ಅ
ದು 1999ರ ಒಂದು ಬೆಳಗು. ಲಂಡನ್ನಿನ ದಕ್ಷಿಣ ಭಾಗದಲ್ಲಿರುವ 87 ವರ್ಷದ ವೃದ್ಧೆಯೊಬ್ಬಳ ಮನೆಯ ಮುಂದೆ ಬ್ರಿಟನ್ನಿನ ಎಲ್ಲ ಮಾಧ್ಯಮದವರು ಗುಂಪಾಗಿ ಸೇರಿದ್ದರು. ಸುಕ್ಕುಗಟ್ಟಿದ ಮುಖ, ಜೋಲುತ್ತಿದ್ದ ಚರ್ಮದ ದೇಹ, ಸಣ್ಣಗೆ ಕಂಪಿಸುವ ದೇಹ, ಆದರೂ ಊರುಗೋಲು ಇಲ್ಲದೆ ನಡೆಯುವೆನೆಂಬ ಹಮ್ಮು, ಶರೀರಕ್ಕೆ ಮುಪ್ಪಾಗಿದ್ದರೂ ಧ್ವನಿಗೆ ಮುಪ್ಪಿಲ್ಲ ಎನ್ನುವಂತೆ ಸ್ಪಷ್ಟವಾಗಿ ಗಂಟಲಿನಿಂದ ಹೊರಗೆ ಬೀಳುತ್ತಿದ್ದ ಮಾತು, ಮಾಧ್ಯಮದವರ ಮುಂದೆ ನಿರ್ಭೀತಿಯಿಂದ ನಿಂತ ಭಂಗಿ ಅವಳ ಮೇಲೆ ಬಂದಿರುವ ಆರೋಪ ನಿಜವೇ ಎಂಬ ಸಂಶಯ ಹುಟ್ಟುಹಾಕುತ್ತಿತ್ತು. ಸೋವಿಯತ್ ರಷ್ಯಾದ ಪರವಾಗಿ ಗೂಢಚರ್ಯೆ ನಡೆಸಿದ ಆರೋಪ ಅವಳ ಮೇಲೆ ಬಂದಿತ್ತು. ನಾನು ನನ್ನನ್ನು ಎಂದೂ ಒಬ್ಬ ಸ್ಪೈ ಎಂದು ಪರಿಗಣಿಸಿಕೊಂಡಿಲ್ಲ. ನಿಮ್ಮ ನಿರ್ಧಾರ ನಿಮಗೆ ಎಂದು ತಣ್ಣಗೆ ಹೇಳಿದಳು ಮೆಲಿಟಾ ನಾರ್‌ವುಡ್. ಕೆಜಿಬಿ ಹೇಳಿದ್ದನ್ನೆಲ್ಲ ನಂಬಬೇಕು ಎಂದು ಎಲ್ಲಿದೆ ಎಂದು ಮರುಪ್ರಶ್ನೆಯನ್ನು ಮಾಧ್ಯಮದವರಿಗೇ ಅವಳು ಎಸೆದಳು. ಬ್ರಿಟನ್ನಿನ ಮಾಧ್ಯಮದವರು ವೃದ್ಧೆಯ ಖಾಸಗಿತನಕ್ಕೆ ಭಂಗ ತರಬಾರದು ಎಂದು ಅಲ್ಲಿಂದ ವಾಪಸು ಹೋದರು.
