ಕಾಲುಬಂದ ಕುರುವ ಕಥಾಸಂಕಲನ ಇದರಲ್ಲಿ 10 ಕತೆಗಳು ಇವೆ. ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಇದನ್ನು 2011ರಲ್ಲಿ ಪ್ರಕಟಿಸಿತು.

1.ಚಂಪಾಲು ಸೆಟ್ಟಿಯೂ ಲಕುಮವ್ವಿಯೂ
2.ಬೆಟ್ಟದ ನೆಲ್ಲಿಕಾಯ ಸಮುದ್ರದೊಳಗಣ ಉಪ್ಪು
3.ಕುನ್ನಿಯೊಂದು ದಾಸನಾಗಿ ಸತ್ತುದರ ವಿವರಗಳು
4.ಗೋಕರ್ಣದಲ್ಲಿ ಹೀಗೊಂದು ಲಿಂಗಪೂಜೆ
5.ಕಾಲುಬಂದ ಕುರುವ
6.ಸಂಕರ
7.ವಿಲೋಮ
8.ಪತ್ತೆ
9.ಕ್ಷೇತ್ರೋತ್ಸವ
10.ನಿರಾಕರಣ

ನನ್ನ ಬಗೆಗೆ ನಾನು

ನಾನು ಒಬ್ಬ ಬರೆಹಗಾರ ಆಗುವ ಪೂರ್ವದಲ್ಲಿ ನಾನೊಬ್ಬ ಒಳ್ಳೆಯ ಓದುಗ ಆಗಿದ್ದೆ. ಈಗಲೂ ಒಳ್ಳೆಯ ಗ್ರಂಥಗಳನ್ನು ಓದಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದೇನೆ. ಹೊನ್ನಾವರ ತಾಲೂಕಿನಲ್ಲಿ ಶರಾವತಿ ನದಿ ದಂಡೆಯ ಮೇಲೆ ಇರುವ ನಮ್ಮೂರು ಜಲವಳ್ಳಿ ಸಹಜವಾಗಿಯೇ ಪ್ರಕೃತಿ ಸೌಂದರ್ಯದ ನೆಲೆವೀಡು. ಅಲ್ಲಿ ತೆಂಗುಂಟು, ಕಂಗುಂಟು, ಕಳವೆಗಳ ಗದ್ದೆಗಳುಂಟು, ನಿತ್ಯ ಬದುಕಿನ ಜಂಜಾಟದಲ್ಲಿ ಮುಳುಗೇಳುವ ಬಡ ಜನತೆಯುಂಟು. ನನ್ನ ಬಾಲ್ಯ ಜೀವನದಲ್ಲಿ ನಾನು ಕಂಡ ಹಲವು ವ್ಯಕ್ತಿಗಳು, ಪಡೆದ ಅನುಭವಗಳೇ ಇಲ್ಲಯ ಬಹುತೇಕ ಕಥೆಗಳಲ್ಲಿ ಪಾತ್ರಗಳಾಗಿವೆ, ವಿವರಗಳಾಗಿವೆ.
ನಮ್ಮ ಮನೆಯಲ್ಲಿಯೇ ಒಂದು ಪುಟ್ಟ ಗ್ರಂಥಾಲಯವಿತ್ತು. ಚಂದಮಾಮ, ಬಾಲಮಿತ್ರ, ರಾಮಾಯಣ, ಭಾಗವತ, ದೇವೀಪುರಾಣ, ಹರಿವಂಶ, ಭಕ್ತಿವಿಜಯ ಮೊದಲಾದವೆಲ್ಲ ಅದರಲ್ಲಿಯೇ ಇತ್ತು. ವಿಷ್ಣುವಿನ ಅವತಾರ ಲೀಲೆಗಳು ನನ್ನನ್ನು ತುಂಬಾ ಪ್ರಭಾವಿಸಿತು. ಮನೆಯಲ್ಲಿ ಪ್ರತಿದಿನ ರಾತ್ರಿ ನನ್ನ ತಂದೆ ರಾಮಾಯಣ, ಭಾಗವತ, ದೇವಿಪುರಾಣ, ಭಕ್ತಿ ವಿಜಯ ಇತ್ಯಾದಿಗಳನ್ನು ಓದುತ್ತಿದ್ದರು. ಆ ಓದಿನಲ್ಲಿಯೂ ಒಂದು ಪುರಾಣ ಪ್ರವಚನದ ಧಾಟಿ ಇತ್ತು. ಅದು ನನ್ನನ್ನು ಆಕರ್ಷಿಸಿತು. ನನ್ನ ತಂದೆಯ ಪುರಾಣದ ಓದಿನ ನಿತ್ಯ ಶ್ರೋತೃ ನಾನಾಗಿದ್ದೆ. ನನ್ನ ತಂದೆ ರಾತ್ರಿ ಓದಿದ ಕಥಾ ಭಾಗವನ್ನು ಹಗಲು ಹೊತ್ತಿನಲ್ಲಿ ನಾನು ಮತ್ತೊಮ್ಮೆ ಓದಿ ಆನಂದಿಸುತ್ತಿದ್ದೆ. ನನಗೆ ಚಿಕ್ಕಂದಿನಲ್ಲಿಯೇ ಪುರಾಣ ಪ್ರಪಂಚದ ಪಾತ್ರಗಳೆಲ್ಲ ಚಿರಪರಿಚಿತವಾಗಿದ್ದವು. ನನ್ನ ಅಣ್ಣ ನಿತ್ಯ ಭಗವದ್ಗೀತೆಯನ್ನು ಓದುತ್ತಿದ್ದ. ಅದನ್ನು ಅನುಕರಿಸಿ ನಾನೂ ಭಗವದ್ಗೀತೆ ಓದತೊಡಗಿದೆ. ಮುಸ್ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ಎಲ್ಲರೂ ಸೇರಿ ಭಜನೆ ಮಾಡುತ್ತಿದ್ದೆವು. ನನ್ನ ಎರಡನೆಯ ಅಣ್ಣ ರಾತ್ರಿ ನಾನು ಮಲಗಿದಾಗ ಅನೇಕ ಕಥೆಗಳನ್ನು ನನಗೆ ಹೇಳುತ್ತಿದ್ದ. ನಾನು ಕಥಾಕುತೂಹಲಿ ಆದದ್ದು ಹಾಗೆ.
10ನೆ ತರಗತಿಯ ಸಮಯದಲ್ಲಿ ನನಗೆ ಎನ್‌. ನರಸಿಂಹಯ್ಯ ಅವರ ಕಾದಂಬರಿಗಳ ಪರಿಚಯ ಆಯಿತು.ನಮ್ಮೂರ ಪಕ್ಕದಲ್ಲಿಯೇ ಪಡುಕುಳಿಯಲ್ಲಿ ಭಟ್ಟರ ಅಂಗಡಿ ಇದೆ. ಅಲ್ಲಿ ಚಿಕ್ಕ ಗ್ರಂಥಾಲಯವಿತ್ತು. ನನ್ನ ಅಣ್ಣ ಅಲ್ಲಿ ಪರಿಚಯ ಮಾಡಿಕೊಟ್ಟು ಮೆಂಬರ್‌ ಮಾಡಿದ. ಮೊದಲು ನರಸಿಂಹಯ್ಯ, ಮಾ.ಭೀ.ಶೇಷಗಿರಿರಾಯರು, ನಂತರ ಅ.ನ.ಕೃ., ತರಾಸು, ಕಾರಂತರ ಕಾದಂಬರಿಗಳನ್ನು ಓದಿದೆ. ನನ್ನ ಓದಿನ ಹಸಿವು ಹಿಗ್ಗಿದ್ದು ಹೀಗೆ.
ಪದವಿ ತರಗತಿಯಲ್ಲಿ ಕನ್ನಡವನ್ನು ಪ್ರಧಾನ ವಿಷಯವನ್ನಾಗಿ ಆಯ್ದುಕೊಂಡ ಮೇಲೆ ಕುವೆಂಪು ಅವರನ್ನು ಓದುವ ಅವಕಾಶ ಲಭಿಸಿತು. ಅಡಿಗರ ಕವಿತೆಗಳನ್ನು ಓದಲು ಯತ್ನಿಸಿ ಅರ್ಥವಾಗದೆ ಮನಸ್ಸು ಮುದುಡಿತ್ತು. ಆಗಲೇ ವಿಮರ್ಶೆಯ ಗ್ರಂಥಗಳ ಮೂಲಕ ಅಡಿಗರ ಪದ್ಯಗಳನ್ನು ಅರಿಯಲು ಯತ್ನಿಸುತ್ತಿದ್ದೆ. ಇದೇ ಸಮಯದಲ್ಲಿ ನಾನು ಓದಿದ ಹೊನ್ನಾವರದ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಅಡಿಗರರು ಬಂದಿದ್ದರು. ನಮ್ಮ ಕನ್ನಡದ ಗುರುಗಳಾಗಿದ್ದ ಜಿ.ಎಸ್‌.ಅವಧಾನಿ ಅಡಿಗರ ಅಭಿಮಾನಿಗಳು. ಅವರೇ ಕರೆಸಿದ್ದರು ಎಂದು ಕಾಣುತ್ತದೆ. ಅವರ ಕೋರಿಕೆಯ ಮೇರೆಗೆ ಅಡಿಗರು ಧೂಮಲೀಲೆ' ಎಂಬ ಅವರದೇ ಕವನವನ್ನು ಓದಿದ್ದರು. ನವೋದಯ ಸಾಹಿತ್ಯದ ಲಾಲಿತ್ಯದಲ್ಲಿಯೇ ಮನಸ್ಸನ್ನು ನೆಲೆಗೊಳಿಸಿದ್ದ ನನಗೆ ಧಾರವಾಡದಲ್ಲಿ ಕನ್ನಡ ಎಂ.ಎ. ಓದುವಾಗ ಉಳಿದ ಸಾಹಿತ್ಯ ಪಂಥಗಳನ್ನೂ ಓದುವ ಅವಕಾಶ ಲಭ್ಯವಾಯಿತು. ನನ್ನ ಅರಿವಿನ ಕ್ಷಿತಿಜ ವಿಸ್ತರಿಸಲು ಧಾರವಾಡ ಒಳ್ಳೆಯ ಸ್ಥಳವಾಗಿತ್ತು. ಅಲ್ಲಿಯ ಗುರುಗಳಾದ ಡಾ.ಬುದ್ದಣ್ಣ ಹಿಂಗಮಿರೆ ಯಾವ ಯಾವ ಪುಸ್ತಕಗಳನ್ನು ಓದಬೇಕು ಎಂಬ ಬಗೆಗೆ ತಿಳಿಸಿದರು. ಆಗಲೇ ನಾನು ಚಿತ್ತಾಲರು, ಶಾಂತಿನಾಥ ದೇಸಾಯಿಯವರನ್ನು ಮೊದಲ ಬಾರಿಗೆ ಓದಿದ್ದು. ತೇಜಸ್ವಿಯವರಅಬಚೂರಿನ ಪೋಸ್ಚೀಫೀಸು’ ಕಥಾ ಸಂಕಲನಕ್ಕೆ ನಾನು ಒಂದು ವಿಮರ್ಶೆಯನ್ನು ಬರೆದಿದ್ದೆ ಅದು ವಿದ್ಯಾರ್ಥಿ ಭಾರತಿ'ಯಲ್ಲಿ ಪ್ರಕಟವಾಗಿತ್ತು. ನವ್ಯ, ನವೋದಯ ವಾಗ್ವಾದ, ಬಂಡಾಯ, ದಲಿತ ಧ್ವನಿಗಳು ಕೇಳಿದ್ದೆಲ್ಲ ಆಗಲೇ. ನವಕರ್ನಾಟಕ ಪ್ರಕಾಶನದ ಪುಸ್ತಕ ಪ್ರದರ್ಶನ, ಮಾರಾಟ ಮಳಿಗೆಗಳಲ್ಲಿ ಎಡಪಂಥೀಯಯ ವಿಚಾರ ಧಾರೆಯ ಪುಸ್ತಕಗಳನ್ನು ಖರೀದಿಸುತ್ತಿದ್ದೆ. ಮಾರ್ಕ್ಸ್‌, ಎಂಗೆಲ್ಸ್‌ರನ್ನು ನಾನು ಓದಿದ್ದು ಆಗಲೇ. ದಾಸ್ತೋವಸ್ಕಿ ನನ್ನ ಪ್ರೀತಿಯ ಲೇಖಕ ಆಗಿಬಿಟ್ಟ. ಟಾಲ್‌ಸ್ಟಾಯ್‌ ಬರೆದಪುನರ್ಜನ್ಮ’ ನನ್ನನ್ನು ತುಂಬಾ ಪ್ರಭಾವಿಸಿತು. ಭಾರತದ ಅನ್ಯ ಭಾಷೆಗಳ ಕಥೆಗಾರರನ್ನು ಓದವ ಅವಕಾಶ ಅಲ್ಲಿ ನನಗೆ ಲಭ್ಯವಾಯಿತು.
ಹಿಂಗಮಿರೆಯವರ ಪ್ರೋತ್ಸಾಹದ ಫಲವಾಗಯೇ ನಾನು ಬಲೆ' ಎಂಬ ಕಾದಂಬರಿಯನ್ನು ಎಂ.ಎ. ಡೆಜರ್ಟೇಶನ್‌ಗಾಗಿ ಬರೆದು ಕೊಟ್ಟೆ. ಆ ಕಾದಂಬರಿ ನನ್ನ ಸ್ನೇಹಿತರ ವಲಯದಲ್ಲಿ ನನಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಗುರುಗಳಾದ ಡಾ.ಎಂ.ಎಂ. ಕಲಬುರ್ಗಿಯವರೂ ಆ ಕಾದಂಬರಿಯ ಬಗೆಗೆ ಕ್ಲಾಸಿನಲ್ಲಿಯೇ ಒಮ್ಮೆ ಒಳ್ಳೆಯ ಮಾತನಾಡಿದ್ದು ನನಗೆ ಕೋಡು ಮೂಡಿಸಿದ್ದ ಹಾಗೆ ಆಗಿತ್ತು. ಈ ಕಾದಂಬರಿಯನ್ನು ಸುಮಾರು 16 ವರ್ಷಗಳ ನಂತರ ಬೆಳಗಾವಿಯ ಅಮೋಘ ಪ್ರಕಾಶನದ ಶ್ರೀಯುತ ಭೀಮಸೇನ ತೊರಗಲ್ಲ ಅವರು ಪ್ರಕಟಿಸಿ ಉಪಕರಿಸಿದ್ದಾರೆ. ಅದಕ್ಕೂ ಮೊದಲು ಅದನ್ನು ಶ್ರೀಯುತ ಜಿ.ಯು.ಭಟ್ಟರು ತಮ್ಮಕರಾವಳಿ ಗ್ರಾಮವಿಕಾಸ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದರು.
ಎಂ.ಎ. ಓದುವಾಗಲೇ ವಿದ್ಯಾರ್ಥಿ ಭಾರತಿ' ನಿಯತಕಾಲಿಕಕ್ಕೆ ನಾನು ಒಂದು ಕಥೆಯನ್ನು ಬರೆದಿದ್ದೆ. ಅದಕ್ಕೂ ಪೂರ್ವದಲ್ಲಿ ಹೊನ್ನಾವರ ಕಾಲೇಜಿನ ವಾರ್ಷಿಕ ಸಂಚಿಕೆ ಶರಾವತಿಗೆಎಸ್ಟೇಟ್‌’ ಎಂಬ ಕಥೆಯನ್ನು ಬರೆದ ನೆನಪು.
ಎಂ.ಎ. ಆದಮೇಲೆ ನಾನು ಕಾರವಾರದ ಬಾಡ ಪದವಿ ಕಾಲೇಜು ಮತ್ತು ಕಾರವಾರದ ಸರಕಾರಿ ಕಾಲೇಜಿನಲ್ಲಿ ಅರೆಕಾಲಕ ಉಪನ್ಯಾಸಕನಾಗಿ ಮೂರು ವರ್ಷ ಕೆಲಸ ಮಾಡಿದೆ. ಆ ಸಮಯದಲ್ಲಿಯೇ ನಾನು ಇನ್ನಷ್ಟು ಸಾಹಿತ್ಯವನ್ನು ಓದಿದ್ದು. ನಾನು ಕಾರವಾರದಲ್ಲಿ ಇದ್ದಾಗಲೇ ನನ್ನ ಪ್ರಥಮ ಕವನ ಸಂಕಲನ ಅವಸ್ಥೆ'ಯನ್ನು ಪ್ರಕಟಿಸಿದೆ. ಅದಕ್ಕೆ ಮುಖಚಿತ್ರ ಮತ್ತು ಬೆನ್ನುಡಿಯನ್ನು ಬರೆದುಕೊಟ್ಟವರು ಬಾಡ ಶಿವಾಜಿ ಕಾಲೇಜಿನ ಇಂಗ್ಲಿಷ್‌ ಪ್ರೊಫೆಸರ್‌ ಎಲ್‌.ಎನ್‌.ನಾಯಕ.ಅವಸ್ಥೆ’ ಸಂಕಲನದಲ್ಲಿಯ ಮೊದಲ ಕವಿತೆಯನ್ನು ದಿಲ್ಲಿಯ ಗೆಳೆಯರ ಬಳಗ ಏರ್ಪಡಿಸಿದ್ದ ಎಂ.ಎನ್‌. ಜಯಪ್ರಕಾಶ್‌ ಸ್ಮಾರಕ ಕವನ ಸ್ಪರ್ಧೆಗೆ ಕಳುಹಿಸಿದ್ದೆ. ಅದರಲ್ಲಿ ಪ್ರಥಮ ಬಹುಮಾನ ಅದಕ್ಕೆ ಬಂತು. ಕನ್ನಡದಲ್ಲಿ ಆಗಲೇ ಖ್ಯಾತರಾಗಿದ್ದ ಇಬ್ಬರು ಕವಿಗಳಿಗೆ ಎರಡು ಮತ್ತು ಮೂರನೆ ಬಹುಮಾನ ಬಂದಿದ್ದು ನನಗೆ ಹೆಮ್ಮೆಯ ವಿಷಯವೇ ಆಗಿತ್ತು.
ಕಾರವಾರದಲ್ಲಿ ಮೂರು ವರ್ಷ ಕೆಲಸ ಮಾಡಿ ಅನಿವಾರ್ಯದ ಕಾರಣಗಳಿಂದ ನಾನು ಮರಳಿ ನನ್ನೂರಿಗೆ ಬಂದೆ. ಆಗಲೇ ನಾನು `ಚಂಪಾಲು ಸೆಟ್ಟಿಯೂ ಲಕುಮವ್ವಿಯೂ’ ಕಥೆಯನ್ನು ಬರೆದದ್ದು. ಅದು ತರಂಗದಲ್ಲಿ ತಿಂಗಳ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ 500 ರುಪಾಯಿಗಳನ್ನು ಗೆದ್ದುಕೊಂಡಿತು. ನನ್ನ ಬರೆವಣಿಗೆಯಲ್ಲಿ ನನಗೆ ಆತ್ಮವಿಶ್ವಾಸ ಮೂಡಿಸಿದ ಸಂಗತಿ ಅದು. ಆ ಬಳಿಕ ನಾನು ಬೆಳಗಾವಿಗೆ ತೆರಳಿ ಪತ್ರಿಕೋದ್ಯಮ ಸೇರಿಕೊಂಡೆ. ವರುಷಕ್ಕೆ, ಎರಡು ವರುಷಕ್ಕೊಮ್ಮೆ ಕಥೆ ಬರೆಯುತ್ತಿರುವೆ. ಅದೇ ಈಗ ಸಂಕಲನದ ರೂಪದಲ್ಲಿ ಬರುತ್ತಿದೆ.
ಬೆಳಗಾವಿಯ ಪರಿಸರದಲ್ಲಿ, ಈಗ ಬೆಂಗಳೂರಿನಲ್ಲಿದ್ದರೂ ಈ ನಗರ ಸಂವೇದನೆಯ ಕಥೆಗಳನ್ನು ಯಾಕೆ ನಾನು ಬರೆದಿಲ್ಲ? ನಗರ ಬದುಕಿನ ಹೊರ ವಿವರಗಳು ಬೇರೆಬೇರೆಯಾಗಿದ್ದರೂ ಆಂತರ್ಯದ ತುಡಿತ ನನ್ನಲ್ಲಿ ಬಲವಾಗಿ ಬೇರೂರಿರುವ ನನ್ನೂರಿನ ಯಾವುದೋ ವ್ಯಕ್ತಿ, ಸನ್ನಿವೇಶಗಳಿಗೆ ಹೋಲಿಕೆಯಾಗುತ್ತಿರುತ್ತದೆ. ಮತ್ತೆ ಬರೆಯಬೇಕೆಂದರೆ ನಾನು ಅಲ್ಲಿಂದಲೇ ಹೊಸ ವಿವರಗಳನ್ನು ಆಯ್ದುಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ಭಾಷಿಕವಾಗಿ ಲೇಖಕ ಗಟ್ಟಿತನವನ್ನು ಸಾಧಿಸಬಹುದು ಎಂಬುದು ನನ್ನ ಭಾವನೆ.
ಇಲ್ಲಿಯ ಕಥೆಗಳನ್ನು ಓದಿ ಕಥೆಗಾರ ಡಾ.ಅಮರೇಶ ನುಗಡೋಣಿಯವರು ಒಂದು ಸಮೀಕ್ಷೆಯನ್ನು ಬರೆದುಕೊಟ್ಟು ಉಪಕರಿಸಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಇಲ್ಲಿಯ ಕಥೆಗಳನ್ನು ಪ್ರಕಟಿಸಿದ ಪತ್ರಿಕೆಗಳ ಸಂಪಾದಕರಿಗೆ ಕೃತಜ್ಞತೆಗಳು.

