ಶೀತಲ ಯುದ್ಧದ ಸಮಯದಲ್ಲಿ ಬ್ರಿಟನ್ನಿನ ಬೇಹುಗಾರನಾಗಿ ನಿಯುಕ್ತನಾಗಿದ್ದ ವ್ಯಕ್ತಿಯೊಬ್ಬ ರಶಿಯಾದ ಕೆಜಿಬಿಗೆ ಕೆಲಸ ಮಾಡಿ ಯುರೋಪಿನ ನೂರಾರು ಬೇಹುಗಾರರ ಪ್ರಚ್ಛನ್ನ ಬದುಕಿನ ಬಗ್ಗೆ ಮಾಹಿತಿ ನೀಡಿ ಹಲವರ ಹತ್ಯೆಗೆ ಕಾರಣನಾದ ರೋಚಕ ಕಥೆ ಇದು. ಆತ ಡಬ್ಬಲ್ ಏಜೆಂಟ್ ಜಾರ್ಜ್ ಬ್ಲೇಕ್. ಇದೀಗ ರಶಿಯಾದಲ್ಲಿ ನೆಮ್ಮದಿಯ ಬದುಕನ್ನು ಕಳೆಯುತ್ತಿರುವ ಬ್ಲೇಕ್ ಇತ್ತೀಚೆ ತಮ್ಮ 97ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ವಿದ್ರೋಹದಿಂದ ಯುರೋಪಿನ ನೂರಾರು ಗುಪ್ತ ಏಜೆಂಟರ ಹತ್ಯೆ ನಡೆದುಹೋಯಿತು. ಅವರ ಬಾಯಿಂದಲೇ ಅವರ ಕತೆಯನ್ನು ಕೇಳಿ.
ಗಿಲ್ಲಿಯನ್‌ ನನಗಾಗಿ ಕಾಯುತ್ತಿದ್ದಳು-
ಜೈಲು ಸಿಬ್ಬಂದಿಯೊಬ್ಬರು ನನ್ನನ್ನು ಸಂದರ್ಶಕರ ಕೊಠಡಿಗೆ ಕರೆದುಕೊಂಡು ಬಂದರು. ಅಲ್ಲಿ ನನ್ನ ಗಿಲ್ಲಿಯನ್ ನನಗಾಗಿ ಕಾಯುತ್ತಿದ್ದಳು. ಬಿರೂಟ್‌ನಿಂದ ಲಂಡನ್ನಿಗೆ ಬರುವಾಗ ನಮ್ಮ ಮೊದಲ ಮಗ ಆಂಟನಿಯ ನಾಲ್ಕನೆಯ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳಿದ್ದವು. ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಮಾಡೋಣ. ಅಷ್ಟೊತ್ತಿಗೆ ಬಂದುಬಿಡುತ್ತೇನೆ. ಸ್ನೇಹಿತರಿಗೆಲ್ಲ ನೀನೇ ಕರೆದುಬಿಡು ಎಂದು ಬಂದಿದ್ದೆ. ಆದರೆ ಮರಳಿ ಹೋಗದಂತೆ ನನ್ನನ್ನು ಹಿಡಿದುಹಾಕಿದ್ದರು.
ಗಿಲ್ಲಿಯನ್ ಎಂಟು ತಿಂಗಳ ಗರ್ಭಿಣಿ. ನಮ್ಮ ಮೂರನೆಯ ಮಗು ಅವಳ ಹೊಟ್ಟೆಯಲ್ಲಿತ್ತು. ಅವಳ ಕಣ್ಣುಗಳು ನನ್ನನ್ನು ಇರಿಯುವಂತೆ ನೋಡುತ್ತಿದ್ದವು. ಅವಳ ಮೌನ ನನಗೆ ಅಸಹನೀಯವಾಗಿತ್ತು. ನನಗೆ ದೇಶದ್ರೋಹಿ ಎಂದು ಹಣೆಪಟ್ಟಿ ಅಂಟಿಸಿದ್ದು ಅವಳಿಗೆ ತೀವ್ರ ನೋವನ್ನು ತಂದಿತ್ತು.
ಒಂದು ಕಾಲದಲ್ಲಿ ಈ ಜಾರ್ಜ್ ಬ್ಲೇಕ್ ಎಂದರೆ ಬ್ರಿಟಿಷ್ ಬೇಹುಗಾರಿಕೆ ಪಡೆಗೆ ಅಚ್ಚುಮೆಚ್ಚಿನ ಹೆಸರಾಗಿತ್ತು. ಆದರೆ ಇಂದು ನೋಡಿ, ಎಂಥ ಅವಸ್ಥೆ ನನ್ನದು. ಭರ್ತಿ 42 ವರ್ಷಗಳನ್ನು ಈ ಜೈಲಿನಲ್ಲಿಯೇ ಕೊಳೆಯಬೇಕು. ಗಿಲ್ಲಿಯನ್ ಅಂದು ಮಾತ್ರವಲ್ಲ, ನನ್ನ ಮೂರನೆಯ ಮಗುವನ್ನು ಹಡೆದ ಬಾಣಂತಿತನದ ಕೆಲವು ತಿಂಗಳು ಬಿಟ್ಟರೆ ಪ್ರತಿ ತಿಂಗಳೂ ನನ್ನ ಭೇಟಿಗೆ ಬರುತ್ತಿದ್ದಳು. ಅದೂ ಸುಮಾರು ಆರು ವರ್ಷ. ಅವಳ ಬಾಡಿದ ಮುಖವನ್ನು ನೋಡಿಯೇ ನನ್ನ ಉಳಿದ ಆಯುಷ್ಯ ಇಲ್ಲಿ ಕಳೆಯಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ.
ನೌಕಾಪಡೆಯ ಅಧಿಕಾರಿಯ ಮಗಳು ಅವಳು. ಗಟ್ಟಿಗಿತ್ತಿ. ಯಾರನ್ನಾದರೂ ನೀನು ಮದುವೆಯಾಗು. ನನ್ನಿಂದ ವಿಚ್ಛೇದನ ಪಡೆದುಕೋ ಎಂದು ಅವಳಿಗೆ ಸಲಹೆಯನ್ನೂ ನೀಡಿದ್ದೆ. ಈ ವಿಚ್ಛೇದನದಿಂದ ನಮ್ಮ ಮಕ್ಕಳ ಮೇಲೆ ಯಾವ ಪರಿಣಾಮ ಆಗಬಹುದು ಎಂಬುದನ್ನು ನಾವಿಬ್ಬರೂ ಚರ್ಚಿಸಿದ್ದೆವು. ಈ ಮಾತುಗಳ ನಡುವೆಯೆ ನನ್ನ ಮನಸ್ಸಿನ ಒಳಮೂಲೆಯಲ್ಲೆಲ್ಲೋ, ನಾನು ಇಲ್ಲಿಂದ ತಪ್ಪಿಸಿಕೊಂಡು ಹೋದ ಮೇಲೆ ಗಿಲ್ಲಿಯನ್‌ಳನ್ನೂ ಕರೆಸಿಕೊಳ್ಳಬೇಕು. ಅವಳಿಲ್ಲದೆ ನನ್ನ ಬಾಳು ಅಪೂರ್ಣ ಎನ್ನಿಸಿತ್ತು.
