ಜಿ.ಎಸ್.ಸದಾಶಿವ ಅವರು ಮೂರು ಕೃತಿಗಳು
ಕನ್ನಡ ಕಾವ್ಯಲೋಕಕ್ಕೆ ಒಬ್ಬರು ಜಿಎಸ್‌ಎಸ್ ಇದ್ದಾರೆ. ಅದೇ ರೀತಿ ಕನ್ನಡ ಪತ್ರಿಕಾ ಲೋಕಕ್ಕೂ ಒಬ್ಬರು ಜಿಎಸ್‌ಎಸ್ ಇದ್ದರು. ಅವರೇ ಡೂಮನೆ ಶ್ರೀಪಾದರಾವ್ ಸದಾಶಿವ. ಕಾಲೇಜಿನಲ್ಲಿ ಪ್ರೊಫೆಸರ್ ಆಗಬೇಕು ಎಂದುಕೊಂಡಿದ್ದ ಸದಾಶಿವ ಪತ್ರಿಕಾರಂಗಕ್ಕೆ ಬಂದದ್ದು ತೀರ ಆಕಸ್ಮಿಕ. `ಸಂಯುಕ್ತ ಕರ್ನಾಟಕ'ದಲ್ಲಿ ವೃತ್ತಿ ಆರಂಭಿಸಿದ ಅವರು `ಪ್ರಜಾವಾಣಿ', `ಸುಧಾ' ಬಳಿಕ `ಕನ್ನಡಪ್ರಭ'ಕ್ಕೂ ಕಾಲಿಟ್ಟರು. ಮಹಾಮೌನಿಯಾಗಿದ್ದ ಸದಾಶಿವ ಅವರೊಳಗೊಬ್ಬ ನಗೆಗಾರ ಇದ್ದ ಎಂದರೆ ನಂಬುವುದಕ್ಕೇ ಆಗುವುದಿಲ್ಲ. ಸದಾಶಿವ ಕಥೆಗಾರರೆಂದು ಪ್ರಸಿದ್ಧರಾದವರು. ಹಾಗೆಯೇ ಮಕ್ಕಳ ಸಾಹಿತ್ಯವನ್ನೂ ಅವರು ರಚಿಸಿದ್ದಾರೆ. ಹಲವು ಕೃತಿಗಳನ್ನು ಅವರು ಅನುವಾದಿಸಿದ್ದಾರೆ.
ವಾರೆ ನೋಟ’ ಬರೆದವರಲ್ಲಿ ಸದಾಶಿವ ಒಬ್ಬರು.
ಸುದ್ದಿಯನ್ನು ನೇರವಾಗಿ ನೋಡದೆ ವಕ್ರವಾಗಿ ನೋಡುವ ಬರೆವಣಿಗೆಯ ಒಂದು ಪ್ರಕಾರ ಬಹಳ ಹಿಂದಿನಿಂದಲೇ ಇತ್ತು. `ಛೂ ಬಾಣ!'ನುಡಿಕಿಡಿ', `ಹುಚ್ಚಿಗೊಂದು ಚುಚ್ಚುಮದ್ದು', `ಸುದ್ದಿಗೊಂದು ಗುದ್ದು', `ವಾರೆ ನೋಟ' ಮೊದಲಾದ ಕಾಲಂಗಳು ಇದ್ದವು. ಮೊದಲು `ಪ್ರಜಾವಾಣಿ'ಯಲ್ಲಿ ಮೂರನೆಯ ಸಂಪಾದಕೀಯ ಈ ರೀತಿ ಇರುತ್ತಿತ್ತು. ಬೆಟಗೇರಿ ಕೃಷ್ಣಶರ್ಮರ `ಜಯಂತಿ' ಪತ್ರಿಕೆಯಲ್ಲೂ ಇಂಥ ಬರೆಹಗಳು ಇರುತ್ತಿದ್ದವು. ಕೊರವಂಜಿಯಲ್ಲಿ ಮತ್ತು ಬೀಚಿಯವರ ಬರೆಹಗಳಲ್ಲಿ ಇಂಥ ವ್ಯಂಗ್ಯ ನೋಟ ಇರುತ್ತಿದ್ದವು. `ಸುಧಾ'ದಲ್ಲಿ ವಾರ ಬಿಟ್ಟು `ವಾರ
ಕನ್ನಡಪ್ರಭ'ಕ್ಕೆ ಬಂದಮೇಲೆ ಪ್ರಾರಂಭಿಸಿದ ಅಂಕಣ
`ಗುರು-ಶಿಷ್ಯರು’. ಇದರಲ್ಲಿ ಅವರು ತಮ್ಮ ಹೆಸರನ್ನು `ಗುಂಸ’ ಎಂದು ಬರೆಯುತ್ತಿದ್ದರು. ಶರಾವತಿಯ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ತಾವು ಜನಿಸಿದ ಗುಂಡೂಮನೆ ಎಂಬ ಊರನ್ನು ಈ `ಗುಂಸ’ದಲ್ಲಿ ಅವರು ತಂದರು.
