ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿಗೆ ಈಗ ನೂರು ತುಂಬಿದೆ. 1899ರಲ್ಲಿ ಗುಲ್ವಾಡಿ ವೆಂಕಟರಾಯರು ಇದನ್ನು ಬರೆದರು. ಇಂದಿರಾಬಾಯಿಯ ಇನ್ನೊಂದು ಹೆಸರು ಸದ್ಧರ್ಮ ವಿಜಯ. ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್್ನಲ್ಲಿ ಇದು ಮೊದಲ ಮುದ್ರಣವನ್ನು ಕಂಡಿತು. ಈ ಶತಮಾನದ 6ನೆ ದಶಕದ ವರೆಗೆ ಇದು ಪ್ರಚಾರದಲ್ಲಿಯೇ ಇರಲಿಲ್ಲ. ಸಾಹಿತ್ಯದ ವಿಮರ್ಶಕರಿಗೂ ಈ ಕೃತಿಯ ಪರಿಚಯ ಇರಲಿಲ್ಲ. 1962ರಲ್ಲಿ ಈ ಕೃತಿಯು ಎಂ. ಗೋವಿಂದ ಪೈ, ಕೆ.ಶಿವರಾಮ ಕಾರಂತ ಮತ್ತು ಸಂತೋಷಕುಮಾರ ಗುಲ್ವಾಡಿ ಇವರ ಜಂಟಿ ಪ್ರಯತ್ನದಿಂದ ಮರುಮುದ್ರಣ ಕಂಡು ಕಳಚಿಹೋದ ಕೊಂಡಿಯ ಪತ್ತೆ ಆದಂತೆ ಆಯಿತು. ದ್ವಿತೀಯ ಮುದ್ರಣವನ್ನು ಮಂಗಳೂರು ಕದ್ರಿಯ ಕನ್ನಡ ಪ್ರಪಂಚ ಪ್ರಕಾಶನದವರು ಹೊರತಂದರು. ಈ ಕಾದಂಬರಿಯ ಮತ್ತೊಂದು ವಿಶೇಷವೇನೆಂದರೆ ಮೊದಲ ಮುದ್ರಣವಾದ ವರ್ಷವೇ ಇದು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡಿದ್ದು. ದಕ್ಷಿಣ ಕನ್ನಡದ ಕಲೆಕ್ಟರ್ ಕೌಚ್್ಮನ್್ ಎಂಬವರು ಈ ಕಾರ್ಯ ಮಾಡಿದರು. 1844ರಲ್ಲಿ ಜನಿಸಿದ ವೆಂಕಟರಾಯರು 1913ರಲ್ಲಿ ಕಾಲವಶರಾದರು. ಅವರು ಬದುಕಿದ ಕಾಲಾವಧಿ ಐತಿಹಾಸಿಕವಾಗಿ ಅತ್ಯಂತ ಸಂಕೀರ್ಣವಾದದ್ದು. ಹಲವು ವೈರುಧ್ಯಗಳ ಮುಖಾಮುಖಿ ಅಂದಿನ ಸಮಾಜದಲ್ಲಿ ನಡೆದು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಕ್ಷುಬ್ಧ ಪರಿಸ್ಥಿತಿ ಇತ್ತು. ರಾಜಕೀಯವಾಗಿ ಬ್ರಿಟಿಷರು ಈ ದೇಶದಲ್ಲಿ ತಮ್ಮ ಸತ್ತೆಯನ್ನು ಬಲಪಡಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ಅದಕ್ಕೆ ವಿರೋಧ ದೇಶೀಯ ಸಂಸ್ಥಾನಿಕರಿಂದ ವ್ಯಕ್ತವಾಗತೊಡಗಿತ್ತು. ಸಿಪಾಯಿ ದಂಗೆ ನಡೆದು ಕಂಪನಿ ಸರ್ಕಾರದಿಂದ ಭಾರತದ ಆಡಳಿತವನ್ನು ಬ್ರಿಟನ್ನಿನ ರಾಣಿ ವಹಿಸಿಕೊಂಡದ್ದು ಆ ಕಾಲದಲ್ಲಿಯೇ. ಸ್ವಲ್ಪ ಸಮಯದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹುಟ್ಟಿಕೊಂಡಿದ್ದು. ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನೋಡಿದಾಗ ಬ್ರಿಟಿಷರು ರೂಢಿಸಿದ ವಿದ್ಯಾಭ್ಯಾಸ ಅಕ್ಷರ ಪರಿಚಿತರಲ್ಲಿ ಜ್ಞಾನದ ಬೆಳಕನ್ನು ಬೀರಿತು. ಸರಕಾರದ ಆಡಳಿತದಲ್ಲಿ ನೌಕರಿ ಮಾಡಲು ಇಂಗ್ಲಿಷ್ ಕಲಿತವರ ಅಗತ್ಯ ಉಂಟಾಯಿತು. ಹೀಗಾಗಿ ಇಂಗ್ಲಿಷ್ ಕಲಿಯುವುದು ಆಗ ಅನಿವಾರ್ಯವೂ ಆಗಿತ್ತು. ಆರ್ಯ ಸಮಾಜ, ಬ್ರಹ್ಮಸಮಾಜಗಳು ವ್ಯವಸ್ಥೆಯಲ್ಲಿ ಬದಲಾವಣೆಗೆ ಉಪಕ್ರಮಿಸಿದ್ದವು. ಇಂಥ ಬದಲಾವಣೆಗೆ ಹೊಸ ವಿದ್ಯಾವಂತರ ಬೆಂಬಲವೂ ಇತ್ತು. ಇಂಥ ಸಂದರ್ಭದಲ್ಲಿ ಸನಾತನಿಗಳು ತಮ್ಮ ರಕ್ಷಣೆಗಾಗಿ ಇನ್ನಷ್ಟು ಕರ್ಮಠರಾಗಿ ವರ್ತಿಸತೊಡಗಿದ್ದರು. ಇವಲ್ಲದೆ ಕ್ರೈಸ್ತ ಧರ್ಮದ ಭಯವೂ ಇವರನ್ನು ಕಾಡುತ್ತಿತ್ತು. ಇಷ್ಟೆಲ್ಲ ಹಿನ್ನೆಲೆಯು ವೆಂಕಟರಾಯರನ್ನು ಪ್ರಭಾವಿಸಿತ್ತು. ಇಂಥ ಸಂಕೀರ್ಣ ಸಮಾಜ ವ್ಯವಸ್ಥೆಯಲ್ಲಿ ಬೆಳೆದುಬಂದ ಗುಲ್ವಾಡಿ ವೆಂಕಟರಾಯರು ಆ ಕಾಲದಲ್ಲೇ ಶೈಕ್ಷಣಿಕವಾಗಿ ಮುಂದುವರಿದ ಸಾರಸ್ವತ ಸಮಾಜದಲ್ಲಿ ಹುಟ್ಟಿದೊಂದು ವಿಶೇಷವೇ. ಅವರು ತಮ್ಮ ಸಮಾಜದಲ್ಲಿ ರೂಢಿಗತವಾಗಿದ್ದ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದರು. ವಿಧವೆಯರಿಗೆ ಆಗುತ್ತಿದ್ದ ಅನ್ಯಾಯಗಳನ್ನು ಕಂಡು ಅವರ ಮರು ವಿವಾಹ ಪ್ರತಿಪಾದಿಸಿದರು. ಸಮುದ್ರ ಪ್ರಯಾಣ ಮಾಡಿದವರನ್ನು ಅಸ್ಪೃಶ್ಯರಂತೆ ಕಂಡು ಅವರನ್ನು ಜಾತಿಯಿಂದ ಹೊರಹಾಕಲಾಗುತ್ತಿತ್ತು. ಸಹಪಂಕ್ತಿ ಭೋಜನ ಇರಲಿಲ್ಲ. ಇದು ಸರಿಯಲ್ಲವೆಂದು ಹೇಳಲು ಗುಲ್ವಾಡಿಯವರು ಪ್ರಯತ್ನಿಸಿದರು. ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಅವರು ತಮ್ಮ ವೃತ್ತಿ ಅನುಭವದ ಮೂಲಕ ಸರಕಾರದ ಆಡಳಿತದ ಹಲವು ಪೊಕ್ಕುಗಳನ್ನು, ಸಮಾಜದ ಅನಿಷ್ಟ ಪದ್ಧತಿ, ಮೂಢನಂಬಿಕೆ, ಅಮಾನವೀಯತೆಗಳನ್ನು ಇಂದಿರಾಬಾಯಿಯ ಮೂಲಕ ಸಾದರಪಡಿಸಿದರು. ಇಂದಿರಾಬಾಯಿಯ ಪೀಠಿಕೆಯಲ್ಲಿ ಅವರು ಹೀಗೆ ಹೇಳುತ್ತಾರೆ,- ಈ ಪುಸ್ತಕದಲ್ಲಿ ಬರೆದಿರುವುದು ಇಂದಿರಾಬಾಯಿ ಎಂಬವಳ ಜನ್ಮ ಚರಿತ್ರೆಯಾಗಿರುತ್ತೆ. ಬರೆದಾತನು ಭಾಷಾಭಿಜ್ಞನೆಂತಾಗಲಿ, ಕಾವ್ಯ ವಿಶಾರದನೆಂತಾಗಲಿ, ಕುಶಲನೆಂತಾಗಲಿ ತೋರ್ಪಡಿಸುವುದಕ್ಕೆ ಇದನ್ನು ಬರೆಯಲಿಲ್ಲ. ಅಂತಾ ಯೋಗ್ಯತೆಗಳು ಅವನಲ್ಲಿಲ್ಲ…. ಹಾಗಾದರೆ, ಈ ಪುಸ್ತಕದ ಉದ್ದೇಶವೇನೆಂದು ಓದುವವರು ಕೇಳಬಹುದು. ಅದೇನೆಂದರೆ ಸತ್ಯತೆ, ಹೃದಯ ನಿರ್ಮಲತೆ ಇವೆರಡು ಸಾಧನಗಳೇ ನಮಗೆ ಇಹಪರದಲ್ಲಿಯೂ ಸಾರ್ಥಕಗಳಾಗಿವೆ. ಇವುಗಳನ್ನು ಬಿಟ್ಟು ಸರ್ವ ಪ್ರಯತ್ನಗಳೂ ನಿರರ್ಥಕವೇ. ಇದನ್ನು ಸಾದೃಶ್ಯಗೊಳಿಸುವುದೇ ಈ ಪುಸ್ತಕದ ಉದ್ದೇಶವು…- ಕಾದಂಬರಿಕಾರನಿಗೆ ಕೃತಿ ರಚನೆ ನಿರ್ದಿಷ್ಟ ಉದ್ದೇಶ ಸಾಧನೆಗಾಗಿ. ಕಲೆಗಾಗಿ ಕಲೆ ಅಲ್ಲ. ಕಲೆ ಬದುಕಿಗಾಗಿ. ಅದಕ್ಕೊಂದು ಗಮ್ಯ ಸ್ಥಾನವಿದೆ. ಕೃತಿ ಇರುವುದು ಸಮಯ ಕಳೆಯಲೆಂದು ಓದಿ ನಂತರ ಕಪಾಟಿನಲ್ಲಿ ಪೇರಿಸಿಡವುದಕ್ಕಲ್ಲ. ಸಮಾಜದ ಸುಧಾರಣೆಗೆ ಅದೊಂದು ಸಾಧನ ಎಂದು ಅವರು ನಂಬಿದವರು. ಆ ಕಾಲದಲ್ಲಿ ಈ ಕೃತಿಯ ಪ್ರಕಟಣೆ ಒಂದು ದಿಟ್ಟ ಪ್ರಯೋಗವೇ ಸರಿ. ಸರ್ವಸಾಕ್ಷಿ ಪ್ರಜ್ಞೆಯಿಂದ ಕತೆ ಹೇಳುವ ಲೇಖಕರು ಎಲ್ಲಿಯೂ ಮಧ್ಯಪ್ರವೇಶ ಮಾಡುವುದಿಲ್ಲ. ಸಂಯಮದಿಂದಲೇ ಕತೆಯನ್ನು ಹೇಳುತ್ತಾರೆ. ಇಂದಿರಾಬಾಯಿಯ ಕತೆಯನ್ನು ಹೀಗೆ ಸಂಗ್ರಹಿಸಬಹುದು. ಕಮಲಪುರವೆಂಬ ಅಗ್ರಹಾರದಲ್ಲಿ ಭೀಮರಾಯ ಮತ್ತು ಅಂಬಾಬಾಯಿ ಬಡತನದಲ್ಲಿದ್ದವರು. ಭೀಮರಾಯನು ಅದೇ ಊರಿನಲ್ಲಿ ಒಬ್ಬ ಶ್ರೀಮಂತರ ಮಂಡಿಯಲ್ಲಿ ಲೆಕ್ಕ ಬರೆಯುವ ಗುಮಾಸ್ತನಾಗಿದ್ದನು. ಪ್ರಾಮಾಣಿಕನು. ಯಜಮಾನನಿಗೆ ಇವನ ಮೇಲೆ ವಿಶೇಷ ಪ್ರೀತಿ. ಹೀಗಿರುವಾಗ ಸುಂದರರಾಯ ಎಂಬವನು ಭೀಮರಾಯನಲ್ಲಿಗೆ ಬಂದು ಅವನು ಕೆಲಸ ಮಾಡುವ ಮಂಡಿಯಲ್ಲಿಯೇ ತನಗೂ ಒಂದು ಕೆಲಸ ಕೊಡಿಸುವಂತೆ ವಿನಂತಿಸಿಕೊಳ್ಳುವನು. ಈ ನಡುವೆ ಅಂಬಾಬಾಯಿಯ ಮನೆಗೆ ಭೀಮರಾಯನ ಯಜಮಾನ ಹಲವು ಬಾರಿ ಬರುವುದರ ಬಗ್ಗೆ ಸುಂದರರಾಯ ಅನುಮಾನ ಬರುವಹಾಗೆ ಅಪಪ್ರಚಾರ ಮಾಡಿದನೆಂದು ಉಳಿದ ಹೆಂಗಸರ ಗೋಷ್ಠಿಯಲ್ಲಿ ಅಂಬಾಬಾಯಿಗೆ ತಿಳಿಯುವುದು. ಇದರಿಂದ ಕ್ರುದ್ಧಳಾದ ಅಂಬಾಬಾಯಿ ಸುಂದರರಾಯನನ್ನು ದೇವಕಿ ಎಂಬಾಕೆಯ ಸಹಾಯದಿಂದ ವಿಷ ನೀಡಿ ಕೊಲ್ಲಿಸುವಳು. ಪತ್ನಿವಾಕ್ಯ ಪರಿಪಾಲಕನಾದ ಭೀಮರಾಯನು ಹಣಬಲದಿಂದ ಈ ಕೇಸಿನಲ್ಲಿ ಶಿಕ್ಷೆಯಾಗದೆ ತಪ್ಪಿಸಿಕೊಳ್ಳುವನು. ಸುಂದರರಾಯನು ಸತ್ತಮೇಲೆ ಆತನ ವಿಧವೆ ಪತ್ನಿ ಸುಶೀಲೆ ಅನಾಥಳಾಗುವಳು. ಚಿಕ್ಕ ಮಗ ಭಾಸ್ಕರನನ್ನು ಸಲಹುವುದು ಅವಳಿಗೆ ರಷ್ಟವಾಗುತ್ತದೆ. ಜಾಣನಾದ ಭಾಸ್ಕರನು ಅಮೃತರಾಯ ಮತ್ತು ಜಲಜಾಕ್ಷಿ ಎಂಬ ಶ್ರೀಮಂತ ದಂಪತಿಯ ಕೃಪೆಗೆ ಒಳಗಾಗಿ ಓದಿನಲ್ಲಿ ಮುಂದೆ ಬಂದು ಉನ್ನತ ವ್ಯಾಸಂಗಕ್ಕೆ ವಿಲಾಯತಿಗೂ ಹೋಗುವನು. ಇತ್ತ ಭೀಮರಾಯನಿಗೆ ಗುರುಗಳ ಕೃಪೆಯಿಂದ ಇಂದಿರಾಬಾಯಿ ಜನಿಸುತ್ತಾಳೆ. ಈ ಇಂದಿರಾಬಾಯಿಯ ವಿವಾಹವನ್ನು ಭೀಮರಾಯನು ವೈಭವದಿಂದ ನೆರವೇರಿಸುತ್ತಾನೆ. ಜೊತೆಯಲ್ಲಿ ಅವನಿಗೆ ಆ ಸೀಮೆಯ ಧರ್ಮವಿಚಾರಕನ ಅಧಿಕಾರ ಶ್ರೀಮಠದಿಂದ ದೊರೆಯುತ್ತದೆ. ಇಂಗ್ಲಿಷ್ ಕಲಿತ ಹೊಸ ಪೀಳಿಗೆಯ ಮೇಲೆ ಮಠದ ನಿರ್ಬಂಧಗಳನ್ನು ಹೇರಲು ಆತ ಯತ್ನಿಸುತ್ತಾನೆ. ದುರ್ದೈವದಿಂದ ಸ್ತ್ರೀವ್ಯಸನಯಾದ ಆತನ ಅಳಿಯ ಸಾಯುತ್ತಾನೆ. ಗಂಡನ ಮನೆಗೆ ತೆರಳುವ ಮೊದಲೇ ಇಂದಿರಾ ವಿಧವೆಯಾಗುತ್ತಾಳೆ. ಅಲ್ಲಿಂದ ಈಕೆಗೆ ವೈಧವ್ಯದ ಕಷ್ಟ ಆರಂಭ. ಕುಪ್ಪಸ ತೊಡಬಾರದು, ತಲೆ ಬಾಚಬಾರದು, ಎಣ್ಣೆ ಹಚ್ಚಬಾರದು, ನೆಲದ ಮೇಲೆ ಮಲಗಬೇಕು, ಪುಸ್ತಕ ಓದಬಾರದು ಹೀಗೆ ಏನೇನೋ ನೂರೆಂಟು ಅಟಿಗಳು. ಪತಿ ವಿಯೋಗದಿಂದ ಮಂಕಾದ ಅವಳಿಗೆ ಕುಲಗೆಡದೆ ಸುಖ ಪಡೆಯುವ ಮಾರ್ಗವನ್ನು ತೋರಿಸಲು ಅಂಬಾಬಾಯಿ- ಭೀಮರಾಯ ಸಂತ ಮಂಡಳಿಯನ್ನು ಮನೆಗೆ ಕರೆಸುತ್ತಾರೆ. ಸಂತ ಮಂಡಳಿಯ ಅಧ್ಯಕ್ಷ ಆಕೆಯನ್ನು ಕೂಡಲು ಮುಂದಾದಾಗ ಆಕೆ ಉಪಾಯವಾಗಿ ತಪ್ಪಿಸಿಕೊಂಡು ಅಮೃತರಾಯನ ಮನೆ ಸೇರುತ್ತಾಳೆ. ಅಮೃತರಾಯ ಆಕೆಗೆ ಆಶ್ರಯ ಕೊಡುತ್ತಾನೆ. ಅವಳನ್ನು ಓದಲು ಮಿಷನರಿ ಶಾಲೆಗೆ ಕಳುಹಿಸುತ್ತಾನೆ. ಅವಳು ಮೆಟ್ರಿಕ್ ಮುಗಿಸುತ್ತಾಳೆ. ವಿಲಾಯತಿಗೆ ಹೋದ ಭಾಸ್ಕರರಾಯ ಕಮಲಪುರದ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕಗೊಳ್ಳುತ್ತಾನೆ. ಅವನೇ ಇಂದಿರಾಬಾಯಿಯನ್ನು ಮದುವೆಯಾಗುತ್ತಾನೆ. ಇಲ್ಲಿಗೆ ಸದ್ಧರ್ಮದ ವಿಜಯವಾಗುತ್ತದೆ. ಕಾದಂಬರಿ ಪ್ರಕಾರವೊಂದು ಕನ್ನಡದಲ್ಲಿ ಬೇರುಬಿಡುವ ಪೂರ್ವದಲ್ಲಿಯೇ ಗುಲ್ವಾಡಿ ವೆಂಕಟರಾಯರು ಇಂಥದ್ದೊಂದು ಕಾದಂಬರಿ ಬರೆದರೆಂದರೆ ಆಶ್ಚರ್ಯವಾಗುತ್ತದೆ. ಇಂದಿರಾಬಾಯಿಯ ಮೂಲಕ ಅವರು ಕನ್ನಡ ಸಾಮಾಜಿಕ ಕಾದಂಬರಿ ಪ್ರಕಾರದ ಪ್ರವರ್ತಕರಾದರು. ಕಥಾ ಸಂವಿಧಾನ, ಪಾತ್ರಪೋಷಣೆ ಇವುಗಳನ್ನು ಗಮನಿಸಿದಾಗ ಕಲೆಗಾರಿಕೆಗೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಕಥನ ಶೈಲಿ ಹಳೆಯ ಪುರಾಣದ ಉದ್ದುದ್ದ ವಾಕ್ಯಗಳ ಸರಣಿಯನ್ನು ನೆನಪಿಸಿದರೂ ಓದಿನ ವೇಗವನ್ನು ಕುಗ್ಗಿಸುವುದಿಲ್ಲ. ವಾಕ್ಯದೊಳಗೆ ವಾಕ್ಯ ಗರ್ಭಕಟ್ಟಿದ್ದರೂ ಮುಂದೇನು ಎಂಬ ಕುತೂಹಲ ಬಿಟ್ಟೂಬಿಡದೆ ಓದುವಹಾಗೆ ಮಾಡುತ್ತದೆ. ಉದಾಹರಣೆಗೆ ಅಂಬಾಬಾಯಿ ಮತ್ತು ದೇವಕಿಯ ನಡುವಿನ ಈ ಸಂಭಾಷಣೆ ನೋಡಿರಿ: “ವಿಶೇಷವೇನಮ್ಮ! ಕಾವೇರಿಯು ಹೇಗಾದರೂ ಮರ್ಯಾದೆಯುಳಿಸಿಕೊಂಡಳು. ಅಲ್ಲವಾದರೆ ಹೊಟ್ಟೆಯಲ್ಲಿದ್ದ ಬಡ ಪ್ರಾಣಿಯ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು.” “ಅದೇನು ಕಥೆ?” ”ನೀವು ತಿಳಿಯಲಿಲ್ಲವೆ? ಪ್ರಾಪ್ತ್ಯಾನುಸಾರವಾಗಿ ಆಕೆಗೆ ಪ್ರಾಯ ತುಂಬುವ ಮೊದಲೇ ವೈಧವ್ಯ ಬಂತು. ಪ್ರಾಯ ತುಂಬಿದ ನಂತರ ಮನುಷ್ಯ ಸಂಸಾರವಲ್ಲವೆ? ಗ್ರಹಚಾರದೋಷದಿಂದೇನೋ ಅವಿಚಾರ ನಡೆದು ಅದರ ಫಲವುಚೆನ್ನಾಗಿ ಕಾಣತೊಡಗುವವರೆಗೆ ಬುದ್ಧಿಹೀನರಾದ ತಾಯಿ ತಂದೆಗಳು ಯಾವ ಉಪಾಯವನ್ನಾದರೂ ಮಾಡದೆ ಸುಮ್ಮಗಿದ್ದು, ಆಮೇಲೇನು ಮಾಡುವುದೆಂದು ತಿಳಿಯದೆ ಕಂಗೆಟ್ಟು ಕಟ್ಟಕಡೆಗೆ ನನ್ನಲ್ಲಿಗೆ ಬಂದು ‘ದೇವಕೀ, ಏನಾದರೂ ಒಂದು ದಾರಿ ಮಾಡಿ ಕೊಡುತ್ತೀಯಾ?’ ಎಂದು ಪ್ರಲಾಪಿಸಲು ಕ್ಷಣಮಾತ್ರದಲ್ಲಿ ನಾನು ಹೋಗಿ ಬಹು ಸುಲಭದಿಂದ ಒಂದೇ ಔಷಧಿಯಲ್ಲಿ ಬಸುರು ಇಳಿಸಿ ಬಂದೆನು. ಹುಡುಗಿಯು ಈಗ ಸುಖದಲ್ಲಿ ಇದ್ದಾಳೆ.” ವೆಂಕಟರಾಯರ ಶೈಲಿಯ ಇನ್ನೊಂದು ವಿಶೇಷವೆಂದರೆ ತಮ್ಮ ಪ್ರದೇಶದಲ್ಲಿಯ ಗಾದೆ ಮಾತುಗಳನ್ನು, ಪಡೆನುಡಿಗಳನ್ನು ಪುಷ್ಕಳವಾಗಿ ಸಂದರ್ಭಕ್ಕೆ ಅನುಗುಣವಾಗಿ ಬಳಸಿಕೊಂಡಿದ್ದು. ಜಗಲಿಹಾರಿಯಲ್ಲದೆ ಗಗನ ಹಾರುವುದು?, ಮದುವೆ ತಂದ ಅಕ್ಕಿ ಸೇಸೆಗೆ ಹೋಯಿತು, ಎತ್ತಿದವರ ಕೈಗೂಸು, ಬರೀ ಗುಲ್ಲು ನಿದ್ದೆಗೇಡು, ಅಗಸನ ಕತ್ತೆಗೆ ಸೊಗಸಿನ ಏಟು, ಇದ್ದ ಮಕ್ಕಳಿಗೆ ಗಂಜಿ ಇಲ್ಲ ಇನ್ನೊಂದು ಕೊಡೋ ಸದಾಶಿವ, ಅಲ್ಲಿಗಿಲ್ಲ, ಎಲ್ಲಿಗೋ ಒಂದು ತಾಳಿ, ಹಸಿಗೋಡೆಗೆ ಕಲ್ಲೆಸೆದ ಹಾಗೆ, ಎಕ್ಕಲೆಗಳಿಗೆ ರೆಕ್ಕೆ ಬಂದಾಗ ಲೆಕ್ಕವಿಲ್ಲದೆ ಹಾರಾಟ, ಇದ್ದದ್ದೂ ಹೋಯಿತು ಮದ್ದಿನ ಗುಣದಿಂದ, ಯಾವ ಕಾಲು ಜಾರಿದರೂ ಕುಂಡೆಗೆ ಕೇಡು, ತನ್ನಕ್ಕನರಿಯದವಳು ನೆರೆಮನೆ ಬೊಮ್ಮಕ್ಕನ ಅರಿಯುವಳೆ?, ಕಡೆಯುವ ಕಲ್ಲನ್ನು ನೆನೆಯುವುದಕ್ಕೆ ಹಾಕಿದ ಹಾಗೆ- ಹೀಗೆ ಇಂಥ ಇನ್ನೂ ಅನೇಕವನ್ನು ಎತ್ತಿಕೊಡಬಹುದು. ಹೇಳುವ ಅಭಿಪ್ರಾಯಕ್ಕೆ ಪುಷ್ಟಿಕೊಡುವ ದೃಷ್ಟಾಂತದಂತೆ ಲೇಖಕರು ಇವನ್ನು ಬಳಸಿಕೊಂಡಿದ್ದಾರೆ. ಕಲೆ ಬದುಕಿಗೆ ಎಂದು ತಿಳಿದಿದ್ದ ಲೇಖಕರು ಕೃತಿಯ ಮೂಲ ಉದ್ದೇಶ ವಿಧವಾ ವಿವಾಹ ಮಂಡನೆಗೆ ಆನುಷಂಗಿಕವಾಗಿ ಹತ್ತುಹಲವು ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ. ಇಂಥಲ್ಲೆಲ್ಲ ಅವರ ವಿಡಂಬನೆ ಅತ್ಯಂತ ಹರಿತವಾಗಿದೆ. ವೈದ್ಯಕೀಯ ಜ್ಞಾನ ಈಗಿನಷ್ಟು ಬೆಳೆದಿರದ ಅಂದಿನ ಕಾಲದಲ್ಲಿ ಮನುಷ್ಯನ ಆಯುಷ್ಯ ಪ್ರಮಾಣ ಕಡಿಮೆಯಾಗಿತ್ತು. ಅತ್ಯಂತ ಕ್ಷುಲ್ಲಕ ಕಾರಣಗಳಿಗಾಗಿಯೂ ಸಾವು ಸಂಭವಿಸಬಹುದಿತ್ತು. ಹೀಗಿರುವಾಗ ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ಧತಿಯಿಂದಾಗಿ ಅನೇಕ ಬಾಲ ವಿಧವೆಯರು ಸಮಾಜದಲ್ಲಿದ್ದರು. ಅವರಿಗೆ ಪ್ರಾಯ ಬಂದಾಗ ಉಪ್ಪು ಹುಳಿ ತಿಂದ ಶರೀರಕ್ಕೆ ಸಹಜವೆಂಬಂತೆ ಕಾಮನೆಗಳು ಮುಕುರಿ ಅವರು ಅಡ್ಡ ಹಾದಿ ಹಿಡಿಯುತ್ತಿದ್ದರು. ಇಂಥವರು ಕೆಲವರು ಕುಲಗೆಟ್ಟರೆ, ಕೆಲವರಿಗೆ ಕುಲಗೆಡದೆ ಸುಖವುಣ್ಣುವ ವ್ಯವಸ್ಥೆಯನ್ನು ಮನೆಯವರೇ ಮಾಡುತ್ತಿದ್ದರು. ಇಂದಿರೆಯ ವಿಷಯದಲ್ಲಿಯೂ ಆಕೆಯ ತಂದೆ ತಾಯಿಗಳು ಸಂತ ಮಂಡಳಿಯನ್ನು ಕರೆಸಿದ್ದು ಕುಲಗೆಡದೆ ಸುಖಪಡೆಯುವುದಕ್ಕಾಗಿಯೇ. ‘ಕುಲಗೆಡದೆ ಸುಖ ಪಡೆಯಬಹುದಾದ ಮಾರ್ಗವನ್ನು ನಾವಿಲ್ಲಿ ತೋರಿಸಿಕೊಟ್ಟಿದ್ದೇವಷ್ಟೇ’ ಎಂದು ಸ್ವತಃ ತಾಯಿಯಾದ ಅಂಬಾಬಾಯಿಯೇ ಹೇಳುವುದು ಅಮಾನವೀಯ ಎನ್ನಿಸುತ್ತದೆ. ಅಂದಿನ ಕಾಲದ ಆಡಳಿತ ವ್ಯವಸ್ಥೆಯಲ್ಲಿ ಲಂಚ ಹೇಗೆ ಹಾಸುಹೊಕ್ಕಾಗಿತ್ತು ಎಂಬುದನ್ನು ಲೇಖಕರು ಪೊಲೀಸ್ ವ್ಯವಸ್ಥೆಯ ಮೂಲಕ ತೋರಿಸಿಕೊಡುತ್ತಾರೆ. ಹಣ ತೂರಿಯೇ ಭೀಮರಾಯ ಕೊಲೆ ಆರೋಪದಿಂದ ಮುಕ್ತನಾಗುತ್ತಾನೆ. ವ್ಯಂಗ್ಯವೆಂದರೆ ಅವನೇ ಕಮಲಪುರದ ಧರ್ಮವಿಚಾರಕನಾಗುವುದು. ಇಂದಿರೆಯ ಗಂಡನಿಗೆ ವೇಶ್ಯೆಯ ವ್ಯವಸ್ಥೆಮಾಡುವವನು ಅಪ್ಪ, ಮಗ, ವೇಶ್ಯೆ ಮೂವರಿಂದಲೂ ಹಣ ಕೀಳುವ ಪರಿ, ಸಾಯುತ್ತಿರುವ ವ್ಯಕ್ತಿಯ ಜೀವ ಜೀವ ಉಳಿಸಿಕೊಳ್ಳಬೇಕಾದ ಸಂದರ್ಭದಲ್ಲಿಯೇ ವೈದ್ಯ ಮತ್ತು ಮಧ್ಯಸ್ಥಗಾರ ಹಣ ಹೊಡೆದುಕೊಳ್ಳುವ ವಿಷಯದಲ್ಲಿ ನಡೆಸುವ ಚೌಕಾಶಿ ಹಣ ಹೇಗೆ ಮಾನವೀಯತೆಯನ್ನ ಹೊಸಕಿಹಾಕುತ್ತದೆ ಎಂಬುದನ್ನು ತೋರಿಸುತ್ತದೆ. ಲೇಖಕರು ಕೃತಿಯಲ್ಲಿ ಮಾಡುವ ಇನ್ನೊಂದು ಸಮರ್ಥನೆ ಎಂದರೆ ಆಧುನಿಕ ವಿದ್ಯಾಭ್ಯಾಸ. ಆಧುನಿಕ ವಿದ್ಯಾಭ್ಯಾಸವೊಂದೇ ಬಾಲ್ಯವಿವಾಹದಂಥ ಅನಿಷ್ಟವನ್ನು ಹೋಗಲಾಡಿಸಬಲ್ಲುದು, ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಬಲ್ಲುದು ಎಂದು ಅವರು ದೃಢವಾಗಿ ನಂಬಿದ್ದರು. ವಿಧವೆಯಾದ ಇಂದಿರಾಬಾಯಿ ನಂತರ ಓದನ್ನು ಮುಂದುವರಿಸುತ್ತಾಳೆ. ಉನ್ನತ ವ್ಯಾಸಂಗದ ಕಾರಣಕ್ಕಾಗಿಯೇ ಭಾಸ್ಕರನಿಗೆ ಸಮಾಜದಲ್ಲಿ ಮಾನ್ಯತೆ ದೊರೆಯುತ್ತದೆ. ಇಂದಿರಾಬಾಯಿ ಮತ್ತು ಭಾಸ್ಕರನ ಮದುವೆಗೆ ಬಹಿರಂಗ ವಿರೋಧ ವ್ಯಕ್ತವಾಗುವುದಿಲ್ಲ. ಗುಲ್ವಾಡಿಯವರು ಅಂದಿನ ಮಠ ಮಾನ್ಯ ವ್ಯವಸ್ಥೆಯನ್ನು ಅತ್ಯಂತ ತೀಕ್ಷ್ಣವಾಗಿ ವಿಡಂಬಿಸುತ್ತಾರೆ. “… ಒಬ್ಬ ಬಿ.ಎ.ಯು ಮತ್ತೊಬ್ಬಬಿ.ಎ.ಯನ್ನು ಕಂಡಕೂಡಲೆ, ‘well (ಒಳ್ಳೇದು) ನಿನಗೆ ಜಾತಿ ಬೇಕೆ?’ `ಬೇಕು, price (ಬೆಲೆ) ಏನು?’ ‘ಅದೇನು a trifle! dead cheaf!’ (ಅಲ್ಪ ವಿಷಯ, ಬರೇ ಅಗ್ಗ). ‘ನೀನೆಷ್ಟಕ್ಕೆ ಕೊಂಡುಕೊಂಡೆ?’ ‘ನಾನು ಮೂರು ರೂಪಾಯಿ ಕೊಟ್ಟೆ, ಆದರೆ ಈಗ ಸ್ವಲ್ಪ ಕ್ರಯ ತಗ್ಗಿದೆ’ ‘ಈಗೇನು ಕ್ರಯವಿದೆ?’ ‘ಈಗೆರಡೇ ರೂಪಾಯಿ’ ‘ಅದೇನು fluctuation’ (ಏರುತಗ್ಗು) ‘ಮತ್ತೇನು? market (ಧಾರಣೆ) ಒಂದೇ ತರದಲ್ಲಿರುತ್ತದೆಯೇ? ಹೆಚ್ಚಿದರೆ ಒಂದೊಂದು ಸಾರಿ ಇಪ್ಪತ್ತೈದರ ವರೆಗೆ ಮುಟ್ಟುತ್ತದೆ’ – ಇದು ಹೀಗೆಯೇ ಮುಂದುವರಿಯುತ್ತದೆ. ಕಾದಂಬರಿಯ ಕೊನೆಯಲ್ಲಿ ಧರ್ಮವಿಚಾರಕನ ಸ್ಥಾನಕ್ಕೆ ಭೀಮರಾಯ ರಾಜೀನಾಮೆ ಕೊಡುವುದೂ ಕಾದಂಬರಿಯ ಗುರಿಸಾಧನೆಯ ನಿಟ್ಟಿನಲ್ಲಿಯೇ ಇದೆ. ವೆಂಕಟರಾಯರು ಬದುಕಿದ ಕಾಲದಲ್ಲಿ ಸ್ತ್ರೀಯರ ಸ್ಥಿತಿ ಸಮಾಜದಲ್ಲಿ ಅತ್ಯಂತ ನಿರೃಷ್ಟವಾಗಿತ್ತು. ವೆಂಕಟರಾಯರೇ ಇಂದಿರಾಬಾಯಿಯಲ್ಲದೆ ಸೀಮಂತಿನಿ, ಭಾಗೀರಥಿ ಎಂಬ ಇನ್ನೆರಡು ಕಾದಂಬರಿಗಳನ್ನು ಬರೆದರು. ಬೋಳಾರ ಬಾಬುರಾಯರು ವಾಗ್ದೇವಿ, ಗುಲ್ವಾಡಿ ಅಣ್ಣಾಜಿಯವರು ರೋಹಿಣಿ ಕಾದಂಬರಿ ಬರೆದರು. ಕೆರೂರು ವಾಸುದೇವಾಚಾರ್ಯರು ಇಂದಿರೆ ಬರೆದರು. ಆದರೆ ಅದು ಗುಲ್ವಾಡಿಯವರ ಇಂದಿರಾಬಾಯಿಗೆ ಪ್ರತಿಕ್ರಿಯಾತ್ಮಕವಾಗಿ ಬಂದದ್ದು. ಅಲ್ಲಿ ಸುಧಾರಣಾವಾದಿಗಳು ಮತ್ತು ಆಧುನಿಕ ವಿದ್ಯಾಭ್ಯಾಸ ಮಾಡಿದವರನ್ನು ಲೇವಡಿಮಾಡಲಾಗುತ್ತದೆ. ಒಟ್ಟಾರೆ ಕನ್ನಡದ ಮೊಟ್ಟಮೊದಲ ಸಾಮಾಜಿಕ ಕಾದಂಬರಿಯೇ ಮುಂದೆ ಈ ಪ್ರಕಾರದಲ್ಲಿ ಬಂದ ಹುಲುಸಾದ ಬೆಳೆಗೆ ವಿಶಿಷ್ಟ ರೀತಿಯಲ್ಲಿ ಭೂಮಿಯನ್ನು ಹದಗೊಳಿಸಿತು.