ನವ್ಯ ಸಾಹಿತ್ಯ ತನ್ನ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಕತೆಗಳನ್ನು ಬರೆಯಲು ತೊಡಗಿದ ಪೂರ್ಣಚಂದ್ರತೇಜಸ್ವಿಯವರು ‘‘ಅಬಚೂರಿನ ಪೋಸ್ಟಾಫೀಸು’’ ಕಥಾ ಸಂಕಲನಕ್ಕೆ ‘‘ಹೊಸದಿಗಂತದ ಕಡೆಗೆ’’ ಎನ್ನುವ ಮುನ್ನುಡಿ ಬರೆಯುತ್ತ, ‘‘ಕನ್ನಡ ನವ್ಯ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಹೊಸ ದಿಕ್ಕಿನಲ್ಲಿ ನಾವೀಗ ಅನ್ವೇಷಿಸಬೇಕಾಗಿದೆ’’ ಎಂದು ಹೇಳಿದ್ದಾರೆ. ಇದನ್ನು ಲಕ್ಷಿಸಿ ಕೆಲವು ವಿಮರ್ಶಕರು ತೇಜಸ್ವಿಯವರನ್ನು ನವ್ಯೋತ್ತರ ಕಾಲದ ಶ್ರೇಷ್ಠ ಕತೆಗಾರ ಎಂದು ಗುರುತಿಸುತ್ತಾರೆ. ನವ್ಯದ ವ್ಯಾಖ್ಯೆ ವಿಮರ್ಶೆಯ ನಿಲುಕು- ನೆಲೆಯಲ್ಲಿ ನಿಷ್ಕೃಷ್ಟವಾಗಿ ನಿರ್ಣಯಿಸಲ್ಪಡುವವರೆಗೆ ಅವರನ್ನು ನವ್ಯರಲ್ಲೇ ಒಬ್ಬರೆಂದು ಪರಿಗಣಿಸುವುದು ಸೂಕ್ತ. ಏಕೆಂದರೆ ಒಬ್ಬ ವ್ಯಕ್ತಿ ತನ್ನ ಹೊಸತನದ ಬಗ್ಗೆ ತಾನು ಹೇಳಿಕೊಳ್ಳುವುದಕ್ಕಿಂತ ಇನ್ನೊಬ್ಬರು ಅದನ್ನು ಗುರುತಿಸಿದಾಗಲೆ ಬೆಲೆ ಬರುವುದು.
‘‘ಹುಲಿಯೂರಿನ ಸರಹದ್ದು’’ ತೇಜಸ್ವಿಯವರ ಮೊದಲ ಕಥಾ ಸಂಕಲನ. ಇಂದು ಈ ಎತ್ತರಕ್ಕೆ ಬೆಳೆದ ಸಾಹಿತಿಯೊಬ್ಬನ ಆರಂಭದ ಹೆಜ್ಜೆಗಳು ಇದರಲ್ಲಿ ಹೇಗೆ ಮೂಡಿವೆ ಎನ್ನುವುದರ ಪರಿಶೀಲನೆಯೇ ಇಲ್ಲಿನ ಪ್ರಯತ್ನ.
ಈ ಸಂಕಲನದಲ್ಲಿ ಒಟ್ಟು ಆರು ಕತೆಗಳಿವೆ. ಇವೆಲ್ಲವುಗಳಿಗೂ ಕೆಲವು ಸಾಮಾನ್ಯ ಲಕ್ಷಣಗಳಿವೆ. ಎಲ್ಲ ಕತೆಗಳ ಆರಂಭದಲ್ಲಿಯೂ ಪ್ರಸಿದ್ಧ ಕವಿಗಳ ಕಾವ್ಯದ ತುಣುಕುಗಳಿವೆ. ಈ ಕಾವ್ಯದ ತುಣುಕುಗಳು ಹೊರಡಿಸುವ ಭಾವಕ್ಕೂ ಕತೆ ಒಳಗೊಂಡಿರುವ ಒಟ್ಟೂ ತಿರುಳಿಗೂ ಸಾದೃಶ್ಯವಿದೆ. ಆದರೆ ಆ ಕಾವ್ಯದ ತುಣುಕುಗಳಿಗೇ ಕತೆಗಳನ್ನು ಅಳವಡಿಸಿ ಬರೆದದ್ದೆಂದರೆ ಸಾಹಸದ ಮಾತಾದೀತು. ಏಕೆಂದರೆ ಈ ಕತೆಗಳೆಲ್ಲ ಅನುಭವ ಸೂಕ್ಷ್ಮಾತಿಸೂಕ್ಷ್ಮ ಪದರುಗಳ ಆಚೆಯಿಂದ ಸಂವೇದನೆಗೊಂಡು ಮೂಡಿದುವಾಗಿವೆ. ನಿಸರ್ಗ ಸೌಂದರ್ಯ ಮತ್ತು ಅದರ ನಿಗೂಢತೆಯ ಕಡೆಗೆ ಕತೆಗಾರರಿಗೆ ಒಂದು ರೀತಿಯ ಗುಮಾನಿ ಇರುವುದರ ಜೊತೆಜೊತೆಯಲ್ಲಿಯೇ ವಿಶಿಷ್ಟವಾದ ಹಾಸ್ಯ ಪ್ರಜ್ಞೆ, ಸಂವಿಧಾನದ ಸಂಪೂರ್ಣ ಪರಿಜ್ಞಾನ ಮತ್ತು ಹೇಳುವಲ್ಲಿ ತಡವರಿಸುವಿಕೆ ಇಲ್ಲದಿರುವುದು, ಬೆಳೆದ ಮಣ್ಣಿಗೆ ಸಮೀಪವಾದ ಭಾಷೆಯನ್ನೇ ಉಪಯೋಗಿಸಿಕೊಂಡದ್ದು ಇವೆಲ್ಲ ಇದೊಂದು ಯಶಸ್ವಿ ಕಥಾಸಂಕಲನ ಎಂದು ಒಪ್ಪಿಕೊಳ್ಳಲು ಇರುವ ಕಚ್ಚಾ ಸಾಮಗ್ರಿಗಳು.
