ನೇಮಯ್ಯನದು ಇದು ಮರುಹುಟ್ಟು ಎಂದು ಹೊಳೆಸಾಲಿನವರು ಮಾತನಾಡಿಕೊಳ್ಳುತ್ತಾರೆ. ತನ್ನ ಬಗ್ಗೆ ಈ ಜನ ಹೀಗೆಲ್ಲ ಮಾತನಾಡುತ್ತಾರೆ ಎಂಬುದು ಸ್ವತಃ ನೇಮಯ್ಯನಿಗೇ ಗೊತ್ತಿರಲಿಲ್ಲ. ಈ ನೇಮಯ್ಯನನ್ನು ಒಂದು ಪದದಲ್ಲಿ ಹೇಳಬೇಕೆಂದರೆ ಅದು ಸಾಧ್ಯವೇ ಇಲ್ಲ. ವೃತ್ತಿಯಿಂದ ಹೇಳೋಣವೆ? ಒಂದೆಕರೆಯಷ್ಟು ಬಾಗಾಯ್ತ ಇತ್ತು. ಹೀಗಾಗಿ ಅವನನ್ನು ರೈತ ಎನ್ನಬಹುದೆ? ಊರಲ್ಲಿಯ ಮಾಸ್ತಿಮನೆಯ ಪೂಜೆಯನ್ನು ಅವನೇ ಮಾಡಿಕೊಂಡು ಬಂದಿದ್ದ. ಅಂದರೆ ಅವನನ್ನು ಪೂಜಾರಿ ಎನ್ನಬಹುದೆ? ಊರಲ್ಲಿಯ ಮಕ್ಕಳಿಗೆ ಮುದುಕರಿಗೆ ದೆವ್ವದ ಕಾಟ ಇದೆ ಎಂದು ಯಾರಾದರೂ ಅವನ ಬಳಿಗೆ ಬಂದರೆ ಅವನು ಅವರಿಗೆ ಮಂತ್ರಿಸಿದ ಬೂದಿಯನ್ನು, ತಾಯಿತವನ್ನು ಕೊಡುತ್ತಿದ್ದ. ಅಂದರೆ ಅವನು ಮಂತ್ರವಾದಿಯೆ? ಕಡಲಿಗೆ ಹೋಗುವವರಿಗೆ, ಹೊಳೆಯಲ್ಲಿ ರಂಪಣಿ ಬಿಡುವವರು ಬಂದರೆ ಅವರೆದುರಿಗೆ ಕವಡೆ ಮಂತ್ರಿಸಿ ಎಸೆದು ಅಕ್ಕಿಯನ್ನು ಅರಸಿಣ ಮತ್ತು ಕುಂಕುಮದಲ್ಲಿ ಉರುಳಾಡಿಸಿ ಅವರಿಗೆ ಕೊಡುತ್ತಿದ್ದ. ಅಷ್ಟದಿಕ್ಕುಗಳಲ್ಲಿ ಒಂದನ್ನು ಹೇಳಿ, ಆ ದಿಕ್ಕಿಗೆ ಮುಖಮಾಡಿ ಹೊರಡಿ ಎನ್ನುತ್ತಿದ್ದ. ಅವನ ಭವಿಷ್ಯಕ್ಕೆ ಅವರ ಬಲೆಗೆ ಮೀನು ಬೀಳುತ್ತಿದ್ದರೆ ಅವನನ್ನು ಭವಿಷ್ಯ ನುಡಿವ ಜೋತಿಷಿ ಎನ್ನುವುದೇ? ಇನ್ನೂ ಹೆಚ್ಚೆಂದರ ಅಕ್ಕಪಕ್ಕದ ತಾಲೂಕುಗಳಿಂದ ಅವನನ್ನು ಹುಡುಕಿಕೊಂಡು ಜನರು ಬರುತ್ತಿದ್ದರು. ಅಲ್ಲೆಲ್ಲ ಹೋಗಿ ಇವನು ಮೋಡಿ ಕೀಳುವುದರಲ್ಲಿ ಹೆಸರುವಾಸಿಯಾಗಿದ್ದ. ಈ ವಿದ್ಯೆಗೆ ಅವನಿಗೆ ಏನೆಂದು ಕರೆಯುವುದು?