16-01-2006

ಡಾ.ವಾಸುದೇವ ಶೆಟ್ಟಿ

1.ಚಂಪಾಲುಸೆಟ್ಟಿಯೂ ಲಕುಮವ್ವಿಯೂ

 1. ಚಂಪಾಲು ಸೆಟ್ಟಿ ಯಾರೆಂದು ಸುತ್ತಲಿನ ನಾಲ್ಕು ಊರಿನ ಮಕ್ಕಳಿಗೆ ಕೂಡ ಗೊತ್ತು. ಕರಿ ಬಣ್ಣದ ದೊಗಳೆ ಚಡ್ಡಿ, ದಪ್ಪ ಖಾಕಿ ಅಂಗಿಯ ಐದೂ ಮುಕ್ಕಾಲು ಅಡಿ ಎತ್ತರದ ಬೋಳು ಮುಖದ ಈ ಆಸಾಮಿ ಗುರುತಿನವರಿಗೆಲ್ಲ ಮುಟ್ಟಿಸೆಟ್ಟಿಯೇ ಆಗಿದ್ದ. ಅದಕ್ಕೆ ಕಾರಣ ಅವನು ಮನೆಯಿಂದ ಹೊರಬಿದ್ದನೆಂದರೆ ಅವನ ತಲೆಯ ಮೇಲೆ ಇರುತ್ತಿದ್ದ ಹೆಡಿಗೆ ಬುಟ್ಟಿ.
  ಚಂಪಾಲು ಸೆಟ್ಟಿ ತಲೆಯ ಮೇಲೆ ಹೆಡಿಗೆ ಬುಟ್ಟಿ ಇರಿಸಿಕೊಂಡು ಬಾಯಿ ತುಂಬ ಕವಳ ಹಾಕಿಕೊಂಡು ಮಧ್ಯೆ ಮಧ್ಯೆ ಕಡೆಬಾಯಲ್ಲಿ ಇಳಿಯುವ ಕೆಂಪು ರಸವನ್ನು ಹೆಗಲ ಮೇಲಿನ ಅಂಗವಸ್ತ್ರದಿಂದ ಒರಸಿಕೊಳ್ಳುತ್ತ ದಾಪುಗಾಲು ಹಾಕುವ ದೃಶ್ಯ ತೀರ ಸಾಮಾನ್ಯವಾದುದು. ಯಾರ್ಯಾರ ಮನೆಯಲ್ಲಿ ಏನೇನು ಸಿಕ್ಕುತ್ತದೆ ಎನ್ನುವುದು ಅವನಿಗೆ ಪಕ್ಕಾ ಗೊತ್ತು. ಗೇರು ಬೀಜ ಸಿಕ್ಕುವ ಮನೆ, ಮುರುಗಲ ಹುಳಿ ಸಿಕ್ಕುವ ಮನೆ, ವಾಂಟೆಹುಳಿ ಸಿಕ್ಕುವ ಮೆನೆ, ಅಟ್ಟಲಕಾಯಿ ಸಿಕ್ಕುವ ಮನೆ ಹೀಗೆ. ಕೊನೆಗೆ ಕಾಸರಕನ ಬೀಜ, ಹಲಸಿನ ಬೀಜ ಸಿಕ್ಕರೂ ಖರೀದಿ ಮಾಡವವನೇ ಅವನು. ಅವನಲ್ಲಿ ತಕ್ಕಡಿ ಇಲ್ಲ. ತೂಕದ ಕಲ್ಲುಗಳಿಲ್ಲ. ಪೈಲಿ, ಅರ್ಧ ಪೈಲಿ, ಕಾಲು ಪೈಲಿಯ ಮಾಪು. ಕೊಳಗದಲ್ಲಿ ಕೊಡುವೆನೆನ್ನುವವರದನ್ನು ಅವರವರ ಮನೆಯ ಕೊಳಗದಲ್ಲೇ ಅಳೆದುಕೊಳ್ಳುವನು.
  ಮೂವತ್ತು ವರ್ಷಗಳಿಂದ ಚಂಪಾಲು ಸೆಟ್ಟಿ ಇದೇ ದಂಧೆ ಮಾಡುತ್ತ ಬಂದರೂ ಅವನಲ್ಲಿ ಒಂದಿಷ್ಚೂ ಬದಲಾವಣೆ ಇಲ್ಲ. ಅದೇ ವೇಷ, ಅದೇ ಗಾತ್ರ. ಅಲ್ಲಲ್ಲಿ ತಲೆಗೂದಲು ಈಗ ನೆರೆತಿದೆ ಅಷ್ಟೇ. ಅಳೆದಳೆದು ಅವನ ತಾಮ್ರದ ಮಾಪುಗಳು ಮಿಂಚುತ್ತಿವೆ ಬಿಸಿಲಿಗೆ ಎಣ್ಣೆ ಬಣ್ಣದ ಅವನ ಮುಖ ಮಿಂಚುವ ಹಾಗೆ.
  ಇದುವರೆಗೆ ಚಂಪಾಲು ಸೆಟ್ಟಿ ದಗಾ ಹಾಕುವವನೆಂದಾಗಲಿ, ಅವನ ವ್ಯವಹಾರ ಸರಿ ಇಲ್ಲ ಎಂದಾಗಲಿ, ಮಾಪು ಸಣ್ಣದು, ದೊಡ್ಡದು ಎಂದಾಗಲಿ, ಅಳತೆ ಮಾಡುವಾಗ ಹೆಚ್ಚು ಗುಲ್ಲಿಸಿ ಮೇಲೆ ಏರಿಸುತ್ತಾನೆ ಎಂದಾಗಲಿ ದೂರಿದವರು ಒಬ್ಬರೂ ಇಲ್ಲ.
  ಅಂದಹಾಗೆ, ಚಂಪಾಲು ಸೆಟ್ಟಿಗೆ ಈಗ ವರ್ಷ ಐವತ್ತೈದು. ಲಕುಮವ್ವಿಗೆ ಅಂದರೆ ಅವನ ಹೆಂಡತಿಗೆ ಮೂವತ್ಮೂರು ವರ್ಷ. ಲಕುಮವ್ವಿ ಚಂಪಾಲು ಸೆಟ್ಟಯ ಮೋಹದ ಮಡದಿ. ಅವನಿಗೆ ಅದು ಎರಡನೆಯ ಸಂಬಂಧ. ತನ್ನ ಮೊದಲಿನ ಹೆಂಡತಿ ಒಂದು ಗಂಡು ಮಗುವನ್ನು ಹೆತ್ತು ಸತ್ತುಹೋದ ಮೇಲೆ ಅವನು ಬೇರೆ ಮದುವೆ ಮಾಡಿಕೊಂಡಿರಲಿಲ್ಲ. ತನ್ನ ವಂಶವನ್ನು ಮುಂದುವರಿಸಿಕೊಂಡು ಹೋಗಲು ಒಬ್ಬ ಇದ್ದಾನಲ್ಲ. ಇನ್ನೊಬ್ಬಳನ್ನು ಮಾಡಿಕೊಂಡು ಅವಳಿಂದ ಇವನಿಗೆ ತೊಂದರೆ ಕೊಡಿಸುವುದು ಯಾಕೆ? ಮಲತಾಯಿ ಎಂದಾದರೂ ಹೆತ್ತ ತಾಯಿ ಆಗಬಲ್ಲಳೆ ಎಂದುಕೊಂಡು ಮದುವೆಯಾಗದೆ ಇದ್ದ. ಹುಡುಗ ಏಳೆಂಟು ವರ್ಷದವನು ಇದ್ದಾಗ ಊರಿಗೆ ಕಾಲರಾ ಬೇನೆ ಬಂತು. ಊರಿನ ಉಳಿದ ಎಂಟ್ಹತ್ತು ಹುಡುಗ, ಮುದುಕರ ಜೊತೆ ಈ ಹುಡುಗನನ್ನೂ ಯಮರಾಯ ತನ್ನ ಮನೆಗೆ ಕರೆದುಕೊಂಡು ಹೋದ.
  ಚಂಪಾಲು ಸೆಟ್ಟಿಗೆ ಆದ ದುಃಖ ಕಡಿಮೆಯೆ? ಮಗ ಸತ್ತ ದುಃಖದಲ್ಲಿ ಎಷ್ಟೋ ದಿನ ಮನೆಯಿಂದ ಅವನು ಹೊರಗೆ ಬೀಳಲೇ ಇಲ್ಲ. ಹೆಡಿಗೆ ಬುಟ್ಟಿ ಅವನ ತಲೆ ಏರಲೇ ಇಲ್ಲ. ತಂದೆ ಸತ್ತರೆ ಆರು ತಿಂಗಳು, ತಾಯಿ ಸತ್ತರೆ ಹನ್ನೆರಡು ತಿಂಗಳು, ಹೆಂಡತಿ ಸತ್ತರೆ ತಿರುಗಿ ಮದುವೆಯಾಗುವವರೆಗೆ ದುಃಖ ಇರುವುದಂತೆ. ಆದರೆ ಮಗ ಸತ್ತರೆ ಸಾಯುವವರೆಗೆ ದುಃಖವೇ ಅಂತೆ. ಚಂಪಾಲು ಸೆಟ್ಟಿಗೆ ಈಗ ಇಬ್ಬಗೆಯ ದುಃಖ.
  ತನ್ನ ವಂಶದ ಕುಡಿ ಮುರುಟಿ ಹೋಯಿತು ಎನ್ನುವುದು ಒಂದಾದರೆ, ಆ ಕುಡಿಯನ್ನು ನೀಡಿದ ಬಳ್ಳಿ ಹೆಂಡತಿಯದು ಮತ್ತೊಂದು. ಕೈ ಸುಟ್ಟುಕೊಂಡು ತಿನ್ನುವಾಗಲೆಲ್ಲ ಒಂಟಿತನ ಅವನನ್ನು ಅಮವಾಸ್ಯೆಯ ಕತ್ತಲಿನಂತೆ ಕಾಡುತ್ತಿತ್ತು. ಮನೆಗೆ ಅವನೊಬ್ಬನೇ, ಗಂಡು- ಹೆಣ್ಣು ಎಲ್ಲ. ಅಡುಗೆ ಮಾಡಿ, ಮುಸುರೆ ತಿಕ್ಕಿ, ಬಟ್ಟೆ ತೊಳೆದು, ಕಸ ಗುಡಿಸಿ ಏನೆಲ್ಲ ಕೆಲಸ ಅವನೇ ಮಾಡಬೇಕು. ದೇವರಿಗೆ ದೀಪ ಹಚ್ಚಿ ಬಾಗಿಲಿಗೆ ರಂಗೋಲಿ ಬಿಡಿಸುವುದೂ ಅವನಿಗೇ ಬಂತು. ಮತ್ತೆ ವ್ಯಾಪಾರಕ್ಕೆ ಹೊರಡಬೇಕು. ಹೊತ್ತು ಹೊತ್ತಿಗೆ ಊಟ ತಿಂಡಿ ಇಲ್ಲದೆ ಚಂಪಾಲು ಸೆಟ್ಟಿ ಸೊರಗಿದ. ಮುಖಚೌರ ತಿಂಗಳಿಗೋ ಎರಡು ತಿಂಗಳಿಗೋ ಮಾಡಿಕೊಳ್ಳುತ್ತಿದ್ದ. ಚಂಪಾಲು ಸೆಟ್ಟಿಯ ಈ ದುರವಸ್ಥೆಯನ್ನು ಕಂಡು ಆಚೆ ಈಚೆಯ ಮನೆಯವರು,
  “ಚಂಪಣ್ಣ, ನಿನ್ನ ತ್ರಾಸು ನೋಡೋಕೆ ಆಗ್ತಾ ಇಲ್ಲ. ನೀ ಮತ್ತೊಂದು ಮದ್ವಿ ಆದ್ರೂ ಆಗು. ನಿನಗಾದರೂ ಈಗ ಏನ್‌ ಅಂಥ ಪ್ರಾಯ? ನಾಲ್ವತ್ವರ್ಷಕ್ಕೆ ಯಾರೂ ಮದ್ವಿ ಆಗೂದಿಲ್ವಾ? ಹೊಸಾಕುಳಿಲಿ ಒಬ್ಬ ಹೆಗಡೇರು ನೋಡು ಅರ್ವತ್ತು ವರ್ಷಕ್ಕೆ ಮದ್ವಿ ಆಗಿದ್ರು ಹೋದ್ವರ್ಷ. ಈ ವರ್ಷ ಅವರಿಗೆ ಒಂದು ಗಂಡು ಮಗ. ನಿಂದೇನು ಪ್ರಾಯ ಕಳೆದು ಹೋಯ್ತಾ?”
  ಹೀಗೆ ಒಬ್ಬೊಬ್ಬರು ಒಂದು ಒಂದು ಅಂತ ಆಗ ಈಗ ಹೇಳುವುದಕ್ಕೆ ಶುರು ಮಾಡಿದರು. ಕೇಳಿದ್ದೇ ಮತ್ತೆ ಮತ್ತೆ ಕೇಳಿ ಚಂಪಾಲು ಸೆಟ್ಟಿಯೂ ಆ ಬಗ್ಗೆ ಯೋಚಿಸುವಂತಾಯಿತು. ಆಗ ಅವನಿಗೆ ದಕ್ಕಿದ ಹೆಣ್ಣು ಹದಿನೆಂಟರ ಪ್ರಾಯದ ಲಕುಮವ್ವಿ.
  ನಾಲ್ವತ್ತರ ಚಂಪಾಲು ಸೆಟ್ಟಿಗೆ ಹದಿನೆಂಟರ ಲಕುಮವ್ವಿ ಸಿಗಬೇಕಾದರೆ ಅವಳು ಕುರೂಪಿಯೇನಾಗಿರಲಿಲ್ಲ. ಮದುವೆಗೆ ಮೊದಲೇ ಬಸಿರಾಗಿ ಹೆಸರು ಕೆಡಿಸಿಕೊಂಡವಳೂ ಅಲ್ಲ. ಅವಳ ಅಪ್ಪ ಬಡವನಾಗಿದ್ದ. ವರದಕ್ಷಿಣೆ, ಬಂಗಾರ ಎಲ್ಲ ಕೊಡುವ ಸ್ಥಿತಿಯಲ್ಲಿ ಇದ್ದವನೂ ಅವನಲ್ಲ. ಹುಡುಗಿ ಮೈ ನೆರೆದು ಮೂರು ವರ್ಷ ಆಗಿತ್ತು. ಇನ್ನೂ ಅವಳನ್ನು ಮನೆಯಲ್ಲೆ ಇಟ್ಟುಕೊಂಡರೆ ಹೇಗೆ ಎನ್ನುವ ಚಿಂತೆ ಅವನನ್ನು ಕಾಡುತ್ತಿತ್ತು. ಆಗ ಅವನಿಗೆ ಗಂಟು ಬಿದ್ದವನು ಈ ಚಂಪಾಲು ಸೆಟ್ಟಿ.
  ಚಂಪಾಲು ಸೆಟ್ಟಿ ತಾನಾಗಿಯೇ ನೇರವಾಗಿ ಹೋಗಿ ಕೇಳಲಿಲ್ಲ. ಆ ಧೈರ್ಯವೂ ಅವನಲ್ಲಿ ಇರಲಿಲ್ಲ. ಅನ್ಯ ಜಾತಿಯವರ ಮೂಲಕ ಪ್ರಸ್ತಾಪ ಕಳುಹಿಸಿ ಆಮೇಲೆ ತಾನೇ ಮುಂದುವರಿದಿದ್ದ. ಮದುವೆಯ ಖರ್ಚನ್ನು ತಾನು ವಹಿಸಿಕೊಳ್ಳುವುದಾಗಿ ಹೇಳಿದ.
  ಒಗ್ಗಾಲಿಯಾದ ಚಂಪಾಲು ಸೆಟ್ಟಿಯ ಸಂಸಾರ ಲಕುಮವ್ವಿಯ ಆಗಮನದಿಂದ ನೇರವಾಯಿತು. ಆದರೂ ಅವನ ಮನಸ್ಸಿನಲ್ಲಿ ಒಂದು ಕೊರಗು ಉಳಿದೇ ಉಳಿಯಿತು. ಲಕುಮವ್ವಿಗೆ ತಾನು ಸರಿಸಾಟಿಯಾದವನು ಅಲ್ಲವೇನೋ ಎನ್ನುವ ಸಂಶಯ ಅವರು ಸಂಸಾರ ಹೂಡಿದ ಮೊದಲ ದಿನದಿಂದಲೇ ಚಂಪಾಲು ಸೆಟ್ಟಿಗೆ ಕಾಡತೊಡಗಿತು.
  ಲಕುಮವ್ವಿ ಗಂಡನಿಗೆ ಪ್ರೀತಿ ತೋರುವಲ್ಲಿ ಕೊರತೆ ಮಾಡಿದಳೆ? ಇಲ್ಲವೇ ಇಲ್ಲ. ರುಚಿರುಚಿಯಾಗಿ ಬಿಸಿಬಿಸಿ ಅಡುಗೆಯನ್ನೆ ಮಾಡಿ ಬಡಿಸುವಳು. ನೀರು ಕಾಯಿಸಿ ತಾನೇ ಅವನ ಮೈಯನ್ನು ಉಜ್ಜಿ ಹೊಯ್ಯುವಳು. ವಾರಕ್ಕೆರಡುಸಲ ಮುಖಚೌರ ಮಾಡಿಕೊಳ್ಳಲು ಒತ್ತಾಯಿಸುವಳು. ಅದಿಲ್ಲ ಇದಿಲ್ಲ ಎಂದು ಸಿಡಿಮಿಡಿಗೊಳ್ಳಲಿಲ್ಲ. ಹೀಗಿದ್ದರೂ ಚಂಪಾಲು ಸೆಟ್ಟಿಗೆ ಇರುಸು ಮುರುಸು. ನುಂಗುವ ಹಾಗಿಲ್ಲ, ಹೊರಗೆ ತೋರಿಸಿಕೊಳ್ಳುವ ಹಾಗೂ ಇಲ್ಲ.
  ವರುಷ ಕಳೆಯುವುದರೊಳಗೆ ಲಕುಮವ್ವಿಯ ಹೊಟ್ಟೆ ಉುರುಟಾಗಿ ಉಬ್ಬತೊಡಗಿದಾಗಲೇ ಚಂಪಾಲು ಸೆಟ್ಟಿಗೆ ನೆಮ್ಮದಿ. ಆಗಷ್ಟೇ ಅವನಿಗೆ ತನ್ನ ಮೇಲೆ ವಿಶ್ವಾಸ ಮೂಡಿದ್ದು. ಹತ್ತು ಹದಿಮೂರು ವರ್ಷಗಳ ಅವರ ದಾಂಪತ್ಯ ಜೀವನದಲ್ಲಿ ಮೂರು ಗಂಡು, ಎರಡು ಹೆಣ್ಣು ಮೂಡಿ ಬಂದವು. ಚಂಪಾಲು ಸೆಟ್ಟಿ ಅವರ ಸಹವಾಸದಲ್ಲಿ ನಕ್ಕು ನಲಿದಿದ್ದ. ಹಗಲಿಡೀ ಮುಟ್ಟಿ ಹೊತ್ತು ಊರೂರು ಅಲೆಯುತ್ತಿದ್ದ ಆಯಾಸವೆಲ್ಲವೂ ಮಕ್ಕಳನ್ನು, ಹೆಂಡತಿಯನ್ನು ಕಂಡೊಡನೆ ಮಾಯವಾಗಿ ಬಿಡುತ್ತಿತ್ತು. ಅವನ ಕಿರಿಯ ಮಗನಿಗೆ ಈಗ ಆರು ವರ್ಷ. ಅವನೂ ಕನ್ನಡ ಶಾಲೆಗೆ ಅಣ್ಣಂದಿರು ಅಕ್ಕಂದಿರ ಜೊತೆಗೆ ಹೋಗಲಿಕ್ಕೆ ಆರಂಭಿಸಿದ್ದ.
  ದಿನದಂತೆಯೇ ಚಂಪಾಲು ಸೆಟ್ಟಿ ಹೆಡಿಗೆ ಬುಟ್ಟಿ ತಲೆ ಮೇಲೆ ಇರಿಸಿಕೊಂಡು ಮನೆಯಿಂದ ಹೊರಗೆ ಬಿದ್ದನು. ತನ್ನ ಕೇರಿ ತುದಿ ಮುಟ್ಟುತ್ತಿರುವಾಗ ತುದಿ ಮನೆ ಶಂಕ್ರಣ್ಣ ಅವನನ್ನು, “ಚಂಪಣ್ಣ ಬಾರೋ. ಒಂದ್‌ ಕವಳನಾದದ್ರೂ ಹಾಕ್ಕೊಂಡು ಹೋಗೋ” ಎಂದ. ಅವನ ಧ್ವನಿಯಲ್ಲಿಯ ಕರೆಯ ತೀವ್ರತೆಯನ್ನು ಗುರುತಿಸಿದ ಚಂಪಾಲು ಸೆಟ್ಟಿ ಮರುಮಾತನಾಡದೆ ಹೆಡಿಗೆ ಬುಟ್ಟಿ ಇಳಿಸಿ ಅವನ ಅಂಗಳದಲ್ಲಿ ಇಟ್ಟು ಮನೆ ಹಕ್ಕೆಜಗುಲಿ ಹತ್ತಿ ಕುಳಿತ. ಶಂಕ್ರಣ್ಣ ಕವಳದ ಬಟ್ಟಲನ್ನು ಅವನತ್ತ ತಳ್ಳಿ ಅದೂ ಇದೂ ಅಂತ ಮಾತನಾಡಲು ಪ್ರಾರಂಭಿಸಿದ. ಮಾತಿನ ನಡುವೆ,
  “ಚಂಪಣ್ಣ ನಿನಗೂ ವಯಸ್ಸಾಯ್ತು. ಇನ್ನು ಎಷ್ಟು ದಿನ ಅಂತ ಈ ಹೆಡಿಗೆ ಹೊತ್ತುಕೊಂಡು ತಿರುಗುವ ದಂಧೆ ಮಾಡ್ತಿ? ನಿಮ್ಮನೆ ಜಗುಲಿ ಮೇಲೆ ಅಂಗಡಿ ಮಾಡಿ ಬಿಡು. ಕೊಡುವ ಮನಸ್ಸು ಇದ್ದವರು ನಿನ್ನ ಬುಡಕ್ಕೇ ತಂದು ಕೊಡುವುದಿಲ್ವಾ? ನೀನೇ ವಿಚಾರ ಮಾಡಿ ನೋಡು. ತೆನೆಯಲ್ಲಿ ಹಾಲು ತುಂಬಿದ ಗದ್ದೆಯನ್ನು ಕಾವಲು ಇಲ್ಲದೆ ಬೇಲಿಯೂ ಇಲ್ಲದೆ ಹಾಗೇ ಬಿಟ್ಟುಬಿಟ್ಟರೆ ಕಳ್ಳಕೋಣ, ಎತ್ತು ಮೇಯ್ದು ಹಾಳು ಮಾಡದೆ ಇರ್ತದ್ಯಾ?” ಎಂದ.
  ಚಂಪಾಲು ಸೆಟ್ಟಿಗೆ ಒಮ್ಮೆಲೆ ಶಂಕ್ರಣ್ಣನ ಮಾತಿನ ಒಳಸುಳಿ ಗೊತ್ತಾಗಲಿಲ್ಲ.. ಅವನು ತನ್ನ ತೋಳು, ಕಾಲುಗಳನ್ನು ನೋಡಿಕೊಂಡ. ತಾನು ಇತ್ತೀಚೆಗೆ ಸೊರಗಿರುವಂತೆ ಅವನಿಗೆ ಕಂಡಿತು. ಈಗೀಗ ನಡೆಯುತ್ತ ಇರುವಹಾಗೆ ಕಾಲು ಸೋಲುವುದೂ, ಬಹಳ ಭಾರ ಮೊದಲಿನಂತೆ ತನ್ನಿಂದ ಹೊರಲು ಸಾಧ್ಯವಾಗದೆ ಇದ್ದದ್ದು ಎಲ್ಲ ನೆನಪಾಯಿತು. ತನ್ನ ಸುಖದುಃಖಕ್ಕಾಗಿಯೇ ಇವನು ಈ ಮಾತು ಹೇಳಿದ ಅಂದುಕೊಂಡು ಅವನು ಅಲ್ಲಿಂದ ಹೊರಬಿದ್ದ.