ಸಂಕಲನದ ಮೊದಲ ಕತೆ- ಲಿಂಗ ಬಂದ.
ಆರಂಭದಲ್ಲಿ ಕುವೆಂಪುರವರ ಪದ್ಯದ ತುಣುಕಿದೆ. ಕತೆಯ ಪ್ರಾರಂಭದ ಹೊತ್ತಿಗೆ ಹತ್ತು ವರುಷದ ಕಿಟ್ಟಿ ಗೋವಿನ ಕಥೆಯಲ್ಲಿ ಅರ್ಧವನ್ನು ಓದಿ ಮುಗಿಸಿ, ‘‘ಹಾಳು ಹುಲಿ, ಅಲ್ಲಾ, ಈ ಹಸೂನ ತಿನ್ಬೇಕೂ ಅಂತ ಮಾಡಿದೆಯಲ್ಲ’’ ಎಂದು ಯೋಚಿಸುತ್ತ ಕುಳಿತಿದ್ದ. ಇಲ್ಲಿ ಹುಲಿ ಬೆದರಿಕೆ, ಕ್ರೂರತೆಯನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಮಲೆನಾಡಿನ ಮಳೆಗಾಲದ ವರ್ಣನೆ ಆರೋಗ್ಯಕರವಾಗಿ ಬಂದಿದೆ. ಈ ವಿವರಗಳೇ ಕಥೆಯ ಬೆಳವಣಿಗೆಯಲ್ಲಿ ಮಹತ್ವದ ಸಂಗತಿಗಳೂ ಆಗುತ್ತವೆ.
ಏಕಾಂತ, ರಾತ್ರಿ, ಮಳೆ, ಮಿಂಚು, ಗುಡುಗು ಇತ್ಯಾದಿ ವರ್ಣನೆಗಳಿಂದ ಒಂದು ನಿಗೂಢ ವಾತಾವರಣವನ್ನೇ ಸೃಷ್ಟಿಸಿ, ಇಂಥವು ಮನುಷ್ಯರ ತಲೆಯಲ್ಲಿ ಇಲ್ಲದ ವಿಚಾರಗಳನ್ನು, ಆಲೋಚನೆಗಳನ್ನು ನುಗ್ಗಿಸುತ್ತವೆ ಎಂದು ನಿರ್ಣಯಿಸುವ ಕತೆಗಾರರು ಆಯ್ದುಕೊಂಡ ವಸ್ತು ವೈಜ್ಞಾನಿಕವಾಗಿಯೂ, ತಾಂತ್ರಿಕವಾಗಿಯೂ ಸುಸಂಬದ್ಧವಾದುದು. ಹಿರಿಯರು ಮಕ್ಕಳಿಗೆ ಹೆದರಿಸಲಿಕ್ಕೆ ಇಲ್ಲದ ಕತೆ ಹುಟ್ಟಿಸಿ ಹೇಳುವುದರಿಂದ ಎಂತಹ ಅನಾಹುತ ಸಂಭವಿಸಬಹುದೆಂಬ ಕಲಾತ್ಮಕ ಎಚ್ಚರಿಕೆಯೂ ಇಲ್ಲಿದೆ.
ಕಿಟ್ಟಿಗೆ ತಾನು ಲಿಂಗನಿಂದ ಕಥೆ ಕೇಳಿದಾಗ ಹೆದರಿದುದಕ್ಕಿಂತಲೂ ಹೆಚ್ಚಾಗಿ ಸುಭದ್ರ ಈಗ ಹೆದರಿರುವುದನ್ನು ನೋಡಿ ಕೊಂಚ ಖುಷಿಯಾಯಿತು ಎನ್ನುವಲ್ಲಿ ಮಾನವೀಯ ಸ್ವಭಾವಕ್ಕೆ ಹಿಡಿದ ಕನ್ನಡಿ ಇದು ಎಂದು ಧಾರಾಳವಾಗಿ ಹೇಳಬಹುದು.
ಹುಡುಗರು ಏನಾದರೂ ಪ್ರಶ್ನೆ ಮಾಡಿದರೆ ನಾವು ಅದರ ಹಿನ್ನೆಲೆಯನ್ನು ಅರಿಯದೆ ನಮ್ಮದೇ ಗುಂಗಿನಲ್ಲಿದ್ದು ಉತ್ತರಿಸುವುದರಿಂದ ಆಗಬಹುದಾದ ಅಪಾಯದ ಮುನ್ನೆಚ್ಚರಿಕೆಯೂ ಇದೆ. – ಶಿಶು ರಾಕ್ಷಸಾಕಾರವಾಗಿ ಬೆಳೆದ ಕಥೆಯನ್ನು ಕಿಟ್ಟಿಯಿಂದ ಕೇಳಿದ ಸುಭದ್ರ ಹೊರಗೆ ಹೋದ ತಂದೆ ಮನೆಗೆ ಮರಳಿದ ಕೂಡಲೆ, ‘ಏನಣ್ಣಾ, ಸದಾನಂದ ಬೆಳಿತಾನ?’ ಎಂದು ಕೇಳಿದಳು. ಅವರು ಅವಸರದಿಂದ ಹೌದು ಹೌದು ಎನ್ನುತ್ತಾ, ಲೋ ಕಿಟ್ಟಿ, ನಡಿಯೋ, ಓದೋ ಎಂದು ಹೇಳಿದರು. ಹೌದು ಎಂದುದನ್ನು ಕೇಳಿ ಸುಭದ್ರೆ ಮತ್ತೆ ಅಮ್ಮನ ಸೆರಗನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡಳು ಎನ್ನುವಲ್ಲಿ ಮೇಲೆ ಹೇಳಿದ ಅಪಾಯವನ್ನು ಗುರುತಿಸಬಹುದು.
ಕಿಟ್ಟಿಯ ಪ್ರಜ್ಞಾಪಾತಳಿಯಲ್ಲಿ ನೆನಪಾಗಿ ತೇಲುವ ಲಿಂಗನ ನಿರ್ಗಮನ ಮತ್ತು ಆಗಮನಗಳ ಮಧ್ಯೆ ಕತೆ ಹಬ್ಬಿಕೊಳ್ಳುತ್ತದೆ. ಅಜ್ಞಾನ ಮೂಲವಾದ ಭಯದಿಂದ ಭದ್ರತೆಯ ಕಡೆಗೆ ಹುಡುಗರ ಚಲನೆಯನ್ನು ಲಿಂಗನ ಬರುವು ಸಾಂಕೇತಿಸುತ್ತದೆ. ಚೋದ್ಯವೆಂದರೆ ಇಲ್ಲಿ ಲಿಂಗನೂ ಅಜ್ಞಾನದ ಸಂಕೇತ. ಅಜ್ಞಾನದ ಬರುವಿಕೆಯನ್ನೇ ಭದ್ರತೆಯೆಂದು ಒಪ್ಪಿಕೊಳ್ಳುವುದನ್ನು ತೋರಿಸುವುದರ ಮೂಲಕ ಮೂಲಭೂತವಾದ ಸಾಮಾಜಿಕ ದುರಂತವೊಂದನ್ನು ಇಲ್ಲಿ ಧ್ವನಿಸಿದ್ದಾರೆ.
