*ದ್ವೈತ ಅಳಿದ ಅದ್ವೈತ ಭಾವ

ವರಿಬ್ಬರೂ ತುಂಬಾ ಸ್ನೇಹಿತರು ಎಂದು ಹೇಳುವಾಗ `ಗಳಸ್ಯ ಕಂಠಸ್ಯ' ಎಂದು ಹೇಳುತ್ತಾರೆ. ಒಂದೇ ತಾಟಿನಲ್ಲು ಊಟ ಮಾಡುವವರು ಎಂದೋ, ಚಡ್ಡಿ ದೋಸ್ತರು ಎಂದೋ, ಲಂಗೋಟಿ ಸ್ನೇಹಿತರು ಎಂದೋ ಈ ಸ್ನೇಹವನ್ನು ವಿವರಿಸುವವರು ಇದ್ದಾರೆ. ಅವನ ಕಣ್ಣಿಗೆ ಇರಿದರೆ ಇವನ ಕಣ್ಣಲ್ಲಿ ನೀರು ಎನ್ನುವ ಮಾತೂ ಇದೆ. ಗಳಸ್ಯ ಕಂಠಸ್ಯ’ದಲ್ಲಿ ಏನು ವಿಶೇಷ? ಗಳ ಎಂದರೂ ಕೊರಳು ಕಂಠ ಎಂದರೂ ಕೊರಳು. ಎರಡೂ ಒಂದೇ. ಅದೊಂದು ಅವಿನಾಭಾವ ಸಂಬಂಧ. ದ್ವಿರುಕ್ತಿ.
ಸ್ನೇಹದಲ್ಲಿ ಸ್ವಾರ್ಥ ಇರುವುದಿಲ್ಲ. ಸ್ವಾರ್ಥ ಎಲ್ಲಿ ತಲೆದೋರುವುದು? ತನ್ನದು ಮತ್ತು ಪರರದು ಎಂಬ ಭಾವ ಉದಿಸಿದಾಗ ಅಂದರೆ ದ್ವೈತ ಭಾವದಲ್ಲಿ ಸ್ವಾರ್ಥ ತಲೆದೋರಬಹುದು. ಈ ದ್ವೈತ ಅಳಿದು ಅದ್ವೈತ ಭಾವ ಉದಿಸಿದಾಗ ಸ್ವಾರ್ಥ ಮಾಯವಾಗುತ್ತದೆ. ಈ ಅದ್ವೈತ ಭಾವವೇ ಗಳಸ್ಯ ಕಂಠಸ್ಯ.
ಇದನ್ನೇ ಬಸವಣ್ಣ ಇವನಾರವ ಇವನಾರವ ಎಂದೆನ್ನಿಸದಿರು, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂದು ಹೇಳಿದ್ದು.