ಮೆಲಿಟಾ ಸ್ಟೆಡ್‌ಮನ್ ನಾರ್‌ವುಡ್ ಬ್ರಿಟನ್ನಿನ ನಾಗರಿಕ ಸೇವೆಯಲ್ಲಿ ನೇಕಮಗೊಂಡವಳು. ಬ್ರಿಟಿಷ್ ಸೇವೆಯಲ್ಲಿದ್ದುಕೊಂಡು ರಷ್ಯಾದ ಕೆಜಿಬಿಗೆ ರಹಸ್ಯ ಮಾಹಿತಿಗಳನ್ನು ಪೂರೈಸುತ್ತಿದ್ದಳು. ಮೆಲಿಟಾ ಬ್ರಿಟಿಷ್ ಸೇವೆಗೆ 1937ರಲ್ಲಿ ನೇಮಕಗೊಂಡಳು. ಅವಳು ಬ್ರಿಟನ್ನಿನ ಎಂಥ ಆಯಕಟ್ಟಿನ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಳು ಎಂದರೆ ಅದು ಪರಮಾಣು ಬಾಂಬ್ ತಯಾರಿಕೆಗೆ ಸಂಬಂಧಿಸಿದ ಇಲಾಖೆಯಾಗಿತ್ತು. ಬ್ರಿಟಿಷ್ ನಾನ್-ಫೆರಸ್ ಮೆಟಲ್ಸ್ ರಿಸರ್ಚ್ ಅಸೋಸಿಯೇಶನ್ ಅವಳ ಕಾರ್ಯಕ್ಷೇತ್ರವಾಗಿತ್ತು. 40ಕ್ಕೂ ಅಧಿಕ ವರ್ಷ ಅವಳು ಅಲ್ಲಿ ಕೆಲಸ ನಿರ್ವಹಿಸಿದ್ದಳು. ಕೆಜಿಬಿ ಪರವಾಗಿ ಬ್ರಿಟನ್ನಿನಲ್ಲಿ ಅತಿ ದೀರ್ಘ ಅವಧಿಯ ವರೆಗೆ ಕೆಲಸ ನಿರ್ವಹಿಸಿದ ಮಹಿಳೆ ಅವಳು.
ಮೆಲಿಟಾ ಸಿಮಿಸ್‌ಳ ತಂದೆ ಲಾಟ್ವಿಯಾದವನು. ಹೆಸರು ಅಲೆಕ್ಸಾಂಡರ್ ಸಿಮಿಸ್. ತಾಯಿ ಬ್ರಿಟಿಷ್ ನಾಗರಿಕಳು, ಗೆರ್ಟ್ರುಡ್ ಸ್ಟೆಡ್‌ಮನ್ ಸಿರ್ನಿಸ್. ಅವಳ ತಂದೆ ಒಬ್ಬ ಬುಕ್‌ಬೈಂಡರ್ ಆಗಿದ್ದ. ಅವಳು ಆರುವರ್ಷದವಳು ಇದ್ದಾಗಲೇ ಅವನು ತೀರಿಹೋಗಿದ್ದ. ಆತ ರಷ್ಯಾದ ಅಕ್ಟೋಬರ್ ಕ್ರಾಂತಿಯಿಂದ ಪ್ರಭಾವಿತನಾಗಿ ಒಂದು ಪತ್ರಿಕೆಯನ್ನೂ ಹೊರಡಿಸುತ್ತಿದ್ದ. ಅದರಲ್ಲಿ ಲೆನಿನ್ ಮತ್ತು ಟ್ರಾಟ್‌ಸ್ಕಿಯ ಬರೆಹಗಳ ಅನುವಾದ ಇರುತ್ತಿತ್ತು. ಅವಳ ತಾಯಿ ಕೋ-ಆಪರೇಟಿವ್ ಪಾರ್ಟಿಯನ್ನು ಸೇರಿದ್ದಳು. ಶಾಲೆಯಲ್ಲಿ ಓದುವಾಗ ಅವಳು ಸ್ಕೂಲ್ ಕ್ಯಾಪ್ಟನ್ ಆಗಿದ್ದಳು. ಸೌಥೆಂಪ್ಟನ್ ಯುನಿವರ್ಸಿಟಿ ಕಾಲೇಜಿನಲ್ಲಿ ಅವಳು ಲ್ಯಾಟಿನ್ ಮತ್ತು ತರ್ಕಶಾಸ್ತ್ರವನ್ನು ಅಧ್ಯಯನ ಮಾಡಿದಳು. ಇಂಗ್ಲೆಂಡಿನಲ್ಲಿ ಆಗ ನಿರುದ್ಯೋಗದ ಸಮಸ್ಯೆ ತೀವ್ರವಾಗಿತ್ತು. ಒಂದು ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಳ್ಳುವುದೆಂದರೆ ಒಂದು ದೊಡ್ಡ ಸಾಹಸವಾಗಿತ್ತು. ಈ ಕಾರಣಕ್ಕಾಗಿ ಒಂದು ವರ್ಷದಬಳಿಕ ಅವಳು ಓದನ್ನು ಬಿಟ್ಟು ನೌಕರಿಯನ್ನು ಹಿಡಿಯಲು ಲಂಡನ್ನಿಗೆ ಬಂದಳು.
