ಕೆ.ಸತ್ಯನಾರಾಯಣ ಅವರ ಕಪಾಳಮೋಕ್ಷ ಪ್ರವೀಣ

ತಮ್ಮ ನಿರಂತರ ಬರೆಹಗಳಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತಿರುವ ಕೆ.ಸತ್ಯನಾರಾಯಣ ಅವರು ಇದೀಗ ಕಪಾಳಮೋಕ್ಷ ಪ್ರವೀಣ' ಎಂಬ ನೂತನ ಕೃತಿಯಲ್ಲಿ ಕೆಲವು ಸ್ವಭಾವ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಈ ಬರೆಹಗಳ ಹೊಳಹು ಹೊಳೆದದ್ದು ಡಿವಿಜಿಯವರಜ್ಞಾಪಕ ಚಿತ್ರಶಾಲೆ’ ಎಂಬ ಕೃತಿಯಿಂದ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಹಾಗೆಯೇ ಜಾರ್ಜ್‌ ಆರ್ವೆಲ್ಲರ ಬರೆಹಗಳೂ ಅವರ ಮೇಲೆ ಪ್ರಭಾವ ಬೀರಿರಬಹುದು. ತುದಿವಾದಿಗಳು' ಬರೆಹದಲ್ಲಿ ಅವರು ಆರ್ವೆಲ್‌ರ,ಒಬ್ಬ ಮನುಷ್ಯ ನಮಗೆ ವೈಯಕ್ತಿಕ ಸ್ತರದಲ್ಲಿ ಪರಿಚಯವಾದಮೇಲೆ, ಆತ್ಮೀಯತೆ ಮೂಡಿದ ಮೇಲೆ, ಅವನ ವಿಚಾರಗಳನ್ನು ಕಟ್ಟಿಕೊಂಡು ಏನಾಗಬೇಕು? ಮನುಷ್ಯರನ್ನು ನಾವು ಪ್ರೀತಿಸುವುದು ಅವರ ಓರೆ ಕೋರೆಗಳಿಗೆ, ವಕ್ರತೆಗೆ, ವಿಶಿಷ್ಟತೆಗೆ, ನಿರ್ದಿಷ್ಟ ಸ್ವಭಾವಕ್ಕೇ ಹೊರತು ಕೇವಲ ವಿಚಾರಗಳಿಗಲ್ಲ’ ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ಸ್ವಭಾವಚಿತ್ರಗಳನ್ನು ರೇಖಿಸುವ ಸೃಷ್ಟಿಕ್ರಿಯೆಯ ಹಿಂದೆ ಈ ವಿಚಾರ ತಳಹದಿಯಾಗಿರುವುದನ್ನು ಇಲ್ಲಿ ನಾವು ಗುರುತಿಸಬಹುದಾಗಿದೆ. ಯಾವ ಮನುಷ್ಯನಿಗೂ ಅವನ ಸ್ವಭಾವದಿಂದ ಎಂದೂ ಬಿಡುಗಡೆಯಾಗುವುದಿಲ್ಲ. ಕೊನೆಗೂ ಈ ಭೀತಿಯಿಂದ ವಿಸರ್ಜನೆಗೆ ಒಳಗಾಗುವುದು ಮನುಷ್ಯನೇ ಹೊರತು, ಮನುಷ್ಯನ ಸ್ವಭಾವವಲ್ಲ ಎಂಬ ತಿಳಿವಳಿಕೆ'ಯ ಸಹಜ ಅರಿವಿನೊಂದಿಗೆ ಬರೆದಿರುವ ಕೃತಿ ಇದು. ಸ್ವಭಾವಚಿತ್ರಗಳಂಥ ಬರೆಹಗಳನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಬರೆದಿದ್ದರು. ಹಳ್ಳಿಯ ಚಿತ್ರಗಳು' ಅವರ ಅಂಥ ಒಂದು ಕೃತಿ. ಅದರಲ್ಲಿಯ ಸಾಲು ಸಾಬಿ' ಎಂಬ ಒಂದು ಪಾಠ ನಮಗೆ ಹೈಸ್ಕೂಲಿನಲ್ಲಿ ಇತ್ತು. ಹಾಗೆಯೇ ಎಚ್‌.ಎಲ್‌.ನಾಗೇಗೌಡರ`ನನ್ನೂರು’ ಕೃತಿಯಲ್ಲೂ ಇಂಥ ವ್ಯಕ್ತಿಗಳ ಪರಿಚಯ ನಮಗಾಗುತ್ತದೆ. ಆದರೆ ಸತ್ಯನಾರಾಯಣ ಅವರ ಈ ಕೃತಿಯ ವಿಶೇಷವೆಂದರೆ ಅವರು ಇಂಥ ಸ್ವಭಾವಗಳ ಮೀಮಾಂಸೆಯನ್ನು ನಡೆಸುವುದು.
