ಆಧುನಿಕ ಕನ್ನಡದ ಪ್ರಮುಖ ಕತೆಗಾರರಲ್ಲಿ ಡಾ.ನಾ.ಮೊಗಸಾಲೆಯವರಿಗೆ ಸುಲಭವಾಗಿಯೇ ಸ್ಥಾನ ಲಭಿಸುವುದು. ಕರಾವಳಿ ಕನರ್ಾಟಕದ ವಿಶಿಷ್ಟ ಭಾಷೆಯೊಂದಿಗೆ ಸೃಜನಿಸುವ ಮೊಗಸಾಲೆ ಸದಾ ಮನುಷ್ಯನಲ್ಲಿಯ ಮನುಷ್ಯತ್ವವನ್ನು ಶೋಧಿಸುತ್ತ ಇರುತ್ತಾರೆ. ಸುಂದರಿಯ ಎರಡನೆಯ ಅವತಾರ, ಸೀತಾಪುರದ ಕತೆಗಳು, ಸೀತಾಪುರದಲ್ಲಿ ಗಾಂಧೀಜಿ ಕಥಾಸಂಕಲನಗಳ ನಂತರ ಈಗ ಈ ನಾಲ್ಕನೆಯ ಸಂಕಲನವನ್ನು ನೀಡುತ್ತಿದ್ದಾರೆ. ಮೊದಲ ಸಂಕಲನದಲ್ಲಿ ಏಳು ಕತೆಗಳು, ಎರಡನೆಯ ಸಂಕಲನದಲ್ಲಿ ಹದಿನಾಲ್ಕು ಕತೆಗಳು, ಮೂರನೆಯ ಸಂಕಲನದಲ್ಲಿ ಒಂಬತ್ತು ಕತೆಗಳು ಹಾಗೂ ಈ ಸಂಕಲನದಲ್ಲಿ ಹನ್ನೆರಡು ಕತೆಗಳು ಇವೆ. ಸಂಕಲನಗಳಲ್ಲಿ ಅವರು ಸೇರಿಸದೆ ಇರುವ ಕೆಲವು ಕತೆಗಳೂ ಇರಬಹುದು. ಮೊಗಸಾಲೆಯವರ ಮೊದಲ ಕತೆ “ಐಕಾನರ್ಿಯಾ” ಬರೆದದ್ದು 1977ರಲ್ಲಿ. ಈ 36 ವರ್ಷಗಳ ಅವಧಿಯಲ್ಲಿ ಅವರು ಬರೆದದ್ದು ಸುಮಾರು 42 ಕತೆಗಳು.
 ಮೊಗಸಾಲೆಯವರ ಮೊದಲ ಒಲವು ಇರುವುದು ಕಾದಂಬರಿ ರಚನೆಯಲ್ಲಿ. ಇವರು ಕತೆಗೆ ಆಯ್ದುಕೊಳ್ಳುವ ವಸ್ತು, ಸಂವಿಧಾನ, ವ್ಯಾಪ್ತಿ, ಪಾತ್ರಗಳು, ಸನ್ನಿವೇಶಗಳು, ನಿರೂಪಣೆ ಎಲ್ಲವೂ ಒಂದು ಕಾದಂಬರಿಯ ಭಾಗದಂತೆಯೇ ಕಾಣುತ್ತವೆ.
 ಸ್ವಾನುಭವವನ್ನು ಕಥನವಾಗಿಸುವ ಕಲೆಗಾರಿಕೆ ಮೊಗಸಾಲೆಯವರಲ್ಲಿ ತುಸು ಅಧಿಕವಾಗಿಯೇ ಇದೆ. ಕಥನಕಲೆಯ ಅಭ್ಯಾಸಿಗಳಿಗೆ ಮೊಗಸಾಲೆಯವರು ಒಂದು ಅದ್ಭುತವಾಗಿ ತೋರಬಹುದು. ಇದೂ ಕತೆಯಾಗಬಹುದೆ ಎಂದು ಅಚ್ಚರಿಪಡುವಹಾಗೆ ಕತೆ ಕಟ್ಟುವ ಅವರು ಓದುಗರಿಗೆ ಒಂದು ಆದರ್ಶವನ್ನು ಮುಂದಿಡುತ್ತಾರೆ. ಮೊಗಸಾಲೆಯವರ ಕತೆಗಳ ಓದೆಂದರೆ ನಮ್ಮ ಅನುಭವಗಳ ಶೋಧ. ಅವರ ಕತೆಗಳು ನಮ್ಮ ಅನುಭವಗಳನ್ನು ಮುನ್ನೆಲೆಗೆ ತರುತ್ತವೆ. ಅರೇ, ಇಂಥವರು ನಮ್ಮೂರಲ್ಲೂ ಇದ್ದಾರಲ್ಲ ಎನ್ನಿಸುತ್ತದೆ. ಮುಂದೆಂದಾದರೂ ಅವರ ಕತೆಯಲ್ಲಿಯ ಪಾತ್ರಗಳನ್ನು ನಾವು ಭೇಟಿಯಾಗುವ ಢಾಳವಾದ ಸಾಧ್ಯತೆಗಳಿವೆ. ಇದನ್ನೇ ಮೀಮಾಂಸಕರು ಅನನ್ಯಸಾಧಾರಣೀಕರಣ ಎನ್ನುವುದು. ಇಲ್ಲಿಯೇ ಬರೆಹಗಾರನ ಧನ್ಯತೆ ಇರುವುದು. ಇದು ಮೊಗಸಾಲೆಯವರು ಬದುಕನ್ನು ಎಷ್ಟು ಹತ್ತಿರದಿಂದ ಕಟ್ಟಿಕೊಡುತ್ತಾರೆ ಎನ್ನುವುದನ್ನು ತೋರಿಸುತ್ತದೆ.
 ಮೊಗಸಾಲೆಯವರ ಕಥನ ಮೀಮಾಂಸೆಯೇ ಭಿನ್ನವಾದದ್ದು. “ಸೀತಾಪುರದ ಕತೆಗಳು” ಸಂಕಲನದ `ಕೋಟಿಲ್ಲದ ಕೋಟರ್ು’ ಕತೆಯ ಆರಂಭದಲ್ಲಿ ಬರುವ ಈ ಸಾಲುಗಳನ್ನು ನೋಡಿ:
“ಖಂಡಿತ ಇದನ್ನು ನಿಮಗೆ ಹೇಳಬೇಕೆಂದು ಹೇಳುತ್ತಿಲ್ಲ. ಆದರೆ ಎಲ್ಲ ಕೇಳಿ ಮುಗಿದ ಮೇಲೆ ನೀವು `ಹೇಳಿದ್ದು ಒಳ್ಳೇದಾಯ್ತು’ ಅಂದುಕೊಳ್ಳಬಹುದು ಅಥವಾ `ಇಷ್ಟೆಯೇ, ಇದರಲ್ಲಿ ಏನಿದೆ?’ ಎಂದು ನೀವು ಮುಗುಳ್ನಕ್ಕು ಸುಮ್ಮನಾಗಬಹುದು. ಕತೆಗಳೆಲ್ಲ ಇರುವುದು ಹೀಗೇ. ಅವುಗಳು ಕತೆಗಳಾಗಬೇಕೆಂದು ಸೃಷ್ಟಿಯಾದವಲ್ಲ. ಅಥವಾ ನೀವು ಅವುಗಳಲ್ಲಿ ಕತೆ ಇದೆ ಎಂದುಕೊಂಡದ್ದರಿಂದ ಅವುಗಳೆಲ್ಲ ಕತೆಗಳಾಗಿರಲೂಬಹುದು.
 ನಾನು ಹೇಳುವ ಈ ವಿಚಾರ ಸುಮಾರು ನಲುವತ್ತು-ಐವತ್ತು ವರುಷಕ್ಕೂ ಹಿಂದಿನದ್ದು. ಹಾಗಾಗಿ ಇದು ಇಂದಿಗೆ ಕೇವಲ ವಿಚಾರವಾಗಿ ಉಳಿಯದೆ ಕತೆಯೇ ಆಗಿಬಿಡುವ ಸಾಧ್ಯತೆ ಇದೆ. ಕಳೆದ ನಿನ್ನೆಗಳೆಲ್ಲ ಹಾಗೇ. ನಮ್ಮನ್ನು ಕೇಳದೆ ಕತೆಗಳಾಗಿ ಹೋಗುತ್ತವೆ. ಬೇಡ ಎಂದರೂ ಅಂಥ ಕತೆಗಳಲ್ಲಿ ನೀವು ನಾನು ಎಲ್ಲ ಅದರ ಒಂದು ಭಾಗವಾಗಿರುತ್ತೇವೆ. ನಮಗೆ ಅದು ತಿಳಿದಿರುವುದಿಲ್ಲ. ಕತೆಗೂ ನಾವು ಅದನ್ನು ತಿಳಿಯಬೇಕೆಂದಿರುವುದಿಲ್ಲ. ಹಾಗಾಗಿ ನಿಜವಾದ ಕತೆಗಳ ಅಸ್ತಿತ್ವ ಇರುವುದು ಕತೆಯ ವಸ್ತುವಿನ ಆಚೆ, ಕೆಲವೊಮ್ಮೆ ಈಚೆ. ನಾನು ಹೇಳುವ ಈ ವಿಚಾರಕ್ಕೆ ಹೀಗೆ, ಆಚೆ ಈಚೆಯ ಎರಡು ದಡಗಳಿರುವುದರಿಂದ ನಾವೆಲ್ಲ ಇವರ ನಡುವಿನಲ್ಲಿ ಹೊಳೆ ದಾಟುವವರ ಹಾಗೆ ಆಗಿರಬಹುದಾದ್ದರಿಂದ ಇದನ್ನು ಹೇಳಬೇಕು ಅನಿಸಿತು. ಹಾಗೆ ಹೇಳುತ್ತಿದ್ದೇನೆ. ಬೇಕಾದರೆ ಕೇಳಿ…” ಹೀಗೆ ಏನೂ ಅಲ್ಲದ್ದು ಏನೂ ಇಲ್ಲದೆಯೇ ಕತೆಗಳಾಗುವ ಸೃಜನಶೀಲತೆಯ ವಿಸ್ಮಯವನ್ನು ನಾವು ಮೊಗಸಾಲೆಯವರಲ್ಲಿ ಕಾಣುತ್ತೇವೆ.
00000
 ಹುಟ್ಟಿದ್ದು, ಬೆಳೆದದ್ದು, ನೌಕರಿ ಮಾಡುತ್ತ ಬದುಕಿನ ಬಹುತೇಕ ಭಾಗವನ್ನು ನಾ.ಮೊಗಸಾಲೆಯವರು ಕಳೆದದ್ದು ಗ್ರಾಮೀಣ ಭಾಗದಲ್ಲಿಯೇ. ಗ್ರಾಮೀಣಾನುಭವದ ನೆಲೆಯಲ್ಲಿಯೇ ಅವರು ಬದುಕಿನ ಒಳಿತು ಕೆಡಕುಗಳ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಸತ್ಯ-ಅಸತ್ಯಗಳನ್ನು ಒರೆಗೆ ಹಚ್ಚುತ್ತಾರೆ. ಗ್ರಾಮೀಣರ ಮುಗ್ಧತೆಯ ಕ್ಯಾನ್ವಾಸಿನಲ್ಲಿ ಮಾನವ ವ್ಯಾಪಾರದ ಹಲವು ವರ್ಣಗಳು ಅಚ್ಚು ಪಡೆಯುವ ರೀತಿ ವಿಸ್ಮಯ ಹುಟ್ಟಿಸುತ್ತದೆ.
 ತಮ್ಮ ಕತೆಗಳಿಗಾಗಿ `ಸೀತಾಪುರ’ವೆಂಬ ಊರನ್ನು ಮೊಗಸಾಲೆಯವರು ವಿಶ್ವಾಮಿತ್ರ ಸೃಷ್ಟಿ ಮಾಡಿದ್ದಾರೆ. ಸೀತಾಪುರದಲ್ಲಿ ಕುಪ್ಪಣ್ಣಯ್ಯನ ಹೊಟೇಲ್ ಅಲ್ಲದೆ ಮತ್ತೊಂದು ಹೊಟೇಲ್ ಕೂಡ ಇದೆ. ಕುಪ್ಪಣ್ಣಯ್ಯನ ಹೊಟೇಲಿನಲ್ಲಿ ಗೋಳಿಬಜಿ ಅಂಬೊಡಿ, ಇಡ್ಲಿ ಸಾಂಬಾರು ಮೊದಲಾದವು ಮಾತ್ರ ಸಿಕ್ಕಿದರೆ ಆ ಹೊಟೇಲಿನಲ್ಲಿ ಮಸಾಲೆ ದೋಸೆ ಕೂಡ ಸಿಗುತ್ತದೆ.  ಸೀತಾಪುರದಲ್ಲಿ ಒಂದು ರಥಬೀದಿ ಇದೆ. ಅದೇ ಪ್ರಮುಖವಾದ ಬೀದಿ ಕೂಡ. ಅದರಾಚೆಗೆ ಇನ್ನೊಂದು ಸಾಲು ಮನೆಗಳ ಬೀದಿ ಇದೆ. ರಥಬೀದಿಯಲ್ಲೇ ಬಾಳುಭಟ್ಟರ ಕಿರಾಣಿ ಅಂಗಡಿ ಇದೆ. ಸೀತಾಪುರದಲ್ಲಿ ಹಳೆಯ ಕಾಲದ ಮಠವೊಂದು ಇದೆ. ಕಂಬಳದ ಗದ್ದೆ ಇದೆ. ಒಂದು ಹೈಸ್ಕೂಲ್ ಕೂಡ ಇದೆ. ದೇಜಪ್ಪ ಮಾಸ್ಟ್ರು ಅಲ್ಲಿಯೇ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಹೀಗೆ ಎಷ್ಟೋ ವಿವರಗಳನ್ನು ಸೀತಾಪುರದ ಬಗ್ಗೆ ನೀಡಬಹುದು.
 ಅವರ ಎಲ್ಲ ಕತೆಗಳಲ್ಲೂ ಒಂದಲ್ಲ ಒಂದು ಪಾತ್ರ ಪುನರಾವರ್ತನೆಯಾಗುತ್ತಲೇ ಇರುತ್ತವೆ. `ಹರಿವಂಶ’ವನ್ನು ಓದಿದಾಗ ಅದರಲ್ಲಿಯ ದೇವತೆಗಳು, ರಾಕ್ಷಸರು, ಸೂರ್ಯವಂಶ, ಚಂದ್ರವಂಶ, ಇತರ ರಾಜವಂಶಗಳು, ಹುಟ್ಟು, ಮರುಹುಟ್ಟು, ಅವತಾರ, ನಿಯರ್ಾಣ ಇವುಗಳ ಸಂಬಂಧಗಳನ್ನು ಎಷ್ಟೊಂದು ಕರಾರುವಾಕ್ಕಾಗಿ ವ್ಯಾಸರು ಕಟ್ಟಿದ್ದಾರೆ ಎಂಬುದನ್ನು ಆಲೋಚಿಸಿದಾಗ ವಿಸ್ಮಯವಾಗುತ್ತದೆ. ಬೇರೆಬೇರೆ ಪುರಾಣಗಳಲ್ಲಿ ಈ ಪಾತ್ರಗಳು ಮತ್ತೆಮತ್ತೆ ಬಂದಾಗಲೂ ಆ ಸಂಬಂಧದ ಎಳೆಗಳು ಅದೇಅದೇ ಆಗಿರುತ್ತವೆ. ಅದನ್ನೇ ಬಾದರಾಯಣ ಸಂಬಂಧ ಎನ್ನುವುದು. ಅಂಥ ಒಂದು ಪಾತ್ರ ಪ್ರಪಂಚವನ್ನು ಸೀತಾಪುರದ ಮೂಲಕ ಮೊಗಸಾಲೆಯವರು ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕೊನೆಯಲ್ಲಿ ಕಾನೂರಿನ ಚಂದ್ರೇಗೌಡರ ಪ್ರಸ್ತಾಪ ಬರುತ್ತದೆ. ಅಷ್ಟೇ. ಆ ಒಂದು ಎಳೆ ಇಲ್ಲಿ ಬೃಹತ್ ಬಲೆಯಾಗಿದೆ. ಮನುಷ್ಯ ಸಂಬಂಧಗಳ ಬಲೆಯಾಗಿದೆ. ಇಂಥ ಒಂದು ಸೃಷ್ಟಿಯನ್ನು ನಾವು ಆರ್.ಕೆ.ನಾರಾಯಣ ಅವರ ಮಾಲ್ಗುಡಿಯಲ್ಲಿ ನೋಡಬಹುದು. ಕಂಬಾರರ ಶಿವಾಪುರ ಮತ್ತು ಯಶವಂತ ಚಿತ್ತಾಲರ ಹನೆಹಳ್ಳಿಯು ಕೃತಿಯಲ್ಲಿ ಮೈತಳೆವ ಸಂವಿಧಾನವೇ ಬೇರೆ. ಇಡೀ ಊರನ್ನೇ ಒಂದು ಪಾತ್ರವಾಗಿಸಿದ್ದು ಕನ್ನಡದಲ್ಲಿ ನಾ.ಮೊಗಸಾಲೆಯವರ ಅನನ್ಯತೆಯಾಗಿದೆ.
00000
 `ಸುಂದರಿಯ ಎರಡನೆಯ ಅವತಾರ’ ಸಂಕಲನದಲ್ಲಿಯ ಕತೆಗಳು ದಟ್ಟ ರಾಜಕೀಯ ಅನುಭವಗಳನ್ನು ಹೇಳುತ್ತವೆ. ಹೇಗೆ ಧರ್ಮವು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆಯೋ ಹಾಗೆ ರಾಜಕೀಯ ಕೂಡ ಮಾನವ ವ್ಯಾಪಾರಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಮೊಗಸಾಲೆಯವರು ನಿರ್ವಚಿಸುತ್ತಾರೆ.
 `ಸೀತಾಪುರದ ಕತೆಗಳು’ ರಾಜಕೀಯವನ್ನು ಮೀರಿ ಮನುಷ್ಯ ಸಂಬಂಧಗಳು ಒಂದು ಸಂಘರ್ಷದ ಘಟ್ಟದಲ್ಲಿ ಹೇಗೆ ವತರ್ಿಸುತ್ತವೆ, ಎರಡು ಭಿನ್ನ ಧ್ರುವಗಳು ಮುಖಾಮುಖಿಯಾದಾಗ ಹೇಗೆ ಶೋಧನೆಗೆ ಒಳಗಾಗಿ ಪುಟವಿಕ್ಕಿದ ಚಿನ್ನದಂತೆ ಆಗುತ್ತವೆ ಎಂಬುದನ್ನು ಘಟನೆಗಳು ಮತ್ತು ಪಾತ್ರಗಳ ಮೂಲಕ ತೋರಿಸಿಕೊಡುತ್ತಾರೆ.
 `ಸೀತಾಪುರದಲ್ಲಿ ಗಾಂಧೀ’ ಕತೆಗಳು ಗಾಂಧೀಜಿಯವರ ಸಾವಿನ ನಂತರದ ಅರ್ಧಶತಮಾನದ ಬಳಿಕವೂ ಅವರ ಪ್ರಸ್ತುತತೆಯ ಶೋಧವನ್ನು ನಡೆಸುತ್ತವೆ. ಸಾಹಿತ್ಯದ ಅಂತಿಮ ನೆಲೆ ಸತ್ಯದ ಪ್ರತಿಷ್ಠಾಪನೆ. ಸತ್ಯ ಮತ್ತು ಅಹಿಂಸೆಗೆ ಗಾಂಧೀ ಒಂದು ಸಂಕೇತ. ಗಾಂಧೀತ್ವ ಹೇಗೆ ಈ ಆಧುನಿಕ ಯುಗದಲ್ಲಿ ಪರೀಕ್ಷೆಗೆ ಒಳಗಾಗುತ್ತದೆ ಎಂಬುದನ್ನು ಹಲವು ರೀತಿಯಲ್ಲಿ ಮೊಗಸಾಲೆಯವರು ತೋರಿಸಿಕೊಟ್ಟಿದ್ದಾರೆ.
 ತಮ್ಮ ನಾಲ್ಕನೆಯ ಸಂಕಲನದಲ್ಲಿ ಮೊಗಸಾಲೆಯವರು ಅಲ್ಲಮನ ತತ್ವಗಳನ್ನು ನಿಕಷಕ್ಕೆ ಒಡ್ಡಿದ್ದಾರೆ. ಪ್ರತಿ ಕತೆಯ ಶೀಷರ್ಿಕೆಯೂ ಅಲ್ಲಮನ ಒಂದೊಂದು ನುಡಿಯಾಗಿದೆ. ಅಲ್ಲಮ ಅವರನ್ನು ಇಷ್ಟೊಂದು ಪ್ರಭಾವಿಸಿರುವುದರ ಮತ್ತೊಂದು ಉದಾಹರಣೆ ಎಂದರೆ ಕಾಂತಾವರದಲ್ಲಿ ಅವರು ಸ್ಥಾಪಿಸಿರುವ ಅಲ್ಲಮಪ್ರಭುಪೀಠ. ಇಲ್ಲಿಯ ಕತೆಗಳು ಅಲ್ಲಮನ ನುಡಿಗಡಣಕ್ಕೆ ಹೊಸರೀತಿಯ ವ್ಯಾಖ್ಯಾನವಾಗಿವೆ. ಅಲ್ಲಮನನ್ನು ಈ ರೀತಿಯಲ್ಲೂ ಅಥರ್ೈಸಬಹುದು ಎನ್ನುವ ದರ್ಶನವನ್ನು ಮೊಗಸಾಲೆಯವರು ಇಲ್ಲಿ ಮಾಡಿಸಿದ್ದಾರೆ. 
0000
 ಮೊಗಸಾಲೆಯವರ ಸ್ತ್ರೀ ಪಾತ್ರಗಳಂತೂ ಅತ್ಯಂತ ಗಟ್ಟಿಯಾದದ್ದು. ಯಾವುದೇ ಸ್ತ್ರೀವಾದಿ ಮಹಿಳಾ ಸಾಹಿತಿಯು ಕಟ್ಟಬಹುದಾದ ಪಾತ್ರಕ್ಕೆ ಊನವಿಲ್ಲದಂತೆ ಮೊಗಸಾಲೆಯವರ ಸ್ತ್ರೀಪಾತ್ರಗಳು ಇಲ್ಲಿ ಮೈವೆತ್ತಿವೆ. `ಸುಂದರಿಯ ಎರಡನೆ ಅವತಾರ’ ಕತೆಯ ಸುಂದರಿ ಇರಬಹುದು, `ಕೋಟಿಲ್ಲದ ಕೋಟರ್ು’ ಕತೆಯ ಗಿರಿಜಮ್ಮ ಇರಬಹುದು, `ಪುರುಷಾರ್ಥ’ದ ಲೀಲಾ ಮೇಡಂ ಇರಬಹುದು, `ಪ್ರಭು ಸಮ್ಮಿತ’ದ ಕಗರ್ಿಶೆಡ್ತಿ ಇರಬಹುದು, ನ್ಯಾಯಪಕ್ಷಪಾತಿಯಾಗಿ ಗಂಡನೆದುರೇ ತನ್ನ ಬಳೆಗಳನ್ನು ಒಡೆದುಕೊಂಡ `ಒಳಗಿನವನು(ಳು)’ ಕತೆಯ ಅಚ್ಚುಮಕ್ಕ ಇರಬಹುದು, `ನುಗ್ಗೇಗಿಡ’ದ ಪ್ರೇಮಕ್ಕ ಇರಬಹುದು, `ಈ ಮನೆಯಲ್ಲಿ ನಾನು ಒಲೆ ಉರಿಸಲು ಮಾತ್ರ ಎಂದುಕೊಂಡಿದ್ದಾರೆ ಇವರು. ನಾನು ಒಲೆಯೂ ಆಗಬಲ್ಲೆ ಎನ್ನುವುದು ಇವರಿಗೆ ಗೊತ್ತಿಲ್ಲ!’ ಎನ್ನುವ  `ಗುಹೇಶ್ವರನೆಂಬ ಅಪ್ರಮಾಣ’ ಕತೆಯ ಲಕ್ಷ್ಮಿಯಮ್ಮ ಇರಬಹುದು, `ಇನ್ನು ಮುಂದೆ ಶಬ್ದ ಇಲ್ಲ’ ಕತೆಯ ವಾಸುದೇವ ಭಟ್ಟರು ಇಟ್ಟುಕೊಂಡ ಕೆಲಸದಾಕೆ ಇರಬಹುದು, ಇವರೆಲ್ಲ ಮನುಷ್ಯತ್ವದ ನೆಲೆಯಲ್ಲಿ ಪುರುಷ ಪಾತ್ರಗಳಿಗಿಂತ ಒಂದು ಗುಲಗುಂಜಿ ಮೇಲೇ ಎಂದು ಹೇಳಬೇಕು. ಮೊಗಸಾಲೆಯವರು ಅಬಲರ ಪಕ್ಷಪಾತಿ ಎನ್ನುವುದಕ್ಕೆ ಅವರ ಕತೆಗಳಲ್ಲಿ ಹಲವು ಪುರಾವೆಗಳು ಒದಗುತ್ತವೆ.
 ಮೊಗಸಾಲೆಯವರದು ತುಂಬಾ ಪುರುಸೊತ್ತಿನ ಶೈಲಿ. ಸಂಜೆ ಹೊತ್ತಿನಲ್ಲಿ ಅರಳಿಕಟ್ಟೆಯ ಮೇಲೆ ನಾಲ್ಕಾರು ಜನ ಸೇರಿ ಪಟ್ಟಾಂಗ ಹೊಡೆದಂತೆ. ಈ ಕ್ಷಣಕ್ಕೇ ಕತೆಯೊಂದನ್ನು ಹೇಳಿ ಮುಗಿಸಿಬಿಡಬೇಕೆಂಬ ಆತುರ ಸುತರಾಂ ಆವರಿಗಿಲ್ಲ. ಕತೆ ಮುಗಿಸಿದ ಮೇಲೂ, ಅಯ್ಯೋ, ಮುಗಿದೇ ಹೋಯಿತೇ ಎಂದು ಅಲವತ್ತುಕೊಳ್ಳುವ ಸ್ವಭಾವ ಅವರದು. ಈ ಕಾರಣಕ್ಕೂ ಇರಬಹುದು, ಒಂದು ಕತೆಯಲ್ಲಿಯ ಪಾತ್ರಗಳು ಇನ್ನೊಂದು ಕತೆಯಲ್ಲೂ ಹಣಕಿಹಾಕುವುದು.
 ಮೊದಲೇ ಹೇಳಿದ ಹಾಗೆ ಪ್ರಸ್ತುತ ಸಂಕಲನದ ಕತೆಗಳೆಲ್ಲವನ್ನೂ ಏಕಸೂತ್ರದಲ್ಲಿ ಬಂಧಿಸುವುದು ಅಲ್ಲಮ. ಗಾಂಧೀಜಿಯ ಹಾಗೇ ಮೊಗಸಾಲೆಯವರನ್ನು ತೀವ್ರವಾಗಿ ಪ್ರಭಾವಿಸಿದವನು ಅಲ್ಲಮಪ್ರಭು. ಅಲ್ಲಮನೆಂಬವನು ಸುಮ್ಮನೆ ಆದವನಲ್ಲ ಎಂಬುದಕ್ಕೆ ಮೊಗಸಾಲೆಯಂಥವರೇ ಉದಾಹರಣೆ. ತ್ರಿಕಾಲಾಬಾಧಿತ ಸತ್ಯಗಳನ್ನು ಹೇಳಿದ್ದೇ ಗಾಂಧೀಜಿ, ಅಲ್ಲಮ ಮೊದಲಾದವರ ಚಿರಂತನತೆಗೆ ಕಾರಣ. ಮೊಗಸಾಲೆಯವರ ಕತೆಗಳ ದರ್ಶನವೂ ಇಂಥ ಸತ್ಯಗಳೇ ಆಗಿವೆ.
0000
 ಇಲ್ಲಿಯ `ಪದವನಪರ್ಿಸಬಹುದಲ್ಲದೆ ಪದಾರ್ಥವನಲ್ಲ’ ಕತೆಯ ಕುಪ್ಪಣ್ಣಯ್ಯನಿಗೆ ತನ್ನ ಭಾವನ ಮೊಮ್ಮಗನ ಉಪನಯನಕ್ಕೆ ಹೋಗುವುದಕ್ಕಿಂತ ಗೋವಿಂದಯ್ಯ ಮಾಸ್ಟ್ರು ಹೆಡ್ಮಾಸ್ಟರ್ ಕುಚರ್ಿಯಲ್ಲಿ ಕುಳಿತುಕೊಳ್ಳುವ ದಿನ ತಾನು ಅಲ್ಲಿರುವುದೇ ಮುಖ್ಯ ಎನಿಸುತ್ತದೆ. ಗೊವಿಂದಯ್ಯ ದಲಿತ. ಸೀತಾಪುರದ ಹೈಸ್ಕೂಲಿನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಹೆಡ್ಮಾಸ್ಟರ್ ಆಗಿದ್ದ ವೆಂಕಪ್ಪ ಮಾಸ್ಟ್ರು ಕುಳಿತುಕೊಳ್ಳುತ್ತಿದ್ದ ಕುಚರ್ಿಯಲ್ಲಿ ಅವರ ನಂತರದ ಮೂವರು ಮುಖ್ಯೋಪಾಧ್ಯಾಯರು ಕುಳಿತುಕೊಂಡಿರಲಿಲ್ಲ. ಅದು ಅವರ ನಾಮರ್ದತನ. ಹಾಗಂತ ಕುಪ್ಪಣ್ಣಯ್ಯ ಲೇಬಲ್ ಹಚ್ಚದಿದ್ದರೂ ಹಾಗೆ ಕುಳಿತುಕೊಳ್ಳದೇ ಅವರು ಆ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ. ಈಗ ಗೋವಿಂದಯ್ಯ ಅಲ್ಲಿ ಕುಳಿತುಕೊಳ್ಳುವುದಾಗಿ ಹೇಳಿದ್ದಾರೆ. ಕಾರಣ ಅವರಿಗೆ ನೈತಿಕ ಬೆಂಬಲ ನಿಡಬೇಕು ಎಂಬುದು ಅವರ ಅಭಿಪ್ರಾಯ. `ಮದ್ಯ ಮತ್ತು ಮಾಂಸ ಮಾರುವ ಬಾರನ್ನು ನಡೆಸುವವನು ತನ್ನ ಮಗನಿಗೆ ಬ್ರಹ್ಮೋಪದೇಶ ಕೊಡುವುದಕ್ಕೆ ಅರ್ಥ ಇದ್ದರೆ ಅದೆಂಥ ಬ್ರಾಹ್ಮಣ್ಯ?’ ಎಂಬ ನಿಲವು ಕುಪ್ಪಣ್ಣಯ್ಯನದು. ಇಂಥ ದುಡ್ಡಿನಲ್ಲಿ ಸಾವಿರ ಜನರಿಗೆ ಊಟ ಹಾಕಿಸಿ ನೂರು ನೂರು ರೂಪಾ ದಕ್ಷಿಣೆ ಕೊಟ್ಟರೆ ಆತನ ಮಗ ಬ್ರಾಹ್ಮಣ ಆಗುತ್ತಾನಾ ಎಂದು ಪ್ರಶ್ನಿಸುವ ಕುಪ್ಪಣ್ಣಯ್ಯನಿಗೆ `ಇಲ್ಲಿ ಗೋವಿಂದಯ್ಯ ಮಾಸ್ಟ್ರು ಅದೇ ದಿನ ಹೆಡ್ಮಾಸ್ಟ್ರ ಕುಚರ್ಿಯಲ್ಲಿ ಕುಳಿತುಕೊಳ್ಳುವುದನ್ನು ನೋಡುವುದೇ ವಾಸಿ ಎನಿಸುತ್ತದೆ. ದಲಿತ ಗೋವಿಂದಯ್ಯ ಹೆಡ್ಮಾಸ್ಟ್ರ ಕುಚರ್ಿಯಲ್ಲಿ ಕುಳಿತುಕೊಳ್ಳುವುದೇ ಬ್ರಹ್ಮೋಪದೇಶಕ್ಕಿಂತ ಮಿಗಿಲೆಂಬ ಕುಪ್ಪಣ್ಣಯ್ಯನ ಅರಿವು ಆರೋಗ್ಯಕರ ಸಾಮಾಜಿಕ ನಿಲವು. ಪದವನ್ನು ಮೀರಿದ ಪದಾರ್ಥದ ಮಹಿಮೆ ಅದು. ಕುಪ್ಪಣ್ಣಯ್ಯಗೆ ಗೋವಿಂದಯ್ಯ ಹೆಡ್ಮಾಸ್ಟ್ರ ಕುಚರ್ಿಯಲ್ಲಿ ಕುಳಿತುಕೊಳ್ಳುವುದು ಮುಖ್ಯಮಂತ್ರಿ ಪದಗ್ರಹಣಕ್ಕಿಂತ ದೊಡ್ಡದು. ಒಬ್ಬ ದಲಿತನಿಗೆ ನೈತಿಕವಾಗಿ ಬೆಂಬಲಿಸದೆ ಹೋದರೆ ನಾವು ಬದುಕಿರುವುದು ಹೆಣ ಹೊರಲಿಕ್ಕೆ ಎಂದೇ ಅರ್ಥ ಎಂದು ಭಾವಿಸಿದವರು ಅವರು. ಕುಪ್ಪಣ್ಣಯ್ಯನ ಹೆಂಡತಿ ಜಲಜಮ್ಮ ಕೂಡ `ದಲಿತನೊಬ್ಬ ಅಧಿಕಾರದ ಕುಚರ್ಿಯಲ್ಲಿ ಕುಳಿತುಕೊಳ್ಳುವುದು ಅಂದರೆ ಅದೂ ಒಂದು ಉಪನಯನ ಅಲ್ಲವೆ?’ ಎಂದು ತಮ್ಮನ ಮೊಮ್ಮಗನ ಉಪನಯನಕ್ಕೆ ಹೋಗದಿರುವ ನಿಧರ್ಾರ ಪ್ರಕಟಿಸುತ್ತಾರೆ. 
