ನ್ನಡ ಭಾಷೆಯಲ್ಲಿ ನಾನು ಆಡಿದ ಮೊದಲನೇ ನುಡಿ ಯಾವುದು ಎನ್ನುವುದನ್ನು ನನ್ನ ಅಮ್ಮ ಮತ್ತು ನನ್ನ ಸಂಬಂಧದವರು ನೆನಪು ಮಾಡುತ್ತಾ ಇದ್ದುದರಿಂದ ನನಗೂ ನೆನಪಿದೆ. ಒಂದು ಸಾರಿ ಅಬ್ಬಕ್ಕ (ಅವರ ಮನೆಯ ಕೆಲಸದ ಹೆಂಗಸು) ನಮ್ಮ ಮನೆಗೆ ಬಂದಾಗ ನಾನು ಅವಳ ಬಗ್ಗೆ ಹೀಗೆ ತಮಾಷೆ ಮಾತನಾಡಿದೆನಂತೆ, “ಅಬ್ಬಕ್ಕನ­ ಗುಬ್ಬಕ್ಕ ಕಚ್ಕೊಂಡೋಯ್ತು’. ಅದೇನು ಬಹಳ ದೊಡ್ಡ ವಾಕ್ಯವಲ್ಲ. ಆದರೆ ನನ್ನ ಅಮ್ಮ “ನೋಡು, ನಮ್ಮ ಅನಂತು “ಅಬ್ಬಕ್ಕನ­ ಗುಬ್ಬಕ್ಕ ಕಚ್ಕೊಂಡೋಯ್ತು’’ ಎಂದು ಯಾವಾಗಲೂ ಎಲ್ಲರಿಗೂ ಹೇಳುತ್ತಿದ್ದರು. ಇಲ್ಲೊಂದು ಪ್ರಾಸವಿದೆ. ಅಬ್ಬಕ್ಕ- ಗುಬ್ಬಕ್ಕ. ಅದನ್ನು ಹೇಳುವಾಗ ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋ…ಯ್ತು, ಹೋ…ಯ್ತು ಎಂಬ ದೀರ್ಘವನ್ನು ಮತ್ತಷ್ಟು ದೀರ್ಘವಾಗಿಸುವುದರಲ್ಲಿ ಒಂದು ನಾಟಕೀಯವಾದ ಕೈಎತ್ತಿದ ಕ್ರಿಯೆಯೂ ಇದೆ. ಅವಳು ಸಾಯುವ ತನಕವೂ ಅನಂತು ಚಿಕ್ಕವನಿರುವಾಗ ಹೀಗಂದಿದ್ದ ಎಂದು ನೆನಪಿಸಿಕೊಳ್ಳುತ್ತಿದ್ದಳು. ನಾನು ಬರೆದಿದ್ದನ್ನೇನೂ ನನ್ನಮ್ಮ ಓದಿರಲಿಲ್ಲ. ಆದರೆ ನನ್ನೆಲ್ಲಾ ಸಾಹಿತ್ಯ ಕೃತಿಗಳ ಉಗಮ “ಅಬ್ಬಕ್ಕನ­ ಗುಬ್ಬಕ್ಕ ಕಚ್ಕೊಂಡೋಯ್ತು’’ವಿನಲ್ಲಿ ಆಕೆಗೆ ಕಾಣಿಸುತ್ತಿತ್ತೇನೋ. ಇನ್ನೊಂದೇನು ವಿಚಿತ್ರ ಅಂದರೆ ಅಬ್ಬಕ್ಕ ಬಹಳ ದಪ್ಪವಾಗಿದ್ದ ಹೆಂಗಸು. ಗುಬ್ಬಕ್ಕ ಬಲು ಸಣ್ಣದು. ಇಂಥ ಅಬ್ಬಕ್ಕನನ್ನು ಒಂದು ಗುಬ್ಬಕ್ಕ ಕಚ್ಚಿಕೊಂಡು ಹೋಗೋದು ಹೇಗೆ? ಈಗ ನಿಂತು ಇಲ್ಲಿಂದ ಆ ಅನುಭವವನ್ನು ಮೆಲುಕು ಹಾಕುವಾಗ ಯಾವುದೋ ಅಪೂರ್ವ ರಹಸ್ಯದ ಕೀಲಿಕೈಯಾಗಿ ನನಗೆ ಇದು ಕಾಣುತ್ತದೆ. (ಪುಟ 26)
ಯು.ಆರ್. ಅನಂತಮೂರ್ತಿಯವರು ತಮ್ಮ ಆತ್ಮಕಥನ “ಸುರಗಿ’’ಯಲ್ಲಿಇದನ್ನು ಪ್ರಸ್ತಾಪಿಸಿದ್ದಾರೆ. ವಾಲ್ಮೀಕಿ ಋಷಿಯು ಕ್ರೌಂಚ ಮಿಥುನಗಳಲ್ಲಿ ಒಂದು ಬೇಡನ ಬಾಣಕ್ಕೆ ಬಲಿಯಾದಾಗ ಅವನಿಗೆ ಅರಿವಿಲ್ಲದಂತೆ ಶಾಪ ವಾಕ್ಯ ಕಾವ್ಯರೂಪದಲ್ಲಿ ಹೇಗೆ ಹೊರಹೊಮ್ಮಿತೋ ಹಾಗೆ ಇದು. 
ಕುತೂಹಲಕಾರಿಯಾದ ಇನ್ನೊಂದು ಪ್ರಸ್ತಾಪ ಹೀಗಿದೆ: ಆಗಾಗ ನಿರಂಜನರು ಬಂದವರು ನನ್ನ ಕೋಣೆಯಲ್ಲೇ ಮಲಗುತ್ತಿದ್ದರು. ನಾನು ಅವರ ಕಾಗದಗಳನ್ನು ಅವರ ಪ್ರೇಯಸಿಯಾದ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಅನುಪಮಾಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಹಾಗೆಯೇ ಅನುಪಮಾರ ಕಾಗದಗಳನ್ನು ನಿರಂಜನರಿಗೆ ತಲುಪಿಸುವ ಪೋಸ್ಟ್‌ಮನ್ ಆಗಿದ್ದೆ. (ಪುಟ 103)
ಈ ಪ್ರಖ್ಯಾತ ಸಾಹಿತಿಯು ಆರಂಭದ ದಿನಗಳಲ್ಲಿ ಹೇಗೆ ಅಸ್ಮಿತೆಗಾಗಿ ಪರಿತಪಿಸಿದ್ದರು ಎಂಬುದನ್ನೂ ದಾಖಲಿಸಿದ್ದಾರೆ. ಎಲ್ಲ ಲೇಖಕರಿಗೂ ಇಂಥ ಅನುಭವ ಆಗಿರುತ್ತದೆ. ಮುಡಿವ ಭೋಗಿಗಳಿಲ್ಲದೆ ಮಾಲೆಗಾರನ ಪೊಸ ಬಾಸಿಗಂ ಮುದುಡಿ ಪೋಗದೆ ಎಂಬ ಜನ್ನ ಕವಿಯ ವಾಣಿ ನೆನಪಾಗುವುದು ಇಲ್ಲಿ.
5 ಸೆಪ್ಟೆಂಬರ್, 1954: “ಕವಿ ಪೂರ್ಣಿಮೆ’ ಪ್ರಜಾವಾಣಿಗೂ “ಪಂಜರದ ಗಿಳಿ’ ಜನಪ್ರಗತಿಗೂ ಕಳಿಸಿದ್ದೆ. ಎಂದು ಪ್ರಕಟವಾಗುವುದೋ! ಈ ಪತ್ರಿಕೆಯವರ ಅಸಡ್ಡೆ, ಹೊಸ ಬರಹಗಾರರು ತಮಗೆ ಗುರುತಿಲ್ಲದವರು ಎನ್ನುವಾಗ ಅವರು ತೋರಿಸುವ ತಾತ್ಸಾರ ನನ್ನ ಮನಸ್ಸನ್ನು ಕಲಕಿಬಿಟ್ಟಿದೆ. ಉತ್ಸಾಹದ ಜೊತೆ ನನ್ನ ಶಕ್ತಿಯೂ ಇಂಥ ಅನಾದರದ ವಾತಾವರಣದಲ್ಲಿ ಕುಂಠಿತವಾಗಬಹುದೇನೋ! ಬರಹಗಾರ ತನ್ನ ಓದುಗರಿಗಾಗಿ ಎಷ್ಟು ಆತುರ ಪಡುತ್ತಾನೆಂಬುದು ಈ ಕುರುಡು ಜನಕ್ಕೆ ಹೇಗೆ ತಿಳಿದೀತು? ಗೊಡ್ಡು ಜನರ ಜಗತ್ತಿನಲ್ಲಿ ಸೂಕ್ಷ್ಮ ಜೀವಿಗಳೆಲ್ಲ ಹೀಗೆಯೇ ಒದ್ದಾಡಿದ್ದಾರೆ… (ಪುಟ 104)