ಅದಕ್ಕೊಂದು ಉದಾಹರಣೆ ಇಲ್ಲಿದೆ. `ಮಿತಿ ಮೀರಿದವರು' ಎಂಬ ಬರೆಹದಲ್ಲಿ ಮಿತಿ ಮೀರುವಿಕೆಯನ್ನು ಅವರು ಹೀಗೆ ಹಿಂಜಿ ನೋಡುತ್ತಾರೆ.ಯವ್ವನದಲ್ಲಿ ಉಕ್ಕುವ ಚೈತನ್ಯ ಕಾಣಿಸಿಕೊಳ್ಳುವ ಒಂದು ಬಗೆಯೆಂದರೆ ಮಿತಿಯನ್ನು ಮೀರಿ ಮಾತನಾಡುವುದು. ಮಾತನಾಡುವುದು ಮಾತ್ರವಲ್ಲ, ಕೃತಿಯಲ್ಲಿ, ಕ್ರಿಯೆಯಯಲ್ಲಿ ಕೂಡ ಮಿತಿಯನ್ನು ಮೀರುವುದು, ದಾಟುವುದು. ಆದರೆ ಉಕ್ಕುವ ಚೈತನ್ಯವನ್ನು ಪಳಗಿಸಬೇಕಕಾಗುತ್ತದೆ, ಮಾಗಿಸಬೇಕಾಗುತ್ತದೆ. ಒಂದು ಹದಕ್ಕೆ ತರಬೇಕಾಗುತ್ತದೆ' ಎಂದು ಈ ವಿದ್ಯಮಾನಕ್ಕೆ ಮನಶ್ಶಾಸ್ತ್ರೀಯವಾದ ಆಯಾಮವನ್ನು ಗುರುತಿಸುತ್ತ ಅದನ್ನು ಸಾಹಿತ್ಯದ ಪರಿಭಾಷೆಯಲ್ಲಿ ಅರ್ಥೈಸಲು ಯತ್ನಿಸುತ್ತಾರೆ. `ಕಲೆ, ಸಾಹಿತ್ಯದಲ್ಲಿ ಪಳಗುವುದು, ಮಾಗುವುದು ಎಂದರೆ, ಮಿತಿ ಮೀರಿ ಉಕ್ಕುತ್ತಿರುವ ಚೈತನ್ಯದ ರಭಸವನ್ನು ಒಂದು ಪ್ರಶಾಂತಿಯ, ಅರ್ಥವಂತಿಕೆ ನೆಲೆಗೆ ತರುವುದೇ ಆಗಿರುತ್ತದೆ' ಎಂದು ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ ಬೇಂದ್ರೆಯವರು ಅಡಿಗರ ಮೊದಲ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಮತ್ತು ಸ್ವತಃ ಅಡಿಗರು ಲಂಕೇಶರ ಕಥಾ ಸಂಕಲನಕ್ಕೆ ಬರೆದ ಮುನ್ನುಡಿಗಳನ್ನು ಉದಾಹರಿಸುತ್ತಾರೆ. ಈ ಮಿತಿಮೀರುವಿಕೆಯನ್ನು ಸ್ತ್ರೀವಾದಿ ನೆಲೆಯಲ್ಲಿ ನೋಡುತ್ತ ಲಕ್ಷ್ಮಣ ರೇಖೆ ಎಂಬ ಪದ ಹುಟ್ಟಿದ್ದೇ ಹೆಂಗಸಾದ ಸೀತಾ ಮಾತೆಯ ಸಂದರ್ಭದಲ್ಲಿ. ದ್ರೌಪದಿಯೇ ವಾಸಿ. ಗಂಡಸರ ಮಿತಿಯನ್ನು ಆಗಾಗ್ಗೆ ಪ್ರಶ್ನಿಸುತ್ತಿದ್ದಳು. ತನ್ನ ಮಿತಿಗಳನು ಮೀರುತ್ತಿದ್ದಳು. ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಳು ಎಂದು ವ್ಯಾಖ್ಯಾನಿಸುತ್ತ ನಮ್ಮ ಮಹಾಕಾವ್ಯಗಳನ್ನು ನೋಡುವುದಕ್ಕೆ ಒಂದು ಹೊಸ ದೃಷ್ಟಿಕೋನವನ್ನು ಒದಗಿಸಿದ್ದಾರೆ. ಈ ಕಾರಣಕ್ಕಾಗಿಯೇ ಇವು ಲಘು ಬರೆಹಗಳು ಎನಿಸಿಕೊಂಡೂ ಓದುಗರನ್ನು ಗಾಢವಾದ ಚಿಂತನೆಗೆ ದೂಡುತ್ತವೆ. ಅದು ಇಲ್ಲಿಯ ಬರೆಹಗಳ ಗುರುತ್ವದ ಲಕ್ಷಣವಾಗಿದೆ. `ಸದಾ ಸರಿಯಪ್ಪಂದಿರು’ ಬರೆಹದಲ್ಲಿ, … ತಪ್ಪು ಮಾಡಬಾರದು ಎಂಬ ಆರೋಗ್ಯಕರವಾದ ಧೋರಣೆ, ತಪ್ಪು ಮಾಡಲೇ ಬಾರದು ಎಂಬ ಹಠವಾಗಿ, ನಂತರ ತಪ್ಪು ಮಾಡುವುದೇ ಇಲ್ಲ ಎಂಬ ನೈತಿಕ ಗರ್ವವಾಗಿ ಪರಿವರ್ತನೆ ಹೊಂದುತ್ತದೆ. ನೈತಿಕ ಗರ್ವದ ಚೂಪಾದ ಮೊನೆಯಿಂದ ಸದಾ ನಮ್ಮನ್ನು ತಿವಿಯುತ್ತಲೇ ಇರುತ್ತಾರೆ ಎಂದು ಹೇಳುತ್ತ ಸದಾ ಸರಿಯಪ್ಪಂದಿರುಗಳಿಲ್ಲದ ನೆರೆ ಹೊರೆಗೆ, ಕಛೇರಿ, ಕಾರ್ಖಾನೆಗಳಿಗೆ, ನೃತ್ಯಶಾಲೆ, ಕ್ರೀಡಾಂಗಣಗಳಿಗೆ, ಸಮಾಜ ದೇಶಗಳಿಗೆ ಹಾತೊರೆಯುತ್ತೇನೆ ಎಂದು ಹೇಳುತ್ತ ಮುಗಿಸುತ್ತಾರೆ. ಇದನ್ನು ಓದುತ್ತ ಹೋದ ಹಾಗೆ ನಮ್ಮ ಬದುಕಿನಲ್ಲೂ ಎದುರಾದ ಇಂಥ ಸರಿಯಪ್ಪಂದಿರುಗಳು ನೆನಪಾಗುತ್ತಾರೆ. ಈ ಕಾರಣಕ್ಕೆ ಬರೆಹದೊಂದಿದೆ ಓದುಗನಿಗೆ ತಾದಾತ್ಮ್ಯ ಸಾಧ್ಯವಾಗುತ್ತದೆ. ಉತ್ತಮ ಬರೆಹವೊಂದರ ಮೂಲ ಲಕ್ಷಣಗಳಲ್ಲಿ ಇದೂ ಒಂದು. `ನಾವು ಕಾಣುವುದು ಕೂಡ ಬಯಸಿದ್ದನ್ನು ಮಾತ್ರವೋ? ಗೊತ್ತಿಲ್ಲ!' (ಪುಟ148) ಎಂಬ ಮಾತು ಇಲ್ಲಿಯ ಬರೆಹಗಳ ಮಿತಿಯನ್ನೂ ಹೇಳುತ್ತದೆ. ಇಲ್ಲಿಯ ಬರೆಹಗಳು ಪ್ರಸ್ತಾಪಿಸಲ್ಪಟ್ಟ ವ್ಯಕ್ತಿಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಈ ವ್ಯಕ್ತಿಗಳು, ಅವರ ಸ್ವಭಾವಗಳು ಕೆ.