1932ರಲ್ಲಿ ಅವಳು ಬ್ರಿಟಿಷ್ ನಾನ್-ಫೆರಸ್ ಮೆಟಲ್ಸ್ ರಿಸರ್ಚ್ ಅಸೋಸಿಯೇಶನ್‌ನಲ್ಲಿ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರಿದಳು. 1935ರಲ್ಲಿ ಅವಳು ಹಿಲರಿ ನುಸ್‌ಬೌಮ್ ಅವರನ್ನು ಮದುವೆಯಾದಳು. ಅವರು ರಷ್ಯಾ ವಿರೋಧಿ ವಿಚಾರಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರು ನಂತರ ತಮ್ಮ ಹೆಸರನ್ನು ನಾರ್‌ವುಡ್ ಎಂದು ಬದಲಿಸಿಕೊಂಡರು. ಅವರು ಕೆಮಿಸ್ಟ್ರಿ ಶಿಕ್ಷಕರಾಗಿದ್ದರು. ಶಿಕ್ಷಕರ ಕಾರ್ಮಿಕ ಸಂಘದ ಪದಾಧಿಕಾರಿಯಾಗಿದ್ದರು. ಅಲ್ಲದೆ ಅವರೊಬ್ಬ ಕಮ್ಯುನಿಸ್ಟ್ ಆಗಿದ್ದರು. ಮೆಲಿಟಾ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ಸದಸ್ಯಳಾಗಿದ್ದಳು. ಬಳಿಕ ಕಮ್ಯುನಿಸ್ಟ್ ಪಾರ್ಟಿ ಆಫ್ ಗ್ರೇಟ್‌ಬ್ರಿಟನ್ನಿನ ಸದಸ್ಯೆಯಾದಳು. ಅವಳು ಈ ಪಕ್ಷದ ಸದಸ್ಯಳು ಎಂಬ ಕುರಿತು ಬ್ರಿಟನ್ನಿನ ಅಧಿಕಾರಿಗಳಿಗೆ ಬಹಳಕಾಲದ ವರೆಗೆ ಗೊತ್ತೇ ಇರಲಿಲ್ಲ. ಆ ಸಮಯದಲ್ಲೇ ಕೆಜಿಬಿಯ ಮುಂಚೂಣಿ ಅಂಗಸಂಸ್ಥೆ ಎನ್‌ಕೆವಿಡಿಗೆ ಇವಳ ಹೆಸರನ್ನುಆಂಡ್ರ್ಯೂ ರೋಟ್‌ಸ್ಟೀನ್ ಶಿಫಾರಸು ಮಾಡುತ್ತಾರೆ. ಇವರು ಬ್ರಿಟನ್ನಿನ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದರು. 1937ರಿಂದ ಆಕೆ ಕೆಜಿಬಿಯ ಪೂರ್ಣಾವಧಿ ಏಜೆಂಟ್ ಆಗಿಬಿಟ್ಟಳು. ಅದೇ ವರ್ಷ ಆಕೆ ಮತ್ತು ಆಕೆಯ ಪತಿ ಸೇರಿ ಲಂಡನ್ನಿನ ದಕ್ಷಿಣ ಭಾಗದಲ್ಲಿ ಮನೆಯೊಂದನ್ನು ಖರೀದಿಸುತ್ತಾರೆ. ಮೆಲಿಟಾ 90 ವರ್ಷದವಳಾಗುವವರೆಗೂ ಅದೇ ಮನೆಯಲ್ಲಿ ವಾಸವಿದ್ದಳು. ದಾಂಪತ್ಯ ದೀರ್ಘಕಾಲ ಮುಂದುವರಿಯಿತು.
