ಭಾರತೀಯರು ಸಾಹಸಪ್ರಿಯರು. ಬಹು ಹಿಂದೆಯೇ ಅವರು ಜಗತ್ತಿನ ಬೇರೆಬೇರೆ ಭೂಭಾಗಗಳಿಗೆ ವಲಸೆ ಹೋಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿ ತಮ್ಮ ಅಸ್ಮಿತೆಯನ್ನು ತೋರಿಸಿದ್ದಾರೆ. ಇದು ಕ್ರಿಸ್ತಪೂರ್ವ ಕಾಲದಿಂದಲೂ ನಡೆದುಬಂದ್ದದು. ಭಾರತದಲ್ಲಿ ಬ್ರಿಟಿಷರು ತಮ್ಮ ಸತ್ತೆಯನ್ನು ಸ್ಥಾಪಿಸಿದ ಸಂದರ್ಭದಲ್ಲಿ ಇಲ್ಲಿಯ ಬಡತನಕ್ಕೆ ಬೇಸತ್ತು ಉತ್ತಮ ಬದುಕನ್ನು ಹುಡುಕಿಕೊಂಡು, ಅಥವಾ ಅಂಥದ್ದೊಂದು ಭ್ರಮೆಯನ್ನು ಸೃಷ್ಟಿಸಿದವರ ಮಾತನ್ನು ನಂಬಿಕೊಂಡು ಕೆನಡಾ ದೇಶಕ್ಕೆ ವಲಸೆ ಹೊರಟು ಅಲ್ಲಿಂದ ತಿರಸ್ಕೃತರಾಗಿ ಮರಳಿ ತಾಯ್ನಾಡಿಗೆ ಬಂದಾಗ ಇಲ್ಲಿಯೂ ಸುಲಭದಲ್ಲಿ ಪ್ರವೇಶ ದೊರೆಯದೆ ಅತಂತ್ರರಾಗಿ ಕೆಲವರು ಸಾವನ್ನಪ್ಪಿದ ದುರಂತದ ಕಥನ ‘ಕೋಮಗಾತ ಮರು ನೌಕಾಘಾತ’ ಕೃತಿಯಲ್ಲಿದೆ. ಕೋಮಗಾತ ಮರು ನೌಕಾಘಾತ ಪ್ರಕರಣಕ್ಕೆ ಈ ವರ್ಷ ನೂರು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಆ ಘಟನೆಯ ಎಲ್ಲ ಮಗ್ಗಲುಗಳನ್ನು ಸಂಶೋಧಿಸಿ ಬಿ.ಪಿ.ಪ್ರೇಮಕುಮಾರ್ ಅವರು ಕೃತಿಯೊಂದನ್ನು ರಚಿಸಿರುವರು. ಸಾಹಸಿ ಉದ್ಯಮಿಯೊಬ್ಬನ ಹುಂಬತನದ ಸಾಹಸವೆಂಬಂತೆ ಕಾಣುವ ಈ ಘಟನೆಯು ಆ ಕಾಲದ ಬ್ರಿಟಿಷ್ ಸರ್ಕಾರದ ಗೋಸುಂಬೆತನವನ್ನು ಬಯಲುಮಾಡುವಲ್ಲಿ ಯಶಸ್ವಿಯಾಗಿದೆ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಸಿಪಾಯಿ ದಂಗೆ ನಡೆದು (ಅದೇ ಭಾರತದ ಮೊದಲನೆ ಸ್ವಾತಂತ್ರ್ಯ ಸಂಗ್ರಾಮ) ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟನ್ನಿನ ರಾಣಿಯೇ ಭಾರತವನ್ನು ನೇರವಾಗಿ ಆಳುವುದಕ್ಕೆ ಆರಂಭಿಸಿದ್ದಳು. ರಾಜಕೀಯವಾಗಿ ಹಲವು ಪರಿವರ್ತನೆಗಳು ಆಗಿದ್ದವು. ಭಾರತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸ್ಥಳೀಯ ಆಡಳಿತ ಮಾಡುತ್ತಿತ್ತಾದರೂ ಸರ್ಕಾರದ ವಿರುದ್ಧ ಪಿತೂರಿಗಳು ನಡೆಯುತ್ತಲೇ ಇದ್ದವು. ದೇಶೀಯರು ಇದನ್ನು ಸ್ವಾತಂತ್ರ್ಯಕ್ಕಾಗಿನ ಹೋರಾಟ ಎಂದುಕೊಂಡರೆ ಬ್ರಿಟಿಷರ ದೃಷ್ಟಿಯಲ್ಲಿ ಅದು ರಾಜದ್ರೋಹವಾಗಿತ್ತು. ಅವೆಲ್ಲ ಈ ನೆಲದ ಮಣ್ಣಿನಲ್ಲಿಯೇ ನಡೆದ ಹೋರಾಟಗಳಾಗಿದ್ದವು. ಆದರೆ ನೌಕಾಘಾತ ಸ್ವಲ್ಪ ಭಿನ್ನವಾದ ಘಟನೆಯಾಗಿದೆ. ಕೆನಡಾ ದೇಶ ಬಹು ಹಿಂದಿನಿಂದಲೂ ಹೊರ ದೇಶಗಳ ಜನರನ್ನು ಆಕರ್ಷಿಸುತ್ತಲೇ ಇತ್ತು. ಅದಕ್ಕೆ ಕಾರಣ ವಿಶಾಲವಾದ ಭೂಪ್ರದೇಶ ಹಾಗೂ ಕಡಿಮೆ ಜನಸಂಖ್ಯೆ. ಕೆನಡಾದಲ್ಲಿ ಪಂಜಾಬಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿಯೂ ಹಿಂದೆ ಬ್ರಿಟಿಷರದ್ದೇ ಆಡಳಿತವಿದ್ದದ್ದು. ಕಳೆದ ಶತಮಾನದ ಆರಂಭದ ದಶಕಗಳಲ್ಲಿ ಸ್ವಾತಂತ್ರ್ಯದ ಗಾಳಿ ಬಲವಾಗಿಯೇ ಬೀಸುತ್ತಿತ್ತು. ಬ್ರಿಟಿಷರ ವಿರೋಧಿ ಅಲೆ ತೀವ್ರವಾಗಿತ್ತು. ಬಂಗಾಳದ ವಿಭಜನೆಯನ್ನು ಮಾಡಿ ಬ್ರಿಟಿಷರು ಕೈಸುಟ್ಟುಕೊಂಡಿದ್ದರು. ಇಂಥ ಕಲಸುಮೋಲೋಗರದ ಸ್ಥಿತಿಯಲ್ಲಿ ಪಂಜಾಬಿನ ಸಾಹಸಿಯಾದ ಬಾಬಾ ಗುರುದೀತ ಸಿಂಗ್ ಎಂಬವರು ಕೆನಡಾಕ್ಕೆ ವಲಸೆ ಹೋಗುವ ಯೋಜನೆಯೊಂದನ್ನು ತಯಾರಿಸುತ್ತಾರೆ. ಸುಮಾರು ನಾನೂರು ಜನರು ಅಲ್ಲಿಗೆ ತೆರಳಲು ಸಿದ್ಧರಾಗುತ್ತಾರೆ. ಅದಕ್ಕಾಗಿ ಗುರುದೀತ ಅವರು ಜಪಾನಿನ ‘ಕೋಮಗಾತ ಮರು’ ಎಂಬ ಹಡಗನ್ನು ಬಾಡಿಗೆ ಪಡೆಯುತ್ತಾರೆ. ಈ ಇಡೀ ಸಾಹಸದ ಯೋಜನೆಗೆ ಲೇಖಕರು ಒಂದು ಹಿನ್ನೆಲೆಯನ್ನು ಒದಗಿಸುತ್ತಾರೆ. ಬಾಬಾ ಗುರುದೀತ ಸಿಂಗ್ ಅಮೃತಸರ ಜಿಲ್ಲೆಯ ಸರ್ಹಾಲಿ ಎಂಬಲ್ಲಿ ಜನಿಸಿದವರು. ಇವರು ಚಿಕ್ಕವರಿದ್ದಾಗ ಕ್ಷಾಮ ಬಂದು ಇವರ ತಂದೆ ಮಲಯಾಕ್ಕೆ ಹೋಗುತ್ತಾರೆ. ತಂದೆಗೆ ಪತ್ರ ಬರೆಯಲು ಬಾರದಿದ್ದಾಗ ನಾಚಿಕೆಯಾಗಿ ಮತ್ತೆ ವಿದ್ಯಾಭ್ಯಾಸವನ್ನು ಮಾಡುತ್ತಾರೆ. ಅಂಬಾಲಾದಲ್ಲಿ ಸೈನ್ಯಕ್ಕೆ ಸೇರಲು ಯತ್ನಿಸಿದಾಗ ತಮ್ಮ ಕೃಶವಾದ ಶರೀರದಿಂದಾಗಿ ಆಯ್ಕೆಯಾಗುವುದಿಲ್ಲ. ೧೮೭೫ರಲ್ಲಿ ತಮ್ಮ ಸಹೋದರನ ಜೊತೆ ಇವರೂ ಮಲಯಾಕ್ಕೆ ಹೋಗುತ್ತಾರೆ. ತೈಪಿಂಗ್ನಲ್ಲಿ ಹಂದಿ ಮಾಂಸ ಮಾರುವ ಒಬ್ಬ ಚೀನಿ ವ್ಯಾಪಾರಿಯ ಬಳಿ ಕೆಲಸಕ್ಕೆ ಸೇರುತ್ತಾರೆ. ಬಳಿಕ ಪಂಜಾಬಿನಿಂದ ಕಡಿಮೆ ಬೆಲೆಗೆ ಸಿಗುವ ರಾಸುಗಳನ್ನು ಆಮದು ಮಾಡಿಕೊಳ್ಳುವ ವ್ಯವಹಾರ ಆರಂಭಿಸುತ್ತಾರೆ. ರೈಲ್ವೆ ಗುತ್ತಿಗೆ ಮತ್ತು ರಬ್ಬರ್ ಮರಗಳ ತೋಟಗಾರಿಕೆ ವ್ಯವಹಾರದಲ್ಲಿ ಅವರಿಗೆ ಲಕ್ಷ್ಮಿ ಒಲಿಯುತ್ತಾಳೆ. ೧೯೧೩ರಲ್ಲಿ ಗುರುದೀತ್ಸಿಂಗ್ಗೆ ೫೫ ವರ್ಷ. ಈ ಅಧ್ಯಾಯದಲ್ಲಿ ಲೇಖಕರು ಭಾರತೀಯ ಕೂಲಿಕಾರ್ಮಿಕರು ವಿದೇಶಗಳಿಗೆ ಹೇಗೆ ಹೋಗುತ್ತಿದ್ದರು, ಇದು ಕೂಡ ಹೇಗೆ ಒಂದು ಜೀತಪದ್ಧತಿ, ಈ ವ್ಯವಹಾರ ಹೇಗೆ ಕುದುರುತ್ತಿತ್ತು, ಬಿಳಿಯ ಮಾಲೀಕರು ತಾವು ಸಾಕುವ ಪ್ರಾಣಿಗಳಿಗಿಂತ ಕೀಳಾಗಿ ಭಾರತೀಯ ಕೂಲಿಗಳನ್ನು ಹೇಗೆ ಕಾಣುತ್ತಿದ್ದರು, ಇದಕ್ಕೆ ಬ್ರಿಟಿಷ್ ಆಡಳಿತ ಹೇಗೆ ಕಾನೂನಿನ ಕವಚವನ್ನು ಹೊದೆಸಿತ್ತು ಎಂಬಿತ್ಯಾದಿ ವಿವರಗಳನ್ನು ಕೊಡುತ್ತಾರೆ. ಒಂದು ಕುದುರೆಯ ಬೆಲೆಗೆ ತೋಟದ ಮಾಲೀಕ ಸುಮಾರು ೪೦ ಭಾರತೀಯ ಕೂಲಿಗಳನ್ನು ಖರೀದಿಸಬಲ್ಲವನಾಗಿದ್ದ ಎಂಬ ಮಾತು ಇದರಲ್ಲಿದೆ. ೧೯೧೧ರ ಜನಗಣತಿಯ ಪ್ರಕಾರ ಏಳು ಲಕ್ಷ ಮಹಿಳೆಯರೂ ಕೂಡಿದಂತೆ ಸುಮಾರು ಇಪ್ಪತ್ತು ಲಕ್ಷ ಭಾರತೀಯರು ಹೊರದೇಶಗಳಿಗೆ ಕೂಲಿಗಳಾಗಿ ಕಳುಹಿಸಲ್ಪಟ್ಟಿದ್ದರು ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯದ ಎರಡು ಮುಖ್ಯ ಭಾಗಗಳಾಗಿದ್ದ ಕೆನಡಾ ಮತ್ತು ಭಾರತದ ನಡುವಣ ಸಂಬಂಧಗಳು ಎಂದೂ ಸಂತೋಷದಾಯಕವಾಗಿರಲಿಲ್ಲ. ಭಾರತೀಯರ ವಲಸೆ ಕೆನಡಾದವರಿಗೆ ತಲೆನೋವಿನ ವಿಚಾರವಾಗಿದ್ದರೆ ಭಾರತೀಯರಿಗೆ ಕೆನಡಾದಲ್ಲಿ ತಮಗೂ ಸಮಾನ ಹಕ್ಕು ಮತ್ತು ಗೌರವವನ್ನು ನೀಡಬೇಕೆಂಬ ಬೇಡಿಕೆ ನ್ಯಾಯಸಮ್ಮತವೆನಿಸಿರುತ್ತದೆ. ಭಾರತೀಯರು