ಮುದ್ದು ಮಾದೇವಿ ಕಳಚಿಟ್ಟ ಕರಿಮಣಿಯನ್ನು ಮತ್ತೊಮ್ಮೆ ನೋಡಿದಳು. ಮಲಗುವ ಕೋಣೆಯಲ್ಲಿದ್ದ ಮಂಚದ ಎದುರಿನ ಗಿಳಿಗೂಟಕ್ಕೆ ಅದನ್ನು ಹಾಕಿದ್ದಳು. ಮೂರು ದಿನದಿಂದ ಅದನ್ನೇ ನೋಡುತ್ತಿದ್ದಾಳೆ. ಅವನು ಸತ್ತ ಸುದ್ದಿ ಹೊಲಕ್ಕೆ ಸೌದೆ ತರಲು ಹೋಗಿದ್ದ ಪಕ್ಕದ ಮನೆಯ ವೆಂಕಟೇಶ ಹೇಳಿದ್ದ. ಹಾಗೆ ಹೇಳುವಾಗ ಅವನಿಗೆ ಯಾವ ಹಿಂಜರಿಕೆಯೂ ಕಾಡಲಿಲ್ಲ. ಹೇಗೆ ಹೇಳುವುದು ಎಂಬ ಸಂದಿಗ್ಧ ಎದುರಾಗಲಿಲ್ಲ. ಯಾವುದೋ ಊರಿನಲ್ಲಿ ಯಾರೋ ಸತ್ತ ಸುದ್ದಿ ಪೇಪರಿನಲ್ಲಿ ಬಂದುದನ್ನು ಓದಿ ಹೇಳುವಂತೆ ಬಹಳ ಸರಳವಾಗಿ, “ಏ ಮುದ್ದು, ನಿನ್ನ ಅವ್ನು ರಾತ್ರಿನೇ ಹೋಗಿಬಿಟ್ನಂತೆ, ಬೆಳಿಗ್ಗೆ ನಾನು ಬರುವಾಗ ಅವನ ಹೊಗೆ ಹಾರ್ತಾ ಇತ್ತು. ಗೊತ್ತಿಲ್ದೆ, ಯಾರ್ದು ಎಂದು ಕೇಳಿದೆ. ಆಗ ಗೊತ್ತಾಯ್ತು, ಅವ್ನು ನಿನ್ನ ಅವ್ನು ಅಂತ'' ಎಂದು ಹೇಳಿದ್ದ. ತನ್ನ ಮಾತಿಗೆ ಅವಳ ಪ್ರತಿಕ್ರಿಯೆ ಏನು ಎಂಬುದನ್ನೂ ಅವ್ನು ನೋಡುವುದಕ್ಕೆ ಹೋಗಿರಲಿಲ್ಲ.

ಅವಳ ಮತ್ತು ಆ ಅವನ ಸಂಬಂಧ ಹಾಗೇ ಇತ್ತು. ಬರೀ ವೆಂಕಟೇಶನೇ ಏಕೆ, ಆ ಊರಿನ ಯಾರೇ ಆದರೂ ಹಾಗೆಯೇ ವರದಿ ಒಪ್ಪಿಸುತ್ತಿದ್ದರು. ಅವಳ ಗಂಡ ನೀಲಕಂಠ ಸತ್ತುಹೋಗಿದ್ದ. ಇವಳು ಅವನನ್ನು ಬಿಟ್ಟೋ ಅಥವಾ ಅವನು ಇವಳನ್ನು ಬಿಟ್ಟೋ ಅದೆಷ್ಟೋ ವರ್ಷಗಳು ಆಗಿಹೋಗಿದ್ದವು. ಇವಳನ್ನು ಬಿಟ್ಟಮೇಲೆ ಅವನು ಇನ್ನೊಂದು ಮದುವೆಯನ್ನೂ ಮಾಡಿಕೊಂಡಿದ್ದ. ನೀಲಕಂಠನ ಕುರುಹಾಗಿ ಮುದ್ದುಮಾದೇವಿಯ ಉಡಿಯಲ್ಲಿ ಜನ್ನ ಬೆಳೆದಿದ್ದ. ಮಗ ಜನಾರ್ದನನನ್ನು ಅವಳು ಜನ್ನ ಎಂದೇ ಕರೆಯುತ್ತಿದ್ದದ್ದು. ಅವನನ್ನು ಪೂರ್ಣ ಹೆಸರಿನಿಂದ ಎಂದೂ ಅವಳು ಕರೆದದ್ದೇ ಇರಲಿಲ್ಲ. ಬೇಲಿಗೆ ನೆಟ್ಟ ಹಂಗರಕನ ಗೂಟ ಮರವಾಗಿ ಬೆಳೆವಂತೆ ಜನ್ನ ಅಗಾಧವಾಗಿ ಬೆಳೆಯುತ್ತಿದ್ದ. ಮಗ ಆಗಸಕ್ಕೆ ಮುಖಮಾಡಿ ಬೆಳೆಯುತ್ತಿದ್ದರೆ ಮುದ್ದುಮಾದೇವಿ ಭೂಮಿಗೆ ಹತ್ತಿರವಾಗುತ್ತಿದ್ದಾಳೋ ಏನೋ ಎಂಬಂತೆ ಬಾಗಿ ಹೋಗಿದ್ದಳು. ನಡೆಯುವಾಗ ದೊಣ್ಣೆಯ ಆಸರೆಯನ್ನು ಪಡೆಯುತ್ತಿದ್ದಳು.

