*ಮೌಲ್ಯಮಾಪನ ಕಷ್ಟವಾಗಿರುವ ವ್ಯಾಪಾರ
ಕುದುರೆ ವ್ಯಾಪಾರ ಎಂಬ ಪದಗುಚ್ಛ ಬಳಕೆ ರಾಜಕೀಯಕ್ಕೆ ಸಂಬಂಧಿಸಿದಂತೆ ಬಳಕೆಯಾಗುತ್ತಿದೆ. ಒಂದು ಪಕ್ಷದ ಚುನಾಯಿತ ಪ್ರತಿನಿಧಿಯನ್ನು ಇನ್ನೊಂದು ಪಕ್ಷಕ್ಕೆ ಸೇರಿಸಿಕೊಳ್ಳಲು ನಡೆಸುವ ವ್ಯವಹಾರವನ್ನು ಕುದುರೆ ವ್ಯಾಪಾರ ಎಂದು ಕರೆಯಲಾಗುತ್ತದೆ.
ಬೇರೆ ಪಕ್ಷದವರ ಮತವನ್ನು ತಮ್ಮ ಪಕ್ಷದ ಕಡೆ ಸೆಳೆದುಕೊಳ್ಳಲು ಕುದುರಿಸುವ ವ್ಯವಹಾರವನ್ನೂ ಕುದುರೆ ವ್ಯಾಪಾರ ಎನ್ನುವರು. ಕುದುರೆ ವ್ಯಾಪಾರ ತುಂಬ ಕಷ್ಟದ್ದು. ಇದರಲ್ಲಿ ದಲ್ಲಾಳಿಗಳು ಗ್ರಾಹಕರನ್ನು ಮೋಸಗೊಳಿಸುವ ಸಾಧ್ಯತೆ ತುಂಬ ಇರುತ್ತದೆ.
ಕುದುರೆಯ ಗುಣ ಸ್ವಭಾವ, ಅದರ ವಯಸ್ಸು ಇತ್ಯಾದಿಗಳ ಸಂಬಂಧದಲ್ಲಿ ಸುಳ್ಳನ್ನು ಹೇಳಬಹುದು. ಇದನ್ನು ನಿಖರವಾಗಿ ಗುರುತಿಸುವುದು ಸಾಧ್ಯವಿಲ್ಲ. ಕುದುರೆ ವ್ಯಾಪಾರದಲ್ಲಿ ತೀವ್ರ ಸ್ವರೂಪದ ಚೌಕಾಶಿಯೂ ಇರುತ್ತದೆ. ವ್ಯಾಪಾರದಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಇದರಲ್ಲಿ ಒಳ ವ್ಯವಹಾರಗಳೂ ಇರುತ್ತವೆ. ಒಂದು ರೀತಿಯಲ್ಲಿ ಮುಸುಕಿನೊಳಗಿನ ವ್ಯವಹಾರ.
ಅಮೆರಿಕದಲ್ಲಿ ಹತ್ತೊಂಬತ್ತನೇ ಶತಮಾನದಲ್ಲೇ ಇಂಥ ಅನ್ಯಾಯದ ಕುದುರೆ ವ್ಯಾಪಾರವನ್ನು ತಡೆಯಲು ಕಾನೂನನ್ನು ತರಬೇಕೆಂಬ ಕೂಗೆದ್ದಿತ್ತು. ಈಗ ಭಾರತದಲ್ಲಿ ರಾಜಕಾರಣಿಗಳ ಕುದುರೆ ವ್ಯಾಪಾರ ತಡೆಯಲು ಪಕ್ಷಾಂತರ ನಿಷೇಧವೆಂಬ ಕಾಯ್ದೆಯನ್ನು ಮಾಡಲಾಗಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.