ಗತ್ತಿನ ವರ್ಣರಂಜಿತ ಗೂಢಚಾರರಲ್ಲಿ ದಕ್ಷಿಣ ಆಫ್ರಿಕದ ಫ್ರೆಡರಿಕ್‌ ಜೌಬರ್ಟ್‌ ಡುಕ್ವೆಸ್ನೆಗೆ ಒಂದು ಸ್ಥಾನ ಇದ್ದೇ ಇದೆ. ದಕ್ಷಿಣ ಆಫ್ರಿಕದಲ್ಲಿ ಹುಟ್ಟಿದ್ದರೂ ಈತ ಜರ್ಮನಿಯ ಸೈನಿಕನಾಗಿದ್ದ, ಬಹುದೊಡ್ಡ ಬೇಟೆಗಾರ ಮತ್ತು ಒಬ್ಬ ಪತ್ರಕರ್ತ ಕೂಡ ಹೌದು. ಈತ ಗೂಢಚಾರನಾಗಿ ಬದಲಾದ ಕತೆಯೇ ಒಂದು ರೋಚಕ. ಫ್ರಿಟ್ಜ್‌ ಎಂದೇ ಸ್ನೇಹಿತರಿಂದ ಕರೆಯಲ್ಪಡುತ್ತಿದ್ದ ಈತ ಜನಿಸಿದ್ದು 1877ರ ಸೆಪ್ಟೆಂಬರ್‌ 21ರಂದು. 1956ರ ಮೇ 24ರ ವರೆಗೆ ಜೀವಿಸಿದ್ದ.
ಎರಡನೆ ಬೋಯೆರ್‌ ಯುದ್ಧದಲ್ಲಿ ಬೋಯೆರ್‌ ಪರವಾಗಿ ಹೋರಾಡಿದ್ದ ಈತ ಎರಡೂ ಜಾಗತಿಕ ಯುದ್ಧದ ಸಮಯದಲ್ಲಿ ಜರ್ಮನಿಯ ಪರವಾಗಿ ಸೀಕ್ರೆಟ್‌ ಏಜೆಂಟ್‌ನಾಗಿ ಕೆಲಸ ಮಾಡಿದ್ದ. ಮಾನವ ಬುದ್ಧಿವಂತಿಕೆಯೆಲ್ಲವೂ ಮೂರ್ತಿವೆತ್ತಂತೆ ಇದ್ದ ಫ್ರಿಟ್ಜ್‌ ಒಂದು ಗೂಢಚಾರರ ಪಡೆಯ ಮುಖಂಡನಾಗಿದ್ದ. ದಕ್ಷಿಣ ಆಫ್ರಿಕ, ಗ್ರೇಟ್‌ ಬ್ರಿಟನ್‌, ಮಧ್ಯ ಮತ್ತು ದಕ್ಷಿಣ ಅಮೆರಿಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬುಡಮೇಲು ಕೃತ್ಯಗಳನ್ನು ಎಸಗಿ ಅಪಾರವಾದ ಹಾನಿಗೆ ಕಾರಣನಾಗಿದ್ದ. ಬಹುರೂಪಿಯಾಗಿದ್ದ ಆತ ಹಲವು ಹೆಸರುಗಳನ್ನು ಹೊಂದಿದ್ದ, ತನ್ನ ವ್ಯಕ್ತಿತ್ವವನ್ನು ಮತ್ತು ಹಿನ್ನೆಲೆಯನ್ನು ಹಲವು ಬಾರಿ ಕತೆಯೊಳಗಿನ ಪಾತ್ರವೆಂಬಂತೆ ಬಿಂಬಿಸಿದ್ದ. ಪಕ್ಕಾ ನಯವಂಚಕನಾಗಿ ತನ್ನ ಕೆಲಸ ಮುಗಿಸಿದ್ದ. ಬೋಯೆರ್‌ ಪರವಾಗಿ ಗೂಢಚರ್ಯೆ ನಡೆಸಿದ್ದ ಈತನನ್ನು ಬ್ಲಾಕ್‌ ಪ್ಯಾಂಥರ್‌ ಎಂದು ಕರೆಯುತ್ತಿದ್ದರು. ಎರಡನೆ ಜಾಗತಿಕ ಯುದ್ಧದ ಸಮಯದಲ್ಲಿ ಈತ ಡುನ್‌ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದನು. ಎಫ್‌ಬಿಐ ಕಡತಗಳಲ್ಲಿ ಇವನನ್ನು ದಿ ಡ್ಯೂಕ್‌ ಎಂದು ಕರೆಯಲಾಗುತ್ತಿತ್ತು. ಇವನನ್ನು ಸೆರೆಹಿಡಿಯಲಾಗಿತ್ತು, ಶಿಕ್ಷೆಯನ್ನೂವಿಧಿಸಲಾಗಿತ್ತು ಮತ್ತು ಈತ ಹಲವು ಬಾರಿ ಸೆರೆಮನೆಯಿಂದ ಪಾರಾಗಿದ್ದನು.
ಎರಡನೆ ಬೋಯೆರ್‌ ಯುದ್ಧವು 1899ರಿಂದ 1902ರ ವರೆಗೆ ನಡೆಯಿತು. ಡಿಕ್ವೆಸ್ನೆಯನ್ನು ಸೆರೆಹಿಡಿಯಲಾಗಿತ್ತು. ಬ್ರಿಟಿಷರು ಮೂರು ಬಾರಿ ಮತ್ತು ಪೋರ್ಚುಗೀಸರು ಒಂದು ಬಾರಿ ಶಿಕ್ಷೆಯನ್ನು ವಿಧಿಸಿದ್ದರೂ. ಅಷ್ಟೂ ಬಾರಿ ಆತ ಸೆರೆಯಿಂದ ತಪ್ಪಿಸಿಕೊಂಡು ಹೋಗಿದ್ದ. ಒಂದು ಬಾರಿಯಂತೂ ಈತ ಬ್ರಿಟಿಷ್‌ ಸೇನೆಯೊಳಗೆ ಹೇಗೋ ಪ್ರವೇಶ ಪಡೆದು ಒಬ್ಬ ಅಧಿಕಾರಿಯೂ ಆಗಿದ್ದ. ಕೇಪ್‌ಟೌನ್‌ನಲ್ಲಿ ಒಂದು ಬುಡಮೇಲು ಕೃತ್ಯವನ್ನು ಎಸಗುವ ತಂಡದ ನೇತೃತ್ವ ವಹಿಸಿದ್ದ. ಅದರಲ್ಲಿ ಕಮಾಂಡರ್‌ ಇನ್‌ ಚೀಫ್‌ ಲಾರ್ಡ್‌ ಕಿಚೆನರ್‌ನ ಹತ್ಯೆಗೆ ಯತ್ನ ನಡೆಯಿತು. ಯಾರೋ ನೀಡಿದ ಮಾಹಿತಿಯಿಂದಾಗಿ ಆ ಯತ್ನ ವಿಫಲವಾಯಿತು. ಎಲ್ಲರೂ ಸೆರೆಯಾದರು. ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಕೇಪ್‌ಟೌನ್‌ ಸೆರೆಮನೆಯಿಂದ ತಪ್ಪಿಸಿಕೊಳ್ಳುವ ಆತನ ಪ್ರಯತ್ನ ವಿಫಲವಾಯಿತು. ಬಳಿಕ ಅವನನ್ನು ಬರ್ಮುಡಾದ ಸೆರೆಮನೆಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಪರಾರಿಯಾದ, ಆ ದೇಶದ ಪ್ರಜೆಯಾದ. ಮೊದಲ ಮಹಾಯುದ್ಧದಲ್ಲಿ ಜರ್ಮನಿಯ ಪರವಾಗಿ ಬೇಹುಗಾರಿಕೆ ನಡೆಸಿದ ಮತ್ತು ರಿಂಗ್‌ ಲೀಡರ್‌ ಆಗಿದ್ದ. ಆಗ ದಕ್ಷಿಣ ಅಮೆರಿಕಕ್ಕೆ ಹೊರಟಿದ್ದ ಬ್ರಿಟಿಷ್‌ ವ್ಯಾಪಾರಿ ಹಡಗುಗಳು ಸ್ಫೋಟಗೊಳ್ಳುವಂತೆ ಮಾಡಿ ಹಲವರ ಸಾವಿಗೆ ಕಾರಣನಾದ. ಆತ ಹಲವು ಬಾರಿ ಹಡಗುಗಳಲ್ಲಿ ವಸ್ತುಗಳನ್ನು ಕಳುಹಿಸಿ ಆ ವಸ್ತುಗಳಿಗೆ ವಿಮೆ ಪಡೆಯುತ್ತಿದ್ದ ಮತ್ತು ಆ ಹಡಗನ್ನು ಮುಳುಗಿಸಿ ವಿಮೆ ಕಂಪನಿಯಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ. 1916ರಲ್ಲಿ ಲಾರ್ಡ್‌ ಕಿಚೆನರ್‌ ಎಚ್‌ಎಂಎಸ್‌ ಹ್ಯಾಂಪ್‌ಶೈರ್‌ ಹಡಗಿನಲ್ಲಿ ರಷ್ಯಾಕ್ಕೆ ಪ್ರಯಾಣಿಸುತ್ತಿದ್ದಾಗ ಅದಕ್ಕೆ ಜರ್ಮನಿಯ ಯು-ಬೋಟ್‌ ಡಿಕ್ಕಿಹೊಡೆಯಿಸಿ ಆತನ ಸಾವಿಗೆ ತಾನೇ ಕಾರಣ ಎಂದು ಈತ ಹೇಳಿಕೊಂಡಿದ್ದ. ಆದರೆ ವಿಧಿವಿಜ್ಞಾನ ಕೇಂದ್ರವು ಇದನ್ನು ಒಪ್ಪಿಲ್ಲ. 1917ರಲ್ಲಿ ಫೆಡರಲ್‌ ಏಜೆಂಟರು ಆತನನ್ನು ನ್ಯೂಯಾರ್ಕ್‌ನಲ್ಲಿ ಬಂಧಿಸಿದರು. ತನಗೆ ಪಾರ್ಶ್ವವಾಯು ಬಡಿದಿದೆ ಎಂದು ಎರಡು ವರ್ಷಗಳ ಕಾಲ ನಟನೆ ಮಾಡಿದ. ಬಳಿಕ ಸೆರೆಮನೆಯ ತನ್ನ ಕೋಣೆಯ ಸರಳುಗಳನ್ನು ಕೊರೆದು ಪರಾರಿಯಾದ. ಈ ಮೂಲಕ ಇಂಗ್ಲೆಂಡಿಗೆ ಗಡಿಪಾರು ಆಗುವುದರಿಂದ ತಪ್ಪಿಸಿಕೊಂಡ. ಒಂದು ವೇಳೆ ಗಡೀಪಾರು ಆಗಿದ್ದರೆ ಇಂಗ್ಲೆಂಡಿನಲ್ಲಿ ಬ್ರಿಟಿಷ್‌ ನಾವಿಕರ ಸಾವಿಗೆ ಕಾರಣನಾದ ಆರೋಪದ ಮೇಲೆ ಆತನಿಗೆ ಗಲ್ಲುಶಿಕ್ಷೆಯಾಗುತ್ತಿತ್ತು. 1932ರಲ್ಲಿ ಫೆಡರಲ್‌ ಏಜೆಂಟರು ಇವನನ್ನು ಮತ್ತೊಮ್ಮೆ ಬಂಧಿಸಿದರು. ಅವನ ಮೇಲೆ ನರಹಂತಕನೆಂಬ ಆರೋಪ ಮತ್ತು ಒಮ್ಮೆ ಜೈಲಿನಿಂದ ಪರಾರಿಯಾದವನು ಎಂಬ ಆರೋಪವನ್ನು ಹೊರಿಸಿದರು. ಯುದ್ಧ ಸಮಯದಲ್ಲಿ ಆದ ಅಪರಾಧಗಳ ವಿಚಾರಣೆಯನ್ನು ಮುಂದುವರಿಸಲು ಬ್ರಿಟನ್‌ ಒಪ್ಪದೇಇದ್ದ ಕಾರಣ ಈ ಬಾರಿ ಆತನ ಬಿಡುಗಡೆಯಾಯಿತು. ಕೊನೆಯಬಾರಿ ಅವನನ್ನು 1941ರಲ್ಲಿ ಬಂಧಿಸಲಾಯಿತು. ಇವನ ಜೊತೆ ಡುಕ್ವೆಸ್ನೆಯ ಸ್ಪೈ ರಿಂಗ್‌ನ ಇತರ 32 ಜನರನ್ನೂ ಬಂಧಿಸಲಾಯಿತು, ವಿಲಿಯಂ ಜಿ. ಸೆಬೋಲ್ಡ್‌ ಎಂಬ ಡಬಲ್‌ ಏಜೆಂಟ್‌ ಎಫ್‌ಬಿಐ ಜೊತೆ ಸೇರಿ ಈ ಬಂಧನ ನಡೆಸಿದ್ದ. ಅಮೆರಿಕದ ಇತಿಹಾಸದಲ್ಲಿಯೇ ಬೇಹುಗಾರಿಕೆಗಾಗಿ ಅತಿ ದೀರ್ಘ ಅವಧಿಯ ಶಿಕ್ಷೆಯನ್ನು ಇವರಿಗೆ ವಿಧಿಸಲಾಯಿತು.
