ಭಗವಂತನನ್ನು ಸಾಮಾನ್ಯ ಮಾನವನಂತೆ ಭಾವಿಸಿ ಆತನ ಲೀಲಾವಿನೋದಗಳನ್ನು ಪ್ರೇಮ ಕಾಮ ವಿರಹಗಳನ್ನು ಚಿತ್ರಿಸುವ ಸಾಹಿತ್ಯದ ಪರಂಪರೆ ನಮ್ಮಲ್ಲಿದೆ. ಇಂಥ ಲೀಲೆಗಳನ್ನು ತೋರಿದವರಲ್ಲಿ ಶ್ರೀಕೃಷ್ಣನಿಗೆ ಅಗ್ರಸ್ಥಾನವಿದೆ. ಶ್ರೀಕೃಷ್ಣ ಹಾಗೂ ರಾಧೆಯರ ಪ್ರೇಮ, ವಿರಹಗಳು ಕವಿಗಳಿಗೆ ನಿತ್ಯನೂತನ ವಸ್ತು. ಸ.ರಘುನಾಥ ಅವರು ತಮ್ಮ ‘ಸುರಳಿ’ ಕವನ ಸಂಕಲನದಲ್ಲಿ ಇದೇ ಕೃಷ್ಣ-ರಾಧೆಯರ ಹಂಬಲ, ನೆನೆಕೆಗಳನ್ನೇ ಕಾವ್ಯರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪು.ತಿ.ನ. ಅವರ ‘ಗೋಕುಲ ನಿರ್ಗಮನ’ ಕೃಷ್ಣನು ಗೋಕುಲದಿಂದ ಮಥುರಾ ನಗರಕ್ಕೆ ತೆರಳಿದ ಸಂದರ್ಭವನ್ನು ವರ್ಣಿಸುತ್ತದೆ. ಕೃಷ್ಣ ಲೀಲೆಯ ಬಗ್ಗೆ ಕನ್ನಡದ ಅನೇಕ ಕವಿಗಳು ಬರೆದಿದ್ದಾರೆ. ಆ ಸಾಲಿಗೆ ಸ.ರಘುನಾಥ ಈಗ ಸೇರಿದ್ದಾರೆ. ಅವರ ‘ಸುರಳಿ’ಯಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗದಲ್ಲಿ ರಾಧೆಗೆ ಕೃಷ್ಣನ ನಿವೇದನೆ ಇದೆ. ಇದರಲ್ಲಿ ೨೧ ಕವನಗಳಿವೆ. ಎರಡನೆ ಭಾಗದಲ್ಲಿ ಕೃಷ್ಣನಿಗೆ ರಾಧೆಯ ನಿವೇದನೆ ಇದೆ. ಇದರಲ್ಲಿ ೧೪ ಕವಿತೆಗಳಿವೆ. ಮೂರನೆ ಭಾಗ ‘ನನ್ನೊಳಗೆ’ ಇದರಲ್ಲಿ ೫೫ ಬಿಡಿ ಚೌಪದಿಗಳಿವೆ. ನಾಲ್ಕನೆ ಭಾಗದಲ್ಲಿ ಎರಡು ದೀರ್ಘ ಕವಿತೆಗಳಿವೆ. ಕೃಷ್ಣ – ರಾಧೆಯರ ನಡುವೆ ರುಕ್ಮಿಣಿ, ಸತ್ಯಭಾಮಾ, ಜಾಂಬವತಿಯರೂ ಅಲ್ಲಲ್ಲಿ ಬಂದು ಹೋಗುತ್ತಾರೆ. ರಾಧೆಯ ಕುರಿತು ಅವರಿಗೆ ಎಲ್ಲವೂ ಗೊತ್ತಿದೆ. ಅದಕ್ಕೇ ಕೃಷ್ಣನನ್ನು ಆಗಾಗ ರಾಧೆಯ ಹೆಸರಿನಲ್ಲಿ ರೇಗಿಸುತ್ತ ಇರುತ್ತಾರೆ. ಈ ರೇಗಿಸುವಿಕೆ ಕೃಷ್ಣನಿಗೂ ಇಷ್ಟವಾಗುತ್ತದೆ. ‘‘ಒಮ್ಮೆ ಉಯ್ಯಾಲೆಯಲ್ಲಿ ಕೇಳಿದಳು ರುಕ್ಮಿಣಿ ಕೃಷ್ಣಾ ಹೇಗೆ ನೆನೆಯುತ್ತಿ ರಾಧೆಯನ್ನ? ಏನು