*ತುಂಬ ಹಳೆಯದಾದ ರಕ್ತಸಂಬಂಧಿಗಳು

ವ್ಯಾಸ ಮಹರ್ಷಿಯ ಇನ್ನೊಂದು ಹೆಸರೇ ಬಾದರಾಯಣ. ಈ ಬಾದರಾಯಣರು ದೇಶದ ಬಹುದೊಡ್ಡ ಮಹಾಕಾವ್ಯ ಮಹಾಭಾರತವನ್ನು ಬರೆದರು. ಮಹಾಭಾರತಚಂದ್ರವಂಶದ ರಾಜರ ಸಂಪೂರ್ಣ ಚರಿತ್ರೆಯನ್ನು ಒಳಗೊಂಡಿದೆ. ಕತೆ, ಕತೆಯೊಳಗೊಂದು ಉಪಕತೆ, ಅದೆಷ್ಟೋ ಸಂಬಂಧಗಳು, ಆ ಸಂಬಂಧಗಳಾದರೂ ಎಲ್ಲಿಯೂ ತಪ್ಪಿಹೋಗುವುದೇ ಇಲ್ಲ. ಧುತ್ತನೆ ಅದೆಲ್ಲಿಂದಲೋ ಅದ್ಯಾವಾಗಲೋ ಪ್ರತ್ಯಕ್ಷವಾಗಿಬಿಡುತ್ತವೆ. ಇಡೀ ಮಹಾಕಾವ್ಯ ಸಂಬಂಧಿಗಳ ಕಥನವೇ ಆಗಿದೆ. ಸ್ವತಃ ಬಾದರಾಯಣ ಕೂಡ ಒಬ್ಬ ಸಂಬಂಧಿಯೇ. ಹಾಗೆ ನೋಡಿದರೆ ಧೃತರಾಷ್ಟ್ರ, ಪಾಂಡು, ವಿದುರರು ಆತನ ಮಕ್ಕಳೇ ಆಗಿದ್ದಾರೆ. ಆ ಮಹಾಕಾವ್ಯದ ಯಾವುದೇ ಕನಿಷ್ಠ ಪಾತ್ರವನ್ನಾದರೂ ತೆಗೆದುಕೊಳ್ಳಿ. ಪ್ರಮುಖ ಪಾತ್ರಗಳೊಂದಿಗೆ ಅದರ ಸಂಬಂಧದ ಸುಳಿ ಬೆಸೆದೇ ಇರುತ್ತದೆ. ಇದು ಬಾದರಾಯಣ ಸಂಬಂಧ. ಮಹಾಭಾರತವೇ ಕುಟುಂಬದ ಕತೆ.
ಅಪರಿಚಿತರೊಬ್ಬರು ನಿಮ್ಮ ಮನೆಗೆ ಬಂದು ಅದ್ಯಾವುದೋ ನಿಮ್ಮ ಅಜ್ಜನ ಮುತ್ತಜನ ಕಾಲದ ಸಂಬಂಧವನ್ನು ಹೇಳಿಕೊಂಡು ಪರಿಚಯಿಸಿಕೊಂಡಾಗ ಇದ್ಯಾವುದೋ ಬಾದರಾಯಣ ಸಂಬಂಧ ಹೇಳಿಕೊಂಡು ವಕ್ಕರಿಸಿದ್ದಾನಲ್ಲ ಎಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಿಲ್ಲ. ಸಂದು ಸುಳಿ ಸುತ್ತಿ ಬಳಸಿ ಸಂಬಂಧ ಹೇಳುವುದಿದೆಯಲ್ಲ, ಅದೇ ಬಾದರಾಯಣ ಸಂಬಂಧ.