ಗುಡಿಗಾರರು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿರುವ ಕುಶಲಕರ್ಮಿಗಳು. ಕಟ್ಟಿಗೆಯಲ್ಲಿ ಕುಸುರಿಕಲೆಯನ್ನು ಅರಳಿಸುವುದರಲ್ಲಿ ಅವರು ಎತ್ತಿದ ಕೈ. ಗುಡಿಗಾರರ ಶ್ರೀಗಂಧದ ಕೆತ್ತನೆ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧವಾದದ್ದು. ಗಣೇಶನ ಹಬ್ಬದ ಸಮಯದಲ್ಲಿ ಅವರು ಗಣೇಶನ ಮಣ್ಣಿನ ಮೂರ್ತಿಗಳನ್ನೂ ಮಾಡುತ್ತಾರೆ. ಎಲ್ಲೆಡೆ ಈಗ ಗಣೇಶನ ಅಚ್ಚುಗಳು ಸಿದ್ಧವಾಗಿ ಗಣೇಶನ ಮೂರ್ತಿ ತಯಾರಿಸುವುದು ಸುಲಭ ಎನ್ನುವಂತಾಗಿದೆ. ಆದರೆ ಈ ಗುಡಿಗಾರರು ಯಾವುದೇ ಅಚ್ಚನ್ನು ಬಳಸದೆಯೇ ವೈವಿಧ್ಯಮಯ ಮೂರ್ತಿಗಳನ್ನು ಮಾಡುವುದರಲ್ಲಿ ಪ್ರಖ್ಯಾತರು. ಇಂಥ ಗುಡಿಗಾರರು ಗಣೇಶನ ಮೂರ್ತಿಗೆ ಬಣ್ಣ ಬಳಿಯುವಾಗ ಆ ಬಣ್ಣ ಸರಿಯಾಗಿ ಹತ್ತುವುದಿಲ್ಲವಂತೆ. ಆಗ ಅವರು ಏನಾದರೂ ಒಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರಂತೆ. ಹಾಗೆ ಸುದ್ದಿ ಹಬ್ಬಿದ ಮೇಲೆ ಬಣ್ಣ ಚೆನ್ನಾಗಿ ನಿಲ್ಲುತ್ತದಂತೆ. ಗುಡಿಗಾರರು ತಮ್ಮ ಬಣ್ಣ ಚೆಂದವಾಗಿ ಕಾಣಬೇಕೆಂದು ಹಬ್ಬಿಸುವ ವದಂತಿಯೇ ಗುಡಿಗಾರ ನೀಲಿಯಾಗಿಬಿಟ್ಟಿತು.
 ನೀಲಿಕೆಟ್ಟಮಾತು, ನೀಲಿಕೆಟ್ಟವಾರ್ತೆ ಎಂದರೆ ಸುಳ್ಳುಸುದ್ದಿ, ಕಲ್ಪಿತ ಕತೆ ಎಂಬ ಅರ್ಥ ನಿಘಂಟುವಿನಲ್ಲಿದೆ. ತರಾಸು ಅವರು ‘ಗಾಳಿಮಾತು’ ಎಂಬ ಕಾದಂಬರಿ ಬರೆದಿದ್ದಾರೆ. ಕಟ್ಟುಕತೆ, ಸುಳ್ಳುಸುದ್ದಿಗಳಿಂದ ಬದುಕು ಹೇಗೆ ಗೋಜಲಾಗಿಬಿಡುತ್ತದೆ ಎಂಬುದನ್ನು ಅವರು ಅದರಲ್ಲಿ ಸೊಗಸಾಗಿ ಹೇಳಿದ್ದಾರೆ. ಇಂಥ ಕಟ್ಟುಕತೆಗಳನ್ನು ಹೆಣೆಯುವವರ ಸೃಜನ ಶಕ್ತಿಯ ಬಗ್ಗೆ ಒಮ್ಮೊಮ್ಮೆ ಅಸೂಯೆ ಮೂಡುತ್ತದೆ. ಅವರು ಯಾವ ಸಾಹಿತಿಗೂ ಕಡಿಮೆಯಲ್ಲ ಎನ್ನಿಸಿಬಿಡುತ್ತದೆ. ಕವಿ ಪ್ರತಿಭೆಗೂ ನೀಲಿ ಪ್ರತಿಭೆಗೂ ಇರುವ ಅಂತರ ಬಹು ತೆಳುವಾದದ್ದು. 
