ಇಲ್ಲಿ,
ಕಾಲಕ್ಕೆ ಉಸಿರುಗಟ್ಟಿದೆ
ಅಪ್ರಸಿದ್ಧರೆಲ್ಲ ಕ್ಷಣದಲ್ಲಿ ಸಿದ್ಧಪ್ರಸಿದ್ಧರು
ಸ್ಥಳ ಮಹಿಮೆ. ದೇವ
ರಾಲ; ಇದರ ಆಳ ಲೆಕ್ಕಹಾಕಿ ನಿ
ರಾಳವಾಗಿ ಬದುಕುವುದು ಸಾಧ್ಯವಿಲ್ಲ

ರೂಪಾ, ನಿನ್ನ ರೂಪ ಅಪರೂಪ
ನಿನ್ನ ದೇವಿಯಾಗಿಸ ಹೊರಟವರಿಗೆ
ಅದೇ ನಿನ್ನ ‘ಅರ್ಹತೆ’ಯಾಗಿ ಕಂಡಿರಬೇಕು!
ನೀನು ಕನಸಿದ ಸೌಧಗಳೆಲ್ಲ ಇವರ
ಬುಲ್‌ಡೋಜರ್‌ಗೆ ಸಿಕ್ಕಿ ಪುಡಿ ಪುಡಿಯಾದಾಗ
ನೀ ನಕ್ಕೆ ಅಂದು ಕೊಂಡದ್ದು ನನ್ನ
ಭ್ರಮೆ ಇದ್ದಿರಬೇಕು

ಕನ್ವರ್, ಇದು ನಿನ್ನೊಬ್ಬಳ ಇಂದು ನಿನ್ನಿನ
ಕಣ್ಣೀರ ಕಥೆಯಲ್ಲ
ಶತಶತಮಾನಗಳ ಕಾಲ ಕೆಂಪು ಮಸಿಯಲ್ಲಿ
ಹರಿದು ಬಂದಿದೆ ಧಾರಾವಾಹಿ; ಸಶೇಷ

ನೆಲದ ಮೊಗ್ಗಿಗೆ ಮುಗಿಲ
ತಾರೆಯಾಗಿ ಅರಳುವ ಆಶೆ ಇಂದಿನದಲ್ಲ
ಬಡಪಾಯಿ ಧ್ರುವನಿಗೆ ನಿನ್ನ
ಸವಾಲಿನ ಅವಶ್ಯಕತೆ ಇತ್ತ್ತೆ?
ಅದು ನಿನಗೆ ಗೊತ್ತಿಲ್ಲದಿದ್ದರೂ ನಿನ್ನ
ಹೆಸರಿಗೆ ‘ಜೈ’ ಅಂದವರಿಗೆ ಚೆನ್ನಾಗಿ ಗೊತ್ತಿದೆ.
ರೂಪಾ, ಕೊನೆಗೂ ನೀ ದೇವಿಯಾದೆ
ಅಲ್ಲ, ಅಲ್ಲ;
ನಿನ್ನ ದೇವಿಯಾಗಿಸಿದರು
೧೩-೪-೮೮