*ಹತ್ತಿರ ಹೋದರೆ ಅಪಾಯ

ಧೃತರಾಷ್ಟ್ರನು ದುರ್ಯೋಧನ ಮೊದಲಾದ ಕೌರವರ ತಂದೆ. ಹುಟ್ಟು ಕುರುಡ. ಆತ ಕುರುಡನಾಗಿದ್ದ ಕಾರಣಕ್ಕಾಗಿಯೇ ಅವನ ತಮ್ಮನಾದ ಪಾಂಡು ಹಸ್ತಿನಾಪುರದ ರಾಜನಾಗಿದ್ದುದು ಮತ್ತು ಪಾಂಡವರಿಗೆ ರಾಜ್ಯದ ಮೇಲೆ ಹಕ್ಕು ಪ್ರಾಪ್ತವಾದದ್ದು. ಪಾಂಡು ಸತ್ತಮೇಲೆ ಅನಿವಾರ್ಯವಾಗಿ ಧೃತರಾಷ್ಟ್ರ ರಾಜನಾಗುತ್ತಾನೆ.
ಈ ಧೃತರಾಷ್ಟ್ರನಲ್ಲಿ ಸಾವಿರ ಆನೆಗಳ ಬಲವಿತ್ತು. ಅವನು ಯಾರನ್ನಾದರೂ ಅಪ್ಪಿದನೆಂದರೆ ಅವರು ಸತ್ತೇ ಹೋಗುತ್ತಿದ್ದರು. ಕೌರವರೆಲ್ಲ ಸತ್ತ ಮೇಲೆ ಪಾಂಡವರು ಧೃತರಾಷ್ಟ್ರನನ್ನು ನೋಡಲು ಹೋಗುತ್ತಾರೆ. ತನ್ನ ಮಕ್ಕಳ ಸಾವಿಗೆ ಕಾರಣನಾದ ಭೀಮನ ಮೇಲೆ ಧೃತರಾಷ್ಟ್ರನಿಗೆ ಅಪಾರ ಕೋಪ. ಭೀಮನನ್ನು ಹೇಗಾದರೂ ಕೊಲ್ಲಬೇಕೆಂದು ಅವನು ಚಡಪಡಿಸುತ್ತಿದ್ದನು. ಅದು ಶ್ರೀಕೃಷ್ಣನಿಗೆ ಗೊತ್ತಿತ್ತು. ಕೃಷ್ಣನು ಭೀಮನ ಕಂಚಿನ ಪ್ರತಿಮೆಯನ್ನು ಮಾಡಿಸಿ ಧೃತರಾಷ್ಟ್ರನ ಮುಂದೆ ತಳ್ಳುತ್ತಾನೆ. ಧೃತರಾಷ್ಟ್ರ ಅದನ್ನು ಅಪ್ಪಿ ಪುಡಿಪುಡಿ ಮಾಡಿ ತನ್ನ ಕೋಪವನ್ನು ತೀರಿಸಿಕೊಳ್ಳುತ್ತಾನೆ. ತನ್ನ ಮನಸ್ಸಿನಲ್ಲಿದ್ದದ್ದು ಬಹಿರಂಗವಾದುದಕ್ಕೆ ಆತನಿಗೆ ನಾಚಿಕೆಯೂ ಆಗುತ್ತದೆ.
ಯಾರದಾದರೂ ಸಹವಾಸ ಮಾಡುವುದರಿಂದ ಅಪಾಯ ಬರುವುದು ಎಂದಾದರೆ, ಅವನ ಸಹವಾಸಕ್ಕೆ ಹೋಗಬೇಡ, ಅವನದು ಧೃತರಾಷ್ಟ್ರಾಲಿಂಗನ ಎಂದು ಎಚ್ಚರಿಕೆ ಹೇಳುವವರಿದ್ದಾರೆ.