ಸತ್ಯನಾರಾಯಣ ಎಂಬ ವ್ಯಕ್ತಿಯ ಒಳಗಿದ್ದ ಒಬ್ಬ ಲೇಖಕನನ್ನು ಹೇಗೆ ರೂಪಿಸಿದವು, ಮಾಗಿಸಿದವು ಎಂಬುದನ್ನೂ ನಾವು ಕಂಡುಕೊಳ್ಳಬಹುದು. ಇತರರ ಸ್ವಭಾವಚಿತ್ರಗಳನ್ನು ಬರೆಯುತ್ತ ಲೇಖಕರು ತಮ್ಮ ಸ್ವಭಾವಚಿತ್ರವನ್ನೂ ಈ ಕೃತಿಯ ಒಡಲಲ್ಲಿ ಅಯಾಚಿತವಾಗಿ ನಮಗೆ ಒದಗಿಸಿದ್ದಾರೆ. ಕಸ್ತೂರಿ ಸುಬ್ಬರಾಯರ ಕುರಿತ ಬರೆಹದಲ್ಲಿ, ಶಾಲೆಯ ದಿನಗಳಲ್ಲಿ ಶಿಕ್ಷಕ ಸುಬ್ಬರಾಯರು ಕಸ್ತೂರಿ ಪತ್ರಿಕೆಯನ್ನು ಓದಿಸುತ್ತಿದ್ದ ರೀತಿ, ಆ ಮೂಲಕ ಓದಿನ ಗೀಳನ್ನು ಹಚ್ಚಿದ್ದು ಎಲ್ಲವನ್ನೂ ಹೇಳುತ್ತ,ಮುಂದೆ ನನ್ನ ಬದುಕಿನಲ್ಲಿ ಯಾವ ರೂಪದಲ್ಲಿ ಎಲ್ಲಿ ಪ್ರಕಟವಾಗಬಲ್ಲರು ಎಂದು ನಾನಾದರೂ ಹೇಗೆ ಹೇಳಲಿ, ಅವರು ಯಾವಾಗಲೂ ಒಳಗೇ ಇದ್ದಾರೆ, ಇರುತ್ತಾರೆ. ಸಮಯ ಸಂದರ್ಭ ನೋಡಿ ಮುನ್ನೆಲೆಗೆ ಬಂದು ಪ್ರಕಟವಾಗಿ ಆಶೀರ್ವದಿಸುತ್ತಾರೆ’ ಎಂದು ಹೇಳಿದ್ದಾರೆ. `ತುದಿವಾದಿಗಳು' ಬರೆಹದಲ್ಲಿ ಬರುವ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಜವಾನರಾಗಿದ್ದ ಚೌಡಪ್ಪನವರು ಅಲ್ಲಿಗೆ ಓದಲು ಬರುತ್ತಿದ್ದ ಲೇಖಕರಿಗೆ ಪತ್ರಿಕೆಗಳನ್ನು, ಸರ್ಕಾರಿ ಪುಸ್ತಕಗಳನ್ನು ತಂದು ಮುಂದಿಡುತ್ತಿದ್ದರು. ಈ ಕುರಿತು ಲೇಖಕರು ಹೇಳುವುದು ಹೀಗೆ..ಒಂದೇ ಸಂಗತಿಯನ್ನು ಒಂದೇ ಕಾಲದಲ್ಲಿ ಬೇರೆಬೇರೆ ರೀತಿಯಲ್ಲಿ ಬರೆಯುತ್ತಿದ್ದರು.. ಒಂದೇ ಸಂಗತಿಯನ್ನು ಒಂದೇ ಕಾಲದಲ್ಲಿ ಬೇರೆಬೇರೆ ರೀತಿಯಲ್ಲಿ ನೋಡಬಹುದು ಎಂಬ ಮುಖ್ಯವಾದ ಪಾಠವನ್ನು ತಮಗೆ ಗೊತ್ತಿಲ್ಲದೆಯೇ ಮಾನ್ಯರು ನನಗೆ ಹೇಳಿಕೊಟ್ಟಿದ್ದರು.' ನಿಜ, ಈ ನಿಟ್ಟಿನಲ್ಲಿ ನೋಡಿದಾಗ ಇದು ಲೇಖಕರ ಆತ್ಮಕಥನದ ಮುಂದುವರಿದ ಭಾಗವಾಗಿಯೂ ಭಾಸವಾಗುವುದು.