 ನಾವು ಸಣ್ಣವರಿದ್ದಾಗ ಇಂಥ ಹಲವು ಗುಡಿಗಾರ ನೀಲಿಯನ್ನು ಕೇಳಿದ್ದೇವೆ. ಅದರಲ್ಲಿ ಮುಖ್ಯವಾದದ್ದು ಲಿಂಗನಮಕ್ಕಿ ಡ್ಯಾಂ ಬಿರುಕು ಬಿಟ್ಟಿದೆ ಎಂಬುದು. ಶರಾವತಿ ಹೊಳೆಸಾಲಿನಲ್ಲಿರುವವರ ಎದೆಯಲ್ಲಿ ಲಿಂಗನಮಕ್ಕಿಯ ಭಯವು ಕತ್ತಲೆಯಲ್ಲಿ ಅವಿತ ಕಪ್ಪು ಬೆಕ್ಕಿನಂತೆ ನೆಲೆಯಾಗಿದೆ. ಯಾವತ್ತಾದರೂ ರಾತ್ರಿಯಲ್ಲಿ ಲಿಂಗನಮಕ್ಕಿ ಡ್ಯಾಂ ಒಡೆದು ಹೋದರೆ ನಾವೆಲ್ಲ ನಿದ್ದೆಯಲ್ಲೇ ಸತ್ತುಹೋಗಬೇಕಲ್ಲವೆ ಎಂಬ ಆತಂಕ ಅಲ್ಲಿನವರಲ್ಲಿದೆ. ಎಷ್ಟೋ ಬಾರಿ ಲಿಂಗನಮಕ್ಕಿಯ ಡ್ಯಾಂ ಒಡೆದರೆ ಅದರ ನೀರು ಎಷ್ಟು ತುಂಬಬಹುದು ಎಂಬ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ. ಕೆಲವರು ನಮ್ಮೂರ ಗುಡ್ಡದ ಮೇಲೆ ಒಂದು ಎತ್ತರದ ಅಡಕೆ ಮರ ಇದ್ದರೆ ಅದು ಮುಳುಗಬಹುದು ಎಂಬ ಅಂದಾಜು ಹೇಳುತ್ತಿದ್ದರು. ಕೆಲವರು ಅಷ್ಟೆಲ್ಲ ಬರುವುದಿಲ್ಲ, ಗುಡ್ಡದ ಮೇಲೆ ಹರಿದರೂ ಹರಿಯಬಹುದು ಅಷ್ಟೇ ಎಂದು ಸಮಾಧಾನ ಹೇಳುತ್ತಿದ್ದರು. ಬೇಸಿಗೆಯಲ್ಲಾದರೆ ಅಪಾಯ ಕಡಿಮೆ. ಡ್ಯಾಂನಲ್ಲಿ ನೀರಿರುವುದಿಲ್ಲ. ಮಳೆಗಾಲದಲ್ಲಾದರೆ ಶಿವನ ಪಾದವೇ ಗತಿ ಎಂದೆಲ್ಲ ಮಾತು ಒಗೆಯುತ್ತಿದ್ದರು.
 ಇನ್ನೊಂದು ಗುಡಿಗಾರನೀಲಿ ಸುದ್ದಿ ಎಂದರೆ, ಗೇರುಸೊಪ್ಪೆಯಲ್ಲೋ ಇನ್ನೆಲ್ಲೋ ಗರ್ಭಿಣಿಯೊಬ್ಬಳಿಗೆ ರಾಕ್ಷಸ ಮಗು ಹುಟ್ಟಿದೆ ಎಂದೂ, ಹುಟ್ಟುತ್ತಲೇ ಗಾಳಿ ತುಂಬಿದವನಂತೆ ದೊಡ್ಡದಾಗಿ ಬೆಳೆಯುತ್ತಿದ್ದಾನಂತೆ ಎಂದೂ, ಕೆಲವರು ತಾವು ಹೋಗಿ ನೋಡಿ ಬಂದುದಾಗಿಯೂ, ಅದು ಹೇಗಿತ್ತೆಂಬುದನ್ನು ಹುಬೇಹೂಬಾಗಿ ವರ್ಣಿಸುತ್ತಲೂ ಇದ್ದರು.