ದೇಶದ್ರೋಹಿ ಎಂದು ನನ್ನನ್ನು ಹೀಗಳೆಯುವುದಕ್ಕೆ ನಾನೇನು ಬ್ರಿಟನ್ನಿನಲ್ಲಿ ಹುಟ್ಟಿದವನೆ? ನನ್ನ ಅಪ್ಪನೋ ಟರ್ಕಿಯ ಕಾನ್‌ಸ್ಟಾಂಟಿನೋಪಲ್(ಈಗಿನ ಇಸ್ತಾಂಬುಲ್)ನವನು. ಹೆಸರು ಆಲ್ಬರ್ಟ್ ಬೆಹರ್. ಆತ ಯಹೂದಿ. ಕಾರಣ ನಾನೂ ಯಹೂದಿಯಾಗಿಬಿಟ್ಟೆ. ಆತ ಟರ್ಕಿಯವನಾದರೂ ಬ್ರಿಟಿಷ್ ಪ್ರಜೆಯಾಗಿದ್ದ. ಬ್ರಿಟನ್ನಿನ ಐದನೆಯ ಜಾರ್ಜ್ ದೊರೆಯ ಪರಮ ಅಭಿಮಾನಿಯಾಗಿದ್ದ ನನ್ನಪ್ಪ ಆ ಕಾರಣಕ್ಕಾಗಿಯೇ ನನಗೆ ಜಾರ್ಜ್ ಎಂದು ಹೆಸರಿಟ್ಟಿದ್ದ. ನನ್ನಮ್ಮನ ಊರು ಹಾಲೆಂಡಿನ ರಾಟರ್‌ಡ್ಯಾಂ. ನಾನು ಹುಟ್ಟಿದ್ದು ಅಲ್ಲಿಯೇ. ನನ್ನ ಮಾತೃಭಾಷೆ ಕೂಡ ಡಚ್. ನನ್ನಪ್ಪ ಟರ್ಕಿಯವನಾದರೂ ಅಟ್ಟೋಮನ್ ಸಾಮ್ರಾಜ್ಯದ ವಿರುದ್ಧ ಹೋರಾಡಿದವನು. ಈ ಸಾಹಸಕ್ಕಾಗಿ ಆತನಿಗೆ ಫ್ರಾನ್ಸ್ ಮತ್ತು ಬ್ರಿಟನ್ ಸರ್ಕಾರಗಳು ಶೌರ್ಯಪ್ರಶಸ್ತಿ ನೀಡಿ ಗೌರವಿಸಿದ್ದವು. ಮೊದಲ ಮಹಾಯುದ್ಧದಲ್ಲಿ ಆತ ತೀವ್ರವಾಗಿ ಗಾಯಗೊಂಡಿದ್ದ. ಹೀಗಾಗಿ ಸೇನೆಯಿಂದ ನಿವೃತ್ತನಾಗಿ ಹಾಲೆಂಡಿಗೆ ತೆರಳಿದ. ಅಲ್ಲಿ ಚಿಕ್ಕ ವ್ಯಾಪಾರವೊಂದನ್ನು ಕೈಗೆತ್ತಿಕೊಂಡ. ಅದರಲ್ಲಿ ಯಶಸ್ವಿಯಾಗಲಿಲ್ಲ. ಅದೇ ಹೊತ್ತಿಗೆ ನನ್ನಮ್ಮ ಕ್ಯಾಥರಿನ್‌ಳನ್ನು ನೋಡಿ ಮದುವೆಯಾದ.
ನಾನು ಹುಟ್ಟಿದ್ದು 1922ರ ನವೆಂಬರ್ 11ರಂದು. 1936ರಲ್ಲಿ ನನ್ನಪ್ಪ ಸಾಯುವವರೆಗೂ ಹಾಲೆಂಡಿನಲ್ಲಿ ನಮ್ಮ ಸಂಸಾರ ಚೆನ್ನಾಗಿಯೇ ಇತ್ತು. ಯಾವಾಗ ನಮ್ಮಪ್ಪ ಸತ್ತನೋ ನನ್ನ ಕಾಲಿನಲ್ಲಿ ಚಕ್ರ ಬಂದು ಸೇರಿಕೊಂಡಿತು. ಇಜಿಪ್ತದ ಕೈರೋದಲ್ಲಿ ನನ್ನಪ್ಪನ ತಂಗಿಯೊಬ್ಬಳಿದ್ದಳು. ಅವಳನ್ನು ಅಲ್ಲಿಯ ಶ್ರೀಮಂತ ಬ್ಯಾಂಕರ್ ಒಬ್ಬ ಮದುವೆಯಾಗಿದ್ದ. ಅವರು ನನ್ನನ್ನು ಪೋಷಿಸುವ ಮಾತು ಕೊಟ್ಟರು. ಕಾರಣ ಅಮ್ಮ ನನ್ನನ್ನು ಅವರಲ್ಲಿಗೆ ಕಳುಹಿಸಿದಳು. ನನ್ನ ಸೋದರತ್ತೆಗೆ ಇಬ್ಬರು ಗಂಡು ಮಕ್ಕಳು. ಅವರು ನನಗಿಂತ ಹತ್ತು ವರ್ಷ ದೊಡ್ಡವರು. ಅವರಲ್ಲಿ ಕಿರಿಯನಾದ ಹೆನ್ರಿ ಕುರಿಯೆಲ್‌ಗೂ ನನಗೂ ಗಳಸ್ಯಕಂಠಸ್ಯ. ಆತ ನನ್ನ ಮೇಲೆ ಅಪಾರವಾದ ಪ್ರಭಾವ ಬೀರಿದ. ಆತ ಕಮ್ಯುನಿಸಂ ಒಪ್ಪಿಕೊಂಡಿದ್ದ. ನಾಝಿಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿದ ಕಾರಣಕ್ಕೆ ನನ್ನನ್ನು ನಿರ್ಬಂಧದಲ್ಲಿ ಇಟ್ಟರು. ಅಪ್ರಾಪ್ತನಾದ ಕಾರಣ ಬಿಡುಗಡೆ ಮಾಡುತ್ತಾರೆ. ಹದಿನೆಂಟು ತುಂಬುತ್ತಿದ್ದಂತೆ ಮತ್ತೆ ಬಂಧಿಸುವ ಸಾಧ್ಯತೆ ಇದ್ದುದರಿಂದ ಸನ್ಯಾಸಿಯ ವೇಷದಲ್ಲಿ ಲಂಡನ್ನಿಗೆ ಪರಾರಿಯಾದೆ. ಆಗಲೇ ನಾನು ಜಾರ್ಜ್ ಬೆಹರ್‌ನಿಂದ ಜಾರ್ಜ್ ಬ್ಲೇಕ್ ಆದದ್ದು. ಆಗಂತೂ ಎರಡನೆ ಜಾಗತಿಕ ಯುದ್ಧದ ಕಾಲ. ಬ್ರಿಟಿಷರಿಗಂತೂ ಕೆಲಸಗಾರರ ಅಗತ್ಯವಿತ್ತು. ಸೇನೆಯಲ್ಲಿ ಕೆಲಸಕ್ಕೆ ಸೇರುವುದೂ ಸುಲಭವಾಗಿತ್ತು. ಈ ಕಾರಣಕ್ಕಾಗಿಯೇ ನನಗೆ ಸ್ಪೆಶಲ್ ಆಪರೇಷನ್ಸ್ ಎಕ್ಸಿಕ್ಯೂಟಿವ್‌ನಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.
