*ಅಸಾಂದರ್ಭಿಕವಾಗಿ ಪ್ರವರ ಹೇಳಿಕೊಳ್ಳುವವರು
ಊಟ ಆಯಿತೆ ಕೇಳಿದರೆ ಮುಂಡಾಸು ಮೂವತ್ತು ಮೊಳ ಅಂದ ಎಂಬ ಮಾತೊಂದಿದೆ. ಅಳಿಯನೊಬ್ಬ ಹೊಸದಾಗಿ ಮುಂಡಾಸವನ್ನು ಖರೀದಿಸಿದ್ದ. ಆ ಮುಂಡಾಸವನ್ನು ತೋರಿಸುವುದಕ್ಕಾಗಿಯೇ ಮಾವನ ಮನೆಗೆ ಹೋಗುತ್ತಾನೆ. ಚೆನ್ನಾಗಿ ನೆರಿಗೆಗಳನ್ನು ಮಾಡಿಕೊಂಡು ತಲೆಗೆ ಸುತ್ತಿಕೊಂಡಿದ್ದ. ಮಾವನ ಮನೆಯಲ್ಲಿ ಯಾರೂ ಅವನ ಮುಂಡಾಸದ ಬಗ್ಗೆ ಮಾತೇ ಆಡಲಿಲ್ಲ.
ಮಾವನು, ಮನೆಯಲ್ಲಿ ಎಲ್ಲರೂ ಕ್ಷೇಮವೆ ಎಂದಷ್ಟೇ ಕೇಳಿ ಸುಮ್ಮನಾದ. ಅತ್ತೆ ಬಂದವಳು ತನ್ನ ಮಗಳು, ಮೊಮ್ಮಕ್ಕಳು ಮೊದಲಾದವರ ಕುರಿತು ಕೇಳಿ ಸುಮ್ಮನಾದಳು. ಅಳಿಯನ ತಾಳ್ಮೆ ತಪ್ಪತೊಡಗಿತು. ತನ್ನ ಮುಂಡಾಸದ ಕುರಿತು ಹೇಳಬೇಕು ಎಂದು ಚಡಪಡಿಸತೊಡಗಿದ. ಹೊರಗೆ ಹೋಗಿದ್ದ ಅತ್ತೆ ಸ್ವಲ್ಪ ಹೊತ್ತಿನ ನಂತರ ಮನೆಗೆ ಬಂದವಳು ಅಳಿಯನನ್ನು ಕಂಡು, ಊಟ ಆಯಿತೆ ಎಂದು ಕೇಳಿದಳು. ತನ್ನ ಮುಂಡಾಸದ ಗುಂಗಿನಲ್ಲಿಯೇ ಇದ್ದ ಅಳಿಯ, ಮೂವತ್ತು ಮೊಳ ಅಂದ. ಏನು ಮೂವತ್ತು ಮೊಳ ಎಂದು ಅತ್ತೆ ಕೇಳಿದಳು. ಅದೇ ಈ ಮುಂಡಾಸ. ಮೊನ್ನೆ ಪೇಟೆಗೆ ಹೋಗಿದ್ದೆ. ಉದ್ದ ಮೂವತ್ತು ಮೊಳ ಇದೆ. ಅಗಲ ಆರು ಮೊಳ ಇದೆ. ರೇಷ್ಮೆಯ ಜರಿ ಇದೆ. ತುದಿಯಲ್ಲಿ ಕಸೂತಿ ಇದೆ ಎಂದೆಲ್ಲ ಹೇಳತೊಡಗಿದ.
ಅತ್ತೆಗೆ ಒಳಗೊಳಗೇ ನಗು. ಈ ಅಳಿಯನಂಥವರು ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ತಮಗೆ ಮಹತ್ವದ್ದೆನಿಸಿದ್ದು ಉಳಿದವರಿಗೂ ಮಹತ್ವದ್ದೆನಿಸಬೇಕು ಎಂದು ಬಯಸುತ್ತಾರೆ. ಏನೋ ಸಾಧನೆ ಮಾಡಿರುತ್ತಾರೆ. ಯಾರೂ ಗುರುತಿಸಿಲ್ಲ ಎಂಬ ಕೊರಗಿರುತ್ತದೆ. ಯಾವುದೋ ಸಂದರ್ಭದಲ್ಲಿ ಅಸಾಂದರ್ಭಿಕವಾಗಿ ತಮ್ಮ ಸಾಹಸ ಹೇಳಿಕೊಂಡು ಈ ಅಳಿಯನಂತೆ ಅಪಹಾಸ್ಯಕ್ಕೆ ಈಡಾಗುತ್ತಾರೆ. ಆಗೆಲ್ಲ ಮುಂಡಾಸುವ ಮೂವತ್ತು ಮೊಳ ಎಂಬ ಮಾತು ಕಿವಿಗೆ ಬೀಳುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.