ನಾಟಕಕಾರ ಮತ್ತು ವರ್ಣಚಿತ್ರ ಕಲಾವಿದ ಡಿ.ಎಸ್. ಚೌಗಲೆವರು ತಮ್ಮ ಸ್ವತಂತ್ರ ನಾಟಕ ‘ದಿಶಾಂತರ'ದ ಎರಡನೆಯ ಆವೃತ್ತಿಗೆ ನಾನೇ ವಿಮರ್ಶೆ ಬರೆಯಬೇಕು ಎಂದು ಒತ್ತಾಯ ಮಾಡಿದ ಕಾರಣ ಬಹು ದಿನಗಳ ಬಳಿಕ ನಾಟಕವೊಂದನ್ನು ಓದುವ ಅವಕಾಶ ದೊರೆಯಿತು. ನಾಟಕ 76 ಪುಟಗಳಲ್ಲಿದ್ದರೆ ಇತರರು ಈ ನಾಟಕದ ಬಗ್ಗೆ ಲೇಖನ ಇತ್ಯಾದಿ 43 ಪುಟಗಳಲ್ಲಿವೆ. ಸಾಹಿತಿ ಚಂದ್ರಕಾಂತ ಕುಸನೂರರ ಅನಿಸಿಕೆ, ಲೇಖಕರ ನನ್ನ ಮಾತು, ರಂಗಕರ್ಮಿ ಸಿ.ಬಸವಲಿಂಗಯ್ಯನವರ ದಿಶಾಂತರದ ಜಾಡಿನಲ್ಲಿ...., ರಂಗನಿರ್ದೇಶಕ ಬಿ.ಸುರೇಶ ಅವರು ನಾಟಕ ಕುರಿತು ಮಾಹಿತಿಗಾಗಿ ಮಾಡಿಕೊಂಡ ಟಿಪ್ಪಣಿಯ ಲೇಖನ ರೂಪ, ಎರಡನೆ ಮುದ್ರಣಕ್ಕೆ ಮತ್ತೆ ಲೇಖಕರ ಮಾತು, ನಾಟಕವನ್ನು ನೋಡಿ ವಿವಿಧ ಪತ್ರಿಕೆಗಳಲ್ಲಿ ಹಂಸ, ಪಿ.ಮಂಜುನಾಥ, ಶಿರೀಷ ಜೋಷಿ, ಚಿದಾನಂದ ಕಮ್ಮಾರ ಅವರು ಬರೆದ ಲೇಖನಗಳು ಇಲ್ಲಿವೆ. ನಾಟಕದ ಜೊತೆಯಲ್ಲಿ ಇವನ್ನೆಲ್ಲ ಓದಿದ ಮೇಲೆ, ಅವರ ಗ್ರಹಿಕೆಗಳನ್ನು ಬಿಟ್ಟು ಇನ್ನೇನು ಬರೆಯಬಹುದು ಎಂದು ಚಿಂತಿಸಿದಾಗ ಕಂಡ ಕೆಲವು ಹೊಳಹುಗಳನ್ನು ಇಲ್ಲಿ ದಾಖಲಿಸಿದ್ದೇನೆ. ಚಿಕ್ಕೋಡಿ, ನಿಪ್ಪಾಣಿ ಭಾಗದ ಬೀಡಿ ಕಾರ್ಮಿಕರ ಸಮಸ್ಯೆಯ ಹಿನ್ನೆಲೆಯಲ್ಲಿ ಒಂದು ಚಳವಳಿಯ ಹುಟ್ಟು-ಸಾವನ್ನು ವಿವರಿಸುವ ದಿಶಾಂತರದಲ್ಲಿ ನಿರ್ದಿಷ್ಟ ದಿಶೆಯನ್ನು ತಲುಪದೆ ಪಥಭ್ರಷ್ಟವಾಗುವ ಚಳವಳಿಯ ಪರಿಯನ್ನು ಚೌಗಲೆಯವರು ಕಟ್ಟಿಕೊಟ್ಟಿದ್ದಾರೆ.
