ಕನ್ನಡಿಗರ ವಿಮರ್ಶನ ಪ್ರಜ್ಞೆಯನ್ನು ಸದಾ ಕೆಣಕುತ್ತಿರುವ ವಿಶೇಷ ಕವಿಗಳಲ್ಲಿ ವರಕವಿ ಅಂಬಿಕಾತನಯ ದತ್ತರು ಒಬ್ಬರು. ದ.ರಾ.ಬೇಂದ್ರೆ ಬದುಕಿನಲ್ಲಿ ಬಹಳ ಬೆಂದವರು. ಬೆಂದರಷ್ಟೆ ಬೇಂದ್ರೆಯಾಗುತ್ತಾರೆ ಎಂದು ಅವರು ಹೇಳುತ್ತಿದ್ದರು. ಹೀಗಿದ್ದರೂ ಅವರು ತಮ್ಮ ನೋವನ್ನು ಇತರರಿಗೆ ಹಂಚಲಿಲ್ಲ. ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ !’ ಎಂದು ಅವರು ಹೇಳಿದರು. ಅವರ ಮಟ್ಟಿಗೆ ಹೇಳುವುದಾದರೆ ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗಿ ಹರಿಯಿತು. ಅದು ಕನ್ನಡಿಗರ ಭಾಗ್ಯ. ಕಾವ್ಯ ಅವರ ಪಾಲಿಗೆ ನಾದ ಲೀಲೆ. ಲೀಲೆ ಎಂಬುದು ಕೃಷ್ಣನಿಗೆ ಸಂಬಂಧಿಸಿದ್ದು. ಕಾವ್ಯ ಕಟ್ಟುವ ಕ್ರಿಯೆ ಕೂಡ ಲೀಲೆಗೆ ಸಮನಾದದ್ದು. ಈ ದತ್ತ ಅಂಬಿಕೆಯ ಕೊಡುಗೆಯಾದುದರಿಂದ ಇಂಥ ಲೀಲೆಯನ್ನು ನಡೆಸುವುದು ಅವರಿಗೆ ಸಾಧ್ಯವಾಯಿತು. ಅಮೆರಿಕದಲ್ಲಿ ನೆಲೆಸಿರುವ ಅಹಿತಾನಲ (ನಾಗ ಐತಾಳ) ಅವರು ನಳಿನಿ ಮೈಯ ಅವರ ಸಹಕಾರದೊಂದಿಗೆ ‘ಬೇಂದ್ರೆ ಅಂದ್ರೆ’ ಎಂಬ ಬೇಂದ್ರೆ ಸಾಹಿತ್ಯದ ವಿರಾಟ್ ದರ್ಶನ ಮಾಡಿಸುವ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಇದಕ್ಕೆ ಅವರ ಅಭ್ಯಾಸಪೂರ್ಣವಾದ ಮುನ್ನುಡಿಯೂ ಇದೆ. ಇದರಲ್ಲಿ ಜಿ.ಎಸ್.ಶಿವರುದ್ರಪ್ಪನವರಿಂದ ಹಿಡಿದು ಕೀರ್ತಿನಾಥ ಕುರ್ತಕೋಟಿಯವರ ವರೆಗೆ ಗಣ್ಯರ ಲೇಖನಗಳಿವೆ. ಪು.ತಿ. ನರಸಿಂಹಾಚಾರ್, ಶಂಕರ ಮೊಕಾಶಿ ಪುಣೇಕರ, ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ, ಸಿ.ಎನ್.ರಾಮಚಂದ್ರನ್, ಶ್ಯಾಮಸುಂದರ ಬಿದರಕುಂದಿ, ಪಿ.