ಕಟ್ಟೀಮನಿ ನೀವು
ಸ್ವಂತಕ್ಕೆ ಮನೆ ಕಟ್ಟಿದಿರೋ ಇಲ್ಲವೋ
ಆದರೆ, ಕಟ್ಟುಗಳನ್ನೆಲ್ಲ ಮೆಟ್ಟಿ
ಮುರಿದಿಕ್ಕುವುದಕ್ಕೇ ಹುಟ್ಟಿ ಬಂದವರು
ನೀವು ಎಂಬುದಂತೂ ನಿಜ

ಮೊನ್ನೆ ಖಾನಾವಳಿಯ ನೀಲಾ ಸಿಕ್ಕಿದ್ದಳು
ಎಳ್ಳಷ್ಟೂ ಬದಲಾಗಿಲ್ಲ; ಇನ್ನಷ್ಟು
ಸೊರಗಿದ್ದಾಳೆ ಅಷ್ಟೇ
ಕಳೆದ ವಾರ ಹಳ್ಳಿಗೆ ಹೋದಾಗ
ಗ್ರಾಮ ಸೇವಿಕಾ ಭೆಟ್ಟಿ ಆಗಿದ್ದಳು
ಜ್ವಾಲಾಮುಖಿಯ ಮೇಲೆ ನಿಂತವಳಂತೆ
ಮಾತನಾಡಿದಳು

ಬೆಂಗಳೂರಿಗೊಂದು ಟಿಕೆಟ್ ಪಡೆದವರೆಲ್ಲ
ಕಿಸಿದದ್ದು ಏನು? ಅಂತೆ ಕಂತೆ ಸಂತೆ
ಎಲ್ಲ ಒದರಿಬಿಟ್ಟಳು

ವಿಕೇಂದ್ರೀಕರಣ ಆಗಿದ್ದು ನಿಜ
ಮೊದಲು ಗೌಡ ಒಬ್ಬ ಸುಲೀತಿದ್ದ
ಈಗ ಅವನ ತಳಿ ರಕ್ತಬೀಜಾಸುರ
ಆಗಿದೆ ಎಂದು ಅಲವತ್ತುಕೊಂಡಳು

ಜರತಾರಿ ಜಗದ್ಗುರುಗಳ ಜಗಳ
ಬೊಂಬಾಟ್ ಮಾರಾಯ್ರೆ ಮಠದ
ಆಸ್ತಿಗೆ ಬೀದಿ ನಾಯಿಗಳಂತೆ
ಕಚ್ಚಾಡುತ್ತಾರೆ

ಕಟ್ಟೀಮನಿ ನೀವು ಮುರಿದು
ಕಟ್ಟಬೇಕೆಂದಿದ್ದದ್ದು ಇನ್ನೇನೋ
ಆದರೆ ಜರಾಸಂಧ ಸಂಸ್ಕೃತಿಯ ಈ
ಅನಿಷ್ಟಗಳು ಅಜರಾ ಮರಣರು
ಎಂದು ತೋರಿಸಿ ಕೊಟ್ಟಿವೆ

ಇಂಥವನ್ನೆಲ್ಲ ಬಕ ಧ್ಯಾನದಲ್ಲಿ
ತೊಡಗಿ ಗಬಕ್ಕನೆ ಹಿಡಿದು
ನುಂಗಿ ಹಾಕಬೇಕು
ಆಗ ನಿಮಗೂ ಸಮಾಧಾನ
ನನಗೂ ಸಮಾಧಾನ
೧೭-೧೦-೯೯