ಇವತ್ತು
ಗೋಯ್ದಜ್ಜ ಹಪ್ಪು ಮುದುಕ
ಹಿಡಿಗೋಲಿನೊಡೆಯನವ, ನಡು ನಡುಗಿ ನಡೆವ
ಧೂಳು ಕೆಸರಿನ ದಾರಿಯಲಿ ಮೂಡಿದ
ಅವನ ಹೆಜ್ಜೆ ಗುರುತು ನೆನಪ ಚಿತ್ತಾರವ
ಬಿಡಿಸುತ್ತ ಹೋಗುವವು
ಗೋಯ್ದಜ್ಜ ಪೊಕಳೆ ಹೊಡೆಯುವುದರಲ್ಲಿ
ನಿಸ್ಸೀಮ. ಗಾಂಧೀಜಿಯ
ಐವತ್ತನೆ ಹುಟ್ಟಿದ ವರ್ಷವೇ
ನಾನು ಹುಟ್ಟಿದವನು ಎನ್ನುತ್ತಿರುತ್ತಾನೆ.
ಬೆಟ್ಟದ ಗೋವಿಂದನ ಹೆಸರಿರಲಿ ಎಂದು
ಅವನಪ್ಪನಿಟ್ಟ ಹೆಸರು
ಸಾಲ ಕೊಡುವ ಧಣಿಗಳಿಗೆ, ಅವನ ನರ
ಹರಿಯುವವರೆಗೆ ಕೆಲಸ ಕೊಳ್ಳುವ ಪ್ರಭುಗಳಿಗೆ
ಕರೆಯಲು ದೊಡ್ಡದೆನಿಸಿ
‘ಗೋಯ್ದ’ ಅಂತಾಯ್ತು
ಸರೀಕರು ಗೋಯ್ದಣ್ಣ ಅಂದರೆ
ಗಡ್ಡ ನೆರೆತ ಅವನನ್ನು ಕೇರಿಯ ಪೋರರು
ಗೋಯ್ದಜ್ಜ ಅನ್ನುವರು
*
ಹೊಂತ್ಕಾರಿ ಗೋಯ್ದನ ಆಳುತನ
ಎಂಥವರಿಗೂ ಕಣ್ಣು ತುಂಬಬೇಕು
ಕೇರಿಯ ಪುಂಡಿಯರಿಗೆಲ್ಲ ಅವನ ಕೂಡ
ಕೊಮಣಿ ಮಾಡುವ ಹುಮ್ಮಸ್ಸು
ಅವನ ತೋಳಿನ ಬೀಸು ನೇಗಿಲಿನ ಈಸು
ಮೂಗು ಮೊನಚು; ನೇಗಿಲಿನ ಮೊನೆಯಂತೆ
ಕೋಣ ಮೇಯ್ದು ಬಿಟ್ಟ ಬತ್ತದ ಗದ್ದೆಯಂತೆ
ಅವನೆದೆಯ ರೋಮಗಳು
ನೊಗದಂಥ ಹುಬ್ಬು ಒಳ ಸೇರಿದ ಕಣ್ಣಿಗೆ
ಹುಲ್ಲು ಹೊದಿಸಿದ ಮಾಡಿನಂತೆ ಒಪ್ಪುತ್ತಿತ್ತ್ತು.
ನೇಗಿಲು ಮೂಡಿಸಿದ ಸಾಲುಗಳಂತೆ
ಅವನ ಹಣೆ ತುಂಬ ಗೆರೆಗಳು
*
ಕೂಸ ಗೋಯ್ದ ಶಾಲೆಗೆ ಹೋದರೂ
ಅಕ್ಷರ ತಿದ್ದಿಸಲು ಮಾಸ್ತರು ಹೊಡೆದರೆಂಬ ಸಿಟ್ಟಿಗೆ
ಇವತ್ತು ಅವನು ಊರುವುದು ಹೆಬ್ಬಟ್ಟೇ
ಕೂಸ ಗೋಯ್ದ ಇಂಚಿಂಚು ಬೆಳೆದಂತೆ
ಗೇಣು ಗೇಣು ಕಳೆದುಹೋದ
ಅನುಭವದ ಯಾತನೆಗೆ ಒಳಗಾದ
ಶಾಲೆ ಮಾಸ್ತರರ ವಿರುದ್ಧ ಬಂಡೆದ್ದು
ಅವನು ಬೀಸಿದ ಕಲ್ಲುಗಳು
ಮಾವಿನ ಮರಗಳಿಗೆ ತಾಗಿ
ಕಾಯಿಗಳನ್ನು ಉದುರಿಸತೊಡಗಿದವು
ಅವನ ಮಾತಿನ ನಡುವೆ ಆಗಾಗ
ನುಸುಳುವ ಗಾಂಧಿ ಅಜ್ಜ ಆಗತಾನೆ
ದುಂಡು ಮೇಜಿಗೆ ಸುತ್ತು ಹೊಡೆದು
ಬರುತ್ತಿದ್ದಿರಬೇಕು?
*
ಅಪ್ಪ ತಾಳೆ ಮರ ಆದದ್ದು
ಅಣ್ಣ ಅನಗೋಡು ಹಬ್ಬದ ಶೂಲದ ಕಂಭ ಆದದ್ದು
ಅವ್ವ ಕರುವ ನೆಕ್ಕುವ ದನದ ನಾಲಿಗೆಯಾದದ್ದು
ಕಳ್ಳು ಬಳ್ಳಿಯವರೆಲ್ಲ ಕೇದಿಗೆಯ ಹಿಂಡು ಆದದ್ದು
ಎಲ್ಲವೂ ಅವನಿಗೆ ನೆನಪಾಗುವುದು.