ಇಲ್ಲಿಯ ಇಡೀ ಕಥಾವಸ್ತುವಿನ ತಿರುಳನ್ನು ಮಾನವನ ಆದಿಯ ಜೀವನ, ಆಲೋಚನಾ ವಿಧಾನಗಳಿಗೆ ಆರೋಪಿಸಿಯೂ ನೋಡಬಹುದು. ಚಿಕ್ಕವರಾದ ಕಿಟ್ಟು ಹಾಗೂ ಸುಭದ್ರರನ್ನು ಮಾನಸಿಕ ಸ್ತರದ ಅಳತೆಗೋಲಿನಿಂದ ಸಾವಿರ ಸಾವಿರ ವರ್ಷಗಳ ಹಿಂದಿನ ನಮ್ಮ ಪೂರ್ವಜರ ಸ್ಥಾನದಲ್ಲಿ ನಿಲ್ಲಿಸಿದಾಗ ಸತ್ಯಾನ್ವೇಷಣೆಯ ಹಂಬಲ, ಜಡ, ಜೀವ, ಜೀವನ, ಜಗತ್ತು ಸಾರ ಪ್ರಪಂಚದ ಸ್ಥಿತಿಗತಿಗಳನ್ನು ಅರಿಯುವಲ್ಲಿನ ಅವಸರ, ತಾನು ಯಾರು? ಎಲ್ಲಿಂದ ಬಂದೆ? ಜಗತ್ತಿಗೂ ತನಗೂ ಇರುವ ಸಂಬಂಧವೆಂಥದ್ದು? ಇತ್ಯಾದಿ ಗೋಜಲು ಗೋಜಲಾದ ಸಮಸ್ಯೆಗಳನ್ನು ತನ್ನಂತೆ ಬಿಡಿಸಿಕೊಳ್ಳುವ ಪ್ರಯತ್ನ ಇವೆಲ್ಲ ಸಾಮಾನ್ಯ ಸಂಗತಿಗಳಾಗುತ್ತವೆ. ತನ್ನ ಮಾನಸಿಕ ತೃಪ್ತಿಗೆ ಒಳಮನಸ್ಸಿನ ಒತ್ತಾಯಕ್ಕೆ ಮಣಿದು ತನ್ನ ಬದುಕಿನ ಭದ್ರತೆಗಾಗಿ ತನ್ನ ಪರಿಸರ ಪರಿಸ್ಥಿತಿಗಳಲ್ಲಿನ ನಿಗೂಢತೆಯನ್ನು ಬಿಡಿಸುವ ಪ್ರಯತ್ನವೇ ಸತ್ಯಶೋಧದ ಆರಭಿಕ ಹಂತಗಳು. ಈ ರೀತಿಯ ತರ್ಕಶಾಸ್ತ್ರದ ಮಹಾಸತ್ಯವೊಂದನ್ನು ಕಥಾರೂಪದಲ್ಲೂ ಶುಷ್ಕವಾಗಿಸದೆ ಕೇವಲ ವಿವರಗಳನ್ನು ಎಳೆ ಎಳೆಯಾಗಿ ಬಿಡಿಸಿ ಇಡುವುದರ ಮೂಲಕ ಕಲಾತ್ಮಕವಾಗಿಸಿದ್ದಾರೆ ಕತೆಗಾರರು.
ಎರಡನೆಯ ಕತೆ,- ಪಂಜ್ರೊಳ್ಳಿ ಪಿಶಾಚಿಯ ಸವಾಲು
ಈ ಕತೆಯ ಆರಂಭದಲ್ಲಿ ಕುಮಾರವ್ಯಾಸ ಭಾರತದ ಒಂದು ಪದ್ಯವಿದೆ. ಕತೆಯು ಧ್ವನಿಸುವ ಒಟ್ಟು ಅರ್ಥವನ್ನು ಅರಿವಿನ ತೆಕ್ಕೆಗೆ ಒಗ್ಗಿಸಿಕೊಳ್ಳಲು ಈ ಪದ್ಯದ ತುಣುಕಿನ ನೆರವೂ ಬೇಕಾಗಬಹುದು. ಇದೊಂದು ಸಾಮಾನ್ಯ ಕತೆಯಾದರೂ ಕತೆಗಾರರ ನವಿರಾದ ಹಾಸ್ಯಪ್ರಜ್ಞೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಕತೆಯನ್ನು ಓದಿ ಮುಗಿಸಿದ ಮೇಲೆ ನಗದೆ ಇರಲು ಸಾಧ್ಯವಾಗುವುದಿಲ್ಲ.
ಮೂರನೆ ಕತೆ,- ಗುಡುಗು ಹೇಳಿದ್ದೇನು ?