ಮಾದೇವಿಯು ತನ್ನ ಬಾಲ್ಯದಿಂದ ಹರೆಯಕ್ಕೆ ತಿರುಗುವ ಹೊತ್ತಲ್ಲಿ ತುಂಬ ಮುದ್ದುಮುದ್ದಾಗಿ ಇದ್ದುದರಿಂದ ಅವಳಿಗೆ ಕೇರಿಯವರೆಲ್ಲ ಮುದ್ದುಮಾದೇವಿ ಎಂದು ಕರೆಯುತ್ತಿದ್ದರು. ಪ್ರೀತಿಯ ಹೆಸರೇ ಅವಳ ಅಂಕಿತನಾಮವಾಗಿಬಿಟ್ಟಿತು. ಕೇರಿಯ ಬೇರೆ ಮಾದೇವಿಯರಿಂದ ಇವಳನ್ನು ಬೇರೆಯಾಗಿ ಗುರುತಿಸುವುದಕ್ಕೂ ಅದು ಸಹಾಯಕವಾಯಿತು. ಮಾದೇವಿಯ ಮೈಯಲ್ಲಿ ಯವ್ವನದ ಪ್ರವೇಶ ಹೇಗೆ ಆಗಿತ್ತು ಎಂದರೆ ಯಕ್ಷಗಾನದಲ್ಲಿ ಸಣಕಲು ವ್ಯಕ್ತಿಯೊಬ್ಬ ರಾಜನ ವೇಷತೊಟ್ಟು ರಂಗದಲ್ಲಿ ಪ್ರವೇಶ ಪಡೆಯುತ್ತಾನಲ್ಲ ಹಾಗೆ. ಹೆಜ್ಜೆ ಇಟ್ಟರೆ ನೋಡುವವರ ಎದೆಯಲ್ಲಿ ಗೆಜ್ಜೆಯ ಜಲ್‌ ಎಂಬ ನಾದ ಮಿಡಿಯುವಂತೆ. ಬತ್ತದ ತೆನೆಯಲ್ಲಿ ಹಾಲು ತುಂಬಿದ ಭಾರಕ್ಕೆ ಅದು ಬಾಗುವಂತೆ ಮಾದೇವಿಯೂ ವಯೋ ಸಹಜ ಲಜ್ಜೆಯಿಂದ ಜಗದ ಎದುರು ತಲೆ ಬಾಗುತ್ತಿದ್ದಳು. ಊರವರ ಕಣ್ಣೆಲ್ಲ ಅವಳ ಮೇಲೆ. ಅವಳ ಕಣ್ಣು ಯಾರ ಮೇಲೆ ಎಂಬುದು ಅವಳಿಗೇ ಸ್ಪಷ್ಟವಾಗಿರಲಿಲ್ಲ. ಅವಳ ಸರೀಕರು ಮತ್ತು ಹಿರಿಯರು ಊರ ಹೊಂತಕಾರಿಗಳನ್ನೆಲ್ಲ ಅವಳಿಗೆ ಗಂಡನನ್ನಾಗಿ ಮಾಡಿ ನೋಡಿ ತಮಗೆ ತಾವೇ ಹಿಗ್ಗುತ್ತಿದ್ದರು. ಆದರೆ ಮಾದೇವಿಗೆ ಹೇಗಾಗುತ್ತಿತ್ತೋ ಏನೋ, ಬಲ್ಲವರು ಯಾರು?

ಅವಳಿಗೆ ಹಿಗ್ಗುಂಟುಮಾಡುವ ಸುಗ್ಗಿ ಒಂದು ದಿನ ಬಂದೇ ಬಿಟ್ಟಿತು. ವೈಶಾಖದ ಉರಿ ಬಿಸಿಲಿನಲ್ಲಿ ಗದ್ದೆಯೆಲ್ಲ ಬೋಳು ಬೋಳಾಗಿ ಮಕ್ಕಳ ಆಟದ ಮೈದಾನವಾಗಿದ್ದಾಗ, ಮಕ್ಕಳೆಲ್ಲ ಮಾವಿನ ಮರದ ಕೆಳಗೊ ಗೇರು ಮರದ ಕೆಳಗೊ ಹಣ್ಣು ಆಯುತ್ತಿದ್ದಾಗ ಪಕ್ಕದೂರಿನ ಸುಗ್ಗಿ ಮೇಳದ ತಂಡ ಇವರ ಊರಿಗೂ ಬಂತು. `ಕೋಲು ಕೋಲಣ್ಣ ಕೋಲು ಕೋಲೆ, ಎಕ್ಕೋಲೆ ಕೋಲು ಕೋಲಣ್ಣ ಕೋಲೆ' ಎಂದು ಹಾಡು ಹೇಳುತ್ತ ಮಾದೇವಿಯ ಮನೆಯ ಅಂಗಳದಲ್ಲಿ ಗಿರಕಿ ಹೊಡೆದ ಸುಗ್ಗಿ ಮೇಳದ ತಂಡದಲ್ಲಿ ತುರಾಯಿಯ ಕಿರೀಟ ಏರಿಸಿಕೊಂಡಿದ್ದ ನೀಲಕಂಠ `ನೀರ ತರುವ ದಾರಿಯಲ್ಲಿ ಕೈಹಿಡಿದು ಎಳೆದಂತಹ' ಕಚಕುಳಿಯನ್ನು ಅವಳು ಅನುಭವಿಸಿದಳು. ಬಿಸಿಲ ಬೇಗೆಯಲ್ಲಿ ಬೆವರು ಹರಿಸುತ್ತ ಎತ್ತೆತ್ತಿ ಹೆಜ್ಜೆ ಹಾಕುವ ನೀಲಕಂಠ ಮಾದೇವಿಗೆ, `ನೀನು ಮಲ್ಲಿಗೆ ಬಳ್ಳಿ ನಾನಾದೆ ಮರವಿಲ್ಲಿ, ಸುತ್ತಿಕೊಳ್ಳೆ ನನ್ನ ಸೊಗದಲ್ಲಿ' ಎಂದು ಕರೆಯುತ್ತಿರುವ ಹಾಗೆ ಅನಿಸಿತು. ಅದುವರೆಗೂ ಅನುಭವಿಸದೇ ಇದ್ದ ಲಹರಿಯಲ್ಲಿ ಅವಳು ತೇಲಿಹೋದಳು.

ದೊಡ್ಡ ದೊಡ್ಡ ತುರಾಯಿ, ಕಿರೀಟಗಳೆಂದರೆ ಅವಳಿಗೆ ಚಿಕ್ಕವಳಿದ್ದಾಗಿನಿಂದಲೂ ತುಂಬ ಇಷ್ಟವೇ. ಅದು ಅವತ್ತು ನೀಲಕಂಠನನ್ನು ನೋಡಿದ ಮೇಲೆ ಅವಳಿಗೆ ನಿಚ್ಚಳವಾಗಿ ಹೊಳೆಯಿತು. ನೀಲಕಂಠ ಶಾನುಭೋಗರ ಜೊತೆ ಸುತ್ತುವ ಉಗ್ರಾಣಿಯಾಗಿದ್ದ. ಶಾನುಭೋಗರು ಹೇಳುವ ಫರ್ಮಾನುಗಳನ್ನು ಊರ ಜನಕ್ಕೆ ತಲುಪಿಸುವುದು ಅವನ ಕೆಲಸ. ಇವರು ಕೊಡುವ ಕಡತಗಳನ್ನು ಅವನು ತಾಲೂಕಾಫೀಸಿಗೂ ಒಯ್ದು ಕೊಡುತ್ತಿದ್ದ. ಶಾನುಭೋಗರ ಹಿಂದೆ ಕಡತಗಳ ಚೀಲ ಹಿಡಿದುಕೊಂಡು ಕೇರಿಯ ಮೇಲೆ ಬರುತ್ತಿದ್ದ ನೀಲಕಂಠ ಮುದ್ದುಮಾದೇವಿ ಮತ್ತು ಅವಳ ಹೆತ್ತವರ ಕಣ್ಣಿನಾಳಕ್ಕೆ ಇಳಿಯುವುದಕ್ಕೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ವರ್ಷೊಪ್ಪತ್ತಿನಲ್ಲಿ ಎರಡೂ ಮನೆಯವರು ಕುಳಿತು ಮಾತನಾಡಿ ಓಲಗ ಊದಿಸಿಯೇ ಬಿಟ್ಟರು.

ಹಾಗೂ ಹೀಗೂ ಮೂರ್ನಾಲ್ಕು ಮಳೆಗಾಲ ಕಳೆದು ಹೋದವು. ಆಗಲೇ ಜನ್ನನ ಜನ್ಮವೂ ಆಗಿತ್ತು. ಹಗಲೆಲ್ಲ ಶಾನುಭೋಗರು ಹೇಳಿಕಳುಹಿಸಿದ ಕಡೆಗೆಲ್ಲ ಕಾಲೆಳೆದುಕೊಂಡು ಹೋಗುತ್ತಿದ್ದ ನೀಲಕಂಠ ನೇಸರ ಕಂತಿ ಅದೆಷ್ಟೊ ಹೊತ್ತಾದ ಬಳಿಕ ಸುಸ್ತಾಗಿ ಮನೆಯನ್ನು ಸೇರಿಕೊಳ್ಳುತ್ತಿದ್ದುದು. ನಿತ್ಯವೂ ತನ್ನ ಗಂಡನನ್ನು ಹಾರ ತುರಾಯಿಯ ಕೋಲಾಟದ ವೇಷದಲ್ಲಿ ಕಾಣಲು ಹಂಬಲಿಸುತ್ತಿದ್ದ ಮಾದೇವಿಯ ಮುದ್ದುತನವೆಲ್ಲ ಹತಾಶೆಗೆ ಒಳಗಾಗಿ ನೀರಿಲ್ಲದೆ ಬಿರುಬೇಸಿಗೆಯಲ್ಲಿ ಒಣಗಿದ ಹೂ ಬಳ್ಳಿಯಂತೆ ಆಗತೊಡಗಿತು. ಸುತ್ತ ಮೂರು ಊರಿನ ತೇರು ಜಾತ್ರೆಗೆಲ್ಲ ಹೆಂಡತಿಯನ್ನು ಮಗನನ್ನು ಕರೆದುಕೊಂಡು ನೀಲಕಂಠ ಹೋಗುತ್ತಿದ್ದ. ಹಾಗೆ ಒಂದು ತೇರಿಗೆ ಹೋದಾಗ ರಾತ್ರಿ ಅಲ್ಲಿಯೇ ನಿಂತು ಯಕ್ಷಗಾನವನ್ನು ನೋಡುವುದು ಎಂದಾಯಿತು. ಚಂಡೆ ಮದ್ದಳೆಯ ತಕಿಟ ಧೀಂ ತೋಂ ಮುದ್ದುಮಾದೇವಿಯ ಅಂತರಂಗದ ಕೋಣೆಯ ಕಿಟಕಿಯನ್ನು ತೆರೆಯಿತು. ಅವಳ ಹಾರ, ತುರಾಯಿ, ಕಿರೀಟದ ಕನಸಿನಲ್ಲಿ ನವಿಲುಗರಿಯೂ ಸೇರಿಕೊಂಡು ಅಕಾಲದಲ್ಲಿ ಮಳೆ ಸುರಿದು ತಂಪೆರದಂತೆ ಆಯಿತು. `ಭಸ್ಮಾಸುರ ಮೋಹಿನಿ' ಪ್ರಸಂಗ. ಭಸ್ಮಾಸುರನ ಪಾತ್ರ ಮಾಡಿದವನು ಅವಳೂರಿನ ರಾಮಚಂದ್ರನೇ ಆಗಿದ್ದನು. ಇವಳು ಲಂಗ ದಾವಣಿಯಲ್ಲಿ ಕುಂಟೆಬಿಲ್ಲೆ ಆಡುತ್ತಿದ್ದಾಗಲೇ ಅವನು ಆಟದ ಮೇಳವನ್ನು ಸೇರಿಕೊಂಡು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದವನು ಇದೀಗ ಮೇಳದ ಪ್ರಮುಖ ಪಾತ್ರಧಾರಿಯಾಗಿದ್ದ. ನೀಲಕಂಠ ಗಂಡಸರು ಕೂಡುವಲ್ಲಿ ಹೋಗಿ ನೆಲದ ಮೇಲೆ ಕುಳಿತರೆ ಮುದ್ದುಮಾದೇವಿ ಹೆಂಗಸರು ಕೂಡುವಲ್ಲಿ ನೆಲದ ಮೇಲೆ ಮೊದಲ ಸಾಲಿನಲ್ಲಿಯೇ ಕುಳಿತಳು.

