*ಪ್ರಯೋಜನಕ್ಕೆ ಬಾರದ ಮಾತನಾಡುವುದು

ಬ್ಬ ತಾಸುಗಟ್ಟಲೆ ಭಾಷಣವನ್ನು ಮಾಡುತ್ತಲೇ ಇರುತ್ತಾನೆ. ಅದರಲ್ಲಿ ವಿಷಯವೇನೂ ಇರುವುದಿಲ್ಲ. ಹೇಳಿದ್ದನ್ನೇ ಹಿಂದೆ ಮುಂದೆ ಮಾಡಿ ಉಂಡೆಗೆ ನೂಲು ಸುತ್ತುವಂತೆ ಸುತ್ತುತ್ತಿರುತ್ತಾನೆ. ಅದನ್ನು ಕೇಳಿದವರು, ಬೇಸರ ಬಂದು, ಅದೇನು ತೌಡುಕುಟ್ಟುತ್ತಾನಲ್ಲ ಎನ್ನುತ್ತಾರೆ.
ಅರ್ಥವಿಲ್ಲದ, ಪ್ರಯೋಜನಕ್ಕೆ ಬಾರದ ಮಾತನಾಡುವುದು ಹೇಗೆ ತೌಡು ಕುಟ್ಟುವ ಕೆಲಸವೋ ಅದೇ ರೀತಿ ಯಾವುದೇ ಪ್ರಯೋಜನಕ್ಕೆ ಬಾರದ ಕೆಲಸ ಮಾಡುವುದೂ ತೌಡುಕುಟ್ಟುವ ಕಾಯಕವೇ.
ತೌಡು ಎಂದರೆ ಬತ್ತದ ಮೇಲಿನ ಕವಚ. ಈ ಕವಚವನ್ನು ತೆಗೆದಾಗ ಅದು ಅಕ್ಕಿ ಎನಿಸಿಕೊಳ್ಳುತ್ತದೆ. ಈ ತೌಡನ್ನು ಕೆಲವು ಕಡೆ ಉಮ್ಮಿ ಎಂದೂ ಕರೆಯುತ್ತಾರೆ. ಇದನ್ನು ಒಲೆಗೆ ಉರುವಲಾಗಿ ಬಳಸುತ್ತಾರೆ ಅಷ್ಟೇ.
ಇದನ್ನೇ ಸಂಸ್ಕೃತದಲ್ಲಿ ತುಷ ಕುಂಡನ ನ್ಯಾಯ ಎಂದು ಹೇಳುತ್ತಾರೆ, ತುಷವೆಂದರೆ ತೌಡು. ಇದಕ್ಕೆ ಹೊಟ್ಟು ಎಂಬ ಅರ್ಥವೂ ಇದೆ. ಹೊಟ್ಟು ಕೇರುವುದು ಎನ್ನುವ ಮಾತು ಇದೆಯಲ್ಲ? ಕೇರುವುದು ಕಾಳಿನಲ್ಲಿಯ ಹೊಟ್ಟನ್ನು ಬೇರೆ ಮಾಡುವುದಕ್ಕೆ. ಆದರೆ ಹೊಟ್ಟನ್ನೇ ಕೇರಿದರೆ ಸಿಗುವ ಲಾಭವಾದರೂ ಏನು?
ಬುದ್ಧಿಗೇಡಿಗಳಿಗೆ ಬುದ್ಧಿಮಾತನ್ನು ಹೇಳುವುದು ಇಂಥ ತೌಡುಕುಟ್ಟುವ ಕೆಲಸವೆಂದು ಹಿತೋಪದೇಶ ಹೇಳುತ್ತದೆ.
ಆದರೆ ಇತ್ತೀಚೆಗೆ ತೌಡನ್ನೂ ಸದ್ಬಳಕೆ ಮಾಡುವ ತಂತ್ರಜ್ಞಾನಗಳು ಬಂದಿವೆ. ತೌಡಿನಿಂದ ಮನೆಯ ಬಾಗಿಲುಗಳನ್ನು ಸಿದ್ಧಪಡಿಸುತ್ತಾರೆ ಮತ್ತು ಇದು ಬೆಂಕಿ ಮತ್ತು ನೀರಿಗೆ ಹೆಚ್ಚು ಪ್ರತಿರೋಧಕ ಶಕ್ತಿಯನ್ನು ಹೊಂದಿದೆ ಎಂಬ ವರದಿಗಳು ಬಂದಿವೆ.
ಬದಲಾದ ಕಾಲಕ್ಕೆ ತಕ್ಕಂತೆ ಉಕ್ತಿಗಳೂ ಹೊಸ ರೂಪವನ್ನು ಪಡೆದುಕೊಳ್ಳುತ್ತವೆ. ಪಡೆದುಕೊಳ್ಳಲೇ ಬೇಕು.