಾಲ. ಇನ್ನು ಮುಂದೆ ಕೈಲಾಗುವಷ್ಟನ್ನೇ ಮಾಡುತ್ತೇನೆ ಎಂದು ಹೇಳುತ್ತೇನೆ, ಹೇಳಿದಂತೆ ನಡೆಯುತ್ತೇನೆ ಎಂದು ಇವರು ಸಂಕಲ್ಪ ತೊಡಬಹುದು.
ಕೆಲವು ರಾಜಕಾರಣಿಗಳು ತಾವು ಇನ್ನೆಂದೂ ಈಗ ಸೇರಿರುವ ಪಕ್ಷವನ್ನು ಬಿಡುವುದಿಲ್ಲವೆಂದು ಸಂಕಲ್ಪ ತೊಟ್ಟಿದ್ದಾರೆ. ಹೀಗೆ ತೊಟ್ಟ ಸಂಕಲ್ಪವನ್ನು ಮುರಿಯುವುದಿಲ್ಲವೆಂದು ಈಗ ಮತ್ತೆ ಅವರು ಸಂಕಲ್ಪ ತೊಡಬಹುದು.
ನಾವೆಂದೂ ಉದ್ದೀಪನ ಔಷಧವನ್ನು ಸೇವಿಸುವುದಿಲ್ಲವೆಂದು ಕ್ರೀಡಾಪಟುಗಳು ಸಂಕಲ್ಪ ತೊಡಬಹುದು. ವೈಯಕ್ತಿಕ ಪ್ರತಿಷ್ಠೆಗಿಂತ ತಂಡ, ದೇಶ ಮುಖ್ಯವೆಂದು ಕ್ರೀಡಾಪಟುಗಳು ಸಂಕಲ್ಪ ತೊಡಬಹುದು. ತಾವು ಗಳಿಸಿದ ಹಣದಲ್ಲಿ ಒಂದು ಪಾಲನ್ನು ಸಮಾಜಕ್ಕೆ ಹಿಂದಕ್ಕೆ ಕೊಡುತ್ತೇನೆ ಎಂದು ಕುಬೇರರು ಸಂಕಲ್ಪ ತೊಡಬಹುದು.
`ನೀನು ಏನೋ ಆಗುವ ಮೊದಲು ಮಾನವನಾಗು’ ಎನ್ನುವಂತೆ ನಾವೆಲ್ಲ ನಿಜ ಅರ್ಥದಲ್ಲಿ ಮಾನವರಾಗಲು ಸಂಕಲ್ಪ ತೊಡಬಹುದು. ಮೊದಲು ಮಾನವರಾಗುವುದು ಸರ್ವ ಅನರ್ಥಗಳಿಗೆ ದಿವ್ಯೌಷಧಿ. ಮಾನವರಾಗಲು ಮರೆತರೆ ರಾಕ್ಷಸರಾಗುತ್ತೇವೆ. ನಮ್ಮೊಳಗಿನ ರಾಕ್ಷಸನನ್ನು ತುಳಿಯುವ ದೇವತೆಯೂ ನಮ್ಮಲ್ಲಿಯೇ ಇದ್ದಾನೆ. ಅನುಕ್ಷಣವೂ ಈ ದೇವ ದಾನವ ಯುದ್ಧವನ್ನು ನಮ್ಮಲ್ಲಿಯೇ ನಡೆಸಿ ರಾಕ್ಷಸ ತಲೆ ಎತ್ತದ ಹಾಗೆ ಮಾಡುವ ಸಂಕಲ್ಪವನ್ನು ನಾವು ತಳೆಯೋಣ.
ತುಳಿದು ಬಂದ ಹಾದಿಯಲ್ಲಿ ಕಲ್ಲು ಮುಳ್ಳುಗಳೆಷ್ಟೋ ಇದ್ದವು ನಿಜ. ಮುಂದಿನ ಹಾದಿಯಲ್ಲಿ ಅವಿಲ್ಲ ಎಂದು ಹೇಳುವುದಾದರೂ ಹೇಗೆ? ಭಗವಂತನೇ ಭವಿಷ್ಯಕಾರ, ಕಲ್ಲು ಮುಳ್ಳು ಇದ್ದರೂ ಹಾದಿಯನ್ನು ಹಸನು ಮಾಡಿಕೊಂಡು ಹೆಜ್ಜೆ ಹಾಕುವ ಸಂಕಲ್ಪವನ್ನು ನಾವಿಂದು ತಳೆಯೋಣ. ನಾಡಿಗೆ ನುಡಿಗೆ ಸಮಾಜಕ್ಕೆ ಹೂವು ತರುವೆನಲ್ಲದೆ ಹುಲ್ಲು ತಾರೆನು ಎಂದು ಸಂಕಲ್ಪ ಮಾಡೋಣ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.