ಶನಿವಾರದ ಸ್ವರ್ಣಾಂಬ' ಗ್ರಾಮೀಣ ಭಾಗದ ಒಂದು ವಿಫಲ ದಾಂಪತ್ಯವನ್ನು ಹೃದಯ ಮಿಡಿಯುವ ಹಾಗೆ ಹೇಳುತ್ತದೆ. ಒಂದು ಕತೆ ಎಂಬಷ್ಟು ಇದು ಸಶಕ್ತವಾಗಿದೆ.
`ಶನಿವಾರದ ಸ್ವರ್ಣಾಂಬ, ಬಂದನೇನಮ್ಮ ಬಸಪ್ಪ, ಬಂದನೇನಮ್ಮ ಸರದಾರ ಅಂತ ರಾಗವಾಗಿ ಕಿರುಚಿ, ಕಿಚಾಯಿಸಿ, ಓಡಿಹೋಗುತ್ತಿದ್ದೆವು. ನಮ್ಮ ಕಿಚಾಯಿಸುವಿಕೆ ಕೂಡ ದಣಿಯಿತು, ಕ್ರಮೇಣ ನಿಂತುಹೋಯಿತು’ ಎನ್ನುವ ಸಾಲುಗಳು ಎದೆಯ ಮೇಲೆ ಮಂಜುಗಡ್ಡೆಯನ್ನು ಇರಿಸಿದಹಾಗೆ ಆಗುತ್ತದೆ. ಕೆಲವು ಬರೆಹಗಳು ಇನ್ನೂ ಇದೆಯೇನೋ ಎನ್ನುವಾಗಲೇ ಮುಗಿದುಬಿಟ್ಟಿವೆ. ಲೇಖಕರು ಈ ಕೃತಿಯ ಕುರಿತು, `ಈ ಬರವಣಿಗೆಗಳು ವ್ಯಕ್ತಿಚಿತ್ರಗಳಲ್ಲ, ಪಾತ್ರಗಳಿದ್ದರೂ ಕತೆಯಲ್ಲ. ನೆನಪಿನ ಲಹರಿ, ಸನ್ನಿವೇಶಗಳಿದ್ದರೂ ಪ್ರಬಂಧವಲ್ಲ. ಆದರೆ ಬೇಡವೆಂದರೂ ಕತೆ ಮತ್ತು ಪ್ರಬಂಧದ ಅಂಶಗಳು ನನ್ನ ಎಲ್ಲ ಬರವಣಿಗೆಯಲ್ಲೂ ಬಂದೇ ಬರುತ್ತದೆ’ ಎಂದು ಸ್ಪಷ್ಟತೆಯನ್ನು ನೀಡಿದ್ದಾರೆ.
ಇಲ್ಲಿಯ ಬರೆಹಗಳಲ್ಲಿರುವ ವ್ಯಕ್ತಿಗಳು ನಿಮಗೂ ಎದುರಾಗಬಹುದು. ನೀವು ನೋಡಿರಲೂ ಬಹುದು. ಇಲ್ಲಿಯ ಪಾತ್ರಗಳು ಯಾವುದೂ ಅಸಂಗತ ಎಂದು ತೋರುವುದಿಲ್ಲ. ನಮ್ಮ ಅಕ್ಕಪಕ್ಕದಲ್ಲಿ ಅಡ್ಡಾಡುತ್ತಿದ್ದವರನ್ನು ಪುಟ್ಟದೊಂದು ಟಿಪ್ಪಣಿಯೊಂದಿಗೆ ಸತ್ಯನಾರಾಯಣ ಅವರು ನಮ್ಮ ಮುಂದೆ ನಿಲ್ಲಿಸಿದ್ದಾರೆ. ಆ ಕಾರಣಕ್ಕೆ ಪುಟಪುಟಗಳಲ್ಲಿಯೂ ಜೀವಂತಿಕೆಯನ್ನು ನಾವು ಗುರುತಿಸಬಹುದು. ಇದೇ ಹುಮ್ಮಸ್ಸಿನಲ್ಲಿ ಅವರು ಇನ್ನಷ್ಟು ವೈವಿಧ್ಯಮಯ ಕೃತಿಗಳನ್ನು ನೀಡಲಿ ಎಂದು ಹಾರೈಸೋಣ.