ಸಮಕಾಲೀನ ಸಾಹಿತ್ಯದ ಸಂದರ್ಭದಲ್ಲಿ ಅತಿ ಮುಖ್ಯ ಲೇಖಕರಲ್ಲಿ ಒಬ್ಬರಾಗಿರುವ ಅನಂತಮೂರ್ತಿಯವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ ಎನ್ನುವ ಕಾರಣವೊಂದಕ್ಕೇ ನಮಗೆ ಮುಖ್ಯರಾಗುವುದಿಲ್ಲ. ಸುಮಾರು ಆರು ದಶಕಗಳ ಕಾಲ ಕನ್ನಡ ಜನರ ವೈಚಾರಿಕ ಪ್ರಜ್ಞೆಗೆ ಒರೆಗಲ್ಲನ್ನು ಒದಗಿಸುತ್ತ, ಹಲವು ಚಳವಳಿಗಳಲ್ಲಿ ಸ್ವಯಂ ಭಾಗಿಯಾಗುತ್ತ, ಸಮಕಾಲೀನ ಆಗುಹೋಗುಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸುತ್ತ, ಟೀಕಿಸುತ್ತ, ಸ್ವತಃ ಟೀಕೆಗೆ ಒಳಗಾಗುತ್ತ, ಎಲ್ಲ ಕಾಲದಲ್ಲಿಯೂ ತಮ್ಮ ವೈಚಾರಿಕತೆಯಿಂದ ಪ್ರಸ್ತುತರಾಗುತ್ತ ಬಂದಿರುವ ಅನಂತಮೂರ್ತಿ ತಮ್ಮ ಇಳಿಗಾಲದಲ್ಲಿ ತಮ್ಮ ಬದುಕನ್ನು ಪುನರ್ ಅವಲೋಕಿಸಿಕೊಂಡಿದ್ದಾರೆ. ಜ.ನಾ. ತೇಜಶ್ರೀ ಹೇಳಿದಂತೆ, ಅವರಿಗೆ ಅಂಥ ಆಲೋಚನೆಯೇ ಇರಲಿಲ್ಲ. ತೇಜಶ್ರೀ ಹಾಗೂ ಮೂರ್ತಿಯವರ ಪತ್ನಿ ಎಸ್ತರ್ ಮೇಡಂ ಅವರ ಒತ್ತಾಯದ ಮೂಲಕ ಇದು ಸಂಪನ್ನವಾಗಿದೆ.
ತಮ್ಮ ಇಳಿಗಾಲದಲ್ಲಿ ತಾವು ಮುಚ್ಚಿಡುವಂಥದ್ದು ಏನೂ ಇಲ್ಲ ಮತ್ತು ಹೇಳಿ ಸಾಧಿಸುವಂಥದ್ದು ಏನೂ ಇಲ್ಲ ಎಂಬ ಪ್ರಜ್ಞೆಯಿಂದಲೇ ಅನಂತಮೂರ್ತಿಯವರು ತಮ್ಮ ಜೀವನ ಕಥನವನ್ನು ಇಲ್ಲಿ ದಾಖಲಿಸಿದ್ದಾರೆ.