ಇಂಥ ನೇಮಯ್ಯ ತನ್ನ ಮನೆಗೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಬರುವವರಿಗೆ, ಈ ನೇಮಯ್ಯನೆಂಬವನು ಸುಮ್ಮನೇ ಆದವನೆ? ನೇಮದಲ್ಲೇ ಮುಳುಗೆದ್ದು ಪುನೀತನಾದವನು' ಎಂದು ಯಕ್ಷಗಾನದ ಶೈಲಿಯಲ್ಲಿ ಹೇಳುತ್ತಿದ್ದ. ತನ್ನದೇ ಸ್ತುತಿಯನ್ನು ತಾನೇ ಮಾಡಿಕೊಳ್ಳುವುದಕ್ಕೆ ಅವನಿಗೆ ಯಾವುದೇ ಮುಜುಗರ ಆಗುತ್ತಿರಲಿಲ್ಲ. ಹತ್ತು ಕಲ್ಲು ಹೊಡೆದಲ್ಲಿ ಒಂದು ಕಲ್ಲು ತಾಗಿ ಮಾವಿನಕಾಯಿ ಬಿತ್ತು ಎನ್ನುವ ಹಾಗೆ ನೇಮಯ್ಯನ ವಿಭೂತಿಗೆ, ಯಂತ್ರಕ್ಕೆ ಯಾರಿಗೋ ಕಾಯಿಲೆ ವಾಸಿಯಾಗಿದ್ದಿದೆ, ಯಾರದೋ ಬಲೆಯಲ್ಲಿ ಅವನು ನಿರೀಕ್ಷೆ ಮಾಡದೆ ಇದ್ದಷ್ಟು ಮೀನು ಬಿದ್ದದ್ದೂ ಇದೆ. ಇದು ಒಬ್ಬರ ಬಾಯಿಂದ ಇನ್ನೊಬ್ಬರ ಕಿವಿಗೆ ಹರಡಿ ಆತನ ಗಿರಾಕಿಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ. ಇದನ್ನೆಲ್ಲ ನೋಡಿ ಊರಲ್ಲಿಯ ಒಂದೆರಡು ಹಿರಿಯ ತಲೆಗಳು ಎಲ್ಲಿಂದ ನಗಬೇಕು ಎಂದು ತಿಳಿಯದೆ ಜನಮರುಳೋ ಜಾತ್ರೆ ಮರುಳೋ ಎಂದು ಅವನ ಅನುಯಾಯಿಗಳ ಮುಂದೆಯೇ ಆಡಿಕೊಳ್ಳುತ್ತಾರೆ. ಅಸಲಿಗೆ ನೇಮಯ್ಯ ತನ್ನ ಹದಿನೈದನೆ ವರ್ಷದಲ್ಲಿ ಮನೆ ಬಿಟ್ಟು ಓಡಿಹೋಗಿದ್ದ. ಹಾಗೆ ಓಡಿಹೋಗುವಾಗ ತನ್ನ ಪಕ್ಕದ ಮನೆಯ ನಾಗಯ್ಯನವರ ಮನೆಯಲ್ಲಿದ್ದ ಅಲಾರಾಂ ಗಡಿಯಾರ, ತಾಮ್ರದ ಚೊಂಬು, ನೀಲಯ್ಯನವರ ಮನೆಯಿಂದ ಮತ್ತೊಂದೆರಡು ಸಾಮಾನು ಎತ್ತಿಕೊಂಡು ಹೋಗಿದ್ದ. ಹಾಗೆ ಹೋದವನು ಎಲ್ಲಿಗೆ ಹೋದ ಎಂಬುದು ಯಾರಿಗೂ ಗೊತ್ತಿರಲಿಲ್ಲ. ನೇಮಯ್ಯನ ತಂದೆ ಧರಣೀಶ,ಮನೆಯಲ್ಲಿಯ ತೆಂಗಿನ ಅಡಕೆಯ ತೋಟವನ್ನು ನೋಡಿಕೊಳ್ಳುತ್ತ ಇದ್ದರೂ ಇವನ ಬದುಕು ಸಾಗಿಹೋಗುತ್ತಿತ್ತು. ಏನು ಗುಡ್ಡ ಕಡಿದು ಸಾಧಿಸೋದಕ್ಕೆ ಮನೆ ಬಿಟ್ಟು ಹೋಗಿದ್ದಾನೋ’ ಎಂದು ಗೊಣಗುತ್ತಿದ್ದರು. ಹೀಗೇ ಏಳೆಂಟು ವರ್ಷಗಳು ಸಂದುಹೋದವು. ಊರಲ್ಲಿ ಕೆಲವು ಹಿರಿಯ ತಲೆಗಳು ಸರಿದು ಹೋಗಿದ್ದು ಮತ್ತು ಹತ್ತಿಪ್ಪತ್ತು ಹೊಸ ಮಕ್ಕಳು ಧರೆಗಿಳಿದದ್ದು ಬಿಟ್ಟರೆ ಊರಲ್ಲಿ ಅಂಥ ಯಾವುದೇ ದೊಡ್ಡ ಬದಲಾವಣೆ ಆಗಿರಲಿಲ್ಲ.
ಇಂಥ ಹೊತ್ತಲ್ಲಿ ಒಂದು ದಿನ ನೇಮಯ್ಯ ಊರಲ್ಲಿ ಪ್ರತ್ಯಕ್ಷ ಆಗಿಬಿಟ್ಟ. ಅವನು ಮಾಡಿದ ಮೊದಲ ಕೆಲಸವೆಂದರೆ ತಾನು ಊರುಬಿಟ್ಟು ಹೋಗುವಾಗ ಯಾರ ಮನೆಯಿಂದ ಯಾವ ಸಾಮಾನು ಒಯ್ದಿದ್ದನೋ ಅದಕ್ಕಿಂತ ಸ್ವಲ್ಪ ಹೆಚ್ಚು ಬೆಲೆಬಾಳುವ ಅವೇ ವಸ್ತುಗಳನ್ನು ಅವರಿಗೆ ತಂದುಕೊಟ್ಟಿದ್ದು. ಮನೆಬಿಟ್ಟು ಹೋಗುವಾಗ ಕೈಯಲ್ಲಿ ಕಾಸಿರಲಿಲ್ಲ. ಏನು ಮಾಡುವುದೂ ತೋಚದೆ ಹಾಗೆ ಮಾಡಬೇಕಾಯಿತು. ನನ್ನ ತಪ್ಪು ಮನ್ನಿಸಿಬಿಡಿ ಎಂದು ಕೇಳಿಕೊಂಡ. ಕಳುವಿನ ವಿಷಯ ಊರಲ್ಲಿ ಅವನು ಮನೆಬಿಟ್ಟು ಹೋದಾಗ ಒಂದೆರಡು ವಾರ ಸುದ್ದಿಯಾಗಿದ್ದು ಆ ಮೇಲೆ ಹಲವರಿಗೆ ಮರೆತೇ ಹೋಗಿತ್ತು. ಆದರೆ ಆ ಸುದ್ದಿ ಹೇಳಿ ಯಾರೂ ಮುಂದೆ ತನ್ನನ್ನು ಅಪಮಾನಿಸಬಾರದು ಎಂಬ ಮುಂದಾಲೋಚನೆ ನೇಮಯ್ಯನದಾಗಿತ್ತು.
ಊರು ಬಿಟ್ಟ ನೇಮಯ್ಯ ಎಲ್ಲಿಗೆ ಹೋಗಿದ್ದನೋ ಏನೋ, ಅದೆಲ್ಲ ಅವನು ಹೇಳಿದ ಮೇಲಷ್ಟೇ ಗೊತ್ತಾಗಿದ್ದು. ತಾನು ಹಿಮಾಲಯಕ್ಕೆ ಹೋಗಿದ್ದೆ. ಹಿಮಾಲಯದಲ್ಲಿ ಸಾಧುಗಳ ಜೊತೆ ಇದ್ದೆ. ಚೀನಾ ಗಡಿಗೆ ಹೋಗಿದ್ದೆ, ವೈಷ್ಣೋದೇವಿಗೆ ಹೋಗಿದ್ದೆ, ಕೆಲವು ದಿನ ಕೊಲ್ಕತ್ತಾದಲ್ಲಿ ರಾಮಕೃಷ್ಣಾಶ್ರಮದಲ್ಲಿ ಇದ್ದೆ ಎಂದೆಲ್ಲ ಹೇಳಿದ. ಹೋಗುವಾಗ ಹುಡುಗನಾಗಿದ್ದ ನೇಮಯ್ಯ ಈಗ ಇಪ್ಪತ್ಮೂರರ ಹೊಂತ್ಕಾರಿಯಾಗಿದ್ದ. ವಯಸ್ಸಿಗೆ ಸಹಜವಾದ ಕಳೆ ಮುಖದಲ್ಲಿತ್ತು. ಕಣ್ಣಲ್ಲಿ ಮಿಂಚಿತ್ತು. ಮಾತನಾಡುತ್ತ ಇರುವಾಗಲೇ ವಿಚಿತ್ರ ರೀತಿಯಲ್ಲಿ ಆತ ಭುಜವನ್ನು ಕುಣಿಸುತ್ತಿದ್ದ. ಜೊತೆಯಲ್ಲಿ ಕುತ್ತಿಗೆಯನ್ನೂ ಒಂದು ವಕ್ರವಾದ ರೀತಿಯಲ್ಲಿ ತಿರುಗಿಸುತ್ತಿದ್ದ. ಅವನು ಹಾಗೆ ಮಾಡುವಾಗ ಅವನ ಕಂಕುಳಲ್ಲಿ ಇರುವೆ ಎಲ್ಲಿಯಾದರೂ ತೂರಿಕೊಂಡಿದೆಯೋ ಎಂಬ ಆಲೋಚನೆ ಆತನನ್ನು ನೋಡುತ್ತಿದ್ದವರಿಗೆ ಬರುತ್ತಿತ್ತು. ಅವನ ಈ ವಿಚಿತ್ರ ಭುಜ ಕುಲುಕಾಟವನ್ನು ಜನ ಅವನ ಹಿಂದೆ ಆಡಿಕೊಳ್ಳುತ್ತಿದ್ದದ್ದೂ ಇತ್ತು.
ಅಸಲಿಗೆ ನೇಮಯ್ಯ ತಾನು ಹೇಳಿದಲ್ಲೆಲ್ಲ ಹೋಗಿದ್ದನೋ ಇಲ್ಲವೋ ಗೊತ್ತಿಲ್ಲ.ಅವನ ದೂರದ ಸಂಬಂಧಿಯೊಬ್ಬರು ಕೇರಳದ ಗಡಿಯಲ್ಲೆಲ್ಲೋ ಇದ್ದರಂತೆ. ಅವರ ಹೆಸರು ಬೆಳಗಣ್ಣ ಎಂದೋ ಬೆಳಗಯ್ಯ ಎಂದೋ ಇದ್ದಿತ್ತು. ಒಂದೆರಡು ಬಾರಿ ಅವರು ಹೊಳೆಸಾಲಿಗೂ ಬಂದುಹೋಗಿದ್ದರು. ಮೋಡಿ ಕೀಳುವುದರಲ್ಲಿ ಅವರು ಎತ್ತಿದ ಕೈ ಎಂದು ಇಲ್ಲೆಲ್ಲ ಹೆಸರುವಾಸಿಯಾಗಿದ್ದರು. ಅವರು ಬಂದಾಗ ಪಾಮರರೆಲ್ಲ ಆ ಪಂಡಿತನೆದುರು ನಡು ಬಗ್ಗಿಸಿ ನಡೆದುಕೊಳ್ಳುವುದು ಕಂಡು ನೇಮಯ್ಯನಲ್ಲಿ ತಾನೂ ಅವರ ಹಾಗೆಯೇ ಆಗಬೇಕು ಎಂಬ ಆಸೆ ಯಾವತ್ತೋ ಮೊಳಕೆಯೊಡೆದಿತ್ತು. ತಾನು ಓದಿ ಅಮಲ್ದಾರ ಆಗುವುದು ಅಷ್ಟರಲ್ಲಿಯೇ ಇದೆ ಎಂಬ ಸತ್ಯವನ್ನು ಆತ ಕಂಡುಕೊಂಡಿದ್ದ. ಹೀಗಾಗಿ ಒಂದು ರಾತ್ರಿ ಬೆಳಗಣ್ಣನವರನ್ನು ಹುಡುಕಿಕೊಂಡು ಹೊರಟೇ ಬಿಟ್ಟಿದ್ದ.
ಬೆಳಗಣ್ಣ ತಾಂತ್ರಿಕ ವಿದ್ಯೆಯಲ್ಲಿ ಪರಿಣತ ಎಂದು ಅವನ ಸುತ್ತಲಿನವರಲ್ಲಿ ಹೆಸರಾಗಿದ್ದ. ಅವನಿಗೊಬ್ಬ ಸಹಾಯಕ ಬೇಕಾಗಿದ್ದ. ಸಂಬಳವಿಲ್ಲದೆ ಹಾಕಿದ್ದು ತಿಂದುಕೊAಡು ಹೇಳಿದ್ದು ಕೇಳಿಕೊಂಡು ಇರಬಲ್ಲ ನೇಮಯ್ಯ ತಾನಾಗಿಯೇ ಅವರಿಗೆ ಒದಗಿ ಬಂದಿದ್ದ. ಬೆಳಗಣ್ಣ ಹೋದಲ್ಲೆಲ್ಲ ಅವರ ಹಿಂಬಾಲಕನಾಗಿ ನೇಮಯ್ಯ ಹೋಗುತ್ತಿದ್ದ. ಮೋಡಿ ಕೀಳುವ ಕಾರ್ಯಕ್ರಮದಲ್ಲಿ ಮಂಡಲ ಬರೆಯುವುದು, ದರ್ಬೆ ದೂರ್ವೆಗಳನ್ನು ತರುವುದು, ಕಲಶಕ್ಕೆ ಹೂವುಗಳ ಅಲಂಕಾರ ಮಾಡುವುದು, ಬೆಳಗಣ್ಣ ಹೇಳಿದ ಕೂಡಲೆ ಥಟ್ ಎಂದು ಕುಂಕುಮ, ಅರಸಿಣ, ಊದಬತ್ತಿ, ದೊಂದಿ, ಸಿಂಗಾರ ಇತ್ಯಾದಿಯನ್ನು ಆತನ ಕೈಯಲ್ಲಿ ಇರಿಸುವುದು ಇದನ್ನೆಲ್ಲ ನೇಮಯ್ಯ ನಿಷ್ಠೆಯಿಂದ ಮಾಡುತ್ತ ಬಂದ. ಹೀಗೆ ಈ ಕಾಯಕ ನಡೆದಿರುವಾಗಲೇ ಬೆಳಗಯ್ಯನವರು ಒಂದು ಕಡೆ ನಿಧಿ ಕಿತ್ತುಕೊಡುವ ಕೆಲಸವನ್ನು ಒಪ್ಪಿಕೊಂಡಿದ್ದರು. ಹೀಗೆ ಹೋದಾಗ ಅವರಿಗೆ ಹೃದಯಾಘಾತವಾಗಿ ನಿಧಿ ಕೀಳುವ ಸ್ಥಳದಲ್ಲಿಯೇ ಸತ್ತುಹೋದರು. ಆದರೆ ಹೊರ ಪ್ರಪಂಚಕ್ಕೆ ಈ ಸುದ್ದಿ ಬಾಯಿಂದ ಕಿವಿಗಳಿಗೆ ಹರಿದು ಬರುವಾಗ ಬೆಳಗಯ್ಯನವರು ನಿಧಿ ಕೀಳಲು ಹೋದಾಗ ದೆವ್ವದ ಏಟಿಗೆ ಸತ್ತುಹೋದರು ಎಂದಾಯಿತು.
ಬೆಳಗಯ್ಯ ಸತ್ತುಹೋದಮೇಲೆ ನೇಮಯ್ಯನಿಗೆ ಕೆಲಸವಿಲ್ಲದಂತಾಗಿ ಎಲ್ಲಿಗೆ ಹೋಗುವುದು ಎಂದು ಚಿಂತಿಸುತ್ತಿದ್ದಾಗ ಮರಳಿ ಊರಿಗೇ ಹೋಗುವುದೆಂದು ನಿರ್ಧಾರ ಮಾಡಿದ. ಬೆಳಗಯ್ಯನವರಲ್ಲಿ ಅಲ್ಪಸ್ವಲ್ಪ ಮಂಕುಬೂದಿ ಎರಚುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದ. ಊರಿಗೆ ಮರಳಿದಾಗ ಅವನಲ್ಲಿದ್ದ ಬಂಡವಾಳ ಎಂದರೆ ಅದೇ ಆಗಿತ್ತು. ಊರಲ್ಲಿ ನೇಮಯ್ಯನ ಹೆಸರು ಬೆಳೆಯಿತು. ಸುತ್ತ ಹತ್ತೂರಲ್ಲೂ ನೇಮಯ್ಯ ಎಂದರೆ ಯಾರು ಎಂದು ಕೇಳಿದರೆ ಜನರು ಹೇಳುವಂತಾದ. ನೇಮಯ್ಯನಿಗೆ ಬಹು ಪರಾಕ್ ಹೇಳುವ ಮಂದಿ ಆತನ ಸುತ್ತ ಜಮಾವಣೆಯಾದರು. ನೇಮಯ್ಯ ಸೋ ಎಂದರೆ ಸಾಕು ಸೋಬಾನೆ ಹಾಡುವವರು ಅಲ್ಲಿ ಸೇರಿದರು. ನೇಮಯ್ಯ ಅವರೆಲ್ಲರಿಗೂ ಒಂದೊAದು ಜವಾಬ್ದಾರಿಯನ್ನು ಕೊಟ್ಟು ಅವರಿಗೂ ಅದು ಇದು ಅನುಕೂಲ ಮಾಡಿಕೊಟ್ಟ. ಹೀಗಾಗಿ ನೇಮಯ್ಯನೆಂಬವನ ಪಲ್ಲಕ್ಕಿ ಹೊರುವುದಕ್ಕೆ ಅವರವರಲ್ಲೇ ಪೈಪೋಟಿ ಆರಂಭವಾಯಿತು. ನೇಮಯ್ಯ ಬರುವಾಗ, ಅವನು ಬಂದ, ದಾರಿ ಬಿಡಿ ಎಂದು ಹೇಳುವುದಕ್ಕೇ ಒಂದಿಬ್ಬರು ಇದ್ದರು. ನೇಮಯ್ಯ ಅಲ್ಲಿ ಹೋದಾಗ ಹೀಗಾಯಿತು, ನೇಮಯ್ಯ ಇಲ್ಲಿ ಹೋದಾಗ ಹೀಗಾಯಿತು ಎಂದು ಒಂದು ಒಂದು ಎಂದು ಕತೆ ಕಟ್ಟುತ್ತ ಅವನ ಸುತ್ತ ಒಂದು ಪ್ರಭಾವಳಿಯನ್ನು ಬಿತ್ತುತ್ತಿದ್ದರು. ಇಂಥ ಕತೆಗಳೆಲ್ಲ ಸುತ್ತು ಬಳಸಿ ನೇಮಯ್ಯನ ಕಿವಿಗೇ ಬಿದ್ದಾಗ ಆತನಿಗೂ ತನ್ನ ಬಗೆಗೇ ಅನುಮಾನ ಬರುವುದಕ್ಕೆ ಆರಂಭವಾಯಿತು. ನಿಜಕ್ಕೂ ನನ್ನಲ್ಲಿ ಅಂಥ ಶಕ್ತಿ ಇದೆಯೇ ಎಂಬುದನ್ನು ಅವನು ಆರಂಭದಲ್ಲಿ ಶಂಕಿಸುತ್ತಿದ್ದರೂ ನಂತರ ಅವನೂ ನಂಬುವುದಕ್ಕೆ ಆರಂಭಿಸಿದ. ಆಮೇಲೇನು ಕೇಳುವುದು, ಅದಕ್ಕೆ ತಕ್ಕಂತೆ ಹಾವ ಭಾವ, ವೇಷ ಭೂಷಣ, ನಗೆ ನುಡಿ ಎಲ್ಲವನ್ನೂ ರೂಢಿಸಿಕೊಳ್ಳುವುದಕ್ಕೆ ಆರಂಭಿಸಿದನು. ಅಲ್ಲಿ ಇಲ್ಲಿ ಹುಡುಕಾಡಿ ಹತ್ತಾರು ತಾಳೆಗರಿಯ ಗ್ರಂಥಗಳನ್ನು ಮನೆಯಲ್ಲಿ ತಾನು ಕುಳಿತುಕೊಳ್ಳುವಲ್ಲಿ ಗೋಡೆಯ ಕಪಾಟಿನಲ್ಲಿ ಬಂದವರ ಕಣ್ಣಿಗೆ ಕಾಣುವಂತೆ ಇರಿಸಿಕೊಂಡ. ಹಲವು ಜೋತಿಷ್ಯದ ದಪ್ಪದಪ್ಪ ಗ್ರಂಥಗಳನ್ನು ತಂದು ಇಟ್ಟುಕೊಂಡ. ಅದನ್ನೆಲ್ಲ ಅವನು ಯಾವಾಗ ಓದುತ್ತಿದ್ದನೋ ಏನೋ, ದೇವರೇ ಬಲ್ಲ.
ಅರೆಮಾಂತ್ರಿಕನಂತೆ ಕಾಣುವ ವೇಷವು ಅವನದಾಯಿತು. ತಲೆಯಕೂದಲನ್ನು ಬೆಳೆಸಿ ಶಿಖೆಯ ರೂಪದಲ್ಲಿ ಕಟ್ಟಿಕೊಳ್ಳುತ್ತಿದ್ದ. ದೊಡ್ಡ ರುದ್ರಾಕ್ಷಿಯ ಹಾರ ಕುತ್ತಿಗೆಗೆ ಬಂತು. ವಿಭೂತಿಯನ್ನು ಹಣೆಗೆ ಅಡ್ಡ ಲೇಪಿಸಿಕೊಳ್ಳುತ್ತಿದ್ದ. ಮಣಿಕಟ್ಟಿನಲ್ಲೂ ಸಣ್ಣ ರುದ್ರಾಕ್ಷಿಯ ಬಳೆ ಧರಿಸುತ್ತಿದ್ದ. ಜನಸಾಮಾನ್ಯರಿಗೆ ಅರ್ಥವಾಗದ ಒಂದೆರಡು ಪದಗಳನ್ನು ತನ್ನ ಮಾತಿನ ಮಧ್ಯೆ ಬಳಸುವುದನ್ನು ರೂಢಿಸಿಕೊಂಡ. ಜಿಂಕೆಯ ಚರ್ಮದ ಮೇಲೆ ಕುಳಿತುಕೊಳ್ಳುತ್ತಿದ್ದ. ಅರಣ್ಯ ಇಲಾಖೆಯಲ್ಲಿರುವವರೂ ಅವನ ಭಕ್ತರೇ ಆಗಿಬಿಟ್ಟಿದ್ದರಿಂದ ಯಾವುದೇ ಕೇಸು ಬಿದ್ದಿರಲಿಲ್ಲ. ಮನೆಯ ಅಂಗಳದಲ್ಲಿ ದೊಡ್ಡದೊಂದು ಹೋಮಕುಂಡವನ್ನು ಕಟ್ಟಿಸಿ ಇಟ್ಟಿದ್ದ. ಯಾರಾದರೂ ಸಮಸ್ಯೆಯನ್ನು ಹೇಳಿಕೊಂಡು ಬಂದರೆ ಯಾವುದಾದರೂ ಶಾಂತಿ ಹೋಮ ಹೇಳಿ ಸಾವಿರಾರು ರುಪಾಯಿ ಸೆಳೆಯದೇ ಬಿಡುತ್ತಿರಲಿಲ್ಲ.
