ಳೆದ ಶತಮಾನದ ಕೊನೆಯ ಎರಡು ದಶಕಗಳು ಮತ್ತು ಈ ಶತಮಾನದ ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರುವ ಕೆ. ಸತ್ಯನಾರಾಯಣ ಅವರು ಮುಖ್ಯವಾಗಿ ಕತೆಗಾರ ಎಂದೇ ಪ್ರಸಿದ್ಧರಾದವರು. ತಮ್ಮ ಬರೆಹಗಳಲ್ಲಿ ಸದಾ ಪ್ರಯೋಗಶೀಲರಾಗಿರುವ ಅವರು ಹೊಸ ರೀತಿಯಲ್ಲಿ ಹೇಳುವುದಕ್ಕೆ ಸದಾ ತುಡಿಯುತ್ತಿರುತ್ತಾರೆ. ಈ ಮಾತಿಗೆ ಅವರ ಆತ್ಮಕಥನವೇ ಸಾಕ್ಷಿ. ಆತ್ಮಕಥನಗಳನ್ನು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಪಡುವ ಹಾಗೆ ವಿಶಿಷ್ಟವಾಗಿ ಅವರು ಬರೆದಿರುವರು. ಅದು ಒಂದಲ್ಲ, ನಾಲ್ಕು ಸಂಪುಟಗಳಲ್ಲಿ.
ಮೊದಲಿನದು, ನಾವೇನು ಬಡವರಲ್ಲ, ಎರಡನೆಯದು ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ, ಮೂರನೆಯದು ವೃತ್ತಿ ವಿಲಾಸ. ಇದೀಗ ಬಂದಿರುವುದು ಬಾಡಿಗೆ ಮನೆಗಳ ರಾಜಚರಿತ್ರೆ. ಮೊದಲಿನ ಮೂರನ್ನು ನಾನು ಓದಿಲ್ಲ. ಆದರೆ ಅವರ ಕೆಲವು ಕಥಾಸಂಕಲನ, ಕಾದಂಬರಿಗಳನ್ನು ನಾನು ಓದಿರುವೆನು. ಕೆ.ಸತ್ಯನಾರಾಯಣ ಅವರು ತಾವು ಬಾಲ್ಯದಿಂದ ನಿವೃತ್ತಿಯ ನಂತರ ಸ್ವಂತ ಮನೆಯಲ್ಲಿ ನೆಲೆಯಾಗುವ ವರೆಗೆ ಯಾವ ಯಾವ ಊರುಗಳಲ್ಲಿ ಬಾಡಿಗೆ ಮನೆಗಳಲ್ಲಿ ಇದ್ದೆವು, ಆ ಬಾಡಿಗೆ ಮನೆಗಳ ಮೂಲಕ ತಮ್ಮ ಬದುಕು ಹೇಗೆ ಪ್ರಭಾವಿತವಾಯಿತು, ಬಾಡಿಗೆ ಮನೆಗಳ ಕಾರಣದಿಂದ ಸಾಮೀಪ್ಯಕ್ಕೆ ಬಂದ ವಿವಿಧ ರೀತಿಯ ಜನರಿಂದ ತಮ್ಮ ಅನುಭವಕ್ಕೆ ಬಂದ ಅಧ್ಯಾತ್ಮ ಯಾವುದು ಎಂಬುದನ್ನು ತುಂಬ ಸರಳ ಸುಂದರ ಶೈಲಿಯಲ್ಲಿ ಹೇಳಿದ್ದಾರೆ. ಸಹಜ ಕತೆಗಾರರು ಅವರಾಗಿರುವ ಕಾರಣ ಇಲ್ಲಿ ಕಥಿಸುವುದು ಅವರಿಗೆ ಕಷ್ಟವಾಗಿಲ್ಲ. ಅವರ ದೃಷ್ಟಿಯಲ್ಲಿ ಪ್ರತಿಯೊಂದು ಮನೆಯೂ ವಾಸ್ತವ್ಯವೂ ಜಗತ್ತಿಗೆ, ಮನುಷ್ಯನ ಸ್ವಭಾವಕ್ಕೆ ಹೊಸದೊಂದು ಕಿಟಕಿ.
