• ಮಂಕು ತಿಮ್ಮನ ಕಗ್ಗಕ್ಕಿಂತ ಒಂದು ಮೆಟ್ಟಿಲು ಮೇಲಿನ ವೈಚಾರಿಕತೆ ಇದರಲ್ಲಿದೆ

(ನಾನು ಮರುಳ ಮುನಿಯನ ಕಗ್ಗವನ್ನು ಓದಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 1984ರಲ್ಲಿ. ಪಠ್ಯಕ್ರಮದ ಭಾಗವಾಗಿ ಬರೆದ ವಿಮರ್ಶೆ ಇದು. ಸುಮಾರು 38 ವರ್ಷಗಳ ಹಿಂದೆ.)

ಅಕಸ್ಮಾತ್ತಾಗಿ ಡಿವಿಜಿ ಕನ್ನಡಿಗರ ನೆನಪಿನಿಂದ ಮರೆಯಾದರೂ ಅವರ ಮಂಕುತಿಮ್ಮ ಮಾತ್ರ ಮರೆಯಾಗಲಾರ. ಡಿವಿಜಿ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅವರು ಟ್ಟುಹೋದ ಸಾಹಿತ್ಯ ರಾಶಿ ಮಾತ್ರ ಇದೆ. ಅವರು ನಿಧನರಾಗಿ ಒಂಬತ್ತು ವರ್ಷಗಳ ನಂತರ (1984) ಅವರದೇ ಆದ ಕೃತಿಯೊಂದು ಮೊದಲ ಮುದ್ರಣವನ್ನು ಕಂಡಿತು. ಅದು `ಮರುಳ ಮುನಿಯನ ಕಗ್ಗ’.

ರೂಪ, ರಚನೆ, ಗಾತ್ರ, ಉದ್ದೇಶ, ಪರಿಣಾಮ ಎಲ್ಲವೂಗಳಲ್ಲೂ ಹೆಚ್ಚೂಕಡಿಮೆ ಅದು `ಮಂಕು ತಿಮ್ಮನ ಕಗ್ಗ’ವನ್ನೇ ಹೋಲುತ್ತದೆ. ಇದನ್ನೇ ಕವಿ, “ಮರುಳ ಮುನಿಯನು ನಾನು ಮಂಕು ತಿಮ್ಮನ ತಮ್ಮ” ಎಂದು ಹೇಳಿದ್ದಾನೆ. ಮರುಳ ಮುನಿಯನಾದರೋ, `ಬಿಂಕ, ಕೊಂಕು ಒಂದು ಅರಿಯದಿದ್ದ ಸಾಧುವಾತನು, ಬಾಳಿದೇತಕೆನುತ ಲೊಮ್ಮೆಯೊಮ್ಮೆ ತಾನೆ ಕೇಳ್ವನು, ಕೂಳು ಹೆಣವು ತಾನೆನುತ್ತಲೊಮ್ಮೆ ನಕ್ಕು ಪೇಳ್ವನು’. ಇದಕ್ಕೆ ಅವನು ಕೊಡುವ ಕಾರಣ, `ಕೊರಗೆನ್ನೆದೆಯ ತಿತ್ತಿಯೊಳಗೆ ತುಂಬಿಹುದು, ಸಾಧುಗಳು ಸರಿ ಪೇಳರೇಂ’ ಎನ್ನುವುದು. ಇದರ ಹಿಂದಿರುವ ನಂಬಿಕೆ, `ಗುರುವಲೇ ಜಗ ನಮಗೆ’.

ಮರುಳ ಮುನಿಯನ ಮನಸು ಸರಳ ಬಾಳ್ವೆಯ ಕನಸು. ಆದರೆ ನಾನು ಹೇಳಿದ್ದೇ ಸರಿ ಎನ್ನುವ ಹಟದ ಮನೋಭಾವ ಅವನದಲ್ಲ. `ಸರಿ ನೋಡಿ ಕೊಡುವ ಸಜ್ಜನರಿಹರೆ ಲೋಕದಲಿ, ಶರಣಪ್ಪೆನವರಿಂಗೆ’ ಎನ್ನುವ ವಿನಯದ ಮಾತುಗಳಿಗೆ ಅವನು ಒಡೆಯ. ತಾನು ಜನರಿಗೆ ಬೋಧಿಸ ಹೊರಡುವಾಗ ಅದರಿಂದ ಪ್ರಯೋಜನ ಆಗುತ್ತದೆ ಎನ್ನುವ ನಂಬಿಕೆ ಅವನಿಗಿಲ್ಲ. ತನ್ನ ಕರ್ತವ್ಯವನ್ನು ತಾನು ಮಾಡುವೆನು ಎನ್ನುವ ಭಾವ.

