ಉಳಿದ ಊರುಗಳಲ್ಲಿ ಎಂತೋ ಏನೋ, ನಮ್ಮೂರಲ್ಲಂತೂ ಗಡುಗಾಲ ಬಂತೆಂದರೆ ಒಂದು ನಮೂನೆ ಗಡಿಬಿಡಿ ಜೋರಾಗಿಬಿಡುವುದು. ತೆಂಕು ದಿಕ್ಕಿನಲ್ಲಿ ಆಗೊಮ್ಮೆ ಈಗೊಮ್ಮೆ ಕೇಳಿಸುವ ಗುಡುಗಿನ ಸದ್ದು, ರಾತ್ರಿ ಮನೆಯ ಅಂಗಳದಲ್ಲಿ ಮಲಗಿದವರಿಗೆ ಕಾಣಿಸುವ ಮಿಂಚು ಬರಲಿರುವ ಮಳೆಗಾಲಕ್ಕೆ ಮುನ್ನುಡಿ ಬರೆಯುತ್ತವೆ.
ನಮಗೆ ಗೊತ್ತಿರುವ ಹಾಗೆ ಕಾಲಪುರುಷನಿಗೆ ಮೂರೇ ಮುಖ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ. ಆದರೆ ಬೇಸಿಗೆ ಹಾಗೂ ಮಳೆಗಾಲಗಳ ನಡುವೆ ಗಡುಗಾಲವೆಂಬ ಅತಂತ್ರ ಅವಧಿಯೊಂದಿದೆ. ಅದು ಎಂಥ ಸಮಯ ಗೊತ್ತೆ?
ಬೆಸಿಗೆ ಮುಗಿಯುವ, ಮಳೆಗಾಲ ಆರಂಭವಾಗುವ ನಡುವಿನ ಸಂಧಿಕಾಲವೇ ಈ ಗಡುಗಾಲ. ಕರಾವಳಿಯ ನಮ್ಮೂರಂಥ ಹಳ್ಳಿಗಳಲ್ಲಿ ವಾಸದ ಮನೆಗಳ ಹೊದಿಕೆಯಿಂದ ಹಿಡಿದು ಮಳೆಗಾಲಕ್ಕೆ ಬೇಕಾದ ಜೀನಸುಗಳನ್ನು ತಂದು ಕೂಡಿಡಬೇಕು. ಹೀಗಾಗಿ ಗಡಿಬಿಡಿ ಸಹಜ ಬಿಡಿ.
ಮೊದಲ ಗುಡುಗು ಕೇಳಿದ ದಿನದಿಂದಲೇ ಜನರಿಗೆ ಮನೆ ಹೊದಿಕೆ ಮಾಡುವ ಚಿಂತೆ. ಹಂಚಿನ ಮನೆಗಳು ಇಡೀ ಊರಲ್ಲಿ ನಾಲ್ಕೋ ಐದೋ. ಉಳಿದವೆಲ್ಲ ತೆಂಗಿನ ಮಡ್ಳು, ತಾಳೆ ಮರದ ಮಡ್ಳು, ಬತ್ತದ ಹುಲ್ಲು, ಕಬ್ಬಿನ ಓಲೆಗಳು, ಅಡಕೆ ಮರದ ಸೋಗೆ… ಹೀಗೆ ಯಾವುದನ್ನಾದರೂ ಒಂದನ್ನು ಹೊಂದಿಸಬೇಕಾದ ಹೊದಿಕೆ ಮನೆಗಳು.
ಬರೀ ಮನೆಯಾದರೆ ಆಯಿತೆ? ದನಗಳನ್ನು ಕಟ್ಟುವ ಕೊಟ್ಟಿಗೆ, ಸ್ನಾನದ ಬಚ್ಚಲು ಇವೆಲ್ಲಕ್ಕೂ ಹೊದಿಕೆಯಾಗಬೇಕು. ದನಗಳ ಮೇವು, ಒಲೆಗೆ ಕಟ್ಟಿಗೆ ಇವನ್ನೆಲ್ಲ ನೀರು ತಾಗದಂತೆ ಇಡಬೇಡವೆ?
ಹೊದಿಕೆಗೆ ಬಳಸುವ ತೆಂಗಿನ ಮರದ ಮಡ್ಳಾದರೆ ಅದನ್ನು ನೀರಿನಲ್ಲಿ ಮೂರ್ನಾಲ್ಕು ದಿನ ನೆನೆಹಾಕಿ ಮೆತ್ತಗೆ ಮಾಡಿ ಮಧ್ಯದಲ್ಲಿ ಸಿಗಿದು ಅದರ ಜಮೆಗಳನ್ನು ಹಾಸುಹೊಕ್ಕು ಮಾಡಿ ಹೆಣೆಯಬೆಕಾಗುತ್ತದೆ. ತಾಳೆ ಮಡ್ಳು ತರಲು ಮೂರ್ನಾಲ್ಕು ಮೈಲು ನಡೆದು ಅಡವಿಗೆ ಹೋಗಬೇಕಾಗುತ್ತದೆ. ಕೋಳಿ ಸ್ವರಗೈಯುವ ಕಾಲಕ್ಕೆ ಮನೆ ಬಿಟ್ಟರೆ ಮರಳಿ ಊಟದ ಹೊತ್ತಿಗೆ ಮನೆ ಸೇರಬೇಕು.
ಬರೀ ಹೊದಿಕೆಯಲ್ಲ, ಜಡಿಮಳೆ ಗಾಳಿಗೆ ನೀರು ಮನೆಯೊಳಕ್ಕೆ ಬರಬಾರದೆಂದು, ಮಣ್ಣ ಗೋಡೆ ಮಳೆ ನೀರು ಸಿಡಿದು ನೆನೆಯಬಾರದೆಂದು ಮನೆಯ ಸುತ್ತ ತಟ್ಟಿಯನ್ನು ಕಟ್ಟಿಕೊಳ್ಳಬೇಕು.
ಈಗೀಗ ಅಕ್ಷಯ ತದಿಗೆಗೆ ಅಗೆ ಹಾಕುವುದು ನಿಂತುಬಿಟ್ಟಿದೆ. ಮೊದಲು ಒಂದೇ ಬೆಳೆ ಮಾಡುವಾಗ ರೈತರಿಗೆ ಕೆಲಸ ಕಡಿಮೆ ಇರುತ್ತಿತ್ತು. ಹಾಗಾಗಿ ಅಕ್ಷಯ ತದಿಗೆಗೆ ಬೀಜ ಹಾಕಿಬಿಡುತ್ತಿದ್ದರು. ಈಗ ಪಂಪ್ಸೆಟ್ನಿಂದ ನೀರು ಹಾಯಿಸಿ ಎರಡು ಬೆಳೆ ತೆಗೆಯುವರು. ಮೃಗಶಿರ ಶುರುವಾಗುವವರೆಗೂ ಸುಗ್ಗಿಯ ಕೆಲಸ ಇದ್ದೇ ಇರುತ್ತದೆ.
ಈ ಗದ್ದಲದಲ್ಲಿಯೇ ಆಚಾರಿ ಮೊನ್ನನ ಸಾಲೆಗೆ ನೇಗಿಲು ದುರಸ್ತಿಗೆ ಹೋಗುವುದು ನಡೆದೇ ಇರುತ್ತದೆ. ಮಾತು ಬಾರದ ಈ ಮೊನ್ನ ಆಚಾರಿ ಕೆಲಸದಲ್ಲಿ ಅಗದಿ ಪರಫೆಕ್ಟ್. ಕೆಲಸ ಒಯ್ದವರು ಒಮ್ಮೆ ಹೇಳುವುದನ್ನು ಎರಡುಸಲ ಹೇಳಿದರೆ ಅವನಿಗೆ ಸಿಟ್ಟುಬಂದುಬಿಡುವುದು, ಹಿಡಿದ ಕೆಲಸವನ್ನು ಬಿಟ್ಟೊಗೆದು ನಾಳೆ ಬಾ ಎಂದು ಸನ್ನೆ ಮಾಡಿಬಿಡುವನು. ಒಮ್ಮೆ ಅವನು ಕೆಲಸವನ್ನು ಬಿಟ್ಟೊಗೆದ ಎಂದರೆ ಅದನ್ನು ಅಂದೇ ಮಾಡಿಸುವುದು ಏಳು ಕೆರೆ ನೀರು ಕುಡಿದರೂ ಸಾಧ್ಯವಿಲ್ಲ.
ನೇಗಿಲ ಕುಂಟೆಗೆ ಕಾಸರಕನ ಮರವೇ ಚಲೋ ಅಂತಾರೆ. ಭರಣಿ ಮರದಂತೆ ಗಟ್ಟಿ ಅದು. ಒಜ್ಜೆ ಕೂಡ. ನೇಗಿಲ ಹಿಡಿಗೆ ಕುರುಡುನಾಯಕನ ಮರ ಹುಡುಕುತ್ತಾರೆ. ನೇಗಿಲ ಈಸು ಬಗಿನಿ ಮರದಿಂದ ಮಾಡುತ್ತಾರೆ. ಇವನ್ನೆಲ್ಲ ಮಾಡಲು ಒಂದು ಇಡೀ ದಿನ ಬೇಕು.