 ಇದೇ ರೀತಿ ಮಂಗಳಲೋಕದವರು ಭೂಮಿಗೆ ಬಂದಿದ್ದಾರೆಂದೂ, ಅವರು ಬಂದ ವಾಹನವನ್ನು ತಾವು ಆಕಾಶದಲ್ಲಿ ರಾತ್ರಿ ನೋಡಿದ್ದಾಗಿಯೂ, ಕಾಡಿಗೆ ತಾಳೆಮರದ ಚಕ್ಕೆ ತರಲು ಹೋದವರನ್ನು ಹುಲಿ ಹಿಡಿದಿದೆ ಎಂದೂ, ಯಾರೋ ಗಣ್ಯರು ತೆರಳುತ್ತಿದ್ದ ವಿಮಾನ ಅಪಘಾತವಾಗಿದೆ ಎಂದೂ ಸುದ್ದಿಗಳು ಹಬ್ಬುತ್ತಿದ್ದವು. ಆಗ ಈಗಿನಂತೆ ಟೀವಿ ವಾಹಿನಿಗಳು ಇರಲಿಲ್ಲ. ಯಾವುದೇ ಸಣ್ಣ ವದಂತಿ ಇದ್ದರೂ ಅದರ ಬಗ್ಗೆ ಚರ್ಚಿಸಲು ಜನರಿಗೆ ಸಾಕಷ್ಟು ಪುರುಸೊತ್ತೂ ಸಿಗುತ್ತಿತ್ತು.
 ಇಂಥ ಗುಡಿಗಾರ ನೀಲಿ ಸುದ್ದಿಗಳು ಹಿಂದೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಸಾಕಷ್ಟು ಹಬ್ಬಿ ಬ್ರಿಟಿಷರಿಗೆ ತಲೆನೋವಾಗಿತ್ತು. ಸಿಪಾಯಿ ಬಂಡಾಯ- ಭಾರತದ ಮೊದಲ ಸ್ವಾತಂತ್ರ್ಯ ಯುದ್ಧ- ನಡೆದದ್ದೂ ಇಂಥ ಗಾಳಿ ಸುದ್ದಿಯ ಬಲದ ಮೇಲೆಯೇ.
 ಗಾಳಿಸುದ್ದಿ ಹೇಗೆ ಅಪಾಯಕಾರಿಯಾಗಿ ಪರಿಣಾಮಬೀರಬಲ್ಲುದು ಎಂಬುದನ್ನು ಬಂಕಿಮಚಂದ್ರ ಚಟರ್ಜಿಯವರ ‘ಆನಂದಮಠ’ ಕಾದಂಬರಿಯಲ್ಲಿ ತುಂಬ ಚನ್ನಾಗಿ ವರ್ಣಿಸಲಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಚಿತ್ರಣವನ್ನು ಹೊಂದಿರುವ ಕೃತಿ. ಇದರಲ್ಲಿಯೇ ಪ್ರಸಿದ್ಧವಾದ ‘ವಂದೇಮಾತರಂ’ ಗೀತೆ ಇರುವುದು.
 ನಮ್ಮೂರಿನಲ್ಲಿ ಹಿಂದೆ ಅಪ್ಪಣ್ಣ ಎಂಬವನೊಬ್ಬ ಇದ್ದ. ಆತ ತನಗೆ ಬೀಳುತ್ತಿದ್ದ ಕನಸುಗಳೆಲ್ಲ ವಾಸ್ತವ ಎಂದೇ ಭಾವಿಸುತ್ತಿದ್ದ. ಬೆಳಿಗ್ಗೆ ಎದ್ದವನು ಯಾವುದೋ ಲೋಕದಿಂದ ಬಂದವನಂತೆ ಇರುತ್ತಿದ್ದ. ಯಾರಾದರೂ ಹತ್ತಿರ ಬಂದು ಕುಳಿತರೆ ರಾತ್ರಿ ತಾನು ಕಂಡ ಕನಸನ್ನು ವಾಸ್ತವ ಘಟನೆ ಎಂಬಂತೆ ಹೇಳತೊಡಗುತ್ತಿದ್ದ. ಆತನಿಗೆ ಮೇಲಿಂದ ಮೇಲೆ ಬೀಳುತ್ತಿದ್ದ ಕನಸು ಲಾಂಚು ಮುಳುಗಿ ನೂರಾರು ಜನ ಸಾಯುವುದು. ಶರಾವತಿ ಹೊಳೆಸಾಲಿನಲ್ಲಿ ಕೇರಳದ ಕಡೆಯವರೊಬ್ಬರು ಹೊನ್ನಾವರದಿಂದ ಗೇರುಸೊಪ್ಪೆಯ ವರೆಗೆ ಲಾಂಚ್್ ಸರ್ವಿಸ್್ ಇಟ್ಟಿದ್ದರು. ಅದರಲ್ಲಿ ಅವರು ತಮ್ಮ ಮನಸ್ಸಿಗೆ ಬಂದಷ್ಟು ಜನರನ್ನು ತುಂಬುತ್ತಿದ್ದರು. ಬಹುಶಃ ಇದನ್ನು ನೋಡಿ ಅವನ ಮನಸ್ಸಿನ ಮೂಲೆಯಲ್ಲೆಲ್ಲೋ ಭಯ ಅವಿತುಕೊಂಡಿದ್ದಿರಬಹುದು. ಅಪ್ಪಣ್ಣ ಲಾಂಚು ಮುಳುಗಿದ್ದನ್ನು, ಜನ ಬದುಕಲು ಒದ್ದಾಡುತ್ತಿದ್ದುದನ್ನು ಎಲ್ಲ ಕಣ್ಣಿಗೆ ಕಟ್ಟಿದಂತೆ, ಅಂದೇ ನಡೆದ ಘಟನೆ ಎಂಬಂತೆ ವಿವರಿಸುತ್ತಿದ್ದ. ಅವನ ಕನಸಿನ ಫಲವೋ ಎಂಬಂತೆ ಹೊನ್ನಾವರ ಮತ್ತು ಕಾಸರಕೋಡಿನ ನಡುವೆ ಇದ್ದ ತಾರಿ ದಾಟಿಸುವ ಲಾಂಚು ಒಂದು ದಿನ ನಿಜವಾಗಿಯೂ ಮುಳುಗಿಯೇ ಹೋಯಿತು. ಜನರೂ ಸತ್ತರು. ಆಗಿನ್ನೂ ಹೊನ್ನಾವರ ಕಾಸರಕೋಡಿನ ನಡುವೆ ಶರಾವತಿಗೆ ಸೇತುವೆಯನ್ನು ನಿರ್ಮಿಸುತ್ತಿದ್ದರು.
 ಆಗೆಲ್ಲ ಹಬ್ಬಿದ ನೀಲಿ ಸುದ್ದಿಯೆಂದರೆ, ಉದ್ದೇಶಪೂರ್ವಕವಾಗಿಯೇ ಲಾಂಚನ್ನು ಅಪಘಾತಕ್ಕೆ ಈಡು ಮಾಡಲಾಗಿತ್ತು ಎಂಬುದು. ಸೇತುವೆಯ ಒಂದು ಕಂಭಕ್ಕೆ ಪಾಯ ಹಾಕಲು ಆಗುತ್ತಲೇ ಇರಲಿಲ್ಲ. ಅದಕ್ಕೆ ನರಬಲಿಯನ್ನು ನೀಡಬೇಕಿತ್ತು. ಒಳಸಂಚು ಮಾಡಿ ಲಾಂಚನ್ನು ಮುಳುಗಿಸಲಾಗಿದೆ ಎಂದು ಸುದ್ದಿ ಹಬ್ಬಿತು. ಮುಳುಗುಗಾರರು ಹೆಣಗಳ ಮೈಮೇಲಿದ್ದ ಚಿನ್ನಾಭರಣಗಳನ್ನು ಕೊಳ್ಳೆಹೊಡೆದ ಬಗ್ಗೆಯೂ ಕತೆಗಳು ಹುಟ್ಟಿಕೊಂಡವು. ಈ ಘಟನೆಯ ಬಳಿಕ ಅಪ್ಪಣ್ಣನ ಮಾತುಗಳನ್ನು ನಮ್ಮೂರ ಜನರು ಗಂಭೀರವಾಗಿ ಆಲಿಸಲು ಶುರುಮಾಡಿದರು. ಅಪ್ಪಣ್ಣನ ಕನಸುಗಳಿಗೆ ಅನಂತ ರೆಕ್ಕೆಗಳು ಮೂಡತೊಡಗಿದ್ದವು.