ಯುದ್ಧಗಳ ನಡುವೆ ಡುಕ್ವೆಸ್ನೆ ಅಮೆರಿಕದ ಅಧ್ಯಕ್ಷ ಥಿಯೋಡೋರ್‌ ರೂಸ್ವೆಲ್ಟ್‌ಗೆ ಭಾರೀ ಬೇಟೆಯಾಟದಲ್ಲಿ ಸಲಹೆಗಾರ ಆಗಿದ್ದನು. ಸಿನಿಮಾ ಉದ್ಯಮದಲ್ಲಿ ಪ್ರಚಾರಕನಾಗಿದ್ದನು. ಒಬ್ಬ ಪತ್ರಕರ್ತನಾಗಿದ್ದನು. ಆಸ್ಟ್ರೇಲಿಯಾದಲ್ಲಿ ಯುದ್ಧ ಕತೆಗಳ ನಾಯಕನಾಗಿದ್ದನು ಮತ್ತು ನ್ಯೂಯಾರ್ಕ‌ನಲ್ಲಿ ನ್ಯೂ ಫುಡ್‌ ಸೊಸೈಟಿಯ ಮುಖ್ಯಸ್ಥನಾಗಿದ್ದನು. ಬೋಯೆರ್‌ ಯುದ್ಧದ ಸಮಯದಲ್ಲಿ ಬ್ರಿಟಿಷ‌್‌ ಸೇನೆಯ ಸ್ಕೌಟ್ಸ್‌ ಮುಖ್ಯಸ್ಥ ಫ್ರೆಡೆರಿಕ್‌ ರಸ್ಸೆಲ್‌ ಬರ್ನ್‌ಹ್ಯಾಮ್‌ ಅವರನ್ನು ಕೊಲ್ಲುವುದಕ್ಕೆ ಇವನಿಗೆ ಆದೇಶ ನೀಡಲಾಗಿತ್ತು. ಆದರೆ 1910ರಲ್ಲಿ ಇವನು ಬರ್ನ್‌ಹ್ಯಾಮ್‌ ಮತ್ತು ರೆಪ್‌ ಇಬ್ಬರ ಜೊತೆಯೂ ಕೆಲಸ ಮಾಡಿದನು. ಅಮೆರಿಕದಲ್ಲಿ ಮಾಂಸದ ಕೊರತೆ ತಲೆದೋರಿತ್ತು. ಅದನ್ನು ನೀಗಿಸಲು ನೀರಾನೆಗಳನ್ನು ಲೂಸಿಯಾನಾದ ನೀರಿರುವ ನೆಲೆಗಳಿಗೆ ಆಮದು ಮಾಡಿಕೊಳ್ಳಲು ಹಣವನ್ನು ನೀಡುವಂತೆ ರಾಬರ್ಟ್‌ ಬ್ರೌಸಾರ್ಡ್‌ ಅಮೆರಿಕದ ಕಾಂಗ್ರೆಸ್‌ನಲ್ಲಿ ಲಾಬಿ ಮಾಡುತ್ತಿದ್ದರು. ಡುಕ್ವೆಸ್ನೆ ಬೇರೆಬೇರೆ ಹೆಸರುಗಳಿಂದ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದನು. ತನ್ನ ಪೂರ್ವಜರು ಬಹು ದೊಡ್ಡ ಶ್ರೀಮಂತ ಕುಲೀನರಾಗಿದ್ದರು ಎಂದು ಹೇಳಿಕೊಳ್ಳುತ್ತಿದ್ದನು, ತನಗೆ ತಾನೇ ಸೇನೆಯ ಬಿರುದು ಬಾವಲಿಗಳನ್ನು ಕೊಟ್ಟುಕೊಂಡಿದ್ದನು. ಹಲವು ಜನರೊಂದಿಗೆ ಸಂಪರ್ಕ ಸಾಧಿಸಿದ್ದನು. ಅವನ ಮಾತುಗಳಲ್ಲಿ ಕೆಲವು ವಾಸ್ತವವಿದ್ದರೆ ಕೆಲವು ಕಟ್ಟುಕತೆಗಳಿರುತ್ತಿದ್ದವು.
ಬೋಯೆರ್‌ ಕುಟುಂಬದಲ್ಲಿ ಜನನ-
ಫ್ರಿಟ್ಜ್‌ ಡುಕ್ವೆಸ್ನೆ ಫ್ರಾನ್ಸ್‌ ಮೂಲದ ಒಂದು ಬೋಯೆರ್‌ ಕುಟುಂಬದಲ್ಲಿ ಪೂರ್ವ ಲಂಡನ್ನಿನಲ್ಲಿ 1877ರಲ್ಲಿ ಜನಿಸಿದನು. ಇವನ ತಂದೆ ಅಬ್ರಹಾಂ ಮತ್ತು ತಾಯಿ ಮಿನ್ನಾ ಜೌಬರ್ಟ್‌. ಮಗ ಹುಟ್ಟಿದ ಬಳಿಕ ಅವರು ದಕ್ಷಿಣ ಆಫ್ರಿಕದ ನಿಲ್‌ಟ್ರೂಮ್‌ಗೆ ವಲಸೆ ಹೋದರು. ಅಲ್ಲಿ ಅಬ್ರಹಾಂ ಒಂದು ಹೊಲ ಮಾಡಿದನು. ಜೊತೆಯಲ್ಲಿ ಅವನೊಬ್ಬ ಬೇಟೆಗಾರ ಆಗಿದ್ದನು. ಪ್ರಾಣಿಗಳ ಚರ್ಮ, ದಂತ, ಕೊಂಬು ಇತ್ಯಾದಿಗಳನ್ನು ಮಾರಾಟ ಮಾಡಲು ಸತತ ಪ್ರವಾಸ ಮಾಡುತ್ತಿದ್ದನು. ಯುವಕ ಫ್ರಿಟ್ಜ್‌ ಕೂಡ ತಂದೆಯಂತೆ ಬೇಟೆಗಾರನಾದನು. ಬೇಟೆಯಲ್ಲಿಯ ಅವನ ಕೌಶಲ್ಯವು ಆಫ್ರಿಕದ ಕಾಡಿನಲ್ಲಿ ಮಾತ್ರ ಅವನಿಗೆ ಉಪಯೋಗಕ್ಕೆ ಬಂದದ್ದು ಅಲ್ಲ, ಆತನ ನಂತರದ ಬದುಕಿನಲ್ಲಿ ಅವನು ಲೇಖನಗಳನ್ನು ಬರೆಯುವುದಕ್ಕೆ, ಭಾರೀ ಬೇಟೆಯಾಟದ ಕುರಿತು ಉಪನ್ಯಾಸ ನೀಡುವುದಕ್ಕೆ ಅನುಕೂಲವಾಯಿತು. ತನ್ನ ಆರಂಭದ ಬೇಟೆಯ ದಿನಗಳಲ್ಲಿ ಆತನಿಗೆ ಚಿರತೆಗಳ ಕುರಿತು ಆಸಕ್ತಿ ಮೂಡಿತು. ಕಪ್ಪು ಚಿರತೆಯೊಂದು ಅತ್ಯಂತ ತಾಳ್ಮೆಯಿಂದ ಕೋಣವೊಂದು ಹತ್ತಿರದ ತೊರೆಯಲ್ಲಿ ನೀರು ಕುಡಿಯುವುದಕ್ಕೆ ಬರುವುದನ್ನು ಮತ್ತು ಅದರ ಮೇಲೆ ದಾಳಿ ನಡೆಸಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದುದನ್ನು ಗಮನಿಸಿದನು. ಚಿರತೆಯು ಆತನ ಆದರ್ಶವಾಯಿತು. ಆತನ ಕಾರ್ಯಶೈಲಿಯೂ ಚಿರತೆಯಂತೆಯೇ ಇತ್ತು. ಎರಡನೆ ಬೋಯೆರ್‌ ಯುದ್ಧದ ಸಮಯದಲ್ಲಿ ಡುಕ್ವೆಸ್ನೆ ಕಪ್ಪು ಚಿರತೆ ಎಂದೇ ಪ್ರಸಿದ್ಧನಾಗಿದ್ದನು. ಬೇಹುಗಾರನಾದಬಳಿಕ 1930ರಲ್ಲಿ ಆತನು ತನ್ನ ಎಲ್ಲ ಸಂವಹನವನ್ನು ಜರ್ಮನಿಯ ಜೊತೆ ಮಾಡುವಾಗ ಬೆನ್ನನ್ನು ಕಮಾನು ಆಕಾರ ಮಾಡಿ ಬಾಲವನ್ನು ಎತ್ತರಿಸಿಕೊಂಡ ಸಿಟ್ಟಿನಿಂದ ಕೂಡಿದ ಬೆಕ್ಕಿನ ಒಂದು ಚಿತ್ರವನ್ನು ಬಳಸುತ್ತಿದ್ದನು.
ತನ್ನ 12ನೆ ವಯಸ್ಸಿನಲ್ಲಿ ಫ್ರಿಟ್ಜ್‌ ಡುಕ್ವೆಸ್ನೆ ಮೊದಲ ಕೊಲೆ ಮಾಡುತ್ತಾನೆ. ಝುಲು ಜನಾಂಗದ ಒಬ್ಬ ವ್ಯಕ್ತಿಯು ಅವನ ತಾಯಿಯ ಮೇಲೆ ಹಲ್ಲೆ ಮಾಡುತ್ತಾನೆ. ಅಲ್ಲಿಯೇ ಇದ್ದ ಫ್ರಿಟ್ಜ್‌ ಹಲ್ಲೆಗೆ ಬಂದವನದೇ ಕಿರುಗತ್ತಿಯನ್ನು ಕಸಿದುಕೊಂಡು ಅವನ ಹೊಟ್ಟೆಗೆ ಇರಿಯುತ್ತಾನೆ. ಇದಾದ ಬಳಿಕ ಬಂಟು ಭಾಷೆಯನ್ನು ಮಾತನಾಡುವ ಬುಡಕಟ್ಟು ಜನರ ಗುಂಪೊಂದು ಇವರ ಮೇಲೆ ಹಲ್ಲೆಗೆ ಬರುತ್ತದೆ. ಡುಕ್ವೆಸ್ನೆ ಕುಟುಂಬ ಮತ್ತು ಇತರ ಆರು ಆಶ್ರಿತ ಕುಟುಂಬಗಳು ದೀರ್ಘ ಕಾಲ ಇಂಪಿ ಜನರ ವಿರುದ್ಧ ಹೋರಾಟವನ್ನು ಮಾಡಬೇಕಾಗುತ್ತದೆ. ಇದರಲ್ಲಿ ಫ್ರಿಟ್ಜ್‌ ಹಲವರನ್ನು ಕೊಲ್ಲುತ್ತಾನೆ. ಹೋರಾಟ ಕೊನೆಗೊಂಡಾಗ ಇವನ ಚಿಕ್ಕಪ್ಪ, ಆತನ ಪತ್ನಿ ಮತ್ತು ಅವರ ಮಗು ಸತ್ತುಹೋಗಿರುತ್ತಾರೆ.
ಫ್ರಿಟ್ಜ್‌ಗೆ 13 ವರ್ಷವಾದಾಗ ಅವನನ್ನು ಇಂಗ್ಲೆಂಡಿಗೆ ಶಾಲೆಗೆ ಕಳುಹಿಸುತ್ತಾರೆ. ಅಲ್ಲಿ ಪದವಿಯನ್ನು ಪಡೆದ ಬಳಿಕ ಆತನು ಆಕ್ಸ್‌ಫರ್ಡ್‌ ಯುನಿವರ್ಸಿಟಿಗೆ ಒಂದು ವರ್ಷ ಹೋಗುತ್ತಾನೆ. ನಂತರ ಅವನು ಬ್ರುಸೆಲ್ಸ್‌ನ ಅಕಾಡೆಮಿ ಮಿಲಿಟರೆ ರಾಯಲೆ ಸೇರುತ್ತಾನೆ. ಸ್ವತಃ ಡಿಕ್ವೆಸ್ನೆ ಹೇಳುವ ಪ್ರಕಾರ ಆತ ಶಾಲೆಯನ್ನು ಮುಗಿಸಿದ ಬಳಿಕ ಎಂಜಿನಿರಿಂಗ್‌ ಮಾಡುವುದಕ್ಕೆ ಯುರೋಪಿಗೆ ಕಳುಹಿಸುತ್ತಾರೆ. ಆದರೆ ಅವನಿಗೆ ಹಡಗಿನಲ್ಲಿ ಕ್ರಿಶ್ಚಿಯನ್‌ ಡೆ ವ್ರೈಸ್‌ ಎಂಬ ಸಾಹಸಿಯ ಭೆಟ್ಟಿಯಾಗುತ್ತದೆ. ಅವರಿಬ್ಬರೂ ಜಗತ್ತಿನ ಪ್ರವಾಸ ಹೊರಡುವುದೆಂದು ನಿರ್ಧರಿಸುತ್ತಾರೆ.
1899ರಲ್ಲಿ ಎರಡನೆ ಆಂಗ್ಲೋ-ಬೋಯೆರ್‌ ಯುದ್ಧ ಸಂಭವಿಸಿದಾಗ ಡುಕ್ವೆಸ್ನೆ ದಕ್ಷಿಣ ಆಫ್ರಿಕಕ್ಕೆ ಹಿಂತಿರುಗುತ್ತಾನೆ. ಮತ್ತು ಬೋಯೆರ್‌ ಕಮಾಂಡೋವನ್ನು ಲೆಫ್ಟಿನಂಟ್‌ ಆಗಿ ಸೇರಿಕೊಳ್ಳುತ್ತಾನೆ. ಯುದ್ಧದಲ್ಲಿ ಅವನ ಬಲ ತೋಳಿಗೆ ಗಾಯವಾಗುತ್ತದೆ. ಇವನ ಸಾಹಸದ ಕಾರಣಕ್ಕೆ ಇವನಿಗೆ ಕ್ಯಾಪ್ಟನ್‌ ಎಂದು ಬಡ್ತಿ ಸಿಗುತ್ತದೆ. ಡುಕ್ವೆಸ್ನೆಯನ್ನು ಕೊಲೆನ್ಸೋ ಕದನದಲ್ಲಿ ಬ್ರಿಟಿಷರು ಬಂಧಿಸುತ್ತಾರೆ. ಆದರೆ ಆತ ಡರ್ಬಾನ್‌ನಲ್ಲಿ ತಪ್ಪಿಸಿಕೊಳ್ಳುತ್ತಾನೆ.
