ಮರಾಠಿ ಸಾಹಿತ್ಯದಲ್ಲಿ ಆತ್ಮಕಥನಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ದಲಿತ ಸಾಹಿತ್ಯದ ಸಂದರ್ಭದಲ್ಲಿ ಬೆಂಕಿಉಂಡೆಯಂಥ ಹಲವು ಆತ್ಮಕಥನಗಳು ಬಂದವು. ಮರಾಠಿ ದಲಿತ ಸಾಹಿತ್ಯ ದೇಶದ ಉಳಿದ ಭಾಷೆಗಳ ದಲಿತ ಸಾಹಿತ್ಯವನ್ನು ಪ್ರಭಾವಿಸುವ ಮಟ್ಟಕ್ಕೆ ಬೆಳೆದಿದೆ. ಮರಾಠಿಯ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾಗಿರುವ ಭಾಲಚಂದ್ರ ಮುಣಗೇಕರ್ ‘ಮೀ ಅಸಾ ಘಡಲೋ’ ಎಂಬ ಆತ್ಮಕಥನವನ್ನು ಬರೆದಿರುವರು. ಅವರ ಬಾಲ್ಯದಿಂದ ಹೈಸ್ಕೂಲು ಶಿಕ್ಷಣ ಮುಗಿಯುವ ವರೆಗಿನ ಅವರ ಬದುಕಿನ ವಿವರಗಳು ಇದರಲ್ಲಿವೆ. ಕನ್ನಡದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಇದನ್ನು ‘ನಾನು ಹೀಗೆ ರೂಪುಗೊಂಡೆ’ ಹೆಸರಿನಲ್ಲಿ ಕನ್ನಡಕ್ಕೆ ತಂದಿರುವರು. ದಲಿತ ಸಾಹಿತ್ಯದ ಮೂಲ ಲಕ್ಷಣಗಳಲ್ಲಿ ಒಂದು ಅಲ್ಲಿರುವ ಆಕ್ರೋಶ. ಇದನ್ನು ನಾವು ಮರಾಠಿಯಲ್ಲೂ ಕಾಣುತ್ತೇವೆ ಕನ್ನಡದಲ್ಲೂ ಕಾಣುತ್ತೇವೆ. ಆದರೆ ಇಲ್ಲಿಯ ಆಶ್ಚರ್ಯವೆಂದರೆ ಭಾಲಚಂದ್ರ ಮುಣಗೇಕರ್ ಅವರು ಎಲ್ಲಿಯೂ ಆಕ್ರೋಶವನ್ನು ಪ್ರದರ್ಶಿಸಲೇ ಇಲ್ಲ. ಇಕ್ರಲಾ ವದೀರ್ಲಾ ಎಂಬ ಕೂಗು ಇಲ್ಲವೇ ಇಲ್ಲ. ತುಂಬ ತಣ್ಣಗಿನ ಭಾಷೆಯಲ್ಲಿ ಅವರು ಸಣ್ಣ ಸಣ್ಣ ವಿವರಗಳನ್ನೂ ನೀಡುತ್ತ ಹೋಗುತ್ತಾರೆ. ಅದನ್ನು ಓದುತ್ತಹೋಗುತ್ತಿದ್ದಂತೆ ನಮಗೆ ನಾವೇ ಕರಗುತ್ತ ಹೋಗುತ್ತೇವೆ. ಕೆಲವು ಕಡೆಗಳಲ್ಲಿ ನಮಗೆ ಅರಿವಿಲ್ಲದಂತೆ ಕಣ್ಣು ತೇವವಾಗುತ್ತದೆ. ಕೊರಳ ನರಗಳು ಉಬ್ಬಿ ಬರುತ್ತವೆ. ಮುಣಗೇಕರ ಅವರಿಗೆ ಜಗತ್ತಿನಲ್ಲಿ ಯಾರೂ ಕೆಟ್ಟವರಂತೆ ಕಾಣುವುದೇ ಇಲ್ಲ. ತಮ್ಮ ದಲಿತತನಕ್ಕೆ ಮೇಲ್ವರ್ಗದವರನ್ನು ಅವರು ಎಲ್ಲಿಯೂ ದೂಷಿಸುವುದಿಲ್ಲ. ತಮ್ಮ ಯಾತನೆಯನ್ನು ಅವರು ಸರಳವಾಗಿ ಹೇಳುತ್ತ ಹೋಗುತ್ತಾರೆ.