ಆರಂಭದಲ್ಲಿ ಕುವೆಂಪುರವರ ಪದ್ಯವಿದೆ. ಪೂರ್ಣಚಂದ್ರತೇಜಸ್ವಿಯವರು ಪೂರ್ಣಪ್ರಮಾಣದ ಕತೆಗಾರರಾಗಿ ಬೆಳೆದು ನಿಂತಿದ್ದನ್ನು ಈ ಕತೆಯಲ್ಲಿ ನಾವು ಗುರುತಿಸಬಹುದು. ಕತೆಯ ತಂತ್ರ ಅತ್ಯಂತ ವಿಶಿಷ್ಟವಾದುದು. ತೀರ ಸರಳ ನಿರೂಪಣೆಯ ಮೂಲಕ ಮಾನವೀಯ ಮನಸ್ಸಿನ ಒಳಪದರಗಳನ್ನು ಎಳೆಎಳೆಯಾಗಿ ಬಿಡಿಸಿ ತೋರಿಸುವ ತೇಜಸ್ವಿಯವರ ಚಮತ್ಕಾರ ಮೆಚ್ಚುವಂಥದ್ದು. ಕತೆಯೊಳಗಿನ ಸೋಮ, ಲಕ್ಕರು ಕೇವಲ ಕತೆಗೆ ಮಾತ್ರ ಸೀಮೀತವಾದವರಲ್ಲ. ಪ್ರತಿಯೊಬ್ಬ ವ್ಯಕ್ತಿಯ ಅಂತರಗದಲ್ಲೂ ಅವರು ಅವಿತಿದ್ದಾರೆ ಎಂದು ಹೇಳುವ ಕತೆಗಾರರು ಮಾನವೀಯ ಮನಸ್ಸಿನ ದ್ವಂದ್ವ ಇಬ್ಬಂದಿ ನೀತಿಯನ್ನು ಬೆಳಕಿಗೆ ಒಡ್ಡಿದ್ದಾರೆ. ಕತೆಯ ಅಂತ್ಯವನ್ನು ಓದುಗರು ಆರಂಭದಲ್ಲಿಯೇ ಊಹಿಸಬಹುದಾದರೂ ಅದನ್ನು ಮೀರಿದ ರಹಸ್ಯವನ್ನು ಕತೆಯುದ್ದಕ್ಕೂ ಕಾಪಾಡಿಕೊಂಡು ಬಂದು ಕೊನೆಯ ಕೆಲವೇ ಸಾಲುಗಳಲ್ಲಿ ಸ್ಫೋಟಗೊಳಿಸುತ್ತಾರೆ. ಇಲ್ಲಿಯೇ ನಾವು ಅವರ ಕಥಾತಂತ್ರದ ಸಿದ್ಧಿಯ ಶಿಖರವನ್ನು ಕಾಣಬಹುದು. ಈ ದೃಷ್ಟಿಯಿಂದ ಸಂಕಲನದ ಅತ್ಯುತ್ತಮ ಕತೆಯೆಂದು ಇದನ್ನು ಹೆಸರಿಸಬಹುದು.
ಕಾಲಬುಡದಲ್ಲಿ ನಡೆಯುತ್ತಿರುವ ಮಾನವರ ಮತ್ತು ತಲೆಯ ಎಡೆಯಲ್ಲಿ ನಡೆಯುತ್ತಿರುವ ಮೇಘದ ಸರ್ವವ್ಯಾಪಾರಗಳಿಗೂ ಸಾಕ್ಷೀಪ್ರಜ್ಞೆಯಾಗಿ ಶಿಖರ ನಿಂತಿತ್ತು ಎಂದು ಕತೆಯ ಮೊದಲ ಭಾಗದ ಅಂತ್ಯದಲ್ಲಿ ಹೇಳಿದ ಕತೆಗಾರರು ಮುಂದೆ ನಡೆಯುತ್ತಲಿರುವ ಘಟನೆಗಳಿಗೆ ಒಂದು ಸ್ಥಾಯಿಭಿತ್ತಿಯನ್ನು ನಿರ್ಮಿುಸಿಕೊಂಡಿದ್ದಾರೆ. ತೇಜಸ್ವಿಯವರ ಮುಂದಿನ ಸಾಹಿತ್ಯ ಕೃತಿಗಳಲ್ಲಿ ವಿಮರ್ಶಕರು ಎತ್ತಿ ತೋರಿಸಿದ ‘‘ಚಿರವಾಸ್ತವ’’ದ ಸ್ಥಾಯೀಭಿತ್ತಿಯ ಬೆಳವಣಿಗೆಯನ್ನು ಆ ಕತೆಯಲ್ಲಿ ಬೀಜರೂಪದಲ್ಲಿ ನೋಡಬಹುದು,
ನಾಲ್ಕನೆಯ ಕತೆ,- ಊರ್ವಶಿ