ಬಚ್ಚಿಟ್ಟ ಚಿನ್ನ-
ಬ್ರಿಟಿಷ್‌ ಪಡೆಗಳು ಪ್ರಿಟೋರಿಯಾದ ಮೇಲೆ ದಾಳಿಯನ್ನು ತೀವ್ರಗೊಳಿಸಿದಾಗ ಸೆಂಟ್ರಲ್‌ ಬ್ಯಾಂಕಿನಿಂದ ಚಿನ್ನವನ್ನು ತೆಗೆದು ರೈಲಿನ ಮೂಲಕ ಚಿಕ್ಕ ಪಟ್ಟಣ ಮಚಾಡೋಡ್ರಾಪ್‌ಗೆ ಸಾಗಿಸುವುದು ಮತ್ತು ನಂತರ ಅಲ್ಲಿಂದ ರಸ್ತೆಯ ಮೂಲಕ ತಟಸ್ಥ ರಾಷ್ಟ್ರ ಪೋರ್ಚುಗೀಸ್‌ರಿಗೆ ಸೇರಿದ ಪೂರ್ವ ಆಫ್ರಿಕದ ಬಂದರು ಲೌರೆಂಕೋ ಮಾರ್ಕ್ವೆಸ್‌ಗೆ ಸಾಗಿಸುವುದು, ಅಲ್ಲಿಂದ ಹಡಗಿನಲ್ಲಿ ಹಾಲೆಂಡಿಗೆ ಸಾಗಿಸುವುದು ಎಂದು ನಿರ್ಧಾರವಾಗಿರುತ್ತದೆ. ಹಾಲೆಂಡಿನಲ್ಲಿ ಟ್ರಾನ್ಸ್‌ವಾಲ್‌ನಿಂದ ಪರಾರಿಯಾಗಿದ್ದ ಅಧ್ಯಕ್ಷ ಪೌಲ್‌ ಕ್ರುಗೆರ್‌ ಮತ್ತು ಇತರೆ ದೇಶಭ್ರಷ್ಟ ಬೋಯೆರ್‌ ನಾಯಕರಿದ್ದರು. ಅವರ ಬಳಕೆಗೆ ಈ ಚಿನ್ನವನ್ನು ಕಳುಹಿಸುವುದಾಗಿತ್ತು. ಈ ಚಿನ್ನ ಸುಮಾರು 15 ಲಕ್ಷ ಪೌಂಡ್‌ ಅಂದರೆ 6,80,000 ಕಿ.ಗ್ರಾಂ.ಗಳಷ್ಟು ಇತ್ತು. 1900ರ ಮೇ 29ರಿಂದ ಜೂನ್‌4ರ ಅವಧಿಯಲ್ಲಿ ಇದನ್ನು ಸಾಗಿಸಲಾಗಿತ್ತು. ಇವುಗಳಲ್ಲಿ ಒಂದರ ಉಸ್ತುವಾರಿ ಡುಕ್ವೆಸ್ನೆ ಆಗಿದ್ದನು. ಆದರೆ ಈತನ ಉಸ್ತುವಾರಿಯ ರೇಲ್ವೆ ನಿಗದಿತ ಗುರಿಯನ್ನು ತಲುಪಲೇ ಇಲ್ಲ. ಪೋರ್ಚುಗೀಸರ ಪೂರ್ವ ಆಫ್ರಿಕದಲ್ಲಿ ಹಿಂಸಾಚಾರ ನಡೆದಿತ್ತು. ಬೋಯೆರುಗಳಲ್ಲಿಯೇ ಭಿನ್ನಮತ ತಲೆದೋರಿತು. ಹೊಡೆದಾಟ ಕೊನೆಗೊಂಡಾಗ ಉಳಿದವರು ಇಬ್ಬರೇ, ಒಬ್ಬ ಗಾಯಾಳು ಡುಕ್ವೆಸ್ನೆ, ಇನ್ನೊಬ್ಬ ಕೂಲಿ ಟೊಟ್ಟಿ. ಡುಕ್ವೆಸ್ನೆ ಬಂಗಾರವನ್ನೆಲ್ಲ ಹತ್ತಿರದ ಚಿರತೆಯ ಗುಹೆಗೆ ಸಾಗಿಸುತ್ತಾನೆ ಮತ್ತು ಬೋಗಿಗಳನ್ನು ಸುಟ್ಟುಹಾಕುತ್ತಾನೆ. ಅಲ್ಲಿದ್ದ ಎಲ್ಲ ಎತ್ತುಗಳಲ್ಲಿ ಒಂದನ್ನು ಬಿಟ್ಟು ಉಳಿದುದೆಲ್ಲವನ್ನು ಆ ಕೂಲಿಗೆ ಕೊಡುತ್ತಾನೆ ಮತ್ತು ತಾನು ಆ ಎತ್ತನ್ನು ಏರಿ ಅಲ್ಲಿಂದ ಪಲಾಯನ ಮಾಡುತ್ತಾನೆ. ಈ ಅಡಗಿಸಿಟ್ಟ ಚಿನ್ನದ ನಿಧಿಯು ಕ್ರುಗರ್ಸ್‌ ಮಿಲಿಯನ್ಸ್‌ ಎಂದೇ ಹೆಸರಾಗಿತ್ತು. ಸೆಂಟ್ರಲ್‌ ಬ್ಯಾಂಕಿನ ಚಿನ್ನವನ್ನು ಅಡಗಿಸಿಟ್ಟಿದ್ದು ದಂತಕತೆ ಎಂದು ಇತಿಹಾಸಕಾರರು 1995ರಲ್ಲಿ ಹೇಳಿದರು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಡುಕ್ವೆಸ್ನೆ ಬಚ್ಚಿಟ್ಟ ನಿಧಿಯ ಶೋಧ ದಕ್ಷಿಣ ಆಫ್ರಿಕದಲ್ಲಿ ಆಗಿದೆಯಂತೆ.
ಬರ್ಗೆಂಡಾಲ್‌ ಯುದ್ದದ ಸಮಯದಲ್ಲಿ ಡುಕ್ವೆಸ್ನೆ ಮತ್ತೆ ಬೋಯೆರ್‌ ಪಡೆಗಳನ್ನು ಸೇರಿಕೊಂಡನು. ಆದರೆ ಆತನ ತಂಡವು ಪೋರ್ಚುಗೀಸರ ಪೂರ್ವ ಆಫ್ರಿಕ ಪಡೆಯಿಂದ ಸೋಲುತ್ತದೆ. ಎಲ್ಲರೂ ಸೆರೆಯಾಗುತ್ತಾರೆ. ಇವರನ್ನು ಲಿಸ್ಬನ್‌ ಹತ್ತಿರದ ನಿರ್ಬಂಧಿತ ಶಿಬಿರಕ್ಕೆ ಕಳುಹಿಸುತ್ತಾರೆ. ಬದುಕು ಎಂಬುದು ಡುಕ್ವೆಸ್ನೆಯಂಥವರಿಗೆ ಯಾವತ್ತೂ ಒಂದೇ ರೀತಿ ಇರುವುದಿಲ್ಲ. ಕೆಲವೇ ತಿಂಗಳುಗಳಲ್ಲಿ ಆತ ನಲ್ವತ್ತು ವರ್ಷಗಳ ಸುದೀರ್ಘ ಅವಧಿಯ ಬೇಹುಗಾರಿಕೆ ವೃತ್ತಿಯನ್ನು ಆರಂಭಿಸುತ್ತಾನೆ. ಪರಿಸ್ಥಿತಿಯ ಅಗತ್ಯಕ್ಕೆ ತಕ್ಕಂತೆ ತನ್ನನ್ನೇ ತಾನು ಸಿದ್ಧಪಡಿಸಿಕೊಳ್ಳುವಂಥ ಮಾಂತ್ರಿಕ ವ್ಯಕ್ತಿತ್ವ ಆತನದಾಗಿತ್ತು.
ಪ್ಯಾರಿಸ್‌ಗೆ ಪರಾರಿ-
ಪೋರ್ಚುಗಲ್‌ನ ನಿರ್ಬಂಧಿತ ಶಿಬಿರದಲ್ಲಿ ಅಲ್ಲಿಯ ಕಾವಲುಗಾರನೊಬ್ಬನ ಮಗಳನ್ನು ಇವನು ಪ್ರೇಮದ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾನೆ. ಆ ಕಾವಲುಗಾರ ಇವನಿಗೆ ಪ್ಯಾರಿಸ್‌ಗೆ ಪರಾರಿಯಾಗಲು ನೆರವಾಗುತ್ತಾನೆ. ಅಲ್ಲಿಂದ ಆತ ಇಂಗ್ಲೆಂಡಿನ ಆಲ್ಡರ್‌ಶಾಟ್‌ಗೆ ತೆರಳುತ್ತಾನೆ. ಮತ್ತೆ ಅವನು ಹೇಗೋ ಬ್ರಿಟಿಷ್‌ ಸೈನ್ಯವನ್ನು ಒಬ್ಬ ಅಧಿಕಾರಿಯಾಗಿ ಸೇರಿಕೊಳ್ಳುತ್ತಾನೆ. ಯುದ್ಧನಿರತ ದಕ್ಷಿಣ ಆಫ್ರಿಕಕ್ಕೆ 1901ರಲ್ಲಿ ಆತನನ್ನು ಕಳುಹಿಸುತ್ತಾರೆ. ತನ್ನ ತಂದೆಯು ಮಾಡಿದ ತೋಟದ ದಾರಿಯಲ್ಲೇ ಆತ ಸಾಗಿಹೋಗುತ್ತಾನೆ. ಆದರೆ ಅದನ್ನು ಈಗ ಸಂಪೂರ್ಣವಾಗಿ ಉಧ್ವಸ್ಥಗೊಳಿಸಲಾಗಿತ್ತು. ತನ್ನ ತಂಗಿಯನ್ನು ಯಾರೋ ಬಲಾತ್ಕರಿಸಿ ಕೊಲೆ ಮಾಡಿರುವುದನ್ನು ಮತ್ತು ತನ್ನ ತಾಯಿ ಬ್ರಿಟಿಷರ ಶಿಬಿರವೊಂದರಲ್ಲಿ ಸಾಯುವ ಸ್ಥಿತಿಯಲ್ಲಿ ಇದ್ದಾಳೆ ಎಂಬುದನ್ನೂ ತಿಳಿಯುತ್ತಾನೆ. ತನ್ನ ದೇಶದ ಸ್ಥಿತಿ ಮತ್ತು ತನ್ನ ಕುಟುಂಬದ ದುಸ್ಥಿತಿಯು ಅವನಲ್ಲಿಯ ಎಲ್ಲ ದಯೆಯನ್ನು ಹೂತುಹಾಕಿ ಇಂಗ್ಲೆಂಡನ್ನು ದ್ವೇಷಿಸುವ ವ್ಯಕ್ತಿಯಾಗಿ ಬದಲಾಗುವಂತೆ ಮಾಡಿತು. ನಡೆದಾಡುವ, ಜೀವಿಸುವ, ಉಸಿರಾಡುವ, ಬುಸುಗುಟ್ಟುವ, ನಾಶಗೊಳಿಸುವ ದ್ವೇಷದ ದೊಂದಿಯಾಗಿ ಡುಕ್ವೆಸ್ನೆ ಬದಲಾದ.