ಲಂಕೇಶ, ಟಿ.ಪಿ.ಅಶೋಕ, ಓ.ಎಲ್.ನಾಗಭೂಣಸ್ವಾಮಿ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ವಿ.ಕೃ.ಗೋಕಾಕ, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಚ್.ಎಸ್.ರಾಘವೇಂದ್ರರಾವ್ ಹೀಗೆ ಆಧುನಿಕ ಕನ್ನಡದ ಘಟಾನುಘಟಿ ಲೇಖಕರು ಬರೆದ ಲೇಖನಗಳನ್ನು ಇದರಲ್ಲಿ ಸಮಾವಶಗೊಳಿಸಲಾಗಿದೆ. ಈ ಒಂದು ಸಂಪಾದನ ಕೃತಿಗಾಗಿಯೇ ಇವುಗಳನ್ನು ಬರೆದವು ಅಲ್ಲ ಎಂಬುದು ಈ ಹೆಸರುಗಳ ಪಟ್ಟಿಯನ್ನು ನೋಡಿದಾಗಲೇ ಗೊತ್ತಾಗುತ್ತದೆ. ಈ ಲೇಖನಗಳು ಹಿಂದೆ ಬೇರೆ ಕಡೆಗಳಲ್ಲಿ ಪ್ರಕಟವಾದವುಗಳು. ಅವನ್ನೆಲ್ಲ ಇಲ್ಲಿ ಕಲೆಹಾಕಲಾಗಿದೆ. ಈ ಮೂಲಕ ಬೇಂದ್ರೆಯನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವ ಹೊಸ ಪೀಳಿಗೆಯ ಓದುಗರಿಗೆ ನೆರವಾಗಿದ್ದಾರೆ ಸಂಪಾದಕರು. ಬೇಂದ್ರೆಯನ್ನು ಕಾವ್ಯದ ಮೂಲಕ, ಅವರ ವೈಯಕ್ತಿಕ ಬದುಕಿನ ಮೂಲಕ ಅನುಸಂಧಾನ ಮಾಡಿದ ಲೇಖನಗಳೂ ಇಲ್ಲಿವೆ. ಬೇಂದ್ರೆ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಅರ್ಥೈಸಲು ಮಾಡಿದ ಪ್ರಯತ್ನದ ಲೇಖನಗಳೂ ಇದರಲ್ಲಿವೆ. ಬೇಂದ್ರೆ ಒಂದು ಅದ್ಭುತ ಎಂದು ತಿಳಿದ ಆರಾಧನಾ ಭಾವದ ಲೇಖನಗಳೂ ಇವೆ. ರಮ್ಯ, ನವ್ಯ, ಬಂಡಾಯ ನೆಲೆಗಳಿಂದ ಬೇಂದ್ರೆಯವರನ್ನು ಅಧ್ಯಯನ ಮಾಡಿದ ಲೇಖನಗಳೂ ಇಲ್ಲಿವೆ. ಬೇಂದ್ರೆಯವರ ಕಲಾತ್ಮಕ ವ್ಯಕ್ತಿತ್ವದ ಬಗ್ಗೆ ಬರೆಯುವ ನರಸಿಂಹಾಚಾರ್ ಅವರು, ‘‘ಬೇಂದ್ರೆಯವರ ಮನೋವೃತ್ತಿಯನ್ನು ಒಟ್ಟು ನೋಟದಿಂದ ನೋಡಿದಾಗ ಅವರದೇ ಒಂದು ಕವಿತೆಯ ಸಾಲು ನೆನಪಿಗೆ ಬರುತ್ತದೆ, ಹೂವನ್ನು ಕುರಿತದ್ದು; ‘ಮಣ್ಣನ್ನು ಕಂಪತ್ತ ಹೊರಳಿಸುತಿರು’. ಅವರ ಕವಿತೆಗಳು ಕನ್ನಡ ನಾಡಿನ, ಏಕೆ- ಇಡೀ ಈ ಭೂಮಿಯ ದಿವ್ಯಗಂಧವನ್ನು ನಮ್ಮರಿವಿಗೆ ಬೀರುತ್ತವೆ. ತಾನು ತಾನಾಗಿಯೇ ಬೆಳೆದು ಮೊಗ್ಗಾಗಿ ಅರಳಿ ಕಂಪು ಬೀರುವುದು ಹೂವಿನ ಸಹಜ ಗುಣ. ಅದೊಂದು ಕಲೆಗಾರಿಕೆಯಲ್ಲ. ಬೇಂದ್ರೆಯವರ ಕವಿತೆಗಳೂ ಹಾಗೆಯೇ ಸುಕೃತಫಲ. ಅದು ಕಲೆಗಾರಿಕೆಯ ವಿಶ್ಲೆಷಣೆಗೆ ಸಿಕ್ಕುವುದಿಲ್ಲ…..’’ ಎಂದು ವಿವರಿಸುತ್ತಾರೆ. ಈ ಲೇಖನದ ಆರಂಭ ಕೂಡ ವಿಶಿಷ್ಟವಾಗಿದೆ. ‘ಕವಿ ಬೇಂದ್ರೆ ಅಸಾಧಾರಣ ವ್ಯಕ್ತಿ. ಅವರದು ಸರಸ ತೇಜಸ್ವಿತೆ. ಅಗಲವಾದ ಹಣೆ, ನೀಟಾಗಿ ಇಳಿದಿದ್ದು ತುದಿಯಲ್ಲಿ ತುಸು ಹರಡಿರುವ ಮೂಗು, ಹಾಳತವಾದ ಗಂಡು ಮೀಸೆ, ರಸಾರ್ದ್ರವಾದ ತುಟಿಗಳು, ಮುದ್ದಾದ ಗಲ್ಲಕ್ಕೆ ಇಳಿಯುವ ಕೆನ್ನೆಗಳು, ಹೊಳಪುಗಣ್ಣು. ನಿಲುವು ಸ್ವಲ್ಪ ಕುಳ್ಳು. ಕೇದಗೆಯ ಹತ್ತಿರಕ್ಕೆ ಬರುವ ಮೈಬಣ್ಣ…. .’ ಇದನ್ನು ಓದಿದ ಒಬ್ಬ ಚಿತ್ರಗಾರ ಬೇಂದ್ರೆಯವರನ್ನು ಕುಂಚದಲ್ಲಿ ಚಿತ್ರಿಸಬಹುದು. ಪುತಿನ ಬೇಂದ್ರೆಯವರ ಸಮಕಾಲೀನರು. ಒಬ್ಬ ಕವಿ ಇನ್ನೊಬ್ಬ ಕವಿಯ ಬಗ್ಗೆ ಇಷ್ಟೊಂದು ಉದಾರವಾಗಿ ಬರೆಯುವುದು ನವೋದಯ ಕಾಲದವರಿಗೆ ಮಾತ್ರ ಸಾಧ್ಯವಿತ್ತೇನೋ. ಇಂಥ ಒಂದು ಸಹೃದಯತೆಯ ದಾಖಲೆಯಾದ ಈ ಲೇಖನದ ಆಯ್ಕೆ ಸೂಕ್ತವಾಗಿದೆ. ‘ಹಕ್ಕಿಗೆ ಗರಿ ಇದ್ದಂತೆ ಕವಿಗೆ ಕವನ’ ಎಂಬ ಬೇಂದ್ರೆಯವರ ಮಾತನ್ನು ನೆನಪಿಸುವ ಜಿ.ಎಸ್.