ವಖಾರಗಳ ಮಾಲೀಕರು, ದಲ್ಲಾಳಿಗಳು, ಬೀಡಿಕಟ್ಟುವವರು, ತಂಬಾಕು ಬೆಳೆಯುವವರು ಇವರೆಲ್ಲ ಒಂದು ಚೌಕಟ್ಟಿನಲ್ಲಿ ಬಂಧಿಯಾದಾಗ ಉದ್ಭವಿಸುವ ಸಮಸ್ಯೆ, ಸಮಸ್ಯೆಯ ಪರಿಹಾರಕ್ಕೆ ಶೋಷಿತರ ಪರ ನಿಲ್ಲುವ ಭೀಮಣ್ಣ, ಇಂಥ ಸಮಸ್ಯೆಗಳನ್ನೇ ತನ್ನ ಉನ್ನತಿಯ ಮೆಟ್ಟಿಲು ಮಾಡಿಕೊಳ್ಳುವ ದೇಶಪಾಂಡೆ, ಸಂಘಟನೆ ಸಾಮರ್ಥ್ಯವಿದ್ದೂ ಬಹಿರಂಗಕ್ಕೆ ಬಾರದೆ ಕೇವಲ ಉಪದೇಶಕ್ಕಷ್ಟೆ ಸೀಮಿತವಾಗುವ ಮಠದ ಸ್ವಾಮಿ, ಬಡತನದ ಕಾರಣದಿಂದಲೇ ಲೈಂಗಿಕ ಶೋಷಣೆಗೆ ಒಳಗಾಗುವ ತಂಬಾಕು ಮಹಿಳೆಯರು.... ಹೀಗೆ ಘಟನೆಗಳನ್ನೆಲ್ಲ ಏಕಮುಖವಾಗಿ ಪರ್ವತದ ಶಿಖರದಿಂದ ಸೂತ್ರದ ಉಂಡೆ ತಳದತ್ತ ಉರುಳುವ ಧಾವಂತವನ್ನು ನಾಟಕ ಹೊಂದಿದೆ.… ಎಲ್ಲಿ ಉಣ್ಣಾಕೇತಿ ಅಲ್ಲಿ ಹಸಿವಿಲ್ಲ. ಹಸಿವ ಎಲ್ಲೇತಿ ಅಲ್ಲಿ ಊಟಾಕಿಲ್ಲಾಗೇತಿ… (ಪುಟ16) … ಮನುಷ್ಯಾನ ಹೊಟ್ಟೆ ಮತ್ತ ಮಹತ್ವಾಕಾಂಕ್ಷಾ ಮಜಬೂರಿ ಸೆ ಕುಚ್ ಭೀ ಕರನೆ ಪರ ಉತಾವಳ ಹೋಜಾತಾ ಹೈ (ಪುಟ55) ಈ ಎರಡು ಮುದ್ದೆಗಳ ಮೇಲೆ ಚೌಗಲೆಯವರು ತಮ್ಮ ದಿಶಾಂತರ ನಾಟಕವನ್ನು ಕಟ್ಟಿದ್ದಾರೆ. ಇಪ್ಪತ್ತನೆ ಶತಮಾನದ ಆರ್ಥಿಕ ಚಿಂತನೆಗಳು ಮತ್ತು ಇಪ್ಪತ್ತೊಂದನೆ ಶತಮಾನದ ಆರ್ಥಿಕ ಚಿಂತನೆಗಳ ನಡುವೆ ಅಗಾಧವಾದ ಫರಕ್ ಇದೆ. ಜಾಗತಿಕ ಅರ್ಥ ವ್ಯವಸ್ಥೆಯ ಸ್ವರೂಪವೇ ಇಂದು ಬದಲಾಗಿದೆ. ಊಳಿಗಮಾನ್ಯ ವ್ಯವಸ್ಥೆ, ಬೂರ್ಶ್ವಾ ವ್ಯವಸ್ಥೆಗಳ ವಿರುದ್ದದ 19 ಮತ್ತು 20ನೆ ಶತಮಾನದ ಹೋರಾಟಗಳಿಗೂ, 21ನೆ ಶತಮಾನದಲ್ಲಿ ನಿಂತು ಅಂಥ ಹೋರಾಟಗಳ ಬಗ್ಗೆ ಕಲ್ಪಿಸಿಕೊಳ್ಳುವುದಕ್ಕೂ ಶಾನೇ ವ್ಯತ್ಯಾಸವಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅವರ ಆರ್ಥಿಕ ಸಿದ್ಧಾಂತಗಳು