ಲೋಕವನು ತಿದ್ದಲಿಕೆ ಹೊರಟು ಗೆದ್ದವರಾರು?
ಕಾಕುತ್ಸ್ಥನೇ, ಕೃಷ್ಣನೇ, ಬುದ್ಧ ಜಿನರೆ|
ಸಾಕ್ರಟೀಸ್‌ ಏಸುರೇ ಮೋಸೆಸ್‌ ಮಹಮದರೆ|
ಸ್ವೀಕರಿಸಿತಾರನದು?- ಮರುಳ ಮುನಿಯ ? ||495||

ಜಗದ ಘಟನೆಗಳಿಗೆ ಕವಿ ಇಲ್ಲಿ ಸಾಕ್ಷಿ. ಪ್ರತ್ಯಕ್ಷ ಅನುಭವದಿಂದಲೋ, ಅನುಭಾವದಿಂದಲೋ ಪಡೆದ ಪೂರ್ಣ ದೃಷ್ಟಿ, ಹಿರಿತನದ ವಾತ್ಸಲ್ಯ ಇವುಗಳ ಮೂಲಕ ಅವನು ಉಪದೇಶಿಸುವ ಅಧಿಕಾರವನ್ನು ಪಡೆಯುವನು. ಬದುಕಿನ ವಿಸ್ತಾರ ಹಾಗೂ ಮಹತ್ವದ ಅರಿವು ಕವಿಗಿದೆ. ಅದಕ್ಕಾಗಿಯೇ,
ಸುರಪ ಚಾಪದ ಗಾತ್ರ ವಿಸ್ತಾರ ಭಾರಗಳ|
ಧರೆಯಿಂದಲಳೆಯುವೆಯ ಕೈ ಮೊಳಗಳಿಂದೆ|| ಎನ್ನುವ ಹೋಲಿಕೆ ಕೊಡುವನು. ಈ ಜಗತ್ತು ಎಂತಹದ್ದು ಎಂದರೆ,

ಒಲವು ನಲುಮೆಯೆ ಸೃಷ್ಟಿ, ಮುಳಿಸು ಮಂಕೇ ಪ್ರಲಯ|
ಜಲಧಿಯಲೆ ಸಂಸಾರ ಶಿಲೆಯನೆಲೆ ಶಾಂತಿ||
ಚಲನ ವಲನವೆ ಮಾಯೆ ಚಲಸಂಸ್ಕೃತಿ ಬೊಮ್ಮ|
ಲಲಿತ ರೌದ್ರಗಳೆ ಜಗ- ಮರುಳ ಮುನಿಯ||366||

ಇಂತಹ ಜಗತ್ತಿನಿಂದ, “ನುಗ್ಗಿ ಬರುತ್ತಿರೆ ಲೋಕದ ಪ್ರಶ್ನೆಗಳ ದಾಳಿ ಉಗ್ಗು ಬಾಯ್ಚಪಲವಿದು….” ಕಗ್ಗ; ಇದು ಲಂಕೆಯಲ್ಲಿ ಹನುಮಂತ ಹಿಗ್ಗಿ ಬೆಳೆಸಿದ ಬಾಲದಂತೆ ಬೆಳೆದಿದೆ. ಇದು `ಬಿನದ ಕಥೆಯಲ್ಲ, ಹೃದ್ರಸದ ನಿರ್ಝರಿಯಲ್ಲ’, ಆದರೂ `ಮನನಾನುಸಂಧಾನಕಾದುದೀ ಕಗ್ಗ’. ಅದಕ್ಕಾಗಿಯೇ ಕವಿ, “ನೆನೆನೆನೆಯುತೊಂದು ಪದ್ಯವನದೊಮ್ಮೆಮ್ಮೆ ಅನುಭವಿಸಿ ಚಪ್ಪರಿಸೊ” ಎನ್ನುವನು.