ರಂಗದಲ್ಲಿ ಭಸ್ಮಾಸುರನ ಪ್ರವೇಶವಾಗುತ್ತಿದ್ದಂತೆ ಪ್ರೇಕ್ಷಕರಿಂದ ಚಪ್ಪಾಳೆಯೋ ಚಪ್ಪಾಳೆ. ಚಪ್ಪಾಳೆ ತಟ್ಟುವುದರಲ್ಲಿ ಮಾದೇವಿಯೂ ಹಿಂದೆಬೀಳಲಿಲ್ಲ. ಮೋಹಿನಿಯನ್ನು ನೋಡುತ್ತ ಬಾಯಲ್ಲಿ ಜೊಲ್ಲು ಸುರಿಸುತ್ತ ನವ ವಿಧದಲ್ಲಿ ತನ್ನ ಮನದ ಆಸೆಯನ್ನು ಹೇಳಿಕೊಳ್ಳುವ ಭಸ್ಮಾಸುರನನ್ನು ಭಾಗವತರು ತಮ್ಮ ಮನದಿಚ್ಛೆಯಂತೆ ಕುಣಿಸುತ್ತಿದ್ದರು. ಮಾದೇವಿ ಬಿಟ್ಟ ಕಣ್ಣು ಮುಚ್ಚದಂತೆ, ಬಾಯನ್ನೂ ಸ್ವಲ್ಪ ತೆರೆದು ಎಲ್ಲಿಯೋ ಕಳೆದುಹೋದವಳಂತೆ ನೋಡುತ್ತಿದ್ದಳು. ಒಂದೊಂದು ಸಲ ರಂಗದಲ್ಲಿದ್ದ ಭಸ್ಮಾಸುರ ತನ್ನನ್ನೇ ನೋಡಿ ಮಾತನಾಡುತ್ತಿದ್ದಾನೇನೋ ಎಂಬ ಭ್ರಮೆಯಲ್ಲಿ ಅವಳು ಬಿದ್ದಳು. ಭಸ್ಮಾಸುರನ ಮಂಕುಬೂದಿಯಲ್ಲಿ ಮಾದೇವಿ ಬಿದ್ದುಬಿಟ್ಟಿದ್ದಳು.

ಮಳೆಗಾಲದಲ್ಲಿ ಮೇಳಗಳು ಬಂದಾಗಿ ಆಟವಿಲ್ಲದೆ ರಾಮಚಂದ್ರ ಊರಿನಲ್ಲಿಯೇ ಇದ್ದವನು ತನ್ನ ಗದ್ದೆಯ ಉಳುಮೆ ನಾಟಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದನು. ಯಾರಾದರೂ ಕರೆದರೆ ತಾಳಮದ್ದಳೆಗೆ ಹೋಗುತ್ತಿದ್ದನು. ಯಕ್ಷಗಾನದವನಾದ ಮೇಲೆ ಅವನ ವೇಷ ಭೂಷಣ, ಮಾತುಗಳೆಲ್ಲ ಊರವರಿಂದ ಭಿನ್ನವಾಗಿದ್ದವು. ಮೇಳಕ್ಕೆ ಸೇರಿದ ಮೇಲೆ ಊರಲ್ಲಿಯ ಹೆಣ್ಣುಮಕ್ಕಳು ಯಾರು ಯಾರ ಮನೆಗೆ ಸೇರಿದವರು ಎಂಬುದೂ ಗೊತ್ತಿರಲಿಲ್ಲ. ಮಾದೇವಿ ಆ ಮಳೆಗಾಲದಲ್ಲಿ ರಾಮಚಂದ್ರನ ಬತ್ತದ ಗದ್ದೆ ನಾಟಿಗೆ ಹೋದಳು. ರಾಮಚಂದ್ರ ಅವಳನ್ನು ಅಷ್ಟೊಂದು ದಟ್ಟವಾಗಿ ದಿಟ್ಟಿಸಿದ್ದು ಅದೇ ಮೊದಲಾಗಿತ್ತು. ಆಮಂತ್ರಣಪತ್ರಿಕೆಯನ್ನೇ ಮುಖದಲ್ಲಿ ಮುದ್ರಿಸಿಕೊಂಡವಳಂತೆ ಇದ್ದ ಮಾದೇವಿಯು ರಾಮಚಂದ್ರನ ಒಳಗೆಲ್ಲೋ ಮಲಗಿದ್ದ ಭಸ್ಮಾಸುರನ್ನು ಮೇಲೆಬ್ಬಿಸಿಬಿಟ್ಟಿತು. ಚಂಡೆ ಮದ್ದಳೆ ತಾಳ ಭಾಗವತರು ಇಲ್ಲದೆಯೂ ಅವನ ಕಾಲುಗಳು ಹೆಜ್ಜೆಹಾಕತೊಡಗಿದವು. ಆ ಹೆಜ್ಜೆಗಳು ತಪ್ಪು ಎಂಬುದು ಭಸ್ಮಾಸುರ ಬುದ್ಧಿಗೆ ಹೊಳೆಯಲೇ ಇಲ್ಲ. ಸದ್ದಿಲ್ಲದೆ ಮದ್ದರೆಯುವೆ ಎಂಬ ಹಾಡು ಭಾಗವತರಿಲ್ಲದೆಯೂ ಅವನ ಕಿವಿಯಲ್ಲಿ ಮಾರ್ದನಿಸತೊಡಗಿತು. ರಂಗದಲ್ಲಿ ದಕ್ಕದ ಮೋಹಿನಿ ಇಲ್ಲಿ ಮಾದೇವಿಯಾಗಿ ಮುದ್ದು ಮೇರೆವರಿಯುವಂತೆ ಪ್ರವಹಿಸಿಬಿಟ್ಟಳು. ಅನಂತ ಕಾಲದ ವಿರಹದಿಂದ ಬಳಲಿದ ಪಕ್ಷಿಗಳು ಒಮ್ಮೆಲೇ ಎದುರುಬದಿರಾದಂತೆ ಗರಿಗೆದರಿ ರೆಕ್ಕೆ ಬಿಚ್ಚಿ ಹಾರಾಡಿದರು. ಅದೆಷ್ಟೋ ಕಾಲ ಬರಬಿದ್ದು ಧೂಳೆದ್ದ ಗದ್ದೆಗೆ ಪುಂಡಮಳೆಗಳು ಧೋ ಎಂದು ಸುರಿದಂತೆ, ನಾಟಿ ಮಾಡಿದ ಗದ್ದೆಗೆ ಕೆಸರ ಮುಚ್ಚಿಗೆ ಮಾಡಿದಂತೆ, ಕಳೆಯೂ ಇಲ್ಲ ಬೆಳೆಯೂ ಇಲ್ಲ ಎಂಬಂಥ ರೌದ್ರತೆಯಲ್ಲಿ ದಿನಗಳು ಕ್ಷಣಗಳಂತೆ ಕಬ್ಬಿನ ಗದ್ದೆಗಳಲ್ಲಿ, ಗೇರುಹಕ್ಕಲಿನಲ್ಲಿ, ಬಿಡಾಡಿ ದನಗಳನ್ನು ಒಟ್ಟುವ ಹಟ್ಟಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕಳೆದುಹೋದವು.

ಮತ್ತೆ ಬೇಸಿಗೆಯಲ್ಲಿ ಮೇಳದ ತಿರುಗಾಟ ಆರಂಭವಾದಾಗ ರಾಮಚಂದ್ರನ ಕಾಲಿಗೆ ಚಕ್ರ. ಒಂದೂರಿನಲ್ಲಿ ಇವತ್ತಿದ್ದರೆ ನಾಳೆ ಮತ್ತೊಂದೂರು. ಮುದ್ದುಮಾದೇವಿಗೆ ಈಗ ನಿಜಕ್ಕೂ ವೈಶಾಖದ ದಗೆ. ನೀಲಕಂಠ ಅವಳಿಗೆ ನರಸತ್ತವನಂತೆ ಕಾಣತೊಡಗಿದ. ಬಾಯಾರಿದ ನೆಲ ನೀರಿಗೆ ತಹತಹಿಸುತ್ತಿತ್ತು. ಮುದ್ದುಮಾದೇವಿ ಮತ್ತು ರಾಮಚಂದ್ರನ ಪ್ರಣಯಪ್ರಸಂಗ ಗುಸುಗುಸುವಾಗಿ ಮರಗಿಡಗಳ ಎಲೆಗಳೂ ಕಿವಿಯಾಗಿ ಬಾಯಾದವೇನೋ ಎಂಬಂತೆ ನೀ ಯಾರಿಗೂ ಹೇಳಬೇಡ ಎಂದು ಅವರು ಇವರಿಗೆ ಇವರು ಅವರಿಗೆ ಹೇಳುತ್ತ ಗುಟ್ಟಲ್ಲದ ಗುಟ್ಟಾಗಿ ಹೋಯಿತು. ಮಾದೇವಿಯನ್ನು ಅವಳ ಮದುವೆಗೂ ಮೊದಲು ಬಯಸಿ ಬಾಯಾರಿದ್ದವರ ಬಾಯಲ್ಲಿ ಈಗ ಜೊಲ್ಲು ಸುರಿಯತೊಡಗಿತು, ರಂಗಸ್ಥಳದಲ್ಲಿ ಭಸ್ಮಾಸುರನ ಬಾಯಲ್ಲಿ ಸುರಿದಂತೆ. ಹಾರಹಾಕಬೇಕೆಂದಿದ್ದವರಿಗೆಲ್ಲ ಮಾದೇವಿ ಆಹಾರವಾಗಿಹೋದಳು. ಊರಿಗೇ ಗೊತ್ತಾದ ಮೇಲೆ ನೀಲಕಂಠನಿಗೆ ಗೊತ್ತಾಗದಿರುತ್ತದೆಯೇ. ಗೊತ್ತಾಯಿತು. ಜಗಳವಾಯಿತು. ನಾಲ್ಕೇಟು ಬಿಗಿದೂಬಿಟ್ಟ. ಉಬ್ಬಿದ ಕೆನ್ನೆಯ ಮೇಲೆ ಕಣ್ಣೀರಿಳಿಸುತ್ತ ತವರಿಗೆ ಬಂದಳು. ತವರಿನವರಿಗೂ ಅವಳ ಚಾಳಿ ಗೊತ್ತಾಗಿದ್ದರಿಂದ ನೀಲಂಕಂಠನ ದೂರುವುದಕ್ಕೆ ಹೋಗಲಿಲ್ಲ. ಅವಳಪ್ಪ ಅವಳ ಹೆಸರಿಗೆ ಐದು ಗುಂಟೆ ಜಾಗ ಬರೆದಿಟ್ಟು ಸತ್ತು ಹೋದ. ಮಗ ಜನ್ನ ಅವಳ ಜೊತೆಗೇ ಇದ್ದ.

