ಒಂದು ದೇಶ ಇನ್ನೊಂದು ದೇಶದ ಮೇಲೆ ದಂಡೆತ್ತಿ ಬಂದಾಗ ಅದನ್ನು ವಿರೋಧಿಸುವ ಯಾವುದೇ ವ್ಯಕ್ತಿಗೆ ಮೊದಲ ಮಹಾಯುದ್ದದ ಸಮಯದಲ್ಲಿ ನೇರವಾಗಿ ಸ್ಪೈ ಅಂದರೆ ಗೂಢಚಾರ ಎಂದು ಕರೆಯುತ್ತಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಇದಕ್ಕೆ ರೆಸಿಸ್ಟಂಟ್‌ ಅಂದರೆ ಪ್ರತಿರೋಧ ವ್ಯಕ್ತಪಡಿಸುವವನು ಎಂಬ ಪದ ಚಾಲನೆಗೆ ಬಂತು. ಮೊದಲ ಮಹಾಯುದ್ಧದ ಸಮಯದಲ್ಲಿ ಈ ಪ್ರತಿರೋಧಕ್ಕಾಗಿ ಯುರೋಪಿನಲ್ಲಿ ಅಲಿಸ್‌ ನೆಟ್‌ವರ್ಕ್‌ ದೊಡ್ಡ ಹೆಸರಾಗಿತ್ತು. ಇದನ್ನು ನಡೆಸುತ್ತಿದ್ದವಳು ಒಬ್ಬ ಹುಡುಗಿ ಎಂಬುದು ಇನ್ನೂ ಆಶ್ಚರ್ಯದ ಸಂಗತಿ. ಆ ಯುವತಿ ಲೂಯಿಸೆ ಡೆ ಬೆಟ್ಟಿಗ್ನಿಸ್‌. ಅವಳ ಸಂಕೇತ ನಾಮವೇ ಅಲಿಸ್‌ ಡುಬೋಯಿಸ್‌.
ಫ್ರಾನ್ಸಿನ ಲೂಯಿಸೆ ಡೆ ಬೆಟ್ಟಿಗ್ನಿಸ್‌ ಜನಿಸಿದ್ದು 1880ರ ಜುಲೈ 15ರಂದು. ಅವಳ ತಂದೆ ಹೆನ್ರಿ. ತಾಯಿ ಜುಲಿಯಾನೆ ಮಬಿಲ್ಲೆ ಡೆ ಪೊಂಚೆವಿಲ್ಲೆ. ವೆಲ್ಲೆನ್ಸಿನೆಸ್‌ನಲ್ಲಿ ತಂದೆ ನೋಟರಿಯಾಗಿ ಕೆಲಸ ಮಾಡುತ್ತಿದ್ದನು. ಹೆತ್ತವರು 1895ರಲ್ಲಿ ಲಿಲ್ಲೆಗೆ ವಾಸಕ್ಕೆ ಬರುತ್ತಾರೆ. ಲೂಯಿಸೆಳನ್ನು ಓದುವುದಕ್ಕೆಂದು 1898ರಲ್ಲಿ ಇಂಗ್ಲೆಂಡಿಗೆ ಕಳುಹಿಸುತ್ತಾರೆ. ತಂದೆ 1903ರಲ್ಲಿ ನಿಧನಗೊಂಡಾಗ ಅವಳು ಲಿಲ್ಲೆಗೆ ಮರಳುತ್ತಾಳೆ. 1906ರಲ್ಲಿ ಲಿಲ್ಲೆ ಯುನಿವರ್ಸಿಟಿಯಿಂದ ಅವಳು ಸಾಹಿತ್ಯದಲ್ಲಿ ಪದವಿಯನ್ನು ಪಡೆಯುತ್ತಾಳೆ. ಓದು ಮುಗಿಸಿದಾಗ ಇಂಗ್ಲಿಷ್‌ ಭಾಷೆಯ ಮೇಲೆ ಅವಳಿಗೆ ಪ್ರಭುತ್ವ ಸಿಕ್ಕಿತ್ತು. ಹಾಗೆಯೇ ಜರ್ಮನ್‌ ಮತ್ತು ಇಟಾಲಿಯನ್‌ ಭಾಷೆಯಲ್ಲೂ ಒಳ್ಳೆಯ ಜ್ಞಾನ ಹೊಂದಿದ್ದಳು.
ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಯುರೋಪಿನ ವಿವಿಧ ದೇಶಗಳಲ್ಲಿ ಶ್ರೀಮಂತ ಕುಟುಂಬಗಳಲ್ಲಿ ಮನೆಪಾಠದ ಶಿಕ್ಷಕಿಯಾಗಿ ಕೆಲಸ ಮಾಡುತ್ತಾಳೆ. ಇಂಗ್ಲಿಷ್‌, ಜರ್ಮನಿ ಮತ್ತು ಇಟಾಲಿಯನ್‌ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಆಧುನಿಕ ಫ್ರೆಂಚ್‌ ಮಹಿಳೆ ಅವಳಾಗಿದ್ದಳು. ಅಲ್ಲದೆ ರಷ್ಯನ್, ಝೆಕ್‌ ಮತ್ತು ಸ್ಪ್ಯಾನಿಶ್‌ ಭಾಷೆಗಳ ಜ್ಞಾನವೂ ಅವಳಿಗೆ ಇತ್ತು. ಆಸ್ಟ್ರಿಯಾದ ಸಿಂಹಾಸನದ ಉತ್ತರಾಧಿಕಾರಿ ಫರ್ಡಿನಾಂಡ್‌ ಜೋಸೆಫ್‌ನ ಮಕ್ಕಳಿಗೆ ಪಾಠ ಹೇಳುವ ಕೆಲಸ ಆಕೆಯನ್ನು ಹುಡುಕಿಕೊಂಡು ಬರುತ್ತದೆ. ಆದರೆ ಅವಳು ಅದನ್ನು ಒಪ್ಪಿಕೊಳ್ಳದೆ 1914ರ ಆರಂಭದಲ್ಲಿ ಲಿಲ್ಲೆಗೆ ಮರಳುತ್ತಾಳೆ. ಇದು ಪ್ರಥಮ ಮಹಾಯುದ್ಧ ಆರಂಭವಾಗುವ ಸಮಯವಾಗಿತ್ತು.
ಯುದ್ಧ ಆರಂಭವಾದ ಕೆಲವೇ ತಿಂಗಳುಗಳಲ್ಲಿ ಅವಳ ಲಿಲ್ಲೆ ಪಟ್ಟಣವನ್ನು ಜರ್ಮನಿಯ ಸೇನೆ ಆಕ್ರಮಿಸಿಕೊಂಡಿದ್ದರಿಂದ ಅವಳು ಊರನ್ನು ತೊರೆದು ಒಬ್ಬಳು ನಿರಾಶ್ರಿತೆಯಾಗಿ ಸೇಂಟ್‌‌-ಒಮರ್‌ಗೆ ಬರುವಂತಾಯಿತು. ಅಲ್ಲಿ ಅವಳು ಗಾಯಾಳುಗಳಿಗೆ ಶುಶ್ರೂಷೆಯನ್ನು ನೀಡುವುದಕ್ಕೆ ನೆರವಾಗುತ್ತಾಳೆ.
1916ರ ವರೆಗೂ ಸೇಂಟ್‌-ಒಮರ್‌ನಲ್ಲಿದ್ದ ಬ್ರಿಟಿಷ್‌ ಸೇನೆಯ ಕೇಂದ್ರಕಚೇರಿಯು ಜನರಲ್‌ ಫ್ರೆಂಚ್‌ ಎಂಬವನ ನಿಯಂತ್ರಣದಲ್ಲಿತ್ತು. ಅದರ ಬೇಹುಗಾರಿಕೆ ಸೇವೆಯನ್ನು ಲುಯಿಸೆ ಡೆ ಬೆಟ್ಟಿಗ್ನಿಸ್‌ ಸಂಪರ್ಕಿಸುತ್ತಾಳೆ. ಜರ್ಮನ್‌ ಪಡೆಗಳ ಅತಿಕ್ರಮಣದ ಆರಂಭದಲ್ಲಿ ಅವಳು ಜರ್ಮನಿಯು ವಶಪಡಿಸಿಕೊಂಡಿದ್ದ ಲಿಲ್ಲೆ ಪಟ್ಟಣದಿಂದ ಸ್ವತಂತ್ರವಾಗಿದ್ದ ಫ್ರಾನ್ಸ್‌ ಭಾಗಕ್ಕೆ ಪತ್ರಗಳನ್ನು ವಿತರಿಸುತ್ತಿದ್ದಳು. ಈ ಸಂದರ್ಭದಲ್ಲಿ ಫ್ರಾನ್ಸ್‌ನ ಬೇಹುಗಾರಿಕೆ ಸಂಸ್ಥೆ ಡ್ಯುಕ್ಸಿಮ್‌ ಬ್ಯೂರೋ ಅವಳನ್ನು ಸಂಪರ್ಕಿಸುತ್ತದೆ. ಆದರೆ ಅವಳು ಬ್ರಿಟಿಷ್‌ ಇಂಟೆಲಿಜೆನ್ಸ್‌ ಸರ್ವಿಸ್‌ ಸೇರುವ ನಿರ್ಧಾರ ಮಾಡಿ ಇಂಗ್ಲೆಂಡಿಗೆ ತೆರಳುತ್ತಾಳೆ. ಅಲ್ಲಿ ಅವಳಿಗೆ ಬೇಹುಗಾರಿಕೆಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಲಾಗುತ್ತದೆ. ಸಂಕೇತಗಳನ್ನು ಹೇಗೆ ಬಳಸಬೇಕು, ಯೋಜನೆಗಳ ನಕ್ಷೆಯನ್ನು ರಚಿಸುವುದು ಹೇಗೆ, ಮಾಹಿತಿಗಳನ್ನು ಕಲೆಹಾಕುವುದು ಹೇಗೆ ಮತ್ತು ಸಂದೇಶಗಳನ್ನು ಕಳುಹಿಸುವುದು ಹೇಗೆ ಎಂಬೆಲ್ಲ ತರಬೇತಿಯನ್ನು ನೀಡುವರು. ಅಲ್ಲದೆ ಅವಳಿಗೆ ಅಲಿಸ್‌ ಡುಬೋಯಿಸ್‌ ಎಂಬ ಗೂಢ ನಾಮವನ್ನು ನೀಡುತ್ತಾರೆ.
