*ಪರಿಹಾರವೇ ಇಲ್ಲದ ಸಮಸ್ಯೆ

ಮ್ಮೆ ಕಾಡಿನಲ್ಲಿ ಹುಲಿಗೆ ತೀವ್ರ ಗಾಯವಾಗಿತ್ತಂತೆ. ಕಾಡಿನ ಹುಲಿಗೆ ಔಷಧ ನೀಡುವವರು ಯಾರು? ಹುಲಿಗೆ ಹುಲಿಯೇ ವೈದ್ಯ. ತನ್ನ ಗಾಯವನ್ನು ಮುಚ್ಚಲು ಅದು ತನ್ನದೇ ಶರೀರದ ಇನ್ನೊಂದು ಕಡೆಯ ಚರ್ಮವನ್ನು ಕಿತ್ತು ಮೆತ್ತಿತು. ಹಳೆಯ ಗಾಯ ವಾಸಿಯಾಯಿತು. ಹೊಸ ಗಾಯ ಕೊಳೆಯತೊಡಗಿತು. ಮತ್ತೆ ಇನ್ನೊಂದು ಕಡೆಯ ಚರ್ಮ ಕಿತ್ತು ಅಲ್ಲಿ ತೇಪೆ ಹಾಕಿತು. ಹೀಗೆ ಹುಲಿಯ ದೇಹದಲ್ಲಿ ಗಾಯ ವಾಸಿಯಾಗಲೇ ಇಲ್ಲ. ಜಾಗ ಮಾತ್ರ ಬೇರೆಯಾಗುತ್ತ ಹೋಯಿತು.
ಸಮಸ್ಯೆಯ ಸುಳಿಯಲ್ಲಿ ಸಿಕ್ಕ ಮನುಷ್ಯನೂ ಹೀಗೆಯೇ. ಒಂದನ್ನು ಬಗೆಹರಿಸಲು ಹೋಗಿ ಇನ್ನೊಂದರಲ್ಲಿ ಬೀಳುತ್ತಾನೆ.
ಸಾಲ ಮಾಡಿದ ರೈತನ ಸ್ಥಿತಿಯೂ ಹೀಗೆಯೇ. ಒಂದು ಕಡೆ ಸಾಲ ಮಾಡುತ್ತಾನೆ. ಅದನ್ನು ತೀರಿಸಲು ಇನ್ನೊಂದು ಕಡೆ ಸಾಲ. ಇದನ್ನು ತೀರಿಸಲು ಮಗದೊಂದು ಕಡೆ ಸಾಲ. ಹೀಗೆ ಸಾಲದ ವಿಷ ವರ್ತುಲ ಸುತ್ತುತ್ತಲೇ ಇರುತ್ತದೆ. ಅದು ಮುಗಿಯುವುದು ಸಾಲ ಮಾಡಿದವನ ಸಾವಿನಲ್ಲಿ ಮಾತ್ರ. ಇಂಥ ಸನ್ನಿಗೆ ಸಿಕ್ಕಾಗಲೇ ಸಾಲಗಾರ ಆತ್ಮಹತ್ಯೆಯ ಹಾದಿ ತುಳಿಯುತ್ತಾನೆ. ಇಂಥವರ ಸ್ಥಿತಿ ಕಂಡೇ ಹುಲಿಗಾಯ ಆಗಿದೆ ಅವನಿಗೆ ಎಂದು ಹೇಳುತ್ತಾರೆ.