ಬಡತನ, ಸಂಪತ್ತಿನ ಹಂಚಿಕೆ ಇತ್ಯಾದಿಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿವೆ. ಬಾಂಗ್ಲಾ ದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯುನಿಸ್ ಅವರ ಮೈಕ್ರೋ ಇಕಾನಾಮಿಕ್ಸ್ ಥಿಯರಿ, ನಮ್ಮ ದೇಶದಲ್ಲಿಯೇ ಗ್ರಾಮೀಣ ಬದುಕಿನ ಉನ್ನತಿಗೆ ಕುರಿಯನ್ ಮಾಡಿದ ಕ್ಷೀರಕ್ರಾಂತಿ, ನಮ್ಮ ರಾಜ್ಯದಲ್ಲಿಯೇ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳು ಗ್ರಾಮೀಣ ಆರ್ಥಿಕ ಸ್ಥಿತಿಯ ಸುಧಾರಣೆಗೆ ಗಣನೀಯ ಕೊಡುಗೆ ನೀಡಿವೆ. ಇವು ಯಾವವೂ ದಿಶಾಂತರದ ತಂಬಾಕು ಬೆಳೆಗಾರರು ಮತ್ತು ತಂಬಾಕು ವಖಾರಗಳಲ್ಲಿ ಕೆಲಸ ಮಾಡುವವರ ಮೇಲೆ ಏನೂ ಪರಿಣಾಮ ಬೀರಲಿಲ್ಲವೆ?
ಸೋವಿಯತ್ ಒಕ್ಕೂಟ ಕುಸಿದು ಬಿದ್ದಿದೆ. ಚೀನದಲ್ಲೂ ಬಂಡವಾಳ ಮಾರುಕಟ್ಟೆಯ ಪ್ರವೇಶವಾಗಿದೆ. ಬದಲಾದ ಈ ಜಾಗತಿಕ ವಿದ್ಯಮಾನದಲ್ಲಿ ಚಳವಳಿಗಳ ಸ್ವರೂಪ ಬದಲಾಗಲಿಲ್ಲವೆ? ವಿಶ್ವಮಾರುಕಟ್ಟೆಯ ಪರಿಕಲ್ಪನೆ, ರೈತನ ಹೊಲಗಳಿಗೇ ಬಹು ಬಹುರಾಷ್ಟ್ರೀಯ ಕಂಪನಿಗಳು, ಗ್ರಾಮೀಣ ಬಡತನ ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ವಿವಿಧ ಯೋಜನೆಗಳು ಇವು ಯಾವವೂ ತಂಬಾಕು ಬೆಳೆಗಾರರ ಬದುಕಿನಲ್ಲಿ ಏನೇನೂ ಮಾಡಲಿಲ್ಲವೆ? ಯಂತ್ರಸಾಮ್ರಾಜ್ಯ ಇನ್ನಷ್ಟು ಮಗದಷ್ಟು ವಿಸ್ತಾರವಾಗಿರುವಾಗ, ಕಂಪ್ಯೂಟರ್ ಎಂಬ ಅದ್ಭುತ ಕಾರ್ಮಿಕ ವರ್ಗದ ಸ್ವರೂಪವನ್ನು ಬದಲಿಸಿರುವಾಗ, ಗುಣಮಟ್ಟದ ಕೆಲಸಕ್ಕೆ ಗುಣಮಟ್ಟದ ಸಂಬಳ ಎಂಬ ತಾತ್ವಿಕತೆ ತಾನೇತಾನಾಗಿ ನೆಲೆ ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿ ವರ್ಗಸಂಘರ್ಷ ಎಂಬ ಹಳೆಯ ಪರಿಕಲ್ಪನೆ ಇವತ್ತಿಗೆ ಎಷ್ಟು ಪ್ರಸ್ತುತ? ಸಂಘಟಿತ ಕಾರ್ಮಿಕ ವರ್ಗದಲ್ಲಿ ಇಂದು ಮುಷ್ಕರಗಳು ಅಪರೂಪವಾಗಿರುವಾಗ ಅಸಂಘಟಿತ ಕಾರ್ಮಿಕರಿಂದ ಮುಷ್ಕರ, ಬಂಡಾಯ ನಡೆಸುವುದು ಸಾಧ್ಯವೆ? ಕಥಾವಸ್ತುವನ್ನು ಸೋಲುವ ಬದಲು ಗೆಲ್ಲುವ ಅಂತ್ಯದಲ್ಲಿ ರಚಿಸಬಹುದಿತ್ತಲ್ಲವೆ? ಮ್ಯಾಕ್ಸಿಂ ಗಾರ್ಕಿಯ ತಾಯಿ'ಯಲ್ಲಿ ಸೈತಾನ ಸ್ವರೂಪದ ತ್ಸಾರ್ ಆಡಳಿತವನ್ನು ವಿರೋಧಿಸಿಯೂ ಕೊನೆಯಲ್ಲಿ ಗೆಲವು ಹೋರಾಟಗಾರರದು ಆಗಿಲ್ಲವೆ? ಹಾಗೆಂದು ಅಲ್ಲಿಯ ಯಾವ ಸಮಸ್ಯೆಗಳೂ ನಗಣ್ಯ ಎನ್ನಿಸಲಿಲ್ಲವೆ? ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದ ಹೊಸ ಸಮೀಕರಣಗಳು ನಾಟಕಕಾರ ಚೌಗಲೆಯವರನ್ನು ತಟ್ಟಿದ್ದರೆ ವಸ್ತುವಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗಿ ಹೊಸ ಹೊಳಹುಗಳನ್ನು ಕೊಡುತ್ತಿದ್ದರೇನೋ? ಇನ್ನಷ್ಟು ಮಹತ್ವಾಕಾಂಕ್ಷೆಯ ತಿರುವುಗಳು ನಾಟಕದಲ್ಲಿ ಒದಗಿ ಬರುತ್ತಿದ್ದವೇನೋ?
ಇಷ್ಟೆಲ್ಲ ಅನುಮಾನಗಳೊಂದಿಗೆದಿಶಾಂತರ'ದ ಅನುಸಂಧಾನಕ್ಕೆ ತೊಡಗಿದಾಗ
ಸಾಮಾನ್ಯ ಚಿತ್ರಕ್ಕೆ ಭಾಷೆಯ ಸುವರ್ಣ ಚೌಕಟ್ಟು’ ಎಂಬ ಭಾವನೆ ಸ್ಥಾಯಿಯಾಯಿತು. ನಿಪ್ಪಾಣಿ, ಹುಕ್ಕೇರಿ, ಚಿಕ್ಕೋಡಿ, ಅಥಣಿ ಗಡಿ ಭಾಗದ ಮರಾಠಿಮಿಶ್ರಿತ ಕನ್ನಡವನ್ನು ಅದರೆಲ್ಲ ಸತ್ವದೊಂದಿಗೆ ಚೌಗಲೆಯವರು ಈ ಕೃತಿಯಲ್ಲಿ ದುಡಿಸಿಕೊಂಡಿದ್ದಾರೆ. ನಾಟಕದ ಮೊದಲ ಸಂಭಾಷಣೆಯೇ ಮರಾಠಿಯಲ್ಲಿದೆ. ಕಥಾವಸ್ತುವಿಗೆ ಭಾಷೆಯ ಪ್ರಾದೇಶಿಕತೆಯ ಅನುಸಂಧಾನ ಮಾಡುವಾಗ ವಸ್ತುವೇ ಭಾಷೆಯಾಗುವ ಪರಿ ದಿಶಾಂತರದಲ್ಲಿ ಅನನ್ಯ. ಅದಕ್ಕೊಂದು ಉದಾಹರಣೆ (ಪುಟ40)- ಕುಲಕರ್ಣಿ: (ನಸುನಕ್ಕು) ಹುಚ್ಚಪ್ಯಾಲಿ, ಖರೆ ಮತ್ತ- ಸುಳ್ಳ ಎರಡೂ ಮಾತಾಡಾಕ ನಿಂಗ ಬರೋದಿಲ್ಲ. ಎದಿಮಟ ಬೆಳೆದ ಸೊಕ್ಕಿದ ತಂಬಾಕಿನ ಸಸಿಯಂತಾಕಿ ನೀ. ಆದರೂ ಈಗಷ್ಟ ಕೊರದ ಒಗದ ತಂಬಾಕಿನ ಎಲಿಹಂಗ ನಿನ್ನ ಮಾರಿ ಬಾಡೇದ. ಅಡ್ಡಿಯಿಲ್ಲ. ಬಾಡಿದ ಎಲಿ ಒಣಗಿದ ಮ್ಯಾಲ ಮತ್ತ ಬಂಗಾರದಂಗ ಹೊಳಿತದಲ್ಲ. ಅಂಥ ಹೊಳಿಯೋ ಕಾಲ ಈಗ ಕೂಡಿ ಬಂದದ.- ಕಥೆಯ ವಸ್ತುವಾದ ತಂಬಾಕಿನ ಉಪಮೆಗಳೇ ವರ್ಣನೆಗೆ ಒದಗಿ ಬಂದದ್ದು ಇಲ್ಲಿನ ವಿಶೇಷ.
ಸಾಹಿತ್ಯ ಕೃತಿಯಾಗಿ ಇಲ್ಲಿನ ಭಾಷೆ ಅನನ್ಯ ಎನಿಸಿದರೂ ಇದೇ ರಂಗದ ಮೇಲೆ ಬಂದಾಗ ತೊಡಕಾಗುವ ಅಪಾಯ ಇದ್ದೇ ಇದೆ. ಸಂವಹನ, ಸಂಪರ್ಕಗಳು ಇಂದು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಬೆಳೆದಿದ್ದರೂ ಭಾಷೆಯ ಪ್ರಾಂತಭೇದ ಇನ್ನೂ ಉಳಿದುಕೊಂಡಿದೆ. ಈ ನಾಟಕವನ್ನು ಉರ್ದು ಪ್ರಭಾವ ಹೆಚ್ಚಿರುವ ಹೈದ್ರಾಬಾದ್ ಕರ್ನಾಟಕದಲ್ಲೋ, ಧಾರವಾಡ ಸೀಮೆ ಕನ್ನಡ ಪ್ರದೇಶದಲ್ಲೋ, ಮಧ್ಯ ಕರ್ನಾಟಕದಲ್ಲೋ, ಮೈಸೂರು ಪ್ರದೇಶದಲ್ಲೋ ರಂಗದ ಮೇಲೆ ತಂದರೆ ಸಂಭಾಷಣೆ ಪ್ರೇಕ್ಷಕರಿಗೆ ಅರ್ಥವಾಗದೆ ಹೋಗಬಹುದು. ಪ್ರದರ್ಶಿಸುವ ನಾಟಕದಲ್ಲಿ ಯಾವ ಭಾಷೆ ಇರಬೇಕು ಎನ್ನುವುದು ಇಂದಿಗೂ ಚರ್ಚೆ ವಿಷಯವೇ. ಚೌಗಲೆಯವರು ತಂಬಾಕು ಬೆಳೆಯುವ ಪ್ರದೇಶದ ಜನರ ಸಮಸ್ಯೆಯನ್ನು ನಾಟಕ ರೂಪದಲ್ಲಿ ತಂದವರಲ್ಲಿ ಮೊದಲಿಗರಾಗಿದ್ದಾರೆ. ಅಪರೂಪದ ಭಾಷೆಯೊಂದನ್ನು ಗ್ರಂಥಸ್ಥಗೊಳಿಸಿದ್ದಾರೆ. ಇನ್ನಷ್ಟು ಮಹತ್ವಾಕಾಂಕ್ಷೆಯೊಂದಿಗೆ ಮತ್ತೊಂದು ಕೃತಿಯನ್ನು ಅವರು ಹೊರತರಲಿ ಎಂಬುದು ಹಾರೈಕೆ.
(ಕನ್ನಡಪ್ರಭ 11-04-2010)
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.