ಹೇಳಿದೆನೆಂದು ಕುತೂಹಲವೆ? ಹೇಳಿದೆ, ಪ್ರತಿನಿತ್ಯ ನೀ ಕಟ್ಟಿ ತೊಡಿಸುವ ತುಳಸಿ ಮಾಲೆಯ ಪರಿಮಳದ ಹಾಗೆ’’ ನಿದ್ದೆ ಮಂಚದಲ್ಲಿ ಅಕ್ಕ ಪಕ್ಕ ರುಕ್ಮಿಣಿ ಸತ್ಯಭಾಮೆಯರಿದ್ದರೂ ಕೃಷ್ಣನಿಗೆ ಏಕೋ ನಿದ್ದೆಯೇ ದೂರ. ನೆನಪುಗಳ ಸಾಗರದಲೆಗಳ ಮೇಲೆ ರಾಧೆಯ ನಾವೆ. ಯಮುನಾ ತೀರ, ಕಾಳಿಂದಿ ಮಡುವು ಕಾಲ್ಕಚ್ಚಿ ಕಚಗುಳಿ ಇಟ್ಟ ಮೀನ ಮರಿ ಹೀಗೆ ನೆನಪುಗಳ ಮೆರವಣಿಗೆ ಕೃಷ್ಣನ ಮನದಲ್ಲಿ ಸಾಗುತ್ತದೆ. ಈ ಲೋಕದ ವಾಸ್ತವದ ಪರಿಧಿಯಲ್ಲಿ ಕೃಷ್ಣ ಲೀಲೆಗೆ ಅಕ್ಷರ ಬೇಲಿ ನೆಡುವ ಪ್ರಯತ್ನ ಕವಿಯದು. ಇಹದ ವಾಸ್ತವ ತಾನು ಮರೆತಿಲ್ಲ ಎನ್ನುವುದನ್ನು ಕವಿ ಇಲ್ಲಿ ತೋರಿಸಿಕೊಳ್ಳುವುದು ಹೀಗೆ: ರಾಧೆಗೆ ಪತ್ರಬರೆಯುವುದು ಹೇಗೆಂಬ ಚಿಂತೆ ಕೃಷ್ಣನಿಗೆ. ಒಬ್ಬ ಸಾಮಾನ್ಯ ಮನುಷ್ಯ ಚಿಂತಿಸುವಂತೆ ಕೃಷ್ಣ ಚಿಂತಿಸುತ್ತಾನೆ. ಯಾವ ಎಲೆಯ ಮೇಲೆ ಬರೆಯಲಿ, ಯಾವ ಹಕ್ಕಿಯ ಗರಿಯನ್ನು ಕುಂಚವಾಗಿಸಿಕೊಳ್ಳಲಿ, ಯಾವ ಮಸಿಯನ್ನು ಬಳಸಲಿ ಇತ್ಯಾದಿ ಪ್ರಶ್ನೆಗಳು ಅವನನ್ನು ಕಾಡುತ್ತಿದೆ. ಆಗ ಹಾರಿ ಬಂದೊಂದು ಕಾಗೆ ಕಿಟಕಿಯಲಿ ಕೂತು ಹೇಳಿತು- ಕೃಷ್ಣಾ ನಾ ಕಪ್ಪು ನೀ ಕಪ್ಪು ರಾಧೆಗಪ್ಪು ನನ್ನ ಗರಿಯಲ್ಲಿ ಬರೆ ನಿನ್ನ ರಾಧೆಗೆ ಓಲೆ. ದಿವದ ದೇವರ ಲೀಲೆಯನ್ನು ಹೇಳುವಾಗಲೂ ನೆಲದ ನೆನಪನ್ನು ಕವಿ ಬಿಟ್ಟಿಲ್ಲ. ರಾಧೆ ಕೃಷ್ಣ ನಿರೀಕ್ಷೆಯಲ್ಲಿ ಇದ್ದಾಳೆ. ಇಂದು ಬಂದಾನು, ನಾಳೆ ಬಂದಾನು ಎಂಬ ಹಂಬಲ ಆಕೆಯದು. ನಾನು ಯಾವಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೆ ಎಂಬ ದೊಡ್ಡ ಪಟ್ಟಿಯನ್ನೇ ಕೃಷ್ಣ ನೀಡುತ್ತಾನೆ. ಆಣೆಗಳನ್ನು ಹಾಕುತ್ತಾನೆ. ರಥವನ್ನು ಹೇಗೆ ಸಿದ್ಧಪಡಿಸಿದ್ದೆ, ಕುದುರೆಗಳು ಹೇಗಿರಬೇಕೆಂದು ಸಾರಥಿಗೆ ಹೇಳಿದ್ದೆ, ತನ್ನ ಪತ್ನಿಯರು ಉಡುವಂಥ ಸೀರೆ, ತೊಡುವಂಥ ಒಡವೆ ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಂಡಿದ್ದೆ. ಎಲ್ಲ ಅಣಿಯಿತ್ತು, ಪಯಣದ ದಿಕ್ಕಿನ ಚುಕ್ಕಿ ಹೊಳೆದಿತ್ತು. ಎಲ್ಲ ಶುಭ ಶಕುನಗಳಿದ್ದರೂ ಬರದಿರುವುದಕ್ಕೆ ಕಾರಣ ಏನು? ಸಾರಥಿಯ ಪತ್ನಿಗೆ ತಿಂಗಳು ತುಂಬಿ ಹೆರಿಗೆ ನೋವು ಪ್ರಾರಂಭವಾಗಿದೆ. ಈ ಕಾರಣವನ್ನು ರಾಧೆಯು ಒಪ್ಪಿಕೊಳ್ಳಲೇ ಬೇಕು. ಇಲ್ಲಿ ಕವಿ ಲವಲವಿಕೆಯನ್ನು ಮೆರೆದಿದ್ದಾರೆ. ಕೃಷ್ಣ ಮಥುರೆಗೆ ಹೋಗಿಬಿಟ್ಟಿದ್ದಾನೆ. ಆತನ ನೆನಪು ಕ್ಷಣಕ್ಷಣವೂ ರಾಧೆಗೆ ಕಾಡುತ್ತಿದೆ. ಆಕೆ ಹೇಳುತ್ತಾಳೆ, ಕೇಳಿಕೆಗೆ ಬಂದ ವಾರ್ತೆಯ ಕೇಳಿ ಬೆರಗಾದೆನೋ ಕೃಷ್ಣ ಹೋಲಿಸಿಕೊಂಡು ಇಲ್ಲಿ ಅಲ್ಲಿನ ನಿನ್ನ ಸಿಂಗಾರ… ಹೀಗೆ ಸಾಗುತ್ತದೆ ಕವಿತೆ. ಯಾರುಯಾರಿಂದಲೋ ಕೃಷ್ಣನ ಬಗೆಗೆ ಅವಳು ಮಾಹಿತಿ ಸಂಗ್ರಹಿಸುತ್ತಿದ್ದಾಳೆ. ಅದನ್ನು ಕೇಳಿಯೇ ಮನಸ್ಸಿಗೆ ಸಮಾಧಾನ ಮಾಡುಕೊಳ್ಳುತ್ತಿದ್ದಾಳೆ. ಕೃಷ್ಣ ರಾಧೆಯರ ಪ್ರೀತಿ ಪಗಡೆಯಾಟದಂತೆ. ಪಗಡೆಯಾಡಲು ಕುಳಿತಾಗ ಅವನು ಗೆಲಲೆಂದೆ ದಾಳವನ್ನು ಅವಳು ಹಾಕುತ್ತಾಳೆ. ಅವನೂ ದಾಳ ಹಾಕಿದ ಇಬ್ಬರಿಗೂ ಸೋಲಾಗದಂತೆ. ಇದು ಪ್ರೇಮಿಗಳ ಬದುಕಿನ ರೀತಿ ನೀತಿ. ಇದು ಇಡೀ ಜಗತ್ತಿಗೇ ಅನ್ವಯವಾಗುವ ಪ್ರೇಮತತ್ವ. ಇಲ್ಲಿ ಯಾವುದೂ ನೇರವಲ್ಲ. ಕಣ್ಣಿನ ಕುಡಿನೋಟ ಕೂಡ ವಕ್ರವೇ. ಮಾತೂ ಸುತ್ತು ಬಳಸು. ಅದಕ್ಕೇ ಕೃತಿಯು ‘ಸುರಳಿ’. ಸುರಳಿಯಲ್ಲಿ ಎಷ್ಟು ತಿರುವುಗಳಿವೆ ಎಂಬುದು ಅನುಭವಕ್ಕೆ ಮಾತ್ರ ನಿಲುಕುವಂಥದ್ದು. ಹೃದಯಕ್ಕೆ ತಟ್ಟುವಂತೆ ಈ ಪ್ರೇಮ ತತ್ವ ಹೇಳಿದ ಕವಿ ಅಭಿನಂದನೆಗೆ ಅರ್ಹರು. ಪ್ರ: ಎಸ್.ಎಲ್.ಎನ್. ಪಬ್ಲಿಕೇಷನ್, ಬೆಂಗಳೂರು. ಪುಟಗಳು ೭೨, ಬೆಲೆ ₹ ೫೦.