ಶಿವರುದ್ರಪ್ಪನವರು, ‘ಕಾವ್ಯ ಸೃಷ್ಟಿ- ಬೇಂದ್ರೆಯವರ ದೃಷ್ಟಿ’ ಎಂಬ ಲೇಖನದಲ್ಲಿ ಕವಿಯು ಕಾವ್ಯಸೃಷ್ಟಿಯ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಅವರ ಕವನಗಳಿಂದಲೇ ಹೆಕ್ಕಿಕೊಡುವ ಪ್ರಯತ್ನ ಮಾಡಿದ್ದಾರೆ. ನುಡಿದು ಬೇಸತ್ತಾಗ| ದುಡಿದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು ನೀಡಾಂವ. ಎಂದು ‘ಸಖೀಗೀತ’ದಲ್ಲಿ ಕವಿ ಯಾರು ಎಂಬುದನ್ನು ಬೇಂದ್ರೆ ಹೇಳಿದ್ದಾರೆ. ಬೇಂದ್ರೆ ದೃಷ್ಟಿಯಲ್ಲಿ ಕವಿ ತನ್ನ ವೈಯಕ್ತಿಕ ನೋವನ್ನು ಜನರಿಗೆ ನೀಡಬಾರದು. ಕುಗ್ಗು ತನಗಿರಲಿ, ಹಿಗ್ಗು ಪರರಿಗಿರಲಿ ಎಂಬಂಥ ಪರೋಪಕಾರ ಬುದ್ಧಿ ಅವರದ್ದು. ಕವಿಯ ಪಾಡು ಹಾಡಾಗುವುದು ಹೇಗೆ? ತೇಲಾಡುವಾಗ ಮನಸು ಮೇಲಾಡತಾವ ಕನಸು ತಾಕಾಡುವಾಗ ಇತ್ತ ತೇಕಾಡತಾವ ಚಿತ್ತ ಕವಿಗೆ ಕಾವ್ಯವೆನ್ನುವುದು ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ! ಕವಿಗೆ ಕಾವ್ಯವೆಂಬುದು ಸ್ಫೂರ್ತಾ, ಅಮೂರ್ತಾ, ಆವಿರ್ಭೂತಾ, ಭವ ಮಂಥನ ತಂತ್ರಾ ಹೀಗೆ ಜಿಎಸ್‌ಎಸ್ ಅವರು ಬೇಂದ್ರೆಯವರ ಕಾವ್ಯಮೀಮಾಂಸೆಯನ್ನು ನಮಗೆ ದರ್ಶನ ಮಾಡಿಸುತ್ತಾರೆ. ಕವಿ ತನ್ನ ಸ್ವಂತ, ಸ್ವತಂತ್ರ ಅನುಭವದ ಇರವಿನ ಪರಿಯನ್ನು ಶಬ್ದದಲ್ಲಿ ಮರುಸೃಷ್ಟಿಸುತ್ತ ಒಂದು ಭಾವಲೋಕವನ್ನು ಅಂದರೆ ಭೃಂಗದ ಬೆನ್ನೇರಿ ಬರುವ ಕಲ್ಪನಾ ವಿಲಾಸವನ್ನು ನಾದಲಯಗಳಲ್ಲಿ ಕಟ್ಟಿಕೊಡುವಂತಹ ಕುಶಲ ಕೆಲಸ ಹೊಸಗನ್ನಡದಲ್ಲಿ ಬೇಂದ್ರೆಯವರಿಂದಲೇ ಆರಂಭವಾಯಿತು ಎಂಬ ಮಾತನ್ನು ‘‘ಬೇಂದ್ರೆಯವರ ‘ಪ್ರೀತಿ’ ಕಾವ್ಯ’’ ಲೇಖನದಲ್ಲಿ ಶ್ಯಾಮಸುಂದರ ಬಿಂದರಕುಂದಿಯವರು ಹೇಳಿದ್ದಾರೆ. ಬೇಂದ್ರೆ ಏಕೆ ಮಹಾಕಾವ್ಯ ಬರೆಯಲಿಲ್ಲ ಎಂಬುದನ್ನು ಚರ್ಚಿಸುವ ಕಂಬಾರರು, ಬೇಂದ್ರೆ ಪ್ರಾಚೀನರಂತೆ ಮಹಾಕಾವ್ಯ ಬರೆಯಲಿಲ್ಲ. ಆಗಿನಂತೆ ಬದುಕು ಒಮ್ಮುಖವಾಗಿಲ್ಲದ್ದು ಇದಕ್ಕೆ ಕಾರಣವಾಗಿರಬಹುದು. ಸಮಷ್ಟಿ ಮನೋಧರ್ಮವನ್ನು ಸ್ವಚ್ಛಂದವಾಗಿ ಧ್ವನಿಸಬಲ್ಲ ತೋಂಡಿ ಸಂಪ್ರದಾಯ ಬೇಂದ್ರೆ ಬಂದ ಕಾಲಕ್ಕೆ ಒಡೆದು ನೀರಾದದ್ದು ಕಾರಣವಾಗಿರಬಹುದು. ಯಾಕೆಂದರೆ ಯಾವುದೇ ಮಹಾಕಾವ್ಯ ಅದು ವೈಯಕ್ತಿಕವಾದದ್ದಿರಲಿ, ಸಾಮೂಹಿಕವಾದದ್ದಿರಲಿ ಜಾನಪದ ಉದ್ದೀಪನೆಯಿಂದಲೇ ಸಾಧ್ಯವೆಂದು ತೋರುತ್ತದೆ. ತೋಂಡಿಯಲ್ಲಿ ಅನೇಕ ಮುಖವಾಗಿ ಹರಿಯುವ ಮೌಲ್ಯಗಳು, ಆಶೋತ್ತರಗಳು ತಮ್ಮನ್ನಾಳುವ ರಾಜನ ಚರಿತ್ರೆಯ ಮುಖಾಂತರ ಅಥವಾ ತಮ್ಮ ಆದರ್ಶ ನಾಯಕನ ಜೀವನದ ಮುಖಾಂತರ ಒಮ್ಮುಖವಾಗಿ ಹರಿದಾಗ ಮಹಾಕಾವ್ಯ ಹುಟ್ಟಬಲ್ಲುದು. ಇಂಗ್ಲಿಷ್ ಪ್ರಭಾವದಿಂದ ಅಂದಿನ ಸಾಮಾಜಿಕ ಜೀವನದಲ್ಲಾದ ಬಿರುಕು ತೋಂಡಿ ಸಂಪ್ರದಾಯದಲ್ಲೂ ಬಿರುಕನ್ನುಂಟುಮಾಡಿತ್ತು. ಈ ಕಾರಣಗಳು ಬರೀ ನನ್ನ ಊಹೆಗಳಾಗಿರಬಹುದು. ಇಂಥ ಊಹೆಗೆ ಕಾರಣವೆಂದರೆ ಬೇಂದ್ರೆಯವರ ತಾತ್ವಿಕತೆ, ಕಾವ್ಯಧರ್ಮಗಳು ಕನ್ನಡ ಕವಿಗಳಿಗಿಂತ ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ ಎಂದು ಹೇಳುತ್ತಾರೆ. ಆಧುನಿಕ ಲೇಖಕ/ ಓದುಗ ಬೇಂದ್ರೆಯನ್ನು ಹೇಗೆ ಗ್ರಹಿಸುತ್ತಾನೆ ಎನ್ನುವುದಕ್ಕೆ ಮತ್ತು ಬೇಂದ್ರೆಯನ್ನು ಹೀಗೂ ಗ್ರಹಿಸಬಹುದು ಎನ್ನುವುದಕ್ಕೆ ಅನಿಲ್ ದೇಶಪಾಂಡೆಯವರ ‘ಮೂರ್ಧನ್ಯ ತೇಜಸ್ಸಿನ ಕಿರಣ’ ಎಂಬ ಲೇಖನ ಉತ್ತಮ ಉದಾಹರಣೆ. ಹಳಬರ ಮತ್ತು ಹೊಸಬರ ಮಿಳಿತವಾಗಿರುವ ಈ ಸಂಪುಟವು ಬೇಂದ್ರೆ ಕುರಿತ ಅಧ್ಯಯನವನ್ನು ವಿಸ್ತರಿಸಿದೆ. ಪ್ರ: ಅಭಿನವ, ಬೆಂಗಳೂರು, ಪುಟಗಳು ೩೨೦, ಬೆಲೆ ₹ ೨೫೦