ಆರಂಭದಲ್ಲಿ ಋಗ್ವೇದದ ಒಂದು ಉಕ್ತಿ ಇದೆ. ಈ ಕತೆಯನ್ನು ಶಾಪ, ವಿರಹ, ಮಿಳನ- ಎಂದು ಮೂರು ಭಾಗ ಮಾಡಿದ್ದಾರೆ. ಮೊದಲ ಕತೆ ‘‘ಲಿಂಗ’’ ಬಂದ ಅದರ ಮುಂದಿರುವ ತರ್ಕ, ತಿಳಿವಳಿಕೆಗಳೆಲ್ಲ ಈ ಕತೆಯಲ್ಲೂ ಮುಂದುವರಿದಿವೆ. ಹಾವು ಕಂಡು ಹೆದರಿದವನು ಹಗ್ಗ ಕಂಡರೂ ಹೆದರುತ್ತಾನೆ ಎನ್ನುವುದು ಸುಳ್ಳಲ್ಲ. ಕತೆಯಲ್ಲಿನ ಸೋಮು ನಾಯಿಯಿಂದ ಕಡಿಸಿಕೊಂಡವನು. ಹುಚ್ಚುನಾಯಿಯಿಂದ ಕಡಿಸಿಕೊಂಡವರು ಎಂತಹ ಸಾವನ್ನು ಅನುಭವಿಸತ್ತಾರೆ ಎನ್ನುವುದನ್ನು ಡಾಕ್ಟರರಿಂದ ಸಾಭಿನಯವಾಗಿ ನೋಡಿ, ಕೇಳಿ ಹೆದರುತ್ತಾನೆ. ಒಂಬತ್ತು ದಿನಗಳ ವರೆಗೆ ಅವನ ಕಣ್ಣಿಗೆ ಬಿದ್ದ ನಾಯಿ ಹತ್ತನೆಯ ದಿನ ಅವನ ಕಣ್ಣಿಗೆ ಕಾಣಿಸುವುದಿಲ್ಲ. ಹುಚ್ಚು ಹಿಡಿದು ಸತ್ತೇ ಹೋಯಿತೇನೋ ಎಂದು ಬಗೆದು ಇವನು ಹುಚ್ಚುಚ್ಚಾಗಿ ಚಿಂತಿಸುತ್ತಾನೆ.
ಮಳೆಗಾಲದ ಮಿಂಚು, ಗುಡುಗಿನಲ್ಲಿ ಹುಚ್ಚು ನಾಯಿಯ ಹುಚ್ಚು ಉಲ್ಭಣಿಸುತ್ತದೆ ಎಂದು ಗೊತ್ತಿದ್ದ ಸೋಮುವಿಗೆ ಕರಿಯ ಮೋಡ ಯಮನ ದೈತ್ಯ ಕೋಣವಾಗಿ ಕಂಡಿತು ಎನ್ನುವ ಕತೆಗಾರರು ಅವನ ಮುಂದಿನ ಸ್ಥಿತಿಯನ್ನು ‘‘ಹೌದು, ಅದೋ ಅಲ್ಲಿ ಮೋಡ ಹಿಗ್ಗುತ್ತ….. ಸಾಯಬೇಕು’’ ಈ ಮಾತುಗಳಲ್ಲಿ ಪರಿಣಾಮಕಾರಿಯಾಗಿ ಮೂಡಿಸಿದ್ದಾರೆ.
ಕತೆಯ ಆರಂಭದಲ್ಲಿ ಬರುವ ಊರ್ವಶಿ ಉರ್ಫ್ ಸುಭದ್ರ ಹಾಗೂ ಸೋಮು ಇವರ ಸಂಬಂಧದ ಕಲ್ಪನೆ ಬದುಕಿನ ಆಕರ್ಷಣೆಯನ್ನು ಸೂಚಿಸುತ್ತದೆ. ಸಾವಿನ ಸಾನ್ನಿಧ್ಯದಲ್ಲಿಯೂ ಬದುಕಿನ ಬಗಗಿರುವ ಅದಮ್ಯ ಪ್ರೀತಿ ಮಾನವ ಜನಾಂಗದ ದೊಡ್ಡ ವೈಚಿತ್ರ್ಯವಾಗಿ ಕಂಡಿರಬೇಕು ತತ್ವಜ್ಞಾನಿ ತೇಜಸ್ವಿಯವರಿಗೆ. ಬದುಕಿನ ಬಗೆಗಿನ ತೀವ್ರ ಆಸಕ್ತಿಯೇ ಸಾವನ್ನೂ ಮುಂದಕ್ಕೆ ತಳ್ಳಲು ಶಕ್ಯ ಎನ್ನುವುದನ್ನು ಕತೆ ಸೂಚಿಸುತ್ತಿರುವುದರಿಂದ ಬದುಕಿನ ಪ್ರತೀಕವಾಗಿ ಊರ್ವಶಿ ಹೆಸರನ್ನು ಕತೆಯ ಶಿರೋನಾಮೆಯಾಗಿ ಇಟ್ಟಿದ್ದು ಔಚಿತ್ಯಪೂರ್ಣವಾಗಿದೆ.
