*ಅದ್ಭುತ ಸಾಮರ್ಥ್ಯ ಇದು ಸೂಚಿಸುತ್ತದೆ

ಜೇನು ಸಿಹಿಯಾಗಿದೆ ಎಂದು ಎದುರು ಇದ್ದವನಿಗೆ ಸಾವಿರ ಸಲ ಹೇಳಿದರೂ ಅದರ ಅನುಭವ ಅವನಿಗೆ ಆಗುವುದಿಲ್ಲ. ಅದೇ ಒಂದು ಹನಿ ಜೇನನ್ನು ಆತನ ನಾಲಿಗೆಯ ಮೇಲೆ ಹಾಕಿದರೆ ಸಿಹಿ ಯಾವ ವಿವರಣೆ ಇಲ್ಲದೆಯೇ ಅವನಿಗೆ ಅರಿವಾಗುವುದು.
ಅಕ್ಷರಗಳಿಗೆ ನಿಲುಕದ ಅದೆಷ್ಟೋ ಅದ್ಭುತಗಳು ಇವೆ. ಅವನ್ನು ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವರ್ಣಿಸುತ್ತಲೂ ಇರುತ್ತೇವೆ. ಇದಕ್ಕಾಗಿ ಶಬ್ದದ ವಾಚ್ಯಾರ್ಥವನ್ನು ಮೀರಿ ವ್ಯಂಗ್ಯಾರ್ಥದ ನೆರವನ್ನು ಪಡೆದುಕೊಳ್ಳುತ್ತೇವೆ.
ಇಲ್ಲಿ ಒಬ್ಬ ವ್ಯಕ್ತಿ ಮಹಾನ್‌ ಸಾಮರ್ಥ್ಯದವನು ಎಂದು ಹೇಳಬೇಕಾಗಿದೆ. ಆತ ಸರ್ವಶಕ್ತ. ಅಂದರೆ ದೇವರಿಗೆ ಸಮಾನ. ದೇವರಿಗೆ ಅಸಾಧ್ಯವಾದದ್ದು ಏನಿದೆ? ಆಶೀರ್ವದಿಸಿ ಕೊಟ್ಟರೆ ವರ ವರವಾಗುತ್ತದೆ. ಅದೇ ಕೋಪಗೊಂಡು ಏನನ್ನಾದರೂ ನುಡಿದರೆ ಅದು ಶಾಪವಾಗುತ್ತದೆ.
ದೇವರಿಗೆ ಸರಿಸಮನಾದ ಸಾಮರ್ಥ್ಯದವನು ಆತ ಎಂಬುದನ್ನು `ಕೊಟ್ರೆ ವರ, ಇಟ್ರೆ ಶಾಪ’ ಎಂಬ ಮಾತು ಸಮರ್ಥವಾಗಿ ವಿವರಿಸುತ್ತದೆ. ಅವನ ವಿರೋಧ ಕಟ್ಟಿಕೊಳ್ಳಬೇಡ. ಅದರಿಂದ ಅಪಾಯ. ಅವನೊಂದಿಗೆ ಹೊಂದಿಕೊಂಡಿದ್ದರೆ ಅನುಕೂಲ ನಿನಗೆ ಎಂಬ ಬುದ್ಧಿವಾದವನ್ನೂ ಇದು ಹೇಳುತ್ತದೆ.