ಬ್ರಿಟಿಷ್‌ ಅಧಿಕಾರಿಯಾಗಿ ಡುಕ್ವೆಸ್ನೆ ಕೇಪ್‌ಟೌನಿಗೆ ಬಂದವನು ಬ್ರಿಟಿಷರ ಆಯಕಟ್ಟಿನ ನೆಲೆಗಳನ್ನು ನಾಶಗೊಳಿಸಲು ಮತ್ತು ಕಿಚೆನರ್‌ನನ್ನು ಕೊಲ್ಲಲು ಒಂದು ರಹಸ್ಯ ಯೋಜನೆಯನ್ನು ರೂಪಿಸಿದನು. ಆತ 20 ಜನ ಬೋಯೆರುಗಳನ್ನು ನೇಮಕ ಮಾಡಿಕೊಂಡನು. ಆದರೆ ಅವರಲ್ಲಿ ಒಬ್ಬನ ಪತ್ನಿ ದ್ರೋಹ ಬಗೆಯುತ್ತಾಳೆ. 1901ರ ಅಕ್ಟೋಬರ್‌ 11ರಂದು ಕೇಪ್‌ ಕಾಲನಿಯ ಗವರ್ನರ್‌ ಸರ್‌ ವಾಲ್ಟರ್‌ ಹೆಲಿ-ಹಚಿನ್ಸನ್ ಅವರ ರಾತ್ರಿಯೂಟದ ಕೂಟದಲ್ಲಿ ಆತನನ್ನು ಬಂಧಿಸಲಾಯಿತು. ಆತ ಆಗ ಸಮವಸ್ತ್ರದಲ್ಲಿದ್ದ. ಬ್ರಿಟಿಷ್‌ ಸರ್ಕಾರದ ವಿರುದ್ಧ ಒಳಸಂಚು ರೂಪಿಸಿದ್ದು ಮತ್ತು ಬೇಹುಗಾರಿಕೆ ನಡೆಸಿದ ಆರೋಪವನ್ನು ಅವನ ಮೇಲೆ ಹೊರಿಸಲಾಯಿತು. ಆತನಿಗೆ ಕೋರ್ಟ್‌ ಮಾರ್ಷಲ್‌ ನಡೆಸಲಾಯಿತು. ಆತನನ್ನು ಆತನ ಸಹಚರರೊಂದಿಗೆ ಗುಂಡಿಟ್ಟು ಕೊಲ್ಲಬೇಕು ಎಂದು ನಿರ್ಧರಿಸಲಾಯಿತು. ಇವನ ಜೊತೆಯವರಾದ 20 ಜನರನ್ನೂ ಗುಂಡಿಟ್ಟು ಸಾಯಿಸಲಾಯಿತು. ಈ ಶಿಕ್ಷೆಯ ಒಂದು ದಿನ ಮೊದಲು ಈತ ನ್ಯಾಯಾಲಯಕ್ಕೆ ಮಾಡಿಕೊಂಡ ಮನವಿಯ ಮೇರೆಗೆ ಇವನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು. ಇದಕ್ಕೆ ಬದಲಾಗಿ ಡುಕ್ವೆಸ್ನೆ ಬೋಯೆರ್‌ನ ರಹಸ್ಯ ಸಂಕೇತಗಳನ್ನು ಬಿಡಿಸಲು ಮತ್ತು ಅವರ ಕಡತಗಳನ್ನು ಅನುವಾದಿಸಬೇಕು ಎಂಬ ಷರತ್ತು ಈ ಒಪ್ಪಂದಲ್ಲಿ ಇತ್ತು. ಇದಕ್ಕಾಗಿ ಆತ ತುಂಬ ಪರಿತಪಿಸಿದ. ಬದುಕಿನಲ್ಲಿ ಮುಂದೆಂದೂ ಬೋಯರ್‌ಗಳಿಗೆ ಮೋಸ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ. ಆದರೆ ಆತ ಸಂಕೇತಗಳನ್ನು ಬಿಡಿಸುವ ಬದಲಿಗೆ ಹೊಸ ಸಂಕೇತಗಳನ್ನು ಸೃಷ್ಟಿಸಿ ಬ್ರಿಟಿಷರನ್ನು ತಪ್ಪುದಾರಿಗೆ ಎಳೆದ.
ಡುಕ್ವೆಸ್ನೆಯನ್ನು ಕೇಪ್‌ಟೌನಿನ ಕ್ಯಾಸ್ಟಲ್‌ ಆಫ್‌ ಗುಡ್‌ಹೋಪ್‌ನ ಕೋಟೆಯಲ್ಲಿ ಸೆರೆಯಲ್ಲಿಡಲಾಗಿತ್ತು. ಈ ಕೋಟೆಯನ್ನು ಡಚ್ಚರು 1666ರಲ್ಲಿ ಕಟ್ಟಿಸಿದ್ದರು. ಗೋಡೆ ತುಂಬ ದಪ್ಪವಾಗಿತ್ತು. ಹೀಗಿದ್ದರೂ ಡುಕ್ವೆಸ್ನೆ ಕಬ್ಬಿಣದ ಚಮಚವೊಂದರ ಸಹಾಯದಿಂದ ದಿನದಿನವೂ ಪ್ರಯತ್ನಿಸಿ ಸಿಮೆಂಟನ್ನು ತೆಗೆದು ದಾರಿ ಮಾಡಿದ. ಅಲ್ಲಿಂದ ತೆವಳಿ ಈಚೆ ಬಂದ. ಆದರೆ ದೊಡ್ಡ ಕಲ್ಲೊಂದು ಉರುಳಿ ಅವನ ಮೇಲೆ ಬಿತ್ತು. ಪ್ರಜ್ಞೆ ತಪ್ಪಿದ ಅವನು ಮರುದಿನದ ವರೆಗೂ ಅಲ್ಲಿಯೇ ಉಳಿಯಬೇಕಾಯಿತು. ಮರುದಿನ ಕಾವಲುಗಾರನೊಬ್ಬ ಅವನನ್ನು ಕಂಡುಹಿಡಿದ.
ಸಮುದ್ರದಲ್ಲಿ ಈಜಿ ಪರಾರಿ-
ಇದಾದ ಬಳಿಕ ಡುಕ್ವೆಸ್ನೆ ಮತ್ತು ಇತರ ಬೋಯೆರ್‌ ಕೈದಿಗಳನ್ನು ಬರ್ಮುಡಾಕ್ಕೆ ಕಳುಹಿಸಲಾಯಿತು. ಅದೆಂಥ ಪ್ರದೇಶವೆಂದರೆ ಅಲ್ಲಿ ಆಗಾಗ ಬಿರುಗಾಳಿ ಬೀಸುತ್ತಿತ್ತು. ಸುತ್ತಲಿನ ನೀರಿನಲ್ಲಂತೂ ರಕ್ತಪಿಪಾಸು ಶಾರ್ಕ್‌ಗಳು ಬಾಯಿತೆರೆದುಕೊಂಡು ಇರುತ್ತಿದ್ದವು. ಇದೊಂದು ತಪ್ಪಿಸಿಕೊಳ್ಳಲು ಅಸಾಧ್ಯವಾದ, ಯಾವುದೇ ನಿರೀಕ್ಷೆಗಳನ್ನು ಹುಟ್ಟಿಸದ, ಬಿಸಿಲಿನಿಂದ ಕಾಯ್ದ ಮರಳುಗಳ ತೀರಗಳ, ಸುಡುವ ಬಿಸಿಲಿನ ನೆಲೆಯಾಗಿತ್ತು. ಇಲ್ಲಿಂದ ಯಾರೂ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಬ್ರಿಟಿಷರು ತಿಳಿದಿದ್ದರು. ಡುಕ್ವೆಸ್ನೆ ಈ ಮೊದಲು ಹಲವು ಬಾರಿ ಸೆರೆಯಿಂದ ಪರಾರಿಯಾಗಿದ್ದವನು. 1902ರ ಜೂನ್‌ 25ರ ರಾತ್ರಿ ಆತ ತನ್ನ ಶಿಬಿರದಿಂದ ಜಾರಿಕೊಂಡನು. ತಂತಿಗಳ ಬೇಲಿಯನ್ನು ದಾಟಿದನು. ಕೋರೈಸುವ ಕಾವಲು ದೀಪಗಳು ಮತ್ತು ಕಾವಲು ದೋಣಿಗಳನ್ನು ದಾಟಲು ಒಂದೂವರೆ ಮೈಲು ಈಜಿದನು. ಮುಖ್ಯ ದ್ವೀಪದ ದಂಡೆಯನ್ನು ಸೇರಿದನು. ಅಲ್ಲಿಂದ ಅವನು ಬೋಯೆರ್‌ ರಿಲೀಫ್‌ ಕಮಿಟಿಯ ಮುಖಂಡ ಅನ್ನಾ ಮರಿಯಾ ಔಟರ್‌ಬ್ರಿಜ್‌ ಅವರ ಮನೆಯನ್ನು ಸೇರಿದನು. ಔಟರ್‌ಬ್ರಿಜ್‌ ಇವನಿಗೆ ಸೇಂಟ್‌ ಜಾರ್ಜ್‌ ಬಂದರು ತಲುಪಲು ನೆರವಾದರು. ಅಲ್ಲಿ ಇನ್ನೊಬ್ಬ ಬೋಯೆರ್‌ ರಿಲೀಫ್‌ ಕಮಿಟಿಯ ಸದಸ್ಯ ಕ್ಯಾಪ್ಟನ್‌ ಡಬ್ಲ್ಯೂ.ಇ. ಮೇಯರ್‌ ಆ ದ್ವೀಪದಿಂದ ಹೊರಹೋಗುವುದಕ್ಕೆ ವ್ಯವಸ್ಥೆ ಮಾಡುತ್ತಾನೆ. ಒಂದು ವಾರದ ಬಳಿಕ ಡುಕ್ವೆಸ್ನೆ ದೋಣಿಯೊಂದರಲ್ಲಿ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ ತಲುಪುತ್ತಾನೆ.
ಬರ್ಮುಡಾದಿಂದ ತಪ್ಪಿಸಿಕೊಂಡ ಡುಕ್ವೆಸ್ನೆ ನ್ಯೂಯಾರ್ಕ್‌ ಸಿಟಿ ತಲುಪುತ್ತಾನೆ. ಅಲ್ಲಿಯ ನ್ಯೂಯಾರ್ಕ್‌ ಹೆರಾಲ್ಡ್‌ನಲ್ಲಿ ಮತ್ತು ಇತರ ಪತ್ರಿಕೆಗಳಲ್ಲಿ ಪತ್ರಕರ್ತನ ಕೆಲಸ ಗಿಟ್ಟಿಸಿಕೊಂಡು ಸಾಹಸ ಕಥನಗಳನ್ನು ಬರೆಯತೊಡಗಿದನು. ಎರಡನೆಯ ಬೋಯೆರ್‌ ಯುದ್ಧ 1902ರಲ್ಲಿ ಮುಗಿದು ಒಪ್ಪಂದ ಏರ್ಪಟ್ಟರೂ ಡುಕ್ವೆಸ್ನೆಯ ಕುಟುಂಬದವರು ಸಾವಿಗೀಡಾದುದರಿಂದ ಮತ್ತು ಆತನ ಯುದ್ಧಾಪರಾಧಗಳ ಕಾರಣದಿಂದ ಆತನು ದಕ್ಷಿಣ ಆಫ್ರಿಕಕ್ಕೆ ಮರಳಲಿಲ್ಲ. ನ್ಯೂಯಾರ್ಕ್‌ನಲ್ಲಿದ್ದಾಗ ಆತ ಒಂದು ಕಾದಂಬರಿಯನ್ನು ಫ್ರೆಂಚ್‌ ಪತ್ರಿಕೆ ಲೆ ಪೆಟಿಟ್‌ ಬ್ಲೂ'ದಲ್ಲಿ ಪ್ರಕಟಿಸಿದ. ಇನ್ನೆರಡು ಕಾದಂಬರಿಗಳನ್ನು ದಕ್ಷಿಣ ಆಫ್ರಿಕದಲ್ಲಿ ಪ್ರಕಟಿಸಿದ. 1908ರಲ್ಲಿ ಆತಮೆನ್‌ ಆಫ್‌ ಅಮೆರಿಕ’ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಟ್ರಾವೆಲ್ ‌ ಕರೆಸ್ಪಾಂಡೆಂಟ್‌ ಎಂದು ಅವನನ್ನು ಪೋರ್ಟ್‌ ಅರ್ಥರ್‌ಗೆ ರಷ್ಯಾ-ಚೀನಾ ಯುದ್ಧದ ವರದಿ ಮಾಡುವುದಕ್ಕೆ, ರಿಫ್ಫ್‌ ಬಂಡಾಯದ ವರದಿಯನ್ನು ಮಾಡುವುದಕ್ಕೆ ಮೊರಾಕೋಗೆ ಮತ್ತು ಸರ್‌ ಅರ್ಥರ್‌ ಜೋನ್ಸ್‌ ಅವರ ಸಾಹಸ ಯಾತ್ರೆಯಲ್ಲಿ ಸಹಾಯಕನನ್ನಾಗಿ ಬೆಲ್ಜಿಯಂಗೆ ಸೇರಿದ ಕಾಂಗೋಗೆ ಕಳುಹಿಸಲಾಗುತ್ತದೆ. 1910ರಲ್ಲಿ ಆತ ಅಮೆರಿಕದ ಮಹಿಳೆ ಅಲಿಸ್‌ ವೋರ್ಟ್ಲಿಯನ್ನು ಮದುವೆಯಾಗುತ್ತಾನೆ. ಎಂಟು ವರ್ಷದ ಬಳಿಕ ಅದು ವಿಚ್ಛೇದನದಲ್ಲಿ ಕೊನೆಯಾಗುತ್ತದೆ.
