ಒಂದು ಭಾಷೆಯ ಸಾಹಿತ್ಯ ಚರಿತ್ರೆ ಎಂದರೆ ಆ ಭಾಷೆಯನ್ನಾಡುವ ಜನರ ಸಾಂಸ್ಕೃತಿಕ ಚರಿತ್ರೆಯೂ ಆಗಿರುತ್ತದೆ ಮತ್ತು ಆ ಭಾಷೆಯ ಜನರು ಬದುಕಿರುವ ಭೂ ಪ್ರದೇಶದ ಚರಿತ್ರೆಯೂ ಆಗಿರುತ್ತದೆ. ಕನ್ನಡದಂಥ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆಯೊಂದರಲ್ಲಿ ಸಾವಿರಕ್ಕೂ ಮಿಕ್ಕಿದ ವರ್ಷಗಳಲ್ಲಿ ರಚನೆಯಾಗಿರುವ ಸಾಹಿತ್ಯದ ಚರಿತ್ರೆಯನ್ನು ಬರೆಯುವುದೆಂದರೆ ಏಕ ವ್ಯಕ್ತಿಯಿಂದ ಅಸಾಧ್ಯವಾದ ಮಾತೇ ಸರಿ. ಈಗಾಗಲೆ ರಂ.ಶ್ರೀ ಮುಗಳಿಯವರು, ಮರಿಯಪ್ಪ ಭಟ್ಟರು ರಚಿಸಿದ ಸಾಹಿತ್ಯ ಚರಿತ್ರೆಗಳಿವೆ. ಆರ್.ನರಸಿಂಹಾಚಾರ್ ಅವರ ಕವಿಚರಿತೆ ಇದೆ. ಸಾಹಿತ್ಯವನ್ನು ವರ್ಗ ವ್ಯವಸ್ಥೆಯ ನೆಲೆಯಲ್ಲಿ ಪರಿಭಾವಿಸಿ ರಚಿಸಿದ ಸಾಹಿತ್ಯ ಚರಿತ್ರೆಗಳಿವೆ. ಹಿಂದಿನ ಸಾಹಿತ್ಯ ಚರಿತ್ರೆಗಳಲ್ಲಿ ಕವಿಗಳ ಚರಿತ್ರೆಯ ಬಗೆಗೇ ಬಹಳಷ್ಟು ಚರ್ಚೆಗಳು ನಡೆದಿವೆ. ಏಕೆಂದರೆ ಎಷ್ಟೋ ಕವಿಗಳು ತಮ್ಮ ವೈಯಕ್ತಿಕ ಬದುಕಿನ ವಿವರಗಳನ್ನು ಹೇಳದೆ ಬಿಟ್ಟಿದ್ದರು. ಕೆಲವರು ಕೇವಲ ಕಾವ್ಯನಾಮದಲ್ಲಿ ಬರೆದರೇ ಹೊರತು ತಮ್ಮ ನಿಜನಾಮ ತಿಳಿಸಲಿಲ್ಲ. ಕೆಲವರು ತಮ್ಮ ಆಶ್ರಯದಾತನ ಹೆಸರಲ್ಲಿ ಬರೆದರು. ಮೂಲ ಲೇಖಕರ ಶೋಧ ಆಗಬೇಕಿತ್ತು. ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ಆ ವಿವರಗಳು ಅಗತ್ಯವೂ ಆಗಿತ್ತು. ಆ ಸಾಹಿತ್ಯ ಚರಿತ್ರಕಾರರಿಗೆ ಹೊಸಗನ್ನಡ ಸಾಹಿತ್ಯದ ಆರಂಭ ಕಾಲ ಒಂದು ಗಡುವಾಗಿತ್ತು. ಹೊಸಗನ್ನಡ ಕಾಲಕ್ಕೆ ಬಂದಾಗ ಮುದ್ರಣ ಯಂತ್ರದ ಕಾರಣದಿಂದಾಗಿ ಹಾಗೂ ವಿದ್ಯಾಭ್ಯಾಸ ಮಾಡುವ ವರ್ಗ ಬೆಳೆದುದರಿಂದ ಸಾಹಿತ್ಯ ಸೃಷ್ಟಿ ಅಧಿಕವಾಯಿತು. ಸಾಹಿತ್ಯ ಸೃಷ್ಟಿಗೆ ಪ್ರೇರಕ ಅಂಶಗಳು ನೂರಾರು ಇದ್ದವು. ಹಾಗೆಯೇ ಸಾಹಿತ್ಯ ಪಂಥಗಳೂ, ಅವುಗಳ ಕುರಿತು ವಾದ, ಪ್ರತಿವಾದ, ವಾಗ್ವಾದಗಳೂ ವ್ಯಾಪಕವಾಗಿಯೇ ನಡೆದವು. ಇವೆಲ್ಲವೂ ಸಾಹಿತ್ಯ ಚರಿತ್ರೆಯ ಭಾಗವೇ. ಇಂಥ ಒಂದು ವ್ಯಾಪಕತೆ ಇರುವಾಗ ಕಳೆದ ಶತಮಾನದ ಸಾಹಿತ್ಯವನ್ನು ಒಂದೊಂದು ದಶಕವೆಂದು ಭಾಗ ಮಾಡಿಕೊಂಡು ಚರಿತ್ರೆಯನ್ನು ಬರೆಯ ಹೊರಟರೂ ಅದೊಂದೊಂದೂ ಬೃಹತ್ ಗ್ರಂಥವೇ ಆಗುವುದು. ಹೀಗಿರುವಾಗ ‘ಕನ್ನಡ ಸಾಹಿತ್ಯ ಚರಿತ್ರೆ ಪ್ರಾಚೀನ-ಆಧುನಿಕ’ ಹೀಗೆ ಎಲ್ಲವನ್ನೂ ಒಂದೇ ಗ್ರಂಥದಲ್ಲಿ ಹೇಳುವುದೆಂದರೆ ಅಸಾಧ್ಯವಾದ ಮಾತೇ ಸರಿ. ಕನ್ನಡದ ಹಿರಿಯ ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ಅಂಥ ಒಂದು ಸಾಹಸ ಮಾಡಿದ್ದಾರೆ. ಅವರಿಗೆ ತಮ್ಮ ಮಿತಿಯ ಅರಿವು ಚೆನ್ನಾಗಿಯೇ ಇದೆ. ಅದಕ್ಕಾಗಿಯೇ ಅವರು ಲೇಖಕರ ಮಾತಿನಲ್ಲಿ ‘ಒಂದೇ ಸಂಪುಟದಲ್ಲಿ ಬರೆಯಬೇಕಾದ ಇಂಥ ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಕೊರತೆಗಳನ್ನು ಎದುರಿಸಬೇಕಾಗುತ್ತದೆ. ಈವರೆಗೆ ಬರೆದಿರುವ ಎಲ್ಲ ಲೇಖಕರ ಬಗ್ಗೆ ಅಥವಾ ಎಲ್ಲ ಕೃತಿಗಳ ಬಗ್ಗೆ ಪ್ರಸ್ತಾಪಿಸುವುದು ಸಾಧ್ಯವೇ ಇಲ್ಲ. ಆದರೆ ಮುಖ್ಯವಾದವು ಸಾಧ್ಯವಾದಷ್ಟೂ ಬಿಟ್ಟುಹೋಗದಂತೆ ಇರಲು ಯತ್ನಿಸಿದ್ದೇನೆ. ಇಷ್ಟಾಗಿಯೂ ಹಲವು ಲೋಪದೋಷಗಳಿರುವುದು ಸಾಧ್ಯ. ಓದುಗರು ಈ ಬಗೆಯ ಬರೆಹದ ಮಿತಿಯನ್ನರಿತು ನನ್ನನ್ನು ಕ್ಷಮಿಸುವರಾಗಿ ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. ಈ ಮಾತುಗಳ ಹೊರತಾಗಿಯೂ ಕೆಲವು ಅಭಿಪ್ರಾಯಗಳನ್ನು ಹೇಳದಿದ್ದರೆ ಸರಿಯಾಗಲಾರದು. ಲೇಖಕರು ಸಾಹಿತ್ಯದ ಹೊಸ ಬೆಳೆಯನ್ನು ಅನುಸಂಧಾನ ಮಾಡಲಿಲ್ಲ. ಕನಿಷ್ಠಪಕ್ಷ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಪಡೆದ ಕೃತಿಗಳ, ಲೇಖಕರ ಹೆಸರುಗಳನ್ನಾದರೂ ಉಲ್ಲೇಖಿಸಬಹುದಿತ್ತು. ಈಗಿರುವ ಸಾಹಿತ್ಯ ಚರಿತ್ರೆಗೆ ಹೊಸದನ್ನು ಸೇರಿಸುವ ಜವಾಬ್ದಾರಿ ಹೊಸ ಚರಿತ್ರಕಾರರಿಗೆ ಇರುತ್ತದೆ. ಯಕ್ಷಗಾನ ಸಾಹಿತ್ಯ, ಜನಪದ ಸಾಹಿತ್ಯ, ಅಮೆರಿಕನ್ನಡಿಗ ಲೇಖಕರ ಬರೆಹ ಇಂಥವನ್ನು ಹೊಸದಾಗಿ ಸೇರಿಸಿಕೊಂಡಿರುವುದಾಗಿ ಭಟ್ಟರು ಹೇಳಿದ್ದಾರೆ. ಯಕ್ಷಗಾನ ಸಾಹಿತ್ಯಕಾರರಲ್ಲಿ ಹೊಸಬರ ಹೆಸರನ್ನಷ್ಟೇ ಉಲ್ಲೇಖಿಸುವುದು ಅವರಿಗೆ ಸಾಧ್ಯವಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿವಿಧ ಲೇಖಕರನ್ನು ಕೇಂದ್ರವಾಗಿಟ್ಟುಕೊಂಡು ಹಲವು ಪಿಎಚ್.ಡಿ. ಗ್ರಂಥಗಳು ಬಂದಿವೆ. ಉದಾಹರಣೆಗೆ ರಾ.ಯ.ಧಾರವಾಡಕರ ಅವರ ‘ಹೊಸಗನ್ನಡದ ಅರುಣೋದಯ’. ಅವೆಲ್ಲವೂ ಹೊಸ ಸಾಹಿತ್ಯ ಚರಿತ್ರೆಯನ್ನು ಕಟ್ಟುವಲ್ಲಿ ಆಕರಗಳಾಗಬೇಕು. ಮೊದಲೆಲ್ಲ ಅಕಾಡೆಮಿಯೋ ಸಾಹಿತ್ಯ ಪರಿಷತ್ತೋ ಸಾಹಿತ್ಯ ವಾರ್ಷಿಕ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದವು. ಆ ವರ್ಷ ಬಂದ ವಿವಿಧ ಸಾಹಿತ್ಯ ಪ್ರಕಾರಗಳ ಪ್ರಮುಖ ಗ್ರಂಥಗಳನ್ನು ಅದರಲ್ಲಿ ಉಲ್ಲೇಖಿಸಲಾಗುತ್ತಿತ್ತು. ವರ್ಷಕ್ಕೆ ಸಾವಿರ ಸಂಖ್ಯೆಯಲ್ಲಿ ಪುಸ್ತಕಗಳು ಬರುತ್ತಿರುವಾಗ ಸಾಹಿತ್ಯ ಚರಿತ್ರೆಯಂಥ ಕೃತಿಯನ್ನು ಸಮಗ್ರವಾಗಿ ರಚಿಸುವುದು ತುಂಬ ಸವಾಲಿನ ಕೆಲಸ. ಅಲ್ಲದೆ ಇದು ಒಬ್ಬ ವ್ಯಕ್ತಿಯ ಒಂದು ಸಂಪುಟದ ತೆಕ್ಕೆಗೆ ಹಿಡಿಯದಂಥದ್ದು. ಬದಲಾದ ಸಾಹಿತ್ಯಿಕ ವಾತಾವರಣಕ್ಕೆ ಅನುಗುಣವಾಗಿ ಯಾವರೀತಿಯ ಸಾಹಿತ್ಯ ಚರಿತ್ರೆ ರಚನೆಯಾಗಬೇಕು ಎಂಬ ಚರ್ಚೆಗೆ ಲಕ್ಷ್ಮೀನಾರಾಯಣ ಭಟ್ಟರ ಈ ಕೃತಿ ಕಾರಣವಾಗಲಿ. ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು ೪೬೪, ಬೆಲೆ ₹ ೨೯೫
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.