ಕಗ್ಗ 806 ಬಿಡಿ ಪದ್ಯಗಳಲ್ಲಿ ಹಬ್ಬಿದೆ. ಪ್ರತಿಯೊಂದು ಬಿಡಿ ಪದ್ಯವೂ ನಾಲ್ಕು ಸಾಲಿನದು. ದ್ವಿತಿಯಾಕ್ಷರ ಪ್ರಾಸವನ್ನು ಅನುಸರಿಸಿದ್ದಾನೆ. ಸಂಪಾದಕರು ಮಂಕುತಿಮ್ಮನ ಕಗ್ಗವನ್ನು ನುಸರಿಸಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪದ್ಯಗಳನ್ನು ಜೋಡಿಸಿದ್ದಾರೆ. ಇಲ್ಲಿ ಮುಖ್ಯವಾಗಿ ಚರ್ಚಿತವಾಗಿರುವ ವಿಷಯ ಸಂಪಾದಕರೇ ಸೂಚಿಸಿದಂತೆ, 1.ಅಧಿದೈವ, 2.ಅಧಿಲೋಕ, 3.ಅಧ್ಯಾತತ್ಮ. ಇದರ ಜೊತೆಯಲ್ಲಿ ಸಮಕಾಲೀನ ಸಮಾಜದ ಗೋಳಿನ, ಅಸಮಾನತೆಯ, ಬರ್ಬರತೆಯ ಚಿತ್ರಣವನ್ನು ನೀಡುತ್ತಾನೆ.

ಸಮಕಾಲೀನ ಸಮಸ್ಯೆಗಳಿಂದ ವ್ಯಕ್ತಿ ಮುಕ್ತನಾಗುವುದು ಹೇಗೆ ಎನ್ನುವ ಚಿಂತನೆಗೆ ತೊಡಗುವ ಕವಿ ತನ್ನದೇ ಆದ ಪರಿಹಾರಗಳನ್ನು ಸೂಚಿಸುತ್ತಾನೆ. `ಕವಿ ದರ್ಶನ’ದಲ್ಲಿ ಅಭಿವ್ಯಕ್ತಗೊಂಡ ಪರಿಹಾರಗಳೇ ಇಲ್ಲಿ ಕಾವ್ಯ ರೂಪದಲ್ಲಿ ಬಂದಿವೆ. ಕವಿಯ ದರ್ಶನ, ಉಪದೇಶಗಳು ಕಾವ್ಯರೂಪದಲ್ಲಿ ಬಂದುದು ಸರಿಯೆ? ಕವಿ ಹಾಗೂ ತತ್ತ್ವಜ್ಞಾನಿ ಡಿವಿಜಿಯವವರ ವ್ಯಕ್ತಿತ್ವದಲ್ಲಿ ಒಂದಾಗಿ ಹೋಗಿದ್ದಾರೆ. ಆ ಕಾರಣದಿಂದಲೇ ಗಹನವಾದ ತತ್ವಗಳೂ ಕಾವ್ಯವಾಗಿಯೇ ಬಂದಿವೆ. ಇಲ್ಲಿ ಸೌಂದರ್ಯ ಇಲ್ಲವೆ? ಇದೆ. ಪ್ರತಿಯೊಂದು ಬಿಡಿ ಪದ್ಯದಲ್ಲೂ ಸೌಂದರ್ಯವಿದೆ. `Truth is Beauty’ ಎಂದಿಲ್ಲವೆ? ಕವಿ ಹೇಳಹೊರಟಿರುವುದು ಚಿರಂತನ ಸತ್ಯಗಳನ್ನು. ಆ ಶಿವಮಯವಾದ ಸತ್ಯವನ್ನು ಅನುಭವಿಸಿದಾಗ ಸೌಂದರ್ಯದ ಅನುಭವ ಆಗದೆ ಇರಲಾರದು. ಕವಿ ಸಂಬೋಧಿಸುವ ರೀತಿ ಆತ್ಮೀಯತೆಯಿಂದ ಕೂಡಿದೆಯೇ ಹೊರತು ದರ್ಪದಿಂದಲ್ಲ. `ಮುನಿಯ ಮಾತ ನೆನೆ',ಗುರಿಯದುವೆ ಜಾಣಂಗೆ’, `ಅರಿತುಕೊಳಲನುವಾಗು’ ಎನ್ನುವಲ್ಲೆಲ್ಲ ಮೃದುವಾದ ಆಜ್ಞೆಯ ಭಾವದ ಜೊತೆಗೆ, `ನಾನು ಹೇಳುವುದು ಹೇಳಿದೆ, ಇನ್ನು ನೀನು ತಿಳಿದ ಹಾಗೆ ಮಾಡು’ ಎನ್ನುವ ಭಾವವೂ ಇದೆ. ದಿನಬೆಳಗಾದರೆ ನಾವು ಕಾಣುವ, ಅನುಭವಿಸುವಂಥ ಉದಾಹರಣೆಗಳನ್ನು, ದೃಷ್ಟಾಂತಗಳನ್ನು ನೀಡುತ್ತಾನೆ. ಆದ್ದರಿಂದಲೇ ಹೇಳಿದ್ದು ತೀವ್ರ ಪರಿಣಾಮ ಬೀರುತ್ತವೆ.

ಬಗೆದು ನೀಂ ಬಾಳಿವೊಡೆ ಜಗದ ರಚನೆಯ ನೋಡು|
ಸಗಣಿ ಹಾಲುಗಳೆರಡು ಕೊಡುವ ಗೋವೊಂದೆ||
ಅಗಣಿತದಿ ಗಣ್ಯ(ಮ)ಗಣ್ಯಮಗಣಿತದಿಂದ|
ಜಗವೊಂದೆ ಬಹುರೂಪ – ಮರುಳ ಮುನಿಯ||155||

ಹುಳಿಮಾವಿನೆಳೆಕಾಯಿ ಮಾಗಿದರೆ ಮಧುಖಂಡ|
ಹಲವುದಿನಮಿನ್ನುಮಿರೆ ತಾನೆ ಕೊಳೆಯುವುದು||
ಇಳಿವುದಿಂತೊಳಿತು ಹೊಲಸಿಂ, ಹೊಲಸಿನಿಂದೊಳಿತು|
ಫಲವೊಂದೆ ಹತ್ತು ರುಚಿ- ಮರುಳ ಮುನಿಯ ||424||

ಕಗ್ಗದ ಪದ್ಯಗಳನ್ನೆಲ್ಲ ಸ್ಫೂರ್ತಿಯ ಒಂದೇ ಆವೇಶದಲ್ಲಿ ಬರೆದವುಗಳಲ್ಲ. ಚಿಂತನೆಯ ಕುಲುಮೆಯಲ್ಲಿ ಬೆಂದು ಭಾವದ ಆವರಣವನ್ನು ಹೊದ್ದು ಕಾಲದಿಂದ ಕಾಲಕ್ಕೆ ಅಭಿವ್ಯಕ್ತಿ ಪಡೆಯುತ್ತ ಹೋದದ್ದು. ಹಾಗಾಗಿ ಒಂದೇ ವಿಷಯ, ಒಂದೇ ಹೋಲಿಕೆ, ಒಂದೇ ಭಾವವನ್ನು ಒಳಗೊಂಡ ಎರಡೆರಡು ಪದ್ಯಗಳು ಅಲ್ಪ ಬದಲಾವಣೆಯೊಂದಿಗೆ ಇಲ್ಲಿ ಸಿಗುತ್ತವೆ.

ಮೊಟ್ಟೆಗಳನಿಕ್ಕಿ ತಾನೇ ನುಂಗುವಹಿಯಂತೆ|
ಸೃಷ್ಟಿಯುಣುವಳು ತಾನೆ ತನ್ನ ಸಂತತಿಯ||
ಸತ್ತುದೇನ್‌? ಎಲ್ಲ ಹೊಸ ಬೆಳೆಗೆ ಗೊಬ್ಬರವಾಯ್ತು|
ನಷ್ಟಕೆಡೆಗೊಡಳವಳು- ಮರುಳ ಮುನಿಯ ||445||

ಮೊಟ್ಟೆಗಳನಿಟ್ಟಿದನು ತಾನೆ ನುಂಗುವುದಹಿಯು|
ಸೃಷ್ಟಿತಾಯಿಗ ಮುಣಿಸು, ತಾಂ ಪೆತ್ತ ಮಗುವು||
ಪೆಟ್ಟಿನಿಂ ಬೆನ್ಮುರಿವವೊಲು ನಿನ್ನ ಮೈದಡವಿ|
ತಟ್ಟಿಯುಂ ಸವೆಯಿಪಳು- ಮರುಳ ಮುನಿಯ ||491||