“ಸುರಗಿ’ ಒಂದು ರೀತಿಯಲ್ಲಿ ಆತ್ಮಕಥನ, ಇನ್ನೊಂದು ರೀತಿಯಲ್ಲಿ ಆತ್ಮಚರಿತ್ರೆ. ಸಾಂಪ್ರದಾಯಿಕ ಆತ್ಮಕಥನದ ಬರವಣಿಗೆಯ ರೀತಿಯಿಂದ ಸಂಪೂರ್ಣ ಭಿನ್ನವಾದ ಬರವಣಿಗೆ ಎಂಬ ಕಾರಣಕ್ಕೆ “ಸುರಗಿ’ ಗಮನ ಸೆಳೆಯುತ್ತದೆ. ಅನಂತಮೂರ್ತಿಯವರು ತಮ್ಮ ಬದುಕಿನ ವಿವರಗಳನ್ನು ಬೇರೆಬೇರೆ ಸಂದರ್ಭಗಳಲ್ಲಿ ನೀಡಿದ್ದರು. ಆದರೆ ಅದು ಇಡಿಯಾಗಿ ನಮಗೆ “ಸುರಗಿ’ಯಲ್ಲಿ ಸಿಕ್ಕಿದೆ. ಇದಕ್ಕೆ ಜ.ನಾ. ತೇಜಶ್ರೀಯವರ ಅಪಾರವಾದ ಶ್ರಮ ಕಾರಣವಾಗಿದೆ. ಪಿಎಚ್.ಡಿ. ಅಧ್ಯಯನ ಮಾಡುವ ವಿದ್ಯಾರ್ಥಿ ಮಾಹಿತಿಯನ್ನೆಲ್ಲ ಕಲೆಹಾಕಿ ನಂತರ ಅವುಗಳನ್ನೆಲ್ಲ ಪುನರ್ ಹೊಂದಾಣಿಕೆ ಮಾಡುವ ರೀತಿಯ ಕೆಲಸ ಇದು. ಅವರು ಬರೆದೂ ಅವರದಲ್ಲದ ಕೃತಿ ಇದು. ಉಂಡೂ ಉಪವಾಸಿ ಬಳಸಿಯೂ ಬ್ರಹ್ಮಚಾರಿ ಎಂಬಂಥ ರೀತಿಯ ನಿಷ್ಕಾಮ ಕರ್ಮ ಇದು.
ಜ.ನಾ. ತೇಜಶ್ರೀಯವರು ಮೊದಲು ಧ್ವನಿ ಮುದ್ರಿಸಿಕೊಂಡು ನಂತರ ಬರೆದು ಸಿದ್ಧಪಡಿಸಿದ್ದನ್ನೆಲ್ಲ ಅನಂತಮೂರ್ತಿಯವರು ತಿದ್ದಿದ್ದಾರೆ. ತಮ್ಮದೇ ಭಾಷೆಯ ಹೊಳಪನ್ನು ತೊಡಿಸಿದ್ದಾರೆ. ಅಂತಿಮವಾಗಿ ಅದು ಅನಂತಮೂರ್ತಿಯವರ ಆತ್ಮಕಥನವೇ. ಜ.ನಾ. ತೇಜಶ್ರೀಯವರ ಅಸೀಮವಾದ ಗುರುಭಕ್ತಿಯಿಂದ ಇದು ಸಾಧ್ಯವಾಗಿದೆ. ಸದ್ಯೋಜಾತ ಪ್ರಜ್ಞೆಯಲ್ಲಿ ರೂಪುತಳೆದ ಕೃತಿ ಇದು ಎಂದು ಅವರು ಹೇಳಿಕೊಂಡಿದ್ದಾರೆ. 
ಕಳೆದ ಆರು ದಶಕದ ಕರ್ನಾಟಕದ ಎಲ್ಲ ಪ್ರಮುಖ ಸಾಹಿತ್ಯಕ ಮತ್ತು ಸಾಮಾಜಿಕ ವಾಗ್ವಾದ, ಹೋರಾಟಗಳಲ್ಲಿ ಸಕ್ರಿಯರಾಗಿರುವ ಅನಂತಮೂರ್ತಿಯವರ ಜೀವನ ಕಥನವೆಂದರೆ ಒಂದರ್ಥದಲ್ಲಿ ಆ- ಈ ಕಾಲದ ಕರ್ನಾಟಕದ ಸಾಂಸ್ಕೃತಿಕ ಕಥನವೇ ಸೈ. ಅದೆಷ್ಟು ವ್ಯಕ್ತಿಗಳು! ಅದೆಷ್ಟು ಪ್ರಸಂಗಗಳು! ತೀರಾ ವೈಯಕ್ತಿಕವಾದ ಪ್ರೇಮ- ಕಾಮ ಕುರಿತಾದ ಮನೋವ್ಯಾಪಾರಗಳನ್ನೂ ಮೂರ್ತಿ ಇಲ್ಲಿ ಅಕ್ಷರದಲ್ಲಿ ಕೆತ್ತಿದ್ದಾರೆ. ತಂದೆ, ತಾಯಿ, ಅಜ್ಜ, ಅಜ್ಜಿ, ಬಹಳ ಮೊದಲೇ ಕಾಲವಾದ ತಮ್ಮ, ಸ್ವಂತದ್ದಾದ ಪ್ರೇಮ ಪ್ರಸಂಗ, ವೃತ್ತಿಜೀವನದ ವಿವಿಧ ವ್ಯಕ್ತಿಗಳು, ಇಂಗ್ಲೆಂಡಿನಲ್ಲಿ ಕಳೆದ ದಿನಗಳು, ಸಮಾಜವಾದಿ ಹೋರಾಟ, ಲೋಹಿಯಾ, ಗೋಪಾಲಗೌಡ, ಜಾರ್ಜ್ ಫರ್ನಾಂಡೀಸ್, ತೇಜಸ್ವಿ, ಲಂಕೇಶ, ರಾಜಕುಮಾರ್, ಪಟೇಲ, ಹೆಗಡೆ, ದೇವೇಗೌಡರು, ವಿ.ಪಿ. ಸಿಂಗ್, ಸಾಹಿತ್ಯ ವಲಯದ ಕುವೆಂಪು, ಸಿಡಿಎನ್, ಹಾಮಾನಾ, ದೇಜಗೌ, ಜಿ.ಎಚ್. ನಾಯಕರು ಇವರೊಂದಿಗಿನ ಒಡನಾಟದ ಮೆಲುಕುಗಳು ಇಲ್ಲಿವೆ. ಕೆಲವು ಸಿಹಿ, ಕೆಲವು ಕಹಿ. ಎಲ್ಲವನ್ನೂ ನಿರುದ್ವಿಗ್ನವಾಗಿ ಮೂರ್ತಿ ಹೇಳಿಕೊಂಡಿದ್ದಾರೆ.
ಅನಂತಮೂರ್ತಿಯವರ ಈ ಕೃತಿ ನಮಗೆ ಮುಖ್ಯವಾಗುವುದು ಇನ್ನೊಂದು ಕಾರಣಕ್ಕೆ ಕೂಡ. ಅವರು ತಮ್ಮ ಕೆಲವು ಕೃತಿಗಳನ್ನು ಬರೆದ ಹಿನ್ನೆಲೆಯನ್ನು ಇಲ್ಲಿ ವಿವರಿಸಿದ್ದಾರೆ. “ಸೂರ್ಯನ ಕುದುರೆ’ ಕತೆಯನ್ನು ಅವರು ಬರೆದ ಸಂದರ್ಭದ ವಿವರಣೆಯಿಂದ ಸೃಷ್ಟಿಕ್ರಿಯೆಯ ಹಿಂದಿನ ತೀವ್ರ ಒತ್ತಡ ಅಂದರೇನು ಎಂಬುದು ಮನದಟ್ಟಾಗುತ್ತದೆ. ಅನಗತ್ಯವಾಗಿ ತಪ್ಪು ತಿಳಿವಳಿಕೆಗೆ ತಮ್ಮ ಕೃತಿಗಳು ಕಾರಣವಾದ ವಿಷಯವನ್ನು ಹೇಳಿದ್ದಾರೆ. ಸೃಜನಕ್ರಿಯೆಯ ಹಿಂದಿನ ಸವಾಲುಗಳ ಬಗ್ಗೆ ಅಧ್ಯಯನ ನಡೆಸುವವರಿಗೆ ಮೂರ್ತಿಯವರು ಇಲ್ಲಿ ಒದಗಿಸಿರುವ ವಿವರಗಳು ಆಕರವಾಗಬಲ್ಲವು. ತಾವು ಸೃಷ್ಟಿಸಿದ ಪಾತ್ರಗಳು ತಮ್ಮ ಮುಂದೆಯೇ ಬಂದ ಪ್ರಸಂಗವನ್ನು ಅವರು ಹೇಳಿದ್ದಾರೆ. ಅನಂತಮೂರ್ತಿಯವರ ಇಲ್ಲಿಯ ವಿವರಣೆಗಳ ಹಿನ್ನೆಲೆಯಲ್ಲಿ ಅವರ ಕೆಲವು ಕೃತಿಗಳ ಮರು ಅಧ್ಯಯನ ಹೊಸ ರೀತಿಯಲ್ಲಿ ಸಾಧ್ಯವಿದೆ.