ಬ್ರಿಟಿಷ್ ಬೇಹುಗಾರರು ವಶಪಡಿಸಿಕೊಂಡ ಜರ್ಮನಿಯ ದಾಖಲೆಗಳನ್ನು ಅನುವಾದಿಸುವ ಮತ್ತು ಫ್ರಾನ್ಸ್‌ನಲ್ಲಿ ಸೆರೆಸಿಕ್ಕ ಜರ್ಮನರ ವಿಚಾರಣೆ ನಡೆಸುವ ಕೆಲಸ ನನ್ನ ಪಾಲಿಗೆ ಬಂತು. ಈ ಕೆಲಸಕ್ಕಾಗಿ ನನ್ನನ್ನು ಹ್ಯಾಂಬರ್ಗಿಗೆ ಕಳುಹಿಸಲಾಯಿತು. ಅಲ್ಲಿ ಜರ್ಮನಿಯ ಯು-ಬೋಟ್ (ಸಮುದ್ರದಾಳದಲ್ಲಿ ಚಲಿಸಿ ದಾಳಿ ಮಾಡುವ ಬೋಟುಗಳು) ಕ್ಯಾಪ್ಟನ್‌ಗಳ ವಿಚಾರಣೆಯ ಉಸ್ತುವಾರಿ ನನ್ನದು. ನಾನು ರಶಿಯನ್ ಭಾಷೆಯಲ್ಲಿ ಒಂದು ಕೋರ್ಸ್ ಮಾಡಿದ್ದೆ. ಈ ಅರ್ಹತೆಯ ಮಾನದಂಡದ ಮೇಲೆ 1948ರಲ್ಲಿ ಬ್ರಿಟನ್ನಿನ ಪ್ರಸಿದ್ಧ ರಹಸ್ಯ ಬೇಹುಗಾರಿಕೆ ಸೇವೆ ಎಂಐ6ಗೆ ನನ್ನ ನೇಮಕವಾಯಿತು.
1950ರ ಜೂನ್ ತಿಂಗಳಲ್ಲಿ ನನ್ನನ್ನು ಉತ್ತರ ಕೊರಿಯಾಕ್ಕೆ ಬ್ರಿಟಿಷರು ಕಳುಹಿಸಿದರು. ರಿಪಬ್ಲಿಕ್ ಆಫ್ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಒಂದು ಗೂಢಚಾರರ ಜಾಲವನ್ನು ರೂಪಿಸುವ ಮಹತ್ವದ ಹೊಣೆಗಾರಿಕೆ ನನ್ನ ಪಾಲಿಗೆ ಬಂತು. ಅದೇ ತಿಂಗಳ 24ರಂದು ಸಿಯೋಲ್‌ಗೆ ಬಂದೆ. ಕೆಲವೇ ತಿಂಗಳಲ್ಲಿ ನನ್ನ ಬಂಧನವಾಗುತ್ತದೆ. ಅಲ್ಲಿಯ ಜೈಲಿನಲ್ಲಿ ನನಗೊಬ್ಬ ಸ್ನೇಹಿತ ದೊರೆಯುತ್ತಾನೆ. ನನ್ನ ಮಾನಸಿಕ ಪರಿವರ್ತನೆಗೆ ಭೂಮಿಕೆ ಸಿದ್ಧವಾಗಿದ್ದೇ ಇಲ್ಲಿ. ನನಗೆ ಕೆಲಸ ಕೊಟ್ಟ ಬ್ರಿಟನ್ನಿನ ವಿರುದ್ಧ ಚಿಂತನೆ ಮೊಳಕೆಯೊಡೆದದ್ದು ಇಲ್ಲಿಯೇ. ಜೈಲಿನಲ್ಲಿ ನಾನು ಕಾರ್ಲ್ ಮಾರ್ಕ್ಸ್‌ನನ್ನು ಓದಿದೆ. ಮಾರ್ಕ್ಸ್‌ನ ವಿಚಾರಗಳಿಂದ ಪ್ರಭಾವಿತನಾಗಿ ಆತನ ಅಭಿಮಾನಿಯಾದೆ. ಈ ಮೊದಲೇ ಇಜಿಪ್ತದಲ್ಲಿ ಹೆನ್ರಿ ಕುರಿಯೆಲ್ ನನಗೆ ಕಮ್ಯುನಿಸಂ ಬಗ್ಗೆ ತಿಳಿಸಿದ್ದ. ಈಗ ಇಲ್ಲಿಯ ಸ್ನೇಹಿತ ಅದಕ್ಕೆ ಮತ್ತಷ್ಟು ನೀರೆರೆದ.
ಕೊರಿಯಾದ ಪುಟ್ಟ ಊರಿನ ಮೇಲೆ ಅಮೆರಿಕದ ಯುದ್ಧ ವಿಮಾನಗಳು ಬಿಡುವಿಲ್ಲದೆ ಬಾಂಬ್ ಮಳೆಗರೆಯುತ್ತಿದ್ದವು. ಯುವಕರೆಲ್ಲ ಸೇನೆಯಲ್ಲಿದ್ದ ಕಾರಣ ಆ ಊರಿನಲ್ಲಿ ಇದ್ದವರು `ಮ ಮ ಮು’ (ಮಕ್ಕಳು ಮಹಿಳೆಯರು ಮತ್ತು ಮುದುಕರೇ) ಆಗಿದ್ದರು. ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದ ಅಸಹಾಯಕರ ಮೇಲೆ ಅಪಾರ ಪ್ರಮಾಣದ ಶಸ್ತ್ರಗಳಿಂದ ದಾಳಿ ಮಾಡುವುದು ಎಂಥ ಪೌರುಷ? ಸರಿಸಾಟಿ ಇಲ್ಲದ ಸಮರ ಸಾಮರ್ಥ್ಯ, ತಾಂತ್ರಿಕವಾಗಿ ಮೇಲುಗೈ ಸಾಧಿಸಿದ ದೇಶಕ್ಕೆ ಸೇರಿದವನೆಂಬ ಕಾರಣಕ್ಕೆ ನನಗೇ ನಾಚಿಕೆಯಾಗತೊಡಗಿತು. ನಾನು ತಪ್ಪು ಪಕ್ಷದಲ್ಲಿದ್ದೇನೆ ಎಂಬ ಭಾವನೆ ಮೂಡಿತು.