ಆಬಳಿಕ ಲುಯಿಸೆ ಡೆ ಬೆಟ್ಟಿಗ್ನಿಸ್ ಬೆಲ್ಜಿಯಂ ದೇಶದಲ್ಲಿ ತೂರಿಕೊಳ್ಳುತ್ತಾಳೆ. ಅವಳಿಗೆ ಗುರುತು ಮರೆಮಾಚುವುದಕ್ಕಾಗಿ ಫ್ಲಶಿಂಗ್‌ ಎಂಬ ಪಟ್ಟಣದಲ್ಲಿ ಡಚ್‌ ಸಿದ್ಧ ಆಹಾರ ತಯಾರಿಸುವ ಕಂಪನಿಯಲ್ಲಿ ಒಂದು ಕೆಲಸದ ವ್ಯವಸ್ಥೆ ಮಾಡಲಾಗುತ್ತದೆ. ಪಶ್ಚಿಮದ ಮುಂಚೂಣಿ ಪ್ರದೇಶದಲ್ಲಿ ಜರ್ಮನಿಯ ಪಡೆಗಳ ಚಲನವಲನ ಅರಿಯುವುದು, ಅದರಲ್ಲೂ ಮುಖ್ಯವಾಗಿ ಲಿಲ್ಲೆಯಲ್ಲಿಯ ಚಲನವಲನ ಅರಿಯುವುದು ಅವಳ ಕಲಸವಾಗುತ್ತದೆ. 1915ರ ಬೇಸಿಗೆಯ ವೇಳೆಗೆ ಅಲಿಸ್‌ ನೆಟ್‌ವರ್ಕ್‌ ಸುಮಾರು 80 ಪುರುಷರು ಮತ್ತು ಮಹಿಳೆಯರ ಒಂದು ತಂಡವಾಗಿತ್ತು. ಇವರೆಲ್ಲ ವಿವಿಧ ಸಾಮಾಜಿಕ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ರೈಲುಗಳನ್ನು ವೀಕ್ಷಿಸುತ್ತಿದ್ದರು, ಶಸ್ತ್ರಾಸ್ತ್ರಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎಂಬುದನ್ನು ನೋಡುತ್ತಿದ್ದರು. ಶಸ್ತ್ರಾಸ್ತ್ರಗಳ ಕೋಠಿ ಎಲ್ಲಿವೆ, ಅಧಿಕಾರಿಗಳ ಮನೆಗಳು ಎಲ್ಲಿವೆ ಎಂಬುದನ್ನು ಅರಿತು ವರದಿ ಮಾಡುತ್ತಿದ್ದರು. ಹಾಲೆಂಡಿನಲ್ಲಿದ್ದ ಮಿತ್ರಪಡೆಗಳ ಸೈನಿಕರನ್ನು ತೆರವು ಮಾಡುವುದಕ್ಕೆ ನೆರವಾದರು. ಯುದ್ಧದಲ್ಲಿ ಶತ್ರುಪಡೆಗಳಿಂದ ಸಾವಿರಾರು ಬ್ರಿಟಿಷ್‌ ಸೈನಿಕರ ಜೀವ ಉಳಿಸಲು ಸಹಕರಿಸಿದರು.