ಆತ್ಮಕಥನ ಎಂಬುದು ಸಾಹಿತ್ಯದ ಒಂದು ಭಾಗವಾಗಿ ಪರಿಗಣಿತವಾಗಿದೆ. ವಿವಾದದ ಮೂಲಕ ಪ್ರಸಿದ್ಧಿಯನ್ನು ಪಡೆಯುವ ಉದ್ದೇಶದಿಂದಲೇ ಆತ್ಮಕಥನಗಳನ್ನು ಬರೆದವರೂ ಇದ್ದಾರೆ. ಆತ್ಮಕಥನವು ವ್ಯಷ್ಟಿ ಚರಿತ್ರೆಯಾದರೂ ವ್ಯಷ್ಟಿಯು ಸಮಾಜದ ಭಾಗವಾಗಿರುವ ಕಾರಣ ಸಮಷ್ಟಿ ಚರಿತ್ರೆಯೂ ಆಗಿರುತ್ತದೆ. ಆ ಕಾರಣಕ್ಕೆ ಆತ್ಮ ಕಥನವು ವ್ಯಕ್ತಿಯು ಬದುಕಿದ ಸಮಕಾಲೀನ ಸಮಾಜದ ಕಥನವೂ ಆಗಿರುತ್ತದೆ. ಈ ಮೂಲಕ ಆತ್ಮಕಥನಗಳ ಅಧ್ಯಯನವು ವ್ಯಕ್ತಿಯನ್ನು ಅರಿಯುವುದರ ಜೊತೆಗೆ ಆತನ ಸಮಕಾಲೀನ ಸಮಾಜವನ್ನು ಅರಿಯುವುದಕ್ಕೂ ಒಂದು ಕಿಂಡಿಯಾಗುತ್ತದೆ.
ಆತ್ಮಕಥನ ಬರೆಯಬೇಕಾದರೆ ಮುಖ್ಯವಾಗಿ ಇರಬೇಕಾದ ಅರ್ಹತೆ ಪ್ರಾಮಾಣಿಕತೆ. ಮುಚ್ಚುಮರೆ ಇಲ್ಲದೆಯೇ ಬೆತ್ತಲಾಗುವ ಎದೆಗಾರಿಕೆ ಆತ್ಮಕಥನ ಬರೆಯುವವರಲ್ಲಿ ಇರಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಮಹಾತ್ಮ ಗಾಂಧೀಜಿಯವರ ಆತ್ಮಕಥನ ನನ್ನ ಸತ್ಯಾನ್ವೇಷಣೆ' (ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಅನುವಾದ) ಸುಪ್ರಸಿದ್ಧವಾದದ್ದು. ಜಗತ್ತಿನ ಆತ್ಮಕಥನಗಳಲ್ಲೆಲ್ಲ ತುಂಬ ಶ್ರೇಷ್ಠವಾದದ್ದು ಮತ್ತು ನನಗೆ ಇಷ್ಟವಾದದ್ದು ಅದು. ಅದರ ಮುನ್ನುಡಿಯಲ್ಲಿ ಗಾಂಧೀಜಿಯವರು ಒಂದು ಮಾತನ್ನು ಹೇಳುತ್ತಾರೆ,-ನಾನು ನನ್ನಲ್ಲೇ ಆಲೋಚನೆ ಮಾಡಿ ಹಿನ್ನೋಟ ಬೀರಿದಂತೆ ನನ್ನ ದೌರ್ಬಲ್ಯ ನನಗೆ ಹೆಚ್ಚು ಸ್ಪಷ್ಟವಾಗಿ ಅನುಭವವಾಗುತ್ತದೆ’ ಎಂದು. ನಿಜ, ಇದು ಪ್ರತಿಯೊಬ್ಬ ಆತ್ಮಕಥನಕಾರನ ಅನುಭವವಾಗಿರಬಹುದು.
ಆತ್ಮಕಥನದಲ್ಲಿ ಇರುವ ಪ್ರಮುಖ ತೊಡಕು ಎಂದರೆ ನಮ್ಮ ಸಂಪರ್ಕದಲ್ಲಿ ಬರುವ ವ್ಯಕ್ತಿಗಳನ್ನು ನಮ್ಮದೇ ದೃಷ್ಟಿಯಲ್ಲಿ ಬೆಲೆಕಟ್ಟುವುದು. ನಾವು ನಮ್ಮೆರಡು ಕಣ್ಣುಗಳಿಂದ ಜಗತ್ತನ್ನು ನೋಡುತ್ತಿರುವಾಗ ಸಾವಿರ ಕಣ್ಣುಗಳು ನಮ್ಮನ್ನು ನೋಡುತ್ತಿರುತ್ತವೆ. ಆ ಸಾವಿರ ಕಣ್ಣುಗಳಿಗೆ ನಮ್ಮ ಕುರಿತು ಸಾವಿರ ಅಭಿಪ್ರಾಯಗಳಿರುತ್ತವೆ. ಊರವರ ವಿಚಾರವೇಕೆ, ಸ್ವತಃ ತಮ್ಮ ತಂದೆತಾಯಿಗಳ ಕುರಿತು, ಒಡಹುಟ್ಟಿದವರ ಕುರಿತು ನಮ್ಮ ಅಭಿಪ್ರಾಯಗಳು ಎಲ್ಲ ಕಾಲದಲ್ಲಿಯೂ ಸರಿಯಾಗಿಯೇ ಇರಬೇಕಾಗಿಲ್ಲ. ಯಾರು ಯಾರ ಕುರಿತೇ ಆಗಲಿ ಯಾವುದರ ಕುರಿತೇ ಆಗಲಿ ತಮ್ಮ ಅಭಿಪ್ರಾಯ ಹೇಳಿದರೆ ಅದು ಆಂಶಿಕ ಸತ್ಯವಾಗಿ ಮಾತ್ರ ಇರುತ್ತದೆ. ನನಗೆ ಮತ್ತೆ ಇಲ್ಲಿ ಗಾಂಧೀಜಿಯವರು ತಮ್ಮ ಆತ್ಮಕಥನದಲ್ಲಿ ಹೇಳಿದ ಈ ಮಾತು ನೆನಪಾಗುತ್ತದೆ, –ತನ್ನ ತಪ್ಪನ್ನು ಯಾವಾಗಲೂ ದೊಡ್ಡದು ಮಾಡಿ ನೋಡಬೇಕು.ಇತರರ ತಪ್ಪನ್ನು ಚಿಕ್ಕದು ಮಾಡಿ ನೋಡಬೇಕು. ಆಗ ಮಾತ್ರ ಮನುಷ್ಯ ಎರಡರ ನ್ಯಾಯವಾದ ಸಮತೂಕವನ್ನು ಅರಿಯಬಲ್ಲನೆಂಬುದು ನನ್ನ ಅಭಿಪ್ರಾಯ.' (ಪುಟ487)-. ನನ್ನ ದೃಷ್ಟಿಯಲ್ಲಿ ಇದು ಅತ್ಮಕಥನಕಾರರ ಎರಡನೆಯ ಅರ್ಹತೆಯಾಗಿರುತ್ತದೆ. ಬಾಡಿಗೆ ಮನೆಗಳ ರಾಜಚರಿತ್ರೆಯಲ್ಲಿ ಕೆ.ಸತ್ಯನಾರಾಯಣ ಅವರು ತಮ್ಮ ಬದುಕಿನಲ್ಲಿ ಸಂದುಹೋದ ಹಲವು ಘಟನೆಗಳ ಮರು ಅವಲೋಕನ ಮಾಡುವಾಗ ಇಂಥ ಸಮತೂಕವನ್ನು ಸಾಧಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಬಂದವರ ಕುರಿತು ಕೇವಲ ತಮ್ಮ ಅಭಿಪ್ರಾಯವನ್ನು ಮಾತ್ರ ಹೇಳದೆ ಅವರ ಮನದಲ್ಲಿ ತಮ್ಮ ಬಗ್ಗೆ ಯಾವ ಅಭಿಪ್ರಾಯ ಮೂಡಿರಬಹುದು ಎಂಬುದನ್ನೂ ಊಹಿಸಿಕೊಳ್ಳುತ್ತಾರೆ. ಇತರರ ಕುರಿತು ತಮ್ಮ ಅಭಿಪ್ರಾಯವನ್ನು ಹೇಳುವಾಗ ಖಚಿತವಾಗಿ ಹೀಗೇ ಎಂದು ಹೇಳುವುದಿಲ್ಲ. ಉದಾಹರಣೆಗೆ ತಮ್ಮ ತಂದೆಯ ಕುರಿತು ಅವರು ಹೇಳುವ ಒಂದು ಮಾತು,-ಬಾಡಿಗೆ ಮನೆಗಳು ಕೂಡ ಇಂತಹದೇ ಇರಬೇಕು, ಇಷ್ಟೇ ಅನುಕೂಲಗಳಿರಬೇಕು ಎಂದು ಕೂಡ ನಮ್ಮ ತಂದೆ ನಂಬಿರಲಿಲ್ಲವೆಂದು ಕಾಣುತ್ತದೆ.’- ತಮ್ಮ ತಂದೆಯ ಆಲೋಚನೆ ಇದಕ್ಕೂ ಭಿನ್ನವಾಗಿದ್ದಿರಬಹುದು ಎಂಬ ಅರಿವು ಅವರಿಗೆ ಇದೆ. ಇತರರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಾಗ ಇರಬೇಕಾದ ಎಚ್ಚರ ಇದು.
ಕೃತಿಯಲ್ಲಿ ಹಲವು ಕಡೆ ಮನುಷ್ಯ ಸ್ವಭಾವಗಳ ಸುಂದರ ವಿಶ್ಲೇಷಣೆ ಬರುತ್ತದೆ. ವಯಸ್ಸಾಗುತ್ತಾ ಆಗುತ್ತಾ, ಗಂಡ-ಹೆಂಡತಿ ಇಬ್ಬರೂ ಎಲ್ಲ ಸಂಗತಿ- ವಿದ್ಯಮಾನಗಳನ್ನು ಕುರಿತಂತೆ ಒಂದೇ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ' ಎಂಬ ಮಾತು. ನಿಜ, ಕೆಲವೊಮ್ಮೆ ಹೆಂಡತಿಯು ಆಡಬೇಕಾದ ಮಾತನ್ನು ಗಂಡನೇ ಮೊದಲು ಆಡಿಬಿಡುತ್ತಾನೆ. ಹಾಗೆಯೇ ಗಂಡನ ಮಾತನ್ನು ಹೆಂಡತಿಯೇ ಮೊದಲು ಆಡಿಬಿಡುತ್ತಾಳೆ. ಸುದೀರ್ಘ ದಾಂಪತ್ಯದಲ್ಲಿ ಇಂಥ ಅನುಭವ ಪ್ರತಿಯೊಬ್ಬರಿಗೂ ಆಗಿರುತ್ತದೆ. ಬದುಕಿನಲ್ಲಿ ಮಾಗಿದಂತೆ ಈ ರೀತಿಯ ಬರೆವಣಿಗೆ ಸಾಧ್ಯವಾಗುತ್ತದೆ. ಈ ಆತ್ಮಕಥನದಲ್ಲಿ ನಟ ರಾಜಕುಮಾರ್‌ ಅವರ ಪ್ರಸ್ತಾಪ ಬರುತ್ತದೆ. ರಾಜಕುಮಾರ್‌ ಅವರ ಹುಟ್ಟೂರು ಸಿಂಗಾನಲ್ಲೂರಿಗೆ ಮುಕ್ಕಾಲು ಮೈಲು ದೂರದಲ್ಲೇ ಲೇಖಕರು ಕೆಲವು ಕಾಲ ವಾಸಿಸಿದ್ದರು. ರಾಜಕುಮಾರ್‌ ಅವರ ಕುರಿತು ಆ ಹಳ್ಳಿಯ ಜನರಿಂದ ಹಲವು ಸಂಗತಿಗಳನ್ನು ಕೇಳಿದ್ದರು. ನಟನನ್ನು ತುಂಬಾ ಹತ್ತಿರದಿಂದ, ದಿನನಿತ್ಯದ ಜೀವನದ ಮನೆವಾರ್ತೆಯ ಭಾಗವಾಗಿ ಕಂಡಿದ್ದ ಅವರಿಗೆ ಈಗ ರಾಜಕುಮಾರ್‌ರನ್ನು ನಮ್ಮ ಸಂಸ್ಕೃತಿ ಚಿಂತನೆ ಕಟ್ಟಿಕೊಡುವ ರೀತಿ ಕಂಡಾಗ ಗಲಿಬಿಲಿಗೊಳ್ಳುತ್ತಾರೆ.ವಸ್ತುವನ್ನಾಗಲೀ, ವ್ಯಕ್ತಿಯನ್ನಾಗಲೀ ಅದು ಇರುವ ಸ್ವರೂಪದಲ್ಲೇ ನಾವು ಗ್ರಹಿಸುವುದಿಲ್ಲ. ನಮಗೆ ಬೇಕಾದ ಹಾಗೆ, ನಮ್ಮ ಮಾನಸಿಕ ಅವಶ್ಯಕತೆಗನುಗುಣವಾಗಿ ಗ್ರಹಿಸುತ್ತೇವೆ ಎಂಬ ಮಾತು ಎಷ್ಟು ಸತ್ಯವಾದದ್ದು!’ ಎಂದು ಲೇಖಕರು ಬರೆದಿರುವುದು. ಆತ್ಮಕಥನಕಾರರ ಬಿಕ್ಕಟ್ಟಿನ ಒಂದು ಮುಖ ಇದು. ಹಾಗೆಯೇ ಅವರು ಹೇಳುವ ಇನ್ನೊಂದು ಮಾತು, ... ಒಂದನ್ನು ಅನುಭವಿಸುವಾಗ ಉಂಟಾಗುವ ಭಾವನೆಗಳು ನಿಜವೋ, ಈಗ ಹೋಲಿಕೆಯಲ್ಲಿ ನೆನಸಿಕೊಂಡಾಗ ಮೂಡುವ ಭಾವನೆಗಳು ನಿಜವೋ. ಇಲ್ಲ ಎರಡನ್ನೂ ಸರಿಯಾದ ಹದದಲ್ಲಿ ಬೆರೆಸಿ ನೆನಪುಗಳನ್ನು ಕಟ್ಟಬೇಕೋ?' ಇದು ಬಿಕ್ಕಟ್ಟಿನ ಇನ್ನೊಂದು ಮುಖ. ತಮ್ಮ ಬಾಲ್ಯವನ್ನು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಕಳೆದ ಲೇಖಕರು ಸ್ಪೃಶ್ಯ ಮತ್ತು ಅಸ್ಪೃಶ್ಯತೆಯ ಅನುಭವದ ವಿವಿಧ ಮುಖಗಳನ್ನು ಸ್ವಾರಸ್ಯಕರವಾಗಿ ಹೇಳುವರು. ಹಾಗೆಯೇ ಬದುಕಿನ ತತ್ವಜ್ಞಾನವನ್ನು ಕೂಡ.ಮನುಷ್ಯ ಬೆಳೆಯುವಾಗ, ಸುಖಪಡುವಾಗ, ಸುಖವನ್ನು ಬಯಸುವಾಗ, ಯಾರ ಯಾರ ಸ್ವಾರ್ಥ ಯಾವಾಗ ಎಷ್ಟು ಮುಂದೆ ಬರುತ್ತದೆ ಎಂಬುದು ನಿಗೂಢವೇ. ಅದಕ್ಕೆ ವಯಸ್ಸಿನ ಹಂಗಿರುವುದಿಲ್ಲ. ಎಲ್ಲರಿಗೂ ಬೇರು ಬಿಡುವ, ಸ್ಥಾಪಿಸಿಕೊಳ್ಳುವ ಹಪಾಹಪಿಯೇ…’ ಎಂದು ಹೇಳುವಾಗ ಮತ್ತು, ಇನ್ನೊಬ್ಬರ ಮನೆಯಲ್ಲಾದಾಗ ವೈಚಾರಿಕವಾಗಿ ಪ್ರತಿಕ್ರಿಯಿಸುವುದಕ್ಕೂ, ನಮ್ಮ ಮನೆಯಲ್ಲೇ ಆದಾಗ ಏನು ಮಾಡುತ್ತೇವೆ ಎಂಬ ಪ್ರಶ್ನೆಗೆ ಉತ್ತರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಮ್ಮ ನಮ್ಮ ವರ್ಗ ಹಿತಾಸಕ್ತಿಗಳನ್ನು ಮೀರಿ ಯೋಚಿಸುವುದು ನಿಜಕ್ಕೂ ಸಾಧ್ಯವೇ ಎಂಬ ಪ್ರಶ್ನೆಗೆ ನಿಜವಾಗಿಯೂ ಉತ್ತರವಿಲ್ಲ..' ಎಂದು ಹೇಳುವಲ್ಲಿ ಈ ತತ್ವಜ್ಞಾನ ಕಾಣುತ್ತದೆ. ಬಾಡಿಗೆ ಮನೆಗಳ ರಾಜಚರಿತ್ರೆ’ಗೆ ಭರತವಾಕ್ಯದಂತೆ ಈ ಮಾತುಗಳು ಕೃತಿಯಲ್ಲಿವೆ. ನೀವು ಎಷ್ಟೇ ಮನೆಗಳನ್ನು ಬದಲಾಯಿಸಿದರೂ, ಎಷ್ಟೇ ಊರುಗಳಿಗೆ ಹೋದರೂ, ಕೊನೆಗೆ ನಿಮಗೆ ಸಿಗುವುದು ನಿಮ್ಮ ಸ್ವಭಾವ, ಜಾಯಮಾನಕ್ಕೆ ಸಮೀಪವಾದ ಜನಗಳು ಮಾತ್ರ. ಹಾಗಾಗಿ, ನಿಮಗೆ ಮನುಷ್ಯ ಸ್ವಭಾವದ, ವೈವಿಧ್ಯ-ಆಳಗಳ ಪರಿಚಯವಾಗುವುದೇ ಇಲ್ಲ. ಆದರೆ ಕೆಲವೊಂದು ಮನೆಗಳಲ್ಲಿ ಮನೆಗಳ ಮೂಲಕ ಸಿಗುವ ಸಂಬಂಧಗಳು ಕೆಲವು ಪಾಠಗಳನ್ನು ಕಲಿಸುತ್ತವೆ.' ಲೇಖಕರ ಈ ಮಾತು ನಿಜ. ಇದನ್ನೇ ಹೇಳುವುದು, ತೆರೆದಷ್ಟೇ ಬಾಗಿಲು ಎಂದು. ನಾನು ಹಲವು ಆತ್ಮಕಥನಗಳನ್ನು ಓದಿದ್ದೇನೆ. ಅದರಲ್ಲೂ ಸಾಹಿತಿಗಳ ಆತ್ಮಕಥನಗಳನ್ನು ಓದಿದ್ದೇನೆ. ಆದರೆ ಅವೆಲ್ಲವುಗಳಿಗಿಂತ ಭಿನ್ನವಾದ ಕಟ್ಟುವಿಕೆಯಿಂದಾಗಿ, ಯಾವುದೇ ಆತ್ಮಪ್ರತ್ಯಯವಿಲ್ಲದೆ ಒಪ್ಪಿಕೊಳ್ಳುವಿಕೆಯ ಪ್ರಾಮಾಣಿಕತೆಯಿಂದಾಗಿ, ಬದುಕಿನ ಸರಳ ಸತ್ಯಗಳಿಗೆ ಉದಾಹರಣೆಗಳೆಂಬಂತೆ ಸಂಗತಿಗಳನ್ನು ಹೇಳುವ ಶೈಲಿಯಿಂದಾಗಿ, ವಿವಾದಗಳಿಂದ ದೂರವಾಗಿರುವ ಘಟನೆಗಳ ನಿರುದ್ವಿಗ್ನ ನಿರೂಪಣೆಯಿಂದಾಗಿಬಾಡಿಗೆ ಮನೆಗಳ ರಾಜಚರಿತ್ರೆ’ಗೆ ರಾಜಕಳೆ ಬಂದಿದೆ.