 `ಗುಹೇಶ್ವರನೆಂಬ ಅಪ್ರಮಾಣ’ ಕತೆಯಲ್ಲಿ ದೇಜಪ್ಪ ಮಾಸ್ಟ್ರು ತಮ್ಮ ತೋಟಕ್ಕೆ ಬರುವ ಒಂದು ಮಂಗವನ್ನು ಕೊಲ್ಲುವುದಕ್ಕೆ ಯೋಚಿಸುತ್ತಾರೆ. ಅದಕ್ಕೆ ಅವರ ಪತ್ನಿ ಲಕ್ಷ್ಮಿಯಮ್ಮನ ವಿರೋಧ. ಮಂಗ ಎಂದರೆ ಮುಖ್ಯಪ್ರಾಣ ಎಂದು ಅವರು ನಂಬಿದವರು. ಹೆಂಡತಿಗೆ ಗೊತ್ತಿಲ್ಲದಂತೆ ಈ ಕೆಲಸ ಮಾಡಬೇಕು ಎಂದು ಅವರು ಆಲೋಚಿಸಿದಾಗ ಭೀಮಭಟ್ಟರಿಂದ ಬಂದ ಎಸ್ಎಂಎಸ್ ಆ ರಹಸ್ಯವನ್ನು ಬಯಲು ಮಾಡುತ್ತದೆ. `ಕೊಲೆ ಮಾಡಿದವನೂ ಕೊಲೆಗಡುಕನೇ, ಮಾಡಿಸಿದವನೂ ಕೊಲೆಗಡುಕನೇ ಎನ್ನುವುದು ನಿಮಗೂ ತಿಳಿಯದ್ದಲ್ಲ!’ ಎನ್ನುವ ಆಕೆ ಅಹಿಂಸೆಯ ವ್ಯಾಖ್ಯಾನವನ್ನು ಇನ್ನೊಂದು ಎತ್ತರಕ್ಕೆ ಒಯ್ಯುತ್ತಾಳೆ. ಸಂಕಲ್ಪ ಮಾತ್ರದ ಹಿಂಸೆಯ ಅಪಾಯವನ್ನು ಮನಗಾಣಿಸುವ ಜೈನರ ಕಟ್ಟುನಿಟ್ಟಿನ ಅಹಿಂಸೆಯನ್ನು ಇದು ಪ್ರತಿಪಾದಿಸುತ್ತದೆ. `ಯಶೋಧರ ಚರಿತೆ’ಯ ಹಿಟ್ಟಿನ ಹುಂಜದ ಪ್ರಮೇಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಗಾಂಧೀಜಿಯ ಅಹಿಂಸೆಯನ್ನೂ ಇದು ಸ್ಥಾಪಿಸುತ್ತದೆ.
 `ಭಾಷೆ ಎಂಬುದು ಪ್ರಾಣಘಾತುಕ’ ಕತೆಯು ಭಾಷೆಗಿರುವ ಅಸಾಧಾರಣ ಶಕ್ತಿಯನ್ನು ಹೇಳುತ್ತದೆ. ಮಾತೆಂಬುದು ಜ್ಯೋತಿಲರ್ಿಂಗ ಎಂದು ಬಸವಣ್ಣ ಕೂಡ ಹೇಳಿದ್ದಾರೆ. ಮಾಲಿಂಗಣ್ಣನಿಗೆ ವೆಂಕಪ್ಪಯ್ಯನು ಕುಪ್ಪಣ್ಣಯ್ಯನ ಅಂಗಡಿಯಲ್ಲಿ ಎಲ್ಲರ ಎದುರೇ `ನಿನ್ನ ಅಪ್ಪ ಎಂದು ಕರೆಸಿಕೊಂಡವನ ಹಾಗಲ್ಲ ಮಾರಾಯ ನಾನು! ನಿನ್ನ ನಿಜವಾದ ಅಪ್ಪ ನಾನಾಗಿರುವುದರಿಂದಲೇ ನನ್ನಲ್ಲಿನ ಅಹಂಕಾರ ನಿನ್ನಲ್ಲೂ ಉಂಟು. ಬೇಕಾದರೆ ನಿನ್ನ ಅಮ್ಮನನ್ನು ಕೇಳು!’ ಎಂದು ಹೇಳಿದಾಗ ಮಾಲಿಂಗಣ್ಣನಿಗೆ ಹೇಗಾಗಿರಬೇಡ? ಊರಿನಲ್ಲಿ ಆಢ್ಯನಾಗಿ ಮೆರೆಯುತ್ತಿದ್ದ ಮಾಲಿಂಗಣ್ಣನ ವ್ಯಕ್ತಿತ್ವವನ್ನು ಇಡಿಯಾಗಿ ಒಡೆದುಹಾಕುವ ಪರಿ ಅದ್ಭುತ. ಮಾತಿನಿಂದ ಮನೆ ಕಟ್ಟಲೂ ಬಹುದು ಮನೆ ಮುರಿಯಲೂ ಬಹುದು. ಮಾಲಿಂಗಣ್ಣ ಸದ್ದಿಲ್ಲದೆ ವೆಂಕಪ್ಪಯ್ಯಗೆ ಬೆಳೆ ಸಾಲ ಮಂಜೂರು ಮಾಡಿ `ದಾರಿಗೆ ಬರುತ್ತಾನೆ’.
 `ಬೆಟ್ಟದ ನೆಲ್ಲಿ ಮತ್ತು ಕಡಲಿನ ಉಪ್ಪು’ ಕತೆಯಲ್ಲಿ ಸೀತಾಪುರದಿಂದ ಮಗನ ಮನೆಗೆಂದು ಪುಣೆಗೆ ಹೋದ ವೆಂಕಟದಾಸ ಭಟ್ಟರಿಗೆ ಅಲ್ಲಿ ಕುಪ್ಪಣ್ಣಯ್ಯನ ಸೊಸೆ ಸರೋಜನ ಪರಿಚಯವಾಗಿ ಆಕೆ ಮತ್ತು ಆಕೆಯ ಪತಿ ದಿವಾಕರನಿಂದಲೂ ಸತ್ಕಾರಗೊಂಡರು. ದಿವಾಕರನ ಮೂಲಕ ಆತನ ಸಹೋದ್ಯೋಗಿ ಸುಧಾಕರನ ಮನೆಗೂ ಹೋದರು. ಅವರೆಲ್ಲರ ಮೂಲವೂ ಸೀತಾಪುರವೆಂದು ಅವರಿಗೆ ಗೊತ್ತಾಗುತ್ತದೆ. ಸುಧಾಕರನ ಹೆಂಡತಿ ರೇಶ್ಮಾ ಕ್ರಿಶ್ಷಿಯನ್. ಅವಳ ಪೂರ್ವಜರೂ ಸೀತಾಪುರದವರೇ. ಮೂಲತಃ ಅವರು ಹಿಂದೂಗಳಾಗಿದ್ದು ಮೂರು ತಲೆಮಾರುಗಳ ಹಿಂದೆ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿದ್ದರು. ದಾಸು ಭಟ್ರು ತಿರುಗಿ ಸೀತಾಪುರಕ್ಕೆ ಬಂದಮೇಲೆ ಕುಪ್ಪಣ್ಣಯ್ಯಗೆ ಈ ವಿಷಯ ತಿಳಿಸುತ್ತಾರೆ. ಕುಪ್ಪಣ್ಣಯ್ಯ ಸೀತಾಪುರದಲ್ಲಿದ್ದ ಪೀನಾಬಾ ಮನೆಗೆ ಹೋಗುತ್ತಾರೆ. ಅವಳು ತಮ್ಮ ಪೂರ್ವಜರು ಹಿಂದೂಗಳಾಗಿದ್ದುದ್ದನ್ನು ಹೇಳುತ್ತಾಳೆ. ಅವರ ಮನೆಯಲ್ಲಿ ಹಿಂದಿನವರ ಒಂದು ಪೆಟ್ಟಿಗೆ ಇದ್ದು ಅದರಲ್ಲಿ ಒಂದು ಕರಂಡಕದಲ್ಲಿ ಕರಿಯ ಸಾಲಿಗ್ರಾಮವಿದ್ದುದನ್ನು, ಅವರ ಮಗ ಆ ಕರಂಡಕವನ್ನು ಒಡೆದುದನ್ನು, ಬಳಿಕ ಸಾಲಿಗ್ರಾಮವನ್ನು ದೇವಸ್ಥಾನದ ಅರ್ಚಕರಿಗೆ ಪೂಜಿಸಲು ಕೊಟ್ಟಿದ್ದನ್ನು ಹೇಳುತ್ತಾರೆ. `ಆಗ ದೇವರು ನಮಗಾಗಿಯೇ ಎಂಬಂತೆ ಇದ್ದರು ನೋಡಿ. ಈಗ ಹಾಗಲ್ಲ, ದೇವರು ಯಾರಿಗಾಗಿ ಇರುವುದು ಎನ್ನುದು ಯಾರಿಗೂ ಗೊತ್ತಿಲ್ಲ’ ಎಂದು ಪೀನಾಬಾ ಹೇಳುವ ಅಮೃತವಾಣಿ ಈ ಕತೆಯ ತಿರುಳಾಗಿದೆ. ಎಲ್ಲಿಯ ಸೀತಾಪುರ, ಎಲ್ಲಿಯ ಪುಣೆ, ಎಲ್ಲಿಯ ಪೀನಾಬಾ ಎಲ್ಲಿಯ ರೇಶ್ಮಾ, ಎಲ್ಲಿಯ ಸಾಲಿಗ್ರಾಮ ಎಲ್ಲಿಯ ಕುಪ್ಪಣ್ಣಯ್ಯ ಎಂಬುದನ್ನು ನೆನೆದಾಗ ಎತ್ತಣ್ಣಿಂದೆತ್ತಣ ಸಂಬಂಧವಯ್ಯ ಎನ್ನಲೇಬೇಕು.
 `ಇನ್ನು ಮುಂದೆ ಶಬ್ದ ಇಲ್ಲ’ ಕತೆಯಲ್ಲಿ ಆಶ್ಲೇಷ ಬಲಿ ಮಾಡಿಸಲು ಸೀತಾಪುರಕ್ಕೆ ಬಂದ ಪುಟ್ಟಣ್ಣಯ್ಯ ಕುಪ್ಪಣ್ಣಯ್ಯನ ಚಾದಂಗಡಿಗೆ ಬಂದು ಆ ಕಾರ್ಯಕ್ರಮ ಮಾಡಿಸಲು ಸಹಾಯ ಕೇಳುತ್ತಾರೆ. ರಾತ್ರಿ ಕುಪ್ಪಣ್ಣಯ್ಯನ ಮನೆಯಲ್ಲಿ ಉಳಿದುಕೊಂಡಾಗ ಅವರ ನಡುವೆ ನಡೆದ ಮಾತುಕತೆಯಲ್ಲಿ ನಾಗನಾರಾಯಣ ಭಟ್ಟರು ಇಂಥ ಪೂಜೆ ಮಾಡುತ್ತಾರೆ ಎಂದು ಹೇಳಿ, ಅವರ ನಯವಂಚಕ ವರ್ತನೆಯನ್ನೂ ತಿಳಿಸುತ್ತಾರೆ. ದೇವರು ಧರ್ಮವನ್ನೆಲ್ಲ ಹಣ ಸಂಪಾದನೆಗಾಗಿಯೇ ಎಂದು ತಿಳಿದುಕೊಂಡವರು ಅವರು ಎನ್ನುತ್ತಾರೆ. ಪುರೋಹಿತರು, ರಾಜಕಾರಣಿಗಳು, ಹೋಟೇಲ್ ಸೇಠುಗಳೆಲ್ಲ ಒಂದೇ ಎಂದು ಪುಟ್ಟಣ್ಣಯ್ಯಗೆ ಅನ್ನಿಸುತ್ತದೆ. ಈ ನಾಗನಾರಾಯಣ ಭಟ್ಟರ ತಂದೆ ವಾಸುದೇವ ಭಟ್ಟರು ಮಗನ ಜನನದ ಬಳಿಕ ತಮ್ಮ ಪತ್ನಿಯ ಅಸೌಖ್ಯದ ಕಾರಣ ಹಾಸುಗೆ ಪಥ್ಯವನ್ನು ಮಾಡಬೇಕಾಗಿ ಬರುತ್ತದೆ. ಹೀಗಾಗಿ ಅವರು `ಉಪ’ ವ್ಯವಸ್ಥೆಯಾಗಿ ತಮ್ಮ ಕೆಲಸದ ಹೆಣ್ಣನ್ನು ಇಟ್ಟುಕೊಂಡು ಅವಳಿಗೆ ಎಲ್ಲ ಸೌಲಭ್ಯ ಕಲ್ಪಿಸಿಕೊಡುತ್ತಾರೆ. ಇದಕ್ಕೆ ಕುಪ್ಪಣ್ಣಯ್ಯನ ಸಹಾನುಭೂತಿ ಇತ್ತು. ಆದರೆ ಇದು ಪುರುಷ ಪ್ರಧಾನವಾದ ಸಮಾಜವ್ಯವಸ್ಥೆಯ ಪರಿಣಾಮ ಎಂದು ಕುಪ್ಪಣ್ಣಯ್ಯನ ಪತ್ನಿ ಜಲಜಮ್ಮ ಭಾವಿಸುತ್ತಾರೆ. ಭಟ್ಟರ ಪತ್ನಿಗೆ ಬಂದ ರೋಗ ಭಟ್ಟರಿಗೇ ಬಂದು, ಅವರ ಪತ್ನಿ ಬೇರೆಯವರನ್ನು ಇಟ್ಟುಕೊಂಡಿದ್ದರೆ ನೀವು ಇಂಥ ಮಾತು ಹೇಳುತ್ತಿದ್ದೀರಾ ಎಂದು ಪ್ರಶ್ನಿಸುವರು. ಇಟ್ಟುಕೊಂಡವಳಾದರೂ  ಗರತಿಯಂತೆ ಅವಳಿದ್ದಳು ಎನ್ನುವ ಜಲಜಮ್ಮ, ಅವಳು ಕೆಲಸದ ಕಮಲಳಿಗೆ ಒಂದು ಸಂದರ್ಭದಲ್ಲಿ ಸಹಾಯ ಮಾಡಿ ಯಾರಿಗೂ ಹೇಳಬೇಡ ಎಂದುದನ್ನು ವಿವರಿಸುತ್ತಾರೆ, ಕುಪ್ಪಣ್ಣಯ್ಯನ ಮಾತು ಬಿದ್ದು ಹೋಗುತ್ತದೆ. ಇಲ್ಲಿಯೂ ಮೊಗಸಾಲೆಯವರು ಮಹಿಳೆಯರ ಪರ ನಿಲ್ಲುತ್ತಾರೆ.
 ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ ಎಂಬ ಮಾತೊಂದಿದೆ. ಅದಕ್ಕೆ ಉದಾಹರಣೆ ಎನ್ನುವಂತೆ `ಅಪರಿಮಿತ ಕತ್ತಲೆಯೊಳಗೆ ವಿಪರೀತ ಬೆಳಕನಿಕ್ಕಿದೊಡೆ’ ಎಂಬ ಕತೆ ಇದೆ. ಸೀತಾಪುರದ ಡೊಂಬಯ್ಯ ಬಾಲ್ಯದಲ್ಲಿ  ಸಂಕಪ್ಪ ಮಾಡರ ಅಳಿಯ ಬಾಲಕೃಷ್ಣನ ಗೋವಾದ ಹೊಟೇಲಿನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಅವನ ಅಪ್ಪ ಸಂಕಪ್ಪನವರ ಜಮೀನು ಸಾಗುವಳಿ ಮಾಡುತ್ತಿದ್ದ. ಆ ಜಮೀನಿಗೆ ಅವನು ಡಿಕ್ಲರೇಷನ್ ತುಂಬದಂತೆ ಮಾಡಲು ಬಾಳಕೃಷ್ಣ 2 ಸಾವಿರ ರೂಪಾಯಿ ಕೊಟ್ಟು ಕಳುಹಿಸುತ್ತಾನೆ. ಡೊಂಬಯ್ಯ ಅಪ್ಪನಿಗೆ ಈ ವಿಷಯ ಹೇಳದೆ ಅಮ್ಮನ ಬಳಿ ಆ ಹಣ ಕೊಟ್ಟು ತಾನು ಮುಂಬಯಿಗೆ ಹೋಗಿ ಅದೃಷ್ಟವಶಾತ್ ಶ್ರೀಮಂತನಾಗುತ್ತಾನೆ. ಸೀತಾಪುರದಲ್ಲಿ ಭಾರೀ ಎನ್ನಬಹುದಾದ ಸ್ವಾಗತ ಗೋಪುರ ಕಟ್ಟಿಸುತ್ತಾನೆ. ಕಂಬಳದ ಕೋಣ ಸಾಕುತ್ತಾನೆ. ದೊಡ್ಡ ಬಂಗಲೆಯಂಥ ಮನೆ ಕಟ್ಟಿಸುತ್ತಾನೆ. ಅವನ ದುಡ್ಡಿನ ಪರ್ಸು ಹಿಡಿದುಕೊಳ್ಳಲು ಒಬ್ಬ ಆಳು ಇರುತ್ತಾನೆ. ಇಂಥವನು ಗೋವಾದಲ್ಲಿ ತನ್ನ ಜೊತೆ ವೇಟರ್ ಆಗಿದ್ದ ಹೊಸಂಗಡಿ ಬಚ್ಚಿರೆ ಬಾಬುವನ್ನು ಗುರುತಿಸಿ ಹತ್ತಿರ ಸೇರಿಸಿಕೊಳ್ಳಲು ನಿರಾಕರಿಸುತ್ತಾನೆ. ಆತನನ್ನು ನೂಕುವಂತೆ ತನ್ನ ತೈನಾತಿಗಳಿಗೆ ಹೇಳುವ ಮೂಲಕ ಹೃದಯವಂತಿಕೆಯಲ್ಲಿ ತಾನೆಷ್ಟು ಬಡವ ಎಂಬುದನ್ನು ಅವನು ತೋರಿಸಿಕೊಳ್ಳುತ್ತಾನೆ.