ಜರ್ಮನ್‌ ಸೇನೆಯ ಕುರಿತು ವಿಶಿಷ್ಟ ಮಾಹಿತಿಗಳನ್ನು ಕಲೆಹಾಕುವದರಲ್ಲಿ ಅಲಿಸ್‌ ನೆಟ್‌ವರ್ಕ್‌ ನಿರತವಾಗಿತ್ತು. ಎಲ್ಲೆಲ್ಲಿ ಜರ್ಮನಿಯು ತನ್ನ ಆಕ್ರಮಣವನ್ನು ಮುಂದುವರಿಸುತ್ತ ಹೋಗುತ್ತಿತ್ತೋ ಅಲ್ಲೆಲ್ಲ ಮಾಹಿತಿದಾರರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಹೀಗೆ ಸಂಗ್ರಹಿಸಲಾದ ಮಾಹಿತಿಯನ್ನು ಬೇಹುಗಾರಿಕೆ ಪಡೆಗೆ ಒದಗಿಸಲಾಗುತ್ತಿತ್ತು. ಮಿತ್ರಪಕ್ಷಗಳ ಬೇಹುಗಾರಿಕೆ ಕೇಂದ್ರವನ್ನಾಗಿ ಫೋಕ್‌ಸ್ಟನ್‌ಅನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಬ್ರಿಟಿಷ್‌ ಅಧಿಕಾರಿ ಮೇಜರ್‌ ಸೆಸಿಲ್‌ ಐಲ್ಮರ್‌ ಕ್ಯಾಮರೂನ್‌ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಫೋಕ್‌ಸ್ಟೋನ್‌ ಕೇಂದ್ರಕ್ಕೆ ಫ್ರೆಂಚ್‌ ಮತ್ತು ಬೆಲ್ಜಿಯಂನ ಬೇಹುಗಾರಿಕೆ ಕೇಂದ್ರಗಳಿಂದ ಮಾಹಿತಿ ಬರುತ್ತಿತ್ತು. ಇಂಥ ಒಂದು ವ್ಯವಸ್ಥೆ ನಿಯಮಿತಗೊಂಡಿದ್ದು 1918ರ ಮಾರ್ಚ್‌ ವೇಳೆಗೆ. ಆಗ ಜನರಲ್‌ ಫೋಕ್‌ ಅವರನ್ನು ಮಿತ್ರ ಪಡೆಗಳ ಸುಪ್ರೀಂ ಕಮಾಂಡರ್‌ ಎಂದು ನೇಮಕ ಮಾಡಲಾಯಿತು. ಮಿತ್ರಪಕ್ಷಗಳ ಬೇಹುಗಾರಿಕೆ ಮಾಹಿತಿಗಳನ್ನು ಆಗಿನಿಂದ ಒಂದು ಕಡೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುವುದು ಇದರಿಂದ ಸಾಧ್ಯವಾಯಿತು. ಆಕ್ರಮಿತ ಪ್ರದೇಶದಲ್ಲಿಯ ಮಿತ್ರಪಡೆಗಳ ಬಹುತೇಕ ಬೇಹುಗಾರಿಕೆ ವ್ಯವಸ್ಥೆಯು ಪಾರಿವಾಳಗಳ ಮೂಲಕ ನಡೆಯುತ್ತಿತ್ತು. ಹಲವು ಬಾರಿ ಜರ್ಮನಿಯವರು ಈ ಪಾರಿವಾಳಗಳನ್ನು ಹಿಡಿದುಬಿಡುತ್ತಿದ್ದುದರಿಂದ ಬೇಹುಗಾರಿಕೆ ಜಾಲ ಕುಸಿದುಬೀಳುತ್ತಿತ್ತು. ಫೋಕ್‌ಸ್ಟೋನ್‌ ಕೇಂದ್ರವು ಇಂಗ್ಲೆಂಡಿನ ಹೊರಗಿರುವ ಎರಡು ಬೇಹುಗಾರಿಕೆ ವರ್ತಳ ಮೇಲುಸ್ತುವಾರಿಯನ್ನು ನೋಡುತ್ತಿತ್ತು. ಅವುಗಳಲ್ಲಿ ಒಂದು ತಟಸ್ಥ ರಾಷ್ಟ್ರ ಹಾಲೆಂಡಿನ ರೊಟ್ಟೆರ್‌ಡ್ಯಾಂನಿಂದ ಕಾರ್ಯಾಚರಣೆ ಮಾಡುತ್ತಿತ್ತು. ಇನ್ನೊಂದು ಯುದ್ಧರಂಗಕ್ಕೆ ಹತ್ತಿರದಲ್ಲಿಯ ಫ್ರೆಂಚ್‌ ಪಟ್ಟಣ ಮಾಂಟ್ರಿಲ್‌-ಸುರ್‌-ಮೆರ್‌ನಿಂದ.
