*ಶಿವನಿಗೆ ಅಂಟಿಕೊಂಡ ಬ್ರಹ್ಮನ ತಲೆಬುರುಡೆ

ಒಂದು ಕಾಲದಲ್ಲಿ ಅತ್ಯಂತ ವೈಭವದ ಬದುಕನ್ನು ಬದುಕಿದವರು ಕಾರಣಾಂತರದಿಂದ ಹೀನ ಸ್ಥಿತಿಯನ್ನು ತಲುಪಿ ಕಂಡಕಂಡವರೆದುರು ಕೈಚಾಚುವಂತಾದರೆ ಅಂಥವರನ್ನು ಕಂಡು ಬ್ರಹ್ಮ ಕಪಾಲ ಅವನಿಗೆ ಹಿಡಿದಿದೆ ಎಂದು ಹೇಳುವುದಿದೆ. ಏನಿದು ಬ್ರಹ್ಮ ಕಪಾಲ? ಕಪಾಲವೆಂದರೆ ತಲೆಬುರುಡೆ. ಬ್ರಹ್ಮನ ತಲೆಬುರುಡೆ.
ಹಿಂದೆ ದಕ್ಷಬ್ರಹ್ಮ ಯಾಗವನ್ನು ಮಾಡುತ್ತಾನೆ. ಅದಕ್ಕೆ ಶಿವನಿಗೆ ಆಹ್ವಾನವನ್ನು ನೀಡುವುದೇ ಇಲ್ಲ. ದಕ್ಷನ ಮಗಳೇ ದಾಕ್ಷಾಯಿಣಿ. ಶಿವನ ಪತ್ನಿ. ತಂದೆಯ ಯಜ್ಞಕ್ಕೆ ತಾನು ಹೋಗಬೇಕೆಂದು ಬಯಸುತ್ತಾಳೆ. ಅಲ್ಲಿ ಹೋದರೆ ಅಪಮಾನಕ್ಕೀಡಾಗುವಿ ಎಂದು ಶಿವ ಎಚ್ಚರಿಕೆಯ ಮಾತನ್ನು ಹೇಳುತ್ತಾನೆ. ಆದರೆ ಆಕೆ ಕೇಳುವುದೇ ಇಲ್ಲ.
ದಕ್ಷನ ಯಾಗಶಾಲೆಯಲ್ಲಿ ಶಿವೆಗೆ ಅಪಮಾನವಾಗುತ್ತದೆ. ದಕ್ಷನು ಶಿವನನ್ನು ನಿಂದಿಸುತ್ತಾನೆ. ಅದನ್ನು ಕೇಳಿದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಸಾಯುತ್ತಾಳೆ. ಸುದ್ದಿ ತಿಳಿದ ಶಿವನಿಗೆ ಪ್ರಚಂಡ ಕೋಪ. ದಕ್ಷನ ಯಾಗಶಾಲೆಗೆ ಆಗಮಿಸುವ ಆತ ದಕ್ಷನನ್ನು ಕೊಲ್ಲುತ್ತಾನೆ.
ಆ ಸಂದರ್ಭದಲ್ಲಿ ಮಾತಿಗೆ ಮಾತು ಬಂದು ಬ್ರಹ್ಮನ ಮೇಲೆ ಶಿವ ಕೋಪಗೊಳ್ಳುತ್ತಾನೆ. ಬ್ರಹ್ಮನ ಒಂದು ಶಿರವನ್ನು ಶಿವ ಕತ್ತರಿಸುತ್ತಾನೆ. ಅದೇ ಬ್ರಹ್ಮ ಕಪಾಲ. ಬ್ರಹ್ಮನ ಆ ತಲೆಬುರುಡೆ ಭಿಕ್ಷಾಪಾತ್ರೆಯ ರೂಪದಲ್ಲಿ ಶಿವನ ಕೈಗೆ ಅಂಟಿಕೊಳ್ಳುತ್ತದೆ. ಶಿವ ಭಿಕ್ಷೆಬೇಡುವಂತೆ ಆಗುತ್ತದೆ ಕೊನೆಗೆ.