ಶ್ರೀಯುತ ಎಲ್‌.ಎಸ್‌.ಶಾಸ್ತ್ರಿಯವರು ಅವಿಶ್ರಾಂತ ಬರೆಹಗಾರರು. ಅವರ ಬರೆವಣಿಗೆಯನ್ನು ನಾನು ಮೂರು ದಶಕಗಳಿಗೂ ಅಧಿಕ ಕಾಲದಿಂದ ಓದುತ್ತ ಬಂದವನು. ನಾನು ಬೆಳಗಾವಿಯಲ್ಲಿ ನಾಡೋಜ ಪತ್ರಿಕೆಯಲ್ಲಿ ನನ್ನ ಪತ್ರಿಕೋದ್ಯೋಗವನ್ನು ಆರಂಭಿಸಿದಾಗ ನನ್ನ ಮತ್ತು ಅವರ ಮೊದಲ ಭೇಟಿ. ಅವರ ತಾಲೂಕಿನವನೇ ನಾನು ಆಗಿದ್ದರಿಂದ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನಾಡೋಜದ ಸಾಪ್ತಾಹಿಕ ಪುರವಣಿಯನ್ನು ಅವರೇ ಆಗ ನೋಡಿಕೊಳ್ಳುತ್ತಿದ್ದರು.

ಶಾಸ್ತ್ರಿಯವರು ಹಲವು ಪ್ರಕಾರದ ಬರೆವಣಿಗೆಯನ್ನು ಮಾಡಿದ್ದರೂ ಕಾದಂಬರಿಯೊಂದನ್ನು ಬರೆದಿರುವುದು ಇದೇ ಮೊದಲು. ಅವರಿಗೆ ಈಗ ಹತ್ತಿರ ಹತ್ತಿರ 80 ವರ್ಷ. ಕನ್ನಡದ ನವೋದಯ ಮತ್ತು ಪ್ರಗತಿಶೀಲ ಸಾಹಿತಿಗಳ ಸಮೀಪ ಸಂಪರ್ಕದಲ್ಲಿದ್ದು, ಅವರ ಕಾದಂಬರಿ ರಚನೆಯನ್ನು ನಿಕಟವಾಗಿ ನೋಡಿದವರು ಶಾಸ್ತ್ರಿಯವರು. ಹೀಗಿದ್ದೂ ಅವರು ಇದುವರೆಗೆ ಕಾದಂಬರಿಯನ್ನು ರಚಿಸದೇ ಇದ್ದುದು ಸೋಜಿಗ. ಅವರ ಈ ಮೊಟ್ಟಮೊದಲ ಕಾದಂಬರಿ `ಲಯ'ವನ್ನು ಓದಿದಾಗ ಶಾಸ್ತ್ರಿಯವರು ಆ ಕಾಲದಲ್ಲಿ ಉಸಿರಾಡಿ ಈ ಕಾಲದಲ್ಲಿ ಈ ಕಾದಂಬರಿ ಬರೆದಿದ್ದಾರೆ ಎಂದು ಅನ್ನಿಸದೆ ಇರದು. ಜೀವನದ ಮೌಲ್ಯಗಳು ಏನು ಎಂಬುದನ್ನು ಅವರು ಇಲ್ಲಿ ಕೆಲವರ ಜೀವನ ಧಾರೆಗಳ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಪತ್ರಕರ್ತ ನಾರಾಯಣರಾಯರು, ಯಕ್ಷಗಾನದ ಚಂದ್ರು, ಸಂಗೀತದ ಕೃಷ್ಣ, ಪಂ.ದೇವದತ್ತ ಶರ್ಮಾ, ಕೃಷಿಕ ಗೋಪಾಲ, ಅರ್ಚಕರೂ, ಶಾಸ್ತ್ರ ಪಾರಂಗತರೂ ಆದ ಶಂಕರ ಅವಧಾನಿಯವರು ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಜೀವನವನ್ನು ಅರ್ಥೈಸಿಕೊಂಡವರು ಮತ್ತು ಅದರಂತೆ ಬದುಕಿದವರು. ಜೀವನ ಸಂಘರ್ಷದಲ್ಲಿ ಮೌಲ್ಯಗಳೊಂದಿಗೆ ಇವರೆಲ್ಲ ಹೇಗೆ ಬದುಕಿದರು ಎಂಬುದರ ಕತೆಯೇಲಯ’. ಬದುಕಿನ ಲಯ ತಪ್ಪಿದ ಕೆಸರಗದ್ದೆಯ ಸುಬ್ರಾಯ ಹೇಗೆ ಅವನತಿ ಹೊಂದಿದ ಎಂಬುದನ್ನೂ ಕೃತಿ ವಿವರಿಸುತ್ತದೆ.