ಮತ್ತೆ ನಾಲ್ಕಾರು ಮಳೆಗಾಲ ಚಳಿಗಾಲಗಳು ಕಳೆದುಹೋದವು. ನೆತ್ತಿಗೆ ಬಂದ ನೇಸರ ಅಲ್ಲಿಯೇ ಕಾಯಂ ಇರುವುದಿಲ್ಲ. ಪಡುವಣಕ್ಕೆ ಜಾರಿಯೇ ಜಾರುತ್ತಾನೆ. ಉರಿಯು ಕುಂದುತ್ತದೆ. ನೀಲಕಂಠ ಮತ್ತೊಂದು ಮದುವೆಯಾಗಿದ್ದ. ಒಬ್ಬ ಮಗನೂ ಹುಟ್ಟಿದ್ದ. ಅವನೇ ಲಕ್ಷ್ಮಣ. ಶಾನುಭೋಗರ ಜೊತೆ ಅಡ್ಡಾಡುತ್ತಿದ್ದುದರಿಂದ ಮಗನು ಶಾಲೆಯಲ್ಲಿ ಚಲೋ ಓದುವ ಹಾಗೆ ಮಾಡಿದ. ಸರ್ಕಾರದ ಉಚಿತ ಹಾಸ್ಟೆಲ್‌ನಲ್ಲಿ ಸೀಟು ಸಿಗುವಹಾಗೆ ಮಾಡಿ ಹೈಸ್ಕೂಲು ಮೆಟ್ಟಿಲು ಏರುವ ಸ್ಥಿತಿಗೆ ತಂದಿದ್ದ. ಮುದ್ದುಮಾದೇವಿ ಈಗ ವೈಶಾಖದ ಹಳ್ಳದ ಹಾಗೆ ಸೊರಗಿ ಹೋಗಿದ್ದಳು. ನೀರು ತುಂಬಿದ್ದರೆ ತಾನೆ ಹಕ್ಕಿಗಳು, ಪ್ರಾಣಿಗಳು ನೀರು ಕುಡಿಯಲು ಬರುವುದು? ಊರಲ್ಲಿಯ ಗದ್ದೆಯ ಮಣ್ಣನ್ನು ಹೆಂಚಿನ ಕಾರ್ಖಾನೆಗೆ ಒಯ್ಯಲು ಗುತ್ತಿಗೆದಾರನೊಬ್ಬ ತಂಡದೊಂದಿಗೆ ಬಂದಿದ್ದ. ಸಂಸಾರ ಬಿಟ್ಟು ತಿಂಗಳುಗಟ್ಟಲೆ ಇಲ್ಲಿಯೇ ಇರುತ್ತಿದ್ದ ಅವನಿಗೆ ಮಾದೇವಿ ಜೊತೆಯಾದಳು. ಅವನು ಊರುಬಿಟ್ಟು ಹೋದಮೇಲೆ ಮಾದೇವಿಗೇನೋ ಗುಹ್ಯರೋಗ ಅಂಟಿದೆ ಎಂದು ಬೇಲಿಗೂಟಗಳೂ ಗುಸುಗುಸು ಮಾಡಿದವು. ಅವನಿಂದ ಇವಳಿಗೆ ಬಂತೋ ಅಥವಾ ಇವಳಿಂದ ಅವನು ಅಂಟಿಸಿಕೊಂಡು ಹೋದನೋ ಹೇಳುವವರು ಯಾರು? ಈಗ ಅವಳ ಬಳಿಗೆ ಬರುವವರು ನಿಂತುಹೋಗಿದ್ದರು. ಅವಳ ಜೊತೆ ಮಲಗೆದ್ದವರೆಲ್ಲ ಅವಳನ್ನು ಅಕ್ಕ ಎಂದು ಕರೆಯಲಾರಂಭಿಸಿದ್ದರು.

