*ಸುತ್ತಿ ಬಳಸಿ ಮಾತನಾಡುವುದು

ನೇರವಾಗಿ ಹೇಳಬೇಕಾದುದನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುವವರನ್ನು ಕಂಡಾಗ ಅದೇನು ದ್ರಾವಿಡ ಪ್ರಾಣಾಯಾಮ ಮಾಡುತ್ತಾನಪ್ಪ ಎಂದು ಮೂಗೆಳೆಯುತ್ತೇವೆ. ಸುಲಭದಲ್ಲಿ ಮಾಡುವ ಕೆಲಸವನ್ನು ಕಷ್ಟಪಟ್ಟು ಮಾಡುತ್ತಾರಲ್ಲ, ಆಗಲೂ ಇದೇ ರೀತಿ ಟೀಕಿಸುತ್ತೇವೆ. ಉಗುರಿನಲ್ಲಿ ಆಗುವ ಕಲಸಕ್ಕೆ ಕೊಡಲಿ ತಗೆದುಕೊಳ್ಳುತ್ತಾರಲ್ಲ ಹಾಗೆ ಇದು.
ದ್ರಾವಿಡ ಪ್ರಾಣಾಯಾಮದ ವಿಶೇಷವೇನು? ಮೂಗನ್ನು ಹಿಡಿಯಲು ಕೈಯನ್ನು ತಲೆಯ ಹಿಂದಿನಿಂದ ತರುತ್ತಾರೆ. ನೇರವಾಗಿ ಎದುರಿನಿಂದಲೇ ಮೂಗನ್ನು ಹಿಡಿಯಬಹುದಲ್ಲವೆ? ಹೀಗೆ ಮಾಡುವುದಕ್ಕೂ ಒಂದು ಕಾರಣ ಇರಬಹುದು. ಶರೀರಕ್ಕೆ ವ್ಯಾಯಾಮ ದೊರೆಯಲಿ ಎಂಬುದು ಅದರ ಉದ್ದೇಶ ಇರಬಹುದು.
ಆದರ ಮಾತನಾಡುವವರು ಸುತ್ತಿ ಬಳಸಿ ಮಾತನಾಡುವುದಕ್ಕೆ ಯಾವುದೇ ಕಾರಣ ಇರುವುದಿಲ್ಲ. ಕೆಲವೊಮ್ಮೆ ಅದು ಅವರ ಹುಟ್ಟುಗುಣದಿಂದ ಇರಬಹುದು. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ. ಯಾವುದೋ ಸಾವಿನ ಸುದ್ದಿ, ಕೆಟ್ಟ ಸಮಾಚಾರವನ್ನು ನೇರವಾಗಿ ಹೇಳಲು ಆಗದೆ ಸುತ್ತಿ ಬಳಸಿ ಹೇಳಬಹುದು. ಇನ್ನು ಕೆಲವೊಮ್ಮೆ ಯಾವುದೋ ವಿಷಯವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಹಾಗೆ ಮಾತನಾಡಬಹುದು. ಕೆಲವರು ಏನನ್ನೋ ಹೇಳಲು ಬಂದಿರುತ್ತಾರೆ. ಆದರೆ ಬೇರೆಯದನ್ನೇ ಮಾತನಾಡುತ್ತಿರುತ್ತಾರೆ.
ಇದನ್ನೇ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಎಂದೂ ಲೇವಡಿ ಮಾಡುತ್ತಾರೆ. ಕೊಂಕಣಕ್ಕೆ ಹೋಗಲು ನೇರವಾದ ದಾರಿ ಇದೆ. ಆದರೆ ಮೈಲಾರಕ್ಕೆ ಹೋಗಿ ಕೊಂಕಣಕ್ಕೆ ಬರುವುದು ವ್ಯರ್ಥ ಶ್ರಮ.