`ಲಯ’ವನ್ನು ಶಾಸ್ತ್ರಿಯವರು ಐವತ್ತು ವರ್ಷಗಳ ಮೊದಲೇ ಬರೆದಿದ್ದರೂ ಇದರಲ್ಲಿ ಹೆಚ್ಚಿಗೆ ಏನೂ ಬದಲಾವಣೆ ಇರುತ್ತಿರಲಿಲ್ಲ ಎಂದು ಹೇಳಬಹುದಾಗಿದೆ. ಕಾರಣ ಇಷ್ಟೇ, ಜೀವನ ಮೌಲ್ಯಗಳು ಕಾಲಾತೀತವಾದವುಗಳು. ಬದುಕಿನ ಮೌಲ್ಯಗಳು ನಿಂತಿರುವುದೇ ಲಯ ತಪ್ಪದಂತೆ ಜೀವಿಸುವುದರಲ್ಲಿ. ಈ ಲಯ ಸಾಧಿಸಬೇಕಾಗಿರುವುದು ಕುಟುಂಬದಲ್ಲಿ, ಸ್ನೇಹಿತರಲ್ಲಿ, ಸಮಾಜದಲ್ಲಿ, ಪ್ರಕೃತಿಯಲ್ಲಿ, ನಾವು ಮಾಡುವ ಉದ್ಯೋಗದಲ್ಲಿ. ಆ ಲಯವನ್ನು ಸಾಧಿಸಿದ ಅಂಥ ಕೆಲವು ಉದಾತ್ತ ಜೀವಗಳು ಇಲ್ಲಿ ಉದಾಹರಣೆ ರೂಪದಲ್ಲಿ ಇವೆ.

ಗೇರುಸೊಪ್ಪೆಯ ಶರಾವತಿ ಹೊಳೆಸಾಲಿನಲ್ಲಿ ಆರಂಭವಾಗುವ ಕಾದಂಬರಿಯ ಪಾತ್ರಗಳು ಮುಂಬಯಿ, ಕಾಶಿ, ಹಂಪಿ ಕೊನೆಗೆ ಲಂಡನ್ನಿನ ವರೆಗೂ ಸಂಚರಿಸುತ್ತವೆ. ಸ್ವಾತಂತ್ರ್ಯ ದೊರೆತ ಆಜುಬಾಜಿನ ವರ್ಷಗಳಲ್ಲಿ ಆರಂಭವಾಗುವ ಕಥಾನಕವು ಸ್ವಾತಂತ್ರ್ಯ ದೊರೆತ ಐವತ್ತು ವರ್ಷಗಳ ನಂತರದಲ್ಲಿ ಏನೇನು ದುರವಸ್ಥೆಗಳು ಆಗಿವೆ ಎಂಬುದನ್ನು ಹಲವು ಸಂದರ್ಭಗಳಲ್ಲಿ ಕಾದಂಬರಿಕಾರರು ವಿವರಿಸುತ್ತಾರೆ. ಈ ಅವಸ್ಥಾಂತರಗಳ ನಡುವೆ ಬದುಕಿನ ನಿಜವಾದ ಲಯ ಯಾವುದಿದ್ದರೆ ಸರಿ ಎಂಬುದನ್ನು ಪಾತ್ರಗಳ ಮೂಲಕ ತೋರಿಸಲು ಯತ್ನಿಸುತ್ತಾರೆ.