ಈ ನಡುವೆ ಮಗನಿಗೆ ಮದುವೆ ಮಾಡಿಸಿದ್ದಳು. ಸೊಸೆಗೂ ಅತ್ತೆಗೂ ಸರಿಬರದೆ ಮಗ ಬೇರೆ ಮನೆ ಮಾಡಿಕೊಂಡಿದ್ದ. ಆದರೆ ನೀಲಕಂಠನ ಮಗ ಲಕ್ಷ್ಮಣ ಎಸ್ಸೆಸ್ಸೆಲ್ಸಿ ಮುಗಿಸಿದವನು ಯಾರ ಜೊತೆಗೋ ಮುಂಬಯಿಗೆ ಹೋಗಿಬಿಟ್ಟಿದ್ದ. ಅಲ್ಲಿ ಅವನು ಚಿನಿವಾಲರೊಬ್ಬರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮನೆ ಕೆಲಸಕ್ಕೂ ಅಂಗಡಿ ಕೆಲಸಕ್ಕೂ ಒಟ್ಟಾಗಿಯೇ ಬಳಕೆಯಾಗುತ್ತಿದ್ದ ಲಕ್ಷ್ಮಣ ಮಾಲೀಕರ ವಿಶ್ವಾಸ ಗಳಿಸಿಕೊಂಡಿದ್ದ. ಈ ಕಾರಣಕ್ಕೆ ಅವರು ಇವನಿಗೆ ಆಭರಣ ತಯಾರಿಸುವುದನ್ನು ಕಲಿಸಿಕೊಟ್ಟರು. ಹತ್ತಾರು ವರ್ಷ ಕಳೆದ ಮೇಲೆ ಅಪ್ಪನಿಗೆ ವಯಸ್ಸಾಯಿತು ಎಂದು ಲಕ್ಷ್ಮಣ ಊರಿಗೆ ಮರಳಿದ್ದ. ನೀಲಕಂಠ ಅವನಿಗೆ ಮದುವೆಯನ್ನೂ ಮಾಡಿಸಿದ್ದ. ತಾನು ಆಗಾಗ ಹೋಗಿಬರುತ್ತಿದ್ದ ತಾಲೂಕಾಫೀಸಿನ ಹತ್ತಿರ ಚಿಕ್ಕದೊಂದು ಅಂಗಡಿಯನ್ನು ಬಾಡಿಗೆಗೆ ಮಗನಿಗೆ ಕೊಡಿಸಿದ್ದ. ಅವನ ಆಭರಣ ತಯಾರಿಸುವ ಕೆಲಸ ಅಲ್ಲಿ ಆರಂಭವಾಗಿತ್ತು. ಇದೆಲ್ಲ ಸುದ್ದಿ ಮಾದೇವಿಯ ಕಿವಿಗೂ ಬಿದ್ದಿತ್ತು.

***

ಮಾದೇವಿ ಮತ್ತೆ ಗಿಳಿಗೂಟದ ಕಡೆ ನೋಡಿದಳು. ನೀಲಕಂಠ ಕಟ್ಟಿ, ನಂತರ ತಾನು ಬಿಚ್ಚಿಟ್ಟ ತಾಳಿ ಅಲ್ಲಿಯೇ ಇತ್ತು. ಏನೋ ಕಸಿವಿಸಿ. ಮಾತುಗಳಲ್ಲಿ ಹೇಳಲಾಗದಂಥ ತಳಮಳ. ಹಳೆಯದೆಲ್ಲ ಒಂದು ಬಾರಿ ಕಣ್ಣೆದುರಿನಲ್ಲಿ ಹಾಯ್ದುಹೋಯಿತು. ತುಂಬ ಹೊತ್ತು ಕುಂತಲ್ಲಿಯೇ ಕುಂತಿದ್ದಳು. ಮನಸ್ಸಿನಲ್ಲಿ ಒಂದು ನಿರ್ಧಾರ ಗಟ್ಟಿಯಾಗುತ್ತಿದ್ದಂತೆ ಕಸಿವಿಸಿ ತಳಮಳಗಳೆಲ್ಲ ಕರಗಿಹೋದವು.

ಅದಾಗಿ ಸುಮಾರು ಒಂದು ತಿಂಗಳು ಕಳೆಯುತ್ತಿದ್ದಂತೆ ಮುದ್ದುಮಾದೇವಿ ಗಿಳಿಗೂಟಕ್ಕೆ ಹಾಕಿದ್ದ ತಾಳಿ ಸರವನ್ನು ತಗೆದಳು. ಅದನ್ನು ತನ್ನ ಸಂಚಿಯಲ್ಲಿ ಹಾಕಿಕೊಂಡಳು. ಹೊಳೆ ಬದಿಯಲ್ಲಿ ನಿಂತು ದೋಣಿಗೆ ಕಾಯ್ದಳು. ದೋಣಿ ಬಂದಮೇಲೆ ಅದರಲ್ಲಿ ಹತ್ತಿಕುಳಿತಳು. ದೋಣಿ ತಾಲೂಕು ಕೇಂದ್ರದ ಬಂದರಿನಲ್ಲಿ ನಿಂತಾಗ ಅವಳು ಇಳಿಯುವುದಕ್ಕೆ ಬೊಮ್ಮ ಸಹಾಯ ಮಾಡಿದ. ದೊಣ್ಣೆ ಊರಿಕೊಳ್ಳುತ್ತ ತಾಲೂಕಾಫೀಸನ ಹತ್ತಿರ ಹೋದಳು. ಅಲ್ಲಿ ಅವಳಿಗೆ ನೀಲಕಂಠನ ಮಗ ಲಕ್ಷ್ಮಣನ ಆಭರಣದ ಅಂಗಡಿ ಹುಡುಕುವುದು ಕಷ್ಟವಾಗಲಿಲ್ಲ. ಇವಳು ಅವನನ್ನು ನೋಡುವುದು ಇದೇ ಮೊದಲು. ಅವನೂ ಇವಳನ್ನು ನೋಡುವುದು ಇದೇ ಮೊದಲು. ಕಾಣುವುದಕ್ಕೆ ಅವನು ಹೆಚ್ಚೂಕಡಿಮೆ ಇವಳ ಮಗನಂತೆಯೇ ಇದ್ದ. ಇಬ್ಬರೂ ಅಪ್ಪನ ರೂಪವನ್ನೇ ಹೊಂದಿದ್ದರು.

