ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಗ್ರಾಮದ ಕಡೆ ಮುಖ ಮಾಡಿ ಕಳೆದ ಹತ್ತು ವರ್ಷಗಳಿಂದ ಅಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಿದ್ದಾರೆ. ಚಿಂತಕರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಹಳ್ಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ರಾಜ್ಯದ ಇತರ ಭಾಗಗಳ ಕಲೆ ಸಂಸ್ಕೃತಿಯನ್ನು ತಮ್ಮ ಹಳ್ಳಿಯ ಜನರಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಳ್ಳಿಯ ಋಣವನ್ನು ತೀರಿಸುತ್ತಿದ್ದೇನೆ ಎಂಬ ಭಾವನೆ ಅವರದು. ನಾಗತಿಹಳ್ಳಿಯ ಸಂಸ್ಕೃತಿ ಹಬ್ಬದ ಹತ್ತು ವರ್ಷದ ಸಂದರ್ಭದಲ್ಲಿ ಒಂದು ಆಕರ ಗ್ರಂಥವನ್ನು ತರುವ ಯೋಜನೆಯ ಫಲವಾಗಿ ‘ಗ್ರಾಮಮುಖಿ’ ಎಂಬ ಹಳ್ಳಿಗಾಡಿನ ಬದುಕಿಗೆ ಚಿಕಿತ್ಸಕ ಚಿಂತನ ಬರೆಹಗಳ ಸಂಕಲನ ಹೊರಬಂದಿದೆ. ಸಂಸ್ಕೃತಿ ಹಬ್ಬದ ಮೂಲಕ ನಾಗತಿಹಳ್ಳಿಯಲ್ಲಿ ನಡೆಯುತ್ತಿರುವ ಪ್ರಯೋಗಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಗ್ರಾಮಭಾರತದ ತಲ್ಲಣಗಳನ್ನು ದಾಖಲಿಸುವ ಪ್ರಯತ್ನ ಕೂಡ ಇದಾಗಿದೆ. ತಲ್ಲಣದ ನೆಲೆಗಳ ಅನುಸಂಧಾನದ ಜೊತೆಗೆ ಅದಕ್ಕೆ ಸೂಕ್ತ ಪರಿಹಾರವನ್ನೂ ಸೂಚಿಸಲು ಇದರಲ್ಲಿ ಪ್ರಯತ್ನಿಸಲಾಗಿದೆ. ನಮ್ಮ ಯುವಕರು ಹಳ್ಳಿಗಳನ್ನು ಏಕೆ ತೊರೆಯುತ್ತಿದ್ದಾರೆ? ಇದು ಮೂಲಭೂತವಾದ ಪ್ರಶ್ನೆ. ಪಟ್ಟಣಗಳಲ್ಲಿ ಇರುವಂಥ ಸೌಲಭ್ಯಗಳು ಹಳ್ಳಿಗಳಲ್ಲೂ ದೊರೆಯುವಂತಾದರೆ ಅವರು ಹಳ್ಳಿಗಳನ್ನು ಬಿಡುವುದೇ ಇಲ್ಲ ಅಲ್ಲವೆ! ಗ್ರಾಮೀಣ ಬದುಕಿನ ಉಸಿರಿರುವುದು ಕೃಷಿಯಲ್ಲಿ. ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಿಕೊಳ್ಳಬಹುದು, ಇರುವ ಭೂಮಿಯಲ್ಲಿ ಯಾವ ರೀತಿಯಿಂದ ಅಧಿಕ ಇಳುವರಿಯನ್ನು ತೆಗೆಯಬಹುದು, ತಾವು ಬೆಳೆದುದನ್ನು ಹೇಗೆ ಮಾರುಕಟ್ಟೆ ಮಾಡಬಹುದು, ಹೊಸ ಕೃಷಿ ಉಪಕರಣಗಳನ್ನು ಉಪಯೋಗಿಸುವುದು ಹೇಗೆ, ಸಾವಯವ ಕೃಷಿಯನ್ನು ಹೇಗೆ ಮಾಡಬೇಕು, ಸ್ವಾವಲಂಬನೆಯನ್ನು ಗಳಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಯು ಅವರಿಗೆ ದೊರೆಯಬೇಕು. ಕೃಷಿಕನೊಬ್ಬ ತನ್ನ ತುಂಡು ಭೂಮಿಯ ಜೊತೆಯಲ್ಲಿ ಎರಡು ಹಸುವನ್ನು ಸಾಕಿದರೆ ಹೈನುಗಾರಿಕೆಯಿಂದಲೂ ಹಣವನ್ನು ಮಾಡಬಹುದು. ಜೇನು ಸಾಕಣೆ ಮಾಡಬಹುದು, ತನಗೆ ತಿಳಿದ ಇತರ ಕಸುಬನ್ನು ಲಾಭದಾಯಕವಾಗಿ ಹಳ್ಳಿಯಿಂದಲೇ ನಡೆಸುವುದು ಹೇಗೆ ಎಂಬ ಮಾರ್ಗದರ್ಶನ ಅವರಿಗೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ನಾಗತಿಹಳ್ಳಿಯಲ್ಲಿ ಚಂದ್ರಶೇಖರ ಅವರು ಕಳೆದ ಹತ್ತು ವರ್ಷಗಳಿಂದ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ತಮ್ಮೂರಿನ ರೈತರನ್ನು ಪ್ರಗತಿಪರ ರೈತರಿರುವ ರಾಜ್ಯದ, ಹೊರ ರಾಜ್ಯದ ಇತರ ಭಾಗಗಳಿಗೆ ತಮ್ಮದೇ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತಾರೆ. ತಮ್ಮೂರಿನ ರೈತರಿಗೆ ವಿಮಾನ ಪ್ರಯಾಣ ಮಾಡಿಸಿದ ಅಗ್ಗಳಿಕೆಯೂ ಅವರಿಗಿದೆ. ಇವೆಲ್ಲ ಒಂದು ಸಾಂಸ್ಕೃತಿಕ ದಾಖಲೆಯಾಗಿ ಇಲ್ಲಿ ನಮೂದಾಗಿದೆ. ಈ ಕೃತಿಯು ನಾಗತಿಹಳ್ಳಿಯಲ್ಲಿ ನಡೆದಿರುವ ಕಾರ್ಯಕ್ರಮಗಳ ವರದಿಯಲ್ಲ. ಅಲ್ಲಿಯ ಪ್ರಯೋಗಗಳ ಪರಾಮರ್ಶೆಯ ಜೊತೆಗೆ ಗ್ರಾಮಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರುವ ತಜ್ಞರಿಂದ ಬರೆಸಿದ ಲೇಖನಗಳೂ ಇದರಲ್ಲಿವೆ. ಹಿ.ಶಿ.ರಾಮಚಂದ್ರಗೌಡರು ಬರೆದ ‘ರೈತ ಚಳವಳಿಯ ನಾಳೆಗಳು’ ಎಂಬ ಲೇಖನ ಇದರಲ್ಲಿದೆ. ಕಾರ್ಪೋರೆಟ್ ವರ್ಗ ಹೇಗೆ ಮಧ್ಯಮವರ್ಗದಿಂದ ಬಂದ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತದೆ, ಆ ಮೂಲಕ ತಾನು ಹೇಗೆ ಗಟ್ಟಿಯಾಗಿ ಬೇರಿಳಿಸುತ್ತ ಹೋಗುತ್ತದೆ ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ. ರಾಜಕಾರಣದ ಮೇಲೆ ಹತೋಟಿಯನ್ನು ಸಾಧಿಸಬಹುದಾಗಿದ್ದ ಮತೀಯ ಅಥವಾ ಧಾರ್ಮಿಕ ಶಕ್ತಿಗಳು ಹಣಕ್ಕಾಗಿ ರಾಜಕಾರಣಿಗಳನ್ನು ಅವರ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿ ಬೇಡುತ್ತವೆ ಎಂದು ಹೇಳುತ್ತಾರೆ. ಹೀಗಿರುವಾಗ ಮಾರ್ಗದರ್ಶನ ಮಾಡುವವರು ಯಾರು? ಈ ಲೇಖನದಲ್ಲಿ ಗೌಡರು ೧೭ ಸಲಹೆಗಳನ್ನು ನೀಡಿದ್ದಾರೆ. ಬದಲಾದ ಕಾಲದಲ್ಲಿ ಜನಪದ ಕಲೆಗಳ ಬಗ್ಗೆ ಡಾ.