ದೊರೆಯ ದರ್ಬಾರು ಚೆನ್ನಾಗಿ ನಡೆಯುತ್ತಿರುವಾಗ ಬಹುಪರಾಕ್ ಹೇಳಲು ಅನುಯಾಯಿಗಳು ಒಬ್ಬರ ಹಿಂದೆ ಒಬ್ಬರು ಇರುತ್ತಾರೆ. ನೇಮಯ್ಯನ ನೇಮ ಚೆನ್ನಾಗಿಯೇ ನಡೆದಿತ್ತು. ಎಲ್ಲವೂ ಅಂದುಕೊಂಡಂತೆಯೇ ನಡೆಯುವಾಗ ಒಂದು ರೀತಿಯ ಉಡಾಫೆ ಮನುಷ್ಯನಲ್ಲಿ ಮನೆ ಮಾಡುತ್ತದೆ. ಇದಕ್ಕೆ ನೇಮಯ್ಯನೂ ಹೊರತಾಗಿರಲಿಲ್ಲ. ಒಂದು ದಿನ ಏನಾಯಿತು ಎಂದರೆ ರಾತ್ರಿ ಕಾರ್ಗಾಲದ ಕರಿಮೋಡಗಳು ಗೆರಸಿಯಲ್ಲಿ ಮೊಗೆದು ಸುರಿದಂತೆ ನೀರನ್ನು ಧರೆಗೆ ಎರಚುತ್ತಿದ್ದವು. ತೆಂಗು, ಅಡಕೆ, ಮಾವು ಇತ್ಯಾದಿ ಮರಗಳ ಬೇರುಗಳು ನಡುಗತೊಡಗಿದವು. ಬಡವರ ಮನೆಯ ಹುಲ್ಲು ಹೊದಿಕೆಗಳು ಹಾರಿಹೋಗಿ ಮನೆಯ ಒಳ ಯಾವುದು ಅಂಗಳ ಯಾವುದು ಎಂದು ತಿಳಿಯದಂಥ ಪರಿಸ್ಥಿತಿ ಎದುರಾಯಿತು. ಈ ಒಂದು ಇರುಳು ಹೇಗಾದರೂ ಕಳೆದುಹೋಗಲಿ ಎಂದು ಮುದುಡಿ ಮುದ್ದೆಯಾದ ಬಡವರು ಮರುದಿನದ ನೇಸರನ ಉದಯಕ್ಕೆ ಅಲವತ್ತುಕೊಳ್ಳುತ್ತಿದ್ದರು.
ಅಂತೂ ಬೆಳಗುಹರಿಯಿತು. ಸೀತಕ್ಕನ ಮಗಳಿಗೆ ಚಳಿ ನಡುಕ ಮತ್ತು ಜ್ವರ. ಕಾರಿರುಳಲ್ಲಿ ಎಲ್ಲೋ ಹೆದರಿಕೊಂಡು ಹೀಗೆ ಆಗಿದೆ ಎಂದು ಅವಳ ಲೆಕ್ಕಾಚಾರ. ಆಸ್ಪತ್ರೆಗೆ ಹೋಗುವ ಬದಲು ಅವಳು ನೇಮಯ್ಯನ ಬಳಿಗೆ ಬಂದಳು. ಆತನ ವಿಭೂತಿಯ ಶಕ್ತಿಯಲ್ಲಿ ಅವಳಿಗೇನೋ ಅತಿಯಾದ ವಿಶ್ವಾಸ. ನೇಮಯ್ಯನಾದರೂ ಅವಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಲಿಲ್ಲ. ಹಾಗೆ ಹೇಳಿದರೆ ತನ್ನನ್ನು ಕೈಲಾಗದವನು ಎಂದು ತಿಳಿದಾರು ಎಂಬ ಆತಂಕ ಅವನಿಗೆ. ಏನೋ ವಿಭೂತಿ ಮಂತ್ರಿಸಿ, ಅಕ್ಕಿ ಮಂತ್ರಿಸಿ ಕೊಟ್ಟ. ಅವನ ದುರದೃಷ್ಟವೇ ಇರಬೇಕು, ಸೀತಕ್ಕನ ಮಗಳು ಅದೇ ರಾತ್ರಿ ತೀರಿಹೋದಳು. ನೇಮಯ್ಯನ ನಂಬಿದ್ದರಿಂದಲೇ ಹೀಗಾಯಿತು ಎಂದು ಗುಸುಗುಸು ನಡೆಯಿತು. ಸೀತಕ್ಕನ ಮನೆಯ ವಿಷಯ ಊರ ಹತ್ತು ಮಂದಿಯ ವಿಷಯವಾದಾಗ ಅದು ಪಡೆದುಕೊಂಡ ತಿರುವು ನೇಮಯ್ಯನಿಗೆ ಹಿತವಾದುದಾಗಿರಲಿಲ್ಲ. ನೇಮಯ್ಯನ ಮನೆಯ ಎದುರು ಜನ ಜಮಾಯಿಸಿದರು. ಯಾರುಯಾರಿಗೋ ಯಾವುದ್ಯಾವುದೋ ಕಾರಣಗಳಿಗಾಗಿ ನೇಮಯ್ಯನ ಮೇಲೆ ಇದ್ದ ಹಳೆಯ ಸಿಟ್ಟು ಹೊತ್ತಿಕೊಂಡಿತ್ತು. ಜನ ಕೂಗಾಡಿದರು. ಸಮಾಧಾನ ಮಾಡಲು ಹೊರಗೆ ಬಂದ ನೇಮಯ್ಯನ ಮೇಲೆ ಚಪ್ಪಲಿ ಎಸೆದರು. ಯಾರೋ ತತ್ತಿ ಎಸೆದರು. ಇನ್ಯಾರೋ ಸೆಗಣಿ ಎಸೆದರು. ಗುಂಪಿನ ಗಲಾಟೆಗೆ ಪುರಾವೆ ಸಿಗದು ಎಂಬ ಧೈರ್ಯದ ಮೇಲೆ ಕೆಲವರು ನೇಮಯ್ಯನಿಗೆ ತದಕಿಯೂ ಬಿಟ್ಟರು.
ಹಿಂದೆ ನೇಮಯ್ಯನ ಹಾಡಿ ಹೊಗಳುತ್ತಿದ್ದರ‍್ಯಾರೂ ಈಗ ಮುಂದೆ ಬರಲಿಲ್ಲ. ನಾಲ್ಕೈದು ದಿನಗಳು ಕಳೆದ ಮೇಲೆ ಅವನ ಮನೆಯ ಮುಂದೆ ಸುಳಿದವರು, ನಾನು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ, ನಾನು ಊರಲ್ಲಿ ಇರಲಿಲ್ಲ ಎಂದು ಒಬ್ಬೊಬ್ಬರು ಒಂದೊಂದು ಸಬೂಬು ಹೇಳಿದರು. ಈ ಘಟನೆಯ ಬಳಿಕ ನೇಮಯ್ಯನ ಬಳಿಗೆ ಜನರು ಬರುವುದು ಕಡಿಮೆಯಾಗತೊಡಗಿತು. ಸದಾ ಜನರು ಬಂದು ಅಪ್ಪಣೆ ಪಡೆದುಕೊಳ್ಳುತ್ತಿದ್ದುದು ರೂಢಿಯಾಗಿದ್ದ ನೇಮಯ್ಯನಿಗೆ ತನ್ನನ್ನು ಕೇಳಿಕೊಂಡು ಯಾರೂ ಬರುತ್ತಿಲ್ಲ ಎನ್ನುವುದು ಸಹಿಸುವುದಕ್ಕೆ ಸಾಧ್ಯವಾಗಲಿಲ್ಲ. ತನ್ನಲ್ಲಿ ಅದೇನೋ ವಿಶೇಷ ಶಕ್ತಿ ಇದೆ ಎಂಬುದನ್ನು ಜನರಿಗೆ ಹೇಗೆ ನಂಬಿಸುವುದು ಎಂಬುದು ಆತನಿಗೆ ಗೊತ್ತಾಗಲಿಲ್ಲ. ತನ್ನಲ್ಲಿ ಅದೇನೋ ವಿಶೇಷ ಶಕ್ತಿ ಇದೆ ಎಂಬ ಆತನ ಭ್ರಮೆ ನಿರಸನಗೊಂಡಿತ್ತು.
ಇಂಥ ಅಯೋಮಯ ಸ್ಥಿತಿಯಲ್ಲಿ ನೇಮಯ್ಯ ಒಂದು ರಾತ್ರಿ ಊರು ತೊರೆದು ಹೋಗಿಯೇ ಬಿಟ್ಟ. ಇನ್ಯಾವ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೋ ಎಂದು ಊರವರು ಕಾಯುತ್ತ ಇದ್ದಾರೆ. ಯಾವೂರಿನಲ್ಲಿ ಯಾವ ಅವತಾರ ತಾಳುತ್ತಾನೋ ಯಾರು ಬಲ್ಲ!