ತಮ್ಮನ್ನು ರೂಪಿಸಿದವರ ಬಗ್ಗೆ ಕೃತಜ್ಞತೆಯಿಂದ ಹೇಳುವಾಗ ಎಲ್ಲಿಯೂ ಕಂಜೂಸುತನವನ್ನು ಅವರು ಪ್ರದರ್ಶಿಸುವುದಿಲ್ಲ. ಹೃದಯತುಂಬಿ ಹೇಳುತ್ತಾರೆ. ತಾವು ದಲಿತನೆಂಬ ಕಾರಣಕ್ಕೆ ತಮ್ಮನ್ನು ಯಾರೋ ಉಪೇಕ್ಷಿಸಿದರು ಎಂದು ಅವರು ಎಲ್ಲಿಯೂ ಭಾವಿಸುವುದಿಲ್ಲ. ತಾವು ದಲಿತರಾಗಿದ್ದರೂ ತಮ್ಮ ಮೇಲೆ ತಮ್ಮ ಗುರುಗಳು, ಸಮಾಜದ ಕೆಲವರು ಹೇಗೆ ಪ್ರೀತಿಯನ್ನು ಔದಾರ್ಯವನ್ನು ತೋರಿಸಿದರು ಎಂಬುದನ್ನು ಅವರು ದಾಖಲಿಸುತ್ತಾರೆ.
ಈ ಆತ್ಮಕಥನ ಆರಂಭವಾಗುವುದೇ ವಿಶಿಷ್ಟ ರೀತಿಯಲ್ಲಿ. ದೇವಗಡದಲ್ಲಿ ಹಡಗಿನ ಭೋಂಗಾ ಬಾರಿಸುತ್ತಿದ್ದಂತೆ ಬಂದರಿನಲ್ಲಿ ಚಟುವಟಿಕೆಗಳು ಆರಂಭವಾಗುವುದರ ವಿವರದೊಂದಿಗೆ ಪುಟ ತೆರೆದುಕೊಳ್ಳುತ್ತದೆ. ಕೊಂಕಣ ಮಹಾರಾಷ್ಟ್ರದ ಈ ತೀರದಿಂದ ಮುಂಬಯಿಗೆ ಉದ್ಯೋಗ ಅರಸಿಕೊಂಡು ಹೋಗುವವರು,ಅನ್ಯಕಾರ್ಯ ನಿಮಿತ್ತ ಹೋಗುವವರು ಹಡಗಿನ ಮೂಲಕ ತೆರಳುವರು. ಮುಣಗೇಕರ ಅವರು ಆಗಷ್ಟೇ ಹೈಸ್ಕೂಲು ಶಿಕ್ಷಣವನ್ನು ಮುಗಿಸಿದ್ದರು. ಹನ್ನೊಂದನೆ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಿತ್ತು. ಅವರು ನೌಕರಿಗಾಗಿ ಮುಂಬಯಿಗೆ ಹೊರಟಿದ್ದರು. ಜೊತೆಯಲ್ಲಿ ಅವರ ತಂದೆ ಆಬಾ. ಅದು ಜವಾಹರಲಾಲ್ ನೆಹರೂ ಅವರು ನಿಧನರಾದ ವರ್ಷ.
ಮುಣಗೇಕರ್ ಅವರು ಕೆಲಸ ಮಾಡುತ್ತಲೇ ಓದನ್ನು ಮುಂದುವರಿಸುವ ಚಿಂತನೆಯಲ್ಲಿದ್ದರು. ಆದರೆ ಅದೇ ವರ್ಷ ಮುಂಬೈ ವಿಶ್ವವಿದ್ಯಾಲಯವು ಮುಂಜಾನೆಯ ಕಾಲೇಜುಗಳನ್ನು ಮುಚ್ಚುವುದಾಗಿ ನಿರ್ಧರಿಸಿತು. ಇದು ಮುಣಗೇಕರ್ ಅವರಿಗೆ ಆಘಾತಕಾರಿಯಾಗಿತ್ತು. ಅವರ ತಂದೆ ಆಬಾ, ‘ಎಲ್ಲಿಯಾದರೂ ಶಾಲಾ ಶಿಕ್ಷಕನ ನೌಕರಿ ಇದ್ದರೆ ನೋಡು’ ಎಂದು ಹೇಳುತ್ತಿದ್ದರು. ಆತನೂ ಕೆಲಸ ಮಾಡಿ ದಣಿದಿದ್ದ. ಆತನಾದರೂ ಎಷ್ಟು ಕಷ್ಟಪಡಬೇಕು? ಕಲಿತ ನನಗೆ ನಾಳೆ ದೊಡ್ಡ ನೌಕರಿ ಸಿಕ್ಕರೂ ಏನು ಉಪಯೋಗ? ಹೆಚ್ಚಿನ ಶಿಕ್ಷಣ ನನಗಾದರೂ ಏಕೆ ಬೇಕು? ಹೀಗೆ ಮುಣಗೇಕರ್ ಚಿಂತಿಸುತ್ತಿದ್ದರೆ ಅದಕ್ಕೆ ತಂದೆಯ ಬಗೆಗಿನ ಅವರ ಪ್ರೀತಿಯೇ ಕಾರಣ. ತಂದೆಯ ಬಗೆಗಿನ ಅವರ ಪ್ರೀತಿ ಕೃತಿಯ ಹಲವುಕಡೆಗಳಲ್ಲಿ ವ್ಯಕ್ತವಾಗಿದೆ. ಪ್ರಜ್ಞಾಪ್ರವಾಹ ತಂತ್ರದಲ್ಲಿ ಹಿಂದಕ್ಕೆ ತೆರಳಿ ತಮ್ಮ ಬಾಲ್ಯವನ್ನು ಮುಣಗೇಕರ ಇಲ್ಲಿ ಹೇಳುತ್ತ ಹೋಗುತ್ತಾರೆ.
ತಂದೆಯೇ ಅವರಿಗೆ ಹೀರೋ. ಅವರ ಬದುಕನ್ನು ರೂಪಿಸಿದ ಹಲವರಲ್ಲಿ ತಂದೆ ಮೊದಲ ಸ್ಥಾನದ್ಲಲಿ ನಿಲ್ಲುತ್ತಾರೆ. ಒಮ್ಮೆ ಆಬಾ ಮಗನ ಜೊತೆ ಊರವರನ್ನೆಲ್ಲ ಶ್ಯಾಮನ ತಾಯಿ ಸಿನಿಮಾ ನೋಡುವುದಕ್ಕೆ ಕರೆದುಕೊಂಡು ಹೋಗುತ್ತಾರೆ. ಮಧ್ಯದಲ್ಲಿ ನದಿಯನ್ನು ದಾಟುವಾಗ ವ್ಯಾಪಾರದ ಸಾಮಾನು ಹೊಂದಿದ್ದ ಆಬಾ ನಂತರದ ದೋಣಿಯಲ್ಲಿ ಬರುತ್ತಾನೆ. ಮೊದಲು ದಾಟಿದ ಊರವರು ಮುಣಗೇಕರ್ ಅವರನ್ನು ಅಲ್ಲಿಯೇ ಬಿಟ್ಟು ತಾವು ಮುಂದೆ ಹೋಗುತ್ತಾರೆ. ನಂತರ ಬಂದ ಆಬಾನ ಪ್ರತಿಕ್ರಿಯೆಯನ್ನು ಅವರು ಹೀಗೆ ದಾಖಲಿಸಿದ್ದಾರೆ- ‘ಇವರನ್ನ ಸಿನಿಮಾಕ್ಕೆ ಕರೆದುಕೊಂಡು ಬಂದವನು ನಾನು;  ಈಗ ನೋಡಿದರೆ ನನ್ನ ಮಗನನ್ನೇ ಬಿಟ್ಟು ಹೋಗಿದ್ದಾರೆ’ ಎಂದು ಬೈದುಕೊಂಡ. ಇನ್ನೊಂದು