ಡಿ.ಕೆ.ರಾಜೇಂದ್ರ, ಗ್ರಾಮೀಣ ಕೃಷಿ ಮತ್ತು ಯುವ ಜನತೆಯ ಕುರಿತು ಎನ್.ಕೇಶವಮೂರ್ತಿ, ಹಸಿರು ಊರಿನ ಹಸಿದ ಚಿತ್ರಗಳ ಬಗ್ಗೆ ಶಿವಾನಂದ ಕಳವೆಯವರು, ಮರೆಯಾಗುತ್ತಿರುವ ಪಾರಂಪರಿಕ ಕಸಬುಗಳ ಬಗ್ಗೆ ವ.ನಂ. ಶಿವರಾಂ, ಹಳ್ಳಿಗಳಲ್ಲಿ ವಿದ್ಯಾವಂತರ ಸಾಮಾಜಿಕ ಜವಾಬ್ದಾರಿಗಳ ಕುರಿತು ಗಂಗಾಧರ ಹಿರೇಗುತ್ತಿಯವರು ಬರೆದಿದ್ದಾರೆ. ಕೃಷಿಯಿಂದ ಲಾಭ ಮಾಡಬಹುದು ಎಂಬ ಮಾತನ್ನು ಡಿ.ಚಂದ್ರಶೇಖರ ಚೌಟ ಹೇಳಿದ್ದಾರೆ. ಇಂಥ ೨೧ ಲೇಖನಗಳು ಈ ಭಾಗದಲ್ಲಿವೆ. ಸಂಸ್ಕೃತಿ ಹಬ್ಬ ನಡೆದುಬಂದ ದಾರಿಯ ಬಗ್ಗೆ ಎರಡನೆ ಭಾಗದಲ್ಲಿ ೨೪ ಲೇಖನಗಳಿವೆ. ಸಂಸ್ಕೃತಿ ಹಬ್ಬದಲ್ಲಿ ಪಾಲ್ಗೊಂಡವರ ಅನುಭವ ಕಥನಗಳು ಇದರಲ್ಲಿವೆ. ಇದರಲ್ಲಿ ನಾಗತಿಹಳ್ಳಿ ಚಂದ್ರಶೇಖರ ಅವರ ಸಂದರ್ಶನವೂ ಇದೆ. ಅದರಲ್ಲಿ ಅವರು, ‘… ಹಳ್ಳಿಯ ಜನತೆ ಪ್ರವಾಹದೋಪಾದಿಯಲ್ಲಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ನೆಮ್ಮದಿ ನೆಲಸಿದರೆ ಈ ವಲಸೆ ತಪ್ಪುತ್ತದೆ. ಯಾವ ದೇಶ ಹಳ್ಳಿಗಳಿಗೆ ನೆಮ್ಮದಿಯನ್ನು ವಿಸ್ತರಿಸುವುದಿಲ್ಲವೋ ಅಂಥ ದೇಶದ ಮಹಾನಗರಗಳು ಕೊಚ್ಚೆಗುಂಡಿಗಳಾಗಿರುತ್ತವೆ. ಈಗ ಚಳುವಳಿಗಳು ಸ್ತಬ್ಧಗೊಂಡಿವೆ. ನಾಯಕತ್ವದ ಶೂನ್ಯತೆ ಇದೆ. ಈ ಹೊತ್ತಿನಲ್ಲಿ ವೈಯಕ್ತಿಕ ನೆಲೆಯಲ್ಲಿ ಪ್ರಯೋಗಗಳು ಆರಂಭವಾಗಬೇಕು. ಎಲ್ಲ ತರುಣರೂ ತಮ್ಮ ಹಳ್ಳಿಗಳತ್ತ ಮುಖ ಮಾಡಬೇಕು. ಆದರೆ ಇದು ಯಾವುದೇ ರಾಜಕೀಯ ಉದ್ದೇಶದಿಂದ ಪ್ರೇರಿತವಾಗಿರಬಾರದು’ ಎಂದು ಹೇಳಿದ್ದಾರೆ. ಈ ಕೃತಿಯಿಂದ ಕೆಲವರಾದರೂ ಪ್ರೇರಣೆ ಪಡೆದು ತಮ್ಮ ಊರ ಕಡೆ ಮುಖ ಮಾಡಿದರೆ ಅದೇ ಸಾರ್ಥಕ. ಈ ಕೃತಿಯ ಗೌರವ ಸಂಪಾದಕರು ಡಾ.ಡಿ.ಕೆ.ಚೌಟ ಮತ್ತು ಸಂಪಾದಕರು ಶಿವಕುಮಾರ ಕಾರೇಪುರ ಅವರು. ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ಪುಟಗಳು ೨೯೬ ಬೆಲೆ ₹ ೧೫೦
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.