ಶಾಸ್ತ್ರಿಯವರಿಗೆ ಇರುವ ವಿಸ್ತಾರವಾದ ಜೀವನಾನುಭವವನ್ನು ಗಣನೆಗೆ ತೆಗೆದುಕೊಂಡಾಗ ಈ ಒಂದು ಕಾದಂಬರಿಯಲ್ಲಿ ಅವರು ಅಡಕಗೊಳಿಸಿರುವ ವಿಷಯಗಳನ್ನು ಕನಿಷ್ಠ ನಾಲ್ಕು ಕಾದಂಬರಿಯನ್ನಾಗಿ ರಚಿಸಬಹುದಿತ್ತು ಎಂದು ಅನ್ನಿಸದೆ ಇರದು. ಸಂಗೀತದ ಕುರಿತು ಅವರಿಗಿರುವ ಜ್ಞಾನವನ್ನು ನೋಡಿದಾಗ, ಪತ್ರಿಕೋದ್ಯಮದ ಏರಿಳಿತಗಳಲ್ಲಿ ಅವರು ಮಿಂದೆದ್ದು ಬಂದುದನ್ನು ಗಮನಿಸಿದಾಗ, ಯಕ್ಷಗಾನದ ವಿಷಯದಲ್ಲಿ ಅವರಿಗಿರುವ ಪಾರಮ್ಯವನ್ನು ಅನುಭವಕ್ಕೆ ತಂದುಕೊಂಡಾಗ, ಕೃಷಿಯ ಮೇಲಿನ ಅವರ ಪ್ರೀತಿಯನ್ನು ಗುರುತಿಸಿದಾಗ ಈ ಮೇಲಿನ ಮಾತು ಉತ್ಪ್ರೇಕ್ಷೆ ಅನ್ನಿಸುವುದಿಲ್ಲ. ಇಂಥ ವಿಷಯಗಳನ್ನು ಒಂದೇ ಕೃತಿಯಲ್ಲಿ ಅಡಕಗೊಳಿಸುವುದು ಸುಲಭದ ಮಾತೇನಲ್ಲ. ಯಾವುದೋ ಒಂದಕ್ಕೆ ಹೆಚ್ಚು, ಇನ್ನೊಂದಕ್ಕೆ ಕಡಿಮೆ ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂದು ಅನ್ನಿಸದ ಹಾಗೆ ಕೃತಿ ಶಿಲ್ಪ ರೂಪುಗೊಂಡಿದೆ.

ಹೈಗರಹಳ್ಳಿ, ಮಜ್ಗೆಮನೆ, ಜೋಡಕೆರೆ, ಹೊನ್ನಾವರ, ಗುಂಡಬಾಳ, ಕೆಸರಗದ್ದೆ, ಬಾಳೇಗದ್ದೆ ಹೀಗೆ ಶರಾವತಿ ಹೊಳೆಸಾಲಿನಲ್ಲಿ ಬದುಕುವ ಪಾತ್ರಗಳು ಸಹ್ಯಾದ್ರಿಯ ದಟ್ಟ ಹಸಿರು ಮತ್ತು ಜೀವದಾಯಿನಿ ಶರಾವತಿಯ ತಣ್ಣಗಿನ ಪರಿಸರದಲ್ಲಿ ಉಸಿರಾಡುತ್ತವೆ. ಆರಕ್ಕೆ ಏರದ ಮೂರಕ್ಕೆ ಇಳಿಯದ ಈ ಪರಿಸರದಿಂದ ದೂರವಾಗಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಪರವೂರಿಗೆ ಅಲ್ಲಿಯವರು ಹೋಗುವುದು ಸಾಮಾನ್ಯ. ಹಾಗೆ ಹೋದವರಲ್ಲಿ ಸಂಗೀತದ ವ್ಯಾಮೋಹಿ ಕೃಷ್ಣ ಕೂಡ ಒಬ್ಬ. ಹಾಗೆ ಹೋಗುವಾಗ ಸ್ವಂತ ಅಣ್ಣ ಸುಬ್ರಾಯ ನೆರವು ನೀಡದೆ ಇದ್ದರೂ ಬಂಧುವಲ್ಲದ ಗೋಪಾಲ ನೆರವಾಗುತ್ತಾನೆ. ಹಾಗೆ ಮುಂಬಯಿಗೆ ಹೋದಾಗ ಅಲ್ಲಿ ಆತ ಶಾರದಾ ಸಂಗೀತ ವಿದ್ಯಾಲಯವನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ಅವನಿಗೆ ಪಂ.ದೇವದತ್ತ ಶರ್ಮಾ ಮತ್ತು ಶಿರಾಲಿಕರ ಬುವಾ ಅವರ ಸಾನ್ನಿಧ್ಯ ದೊರೆಯುತ್ತದೆ. ಸಂಗೀತದಲ್ಲಿ ಸಾಧನೆ ಮಾಡುತ್ತ ಕೊನೆಯಲ್ಲಿ ಅದರ ಮುಖ್ಯಸ್ಥನಾಗುತ್ತಾನೆ. ಗೋಪಾಲನ (ಸಾಕು)ಮಗಳು ವಾಣಿಯನ್ನು ಅವನು ಮದುವೆಯಾಗುತ್ತಾನೆ.

