ಆಧುನಿಕ ಕನ್ನಡದ ಹಿರಿಯ ತಲೆಮಾರಿನ ಮುಸ್ಲಿಂ ಕವಿಗಳಲ್ಲಿ ತಟ್ಟನೆ ಪ್ರಸ್ತಾಪವಾಗುವ ಹೆಸರುಗಳು ಎಂ.ಅಕಬರ ಅಲಿ ಮತ್ತು ಪ್ರೊ.ಕೆ.ಎಸ್.ನಿಸಾರ್ ಅಹಮದ್. ಅದೇ ಸಾಲಿನ ಮತ್ತೊಂದು ಹೆಸರು ಬಿ.ಎ.ಸನದಿ. ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಕಾವ್ಯೋದ್ಯೋಗದಲ್ಲಿ ತೊಡಗಿಕೊಂಡಿರುವ ಸನದಿಯವರು ಆಗಾಗ ಗದ್ಯದಲ್ಲೂ ಕೃಷಿ ಮಾಡಿದವರು. ವೈಚಾರಿಕ ಬರೆಹಗಳು, ವಿಮರ್ಶೆ, ವ್ಯಕ್ತಿಚಿತ್ರಗಳು, ಸಂಪಾದನೆ, ನಾಟಕ, ಅನುವಾದ, ಗೀತರೂಪಕ, ಶಿಶುಸಾಹಿತ್ಯ ಹೀಗೆ ಅವರ ಬರೆಹಗಳಲ್ಲಿ ವೈವಿಧ್ಯವಿದೆ. ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ತಮ್ಮ ವೃತ್ತಿಯ ಬಹುಭಾಗವನ್ನು ಮುಂಬಯಿಯಲ್ಲಿ ಕಳೆದವರು. ಸದ್ಯ ತಮ್ಮ ನಿವೃತ್ತಿ ಜೀವನವನ್ನು ಕಳೆಯಲು ಅವರು ಆಯ್ಕೆಮಾಡಿಕೊಂಡ ಊರು ಕರಾವಳಿಯ ಕುಮಟಾ. ಸನದಿಯವರದು ಪ್ರಗತಿಶೀಲ ವಿಚಾರಧಾರೆ. ಈ ಕೃತಿಯಲ್ಲಿ ಅರಬ್ಬೀ ಕವಿ ಆಡೋನಿಸ್‌ನ ಬಗ್ಗೆ ಅವರು ಬರೆಯುವಾಗ ಒಂದು ಮಾತನ್ನು ಹೇಳಿದ್ದಾರೆ. ‘ನಾನು ಮುಂಬೈ ವಾಸಿಯಾಗಿದ್ದ ಕಾಲಾವಧಿಯಲ್ಲಿ ನನಗೆ ಅನೇಕ ಕನ್ನಡೇತರ ಕವಿ-ಲೇಖಕರ ಪರಿಚಯದ ಸುಯೋಗ ಪ್ರಾಪ್ತವಾಯಿತು. ನಮ್ಮ ವಿಚಾರ ಸಾಮ್ಯದಿಂದಾಗಿ ಕೆಲವರೊಡನೆ ಆತ್ಮೀಯತೆ ಬೆಳೆಯಿತು. ಅಂಥ ಆತ್ಮೀಯ ಹಿರಿಯರಲ್ಲಿ ಪ್ರಖ್ಯಾತ ಪ್ರಗತಿಶೀಲ ಉರ್ದುಕವಿ ಶ್ರೀ ಅಲಿ ಸರ್ದಾರ್ ಜಾಫ್ರಿ ಅವರೊಬ್ಬರು.’ ಪರೋಕ್ಷವಾಗಿ ತಾವೊಬ್ಬ ಪ್ರಗತಿಶೀಲ ಲೇಖಕ ಎಂದು ಅವರು ಇಲ್ಲಿ ಹೇಳಿಕೊಂಡಿದ್ದಾರೆ. ಕವಿ ಆಡೋನಿಸ್‌ನ ಹಾಗೆ ಕಾವ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆ ಹಾಗೂ ಅದರ ಭಾಷೆಯಲ್ಲಿ ಬದಲಾವಣೆ ಸಾಧಿಸಬಹುದೆಂದು ನಂಬಿದವರು ಸನದಿ. ಸನದಿಯವರ ಗದ್ಯ ಕೂಡ ಅವರ ಕಾವ್ಯದಂತೆ ಮಂದಾನಿಲ. ಅಬ್ಬರಿಸಿ ಹೇಳುವುದು ಅವರಿಗೆ ಒಗ್ಗುವುದಿಲ್ಲ. ಮೆಲುವಾಗಿ ಹಿತವಾಗಿ ಯಾರಿಗಾದರೂ ನೋವಾದಿತೇನೋ ಎಂಬ ಹಿಂಜರಿಕೆಯಲ್ಲಿ ಹೇಳುತ್ತಾರೆ. ಹಾಗೆಂದು ಸತ್ಯಕ್ಕೆ ಮುಖ ತಿರುವಿದವರಲ್ಲ. ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್…. ಎಂಬ ಪಂಥ ಸನದಿಯವರದು. ಹೀಗಾಗಿ ಅವರು ಅಜಾತಶತ್ರು. ಪ್ರಸ್ತುತ ಅವರ ಗದ್ಯ ಬರೆಹಗಳ ಸಂಕಲನ ‘ಸಂಚಲನ’ ಮೂರು ಭಾಗಗಳಲ್ಲಿ ಮೂವತ್ಮೂರು ಬರೆಹಗಳನ್ನು ಒಳಗೊಂಡಿದೆ. ಯಾವುದೇ ಬರೆಹ ಇರಲಿ ಅದು ಓದುಗನಲ್ಲಿ ಸಂಚಲನವನ್ನು ಉಂಟುಮಾಡಬೇಕು. ಆತನಲ್ಲಿಯ ನಿಷ್ಕ್ರಿಯತೆಯನ್ನು ದೂರಮಾಡಬೇಕು ಎಂಬ ಆಶಯದ ಕೃತಿ ಇದು. ಮೊದಲ ಭಾಗ ‘ದೂರದ ಬೆಳಕು’ದಲ್ಲಿ ಏಳು ಲೇಖನಗಳಿವೆ. ಅವರು ಅಮೆರಿಕ ಮತ್ತು ಕೆನಡಾದಲ್ಲಿದ್ದಾಗ ಅಲ್ಲಿಯ ಗ್ರಂಥಾಲಯಗಳಲ್ಲಿ ನಡೆಸಿದ ಅಧ್ಯಯನದ ಫಲವಾಗಿ ಈ ಲೇಖನಗಳು ಬಂದಿವೆ. ಭಾರತದ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾದ ಮೊದಲ ಚೀನಾ ಭಾಷಾತಜ್ಞ ಜೀ ಝಿಯನ್ಲಿನ್ ಕುರಿತು ಸನದಿಯವರು ತುಂಬ ಆಪ್ತವಾಗಿ ಬರೆದಿದ್ದಾರೆ. ರಾಜಕೀಯ ನೆಲೆಯಲ್ಲಿ ಏನೆಲ್ಲ ನಡೆದಿದ್ದರೂ ಜೀ ಅವರು ತಮ್ಮ ಮೆಚ್ಚಿನ ವಿಷಯಗಳ ಅಧ್ಯಯನ- ಸಂಶೋಧನೆಗಳ ತನ್ಮಯತೆಗೆ ಯಾವ ಕಾಲದಲ್ಲೂ ಬಾಧೆ ಬರಗೊಡಲೇ ಇಲ್ಲ. ಅಂತೆಯೇ ಅವರನ್ನು ಕನ್ಫೂಶಿಯಸ್ ತಪಸ್ವಿ ಎಂದು ಚೀನದ ಜನರು ಕರೆದದ್ದು ಅತ್ಯಂತ ಔಚಿತ್ಯಪೂರ್ಣವಾಗಿತ್ತು. ರಾಮಾಯಣ ಕಾವ್ಯ ಮಾತ್ರವಲ್ಲದೆ, ಕಾಳಿದಾಸ ಮಹಾಕವಿಯ ಶಾಕುಂತಲ ನಾಟಕ, ವಿಕ್ರಮೋರ್ವಶೀಯಮ್, ಪಂಚತಂತ್ರ ಇತ್ಯಾದಿ ಗ್ರಂಥಗಳನ್ನೂ ಅವರು ಅನುವಾದಿಸಿದ್ದರು’ ಎಂದು ಪರಿಚಯಿಸುತ್ತಾರೆ. ರಾಜಕೀಯ ಚೀನಾ ಮತ್ತು ಸಾಂಸ್ಕೃತಿಕ ಚೀನಾವನ್ನು ಸನದಿಯವರು ಮುಖಾಮುಖಿಯಾಗಿಸುವ ರೀತಿ ಅನನ್ಯ. ಅದೇ ರೀತಿ ಅವರು ನೊಬೆಲ್ ಪುರಸ್ಕೃತ ಕಪ್ಪು ಜನಾಂಗದ ಪ್ರಥಮ ಸಾಹಿತಿ ಓಲೆ ಸೋಯಿಂಕಾ, ಅರಬ್ಬೀ ಕವಿ ಅಡೋನಿಸ್, ಸೂಫೀ ಕವಿ ಶೇಖ್ ಸಾದಿ, ಔಸಬಂದ್, ಸೀಜೋ ಕುರಿತು ವಿಶೇಷ ಮಾಹಿತಿಯೊಂದಿಗೆ ಬರೆದಿದ್ದಾರೆ. ಔಸಬಂದ್ ಇದು ಅಮೆರಿಕಕ್ಕೆ ಜರ್ಮನಿ ಮತ್ತು ಇಟಲಿಯಿಂದ ವಲಸೆ ಬಂದ ಆಮಿಷ್ ಜನರು ತಮ್ಮ ಪ್ರಾರ್ಥನೆಗಾಗಿ ರಚಿಸಿಕೊಂಡ ಶ್ಲೋಕಗಳಿರುವ ಗ್ರಂಥ. ಸೀಜೋ ಇದು ಕೊರಿಯಾದ ಕಾವ್ಯ ಪ್ರಕಾರ. ಎರಡನೆ ಭಾಗ ಒಳದನಿಯಲ್ಲಿ ಇಪ್ಪತ್ತು ಲೇಖನಗಳಿವೆ. ಅನುವಾದ, ವ್ಯಕ್ತಿಚಿತ್ರ, ವಿಮರ್ಶೆ ಹೀಗೆ ಈ ಭಾಗ ಸಂಕೀರ್ಣವಾಗಿದೆ. ಸನದಿಯವರ ಗದ್ಯಶೈಲಿಗೆ ಇವೆಲ್ಲ ಉತ್ತಮ ಉದಾಹರಣೆಗಳು. ಗೊಂದಲಕ್ಕೆ ಎಡೆಯಿಲ್ಲದೆ ನಿಖರವಾಗಿ ವಿಷಯವನ್ನು ಹೇಳುವ ರೀತಿಯಿಂದಲೂ ಅವರು ಗಮನ ಸೆಳೆಯುತ್ತಾರೆ. ‘ಸಾಹಿತ್ಯವೊಂದು ಪರ್ಯಾಯ ಶಕ್ತಿಯಾದೀತೆ?’ ಎಂಬ ಲೇಖನದಲ್ಲಿ, ಮುಪ್ಪಿನವರ ಹಾಗೂ ಮಹಿಳೆಯರ ಮಾನ- ಮರ್ಯಾದೆಯ ಅರ್ಥವರಿಯದ ಅನರ್ಥಕಾರಿಗಳು ತಮ್ಮ ತಮ್ಮ ರೀತಿಗಳಲ್ಲಿ ಮಾನವ ಸಮಾಜದ ನೆಮ್ಮದಿಗೇ ಕಿಡಿಯಿಡುತ್ತಿರುವ ಈ ಕಾಲದಲ್ಲಿ ಸಂವೇದನಾಶೀಲ ಮತ್ತು ಸೃಜನಶೀಲ ಕವಿ, ಕಲಾವಿದ, ಸಾಹಿತಿಗಳು ತಮ್ಮ ಅಭಿವ್ಯಕ್ತಿಯ ವಿವಿಧ ಪ್ರಕಾರಗಳ ಮೂಲಕ ಇಂದಿನ ಸಮಾಜದಲ್ಲಿ ಧೈರ್ಯ, ಸ್ಥೈರ್ಯ, ಶಾಂತಿ, ಸಂಪನ್ನತೆಗಳನ್ನು ಕುದುರಿಸುವ ಪರ್ಯಾಯ ಶಕ್ತಿಯೊಂದನ್ನೊದಗಿಸದೆ ಗತಿಯಿಲ್ಲವೆಂದು ನನಗೆನಿಸುತ್ತದೆ ಎಂದು ಹೇಳಿದ್ದಾರೆ. ಸಾಹಿತ್ಯದ ಶಕ್ತಿಯ ಬಗೆಗಿರುವ ಈ ಪ್ರಗತಿಶೀಲ ಚಿಂತಕನ ನಂಬಿಕೆ ನಿಜವಾಗಲಿ. ಮೂರನೆ ಭಾಗ ವಿದಾಯದಲ್ಲಿ ಅಗಲಿದ ಅವರ ಸ್ನೇಹಿತರಾದ ಆರು ಸಾಹಿತಿಗಳ ಕುರಿತು ಸ್ಮರಣಾಂಜಲಿಗಳಿವೆ. ವ್ಯಕ್ತಿ ಸ್ಮರಣೆಯೊಂದಿಗೆ ಅವರ ಸಾಹಿತ್ಯದ ಮೌಲ್ಯಮಾಪನವೂ ಇದರಲ್ಲಿರುವುದರಿಂದ ಇಂಥ ಬರೆಹಗಳಿಗೆ ಇವುಗಳು ಮಾದರಿಯಾಗಿವೆ. ಸನದಿಯವರು ಇನ್ನಷ್ಟು ಬರೆಯಲಿ. ಕನ್ನಡ ಸಾಹಿತ್ಯದ ವೈವಿಧ್ಯವನ್ನು ಅವರು ಶ್ರೀಮಂತಗೊಳಿಸಲಿ. ಪ್ರ: ಸಾಹಿತ್ಯ ಸದನ, ಬೆಂಗಳೂರು, ಪುಟಗಳು ೨೦೮, ಬೆಲೆ ₹ ೧೨೫