ನ್ಯೂ ಫುಡ್‌ ಸಪ್ಲೈ ಸೊಸೈಟಿಯಲ್ಲಿ-
ಎರಡನೆ ಬೋಯೆರ್ ಯುದ್ಧದ ಸಮಯದಲ್ಲಿ ಡುಕ್ವೆಸ್ನೆಗೆ ಬ್ರಿಟಿಷ್‌ ಸೇನೆಯಲ್ಲಿ
ಸ್ಕೌಟ್ಸ್‌ ಮುಖ್ಯಸ್ಥನಾಗಿದ್ದ ಆಕರ್ಷಕ ಅಮೆರಿಕ ವ್ಯಕ್ತಿ ಫ್ರೆಡರಿಕ್‌ ರಸ್ಸೆಲ್‌ ಬರ್ನ್‌ಹ್ಯಾಮ್‌ನನ್ನು ಹತ್ಯೆಮಾಡುವ ಹೊಣೆಯನ್ನು ನೀಡಲಾಗಿತ್ತು. ಯುದ್ಧದ ಬಳಿಕ ಬರ್ನ್‌ಹ್ಯಾಮ್‌ ಬ್ರಿಟನ್ನಿನ ಪರವಾಗಿ ಪ್ರತಿಬೇಹುಗಾರಿಕೆಯನ್ನು ನಡೆಸುತ್ತಿದ್ದನು. ಅದರಲ್ಲೂ ವಿಶೇಷವಾಗಿ ಡುಕ್ವೆಸ್ನೆಯ ಇತಿಹಾಸ ಹುಡುಕುವುದರಲ್ಲಿ ನಿರತನಾಗಿದ್ದನು. 1910ರಲ್ಲಿ ಬರ್ನ್‌ಹ್ಯಾಮ್‌ ಮತ್ತು ಕಾಂಗ್ರೆಸ್‌ನ ರಾಬರ್ಟ್‌ ಬ್ರೌಸರ್ಡ್‌ ನ್ಯೂ ಫುಡ್‌ ಸಪ್ಲೈ ಸೊಸೈಟಿ'ಯನ್ನು ಸ್ಥಾಪಿಸುತ್ತಾರೆ. ಆ ಸೊಸೈಟಿಯ ಮೂಲಕ ಅಮೆರಿಕದಲ್ಲಿ ಉಂಟಾಗಿದ್ದ ಮಾಂಸದ ಕೊರತೆಯನ್ನು ನೀಗಿಸಲುಆಫ್ರಿಕದ ವನ್ಯಜೀವಿಗಳನ್ನು ತರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಬ್ರೌಸರ್ಡ್‌ ಇದಕ್ಕೆ ಡುಕ್ವೆಸ್ನೆಯನ್ನು ಪರಿಣತ ಎಂದು ನೇಮಿಸಿಕೊಳ್ಳುತ್ತಾನೆ. ಈ ಯೋಜನೆಯ ಅಂಗವಾಗಿ ಬ್ರೌಸರ್ಡ್‌ ಅಮೆರಿಕದ ನೀರಾನೆ ಮಸೂದೆಯನ್ನು ಕಾಂಗ್ರೆಸ್‌ನಲ್ಲಿ ಮಂಡಿಸತ್ತಾರೆ. ಎರಡೂವರೆ ಲಕ್ಷ ಡಾಲರ್‌ ಮೌಲ್ಯದ ನೀರಾನೆಗಳನ್ನು ಲೂಸಿಯಾನಾಕ್ಕೆ ಆಮದು ಮಾಡಿಕೊಳ್ಳುವುದು ಅದರ ಉದ್ದೇಶವಾಗಿತ್ತು. ಅಮೆರಿಕದ ಮಾಜಿ ಅಧ್ಯಕ್ಷ ಥಿಯಡೋರ್‌ ರೂಸ್‌ವೆಲ್ಟರು ಈ ಯೋಜನೆಯನ್ನು ಬೆಂಬಲಿಸಿದರು. ವಾಷಿಂಗ್ಟನ್‌ ಪೋಸ್ಟ್‌ ಮತ್ತು ನ್ಯೂ ಯಾರ್ಕ್‌ ಟೈಮ್ಸ್‌ ನೀರಾನೆಯ ಮಾಂಸದ ರುಚಿಯನ್ನು ಮೆಚ್ಚಿಕೊಂಡು ಬರೆದವು. ಆದರೆ ಕಾಂಗ್ರೆಸ್‌ನಲ್ಲಿ ಈ ಮಸೂದೆ ಸ್ವಲ್ಪದರಲ್ಲಿ ಬಿದ್ದುಹೋಯಿತು. ಇದರಿಂದಾಗಿನ್ಯೂ ಫುಡ್‌ ಸಂಸ್ಥೆ’ ಮುಚ್ಚಿಹೋಯಿತು.
ರೂಸ್ವೆಲ್ಟ್‌ಗೆ ಬೇಟೆ ಸಲಹೆಗಾರ-
ಇದೇ ಸಂದರ್ಭದಲ್ಲಿ ಡುಕ್ವೆಸ್ನೆ ಮಾಜಿ ಅಧ್ಯಕ್ಷ ರೂಸ್‌ವೆಲ್ಟ್‌ರ ಖಾಸಗಿ ಶೂಟಿಂಗ್‌ ಇನ್ಸ್‌ಟ್ರಕ್ಟರ್‌ ಆಗುತ್ತಾನೆ ಮತ್ತು ಅವರೊಂದಿಗೆ ಬೇಟೆಯ ಸಾಹಸದಲ್ಲಿ ಜೊತೆಯಾಗುತ್ತಾನೆ. ರೂಸ್‌ವೆಲ್ಟ್‌ರ ಆಫ್ರಿಕದಲ್ಲಿಯ ಬೇಟೆ ಸಾಹಸಗಳ ಬಗ್ಗೆ ಹಲವು ಲೇಖನಗಳನ್ನು ಅವನು ಬರೆದನು. ಆಫ್ರಿಕದಲ್ಲಿಯ ಬಿಳಿ ಜನರ ಸಾಹಸಗಳನ್ನು ಅದರಲ್ಲಿ ವರ್ಣಿಸಲಾಗಿತ್ತು. 1913ರ ಡಿಸೆಂಬರ್‌ನಲ್ಲಿ ಡುಕ್ವೆಸ್ನೆ ಅಮೆರಿಕದ ನಾಗರಿಕನಾಗುತ್ತಾನೆ.
ವ್ಯಾಪಾರಿ ಹಡಗುಗಳ ಸ್ಫೋಟ-
1914ರಲ್ಲಿ ಮಿಡ್‌ವೆಸ್ಟ್‌ನಲ್ಲಿ ಜರ್ಮನ್‌- ಅಮೆರಿಕನ್‌ ಉದ್ಯಮಿಗಳ ಸಭೆಯ ಬಳಿಕ ಡುಕ್ವೆಸ್ನೆ ಜರ್ಮನಿಯ ಬೇಹುಗಾರನಾಗಿ ಬದಲಾಗುತ್ತಾನೆ. ಆತನನ್ನು ಫ್ರೆಡರಿಕ್‌ ಫ್ರೆಡರಿಕ್ಸ್‌ ಎಂಬ ಹೆಸರಿನಲ್ಲಿ ಬ್ರೆಜಿಲ್‌ಗೆ ಕಳುಹಿಸುತ್ತಾರೆ. ಅಲ್ಲಿ ಆತ ರಬ್ಬರ್‌ ಬೆಳೆಯ ಮೇಲೆ ವೈಜ್ಞಾನಿಕ ಸಂಶೋಧನೆ ನಡೆಸುವವನ ವೇಷದಲ್ಲಿರುತ್ತಾನೆ. ನೌಕಾಪಡೆಯ ಬೇಹುಗಾರಿಕೆಗೆ ಒಬ್ಬ ಏಜೆಂಟ್‌ ಆಗಿ ದಕ್ಷಿಣ ಅಮೆರಿಕದಲ್ಲಿ ನೆಲೆಸಿದ ಅವನಿಗೆ ಜರ್ಮನಿಯ ಜೊತೆ ಯುದ್ಧದಲ್ಲಿ ತೊಡಗಿದ ದೇಶಗಳ ವಾಣಿಜ್ಯದ ಸಂಚಾರವನ್ನು ಬುಡಮೇಲು ಮಾಡುವ ಕಾರ್ಯವನ್ನು ವಹಿಸಲಾಗಿತ್ತು. ಜರ್ಮನಿ ದೂತಾವಾಸದ ಮೂಲಕ ಇವನಿಗೆ ಸಂದೇಶಗಳು ತಲುಪುತ್ತಿದ್ದವು ಮತ್ತು ಅವುಗಳ ಮೂಲಕವೇ ಇವನು ತನ್ನ ಸಂದೇಶಗಳನ್ನು ಕಳುಹಿಸುತ್ತಿದ್ದನು. ಇವನು ಹಲವು ಬ್ರಿಟಿಷ್‌ ವ್ಯಾಪಾರಿ ಹಡಗಳು ಸ್ಫೋಟಗೊಳ್ಳುವುದಕ್ಕೆ ಕಾರಣನಾದನು. ತನ್ನ ಬ್ರೆಜಿಲ್‌ನ ನೆಲೆ ಬಹಿಯಾದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಇವನು ಬ್ರಿಟಿಷ್‌ ಹಡಗುಗಳಲ್ಲಿ ಖನಿಜಗಳ ಮಾದರಿಯ ಪೆಟ್ಟಿಗೆಗಳಲ್ಲಿ ಟೈಮ್‌ ಬಾಂಬ್‌ ಇರಿಸುತ್ತಿದ್ದನು. ಈ ರೀತಿ ಅವನು 22 ಹಡಗುಗಳನ್ನು ಸ್ಫೋಟಗೊಳಿಸಿ ಮುಳುಗಿಸುತ್ತಾನೆ. ಅವುಗಳಲ್ಲಿ ಸಾಲ್ಪದೋರ್‌ ಮತ್ತು ಪೆಮ್ಬ್ರೋಕ್‌ಶೈರ್‌ ಹಡಗುಗಳೂ ಸೇರಿದ್ದವು. ಇದಲ್ಲದೆ ಅವನ ಒಂದು ಬಾಂಬ್‌ ಮೂವರು ಬ್ರಿಟಿಷ್ ನಾವಿಕರನ್ನು ಕೊಲ್ಲುತ್ತದೆ. 1916ರ ಫೆಬ್ರವರಿಯಲ್ಲಿ ಎಸ್‌.ಎಸ್‌.ಟೆನ್ನಿಸನ್‌ ಹಡಗು ಹೆಚ್ಚೂಕಡಿಮೆ ಮುಳುಗಿಯೇ ಹೋಗಿತ್ತು. ಮತ್ತೊಂದು ಹಡಗು ವೌಬನ್‌ನಲ್ಲಿ ಬೆಂಕಿಗೆ ಆಹುತಿಯಾಯಿತು. ದಕ್ಷಿಣ ಅಮೆರಿಕದಲ್ಲಿ ಬ್ರಿಟಿಷ್‌ ಬೇಹುಗಾರಿಕೆ ಪಡೆಯ ಕಣ್ಣಿಗೆ ಮಣ್ಣೆರಚುವುದು ಡುಕ್ವೆಸ್ನೆಗೆ ಕಷ್ಟವಾಗಲಿಲ್ಲ. 1916ರ ಮೇ ತಿಂಗಳಿನಲ್ಲಿ ಅವನು ನ್ಯೂ ಯಾರ್ಕ್‌ಗೆ ಮರಳಿದನು. ಈಗ ಅವನು ಜಾರ್ಜ್‌ ಫೋರ್ದಮ್‌ ಮತ್ತು ಫ್ರೆಡರಿಕ್‌ ಫ್ರೆಡರಿಕ್ಸ್‌ ಎಂಬ ಹೆಸರುಗಳನ್ನು ಇಟ್ಟುಕೊಂಡಿದ್ದನು. ಆ ಹೆಸರಿನಲ್ಲಿಯೇ ಅವನು ಹಡಗಿನಲ್ಲಿ ಸರಕುಗಳನ್ನು ತುಂಬಿಸಿದ್ದನು. ಅವುಗಳಿಗೆ ಅವನು ವಿಮೆಯನ್ನು ಮಾಡಿಸಿದ್ದನು. ತನ್ನ ಸರಕು ಫಿಲ್ಮ್ಸ್‌ ಮತ್ತು ಮಿನರಲ್‌ ಸ್ಯಾಂಪಲ್‌ಗಳಿಗೆ ವಿಮೆ ಪರಿಹಾರವನ್ನು ಕೋರಿದನು. ಆದರೆ ವಿಮೆ ಕಂಪನಿಗಳು ಪರಿಹಾರ ನೀಡಲು ಒಪ್ಪಲಿಲ್ಲ. ಅವು ಸ್ವತಂತ್ರ ತನಿಖೆಯನ್ನು ಆರಂಭಿಸಿದವು. ಇದಕ್ಕೆ ಇನ್ನೊಂದು ವರ್ಷವಾಯಿತು. ಟೆನ್ನಿಸನ್‌ಗೆ ಬಾಂಬ್‌ ಆಘಾತವಾದಾಗ ಬ್ರಿಟಿಷ್‌ ಬೇಹುಗಾರಿಕೆ ಸಂಸ್ಥೆ ಎಂಐ5 ತನಿಖೆ ಆರಂಭಿಸಿತು. ಬೌಯರ್‌ ಎಂಬ ವ್ಯಕ್ತಿಯನ್ನು ಅದು ಬಂಧಿಸಿತು. ಆತ ಡುಕ್ವೆಸ್ನೆನೇ ಇದಕ್ಕೆಲ್ಲ ಕಾರಣ. ಆತನೇ ರಿಂಗ್‌ ಲೀಡರ್‌‌ ಎಂದು ಹೇಳಿಬಿಟ್ಟನು. ಡುಕ್ವೆಸ್ನೆಯು ಜಾರ್ಜ್‌ ಫೋರ್ದಮ್‌ ಮತ್ತು ಪಿಯೆಟ್‌ ನಿಯಾಕುಡ್‌ ಎಂಬ ಹೆಸರಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಬೌಯರ್‌ ಬಾಯ್ಬಿಟ್ಟನು. ನಿಯಾಕುಡ್‌ ಎಂಬುದು ಡುಕ್ವೆಸ್ನೆಯನ್ನು ಉಲ್ಟಾ ಹೇಳಿದಂತೆ ಇತ್ತು. ಡುಕ್ವೆನ್ಸೆಯು ಒಬ್ಬ ಜರ್ಮನಿಯ ಬೇಹುಗಾರ ಎಂದು ಎಂಐ5 ದೃಢಪಡಿಸಿತು. ದಕ್ಷಿಣ ಅಮೆರಿಕದ ಜಲ ವ್ಯಾಪ್ತಿಯಲ್ಲಿ ಬ್ರಿಟಿಷರ ನೌಕೆಗಳ ವಿರುದ್ಧ ಹಲವು ಬುಡಮೇಲು ಕೃತ್ಯಗಳನ್ನು ಇವನು ಎಸಗಿದ್ದಾನೆ ಎಂದು ಅದು ಹೇಳಿತು. ಈಗ ಆತನ ಮುಖವಾಡ ಕಳಚಿಬಿದ್ದಿತ್ತು. ಡುಕ್ವೆಸ್ನೆ ಅರ್ಜೆಂಟೀನಾದ ಬ್ಯೂನಸ್‌ ಐರೆಸ್‌ಗೆ ತೆರಳುತ್ತಾನೆ. ಹಲವು ವಾರಗಳ ಬಳಿಕ ಆತ ಪತ್ರಿಕೆಗಳಲ್ಲಿ ತನ್ನದೇ ಸಾವಿನ ಸುದ್ದಿ ಬರುವಂತೆ ನೋಡಿಕೊಂಡನು. ಬೊಲಿವಿಯಾದಲ್ಲಿಯ ಅಮೆಝೋನಿಯ ಮೂಲನಿವಾಸಿಗಳ ಕೈಯಲ್ಲಿ ಈತ ಸತ್ತನೆಂಬ ಸುದ್ದಿ ಬಂತು.