ಈ ಗುರು `ಶಿಷ್ಯ ಅಂಕಣ’ ಬರೆಹ ಇದೀಗ ಪುಸ್ತಕ ರೂಪದಲ್ಲಿ ಬಂದಿದೆ. ಪ್ರಚಲಿತ ಸುದ್ದಿಯನ್ನು ವ್ಯಂಗ್ಯವಾಗಿ ವಿಮರ್ಶಿಸುವ Wit (ಚಮತ್ಕಾರೋಕ್ತಿ) ಸದಾಶಿವ ಅವರಿಗೆ ಸಿದ್ಧಿಸಿತ್ತು. ಇದು ಹಾ ಹಾ ಹಾ ಎಂದು ಅಬ್ಬರಿಸಿ ನಗುವ ಹಾಗೆ ಮಾಡುವಂಥದ್ದಲ್ಲ. ಓದಿ ಮನನ ಮಾಡಿ ಮುಗುಳ್ನಗುವಂಥದ್ದು. ಇದೊಂದು ರೀತಿಯ ವಿಮರ್ಶೆ. ಜನಸಾಮಾನ್ಯನ ಟಿಪ್ಪಣಿ. ಶಿಷ್ಯನೊಬ್ಬ ತನ್ನ ಗುರುವಿನ ಮುಂದೆ ಅಂದಿನ ಸುದ್ದಿಯ ಬಗೆಗೆ ತನಗಿರುವ ಅನುಮಾನವನ್ನು ವ್ಯಕ್ತಪಡಿಸುವುದರೊಂದಿಗೆ ಅಂಕಣ ಪ್ರಾರಂಭವಾಗುತ್ತದೆ. ಗುರುವು ಆತನಿಗೆ ಸಮಾಧಾನ ಹೇಳುವನು. ಅವರಿಬ್ಬರ ಸಂಭಾಷಣೆಯಲ್ಲಿ ಸುದ್ದಿಗಿರುವ ವಿವಿಧ ಆಯಾಮಗಳು ಅನಾವರಣಗೊಳ್ಳುವುದು ಅಂಕಣದ ವಿಶೇಷ.
ಸಮರ್ಥ ಅನುವಾದಕ-
ಸದಾಶಿವ ಸಮರ್ಥ ಅನುವಾದಕರೂ ಹೌದು ಎಂಬುದಕ್ಕೆ ಇಲ್ಲಿ ಉಲ್ಲೇಖಿಸುವ ಎರಡು ಅನುವಾದಗಳೇ ಸಾಕ್ಷಿ. ನೊಬೆಲ್ ಪ್ರಶಸ್ತಿ ವಿಜೇತ ಇಟಲಿಯ ಗ್ರೇಸಿಯಾ ದಲೆದ್ದಾ ಅವರ `ತಾಯಿ’ (ಲ ಮಾದ್ರೆ) ಮತ್ತು ಇನ್ನೊಬ್ಬ ನೊಬೆಲ್ ಪುರಸ್ಕೃತ ಜರ್ಮನಿಯ ಹೇನ್ರಿಶ್ ಬ್ಯೋಲ್ ಅವರ `ಕಥರೀನಾ ಬ್ಲಮ್’ ಕಾದಂಬರಿ ಅವರ ಅನುವಾದ ಪ್ರತಿಭೆಯನ್ನು ನಿರೂಪಿಸುತ್ತವೆ.
`ಕಥರೀನಾ ಬ್ಲಮ್’ಳನ್ನು ಸೃಷ್ಟಿಸಿದ ಹೇನ್ರಿಶ್ ಬ್ಯೋಲ್ ಎರಡನೆ ಮಹಾಯುದ್ಧದಲ್ಲಿ ಸ್ವತಃ ಸೈನಿಕನಾಗಿ ಹೋರಾಡಿ ಗಾಯಾಳು ಕೂಡ ಆಗಿದ್ದರು. ಯುದ್ಧೋತ್ತರ ಜರ್ಮನಿಯಲ್ಲಿ ಯಾವ ಯಾವ ರೀತಿಯಲ್ಲಿ ತಲ್ಲಣಗಳು ಮನುಷ್ಯನ ಬದುಕಿನಲ್ಲಿ ಬಂದವು ಎನ್ನುವುದನ್ನು ಕಥರೀನಾ ಬ್ಲಮ್ ಪಾತ್ರದ ಮೂಲಕ ಹೇನ್ರಿಶ್ ಬ್ಯೋಲ್ ಕಟ್ಟಿಕೊಡುತ್ತಾರೆ. ತನ್ನ ಬದುಕನ್ನು ತುಂಬ ಕಷ್ಟಪಟ್ಟು ರೂಪಿಸಿಕೊಂಡಿದ್ದ ಕಥರೀನಾ ಬ್ಲಮ್ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯೊಬ್ಬನ ಪರಿಚಯವಾಗಿ ಆತನ ಪ್ರೀತಿಗೆ ಒಳಗಾಗುತ್ತಾಳೆ. ಅಲ್ಲಿಂದ ಅವಳ ಪ್ರಾರಬ್ಧ ಆರಂಭವಾಗುತ್ತದೆ. ಹಂತಹಂತವಾಗಿ ಅವಳ ಚಾರಿತ್ರ್ಯ ವಧೆ ಮಾಡಿ ಅವಳು ಒಬ್ಬ ಸೂಳೆ, ನಾಸ್ತಿಕಳು ಮತ್ತು ಕಮ್ಯುನಿಸ್ಟ್ ಎಂಬ ಆರೋಪವನ್ನು ಹೊರಿಸಿ ಮಾನಸಿಕವಾಗಿ ಅವಳು ಅಸ್ವಸ್ಥಳಾಗುವಂತೆ ಮಾಡುತ್ತಾರೆ. ಕೊನೆಯಲ್ಲಿ ಅವಳು ಕೊಲೆ ಮಾಡುವಂಥ ಸ್ಥಿತಿಯನ್ನೂ ತಲುಪುತ್ತಾಳೆ. ಈ ಪಾತ್ರದ ಮೂಲಕ ಇಡೀ ಪಶ್ಚಿಮ ಜರ್ಮನಿಯ ಸಮೂಹ ಪ್ರಜ್ಞೆಯನ್ನು ದಾಖಲಿಸುವಲ್ಲಿ ಹೇನ್ರಿಶ್ ಬ್ಯೋಲ್ ಯಶಸ್ವಿಯಾಗಿದ್ದಾರೆ.