 ತುರ್ತುಪರಿಸ್ಥಿತಿಯ ಕಾಲದಲ್ಲೂ ಗುಡಿಗಾರನೀಲಿಯ ಸುದ್ದಿಗಳು ಹರಡಿದ್ದವು. ಯಾರದೋ ಕೊಲೆಯಾಗಿದೆ, ಯಾರನ್ನೋ ಅಪಘಾತದಲ್ಲಿ ಸಾಯಿಸಲಾಗಿದೆ, ಅವರನ್ನು ಬಂಧಿಸಲಾಗಿದೆ, ಇವರನ್ನು ಬಂಧಿಸಲಾಗಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಪತ್ರಿಕೆಗಳಲ್ಲಿ ಅವು ಪ್ರಕಟವಾಗುವುದು ಸಾಧ್ಯವಿರಲಿಲ್ಲ. ರೇಡಿಯೋದಲ್ಲೂ ಬರುತ್ತಿರಲಿಲ್ಲ. ಹೀಗಾಗಿ ಎಷ್ಟೋ ಜನರು ತಾವೇ ಹುಟ್ಟಿಸಿಕೊಂಡು ಕತೆಗಳನ್ನು ಹಬ್ಬಿಸುತ್ತಿದ್ದರು. ಆಗ ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಮ್ಮ ಕ್ಲಾಸಿನಲ್ಲಿ ಒಬ್ಬ ಹುಡುಗ ಇದ್ದ. ಆಗಲೇ ಅವನಲ್ಲಿ ರಾಷ್ಟ್ರೀಯವಾದಿ ವಿಚಾರಗಳು ತುಂಬಿದ್ದವು. ನಮ್ಮಲ್ಲಿ ಬಹಳ ಜನರಿಗೆ ಗೊತ್ತಿಲ್ಲದ ಆ ಕಾಲದ ಹಲವು ರಾಜಕೀಯ ನಾಯಕರ ಹೆಸರುಗಳು ಅವನಿಗೆ ಗೊತ್ತಿದ್ದವು. ಅವನು ಒಂದು ದಿನ ಶಾಲೆಗೆ ಬಂದವನು, ಜಸ್ಟಿಸ್್ ಜಗಮೋಹನ್್ಲಾಲ್್ ಸಿನ್ಹಾ ಅವರ ಕೊಲೆಯಾಗಿದೆ. ಬಿಬಿಸಿ ನ್ಯೂಸ್್ನಲ್ಲಿ ಇವತ್ತು ಬೆಳಿಗ್ಗೆ ಹೇಳಿದರು ಎಂದು ಹೇಳಿದ. ಈ ಜಸ್ಟಿಸ್್ ಸಿನ್ಹಾ  ಅಲಹಾಬಾದ್್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಅವರೇ ಇಂದಿರಾಗಾಂಧಿಯವರು ಸಂಸತ್ತಿಗೆ ಆಯ್ಕೆಯಾಗಿದ್ದನ್ನು ಅನೂರ್ಜಿತಗೊಳಿಸಿದ್ದರು. ಇದರಿಂದಾಗಿಯೇ ಇಂದಿರಾಗಾಂಧಿ ರಾಜಿನಾಮೆ ನೀಡುವ ಬದಲು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಇದು ನಂತರ ಅವರ ಪರಾಭವಕ್ಕೂ ಕಾರಣವಾಯಿತು. ಇಂಥ ಮಹತ್ವದ ವ್ಯಕ್ತಿ ಸತ್ತರೆಂಬ ಸುದ್ದಿಯನ್ನು ನಮ್ಮ ಗೆಳೆಯ ಹೇಳಿದಾಗ ನಾವು ಅದನ್ನು ನಂಬಿಯೇ ಬಿಟ್ಟಿದ್ದೆವು. ತುರ್ತುಪರಿಸ್ಥಿತಿ ಮುಗಿದ ಮೇಲೆಯೇ ನಮಗೆ ಅದೊಂದು ಗುಡಿಗಾರನೀಲಿಯ ಸುದ್ದಿಯೆಂದು ತಿಳಿದದ್ದು.