ಲುಯಿಸೆ ತಂಡದಲ್ಲಿ ಡೆ ಗೇಸ್ಟರ್‌ ಎಂಬ ಬೆಲ್ಜಿಯಂ ದೇಶದವನು ಇದ್ದನು. ಈತ ಮೌಸ್ಕಾರ್ನ್‌ ಎಂಬಲ್ಲಿಯ ಕೆಮಿಕಲ್‌ ಫ್ಯಾಕ್ಟರಿಯ ಮಾಲೀಕನಾಗಿದ್ದನು. ಆತ ಶತ್ರುಗಳ ದಾಖಲೆಗಳನ್ನು ನಕಲಿ ಸೃಷ್ಟಿ ಮಾಡುತ್ತಿದ್ದನು. ಕಲೆಹಾಕಿದ ಮಾಹಿತಿಗಳನ್ನು ಹಾಲೆಂಡಿಗೆ ಆದಷ್ಟು ಶೀಘ್ರ ಕಳುಹಿಸುವುದಕ್ಕೆ ಕೊರಿಯರ್‌ಗಳನ್ನು ಬಳಸಲಾಗುತ್ತಿತ್ತು. ಅಲಿಸ್‌ ನೆಟ್‌ ವರ್ಕ್‌ನ ಎಂಬತ್ತು ಸಿಬ್ಬಂದಿ ಲಿಲ್ಲೆ, ರೌಬೈಕ್ಸ್‌ ಮತ್ತು ಟೂರ್ಕೋಯಿಂಗ್‌ ಪಟ್ಟಣಗಳ ಸುತ್ತಮುತ್ತ ಬೀಡುಬಿಟ್ಟಿದ್ದರು. ಇವರಲ್ಲಿ ಹೆಚ್ಚಿನವರು ರೇಲ್ವೆಗಳಲ್ಲಿ ಮತ್ತುಅಂಚೆ ಸೇವೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವೊಬ್ಬರು ರಹಸ್ಯಗಳನ್ನು ಕಾಪಾಡಿಕೊಳ್ಳಬಲ್ಲ, ಸಂಚಾರಿಗಳಾದ ವೈದ್ಯರು, ಚರ್ಚಿನಲ್ಲಿಯ ಪೂಜೆ ಕೆಲಸ ಮಾಡುವವರೂ ಆಗಿರುತ್ತಿದ್ದರು. 1915ರ ವಸಂತದಲ್ಲಿ ಮ್ಯಾರಿ- ಲಿಯೋನಿ ವಾನ್‌ಹುಟ್ಟೆ ಎಂಬಾತ ಅಲಿಸ್‌ ನೆಟ್‌ವರ್ಕ್‌ನ ಚಟುವಟಿಕೆಯನ್ನು ಕ್ಯಾಬ್ರೈ, ವಾಲೆನ್ಸಿನ್ನೆಸ್‌ ಮತ್ತು ಸೇಂಟ್‌-ಕ್ವೆಂಟೈನ್‌ ನಗರಗಳಿಗೆ ವಿಸ್ತರಿಸುವುದಕ್ಕೆ ನೆರವಾಗುತ್ತಾನೆ.
ದ್ವೇಷದ ಹಿನ್ನೆಲೆಯಲ್ಲಿ ಜರ್ಮನಿಯ ಸೇನೆಯು ಬೇಹುಗಾರಿಕೆಯ ಚಟುವಟಿಕೆಯಲ್ಲಿ ನಿರತರಾದವರಿಗೆ ಬಹು ಕ್ರೂರವಾದ ಶಿಕ್ಷೆಯನ್ನು ವಿಧಿಸುತ್ತಿತ್ತು. ಯುದ್ಧ ಮುಗಿಯುವ ಹೊತ್ತಿಗೆ ನೊರ್ಡ್‌ ವಿಭಾಗವೊಂದರಲ್ಲೇ ಬೇಹುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಇಪ್ಪತ್ತೊಂದು ಜನರನ್ನು ಹತ್ಯೆ ಮಾಡಿತ್ತು. ಇನ್ನೂ ಹಲವರನ್ನು ಜೈಲಿಗಟ್ಟಿದ್ದರೆ ಇನ್ನೂ ಹೆಲವರನ್ನು ಬಲವಂತದ ದುಡಿಮೆಗೆ ದೂಡಲಾಗಿತ್ತು. ಜರ್ಮನಿಗರ ಅತಿ ದೊಡ್ಡ ಬಲಿ ಎಂದರೆ ಲಿಯೋನ್‌ ಟ್ರುಲಿನ್‌ ಎಂಬ ಯುವ ವಿದ್ಯಾರ್ಥಿ. ಈತ ಲಿಯೋನ್‌ 143 ಎಂಬ ಪುಟ್ಟದಾದ ಬೇಹುಗಾರಿಕೆ ಜಾಲವನ್ನು ನಡೆಸುತ್ತಿದ್ದನು. ಇದರ ಮೂಲಕ ತಾನು ಸಂಗ್ರಹಿಸಿದ ಮಾಹಿತಿಯನ್ನು ಅವನು ಅಲಿಸ್‌ ನೆಟ್‌ವರ್ಕ್‌ಗೆ ಪೂರೈಸುತ್ತಿದ್ದನು. ಆತನಿಗಿನ್ನೂ 18 ವರ್ಷ ಮಾತ್ರ ಆಗಿತ್ತು. 