ತಾಯ್ತನದ ಹಕ್ಕಿನ ಒಂದು ದುರಂತವನ್ನು ಮನುಷ್ಯನ ಮೂಲ ಪ್ರವೃತ್ತಿಗಳ ಹುಡುಕಾಟದಲ್ಲಿ ಮತ್ತು ಅಲ್ಲಿ ಕಾಣುವ ಬಿರುಕುಗಳ ಮೂಲಕ ಮನಗಾಣಿಸುವ ಕೃತಿ `ತಾಯಿ’ಯನ್ನು ಬರೆದವರು ಇಟಲಿಯ ಪ್ರಸಿದ್ಧ ಲೇಖಕಿ ಗ್ರೇಸಿಯಾ ದಲೆದ್ದಾ. ದೇವರ ಆರಾಧನೆಗಾಗಿ ದೀಕ್ಷೆ ಪಡೆದ ಪಾದ್ರಿ ಮತ್ತು ಒಬ್ಬ ಸ್ತ್ರೀಯ ಸುತ್ತ ಈ ಕಥಾನಕ ಬೆಳೆಯುತ್ತದೆ. ಸ್ವಸ್ಥ ಸಮಾಜಕ್ಕಾಗಿ ಮನುಷ್ಯ ಮಾಡಿಕೊಂಡಿರುವ ಕಾನೂನು ಕಟ್ಟಳೆಗಳ ಆಚೆಗಿನ ವ್ಯವಹಾರಗಳ ಕುರಿತು ಕುತೂಹಲ ಹೊಂದಿರುವ ಲೇಖಕಿ ಮನುಷ್ಯನ ಮೂಲ ಪ್ರವೃತ್ತಿಯ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಇರುವುದನ್ನು ಭಂಜಿಸುವ ಈ ಮನೋಧರ್ಮ ಕೊನೆಯಲ್ಲಿ ಕಾಣುವುದು ದುರಂತವನ್ನೇ.
ಸದಾಶಿವ ಅವರ ಅನುವಾದ ಶಬ್ದಗಳ ತರ್ಜುಮೆಯಲ್ಲ. ಅನ್ಯ ಸಂಸ್ಕೃತಿಯ ಇಂಥ ಕೃತಿಗಳನ್ನು ನಮ್ಮ ಸಂಸ್ಕೃತಿಗೆ ತರುವಾಗ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಆ ಸೂಕ್ಷ್ಮತೆಯನ್ನು ಈ ಅನುವಾದಗಳಲ್ಲಿ ನಾವು ಕಾಣಬಹುದು. `ಸದಾಶಿವರದ್ದು ಅನುವಾದವಲ್ಲ, ಅನುಸೃಷ್ಟಿ’ ಎಂಬ ಜಿ.ಎನ್.ರಂಗನಾಥರಾವ್ ಅವರ ಮಾತನ್ನು ಒಪ್ಪಲೇಬೇಕು.
ಇಂದು ನಮ್ಮೊಡನೆ ಇಲ್ಲದ ಜಿ.ಎಸ್.ಸದಾಶಿವ ಅವರನ್ನು ಬೆಂಗಳೂರಿನ `ಹೇಮಂತ ಸಾಹಿತ್ಯ’ ಈ ಮೂರು ಕೃತಿಗಳ ಮೂಲಕ ನೆನಪಿಸಿಕೊಳ್ಳುವಂತೆ ಮಾಡಿದೆ.
(ಕನ್ನಡಪ್ರಭದ ಸಾಪ್ತಾಹಿಕಪ್ರಭದಲ್ಲಿ 04-11-2012)
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.