 ಕಳೆದ ಶತಮಾನದ ಕೊನೆಯ ದಶಕದಲ್ಲಿ ನಡೆದ ಘಟನೆ ಇದು. ಗಣಪತಿ ಹಾಲುಕುಡಿಯುತ್ತಾನೆ ಎಂದು ಯಾರೋ ಹೇಳಿದರು. ಆಗ ನಾನು ಬೆಳಗಾವಿಯಲ್ಲಿದ್ದೆ. ಒಂದು ಸಂಜೆ ಗಣಪತಿಯ ಗುಡಿಗಳ ಮುಂದೆ ಹಾಲನ್ನು ಪಾತ್ರೆಯಲ್ಲಿ ಹಾಕಿಕೊಂಡು ಬಂದು ಜನರು ಸಾಲು ನಿಂತಿದ್ದರು. ರಾತ್ರಿ ಬಹಳ ಹೊತ್ತಿನ ವರೆಗೂ ಗುಡಿಗಳ ಮುಂದೆ ನಿಂತು ದೇವರಿಗೆ ಹಾಲು ಕುಡಿಸಲು ಯತ್ನಿಸುತ್ತಿದ್ದರು. ಪೂಜಾರಿಯು ಒಂದು ಚಮಚದಲ್ಲಿ ಹಾಲನ್ನು ತೆಗೆದು ಗಣಪತಿಯ ಬಾಯಿಗೆ ಹಿಡಿದರೆ ಚಮಚದಲ್ಲಿಯ ಹಾಲು ಖಾಲಿಯಾಗುತ್ತಿತ್ತು.
 ನಮ್ಮ ಮನೆಯಲ್ಲಿ ಒಂದು ಪ್ಲಾಸ್ಟರ್್ ಆಫ್್ ಪ್ಯಾರಿಸ್್ನಿಂದ ತಯಾರಿಸಿದ ಗಣಪತಿಯ ಮೂರ್ತಿಯೊಂದು ಇತ್ತು. ನಾವು ಅದಕ್ಕೇ ಪೂಜೆಯನ್ನು ಸಲ್ಲಿಸುತ್ತಿದ್ದೆವು. ನಮ್ಮ ಓಣಿಯ ಕೆಲವರು ಬಂದು, ಗುಡಿಯಲ್ಲಿ ಗಣೇಶ ಹಾಲು ಕುಡಿಯುತ್ತಾನಂತೆ. ನಿಮ್ಮ ಮನೆಯ ಗಣೇಶ ಹಾಲು ಕುಡಿಯುತ್ತಾನೆಯೋ ನೋಡೋಣ ಎಂದು ಚಮಚದಲ್ಲಿ ಗಣೇಶನಿಗೆ ಹಾಲು ಹಿಡಿದರೆ ಅದು ಖಾಲಿಯಾಗಿಬಿಡಬೇಕೆ? ನಮ್ಮ ಮನೆಯ ಮುಂದೆಯೂ ಜನರು ಗಣೇಶನಿಗೆ ಹಾಲು ಕುಡಿಸಲು ಸಾಲು ಹಿಡಿದರು. ಇದೊಂದು ವಿಸ್ಮಯವೇ. ಈ ಸುದ್ದಿಯ ಮೂಲ ಯಾವುದೆಂದು ಯಾರಿಗೂ ಗೊತ್ತಾಗಲಿಲ್ಲ. ಆಗೆಲ್ಲ ರಾಮಮಂದಿರ ನಿರ್ಮಾಣದ ಸುದ್ದಿ ಜೋರಾಗಿಯೇ ನಡೆದಿತ್ತು. ಅಯೋಧ್ಯೆಯ ಬಾಬ್ರಿ ಮಸೀದೆಯನ್ನು ಕೆಡವಿದ ಬಿಸಿ ಇನ್ನೂ ಆರಿರಲಿಲ್ಲ. ಲೋಕಸಭೆಗೆ ಮತ್ತೊಂದು ಚುನಾವಣೆ ಹತ್ತಿರ ಬರುತ್ತಿತ್ತು. ಅಂಥ ಸಂದರ್ಭದಲ್ಲಿ ದೇವರಲ್ಲಿ ಜನರ ಶ್ರದ್ಧೆ ಭಕ್ತಿಯನ್ನು ನೆಲೆಗೊಳಿಸಲು ಇಂಥ ಸುದ್ದಿಯನ್ನು ಹಬ್ಬಿಸಲಾಗಿತ್ತು. ಯಾವುದೇ ಕಲ್ಲು ಅಥವಾ ಮಣ್ಣಿನ ಮೂರ್ತಿಗೆ ಹಾಲು ಹಿಡಿದರೆ ಕಲ್ಲು ಅದನ್ನು ಹೀರಿಕೊಳ್ಳುತ್ತದೆ. ಇದಕ್ಕೆ ವೈಜ್ಞಾನಿಕ ವಿವರಣೆ ಸಾಧ್ಯವಿದ್ದರೂ ಯಾರೂ ಅದನ್ನು ವಿವರಿಸುವುದಕ್ಕೆ ಹೋಗಲೇ ಇಲ್ಲ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ನೀಲಿಸುದ್ದಿಗಳು ನಿಜಕ್ಕೂ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದದ್ದು.
 ಇಂಥ ನೀಲಿ ಸುದ್ದಿಗಳು ಚುನಾವಣೆಯ ಸಂದರ್ಭದಲ್ಲಿ ಹಬ್ಬುವುದು ಸಾಮಾನ್ಯವಾಗಿದೆ. ಅವರು ಆ ಪಕ್ಷಕ್ಕೆ ಸೇರಿದರು, ಇವರು ಈ ಪಕ್ಷಕ್ಕೆ ಸೇರಿದರು, ಇವರು ಇಲ್ಲಿ ಚುನಾವಣೆಗೆ ನಿಲ್ಲುತ್ತಾರಂತೆ, ಅವರು ತಮ್ಮ ಹಿಂದಿನ ಕ್ಷೇತ್ರ ಬಿಡುತ್ತಾರಂತೆ, ಇವರು ಹೊಸ ಪಕ್ಷ ಕಟ್ಟುತ್ತಾರಂತೆ, ಅವರು ಆ ಪಕ್ಷ ವಿಲೀನಗೊಳಿಸುತ್ತಾರಂತೆ.. ಹೀಗೆ ಅಂತೆಕಂತೆಗಳು. ಅದೇ ಒಬ್ಬರ ರಾಜಕೀಯ ನಡೆಯ ಬಗ್ಗೆ ಹಲವು ಕತೆಗಳು ಉಪಕತೆಗಳು ಹುಟ್ಟಿಕೊಳ್ಳುತ್ತವೆ. ಪಕ್ಷ ಬಿಟ್ಟರೆ, ಚುನಾವಣೆಯಲ್ಲಿ ತಟಸ್ಥನಾದರೆ, ನಾಮಪತ್ರ ಹಿಂದಕ್ಕೆ ಪಡೆದರೆ, ಯಾರಿಗೋ ಬೆಂಬಲ ಘೋಷಿಸಿದರೆ ಅದಕ್ಕೆ ಸಂಬಂಧಿಸಿದಂತೆ ನೀಲಿ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಗುಡಿಗಾರ ನೀಲಿಯೆಂಬುದು ಮಕ್ಕಳಿಗೆ ಗುಮ್ಮನ ತೋರಿಸಿದಂತೆ ಎಂಬಂತಾಗಿದೆ ಈಗ.