ಎರಡನೆ ಜಾಗತಿಕ ಯುದ್ಧದ ಸಮಯದಲ್ಲಿ ರಷ್ಯಾಕ್ಕೆ ಮೆಲಿಟಾಳ ನೆರವು ಪ್ರಮುಖವಾಗಿತ್ತು. ಬ್ರಿಟನ್ ಪರಮಾಣು ಬಾಂಬ್ ತಯಾರಿಕೆಯಲ್ಲಿ ಯಾವ ಮೂಲ ವಸ್ತುಗಳು ಉಪಯೋಗಕ್ಕೆ ಬರುತ್ತವೆ ಎಂಬುದರ ಸಂಶೋಧನೆಯಲ್ಲಿ ತೊಡಗಿತ್ತು. ಮುಖ್ಯವಾಗಿ ಯುರೇನಿಯಂ ಬಳಕೆಯ ಬಗ್ಗೆ ಈ ಶೋಧವಿತ್ತು. ಅದರ ಅಂಕಿಅಂಶಗಳನ್ನೆಲ್ಲ ಮೆಲಿಟಾಳ ಬಾಸ್ ಕಚೇರಿಯಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಮೆಲಿಟಾ ಅದನ್ನೆಲ್ಲ ವ್ಯವಸ್ಥಿತವಾಗಿ ಫೋಟೋ ತೆಗೆದು ಸೋವಿಯತ್‌ನ ತನ್ನ ಲಿಂಕ್‌ಗೆ ಕಳುಹಿಸುತ್ತಿದ್ದಳು. ಪರಮಾಣು ಅಸ್ತ್ರ ತಯಾರಿಕೆಯಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‌ಗಳು ಜಂಟಿಯಾಗಿ ಸಂಶೋಧನೆ ನಡೆಸುತ್ತಿದ್ದವು. ಮೆಲಿಟಾಳಿಂದಾಗಿ ಈ ಎರಡೂ ದೇಶಗಳ ರಹಸ್ಯ ಮಾಹಿತಿ ರಷ್ಯಾಕ್ಕೆ ದೊರೆಯಿತು. ಇದರಿಂದಾಗಿಯೇ ರಷ್ಯಾದ ಪರಮಾಣು ಬಾಂಬ್ ತಯಾರಿಕೆಯು ಎರಡು ವರ್ಷ ಮುಂದಾಗಿಯೇ ಸಾಧ್ಯವಾಯಿತು ಎಂದು ಜರ್ಮನಿಯ ವಿಶ್ಲೇಷಕರು ಹೇಳಿದ್ದಾರೆ. ಕೆಲವರು, ಮೆಲಿಟಾಳಿಗೆ ರಹಸ್ಯ ದಾಖಲೆ ಸಿಗದಂತೆ 1949ರಲ್ಲಿಯೇ ಮಾಡಲಾಗಿತ್ತು. ಕಾರಣ ರಷ್ಯಾಕ್ಕೆ ಅವಳಿಂದಾದ ಲಾಭ ಕಡಿಮೆ ಎಂದೂ ಹೇಳುತ್ತಾರೆ.
ಮೆಲಿಟಾ ಏಜೆಂಟ್ ಆಗಿ ನಿಯುಕ್ತಳಾದ ಬಳಿಕ ಲಂಡನ್ನಿನ ವೂಲ್‌ವಿಚ್ ಸ್ಪೈ ರಿಂಗ್‌ನ ಸದಸ್ಯಳಾದಳು. 1938ರ ಜನವರಿಯಲ್ಲಿ ಈ ಸಂಸ್ಥೆಯ ಮೂವರು ಸದಸ್ಯರು ಬಂಧಿಸಲ್ಪಟ್ಟರು. ಅವರಿಗೆ ಮೂರರಿಂದ ಆರು ವರ್ಷಗಳ ವರೆಗೆ ಜೈಲು ಶಿಕ್ಷೆಯಾಯಿತು. ಆದರೆ ಮೆಲಿಟಾಳನ್ನು ಆಗ ಬಂಧಿಸಲಿಲ್ಲ. ಅದೇ ಸುಮಾರಿಗೆ ಮಾಸ್ಕೋದಲ್ಲಿ ಪ್ಲೇಗ್ ರೋಗ ಬಂತು. ಎನ್‌ಕೆವಿಡಿ ವಿದೇಶದಲ್ಲಿಯ ತನ್ನ ಕಾರ್ಯಾಚರಣೆಯನ್ನು ಕೈಬಿಡಬೇಕಾಯಿತು. ಆ ಬಳಿಕ ಮೆಲಿಟಾ ಸಂಪರ್ಕ ಸೋವಿಯತ್ ಒಕ್ಕೂಟದ ಸೇನೆಯ ಸಾಗರೋತ್ತರ ಬೇಹುಗಾರಿಕೆ ಸೇವೆ (ಜಿಆರ್‌ಯು) ಜೊತೆ ಆಯಿತು. ಅವರು ಆಕೆಗೆ ಕಾಲಕಾಲಕ್ಕೆ ಬೇರೆಬೇರೆ ರಹಸ್ಯ ಹೆಸರುಗಳನ್ನು ನೀಡುತ್ತಿದ್ದರು. ಆಕೆಯ ಕೊನೆಯ ಹೆಸರು ಏಜೆಂಟ್ ಹೋಲಾ ಎಂದಿತ್ತು.
ಬ್ರಿಟಿಷ್ ನಾನ್-ಫೆರಸ್ ಮೆಟಲ್ಸ್ ರಿಸರ್ಚ್ ಅಸೋಸಿಯೇಶನ್‌ನ ಇಲಾಖೆಯೊಂದರ ಮುಖ್ಯಸ್ಥರಾಗಿದ್ದ ಜಿ.ಎಲ್.ಬೈಲಿ ಅವರ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಮೆಲಿಟಾಗೆ ಬ್ರಿಟಿಷ್ ಪರಮಾಣು ಶಸ್ತ್ರಗಳ ಯೋಜನೆಯ ವಿವರಗಳನ್ನು ರಷ್ಯಾಕ್ಕೆ ರವಾನಿಸುವುದು ಕಷ್ಟವಾಗಲಿಲ್ಲ. ಬ್ರಿಟಿಷರು ಈ ಯೋಜನೆಗೆ ಟ್ಯೂಬ್ ಅಲಾಯ್ಸ್ ಎಂಬ ರಹಸ್ಯ ಹೆಸರನ್ನು ಇಟ್ಟಿದ್ದರು. ಬೈಲಿ ಟ್ಯೂಬ್ ಅಲಾಯ್ಸ್‌ನ ಸಲಹಾ ಸಮಿತಿಯಲ್ಲಿದ್ದರು. ಬೈಲಿಗೆ ಮೆಲಿಟಾಳ ರಾಜಕೀಯ ಹಿನ್ನೆಲೆಯನ್ನು ವಿವರಿಸಲಾಗಿತ್ತು ಮತ್ತು ಅವಳಿಗೆ ಯಾವ ಮಾಹಿತಿಯನ್ನೂ ತಿಳಿಸದಂತೆ ಎಚ್ಚರಿಸಲಾಗಿತ್ತು.
ಮೆಲಿಟಾ ಕಮ್ಯುನಿಸ್ಟ್ ವಿಚಾರಧಾರೆಗೆ ತನ್ನನ್ನು ಎಷ್ಟೊಂದು ಅರ್ಪಿಸಿಕೊಂಡಿದ್ದಳು ಎಂದರೆ ಆಕೆ ಚಹಾ ಕುಡಿಯುತ್ತಿದ್ದ ಮಗ್ ಮೇಲೆ ಚೇ ಗ್ವುವೆರಾ ಚಿತ್ರವಿತ್ತು. ರಷ್ಯಾಕ್ಕೆ ಸಲ್ಲಿಸಿದ ಸೇವೆಗಾಗಿ 1958ರಲ್ಲಿ ಅವಳಿಗೆ ಆರ್ಡರ್ ಆಫ್ ದಿ ರೆಡ್ ಬ್ಯಾನರ್ ಆಫ್ ಲೇಬರ್ ಎಂಬ ಪ್ರಶಸ್ತಿಯನ್ನು ನೀಡಲಾಗಿತ್ತು. ಅವಳ ನಿವೃತ್ತಿಯ ನಂತರ ಕೆಜಿಬಿ ಅವಳಿಗೆಮಾಸಿಕ 20 ಪೌಂಡ್ ಪಿಂಚಣಿಯನ್ನು ನೀಡುತ್ತಿತ್ತು.