  ತಲೆಯ ಮೇಲೆ ಹೆಡಿಗೆ ಬುಟ್ಟಿ ಇರಿಸಿಕೊಂಡು ಶಂಕ್ರಣ್ಣನ ಒಳ್ಳೆಯತನ ನೆನೆಯುತ್ತ ಅವನ ಮಾತನ್ನು ಇನ್ನೊಮ್ಮೆ ನೆನಪು ಮಾಡಿಕೊಳ್ಳತೊಡಗಿದ. ತೆನೆಯಲ್ಲಿ ಹಾಲು ತುಂಬಿದ ಗದ್ದೆ, ಕಳ್ಳಕೋಣ, ಎತ್ತು, ಕಾವಲು, ಬೇಲಿ ಇವೆಲ್ಲ ಏನು? ಏನೋ ಒಗಟಾಗಿ ಕಾಣುತ್ತದೆಯಲ್ಲ? ಮತ್ತೆ ಮತ್ತೆ ವಿಚಾರ ಮಾಡತೊಡಗಿದಂತೆ ಚಂಪಾಲು ಸೆಟ್ಟಿ ವ್ಯಗ್ರನಾಗತೊಡಗಿದ. ಆ ಬೋಸುಡಿಮಗ ಶಂಕ್ರಣ್ಣ ನನ್ನ ಎದುರಿಗೇ ನನ್ನ ಹೆಂಡ್ತಿ ಬಗ್ಗೆ ಅನುಮಾನದ ಮಾತನ್ನು ಆಡಿದನಲ್ಲ. ಆಗಲೇ ನನಗೆ ಹೊಳೆದಿದ್ದರೆ ಅವನ ಹಲ್ಲು ಉದುರಿಸಿಬಿಡುತ್ತಿದ್ದೆ ಎಂದು ಅವನು ಅವಡು ಕಚ್ಚಿದ. ನನ್ನ ಲಕುಮಿ ಅಂಥವಳೆ ಎಂದು ತನ್ನನ್ನೇ ಪ್ರಶ್ನಿಸಿಕೊಂಡ. ಇಲ್ಲ, ಇಲ್ಲ ಎಂದಿತು ಮನಸ್ಸು. ನನ್ನ ಲಕುಮಿ ಅಂಥವಳು ಆಗದೆ ಇರಲಿ ಎಂದು ತನ್ನ ನಂಬಿಗೆಯ ದೇವರಿಗೆ ಮೊರೆಯಿಟ್ಟ.
  ಆ ದಿನ ಅವನಿಗೆ ಮಧ್ಯಾಹ್ನದ ವರೆಗೂ ವ್ಯಾಪಾರ ಮಾಡಲು ಸಾಧ್ಯವಾಗಲಿಲ್ಲ. ಬಹು ಬೇಗನೆ ಸುಸ್ತು ಆದಹಾಗೆ ಆಯಿತು. ಹೊತ್ತು ನೆತ್ತಿಗೆ ಬರುವ ವೇಳೆ ಮನೆಗೆ ಹಿಂತಿರುಗಿಬಿಟ್ಟ.
  ಲಕುಮವ್ವಿ ಬಾಗಿಲಿನಲ್ಲಿಯೇ ಗೆರಸಿಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಕಲ್ಲು ನೆಲ್ಲನ್ನು ಆರಿಸುತ್ತ ಕುಳಿತಿದ್ದಳು. ಗಂಡ ಇವತ್ತು ಬೇಗನೆ ಬಂದದುದನ್ನು ಕಂಡು ಅವಳಿಗೆ ಆಶ್ಚರ್ಯ. ಬಳಲಿದ ಅವನ ಮುಖವನ್ನು ನೋಡಿ ಆರೋಗ್ಯ ಸರಿ ಇಲ್ಲವೇನೋ ಅಂದುಕೊಂಡು ಬೇಗಬೇಗನೆ ಎದ್ದು ಬಚ್ಚಲಿನಿಂದ ಬಿಸಿನೀರನ್ನೇ ಕಾಲು ತೊಳೆಯಲು ತಂದುಕೊಟ್ಟಳು. ಕಾಲು ತೊಳೆದ ಚಂಪಾಲು ಸೆಟ್ಟಿ ಜಗುಲಿಯ ಮೇಲೆ ಕಂಬಳಿ ಹಾಸಿ ಬೆನ್ನಿಗೊಂದು ದಿಂಬು ಕೊಟ್ಟು ಗೋಡೆಗೆ ಒರಗಿದ. ಲಕುಮವ್ವಿ ಕಕ್ಕುಲತೆಯಿಂದ, ‘ಆರಾಂ ಇಲ್ವೇನ್ರಿ?’ ಎಂದಳು. ಇವನು ಅದಕ್ಕೆ ಏನೊಂದೂ ಉತ್ತರಿಸಲಿಲ್ಲ. ಸುಮ್ಮನೆ ಬಿಗಿದುಕೊಂಡೇ ಮಲಗಿದ.
  ಹೆಂಡತಿ ಒಳಗೆ ಅಡುಗೆ ಕೆಲಸಕ್ಕೆ ಹೋದಮೇಲೆ ಚಂಪಪಾಲು ಸೆಟ್ಟಿ ಮತ್ತೆ ಯೋಚನೆ ಮಾಡತೊಡಗಿದ. ತಾನು ಬರುವಾಗ ಮನೆಯ ಬಾಗಿಲು ಹಾಕಿರುತ್ತದೆ. ಒಳಗೆ ತನ್ನ ಹೆಂಡತಿಯ ಜೊತೆ ಇನ್ನಾರೋ ಇರುತ್ತಾರೆ ಎಂದುಕೊಂಡು ಉದ್ವೇಗದಿಂದ ಬಂದದ್ದ. ಇಲ್ಲಿ ನೋಡಿದರೆ ಹಾಗೇನೂ ಇಲ್ಲ. ಅವಳನ್ನೊಮ್ಮೆ ಪರೀಕ್ಷೆ ಮಾಡಬೇಕು ಎಂದು, ‘ಇಲ್ಲಿ ಬಾರೇ’ ಎಂದು ಕೂಗಿದ. ಎಸರಿಗೆ ಅಕ್ಕಿ ಸುರಿಯುತ್ತಿದ್ದ ಲಕುಮವ್ವಿ ಬಂದಳು. ‘ನನ್ನ ಕಾಲು ಸ್ವಲ್ಪ ತಿಕ್ಕು’ ಅಂದ. ಅವಳು ಎಣ್ಣೆ ತಂದು ಹಚ್ಚಿ ತಿಕ್ಕತೊಡಗಿದಳು. ಸ್ವಲ್ಪ ಹೊತ್ತು ಆದಮೇಲೆ ‘ಸಾಕು’ ಎಂದ. ‘ನನ್ನ ಹತ್ತಿರವೇ ಕುಳಿತುಕೋ’ ಎಂದ. ಅವಳಿಗೆ ಗಂಡನ ಪರಿ ಇವತ್ತೇಕೋ ವಿಚಿತ್ರ ಅನ್ನಿಸಿತು. ಕುಳಿತುಕೊಂಡಳು. ಅವಳ ಮೈಮೇಲೆ ಕೈಯಾಡಿಸಿದ. ಅವಳಿಗೆ ನಾಚಿಕೆಯಾಗಿ, ‘ಜಗುಲಿಯ ಮೇಲೇ ಶುರುಮಾಡೀರಲ್ಲ. ಯಾರಾದ್ರೂ ದಾರಿ ಮೇಲೆ ಹೋಗೋರು ನೋಡೂದಿಲ್ವಾ? ಹುಡುಗ್ರು ಶಾಲೆಯಿಂದ ಬರೂ ಹೊತ್ತಾಯ್ತು’ ಅಂದಳು.
  ಚಂಪಾಲು ಸೆಟ್ಟಿ ಹೆಂಡತಿಯಲ್ಲಿ ಯಾವ ಕೃತ್ರಿಮವನ್ನೂ ಕಾಣಲಿಲ್ಲ. ‘ನನಗೆ ಮೀಯಿಸಿಕೊಡು’ ಎಂದ ಅವನು. ಮದುವೆಯಾದ ಹೊಸತರಲ್ಲಿ ಅವಳು ಅವನಿಗೆ ಮೀಯಿಸಿಕೊಟ್ಟಿದ್ದಳು. ಹನ್ನೆರಡು ವರ್ಷದ ಮೇಲೆ ಗಂಡನಲ್ಲಿ ಮತ್ತದೇ ಬಯಕೆ. ಗಂಡ ಎಂದಿನಂತೆ ಇವತ್ತಿಲ್ಲ ಎಂದು ಅವಳು ಲೆಕ್ಕಹಾಕಿದಳು. ಅವನ ಆರೋಗ್ಯದ ಬಗ್ಗೆ ಮತ್ತೆ ಮತ್ತೆ ಪಿಸಿದು ಕೇಳಿದಳು. ಆಮೇಲೆ ಅವನಿಚ್ಛೆಯಂತೆ ತಾನೇ ನೀರು ಎರೆದು ಮೈ ತಿಕ್ಕಿ ಮೀಯಿಸಿದಳು.
  ಚಂಪಾಲು ಸೆಟ್ಟಿ ಬಿಸಿಬಿಸಿಯಾಗಿಯೇ ಉಂಡು ಕಂಬಳಿ ಹೊದ್ದು ಮಲಗಿದ. ಮಕ್ಕಳು ಶಾಲೆಯಿಂದ ಬಂದು ಊಟಮಾಡಿ ತಿರುಗಿ ಹೋದದ್ದೂ ಅವನಿಗೆ ಗೊತ್ತಿಲ್ಲ. ನಿದ್ದೆಯಲ್ಲಿ ಅವನಿಗೆ ಕನಸೇ ಕನಸು. ಕನಸಿನಲ್ಲಿ ಲಕುಮವ್ವಿಯೂ ಅವನೂ ಗುಡಿಗೆ ಹೊರಟಿದ್ದರು. ಗುಡಿಗೆ ಸ್ವಲ್ಪ ದೂರ ಇರುವಾಗ ಇವನು ತಿರುಗಿ ನೋಡಿದರೆ ಲಕುಮವ್ವಿ ಇಲ್ಲವೇ ಇಲ್ಲ. ಎಲ್ಲಿಗೆ ಹೋದಳಪ್ಪಾ ಎಂದು ಇವನು ತಿರುಗಿ ಹುಡುಕಿಕೊಂಡು ಹೊರಟಾಗ ದೂರದಲ್ಲಿ ಲಕುಮವ್ವಿ ಮತ್ತು ತುದಿಮನೆ ಶಂಕ್ರಣ್ಣ ಕೈ ಕೈ ಹಿಡಿದುಕೊಂಡು ಬರುತ್ತಿರುವುದು ಕಾಣಿಸಿತು. ಇವನ ಮೈಯಲ್ಲಿ ಸಿಟ್ಟು ತುಂಬಿ ಬಂತು. ‘ಏ ಬಿಡೋ, ಸೂಳಾಮಗನೆ’ ಎಂದು ಕೂಗಿ ಹೊಡೆಯಲು ಹೋದ. ಕೂಗಿದ ಕೂಡಲೆ ಲಕುಮವ್ವಿ, ‘ಏನ್ರೀ ಅದು ನಿದ್ರಿಲಿ ಕೂಗೂದು’ ಎಂದು ಅವನನ್ನು ಎಬ್ಬಿಸಿದಳು.
  ಗಂಡ ಎಲ್ಲೋ ಹೆದರಿದ್ದಾನೆ ಎಂದು ಕೆಂಪು ನೀರು ಮಾಡಿ ನಿವಾಳಿಸಿ ಎಸೆದಳು. ಹೆಂಡತಿಯ ಕಕ್ಕುಲತೆ ಕಂಡು ಚಂಪಾಲು ಸೆಟ್ಟಿಗೆ ಮಮತೆ ಉಕ್ಕಿ ಬಂತು. ಅವಳನ್ನು ಕರೆದುಕೊಂಡು ಒಳ ಕೋಣೆಗೆ ನಡೆದ. ‘ಏನ್ರೀ ಇದು ನಿಮ್ಮ ತೆವಲು’ ಎಂದಳು ಆಕೆ. ‘ತೆವಲು ಅಲ್ಲವೆ, ಪ್ರೀತಿ’, ಎಂದ ಅವನು.
  ಚಂಪಾಲು ಸೆಟ್ಟಿ ಎರಡು ದಿನ ಮನೆ ಬಿಟ್ಟು ಹೊರಗೆ ಬೀಳಲೇ ಇಲ್ಲ. ಮೂರನೆ ದಿನ ಹೊರಬಿದ್ದಾಗ, ಕೇರಿಯವರು, ‘ಏನ್‌ ಚಂಪಣ್ಣ ಎರಡು ದಿನ ಮನೆಯಲ್ಲೆ ಇದ್ಯಾ? ಹೆಣ್ತಿ ಹಿಡಕೊಂಡು ಕೂತ್ಕಂಡ್ಯ ಮಗೆ’ ಎಂದು ಒಬ್ಬನೆಂದರೆ, ಇನ್ನೊಬ್ಬ ‘ಇನ್ನೇನ್‌ ಮಾಡ್ತಾನೆ ಅವ್ನು, ಕೈಯಲ್ಲಿ ಮೈಯಲ್ಲಿ ಎಲ್ಲದ್ರಲ್ಲೂ ಸೋತಾನೆ ನೋಡು’ ಎಂದ. ಚಂಪಾಲು ಸೆಟ್ಟಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಊರಲ್ಲಿ ಎಲ್ಲರೂ ತನ್ನ ಹೆಂಡತಿಯ ಬಗ್ಗೆ ಮಾತನಾಡುವವರೇ ಅನ್ನಿಸಿಬಿಟ್ಟಿತು ಅವನಿಗೆ. ಉಳಿದ ದಿನಗಳಲ್ಲಾದರೆ ಅದನ್ನು ಸಹಜವಾಗಿ ಸ್ವೀಕರಿಸಿ ನಕ್ಕುಬಿಡುತ್ತಿದ್ದ. ಆದರೆ ಇವತ್ತು ಅವನಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಿಂದೆಲ್ಲ ಅವರು ಆ ರೀತಿ ಮಾತನಾಡಿರಲಿಲ್ಲ ಎಂದೇನಲ್ಲ.
  ಊರು ತಿರುಗಿ ಸಂಜೆ ಮನೆಗೆ ಬರುವಾಗ, ಇವತ್ತು ಹೆಂಡತಿಯ ಮೇಲೆ ಸಿಟ್ಟಿಗೆದ್ದು ನಾಲ್ಕು ಗುಡುಮಿ ಬಿಗಿಯಬೇಕು ಎಂದು ನಿಶ್ಚೈಸಿಕೊಂಡಿದ್ದ. ಊಟಕ್ಕೆ ಕುಳಿತಾಗ ಊಟದಲ್ಲೇನಾದರೂ ತಪ್ಪು ಹುಡುಕಬೇಕೆಂದುಕೊಂಡ. ಆದರೆ ಊಟ ರುಚಿಯಾಗಿಯೇ ಇತ್ತು. ಹಸಿದ ಹೊಟ್ಟೆಗೆ ಹಿತವಾಗಿಯೇ ಸೇರಿಸಿದ. ಲಕುಮವ್ವಿ ನಗುನಗುತ್ತಲೆ ಒತ್ತಾಯ ಮಾಡಿ ಬಡಸಿದಳು. ಅವಳ ಮೇಲೆ ಸಿಟ್ಟಿಗೇಳಲು ಅವನಿಂದ ಸಾಧ್ಯವಾಗಲೇ ಇಲ್ಲ.
  ಒಂದು ದಿನ ಚಂಪಾಲು ಸೆಟ್ಟಿ ಹೆಂಡತಿಯು ಬಾವಿಗೆ ನೀರಿಗೆ ಹೋದ ಸಮಯದಲ್ಲಿ ತನ್ನ ಐದು ಜನ ಮಕ್ಕಳನ್ನೂ ಸಾಲಾಗಿ ತನ್ನ ಎದುರಿಗೆ ಕುಳ್ಳಿರಿಸಿಕೊಂಡ. ತಾನು ಕನ್ನಡಿಯೊಂದನ್ನು ಕೈಯಲ್ಲಿ ಹಿಡಿದು ತನ್ನ ಮುಖ ನೋಡತೊಡಗಿದ. ತನ್ನ ಹುಡುಗರು ತನ್ನಂತೆಯೆ ಇದ್ದಾರೆಯೆ ಇಲ್ಲವೆ ಎಂಬ ಅನುಮಾನ ಅವನಿಗೆ. ನೂರಕ್ಕೆ ನೂರು ಇವನಂತೆಯೇ ಇದ್ದವರು ಒಬ್ಬರೂ ಇಲ್ಲ. ಒಬ್ಬನ ಮೂಗು ಬೇರೆ, ಒಬ್ಬನ ಕಿವಿ ಬೇರೆ, ಕೆನ್ನೆ ಬೇರೆ, ಗಲ್ಲ ಬೇರೆ. ಹೀಗೆ ಎಲ್ಲ ಬೇರೆ ಬೇರೆಯೆ. ಒಬ್ಬೊಬ್ಬರ ಒಂದೊಂದು ಅಂಗವನ್ನು ತನ್ನ ಕೇರಿಯ ಒಬ್ಬೊಬ್ಬ ಗಂಡಸಿನ ಅಂಗಕ್ಕೆ ಹೋಲಿಸುತ್ತ, ಇದು ಅವನದೇ ಇರಬಹುದೆ ಎಂದು ತರ್ಕಿಸತೊಡಗಿದ. ತನ್ನಂತಲ್ಲವಾದರೆ ತನ್ನ ಹೆಂಡತಿಯಂತಾದರೂ ಇರಬೇಡವೆ ಇವರು ಎಂದುಕೊಳ್ಳುವನು. ಹೆಂಡತಿಯ ಹೋಲಿಕೆಯೂ ಅವನಿಗೆ ಕಾಣಲಿಲ್ಲ.
  ಈಗ ಅವನ ತಲೆಯಲ್ಲಿ ದೊಡ್ಡ ತೂಫಾನು ಎದ್ದಿತು. ಒಂದು ನಿರ್ಧಾರಕ್ಕೆ ಬಂದೇ ಬಿಟ್ಟ. ಹೆಂಡತಿ ನೀರು ತರುವುದು ಕಂಡು ಕನ್ನಡಿ ಬದಿಗಿಟ್ಟ. ಮಕ್ಕಳಿಗೆ ಓದಿಕೊಳ್ಳಿರಿ ಎಂದು ಕಳುಹಿಸಿದ.
  ಆ ದಿನ ರಾತ್ರಿ ಊಟ ಮಾಡಿ ಹೊರಗೆ ಜಗುಲಿಯ ಮೇಲೆ ಮಲಗಿದ ಚಂಪಾಲು ಸೆಟ್ಟಿ ಬೆಳಗಾಗುವುದರಲ್ಲಿ ಇಲ್ಲವೇ ಇಲ್ಲ. ಲಕುಮವ್ವಿ ಎದ್ದು ನೋಡಿದವಳು, ಎಲ್ಲೋ ಹೊಳೆ ಕಡೆ ಹೋಗಿರಬೇಕೆಂದುಕೊಂಡಳು. ಆದರೆ ಎಷ್ಟು ಹೊತ್ತಾದರೂ ಅವನು ಬರಲೇ ಇಲ್ಲ. ಗಾಬರಿಬಿದ್ದಳು. ಆಚೆ ಈಚೆ ಮನೆಯವರನ್ನ ಹುಡುಕಲು ಕಳುಹಿಸಿದಳು. ಸಂಜೆಯಾದರೂ ಅವನ ಪತ್ತೆಯಿಲ್ಲ. ಗಂಡ ಎಲ್ಲಿಗೆ ಹೋದ, ಯಾಕಾಗಿ ಹೋದ ಎನ್ನುವುದು ಒಂದೂ ಅವಳಿಗೆ ಗೊತ್ತಾಗಲಿಲ್ಲ.
  ಚಂಪಾಲು ಸೆಟ್ಟಿ ಇಲ್ಲದ ಒಂದು ರಾತ್ರಿ ಅವಳ ಬದುಕಿನಲ್ಲಿ ಕಳೆದುಹೋಯಿತು. ಇನ್ನೂ ಅನೇಕ ರಾತ್ರಿಗಳು ಕಳೆದವು. ಆದರೂ ಅವನ ಸುಳಿವಿಲ್ಲ. ಆಗ ಲಕುಮವ್ವಿ ಅತ್ತಳು. ತನ್ನ, ತನ್ನ ಮಕ್ಕಳ ಭವಿಷ್ಯವೇನೆಂದು ಚಿಂತಿಸಿದಳು. ಗಂಡನಿಗೆ ಆಸ್ತಿ ಇದೆಯೆ? ಇಲ್ಲ. ಕೇವಲ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದ. ಕೂಡಿಟ್ಟ ಹಣ ಅಲ್ಪ ಸ್ವಲ್ಪ ಇತ್ತು. ಅದೂ ಖಾಲಿಯಾದ ಮೇಲೆ ತನ್ನ ಗತಿಯೇನು? ಉಪವಾಸ ಬಿದ್ದು ಸಾಯುವುದೆ? ಗಂಡನಿಗೆ ತಾನು ಏನು ದ್ರೋಹ ಬಗೆದಿದ್ದೆ? ತನ್ನ ಮಕ್ಕಳು ಏನು ಪಾಪ ಮಾಡಿದ್ದರು ಎಂದು ಹಲುಬಿದಳು.
  ರಾತ್ರಿ ಮಲಗಿದರೆ ಲಕುಮವ್ವಿಗೆ ನಿದ್ರೆ ಸರಿ ಬೀಳುತ್ತಿರಲಿಲ್ಲ. ಬಾಗಿಲ ಮೇಲೆ ಬೆರಳಿನಿಂದ ತಟ್ಟಿದ ಟಕ್‌ ಟಕ್‌ ಸದ್ದು. ಕಿಟಕಿಯ ಬಳಿ ಕೆಮ್ಮುವುದು, ಯಾರೆಂದು ಕೇಳಿದರೆ ಮಾತನ್ನೇ ಆಡದೆ ಸುಮ್ಮನಿರುವುದು ಇವೆಲ್ಲ ಮಾಮೂಲು ಆಯಿತು.
  ಸಹಿಸಿ ಸಹಿಸಿ ಸಾಕಾದ ಲಕುಮವ್ವಿ ಒಂದು ದಿನ ಬಾಗಿಲು ತೆರದೇ ಬಿಟ್ಟಳು. ಆ ಮೇಲೆ ಪ್ರತಿದಿನ ರಾತ್ರಿಯೂ ಬಾಗಿಲು ತೆರೆಯುವುದು, ಮುಚ್ಚುವುದೇ ಅವಳ ದಂಧೆಯಾಯಿತು.
  ಚಂಪಾಲು ಸೆಟ್ಟಿಯನ್ನು ಗೋಕರ್ಣಕ್ಕೆ ಹೋದವರು ತಾವು ಗೋಕರ್ಣದಲ್ಲಿ ಕಂಡಿದ್ದೇವೆ ಎಂದು ಹೇಳಿದರು. ಧರ್ಮಸ್ಥಳಕ್ಕೆ ಹೋದವರು ತಾವು ಅಲ್ಲಿ ಕಂಡಿದ್ದೇವೆ ಎಂದು ಹೇಳಿದರು. ಊರವರನ್ನು ಕಂಡಕೂಡಲೆ ಮಾತಿಗೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದ್ದನಂತೆ.
  ಗಂಡ ಹೋದ ಹೊಸತರಲ್ಲಿ ದೇವರಿಗೆ ದೀಪ ಹಚ್ಚುವಾಗ ಅವರು ತಿರುಗಿ ಬರಲಿ ಎಂದು ಬೇಡಿಕೊಳ್ಳುತ್ತಿದ್ದ ಲಕುಮವ್ವಿ ಈಗ, ಅವರು ಮನೆಗೆ ಬರದೇ ಇರಲಿ. ಇದ್ದಲ್ಲಿಯೇ ಅವರಿಗೆ ಕೈಕಾಲು ಸುಖ ಕೊಡು ದೇವರೆ ಎಂದು ಬೇಡಿಕೊಳ್ಳತೊಡಗಿದಳು.