1916ರಲ್ಲಿ ಡುಕ್ವೆಸ್ನೆ ಜರ್ಮನಿಯ ಬೇಹುಗಾರಿಕೆ ಸಂಸ್ಥೆಯ ಆದೇಶದ ಮೇರೆಗೆ ಯುರೋಪಿಗೆ ಹೊರಟನು. ಈಗ ಆತ ರಷ್ಯಾ ದೇಶದವನಾಗಿದ್ದನು. ಹೆಸರು ಡ್ಯೂಕ್‌ ಬೋರಿಸ್‌ ಝಕ್ರೆವ್‌ಸ್ಕಿ. ಆತ ಫೀಲ್ಡ್‌ ಮಾರ್ಷಲ್‌ ಕಿಚೆನರ್‌ ಜೊತೆ ಎಚ್‌ಎಂಎಸ್‌ ಹ್ಯಾಂಪ್‌ಷೈರ್‌ ಹಡಗನ್ನು ಸ್ಕಾಟ್‌ಲೆಂಡಿನಲ್ಲಿ ಏರಿದನು. ಒಮ್ಮೆ ಆತ ಹಡಗನ್ನು ಏರಿದ ಮೇಲೆ ಅದನ್ನು ಮುಳುಗಿಸಿದ ಜರ್ಮನಿಯ ಜಲಾಂತರ್ಗಾಮಿಗೆ ಸಂಕೇತ ಕಳುಹಿಸಿದನು. ಅದರಲ್ಲಿ ಕಿಚೆನರ್‌ ಸಾವಿಗೀಡಾದನು. ಹಡಗನ್ನು ಸ್ಫೋಟಿಸುವ ಪೂರ್ವದಲ್ಲಿ ಡುಕ್ವೆಸ್ನೆ ಒಂದು ಏಣಿಯ ಸಹಾಯದಿಂದ ಅದರಿಂದ ಪಾರಾಗಿದ್ದನು. ಈ ಕೃತ್ಯಕ್ಕಾಗಿ ಆತನಿಗೆ ಐರನ್‌ ಕ್ರಾಸ್‌ ನೀಡಲಾಗಿತ್ತು. ಜರ್ಮನಿಯ ಸಮವಸ್ತ್ರದಲ್ಲಿ ಈ ಪದಕದ ಜೊತೆ ಇನ್ನೂ ಹಲವು ಪದಕಗಳನ್ನು ಧರಿಸಿದ ಅವನ ಫೋಟೋಗಳು ಪ್ರಕಟವಾಗಿದ್ದವು. ಸಾಮಾನ್ಯ ವ್ಯಕ್ತಿಯಾಗಿದ್ದ ಆತ ಜರ್ಮನಿಯ ಸೇನೆಯಲ್ಲಿ ಕರ್ನಲ್‌ ಹುದ್ದೆಯ ವರೆಗೂ ಏರಿದನು.
ಡುಕ್ವೆಸ್ನೆ ಖಚಿತವಾಗಿ ಕಾಣಿಸಿಕೊಂಡ ನಂತರದ ಸ್ಥಳ ವಾಷಿಂಗ್ಟನ್‌ ಡಿ.ಸಿ., 1917ರ ಜುಲೈನಲ್ಲಿ. ಆಗಷ್ಟೇ ಅಮೆರಿಕವು ಜರ್ಮನಿಯ ಮೇಲೆ ಯುದ್ಧವನ್ನು ಸಾರಿತ್ತು. ಈ ಹಿಂದೆ ನೀರಾನೆಯನ್ನು ದಕ್ಷಿಣ ಆಫ್ರಿಕದಿಂದ ಆಮದು ಮಾಡಿಕೊಳ್ಳುವ ಸಂಬಂಧದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಸೆನೇಟರ್‌ ರಾಬರ್ಟ್‌ ಬ್ರೌಸರ್ಡ್‌ ಅವರ ಜೊತೆ ಸಂಪರ್ಕವನ್ನು ಸಾಧಿಸಿದನು. ಡುಕ್ವೆಸ್ನೆ ಒಬ್ಬ ಜರ್ಮನಿಯ ಬೇಹುಗಾರ ಎಂಬುದನ್ನು ಅರಿಯದ ಬ್ರೌಸರ್ಡ್‌ ಅಮೆರಿಕದ ಸೇನೆಯ ಕ್ವಾರ್ಟರ್‌ ಮಾಸ್ಟರ್‌, ಪನಾಮಾ ಕಾಲುವೆಯ ಮಾಜಿ ಮುಖ್ಯ ಎಂಜಿನಿಯರ್‌ ಜನರಲ್‌ ಜಾರ್ಜ್‌ ವಾಷಿಂಗ್ಟನ್‌ ಗೋಯೆಥಲ್ಸ್‌ ಅವರನ್ನು ಪರಿಚಯಿಸಲು ಪ್ರಯತ್ನಿಸಿದನು. ಆದರೆ ಅದರಲ್ಲಿ ಯಶಸ್ಸು ದೊರೆಯಲಿಲ್ಲ. ಡುಕ್ವೆಸ್ನೆ ನೀರಿನಾಳದಲ್ಲಿದ್ದ ವಿದ್ಯುತ್‌ ಕಾಂತೀಯ ಗಣಿಯೊಂದರ ಪೇಟೆಂಟ್‌ಗೆ ಅರ್ಜಿಯನ್ನು ಹಾಕಿಕೊಂಡಿದ್ದ. ಅದನ್ನು ಆತ ಅಮೆರಿಕದ ನೌಕಾಪಡೆಗೆ ಮಾರಾಟ ಮಾಡುವುದಕ್ಕೆ ಪ್ರಯತ್ನಪಟ್ಟನು.
ವಿಮೆ ಕಂಪನಿಗೆ ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಡುಕ್ವೆಸ್ನೆಯನ್ನು ನ್ಯೂಯಾರ್ಕ್‌ನಲ್ಲಿ 1917ರ ನವೆಂಬರ್‌ 17ರಂದು ಬಂಧಿಸಲಾಯಿತು. ಬಂಧನದ ಸಮಯದಲ್ಲಿ ಆತನ ಬಳಿ ಬಾಂಬ್‌ ಸ್ಫೋಟದಲ್ಲಿ ಮುಳುಗಿದ ಹಡಗಳ ಕುರಿತ ವರದಿಗಳ ಪತ್ರಿಕಾ ತುಣುಕುಗಳು ಇದ್ದವು. ಅಲ್ಲದೆ ನಿಕಾರಾಗುವಾದ ಮನಗುವಾದ ಅಸಿಸ್ಟಂಟ್‌ ಜರ್ಮನ್‌ ವೈಸ್‌ ಕೌನ್ಸೆಲ್‌ ಬರೆದ ಪತ್ರವೂ ಸಿಕ್ಕಿತು. ಜರ್ಮನಿಗಾಗಿ ಕ್ಯಾಪ್ಟನ್‌ ಡುಕ್ವೆಸ್ನೆ ಗಣನೀಯ ಸೇವೆ ಸಲ್ಲಿಸಿದ್ದಾನೆ ಎಂದು ಅದರಲ್ಲಿ ಹೊಗಳಲಾಗಿತ್ತು. ಬ್ರಿಟಿಷರು ಕೂಡ ಸಮುದ್ರದಲ್ಲಿ ಮಾಡಿದ ಕೊಲೆ, ಬೆಂಕಿ ಹಚ್ಚಿದ್ದು, ಅಡ್ಮಿರಲ್‌ಗಳ ದಾಖಲೆಗಳನ್ನು ನಕಲಿ ಮಾಡಿದ್ದು, ರಾಣಿಯ ವಿರುದ್ಧ ಒಳಸಂಚು ಮಾಡಿದ ಆರೋಪಗಳ ಮೇಲೆ ಡುಕ್ವೆಸ್ನೆಯನ್ನು ವಿಚಾರಣೆಗೆ ಗುರಿಪಡಿಸಲು ಮುಂದಾಗಿತ್ತು. ಆತನ ಹಸ್ತಾಂತರ ಮಾಡಲು ಅಮೆರಿಕ ಮುಂದಾಗಿತ್ತು. ವಂಚನೆಗಾಗಿ ಆತ ಅಲ್ಲಿ ಶಿಕ್ಷೆಯನ್ನು ಮುಗಿಸಿದ ಬಳಿಕ ವಾಪಸ್ಸು ಅಮೆರಿಕಕ್ಕೆ ಕಳುಹಿಸಬೇಕು ಎಂದು ಅದು ಬಯಸಿತ್ತು.
ಬ್ರಿಟನ್ನಿಗೆ ತನ್ನ ಹಸ್ತಾಂತರದ ನಿರೀಕ್ಷೆಯಲ್ಲಿದ್ದ ಡುಕ್ವೆಸ್ನೆ ತನಗೆ ಪಾರ್ಶ್ವವಾಯು ಬಂದಂತೆ ನಟಿಸತೊಡಗಿದನು. ಆತನನ್ನು ಬೆಲ್ಲೆವೆಯ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ವರ್ಷಗಳ ಕಾಲ ಪಾರ್ಶ್ವವಾಯು ಪೀಡಿತನಂತೆ ನಟಿಸಿದ ಆತ, ಹಸ್ತಾಂತರಕ್ಕೆ ಕೆಲವೇ ದಿನಗಳು ಇರುವಾಗ 1919ರ ಮೇ 25ರಂದು ಹೆಂಗಸಿನಂತೆ ವೇಷ ಮರೆಸಿಕೊಂಡು ಜೈಲಿನ ತನ್ನ ಕೋಣೆಯ ಸರಳುಗಳನ್ನು ಕತ್ತರಿಸಿ, ಎತ್ತರದ ಗೋಡೆಯನ್ನು ಹಾರಿ ಪಾರಾಗಿಬಿಟ್ಟನು.
ಯುದ್ಧದ ಕತೆಗಳನ್ನು ಹೇಳುವವನಾಗಿ-
ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಡುಕ್ವೆಸ್ನೆಗೆ ಜನರನ್ನು ಬುಟ್ಟಿಗೆಹಾಕಿಕೊಳ್ಳಲು ಬೇರೆಬೇರೆ ಹೆಸರುಗಳಲ್ಲಿ ಪರಿಚಯಿಸಿಕೊಳ್ಳುವುದು ಅಗತ್ಯವಾಗಿತ್ತು. ವೇಷಕ್ಕೆ ತಕ್ಕಂತೆ ಹೊಸ ಕತೆಗಳೂ ಅದರ ಜೊತೆ ಹುಟ್ಟಿಕೊಳ್ಳುತ್ತಿದ್ದವು. ಆತ ಸುಂದರನಾಗಿದ್ದ, ಆಕರ್ಷಕ ವ್ಯಕ್ತಿತ್ವದವನಾಗಿದ್ದ, ಬುದ್ಧಿವಂತನಾಗಿದ್ದ, ಹಲವು ಭಾಷೆಗಳನ್ನು ಮಾತನಾಡುತ್ತಿದ್ದ. ಆತ ಎಷ್ಟು ಆಕರ್ಷಕವಾಗಿ ಮಾತನಾಡುತ್ತಿದ್ದನೆಂದರೆ ಯಾವತ್ತೂ ತಾನೇ ಕೇಂದ್ರಬಿಂದುವಾಗಿಬಿಡುತ್ತಿದ್ದ. ಕೆಲವೊಮ್ಮೆ ಆತ ಅಗತ್ಯಕ್ಕಿಂತ ಹೆಚ್ಚು ಮುಂದುವರಿದುಬಿಡುತ್ತಿದ್ದ.