ಮೆಲಿಟಾ ಸುರಕ್ಷಾ ಕಿರಿಕ್ಕು ಎಂಬ ಅಂಶವನ್ನು ಬ್ರಿಟಿಷ್ ಸುರಕ್ಷಾ ಸೇವೆಯು ಅವಳ ನಿವೃತ್ತಿಗೂ ಏಳು ವರ್ಷ ಮುನ್ನ1965ರಲ್ಲಿಯೇ ಗುರುತಿಸಿತ್ತು. ಆದರೆ ಅವಳನ್ನು ಪ್ರಶ್ನಿಸದಿರಲು ನಿರ್ಧರಿಸಿತ್ತು. ಹಾಗೊಮ್ಮೆ ಪ್ರಶ್ನಿಸಿದರೆ ತಮ್ಮ ಪದ್ಧತಿಗಳೆಲ್ಲ ಬಹಿರಂಗವಾಗುತ್ತವೆ ಎಂಬುದು ಅವರ ಆತಂಕವಾಗಿತ್ತು. ಮೆಲಿಟಾ 1972ರಲ್ಲಿ ನಿವೃತ್ತಳಾದಳು. ಆಕೆಯ ಪತಿ 1986ರಲ್ಲಿ ನಿಧನರಾದರು. ತಾನು ಏಜೆಂಟ್ ಆಗಿ ಕೆಲಸ ನಿರ್ವಹಿಸುವುದಕ್ಕೆ ತನ್ನ ಪತಿಯ ಸಮ್ಮತಿ ಇರಲಿಲ್ಲ ಎಂದು ಮೆಲಿಟಾ 1999ರಲ್ಲಿ ಹೇಳಿದಳು. ಅದೇ ವರ್ಷ ಅವಳ ಮುಖವಾಡವನ್ನು ಕಳಚಲಾಗಿತ್ತು. ಆಕೆಯ ಮನೆಯ ನೆರೆಹೊರೆಯವರಿಗೆ ಆಕೆಯ ಎಡಪಂಥೀಯ ನಂಬಿಕೆಗಳು ಗೊತ್ತಿದ್ದರೂ ವಿಷಯ ಬಹಿರಂಗವಾಗುತ್ತಿದ್ದಂತೆ ಆಘಾತಗೊಂಡರು. ಅವರಷ್ಟೇ ಏಕೆ ಆಕೆಯ ಮಗಳೂ ಆಘಾತಕ್ಕೆ ಒಳಗಾಗಿದ್ದಳು.
ಸುಮಾರು ಮೂರು ದಶಕಗಳ ಮೌನದ ಬಳಿಕ ಮೆಲಿಟಾ ನಾರ್‌ವುಡ್‌ಳ ಬೇಹುಗಾರಿಕೆ ಚಟುವಟಿಕೆಗಳನ್ನು ಮೊದಲ ಬಾರಿ ಸಾರ್ವಜನಿಕವಾಗಿ ಬಹಿರಂಗಪಡಿಸಿದವನು ಕೆಜಿಬಿಯ ಮಾಜಿ ಕಾರ್ಯಕರ್ತ ವ್ಯಾಸಿಲಿ ಮಿತ್ರೋಖಿನ್. ಆತನ ಪ್ರಸಿದ್ಧ ಪುಸ್ತಕ, `ದಿ ಮಿತ್ರೋಖಿನ್ ಆರ್ಕೈವ್- ದಿ ಕೆಜಿಬಿ ಇನ್ ಯುರೋಪ್ ಆ್ಯಂಡ್ ದಿ ವೆಸ್ಟ್’ (1999)ಇದರಲ್ಲಿ ಮೆಲಿಟಾಳ ಉಲ್ಲೇಖವಿದೆ. ಈ ಪುಸ್ತಕದ ಸಹ ಬರೆಹಗಾರ ಕ್ರಿಸ್ಟೋಫರ್ ಆಂಡ್ರ್ಯೂ. ಸೋವಿಯತ್ ಒಕ್ಕೂಟ ಕುಸಿದುಬಿದ್ದ ಬಳಿಕ ಮಿತ್ರೋಖಿನ್ ಕೆಜಿಬಿಯಿಂದ ಹೊರಬಂದಿದ್ದ. ಬಾಲ್ಕನ್ ದೇಶವೊಂದರ ಅಮೆರಿಕದ ರಾಯಭಾರ ಕಚೇರಿಯಲ್ಲಿ ಆಶ್ರಿತನಾಗಿದ್ದ. ಅಲ್ಲಿಂದಲೇ ಆತ ಬ್ರಿಟಿಷ್ ಎಂಬಸಿಗೆ ಹೋದ. 1992ರ ಸೆಪ್ಟೆಂಬರ್‌ನಲ್ಲಿ ಆತ ಇಂಗ್ಲೆಂಡಿಗೆ ತೆರಳಿದ ಮತ್ತು ಬ್ರಿಟಿಷ್ ಅಧಿಕಾರಿಗಳಿಗೆ ಆರು ಟ್ರಕ್ ತುಂಬುವಷ್ಟು ಕೆಜಿಬಿಯ ಮಾಹಿತಿಯ ಕಡತಗಳನ್ನು ನೀಡಿದ್ದ. ಆದರೆ ಅದರಲ್ಲಿ ಮೆಲಿಟಾಳ ಹೆಸರು ನೇರವಾಗಿ ಪ್ರಸ್ತಾಪವಾಗಿರಲಿಲ್ಲ. ಅವಳನ್ನು ಏಜೆಂಟ್ ಹೋಲಾ ಎಂದು ಕರೆಯಲಾಗಿತ್ತು. ಆದರೆ ಈ ಏಜೆಂಟ್ ಹೋಲಾ ಯಾರೆಂಬುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಮಿತ್ರೋಖಿನ್‌ಗೆ ಬೇಹುಗಾರಿಕೆ ಇತಿಹಾಸಕಾರ ಪ್ರೊಫೆಸರ್ ಕ್ರಿಸ್ಟೋಫರ್ ಆಂಡ್ರ್ಯೂನ ಸಹಯೋಗ ದೊರೆಯಿತು. ಆತ ಈ ಏಜೆಂಟ್ ಹೋಲಾ ಯಾರೆಂಬುದನ್ನು ಕಂಡುಹಿಡಿದನು.
ಮೆಲಿಟಾ ಕಮ್ಯುನಿಸ್ಟರ ಬಗ್ಗೆ ಸಹಾನುಭೂತಿಯನ್ನು ಹೊಂದಿದವಳು ಎಂಬುದರ ಅರಿವಿತ್ತು. 1999ರಲ್ಲಿ ಅವಳ ಬಗ್ಗೆ ಪ್ರಕಟವಾದ ಪ್ರತ್ಯೇಕ ವರದಿಯಲ್ಲಿ, ಬ್ರಿಟಿಷ್ ಬೇಹುಗಾರಿಕೆಗೆ ಅವಳ ಮಹತ್ವದ ಕುರಿತು ಅರಿವಾಗಿದ್ದು ಮಿತ್ರೋಖಿನ್ ಮಾಹಿತಿ ನೀಡಿದ ಬಳಿಕವಷ್ಟೇ ಎಂದು ಅದರಲ್ಲಿ ಬರೆಯಲಾಗಿತ್ತು. ಇತರ ತನಿಖೆಯನ್ನು ಗೌಪ್ಯವಾಗಿಡುವ ಉದ್ದೇಶದಿಂದ ಅವಳನ್ನು ಪ್ರಶ್ನಿಸದೇ ಇರಲು ನಿರ್ಧರಿಸಲಾಯಿತು. ಕೆಲವರು ಮಿತ್ರೋಖಿನ್‌ನ ಕಡತಗಳಸಾಕ್ಷ್ಯಗಳ ಕ್ರಮಬದ್ಧತೆಯನ್ನೇ ಪ್ರಶ್ನಿಸಿದರು. ಈ ಎಲ್ಲ ಹಿನ್ನೆಲೆಯಲ್ಲಿ ಮೆಲಿಟಾ ಮೇಲೆ ಯಾವುದೇ ಆರೋಪಗಳನ್ನು ಹೊರಿಸಲಿಲ್ಲ. ಮತ್ತು ಅವಳು 2005ರಲ್ಲಿ ಮರಣಹೊಂದಿದಳು.