ತರಂಗ 1990. ತಿಂಗಳ ಅತ್ಯುತ್ತಮ ಕಥೆ ಬಹುಮಾನಿತ.

2.ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು

ವಸಂತ ಏಕಾಕಿಯಾಗಿದ್ದಾಗಲೆಲ್ಲ ಅದೇ ಯೋಚಿಸುತ್ತಿರುತ್ತಾನೆ, ‘ಅವ್ವ ಏಕೆ ಸತ್ತಳು?’ ಜೀವಂತಳಾಗಿದ್ದಾಗ ಮೌನದ ಮುದ್ದೆಯಾಗಿದ್ದ ಅವ್ವ ಅವನಿಗೆಂದೂ ಸಮಸ್ಯೆಯಾಗಿರಲೇ ಇಲ್ಲ. ಇದೀಗ ಸತ್ತು ಭಗ್‌ ಎನ್ನುವ ಚಿತೆಯ ಮೇಲೆ ಉರಿದು ಬೂದಿಯಾದ ನಂತರ ಒಂದು ಕಠಿಣ ಪ್ರಮೇಯವಾಗಿ ಕಾಡುತ್ತಿದ್ದಾಳೆ.
ಹೀಗೆಂದಾಗ ಅವನವ್ವ ಸಾವಿಗೆ ಅತೀತಳಾಗಿದ್ದಳು ಎಂದೇನಲ್ಲ. ಸಾಯುವ ವಯಸ್ಸು ಆಗಿರಲಿಲ್ಲವೆ? ಅದೂ ಆಗಿತ್ತು. ರೋಗವಿರಲಿಲ್ಲವೆ? ರೋಗದಿಂದ ನರಳುತ್ತಲೆ ಇದ್ದಳು. ಈಗ ಸತ್ತ ದಿನದಿಂದ ಒಂದು ವರ್ಷ ಹಿಂದೆಯೇ ಅವಳನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದರು, “ಇವರಿಗೆ ಏನೇನು ಆಸೆ ಇದೆಯೋ ಅದನ್ನೆಲ್ಲ ಪೂರೈಸಿಬಿಡಿ. ಅವರು ಯಾವತ್ತೂ ಸಾಯಬಹುದು” ಎಂದು. ಇಂತಿರುವಾಗ ಸಾಯವ ಆ ದಿನದ ತನಕ ಅವಳಲ್ಲಿ ಪ್ರಾಣ ಚೈತನ್ಯವನ್ನು ಹಿಡಿದಿಟ್ಟ ಪ್ರಬಲ ಇಚ್ಛಾ ಶಕ್ತಿ ಯಾವುದು?
ಅವ್ವ ಕಣ್ಣೆದುರಿದ್ದಾಗ ಅವಳ ಅಸ್ತಿತ್ವದ ಅನಿವಾರ್ಯತೆ ವಸಂತನನ್ನು ಇಷ್ಟೊಂದು ಗಾಢವಾಗಿ ತಟ್ಟಿರಲಿಲ್ಲ. ಇಂದು ಎಲ್ಲರ ನಡುವೆ ಇದ್ದೂ ತನಗೆ ಯಾರೂ ಇಲ್ಲ ಅನ್ನಿಸಿ ಬಿಟ್ಟಾಗ ಅವ್ವ ತಾನೇ ತಾನಾಗಿ ಅವನನ್ನು ಇಡಿಯಾಗಿ ಆಕ್ರಮಿಸಿ ಬಿಡುತ್ತಾಳೆ. ಅವಳ ಪ್ರೀತಿಸುವ ಶಕ್ತಿಯ ಅಂಗುಲ ಅಂಗುಲವೂ ನೆನಪಾಗಿ ಅವನನ್ನು ಕಾಡುತ್ತದೆ. ಎಲ್ಲರಂತಲ್ಲ ತನ್ನ ಅವ್ವ ಎಂದು ಅವನು ಹೇಳಿದರೆ ಏನನ್ನೂ ಹೇಳಿದ ಹಾಗೆ ಆಗಲಿಲ್ಲ.
ಲಂಬಕೋನ ಪ್ರಮಾಣದಲ್ಲಿ ತನ್ನ ದೇಹವನ್ನು ಎಡಕ್ಕೋ ಬಲಕ್ಕೋ ಬಗ್ಗಿಸಿ ಸೊಂಟದ ಮೇಲೆ ಭಾರವಾದ ಕಲಗಚ್ಚಿನ ದಳ್ಳೆಯನ್ನು ಹೇರಿಕೊಂಡು ಇಳಿ ವಯಸ್ಸಿನಲ್ಲೂ ಕೊಟ್ಟಿಗೆಗೆ ಹೋಗುತ್ತಿದ್ದ ಅವಳನ್ನು ಎಮ್ಮೆ ಸಾಕುವ ಹುಚ್ಚು ಬಿಟ್ಟಿರಲಿಲ್ಲ. ಅವ್ವ ತಾನು ಹಾಲು ಕುಡಿದಳೆ? ಮೊಸರು ತುಪ್ಪ ತಿಂದಳೆ? ಮಕ್ಕಳು ತಿನ್ನಲಿ ಬೆಳೆಯಲಿ ಎನ್ನುವುದು ಅವಳ ಆಸೆ. ಮಕ್ಕಳನ್ನು ಬೆಳೆಸಲು ಆಕೆ ಜೀವವನ್ನು ಎಷ್ಚು ತೇದಿರಲಿಲ್ಲ. ವಸಂತ ಒಮ್ಮೊಮ್ಮೆ, ಮಕ್ಕಳಾದ ನಾವು ತಮ್ಮವ್ವನನ್ನು ಎಷ್ಚು ನೆಮ್ಮದಿಯಾಗಿ ಇಟ್ಟಿದ್ದೆವು ಎಂದು ಪ್ರಶ್ನಿಸಿಕೊಳ್ಳುವನು.
ವಸಂತ ತಾಯಿಯ ಹಿರಿಯ ಮಗನಲ್ಲ; ಕಿರಿಯವನೆ. ಅವನವ್ವ ಎಷ್ಟೋ ಸಾರೆ ಅವನನ್ನು ಒತ್ತಾಯಿಸಿದ್ದಳು, “ತಮ್ಮಾ, ಎಲ್ಲಾ ಮಕ್ಕಳ ಮದುವಿ ಕಂಡೆ. ನಿನ್ನೊಬ್ಬಂದು ಉಳೀತು. ನಿನ್ನ ಮದುವಿ ಒಂದು ನೋಡಿ ಬಿಟ್ಟರೆ ನಾ ಸುಖಸ್ಥೆ. ಕಡೆಗೆ ನನ್ನ ಜೀವ ಯಾವಾಗ ಬೇಕಾದ್ರೆ ಆಗ ಹೋಗಲಿ.” ಒಮ್ಮೊಮ್ಮೆ ಬೇಸರದಿಂದ ಹೇಳುತ್ತಿದ್ದಳು, “ನೀ ಯಾವಾಗ ಮುದುಕ ಆದ ಮೇಲೆ ಮದುವಿ ಆಗ್ತಿಯೋ ಹೇಗೆ?” ಒಮ್ಮೊಮ್ಮೆ ಸತ್ತು ಹೋದ ತನ್ನ ಗಂಡನನ್ನ ನೆನೆಸಿಕೊಂಡು. “ಅವರು ಅಂತೂ ಹೋದ್ರು. ಇದ್ದವ್ಳು ನಾ ಒಬ್ಳು. ಅವರು ಸಾಯಬೇಕಿದ್ದರೆ ಹೇಳಿದ್ದರು, ‘ನನ್ನದೆಲ್ಲ ಮುಗೀತು. ನೀ ಎಲ್ಲ ಮಕ್ಳ ಮದುವಿ ನೋಡ್ಕಂಡಿ ಬಾ. ಮಕ್ಕಳ ಕಾಲದಲ್ಲಿ ಆದ್ರೂ ಸುಖ ಕಾಣು ನೀನು’ ಎಂದಿದ್ರು. ಇನ್ನೂ ನಿಮ್ಮ ಚಾಕ್ರಿ ಮಾಡೂದು ತಪ್ಪಲಿಲ್ಲ.”
ವಸಂತ ಒಮ್ಮೊಮ್ಮೆ ಗುಂಗಾಗಿ ಕುಳಿತಾಗ, ತನ್ನನ್ನು ಈಗ ಇಷ್ಟೊಂದು ಪ್ರೀತಿಸುವ ಅವ್ವ ತನ್ನ ಮದುವೆಯಾದ ಮೇಲೂ ಇಷ್ಟೇ ತೀವ್ರವಾಗಿ ಪ್ರೀತಿಸುವಳೆ ಅನ್ನಿಸುವುದು. ಎಷ್ಚೋ ಸಂಸಾರ ಕಂಡಿದ್ದ ಅವನು. ಅತ್ತೆ ಉತ್ತರ ಆದರೆ ಸೊಸೆ ದಕ್ಷಿಣ. ನಡುವೆ ಮಗ ತ್ರಿಶಂಕು. ಹೀಗಿದ್ದೂ ಲೋಕದ ತಾಯಂದಿರೇಕೆ ತಮ್ಮ ಗಂಡು ಮಕ್ಕಳ ಮದುವೆಗೆ ಅಷ್ಟೊದು ಉತ್ಸುಕತೆ ತೋರುವರು ಎನ್ನುವುದು ಅವನಿಗೆ ಬಿಡಿಸಲಾಗದ ಒಗಟು. ಇದನ್ನೆಲ್ಲ ಮಾತಾಗಿ ಹೇಳಿ ತನ್ನವ್ವನಿಂದ ಬಯ್ಯಿಸಿಕೊಂಡೂ ಇದ್ದ. “ನಾ ಸತ್ತ ಮೇಲೆ ಕಾಣ್ತದೆ ನೀ ಮದ್ವಿ ಆಗೂದು” ಎಂದು ನಿಡುಸುಯ್ದಿದ್ದಳು ಅವ್ವ.
ನಾಲ್ಕೈದು ಹೆಣ್ಣುಗಳಿರುವ ಆರೇಳು ಮಕ್ಕಳ ಸಂಸಾರ ತೂಗಿಸುವುದರೊಳಗೆ ವಸಂತನ ಅಪ್ಪ ನುಗ್ಗಾಗಿದ್ದ. ಎಲ್ಲರದೂ ಮದುವೆಯಾಗಿ ವಸಂತನದು ಮಾತ್ರ ಉಳಿದಿತ್ತು. ಅವನಿನ್ನೂ ಓದುತ್ತಿದ್ದ. ಅಷ್ಟರೊಳಗೆ ಅಪ್ಪ ಸತ್ತು ವಸಂತನಣ್ಣ ಯಜಮಾನನಾಗಿದ್ದ. ಬದಲಾದ ಗಾಳಿಯಲ್ಲಿ ಘಾಟು ತುಂಬಿದ್ದು ವಸಂತನವ್ವನಿಗೆ ಮೊದಲು ಅನುಭವಕ್ಕೆ ಬರತೊಡಗಿತು. ತನ್ನ ಗಂಡನ ಕಾಲದ ವ್ಯವಹಾರಕ್ಕೂ ಈಗಿನದಕ್ಕೂ ಆಕೆ ಹೋಲಿಸಿ ನೋಡತೊಡಗಿದಳು. ಬದಲಾಗುತ್ತಿರುವ ಕಾಲದ ವೇಗದಲ್ಲಿ ಹೊಂದಿಕೊಳ್ಳಲು ಆಕೆಗೆ ಸಾಧ್ಯವಾಗಲಿಲ್ಲ. ಹೀಗಾಗಿ ತಾಯಿ ಮಕ್ಕಳ ನಡುವೆ ಕಸಿಪಿಸಿ ನಡೆಯುತ್ತಿತ್ತು.
ವಸಂತ ದಿನಗೂಲಿಯ ಆಧಾರದ ಮೇಲೆ ಆಫೀಸೊಂದರಲ್ಲಿ ಕೆಲಸ ಮಾಡುತ್ತಿದ್ದ. ಮದುವೆಯಾದರೆ ಬರುವ ಸಂಬಳ ಹೊಟ್ಟೆಗೆ ಸಾಲುವುದಿಲ್ಲ. ನೌಕರಿಗೆ ನಿಲ್ಲುವುದೆ ಊರಿಗೆ ಬಂದು ಹೊಲ ನೋಡಿಕೊಳ್ಳುವುದೆ, ಯಾವುದಾದರೊಂದನ್ನು ಮದುವೆಯ ಪೂರ್ವದಲ್ಲೆ ಆಯ್ಕೆ ಮಾಡಿಕೊಳ್ಳಬೇಕಿತ್ತು ಅವನು. ಅದಕ್ಕೆ ಸರಿಯಾಗುವಂಥ ಹೆಣ್ಣನ್ನು ಅವನು ಆರಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಹೀಗಾಗಿ ಅವನು ಮದುವೆಯನ್ನು ಮುಂದೂಡಲು ಪ್ರಯತ್ನಿಸುತ್ತ ಇದ್ದ. ಹೀಗಿರುವಾಗಲೆ ಅವನಣ್ಣನಿಂದ ಒಂದು ಪತ್ರ ಅವನಿಗೆ ಬಂದು ತಲುಪಿತು. ಅದರಲ್ಲಿ ಅವನ ತಾಯಿಯ ಅನಾರೋಗ್ಯದ ವಿಷಯವಿತ್ತು. ಅವಳನ್ನು ಪರೀಕ್ಷಿಸಿದ ವೈದ್ಯರು ಅವಳ ಮೂತ್ರಪಿಂಡಗಳೆರಡೂ ನಿಷ್ಕ್ರಿಯವಾಗಿವೆ ಎಂದು ತಿಳಿಸಿದ್ದರು. ತನ್ನವ್ವನ ಅಂತ್ಯಕ್ಕೆ ಬಹಳ ಕಾಲವಿಲ್ಲವೆಂದು ವಸಂತನಿಗೆ ಅನ್ನಿಸಿತು. ಅವಳ ಸಾಯುವ ಸಮಯದಲ್ಲಾದರೂ ಕೆಲಕಾಲ ಅವಳ ಸೇವೆ ಮಾಡಿದರೆ ಆಯಿತೆಂದು ತನ್ನ ಕೆಲಸವನ್ನು ಬಿಟ್ಟು ಮನೆಗೆ ಬಂದ.
ಅವನವ್ವನಿಗೆ ಮಗ ಹತ್ತಿರ ಬಂದಿದ್ದು ನೆಮ್ಮದಿ ಅನ್ನಿಸಿತು. ವೈದ್ಯರು ತನಗೆ ಸೀಕು ಯಾವುದೆಂದು ಹೇಳಿದ್ದಾರೆ ಎಂದು ಗೊತ್ತಿಲ್ಲದಿದ್ದರೂ ಅವರು ಕೊಡುವ ಔಷಧದಿಂದ ಯಾವ ಪ್ರಯೋಜನವೂ ಆಗದೆ ಯಥಾಸ್ಥಿತಿ ಮುಂದುವರಿದಿರುವುದನ್ನು ಕಂಡು ಅವಳೂ ತನ್ನ ಅಂತಿಮ ದಿನ ಸಮೀಪಿಸಿದೆ ಎಂದು ಲೆಕ್ಕ ಹಾಕಿದ್ದಳು. ಒಂದು ವೇಳೆ ತನಗೆ ಇದೇ ಕಾಯಿಲೆ ಎಂದು ಗೊತ್ತಾದರೂ ಕೂಡ ಶರೀರ ರಚನೆಯಲ್ಲಿ ಮೂತ್ರಪಿಂಡಗಳ ಮಹತ್ವೇನು ಎಂದು ತಿಳಿದಿರದ ಆಕೆಗೆ ಹೆಚ್ಚಿನ ಆಘಾತವೇನೂ ಆಗುತ್ತಿರಲಿಲ್ಲ. ವಸಂತ ಹತ್ತಿರ ಬಂದುದರಿಂದ ನಿತ್ಯವೂ ಅವನಿಗೆ ಬೇಗ ಮದುವೆಯಾಗಬೇಕೆಂದು ಒತ್ತಾಯಿಸುವುದು ಹೆಚ್ಚಾಯಿತು.
ವಸಂತನಿಗೂ ಮದುವಯಾಗಿಬಿಡಬೇಕು ಅನ್ನಿಸಿತು. ಹೀಗಾಗಿ ಅವನು ಮೂರ್ನಾಲ್ಕು ಹೆಣ್ಣುಗಳನ್ನು ನೋಡಿದ. ಏಳೆಂಟು ಜಾತಕಗಳ ತಾರಾಮೇಳ ನೋಡಿದರು. ಇಷ್ಟು ದಿನಗಳ ಕಾಲ ಮದುವೆಗೆ ಒತ್ತಾಯಿಸುತ್ತಿದ್ದ ಅವನವ್ವ ಅವುಗಳಲ್ಲೊಂದಕ್ಕೂ ಹಾಂ ಅನ್ನಲಿಲ್ಲ, ಹೂಂ ಅನ್ನಲಿಲ್ಲ. ಇದೇಕೋ ಮನೆಯವರಿಗೆ ವಿಚಿತ್ರ ಅನ್ನಿಸಿತು. ಇನ್ನೂ ಯಾವುದೋ ಜಾತಕದ ನಿರೀಕ್ಷೆಯಲ್ಲಿ ಆಕೆ ಇರುವ ಹಾಗೆ ಕಾಣುತ್ತಿತ್ತು. ಕೊನೆಗೂ ಒಂದು ಬಂತು. ತಾರಾಮೇಳ ಕೂಡಿತು. ಅವ್ವನ ಬಾಯಿಂದ ‘ಹೂಂ’ ಹೊರಬಿತ್ತು. ಮದುವೆ ನಿಶ್ಚಯವಾಯಿತು.
ಆ ದಿನದಿಂದ ಅವಳ ಪ್ರಾಣ ಚೈತನ್ಯವನ್ನು ಬಂಧಿಸಿ ಇಟ್ಟ ಇಚ್ಛಾಶಕ್ತಿಯಲ್ಲಿ ಸ್ವಲ್ಪ ಬಿರುಕು ಕಂಡಿರಬೇಕು. ಕಾರ್ಯ ಸಾಧಿಸಿದ ಅನಂತರ ಬರುವ ಸಂತೃಪ್ತಿಯ ನಿರ್ಲಿಪ್ತತೆ ಅವಳಲ್ಲಿ ಕಾಣತೊಡಗಿತು. ಮದುವೆಯ ಮುನ್ನಾದಿನ ಉಸಿರಾಡಿಸಲು ಆಕೆ ತನ್ನ ಸರ್ವ ಶಕ್ತಿಯನ್ನು ಕ್ರೋಡೀಕರಿಸಿ ಯಾತನೆ ಪಡುತ್ತಿದ್ದಳು. ಮನೆಯವರಿಗೆಲ್ಲ ಮದುವೆಗೊ ಮಸಣಕ್ಕೊ ಎನ್ನುವ ಚಿಂತೆ. ಬೆಳಗಾಯಿತು. ಅವ್ವ ಇನ್ನೂ ಉಸಿರಾಡಿಸುತ್ತ ಇದ್ದಳು. ದಿಬ್ಬಣ ಹೆಣ್ಣಿನೂರಿಗೆ ಹೊರಟಿತು. ಅವ್ವನ ಹತ್ತಿರ ಕೆಲವರು ಉಳಿದರು. ಧಾರೆಯ ಮುಹೂರ್ತ ಆದ ಕೆಲ ಕ್ಷಣಗಳ ಅನಂತರ ಇಲ್ಲಿ ಅವ್ವ ಗಂಟೆ ಎಷ್ಟು ಎಂದು ಕೇಳಿದ್ದಾಳೆ. ಗಂಟೆ ಹೇಳಿದ ಅಲ್ಲಿದ್ದವರು ‘ಧಾರೆ ಆಯಿತು’ ಎಂದು ಹೇಳಿದ್ದು ಅವಳ ಕಿವಿಗೆ ಬಿದ್ದಿದೆ. ಅನಂತರದ ಕೆಲವು ನಿಮಿಷಗಳಲ್ಲೆ ಅವಳ ಜೀವ ಹಾರಿ ಹೋಯಿತು.
ತನ್ನ ಮದುವೆಗೆ ಎಷ್ಟೋ ಆತುರ ಪಡುತ್ತಿದ್ದ ತನ್ನ ಅವ್ವ ಅದೇಕೆ ಮದುವೆಯ ದಿನವೇ ಸತ್ತಳು? ವೈದ್ಯಕೀಯ ಪವಾಡ ಅನ್ನುವಂತೆ ಆಕೆ ಅಷ್ಟು ದಿನಗಳ ಕಾಲ ಜೀವ ಹೇಗೆ ಧರಿಸಿದ್ದಳು? ಇವೆಲ್ಲ ಪ್ರಶ್ನೆಗಳು ವಸಂತನನ್ನು ಏಕಕಾಲದಲ್ಲಿ ಮುತ್ತತೊಡಗಿದಾಗ, ಹತ್ತು ಜನರ ಹತ್ತಿರ ಏನೇನೋ ಕೇಳಿದ. ಒಂದು ಒಂದು ಸೇರಿ ಇವನು ಅಗೆಯತೊಡಗಿದ ಭೂತಳದೊಳಗೆ ಎಲ್ಲ ಪ್ರಶ್ನೆಗಳಿಗೂ ಉತ್ತರವೆನ್ನುವಂತೆ ಅವನವ್ವನ ಇನ್ನೊಂದು ವ್ಯಕ್ತಿತ್ವವೇ ಗೋಚರವಾಯಿತು.
ವಸಂತನವ್ವನಿಗೆ ಅವಳ ತವರು ಮನೆಯಲ್ಲಿ ಇಟ್ಟ ಹೆಸರು ವೀರಮ್ಮ ಎಂದು. ಇಂದೂ ಕೂಡ ಅವಳ ಬಳಗದ ನೆಂಟರು ವಸಂತನನ್ನು ‘ನೀನು ವೀರಮ್ಮನ ಮಗ ಅಲ್ವಾ?’ ಎಂದು ಕೇಳಿಯೇ ಗುರುತಿಸುತ್ತಾರೆ. ಹೆಸರಿಗೆ ತಕ್ಕಹಾಗೆ ವೀರಮ್ಮನ ಸ್ವಭಾವದಲ್ಲಿ ಧೈರ್ಯ ತಾನೇತಾನಾಗಿ ಮನೆ ಮಾಡಿತ್ತು. ಇದಕ್ಕೆ ಅವಳ ತಬ್ಬಲಿತನದ ಬಾಲ್ಯವೇ ಕಾರಣವಾಗಿತ್ತು. ವೀರಮ್ಮನಿಗೆ ಐದು ತುಂಬುವುದರೊಳಗೆ ಅವಳು ತನ್ನ ತಾಯಿಯನ್ನು ಕಳೆದುಕೊಂಡಳು.
ತಂದೆ ಸಣ್ಣಯ್ಯ ಅವಳನ್ನು ಅವಳಿಗಿಂತ ಮೂರ್ನಾಲ್ಕು ವರ್ಷಕ್ಕೆ ಹಿರಿಯವನಾದ ಗಂಡು ಮಗ ಗಜುವನ್ನೂ ಮಲತಾಯಿಯ ಕಿರುಕುಳದಿಂದ ತಪ್ಪಿಸುವ ಸಲುವಾಗಿ ತಿರುಗಿ ಮದುವೆ ಆಗಿರಲಿಲ್ಲ.
ಗಜು ಮತ್ತು ವೀರಮ್ಮ ತಮ್ಮ ಬಾಲ್ಯದ ಅನೇಕ ದಿನಗಳನ್ನು ಹೈಗರ ಕೇರಿಯ ಮಾವಿನ ಮರಗಳ ಬುಡದಲ್ಲೇ ಕಳೆದಿದ್ದರು. ಯಾರು ಹೆಚ್ಚು ಮಾವಿನ ಹಣ್ಣುಗಳನ್ನು ಆರಿಸುವವರು ಎಂದು ಅಣ್ಣ ತಂಗಿಯರೆ ಜಿದ್ದು ಕಟ್ಟಿಕೊಂಡು ಮಧ್ಯಾಹ್ನದ ಊಟದ ಆಲೋಚನೆಯನ್ನೂ ಮರೆತು ಮರಗಳ ಕೆಳಗೆ ಕುಳಿತುಬಿಡುತ್ತಿದ್ದರು. ಅಡುಗೆ ಮಾಡಿಟ್ಟು ಕಾದು ಸುಸ್ತಾದ ಸಣ್ಣಯ್ಯ ಅವರನ್ನು ಅರಸಿಕೊಂಡು ಬರುತ್ತಿದ್ದ. ಒತ್ತಾಯ ಮಾಡಿ ಕರೆದುಕೊಂಡು ಹೋಗಿ ಅವರಿಗೆ ಊಟಕ್ಕೆ ಹಾಕುತ್ತಿದ್ದ. ರಾತ್ರಿ ಮಲಗುವಾಗ ಆಚೆಗೆ ಒಬ್ಬ ಈಚೆಗೆ ಒಬ್ಬಳನ್ನು ಮಲಗಿಸಿಕೊಂಡು ಒಳ್ಳೊಳ್ಳೆಯ ಕಥೆಗಳನ್ನೂ ಹೇಳುತ್ತಿದ್ದ. ಅಂದು ತನ್ನಪ್ಪ ಹೇಳಿದ ಕಥೆಗಳನ್ನೇ ನೆನಪಿಟ್ಟುಕೊಂಡು ತನ್ನ ಮಕ್ಕಳಾದ ವಸಂತ ಮತ್ತಿತರರಿಗೂ ಆಕೆ ಹೇಳಿದ್ದಳು.
ಸಣ್ಣಯ್ಯ ಅವಳಿಗೆ ಒಂದು ಕಥೆ ಹೇಳಿದ್ದು: ಏಳು ಸಮುದ್ರಗಳ ಆಚೆಗೆ ಒಬ್ಬ ರಾಜಕುಮಾರಿ ಒಲ್ಲದ ಗಂಡನ ಜೊತೆ ಸಂಸಾರ ಸಾಗಿಸುತ್ತ ಇದ್ದಳು. ಏನೆಲ್ಲವೂ ಆಗಿರುವ ತನಗೆ ಏನೇನೂ ಆಗಿರದ ಈ ಗಂಡ ಸರಿಯೆ ಎಂಬ ಪ್ರಶ್ನೆ ಅವಳಲ್ಲಿ ಏಳುತ್ತದೆ. ಅವಳೊಂದು ಉಪಾಯ ಮಾಡುತ್ತಾಳೆ. ಒಂದು ದಿನ ಬೆಳಿಗ್ಗೆ ಗಂಡನ ಹತ್ತಿರ, “ರಾತ್ರಿ ನನಗೆ ಒಂದು ಕನಸು ಬಿದ್ದಿತ್ತು. ಅದರಲ್ಲಿ ದಕ್ಷಿಣ ದಿಕ್ಕಿನಲ್ಲಿ ಒಂದು ಕಣಗಿಲ ಗಿಡದಲ್ಲಿ ಮೂರು ಬಂಗಾರದ ಪುಷ್ಪಗಳು ಅರಳಿದ್ದು ಕಂಡೆ. ಅದನ್ನು ನಾನು ಮುಡಿಯಲ್ಲಿ ಧರಿಸಿದರೆ ವೀರಾಧಿವೀರನಾದ ಮಗನು ಜನಿಸುವನು. ಅದನ್ನು ನೀನು ನನಗೆ ತಂದುಕೊಡು” ಎನ್ನುವಳು.
ರಾಜಕುಮಾರಿಯ ಗಂಡ ದಕ್ಷಿಣದ ದಿಕ್ಕಿಗೆ ಬಂಗಾರದ ಕಣಗಿಲ ಹೂ ಅರಳಿರುವುದನ್ನು ಅರಸುತ್ತ ಹೋಗುವನು. ಇತ್ತ ರಾಜಕುಮಾರಿ ತಾನು ಮೆಚ್ಚಿದ ಒಬ್ಬನಿಗೆ ಏಳು ಸಮುದ್ರ ದಾಟಿ ಬರಲು ಅನುವು ಮಾಡಿ ಕೊಡುವಳು. ಅವನ ಜೊತೆ ಸಂಸಾರ ಮಾಡಿ ಅವಳು ಮಕ್ಕಳನ್ನೂ ಹೆರುವಳು. ಕೆಲವು ವರ್ಷಗಳ ಮೇಲೆ ಅವಳ ಗಂಡ ಚಿನ್ನದ ಕಣಗಿಲ ಹೂ ಕಾಣದೆ ರಾಜಕುಮಾರಿ ಸುಳ್ಳು ಹೇಳಿ ಮೋಸ ಮಾಡಿರಬಹುದೆ ಎಂದು ಅನುಮಾನಪಡುತ್ತ ಬರುವನು. ವಿಷಯ ತಿಳಿದುಕೊಂಡ ಅವನು ರಾಜಕುಮಾರಿಯನ್ನು, ಅವಳ ಜೊತೆಗಾರನನ್ನೂ ಕೊಂದು ಬಿಡುವನು. ಅವರನ್ನು ಮಣ್ಣಿಗೆಸೆದ ಜಾಗದಲ್ಲಿ ಕೆಲವು ದಿಗಳಲ್ಲಿ ಕಣಗಿಲ ಗಿಡ ಹುಟ್ಟಿ ಬೆಳೆಯಿತಂತೆ. ಅದರಲ್ಲಿ ಮೂರು ಮೂರು ಬಂಗಾರದ ಹೂ ಅರಳಿತ್ತಂತೆ.
ಏಳು ಸಮುದ್ರಗಳ ಆಚೆಗೆ ಇರುವ ರಾಜಕುಮಾರಿಯ ವೈಭವವನ್ನು ತನ್ನ ಕಲ್ಪನೆಗೆ ನಿಲುಕುವಷ್ಟು ಕಲ್ಪಿಸಿಕೊಳ್ಳುತ್ತ ಕಂಡವರ ಮನೆ ಹಿತ್ತಿಲು ಬಾಗಿಲಲ್ಲಿ ಇರುತ್ತಿದ್ದ ವೀರಮ್ಮನ ತಲೆಕೂದಲು ಸರಿಯಾದ ಆರೈಕೆ ಇಲ್ಲದೆ ಕೆಂಚುಬಣ್ಣಕ್ಕೆ ತಿರುಗಿ ಜಡಕು ಆಗಿತ್ತು. ಸಣ್ಣಯ್ಯ ಅವಳ ತಲೆಗೆ ತಾನೆ ಆಗಮ್ಮೆ ಈಗೊಮ್ಮೆ ನೀರು ಕಾಣಿಸಿ ಎಣ್ಣೆ ಹಚ್ಚಿ ಬಾಚುವ ಪ್ರಯತ್ನ ಮಾಡುತ್ತಿದ್ದ. ಆ ಪ್ರಯತ್ನದಲ್ಲಿ ಅವನಿಗೆ ಗೆಲವು ಎಂಬುದ ಇರಲಿಲ್ಲ. ಹೀಗಾಗಿ ಅವಳನ್ನು ಅವನು ಒಂದು ದಿನ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದ ಇನ್ನೊಂದು ಮನೆಗೆ ಕರೆದುಕೊಂಡು ಹೋದ. ಆ ಮನೆಯಲ್ಲಿ ಒಬ್ಬ ಮಧ್ಯವಯಸ್ಕ ಹೆಣ್ಣಿದ್ದಳು. ಅವಳನ್ನು ವೀರಮ್ಮನಿಗೆ ತೋರಿಸಿ, ವೆಂಕೂ ಚಿಕ್ಕಿ ಇವಳು ಎಂದು ಗುರುತು ಹೇಳಿದ. ವೆಂಕೂ ಚಿಕ್ಕಿಯ ಹತ್ತಿರ, “ಇವಳಿಗೆ ಸ್ವಲ್ಪ ತಲೆ ಬಾಚಿಕೊಡು” ಎಂದು ಹೇಳಿದ.
ವೆಂಕೂ ಚಿಕ್ಕಯ ಗಂಡ ಊರಲ್ಲಿ ಇರುತ್ತಿದ್ದುದೇ ಕಡಿಮೆ. ಘಟ್ಟದ ಮೇಲೆ ಅದು ಇದು ಗುತ್ತಿಗೆ ಹಿಡಿದು ತಂಡ ತೆಗೆದುಕೊಂಡು ಹೋಗಿ ಕೆಲಸ ಮಾಡಿಸುತ್ತಿದ್ದ. ಯುಗಾದಿ, ದೀಪಾವಳಿಗೊಮ್ಮೆ, ತೇರಿಗೊಮ್ಮೆ ಅಂತ ವರ್ಷದಲ್ಲಿ ನಾಲ್ಕೈದು ಸಲ ಮನೆಗೆ ಬಂದು ಹೋಗುತ್ತಿದ್ದ. ಹೀಗಾಗಿ ವೀರಮ್ಮನಿಗೆ ಅವನ ನೆನಪು ಮಸಕು ಮಸಕಾಗಿ ಅಷ್ಟೇ ಇತ್ತು.
ಒಂದು ದಿನ ಘಟ್ಟದ ಮೇಲೆ ಇದ್ದ ವೆಂಕೂ ಚಿಕ್ಕಿ ಗಂಡನ ತಂಡದ ಸದಸ್ಯನೊಬ್ಬ ಆಕೆಯ ಗಂಡ ಸತ್ತ ಸುದ್ದಿಯನ್ನು ತಂದ. ವೆಂಕೂ ಚಿಕ್ಕಿಗೆ ಬರಸಿಡಿಲು ಬಡಿದ ಹಾಗೆ ಆಯಿತು. ಅವನು ಏನಾಗಿ ಸತ್ತ ಎನ್ನುವುದು ವೀರಮ್ಮನಿಗೆ ಸರಿಯಾಗಿ ನೆನಪು ಇಲ್ಲ. ವೆಂಕೂ ಚಿಕ್ಕಿಯ ಮಕ್ಕಳು ಎಲ್ಲ ಸಣ್ಣವರಿದ್ದ ಕಾರಣ ಸಣ್ಣಯ್ಯನೇ ಮುಂದಾಗಿ ಹೆಣವನ್ನು ಎತ್ತಿನ ಗಾಡಿಯ ಮೇಲೆ ಹಾಕಿಕೊಂಡು ಮನೆಗೆ ತಂದನು.
ಆನಂತರದ ದಿನಗಳಲ್ಲಿ ವೆಂಕೂ ಚಿಕ್ಕಿಗೆ ಸಣ್ಣಯ್ಯನ ಸಹಾಯ ಹೆಚ್ಚು ಹೆಚ್ಚು ಬೇಕಾಗತೊಡಗಿತು. ಅವನ ಅವಳ ಸಂಬಂಧ ವೀರಮ್ಮನ ಬಾಲಬುದ್ಧಿಗೆ ನಿಲುಕದಷ್ಟು ಆಳವಾಗಿ ಬೆಸೆದುಕೊಂಡು ಬಿಟ್ಟಿತ್ತು.
ಗಂಡ ಸತ್ತ ವೆಂಕೂ ಚಿಕ್ಕಿ ಬಸಿರಾದ ಸುದ್ದಿ ಆಚೀಚೆಯ ಮನೆಯಲ್ಲಿ ಗುಸುಗುಸು ಮಾತನಾಡಿದ್ದು ಆಡಲು ಹೋದ ವೀರಮ್ಮನಿಗೆ ತಿಳಿಯಿತು. ಬಸಿರಾಗುವುದು ಹೇಗೆಂದು ಅವಳಿಗೇನು ಗೊತ್ತು? ಅದಕ್ಕೆ ಕಾರಣ ತನ್ನ ತಂದೆ ಎನ್ನುವುದೂ ಆಗ ಅವಳಿಗೆ ಗೊತ್ತಿರಲಿಲ್ಲ. ವೆಂಕೂ ಚಿಕ್ಕಿ ತನ್ನ ಬಸಿರನ್ನು ಮುಚ್ಚಿಡುವ ಪ್ರಯತ್ನಕ್ಕೆ ಹೋಗಲಿಲ್ಲ.
ಆದರೆ ತಿಂಗಳು ತುಂಬುತ್ತಿದ್ದಂತೆ ಊರವರ, ಜಾತಿಯವರ ಕೋಪದ ಕಣ್ಣುಗಳು ಅವಳ ಬಸಿರನ್ನು ಇರಿಯತೊಡಗಿದವು. ಬಹಿಷ್ಕಾರದ ಬೆದರಿಕೆ ಬಂತು. ತಾನು ಬಹಿಷ್ಕೃತಳಾದರೂ ಅಡ್ಡಿಯಿಲ್ಲ. ಆದರೆ ತನ್ನ ಮಗು ಸಮಾಜದ ನಿಂದೆಗೆ ಗುರಿಯಾಗಿ ಬದುಕುವುದು ಬೇಡವೆಂದು ವೆಂಕೂ ಚಿಕ್ಕಿ ಒಂದು ನಿರ್ಧಾರ ಮಾಡಿದಳು.
ತನಗೆ ಹುಟ್ಟಿದ ಮಗುವಿಗೆ ಹೊರ ಪ್ರಪಂಚವನ್ನು ಆಕೆ ತೋರಿಸಲೇ ಇಲ್ಲ. ಆ ಮಗು ಸತ್ತು ಹುಟ್ಟಿತೋ, ಹುಟ್ಟಿದ ಮೇಲೆ ಸತ್ತಿತೋ ಆ ರಹಸ್ಯ ವೆಂಕೂ ಚಿಕ್ಕಿಗೆ ಮಾತ್ರ ಗೊತ್ತು. ಅವಳ ಮೇಲೆ ಸಿಟ್ಟಿದ್ದವರು ಪೊಲೀಸರಿಗೆ ಸುದ್ದಿ ತಿಳಿಸಿದರು. ಅವರು ಬಂದು ಚೌಕಾಶಿ ಆಯಿತು. ಹೆರಿಗೆ ಮಾಡಿಸಲು ಬಂದ ಬೆಜಿಲ್ತಿಯ ಸಾಕ್ಷ್ಯ ಅವಳನ್ನು ಉಳಿಸಿತು.
ಸಿಟ್ಟಿದ್ದವರು ಅಷ್ಟಕ್ಕೇ ಬಿಡಲಿಲ್ಲ. ಜಾತಿ ಹಿರಿಯರ ಮುಂದೆ ಪಂಚಾಯ್ತಿಕೆ ಒಯ್ದರು. ವೆಂಕೂ ಚಿಕ್ಕಿಗೆ ಜಾತಿಯಿಂದ ಬಹಿಷ್ಕಾರ ಹಾಕಿದರು. ನೀರು, ಬೆಂಕಿ ಕಟ್ಟು ಮಾಡಿದರು. ಊರಲ್ಲಿ ಇರಲಾರದೆ ವೆಂಕೂ ಚಿಕ್ಕಿ ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಹೋದಳು.
ಉಳಿದೆಲ್ಲ ಸಮಯದಲ್ಲಿ ಅವಳ ಸಹಾಯಕ್ಕೆ ಬರುತ್ತಿದ್ದ ಸಣ್ಣಯ್ಯ ಈ ಪ್ರಕರಣದಲ್ಲಿ ಮಾತ್ರ ಎದುರಿಗೆ ಬರಲಿಲ್ಲ. ಅದು ಏಕೆಂದು ವೀರಮ್ಮನಿಗೆ ಅರ್ಥವಾಗಲಿಲ್ಲ. ವೆಂಕೂ ಚಿಕ್ಕಿ ಊರು ಬಿಟ್ಟ ದಿನ ವೀರಮ್ಮ ತುಂಬ ಅತ್ತಿದ್ದಳು. ಎಂಟು ದಿನ ಮಂಕಾಗಿಯೇ ಇದ್ದಳು. ತಿಂಗಳ ವರೆಗೆ ಅವಳ ನೆನಪನ್ನು ತೆಗೆಯುತ್ತಲೇ ಇದ್ದಳು.
ವೀರಮ್ಮ ದೊಡ್ಡವಳಾದಳು. ವಿಪರ್ಯಾಸ ಎನ್ನುವಂತೆ ವೆಂಕೂ ಚಿಕ್ಕಿ ಬಹಿಷ್ಕೃತಳಾಗಿ ಊರು ಬಿಟ್ಟು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದವನ ಮಗನೊಂದಿಗೇ ಸಣ್ಣಯ್ಯ ಅವಳ ಮದುವೆ ಮಾಡಿಸಿದ್ದ. ಈಗ ವೀರಮ್ಮನಿಗೆ ಬಸಿರಾಗುವುದು ಹೇಗೆಂದು ಗೊತ್ತಾಗಿದೆ. ಗಂಡ ಸತ್ತ ಮೇಲೆ ಬಸಿರಾಗುವುದು ಸಾಮಾಜಿಕ ಅಪರಾಧ ಎನ್ನುವುದು ತಿಳಿದಿದೆ.
ವೆಂಕೂ ಚಿಕ್ಕಿಯ ಬಗ್ಗೆ ಈಗ ಅವಳು ವಿಚಾರ ಮಾಡಿದಾಗ ತನ್ನಪ್ಪನಿಗೂ ಅವಳಿಗೂ ಇದ್ದ ತನ್ನ ಬಾಲ್ಯಬುದ್ಧಿಗೆ ಹೊಳೆಯದಿದ್ದ ಸಂಬಂಧ ಅರಿವಾಗುತ್ತದೆ. ತಪ್ಪಿನಲ್ಲಿ ಸಮಪಾಲನ್ನು ಹೊಂದಿಯೂ ಶಿಕ್ಷೆಯಿಂದ ತನ್ನಪ್ಪ ಹೇಗೆ ತಪ್ಪಿಸಿಕೊಂಡ ಎಂಬ ಸಾಮಾಜಿಕ ನ್ಯಾಯದ ಅಸಮಾನತೆಯ ಬಗ್ಗೆ ಗುಂಗಾಗುತ್ತಾಳೆ. ಅವಳ ಅಂತರಾತ್ಮ ವೆಂಕೂ ಚಿಕ್ಕಿ ನಿರಪರಾಧಿ ಎಂದು ಹೇಳುತ್ತಿತ್ತು.
ಕಾಲ ಸರಿದಿದೆ. ವೆಂಕೂ ಚಿಕ್ಕಿ ಸತ್ತು ಹೋಗಿದ್ದಾಳೆ. ಅವಳ ಮಕ್ಕಳು ಮದುವೆ ಮಾಡಿಕೊಂಡು ಹೊರ ಊರುಗಳಲ್ಲಿ ಸಂಸಾರಸ್ಥರಾಗಿದ್ದಾರೆ. ವೀರಮ್ಮನಿಗೂ ಮಕ್ಕಳಾಗಿದ್ದಾರೆ. ವೆಂಕೂ ಚಿಕ್ಕಿಯ ಮಕ್ಕಳಲ್ಲಿ ಯಾರಾದರೊಬ್ಬರ ಮಗಳನ್ನು ತನ್ನ ಮಕ್ಕಳಲ್ಲಿ ಯಾರಾದರೊಬ್ಬರಿಗೆ ತಂದುಕೊಂಡು ವೆಂಕೂ ಚಿಕ್ಕಿಗೆ ತನ್ನ ತಂದೆಯಿಂದ, ತನ್ನ ಮಾವನಿಂದ ಆದ ಅನ್ಯಾಯಕ್ಕೆ ಸ್ವಲ್ಪ ಅಲ್ಲ ಸ್ವಲ್ಪವಾದರೂ ಪರಿಹಾರ ಮಾಡಿಕೊಳ್ಳಬೇಕೆಂದು ಆಕೆ ನಿಶ್ಚಯಿಸಿದ್ದಳು.
ವಸಂತನಿಂದು ತಾಳಿ ಕಟ್ಟಿದ ಹೆಣ್ಣು ವೆಂಕೂ ಚಿಕ್ಕಿಯ ಮೊಮ್ಮಗಳೇ ಆಗಿದ್ದಳು. ವೀರಮ್ಮನಿಗೆ ನೆಮ್ಮದಿ ಸಿಕ್ಕಿತ್ತು. ಶರೀರದ ಯಾತನೆಯಿಂದ ಜೀವ ತಪ್ಪಿಸಿಕೊಂಡು ಹೋಯಿತು.
ತನ್ನವ್ವ ಹೇಳಿದ ಏಳು ಸಮುದ್ರಗಳ ಆಚೆಗಿನ ರಾಜಕುಮಾರಿಯ ಕಥೆ ವಸಂತನಿಗೆ ಈಗ ನೆನಪಾಯಿತು. ತನ್ನ ಮದುವೆಯಿಂದ ಬಂಗಾರದ ಕಣಗಿಲ ಹೂವಿಗೆ ಪರಿಮಳದ ಸ್ಪರ್ಶ ಆದಂತೆ ಆಯಿತು ಎಂದು ಕೊಂಡ. ತಾನು, ತನ್ನವ್ವ, ತನ್ನ ಅಜ್ಜಂದಿರು, ವೆಂಕೂ ಚಿಕ್ಕಿ, ತನ್ನ ಮದುವೆ- ಇತ್ಯಾದಿಯನ್ನೆಲ್ಲ ಒಟ್ಟಾಗಿ ಅವಲೋಕಿಸಿದಾಗ ‘ಎತ್ತಣಿಂದೆತ್ತಣ ಸಂಬಂಧವಯ್ಯ’ ಎಂದುಕೊಂಡ ವಸಂತ.

ತರಂಗ 1991

3.ಕುನ್ನಿಯೊಂದು ದಾಸನಾಗಿ ಸತ್ತುದರ ವಿವರಗಳು….