 `ಹರಿವ ನದಿಗೆ ಮೈಯೆಲ್ಲಾ ಕಾಲು’ ಕತೆಯಲ್ಲಿ ಸಕರ್ಾರಿ ವ್ಯವಸ್ಥೆಯಲ್ಲಿ ಲಂಚ ಎನ್ನುವುದು ಹೇಗೆ ಬೇರುಬಿಟ್ಟಿದೆ ಎಂಬುದನ್ನು ವಿವರಿಸುತ್ತಾರೆ. ಈ ಕತೆಯ ಸ್ವಾರಸ್ಯವನ್ನು ಓದಿಯೇ ಸವಿಯಬೇಕು. ಮೊಗಸಾಲೆಯವರ ಕಥನಗಾರಿಕೆ ಇದರಲ್ಲಿ ಕಳೆಗಟ್ಟಿದೆ. ಉದ್ವೇಗವಿಲ್ಲದ ಶೈಲಿಯಲ್ಲಿ ಭ್ರಷ್ಟತೆಯ ವ್ಯಾಪಕ ಸ್ವರೂಪವನ್ನು ಮನಗಾಣಿಸುತ್ತಾರೆ.
 ಮೋಕ್ಷ ಎಂಬುದು ಇಲ್ಲೇ ಇದೆಯೋ ಸ್ವರ್ಗದಲ್ಲಿ ಇದೆಯೋ? ಇಂಥ ಒಂದು ಜಿಜ್ಞಾಸೆ `ಗುಹೇಶ್ವರನೆಂಬುದಿಲ್ಲಾಗಿ ಬಯಲೆಂಬುದಿಲ್ಲ’ ಕತೆಯಲ್ಲಿದೆ. ಶೀನ ಬಂಗೇರ ಓದಿನಲ್ಲಿ ಹಿಂದಾಗಿ, ತನ್ನ ಭಾವನ ಅಂಗಡಿಯಲ್ಲಿ ಕೆಲಸ ಮಾಡಲು ಮುಂಬಯಿಗೆ ಹೋಗಿ ಅಲ್ಲಿ ತಾನೇ ನಾಲ್ಕು ಹೊಟೇಲುಗಳ ಮಾಲೀಕನಾಗುತ್ತಾನೆ. ಪ್ರತಿ ವರ್ಷ ತನ್ನ ಊರಿನಲ್ಲಿ ತನ್ನ ಜನ್ಮದಿನದಂದು ದೇವಸ್ಥಾನದಲ್ಲಿ ಭಾರೀ ಅನ್ನಸಂತರ್ಪಣೆ ಮಾಡಿಸಿ ಒಂದು ಯಕ್ಷಗಾನ ಬಯಲಾಟವನ್ನೂ ಆಡಿಸುತ್ತಿದ್ದ. ಇಂಥದ್ದೇ ಒಂದು ಬಯಲಾಟದ ದಿನ ಅವನಿಗೆ ಪಕ್ಷವಾತ ಆಗುತ್ತದೆ. ಕೊನೆಗೆ ಸಕರ್ಾರಿ ಆಸ್ಪತ್ರೆಯಲ್ಲಿ ವಾಸಿಯಾಗದ ಕಾಯಿಲೆ ರಾಮನಕಟ್ಟೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಾಸಿಯಾಗುತ್ತದೆ. ಬಳಿಕ ಆತ ಮರಳಿ ಮನೆಗೆ ಹೋಗದೆ ಕಾವಿ ಬಟ್ಟೆ ಧರಿಸಿ ಊರೂರು ಅಲೆಯುತ್ತಾನೆ. ಮೋಕ್ಷ ಎನ್ನುವುದು ಎಲ್ಲ ಭವಬಂಧನಗಳಿಂದ ಬಿಡಿಸಿಕೊಳ್ಳುವುದು. ಅದು ಇಲ್ಲಿಯೇ ಸಿಗುವಂಥದ್ದು ಎಂಬುದನ್ನು ಮೊಗಸಾಲೆಯವರು ಪ್ರತಿಪಾದಿಸಿದ್ದಾರೆ.
 “ಗುಹೇಶ್ವರನೆಂಬ ಬಯಲು’ ಕತೆಯಲ್ಲಿ ಅಲ್ಲಮನ ವ್ಯಾಖ್ಯಾನವಿದೆ. ಈ ಸಂಕಲನದಲ್ಲಿಯ ಕತೆಗಳನ್ನು ಅರ್ಥಮಾಡಿಕೊಳ್ಳಲು, ಅಲ್ಲಮನ ಜ್ಞಾನ ಭಂಡಾರವನ್ನು ತೆರೆಯಲು ಇದೊಂದು ಕೀಲಿಕೈ ಇದ್ದಂತೆ. ಹೈಸ್ಕೂಲಿನ ಮಕ್ಕಳಿಗೆ ಅಲ್ಲಮನ ಪಾಠವನ್ನು ಅಥರ್ೈಸಬೇಕಾದ ಶಿಕ್ಷಕರ ಪರದಾಟದ ಹಿನ್ನೆಲೆಯಲ್ಲಿ ಅಲ್ಲಮನನ್ನು ಓದಗರಿಗೆ ಪ್ರತ್ಯಕ್ಷಗೊಳಿಸುವ ಪ್ರಯತ್ನ ಇದು.
0000
 ಸೀತಾಪುರದಿಂದ ಒಂದು ಕಾಲನ್ನು ಹೊರಗಿಟ್ಟು ಮೊಗಸಾಲೆಯವರು ಬರೆದ ಮೂರು ಕತೆಗಳು ಈ ಸಂಕಲನದಲ್ಲಿವೆ. ಅವು `ಮನದ ಮುಂದಿನ ಮಾಯೆ’, `ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು’ ಮತ್ತು `ನೆಲ ಮುಗಿಲುಗಳ ನಡುವೆ’.
 `ಮನದ ಮುಂದಿನ ಮಾಯೆ’ಯಲ್ಲಿ ಮೂರು ಡಿಪಾಟರ್್ಮೆಂಟಲ್ ಸ್ಟೋಸರ್್ಅನ್ನು ಹೊಂದಿರುವ ಸದಾನಂದ ರಾಯರು ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಆಪ್ತ ಸಹಾಯಕಿ ಗೀತಾಳಲ್ಲಿ ಅನುರಕ್ತರಾಗುತ್ತಾರೆ. ಆದರೆ ಈ ಅನುರಕ್ತಿಯ ಸ್ವರೂಪವೇನು? ಸ್ವತಃ ರಾಯರಿಗೂ ಅದರ ಅರಿವಿಲ್ಲ. ಕಾಮವಾಸನೆ ಅವರಲ್ಲಿ ಇರಲಿಲ್ಲ. ಒಂದು ದಿನ ಅವರು, `ಗೀತಾ ನನಗೆ ನಿನ್ನನ್ನೊಮ್ಮೆ ಅಪ್ಪಿ ಮುದ್ದ್ದಿಸಬೇಕು ಎಂದು ಬಹಳ ಅನಿಸಹತ್ತಿದೆ. ಅವಕಾಶ ಕೊಡುವಿಯಾ?’ ಎಂದು ಪ್ರಶ್ನಿಸುತ್ತಾರೆ. ಗೀತಾ ಅದನ್ನು ತಿರಸ್ಕರಿಸುತ್ತಾಳೆ. ತಮ್ಮ ಮೊಮ್ಮಗಳ ಪ್ರಾಯದ ಇವಳ ಮೇಲೆ ಯಾಕೆ ಮೋಹಗೊಂಡೆ ಎನ್ನುವುದನ್ನು ಅಥರ್ೈಸಲು ಹೊರಟರೂ ಅದು ಅವರಿಗೆ ಅರ್ಥವೇ ಆಗಲಿಲ್ಲ. ಇದನ್ನೇ ಅವರು ಒಂದು ಕತೆಯನ್ನಾಗಿ ಬರೆಯುತ್ತಾರೆ. ತನ್ನದು ಕಾಮ ಅಲ್ಲ ವಶರ್ಿಪ್ ಎಂದು ಅದರಲ್ಲಿ ವಿವರಿಸಿರುತ್ತಾರೆ. ಅದನ್ನು ಓದಲು ಗೀತಾಳಿಗೆ ಕೊಡುತ್ತಾರೆ. ಓದಿದ ಅವಳು ರಾಯರನ್ನು ತಾನು ತಪ್ಪಾಗಿ ಅರ್ಥಮಾಡಿಕೊಂಡೆ ಎಂದುಕೊಳ್ಳುತ್ತಾಳೆ. ವಶರ್ಿಪ್ಗೆ ಒಳಗಾಗಲು ಸಿದ್ಧಳಾಗಿ, `ನೀವು ನನ್ನ ದೇಹದ ಯಾವ ಭಾಗವನ್ನು ಬೇಕಾದರೂ ಚುಂಬಿಸಬಹುದು ಸರ್. ವಾಹ್! ಎಂದು ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಎಸ್ಎಂಎಸ್ ಮಾಡುತ್ತಾಳೆ.
 ಅದಕ್ಕೆ ರಾಯರ ಉತ್ತರ, `ನಾನು ನಿನ್ನನ್ನು ಹೂವು ಎಂದು ಭ್ರಮಿಸಿದ್ದೆ. ಆದರೆ ನೀನು ಹೂವಲ್ಲ ಹೆಣ್ಣು ಎಂಬುದು ತಿಳಿಯಿತು. ನಾನು ಈಗ ಹೆಣ್ಣನ್ನು ಆಘ್ರಾಣಿಸುವ ಸ್ಥಿತಿಯಲ್ಲಿ ಇಲ್ಲ. ಕ್ಷಮಿಸು!’ ಕೊನೆಯಲ್ಲಿ ಒಂದು ಶರಾ, ಕಾವ್ಯದ ಭಾಷೆಯೇ ಬೇರೆ ದೇಹದ ಭಾಷೆಯೇ ಬೇರೆ ಎನ್ನುವುದು ಈ ತನಕ ನಿನಗೆ ಗೊತ್ತಿರಲಿಲ್ಲ. ಗೊತ್ತಾಗಲಿ ಎಂದೇ ನಾನೇ ಆ ಕತೆಯಲ್ಲಿ ನನ್ನ ಮನಸ್ಸನ್ನು ತೆರೆದಿದ್ದೆ, ಈಗ ನಿನ್ನನ್ನು ಸ್ಪಶರ್ಿಸದೆ ಚುಂಬಿಸಿದ್ದೇನೆ, ಸಾಕು!’ ಇದು ಕತೆಯ ತಿರುಳು. ವೃದ್ಧಾಪ್ಯದ ಕಾಮಚಪಲ ಅಸಾಮಥ್ರ್ಯದ ಕಾರಣದಿಂದಾಗಿಯೆ ಉದಾರಭಾವವಾಗುವ ಸನ್ನಿವೇಶದ ಪಿತೂರಿ ಇದು.
 ರಾಯರ ಆಹ್ವಾನವನ್ನು ಗೀತಾ ಮೊದಲೇ ಒಪ್ಪಿಕೊಂಡು ಬಿಟ್ಟಿದ್ದರೆ? ಅವಳ ತಿರಸ್ಕಾರದಿಂದ ಅಪಮಾನಿತರಾಗಿ, ತಾವು ಸಂಭಾವಿತರೆಂದು ತೋರಿಸಿಕೊಳ್ಳಲು ರಾಯರು ಕತೆಯ ತಂತ್ರ ಹೂಡಿದರು ಎಂದು ಅನುಮಾನಿಸುವುದಕ್ಕೆ ಸಾಕಷ್ಟು ಅವಕಾಶಗಳು ಕತೆಯಲ್ಲಿದೆ. ಹೀಗಾಗಿ ಕಾವ್ಯದ ಭಾಷೆ ದೇಹದ ಭಾಷೆ ಎಂಬುದೆಲ್ಲ ಸಾಚ ಅಲ್ಲ ಎನ್ನಿಸಿಬಿಡುತ್ತದೆ.
 `ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು’ ಕತೆಯಲ್ಲಿ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದು ನಿವೃತ್ತರಾದ ಶ್ರೀನಿವಾಸರಾಯರು ತಮ್ಮ ನಿವೃತ್ತಿಯ ಜೀವನದಲ್ಲಿ `ಅಲ್ಲಮಾಶ್ರಮ’ವನ್ನು ಸ್ಥಾಪಿಸಿ ತಾವು ಬೋಧಿಸುತ್ತಿದ್ದ ಮ್ಯಾಥಮೆಟಿಕ್ಸ್ ರೀತಿಯಲ್ಲೇ ಆತನನ್ನು ಅಥರ್ೈಸಿಕೊಳ್ಳಲು ಯತ್ನಿಸುತ್ತಿದ್ದವರು. ಅವರ ಮನೆಗೆ ಒಬ್ಬ ಹೆಣ್ಣಾಳು ಕೆಲಸದ ಸಹಾಯಕ್ಕೆ ಬೇಕಾಗಿತ್ತು. ಅವರಿಗೆ ಯಾವ ಜಾತಿಯಾದರೂ ಆಗಬಹುದು ಎನಿಸಿದರೆ ಅವರ ಪತ್ನಿಗೆ ಬ್ರಾಹ್ಮಣ ಜನವೇ ಬೇಕು. `ಬ್ರಾಹ್ಮಣರು ಒಳ್ಳೆಯವರು ಅನ್ನೋದಕ್ಕೆ ರುಜುವಾತು ಎಲ್ಲಿದೆ?’ ಎಂದು ಪ್ರಶ್ನಿಸುವವರು ಶ್ರೀನಿವಾಸ ರಾಯರು. ಕೊನೆಗೂ ಅವರ ಮನೆಗೆ ಸಪೂರಬಾನು ಎಂಬ ಮುಸ್ಲಿಂ ಹುಡುಗಿ ಲಕ್ಷ್ಮೀ ಎಂಬ ಹೆಸರಿನಲ್ಲಿ ಬಂದು ಸೇರಿಕೊಳ್ಳುತ್ತಾಳೆ. ಅವಳು ಮಂಜ ಎಂಬ ಹಿಂದೂ ಹುಡುಗನನ್ನು ಪ್ರೀತಿಸಿ ಆತನ ಜೊತೆ ಓಡಿಬಂದವಳು. ಕೆಲವು ದಿನಗಳ ಬಳಿಕ ನಿಜ ವಿಷಯ ತಿಳಿಯುತ್ತದೆ. ಹುಡುಗಿಯ ಮಾವ ಹೈದರಾಲಿ ಹುಡುಕಿಕೊಂಡು ಬರುತ್ತಾನೆ. ಭಿನ್ನಧರ್ಮದವರಾದ ಕಾರಣ `ರಕ್ತ ರಕ್ತ ಸೇರಬೇಕಾದಲ್ಲಿ ರಕ್ತಪಾತ ಆಗುವುದು ಬೇಡ’ ಎಂದು ಹೈದರಾಲಿ ಅವರನ್ನು ಕರೆದುಕೊಂಡು ಹೋಗುತ್ತಾನೆ. ಊರಿಗೆ ಹೋದ ಹುಡುಗಿ ಸದ್ಯ ಮದುವೆ ಬೇಡವೆಂದು ತಿರುಗಿ ಶ್ರೀನಿವಾಸರಾಯರ ಮನೆಗೇ ಬರುತ್ತಾಳೆ. ರಾಯರ ಹೆಂಡತಿ ಮತ್ತು ಸೊಸೆ ಅವಳು ಮುಸ್ಲಿಂ ಎಂದು ಗೊತ್ತಿದ್ದರೂ ಕೆಲಸಕ್ಕೆ ಇರಿಸಿಕೊಳ್ಳುತ್ತಾರೆ. ಇಲ್ಲಿಗೆ ಒಂದು ಆದರ್ಶ ಕಾರ್ಯರೂಪಕ್ಕೆ ಬರುತ್ತದೆ. ನಾವು ಮಾವು ಬಿತ್ತಿದರೆ ಮಾವು ಬೇವು ಬಿತ್ತಿದರೆ ಬೇವು ಬೆಳೆಯುವುದೆಂಬ ಸತ್ಯವನ್ನು ಅಲ್ಲಮನ ಪರಿಭಾಷೆಯಲ್ಲಿ ಹೇಳಿದ್ದಾರೆ ಮೊಗಸಾಲೆಯವರು.
 `ನೆಲ ಮುಗಿಲುಗಳ ನಡುವೆ’ ಕತೆಯಲ್ಲಿ ರಮಾನಾಥ ಎಂಬ ಯುವಕನ ಅವನಿ ಎಂಬ ಯುವತಿಯ ದಾಂಪತ್ಯ- ತಿರುವುಗಳ ವಿವರಗಳನ್ನು ನೀಡುತ್ತದೆ. ಗ್ರಾಮೀಣ ಪ್ರತಿಭೆಯಾದ ರಮಾನಾಥನಲ್ಲಿ ಹಿಂಜರಿಕೆಯ ಸ್ವಭಾವ. ಆದರೆ ಅವನಿ ತುಂಬಾ ಫಾಸ್ಟ್. ಅವರು ಮದುವೆಯಾಗುತ್ತಾರೆ. ಆದರೆ ಆ ಮದುವೆ ಮುರಿದು ಬೀಳುತ್ತದೆ. ಅವನಿ ಬೇರೆಯವರ ಜೊತೆ ಬದುಕುತ್ತಿದ್ದರೂ ರಮಾನಾಥನಿಗೆ ಅವಳನ್ನು ಬಿಟ್ಟು ಬೇರೆಯವರು ಇಷ್ಟವಾಗುವುದೇ ಇಲ್ಲ. ಆಧುನಿಕ ನಗರ ಬದುಕಿನ ಸ್ವಚ್ಛಂದ ಜೀವನ ಶೈಲಿಯನ್ನು ಸಹಾನುಭೂತಿಯಿಂದ ಅನುಸಂಧಾನ ಮಾಡುವ ರೀತಿ ಮನಮುಟ್ಟುತ್ತದೆ. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಗೆ ಅತಿರೇಕವೆಂದು ಕಾಣುವ ಆದರೆ ಮಾನವನ ಸಹಜ ಸ್ವಭಾವವನ್ನು ಹೇಗೆ ಅಥರ್ೈಸಬೇಕು ಎನ್ನುವುದನ್ನು ಮೊಗಸಾಲೆಯವರು ಹೇಳುತ್ತಾರೆ. ಪರರ ಬಗ್ಗೆ ನಿಧರ್ಾರ ಕೈಗೊಳ್ಳುವ ಮೊದಲು ತಮ್ಮನ್ನು ತಾವು ನಿರೀಕ್ಷಿಸಿಕೊಳ್ಳಬೇಕು ಎನ್ನುವ ಕಿವಿ ಮಾತೂ ಇಲ್ಲಿದೆ.
 ಈ ಮೂರೂ ಕತೆಗಳನ್ನು ಸೀತಾಪುರ ಮತ್ತು ಅಲ್ಲಿಯ ಪ್ರಜೆಗಳಿಂದ ದೂರಹೋಗಿ ರಚಿಸಿರುವ ಮೊಗಸಾಲೆಯವರು ಬೇರೆ ರೀತಿಯಲ್ಲಿ ಓದುಗರನ್ನು ಎದುರಾಗಲು ಯತ್ನಿಸಿದ್ದಾರೆ. ಅವರು ಇಷ್ಟಪಟ್ಟಿದ್ದರೆ ಸೀತಾಪುದಲ್ಲಿಯೇ ಈ ಕತೆಗಳನ್ನೂ ಸೃಷ್ಟಿಸಬಹುದಿತ್ತು. ಏಕೆಂದರೆ ಮೊಸಾಲೆಯವರ ಒಟ್ಟೂ ಕಾಳಜಿ ಇರುವುದು ಮನುಷ್ಯತ್ವದ ಶೋಧದಲ್ಲಿ. ಈ ಶೋಧ ಯಾವ ನೆಲದಲ್ಲಿಯೂ ಆಗಬಹುದು. ದೇಶ ಕಾಲ ಪಾತ್ರ ಸನ್ನಿವೇಶಗಳೆಲ್ಲವೂ ಒಂದು ನಿಮಿತ್ತಮಾತ್ರ.