 ಹಿಂದೆಲ್ಲ ಇಂಥವು ಬಾಯಿಂದ ಕಿವಿಗೆ ಹಬ್ಬುತ್ತಿದ್ದವು. ಇಂದು ಎಲೆಕ್ಟ್ರಾನಿಕ್ ಯುಗ. ಸುದ್ದಿಹಬ್ಬಿಸಲು ಹಲವು ದಾರಿ. ಫೇಸ್್ಬುಕ್್, ಟ್ವಿಟರ್್ ಎಸ್ಎಂಎಸ್್, ಬ್ಲಾಗ್್ಗಳು. ಇದರಲ್ಲಿ ಯಾರು ಬೇಕಾದರೂ ಹುಳು ಬಿಡಬಹುದು. ಆದರೆ ಇವೆಲ್ಲ ದಾಖಲಾಗಿಬಿಡುತ್ತವೆ. ಕಾನೂನು ಕ್ರಮ ಎದುರಿಸಬಹುದಾದ ಅಪಾಯಗಳೂ ಇದರಲ್ಲಿವೆ. ವಿದ್ಯುನ್ಮಾನ ಮಾಧ್ಯಮಗಳಂತೂ ವಿವಾದದ ಸುದ್ದಿಗಳಿಗೆ ಕಾಯ್ದು ಕುಳಿತಿರುತ್ತವೆ. ದಿಲ್ಲಿಯಲ್ಲಿ ಕುಳಿತ ರಾಜಕಾರಣಿಗೆ ಯಾವುದೋ ಒಂದು ವಿಷಯ ಮಾಧ್ಯಮದಲ್ಲಿ ಬರಬೇಕಾಗಿದೆ ಎನ್ನಿ. ಆದರೆ ಅದಕ್ಕೆ ಯಾವುದೇ ಆಧಾರಗಳು ಇರುವುದಿಲ್ಲ. ಆಗ ಏನು ಮಾಡುವುದು? ಅಲ್ಲಿಯ ಯಾವುದೋ ಪ್ರಭಾವಿಯಲ್ಲದ ಪುಟ್ಟ ಪತ್ರಿಕೆಯೊಂದರಲ್ಲಿ ಆ ಸುದ್ದಿಯನ್ನು ಪ್ರಕಟಿಸುವುದು. ನಂತರ ಅದನ್ನು ಟೀವಿ ವಾಹಿನಿಯ ಕಡೆಗೆ ಕೊಡುವುದು. ಆ ಟೀವಿ ವಾಹಿನಿಯವರು, ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವಂತೆ ಅದು ಹಾಗೆ ಇದು ಹೀಗೆ ಎಂದು ದೊಡ್ಡದಾಗಿ ಪ್ರಸಾರ ಮಾಡುತ್ತಾರೆ. ರಾಷ್ಟ್ರರಾಜಕಾರಣದಲ್ಲಿ ದಿನಬೆಳಗಾದರೆ ಸುದ್ದಿಯಲ್ಲಿರಬೇಕಾದರೆ, ತಮಗಾಗದವರ ತೇಜೋವಧೆಯನ್ನು ಮಾಡಬೇಕಾದರೆ ಇಂಥ ತಂತ್ರ ಪ್ರತಿತಂತ್ರಗಳು ನಡೆಯುತ್ತಲೇ ಇರುತ್ತವೆ. 
 ಮತಪೆಟ್ಟಿಗೆಯ ಗುಂಡಿ ಒತ್ತುವ ಪೂರ್ವದಲ್ಲಿ ಗುಡಿಗಾರ ನೀಲಿಯಂಥ ಸುದ್ದಿಗಳನ್ನು ಸೋಸಿ ಅರಗಿಸಿಕೊಳ್ಳುವ ಪ್ರಜ್ಞಾವಂತಿಕೆ ಮತದಾರರಲ್ಲಿ ಮೂಡಲಿ.