ಐದನೆಯ ಕತೆ,- ಹುಲಿಯೂರಿನ ಸರಹದ್ದು
ಈ ಕತೆಯ ಆರಂಭದಲ್ಲಿ ಅಡಿಗರ ಕವನದ ಒಂದು ತುಣುಕಿದೆ. ಹುಲಿಯೂರು ಎನ್ನುವುದು ತೀರಾ ಸಾಂಕೇತಿಕವಾದ ಹೆಸರು. ಪ್ರತಿಯೊಂದು ಊರಿನಲ್ಲಿಯೂ ಹುಲಿಯಂಥವರೂ ಇರುತ್ತಾರೆ, ಹಸುವಿನಂಥವರೂ ಇರುತ್ತಾರೆ. ಹುಲಿಯೂರಿನ ವ್ಯಾಪ್ತಿ ಎನ್ನುವುದು ವ್ಯವಸ್ಥೆಯನ್ನು ಪ್ರತಿನಿಧಿಸಿದರೆ ಅದರ ಸರಹದ್ದನ್ನು ದಾಟಿ ಹೋಗುವುದು ಹೊಸ ದಿಗಂತದತ್ತ ಇಟ್ಟ ಹೆಜ್ಜೆಯ ಸಂಕೇತವೂ ಹೌದು. ಬದುಕಿನ ರೀತಿಯೇ ವಿಚಿತ್ರ. ಇಲ್ಲಿ ನಾವು ನಮಗಾಗಿ ಬದುಕುತ್ತಿಲ್ಲ. ಬೇರಾರಿಗಾಗಿಯೋ ಎನ್ನುವ ಸತ್ಯದ ಅರಿವಾದಾಗ ಆಗುವ ಚಡಪಡಿಕೆ ಅತಿ ಸೂಕ್ಷ್ಮವಾದುದು. ಕಥಾನಾಯಕ ಸೋಮುವಿಗೆ ಅದರ ಅರಿವಾಗಿದೆ. ನಾನು ಈ ಅಪ್ಪನಿಗಾಗಿ ಬದುಕುತ್ತಿದ್ದೇನೆ. ಅವನು ಅವನಜ್ಜನಿಗಾಗಿ, ನನ್ನ ಮಗ ನನಗಾಗಿ. ಅಯ್ಯೋ ಈ ಹುಲಿಯೂರಿನ ಸರಹದ್ದಿನಲ್ಲಿ ಒಂದು ಇನ್ನೊಂದಕ್ಕಾಗಿ ಬದುಕಿದೆ. ಗಾಳಿ ಕೂಡ ಈ ಕಾಡಿನ ಮಂಗನಬಳ್ಳಿ ಗಿಜರಿನಲ್ಲಿ ಕೈಗೆ ಬೇಡಿ ಹಾಕಿಸಿಕೊಂಡ ಕೈದಿ. ಈ ಅರಿವೇ ಅವನನ್ನು ವ್ಯವಸ್ಥೆಯಿಂದ ಸಿಡಿದು ನಿಲ್ಲಲು ಪ್ರಚೋದಿಸುತ್ತದೆ. ಜೊತೆಗೆ ಈ ಹುಲಿಯೂರಿನ ಪಿಶಾಚ ಪರಿಧಿಯಿಂದ ಸೃಷ್ಟಿಯನ್ನು ಪಾರು ಮಾಡಬೇಕು ಎನ್ನುವ ನಿರ್ಧಾರ ಮೂಡುತ್ತದೆ.
ಸೋಮುವೇ ಇಲ್ಲಿ ಆದರ್ಶದ ಪ್ರತೀಕ. ಅವನ ಆದರ್ಶಕ್ಕೆ ಸಂಪ್ರದಾಯ, ಪರಂಪರೆ, ವ್ಯವಸ್ಥೆ, ದಬ್ಬಾಳಿಕೆಗಳೆಂಬ ಗರುಡನ ಕೊಕ್ಕೆ ಉಗುರುಗಳು ಚುಚ್ಚಿದಾಗಲೇ ಆದರ್ಶವನ್ನು ಬಿಟ್ಟು ಬಹುದೂರ ಓಡುವವನಂತೆ ಚಿತ್ರಿಸಲ್ಪಟ್ಟು ಕ್ರಾಂತಿ ಹುಟ್ಟುವ ಸಂದರ್ಭ ಹೇಗೆ ಎಂಬುದನ್ನು ವಾಚ್ಯವಲ್ಲದ ರೀತಿಯಲ್ಲಿ ಸುಂದರವಾಗಿ ಹೇಳಿದ್ದಾರೆ. ರಕ್ತದಿಂದ ಕೆಂಪಾದ ಗರುಡನ ಬಾಯಿು, ಕೆಂಪಾದ ಉಗುರುಗಳು ಇವೆಲ್ಲ ಕ್ರಾಂತಿಯನ್ನು ನಿರ್ದೇಶಿಸುತ್ತವೆ.
ಇಲ್ಲಿ ಕತೆಯ ಪದರಗಳು ಬಿಚ್ಚಿಕೊಳ್ಳುವುದು ಸೋಮುವಿನ ಪ್ರಜ್ಞೆಯ ಮುಖಾಂತರ. ಸಮಷ್ಟಿ ಶೋಷಣೆಯ ವಿರುದ್ಧ ವ್ಯಷ್ಟಿ ಮನಸ್ಸಿನ ಪ್ರತಿಕ್ರಿಯೆ ಈ ಕತೆ.