1953ರಲ್ಲಿ ಬಿಡುಗಡೆಯಾಗಿ ಬ್ರಿಟನ್ನಿಗೆ ಮರಳಿದಾಗ ನನಗೆ ಹೀರೋಗಳಿಗೆ ಸಿಗುವ ಸ್ವಾಗತವೇ ಸಿಕ್ಕಿತು. 1955ರಲ್ಲಿ ಎಂಐ6 ನನ್ನನ್ನು ಕೇಸ್ ಆಫೀಸರ್ ಎಂದು ಬರ್ಲಿನ್‌ಗೆ ಕಳುಹಿಸಿತು. ನಾನು ಆ ವೇಳೆಗೆ ಅದು ಹೇಗೋ ಕೆಜಿಬಿ ಸಂಪರ್ಕಕ್ಕೆ ಬಂದುಬಿಟ್ಟಿದ್ದೆ. ಸೋವಿಯತ್‌ ರಶಿಯಾದ ಅಧಿಕಾರಿಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಡಬ್ಬಲ್ ಏಜೆಂಟ್‌ಗಳನ್ನಾಗಿ ನೇಮಿಸತೊಡಗಿದೆ. ಸಮೂಹ ನಾಶದ ಯುದ್ಧದ ಬಗ್ಗೆ ನನಗೆ ತೀವ್ರ ಜಿಗುಪ್ಸೆ ಮೂಡಿದ್ದ ಕಾರಣ ಕೆಜಿಬಿಗೆ ಬ್ರಿಟಿಷ್ ಮತ್ತು ಅಮೆರಿಕದ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಒದಗಿಸತೊಡಗಿದೆ. ಒಂಬತ್ತು ವರ್ಷ ಅವಧಿಯಲ್ಲಿ 400 ಎಂಐ6 ಏಜೆಂಟ್‌ಗಳ ವಿವರಗಳನ್ನು ರಶಿಯಾಕ್ಕೆ ಒದಗಿಸಿದೆ. ಇದರ ನೆರವಿನಿಂದ ಪೂರ್ವ ಯುರೋಪಿನಲ್ಲಿ ಎಂಐ6ನ ಬಹುತೇಕ ಕಾರ್ಯಾಚರಣೆಗಳು ವಿಫಲವಾದವು. ನನ್ನಿಂದಾಗಿ ಮಧ್ಯಪ್ರಾಚ್ಯದಲ್ಲಿ ಬ್ರಿಟಿಷರ ರಹಸ್ಯ ಸೇವೆಯ ಕಾರ್ಯಾಚರಣೆಯೇ ನೆಲಕಚ್ಚಿತ್ತು. ಕೈರೋ, ಡಮಾಸ್ಕಸ್ ಮತ್ತು ಬಿರೂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಬ್ರಿಟಿಷ್ ಏಜೆಂಟರ ರಹಸ್ಯವನ್ನು ನಾನು ಕೆಜಿಬಿಗೆ ಒದಗಿಸಿದ್ದೆ. ರಶಿಯಾಕ್ಕೆ ಎಷ್ಟು ಮಾಹಿತಿ ಒದಗಿಸಿದೆ ಎಂಬುದರ ಲೆಕ್ಕವೇ ನನ್ನಲ್ಲಿರಲಿಲ್ಲ. ಏಕೆಂದರೆ ಅವು ಅಷ್ಟೊಂದು ಅಗಾಧ ಪ್ರಮಾಣದ್ದಾಗಿದ್ದವು.
1959ರ ವೇಳೆಗಾಗಲೆ ರಶಿಯಾದ ವಿದೇಶಿ ಮಿಲಿಟರಿ ಇಂಟೆಲಿಜೆನ್ಸ್‌ನಲ್ಲಿ ಅಮೆರಿಕದ ಸಿಐಎ ತೂರಿಕೊಂಡಿದೆ ಎಂಬ ಅಂಶ ನನ್ನ ಗಮನಕ್ಕೆ ಬಂತು. ಪಿ.ಎಸ್.ಪೊಪೋವ್ ಅಮೆರಿಕದ ಪರ ಕೆಲಸ ಮಾಡುತ್ತಿರುವುದನ್ನು ಪುರಾವೆ ಸಹಿತ ಕೆಜಿಬಿ ಗಮನಕ್ಕೆ ತಂದೆ. 1960ರಲ್ಲಿ ಪೊಪೋವ್‌ನನ್ನು ಸಾಯಿಸಲಾಯಿತು. ಆತನ ಆತ್ಮಕ್ಕೆ ಶಾಂತಿ ಸಿಗಲಿ.
ಎಲ್ಲದಕ್ಕೂ ಒಂದು ಕೊನೆ ಎನ್ನುವುದು ಇರುತ್ತದೆ ಅಲ್ಲವೆ? ನಾನೂ ಇದನ್ನು ನಿರೀಕ್ಷಿಸುತ್ತಲೇ ಇದ್ದೆ. ಪೋಲಂಡಿನ ಮೈಕೆಲ್ ಗೊಲೆನಿವ್‌ಸ್ಕಿ ನನ್ನ ಮೇಲೆ ಕಣ್ಣಿಟ್ಟಿದ್ದ. ನಾನು ಸೋವಿಯತ್‌ ಪರ ಕೆಲಸ ಮಾಡುತ್ತಿದ್ದೇನೆ ಎಂದು ಆತ ಇಂಗ್ಲಂಡಿಗೆ ತಿಳಿಸಿದ. ಸುದೀರ್ಘ ವಿಚಾರಣೆ ನಡೆಯಿತು. ನಾನು ಆರೋಪಗಳನ್ನು ಅಲ್ಲಗಳೆಯಲಿಲ್ಲ. ಸೈದ್ಧಾಂತಿಕ ಕಾರಣಗಳಿಗಾಗಿ ಅವನ್ನು ಮಾಡಿದ್ದಾಗಿ ವಾದಿಸಿದೆ. ಒಟ್ಟೂ ಶಿಕ್ಷೆ 42 ವರ್ಷಗಳ ಜೈಲು. ಅದುವರೆಗಿನ ಶಿಕ್ಷೆಗಳ ಇತಿಹಾಸದಲ್ಲಿಯೇ ಇದೊಂದು ದಾಖಲೆ. ಈ ದೀರ್ಘ ಅವಧಿಯೇ ಹಲವರಲ್ಲಿ ನನ್ನ ಬಗೆಗೆ ಸಹಾನುಭೂತಿ ಮೂಡುವುದಕ್ಕೆ ಕಾರಣವಾಯಿತು.