*
ನಾಲ್ವತ್ತೇಳರ ಸ್ವಾ ತಂತ್ರ್ಯ ಪೂರ್ವದ ಭಾರತದಂತೆ
ಅವನ ಮನಸ್ಸಿನಲ್ಲೂ ಕೊಪ್ಪರಿಗೆ ಬೆಲ್ಲದ ಕುದಿತ
ಅಪ್ಪನ ಮೇಲಿನ ಸಿಟ್ಟಿಗೆ ಊಟ ಬಿಟ್ಟ
ಅವ್ವನ ಮೇಲಿನ ಸಿಟ್ಟಿಗೆ ಮನೆಯ ಅಟ್ಟ ಹತ್ತಿ
ಅಡಗಿ ಕುಳಿತ. ಅಣ್ಣನ ಮೇಲಿನ ಸಿಟ್ಟಿಗೆ
ಬಾವಿ ಹಾರುತ್ತೇನೆಂದು ಬಾವಿಕಟ್ಟೆ ಏರಿ ನಿಂತ
ಹುಚ್ಚು ಹುಚ್ಚು ಹುಚ್ಚು
ಎಲ್ಲರೂ ಇದೇ ಜಪಿಸಿದರು
ಮದುವೆ ಮಾಡಿ ಹುಚ್ಚು ಬಿಡಿಸುತ್ತೇವೆಂದು
ಹೆತ್ತವರು ಟೊಂಕ ಕಟ್ಟಿದರು
ಹೆಣ್ಣು ಹುಡುಕಿದರು. ಒಂದು, ಎರಡು ಸಾಕೆ?
ಹತ್ತು. ಕೊನೆಗೂ ಒಂದು ‘ಹೂಂ’ ಅನ್ನುವಾಗ
ಹಲ್ಲಿ ‘ಲೊಚ್’ ಅನ್ನಬೇಕೆ?
ಮರಿಯಾನೆಗೆ ಮಾವುತನ ಭಾರದ ಚಿಂತೆ
ಹಿರಿಯಾನೆಗೆ ಮರಿಗಾದರೆ ಆಯಿತೆ ತನಗೂ
ಆಗುವಂಥದಿರಲೆಂಬ ಆಸೆ
ಅಂಕುಶದ ಬಗ್ಗೆ ತಲೆ ಕೆಡಿಸಿಕೊಂಡವರು
ಒಬ್ಬರೂ ಇಲ್ಲ.
*
ಅಂತೂ ಇಂತೂ ಗೋಯ್ದಜ್ಜನ ಮದುವಿ ಆಯ್ತು
ಅಪ್ಪನುಡದ ಪಟ್ಟಿನಲ್ಲಿ
ಅಣ್ಣನ ಕಪಿ ಹಿಡಿತದಲ್ಲಿ
ಅವ್ವನ ಬಾಯಂಜಲ ನವೆಯಲ್ಲಿ
ಕಳೆದುಹೋದ ತನ್ನನ್ನು
ಹೆಂಡತಿಯೆಂಬ ಹಣ್ಣಿನ
ಎದೆ ಹಳ್ಳದಲ್ಲಿ, ತೊಡೆ ಮೂಲದಲ್ಲಿ
ಕಂಡುಕೊಳ್ಳತೊಡಗಿದ್ದ.
ಇಸ್ಪೀಟು ಮಂಡದಲ್ಲಿ
ಅದೃಷ್ಟ ‘ಹಿಂದೆ ಮುಂದೆ’
ಜೋಲಿ ಹೊಡೆಯುವಂತೆ
ಒಮ್ಮೊಮ್ಮೆ ಹಿಗ್ಗಿದ್ದ, ಒಮ್ಮೊಮ್ಮೆ ಕುಗ್ಗಿದ್ದ
*
ತಾನು ಮಾತ್ರ ತನ್ನಪ್ಪನಂತೆ ಆಗಬಾರದು
ಎಂದುಕೊಂಡು ಹುಟ್ಟಿದಿಬ್ಬರನ್ನು
ಬೇಕಾಬಿಟ್ಟಿ ಬೆಳೆಯಲು ಬಿಟ್ಟ.
ಬತ್ತದ ಗದ್ದೆಯಲ್ಲಿ ಬೆಳೆಗಿಂತ ಕಳೆಯೇ
ರೋಗ ತಾಗದೆ ಬೆಳೆಯುವುದನ್ನು
ಕಂಡ ಅನುಭವ ಅವನದು
ಒಬ್ಬ ಶತಪೋಲಿ, ಪಡಪೋಶಿಯಾದ
ಇನ್ನೊಬ್ಬ ನರಿಯಂಥವನಾದ
ತನ್ನಂಥ ಸಿಂಹ ಒಬ್ಬನೂ ಇಲ್ವಲ್ಲ ಎಂಬ
ಮಿಡುಕು ಗೋಯ್ದಜ್ಜನಿಗೆ
*
ಗೋಯ್ದಜ್ಜ ಇನ್ನೂ ಸತ್ತಿಲ್ಲ
ಆದರೂ ಮೊಮ್ಮಗನಿಗೆ ತನ್ನದೇ ಹೆಸರಿರಿಸಿದ್ದ
ಸಾಯುವ ಮೊದಲೇ ಗೋಯ್ದಜ್ಜ
ಮತ್ತ್ತೆ ಹುಟ್ಟಿ ಬಂದಿದ್ದ.
೨೯-೩-೮೯
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.