ಪಂ.ದೇವದತ್ತ ಶರ್ಮಾ ಅವರು ಅಲಹಾಬಾದದವರಾದರೂ ಸಂಗೀತ ಪ್ರೀತಿ ಅವರನ್ನು ಕಾಶಿಗೆ ಕರೆದೊಯ್ದಿತ್ತು. ಒಂದು ಹಂತದಲ್ಲಿ ಅವರು ತಮ್ಮೆಲ್ಲ ಆಸ್ತಿಯನ್ನು ತಮ್ಮ ಸಹೋದರ ಸಂಬಂಧಿಗೆ ಬಿಟ್ಟುಕೊಟ್ಟು ಹಂಪಿಗೆ ಬರುತ್ತಾರೆ. ಅಲ್ಲಿ ಅವರಿಗೆ ಲಂಡನ್ನಿನಿಂದ ಭಾರತಕ್ಕೆ ಸಂಶೋಧನೆಗೆಂದು ಬಂದಿದ್ದ ಸೋಫಿಯಾಳ ಪರಿಚಯವಾಗುತ್ತದೆ. ಪತಿಯಿಂದ ಪರಿತ್ಯಕ್ತಳಾದ ಅವಳಿಗೆ ಶರ್ಮಾರಿಂದ ಮಗುವನ್ನು ಪಡೆಯಬೇಕೆಂಬ ಇಚ್ಛೆಯಾಗುತ್ತದೆ. ಅದನ್ನು ಅವಳು ಅವರಿಗೆ ಹೇಳಿದಾಗ ಶರ್ಮಾರು ಒಪ್ಪಿಕೊಳ್ಳುತ್ತಾರೆ. ಗರ್ಭನಿಂತ ಬಳಿಕ ಅವಳು ಮರಳಿ ಲಂಡನ್ನಿಗೆ ಹೋಗುತ್ತಾಳೆ. ನಂತರ ಅವಳು ಶರ್ಮಾರ ಸಂಪರ್ಕಕ್ಕೆ ಬರುವುದು ಅವರು ಮುಂಬಯಿಯಲ್ಲಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ಅದರ ಚಿನ್ನದ ಹಬ್ಬವನ್ನು ಮಾಡುವ ಸಮಯದಲ್ಲಿ. ಅದೂ ಮದುವೆ ಪ್ರಾಯ ಮೀರಿದ ಮಗನೊಂದಿಗೆ.

ನಾರಾಯಣರಾಯರು ಕೆಸರಗದ್ದೆ ಸುಬ್ರಾಯನ ಮನೆಯ ಪಕ್ಕದವರು. ಅವನು ಚಿಕ್ಕವನಿದ್ದಾಗಲೇ ತಂದು ಸತ್ತುಹೋಗುತ್ತಾನೆ. ಅವರ ಒಂದೆರಡು ಎಕರೆ ಜಮೀನನ್ನು ನುಂಗುವ ಉದ್ದೇಶದಿಂದ ಸುಬ್ರಾಯ ಆತನ ತಾಯಿಗೆ ಆಶ್ರಯ ನೀಡುತ್ತಾನೆ. ನಾರಾಯಣರಾಯರನ್ನು ಹೊನ್ನಾವರಕ್ಕೆ ತಂದು ಸುಬ್ಬಜ್ಜನ ಮನೆಯಲ್ಲಿ ಓದುವುದಕ್ಕೆಂದು ಬಿಟ್ಟವನೂ ಅವನೇ. ಮುಂದೆ ಅನಾಮಧೇಯ ಪತ್ರವೊಂದು ನಾರಾಯಣರಾಯರಿಗೆ ತಲುಪಿ ಕೆಸರಗದ್ದೆ ಸುಬ್ರಾಯನೇ ತನ್ನ ತಂದೆ ಎಂಬ ಸಂಗತಿ ತಿಳಿಯುತ್ತದೆ. ತನ್ನ ತಾಯಿಯೊಂದಿಗೆ ಆತ ಅನೈತಿಕ ಸಂಬಂಧ ಹೊಂದಿ ತನ್ನ ಹುಟ್ಟಿಗೆ ಕಾರಣನಾಗಿದ್ದ ಎಂಬ ಸಂಗತಿ ಅವರಿಗೆ ತಳಮಳ ಉಂಟುಮಾಡುತ್ತದೆ. ತಮ್ಮ ಜನ್ಮ ರಹಸ್ಯವನ್ನು ತಿಳಿದುಕೊಳ್ಳುವುದಕ್ಕಾಗಿಯೇ ಅವರು ಹೈಗರಹಳ್ಳಿಗೆ ಬರುತ್ತಾರೆ. ಶಂಕರ ಅವಧಾನಿಯವರೊಂದಿಗೆ ಈ ಸಂಬಂಧ ಮಾತನಾಡುತ್ತಾರೆ. ಆಗ ನಿಯೋಗ ಪದ್ಧತಿಯ ಕುರಿತು ಕಾದಂಬರಿಯಲ್ಲಿ ಸುದೀರ್ಘವಾದ ಚರ್ಚೆ ಬರುತ್ತದೆ. ಸೋಫಿಯಾ ಮತ್ತು ಪಂ.ಶರ್ಮಾ ಅವರ ಸಂಬಂಧವೂ ನಿಯೋಗ ಪದ್ಧತಿಯಂತೇ ಇತ್ತು.

ಮಜ್ಗೆಮನೆ ವೆಂಕಟ್ರಮಣ ಹೆಗ್ಡೆಯವರ ಮೊಮ್ಮಗ ಯಕ್ಷಗಾನ ಕಲಾವಿದ ಚಂದ್ರು. ಇದೇ ವೆಂಕಟ್ರಮಣ ಹೆಗ್ಡೆಯವರ ಎರಡನೆ ಮಗಳು ಗೋಪಾಲನ ತಾಯಿ. ಗೋಪಾಲ ಕೃಷಿಗಾಗಿ ಸರ್ಕಾರಿ ನೌಕರಿಯನ್ನೇ ಬಿಟ್ಟು ಬಂದವನಾಗಿದ್ದರೆ ಚಂದ್ರು ಯಕ್ಷಗಾನ ಜನಪ್ರಿಯತೆಯ ಹಾದಿ ತುಳಿದು ಮೂಲದಿಂದ ದೂರ ಸರಿಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವ ವ್ಯಕ್ತಿ. ಇನ್ನು ಶ್ರೀಧರ, ಕೆಸರಗದ್ದೆ ಸುಬ್ರಾಯನ ತಂಗಿಯ ಗಂಡ. ಪ್ರಾಮಾಣಿಕವಾಗಿ ದುಡಿದು ಬಂದಿದ್ದರಲ್ಲಿ ನೆಮ್ಮದಿಯಿಂದ ಇದ್ದವನು ಅವನು. ಪ್ರಾಮಾಣಿಕ ದುಡಿಮೆಯೇ ಅವನ ಬದುಕಿನ ಲಯ. ನಂತರ ಅವನು ಹೊನ್ನಾವರದಲ್ಲಿ ಹೊಟೇಲು ಮಾಡಿ ಆರ್ಥಿಕವಾಗಿ ಉನ್ನತಿಯನ್ನು ಹೊಂದುತ್ತಾನೆ. ಪ್ರಾಮಾಣಿಕ ಬದುಕೇ ಅವನನ್ನು ಮೇಲೆತ್ತುತ್ತದೆ. ಗೋಪಾಲನ ಹೆಂಡತಿ ಮಾಲತಿ ಶಂಕರ ಅವಧಾನಿಯವರ ಮಗಳು. ಅವಳು ಪದವೀಧರೆಯಾಗಿದ್ದರೂ ಹಳ್ಳಿಯಲ್ಲಿರಲು ಬಯಸಿದ ಗಂಡ ನೌಕರಿ ಬಿಡುವುದಾಗಿ ಹೇಳಿದಾಗ ಪ್ರತಿ ಹೇಳುವುದಿಲ್ಲ. ಎಲ್ಲದಕ್ಕೂ ನಮ್ಮ ಮನಸ್ಥಿತಿ ಮುಖ್ಯ ಹೊರತು ಪರಿಸ್ಥಿತಿ ಅಲ್ಲ ಎಂಬುದು ಆಕೆಯ ನಿಲವು.