ಮರುಳ ಮುನಿಯನ ಕಗ್ಗದಲ್ಲಿ ಮೇಲಿಂದಮೇಲೆ ಕಾಣುವುದು ವಿಚಾರಗಳ ದ್ವಂದ್ವ. ಬದುಕಿನಲ್ಲಿ ಒಂದು ನಿರ್ಣಯದ ನೆಲೆಯನ್ನು ತಲುಪಬೇಕಾದಾಗ ಇಂತಹ ದ್ವಂದ್ವಗಳು ಸ್ವಾಭಾವಿಕವೇನೋ? ಸಾಣೆಹಿಡಿಯದ ಹೊರತು ವಜ್ರಕ್ಕೆ ಹೊಳಪೆಲ್ಲಿ? ಕವಿ ನಿರ್ದಾಕ್ಷಿಣ್ಯವಾಗಿ ತನ್ನ ಮನದ ದ್ವಂದ್ವಗಳನ್ನು ಎದುರಿಗಿಡುತ್ತಾನೆ.

ನಂಬು ನೀಂ ದೈವವನು ನಂಬು ಸ್ವಯಂಭುವನು|
ನಂಬು ಸಾಂಬನ ಮನದಿ ತುಂಬು ಭಕ್ತಿಯನು||
ಬಿಂಬವೋ ಕಂಬವೋ ನಂಬಿಕೆಯ ಮಾತ್ರದಿಂ|
ದಿಂಬುಗೊಳುವುದು ಜೀವ- ಮರು ಮುನಿಯ ||615||

ಜೀವನದ ಕಷ್ಟದಲಿ ದೈವವನೆ ನಂಬಿ ನೀಂ|
ದೈವ ಮಾಡಿಪುದೆಲ್ಲವನು ತಡೆವುದೆಲ್ಲ||
ದೈವದಧಿಕಾರದಿಂ ಪೆರತೊಂದುಮಿರದಲ್ಲಿ|
ದೈವವೇ ಪರಮಗತಿ- ಮರುಳ ಮುನಿಯ ||251||

ಇಲ್ಲಿ ದೈವಕ್ಕೆ ಶರಣಾಗು ಎಂದವನೆ ನಿನ್ನ ಸತ್ವದ ಮೇಲೆ ನೀನು ನಿಲ್ಲು ಎಂದೂ ಹೇಳುವನು.
ನೆಚ್ಚದಿರು ದೈವವನು ಬೆಚ್ಚದಿರದಾರಿಗಂ|
ಎಚ್ಚರಿರು ನಿನ್ನ ಸತ್ವದಲಿ ನೀಂ ನಿಂತು||
ಅಚ್ಚು ಮೆಚ್ಚೇನಾದರಿರಲಿ ಲೋಕಕ್ಕೆ ಬಿಡು|
ರಚ್ಚೆ ನೀನೇ ನಿನಗೆ ಮರುಳ ಮುನಿಯ ||638||

ಉಪಾಸಕನಾದವನಿಗೆ ಒಮ್ಮೆಲೆ ನಿರ್ಗುಣ ನಿರಾಕಾರ ಬ್ರಹ್ಮನನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅದಕ್ಕಾಗಿ ಆಕೃತಿ ಮಾತ್ರವಾಗಿ ದೇವರನ್ನು ಉಲ್ಲೇಖಿಸುತ್ತಾನೆ ಎಂದಿಟ್ಟುಕೊಂಡರೂ ಎರಡನೆ ಕಗ್ಗದಲ್ಲಿ ಹಾಗಿಲ್ಲ. ಮಂಕುತಿಮ್ಮನ ಕಗ್ಗದಲ್ಲಿ `ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ’ ಎನ್ನುವಂಥ ಸಾಂತ್ವನದ ಮಾತಿದ್ದರೆ ಇಲ್ಲಿ,

ಶಿರವ ಬಾಗದೆ ನಿಂದು ನಿನ್ನ ವಿಧಿ ಬಡಿವಂದು|
ಸರಸಿಯಾಗಿಯೇ ಜಗದ್ವಂದ್ವಗಳ ಹಾಯ್ದು||
ಪರುಷ ಪದದಿಂದೆ ನೀನಧಿಪುರುಷ ಪದಕೇರು|
ಗುರಿಯದುವೆ ಜಾಣಂಗೆ- ಮರುಳ ಮುನಿಯ ||314||