ಅಂಗಡಿಯಲ್ಲಿ ಯಾರೂ ಇರಲಿಲ್ಲ. ಅವನು ಇವಳ ಕಡೆ ಏನು ಎಂಬಂತೆ ನೋಡಿದ. ಇವಳು ತನ್ನ ಸಂಚಿಯಿಂದ ಕರಿಮಣಿ ಸರವನ್ನು ನಿಧಾನಕ್ಕೆ ತೆಗೆದು ಅವನ ಕೈಯಲ್ಲಿ ಇಡುತ್ತ, ಇದನ್ನು ಮುರಿಯಿಸಿ ಒಂದು ಉಂಗುರ ಮಾಡಿಸಬೇಕು. ಆಗುತ್ತದಾ ಎಂದು ಕೇಳಿದಳು. ಅವನು ಅದನ್ನು ಒರೆಗಲ್ಲಿಗೆ ತಿಕ್ಕಿ ಚಿನ್ನ ಹೌದು ಎಂದು ಖಾತ್ರಿಪಡಿಸಿಕೊಂಡ. ಆಗುತ್ತದೆ, ಯಾವಾಗ ಬೇಕು ಎಂದು ಕೇಳಿದ. ಆಗ ಮುದ್ದು ಮಾದೇವಿ, ಮಗನೆ, ನಾನು ಯಾರು ಅಂತ ನಿನಗೆ ಗೊತ್ತಿಲ್ಲ. ನಾನು ನಿನ್ನ ಅಪ್ಪನ ಮೊದಲ ಹೆಂಡತಿ. ಏನೇನೋ ಆಗಿಹೋಯ್ತು. ನಿನ್ನ ಅಪ್ಪ ತೀರಿಕೊಂಡ ಸುದ್ದಿ ಗೊತ್ತಾಯ್ತು. ಅವನ ನೆನಪಿಗೆ ಅಂತ ನನ್ನ ಹತ್ತಿರ ಇದ್ದದ್ದು ಇದೊಂದೇ ತಾಳಿ ಆಗಿತ್ತು. ಅವ್ನು ಬೇರೆ ಮದುವೆಯಾದ ದಿನ ಇದನ್ನು ತೆಗೆದು ಗಿಳಿಗೂಟಕ್ಕೆ ಹಾಕಿ ಇಟ್ಟಿದ್ದೆ. ಎಂದಾದರೂ ಬರುವ, ನನ್ನ ತಪ್ಪನ್ನು ಕ್ಷಮಿಸಬಹುದು ಎಂದು ಕಾಯುತ್ತಿದ್ದೆ. ಅವನು ಬರಲೇ ಇಲ್ಲ. ಹೋಗಿಯೇ ಬಿಟ್ಟ. ಅವನೇ ಇಲ್ಲದ ಮೇಲೆ ಇದು ನನಗೆ ಯಾಕೆ ಬೇಕು ಹೇಳು? ಇದನ್ನು ಕರಗಿಸಿ ಒಂದು ಉಂಗುರ ಮಾಡು. ಅದನ್ನು ನಿನ್ನ ಮಗುವಿಗೆ ನನ್ನ ಉಡುಗೊರೆ ಎಂದು ಕೊಡು. ಪಾತ್ರ ಮುಗಿದ ಮೇಲೆ ವೇಷ ಕಳಚಲೇ ಬೇಕಲ್ಲ. ನಾನೂ ವೇಷ ಕಳಚುವ ಕಾಲ ಹತ್ತಿರ ಬರ್ತಿದೆ ಎಂದು ಮನ್ಸು ಹೇಳ್ತಾ ಇದೆ. ನಿನಗೆ ಒಳ್ಳೇದಾಗ್ಲಿ ಮಗನೆ'' ಎಂದು ಹೇಳಿದವಳು ಅವನ ಅಂಗಡಿಯ ಮೆಟ್ಟಿಲು ಇಳಿಯತೊಡಗಿದಳು.
ಲಕ್ಷ್ಮಣ ಅದನ್ನೆಲ್ಲ ಕೇಳಿಸಿಕೊಂಡು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಬೇಕೆನ್ನುವುದರೊಳಗೆ ಅವಳು ಹತ್ತು ಮಾರು ದೂರ ಹೋಗಿದ್ದಳು. ದೊಡ್ಡವ್ವಾ ನಿಂತ್ಕೊಳ್ಳೆ'' ಎಂದು ಅವನು ಕೂಗಿದ್ದು ಮಾದೇವಿಯ ಕಿವಿಗೆ ಬಿತ್ತು. ನಿಲ್ಲದೆ, ತಿರುಗದೇ ಹೋಗುತ್ತಲೇ ಇದ್ದ ಅವಳ ಕಣ್ಣಂಚಿನಲ್ಲಿ
`ದೊಡ್ಡವ್ವಾ’ ಎಂಬ ಪದ ನೀರು ಜಿನುಗಿಸಿತ್ತು.