ಹಲವು ದೇಶಗಳನ್ನು ತಿರುಗಿರುವ ಅನಂತಮೂರ್ತಿ ಆ ದೇಶಗಳಿಗೆ ಭೇಟಿ ನೀಡಿದಾಗಿನ ವಿಶಿಷ್ಟ ಅನುಭವಗಳನ್ನು, ಆ ದೇಶದ ವಿಶೇಷಗಳನ್ನು ದಾಖಲಿಸಿದ್ದಾರೆ. ಇಂಗ್ಲೆಂಡಿಗೆ ಓದಲು ಹೋದಾಗ ತಮ್ಮ ಸ್ನೇಹಿತನೊಂದಿಗೆ ಯುರೋಪು ಸುತ್ತಲು ಹೋದ ರೋಚಕ ಪ್ರಸಂಗವನ್ನು ವಿವರಿಸಿದ್ದಾರೆ. ಚೀನಾದ ತಿಯಾನ್ಮನ್ ಚೌಕದಲ್ಲಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಅಲ್ಲೇ ಹತ್ತಿರದ ಹೊಟೇಲ್ ಒಂದರಲ್ಲಿ ಅನಂತಮೂರ್ತಿ ವಾಸ್ತವ್ಯ ಮಾಡಿದ್ದರು. ಚೀನಾದ ಅರ್ಥವ್ಯವಸ್ಥೆಯ ವೈರುದ್ಧ್ಯಗಳನ್ನು, ಕಮ್ಯುನಿಸಂ ಆಡಳಿತದ ಹಿಂದಿರುವ ಭ್ರಷ್ಟಾಚಾರವನ್ನು ಅವರು ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ರಷ್ಯಾದಲ್ಲಿ ಕಮ್ಯುನಿಸ್ಟರು ಏಕೆ ವಿಫಲರಾದರು, ಭಾರತದಲ್ಲಿ ಸೋಶಿಯಲಿಸ್ಟರು ರಾಜಕೀಯ ಅಧಿಕಾರವನ್ನು ಪಡೆಯುವುದು ಏಕೆ ಸಾಧ್ಯವಾಗಲಿಲ್ಲ ಎಂಬ ಅನಂತ ವಿಚಾರಧಾರೆ ಓದುಗರನ್ನು ಪ್ರಭಾವಿಸದೆ ಇರದು.
ಎಲ್ಲ ಆತ್ಮಕಥನಗಳ ಹಾಗೆ “ಸುರಗಿಯ’ ಘಮದಲ್ಲಿ ಉಳಿದವುಗಳ ಘಮ ಗಮನಕ್ಕೆ ಬರುವುದಿಲ್ಲ. ಇದನ್ನು ಚರ್ಚಿಸುವ ಕಾಲವೂ ಇದಲ್ಲ. ಇನ್ನೊಂದು ಐವತ್ತು ವರ್ಷಗಳ ಬಳಿಕ ಇದನ್ನು ಹಾಗೂ ಇವರ ಬಗ್ಗೆ ಉಳಿದವರು ಏನು ಹೇಳಿದ್ದಾರೆ, ಇವರು ಪ್ರಸ್ತಾಪಿಸಿದ ಪ್ರಸಂಗಗಳಲ್ಲಿ ಬಂದುಹೋಗುವವರ ನಿಲುವು ಏನಿತ್ತು ಎಂಬುದನ್ನೆಲ್ಲ ಅಧ್ಯಯನಶೀಲರು ಒರೆಗೆ ಹಚ್ಚಬಹುದು.
“ಸುರಗಿ’ಯನ್ನು­ ಓದಿದಾಗ ಓದುಗರಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅನಂತಮೂರ್ತಿಯವರು ತಮ್ಮ ಬದುಕಿನಲ್ಲಿ ಪಡೆದ ಅಧಿಕಾರ, ಗೌರವ, ಪದವಿಗಳೆಲ್ಲ ಅವರ ಅರ್ಹತೆಯ ಕಾರಣದಿಂದಾಗಿಯೇ ಅವರಿಗೆ ದಕ್ಕಿದ್ದು ಎಂಬುದು ಮನದಟ್ಟಾಗುತ್ತದೆ. ಅವರ ವಿಚಾರಗಳಿಗೆ ಬದಲು ಹೇಳುವುದಕ್ಕೆ ಅವಕಾಶವಿರಬಹುದು. ಆದರೆ ಅವರು ಡೋಂಗಿ ಎಂದು ಖಂಡಿತ ಅನ್ನಿಸದು