ಕಮ್ಯುನಿಸ್ಟ್ ಆಗಿದ್ದ ಮೆಲಿಟಾ ನಾರ್‌ವುಡ್, ತಾನು ಭೌತಿಕವಾಗಿ ಯಾವುದೇ ಲಾಭಗಳನ್ನು ತನ್ನ ಬೇಹುಗಾರಿಕೆಯಿಂದ ಪಡೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾಳೆ. ಆಕೆಯ ಹೆಸರು ಬಹಿರಂಗವಾದ ಸಂದರ್ಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಅವಳು, ನಾನು ಏನು ಮಾಡಿದೆನೋ ಅದು ಆಗಿಹೋಗಿರುವ ವಿಷಯ. ಅದರಿಂದ ಯಾವುದೇ ಹಣ ಮಾಡಿಲ್ಲ. ಆದರೆ ಹೊಸದೊಂದು ವ್ಯವಸ್ಥೆಗಾಗಿ ಅಪಾರವಾದ ಹಣವನ್ನು ವೆಚ್ಚಮಾಡುವುದನ್ನು ತಡೆಗಟ್ಟುವುದಕ್ಕೆ ಮತ್ತು ಆ ಹಣವನ್ನು ಬಡವರಿಗೆ, ದೀನರಿಗೆ ಆಹಾರ, ಅಗತ್ಯ ಸೌಲಭ್ಯಗಳಾದ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವುದಕ್ಕೆ ವಿನಿಯೋಗವಾಗಲಿ ಎಂದು ಮಾಡಿದೆ ಎಂದು ಹೇಳಿದಳು. ತನ್ನ ದೇಶದ ವಿರುದ್ಧವೇ ಬೇಹುಗಾರಿಕೆಯನ್ನು ನಡೆಸುವುದು ತಪ್ಪು ಎಂಬುದನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದ ಆಕೆ, ತನ್ನ ಕ್ರಿಯೆಗಳಿಂದ ರಷ್ಯಾವು ಬ್ರಿಟನ್, ಅಮೆರಿಕ ಮತ್ತು ಜರ್ಮನಿಗಳಿಗಿಂತಲೂ ಮುಂದಿರುವುದಕ್ಕೆ ನೆರವಾಗಲಿದೆ ಎಂದು ಹೇಳಿದಳು. 2014ರಲ್ಲಿ ಬಿಡುಗಡೆಯಾದ ಹೊಸ ಕಡತಗಳ ಪ್ರಕಾರ ಕೇಂಬ್ರಿಡ್ಜ್ ಫೈವ್‌ಗಿಂತಲೂ ಕೆಜಿಬಿ ಮೆಲಿಟಾ ನಾರ್‌ವುಡ್ ಅವರನ್ನು ಹೆಚ್ಚು ಮೌಲ್ಯಹೊಂದಿದವಳು ಎಂದು ಪರಿಗಣಿಸಿತ್ತು ಎಂಬುದು ತಿಳಿಯುತ್ತದೆ. 1912ರ ಮಾರ್ಚ್ 25ರಂದು ಜನಿಸಿದ್ದ ಮೆಲಿಟಾ 2005ರ ಜೂನ್ 2ರಂದು ಪ್ರಾಪಂಚಿಕ ವಿವಾದಗಳಿಂದ ದೂರವಾಗಿ ಚಿರ ವಿಶ್ರಾಂತಿಗೆ ತೆರಳಿದಳು.
ಇನ್ನೂ ಹೆಚ್ಚಿನದೆಂದರೆ ಮೆಲಿಟಾಳ ಜೀವನದ ಸಂಗತಿಗಳನ್ನು ಆಧರಿಸಿ ರೆಡ್ ಜಾನ್ ಎಂಬ ಸಿನಿಮಾ 2018ರಲ್ಲಿ ಬಂತು. ಟ್ರೆವರ್ ನನ್ ಇದನ್ನು ನಿರ್ದೇಶಿಸಿದ್ದಾರೆ. ಲಿಂಡ್ಸೆ ಶಪೆರೋ ಇದರ ಚಿತ್ರಕತೆ ಬರೆದಿದ್ದಾರೆ. ಇಂಗ್ಲೆಂಡಿನಲ್ಲಿಯೇ ಇದರ ಚಿತ್ರೀಕರಣ ನಡೆಯಿತು. 2018ರ ಟೊರೆಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇದರ ಪ್ರೀಮಿಯರ್ ಷೋ ನಡೆಯಿತು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.