ಕರೇ ಹೇಳಬೇಕು ಅಂದ್ರೆ ಆ ಕುನ್ನಿ ಅವರ ಮನೆಯದೂ ಅಲ್ಲ, ಕೇರಿಯದೂ ಅಲ್ಲ. ಇವರ ಕೇರಿಯಿಂದ ಅರ್ಧಮೈಲು ದೂರದಲ್ಲಿ ಒಂದು ಊರು ಇದೆ. ಆ ಊರಲ್ಲಿ ಒಬ್ಬರ ಮನೆಯಲ್ಲಿ ಅದನ್ನು ಸಾಕಿದ್ದರು. ಆ ಮನೆಯವರು ಎಲ್ಲೋ ಹೋಗಬೇಕಿದ್ದರೆ ಆ ಕುನ್ನಿಯೂ ಬೆನ್ನಿಗೆ ಬಂದಿತ್ತು. ಈಗ ಏನು ಕುನ್ನಿ ಇದೆ ಅಲ್ಲಾ, ಅವರ ಮನೆ ಬಾಗಿಲಿನಲ್ಲೇ ದಾರಿ. ಅಲ್ಲೊಂದು ಕರಿಯ ಬಣ್ಣದ ಹೆಣ್ಣು ಕುನ್ನಿ ಇತ್ತು. ಕುನ್ನಿ ಕುನ್ನಿ ಕಂಡ ಮೇಲೆ ಕೇಳಬೇಕಾ? ಬೊಗಳಿಕೊಂಡವು. ಒಂದರ ಮೇಲೆ ಒಂದು ಹಾರಲು ತಯ್ಯಾರಿ ನಡೆಸಿದವು. ಅಷ್ಟರಲ್ಲಿ ಹೆಣ್ಣು ಕುನ್ನಿ ಕುಂಡೆಯಲ್ಲಿ ಬಾಲ ಮುದುರಿಸಿಕೊಳ್ಳುತ್ತ ಕುಂಯ್‌ ಕುಂಯ್‌ ಎಂದು ತನ್ನ ಶರಣಾಗತಿ ಒಪ್ಪಿಕೊಂಡಿತು. ಅಂದಿನ ತನ್ನ ವಿಜಯದ ಸ್ಮಾರಕವಾಗಿ ಆ ಕುನ್ನಿ ಅಲ್ಲೇ ಬಿಡಾರ ಹೂಡಿತು. ತನ್ನ ಸಾಕಿದವರ ಮನೆಯನ್ನು ಬಿಟ್ಟೇಬಿಟ್ಟಿತು. ಇದೆಲ್ಲಾ ಆರೇಳು ವರ್ಷಗಳ ಹಿಂದಿನ ಸುದ್ದಿ!
ಆ ಕುನ್ನಿ ಈಗ ಏನು ಇದೆ ಅಲ್ಲಾ, ಆ ಮನೆಯ ಯಜಮಾನರು ವೆಂಕಟರಾಯರು. ಅವರ ಹೆಂಡತಿ ಸೀತಮ್ಮ. ಅವರಿಗೆ ಮಕ್ಕಳೂ ಇದ್ದರು ಬಿಡಿ. ಆ ಕುನ್ನಿ ಬಂದ ಹೊಸತರಲ್ಲಿ ಅವರೂ ಬಡಗಿ ಪ್ರಯೋಗ ಮಾಡಿದ್ದರು. ಕಲ್ಲನ್ನು ಬೀಸಿ ಹೊಡೆದಿದ್ದರು. ಎಷ್ಟೆಂದರೂ ಕುನ್ನಿ ಜಾತಿ ನೋಡಿ. ಹೊಡೆದದ್ದು ಕೆಲವು ತಿಂದಿತು. ಕೆಲವನ್ನು ತಪ್ಪಿಸಿಕೊಂಡಿತು. ಹೊಡೆಯುವವರು ಬೇಜಾರು ಬಂದು ಕೊನೆಗೆ, ‘ಅದರಷ್ಟಕ್ಕೆ ಅದು ಇದ್ದುಕೊಳ್ಳಲಿ’ ಎಂದು ಬಿಟ್ಟುಬಿಟ್ಟರು.
ವೆಂಕಟರಾಯರು ಅಲ್ಲದಿದ್ದರೂ ಬೇರೆಯವರಾದರೂ ಅದನ್ನು ಸಾಕಿದ್ದರು ಅಲ್ವಾ? ಹಾಗಾಗಿ ಕುನ್ನಿ ಅಂದ್ರೆ ಎಣ್ಣೆ ಹಾಕಿ ಎಣ್ಣೆ ತೆಗೆಯುವ ಹಾಗೆ ಇತ್ತು. ಕೌಲು ಬಣ್ಣ, ಕುತ್ತಿಗೆ, ಹಣೆ, ಹುಬ್ಬುಗಳಿಗೆ ಬಿಳಿಯ ಪಟ್ಟೆ. ಅರ್ಧಕ್ಕೆ ಮಡಚಿದ ಕಿವಿಗಳು. ನಡೆದಾಡುವಾಗ ಅದು ಎದ್ದುಬಿದ್ದು ತುಂಬ ಚೆಂದ ಕಾಣುತ್ತಿತ್ತು. ಆದರೂ ಬಾಲ ಮಾತ್ರ ಡೊಂಕು ಅಲ್ವೆ?
ಕುನ್ನಿ ಬರೀ ಚಂದ ಇದ್ದದ್ದು ಅಷ್ಟೇ ಅಲ್ಲ, ತೋಟಕ್ಕೆ ಮಂಗ ಬಂದರೆ ಬೊಗಳುತ್ತಿತ್ತು. ದನ, ಎತ್ತು, ಎಮ್ಮೆ, ಕೋಣ ಇನ್ನಾವುದೇ ಬಂದರೂ ಬೆದರಿಸುತ್ತಿತ್ತು. ತಿರುಗಾಡೂ ಮಂದಿ ಕಂಡರೂ ಬೊಗಳುತ್ತಿತ್ತು. ರಾತ್ರಿ ಹಿತ್ತಲದಲ್ಲೇ ತಿರುಗಾಡಿಕೊಂಡಿರುತ್ತಿತ್ತು. ಬೇರೆಯವರ ಕೋಳಿ ಅಡಕೆ ಮರದ ಗೊಬ್ಬರ ಕೆದರಲು ಬಂದರೆ ಓಡಿಸುತ್ತಿತ್ತು. ಇದೆಲ್ಲ ನೋಡಿದ ಮೇಲೆ ವೆಂಕಟರಾಯರಿಗೆ ‘ಕುನ್ನಿ ಇದ್ದರೆ ಇದ್ದುಕೊಳ್ಳಲಿ, ಅದರಷ್ಟಕ್ಕೆ’ ಎಂದು ಅನಿಸಿತು.
ಕಡೆಕಡೆಗೆ ಎಂಜಲು ಬಾಳಿ ನೆಕ್ಕುವುದರಲ್ಲೂ ಅದು ಹೆಣ್ಣು ಕುನ್ನಿಯ ಮೇಲೆ ಮೈಲ್ಗೈ ಸಾಧಿಸಿತು. ದಿನಾ ಬೆಳಗಾ ಮುಂಚೆ ಮನೆಯ ಬಾಗಿಲಲ್ಲಿ ಬಿದ್ದುಕೊಂಡು ಜೊಲ್ಲು ಸುರಿಸುವುದು ಕಂಡು ವೆಂಕಟರಾಯರು ಹೆಣ್ಣು ಕುನ್ನಿಯ ಜೊತೆಯಲ್ಲೇ ಇದಕ್ಕೂ ಸಣ್ಣ ಸಣ್ಣ ದೋಸೆ ಚೂರುಗಳನ್ನು ಎಸೆಯಲು ಆರಂಭಿಸಿದರು.
ವೆಂಕಟರಾಯರು ಕುನ್ನಿಗೆ ದಾಸ ಎಂದು ಕರೆಯಲಾರಂಭಿಸಿದರು. ಕ್ರಮೇಣ ದಾಸ ರಾಯರ ಮನೆಯ ಸದಸ್ಯರೆಲ್ಲರಿಗೆ ಮೆಚ್ಚಿನವನಾದ. ದಾಸ ಕೆಲವು ಸಾರೆ ಅವರಿಗೆ ಕಿರಿಕಿರಿಯನ್ನೂ ಉಂಟುಮಾಡುತ್ತಿದ್ದ.. ಅವರ ಮನೆ ಬಾಗಿಲಿನಲ್ಲೇ ದಾರಿ ಇದ್ದುದರಿಂದ ಜನರು ತಿರುಗಾಡುತ್ತಿದ್ದರು. ಹೊಸದಾಗಿ ಬಂದ ದಾಸ ಎಲ್ಲರಿಗೂ ಬೊಗಳುತ್ತ ಮೈ ಮೇಲೆ ಬೀಳುವುದಕ್ಕೆ ಹೋಗುತ್ತಿದ್ದ. ಜನ ರಾಯರಿಗೆ, “ನೀವು ಇಂಥ ಕುನ್ನಿ ಯಾಕೆ ಸಾಕಿದ್ದೀರಿ? ಒಂದೇ ಕಟ್ಟಿಹಾಕಿ ಇರಿಸಿ. ಇಲ್ಲಾ ಕೊಂದಾದ್ರೂ ಹಾಕಿ” ಎನ್ನುತ್ತಿದ್ದರು.
ರಾಯರು, “ಆ ಕುನ್ನಿ ನಾವು ಸಾಕಿದ್ದು ಅಲ್ಲ. ಎಲ್ಲೋ ಹಡಬಿಟ್ಟಿದು. ಅದನ್ನ ಕೊಂದು ಹಾಕಲಿಕ್ಕೆ ನಾವೇನು ಕುನ್ನಿಗಡುಕರು ಅಲ್ಲ. ನೀವು ಅದಕ್ಕೆ ಏನು ಬೇಕಾದರೂ ಮಾಡಿ. ನಮ್ಮದೇನು ತಕರಾರಿಲ್ಲ” ಎಂದು ಹೇಳುತ್ತಿದ್ದರು.
ರಾಯರ ಮನೆಯಲ್ಲಿ ದಾಸನಿಗೆ ನಿಯಮಿತವಾಗಿ ಅನ್ನ ಸಿಗುತ್ತಿರಲಿಲ್ಲ. ಎಷ್ಟೆಂದರೂ ಅವರು ಸಾಕಿದ ಕುನ್ನಿ ಅಲ್ವಲ್ಲಾ? ಇದು ದಾಸ ಕೆಲವು ಸಾರೆ ಅರೆಹೊಟ್ಟೆಯಲ್ಲಿ ಇರುವಾಗಲೆಲ್ಲ ಯೋಚಿಸುವ ಹಾಗೆ ಮಾಡಿತು. ಕೊನೆಗೆ ಅವನು ತನ್ನದೇ ರೀತಿಯಲ್ಲಿ ಪರಿಹಾರ ಕಂಡುಕೊಂಡ.
ಕೇರಿಯಲ್ಲಿ ಎಲ್ಲಾ ಮನೆಯವರೂ ಕುನ್ನಿ ಸಾಕಿರುತ್ತಾರಾ? ಹಾಗೇನೂ ಇಲ್ವಲ್ಲಾ? ದಾಸ ರಾಯರ ಮನೆಯ ಎಂಜಲು ಬಾಳಿ ನೆಕ್ಕಿದವನು ದಣಪೆ ದಾಟಿ ರಾಯರ ತಮ್ಮನ ಮನೆಗೂ ಹೋಗಲಿಕ್ಕೆ ಹತ್ತಿದ. ಅವರ ಮನೆಯ ಹಿತ್ತಿಲಲ್ಲೂ ರಾತ್ರಿ ಹೊತ್ತು ತಿರುಗಾಟ ಮಾಡಿ ಒಂದೆರಡು ಕಡೆ ಬೊಗಳಿ ಬರುತ್ತಿದ್ದ. ಮಂಗ ಬಂದರೂ ಬೊಗಳುತ್ತಿದ್ದ. ಅದೇ ರೀತಿ ರಾಯರ ತೋಟಕ್ಕೆ ಹೊಂದಿಕೊಂಡಿದ್ದ ಮೂರ್ನಾಲ್ಕು ಮನೆಯವರ ದೃಷ್ಟಿಯಲ್ಲೂ ‘ದಾಸ ಅಡ್ಡಿಯಿಲ್ಲ’ ಅನ್ನುವ ಭಾವನೆ ಮೂಡಿಸಿದ. ಅದಕ್ಕಾಗಿ ಅವನಿಗೆ ಕಿಂಚಿತ್‌ ಪ್ರತಿಫಲ ದೊರೆಯುತ್ತಿತ್ತು.
ದಾಸ ಬರುವ ಮೊದಲು ಸೋ˜˜s˜ಣಿ (ಶ್ರಾವಣ) ತಿಂಗಳು ಬಂತು ಅಂದರೆ ವೆಂಕಟರಾಯರ ಮನೆವರಿಗೆ ದೊಡ್ಡ ಕಿರಿಕಿರಿಯಾಗುತ್ತಿತ್ತು. ಕುನ್ನಿ ಜಾತಿಗೆ ನಸೆ ಆಗುವುದು ಆವಾಗಲೇ. ಕೇರಿಯಲ್ಲಿಯ ಗಂಡು ಕುನ್ನಿಗಳೆಲ್ಲ ಅವರ ಮನೆಯ ಹೆಣ್ಣು ಕುನ್ನಿಯ ಬದಿಯಲ್ಲೇ ಜಮಾಯಿಸಿ ಬಿಡುತ್ತಿದ್ದವು. ಈ ದಾಸ ಬಂದ ಮೇಲೆ ಉಳಿದವು ಯಾವುದೂ ತನ್ನ ಗಡಿಯೊಳಗೆ ಬರುವುದಕ್ಕೆ ಬಿಡುತ್ತಿರಲಿಲ್ಲ. ಅದಕ್ಕಾಗಿ ಎಷ್ಚೋ ಸಲ ದೊಡ್ಡ ಜಗಳವನ್ನೇ ಮಾಡಿದ್ದ. ದೇಹದ ರಕ್ತವನ್ನೇ ಸುರಿಸಿದ್ದ. ತಾನು, ತನ್ನ ಹೆಣ್ಣು ಕುನ್ನಿ ಎನ್ನುವಷ್ಟರ ಮಟ್ಟಗೆ ಬಂದೋಬಸ್ತು ಕಾವಲು ನಡೆಸಿದ್ದ.
ಈ ರೀತಿಯ ಜಗಳ ಆದಾಗ ದಾಸ ಮುಸುಡಿ, ಕುತ್ತಿಗೆ, ಕಿವಿಗಳಿಗೆಲ್ಲ ಗಾಯ ಮಾಡಿಕೊಂಡರೆ ಸೀತಮ್ಮ ಆ ಗಾಯದ ಮೇಲೆ ಬೂದಿ ಹೊಯ್ದು ಅದು ಮಾಯಲು ಸಹಾಯ ಮಾಡುತ್ತಿದ್ದರು.
ಸೀತಮ್ಮ ತಮ್ಮ ಗಂಡನ ಜೊತೆ ಒಂದು ಸಲ ಹೇಳಿದ್ದರು, “ನೋಡಿ, ನಮ್ಮ ದಾಸನಿಗೆ ಎಷ್ಟು ಘನ ಬುದ್ಧಿ ಬಂದಿದೆ ಗೊತ್ತದ್ಯಾ? ಮೊನ್ನೆ ನೀವು ಕುಮ್ಟಿಗೆ ಅಡಕೆ ಹಾಕ್ಕೊಂಡು ಹೋಗಿದ್ರಲ್ಲಾ, ಆ ದಿನ ದಾಸನಿಗೆ, ‘ಇವತ್ತು ಮನೆಯಲ್ಲಿ ಯಜಮಾನರಿಲ್ಲ. ಎಲ್ಲೂ ಬೇಡೂಕೆ ಹೋಗಬೇಡ. ಇಲ್ಲೇ ಅಂಗಳದಲ್ಲೇ ಮಲ್ಕೊಂಡಿರು’ ಅಂದಿದ್ದೆ. ಬೆಳಗಾಗೂವರೆಗೂ ನಮ್ಮ ಹಿತ್ತಲದಲ್ಲಿ ತಿರುಗಾಡುತ್ತಾ ಇದ್ದ. ಮನುಷ್ಯರಿಗೂ ಈ ನಮೂನೆ ಬುದ್ಧಿ ಇರೂದಿಲ್ಲಪ್ಪಾ.”
ರಾಯರ ಮನೆಯಿಂದ ಐದನೆ ಮನೆ ಆ ಊರಿಗೆ ಬಂದ ಮಾಸ್ತರು ಬಾಡಿಗೆ ಹಿಡಿದ ಮನೆ. ದಾಸ ಅವರ ಮನೆಯವರೆಗೂ ಭೆಟ್ಟಿ ಕೊಡುತ್ತಿದ್ದ. ಮಾಸ್ತರು ಕವಳ ಹಾಕಲಿಕ್ಕೆ ರಾಯರ ಮನೆಗೆ ಬರುತ್ತಿದ್ದರು. ಅಂಗಳದಲ್ಲಿ ಮಲಗಿಕೊಂಡಿದ್ದ ದಾಸನನ್ನು ಕಾಲಿನಿಂದ ತಟ್ಟಿ, ‘ಏನೋ ದಾಸ ಇವತ್ತು ನಮ್ಮ ಮನೆ ಬದಿಗೆ ಬರಲೇ ಇಲ್ಲ. ನಿನ್ನ ಪಾಲಿನ ಅನ್ನ ಹಾಗೇ ಉಳಿದು ಬಿಟ್ಟಿದೆಯಲ್ಲೋ’ ಎಂದರೆ ಅವರು ತಿರುಗಿ ಹೋಗುವಾಗ ಅವರ ಬೆನ್ನಿಗೆ ಹೋಗಿ ಅವರು ಹಾಕಿದ್ದನ್ನು ತಿಂದು ಒಂದು ತಾಸು ಅಲ್ಲೇ ಹತ್ತಿಲದಲ್ಲಿ ಮಲಗಿಕೊಂಡು ಬರುತ್ತಿದ್ದ.
ವೆಂಕಟರಾಯರ ಮನೆಗೆ ಹಾಲನ್ನು ತಂದುಕೊಡುತ್ತಿದ್ದ ಕಿಣಿಯವರ ಹೆಂಡತಿ ದಾಸನ ಮೇಲೆ ದೂರಿಕೊಂಡದ್ದೂ ಇದೆ. “ಮನೆ ಹಿಂದೆ ಎರಡು ಬೆಂಡೆ ಓಣಿ ಮಾಡಿಕೊಂಡಿದ್ದೆ. ಈ ದಾಸ ಎರಡು ದಿನ ಅತ್ತಲಾಗೆ ಬರಲಿಲ್ಲ ಅಂಬುದು, ಇವತ್ತು ನಾನು ಮಧ್ಯಾಹ್ನದೊಳಗೆ ಊಟಕ್ಕೆ ಕುಳಿತ್ಕೊಂಡಿದ್ದಾಗ ಮಂಗ ಬಂದು ಎಲ್ಲಾ ಗಿಡಾನೂ ಬೋಳಿಸಿಕೊಂಡು ಹೋಗಿ ಬಿಡಬೇಕಾ? ಹೋದ ವರ್ಷ ಇಂವ ಒದು ಮಂಗನ ಹಿಡಿದು ಕೊಂದ ಲಾಗಾಯ್ತಿನಿಂದ ಮಂಗನ ಕಾಟ ಇಲ್ಲಾಗಿತ್ತು. ಇವನಿಗೆ ಏನು ರೋಗವೋ ಏನನೋ? ಒಂದೊಂದು ದಿನ ನಮ್ಮನೆ ಬದಿಗೂ ಸುಳಿಯುವುದೇ ಇಲ್ಲ.”
“ನಮ್ಮ ಮನೆಗೆ ನೆಂಟರು ಬಂದಿದ್ದರು. ಅವರು ಬಿಟ್ಟಿದ್ದು ಇವರು ಬಿಟ್ಟಿದ್ದು ಅಂದು ಎಲ್ಲಾನೂ ದಾಸನಿಗೆ ಹಾಕಿದ್ದೆ. ಇಲ್ಲೇ ಹೊಟ್ಟೆ ತುಂಬಿಹೋಯ್ತು. ಮತ್ತೆ ಯಾವ ಜಂಬರಕ್ಕೆ ನಿಮ್ಮನೆಗೆ ಬರ್ತಾನೆ?” ಎಂದಿದ್ದರು ಸೀತಮ್ಮ.
ರಾಯರ ಹಿತ್ತಿಲ ಬೇಲಿಗೆ ತಾಗಿ ಇದ್ದ ಹಿತ್ತಿಲದಲ್ಲಿ ಮನೆ ಕಟ್ಟಿಕೊಂಡಿದ್ದ ಮಾದೇವಿ, “ನಮ್ಮನೆಯವರು ಘಟ್ಟಕ್ಕೆ ಹೋಗಿ ಬಿಟ್ಟಿದ್ದಾರೆ. ಸಣ್‌ ಸಣ್ಣ ಮಕ್ಕಳು. ರಾತ್ರಿ ಹೆದರಿಕೆ ಆಗ್ತದೆ. ಈ ದಾಸ ಒಂದು ಸಲ ಬಂದು ಬೊಗಳಿ ಹೋದ ಅಂದರೆ ನನಗೆ ಎಷ್ಟೋ ಸಮಾಧಾನ” ಎನ್ನುತ್ತಿದ್ದಳು.
ಹಾಗಾದರೆ ದಾಸ ಯಾರ ಮನೆಯವನು? ಎಲ್ಲರ ಮನಸ್ಸಿನಲ್ಲೂ ತಮ್ಮ ತಮ್ಮ ಮನೆಯವನೇ ಎಂಬ ಭಾವನೆ ತುಂಬಿತ್ತು. ಚಾ ಕುಡಿಯುವ ವೇಳೆಯಲ್ಲಿ ಎಲ್ಲಿ ಇರುತ್ತಾನೋ ಅಲ್ಲಿ ದೋಸೆ, ಊಟದ ವೇಳೆಯಲ್ಲಿ ಎಲ್ಲಿ ಇರುತ್ತಾನೋ ಅಲ್ಲಿ ಅನ್ನ ಸಿಗುತ್ತಿತ್ತು. ದಾಸ ಮೈಯಲ್ಲಿ ಸೊಂಪಾಗಿ ಬೆಳೆದರೂ ಅವನ ವಯಸ್ಸು ತ್ರಾಣವನ್ನು ಕಡಿಮೆ ಮಾಡುತ್ತ ನಡೆದಿತ್ತು.
ಮೊನ್ನೆ ಮೊನ್ನೆ ಅಂದರೆ ಸುಮಾರು ಹದಿನೈದು ದಿನಗಳ ಹಿಂದೆ ದಾಸ ದೊಡ್ಡದೊಂದು ಲಡಾಯಿ ಮಾಡಿಕೊಂಡ. ಕಾರಣ ತೀರ ಸಣ್ಣದು. ಯಾರ ಬೆನ್ನಿಗೋ ಒಂದು ಟೊಣಪ ಕುನ್ನಿ ಆ ದಾರಿಯಲ್ಲಿ ಬಂದಿತ್ತು. ಅದು ದಾಸನ ಹೆಣ್ಣು ಕುನ್ನಿಯನ್ನು ಮೂಸಿತು. ಅಷ್ಟಕ್ಕೇ ದಾಸ ಕೆಂಪು ಬಿಳಿದು ಆಗಿ ಅದರ ಮೇಲೆ ಹೋಗಿ ಬಿದ್ದ. ಅರ್ಧ ತಾಸಿನ ವರೆಗೆ ಕಚ್ಚಾಟ ನಡೆಯಿತು. ಗದ್ದಲ ಕೇಳಲಾರದೆ ವೆಂಕಟರಾಯರೇ ಒಂದು ದೊಣ್ಣೆ ತೆಗೆದುಕೊಂಡು ಬಂದು ಟೊಣಪ ಕುನ್ನಿಗೆ ಎರಡು ಹೇರಿ ಓಡಿಸಿದ್ದರು. ಅಷ್ಟರೊಳಗೇ ದಾಸ ಸಿಕ್ಕಾಪಟ್ಟೆ ಜಖಂಗೊಂಡಿದ್ದ. ಕುತ್ತಿಗೆಗೆ, ಕಿವಿಗೆ, ಗಂಟಲಿಗೆ ಹೀಗೆ ನಾಲ್ಕೈದು ಕಡೆ ಗಾಯ ಆಗಿತ್ತು.
ಎರಡು ದಿನ ದಾಸ ನರಳಿದ. ಕೆನ್ನೆ, ಕುತ್ತಿಗೆ, ಕಣ್ಣು ಎಲ್ಲ ಬಾತುಕೊಂಡಿತು. ರಸಿಕೆ ಆಯಿತು. ರಾಯರ ಮನೆಯವರು ಬೂದಿಗೀದಿ ಹಾಕಿ ಉಪಚಾರ ಮಾಡಲಿಕ್ಕೆ ನೋಡಿದರು. ಇನ್ನೂ ಎರಡು ದಿನ ಕಳೆದ ಮೇಲೆ ಸ್ವಲ್ಪ ಸ್ವಲ್ಪ ವಾಸನೆ ಬರಲಿಕ್ಕೆ ಹತ್ತಿತು. ಇನ್ನೂ ಎರಡು ದಿನ ಆದ ಮೇಲೆ ಗಾಯದಲ್ಲಿ ಹುಳುಗಳು ಆದವು.
ದಾಸನಿಗೆ ರಾಯರ ಮನೆಯ ಅಂಗಳವನ್ನು ತೆರವು ಮಾಡಿ ಬಚ್ಚಲು ಮನೆಯ ಬೂದಿಯ ರಾಶಿಯನ್ನು ಸೇರಬೇಕಾದ ಪರಿಸ್ಥಿತಿ ಒದಗಿತು. ಅದರ ಮಾರನೇ ದಿನ ನೂರು ಸಲ ‘ಹೆತ್‌ ಹೆತ್‌ ಹೆತ್‌’ ಅನ್ನಿಸಿಕೊಂಡು ಅಲ್ಲಿಂದಲೂ ಹೊರಗೆ ಬಿದ್ದ. ಸಾವಕಾಶವಾಗಿ ತಾನು ಹಿಂದೆ ಹೋಗುತ್ತಿದ್ದ ಒಂದೊಂದೇ ಮನೆಯ ಕಡೆ ಹೋದ. ದಾಸನ ಮೈಯಿಂದ ಹೊರಟ ದುರ್ಗಂಧ ಅವನು ದೂರದಲ್ಲಿರುವಾಗಲೇ ಅವನ ಬರುವನ್ನು ತಿಳಿಸುತ್ತಿತ್ತು. ಎಲ್ಲಿಗೆ ಹೋದರೂ ಮೂಗಿಗೆ ಕೈ ಅಡ್ಡ ಹಿಡಿದುಕೊಂಡು ‘ಹೆತ್‌ ಹೆತ್‌’ ಅನ್ನುವವರೇ ಕಂಡರು.
ಸೀತಮ್ಮ ಮಾತ್ರ ಕ್ಯಾಕರಿಸಿ ಉಗುಳುತ್ತಲೇ ಹಿಡಿ ಅನ್ನವನ್ನು ದೂರದಲ್ಲಿ ಇಟ್ಟು ಬರುತ್ತಿದ್ದರು. ದಾಸನಿಗೆ ಅಷ್ಟು ತಿನ್ನಬೇಕಿದ್ದರೆ ಸಾಕೋ ಬೇಕೋ ಎನ್ನುವಷ್ಟು ಆಗುತ್ತಿತ್ತು. ಮತ್ತೆರಡು ದಿನ ಕಳೆದ ಮೇಲೆ ಅನ್ನವನ್ನು ಬಾಯಿಂದ ಕಚ್ಚುವುದೂ ಅವನಿಗೆ ಸಾಧ್ಯವಾಗಲಿಲ್ಲ.
ಅದರ ಮಾರನೇ ದಿನ ದಾಸ ಯಾರ ಕಣ್ಣಿಗೂ ಬೀಳಲಿಲ್ಲ. ತಾನು ಸತ್ತು ಬಿದ್ದ ಮೇಲೆ ಎಳೆದು ಹಾಕುವ ಕೆಲಸವನ್ನೂ ಅವನು ಉಳಿಸಿ ಹೋಗಲಿಲ್ಲ. ಜನರು ತಿರುಗಾಡದೇ ಇದ್ದಂಥ ಗುಡ್ಡದ ಮೇಲಿನ ಜಾಗದಲ್ಲಿ ಹೋಗಿ ಜೀವ ಬಿಟ್ಟಿದ್ದ.
ಮಾರನೆ ದಿನ ಹಾಲು ಹಾಕಲು ಬಂದ ಕಿಣಿರ ಹೆಂಡತಿ ಸಂಗಡ ಸೀತಮ್ಮ, “ದಾಸ ಸತ್ತುಹೋದನ ಮಗೆ. ಎಷ್ಚು ಚಲೋಂವ ಆಗಿದ್ದ. ಅಂಗಳಕ್ಕೆ ಬಂದರೆ ಓಡಿಸುತ್ತಾರೆ ಎಂದು ಊಟದ ವೇಳೆಗೆ ಹಿತ್ತಿಲದಲ್ಲೇ ನಿಂತುಕೊಂಡಿರುತ್ತಿದ್ದ. ನಾನು ಅನ್ನ ಇಟ್ಟು ಬಂದ ಮೇಲೆ ಹೋಗಿ ತಿಂದುಕೊಂಡು ಬರುತ್ತಿದ್ದ” ಎಂದರು.
ಕಿಣಿರ ಹೆಂಡತಿ, “ಹೌದ್ರಾ, ನಿನ್ನೆ ಮಧ್ಯಾಹ್ನದಲ್ಲಿ ನಮ್ಮನೆ ಮುಂದಿಂದೇ ಹೋಗಿದ್ದ. ಕೆಟ್ಟ ವಾಸನೆ ಆಗಿತ್ರ. ನನಗೆ ವಾಂತಿ ಬಂದ ಹಾಗೆ ಆಯ್ತು. ಬೇಗ ಒಂದು ಕವಳ ಬಾಯಲ್ಲಿ ಹಾಕ್ಕೊಂಡೆ. ಇಲ್ದಿದ್ರೆ ವಾಂತಿ ಮಾಡಿದ್ದೇ ಕರೇ ಆಗಿತ್ತು. ಕಡೆಗೆ ನಮ್ಮನೆ ಮಗು ದೂರ ಓಡಿಸಿಹಾಕ್ತು. ಅದು ಹೋದ ಮೇಲೆ ಒಂದು ಸಣ್ಣ ದೋಸೆ ಚೂರಾದ್ರೂ ಹಾಕಬೇಕಿತ್ತು ಅನ್ನಿಸ್ತು. ಎಷ್ಟೆಂದರೂ ಹಿತ್ತಿಲಿಗೆ ಮಂಗ ಬಂದಾಗ ಅದು ಬೊಗಳಿ ಓಡಿಸಿದ ಋಣ ಆದ್ರೂ ಇಲ್ವಾ ನಮ್ಮ ಮೇಲೆ?” ಎಂದು ಧ್ವನಿಗೂಡಿಸಿದರು.
ಮತ್ತೆ ಅದೇ ದಿನ ಸಂಜೆ ಮಾದೇವಿ ಬಂದಾಗಲೂ ಸೀತಮ್ಮ ಅದೇ ಸುದ್ದಿ ಎತ್ತಿದರು. ಮಾದೇವಿ, “ಹೌದ್ರೋ ಅಮ್ಮಾ, ಅಕ್ಕಿಕಾಳಿಗಿಂತ ದೊಡ್ಡ ದೊಡ್ಡ ಹುಳ ಆಗಿತ್ತು. ನಮ್ಮನೆ ಮುಂದೆ ಹಲಸಿನ ಮರ ಇತ್ತಲ್ರ. ಅಲ್ಲಿ ಆಚೆ ಮೊನ್ನೆ ಒಂದು ಸಲ ಮೈ ಕೊಡವಿ ಬಿಟ್ಟ. ಬಲಬಾಜು ಕಿವಿನೇ ಕಿತ್ತುಬಿತ್ತು. ನನಗೆ ನೋಡೋಕೆ ಆಗದೆ ಬೇಗ ಒಂದು ಬಡಗಿ ತಗೊಂಡು ಓಡಿಸ್ದೆ. ಏನs ಕೇಳ್ತ್ರಿ, ಆ ಮಾಸ್ತರ ಹೆಂಡತಿ ಈ ಕುನ್ನಿನ ಕಂಡು ವಾತಿನೇ ಮಾಡ್ಕೊಂಡು ಬಿಟ್ರಂತೆ. ಹೌದಪ್ಪಾ ಹೌದು, ಕುನ್ನಿ ಜಾತಿದಾದ್ರೂ ಬುದ್ಧಿ ಎಷ್ಟು ಚುರುಕಿತ್ತು? ನಮ್ಮನೆ ಮಕ್ಕಳು ಬಯಲಲ್ಲಿ ಕಂಡ್ರೂ ಬಾಲ ಆಡಿಸ್ತ ನಿಂತು ಬಿಡುತ್ತಿತ್ತು” ಎಂದಳು. “ಎಲ್ಲಿ ಹೋಗಿ ಜೀಂವ ಬಿಟ್ಟನೋ ಏನೋ?” ಎಂದರು ಸೀತಮ್ಮ.
“ಇಲ್ಲೇ ಬಯಲಲ್ಲಿ ನಿಂತ್ರೆ ಗುಡ್ಡದ ಮೇಲೆ ಕಾಗೆ, ಹಪಡಹದ್ದು ಎಲ್ಲಾ ಹಾರಾಡ್ತಾ ಇದ್ದದ್ದು ಕಾಣ್ತದೆ. ಅಲ್ಲೇ ಸತ್ತು ಬಿದ್ದಿರಬೇಕು” ಎನ್ನುತ್ತ ಮಾದೇವಿ ತನ್ನ ಮನೆಯ ಕಡೆ ನಡೆದಳು.