ಅದೊಂದು ಜೇಮ್ಸ್‌ಬಾಂಡ್ ಕಥೆ-
ನನ್ನನ್ನು ಸೆರೆಯಲ್ಲಿಟ್ಟಿದ್ದ ವರ್ಮ್‌ವುಡ್ ಸೆರೆಮನೆ ಬ್ರಿಟನ್ನಿನಲ್ಲೇ ಅತ್ಯಂತ ಸುರಕ್ಷಿತ ಎಂದು ಪರಿಗಣಿತವಾಗಿತ್ತು. ಸಾವಿನ ವರೆಗೂ ನನ್ನ ಸಂಗಾತಿಯಾಗಲಿದ್ದ ಆ ಸೆರೆಮನೆಯ ಅಂಗುಲ ಅಂಗುಲವನ್ನೂ ಪರಿಚಯ ಮಾಡಿಕೊಂಡೆ. ಸುತ್ತುಗಟ್ಟಿದ ಕೋಟೆಗೆ ಸರ್ಪಗಾವಲು. ಇಂಥ ಅಭೇದ್ಯ ಸ್ಥಿತಿಯಲ್ಲೂ ನಾನು ಪವಾಡದ ನಿರೀಕ್ಷೆಯಲ್ಲಿದ್ದೆ. ಏನೋ ಒಳ್ಳೆಯದು ಸಂಭವಿಸುತ್ತದೆ ಎಂದು ನನ್ನ ಅಂತರಾತ್ಮ ಹೇಳುತ್ತಿತ್ತು. ಸಕಾರಾತ್ಮಕವಾಗಿ ಚಿಂತಿಸಬೇಕು ಎಂಬುದು ನನಗೆ ನನ್ನ ತಾಯಿಯಿಂದ ಬಂದ ಬಳುವಳಿ. ಜೈಲಿನಲ್ಲಿ ಒಮ್ಮೊಮ್ಮೆ ಅವಳ ನೆನಪಾಗಿ ಹೃದಯ ಭಾರವಾಗುತ್ತಿತ್ತು.
ನಾನು ಜೈಲಿನಲ್ಲಿ ಇದ್ದಾಗಲೇ ಮೈಕೆಲ್ ರಾಂಡ್ಲ್ ಮತ್ತು ಪ್ಯಾಟ್ ಪೊಟ್ಟಲ್ ಎಂಬಿಬ್ಬರು ಜೈಲಿಗೆ ಬಂದರು. ಅವರು ಪರಮಾಣು ವಿರೋಧಿ ನೇರ ಕಾರ್ಯಾಚರಣೆ ಗುಂಪಿನ ಸದಸ್ಯರಾಗಿದ್ದರು. ತಮ್ಮನ್ನು ವಿಮೋಚನಾವಾದಿಗಳೆಂದೂ ಅರೆ ಅರಾಜಕತಾವಾದಿಗಳೆಂದೂ ಕರೆದುಕೊಳ್ಳುತ್ತಿದ್ದರು. 1962ರಲ್ಲಿ ಇವರಿಬ್ಬರಿಗೂ ಹದಿನೆಂಟು ತಿಂಗಳ ಶಿಕ್ಷೆಯಾಗಿ ಒಳಗೆ ಬಂದರು. ಎಸ್ಸೆಕ್ಸ್‌ನ ಪರಮಾಣು ನೆಲೆಯ ಹತ್ತಿರ ಪ್ರತಿಭಟನೆ ನಡೆಸಲು ಒಳಸಂಚು ಮಾಡಿದ್ದಾರೆಂಬ ಆರೋಪದಲ್ಲಿ ಅವರಿಗೆ ಶಿಕ್ಷೆಯಾಗಿತ್ತು. ಅವರಿಬ್ಬರೂ ಜೈಲು ಸೇರಿದ್ದು ಅದೇ ಮೊದಲು. ನನಗೆ ವಿಧಿಸಿದ ಶಿಕ್ಷೆಯ ಪ್ರಮಾಣ ನನ್ನ ಬಗೆಗೆ ಅವರಲ್ಲಿ ಅನುಕಂಪ ಮೂಡುವ ಹಾಗೆ ಮಾಡಿತು. ನನ್ನ ಬಗ್ಗೆ ಸಹಾನುಭೂತಿ ಹೊಂದಿದ್ದ ಈ ಇಬ್ಬರಿಗೆ ನನ್ನನ್ನು ಪರಾರಿ ಮಾಡಿಸುವಲ್ಲಿ ನೆರವಾಗಬಲ್ಲ ಕೆಲವರ ಪರಿಚಯವನ್ನೂ ಮಾಡಿಕೊಟ್ಟೆ.
ರಾಂಡ್ಲ್ ಮತ್ತು ಪೊಟ್ಟಲ್ ಇಬ್ಬರೂ ಪಕ್ಕಾ ಕಸಬುದಾರಿಗಳು. ಅರುವತ್ತರ ದಶಕದ ಆರಂಭದಲ್ಲಿ ಶಾಂತಿ ಚಳವಳಿ ನಡೆಸಲು ರಹಸ್ಯವಾಗಿ ಯೋಜನೆ ರೂಪಿಸಿದ ಅನುಭವ ಅವರಿಗಿತ್ತು. 1963ರಲ್ಲಿ ಅವರು ನಡೆಸಿದ ಶಾಂತಿಗಾಗಿ ಗೂಢಚರ್ಯ ಮೊದಲಾದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದವು. ಇದೇ ಜೈಲಿನಲ್ಲಿ ಸೀಯನ್ ಬೌರ್ಕೆ ಎಂಬವನಿದ್ದ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಾಂಬ್ ಕಳುಹಿಸಿದ ಅಪರಾಧಕ್ಕಾಗಿ ಆತನಿಗೆ ಏಳು ವರ್ಷ ಜೈಲಾಗಿತ್ತು. ರಾಂಡ್ಲ್ ಮತ್ತು ಪೊಟ್ಟಲ್ ನನಗಾಗಿ ಈ ಬೌರ್ಕೆಯನ್ನು ಭೇಟಿಯಾದರು. ಪರಾರಿಯ ಪೂರ್ಣ ಯೋಜನೆ ರೂಪಿಸಿದ್ದು ಅವನೇ. ರಾಂಡ್ಲ್ ಮತ್ತು ಪೊಟ್ಟಲ್ ಜೈಲಿನಿಂದ ಬಿಡುಗಡೆಯಾದಮೇಲೂ ನಮ್ಮಿಬ್ಬರ ಸಂಪರ್ಕದಲ್ಲಿದ್ದರು. ಬೌರ್ಕೆಯ ಜೈಲು ಅವಧಿ ಆಗಲೇ ಅರ್ಧ ಮುಗಿದಿತ್ತು. ಜೈಲಿನಿಂದ ಹೊರಹೋಗುವ ಸಿದ್ಧತೆಯಲ್ಲಿರುವಾಗಲೇ ಆತನು ರಾಂಡ್ಲ್ ಮತ್ತು ಪೊಟ್ಟಲ್ ಅವರನ್ನು ಸಂಪರ್ಕಿಸಿದ. ನನ್ನ ಬದುಕಿನ ಉಳಿದ ಅವಧಿಯನ್ನು ಜೈಲಿನಲ್ಲೇ ಕಳೆಯುವ ಬದಲು ಪರಾರಿಯಾಗಲು ನನಗೆ ನೆರವಾಗಬೇಕು ಎಂಬ ಸಂದೇಶವನ್ನು ನನ್ನ ಪರವಾಗಿ ಬೌರ್ಕೆ ಅವರಿಬ್ಬರಿಗೆ ತಲುಪಿಸುತ್ತಾನೆ. ಪರಾರಿಯಾಗುವ ಆಲೋಚನೆಗೆ ಸಹಮತ ದೊರೆತ ಬಳಿಕ ನಾನು ಅವರಿಗೆ ರಶಿಯಾದ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದೆ. ರಾಂಡ್ಲ್ ಮತ್ತು ಪೊಟ್ಟಲ್ ದೃಷ್ಟಿಯಲ್ಲಿ ಸೋವಿಯತ್‌ ಒಕ್ಕೂಟವೆಂದರೆ ಕಟುಕ ಎಂಬ ಭಾವನೆ ಮೂಡಿತ್ತು. ಹೀಗಾಗಿ ಇದಕ್ಕೆ ಅವರು ಒಪ್ಪಲಿಲ್ಲ. ಬೇರೆ ಯಾರ ನೆರವಿಲ್ಲದೆ ನಾವಾಗಿಯೇ ಮಾಡಿಕೊಳ್ಳಬೇಕಾದ ಕೆಲಸ ಇದು ಎಂದು ಮೈಕೆಲ್ ರಾಂಡ್ಲ್ ಸ್ಪಷ್ಟಪಡಿಸಿದ. ನಾನು ಮತ್ತು ಬೌರ್ಕೆ ಸೇರಿಕೊಂಡು ಯೋಜನೆ ರೂಪಿಸಿದೆವು. ಅವನೊಂದು ವಿಭಾಗದಲ್ಲಿ, ನಾನೊಂದೆಡೆ ಇದ್ದೆವು. ಇಬ್ಬರೂ ಜೈಲಿನ ಕೆಲಸದಲ್ಲಿದ್ದ ಒಬ್ಬನ ಮೂಲಕ ಟಿಪ್ಪಣಿಗಳನ್ನು ವಿನಿಮಯ ಮಾಡಿಕೊಂಡೆವು. ಜೈಲಿಗೆ ವಸ್ತುಗಳನ್ನು ಕಳ್ಳಸಾಗಣೆ ಮಾಡುವವರ ಒಂದು ಜಾಲವನ್ನು ಬೌರ್ಕೆ ಸಿದ್ಧಪಡಿಸಿದ. ಅವರ ಮೂಲಕ ಒಂದು ವಾಕಿ-ಟಾಕಿ ತರಿಸಿ ನನಗೆ ನೀಡಿದ. ಆತ ಜೈಲಿನಿಂದ ಹೊರಗೆ ಹೋದಮೇಲೆ ನನ್ನನ್ನು ಸಂಪರ್ಕಿಸುವುದಕ್ಕೆ ಆತ ಮಾಡಿದ ಯೋಜನೆ ಇದು. ಪೊಲೀಸರ ರೇಡಿಯೋ ಈ ವಾಕಿ-ಟಾಕಿಯ ಸಂದೇಶವನ್ನು ಹಿಡಿಯುವುದಕ್ಕೆ ಸಾಧ್ಯವಿರಲಿಲ್ಲ. ಅಂಥ ಮಾದರಿಯದಾಗಿತ್ತು ಅದು.
ಬಿಡುಗಡೆಯ ಬಳಿಕ ಬೌರ್ಕೆ ವಾಕಿ-ಟಾಕಿಯ ಮೂಲಕ ನನಗೆ ಸಂದೇಶ ಕಳುಹಿಸುತ್ತಿದ್ದ. ನನ್ನ ಪರಾರಿಯ ದಿನ ಶನಿವಾರ ಎಂದು ನಿರ್ಧಾರವಾಗಿತ್ತು. ಆ ದಿನ ವಾರದ ಸಿನಿಮಾ ಪ್ರದರ್ಶನ ಇರುತ್ತಿತ್ತು. ಎಲ್ಲ ಕೈದಿಗಳು ಮತ್ತು ಜೈಲಿನ ಸಿಬ್ಬಂದಿ ಅದನ್ನು ನೋಡುವುದರಲ್ಲಿ ತಲ್ಲೀನರಾಗಿರುತ್ತಿದ್ದರು. ಹೀಗಾಗಿ ಯಾರ ಕಣ್ಣಿಗೂ ಬೀಳದೆ ನಾನು ಪಾರಾಗುವುದು ಸಾಧ್ಯವಿತ್ತು.
ಜೈಲಿನ ಆವರಣ ಗೋಡೆಯ ಇನ್ನೊಂದು ಬದಿಯಲ್ಲಿ ಬೌರ್ಕೆ ತನ್ನ ಕಾರಿನೊಂದಿಗೆ ನಿಂತಿರುವುದು, ಆ ಕಡೆಯಿಂದ ನೂಲಿನ ಏಣಿಯನ್ನು ಎಸೆಯುವುದು ಎಂದೆಲ್ಲ ನಿರ್ಧಾರವಾಯಿತು. ಈ ಏಣಿಗೆ 13 ನೂಲಿನ ಮೆಟ್ಟಿಲಿದ್ದವು. ಪಲಾಯನದ ಹಿಂದಿನ ದಿನ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿದರು. ಬಳಿಕ ನಕ್ಷೆ ಸಹಿತ ಎಲ್ಲ ದಾಖಲೆ ಸುಟ್ಟುಹಾಕಿದರು. ಅವರು ಎಷ್ಟೊಂದು ಎಚ್ಚರಿಕೆ ವಹಿಸಿದ್ದರೆಂದರೆ ತಾವು ಟಿಪ್ಪಣಿ ಮಾಡಿಕೊಂಡಿದ್ದ ಹಾಳೆಗಳ ಕೆಳಗಿನ ಹಾಳೆಗಳ ಮೇಲೆ ಅಚ್ಚೊತ್ತಿರುತ್ತವಲ್ಲ, ಅದರಿಂದ ಪತ್ತೆ ಮಾಡಬಹುದೆಂದು ಅವನ್ನೂ ಸುಟ್ಟುಹಾಕಿದ್ದರು.
ಪಲಾಯನ ಯೋಜನೆಯಂತೆಯೇ ನಡೆಯಿತು. ಗೋಡೆಯ ಆಚೆ ಇಳಿಯುವಾಗ ನಾನು ಇಪ್ಪತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದುಬಿಟ್ಟೆ. ಮಣಿಕಟ್ಟಿನಲ್ಲಿ ಬಿರುಕು ಮೂಡಿತು. ಇದೊಂದೇ ಆಗಿದ್ದ ಎಡವಟ್ಟು. ಪತ್ರಿಕೆಗಳಂತೂ ನಾನು ಈ ದೇಶದಲ್ಲಿ ಇಲ್ಲವೇ ಇಲ್ಲ, ಆಗಲೇ ಗಡಿ ದಾಟಿ ಪೂರ್ವ ಯುರೋಪಿಗೆ ಹೋಗಿ ತಲುಪಿರುವುದಾಗಿಯೂ, ವಿಮಾನ ನಿಲ್ದಾಣದಲ್ಲಿ ನನ್ನನ್ನು ಕೆಲವರು ಗುರುತಿಸಿದ್ದಾರೆಂದೂ ಬರೆದವು. ಸಿಡ್ನಿಯ ವಿಮಾನ ನಿಲ್ದಾಣದಲ್ಲಿ ಕಂಡುದಾಗಿ ಕೆಲವು ಬರೆದವು.
