ಪತ್ರಿಕಾಲಯದಲ್ಲಿ
ಪತ್ರಗಳದ್ದೇ ರಾಶಿ ರಾಶಿ
ಬಿಡಿಸಿ ಇಡತೊಡಗಿದರೆ
ಸುದ್ದಿಗಳ ಗುಡ್ಡ

ಅಪಘಾತ, ಸಾವು, ಕೊಲೆ,
ಬೆದರಿಕೆ, ವರದಕ್ಷಿಣೆ ಕಿರುಕುಳ
ಗೋಲೀಬಾರು, ಲಾಠಿ ಛಾರ್ಜು, ನಿಷೇಧಾಜ್ಞೆ
ಬರೀ ಕ್ರಿಮಿನಲ್ಲು

ನೀರಿಲ್ಲ, ರಸ್ತೆಯಲ್ಲಿ ಹೊಂಡಗಳು
ಬೀದಿ ದೀಪದ ಕಂಬಕ್ಕೆ ಬಲ್ಬುಗಳೇ ಇಲ್ಲ
ಶಾಲೆಗೆ ಮಾಸ್ತರು ಇಲ್ಲ,
ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ
ಇವೆಲ್ಲ ಇಲ್ಲಗಳ ಸಂತೆ

ರಸ್ತೆ ತಡೆ, ರೈಲು ತಡೆ, ಜೈಲ್ ಭರೋ
ಕಪ್ಪು ಬಾವುಟದ ಪ್ರದರ್ಶನ
ಆತ್ಮಾಹುತಿಗೆ ಯತ್ನ
ಆಮರಣ ಉಪವಾಸ
ಸರದಿ ಅನ್ನ ಸತ್ಯಾಗ್ರಹ
ತನಗಾಗಿ, ಅವರಿಗಾಗಿ, ಗೊತ್ತಿದ್ದು, ಗೊತ್ತಿಲ್ಲದೆಯೇ

ಕಟ್ಟುತ್ತೇವೆ, ನಿರ‌್ಮಿಸುತ್ತೇವೆ
ಮಂಜೂರು ಮಾಡುತ್ತೇವೆ
ಚುಕ್ಕಿ ಚಂದ್ರಮರ ತಂದು ಪಕ್ಕದಲ್ಲಿ ಇಡುತ್ತೇವೆ
ಅಂಗೈಯಲ್ಲಿ ಸ್ವರ್ಗ ತೋರಿಸುವ ರಾಜಕಾರಣಿಗಳು

ಸಂತಾಪ, ವಿಷಾದ, ಶ್ರದ್ಧಾಂಜಲಿ
ಕಣ್ಣೀರ ಕಥೆಗೆ ಭರವಸೆಯ ಕರ್ಚೀಪು
ನಡುವೆಯೇ ಹೇಳುತ್ತಾರೆ ಸಂಪಾದಕರು
ಹರಿದು ತಾ ಏಜೆನ್ಸಿ ಕಾಪಿ

ಒಂದು ಕೈಯಲ್ಲಿ ಪಿಟಿಐ
ಇನ್ನೊಂದು ಕೈಯಲ್ಲಿ ಯುಎನ್‌ಐ
ಕಣ್ಣಾಡಿಸುತ್ತ್ತ ಹೋಗುವರವರು
ಮುಗಿಯದ ಸುರುಳಿ ಅಕ್ಷಯಾಂಬರವು

ಭಿನ್ನಮತ, ಬೆಂಬಲದ ಹಿಂದೆಗೆತ
ಸರಕಾರ ಉರುಳಿಸುವ ಸಂಚು
ಮಿತ್ರ ಪಕ್ಷಗಳ ಚರ್ಚೆ
ಗಡಿಯಲ್ಲಿ ಚಕಮಕಿ, ಗುಂಡಿಗೆ
ಉಗ್ರಗಾಮಿಯು ಬಲಿ
ಪಕ್ಕದ ಫೋನು ಒದರುವುದು
ಎಲ್ಲಿಯೋ ಬೆಂಕಿ, ಕೋಮು ಗಲಭೆ
ಎಲ್ಲಿ ಫೋಟೋಗ್ರಾಫರು?
ಹತ್ತು ಸತ್ತರೆ ಎರಡೇ ಎನ್ನುವ ಪೊಲೀಸರು

ಬರೆಯುವವರು ಬರೆದರು
ಜೋಡಿಸುವವರು ಜೋಡಿಸಿದರು
ತಿದ್ದುವವರು ತಿದ್ದಿ ತೀಡಿದರು
ಮುಖಪುಟಕ್ಕೆ ಯಾವ ಸುದ್ದಿ?
ಒಳಪುಟಕ್ಕೆ ಏನೇನು?
ಯಾವುದು ಸಂಪಾದಕೀಯ
ಕೊನೆಯ ಪುಟದಲ್ಲಿ ಯಾರು ಕ್ಲೀನ್ ಬೌಲ್ಡು?

ಜೊಳ್ಳು ತೂರಿದರು, ಕಾಳು ಹೆಕ್ಕಿದರು
ಕೊಂಬು, ಕಾಮಾ, ವಾರ, ತಿಥಿ
ಎಲ್ಲವೂ ಸರಿ
ನವ ವಧುವಿಗೆ ಗಡಿಬಿಡಿಯ ಶೃಂಗಾರ

ನಸುಕಿನಲ್ಲಿ ಬಸ್ ಸ್ಟ್ಯಾಂಡ್
ಕಾಫಿ, ಟೀ ಕ್ಲಬ್
ಮನೆ ಮನೆಯಲ್ಲಿ, ಎಲ್ಲೆಂದರಲ್ಲಿ
ತಾಜಾ ವರ್ತಮಾನ
ನಭೂತೋ ನ ಭವಿಷ್ಯತಿ
ನಿಗಿ ನಿಗಿ ನಮ್ಮ ವರ್ತಮಾನ