ಸಂಕ್ರಮಣ 1989

4.ಗೋಕರ್ಣದಲ್ಲಿ ಹೀಗೊಂದು ಲಿಂಗಪೂಜೆ

ತಿಮ್ಮಣ್ಣ ಗೋಕರ್ಣದ ಪ್ರಸಿದ್ಧ ವೈದಿಕರ ಮನೆತನದಲ್ಲಿ ಹುಟ್ಟಿದವನು. ಅವನ ತಂದೆ ಗಣಪತಿಯವರ ವಿದ್ವತ್ತು ನಾಲ್ಕೂರಿಗೆ ಪರಿಚಿತವಾದದ್ದು. ನಡುಕ ಬರುತ್ತಿದ್ದ ಚಳಿಯಲ್ಲಾಗಲಿ, ಸುರಿಯುತ್ತಿರುವ ಮಳೆಯಲ್ಲಾಗಲಿ ಅವರ ಕೋಟಿತೀರ್ಥದ ಸ್ನಾನ ತಪ್ಪಿದ್ದಲ್ಲ. ತ್ರಿಕಾಲ ಸಂಧ್ಯಾವಂದನೆಗಳನ್ನು ಅವರು ನೆರವೇರಿಸುತ್ತಿದ್ದರು. ಮಹಾಬಲೇಶ್ವರನ ನಿತ್ಯ ಪೂಜೆಯಲ್ಲಿ ಗಣಪತಿಯವರದೂ ಒಂದು ಪಾಲಿತ್ತು.
ಗಣಪತಿಯವರಿಗೆ ತಿಮ್ಮಣ್ಣನಲ್ಲದೆ ಅವನಿಗಿಂತ ಹಿರಿಯರಾದ ಗಣೇಶ, ಈಶ್ವರ, ಉಮೇಶ, ಭವಾನಿ, ಮಂಕಾಳಿ ಎಂಬ ಮಕ್ಕಳಿದ್ದರು. ಗಣಪತಿಯವರು ನಿತ್ಯವೂ ಪೂಜಿಸುವ ಮಹಾಬಲೇಶ್ವರ ಅವರಿಗೆ ಸಂತಾನ ಭಾಗ್ಯವನ್ನು ಮಾತ್ರ ಕಡಿಮೆ ಮಾಡಿರಲಿಲ್ಲ.
ಗಣಪತಿಯವರ ಪೂರ್ವಜರು ಯಾವ ಕಾಲದಲ್ಲಿ ಈ ಕ್ಷೇತ್ರದಲ್ಲಿ ಬಂದು ನೆಲೆ ಊರಿದರೋ ಯಾರು ಬಲ್ಲ? ಅವರ ವಂಶಾವಳಿಯಲ್ಲಿ ಈ ಹಿಂದೆ ಕಾಣಸಿಗುವ ಜನಾರ್ದನ, ಕೇಶವ, ಗೋವಿಂದ, ನಾರಾಯಣ, ತಿಮ್ಮಣ್ಣ ಇತ್ಯಾದಿ ಹೆಸರುಗಳನ್ನು ಗಮನಿಸಿದಾಗ ಇವರು ಸ್ಮಾರ್ಥರಾಗಿ ಬದಲುಗೊಂಡ ಸನ್ನಿವೇಶ, ಸಾಮಾಜಿಕ ಹಾಗೂ ಸಾಂಸ್ಕೃತಿಕ ತುರ್ತನ್ನು ಸಂಶೋಧಿಸಿದರೆ ಅದೊಂದು ವಿಶಿಷ್ಟ ಚಾರಿತ್ರಿಕ ದಾಖಲೆ ಆಗುವ ಸಾಧ್ಯತೆ ಇಲ್ಲದೆ ಇಲ್ಲ.
ತಿಮ್ಮಣ್ಣ ಕಿರಿಯವನಾದ ಕಾರಣ ಮನೆಯಲ್ಲಿ ಅವನಿಗೆ ಮುದ್ದು ಸ್ವಲ್ಪ ಹೆಚ್ಚು. ಅಪ್ಪ ಗಾಯತ್ರಿ ಮಂತ್ರ ಜಪಿಸುತ್ತಿರುವಾಗ ತೊಡರುಗಾಲು ಹಾಕಿಕೊಳ್ಳುತ್ತ ಹೋಗಿ ಅವರ ತೀರ್ಥದ ತಟ್ಟೆಯೊಳಗಿನ ನೀರನ್ನು ಚೆಲ್ಲಿಬಿಡುವಷ್ಟು ಸಲಿಗೆ ಅವನಿಗಿತ್ತು. ಆ ಸಲಿಗೆಯಿಂದಲೇ ಅವನು ಅಪ್ಪ ಕೋಟಿತೀರ್ಥದಲ್ಲಿ ಮಿಂದು ಮಹಾಬಲೇಶ್ವರ, ವಿಘ್ನೇಶ್ವರ, ತಾಮ್ರಗೌರಿಯರ ಪೂಜೆ ಮುಗಿಸಿ ಮನೆಗೆ ಬಂದರೂ ಹಾಸುಗೆಯಿಂದ ಎದ್ದಿರುತ್ತಿರಲಿಲ್ಲ. ದೊಡ್ಡವನಾಗುತ್ತ ಹೋದಹಾಗೆ ಶಾಲೆಗೆ ಹೋಗಲೂ ಅವನು ಕಳ್ಳಬೀಳತೊಡಗಿದ. ವೈದಿಕ ಮನೆತನದ ಅವರು, ಅವನು ಶಾಲೆ ಕಲಿತು ಆಗಬೇಕಾದದ್ದೇನು? ಎಂಟು ವರ್ಷಕ್ಕೆ ಉಪನಯನ ಮಾಡಿ ಸಂಸ್ಕೃತ ಶಾಲೆಗೆ ಸೇರಿಸಿದರೆ ಆಯಿತು ಎಂದು ಸುಮ್ಮನುಳಿದರು.
ತಿಮ್ಮಣ್ಣನಿಗೆ ಎಂಟು ತುಂಬುವುದೇ ತಡ ಗಣಪತಿಯವರು ಅವನಿಗೆ ಬ್ರಹ್ಮೋಪದೇಶ ಕೊಟ್ಟೇಬಿಟ್ಟರು. ಗಾಯತ್ರಿ ಮಂತ್ರ ಹೋಗಲಿ ಕೇಶವಾ, ಮಾಧವ, ಅಚ್ಯುತ ಇತ್ಯಾದಿ ಇಪ್ಪತ್ನಾಲ್ಕು ನಾಮಗಳನ್ನು ಅವನ ಅಣ್ಣಂದಿರು ಪ್ರತಿದಿನ ಸಾಧನೆ ಮಾಡಿಸಿದರೂ ಅವನಿಗೆ ಒಂದು ತಿಂಗಳ ವರೆಗೂ ಹತ್ತಲೇ ಇಲ್ಲ. ಗಣಪತಿಯವರಂಥ ವೈದಿಕರಿಗೆ ಅದು ಸಹಿಸಲು ಸಾಧ್ಯವಾಗುವಂಥ ವಿಷಯವೆ? ತಿಮ್ಮಣ್ಣನಿಗಿಂತ ಹಿರಿಯ ಮಕ್ಕಳೆಲ್ಲ ಎಂಟೇ ದಿನಗಳಲ್ಲಿ ಬಾಯಿಪಾಠ ಮಾಡಿಬಿಟ್ಟಿದ್ದರು. ಮನೆಯಲ್ಲಿ ಗಂಡುಮಕ್ಕಳು ಜಪಿಸುವ ಮಂತ್ರ ಕೇಳಿ ಕೇಳಿ ಹೆಣ್ಣು ಮಕ್ಕಳಿಗೂ ಅದು ಕಂಠಪಾಠ ಆದಹಾಗೆ ಆಗಿತ್ತು.
ಒಂದು ದಿನ ಗಣಪತಿಯವರೇ ತಮ್ಮ ಮುದ್ದಿನ ಮಗ ತಿಮ್ಮಣ್ಣನನ್ನು ಹತ್ತಿರ ಕುಳ್ಳಿರಿಸಿಕೊಂಡು ಬಾಯಿಪಾಠ ಮಾಡಿಸಿದರು. ವೈದಿಕನಾಗಿ ಹುಟ್ಟಿದ ತಪ್ಪಿಗೆ ಇದನ್ನು ಕಲಿಯದೆ ಹೋದರೆ ನಿನಗೆ ಪರದಲ್ಲಿ ಇಹದಲ್ಲಿ ಕೂಡಿಯೇ ಗತಿ ಇಲ್ಲ ಎಂದು ಹೇಳಿದರು. ಆದರೂ ಆ ಮಂತ್ರಗಳು ಅವನ ತಲೆಗೆ ಹೋಗದೆ ಇದ್ದಾಗ ಎರಡೇಟು ಬಾರಿಸಿಯೂ ಬಿಟ್ಟರು.
ಹೊಡೆಯಲಾರನೆಂದು ತಿಳಿದಿದ್ದ ಅಪ್ಪನೇ ಹೊಡೆದಾಗ ತಿಮ್ಮಣ್ಣ ಅಪಮಾನದಿಂದ ಕುದಿದ. ಅಪ್ಪನ ಆಚಾರ, ಸಂಸ್ಕಾರ ಎಲ್ಲ ಅವನಿಗೆ ಹೇಸಿಗೆಯಾಗಿ ತೋರಿದವು. ಆದರೆ ಪ್ರತಿಭಟಿಸುವುದಕ್ಕೆ ಆಗ ಅವನಿಗೆ ಧೈರ್ಯವಿರಲಿಲ್ಲ. ದೊಡ್ಡವನಾದ ಮೇಲೆ ಒಮ್ಮೊಮ್ಮೆ ಅವನು ಯೋಚಿಸಿದಾಗ ಸ್ಮಾರ್ಥರಾದ ನಾವು ಕೇಶವಾದಿ ಇಪ್ಪತ್ನಾಲ್ಕು ಹರಿಯ ಮಂತ್ರ ಏಕೆ ಉಚ್ಚರಿಸಬೇಕು ಎಂಬ ಪ್ರಶ್ನೆ ಏಳುವುದು. ಇಂಥ ಪ್ರಶ್ನೆಗಳನ್ನೆಲ್ಲ ಹಾಕಿ ಶಾಸ್ತ್ರ ವಿರೋಧಿ ಲಫಂಗ ಅನ್ನಿಸಿಕೊಂಡಿದ್ದ.
ತಿಮ್ಮಣ್ಣ ತಮ್ಮ ದಾರಿಗೆ ಬರದುದನ್ನು ಕಂಡು ಗಣಪತಿಯವರಿಗೆ ಚಿಂತೆಯಾಯಿತು. ತಮ್ಮಂಥ ನಾಲ್ಕು ಜನ ಹಿರಿಯ ವೈದಿಕರಿಂದ ಅವನಿಗೆ ಬೋಧಿಸಿದರು. ಸಂಸ್ಕೃತವೆಂದರೇ ಅವನಿಗೆ ಅಲರ್ಜಿಯಾಗತೊಡಗಿತು. ಹೀಗಾಗಿ ಅವನನ್ನು ಎರಡು ವರ್ಷ ತಡವಾಗಿ ಕನ್ನಡ ಶಾಲೆಗೆ ಹಾಕಿದರು. ಅವನು ಏನು ಕಲಿಯುತ್ತಾನೋ ಬಿಡುತ್ತಾನೋ ವಿಚಾರಿಸುವವರು ಒಬ್ಬರೂ ಇರಲಿಲ್ಲ. ಆದರೂ ರಜಾ ದಿನಗಳಲ್ಲಿ ಅವನಿಗೆ ಶಿಕ್ಷೆ ಎಂಬಂತೆ ನಸುಕಿನಲ್ಲಿ ಕೋಟಿತೀರ್ಥಕ್ಕೆ ಎಳೆದುಕೊಂಡು ಹೋಗಿ ತಣ್ಣೀರಿನ ಸ್ನಾನ ಮಾಡಿಸಿ ಮಹಾಬಲೇಶ್ವರನ ಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿಸುತ್ತಿದ್ದರು.
ಮಹಾಬಲೇಶ್ವರ ಮುಟ್ಟಿ ನೋಡು ಎಂದ ಪಾಣಿ ಪೀಠದ ಒಳಗೆ ಕೈ ತೂರಿಸಿ ಆತ್ಮಲಿಂಗದ ಸ್ಪರ್ಶ ಮಾಡಿಸಿದ್ದರು. ಲಿಂಗಕ್ಕೆ ಉಗುರು ತಾಗಿಸಬಾರದೆಂದು ಅವನಿಗೆ ತಾಕೀತು ಮಾಡಿದ್ದರು. ತಿಮ್ಮಣ್ಣ ದೊಡ್ಡವನಾದಬಳಿಕ, ಈ ಮಹಾಬಲೇಶ್ವರ ಪಾಣಿ ಪೀಠದ ಕೆಳಗೇಕೆ ಇಳಿದು ಹೋದ ಎಂದು ಚಿಂತಿಸುತ್ತಾನೆ. ಉಳಿದ ಎಷ್ಟೋ ಕಡೆಗಳಲ್ಲಿ ಲಿಂಗ ಪಾಣಿ ಪೀಠದ ಮೇಲೆ ಇದ್ದದ್ದು ಕಂಡಿದ್ದ. ಇಲ್ಲಿ ಎಲ್ಲವೂ ತಿರುವು ಮುರುವು.
ಈಗೀಗ ಈ ಕುರಿತು ಅವನ ಮನಸ್ಸು ಈ ರೀತಿ ತರ್ಕಿಸಿತ್ತು. ವಿಧರ್ಮಿಯರ ದಾಳಿ ಆದಾಗ ವಿಗ್ರಹಗಳನ್ನು ಲಿಂಗಗಳನ್ನು ಅವರು ಭಗ್ನಗೊಳಿಸುತ್ತಿದ್ದರು. ಹಿಂದೊಮ್ಮೆ ಈ ಮಹಾಬಲೇಶ್ವರನಿಗೂ ವಿಧರ್ಮಿಯರ ದಾಳಿಯ ಭಯ ತಟ್ಟಿರಬೇಕು. ಬಹುಶಃ ವಿಜಯನಗರದ ಪತನದ ನಂತರ ಆಗಿರಬಹುದು. ಆಗ ಇಲ್ಲಿಯ ವೈದಿಕರು ಬುದ್ಧಿ ಖರ್ಚುಮಾಡಿ ಲಿಂಗವನ್ನು ಕೆಳಗೆ ಪ್ರತಿಷ್ಠಾಪಿಸಿ ಮೇಲೆ ಪಾಣಿಪೀಠವನ್ನು ಇಟ್ಟಿರಬೇಕು. ಒಮ್ಮೆ ದಾಳಿಯಾದರು ಕೂಡ ಲಿಂಗ ಸುರಕ್ಷಿತವಾಗಿರುತ್ತದೆ ಆಮೇಲೆ ಏನೇನೋ ಕತೆ ಕಟ್ಟಿ ಕ್ಷೇತ್ರ ಮಹಾತ್ಮೆಯಲ್ಲಿ ಸೇರಿಸಿಬಿಟ್ಟಿದ್ದಾರೆ. ಕತೆ ಹೆಣೆಯುವುದರಲ್ಲಿ ವೈದಿಕರು ಬುದ್ಧಿವಂತರಲ್ಲವೆ ಎಂದು ಅವನು ತರ್ಕಿಸುವನು.
ತನ್ನ ತರ್ಕವನ್ನು ಯಾರೂ ನಂಬುವುದಿಲ್ಲ ಎಂದು ತಿಮ್ಮಣ್ಣನಿಗೆ ಗೊತ್ತಿತ್ತು. ಹಾಗಾಗಿ ಅವನು ಯಾರಲ್ಲೂ ಈ ಬಗ್ಗೆ ಉಗಡಾ ಮಾಡಿರಲಿಲ್ಲ.
ಅಪ್ಪ ಅವನನ್ನು ನಾಲ್ಕು ಸಂಸ್ಕೃತ ಶಬ್ದ ಕಿವಿಗೆ ಬೀಳಲಿ ಎನ್ನುವ ಉದ್ದೇಶದಿಂದ ಗುಡಿಗೆ ಕರೆದೊಯ್ಯುತ್ತಿದ್ದರು. ಮನೆಯಲ್ಲಿ ಗಂಧ ಚಂದನ ತಳೆಯಲು ಅವನನ್ನೇ ನೇಮಿಸುತ್ತಿದ್ದರು. ಗುಡಿಯಲ್ಲಿ ತಿಮ್ಮಣ್ಣನ ಪ್ರಾಯದ ಮಾಣಿಗಳೆಲ್ಲ ಗುಡಿಯ ಸುತ್ತು ತಿರುಗುವವರನ್ನ ಅನುಸರಿಸುತ್ತ ದಕ್ಷಿಣೆ ಕೊಡಿ ದಕ್ಷಿಣೆ ಕೊಡಿ ಎಂದು ಕಾಡುತ್ತಿದ್ದರು. ಒಳಗೆ ಅಪ್ಪ ಮಾಡುವ ಪೂಜೆ ನೋಡುತ್ತಿರುವುದಕ್ಕಿಂತಲೂ ಹೊರಗೆ ಮಕ್ಕಳ ಜೊತೆಯಲ್ಲಿ ಇರುವುದು ಲಾಭಕರವೆಂದು ತಿಮ್ಮಣ್ಣನಿಗೆ ತೋರಿತು. ತಿಮ್ಮಣ್ಣ ಅವರ ಜೊತೆಯಲ್ಲಿ ಇದ್ದಾಗಲೆಲ್ಲ ಅವನು ಕೇಳದಿದ್ದರೂ ಅವನಿಗೂ ದಕ್ಷಿಣೆ ಸಿಗುತ್ತಿತ್ತು. ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತ ಮೇಲಿಂದಮೇಲೆ ಮುಟ್ಟಿ ನೋಡಿಕೊಳ್ಳುತ್ತ ಅವನು ಖುಷಿ ಪಡುತ್ತಿದ್ದ. ಅದನ್ನು ನೋಡಿದ ಗಣಪತಿಯವರು, ಹಣದ ಆಸೆಯಿಂದಲಾದರೂ ಮಗ ನಾಲ್ಕು ಸಂಸ್ಕೃತ ಅಕ್ಷರ ಕಲಿತಾನು ಎಂದು ಆಶಿಸಿದರು. ಹಾಗಾಗಿ ಅವರು ಅವನು ದಕ್ಷಿಣೆ ಬೇಡಿ ಗಳಿಸುತ್ತಿದ್ದ ಹಣದಲ್ಲಿ ಪಾಲು ಕೇಳುತ್ತಿರಲಿಲ್ಲ.
ದಕ್ಷಿಣೆಯ ಹಣವನ್ನು ತಿಮ್ಮಣ್ಣ ಪೆಟ್ಟಿಗೆ ಅಂಗಡಿಯಲ್ಲಿ ಚಾಕಲೇಟು, ಅಪೋಲಿ ತಿನ್ನಲು ಉಪಯೋಗಿಸತೊಡಗಿದ. ಒಂದು ದಿನ ನಡೆದ ಘಟನೆ ಅವನು ದಕ್ಷಿಣೆ ಬೇಡುವುದನ್ನೇ ನಿಲ್ಲಿಸಿಬಿಡುವಂತೆ ಮಾಡಿತು.
ಘಟ್ಟದ ಮೇಲಿನ ಐದಾರು ಪೋರಪ್ರಪಂಚದ ಹುಡುಗರು ಬಂದಿದ್ದರು. ಉಕ್ಕುವ ರಕ್ತ, ಏನಾದರೂ ಕೀಟಲೆ ಮಾಡುವುದೇ ಮನಸ್ಸು. ಮಹಾಬಲೇಶ್ವರನ ಗುಡಿಯ ಪ್ರದಕ್ಷಿಣೆ ಮಾಡುತ್ತಿರುವಾಗಲೆ ಮಾಣಿಗಳ ದಂಡು ಅವರನ್ನು ದಕ್ಷಿಣೆಗಾಗಿ ಪೀಡಿಸಹತ್ತಿತು. ಅದರಲ್ಲಿ ತಿಮ್ಮಣ್ಣನೂ ಇದ್ದ. ಅವರು ದಕ್ಷಿಣೆ ಕೊಡದೆ ಮಾಣಿಗಳನ್ನು ನಿವಾರಿಸಲು ನೋಡಿದರು. ಅದರೆ ಇವರು ಬಿಡಬೇಕಲ್ಲ? ಅವರೆಲ್ಲ ಗುಡಿಯಿಂದ ಹೊರಬಂದರು. ಮಾಣಿಗಳೂ ಬೆನ್ನಿಗೇ ಬಂದರು. ಅವರಲ್ಲಿ ಒಬ್ಬ, ‘ನೀವೆಲ್ಲ ಒಂದೊಂದು ಮಂತ್ರ ಹೇಳಿ. ಹಾಗೆ ಹೇಳಿದರೆ ಮಾತ್ರ ನಿಮಗೆ ದಕ್ಷಿಣೆ ಕೊಡುತ್ತೇವೆ’ ಎಂದು ಹೇಳಿದ.
ಸರಿ, ಮಾಣಿಗಳೆಲ್ಲ ತಮಗೆ ತಿಳಿದ ಒಂದೊಂದು ಮಂತ್ರ ಹೇಳಿ ದಕ್ಷಿಣೆ ಪಡೆದರು. ತಿಮ್ಮಣ್ಣನಿಗೆ ಮಂತ್ರ ಎಲ್ಲಿಂದ ಬರಬೇಕು? ಬರೀದೆ ಕೈ ಒಡ್ಡಿದ. ಅವರೆಲ್ಲ, ‘‘ಏಯ್‌ ಮಂತ್ರ ಹೇಳೋ. ಹೇಳಿದರೆ ಮಾತ್ರ ನಿನಗೆ ದಕ್ಷಿಣೆ” ಅಂದರು. ತಿಮ್ಮಣ್ಣ ಬಾಯಿ ಬಿಡಲಿಲ್ಲ. ‘‘ನಿನಗೆ ಮಂತ್ರ ಗೊತ್ತಿಲ್ಲದಿದ್ದರೆ, ಕೇಶವಾ ಮಾಧವ ಅಂತ ಸಂಧ್ಯಾವಂದನೆಯ ಇಪ್ಪತ್ನಾಲ್ಕು ನಾಮ ಆದರೂ ಹೇಳೋ” ಅಂದರು. ಅದನ್ನು ತಿಮ್ಮಣ್ಣ ಹೇಳಲು ಪ್ರಾರಂಭಿಸಿ ಏಳೆಂಟು ನಾಮಗಳನ್ನಷ್ಟೇ ಉಸುರಿದ.
ಒಬ್ಬ ಟೊಣಪ ತಿಮ್ಮಣ್ಣನ ಬುರುಡೆಗೆ ಒಂದು ಬಿಟ್ಟು. ‘‘ನಿನಗೆ ಮುಂಜಿ ಯಾಕೆ ಮಾಡಿದ್ದಾರೋ? ನೀ ಎಂಥ ಬ್ರಾಹ್ಮಣತಂದಿ. ದಕ್ಷಿಣೆ ಬೇಕಾ ನಿನಗೆ? ಬಾ ಕೊಡ್ತೆ” ಎಂದು ಅವನ ಕೈ ಹಿಡಿದು ರಸ್ತೆಯಂಚಿಗೆ ಕರೆದೊಯ್ದು ಕೈಗಳನ್ನು ಬೊಗಸೆ ಮಾಡಿಸಿ ಅದರಲ್ಲಿ ಉಚ್ಚಿ ಹೊಯ್ದುಬಿಟ್ಟ. ಅವನ ಬಗಲಲ್ಲಿ ಇದ್ದ ಜನಿವಾರ ತೆಗೆದುಬಿಟ್ಟ.
ತಿಮ್ಮಣ್ಣನಿಗೆ ವಿಪರೀತ ಅವಮಾನವಾಗಿ ಅಳುವುದಕ್ಕೆ ಶುರು ಮಾಡಿದ. ಮನೆಗೆ ಹೋಗಲೂ ಕಾಣಲಿಲ್ಲ ಅವನಿಗೆ. ಸಮುದ್ರಬೇಲೆಗೆ ನಡೆದ. ಅವನ ಜೊತೆಯ ಮಾಣಿಗಳು ತಮಗೆ ಏನು ಗ್ರಹಚಾರ ಕಾದಿದೆಯೋ ಎಂದು ಅಷ್ಟರೊಳಗೇ ಅಲ್ಲಿಂದ ಕಂಬಿ ಕಿತ್ತಿದ್ದರು.
ತಿಮ್ಮಣ್ಣ ಸಮುದ್ರ ದಂಡೆಯ ಮೇಲೆ ಉರುಳಿಕೊಂಡು ಬಿಕ್ಕಿಬಿಕ್ಕಿ ಅತ್ತ. ಮನಸ್ಸು ಹಗುರಾಗುವ ವರೆಗೂ ಅತ್ತ. ಜೀವ ಇರುವವರೆಗೂ ನಾನು ಇನ್ನೊಮ್ಮೆ ಬೇರೆಯವರ ಎದುರು ಕೈ ಒಡ್ಡುವುದಿಲ್ಲ ಎಂದು ಶಪಥ ಮಾಡಿದ.
ಮನಸ್ಸು ಹಗುರಾದ ಮೇಲೆ ಸುತ್ತೆಲ್ಲ ದೃಷ್ಟಿ ಹರಿಸಿದ. ದೂರದಲ್ಲಿ ಅಂಬಿಗರು ಬಲೆ ಎಳೆಯುತ್ತ ಇದ್ದದ್ದು ಕಂಡಿತು. ಇವನೂ ಅತ್ತ ನಡೆದ. ಅಲ್ಲಿ ಇವನಷ್ಟೇ ಪ್ರಾಯದ ಗಂಡು ಹೆಣ್ಣು ಮಕ್ಕಳು ಬಲೆ ಎಳೆದಾಗ ಆಚೆ ಈಚೆ ಹಾರಿ ಬೀಳುತ್ತಿದ್ದ ಮೀನುಗಳನ್ನು ಆರಿಸುತ್ತಿದ್ದರು. ಇವನು ಕೂಡ ಅವರ ನಡುವೆ ನುಸುಳಿ ಹೆದರು ಹೆದರುತ್ತ ಒಂದು ಸಣ್ಣ ಮೀನಿಗೆ ಕೈ ಹಚ್ಚಿದ. ಅದುವರೆಗೂ ಅವನು ಅನುಭವಿಸದೆ ಇದ್ದ ಹೊಸ ಅನುಭವ ಅವನಿಗಾಯಿತು. ತಾನು ಆರಿಸಿದ ಮೀನನ್ನು ಒಬ್ಬ ಹುಡುಗನಿಗೆ ಕೊಟ್ಟು ಅವನ ಗೆಳೆತನ ಮಾಡಿದ.
ಮಧ್ಯಾಹ್ನದ ಊಟಕ್ಕೂ ಮನೆಗೆ ಮರಳದ ತಿಮ್ಮಣ್ಣನ ಬಗ್ಗೆ ಆತನ ಮನೆಯವರು ಆಜುಬಾಜಿನ ಮನೆಯ ಮಾಣಿಗಳನ್ನು ವಿಚಾರಿಸಲಾಗಿ ಅವರು ಹೆದರುತ್ತ ಎಲ್ಲ ವಿಷಯ ತಿಳಿಸಿದರು. ತಿಮ್ಮಣ್ಣನ ಅಣ್ಣಂದಿರು ಸಮುದ್ರ ದಂಡೆಗೆ ಓಡಿದರು. ಕೊನೆಗೆ ಬಲೆ ಎಳೆಯುವಲ್ಲಿ ಅವರ ಹೋದರು. ಆ ಹುಡುಗರ ಮಧ್ಯ ತಿಮ್ಮಣ್ಣನನ್ನು ಗುರುತಿಸುವುದು ಅವರಿಗೆ ಸುಲಭವಾಗಲಿಲ್ಲ ಅಂತೂ ಪತ್ತೆ ಮಾಡಿ ಅವನನ್ನು ಮನೆಗೆ ಕರೆದೊಯ್ದರು.
ಗಣಪತಿಯವರು, ಅವರ ಹೆಂಡತಿ, ಮನೆ ಮಂದಿಯೆಲ್ಲ ಉಚ್ಚಿ ಹೊಯ್ದ ಟೊಣಪನಿಗೆ ತಮಗೆ ಗೊತ್ತಿದ್ದ ಕನ್ನಡ ಸಂಸ್ಕೃತ ಬೈಗುಳವನ್ನೆಲ್ಲ ಖರ್ಚು ಮಾಡಿದರು. ಅವನ ವಂಶ ನಿರ್ವಂಶವಾಗಿ ಹೋಗಲಿ ಎಂದ ಶಾಪವಿತ್ತರು. ಜನಿವಾರ ಕಳೆದುಕೊಂಡ ತಮ್ಮ ಮಗನ ಬಗ್ಗೆ ಅವರಿಗೆ ಕನಿಕರವಾಯಿತು. ಮತ್ತೆ ಉಪನಯನ ಮಾಡಬೇಕಾದ ಶಾಸ್ತ್ರವಿಧಿಯ ಅನಿವಾರ್ಯತೆ ಅವರಿಗೆ ಎದುರಾಯಿತು.
ತಿಮ್ಮಣ್ಣನ ಮನಸ್ಸು ಕಲ್ಲಾಗಿ ಹೋಗಿತ್ತು. ಯಾರು ಏನು ಹೇಳಿದರೂ ಇನ್ನೊಮ್ಮೆ ಜನಿವಾರ ಧರಿಸಲು ಅವನು ಒಪ್ಪಲೇ ಇಲ್ಲ. ಒಂದು ಪೀಡೆ ಹೋಯಿತು ಎಂದು ನಿರುಂಬಳನಾಗಿದ್ದ. ಮನೆಯವರು ಮಾತ್ರ ವೈದಿಕ ಮನೆತನದಲ್ಲಿ ಹುಟ್ಟಿ ಅಬ್ರಾಹ್ಮಣ್ಯವನ್ನು ಎಸಗುವ ಅವನ ಸ್ಥಿತಿಗೆ ಮರುಗಿದರು.
ಗಣಪತಿಯವರಾಗಲಿ, ಅವರ ಮನೆಯವರಾಗಲಿ ತಿಮ್ಮಣ್ಣನ ಶಾಲೆಯ ಅಭ್ಯಾಸದ ಬಗ್ಗೆ ವಿಚಾರಿಸದೆ ಇದ್ದರೂ ಅವನು ಮಾತ್ರ ಶಾಲೆಗೆ ಹೋಗುತ್ತ ಇದ್ದ. ಬಿಡುವಿನ ವೇಳೆಯಲ್ಲಿ ಬಸ್‌ ನಿಲ್ದಾಣದಲ್ಲಿ ಹತ್ತು ಪೇಪರ್‌ ಹಿಡಿದುಕೊಂಡು ಪೇಪರ್‌ ಪೇಪರ್‌ ಎಂದು ಒದರುತ್ತಿದ್ದ. ಪೇಪರ್‌ ಏಜೆಂಟ್‌ ಅವನಿಗೆ ಏನಾದರೂ ಕಮಿಶನ್‌ ಕೊಡುತ್ತಿದ್ದ. ಮಾವಿನ ಹಣ್ಣಿನ ಶ್ರಾಯದಲ್ಲಿ ಅದನ್ನು ಮಾರುತ್ತಿದ್ದ. ಕೆಲವೊಮ್ಮೆ ಕೋಟಿತೀರ್ಥದ ಮೆಟ್ಟಿಲುಗಳ ಮೇಲೆ ನಿಂತು ಪತ್ರಿ ಪತ್ರಿ ಎಂದು ಕೂಗುತ್ತಿದ್ದ. ಒಂದೆಡೆ ಕುಳಿತಲ್ಲಿಯೇ ಕುಳಿತುಕೊಳ್ಳುವ ಜಾಯಮಾನ ಅವನದಲ್ಲ.
ಗೋಕರ್ಣದಲ್ಲಿ ಹೊತ್ತು ಮುಳುಗುವುದು ಆಗೋ ಮುಳುಗುವುದು ಈಗೋ ಎಂದು ಲೆಕ್ಕ ಹಾಕುವುದರೊಳಗೆ ದಿನ ಕಳೆಯುತ್ತ ಇರುತ್ತದೆ. ತಿಮ್ಮಣ್ಣನಂಥ ಚಟುವಟಿಕೆಯ ಹುಡುಗರಿಗಾಗಲಿ, ಗಣಪತಿಯವರಂಥ ಸದಾ ಕಾಲ ಶ್ರಾದ್ಧ, ಕ್ರಿಯಾಕರ್ಮ, ಅರ್ಚನೆ ಇತ್ಯಾದಿಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ವೈದಿಕರಿಗಾಗಲಿ ಎಷ್ಟುಬೇಗ ದಿನ ಕಳೆದು ಹೋಯಿತು ಅನ್ನಿಸದೆ ಇರದು. ಹೊತ್ತು ದೊಡ್ಡದಾಗಿ ಕಾಣುವುದು ಗಣಪತಿಯವರ ಮನೆಗೆ ಸೌದೆ ಒಡೆಯಲು, ಕೊಟ್ಟಿಗೆಗೆ ಸೊಪ್ಪು ತರಲು ಬರುತ್ತಿದ್ದ ಭೈರಗೌಡನಿಗೆ, ಅವರ ಮನೆಗೆ ಕೊಟ್ಟಿಗೆ ಕೆಲಸಕ್ಕೆ, ಪಾತ್ರೆ ತಿಕ್ಕಲಿಕ್ಕೆ ಬರುತ್ತಿದ್ದ ಸೇಮ ಗೌಡತಿಗೆ ಮತ್ತು ಇವರಂಥ ನೂರಾರು ಶ್ರಮಜೀವಿಗಳಿಗೆ ಆಗಿತ್ತು.