1915ರ ನವೆಂಬರ್‌ 8ರಂದು ಲಿಲ್ಲೆಯ ಚರ್ಚ್‌ನ ಎದುರು ಅವನನ್ನು ಗಲ್ಲಿಗೇರಿಸುತ್ತಾರೆ. ಬೆಲ್ಜಿಯಂನಲ್ಲಿ ಹುಟ್ಟಿದ ಈತ ಜರ್ಮನಿಯವರು ಫ್ರಾನ್ಸ್‌ ಮೇಲೆ ದಾಳಿ ಮಾಡಿದಾಗ ಇಂಗ್ಲೆಂಡಿಗೆ ಪಲಾಯನ ಮಾಡುತ್ತಾನೆ. ಅಲ್ಲಿ ಬೆಲ್ಜಿಯಂ ಸೇನೆಗೆ ಸೇರಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಆದರೆ ಆತನ ವಯಸ್ಸು ಚಿಕ್ಕದೆಂಬ ಕಾರಣ ನಿರಾಕರಿಸಲಾಗುತ್ತದೆ. ನಂತರ ಅವನು ಬ್ರಿಟಿಷ್‌ ಸೇನೆಯನ್ನು ಸಂಪರ್ಕಿಸುತ್ತಾನೆ. ಅವರು ಆತನಿಗೆ, ಆಕ್ರಮಿತ ಪ್ರದೇಶದಲ್ಲಿ ಒಂದು ಬೇಹುಗಾರಿಕೆ ಸಂಸ್ಥೆಯನ್ನು ಸ್ಥಾಪಿಸುವಂತೆ ಸಲಹೆ ನೀಡುತ್ತಾರೆ. ತನ್ನದೇ ವಯಸ್ಸಿನ ಕೆಲವು ಯುವಕರನ್ನು ಸೇರಿಸಿಕೊಂಡು ಅವನು ಈ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಹಾಲೆಂಡಿಗೆ ದಾಖಲೆಗಳನ್ನು ತಾನೇ ಸಾಗಿಸುತ್ತಿರುತ್ತಾನೆ. ಇಂಥ ಒಂದು ಪ್ರಯತ್ನದಲ್ಲಿ 1915ರ ಅಕ್ಟೋಬರ್‌ 3ರಂದು ಆತ ಬಂಧನಕ್ಕೆ ಒಳಗಾಗುತ್ತಾನೆ. ಬಂಧನದ ಸಂದರ್ಭದಲ್ಲಿ ಆತನ ಬಳಿ ಹಲವು ವರದಿಗಳು, ಫೋಟೋಗಳು, ಜರ್ಮನಿ ಸೇನೆಯ ನೆಲೆಗಳಿಗೆ ಸಂಬಂಧಿಸಿದ ಯೋಜನೆ ನಕ್ಷೆಗಳು ಸಿಕ್ಕವು. ವಿಚಾರಣೆ ಬಳಿಕ ಆತನಿಗೆ ದೊರಕ್ಕಿದ್ದು ಮರಣ ದಂಡನೆ ಶಿಕ್ಷೆ. ಯುದ್ಧದ ನಂತರ ಆತನಿಗೆ ಮರಣೋತ್ತರವಾಗಿ ಬ್ರಿಟಿಷ್‌ ವಾರ್‌ ಮೆಡಲ್‌ ಪ್ರದಾನ ಮಾಡಲಾಗುತ್ತದೆ.
ಅಲಿಸ್‌ ನೆಟ್‌ವರ್ಕ್‌ ಲಿಲ್ಲೆಯಿಂದ ಸುಮಾರು 40 ಕಿ.ಮೀ. ವ್ಯಾಪ್ತಿಯಲ್ಲಿ ತನ್ನ ಕಾರ್ಯಾಚರಣೆಯನ್ನು ಮಾಡುತ್ತಿತ್ತು. ಇದು ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ಅವಳ ಇಂಗ್ಲಿಷ್‌ ಬಾಸ್‌ಗಳು ಲುಯಿಸೆಯನ್ನು ದಿ ಕ್ವೀನ್‌ ಆಫ್‌ ಸ್ಪೈಸ್‌ ಎಂದು ಕರೆಯುತ್ತಿದ್ದರು. ಇಂಗ್ಲೆಂಡಿಗೆ ಪುರುಷರು ಕದ್ದು ಹೋಗುವುದಕ್ಕೆ ಅವಳು ನೆರವಾದಳು. ಅಲ್ಲದೆ ಲಿಲ್ಲೆಯ ಸುತ್ತಮುತ್ತಲಿನ ಒಂದು ಗ್ರಿಡ್‌ ಮ್ಯಾಪನ್ನು ಸಿದ್ಧಪಡಿಸಿ ಇಂಗ್ಲಿಷರಿಗೆ ನೀಡಿದಳು.