ಲೇಖಕರ ಹೆಚ್ಚಳ ಇರುವುದು ಅವರು ಸೋಮುವನ್ನು ವ್ಯವಸ್ಥೆಗೆ ಬಲಿಯಾಗಿಸದೆ ಅದರ ವಿರುದ್ಧ ಸಿಡಿದು ನಿಲ್ಲಿಸಿ ಹೊಸ ದಿಗಂತದತ್ತ ಅವನನ್ನು ದಾರಿಗೂಡಿಸಿದುದರಲ್ಲಿ.
ಸಂಕಲನದ ಕೊನೆಯ ಕತೆ,- ಗಾಂಧೀಜಿಯ ದೆಸೆಯಿಂದ
ಆರಂಭದಲ್ಲಿ ಬೇಂದ್ರೆಯವರ ಕವನದ ಎರಡು ಸಾಲುಗಳಿವೆ. ಗಾಂಧೀಜಿಯ ಹಾಗೇ ಆಗಲಿ ತನ್ನ ಮಗ ಎಂದು ಮೋಹನದಾಸನೆಂದು ಹೆಸರಿಟ್ಟ ಗುಂಡೇಗೌಡ ತಾನು ಮಾತ್ರ ಕರಮಚಂದ ಗಾಂಧಿ ಆಗಲಿಕ್ಕೆ ಪ್ರಯತ್ನಿಸಲಿಲ್ಲ. ಲಕ್ಷ್ಮಮ್ಮ ಪುತಳಾಬಾಯಿ ಆಗಲಿಲ್ಲ. ಗಾಂಧೀಜಿಯ ಹಾಗೇ ಆಗಬೇಕು ತಾನು ಎಂದು ಪ್ರಯತ್ನಿಸಿದ ಮೋಹನದಾಸ ಕೆ.ಜಿ. ಯಾವ ರೀತಿ ನಿರಾಶನಾಗಬೇಕಾಗುತ್ತದೆ ಎನ್ನುವುದನ್ನು ಅತ್ಯಂತ ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಕತೆಯ ಮಧ್ಯದಲ್ಲಿ ಮೋಹನದಾಸನ ನೆನಪಿನಲ್ಲಿ ಸುಳಿಯುವ ಶಾಂತಿಯ ಪ್ರಸಂಗ ಅನವಶ್ಯಕ ಎಂದು ಅನಿಸಿದರೂ ಕೊನೆಯಲ್ಲಿ ಗುಂಡೇಗೌಡ, ‘‘ಲೇ ನಿನ್ನ ಮಗ ನಾಳೆ ಯಾವಳ ಜೊತೆನಾದರೂ ಹಾದರ ಮಾಡಿ ಕಾಗದ ಬರೀದಿದ್ದರೆ ಕೇಳು’’ ಎನ್ನುವುದರ ಹಿನ್ನೆಲೆಯಲ್ಲಿ ನೋಡಿದಾಗ ಅರ್ಥಪೂರ್ಣವಾಗಿ ಕಾಣುತ್ತದೆ.
ಸಂಕಲನದ ಆರು ಕತೆಗಳೂ ಆರು ದಿಕ್ಕುಗಳತ್ತ ಬೆರಳು ತೋರಿಸುತ್ತವೆ. ಲೇಖಕರೇ ಅಂದುಕೊಂಡಂತೆ ಅವರ ಬದುಕಿನಲ್ಲಿ ಪ್ರಯೋಗಶೀಲತೆಯನ್ನು ಇದು ತೋರಿಸಿಕೊಡಬಹುದು. ಈ ದೃಷ್ಟಿಯಿಂದ ಸಂಕಲನದ ಆರು ಕತೆಗಳಲ್ಲಿ ಯಾವ ಹೆಸರನ್ನಾದರೂ ಇಡೀ ಸಂಕಲನಕ್ಕೆ ಇಡಬಹುದಾಗಿತ್ತು. ಆದರೆ ಹುಲಿಯೂರಿನ ಸರಹದ್ದು ಲೇಖಕರ ಹೊಸ ದಿಗಂತದತ್ತ ಹೆಜ್ಜೆಯಿಡುವ ನಿರ್ಧಾರವನ್ನು ಪ್ರತಿನಿಧಿಸುವುದರಿಂದ ಅವರ ವ್ಯಕ್ತಿಗತ ಸನ್ನಿವೇಶ, ಸಂದರ್ಭಗಳಲ್ಲಿ ಔಚಿತ್ಯಪೂರ್ಣವಾಗಿ ತೋರುತ್ತದೆ.