ತಿಮ್ಮಣ್ಣ ಈಗ ಶಾಲೆಯಲ್ಲಿ ಆರನೆ ತರಗತಿಯಲ್ಲಿದ್ದ. ಉಳಿದ ಹುಡುಗರಿಗಿಂತ ಎರಡು ಎರಡೂವರೆ ವರ್ಷಕ್ಕೆ ದೊಡ್ಡವನಾದ ಅವನನ್ನು ಶಿಕ್ಷಕರೆಲ್ಲ ತಮ್ಮ ಕೆಲಸಕ್ಕೆ ಕರೆಯುತ್ತಿದ್ದರು. ಇದರಿಂದ ಅವನಿಗೂ ಹೆಮ್ಮೆ. ಉಳಿದವರಿಗಿಂತ ತಾನು ಹೆಚ್ಚಿನವನು ಎನ್ನುವ ಭಾವನೆ ಅವನಿಗೆ.
ತಿಮ್ಮಣ್ಣನ ದಿನಚರಿ ಈಗೀಗ ಸ್ವಲ್ಪ ಬದಲಾಗಿದೆ. ಎಷ್ಟು ಹೊತ್ತಿಗೂ ಜನರ ನಡುವೆ ಇರಬೇಕು ಅನ್ನಿಸುತ್ತಿದೆ. ಗೋಕರ್ಣವೇ ಹಾಗಲ್ಲವೆ? ಬಸ್ಸು ನಿಲ್ದಾಣ ಬಿಡಿ, ಕೋಟಿತೀರ್ಥ, ಸಮುದ್ರದ ಬೇಲೆ, ರಾಮತೀರ್ಥ ಎಲ್ಲೆಂದರಲ್ಲಿ ಜನವೇ ಜನ. ಇಲ್ಲೆಲ್ಲ ಜನರು ಸ್ನಾನ ಮಾಡುತ್ತ ಇರುವುದನ್ನು ಕಾಣುವುದೆಂದರೆ ಅವನಿಗೆ ಅದೆಂಥದ್ದೋ ಖುಷಿ.
ಒಂದು ಭಾನುವಾರ ತಿಮ್ಮಣ್ಣನಿಗೆ ಶಾಲೆಗೆ ರಜೆ. ಮನೆಯಲ್ಲಿ ಚಹಾ ಕುಡಿದವನೆ ಹೊರಬಿದ್ದ. ತಿರುಗಲು ಯಾವುದೇ ಉದ್ದೇಶ ಇಲ್ಲದ್ದರಿಂದ ಸಮುದ್ರ ಬೇಲೆಗೆ ನಡೆದ. ದಡಕ್ಕೆ ಅಪ್ಪಳಿಸಿ ಬರುತ್ತಿರುವ ತೆರೆಗಳ ಖೋ ಖೋ ಆಟವನ್ನು ಕೆಲ ಕಾಲ ನೋಡಿದ. ನಂತರ ತಿರುಗಿ ರಾಮತೀರ್ಥದ ಕಡೆಗೆ ನಡೆದ. ರಾಮತೀರ್ಥದಲ್ಲಿ ಎರಡು ಬೊಗಸೆ ನೀರು ಕುಡಿದು ಇನ್ನೂ ಕೆಲ ಕಾಲ ಸಮುದ್ರ ನೋಡಿದ. ನೋಡುವ ನೋಟ ಹರಿದಷ್ಟೂ ದೂರದವರೆಗೆ ನೀರೇ ನೀರು. ಗುಡ್ಡ ಹತ್ತಿ ನೋಡಿದರೆ ಹೇಗೆ? ಇನ್ನೂ ದೂರ ಕಾಣಬಹುದೇನೋ ಎಂದು ಲೆಕ್ಕ ಹಾಕಿದ. ಹತ್ತುತ್ತಿರುವಾಗಲೆ ಗುಡ್ಡದ ಮೇಲೆ ಪಾಂಡವರ ಗುಹೆ ಇದ್ದದ್ದು ನೆನಪಿಗೆ ಬಂತು. ಶಿವರಾತ್ರಿಯ ವೇಳೆ ಒಂದೆರಡು ಬಾರಿ ಅಲ್ಲಿಗೆ ಹೋಗಿದ್ದ. ಆಗ ಅಲ್ಲಿ ಪರ ಊರುಗಳಿಂದ ಬಂದ ಸಾಧುಗಳು ಖಬಜಾ ಮಾಡಿದ್ದರು.
ಗುಡ್ಡ ಹತ್ತಿದ ಮೇಲೆ ಗುಹೆಯಲ್ಲಿ ಏನಿದೆ ನೋಡಬೇಕೆನ್ನಿಸಿತು. ಒಬ್ಬೊಬ್ಬ ಪಾಂಡವನಿಗೆ ಒಂದೊಂದರಂತೆ ಒಟ್ಟೂ ಐದು ಗುಹೆಗಳು ಅಲ್ಲಿದ್ದವು. ಪ್ರವೇಶದ್ವಾರ ಒಂದೇ ಆಗಿತ್ತು, ಐವರಿಗೂ ಸೇರಿ ಒಬ್ಬಳೇ ಹೆಂಡತಿ ಇರುವಂತೆ. ಗುಡ್ಡ ನಿರ್ಜನವಾಗಿದ್ದ ಕಾರಣ ತಿಮ್ಮಣ್ಣ ಹೆದರುತ್ತಲೆ ಒಳಗೆ ಪ್ರವೇಶಿಸಿದ. ಜನರಿಲ್ಲದುದರಿಂದ ಬಾವಲಿಗಳು ಅಲ್ಲಿ ಹಾರಾಡುತ್ತಿದ್ದವು. ಒಂದನೆ ಗುಹೆ ನೋಡಿದ. ಏನೂ ವಿಶೇಷ ಕಾಣಲಿಲ್ಲ. ಎರಡನೆಯದು, ಮೂರನೆಯದು, ನಾಲ್ಕನೆಯದನ್ನೂ ನೋಡಿದ. ಎಲ್ಲವೂ ಒಂದರಂತೆ ಇನ್ನೊಂದು. ಒಂದು ಸ್ವಲ್ಪ ದೊಡ್ಡ ಗುಹೆಯಾಗಿತ್ತು. ಬಹುಶಃ ಅದು ಭೀಮನ ಗುಹೆ ಇರಬೇಕು ಎಂದು ತಿಮ್ಮಣ್ಣ ತರ್ಕಿಸಿದ.
ಐದನೆಯ ಗುಹೆಯ ಬಳಿ ತಿಮ್ಮಣ್ಣ ಹೋಗುತ್ತಿದ್ದಂತೆ ಒಳಗೆ ಏನೋ ಸದ್ದು ಕೇಳಿಸಿತು. ನಿಂತಲ್ಲಿಯೇ ನಿಂತು ಕಿವಿ ನಿಮಿರಿಸಿದ. ಸಪ್ಪಳ, ಗುಸುಗುಸು ಕೇಳಿಬರುತ್ತಿದ್ದುದು ನಿಜ. ಹುಲಿ ಕರಡಿ ಇತ್ಯಾದಿ ಪ್ರಾಣಿಗಳಿರಬಹುದೆ ಎಂಬ ವಿಚಾರ ಬಂದು ತಿಮ್ಮಣ್ಣ ಬೆವರಿಬಿಟ್ಟ. ಏನಿದೆ ಎಂದು ನೋಡಬೇಕೆಂಬ ಕುತೂಹಲ ಅವನಲ್ಲಿ ಧೈರ್ಯವನ್ನು ತುಂಬಿತು. ಮರೆಯಲ್ಲಿ ನಿಂತು ದೃಷ್ಟಿಯನ್ನು ಮಾತ್ರ ಒಳಕ್ಕೆ ತೂರಿದ. ಎರಡು ಬೆತ್ತಲೆ ದೇಹಗಳು ಒಂದನ್ನೊಂದು ಹಿಸುಕಾಡುತ್ತ ಮುಲುಗುಟ್ಟುತ್ತಿದ್ದವು. ತಿಮ್ಮಣ್ಣ ಗರ್ಕಾಗಿ ನಿಂತ. ನೋಡುತ್ತಿದ್ದಂತೆ ಅದರಲ್ಲಿ ಒಂದು ಗಂಡು ಒಂದು ಹೆಣ್ಣು ಎನ್ನುವುದು ಅವನಿಗೆ ತಿಳಿಯಿತು. ಅವರಿಬ್ಬರು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದ ವಿದೇಶೀಯರು ಎಂಬುದನ್ನು ತಿಮ್ಮಣ್ಣ ಖಚಿತಪಡಿಸಿಕೊಂಡ.
ಶಾಲೆಯಲ್ಲಿ ಅವನಿಗಿಂತ ದೊಡ್ಡ ಹುಡುಗರು, ಮನೆಗೆ ಕೆಲಸಕ್ಕೆ ಬರುವ ಜನರು, ಪೇಟೆಯಲ್ಲಿ ರಸ್ತೆ ಬದಿಯ ವ್ಯಾಪಾರಿಗಳ ಗಂಡು ಹೆಣ್ಣಿನ ಸಂಬಂಧದ ಬಗ್ಗೆ ಏನೇನೋ ಅಶ್ಲೀಲವನ್ನು ಆಡುತ್ತಿದ್ದರು. ಅವೆಲ್ಲ ತಿಮ್ಮಣ್ಣನ ಕಿವಿಗೂ ಬಿದ್ದಿತ್ತು. ಆದರೆ ಅದು ಏನು ಎನ್ನುವುದು ಅವನಿಗೆ ಗೊತ್ತಿರಲಿಲ್ಲ. ಅರಿಯುವ ಕುತೂಹಲ ಅವನನ್ನು ಇನ್ನೂ ನೋಡುವಂತೆ ಮಾಡಿತು.
ನೋಡುತ್ತಿದ್ದ ತಿಮ್ಮಣ್ಣನಿಗೆ ಕಾಲ ಅಂಗುಷ್ಟದಿಂದ ನೆತ್ತಿಯ ಕೂದಲ ವರೆಗೆ ಏನೋ ಸಂಚಾರ ಮಾಡಿದ ಅನುಭವವಾಯಿತು. ರೋಮಗಳೆಲ್ಲ ನಿಗುರಿ ಬಿಟ್ಟಿದ್ದವು. ಹೊಟ್ಟೆಯ ಒಳಗೆ ಚಳಿಯು ಬಂದಂತಾಗಿ ನಡುಗಹತ್ತಿದ. ನಾಲ್ಕು ಹೆಜ್ಜೆ ಹಿಂದುಕಾಲಿನಲ್ಲೇ ಬಂದು ಗುಹೆಯಿಂದ ಒಮ್ಮೆಲೆ ಹೊರಗೆ ಓಡಿ ಬಂದ. ಹೊಟ್ಟೆಯೊಳಗಿನ ನಡುಕ ಇನ್ನೂ ಹಾಗೆ ಇತ್ತು. ಕೆಳಗೆ ಇಳಿದು ಬಂದ. ಬೆವರಿನಿಂದ ತೊಯ್ದ ಅಂಗಿಯನ್ನು ತೆಗೆದಿಟ್ಟು ರಾಮತೀರ್ಥದ ಕೆಳಗೆ ತಲೆ ಒಡ್ಡಿ ನಿಂತ. ಚಳಿ ಹತ್ತಿದಂತಿದ್ದ ಅವನ ದೇಹಕ್ಕೆ ರಾಮತೀರ್ಥದ ನೀರು ಸ್ವಲ್ಪ ಬೆಚ್ಚಗೆನಿಸಿ ಹಿತವಾಗಿ ತೋರಿತು. ಕೆಲವು ಹೊತ್ತಿನ ನಂತರ ಒದ್ದೆ ಬಟ್ಟೆಯನ್ನು ಹಿಂಡಿ ಹಾಕಿಕೊಂಡು ಸಮುದ್ರದ ಬೇಲೆಯ ಮೇಲೆ ನಾಲ್ಕು ಸುತ್ತು ತಿರುಗಿದ. ಬಿಸಿಲಿಗೆ ಗಾಳಿಗೆ ಬಟ್ಟೆ ಒಣಗಿದಂತಾಗಲು ಮನೆಗೆ ಮರಳಿದ.
ರಾತ್ರಿ ತಡವಾಗಿ ನಿದ್ದೆ ಹತ್ತಿದ ಕಾರಣ ತಿಮ್ಮಣ್ಣ ತಡವಾಗಿಯೇ ಎದ್ದ. ಪಾಂಡವರ ಗುಹೆಯ ಬಿಳಿ ಜೋಡಿ ರಾತ್ರಿ ಕನಸಿನಲ್ಲೂ ಬಂದು ಅವನಿಗೆ ಕಾಡಿದ್ದರು. ಶಾಲೆಗೆ ಹೋಗಲು ಪುಸ್ತಕ ಎತ್ತಿಕೊಂಡು ಓಣಿಯಲ್ಲಿ ನಡೆಯತೊಡಗಿದಾಗ ಏನೋ ತನ್ನಲ್ಲಿ ಬದಲಾವಣೆ ಆಗಿದೆ ಅನ್ನಿಸಿತು ಅವನಿಗೆ. ಆದರೆ ಏನೆಂದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಶಾಲೆಯಲ್ಲಿ ಮೇಡಂ ಹಾಜರಿ ಕೂಗುವಾಗ ‘ತಿಮ್ಮಣ್ಣ’ ಎಂದು ಇವನ ಕಡೆ ನೋಡಿದರು. ದಿನವೂ ಹಾಜರ್‌ ಎಂದು ದೊಡ್ಡದಾಗಿ ಹೇಳುತ್ತಿದ್ದ ತಿಮ್ಮಣ್ಣ ಇಂದು ಸುಮ್ಮನೆ ಎದ್ದು ನಿಂತು ಕುಳಿತನು. ಅದೇ ಮೊದಲ ಬಾರಿಗೆ ಅವನಿಗೆ ತನ್ನ ಹೆಸರು ಚೆನ್ನಾಗಿಲ್ಲ ಅನ್ನಿಸಿತು. ಎಷ್ಟೋ ಒಳ್ಳೆಯ ಹೆಸರುಗಳು ಇರುವಾಗ ಈ ಹೆಸರನ್ನೇಕೆ ಇಟ್ಟರಪ್ಪಾ ಎಂದು ಅಪ್ಪನ ಮೇಲೆ, ಅಬ್ಬೆಯ ಮೇಲೆ ಕೂಡಿಯೇ ಅವನಿಗೆ ಸಿಟ್ಟು ಬಂತು. ಮೇಡಂ ಇವನ ಹೋಂವರ್ಕ್‌ ನೋಡಲು ಇವನ ಬಳಿ ಬಂದು ನಿಂತಾಗ ಹಿಂದಿನ ದಿನ ಗುಹೆಯಲ್ಲಿ ಬಂದ ಹಾಗೆ ಸಣ್ಣ ನಡುಕ ಬಂದುಬಿಟ್ಟಿತು. ಮೇಡಂ ಅವರ ಮುಖ ನೇರವಾಗಿ ನೋಡಲು ಅವನಿಂದ ಆಗಲಿಲ್ಲ. ‘ನೋಡು ಇದು ದೀರ್ಘ ಮಾಡಬೇಕು’ ಎಂದು ಮೇಡಂ ಮೆಲ್ಲಗೆ ಅವನ ಕಿವಿ ಹಿಂಡಿದಾಗ ಮುಖ ನಾಚಿಕೆಯಿಂದ ಕೆಂಪಾಯಿತು. ಆ ದಿನವಿಡಿ ಅವನು ತನ್ನ ಸಹಪಾಠಿ ಹುಡುಗಿಯರ ಕಡೆಗೂ ಮೇಡಂ ಕಡೆಗೂ ಕದ್ದು ಕದ್ದು ನೋಡುತ್ತಿದ್ದ. ಅದರಿಂದ ಏನೋ ವಿಚಿತ್ರ ರೀತಿಯ ಖುಷಿ ಅವನ ಮನಸ್ಸಿಗೆ ಆಗುತ್ತಿತ್ತು.
ಮನೆಯ ಹಿಂದೆ ಭೈರಗೌಡ ಕಟ್ಟಿಗೆ ಒಡೆಯುತ್ತಿದ್ದ. ಪುಸ್ತಕ ಮೂಲೆಯಲ್ಲಿಟ್ಟು ತಿಮ್ಮಣ್ಣ ಅಲ್ಲಿಗೆ ಹೋದ. ಬೆವರಿನಿಂದ ತೋಯ್ದು ಹೋದ ಭೈರಗೌಡ ಇವನನ್ನು, ‘ಬದಿಗೆ ಬರಬೇಡ್ರೋ, ಚಕ್ಕೆ ಸಿಡೂದು’ ಎಂದ. ಅವನ ಹರವಾದ ಎದೆ ಮೇಲೆ ಕೆಳಗೆ ಏರಿಳಿಯುತ್ತಿತ್ತು. ಅದನ್ನು ಕಂಡು ತಿಮ್ಮಣ್ಣನಿಗೆ ಅಸೂಯೆ ಆಯಿತು. ಮುಂಗಚ್ಚೆಯೊಂದನ್ನು ಬಿಟ್ಟರೆ ಅವನ ಮೈಮೇಲೆ ಬೇರೆ ಯಾವುದೇ ಬಟ್ಟೆ ಇರಲಿಲ್ಲ. `ಇವನಿಗೆ ಈ ರೀತಿ ಬರಲು ನಾಚಿಕೆಯೂ ಆಗುವುದಿಲ್ಲವೆ?’ ಎಂದುಕೊಂಡ ತಿಮ್ಮಣ್ಣ.
ತಿಮ್ಮಣ್ಣನಿಗೆ ಚಾ ಕೊಡುವಾಗಲೆ ಅಬ್ಬೆ ಭೈರನಿಗೂ ಕರೆದಳು. ಹೊಳ್ಳಿಯ ಮೇಲೆ ತುದಿಗಾಲಿನಲ್ಲಿ ಕುಳಿತ ಭೈರನಿಗೆ ಕಚ್ಚೆ ಬಿಗಿ ಮಾಡಿ ಕಟ್ಟಿಕೊಳ್ಳಬೇಕು ಎನ್ನುವ ಪ್ರಜ್ಞೆಯೂ ಇರಲಿಲ್ಲ. ಅಡುಗೆ ಕೋಣೆಯಲ್ಲಿ ಕುಳಿತ ತಿಮ್ಮಣ್ಣನಿಗೆ ಭೈರನ ತೊಡೆಗಳ ಬುಡಕ್ಕೇ ಕಣ್ಣು. ಅಬ್ಬೆ ಎಲ್ಲಿ ನೋಡಿಬಿಡುವಳೋ ಅದನ್ನು ಎನ್ನುವ ಸಂದಿಗ್ಧ ಭಾವ. ಭೈರ ಈ ರೂಪದಲ್ಲಿ ಇರುವಾಗ ಅವನ ಎದುರಿಗೆ ಹೋಗಲು ಅಬ್ಬೆ ಸ್ವಲ್ಪವೂ ಸಂಕೋಚಪಟ್ಟುಕೊಳ್ಳುವುದಿಲ್ಲವೇಕೆ ಎಂಬ ಪ್ರಶ್ನೆ ಅವನನ್ನು ಕಾಡುವುದು.
ರಾತ್ರಿ ತಿಮ್ಮಣ್ಣನಿಗೆ ಮತ್ತೆ ಕನಸು ಬಿದ್ದಿದೆ. ಅಬ್ಬೆ ಅವನನ್ನು ಕರೆದುಕೊಂಡು ಅಶ್ವತ್ಥ ಮರದ ಪೂಜೆಗೆ ಹೋಗಿದ್ದಾಳೆ. ಮರಕ್ಕೆ ನೀರೆರೆದು ಹೂ ಮುಡಿಸಿದ್ದಾಳೆ ಧೂಪ ಬೆಳಗಿದ್ದಾಳೆ. ತಿಮ್ಮಣ್ಣ ಹತ್ತಿರದಲ್ಲೇ ನಿಂತು ತಲೆ ಎತ್ತಿ ಮರ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಲೆಕ್ಕ ಹಾಕುತ್ತ ಇದ್ದಾನೆ. ಅವನ ದೃಷ್ಟಿ ಅರ್ಧ ಮರದ ಹತ್ತಿರ ಬಂದಾಗ ಮರದ ಬದಲಾಗಿ ಮನುಷ್ಯನ ಅವಯವಗಳು ಅಲ್ಲಿ ಕಾಣತೊಡಗುತ್ತವೆ. ದಿಗಿಲುಗೊಂಡ ಅವನು ಪುನಃ ತಲೆ ಎತ್ತಿ ನೋಡುವನು. ಮನುಷ್ಯನ ರೂಪ ಸ್ಪಷ್ಟವಾಗಿ ಅವನಿಗೆ ಗೋಚರಿಸುತ್ತದೆ. ಅವನು ಮತ್ತಾರೂ ಅಲ್ಲ, ಭೈರಗೌಡ. ಬರೀ ಬೆತ್ತಲಾಗಿದ್ದಾನೆ. ಒಂದೆಳೆ ನೂಲು ಎನ್ನುವುದು ಅವನ ಮೈಮೇಲೆ ಇಲ್ಲ. ಅಬ್ಬೆ ಮುಡಿಸಿದ ಹೂವೆಲ್ಲ ಅವನ ಲಿಂಗ ಪ್ರದೇಶದಲ್ಲಿದ್ದವು. ಅಬ್ಬೆ ಕರ್ಪೂರ ಹಚ್ಚಿ ಅದಕ್ಕೆ ಆರತಿ ಬೆಳಗುತ್ತಿದ್ದಳು. ತಿಮ್ಮಣ್ಣನಿಗೆ ಸಿಟ್ಟು ತಡೆಯಲಾರದೆ ಭೈರಗೌಡನಿಗೆ ಒದ್ದುಬಿಟ್ಟಿದ್ದಾನೆ.
ತಿಮ್ಮಣ್ಣ ನಿಜಕ್ಕೂ ಕಾಲೆತ್ತಿ ಒದ್ದಿದ್ದಾನೆ. ಅದು ಅವನ ಕಾಲಬುಡದಲ್ಲಿದ್ದ ಸ್ಟೂಲಿಗೆ ಬಡಿದು ಕಾಲು ನೋವಾಗಿ ಅವನಿಗೆ ಎಚ್ಚರವಾಗುತ್ತದೆ. ಆಮೇಲೆ ಬೆಳಗು ಹರಿಯುವ ವರೆಗೂ ಅವನಿಗೆ ನಿದ್ರೆ ಬರುವುದೇ ಇಲ್ಲ. ಭೈರಗೌಡನಿಗೆ ಇನ್ನು ಮುಂದೆ ಆ ರೂಪದಲ್ಲಿ ನಮ್ಮ ಮನೆಗೆ ಬರಕೂಡದೆಂದು ತಾಕೀತು ಮಾಡಲು ಅಪ್ಪನಿಗೆ ಹೇಳಬೇಕು ಅಂದುಕೊಳ್ಳುವನು. ಅಪ್ಪ ಏಕೆ ಎಂದು ಕೇಳಿದರೆ ಏನೆಂದು ಉತ್ತರಿಸಬೇಕು ಎನ್ನುವುದು ಅವನಿಗೆ ಹೊಳೆಯುವುದಿಲ್ಲ.
ಮಾರನೆಯ ದಿನ ಬೆಳಿಗ್ಗೆಯ ಶಾಲೆ ಬಿಟ್ಟು ತಿಮ್ಮಣ್ಣ ಮನೆಗೆ ಬರುವನು. ಭೈರಗೌಡ ಆ ದಿನ ಬಂದಿರುವುದಿಲ್ಲ. ಅಪ್ಪ ದೂರದೂರಿನಿಂದ ಬಂದ ಯಾತ್ರಾರ್ಥಿಗಳ ಹತ್ತಿರ ಕ್ಷೇತ್ರ ವಿಧಿಯ ಖರ್ಚಿನ ಬಗ್ಗೆ ಚೌಕಾಸಿ ನಡೆಸಿದ್ದರು. ವ್ಯವಹಾರ ಮುಗಿದ ಮೇಲೆ ತಿಮ್ಮಣ್ಣನಿಗೂ ಕೋಟಿತೀರ್ಥಕ್ಕೆ ಬಾ ಎಂದು ಹೇಳಿ ಪೂಜಾ ಸಾಮಗ್ರಿಗಳನ್ನು ಅವನ ಹತ್ತಿರ ಕೊಟ್ಟು ಅವರನ್ನೆಲ್ಲ ಕರೆದುಕೊಂಡು ಹೊರಟರು.
ಕೋಟಿತೀರ್ಥದಲ್ಲಿ ಅಪ್ಪ ನಡೆಸುವ ಕ್ರಿಯಾ ವಿಧಿಯ ಬಗ್ಗೆ ತಿಮ್ಮಣ್ಣನಿಗೆ ಸ್ವಲ್ಪವೂ ಲಕ್ಷ್ಯವಿರಲಿಲ್ಲ. ಅವನ ಲಕ್ಷ್ಯವೆಲ್ಲ ಅಲ್ಲಿ ಮೀಯಲು ಬರುವವರ ಕಡೆ ಇತ್ತು. ಒದ್ದೆ ಬಟ್ಟೆಯಲ್ಲಿ ಕಾಣುವ ದೇಹದ ಏರು ತಗ್ಗು, ನಾಚುತ್ತ ಮುಡುಗುತ್ತ ಬಟ್ಟೆ ಬದಲಿಸುವ ಹೆಂಗಸರನ್ನು ನೋಡುತ್ತಿದ್ದ. ಅಪ್ಪ ಎಲ್ಲಿ ತನ್ನನ್ನು ಕಂಡುಬಿಡುವನೋ ಎನ್ನುವ ಭಯವೂ ಇದ್ದಿತ್ತು.
ವಿಧಿ ಮುಗಿದ ಮೇಲೆ ಅವರೆಲ್ಲ ಮನೆಗೆ ಬಂದರು. ಅಬ್ಬೆ ಬೇರೆ ಜಾತಿಯವರಾದ ಅವರಿಗೆ ಹೊರಗೆ ಬಡಿಸಿದಳು. ಸೇಮ ಎಂಜಲು ಎಲೆ ತೆಗೆದು ಸಗಣಿ ಬಳಿಯಲು ಬಂದಿದ್ದಳು. ಕುಪ್ಪಸವಿಲ್ಲದ ಅವಳ ಕರಿ ಮೈ ತಿಮ್ಮಣ್ಣನ ಕಣ್ಣು ತುಂಬುತ್ತದೆ. ಅವನ ಕಣ್ಣು ಇನ್ನೂ ಏನನ್ನೋ ಹುಡುಕುತ್ತದೆ. ಸೀರೆಯ ಸೆರಗು ಮೊಲೆಗಳನ್ನು ಮುಚ್ಚಿತ್ತು. ಸೆರಗಿನ ಮೇಲೆ ರಾಶಿ ರಾಶಿ ಕರಿಮಣಿ ಸರ. ಬಗ್ಗಿ ಸೆಗಣಿಯನ್ನು ಹಾಳೆಕಡಿಯಿಂದ ಎಳೆಯುತ್ತ ಹಿಂಗಾಲಿನಲ್ಲಿ ಬರುತ್ತಿದ್ದ ಅವಳನ್ನು ತಿಮ್ಮಣ್ಣ ಹಿಂದಿನಿಂದ ನೋಡುತ್ತ ಗರ್ಕಾಗಿದ್ದ. ಹೆಜ್ಜೆ ಹಿಂದಕ್ಕೆ ಇಡುವ ಲಯಕ್ಕೆ ಮೇಲಕ್ಕೆ ಕೆಳಕ್ಕೆ ಆಗುತ್ತಿದ್ದ ಅವಳ ಕುಂಡೆಗಳು ಬೋರಲು ಇಟ್ಟ ಎರಡು ಕೊಡಪಾನಗಳು ಅಲ್ಲಾಡುತ್ತಿದ್ದ ಹಾಗೆ ಅವನಿಗೆ ಕಂಡವು.
ತಿಮ್ಮಣ್ಣನಿಗೆ ರಾತ್ರಿ ಮಲಗುವಾಗ ಕೋಟಿತೀರ್ಥ, ಸೇಮ ಎಲ್ಲರೂ ನೆನಪಿಗೆ ಬಂದರು. ಎಷ್ಟು ಹೊತ್ತಿಗೋ ಏನೋ ಅವನಿಗೆ ಕನಸು ಬಿದ್ದಿದೆ. ಕನಸಿನಲ್ಲಿ ಅವನಿಗೆ ಗಡ್ಡ ಮೀಸೆಗಳೆಲ್ಲ ಬಂದಿದ್ದವು. ಅವನು ಅಪ್ಪನ ಹಾಗೆ ಮಡಿ ಉಟ್ಟು ಪೂಜೆ ಸಾಮಗ್ರಿ ತೆಗೆದುಕೊಂಡು ಮಹಾಬಳೇಶ್ವರನ ಗುಡಿಗೆ ಹೋರಟಿದ್ದಾನೆ. ದಾರಿಯಲ್ಲಿ ಜನರೆಲ್ಲ ಇವನು ಬರುವುದು ಕಂಡು ಬದಿಗೆ ಸರಿದು ನಿಲ್ಲುತ್ತಿದ್ದಾರೆ. ಮಹಾಬಳೇಶ್ವರನ ಗುಡಿಯ ಆತ್ಮಲಿಂಗದ ಎದುರಿಗೆ ಕುಳಿತು ತಿಮ್ಮಣ್ಣ ಪೂಜಿಸುತ್ತಿದ್ದಾನೆ. ಪಾಣಿಪೀಠದ ಮೇಲೆ ನೀರೆರೆಯುತ್ತಿದ್ದಂತೆ ಅಭಿಷೇಕದ ಮಂತ್ರ ತಾನಾಗಿಯೇ ಬರುತ್ತದೆ ಅವನಿಗೆ. ಆ ಮೇಲೆ ಪಂಚಾಮೃತ, ವಸ್ತ್ರ, ಧೂಪ, ದೀಪ, ನೈವೇದ್ಯ ಇತ್ಯಾದಿಗಳ ಮಂತ್ರಗಳೆಲ್ಲ ಒಂದರ ಹಿಂದೆ ಒಂದರಂತೆ ಅವನ ಬಾಯಿಂದ ಹೊರಬೀಳುವುದು. ಹಿಂದೆ ಅವನ ಬೊಗಸೆಯಲ್ಲಿ ಉಚ್ಚಿ ಹೊಯ್ದ ಟೊಣಪ ದೂರದಲ್ಲಿ ನಿಂತು ಇವನ ಕಡೆ ಆಶ್ಚರ್ಯದಿಂದ ನೋಡುತ್ತಿದ್ದಾನೆ. ಪೂಜೆ ಮಾಡುತ್ತ ಮಾಡುತ್ತ ಇದ್ದಹಾಗೆ ಆತ್ಮಲಿಂಗ ಇರುವ ಜಾಗದಲ್ಲಿ ಅದು ಇರುವುದೇ ಇಲ್ಲ. ಅದರ ಬದಲು ಬೆತ್ತಲಾಗಿ ಅಂಗಾತ ಮಲಗಿದ ಸೇಮ ಕಾಣಿಸುವಳು. ಪಾಣಿಪೀಠದ ಬದಲು ಅವಳ ಯೋನಿ. ಅವನ ಅಭಿಷೇಕ ಪೂಜೆ ಎಲ್ಲ ಅದಕ್ಕೇ ನಡೆಯುತ್ತಿದೆ. ಎಲ್ಲಿಂದಲೋ, ‘ಇಲ್ಲಿ ಒಳಗೆ ಕೈ ಹಾಕು, ಈಶ್ವರನ ಆತ್ಮಲಿಂಗವಿದೆ. ಉಗುರು ತಾಗಿಸಬೇಡ’ ಎಂಬ ಅಪ್ಪನ ಮಾತುಗಳು ಕೇಳಿಬರುತ್ತಿವೆ. ಅವನು ಮಾತ್ರ ಕಣ್ಣಿಗೆ ಬೀಳುವುದೇ ಇಲ್ಲ. ತಿಮ್ಮಣ್ಣ ಲಜ್ಜಿತನಾಗಿ ಅಪ್ಪನ ಮಾತನ್ನು ಅನುಸರಿಸುತ್ತಾನೆ.
ತೊಡೆಗಳೆರಡೂ ತಣ್ಣಗೆ ಕೊರೆಯಲು ತಿಮ್ಮಣ್ಣನಿಗೆ ಎಚ್ಚರವಾಗುತ್ತದೆ. ಕೈಯಿಂದ ಮುಟ್ಟಿ ನೋಡಿಕೊಳ್ಳುತ್ತಾನೆ. ಅಂಟು, ನವೆ. ಏನೆಂದು ಅವನಿಗೆ ಗೊತ್ತಾಗುವುದಿಲ್ಲ. ಚಡ್ಡಿಯೆಲ್ಲ ಒದ್ದೆಯಾದುದಕ್ಕೆ ಅವನಿಗೆ ನಾಚಿಕೆಯಾಗುತ್ತದೆ.
ತೊಡೆಸಂಧಿಯಲ್ಲಿ ಕೈಗಳನ್ನು ತೂರಿ ತಿಮ್ಮಣ್ಣ ಮಲಗಲು ಪ್ರಯತ್ನ ಮಾಡುತ್ತಾನೆ. ಆದರೆ ಅವನಿಗೆ ನಿದ್ದೆಯೇ ಬರುವುದಿಲ್ಲ. ಪಾಂಡವರ ಗುಹೆಯ ಬಿಳಿ ಜೋಡಿ, ಶಾಲೆಯ ಮೇಡಂ, ಹುಡುಗಿಯರು, ಕೋಟಿತೀರ್ಥ, ಸಮುದ್ರದಲ್ಲಿ ಸ್ನಾನ ಮಾಡುವವರು, ಸೇಮ ಎಲ್ಲರೂ ಒಬ್ಬರಾದ ನಂತರ ಒಬ್ಬರಂತೆ ಅವನ ನೆನಪಿನಲ್ಲಿ ಬಂದುಹೋಗುತ್ತಿರುತ್ತಾರೆ. ಎಷ್ಟು ಹೊತ್ತಿಗೆ ಬೆಳಕು ಹರಿಯಬಹುದು ಎಂದು ತಿಮ್ಮಣ್ಣ ಮಲಗಿದಲ್ಲೇ ಚಡಪಡಿಸತೊಡಗಿದ.

