*ಅಡುಗೆ ಪ್ರವೀಣ ಪುರುಷರು

ಳ್ಳೆಯ ಅಡುಗೆಯನ್ನು ನಳಪಾಕ ಎಂದು ಹೊಗಳುವುದುಂಟು. ಯಾರು ಈ ನಳ? ನಳನಿಗೂ ರುಚಿಯಾದ ಅಡುಗೆಗೂ ಏನು ಸಂಬಂಧ?
ನಿಷಧ ದೇಶದ ದೊರೆ ನಳ. ಆತನ ಪತ್ನಿ ದಮಯಂತಿ. ಇಬ್ಬರೂ ಅತ್ಯಂತ ಸುಂದರರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಅಗಲಿ ಇರಲಾರರು. ಇವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇವರ ಸುಂದರ ಸಂಸಾರದ ಮೇಲೆ ಶನಿಯ ವಕ್ರದೃಷ್ಟಿ ಬೀಳುತ್ತದೆ. ಪಗಡೆಯಾಟದಲ್ಲಿ ನಳನು ಸೋತು ತನ್ನ ಸಹೋದರ ಪುಷ್ಕರನಿಗೆ ರಾಜ್ಯವನ್ನು ಒಪ್ಪಿಸಿ ಹೆಂಡತಿಯೊಂದಿಗೆ ಕಾಡಿಗೆ ಹೋಗುತ್ತಾನೆ.
ಕಾಡಿನಲ್ಲಿ ಆತನಿಗೆ ಹಾವು ಕಡಿದು ಕುರೂಪ ಒದಗುತ್ತದೆ. ಆ ರೂಪದಲ್ಲಿ ಹೆಂಡತಿಗೆ ಕಾಣಿಸಿಕೊಳ್ಳದೆ ಆತ ಆಕೆಯನ್ನು ತೊರೆದು ಹೋಗುತ್ತಾನೆ. ಅಶ್ವಹೃದಯವನ್ನು ಬಲ್ಲ ನಳನು ಅಯ್ಯೋಧ್ಯೆಯ ರಾಜ ಋತುಪರ್ಣನಲ್ಲಿ ಕುದುರೆಗೆ ತರಬೇತಿ ನೀಡುವ ಮತ್ತು ಅಡುಗೆ ಮನೆಯ ಮೇಲ್ವಿಚಾರಕನಾಗಿ ಬಾಹುಕ ಎಂಬ ಹೆಸರಿನಲ್ಲಿ ಕೆಲಸಕ್ಕೆ ಸೇರುತ್ತಾನೆ.
ಋತುಪರ್ಣನ ಆಶ್ರಯದಲ್ಲಿ ನಳನ ಅಡುಗೆ ಪ್ರಸಿದ್ಧವಾಗುತ್ತದೆ. ಅಷ್ಟೊಂದು ರುಚಿಯಾದ ಅಡುಗೆ ಅದುವರೆಗೂ ಯಾರೂ ಊಟವನ್ನೇ ಮಾಡಿರಲಿಲ್ಲ. ಅದೇ ಮುಂದೆ ನಳಪಾಕವೆಂದು ಪ್ರಸಿದ್ಧವಾಗುತ್ತದೆ.
ಮುಂದೆ ನಳ ತಾನು ಕಳೆದುಕೊಂಡಿದ್ದನ್ನೆಲ್ಲ ಮರಳಿ ಪಡೆಯುತ್ತಾನೆ. ಗಂಡನನ್ನು ಹುಡುಕಲು ದಮಯಂತಿ ಎರಡನೆ ಸ್ವಯಂವರವನ್ನು ಏರ್ಪಡಿಸುತ್ತಾಳೆ. ಅಲ್ಲಿಗೆ ಬಂದ ನಳನನ್ನು ಗುರುತಿಸುತ್ತಾಳೆ.