*ಇದು ಏಳೂವರೆ ವರ್ಷ ಕಾಡುವ ಶನಿ

ತುಂಬಾ ಕಾಡುವವರನ್ನು ಕಂಡಾಗ, ಇದೆಲ್ಲಿ ಸಾಡೇಸಾತಿ ಗಂಟುಬಿತ್ತಪ್ಪ ಎಂದು ಉದ್ಗಾರ ತೆಗೆಯುತ್ತೇವೆ. ಈ ಸಾಡೇಸಾತಿಯಿಂದ ತಪ್ಪಿಸಿಕೊಂಡರೆ ಸಾಕು ಎಂದೋ, ಈ ಸಾಡೇಸಾತಿ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ ಎಂದೋ ಹೇಳುವುದು ನಿಮ್ಮ ಕಿವಿಗೂ ಬಿದ್ದಿರಬಹುದು.
ಏನಿದು ಸಾಡೇಸಾತಿ? ಏಳೂವರೆ ಎಂದರೆ ಸಾಡೇಸಾತಿ. ಗ್ರಹಗಳಲ್ಲಿ ಶನಿ ವಕ್ರಗ್ರಹ ಎಂಬ ಖ್ಯಾತಿ ಇದೆ. ಯಾರದಾದರೂ ರಾಶಿಯಲ್ಲಿ ಶನಿಯ ಪ್ರವೇಶವಾದರೆ ಅವರಿಗೆ ಕಷ್ಟಗಳು ಪ್ರಾರಂಭವಾಗುತ್ತವೆ ಎಂಬ ನಂಬಿಕೆ ಇದೆ. ಈ ಶನಿಯು ಏಳೂವರೆ ವರ್ಷ ಕಾಡುವನಂತೆ.
ಪುರಾಣಪುರುಷರ ಕಷ್ಟಗಳಿಗೆಲ್ಲ ಶನಿಯೇ ಕಾರಣ ಎಂಬ ಕತೆಗಳಿವೆ. ನಳದಮಯಂತಿ ಕತೆಯಲ್ಲಿ ನಳನ ರಾಶಿಯಲ್ಲಿ ಶನಿಯ ಪ್ರವೇಶವಾಗಿ ಆತನಿಗೆ ಕಷ್ಟಗಳು ಬಂದವಂತೆ. ಸತ್ಯಹರಿಶ್ಚಂದ್ರನ ಕಷ್ಟಗಳಿಗೆಲ್ಲ ಶನಿಯೇ ಕಾರಣನಂತೆ.
ಸೌರವ್ಯೂಹದ ಗ್ರಹಗಳಲ್ಲಿ ಶನಿಯು ಬಳೆಗಳನ್ನು ಹೊಂದಿದ್ದು ತುಂಬ ಸುಂದರವಾಗಿ ಕಾಣುತ್ತದೆ. ಪುರಾಣದಲ್ಲಿ ಶನಿ ಸೂರ್ಯ ಪುತ್ರ. ಮಲತಾಯಿಯಿಂದ ಪೀಡನೆಗೆ ಒಳಗಾದ ನತದೃಷ್ಟ ಆತ.