*ವಿದ್ಯೆಯ ದೇವತೆಯೆಂದು ಸರಸ್ವತಿಯನ್ನು ಪೂಜಿಸುತ್ತಾರೆ

ನೋ ಒಂದನ್ನು ಸಾಧಿಸಬೇಕು, ಸಿದ್ಧಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತೇವೆ. ನಮ್ಮ ಪ್ರಯತ್ನವನ್ನು ನೋಡಿ ಕೆಲವರು, ಅದು ನಿನ್ನಿಂದ ಸಾಧ್ಯವಾಗದು ಎಂದು ಸವಾಲಿನ ರೀತಿಯಲ್ಲಿ ಹೇಳಬಹುದು. ಆಗ ನಾವು, `ಅದೇನು ಬ್ರಹ್ಮ ವಿದ್ಯೆಯೇ?’ ಎಂದು ಅವರನ್ನು ಪ್ರಶ್ನಿಸುತ್ತೇವೆ.
ಬ್ರಹ್ಮವಿದ್ಯೆ ಎಂದರೇನು? ಇದು ಬಹಳ ಶ್ರೇಷ್ಠವಾದ ವಿದ್ಯೆ. ಗಳಿಸಲು ಕಷ್ಟವಾದ ವಿದ್ಯೆ ಎಂಬ ಅಭಿಪ್ರಾಯವಿದೆ. ಬ್ರಹ್ಮನನ್ನು ವೇದಬ್ರಹ್ಮ ಎಂದು ಕರೆಯುತ್ತಾರೆ. ಬ್ರಹ್ಮನ ನಾಲ್ಕು ಮುಖಗಳಿಂದ ನಾಲ್ಕು ವೇದಗಳು ಹೊರಬಿದ್ದವು ಎಂದು ನಂಬುತ್ತಾರೆ. ವೇದ ಎಂಬುದು ಜ್ಞಾನ. ಎಲ್ಲ ಜ್ಞಾನವೂ ವೇದಗಳಲ್ಲಿಯೇ ಅಡಕವಾಗಿದೆ ಎಂದು ಹೇಳುತ್ತಾರೆ. ವಿದ್ಯೆಯ ದೇವತೆ ಸರಸ್ವತಿ. ಈ ಸರಸ್ವತಿಯ ಪತಿಯೇ ಬ್ರಹ್ಮ.
ಹೀಗೆ, ಬ್ರಹ್ಮನ ಸಂಸಾರವೇ ವಿದ್ಯೆಗೆ ಸಂಬಂಧಿಸಿದೆ. ಎಲ್ಲ ವಿದ್ಯೆಗಳಲ್ಲೂ ಪಾರಂಗತನಾದವನನ್ನು ಬ್ರಹ್ಮಜ್ಞಾನಿ ಎಂದು ಹೇಳುತ್ತಾರೆ. ಹಿಂದೆ ರಾಕ್ಷಸರೆಲ್ಲ ವಿಶೇಷ ಶಕ್ತಿಯನ್ನು ಸಂಪಾದಿಸಲು ಬ್ರಹ್ಮನನ್ನೇ ಕುರಿತು ತಪಸ್ಸನ್ನಾಚರಿಸುತ್ತಿದ್ದರು.
ವಿದ್ಯೆಯ ಅಧಿಪತಿ ಬ್ರಹ್ಮನೇ ಆದರೂ ಬ್ರಹ್ಮನಿಗೆ ಮಾತ್ರ ಯಾರೂ ಪೂಜೆಯನ್ನೇ ಮಾಡದಿರುವುದು ವಿಚಿತ್ರ. ಸರಸ್ವತಿ ವಿದ್ಯೆಯ ದೇವತೆಯೆಂದು ಪೂಜಿಸಲ್ಪಡುತ್ತಾಳೆ.ಒಟ್ಟಾರೆ, ಯಾವ ವಿದ್ಯೆಯೂ ಸುಲಭವಾಗಿ ಸಾಧನೆಯಾಗುವಂಥದ್ದಲ್ಲ. ಬಹಳ ಕಷ್ಟಪಟ್ಟು ಸಾಧಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ಇದು ಧ್ವನಿಸುತ್ತದೆ.