ಮೊದಲನೆ ಮಹಾಯುದ್ಧದ ಬಳಿಕ ಅಮೆರಿಕದ ಜನರಿಗೆ ಡುಕ್ವೆಸ್ನೆಯ ಆಫ್ರಿಕದ ಮಹಾನ್‌ ಬಿಳಿಯ ಬೇಟೆಗಾರ ಮತ್ತು ಆಫ್ರಿಕದ ಸಫಾರಿಗಳ ಕತೆಗಳಲ್ಲಿ ಆಸಕ್ತಿ ಉಳಿಯಲಿಲ್ಲ. ಆತ ನ್ಯೂಯಾರ್ಕ್‌ಗೆ ಮರಳಿದಾಗ ಆತನನ್ನು ಉಪನ್ಯಾಸ ಸರಣಿಯಿಂದ ಕೈಬಿಡಲಾಗಿತ್ತು. ವೇದಿಕೆಯನ್ನು ಮರಳಿ ಪಡೆಯುವುದಕ್ಕೆ ಆತನಿಗೆ ಹೊಸ ಸಾಮಗ್ರಿಗಳು ಬೇಕಾಗಿದ್ದವು. ಜರ್ಮನಿಯ ಬೇಹುಗಾರಿಕೆ ಸಂಸ್ಥೆಯ ನೆರವಿನಿಂದ ಆತ ತನ್ನನ್ನು ತಾನು ಮಿತ್ರ ಪಕ್ಷಗಳ ಯುದ್ಧ ವೀರ ಕ್ಯಾಪ್ಟನ್‌ ಕ್ಲೌಡೆ ಸ್ಟೌವ್ಗ್‌ಟನ್‌ ಎಂಬಂತೆ ಬಿಂಬಿಸಿಕೊಂಡ. ಪಶ್ಚಿಮ ಆಸ್ಟ್ರೇಲಿಯಾದ ಲೈಟ್‌ ಹಾರ್ಸ್‌ ರೆಜಿಮೆಂಟಿನಲ್ಲಿ ಇದ್ದುದಾಗಿಯೂ, ಸದ್ಯ ಇರುವ ಎಲ್ಲರಿಗಿಂತಲೂ ಹೆಚ್ಚು ಯುದ್ಧಗಳನ್ನು ತಾನು ನೋಡಿರುವುದಾಗಿಯೂ ಹೇಳಿಕೊಂಡನು. ರೈಫಲ್‌ನ ತುದಿಯ ಚೂರಿಯಿಂದ ತನಗೆ ಮೂರು ಬಾರಿ ತಿವಿತವಾಗಿದೆಯೆಂದೂ, ನಾಲ್ಕು ಬಾರಿ ಗ್ಯಾಸ್‌ನಿಂದ ತನ್ನನ್ನು ಸಾಯಿಸಲು ಯತ್ನಿಸಿದ್ದಾಗಿಯೂ, ಒಂದು ಬಾರಿ ಕಬ್ಬಿಣದ ಕೊಂಡಿಯೊಂದರಲ್ಲಿ ಸಿಕ್ಕಿಬಿದ್ದುದಾಗಿಯೂ ಕತೆಗಳನ್ನು ಕಟ್ಟಿ ಹೇಳಿದ. ನ್ಯೂಯಾರ್ಕ್‌ನ ಜನರ ಎದುರು ಯುದ್ಧದ ಕತೆಗಳನ್ನು ಹೇಳಲು ಡುಕ್ವೆಸ್ನೆ ಸಮವಸ್ತ್ರ ಧರಿಸಿದ ಸ್ಟೌವ್ಗ್‌ಟನ್‌ ವೇಷದಲ್ಲಿ ಪ್ರೇಕ್ಷಕರ ಮುಂದೆ ಬಂದನು. ಲಿಬರ್ಟಿ ಬಾಂಡ್‌ಗಳ ಮಾರಾಟ ಹೆಚ್ಚಳಕ್ಕೆ ಕಾರಣನಾದನು ಮತ್ತು ರೆಡ್‌ಕ್ರಾಸ್‌ನಂಥ ಸಂಸ್ಥೆಗಳಿಗಾಗಿ ದೇಶಭಕ್ತಿ ಭಾಷಣಗಳನ್ನು ಮಾಡುತ್ತಿದ್ದನು. ಈ ಉದ್ಯೋಗದಿಂದ ಆತನಿಗೆ ಒಳ್ಳೆಯ ಹಣವೂ ಬಂತು, ಶೌರ್ಯದ ಕತೆಗಳಿಂದಾಗಿ ಗೌರವವನ್ನೂ ಪಡೆದನು, ಮಹಿಳೆಯರು ಆತನನ್ನು ಆರಾಧನೆಯ ಭಾವದಿಂದ ಕಾಣತೊಡಗಿದರು.
ಅಲ್ಲಿಂದ ಡುಕ್ವೆಸ್ನೆ ಮೆಕ್ಸಿಕೋ ಮತ್ತು ಯುರೋಪಿಗೆ ತೆರಳಿದನು. 1926ರಲ್ಲಿ ಆತ ಮತ್ತೆ ಅಮೆರಿಕಕ್ಕೆ ಹಿಂತಿರುಗಿದನು. ಈಗ ಆತ ಫ್ರಾಂಕ್‌ ಡೆ ಟ್ರಾಫೋರ್ಡ್‌ ಕ್ರಾವೆನ್‌ ಎಂಬ ಹೆಸರನ್ನು ಹೊಂದಿದ್ದನು. ಜೋಸೆಫ್‌ ಪಿ. ಕೆನ್ನೆಡಿಯ ಫಿಲ್ಮ್‌ ಬುಕಿಂಗ್‌ ಆಫೀಸಿನಲ್ಲಿ ಕೆಲಸ ಗಿಟ್ಟಿಸಿಕೊಂಡನು. ಬಳಿಕ ಪ್ರಚಾರ ಅಧಿಕಾರಿಯಾಗಿ ಆರ್‌ಕೆಓ ಪಿಕ್ಚರ್ಸ್‌ ಸೇರಿದನು. ಈ ನೌಕರಿಯ ಅಂಗವಾಗಿ ಆತ ಮ್ಯಾನ್‌ಹಟನ್‌ಗೆ ಮತ್ತೆ ಬರುವಂತಾಯಿತು. ಅಲ್ಲಿ ಆತ ತನ್ನ ನಿಜನಾಮದಿಂದಲೇ ಹೆಚ್ಚು ಪ್ರಸಿದ್ಧನಾಗಿದ್ದವನು. 1930ರಲ್ಲಿ ಡುಕ್ವೆಸ್ನೆ ಮೂವಿ ಮ್ಯಾಗಝಿನ್‌ ಒಂದರ ತಯಾರಕನಾಗಿ ಕ್ವಿಗ್ಲಿ ಪಬ್ಲಿಷಿಂಗ್‌ ಕಂಪನಿಯನ್ನು ಸೇರಿದನು. ಅಲ್ಲಿ ತನ್ನನ್ನು ಮೇಜರ್‌ ಕ್ರಾವೆನ್‌ ಎಂದು ಪರಿಚಯಿಸಿಕೊಂಡನು.
ಮತ್ತೆ ಬಂಧನ, ಬಿಡುಗಡೆ-
ನ್ಯೂಯಾರ್ಕ್‌ನ ಕ್ವಿಗ್ಲಿ ಕಟ್ಟಡದಲ್ಲಿ ಪೊಲೀಸರು 1932ರ ಮೇ 23ರಂದು ಡುಕ್ವೆಸ್ನೆಯನ್ನು ಬಂಧಿಸುತ್ತಾರೆ. ಆತನ ವಿಚಾರಣೆಯನ್ನು ನಡೆಸುವ ಪೊಲೀಸರು ಆತನನ್ನು ಚೆನ್ನಾಗಿ ತದಕುತ್ತಾರೆ. ಸಮುದ್ರದಲ್ಲಿ ಕೊಲೆಗಳನ್ನು ಮಾಡಿದ ಆರೋಪವನ್ನು ಆತನ ಮೇಲೆ ಹೊರಿಸುತ್ತಾರೆ. ತಾನು ಅವನಲ್ಲ, ತಾನು ನಿಜಕ್ಕೂ ಮೇಜರ್‌ ಕ್ರಾವೆನ್‌ ಎಂದು ಗೋಗರೆಯುತ್ತಾನೆ. ಪೊಲೀಸರು ಕ್ಲೆಮೆಂಟ್‌ ವುಡ್‌ ಎಂಬವರನ್ನು ಆತನನ್ನು ಗುರುತಿಸಲು ಕರೆಸುತ್ತಾರೆ. ತಾನು ಇವನನ್ನು ಐದು ವರ್ಷಗಳಿಂದ ಬಲ್ಲೆ, ಆತ ಡುಕ್ವೆಸ್ನೆ ಅಲ್ಲ ಎಂದು ಕ್ಲೆಮೆಂಟ್‌ ವುಡ್‌ ಹೇಳುತ್ತಾರೆ. ಆದರೆ ಪೊಲೀಸರಿಗೆ ನಂಬಿಕೆ ಬರುವುದಿಲ್ಲ. ಅವರು 1917ರಲ್ಲಿ ಡುಕ್ವೆಸ್ನೆಯನ್ನು ಬಂಧಿಸಿದ್ದ ಏಜೆಂಟ್‌ ಥಾಮಸ್‌ ಜೆ. ಟನ್ನಿಯನ್ನು ಕರೆಸುತ್ತಾರೆ. ಆತ ಡುಕ್ವೆಸ್ನೆಯನ್ನು ಗುರುತಿಸುತ್ತಾನೆ. ಪೊಲೀಸರು ಈಗ ಅವನ ಮೇಲೆ ನರಹಂತಕ ಮತ್ತು ಜೈಲಿನಿಂದ ಪರಾರಿಯಾದ ವ್ಯಕ್ತಿ ಎಂಬ ಆರೋಪವನ್ನು ಹೊರಿಸುತ್ತಾರೆ. ಇವನ ಪರವಾಗಿ ಅರ್ಥರ್‌ ಗ್ಯಾರ್‌ಫೀಲ್ಢ್‌ ಹೇಸ್‌ ವಕಾಲತ್ತು ವಹಿಸುತ್ತಾರೆ. ಇವನ ಮೇಲಿನ ಯುದ್ಧ ಕಾಲದ ಆರೋಪಗಳನ್ನು ವಿಚಾರಣೆ ನಡೆಸುವುದಕ್ಕೆ ಬ್ರಿಟನ್‌ ಆಸಕ್ತಿಯನ್ನು ಕಳೆದುಕೊಂಡಿರುತ್ತದೆ. ಇನ್ನು ಜೈಲಿನಿಂದ ಪರಾರಿಯಾದ ಆರೋಪವಷ್ಟೇ ಇವನ ಮೇಲೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಆತನ ಬಿಡುಗಡೆಯಾಗುತ್ತದೆ.
ನಾಝಿ ಪರ ಕೆಲಸ-
ತನ್ನ ಬಿಡುಗಡೆಯ ಬಳಿಕ ಡುಕ್ವೆಸ್ನೆ ಕ್ವಿಗ್ಲಿ ಕುಟುಂಬದ ಜೊತೆ ಇರುತ್ತಾನೆ. ತಾನು ಹಡಗುಗಳನ್ನು ಹೇಗೆ ಉಡಾಯಿಸಿದೆ ಎಂಬುದನ್ನು ಸುದೀರ್ಘವಾಗಿ ಆತ ವಿವರಿಸುತ್ತಿದ್ದನು. 1934ರ ಬೇಸಿಗೆಯಲ್ಲಿ ಡುಕ್ವೆಸ್ನೆ ಅಮೆರಿಕದಲ್ಲಿದ್ದ ನಾಝಿ ಪರ ಸಂಘಟನೆಯ ಬೇಹುಗಾರಿಕೆ ಅಧಿಕಾರಿಯಾದನು. 1935ರ ಜನವರಿಯಲ್ಲಿ ಆತ ಅಮೆರಿಕ ಸರ್ಕಾರದ ಕಾರ್ಯಗಳ ಪ್ರಗತಿ ಆಡಳಿತದ ಪರವಾಗಿ ಕೆಲಸ ಆರಂಭಿಸಿದನು. ಜರ್ಮನಿಯ ಮಿಲಿಟರಿ ಬೇಹುಗಾರಿಕೆ ವಿಭಾಗದ ಮುಖ್ಯಸ್ಥ ಅಡ್ಮಿರಲ್‌ ವಿಲ್‌ಹೆಲ್ಮ್‌ ಕ್ಯಾನರಿಸ್‌ಗೆ ಡುಕ್ವೆಸ್ನೆ ಮೊದಲ ಮಹಾಯುದ್ಧದಲ್ಲಿ ಮಾಡಿದ ಕೆಲಸಗಳ ಮಾಹಿತಿ ಇತ್ತು. ಆತ ಅಮೆರಿಕದಲ್ಲಿದ್ದ ಬೇಹುಗಾರಿಕೆ ಪಡೆಯ ಮುಖ್ಯಸ್ಥ ಕರ್ನಲ್‌ ನಿಕೋಲಸ್‌ ರಿಟ್ಟರ್‌ಗೆ ಡುಕ್ವೆಸ್ನೆಯ ಸಂಪರ್ಕ ಬೆಳೆಸಲು ಸೂಚಿಸಿದನು. ರಿಟ್ಟರ್‌ ಮತ್ತು ಡುಕ್ವೆಸ್ನೆ 1931ರಲ್ಲಿ ಒಟ್ಟಿಗೆ ಕೆಲಸ ಮಾಡದವರು. ಈ ಇಬ್ಬರೂ ಬೇಹುಗಾರರು 1937ರ ಡಿಸೆಂಬರ್‌ 3ರಂದು ನ್ಯೂಯಾರ್ಕ್‌ನಲ್ಲಿ ಜೊತೆಯಾಗುತ್ತಾರೆ. ರಿಟ್ಟರ್‌ ಇತರ ಹಲವು ಯಶಸ್ವಿ ಬೇಹುಗಾರರನ್ನು ತನ್ನ ಪಡೆಗೆ ನೇಮಕ ಮಾಡಿಕೊಳ್ಳುತ್ತಾನೆ. ಈ ನೇಮಕದಲ್ಲಿ ಒಂದು ತಪ್ಪು ನುಸುಳುತ್ತದೆ, ಮುಂದೆ ಡಬ್ಬಲ್‌ ಏಜೆಂಟ್‌ ಅಗಿ ಕಾರ್ಯನಿರ್ವಹಿಸಿದ ವಿಲಿಯಂ ಸೆಬೋಲ್ಡ್‌ ಕೂಡ ಒಬ್ಬನಾಗಿರುತ್ತಾನೆ. 1940ರ ಫೆಬ್ರವರಿ 8ರಂದು ರಿಟ್ಟರ್‌ ಸೆಬೋಲ್ಡ್‌ನನ್ನು ಹ್ಯಾರಿ ಸವೇರ್‌ ಎಂಬ ಹೆಸರಿನಲ್ಲಿ ನ್ಯೂಯಾರ್ಕ್‌ಗೆ ಕಳುಹಿಸುತ್ತಾನೆ. ಆತನಿಗೆ ಒಂದು ಶಾರ್ಟ್‌ವೇವ್‌ ರೇಡಿಯೋ ಟ್ರಾನ್ಸ್‌ಮಿಟ್ಟಿಂಗ್‌ ಸ್ಟೇಶನ್‌ ಸ್ಥಾಪಿಸಲು ಸೂಚಿಸುತ್ತಾನೆ. ಆ ಮೂಲಕ ಜರ್ಮನಿಯ ಶಾರ್ಟ್‌ವೇವ್‌ ಸ್ಟೇಶನ್‌ ಜೊತೆ ಸಂಪರ್ಕ ಸಾಧಿಸಬಹುದು ಎಂಬುದು ಆತನ ಯೋಜನೆಯಾಗಿರುತ್ತದೆ. ಆತನಿಗೆ ಟ್ರಾಂಪ್‌ ಎಂಬ ಸಂಕೇತ ಹೆಸರನ್ನು ನೀಡಿ ಡುನ್‌ ಎಂಬ ಸಂಕೇತ ನಾಮದ ಡುಕ್ವೆಸ್ನೆಯನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ.
