*ಪರಮ ಚೌಕಾಶಿ ಇದು

ವನೂ ಬಿಡ್ತಾ ಇಲ್ಲ, ಇವನೂ ಬಿಡ್ತಾ ಇಲ್ಲ. ಇಬ್ಬರದೂ ಹಗ್ಗಜಗ್ಗಾಟ ಜೋರಾಗಿ ನಡೆದಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ವ್ಯವಹಾರದ ಚೌಕಾಶಿಯಲ್ಲೋ ನಿಜವಾದ ಬಲಪ್ರದರ್ಶನದಲ್ಲೋ ಸ್ವಲ್ಪವೂ ಬಿಟ್ಟುಕೊಡದೆ ಜಿದ್ದಿನಿಂದ ವರ್ತಿಸುವುದು ಹಗ್ಗಜಗ್ಗಾಟ.
ರಾಜಕೀಯ ಪಕ್ಷಗಳು ಅಧಿಕಾರ ಹಂಚಿಕೆ ಸಂಬಂಧದಲ್ಲಿ ಇಂಥ ಹಗ್ಗಜಗ್ಗಾಟ ನಡೆಸುತ್ತವೆ. ಪರಮಾಣು ಒಪ್ಪಂದದ ವಿಷಯದಲ್ಲಿ ಯು.ಪಿ.ಎ. ಮತ್ತು ಎಡಪಕ್ಷಗಳು ನಡೆಸಿದ ಚೌಕಾಶಿ ಇಂಥ ಹಗ್ಗಜಗ್ಗಾಟಕ್ಕೆ ಉತ್ತಮ ಉದಾಹರಣೆ.
ಹಗ್ಗಜಗ್ಗಾಟ ನಿಜವಾಗಿ ಒಂದು ಜನಪದ ಕ್ರೀಡೆ. ಒಂದು ಹಗ್ಗವನ್ನು ಎರಡೂ ಬದಿಯಲ್ಲಿ ಅಷ್ಟಷ್ಟೇ ಸಂಖ್ಯೆಯಲ್ಲಿ ಜನರು ಹಿಡಿದು ಜಗ್ಗುತ್ತಾರೆ. ಹಗ್ಗದ ನಡುವಿನಲ್ಲಿ ಒಂದು ಗುರುತು ಮಾಡಿರುತ್ತಾರೆ. ಮಧ್ಯಬಿಂದುವಿನಿಂದ ಐದೈದು ಅಡಿ ದೂರದಲ್ಲಿ ನೆಲದ ಮೇಲೆ ಗುರುತು ಮಾಡಿರುತ್ತಾರೆ. ಯಾರ ಕಡೆಗೆ ಹಗ್ಗವು ಬರುವುದೋ ಅವರೇ ಗೆದ್ದಂತೆ. ಶಾಲೆಗಳ ಹಂತದಲ್ಲಿ ಈ ಕ್ರೀಡೆ ಇನ್ನೂ ಇದೆ.