ನಾರಾಯಣರಾಯರು ಆದರ್ಶ ಪತ್ರಿಕೋದ್ಯಮದ ಪ್ರತಿಪಾದಕರಾದರೂ ಅವರು ಪರಿಸ್ಥಿತಿಯ ಕೈಗೊಂಬೆಯಾಗುತ್ತಾರೆ. ಪತ್ರಿಕಾರಂಗ ಪತ್ರಿಕೋದ್ಯಮ ಆಗಿರುವುದರಿಂದ ಆಗಿರುವ ಬದಲಾವಣೆಯ ಅರಿವು ಅವರಿಗೆ ಇದೆ. ಪತ್ರಿಕಾಧರ್ಮ ಭಾಷಣಕ್ಕೆ ಬರೆಹಕ್ಕೆ ಚೆಂದ ಎಂಬ ವಸ್ತುಸ್ಥಿತಿಯ ಅರಿವು ಅವರಿಗೆ ಆಗಿದೆ. ಆದರ್ಶದ ಜೊತೆಯಲ್ಲಿ ಪ್ರ್ಯಾಕ್ಟಿಕಲ್‌ ಆಗಿ ಯೋಚಿಸುವುದು ಇಂದಿನ ಅಗತ್ಯ ಎಂಬ ಮನಸ್ಥಿತಿಯನ್ನು ಅವರು ತಲುಪಿದ್ದಾರೆ.

ಇನ್ನು ಸೋಫಿಯಾ ಮತ್ತು ಪಂ.ದೇವದತ್ತ ಶರ್ಮಾ ಅವರ ಸಂತಾನ ವಿರೂಪಾಕ್ಷನಿಗೂ ಗೋಪಾಲನೇ ಒಬ್ಬ ವಿಧವೆಯನ್ನು ಮದುವೆ ಮಾಡಿಸುತ್ತಾನೆ. ಶರ್ಮಾ ಅವರು ತಮ್ಮ ಸಂಗೀತ ವಿದ್ಯಾಲಯದ ಹೊಣೆಯನ್ನು ವಿರೂಪಾಕ್ಷ ಮತ್ತು ಕೃಷ್ಣನಿಗೆ ವಹಿಸಿ ತಾವು ಕಾಶಿಗೆ ತೆರಳುತ್ತಾರೆ. ಮದುವೆಯಾಗದೇ ಇದ್ದರೂ ಅವರನ್ನೇ ತನ್ನ ಪತಿ ಎಂದು ಅಂಗೀಕರಿಸಿದ್ದ ಸೋಫಿಯಾ ವೃದ್ಧಾಪ್ಯದಲ್ಲಿ ಗಂಡ ಹೆಂಡತಿ ಒಂದೇ ಕಡೆ ಇರುವುದು ಒಳ್ಳೆಯದು ಎಂದು ಮಗನಿಗೆ ಹೇಳಿ ತಾನೂ ಕಾಶಿಗೆ ತೆರಳುತ್ತಾಳೆ.

