*ತಳವೇ ಇಲ್ಲದೆ ಗಾಳಿಯಲ್ಲಿ ಗೋಪುರ ಕಟ್ಟುವವರು

ನಿರ್ದಿಷ್ಟ ಗುರಿಯಿಲ್ಲದೆ ಹಗಲುಗನಸು ಕಾಣುವವರನ್ನು ಶೇಕಮಾಮನ ಹಾಗೆ ಕನಸು ಕಾಣಬೇಡ ಎಂದು ಎಚ್ಚರಿಸುವ ಹಿರಿಯರು ಕರಾವಳಿ ಭಾಗದಲ್ಲಿದ್ದಾರೆ. ಎಲ್ಲವೂ ದೈವ ಲೀಲೆ, ನಮ್ಮದೇನಿದೆ ಎಂದು ಸ್ವಪ್ರಯತ್ನವನ್ನು ಬಿಟ್ಟುಬಿಡುವವರು, ಎಲ್ಲವನ್ನೂ ಮಾಡಿ ಎಲ್ಲ ಕಡೆಯೂ ಸೋಲನ್ನೇ ಕಂಡವರು ಅದ್ಯಾವುದೋ ಕಾಣದ ಶಕ್ತಿ ಬಂದು ನಮ್ಮನ್ನು ಉದ್ಧಾರ ಮಾಡುತ್ತದೆ ಎಂದುಕೊಳ್ಳುತ್ತಾರೆ. ಇವರೆಲ್ಲ ಈ ಶೇಕಮಾಮನ ಸಂಬಂಧಿಗಳೋ ದಾಯಾದಿಗಳೋ ಆಗಿರುತ್ತಾರೆ.
ಒಂದೂರಿನಲ್ಲಿ ಈ ಶೇಕಮಾಮ ಎನ್ನುವವನಿದ್ದನಂತೆ. ಸಂತೆಗೆ ಎಣ್ಣೆಯನ್ನು ಗಡಿಗೆಯಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಹೋಗಿ ಮಾರುವುದು ಅವನ ಉದ್ಯೋಗ. ಹಾಗೆ ಹೋಗುವಾಗಲೆಲ್ಲ ತನ್ನ ಬಡತನದಿಂದ ಹೇಗೆ ಮುಕ್ತಿಯನ್ನು ಕಾಣಬಹುದು ಎಂದು ಕನಸು ಕಾಣುತ್ತಿದ್ದ. ಈ ಬಾರಿ ಎಣ್ಣೆಯನ್ನು ಮಾರಿ ಒಂದು ಕುರಿಯನ್ನು ಖರೀದಿಸುತ್ತೇನೆ. ಅದು ನಾಲ್ಕು ಮರಿ ಹಾಕುತ್ತದೆ. ಅದು ದೊಡ್ಡದಾಗುತ್ತದೆ. ಮರಿಗೆ ಮರಿ…. ದೊಡ್ಡ ಕುರಿ ಹಿಂಡೇ ಆಗುತ್ತದೆ.
ಹಣ ಹರಿದು ಬರುತ್ತದೆ. ಮನೆ ಕಟ್ಟುತ್ತೇನೆ. ಊರ ಸಾಹುಕಾರ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ಮಕ್ಕಳಾಗುತ್ತಾರೆ. ತಾನು ಹಣವನ್ನು ಎಣಿಸುತ್ತಿರುತ್ತೇನೆ. ಮಗ ಬಂದು ಊಟಕ್ಕೆ ಬಾ ಎಂದು ಕರೆಯುತ್ತಾನೆ. ನಾನು ಬರುವುದಿಲ್ಲವೆಂದು ಸಿಟ್ಟಿನಿಂದ ಹೇಳುತ್ತೇನೆ ಎಂದು ತಲೆಯನ್ನು ಕೊಡವಿಬಿಡುತ್ತಾನೆ. ತಲೆಯ ಮೇಲೆ ಎಣ್ಣೆಯ ಗಡಿಗೆ ಇದ್ದುದನ್ನು ಅವನು ಮರೆತಿರುತ್ತಾನೆ. ಗಡಿಗೆ ಬಿದ್ದು ಎಣ್ಣೆ ಮಣ್ಣುಪಾಲಾಗುತ್ತದೆ. ಆಗ ಅವನು ವಾಸ್ತವ ಪ್ರಪಂಚಕ್ಕೆ ಮರಳುತ್ತಾನೆ.
ತಳವೇ ಇಲ್ಲದೆ ಗಾಳಿಯಲ್ಲಿ ಗೋಪುರ ಕಟ್ಟುವವರ ಸ್ಥಿತಿ ಇದು. ವಾಸ್ತವ ಮರೆಯದಿರು ಎಂಬ ಎಚ್ಚರಿಕೆ ಈ ಮಾತಿನಲ್ಲಿದೆ.