ಎನ್ನುವಂಥ ಧೈರ್ಯ ತುಂಬುವ, ಪ್ರವಾಹದ ವಿರುದ್ಧ ಈಸಿ ಜೈಸಬೇಕೆಂಬ ಛಲವನ್ನು ಪ್ರಚೋದಿಸುವಂಥ ಮಾತನ್ನು ಹೇಳುವನು. ನಮಗೆ ಭವ್ಯ ಪರಂಪರೆ ಇರಬಹುದು. ಆದರೆ ಅದರ ನೆನಪಲ್ಲೇ ಹೆಮ್ಮೆ ಪಡುತ್ತ ವ್ಯರ್ಥ ವೇಳೆಗಳೆದು ವರ್ತಮಾನವನ್ನು ಕಡೆಗಣಿಸುವುದು ಕವಿಗೆ ಸಹಿಸಲಿಕ್ಕಾಗುವುದಿಲ್ಲ. ಅದಕ್ಕಾಗಿಯೇ,

ಸತ್ತವರ ಯಶವೊಂದು ಶವಭಾರ ಲೋಕಕ್ಕೆ|
ಒತ್ತುತ್ತಿರಲದು ಮೇಲೆ ಯುವಕ ಗತಿಯೆಂತು?||
ಉತ್ತು ನೆಲದಲಿ ಬೆರೆಸು ಹಳೆಜನವನದು ಬೆಳೆದು|
ಮತ್ತೆ ಹೊಸ ಪೈರಕ್ಕೆ- ಮರುಳ ಮುನಿಯ ||298|| ಎನ್ನುವನು.

ಋಷಿಕವಿ ಕೇವಲ ಕಣ್ಮುಚ್ಚಿ ಕುಳಿತು ತಪಸನ್ನೇ ಮಾಡಿ ತನ್ನ ಸಮಕಾಲೀನ ಜೀವನವನ್ನು ನಿರ್ಲಕ್ಷಿಸಿಲ್ಲ. ಆತ ಕಣ್ತೆರೆದು ತನ್ನ ಪರಿಸರ ಪರಿಸ್ಥಿತಿಗಳನ್ನು ನಿರೀಕ್ಷಿಸಿದ್ದಾನೆ. ಅದಕ್ಕೆ ಸ್ಪಂದಿಸಿದ್ದಾನೆ. ಗೊಂದಲ, ಸಂಕಷ್ಟಗಳನ್ನು ಕಂಡು ನಿರ್ವಿಣ್ಣನಾಗಿ `ಅಣಕಿಗರ ಸಂತೆ’ ಜಗ(399) ಎನ್ನುವನು. ಎಲ್ಲೆಲ್ಲೂ ಅಸಮಾನತೆ ಕಂಡಾಗ,
ಧನಿಯ ವಾಂತಿಯ ನಾತ ನೆರೆಮನೆಯ ಬಡವಂಗೆ|
ಉಣದ ಬಡವನ ಹಸಿವು ಗೋಳು ಧನಿಕನ ಕಿವಿಗೆ ||399|| ಎನ್ನುವನು. `ತೇಗುತಿರುವನು ಧನಿಕ ಕರುಬುತಿರುವನು ಬಡವ |398|’ ಎಂದು ಹೇಳಿದ ಕವಿಯ ಸಮಕಾಲೀನ ವಾಸ್ತವಿಕ ಪ್ರಜ್ಞೆ ಯಾವ ಬಂಡಾಯ ಕವಿಯ ಪ್ರಜ್ಞೆಗಿಂತ ಕಡೆಯಾದುದಲ್ಲ. ಕವಿ ಸಂಸಾರವನ್ನು ತ್ಯಾಗ ಮಾಡಬೇಕೆಂದು ಹೇಳುವುದಿಲ್ಲ. ಅವನು ಪಲಾಯನವಾದಿಯಲ್ಲ.
ಜೀವನದ ವಿಸ್ತಾರಕ್ಕೆ ಹೆಣ್ಣು ಗಂಡಾವಶ್ಯ|
ಭೂವಿಲಾಸದೊಲಿರ್ವರಾತ್ಮ ತಾಂ ಬೆಳಗುಂ||
ಭಾವದನ್ಯೋನ್ಯದಿಂ ಬೆಳೆವುದಾತ್ಮದ ರಾಜ್ಯ|
ಪಾವನವೋ ಜೀವಕ್ಕೆ- ಮರುಳ ಮುನಿಯ ||644||
ನಿಸರ್ಗ ಸಹಜವಾದ ಕಾಮದ ಬಗ್ಗೆ ಕವಿಗೆ ತಿರಸ್ಕಾರವಿಲ್ಲ. `ಕಾಮ ಸೃಷ್ಟಿಗೆ ಬೇರು’ ಎಂಬ ಸತ್ಯದ ಅರಿವು ಅವನಿಗಾಗಿದೆ.

ಮಾರನ ಬೆರಲ್ ನಿನಗೆ ಕಚಕುಳಿಯನಿಕ್ಕದಿರೆ|
ವೈರ ನಿನ್ನೆದೆಯೊಳಕ್ಕೆ ಹುಳಿಯ ಹಿಂಡದಿರೆ||
ಸ್ವಾರಸ್ಯಮೇನಿನ್ನು ಜಗದ ನಾಟಕದಲ್ಲಿ|
ಬೇರು ಸೃಷ್ಟಿಗೆ ಕಾಮ- ಮರುಳ ಮುನಿಯ ||362|| ಎಂದಿರುವನು.

ಮರುಳ ಮುನಿಯನ ಕಗ್ಗದಂಥ ಕಾವ್ಯವನ್ನು ಬರೆಯಬೇಕಾದ ಕವಿಗೆ ಅವಶ್ಯವಾಗಿ ಇರಬೇಕಾದದ್ದು ಭಾಷೆ ಹಾಗೂ ಅಭಿವ್ಯಕ್ತಿಯ ಮೇಲೆ ನಿಯಂತ್ರಣ ಹಾಗೂ ಪ್ರಭುತ್ವ. ಸಾಗರವನ್ನೇ ಬೊಗಸೆಯಲ್ಲಿ ಹಿಡಿದು ಹೇಳಬಲ್ಲಂಥ ಜಾಣ್ಮೆ. ಆಖ್ಯಾನಗಳನ್ನೇ ಸಂಕ್ಷಿಪ್ತವಾಗಿ ಪರಿಣಾಮಕಾರಿಯಾಗಿ ಹೇಳುವಂಥ ಶಕ್ತಿ. ಅಂಥದೊಂದು ಉದಾಹರಣೆ ಇಲ್ಲಿ ನೋಡಬಹುದು.

ರಾಮಾನುಜರ್‌ ಮನೆಯ ಹೊರನಿಂತ ಶಿಷ್ಯನನು|
ನಾಮವೇನೆನ್ನಲಾ ನಾನೆಂದನಾತಂ||
ಬಾ ಮಗುವೆ ನಾಂ ಸತ್ತ ಮೇಲೆ ನೀಂ ಬರ್ಪುದೆಂ|
ದಾಮುನಿಯ ಮಾತ ನೆನೆ- ಮರುಳ ಮುನಿಯ ||280||

ಕೋಡೆರಡು ಚಂದ್ರಮಗೆ ನಡುವೆ ಕಪ್ಪನ ಕಣಿವೆ|
ನೋಡು ಹುಣ್ಣಿಮೆಯಂದು ತುಂಬಿಹುದು ಬಿಂಬ||
ಮೋಡವನು ತನಗೆ ತಾಂ ಮುಸುಕಿಕೊಂಡಾತ್ಮ ತಾ|
ನಾಡುತಿಹುದೆರಡೆನಿಸಿ- ಮರುಳ ಮುನಿಯ||145|| ಎನ್ನುವಲ್ಲಿ ಗಹನವಾದ ಆಧ್ಯಾತ್ಮಕ್ಕೂ ಸೌಂದರ್ಯದ ಮುಸುಕನ್ನು ಹಾಕಿ ಕೊಡುವಂಥ ಶಕ್ತಿ ಕವಿಗಿದ್ದದ್ದು ಕಂಡುಕೊಳ್ಳಬಹುದು.