ಶಂಕರ ಅವಧಾನಿಯವರು ನಾರಾಯಣರಾಯರಿಗೆ ಹೇಳಿದಂತೆ ಕಾಲಧರ್ಮ ಎನ್ನುವುದು ದೊಡ್ಡದು. ನಡೆಯುವುದೆಲ್ಲ ನಡೆಯುತ್ತಲೇ ಇರುತ್ತವೆ. ಹಾಗೆ ನಡೆದಂತೆ ಭಾಸವಾಗುವ ಒಂದು ಸುಂದರ ಕಥಾನಕವನ್ನು ಎಲ್‌.ಎಸ್‌.ಶಾಸ್ತ್ರಿಯವರು ನಮಗೆ ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯಲ್ಲಿ ಪ್ರಸ್ತಾಪವಾಗಿರುವ ಹಲವು ವಿಚಾರಗಳು ಎಲ್ಲರಿಗೂ ಮಾನ್ಯವಾಗದೇ ಹೋಗಬಹುದು. ಅಂಥವರು ಹೀಗೂ ಒಂದು ವಿಚಾರದ ಸಾಧ್ಯತೆ ಇದೆ, ಇಂಥ ಬದುಕೂ ಒಂದಿದೆ ಎಂದು ಅರಿತುಕೊಳ್ಳಬಹುದು. ಇದರಲ್ಲಿ ಯಾವುದೇ ಹೀರೋಯಿಸಂ ಇಲ್ಲ. ಪ್ರತಿಕೂಲ ಪರಿಸ್ಥಿತಿಯನ್ನು ಧೀಮಂತವಾಗಿ ಎದುರಿಸುವ ಹಲವು ಪಾತ್ರಗಳು ಇಲ್ಲಿ ಸಂಘಟ್ಟಿಸಿವೆ. ಯಕ್ಷಗಾನವು ತನ್ನ ಮೂಲದಿಂದ ದೂರ ಸರಿಯುತ್ತಿದೆ ಎಂದು ಅನ್ನಿಸಿದಾಗ ಚಂದ್ರು ರಂಗಸ್ಥಳದಲ್ಲಿಯೇ ಭಾಗವತನ ವಿರುದ್ಧ ತಿರುಗಿಬಿದ್ದದ್ದು ಒಂದು ಉದಾಹರಣೆ. ದತ್ತುವಿನ ಪತ್ನಿ ಹೆರಿಗೆಯಲ್ಲಿಯೇ ತೀರಿಕೊಂಡಾಗ ತಾಯಿಯಿಲ್ಲದ ತಬ್ಬಲಿ ಮಗುವನ್ನು ಗೋಪಾಲ ಮತ್ತು ಮಾಲತಿ ತಮ್ಮ ಮಗಳನ್ನಾಗಿ ಸ್ವೀಕರಿಸಿದ್ದು ಮತ್ತೊಂದು ಉದಾಹರಣೆ. ಮಾನವೀಯ ಮೌಲ್ಯಗಳು ಮುಕ್ಕಾಗುತ್ತವೆ ಎನ್ನುವ ಸಂದರ್ಭ ಬಂದಾಗ ಯಾರಾದರೊಬ್ಬರು ಅದನ್ನು ಸರಿಪಡಿಸಲು ಮುಂದೆ ಬರುತ್ತಾರೆ. ಇಂಥ ಪಾತ್ರಗಳು ಜೀವನ ಪ್ರವಾಹದಲ್ಲಿ ಈಜುವವರಿಗೆ ಭರವಸೆಯ ತೇಲುಗಾಯಿಯಂತೆ ಮೂಡಿ ಬಂದಿವೆ. ಜೀವನ ಪ್ರೀತಿಯನ್ನು ತುಂಬುವುದೇ ಉತ್ತಮ ಕೃತಿಯೊಂದರ ಲಕ್ಷಣ. ಈ ಎಲ್ಲ ಗುಣಗಳನ್ನು ಹೊಂದಿರುವ ಕಾರಣ ಶಾಸ್ತ್ರಿಯವರ `ಲಯ’ ಒಂದು ಅತ್ಯುತ್ತಮ ಕೃತಿ ಎಂದು ಹೇಳಲೇ ಬೇಕಾಗುತ್ತದೆ.

ಎಲ್‌.ಎಸ್‌.ಶಾಸ್ತ್ರಿಯವರು ತೀರ ತಡವಾಗಿ ಕಾದಂಬರಿ ಪ್ರಕಾರಕ್ಕೆ ಒಲಿದುಕೊಂಡಿದ್ದಾರೆ. ಅವರಿಂದ ಇನ್ನೂ ಹಲವು ಜೀವನಪ್ರೀತಿಯನ್ನು ಉಕ್ಕಿಸುವ ಕೃತಿಗಳು ಬರಲಿ ಎಂದು ನಾನು ಆಶಿಸುತ್ತೇನೆ. ಅವರಿಗಿಂತ ನಾನು ತುಂಬ ಕಿರಿಯ. ಆದರೂ ನನ್ನ ಮೇಲೆ ಪ್ರೀತಿಯಿಟ್ಟು ಕೃತಿಯನ್ನು ಓದಿ ಅಭಿಪ್ರಾಯ ಬರೆಯಲು ಕೋರಿದ ಅವರಿಗೆ ತುಂಬುಹೃದಯದ ಕೃತಜ್ಞತೆಗಳು.