*ದೈವಕ್ಕೆ ರಕ್ಷಣೆಯ ಹೊಣೆ ಒಪ್ಪಿಸುವುದು

ನಾನು ಅವನಿಗೆ ಸೊಪ್ಪು ಹಾಕುವುದಿಲ್ಲ ಎಂದು ಯಾರೋ ಹೇಳಿದ್ದನ್ನು ನೀವು ಕೇಳಿಸಿಕೊಂಡಿರಬಹುದು. ಆತನ ಮಾತಿನ ಭಾವಾರ್ಥವೂ ನಿಮಗೆ ವೇದ್ಯವಾಗಿರಬಹುದು. ಅವನಿಗೆ ನಾನು ಯಾವುದೇ ಗೌರವ ಕೊಡುವುದಿಲ್ಲ. ಅವನ ಮಾತು ನಾನು ಕೇಳುವುದಿಲ್ಲ. ಅವನ ಅಧೀನವಾಗಿ ನಾನು ಇರುವುದಿಲ್ಲ… ಹೀಗೆ ಅರ್ಥಪರಂಪರೆಯನ್ನು ಅದು ಹೇಳುತ್ತಿದೆ.
ಏನಿದು ಸೊಪ್ಪು ಹಾಕುವುದು? ಸೊಪ್ಪು ಹಾಕಿದರೆ ಗೌರವ ನೀಡಿದಂತೆ ಅಂತ ಇಲ್ಲಿ ಅರ್ಥ ಹೊರಡುತ್ತದೆ. ಸೊಪ್ಪು ಹಾಕದಿರುವುದು ಇದರ ವಿರುದ್ಧ ಅರ್ಥವನ್ನು ನೀಡುತ್ತದೆ.
ಊರ ಗಡಿಯಲ್ಲಿ ಒಂದು ಕಲ್ಲು ಇರುತ್ತದೆ. ಅದಕ್ಕೆ ಸೊಪ್ಪುರತಿ ಕಲ್ಲು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಊರ ಗಡಿ ದಾಟಿ ಹೋಗುವಾಗ ಆ ಕಲ್ಲಿಗೆ ಸೊಪ್ಪಿನ ಒಂದು ಟೊಂಗೆಯನ್ನು ಎಸೆದು ಹೋಗುವ ರೂಢಿ ಇದೆ. ನಾನು ಬರುವವರೆಗೆ ನನ್ನ ಊರು ಮನೆಯನ್ನು ಕಾಯ್ದುಕೊಂಡಿರು ಎಂಬ ಬೇಡಿಕೆ ಇಟ್ಟು ಸೊಪ್ಪು ಹಾಕುತ್ತಾರೆ. ನಮ್ಮ ಭಾರವನ್ನು ದೈವದ ಕೈಗೆ ಒಪ್ಪಿಸಿ ನಾವು ನಿರುಮ್ಮಳವಾಗಿರುವುದು. ಇದು ಬರೀ ಕಲ್ಲಲ್ಲ. ಅದೊಂದು ದೈವ. ಹೂವು ಎಲ್ಲ ಕಾಲದಲ್ಲೂ ಸಿಗದ ಕಾರಣಕ್ಕೆ ಸೊಪ್ಪು ಹಾಕುವುದು ರೂಢಿಗೆ ಬಂದಿರಬಹುದು.
ನಾನು ಸೊಪ್ಪು ಹಾಕುವುದಿಲ್ಲ ಎಂದರೆ ಅದರಿಂದ ನನಗೆ ಯಾವುದೇ ರಕ್ಷಣೆ ಬೇಡ, ನನ್ನ ರಕ್ಷಣೆ ನಾನು ಮಾಡಿಕೊಳ್ಳಬಲ್ಲೆ ಎಂದು ಹೇಳಿದಂತೆ.
ಒಂದು ಚಿಕ್ಕ ಮಾತಿನಲ್ಲಿ ಒಂಂದು ಸಂಸ್ಕೃತಿಯೇ ಹರಳುಗೊಂಡಿದೆ ಇಲ್ಲಿ.