ಅವನ ಮಜೂರಿ ಅಗದಿ ಕಡಿಮೆ. ಸಂಸಾರ ಇಲ್ಲದ ಮೊನ್ನನಿಗೆ ಸುತ್ತಲಿನ ಪರಿಸರದಲ್ಲಿ ಆಗಿರುವ ಬದಲಾವಣೆ ಗಮನಕ್ಕೆ ಬಂದಿಲ್ಲ. ಅಂಗಡಿಗಳಲ್ಲಿ ಏರಿರುವ ದಿನಸಿನ ಬೆಲೆ ಅವನನ್ನು ತಟ್ಟಿಲ್ಲ. ಏಕೆಂದರೆ ಅವನು ತರುವುದು ಅಕ್ಕಿ ಮಾತ್ರ. ಜೊತೆಗೆ ನಶ್ಯ. ಅಂಗಡಿಯ ಭಟ್ಟರು ಅವನಿಗೆ ಸ್ವಲ್ಪ ಹೆಚ್ಚಿಗೆಯೇ ನಶ್ಯ ನೀಡುತ್ತಾರೆ.
ಗಡುಗಾಲ ಬಂತೆಂದರೆ ನಮ್ಮೂರ ಹುಂಜಗಳಿಗೆಲ್ಲ ಅಂತ್ಯಕಾಲ ಸಮೀಪಿಸಿತೆಂದೇ ಹೇಳಬೇಕು. ಮಳೆ ಬಿದ್ದು ಶರಾವತಿಯ ನೀರು ಕೆಂಪು ಬಣ್ಣಕ್ಕೆ ತಿರುಗುವ ಪೂರ್ವದಲ್ಲಿಯೇ ರಾಹುವಿಗೆ ಕೋಳಿ ಕೊಯ್ಯಬೇಕು. ಕೊಟ್ಟಿಗೆಯಲ್ಲಿ ದನ ಕರುಗಳು ಸುಖವಾಗಿ ಇರಬೇಕು ಎನ್ನುವುದಾದರೆ ರಾಹುವಿಗೆ ಕೋಳಿ ಕೊಯ್ಯುವುದು ಅನಿವಾರ್ಯ ಎಂಬ ನಂಬಿಕೆ ಇದೆ.
ನೋಟಗಾರ (ಆಯಗಾರ) ಬೊಬ್ಬೆ ಊರಲ್ಲಿ ದೆವ್ವಗಳಿಗೆಲ್ಲ ಕೋಳಿ ಬಲಿಕೊಡುವವನು. ಅವನನ್ನು ಕರೆಸಿ ಹಾನ ತಯಾರಿಸಿ ತಮ್ಮ ಜಮೀನಿನ ಗಡಿಗೆ ಒಯ್ದು ಅದನ್ನು ಇಟ್ಟು ಕೋಳಿ ಕೊಯ್ಯುವರು. ಬೊಬ್ಬೆಗೆ ಪ್ರತಿದಿನ ಒಂದಲ್ಲ ಒಂದು ಮನೆಯಲ್ಲಿ ಕೋಳಿ ಊಟದ ಆಹ್ವಾನ ಇದ್ದೇ ಇರುತ್ತದೆ. ಕೋಳಿ ತಿನ್ನದವರು ರಾಹುವಿಗೆ ಕೋಳಿಯ ಬಲಿ ಕೊಟ್ಟರೆ ಅದನ್ನು ಕೊಯ್ದ ಬೊಬ್ಬೆಯೇ ಮನೆಗೆ ಒಯ್ದು ಸಾರು ಮಾಡಿ ತಿನ್ನುವನು.
ಬೊಬ್ಬೆ ಹೇಳಿಕೆ ಮಾಡಿಕೊಳ್ಳುವ ರೀತಿ ವಿಶಿಷ್ಟವಾದದ್ದು. ಕೆಲವೊಮ್ಮೆ ದೆವ್ವಗಳನ್ನು ಅವನು ಜರೆಯುತ್ತಾನೆ. ಇನ್ನು ಕೆಲವೊಮ್ಮೆ ದೆವ್ವಗಳಿಗೆ ಆಮಿಷ ತೋರಿಸುತ್ತಾನೆ. ಕೆಲವೊಮ್ಮೆ ಕರುಣೆ ತೋರಿಸು ಎಂದು ವಿನಂತಿಸುತ್ತಾನೆ. ಹೇಳಿಕೆಯಲ್ಲಿ ಅವನೆಂದೂ ಕೊಡುತ್ತೇನೆ ಎಂದು ಹೇಳುವುದಿಲ್ಲ. ಕೊಡಿಸುತ್ತೇನೆ ಎಂದೇ ಅವನು ಹೇಳುವುದು.