ಡುಕ್ವೆಸ್ನೆಯ ಸ್ಪೈ ರಿಂಗ್‌ ಸೆಬೋಲ್ಡ್‌ ಮೂಲಕ ಎಫ್‌ಬಿಐಗೆ ಪತ್ತೆಯಾಗುತ್ತದೆ. ಡುಕ್ವೆಸ್ನೆಯ ಮೇಲೆ ನಿಗಾ ಇಡಲು ಎಫ್‌ಬಿಐ ಏಜೆಂಟ್‌ ನೆರ್ವಿಕ್‌ನನ್ನು ನೇಮಿಸುತ್ತದೆ. ಡುಕ್ವೆಸ್ನೆ ವಾಸಿಸುತ್ತಿದ್ದ ಅಪಾರ್ಟ್‌ಮೆಂಟಿನ ಮೇಲ್ಭಾಗದಲ್ಲಿಯೇ ಒಂದು ಕೋಣೆಯನ್ನು ಆತನಿಗೆ ಒದಗಿಸಲಾಗುತ್ತದೆ. ಆತ ಡುಕ್ವೆಸ್ನೆಯ ಕೋಣೆಯಲ್ಲಿ ಮೈಕ್ರೋಫೋನ್‌ ಅಡಗಿಸಿಟ್ಟು ಆತನ ಸಂಭಾಷಣೆಯನ್ನು ದಾಖಲಿಸಿಕೊಳ್ಳಲು ಯತ್ನಿಸುತ್ತಾನೆ. ಆದರೆ ಡುಕ್ವೆಸ್ನೆಯ ಚಟುವಟಿಕೆಗಳನ್ನು ನಿರ್ವಹಿಸುವುದು ತುಂಬ ಕಠಿಣವೆಂಬುದು ಆಗ ತಿಳಿಯಿತು. ಆತನಿಗೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಬಂದಾಗ ಲೋಕಲ್‌ ಟ್ರೇನಿನಲ್ಲಿ ಹೋಗುತ್ತಿದ್ದವನು ಮಧ್ಯದಲ್ಲೇ ಇಳಿದು ಎಕ್ಸ್‌ಪ್ರೆಸ್‌ ಟ್ರೇನು ಹತ್ತುತ್ತಿದ್ದನು. ತಿರುಗುವ ಬಾಲಿಲಿನಿಂದ ಹಾಯ್ದು ನೇರ ನಡೆದು ಬಲಕ್ಕೆ ತಿರುಗಿ ಎಲಿವೇಟರ್‌ ಬಳಸಿ ಯಾವುದೋ ಮಹಡಿಗೆ ಹೋಗಿ ಮೆಟ್ಟಿಲಿಳಿದು ನೆಲಮಹಡಿಗೆ ಬರುತ್ತಿದ್ದನು. ಕಟ್ಟಡದೊಳಗೆ ಪ್ರವೇಶಿಸಲು ಆತ ಬೇರೆಬೇರೆ ಪ್ರವೇಶ ದ್ವಾರಗಳನ್ನು ಬಳಸುತ್ತಿದ್ದನು. ತನ್ನನ್ನು ಹಿಂಬಾಲಿಸಿದ ಒಬ್ಬ ಎಫ್‌ಬಿಐ ಏಜೆಂಟನ ಜೊತೆ ಇವನ ಮುಖಾಮುಖಿಯೂ ಆಗಿತ್ತು. ಸುದೀರ್ಘಕಾಲ ಬೇಹುಗಾರನಾಗಿಯೇ ಇದ್ದ ಆತನಿಗೆ ಇವೆಲ್ಲ ಕರತಲಾಮಲಕವಾಗಿದ್ದವು. ಮೊದಲ ಬಾರಿ ಸೆಬೋಲ್ಡ್‌ನ ಕಚೇರಿಗೆ ಬಂದ ಆತ ರೂಮನ್ನೆಲ್ಲ ಕೂಲಂಕಷವಾಗಿ ಪರಿಶೀಲನೆ ಮಾಡಿದನು. ಎಲ್ಲಿ ಏನನ್ನಾದರೂ ಅಡಗಿಸಿಟ್ಟಿದ್ದಾರೆಯೇ ಎಂದು ನೋಡಿದನು. ಕನ್ನಡಿಯ ಹಿಂಭಾಗ, ಕೋಣೆಯ ಮೂಲೆಗಳನ್ನೆಲ್ಲ ಪರಿಶೀಲಿಸಿದ. ಎಲ್ಲವೂ ಸುರಕ್ಷಿತವಾಗಿದೆ ಎಂದು ಮನದಟ್ಟಾದ ಬಳಿಕವೇ ಆತ ತನ್ನ ಪ್ಯಾಂಟನ್ನು ಮೇಲಕ್ಕೆ ಸರಿಸಿ ಕಾಲುಚೀಲದಲ್ಲಿ ಅಡಗಿಸಿಟ್ಟುಕೊಂಡಿದ್ದ ದಾಖಲೆಯನ್ನು ಸೆಬೋಲ್ಡ್‌ಗೆ ನೀಡಿದನು. ಅದರಲ್ಲಿ ಎಂ1 ಗ್ರಾಂಡ್‌ ಸೆಮಿ-ಅಟೋಮೆಟಿಕ್‌ ರೈಫಲ್‌ನ ಸ್ಕೆಚ್‌ ಇತ್ತು. ಮತ್ತೊಂದು ಹಗುರ ಟ್ಯಾಂಕ್‌ನ ವಿನ್ಯಾಸ, ನೌಕಾಪಡೆಯ ಮೊಸ್ಕಿಟೋ ಬೋಟ್‌ನ ಫೋಟೋ, ಗ್ರೆನೇಡ್‌ ಲಾಂಚರ್‌ನ ಒಂದು ಫೋಟೋ, ಅಮೆರಿಕದ ಟ್ಯಾಂಕುಗಳ ಕುರಿತು ವಿವರಣೆಗಳು ಇದ್ದವು. ಈ ಮೊದಲು ಬುಡಮೇಲು ಕೃತ್ಯಗಳನ್ನು ತಾನು ಹೇಗೆ ಎಸೆಗುತ್ತಿದ್ದೆ ಎಂಬುದನ್ನು, ಅವನ್ನು ಈಗ ಹೇಗೆ ಬಳಸಬಹುದು ಎಂಬುದನ್ನು, ತನ್ನ ಪ್ಯಾಂಟಿನ ಕಿಸೆಯಲ್ಲಿಯೇ ಅಡಗಿಸಿಟ್ಟುಕೊಳ್ಳಬಹುದಾದ ಚಿಕ್ಕದಾದ ಬಾಂಬ್‌ ಹೇಗೆ ದೊಡ್ಡ ಅನಾಹುತ ಮಾಡಬಹುದು ಎಂಬುದನ್ನು ವಿವರಿಸಿದನು.
ಎರಡು ವರ್ಷಗಳ ತನಿಖೆಯ ಬಳಿಕ 1941ರ ಜೂನ್‌ 28ರಂದು ಡುಕ್ವೆಸ್ನೆ ಮತ್ತು ಇತರ 32 ಬೇಹುಗಾರರನ್ನು ಎಫ್‌ಬಿಐ ಬಂಧಿಸಿತು. ಅಮೆರಿಕದ ಶಸ್ತ್ರಾಸ್ತ್ರಗಳ ಕುರಿತು ಜರ್ಮನಿಗೆ ಮಾಹಿತಿಯನ್ನು ನೀಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು. 1942ರ ಜನವರಿ 2ರಂದು ಜಪಾನ್‌ ಅಮೆರಿಕದ ಪರ್ಲ್‌ ಬಂದರಿನ ಮೇಲೆ ದಾಳಿಮಾಡಿದಾಗ ಮತ್ತು ಜರ್ಮನಿಯು ಅಮೆರಿಕದ ಮೇಲೆ ಯುದ್ಧವನ್ನು ಘೋಷಿಸಿದ ಒಂದು ತಿಂಗಳೊಳಗೇ ಡುಕ್ವೆಸ್ನೆ ಬೇಹುಗಾರಿಕೆ ತಂಡದ 33 ಸದಸ್ಯರಿಗೂ 300 ವರ್ಷಗಳಿಗೂ ಅಧಿಕ ಅವಧಿಯ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಲಾಯಿತು. ಅಮೆರಿಕದ ಇತಿಹಾಸದಲ್ಲಿಯೇ ಇದೊಂದು ಸುದೀರ್ಘ ಬೇಹುಗಾರಿಕೆ ಪ್ರಕರಣ ಎಂದು ದಾಖಲಾಗಿದೆ. ಏಕಕಾಲದಲ್ಲಿ 33 ಜನ ಬೇಹುಗಾರರನ್ನು ಬಂಧಿಸಿದ್ದೂ ಅಮೆರಿಕದ ಇತಿಹಾಸದಲ್ಲಿ ಒಂದು ದಾಖಲೆಯೇ. ಇವರ ಬಂಧನವು ಜರ್ಮನಿಗೆ ಬಹುದೊಡ್ಡ ಹೊಡೆತವನ್ನು ನೀಡಿತು. ಅಮೆರಿಕದ ಗ್ಯಾಸ್‌ ಮಾಸ್ಕ್‌, ಸೋರದಂಥ ಇಂಧನ ಟ್ಯಾಂಕ್‌, ವಿಮಾನಗಳಿಗಾಗಿ ಚಿಕ್ಕ ಬಾಂಬ್‌ಗಳು ಮೊದಲಾದ ಅತ್ಯಮೂಲ್ಯ ಮಾಹಿತಿಯನ್ನು ಡುಕ್ವೆಸ್ನೆ ಜರ್ಮನಿಗೆ ಒದಗಿಸಿದ್ದನು.
64 ವರ್ಷಗಳ ಡುಕ್ವೆಸ್ನೆ ಈ ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಆತನಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೆ ಇನ್ನೊಂದು 2 ವರ್ಷಗಳ ಜೈಲು ಮತ್ತು 2 ಸಾವಿರ ಡಾಲರ್‌ ದಂಡ ವಿಧಿಸಲಾಗಿತ್ತು. 14 ವರ್ಷ ಶಿಕ್ಷೆ ಅನುಭವಿಸಿದ ಬಳಿಕ 1954ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅವನನ್ನು ಬಿಡುಗಡೆ ಮಾಡಲಾಯಿತು. ಅದೇ ವರ್ಷ ಆತ ತನ್ನ ಕೊನೆಯ ಉಪನ್ಯಾಸ – ಜೈಲಿನ ಒಳಗೆ ಮತ್ತು ಹೊರಗೆ ನನ್ನ ಜೀವನ- ನೀಡಿದನು.
ಫ್ರಿಡ್ಜ್‌ ಡುಕ್ವೆಸ್ನೆ ವೆಲ್ಫೇರ್‌ ದ್ವೀಪದ ಸಿಟಿ ಹಾಸ್ಪಿಟಲ್‌ನಲ್ಲಿ ತನ್ನ 78ನೆ ವಯಸ್ಸಿನಲ್ಲಿ 1956ರ ಮೇ 24ರಂದು ಇಹ ಲೋಕದ ತನ್ನ ವರ್ಣರಂಜಿತ ಬದುಕಿಗೆ ವಿದಾಯ ಹೇಳಿದನು. ಈತನ ಜೀವನ ಆಧರಿಸಿದ ಹಲವು ಕೃತಿಗಳು, ಸಿನಿಮಾಗಳು ವಿವಿಧ ಭಾಷೆಗಳಲ್ಲಿ ಬಂದಿವೆ.