ಉದಧಿಯಲಿ ನದಿ ನದಗಳುದಕ ಭೇದಗಳೈಕ್ಯ|
ಬದುಕಿನಲಿ ಮತ (ರೀತಿ) ಭೇದಂಗಳೈಕ್ಯ||
ಸದಮಲಾತ್ಮದೊಳೆಲ್ಲ ಲೋಕ ಭೇದಗಳೈಕ್ಯ|
ಇದಿರಿಗಿಹುದೇಕಾತ್ಮ- ಮರುಳ ಮುನಿಯ ||42|| ಎಂದು ಅದ್ವೈತವನ್ನು ಹೇಳುವನು.

ಯಾವುದೇ ಚಿಂತನಶೀಲ ಕವಿಯಲ್ಲಿ ವೈಚಚಾರಿಕತೆಯ ಹಂತಗಳು ಇರುತ್ತವೆ. ಪ್ರಾಥಮಿಕತೆಯಿಂದ ಪ್ರೌಢಾವಸ್ಥೆಯ ಕಡೆಗೆ ಬೆಳವಣಿಗೆ ಸಾಗಿರುತ್ತದೆ. ಮಂಕು ತಿಮ್ಮನ ಕಗ್ಗದಲ್ಲಿ ಕವಿಯ ವೈಚಾರಿಕತೆಯ ಮಟ್ಟ ಇಲ್ಲಿಗಿಂತ ಒಂದು ಮೆಟ್ಟಿಲು ಕೆಳಗೆ ಇದ್ದುದ್ದನ್ನು ಕಾಣಬಹುದು. ಅಲ್ಲಿಯ ಆರಂಭದ ಪದ್ಯದಲ್ಲೇ ವಿಷ್ಣುವಿನಲ್ಲಿ ತನ್ನ ಭಕ್ತಿಯನ್ನು ಇಟ್ಟಿದನ್ನು ಸ್ಪಷ್ಟಪಡಿಸುತ್ತಾನೆ. ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ ದೇವ ಸರ್ವೇಶ ಪರಬೊಮ್ಮನೆಂದು (ಮಂ.ಕ1) ಒಪ್ಪಿಕೊಳ್ಳುವನು. ಅಲ್ಲಿ ಅವನಿಗೆ ವಿಷ್ಣು ಶಿವ ಎಲ್ಲ ಬೇರೆಬೇರೆ ದೇವತೆಗಳು. ಆದರೆ ಇಲ್ಲಿ,

ಈಶ್ವರನೆನಿಪ್ಪವನ ಬೆಂಗಡೆಯೆ ತಾಂ ಬ್ರಹ್ಮ|
ಶಾಶ್ವತಂ ಬ್ರಹ್ಮ ತಾತ್ಕಾಲಿಕಂ ದೇವರ್||
ವಿಶ್ವಮಂ ನಿರ್ಮಿಸಿಯೆ ನಿರ್ವಹಿಪನೀಶ್ವರಂ|
ನಿಷ್ಕ್ರಿಯಂ ಪರಬೊಮ್ಮ- ಮರುಳ ಮುನಿಯ ||11||

ಮೊದಲಿನ ವಿಚಾರ ತಾತ್ಕಾಲಿಕವಾದುದು. ಅದೊಂದು ಸಾಧಕನ ಬದುಕಿನ ಮೆಟ್ಟಿಲಷ್ಟೇ ಕೊನೆಗೂ ಪರಬೊಮ್ಮ ದರ್ಶನದ ಗುರಿಯನ್ನು ಕವಿಋಷಿ ಸಾಧಿಸಿಕೊಂಡ. ಡಿವಿಜಿಯವರ ಮರುಳ ಮುನಿಯನ ಕಗ್ಗ ಒಂದು ದರ್ಶನ ಕಾವ್ಯವಾಗಿದ್ದು ಸಮಾಜವನ್ನು ಸರಿಯಾದ ದಾರಿಯಲ್ಲಿ ಕೈ ಹಿಡಿದು ಕರೆದೊಯ್ಯುವ ತೋರುಗಂಭವಾಗಿದೆ. ನಿತ್ಯ ಪಾರಾಯಣದ ಅರ್ಹತೆಯನ್ನು ಅದು ಪಡೆದುಕೊಂಡಿದೆ. ಇದನ್ನು ಪ್ರಕಟಿಸಿದ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ವೇದಿಕೆಯು ಅಭಿನಂದನೆಗೆ ಅರ್ಹ.