*ದುರ್ಬಲ ಮನಸ್ಸಿನ ಪ್ರತೀಕ

ದೃಢ ಚಿತ್ತ ಇಲ್ಲದ ವ್ಯಕ್ತಿಗಳನ್ನು, `ಅವನೊಬ್ಬ ಕೆಸರೊಳಗಿನ ಗೂಟ’ ಎಂದು ಹೇಳುವುದಿದೆ. ಗೂಟ ಗಟ್ಟಿಯಾಗಿ ನಿಲ್ಲಬೇಕಿದ್ದರೆ ಭೂಮಿ ಗಟ್ಟಿಯಾಗಿರಬೇಕು. ಭೂಮಿಯೇ ಗಟ್ಟಿಯಿಲ್ಲದಿದ್ದರೆ ಗೂಟವು ಬಲವಾಗಿ ನಿಲ್ಲುವುದು ಸಾಧ್ಯವೆ? ಯಾವ ಕಡೆಗೆ ಬೇಕಾದರೂ ಈ ಕೆಸರೊಳಗಿನ ಗೂಟ ವಾಲುತ್ತದೆ. ಆದರೆ ಗಟ್ಟಿಯಾದ ನೆಲದ ಮೇಲೆ ಹುಗಿದ ಗೂಟವನ್ನು ಬಾಗಿಸಲು ಸಾಧ್ಯವೇ ಇಲ್ಲ.
ಕೆಲವರಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಸದಾ ಡೋಲಾಯಮಾನ ಸ್ಥಿತಿ. ಹಾಗೆ ಮಾಡಿದರೆ ಸರಿಯೆ, ಹೀಗೆ ಮಾಡಿದರೆ ಸರಿಯೆ ಎಂಬ ಗೊಂದಲದಲ್ಲಿ ಸದಾ ಅವರಿರುತ್ತಾರೆ. ಇಂಥವರಿಂದ ಯಾವುದೇ ದೊಡ್ಡ ಕೆಲಸವು ಆಗುವುದಿಲ್ಲ. ನಾಯಕರಾಗುವುದೂ ಅವರಿಂದ ಸಾಧ್ಯವಿಲ್ಲ. ಒಳ್ಳೆಯ ಅನುಯಾಯಿಯೂ ಅವರಾಗುವುದಿಲ್ಲ. ಏಕೆಂದರೆ ತಾವು ನಂಬಿದ ವ್ಯಕ್ತಿಯ ಕುರಿತೇ ಅವರಿಗೆ ಅನುಮಾನ. ಯಾವುದೇ ವಿಷಯದಲ್ಲಿ ಸ್ಪಷ್ಟವಾದ ನಿಲುವು ತಳೆಯುವುದು ಅವರಿಗೆ ಸಾಧ್ಯವಾಗುವುದಿಲ್ಲ.
ಯಾರು ಏನು ಹೇಳಿದರೂ ಅದಕ್ಕೆ ತಲೆದೂಗುವ ವ್ಯಕ್ತಿತ್ವ ಇವರದು. ಇವರ ಮಾತು ಅಡ್ಡಗೋಡೆಯ ಮೇಲೆ ದೀಪ ಇಟ್ಟಹಾಗೆ ಇರುತ್ತದೆ. ಬೆಳಕು ಆಚೆಯೂ ಬೀಳುತ್ತದೆ, ಈಚೆಯೂ ಬೀಳುತ್ತದೆ. ಇವರಿಗೆ ತಮ್ಮದೇ ಎನ್ನುವಂಥ ಆಯ್ಕೆಗಳು ಇರುವುದಿಲ್ಲ. ಬೇರೆಯವರ ಆಯ್ಕೆಯನ್ನೇ ತಮ್ಮದು ಎಂದು ಸುಲಭವಾಗಿ ಒಪ್ಪಿಕೊಂಡುಬಿಡುತ್ತಾರೆ. ತಮ್ಮದು ಸರಿ ಇದ್ದರೂ ತಮ್ಮದೇ ಸರಿ ಎಂದು ವಾದಿಸುವ ಧೈರ್ಯ ಇವರಿಗೆ ಇರುವುದಿಲ್ಲ. ಎಲ್ಲೆಲ್ಲಿಯೂ ಸಲ್ಲಬೇಕೆಂದು ಬಯಸಿ ಕೊನೆಗೆ ಎಲ್ಲಿಯೂ ಸಲ್ಲದವರಾಗಿಬಿಡುತ್ತಾರೆ.