ನಮ್ಮ ಮೂಲ ಯೋಜನೆಯ ಪ್ರಕಾರ ನನ್ನನ್ನು ಒಬ್ಬ ಕರಿಯನನ್ನಾಗಿ ಪರಿವರ್ತಿಸಿ ದೇಶದಿಂದ ಹೊರಗೆ ಕಳುಹಿಸುವುದು ಎಂದಾಗಿತ್ತು. ಕೆಲವು ಸುರಕ್ಷಿತ ನೆಲೆಗಳಲ್ಲಿ ಅಡಗಿಕೊಂಡಿದ್ದಾಗ ಮೆಲಾಡಿನಿನ್ ಎಂಬ ಔಷಧವನ್ನು ಸೇವಿಸುವಂತೆ ನನಗೆ ಸೂಚಿಸಲಾಯಿತು. ಚರ್ಮದ ಮೇಲೆ ಬಿಳಿಯ ಮಚ್ಚೆಗಳು ಉಂಟಾದರೆ ಅದನ್ನು ವಾಸಿ ಮಾಡುವುದಕ್ಕೆ ಇದನ್ನು ಬಳಸುತ್ತಾರೆ. ಇದನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಮತ್ತು ಸೂರ್ಯನ ಬೆಳಕಿನಲ್ಲಿ ನಿಲ್ಲುವುದರಿಂದ ನನ್ನ ಬಣ್ಣ ಬದಲಾಗುತ್ತದೆ. ಜೈಲಿನಲ್ಲಿ ನಾನು ಅರೇಬಿಕ್ ಭಾಷೆ ಕಲಿತಿದ್ದೆ. ಒಬ್ಬ ಅರಬ್ಬಿಯಂತೆ ವೇಷ ಬದಲಿಸಿಕೊಂಡು ಹೋಗುವುದು ಯೋಜನೆ.
ಮೆಲಾಡಿನಿನ್ ಸೇವನೆಗೆ ವೈದ್ಯರು ಸಲಹೆ ಮಾಡಿದ ಪತ್ರವನ್ನು ರಾಂಡ್ಲ್ ಮತ್ತು ಪೊಟ್ಟಲ್ ನಕಲು ಮಾಡಿದರು. ಬಳಿಕ ನಕಲು ಮಾಡಲು ಬಳಸಿದ ಸಲಕರಣೆಗಳನ್ನು ಸುಟ್ಟುಹಾಕಿದರು. ಈ ಔಷಧ ಖರೀದಿಸಲು ಅವರು ವೇಷ ಬದಲಾಯಿಸಿಕೊಂಡು ಹೋಗುತ್ತಿದ್ದರು. ನಿಜ ಹೇಳಬೇಕೆಂದರೆ ನಾನು ಈ ಮೆಲಾಡಿನಿನ್ ಔಷಧವನ್ನು ಸೇವಿಸಲೇ ಇಲ್ಲ. ಇದರ ಅತಿಯಾದ ಸೇವನೆಯಿಂದ ನನ್ನ ಯಕೃತ್ತು ಅಪಾಯಕ್ಕೊಳಗಾಗುವ ಭಯ ನನ್ನನ್ನು ಕಾಡುತ್ತಿತ್ತು.
ಸೀಯಾನ್ ಬೌರ್ಕೆ ಭಯಂಕರ ಸಾಹಸ ಪ್ರವೃತ್ತಿಯವನಾಗಿದ್ದ. ತನ್ನ ಭೂಗತ ಜಗತ್ತಿನ ಸಂಪರ್ಕದಿಂದ ನಕಲಿ ಪಾಸ್‌ಪೋರ್ಟ್ ಪಡೆಯುವ ಯೋಜನೆ ಮುಂದಿಟ್ಟ. ಆದರೆ ಅದನ್ನು ಸಾಧಿಸುವುದು ಹೇಗೆಂಬುದು ಆತನಿಗೆ ಗೊತ್ತಿಲ್ಲದ ಕಾರಣ ಅದನ್ನು ಕೈಬಿಡಲಾಯಿತು. ಇವೆರಡೂ ಕಾರ್ಯಸಾಧುವಲ್ಲ ಎಂಬುದು ಅರಿವಿಗೆ ಬಂದ ಬಳಿಕ ನನ್ನನ್ನು ಕಳ್ಳಸಾಗಣೆ ಮಾಡುವುದೆಂದು ನಿರ್ಧರಿಸಿದರು.
ಯುರೋಪಿನಲ್ಲಿ ಕುಟುಂಬ ಸಹಿತ ಕ್ಯಾಂಪರ್ ವ್ಯಾನಿನಲ್ಲಿ ಪ್ರವಾಸ ಹೋಗುವುದು ಇದೆ. ನನ್ನನ್ನು ಅಂಥ ಒಂದು ವಾಹನದಲ್ಲಿ ಸಾಗಿಸಲು ಅಂತಿಮವಾಗಿ ನಿರ್ಧರಿಸಲಾಯಿತು. ರಾಂಡ್ಲ್ ಮತ್ತು ಪೊಟ್ಟಲ್ ಕಟ್ಟಿಗೆ ಕೆಲಸದಲ್ಲಿ ಪರಿಣತಿ ಹೊಂದಿದ್ದ ಒಬ್ಬ ಸ್ನೇಹಿತನನ್ನು ಕರೆದುಕೊಂಡು ಬಂದರು. ಆತ ಈ ಕ್ಯಾಂಪರ್ ವಾಹನದಲ್ಲಿ ನಾನು ಅಡಗಿರಬಹುದಾದ ಒಂದು ರಹಸ್ಯ ವಿಭಾಗವನ್ನು ಮಾಡಿದನು. ಮೈಕೆಲ್ ರಾಂಡ್ಲ್ ಪೂರ್ವಜರ್ಮನಿಗೆ ತನ್ನ ಸಂಸಾರದೊಂದಿಗೆ ಈ ಕ್ಯಾಂಪರ್ ವ್ಯಾನಿನಲ್ಲಿ ಪ್ರವಾಸ ಹೊರಟ. ರಹಸ್ಯ ಕೋಣೆಯಲ್ಲಿ ನಾನು ಅಡಗಿದ್ದೆ. ಇದು ರಾಂಡ್ಲ್‌ನ ಹೆಂಡತಿ ಮಕ್ಕಳಿಗೂ ಗೊತ್ತಿರಲಿಲ್ಲ. ಆ ಮಕ್ಕಳು ಕೆಳಗೆ ಅಡಗಿದ್ದ ನನ್ನೆದೆಯ ಮೇಲೆಯೇ ಕುಣಿಯುತ್ತಿದ್ದರು. ಇಂಗ್ಲಂಡಿನಲ್ಲಿ ಅದರ ಬೇಹುಗಾರಿಕೆಯ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದಾದ ಮಾನವ ಬೇಟೆಯನ್ನು ನನಗಾಗಿ ನಡೆಸಿದ್ದರು. ಆದರೆ ರಾಂಡ್ಲ್ ಕೆಲವು ಪೊಲೀಸರು ಮತ್ತು ಕಸ್ಟಮ್ಸ್ ಸಿಬ್ಬಂದಿಯನ್ನು ಮೂರ್ಖರನ್ನಾಗಿಸಿ ನನ್ನನ್ನು ಪೂರ್ವ ಜರ್ಮನಿಗೆ ತಲುಪಿಸಿದ. ಅದು 1966ರ ಡಿಸೆಂಬರ್ ತಿಂಗಳು. ಇದರೊಂದಿಗೆ ಹೊಸ ಚರಿತ್ರೆಯೊಂದು ನಿರ್ಮಾಣವಾಯಿತು.