ಸುಗ್ಗಿಯ ಕೊಯ್ಲು ಮುಗಿದ ಬಳಿಕ ಮೊದಲು ಬತ್ತವನ್ನು ಒರಳುಗಳಲ್ಲಿ ಹಾಕಿ ಒನಕೆಯಿಂದ ಮೆರಿದು ಅಕ್ಕಿ ತಯಾರಿಸುತ್ತಿದ್ದರು. ಈಗ ಹಾಗೇನಿಲ್ಲ. ಬತ್ತವನ್ನು ಮಿಲ್ಲುಗಳಿಗೆ ಒಯ್ದು ಅಕ್ಕಿ ಮಾಡಿಸಿಕೊಂಡು ತರುತ್ತಾರೆ. ಹೀಗೆ ತಂದ ಅಕ್ಕಿಯನ್ನು ಸುರಕ್ಷಿತವಾಗಿ ಇಡಬೇಕಲ್ಲ.
ಇದಕ್ಕಾಗಿ ಅಕ್ಕಿ ಮುಡಿಗಳು ಇಲ್ಲವೆ ಮಾನಗಿಗಳು ಅಥವಾ ಖಂಡುಗವನ್ನು ಕಟ್ಟುತ್ತಾರೆ. ಇದು ವಿಶಿಷ್ಟ ಕಲೆ. ಬತ್ತದ ಹುಲ್ಲಿನಿಂದ ಇದನ್ನು ಮಾಡುತ್ತಾರೆ. ಬೆತ್ತದ ಕೋಲುಗಳನ್ನು ಸಪೂರಾಗಿ ಸೀಳಿ ಎಳೆಗಳನ್ನ ತಯಾರಿಸಿ ಅದನ್ನು ಕಟ್ಟಲು ಬಳಸುವರು. ಬತ್ತದ ಹುಲ್ಲಿನ ನಡುವೆ ಅಕ್ಕಿಯನ್ನು ತುಂಬುವರು. ನಂತರ ಸುತ್ತಲೂ ಬೆತ್ತದ ಎಳೆಗಳನ್ನು ಬಳಸಿ ಕಟ್ಟುವರು. ಇದರಲ್ಲಿ ಅಕ್ಕಿಯು ಹುಳು ಹತ್ತದೆ ಬೆಚ್ಚಗೆ ಉಳಿಯುತ್ತದೆ.
ಇದರಲ್ಲಿ ಹದಿನೈದು ಕೊಳಗ ಅಕ್ಕಿ ಹಾಕಿದ್ದರೆ ಮಾನಗಿ ಅಥವಾ ಮುಡಿ ಎಂದೂ ಇಪ್ಪತ್ತು ಕೊಳಗ ಹಾಕಿದ್ದರೆ ಖಂಡುಗ ಎಂದೂ ಹೇಳುತ್ತಾರೆ. ಅಕ್ಕಿ ಮುಡಿಗಳು ಇಲ್ಲದ ಮನೆಗಳು ಈ ಭಾಗದಲ್ಲಿ ಇಲ್ಲವೇ ಇಲ್ಲವೇನೋ ಎಂದು ಹೇಳಬಹುದು. ಕೆಲವರ ಶ್ರೀಮಂತಿಕೆಯನ್ನು ಹೇಳುವುದಿದ್ದರೆ, ಅವನ ಮನೆಯಲ್ಲಿ ಐವತ್ತು ಮುಡಿ ಅಕ್ಕಿ ಇದೆ ಎಂದೋ, ನೂರು ಮುಡಿ ಅಕ್ಕಿ ಇದೆ ಎಂದೋ ಹೇಳುವುದು ವಾಡಿಕೆಯಾಗಿದೆ.
ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳುವ ಚಡಪಡಿಕೆಯ ಮತ್ತು ಕಗ್ಗಲ್ಲುಗಳ ಕಿಬ್ಬಿನಲ್ಲೂ ಹಸಿರು ಹುಟ್ಟಿಸುವ ಮಳೆಗಾಲದ ಸ್ವಾಗತದ ತರಾತುರಿಯ ಈ ಗಡುಗಾಲ ನಿಜಕ್ಕೂ ಗಡಿಬಿಡಿಯ ಕಾಲವೇ ಸೈ.