ಅಲಿಸ್‌ ನೆಟ್‌ವರ್ಕ್‌ ಎಷ್ಟೊಂದು ಮಹತ್ವದಾದ ಒಂದು ಮಾಹಿತಿಯನ್ನು ನೀಡಿತು ಎಂದರೆ ಜರ್ಮನಿಯ ಕೈಸರ್‌ ಅಂದರೆ ಚಕ್ರವರ್ತಿ 2ನೆ ಫಡರಿಕ್‌ನ ಜೀವಕ್ಕೇ ಅಪಾಯ ಬರುವಹಾಗಿತ್ತು. ಲಿಲ್ಲೆಯ ಯುದ್ಧಭೂಮಿಗೆ ಚಕ್ರವರ್ತಿಯು ರಹಸ್ಯವಾಗಿ ಬರುವ ರೈಲು, ಸಮಯ ಎಲ್ಲವನ್ನೂ ಅಲಿಸ್‌ ನೆಟ್‌ವರ್ಕ್‌ ತಿಳಿಸಿತ್ತು. ಈ ಮಾಹಿತಿಯನ್ನು ಆಧರಿಸಿ ಎರಡು ಬ್ರಿಟಿಷ್‌ ಯುದ್ಧ ವಿಮಾನಗಳು ಬಾಂಬ್‌ಗಳನ್ನು ಹಾಕಿಯೂ ಬಿಟ್ಟವು. ಆದರೆ ಗುರಿತಪ್ಪಿಹೋಯಿತು. ಜರ್ಮನಿಯ ಸೇನೆಗೆ ಇದೊಂದು ನುಂಗಲಾಗದ ಬಿಸಿತುಪ್ಪವಾಯಿತು. ಬ್ರಿಟಿಷರು ಹೇಗೆ ಏಳು ನೂರು ಮೈಲು ದೂರದಿಂದ ಬಂದು ಬಾಂಬ್‌ ಹಾಕಿದರು ಎಂಬುದು ಅವರಿಗೆ ಅರ್ಥವೇ ಆಗಲಿಲ್ಲ. ಅವಳು ಕಳುಹಿಸಿದ ಕೊನೆಯ ಸಂದೇಶ, 1916ರ ಆರಂಭದಲ್ಲಿ ವೆರ್ಡುನ್‌ ಮೇಲೆ ಜರ್ಮನ್‌ ಸೇನೆಯು ಭಾರೀ ಪ್ರಮಾಣದಲ್ಲಿ ದಾಳಿ ಮಾಡಲಿದೆ ಎಂಬುದು. ಆದರೆ ಫ್ರೆಂಚ್‌ ಕಮಾಂಡರ್‌ ಇದನ್ನು ನಂಬಲು ನಿರಾಕರಿಸಿದನು.
ಬೆಲ್ಜಿಯಂ-ಹಾಲೆಂಡಿನ ಗಡಿಯನ್ನು ದಾಟಿ ಲುಯಿಸೆ ಡೆ ಬೆಟ್ಟಿಗ್ನಿಸ್‌ ತನ್ನ ವರದಿಗಳನ್ನು ಸಾಗಿಸುತ್ತಿದ್ದಳು. ಇದು ಸಹಜವಾಗಿಯೇ ಜರ್ಮನಿಯ ಪ್ರತಿಬೇಹುಗಾರಿಕೆ ತಂಡದ ಗಮನವನ್ನು ಸೆಳೆಯಿತು. 1915ರ ಅಕ್ಟೋಬರ್‌ 20ರಂದು ಅದು ಅವಳನ್ನು ಯಶಸ್ವಿಯಾಗಿ ಬಲೆಯಲ್ಲಿ ಕೆಡವಿತು. ಟೌರ್‌ನೈ ಬಳಿ ಅವಳನ್ನು ಬಂಧಿಸಲಾಗುತ್ತದೆ. ಬ್ರುಸೆಲ್ಸ್‌ನಲ್ಲಿಯ ಸೇಂಟ್‌-ಗಿಲ್ಲೆಸ್‌ ಜೈಲಿಗೆ ಕಳುಹಿಸುತ್ತಾರೆ. 1916ರ ಮಾರ್ಚ್‌ 19ರಂದು ಅವಳಿಗೆ ಮರಣದಂಡನೆ ಶಿಕ್ಷೆಯನ್ನು ನೀಡುತ್ತಾರೆ. ಆ ಸಮಯದಲ್ಲಿ ಮರಣ ದಂಡನೆಯ ಶಿಕ್ಷೆಯ ವಿರುದ್ಧ ಜಾಗತಿಕ ಆಂದೋಲನ ನಡೆದಿತ್ತು. ಬ್ರುಸೆಲ್ಸ್‌ನಲ್ಲಿಯೂ ಇಂಥ ಚಳವಳಿ ನಡೆದಿತ್ತು. ಇಂಥ ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ ಅವಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು. 1916ರ ಏಪ್ರಿಲ್‌ 21ರಂದು ಸೀಬರ್ಗ್‌ ಜೈಲಿಗೆ ಕಳುಹಿಸಲಾಗುತ್ತದೆ. ಬೆಟ್ಟಿಗ್ನಿಸ್‌ ಖ್ಯಾತಿ ಮತ್ತು ಗೌರವ ಫ್ರಾನ್ಸ್‌ ಮತ್ತು ಬ್ರಿಟನ್ನಿನಲ್ಲಿ ಹೆಚ್ಚುತ್ತ ಹೋಯಿತು. ಅವಳನ್ನು ಸೀಬರ್ಗ್‌ಗೆ ಕಳುಹಿಸುವ ಪೂರ್ವದಲ್ಲಿ ಫ್ರೆಂಚ್‌ ಸೇನೆಯ ಜನರಲ್‌ ಜಾಫ್ರೀ ತನ್ನ ಅಧಿಕೃತ ಪತ್ರದಲ್ಲಿ ಅವಳ ಕೆಲಸವನ್ನು ಮುಕ್ತಕಂಠದಿಂದ ಹೊಗಳುತ್ತಾನೆ.
