ಇನ್ನು ಒಳಗಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲವೇನೋ ಎನ್ನುವಂಥ ಒತ್ತಡದಲ್ಲಿ ಸೃಜನಕ್ರಿಯೆಗೆ ತೊಡಗಿಕೊಳ್ಳುವ ಟಿ.ಕೆ.ದಯಾನಂದ ಅವರು ತಮ್ಮ ಕಥಾಸಂಕಲನ ‘ರೆಕ್ಕೆ ಹಾವು’ದಲ್ಲಿ ಎಂಟು ವಿಶಿಷ್ಟವಾದ ಕತೆಗಳನ್ನು ನೀಡಿದ್ದಾರೆ. ಈ ಎಲ್ಲ ಕತೆಗಳ ವಸ್ತು ಮತ್ತು ಪಾತ್ರಗಳು ತಳ ಸಮುದಾಯದ ಜನರು. ಒಂದೆಡೆ ಕೋಲಾರ, ಮತ್ತೊಂದೆಡೆ ತುಮಕೂರು, ಇನ್ನೊಂದೆಡೆ ಅಂಕೋಲಾ, ಹಾಗೆಯೇ ದ.ಕ.ದ ಪರಿಸರದಲ್ಲಿ ಹುಟ್ಟಿಕೊಳ್ಳುವ ಕತೆಗಳು ಒಂದೇ ಆವೇಗದಲ್ಲಿ, ಒಂದರಿಂದ ಇಪ್ಪತ್ತರ ವರೆಗಿನ ಮಗ್ಗಿಯನ್ನು ಕಂಠಪಾಠ ಮಾಡಿದ ಮಕ್ಕಳು ಅದನ್ನೆಲ್ಲ ಒಂದೇ ಉಸುರಿಗೆ ಕಕ್ಕಿ ನಿರುಂಬಳವಾಗುವ ರೀತಿಯಲ್ಲಿ, ಇನ್ನೇನೋ ಮಾಡುವುದು ಅರ್ಧಕ್ಕೆ ನಿಂತಿದೆ, ಅಲ್ಲಿಗೆ ಹೋಗಿ ತಲುಪಬೇಕು ಎಂಬಂಥ ಧಾವಂತದಲ್ಲಿ ಓದುಗನಿಗೆ ಒಪ್ಪಿಸಿಕೊಂಡುಬಿಡುತ್ತವೆ. ಇಲ್ಲಿಯ ಪಾತ್ರಪ್ರಪಂಚ ನೀವೆಲ್ಲೋ ನೋಡಿರುತ್ತೀರಿ, ಆದರೆ ಅವರು ನಿಮ್ಮ ಮನಸ್ಸಿನಾಳಕ್ಕೆ ಇಳಿದಿರುವುದಿಲ್ಲ. ಯಾವತ್ತೋ ಅವರೊಂದಿಗೆ ಸಂಭಾಷಣೆ ನಡೆಸಿರುತ್ತೀರಿ. ಆದರೆ ಏನೆಂದು ನೆನಪಾಗುತ್ತಿಲ್ಲ. ಅಂಥ ಕ್ಷುದ್ರಾತಿಕ್ಷುದ್ರ ಜೀವಿಗಳಲ್ಲಿರುವ ಆಸೆ, ಬಯಕೆ, ಈರ್ಷ್ಯೆ, ಈಪ್ಸೆ, ಕಿಚ್ಚು, ಒಪ್ಪು, ಒನಪು, ಒಯ್ಯಾರ, ವೈರಾಗ್ಯ ಇತ್ಯಾದಿಗಳನ್ನು ಆಗತಾನೆ ನೀರಿನಿಂದೆತ್ತಿದ ಮೀನಿನಂತೆ ವಿಲಿವಿಲಿ ಮಿಡುಕಾಡುವ ಭಾಷೆಯೊಂದಿಗೆ ದಯಾನಂದ ಹಾಜರುಪಡಿಸುವ ರೀತಿ ಅನನ್ಯ. ಕುರುಂಪುಳಿ, ಚೆಂಗಾವಿ, ಪೆರುವಾಯಿ, ಕೊಡೆಪಾವು, ಮಾದರಟ್ಟಿ ಹೀಗೆ ಇಂಥ ಭೂಲೋಕ ನರಕಗಳನ್ನೇ ತಮ್ಮ ಸ್ವರ್ಗವೆಂದು ಬಗೆಯುತ್ತ, ಅಲ್ಲಿಯ ಕಿಂಚಿತ್ ಕಿಂಚಿತ್ ಸೌಲಭ್ಯಗಳನ್ನೇ ಅಪ್ಪುತ್ತ, ಒಪ್ಪುತ್ತ ಇಹವನ್ನು ಮರೆಯುವ ಪ್ರಜೆಗಳೆಂದರೆ ಯಾರು? ಒಂದೆಡೆ ಸಮಸ್ಯೆ ಇನ್ನೊಂದೆಡೆ ಪರಿಹಾರವೆಂಬ ಎರಡನ್ನೂ ಜೀವಂತವಿರಿಸಿಕೊಳ್ಳುವ ಕಿರಾತಕ ಪ್ಲಾನುಗಳನ್ನು ಅತ್ಯಂತ ಯಶಸ್ವಿಯಾಗಿಯೇ ನಡೆಸಿಕೊಂಡು ಬಂದ ಮಂಕಾಳಿ, ಮಾಜಿ ಡಕಾಯಿತ ಮತ್ತು ಹಾಲಿ ಡಂಗೂರದವ ಚುಂಚುಂಬ್ಲ, ಒಂದು ಕಾಲದಲ್ಲಿ ರೌಡಿಜಂ ಮಾಡಿಕೊಂಡು ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಬಡಿಯುತ್ತ ಸಖತ್ತಾಗಿ ಬದುಕುತ್ತಿದ್ದ ಡೈನೋಸಾರ್ ತಾತ, ದೊಡ್ಡಾಸ್ಪತ್ರೆ ಶವಾಗಾರದ ಟೆಂಪೊರರಿ ವಾಚ್‌ಮನ್ ಪಂಗಾಳಿ, ಕಕ್ಕಸುಗುಂಡಿ ಖಾಲಿ ಮಾಡುವ ಯರ‌್ರಣ್ಣ, ಕೋತಿ ಸರ್ಕಸ್ಸು ಕಂಪನಿ ಅಪ್ಪ ಮಕ್ಕಳಾದ ಲಾಳುಸಾಬು ಮತ್ತು ಫಕೀರುಸಾಬು, ಉಸ್ಮಾನಿಸಾಬರ ನಾಯಿ ಹಿಡಿಯುವ ತಂಡಕ್ಕೆ ನಾಯಿ ಹಿಡಿದುಕೊಡುತ್ತಿದ್ದ ಹನ್ಮಂತು, ಯಾಕೂಬ ಮತ್ತು ಪದ್ಮಾವತಿಯ ಪ್ರೇಮ ಸಲ್ಲಾಪಕ್ಕೆ ಪಾರಿವಾಳದಂತೆ ಬಳಕೆಯಾದ ಫಕೀರಸಾಬು ಹೀಗೆ. ಇವರೆಲ್ಲ ನಿಕೃಷ್ಟರಾಗಿದ್ದರೂ ಮೇಲೆಂಬ ಮೇಲುವರ್ಗದವರಿಗೆ ಒಂದಲ್ಲ ಒಂದು ವೇಳೆ ಕೆಲಸಕ್ಕೆ ಬೇಕಾಗಿಯೇ ಇರುತ್ತಿದ್ದರು. ‘‘ಒಳಚರಂಡಿಯೆಂದರೆ ‘ಅದೇನು ಕರ‌್ರಗೈತೋ ಬೆಳ್ಳಗೈತೋ’ ಎಂದು ಕೇಳಿಬಿಡುವಷ್ಟು ಅಮಾಯಕರಾಗಿದ್ದ ಕುರುಂಪುಳಿಯ ಜನರು ತಮ್ಮಮನೆಯ ಕಕ್ಕಸುಗುಂಡಿಗಳು ತುಂಬಿದರೆ ಬೇಕಾಗ್ತನೆ ಅಂತ ಜಾತಿಕಟ್ಟಳೆಗಳ ಗದರಿಕೆಗಳ ನಡುವೆಯೂ ಯರ‌್ರಣ್ಣನನ್ನು ಅವನ ಲಡಾಸು ಮೊಬೈಲು ನಂಬರಿನ ಸಮೇತ ಅನಿವಾರ್ಯವಾಗಿ ನೆನಪಿನಲ್ಲಿಟ್ಟುಕೊಂಂಡಿದ್ದರು. ಅವರ ನೆನಪಿಗೆ ಸೆಡ್ಡು ಹೊಡೆಯುವಂತೆ ಯಾವ ಬೀದಿಯ ಯಾರ ಮನೆಯ ಕಕ್ಕಸ್ಸುಗುಂಡಿ ಯಾವ ತಿಂಗಳಿಗೆ ತುಂಬಿ ಬಸುರಾಗುತ್ತದೆ ಎಂಬ ನೆನಪುಗಳನ್ನೂ ಯರ‌್ರಣ್ಣನೂ ಇಟ್ಟುಕೊಂಡಿದ್ದ. (ಪುಟ ೪೫)’’ ಇಂಥ ಪಾತ್ರಗಳೇ, ಈ ಜಗತ್ತಿನಲ್ಲಿ ನಿರುಪಯುಕ್ತವಾದದ್ದು ಯಾವುದೂ ಇಲ್ಲ ಎಂಬ ಹಳೆಯ ಒಕ್ಕಣೆಯನ್ನು ಹೊಸ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತಿದ್ದವು. ಫೀನಿಕ್ಸ್ ಪಕ್ಷಿಯಂತೆ ಹತ್ತು ಸಲ ಸತ್ತರೂ ಮತ್ತೆ ಮತ್ತೆ ಹುಟ್ಟಿಬರುವ ಛಲದಂಕಮಲ್ಲರಾಗಿರುವ ಹಕ್ಕಿಪಿಕ್ಕರು, ಬುಡಬುಡಕೆಯವರು, ಗೊರವರು, ಕರಡಿಖಲಂದರ್‌ಗಳು, ಗಿಣಿಶಾಸ್ತ್ರದವರು, ಗೊಂಬೆಯಾಟದವರು, ಹಾವುಗೊಲ್ಲರು, ದೊಂಬರು, ಕೊರಚರು, ಕೊರಮರು ಇತ್ಯಾದಿಗಳು ಈ ದೇಶದ ಕಾನೂನೆಂಬ ಉರುಳಿನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಿಕ್ಕಿಬಿದ್ದು ತಮ್ಮ ಅದುವರೆಗಿನ ಅಸ್ಮಿತೆಯನ್ನು ಕಳೆದುಕೊಳ್ಳುತ್ತ ಕೆಲವೇ ದಿನಗಳಲ್ಲಿ ಮತ್ತೆ ಹೊಸ ರೂಪದೊಂದಿಗೆ ತಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತ ನಾವು ಯಾರಿಗೇನು ಕಮ್ಮಿಯಿಲ್ಲ ಎಂದು ತಮ್ಮ ಜಗತ್ತಿನ ಇನ್ನೊಂದು ಅಂಚಿಗೆ ನಿಂತವರಿಗೆ ಸವಾಲುಹಾಕುವ ಪರಿ ಅನನ್ಯ. ಇದನ್ನು ಕತೆ ಎನ್ನಿ, ಸಮಾಜವಿಜ್ಞಾನದ ಪಾಠವೆನ್ನಿ, ದಯಾನಂದ ಅವರು ಭಾಷೆಯಲ್ಲಿ ಹಿಡಿದಿಟ್ಟ ಬಗೆಯಲ್ಲಿ ಅದೊಂದು ಮಹಾಕಾವ್ಯವಾಗಿ ನಿಮ್ಮನ್ನು ಆವರಿಸಿಬಿಡುತ್ತದೆ. ಕನ್ನಡ ಭಾಷೆ ಸತ್ತೇಹೋಯಿತು ಎಂದು ಕೂಗೆಬ್ಬಿಸುವ ಮಂದಿಗೆ ತಮ್ಮ ಗ್ರಾಮ್ಯ ಕನ್ನಡ, ಪುಸ್ತಕದ ಕನ್ನಡ, ದೇಸೀ ಇಂಗ್ಲಿಷ್, ಹಿಂದಿ, ಉರ್ದು ಇತ್ಯಾದಿಗಳ ಹದವರಿತ ಮಿಶ್ರಣದ ಆಡುಭಾಷೆಯಲ್ಲಿ ದಂಗುಬಡಿಸುತ್ತಾರೆ. ಯಾರ ಹಂಗುಹರಿಯಿಲ್ಲದೆ ಲಂಗುಲಗಾಮಿಲ್ಲದೆ ಭಾಷೆಯೆಂಬ ಝರಿ ಹೇಗೆ ಹೊಳೆಯಾಗಿ ಮಾರ್ಪಡುತ್ತದೆ ಎಂಬುದಕ್ಕೆ ದಯಾನಂದರ ಈ ಕಥಾಸಂಕಲನ ಅಧ್ಯಯನದ ಸರಕಾಗಬಲ್ಲುದು. ದಯಾನಂದ ಅವರ ಗದ್ಯ ಹೇಗೆ ಕಾವ್ಯವಾಗುತ್ತದೆ ಎಂಬುದಕ್ಕೆ ಒಂದು ಪುಟ್ಟ ಉಲ್ಲೇಖ ಇಲ್ಲಿದೆ. ‘ಪುಲಿಮೊಗರು’ ಎಂಬ ಕತೆಯ ಈ ಭಾಗ ನೋಡಿ: ‘‘ಅಲ್ಲಿಯ ತನಕ ತನ್ನೆದೆಗೂಡೊಳಗೆ ಹಚ್ಚದೇ ಉಳಿದಿದ್ದ ಹಣತೆಯೊಂದರ ಸುತ್ತ ಬೆಳಕು ಚಿಮುಕಿಸಿಕೊಂಡು ಮಿಣುಕುಹುಳುವೊಂದು ಹಾರುತ್ತಿರುವ ಕನಸೊಂದು ಬಿದ್ದು ಪುಳಕಗೊಂಡಿದ್ದ ಜೆನ್ಸಿಗೆ ಆ ಕನಸಿನ ಅರ್ಥವೇನೆಂದು ಹೇಗೆ ಯೋಚಿಸಿದರೂ ತಿಳಿದಿರಲಿಲ್ಲ. ಇತ್ತೀಚೆಗೆ ಏನನ್ನಾದರೂ ಕಳೆದುಕೊಳ್ಳಬೇಕೆನಿಸುತ್ತಿದ್ದ ಅವಳಿಗೆ ಯಾವುದನ್ನು ಮೊದಲಿಗೆ ಕಳೆದುಕೊಳ್ಳುವುದೆಂಬ ಗೊಂದಲಗಳೂ ತಲೆತುಂಬಿಕೊಳ್ಳುತ್ತಿದ್ದವು. ಪಂಗಾಳಿಗೆ ಪ್ರಿಯವಾದ ಹೊಳೆಬೈಗೆ ಸಾರು ಮಾಡುತ್ತ ಮಡಕೆ ಕೆಳಗಿದ್ದ ಒಲೆಗೆ ಬೆಂಕಿಯೂದುತ್ತ ಕುಳಿತಿದ್ದವಳು ಒಲೆಯಿಂದೆದ್ದ ಕಮಟುಹೊಗೆಯು ಗಾಳಿಯೊಳಗೆ ಲೀನಗೊಳ್ಳುವ ಮುನ್ನ ತನ್ನ ಆಕಾರದೊಳಗೆ ಯಾವುದೋ ಮುಖವೊಂದನ್ನು ಬರೆದು ಅಳಿಸಿಕೊಂಡಂತಾಗಿ ಒಮ್ಮೆ ಬೆಚ್ಚಿ ಬಿದ್ದಿದ್ದಳು. ಹೊಗೆಯ ಘಾಟಿಗೆ ಕೆಮ್ಮುತ್ತ ನೆತ್ತಿ ತಟ್ಟಿಕೊಳ್ಳುವಾಗ ಹೊಗೆಯೊಳಗೆ ಹಾಗೆಬಂದು ಹೀಗೆ ಹೋಗಿದ್ದು ತನ್ನಿಂದ ಕಪ್ಪೆಚಿಪ್ಪು ಖರೀದಿಸುತ್ತಿದ್ದ ನೇಪಾಳಿಯ ಮುಖವೆಂಬುದು ಗೊತ್ತಾಗಿ ಒಂದು ಕ್ಷಣ ಮೈಯ ನರಗಳು ರುಂ ಎಂದಿದ್ದವು.’’ ಇಲ್ಲಿಯ ಎಲ್ಲ ಕತೆಗಳ ರಸ ಭಾವ ಒಂದೇ. ಅದು ನೋವು. ಆ ನೋವಿನೊಳಗೂ ಬದುಕಿನತ್ತ ನೆಗೆವ ಆರ್ತತೆ ಓದುಗನನ್ನು ಬಲವಾಗಿ ತಟ್ಟುತ್ತದೆ. ಅದೇ ಕತೆಗಾರನ ಸಾರ್ಥಕ ಕ್ಷಣ. ದಯಾನಂದ ದೊಡ್ಡ ಕತೆಗಾರ ಆಗಲಿದ್ದಾರೆ ಅನ್ನುವುದರ ಪುರಾವೆ ಈ ‘ರೆಕ್ಕೆಹಾವು’. ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ಪುಟಗಳು ೧೧೨, ಬೆಲೆ ₹ ೧೦೦.