ಆತ ಪುಣ್ಯಾತ್ಮ, ನಾನು ಪಾಪಿ-
ಗಿಲ್ಲಿಯನ್ ಪ್ರತಿ ಬಾರಿ ಭೇಟಿ ನೀಡಿದಾಗಲೂ ಅವಳ ಸಂತೋಷದ ಬದುಕನ್ನು ನಾಶಮಾಡಿಬಿಟ್ಟೆನಲ್ಲ ಎಂಬ ಅಪರಾಧಿ ಪ್ರಜ್ಞೆ ನನ್ನನ್ನು ಕಾಡುತ್ತಿತ್ತು ಎಂದು ಆಗಲೇ ಹೇಳಿದೆನಲ್ಲ. ಮೈಕೆಲ್ ಬಟ್ಲರನನ್ನು ಭೇಟಿಯಾಗಿದ್ದು ಮತ್ತು ಆತನೊಂದಿಗೆ ಹೊಸ ಸಂಸಾರ ಹೂಡುವ ಬಯಕೆಯನ್ನು 1966ರಲ್ಲಿ ಗಿಲ್ಲಿಯನ್ ಹೇಳಿದ್ದಳು. ಬಟ್ಲರ್ ಕೃಷಿ ಅರ್ಥಶಾಸ್ತ್ರಜ್ಞ, ಅವಳಿಗಿಂತ ಒಂದು ವರ್ಷ ಕಿರಿಯನಾಗಿದ್ದ. ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಮೊದಲೇ ನಾನು ಜೈಲಿನಿಂದ ತಪ್ಪಿಸಿಕೊಂಡಿದ್ದೆ. ಗಿಲ್ಲಿಯನ್ ಮತ್ತೆ ಬಂದು ನನ್ನನ್ನು ಕೂಡಬಹುದು ಎಂಬ ಪುಟ್ಟ ಆಸೆ ಮನಸ್ಸಿನಲ್ಲಿತ್ತು. ಆದರೆ ಕೋರ್ಟಿನಲ್ಲಿ ಅವಳಿಗೆ ಡೈವೋರ್ಸ್ ಸಿಕ್ಕಿತ್ತು. ಹೊಸ ಸಂಸಾರದಲ್ಲಿ ಅವಳಿಗೆ ಟಿಮ್ ಎಂಬ ಮಗ ಹುಟ್ಟಿದ. ನನ್ನ ಕುಖ್ಯಾತಿಯ ಕಾರಣದಿಂದ ಮೈಕೆಲ್ ನನ್ನ ಮಕ್ಕಳ ಅಡ್ಡ ಹೆಸರನ್ನು ಬಟ್ಲರ್ ಎಂದು ಬದಲಿಸಿದನು. ಇದಕ್ಕಾಗಿ ನಾನು ಅವನಿಗೆ ಕೃತಜ್ಞನಾಗಿರಬೇಕು. ಮೈಕೆಲ್ 1990ರಲ್ಲಿ ಸಾವಿಗೀಡಾದ. ನನ್ನ ಮಕ್ಕಳಿಗೆ ಆತ ಯಾವುದೇ ಕೊರತೆ ಮಾಡಲಿಲ್ಲ. ಅವರಿಗೆ ಆತ ನಿಜವಾದ ತಂದೆಯೇ ಆಗಿದ್ದ. ನನ್ನ ತಾಯಿ ಕ್ಯಾಥರಿನ್ ಮೂಲಕ ಅವರ ವಿಷಯ ನನಗೆ ನಿಯಮಿತವಾಗಿ ತಿಳಿಯುತ್ತಿತ್ತು. ನನ್ನ ಮಕ್ಕಳ ಫೋಟೋಗಳನ್ನೂ ಅವಳು ಕಳುಹಿಸಿದ್ದಳು. ಗಿಲ್ಲಿಯನ್ ಹಾಗೆಯೇ ನನ್ನ ಮೂವರು ಮಕ್ಕಳೂ ನನ್ನನ್ನು ಕ್ಷಮಿಸಿದ್ದಾರೆ. ನನಗೆ ದೇಶದ್ರೋಹಿ ಎಂಬ ಪದ ಬಳಸುವುದಕ್ಕೆ ಅವರ ವಿರೋಧವಿದೆ. ನನ್ನ ಕೃತ್ಯಕ್ಕೆ ನನಗೆಂದೂ ವಿಷಾದವಾಗಿಲ್ಲ. ಆದರೆ ನನ್ನ ಕುಟುಂಬಕ್ಕೆ ಆದ ನೋವಿಗಾಗಿ ವಿಷಾದವಿದೆ. ನಾನು ಬಟ್ಲರ್ ಬಗ್ಗೆ ಕೃತಜ್ಞನಾಗಿರಬೇಕು. ಆತ ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡ. ಅವರು ಆತನ ಬಗ್ಗೆ ಅತ್ಯಂತ ಪ್ರೀತಿಯಿಂದ ಹೇಳುತ್ತಾರೆ. ದುರ್ದೈವ, ಸಣ್ಣ ವಯಸ್ಸಿನಲ್ಲೇ ಆತ ತೀರಿಹೋದ. ಪಾಪಿ ನಾನು ಇನ್ನೂ ಬದುಕಿದ್ದೇನೆ.
ಮಾಸ್ಕೋದಲ್ಲಿ ನಾನು ನನ್ನ ರಶಿಯನ್ ಪತ್ನಿ ಇದಾ ಮತ್ತು ಅವಳಲ್ಲಿ ಹುಟ್ಟಿದ ಮಗನೊಂದಿಗೆ ಸುಖವಾಗಿದ್ದೇನೆ. ನನ್ನ 90ನೆ ಹುಟ್ಟುಹಬ್ಬಕ್ಕೆ ನನ್ನ ಮೂವರು ಮಕ್ಕಳು ಒಂಬತ್ತು ಮೊಮ್ಮಕ್ಕಳು ಲಂಡನ್ನಿನಿಂದ ಬಂದಿದ್ದರು. ಗಿಲ್ಲಿಯನ್ ಬರಬಹುದು ಅಂದುಕೊಂಡಿದ್ದೆ. ಆದರೆ ಅವಳು ಬರಲೇ ಇಲ್ಲ. ಅದೇ ನನಗೆ ನಿರಾಶೆಯ ಸಂಗತಿ.