ಬೆಟ್ಟಿಗ್ನಿಸ್‌ಳನ್ನುಅತ್ಯಂತ ಕ್ರೂರ ಎನ್ನಬಹುದಾದ ಸ್ಥಿತಿಯಲ್ಲಿ ಇಟ್ಟಿರುತ್ತಾರೆ. ತನ್ನ ಜೊತೆಯಲ್ಲಿರುವ ಕೈದಿಗಳು ಕೆಲಸ ಮಾಡದಂತೆ ಅವಳು ಪ್ರಚೋದಿಸಿದ್ದು ತಿಳಿಯುತ್ತಿದ್ದಂತೆ ಅವರ ಕ್ರೌರ್ಯ ಇನ್ನಷ್ಟು ಹೆಚ್ಚುತ್ತದೆ. ಅದಾದ ಬಳಿಕ ಅವಳಿಗೆ ಪುಪ್ಪುಸದ ಉರಿಯೂತ ಶುರುವಾಗುತ್ತದೆ. ಆಗ ಅವಳನ್ನು ಸೇಂಟ್‌ ಮೇರಿ ಆಸ್ಪತ್ರೆಗೆ ಸೇರಿಸುತ್ತಾರೆ. ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯದ ಕಾರಣ ಅವಳು 1918ರ ಸೆಪ್ಟೆಂಬರ್‌ 27ರಂದು ಸಾವಿಗೀಡಾಗುತ್ತಾಳೆ. 1920ರ ಮಾರ್ಚ್‌ನಲ್ಲಿ ಅವಳ ಶವವನ್ನು ಅವಳ ತವರು ನೆಲವಾದ ಲಿಲ್ಲೆಗೆ ಸಾಗಿಸಲಾಗುತ್ತದೆ. ಅಲ್ಲಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವಳ ಅಂತ್ಯಸಂಸ್ಕಾರ ನಡೆಯುತ್ತದೆ. ಅವಳ ಸಾವಿನ ಬಳಿಕ ಬ್ರಿಟಿಷ್‌ ಸೇನೆಯ ಗೌರವ ಮತ್ತು ಬ್ರಿಟಿಷ್‌ ರಾಣಿಯ ಗೌರವ ಅವಳಿಗೆ ದೊರೆಯುತ್ತದೆ. ಅವಳ ಹುಟ್ಟೂರಿನಲ್ಲಿ ಪುಟ್ಟದೊಂದು ಮ್ಯೂಸಿಯಂಅನ್ನು ಅವಳ ನೆನಪಿನಲ್ಲಿ ಸ್ಥಾಪಿಸಲಾಗಿದೆ. ಫ್ರಾನ್ಸ್‌ನಲ್ಲಿ ಹಲವು ರಸ್ತೆಗಳಿಗೆ ಶಾಲೆಗಳಿಗೆ ಮತ್ತು ಇತರ ಕಟ್ಟಡಗಳಿಗೆ ಅವಳ ಹೆಸರನ್ನು ಇರಿಸಿ ಗೌರವಿಸಲಾಗಿದೆ. ಸಾಹಸಿಯಾದ ಅವಳನ್ನು ಉತ್ತರದ ಜಾನ್‌ ಆಫ್‌ ಆರ್ಕ್‌ ಎಂದೂ ಕರೆದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿರೋಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸಾಹಸಿ ಎಳೆಯ ಜೀವವೊಂದು ಹೀಗೆ ದುರಂತದ ಅಂತ್ಯವನ್ನು ಕಾಣುತ್ತದೆ.