ಕೆನಡಾದಲ್ಲಿ ಕಾಲಿಟ್ಟಿದ್ದು ೧೯ನೆ ಶತಮಾನದ ಅಂತಿಮ ದಶಕದಲ್ಲಿ. ಮಹಾರಾಣಿ ವಿಕ್ಟೋರಿಯಾಳ ಕಿರೀಟಧಾರಣೆಯ ವಜ್ರಮಹೋತ್ಸವವನ್ನು ೧೮೯೭ರಲ್ಲಿ ಆಚರಿಸಿದಾಗ ಭಾರತೀಯ ಸೇನೆಯ ಸಿಖ್ಖ್ ತುಕಡಿಯೊಂದನ್ನು ಸಮಾರಂಭದಲ್ಲಿ ಭಾಗವಹಿಸಲು ಲಂಡನ್ನಿಗೆ ಕಳುಹಿಸಲಾಗಿತ್ತು. ತಮ್ಮ ಈ ಪ್ರಯಾಣದಲ್ಲಿ ಅವರು ಕೆನಡಾ ದೇಶವನ್ನೂ ಭೆಟ್ಟಿಮಾಡಿರುತ್ತಾರೆ. ಕೆನಡಾದ ಹುಲ್ಲುಗಾವಲುಗಳು ಅವರಿಗೆ ತಮ್ಮ ಪಂಜಾಬಿನ ನೆನಪನ್ನು ಮಾಡಿಕೊಟ್ಟಿದ್ದು ಸಹಜ. ಕೆನಡಾದಂತಹ ವಿಶಾಲ ಪ್ರಾಂತದಲ್ಲಿ ಔದ್ಯೋಗಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದ್ದ ಬ್ರಿಟಿಷ್ ವ್ಯಾಂಕೋವರ್ ಅವರಿಗೆ ಜೀವನೋಪಾಯದ ಹೊಸ ಅವಕಾಶಗಳ ಚಿನ್ನದ ಗಣಿಯಾಗಿ ಕಂಡಿತು. ೧೯೦೫ರ ವೇಳೆಗೆ ಸಾಕಷ್ಟು ಭಾರತೀಯರು ಬ್ರಿಟಿಷ್ ಕೊಲಂಬಿಯಾ ಪ್ರಾಂತಕ್ಕೆ ವಲಸೆ ಹೋಗಿ ನೆಲೆಸಿದ್ದುದು ಅಲ್ಲಿಯವರ ಕಣ್ಣುಕುಕ್ಕುವಂತಾಗಿತ್ತು. ೧೯೦೫-೦೭ರ ಅವಧಿಯಲ್ಲಿ ಕೆನಡಾಗೆ ವಲಸೆಹೋದ ಭಾರತೀಯರ ಸಂಖ್ಯೆ ೫೦೦೦ದಷ್ಟಾಗಿತ್ತು. ಬ್ರಿಟಿಷ್ ಪ್ರಜೆಗಳು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಗುಳೆಹೋಗುವುದು ವಿಶೇಷವಾಗಿರದ ಕಾರಣ ಅವರ ಪ್ರವೇಶವನ್ನು ನಿಷೇಧಿಸಲು ಯಾವ ಕಾನೂನೂ ಇರಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಭಾರತೀಯರೊಂದಿಗೆ ಚೀನ ಮತ್ತು ಜಪಾನ್ ದೇಶದವರೂ ಸೇರಿ ಸುಮಾರು ೪೭೦೦ ಜನ ಕೆನಡಾದ ಕರಾವಳಿಗೆ ಕಾಲಿಟ್ಟಾಗ ಅಲ್ಲಿಯ ಶ್ವೇತವರ್ಣೀಯರು ಪ್ರತಿಭಟಿಸಿ ಇವರ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಾರೆ. ಅಲ್ಲಿರುವ ಮೂಲ ನಿವಾಸಿಗಳನ್ನು ಇಂಡಿಯನ್ನರು ಎಂದು ಕರೆಯುತ್ತಿದ್ದುದರಿಂದ ಭಾರತದಿಂದ ಅಲ್ಲಿಗೆ ಹೋದವರನ್ನು ಹಿಂದೂಗಳು ಎಂದು ವರ್ಗವಾಚಕವಾಗಿ ಕರೆಯಲಾಗುತ್ತಿತ್ತು. ೧೯೦೭ರಲ್ಲಿ ಅಲ್ಲಿಯ ಕೇಂದ್ರ ಸರ್ಕಾರ ವಲಸೆ ನಿಯಂತ್ರಣ ಕಾನೂನನ್ನು ಜಾರಿಗೆ ತರುತ್ತದೆ. ನಂತರದ ಏಳು ವರ್ಷಗಳಲ್ಲಿ ಕೆನಡಾಕ್ಕೆ ವಲಸೆ ಹೋದ ಭಾರತೀಯರ ಸಂಖ್ಯೆ ೧೨೫ಕ್ಕೂ ಕಡಿಮೆ. ಕೆನಡಾಕ್ಕೆ ವಲಸೆ ಹೋಗಲು ಕಾರಣಗಳನ್ನು ಪಟ್ಟಿಮಾಡುವ ಲೇಖಕರು, ಹಣದುಬ್ಬರ, ಬಡತನ, ಅಲ್ಲಿ ಸಿಗುವ ಹೆಚ್ಚಿನ ಸಂಬಳ ಜೊತೆಗೆ ಕೆನಡಾಗೆ ಪ್ರಯಾಣಿಕರನ್ನು ಸಾಗಿಸುವ ಹಡಗುಗಳು ಮತ್ತು ಅವರ ಟಿಕೇಟುಗಳನ್ನು ಮಾರುವ ಏಜಂಟರುಗಳ ಅಬ್ಬರದ ಪ್ರಚಾರವೇ ಕಾರಣ ಎಂಬ ಮೆಕೆಂಜೀ ಕಿಂಗ್ ಅವರ ವರದಿಯನ್ನು ಪ್ರಸ್ತಾಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಾಬಾ ಗುರುದೀತಸಿಂಗ್ ಕೆನಡಾ ವಲಸೆ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ೧೯೧೪ರ ಶನಿವಾರ ಏಪ್ರಿಲ್೪ರಂದು ಪ್ರಯಾಣ ಆರಂಭವಾಗುತ್ತದೆ. ಬೇರೆಬೇರೆ ಊರುಗಳಿಂದ ಹತ್ತಿದ ಪ್ರಯಾಣಿಕರ ಸಂಖ್ಯೆ ೩೭೬. ಇವರಲ್ಲಿ ೨೪ ಮುಸ್ಲಿಮರು, ೧೨ ಹಿಂದೂಗಳು ಮತ್ತು ೩೪೦ ಹಿಂದೂಗಳು ಇದ್ದರು. ಹಡಗು ಕೆನಡಾದ ವಿಕ್ಟೋರಿಯಾ ಬಂದರಿನ ಸಮೀಪ ಮೇ ೨೧ರಂದು ತಲುಪುತ್ತದೆ. ಅಲ್ಲಿ ಅಧಿಕಾರಿಗಳು ಅದನ್ನು ತಡೆದು ನಿಲ್ಲಿಸುತ್ತಾರೆ. ಹಲವು ನಾಟಕೀಯ ಬೆಳವಣಿಗೆಗಳ ನಂತರ ಜುಲೈ ೨೨ರಂದು ಹಡಗು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗುತ್ತದೆ. ಕೆನಡಾದ ವಲಸೆ ಕಾನೂನು, ಅಲ್ಲಿಯ ಅಧಿಕಾರಿಗಳ ವಿಪರೀತದ ವರ್ತನೆಗಳು, ಮಾನವೀಯತೆಯ ಅಭಾವ ಇತ್ಯಾದಿಗಳೆಲ್ಲವನ್ನೂ ಇಲ್ಲಿ ಲೇಖಕರು ಬೇರೆಬೇರೆ ಮೂಲಗಳನ್ನು ಆಧರಿಸಿ ದಾಖಲಿಸಿದ್ದಾರೆ. ಭಾರತಕ್ಕೆ ಮರಳುವಾಗ ಯೋಕಹಾಮ, ಸಿಂಗಪುರ, ಕಾಲ್ಪಿ, ಬಜ್ಬಜ್ಗಳಲ್ಲಿ ನಡೆದ ಘಟನೆಗಳನ್ನು ವಿವರವಾಗಿಯೇ ದಾಖಲಿಸಿದ್ದಾರೆ. ಭಾರತ ಪ್ರಜೆಗಳಿಗೇ ಭಾರತದ ನೆಲದ ಮೇಲೆ ಇಳಿಯುವುದಕ್ಕೆ ಅವಕಾಶ ಸಿಗುವುದಿಲ್ಲ. ಈ ಸಂದರ್ಭದಲ್ಲಿ ನಡೆದ ಅಚಾತುರ್ಯದಲ್ಲಿ ಪೊಲೀಸರು ಗೋಲಿಬಾರ್ ಮಾಡುತ್ತಾರೆ. ಅದರಲ್ಲಿ ೧೮ ಮಂದಿ ಸಾವನ್ನಪ್ಪುತ್ತಾರೆ. ಬಾಬಾ ಗುರುದೀತಸಿಂಗ್ ತಲೆಮರೆಸಿಕೊಳ್ಳುತ್ತಾರೆ. ನಂತರ ಪೊಲೀಸರಿಗೆ ಶರಣಾಗುತ್ತಾರೆ. ಅವರು ಆರುವ ರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ನೆಲೆಯಾಗಬೇಕೆಂದು ಹೋದ ದೇಶದಲ್ಲಿಯೂ ಸ್ವಾಗತ ಸಿಗದೆ, ಹುಟ್ಟಿದ ದೇಶದಲ್ಲಿಯೂ ಮರಳಿ ಸೇರಿಸಿಕೊಳ್ಳದೆ ತ್ರಿಶಂಕು ಬದುಕನ್ನು ಈ ಸಾಹಸಿಗಳು ಅನುಭವಿಸಬೇಕಾಯಿತು. ಈ ಕೃತಿಯನ್ನು ನೀವು ಒಂದು ಕಾದಂಬರಿಯಂತೆಯೂ ಓದಬಹುದು, ಇತಿಹಾಸದ ಪಠ್ಯದಂತೆಯೂ ಓದಬಹುದು, ಅದ್ಭುತರಮ್ಯ ಜನಪದ ಕತೆಯಂತೆಯೂ ಓದಬಹುದು. ಒಂದು ಜೀವನ ಚರಿತ್ರೆಯಂತೆಯೂ ಇದು ಭಾಸವಾಗಬಹುದು. ಓರ್ವ ಸಾಹಸಿ ಉದ್ಯಮಿಯ ಹುಂಬತನದ ಸಮುದ್ರಯಾನದಂತೆಯೂ ಇದು ತೋರಬಹುದು. ಗುರುದೀತಸಿಂಗನನ್ನು ಓಬ್ಬ ಹೀರೋನಂತೆ ಚಿತ್ರಿಸದೆ ವಾಸ್ತವಾಂಶಗಳ ಮೇಲೆ ಇಲ್ಲಿಯ ಕಥನ ಸಾಗಿದೆ. ಆತ ಒಬ್ಬ ಯಶಸ್ವಿ ಉದ್ಯಮಿ. ಕಾನೂನನ್ನು ಚೆನ್ನಾಗಿ ತಿಳಿದುಕೊಂಡವನು. ಕೋಮಗಾತ ಮರು ಹಡಗನ್ನೇ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದನು. ಆದರೆ ಕೆನಡಾ ದೇಶದ ಆಡಳಿತದ ತಪ್ಪು ನಿರ್ಧಾರದಿಂದಾಗಿ ಆತನ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗುತ್ತವೆ. ಕೃತಿಯ ವಸ್ತುನಿಷ್ಠತೆಗಾಗಿ ಲೇಖಕರನ್ನು ಅಭಿನಂದಿಸಲೇಬೇಕು. ಇದಕ್ಕಾಗಿ ಅವರು ಅಪಾರವಾಗಿ ಶ್ರಮಿಸಿದ್ದಾರೆ. ಕೆನಡಾದ ಈಗಿನ ಸರ್ಕಾರ ತನ್ನ ಅಂದಿನ ಸರ್ಕಾರದ ನಿಲವನ್ನು ತಪ್ಪೆಂದು ಒಪ್ಪಿಕೊಂಡಿದೆ. ಈ ಘಟನೆಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಅದು ಒಂದು ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.