ಕಡೆ ತಮ್ಮ ಆಬಾನ ಬಗ್ಗೆ, ‘ಅಡಿಗೆ ತಯಾರಿಸುವಾಗ ಆಗೀಗ ನಾನು ಆಬಾನಿಗೆ ಸಹಾಯ ಮಾಡುತ್ತಿದ್ದೆ. ಅನ್ನ ಮತ್ತು ಮೀನಿನ ಸಾರು ನಮ್ಮ ದಿನನಿತ್ಯದ ಆಹಾರವಾಗಿರುತ್ತಿತ್ತು. ನನ್ನ ಕೈಗಳು ಉರಿಯಬಹುದೆಂದು ನನಗೆ ಸಂಕೇಶ್ವರಿ ಮೆಣಸಿನಕಾಯಿಯನ್ನು  ಅರಿದು ಚಟ್ನಿ ಮಾಡಲು ಆಬಾ ಕೊಡುತ್ತಿರಲಿಲ್ಲ…’
ವರ್ಣಭೇದವನ್ನು ತಮ್ಮ ಊರಿನಲ್ಲಿ ಹೇಗೆ ಆಚರಿಸುತ್ತಿದ್ದರು, ಅದನ್ನು ತಮ್ಮ ತಂದೆ ಹೇಗೆ ಎದುರಿಸಿದರು ಎಂಬುದನ್ನು ಎರಡು ಘಟನೆಗಳ ಮೂಲಕ ಮುಣಗೇಕರ್ ಹೇಳಿದ್ದಾರೆ. ‘‘ಈ ನಾಲ್ಕೂ ಚಹಾದಂಗಡಿಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ನಾವು ಕುಡಿಯುವ ಚಹಾದ ಕಪ್ಪುಗಳುಪ್ರತ್ಯೇಕವಾಗಿದ್ದವು; ಕೂಡ್ರುವ ಸ್ಥಳವೂ ಪ್ರತ್ಯೇಕವಾಗಿದ್ದಿತು. ಎಲ್ಲರೂ ಕುಳಿತುಕೊಳ್ಳುವ ಜಾಗದಲ್ಲಿ ನಾವು ಕೂಡ್ರುವಂತಿರಲಿಲ್ಲ. ಚಹಾ ಕುಡಿದ ನಂತರ ನಮ್ಮ ಕಪ್ಪುಗಳನ್ನು ನಾವೇ ತೊಳೆದು ಪ್ರತ್ಯೇಕವಾಗಿ ಇಡಬೇಕಾಗಿತ್ತು. ನಮಗಾಗಿ ಪ್ರತ್ಯೇಕ ಸ್ಥಳವೇಕೆ ಮತ್ತು ಪ್ರತ್ಯೇಕ ಚಹಾದ ಕಪ್ಪುಗಳೇಕೆ ಎಂದು ಪ್ರಶ್ನೆ ಕೇಳುವ ಪ್ರಸಂಗವೇ ಉದ್ಭವಿಸಲಿಲ್ಲ.’
 ಊರಲ್ಲಿಯ  ಹೊಟೇಲುಗಳಲ್ಲಿ  ಪೂಜಾರಿಯ ಹೊಟೇಲು ಕೂಡ ಒಂದು. ಅಲ್ಲಿಯೂ ಅಸ್ಪಶ್ಯತೆ ಆಚರಣೆ ಇತ್ತು. ಇದರ ವಿರುದ್ಧ ಆಬಾ ದನಿ ಎತ್ತುತ್ತಾನೆ. ಒಂದು ದಿನ ಪೂಜಾರಿಯೊಂದಿಗೆ ಆಬಾ ಜಗಳಕ್ಕೆ ನಿಲ್ಲುತ್ತಾನೆ. ಕಪ್ಪು ತೊಳೆಯುವುದಿಲ್ಲ ಎನ್ನುತ್ತಾನೆ. ಅಂದು ರಾತ್ರಿ ಆಬಾ ವಸ್ತಿಯ ಜನರನ್ನು ಕೂಡಿಸುತ್ತಾನೆ. ‘ಪೂಜಾರಿ ನಮ್ಮ ಕಪ್ಪುಗಳನ್ನು ತೊಳೆಯುವುದಿಲ್ಲ. ಪ್ರತ್ಯೇಕವಾಗಿಟ್ಟ ಕಪ್ಪುಗಳಲ್ಲಿ ಚಹಾ ಕೊಡ್ತಾನೆ. ಆತ ಎಲ್ಲರಂತೆ ನಮಗೂ ಚಹಾ ಕೊಡುವ ವರೆಗೆ ನಾವು ಆತನ ಅಂಗಡಿಗೆ ಹೋಗುವುದು ಬೇಡ’ ಎಂದು ಹೇಳುತ್ತಾನೆ. ಜನರು ಅದನ್ನು ಒಪ್ಪಿಕೊಳ್ಳುತ್ತಾರೆ. ಪೂಜಾರಿ ಸೋಲುತ್ತಾನೆ. ನಿಮ್ಮ ಕಪ್ಪುಗಳನ್ನು ನಾವೇ ತೊಳೆಯುತ್ತೇವೆ ಎಂದು ಆತ ಹೇಳಿಕಳುಹಿಸುತ್ತಾನೆ. ಹೀಗೆ ಆಬಾನ ಪ್ರತಿಭಟನೆ ಫಲ ನೀಡುತ್ತದೆ. ತಮ್ಮ ಕೇರಿಯ ಜನರೆಲ್ಲ ಬೌದ್ಧ ಧರ್ಮ ಸ್ವೀಕರಿಸಿದ್ದನ್ನೂ ಮುಣಗೇಕರ ವಿವರಿಸಿದ್ದಾರೆ. ತಮ್ಮ ಜಾತಿಯನ್ನು ಪರಿಗಣಿಸದೆ ತಮ್ಮ ಬುದ್ಧಿವಂತಿಕೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ತಮ್ಮ ಏಳ್ಗೆಗೆ ಶ್ರಮಿಸಿದ ಎಲ್ಲ ಗುರುಗಳನ್ನೂ ಪ್ರೀತಿತುಂಬಿ ನೆನೆದಿದ್ದಾರೆ. ಈ ಕಾರಣಕ್ಕಾಗಿಯೇ ಸಮಾಜದ ಮೇಲ್ವರ್ಗದವರು ಎನಿಸಿಕೊಂಡವರ ಮೇಲೆ ಮುಣಗೇಕರ್ ಅವರಿಗೆ ಯಾವುದೇ ಆಕ್ರೋಶವಿರಲಿಲ್ಲ. ಪ್ರೀತಿ ಪ್ರೀತಿಯನ್ನು ಬೆಳೆಸಿತ್ತು.
ಮುಣಗೇಕರ್ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗುವ ಮೊದಲು ರಿಸರ್ವಬ್ಯಾಂಕಿನ ನೌಕರಿಯಲ್ಲಿದ್ದರು. ಅದನ್ನ ಬಿಟ್ಟು ಕಡಿಮೆ ಸಂಬಳದ ಪ್ರೊಫೆಸರ್‌ಗಿರಿಗೆ ಬರುತ್ತಾರೆ. ಮುಂಬಯಿ ವಿವಿಯಲ್ಲಿ ಅವರು ಕೃಷಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗುತ್ತಾರೆ. ೧೪೩ ವರ್ಷಗಳ ಇತಿಹಾಸವಿರುವ ಮುಂಬೈ ವಿವಿಗೆ ಇವರ ರೂಪದಲ್ಲಿ ದಲಿತನೊಬ್ಬ ಮೊದಲ ಬಾರಿಗೆ ಕುಲಪತಿಯಾಗುತ್ತಾನೆ. ದೇಶದ ಯೋಜನಾ ಆಯೋಗದ ಸದಸ್ಯರೂ ಆಗುತ್ತಾರೆ. ದಲಿತ ಸಮುದಾಯದವರಲ್ಲಿ ಆತ್ಮವಿಶ್ವಾಸವನ್ನು ತುಂಬುವಂತೆ ಇರುವ ಈ ಆತ್ಮಕಥನ ಇದರ ಮುಂದಿನ ಭಾಗವನ್ನು ನಿರೀಕ್ಷಿಸುವಂತೆ ಮಾಡಿದೆ.
ಡಾ.ಸರಜೂ ಕಾಟ್ಕರ್ ಅವರು ಸೊಗಸಾಗಿ ಅನುವಾದ ಮಾಡಿದ್ದಾರೆ.
ಪ್ರ: ಸಾಹಿತ್ಯ ಅಕಾಡೆಮಿ, ನವದೆಹಲಿ, ಪುಟಗಳು ೧೬೦,ಬೆಲೆ ೯೫