0000
ವೃತ್ತಿಯಿಂದ ವೈದ್ಯರಾಗಿದ್ದ ನಾ. ಮೊಗಸಾಲೆಯವರು ಶರೀರಕ್ಕಾದ ರೋಗಕ್ಕೆ ಚಿಕಿತ್ಸೆಯನ್ನು ನೀಡಬಲ್ಲರು. ಪ್ರವೃತ್ತಿಯಿಂದ ಸಾಹಿತಿಯೂ ಆಗಿರುವ ಅವರು ಮನುಷ್ಯನ ಗೀಳುಗಳಿಗೂ ತಮ್ಮ ಸಾಹಿತ್ಯದ ಮೂಲಕ ಪರಿಹಾರ ಕಲ್ಪಿಸಬಲ್ಲರು. ಮನುಷ್ಯ ಹೇಗೆ ಗಟ್ಟಿಗೊಳ್ಳಬೇಕು ಎಂಬುದನ್ನು ಅವರು ತಮ್ಮ ಕತೆಗಳ ಮೂಲಕ ಹೇಳುತ್ತಾರೆ. ಇವೆರಡರ ಆಚೆ ಅವರೊಬ್ಬ ಸಾಂಸ್ಕೃತಿಕ  ಪುರುಷ. ಕಾಂತಾವರದಂಥ ಪುಟ್ಟ ಊರಿನಲ್ಲಿ ಸಾಹಿತ್ಯ-ಸಂಸ್ಕೃತಿ ಚಿಂತನವನ್ನು ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಾಂತಾವರ ಇಂದು ರಾಜ್ಯದ ಸಾಂಸ್ಕೃತಿಕ ನಕ್ಷೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಅವರು ಕಾರಣರಾಗಿದ್ದಾರೆ. ನಾಡಿನ ಗಣ್ಯ ಸಾಹಿತಿಗಳೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದಾರೆ. ಕಾಂತಾವರ ಆಯಸ್ಕಾಂತಾವರವಾಗಿ ಸಾಹಿತ್ಯಪ್ರೇಮಿಗಳನ್ನು ಆಕಷರ್ಿಸುತ್ತಿದೆ. ಇದನ್ನೆಲ್ಲ ಅವರು ಕೈಯಲ್ಲಿ ದೊಡ್ಡ ಗಂಟನ್ನು ಇಟ್ಟುಕೊಂಡು ಮಾಡುತ್ತಿಲ್ಲ. ಆವರು ಗಳಿಸಿದ ಜನರ ಪ್ರೀತಿ, ಅವರಲ್ಲಿರುವ ಅದ್ಭುತವಾದ ಸಂವಹನ ಪ್ರತಿಭೆ, ಎದುರಿನವರ ಹೃದಯವನ್ನು ತಟ್ಟುವಂತೆ ನಡೆಸುವ ಕುಶಲ ಸಂಭಾಷಣೆ ಅವರನ್ನು ಜನಾನುರಾಗಿಯನ್ನಾಗಿ ಮಾಡಿದೆ. ಇದೇ ಅವರ ಬಂಡವಾಳ. `ಅರಲುಗೊಂಡ ಕೆರೆಗೆ ತೊರೆ ಬಂದು ಹಾಯಿದಂತೆ’ ಮೊಗಸಾಲೆಯವರ ಸಾಹಿತ್ಯಕ- ಸಾಂಸ್ಕೃತಿಕ ಕೈಂಕರ್ಯಕ್ಕೆ ಹಲವರು ಜೊತೆಯಾಗಿದ್ದಾರೆ. ಮೊಗಸಾಲೆಯವರಿಂದ ಪುಟವಿಕ್ಕಿಸಿಕೊಂಡ ಕಾಂತಾವರ ಅಧ್ಯಯನಕ್ಕೆ ಒಂದು ವಸ್ತು.
 ಮೊಗಸಾಲೆಯವರು ಬರೆಯುವ ಸಮಯದಲ್ಲಿಯೇ ಪೂರ್ಣಚಂದ್ರ ತೇಜಸ್ವಿ, ನಾ.ಡಿಸೊಜಾ, ಮೊಗಳ್ಳಿ, ಕೆ.ಸತ್ಯನಾರಾಯಣ, ನುಗಡೋಣಿ, ಕಾಯ್ಕಿಣಿ, ವಿವೇಕ ಶಾನಭಾಗ, ಯಶವಂತ ಚಿತ್ತಾಲ ಮೊದಲಾದವರೆಲ್ಲ ಬರೆದಿದ್ದಾರೆ, ಒಂದು ವಸ್ತುವನ್ನು ಗ್ರಹಿಸುವುದರಲ್ಲಿ ಮೊಗಸಾಲೆಯವರ ರೀತಿ ಉಳಿದವರಿಂದ ಭಿನ್ನವಾದುದು. ಅವರೇ ಅಂದಿರುವಂತೆ `ನಿಜವಾದ ಕತೆಗಳ ಅಸ್ತಿತ್ವ ಇರುವುದು ಕತೆಯ ವಸ್ತುವಿನ ಆಚೆ, ಕೆಲವೊಮ್ಮೆ ಈಚೆ.’ ಅವರು ವಿಸ್ತಾರವಾದ ಪೀಠಿಕೆ, ಪೂರ್ವಕತೆ, ಉಪಕತೆಗಳನ್ನೆಲ್ಲ ಹೇಳುತ್ತ ಕತೆ ಕಟ್ಟಿದರೂ ಕತೆಯ ತಿರುಳು ಇರುವುದು ಕೊನೆಯ ಒಂದೆರಡು ಪ್ಯಾರಾಗಳಲ್ಲಿ. ಕೆಲವೊಮ್ಮೆ ಅಲ್ಲಿಯೂ ಸಿಗದೆ ಬೇರೆಡೆ ಬೆರಳು ತೋರಿಸಬಹುದು.
 ಕರಾವಳಿಯ, ಅದರಲ್ಲೂ ಕಾರ್ಕಳ ಸೀಮೆಯ ಭಾಷೆಯನ್ನು ಅವರು ಬಳಸುವುದು. ಅದರ ಬೀಸು ಹೊನ್ನಾವರ, ಕುಮಟಾದ ವರೆಗೂ ಇರುವ ಹಾಗೆ ಭಾಸವಾಗುತ್ತದೆ. ಅವರು ಬಳಸುವ ಗಾದೆಗಳು, ನುಡಿಗಟ್ಟುಗಳು, ಆಚರಣೆ, ಸಂಪ್ರದಾಯ, ನಂಬಿಕೆ ಇತ್ಯಾದಿಯೆಲ್ಲ ಇದಕ್ಕೆ ಇಂಬು ಕೊಡುತ್ತವೆ. ಹೆಸರು ಇಲ್ಲದಿದ್ದರೂ ಇದು ಮೊಗಸಾಲೆಯವರ ರಚನೆ ಎಂದು ಗುರುತಿಸುವಷ್ಟು ಅನನ್ಯತೆ ಅವರ ಕತೆಗಳಲ್ಲಿದೆ.
 ಮೊಗಸಾಲೆಯವರು ತಮ್ಮ ಕತೆಗಳನ್ನು ಬರೆಯಲು ಆರಂಭಿಸಿದ ಕಾಲದಲ್ಲಿ ಕನರ್ಾಟಕದಲ್ಲಿ ಜನಸಾಮಾನ್ಯರಲ್ಲೂ ರಾಜಕೀಯ ಪ್ರಜ್ಞೆ ಜಾಗೃತಗೊಳ್ಳುತ್ತಿತ್ತು. ಊಳಿಗಮಾನ್ಯ ವ್ಯವಸ್ಥೆ ಸಡಿಲಗೊಳ್ಳುತ್ತಿತ್ತು. ರಾಜ್ಯ ಮತ್ತು ಕೇಂದ್ರ ಸಕರ್ಾರಗಳ ಹಸಿರುಕ್ರಾಂತಿ, ಉಳುವವನೇ ಹೊಲದೊಡೆಯ ಮೊದಲಾದ ಹಲವು ಜನೋಪಯೋಗಿ ಕಾರ್ಯಕ್ರಮಗಳು ದಾಸ್ಯದಲ್ಲಿ ಬದುಕುತ್ತಿದ್ದವರ ಜೀವನದಲ್ಲಿ ಹೊಸ ನೇಸರ ಉದಯಿಸುವ ಹಾಗೆ ಮಾಡಿತ್ತು. ಇಂಥ ಸಂಕ್ರಮಣ ಕಾಲದಲ್ಲಿ ಸಾಮಾನ್ಯ ಮನುಷ್ಯ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಾನೆ. ಮನುಷ್ಯ ಸಂಬಂಧಗಳಲ್ಲಿ ಬಿರುಕುಗಳು ಉಂಟಾಗುತ್ತವೆ. ಪರಸ್ಪರರನ್ನು ಅನುಮಾನಿಸುತ್ತ ಮನಸ್ಸಿನ ಶಾಂತಿಯನ್ನು ಕಳೆದುಕೊಂಡು ಹತಾಶ ಸ್ಥಿತಿಯನ್ನು ತಲುಪುತ್ತಾನೆ. ಇಂಥ ಅಪರಿಮಿತದ ಕತ್ತಲೆಯಲ್ಲಿಯೂ ಬೆಳಕಿನ ಸೆಳೆಗಳು ಇರುತ್ತವೆ. ಮೊಗಸಾಲೆಯವರ ಮಾತಿನಲ್ಲಿಯೇ ಹೇಳುವುದಾದರೆ ಅವು `ಬಿಸಿಲಕೋಲು’. ತಮಂಧದ ಕೇಡನ್ನು ತೊಲಗಿಸಲು ಇಂಥ ಬಿಸಿಲುಕೋಲುಗಳು ಅಗತ್ಯ. ಇಲ್ಲಿಯ ಕತೆಗಳಲ್ಲಿ ಮೊಗಸಾಲೆಯವರು ಬೆಳಕಿನ ಬೀಜಗಳನ್ನು ಹೆಕ್ಕಿದ್ದಾರೆ. ಕತ್ತಲು ತುಂಬಿದ ಎದೆಗಳಲ್ಲಿ ಬಿತ್ತಲು ಯತ್ನಿಸಿದ್ದಾರೆ. ಪರರಲ್ಲಿಯ ಹಿರಿಯ ಗುಣವನ್ನು ಅರಿಯಲು ಪ್ರೇರಣೆ ನೀಡಿದ್ದಾರೆ. ಕಾಲದ ಅಗತ್ಯವಾಗಿ ಇಲ್ಲಿಯ ಕತೆಗಳು ಮೂಡಿವೆ. ಅವರು ಇನ್ನಷ್ಟು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ.
0000
 ನನಗಿಂತ ತುಂಬ ಹಿರಿಯರಾದ ಮೊಗಸಾಲೆಯವರು ನನ್ನ ಮೇಲೆ ವಿಶ್ವಾಸವಿಟ್ಟು ಮುನ್ನುಡಿಯನ್ನು ಬರೆಯಲು ಹೇಳಿದರು. ಅದನ್ನೊಂದು ಗೌರವವೆಂದು ತಿಳಿದು ಇಲ್ಲಿ ಕೆಲವು ಮಾತುಗಳನ್ನು ಬರೆದಿದ್ದೇನೆ. ಮುನ್ನುಡಿಯ ವ್ಯಾಪ್ತಿಯನ್ನು ಇದು ಮೀರಿರಬಹುದು. ಸ್ವಲ್ಪ ದೀರ್ಘವೂ ಎನಿಸಬಹುದು. ಅವರ ಮೇಲಿರುವ ತುಸು ಹೆಚ್ಚು ಪ್ರೀತಿಯೇ ಇದಕ್ಕೆ ಕಾರಣ.