ನಾಡೋಜ ದೀಪಾವಳಿ ಸಂಚಿಕೆ- 1990

5.ಕಾಲು ಬಂದ ಕುರುವ

ಚಂದ್ರಮನಿಲ್ಲದ ಆಕಾಶದ ಒಂದು ರಾತ್ರಿ. ಪುಟ್ಟ ನಕ್ಷತ್ರಗಳು ಹರಟೆ ಹೊಡೆಯುತ್ತ ನಕ್ಕು ಹಲ್ಲು ಕಿಸಿಯುತ್ತ ಮುಗಿಲಂಗಳದಲ್ಲಿ ಬೆಳಕು ಬೀರಿದ್ದ ರಾತ್ರಿ. ಅದೆಷ್ಟೋ ವರ್ಷಗಳಿಂದ, ಉಳಿದವರು ತನಗೆ ಮೈಲಿಗೆಯೋ ಎಂಬಂತೆ, ಪ್ರಯತ್ನಿಸಿದರಷ್ಟೇ ಗಮ್ಯ ಸಾಧ್ಯ ಆಗಬಹುದಾದ ಒಂದು ನಡುಗಡ್ಡೆಯಾಗಿದ್ದ ಮಾವಿನಕುರುವ ಹಠಾತ್ತನೆ ಸರಿದಾಡಲಾರಂಭಿಸಿತು.
ಕುರುವದ ಮಕ್ಕಳೆಲ್ಲ ಅದ್ಯಾವಾಗಲೋ ನಿದ್ದೆಯವ್ವನ ಮಡಿಲನ್ನು ಸೇರಿಬಿಟ್ಟಿದ್ದರು. ತಮ್ಮ ತಟ್ಟಿಯ ಬಿಡಾರಗಳಲ್ಲಿ, ಹಂಚಿನ ಮನೆಗಳಲ್ಲಿ, ಹುಲ್ಲಿನ ಗುಡಿಸಲುಗಳಲ್ಲಿ ಎಲ್ಲೆಂದರಲ್ಲಿ ಹೆಂಗ್ಯೆಂಗೋ ಬಿದ್ದುಕೊಂಡಿದ್ದರು. ಜಗುಲಿಯ ಮೇಲೆ, ಕಿರುಜಗುಲಿಯ ಮೇಲೆ, ಚೌಕಿಯಲ್ಲಿ, ಓರಿಯಲ್ಲಿ, ಮಾಡಿನ ಮೇಲೆ, ಮಾಳದಲ್ಲಿ ಸಿಕ್ಕಿದ್ದನ್ನು ಹೊದೆದು, ಪಕ್ಕದವರನ್ನು ತಬ್ಬಿ, ಮಂಡಿಯ ಚಿಪ್ಪನ್ನು ಗಲ್ಲದ ವರೆಗೆ ತಂದು ಯಾರಾದರೂ ಕಿತ್ತುಕೊಂಡು ಹೋಗುವರೋ ಎಂಬ ಅಳುಕಿನಿಂದ ಎಂಬಂತೆ ಎರಡೂ ಕೈಗಳಿಂದ ಕಾಲನ್ನು ಬಳಸಿ ಹಿಡಿದು, ಎರಡೂ ಕೈಗಳನ್ನು ತೊಡೆಗಳ ನಡುವೆ ಇರಿಸಿ ಬೆನ್ನು ಬಿಲ್ಲಾಗಿಸಿ ಹೀಗೆ ಒಬ್ಬೊಬ್ಬರು ಒಂದೊಂದು ಥರವಾಗಿ ಮಲಗಿದ್ದಾಗ ಯಾರಿಗೂ ತಾವು ಇಷ್ಟು ದಿನಗಳ ಕಾಲ ಬೇರಿಳಿಸಿದ್ದ ಈ ಭೂಮಿ ಕಾಲು ಬಂದಂತೆ ತೆವಳತೊಡಗಿದ್ದು ಗೊತ್ತಾಗಲೇ ಇಲ್ಲ. ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದಂಥ ಇಂಥ ಒಂದು ಪವಾಡ ಇಲ್ಲೇ, ಇದೇ ಇಲ್ಲಿಯೇ ಸಂಭವಿಸುತ್ತಿದ್ದರೂ ಅದರ ಪ್ರತ್ಯಕ್ಷದರ್ಶಿಗಳಾಗುವ ಅವಕಾಶದಿಂದ ತಾವು ವಂಚಿತರಾಗುತ್ತಿದ್ದೇವೆ ಎಂಬ ಘನವಾದ ಕಲ್ಪನೆ ಅವರಲ್ಲಿ ಮೂಡಲು ಸಾಧ್ಯವೇ ಇರಲಿಲ್ಲ.
ಗಂಗಾಧರನಿಗೆ ರಾತ್ರಿ ಎದ್ದು ಹೊಳೆಬದಿಗೆ ಒಮ್ಮೆ ಹೋಗಿ ದೇಹ ಭಾರವನ್ನು ಇಳಿಸಿಕೊಳ್ಳದಿದ್ದರೆ ನಿದ್ದೆಯೇ ಬರುತ್ತಿರಲಿಲ್ಲ. ಬೆಳ್ಳಿ ಮೂಡುವ ಹೊತ್ತಿಗೋ, ಕೋಳಿ ಸ್ವರಗೈಯಲು ಇನ್ನೂ ತಾಸು ಹೊತ್ತಿರುವಾಗಲೋ ಹಾಗೆ ಎದ್ದು ಹೋಗಿ ಬಂದರಷ್ಟೇ ಅವನಿಗೆ ಸಮಾಧಾನ. ಹೆಂಡತಿ ನಾಗಿ ಅವನನ್ನು ಮದುವೆಯಾದ ಲಾಗಾಯ್ತಿನಿಂದ ಅವನ ಈ ನಡುರಾತ್ರಿಯ ವ್ಯವಹಾರಕ್ಕೆ ವಿರೋಧ ವ್ಯಕ್ತಪಡಿಸುತ್ತ ಬಂದವಳೇ. ಉಂಡಿದ್ದೆಲ್ಲ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಬರುತ್ತದೆಯೇ?' ಎಂದು ವೇದಾಂತದ ಮಾತನಾಡಿ ಆತ ಆಕೆಯ ಬಾಯಿ ಮುಚ್ಚಿಸುತ್ತಿದ್ದ. ಮಾವಿನಕುರುವ ಚಲಿಸಲಾರಂಭಿಸಿದ ಜಗತ್ತಿನ ಅನನ್ಯ ಅಸಾಧಾರಣ ಪ್ರಸಂಗ ನಡೆಯುತ್ತಿರುವಾಗಲೆ ಅವನು ಹೊಳೆಯ ಬದಿಗೆ ಹೋಗಿದ್ದು. ಹೊಳೆಬಾಗಿಲಿನಲ್ಲಿ ತಾನು ಕಟ್ಟಿದ್ದ ದೋಣಿ ದಡದಿಂದ ಎರಡು ಮಾರು ದೂರ ನಿಂತಿದ್ದನ್ನು ಗಂಗಾಧರ ಕಂಡ. ಅಂಚಿನಲ್ಲಿ ಜಲ್ಲವನ್ನೇ ಗೂಟವಾಗಿ ಹುಗಿದು ಕಟ್ಟಿದ್ದ ದೋಣಿಯನ್ನು ಯಾರೋ ಒಯ್ದು ಮತ್ತೆ ತಂದು ಕಟ್ಟಿಹೋಗಿದ್ದಾರೆ. ಅಂಚಿನಲ್ಲಿ ಕಟ್ಟುವುದನ್ನು ಬಿಟ್ಟು ಹೊರಕ್ಕೆ ಕಟ್ಟಿದ್ದಾರಲ್ಲ. ಅವರ ಮನೆ ಹಾಳಾಗ್ಲಿ, ಕಳ್ಳನನ್‌ ಮಕ್ಳು ತಂದಿ ಎಂದು ಬಯ್ದ. ಜಗತ್ತಿನ ಬಹುಮುಖ್ಯ ವ್ಯಾಪಾರವೊಂದನ್ನು ಮಾಡುತ್ತಿರುವಂತೆ ಶ್ರದ್ಧೆಯಿಂದ ಪಂಚೆ ಏರಿಸಿ ದೇಹಭಾರ ಕಳೆದು ಮೇಲೆದ್ದ. ಆದರೆ ಮಾವಿನಕುರುವ ಚಲಿಸಲಾರಂಭಿಸಿದೆ ಎಂಬ ಜಗತ್ತಿನ ಈ ಅಪರೂಪದ ವ್ಯವಹಾರ ಮಾತ್ರ ಅವನ ಗಮನಕ್ಕೆ ಬಾರದೆಹೋಗಿ ಘಟನೆಯ ಮೊದಲ ಪ್ರತ್ಯಕ್ಷದರ್ಶಿ ಎಂಬ ಅಗ್ಗಳಿಕೆಯಿಂದ ವಂಚಿತನಾದ. ಗಂಗಾಧರ ತನ್ನ ಬಿಡಾರದೊಳಕ್ಕೆ ಬಂದ. ಯಥಾ ಪ್ರಕಾರ ನಾಗಿ ಮತ್ತೆ ಗೊಣಗಿದಳು. ಆ ಅಪರಾತ್ರಿಯಲ್ಲಿಯೇ ಗಂಡ ಆಕೆಗೆ ತನ್ನ ದೋಣಿಯನ್ನು ಯಾರೋ ಒಯ್ದಿದ್ದರು. ತಂದು ದೂರ ನಿಲ್ಲಿಸಿ ಹೋಗಿದ್ದಾರೆ ಎಂದು ವರದಿ ಒಪ್ಪಿಸುವ ದಾಟಿಯಲ್ಲಿ ಹೇಳಿದ. ಕಳ್ಳನಾಟ ಸಾಗಿಸುವ ಯಾರದೋ ಡೋಂಗಿ ಇದು ಎಂದು ತನ್ನ ಅನುಮಾನವನ್ನೂ ವ್ಯಕ್ತಪಡಿಸಿದ. ಆಕೆಯೂ ಮುಸುಕಿನೊಳಗೇ ನೆಟಿಗೆ ಮುರಿದು ಶಾಪ ಹಾಕಿದಳು. ಮಂಜು ಮುಸುಕಿದ ಪೂರ್ವದ ಗುಡ್ಡದ ಕಿಬ್ಬಿನಲ್ಲಿ ಸೂರ್ಯ ತಡವಾಗಿಯೋ ಎಂಬಂತೆ ಅಂದು ಹಣಕಿ ಹಾಕಿದ. ಬೆಳಕು ಹರಿದೇ ಬಿಟ್ಟಿತೆ ಎಂದು ಮಾವಿನಕುರುವದ ಕೆಲವರು ಗಡಬಡಿಸಿ ಎದ್ದರೆ ಇನ್ನು ಕೆಲವರು ಯಾಕಾದರೂ ಬೆಳಕು ಹರಿಯಿತೋ ಎಂದು ಮತ್ತೆ ಮುಸುಕೆಳೆದುಕೊಂಡು ಮಲಗಿದ್ದಲ್ಲಿಯೇ ಮಗ್ಗಲು ಬದಲಿಸಿದರು. ಮೊದಲು ಎದ್ದ ಕೆಲವರು ನಿತ್ಯಕರ್ಮ ಎಂಬಂತೆ ಹೊಳೆ ಬದಿಗೆ ಹೋದರು. ಉಂಡಿದ್ದೆಲ್ಲ ಹೊಟ್ಟೆಯಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿಲ್ಲ ಎಂಬ ಗಂಗಾಧರನ ವೇದಾಂತಕ್ಕೆ ತಮ್ಮದೂ ಒಪ್ಪಿಗೆಯೋ ಎಂಬಂತೆ ತಮ್ಮ ಶೌಚಕರ್ಮವನ್ನು ಹೊಳೆಯಲ್ಲಿಯೇ ತೀರಿಸಿಕೊಳ್ಳುತ್ತ, ಪಕ್ಕದಲ್ಲಿಯೇ ಅದೇ ಹೊಳೆಯ ನೀರನ್ನೇ ಬಾಯಿಗೆ ಹಾಕಿ ಮುಕ್ಕಳಿಸುತ್ತ, ಅವರ ಕ್ರಿಯೆ ಕಂಡು ಅಸಹ್ಯ ಪಡುವ ಮಡಿ ಜನರಿಗೆ ಹರಿಯುವ ನೀರಿಗೆ ಮೈಲಿಗೆ ಇಲ್ಲ ಎಂಬ ಶಾಸ್ತ್ರದ ಮಾತನ್ನು ಹೇಳುತ್ತ, ಇದಕ್ಕಿಂತ ಇನ್ನೂ ಮಹತ್ವದ ಕೆಲಸ ನಮಗೆ ಇನ್ನೇನೋ ಕಾದಿದೆ ಎಂಬಂತೆ ಗಡಬಡಿಸುತ್ತ ತಮ್ಮ ತಮ್ಮ ಗೂಡುಗಳಿಗೆ ಧಾವಿಸತೊಡಗಿದರು. ಕೆಲವರು ಹುಲ್ಲಿನ ಗೊಣಬೆಗಳ ಕಡೆ ನಡೆದು ಹತ್ತಾರು ಕಟ್ಟು ಹುಲ್ಲು ಎತ್ತಿಕೊಂಡು ಕೊಟ್ಟಿಗೆಗೆ ಹೋಗಿ ಲಕ್ಷ್ಮಿಗೆ ಎರಡು, ಗೌರಿಗೆ ಎರಡು, ಹಾಲು ಹಿಂಡುವ ನಾಗಿಗೆ ಮೂರು, ಒಂದೂವರೆ ವರ್ಷದ ಚಂದ್ರಿಗೆ ಒಂದು ಹೀಗೆ ಹುಲ್ಲು ಕಟ್ಟುಗಳನ್ನು ಎಸೆಯುತ್ತ, ಅವುಗಳ ಮೈಯಿಗೂ ತಮ್ಮ ಎದೆಗೂ ಹಣೆಗೂ ಕೈ ತಾಗಿಸುತ್ತ ತಾವು ಮುಂಜಾನೆದ್ದು ಗೋಮಾತೆಗೆ ಸಣ್ಣ ಮಾಡಿದೆವೆಂದು ಹೆಚ್ಚುಗೊಳ್ಳುತ್ತ ಹಾಲು ಹಿಂಡಲು ತಂಬಿಗೆಗೆ ತಡಕಾಡುತ್ತ, ಹಂಚಿನ ಕಾರ್ಖಾನೆಯ ಸಿಳ್ಳು ಹೊಡೆಯುವುದರೊಳಗೇ ಎಲ್ಲ ಬೆಳಗಿನ ಚಾಕರಿ ಮುಗಿಸಿಬಿಡಬೇಕು ಎಂಬ ತವಕದಿಂದ ಸರಪುರ ಪುರುಸೊತ್ತು ಇಲ್ಲದವರಂತೆ ಓಡಾಡತೊಡಗಿದರು. ದೊಡ್ಡನಿಗೆ ಪೇಟೆಯ ಪ್ರಭುಗಳ ಹಿತ್ತಿಲಿಗೆ ತೆಂಗಿನಕಾಯಿ ಕುಯಿಲು ಮಾಡಲು ಹೋಗುವ ಆತುರ. ಶುಕ್ರನಿಗೆ ಶಾನಭಾಗರ ಹಿತ್ತಿಲಿಗೆ ನೀರು ತೊಯ್ಯಲು ಹೋಗಬೇಕು. ಗೌರಿ ಸೆಟ್ಟರ ಗದ್ದೆಗೆ ಕಳೆ ಕೀಳಲು ಹೋಗಬೇಕು. ಹೊನ್ನಾವರ ಬಂದರದ ವಕಾರದಲ್ಲಿ ವೆಂಕ, ಗಣಪು, ಶಂಕ್ರ ಇವರಿಗೆಲ್ಲ ವಿಶೇಷ ಕೆಲಸವಿತ್ತು ಅಂದು. ಅಯ್ಯೋ ಅಯ್ಯೋ ಹೊತ್ತು ಏನು ಕೂತು ಬಿಡುತ್ತದೆಯೆ? ಶಾಲೆಗೆ ಹೋಗುವ ವೈಶಾಲಿ, ಅಮ್ಮನಿಗೆ, ಶಾಲೆಗೆ ಹೊತ್ತಾಯ್ತು. ತಲೆ ಬಾಚಿಕೊಡು ಎಂದು ಗಂಟಬಿದ್ದಳು. ಅವಳ ತಮ್ಮ ಗಜು ಸುಂಬಳ ಸುರಿಯುತ್ತಿದ್ದ ಮುಖವನ್ನು ಇನ್ನೂ ತೊಳೆದಿರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರೆ ಕಿವಿಗೇ ಹಾಕ್ಕೊಳ್ಳುವುದಿಲ್ಲ ಇವ್ರು ಎಂದು ವೈಶಾಲಿ ಅವ್ವ ಗಂಡನ ಮೇಲೆ ಸಿಟ್ಟು ಮಾಡಿದಳು. ಜಗತ್ತಿನ ಸರ್ವ ಕ್ರಿಯೆಗಳೆಲ್ಲ ಇಲ್ಲಿಯೇ ನಡೆಯುತ್ತಿವೆಯೇನೋ ಎಂಬಂತೆ ಎಲ್ಲರೂ ತಮ್ಮ ತಮ್ಮ ನಿತ್ಯವಿಧಿಗಳಲ್ಲಿ ತಲ್ಲೀನರಾಗಿರುವಾಗ ತಮ್ಮ ನೆಲದವ್ವ ಸರಿದಾಡುತ್ತಿರುವ ಗಹನವಾದ ವಿಷಯ ಅವರ ಗಮನಕ್ಕೆ ಎಲ್ಲಿ ಬರಬೇಕು? ತಾವಾಯಿತು ತಮ್ಮ ನೂಲುಂಡೆ ಎಂಬಂತೆ ಪರರ ಉಸಾಬರಿ ಮಾಡದ ಅವರೆಲ್ಲ ಗಂಗಾಧರನ ಗದ್ದಲ ಕೇಳಿದ ಮೇಲೆಯೇ ಅತ್ತ ಕಡೆ ತಮ್ಮ ಲಕ್ಷ್ಯ ಹರಿಬಿಟ್ಟಿದ್ದು. ಅವನು ಒಂದೇ ಸಮನೆ ತನಗೆ ಗೊತ್ತಿದ್ದ ಕೆಲವೇ ಬೈಗುಳವನ್ನು ಹಿಂದೆ ಮುಂದೆ ಮಾಡಿ ತಿರುತಿರುಗಿ ಉಚ್ಚ ಸ್ವರದಲ್ಲಿ ಪಠಿಸುತ್ತಿದ್ದ. ನಾಲ್ಕಾರು ಜನ ಸೇರಿದರು. ಏನು, ಎಂತು ಎಂದು ವಿಚಾರಿಸಿದರು. ರಾತ್ರಿ ಹೊಳೆ ಬದಿಯಲ್ಲಿ ಕಟ್ಟಿದ ದೋಣಿ ಯಾರೋ ಒಯ್ದು ಮತ್ತೆ ತಂದು ಕಟ್ಟಿದ್ದಾರೆ. ಹೀಗಾದರೆ ಹೇಗೆ? ಇವತ್ತು ದೋಣಿ, ನಾಳೆ ಮನೇನೆ ಹೊತ್ತೊಯ್ಯಬಹುದು ಎಂದೆಲ್ಲ ಅಲವತ್ತುಕೊಂಡ. ಆಗಲೇ ಅಲ್ಲಿ ನೆರೆದ ಮಂದಿಯಲ್ಲಿ ಮೊದಲು ರಾಮನಿಗೋ ಇಲ್ಲ ತಿಮ್ಮನಿಗೋ ಅಂತೂ ಅವರಿಬ್ಬರಲ್ಲೇ ಒಬ್ಬನಿಗೆ ತಮ್ಮ ಮಾವಿನಕುರುವ ಒಂದೆರಡು ಮಾರು ಪಶ್ಚಿಮಕ್ಕೆ ಸರಿದದ್ದು ಅನುಭವಕ್ಕೆ ವೇದ್ಯವಾಯಿತು. ತಮ್ಮ ಅನುಮಾನಕ್ಕೆ ಅವರಿಬ್ಬರಲ್ಲಿ ಮೊದಲು ಮಾತಿನ ರೂಪ ಕೊಟ್ಟವನು ತಿಮ್ಮನೇ. ‘ಅಕಾ, ನೋಡ್ರೋ ಅಲ್ಲಿ ತಮ್ಮಾ, ನಮ್ಮ ಕುರುವನೇ ಎರಡು ಮಾರು ಈಚೆಗೆ ಸರ್ದಹಾಗೆ ಕಾಣೂದಿಲ್ವಾ, ನನ್ನ ಕಣ್ಣಳತೆ ಸರಿ ಎನ್ನೂದಾದ್ರೆ ನನ್ನ ಮಾತು ಖರೇ. ಗಂಗಾಧರನ ದೋಣಿ ಯಾರೂ ಒಯ್ದಿಲ್ಲ. ಅಂವ ಎಲ್ಲಿ ಕಟ್ಟಿದ್ನೋ ಅಲ್ಲೇ ಇದೆ. ಕುರುವನೇ ಸ್ವಲ್ಪ ಜರುಗಿದ ಹಾಗೆ ಕಾಣ್ತದೆ’ ಎಂದು ತನ್ನ ಅಭಿಮತ ಹೇಳಿದ. ತಿಮ್ಮ ಹಾಗನ್ನುವುದೇ ತಡ, ಅದುವರೆಗೆ ತನಗೆ ತೋಚಿದ್ದು, ಆದರೆ, ಎಲ್ಲಿ ಬಾಯಿ ಬಿಟ್ಟರೆ ಹುಚ್ಚ ಅಂತಾರೇನೋ ಅಂದು ಸುಮ್ಮನಿದ್ದ ರಾಮ, ‘ಹೌದ್ರೋ, ಬಲ್ಯಾ, ನನ್ಗೂ ತಿಮ್ಮ ಹೇಳಿದ ಹಾಗೇ ಅನ್ಸಿತ್ತು. ಖರೇ ಅಂದ್ರೂ ಕುರುವ ಜರುಗಿದ್ದೇ ಹೌದು’ ಎಂದು ಬಾಯಿಬಿಟ್ಟ. ಒಬ್ಬರ ಮೊಖ ಒಬ್ಬರು ನೋಡಿಕೊಂಡರು. ತಮ್ಮ ತಮ್ಮ ಕಣ್ಣಳತೆಯಲ್ಲಿ ಇವರಿಬ್ಬರು ಅಂದದ್ದು ಹೌದೇ ಎಂದು ಪರೀಕ್ಷಿಸಿ ನೋಡಿದರು. ಎಲ್ಲರಿಗೂ ಅದೇ ಅನುಮಾನ. ಬಾಯಿಬಿಟ್ಟು ಹೌದು ಎಂದು ಒಪ್ಪಿಕೊಳ್ಳುವುದೇ, ಕೇಳಿದವರು ಹುಚ್ಚರೆಂದು ನಗಲಾರರೇ ಎಂಬ ಅಯೋಮಯ ಸ್ಥಿತಿಯಲ್ಲಿರುವಾಗ ಒಬ್ಬನೆಂದ, ‘ಅಲ್ವೋ ಗಂಗಾಧರ, ದಿನಾ ಹೊತ್ತು ಮೂಡೂದ್ರಿಂದ ಹಿಡಿದು ಹೊತ್ತು ಕಂತುವ ತನಕ ಇಲ್ಲೇ ತಾರಿ ದಾಟಿಸುವ ನಿನಗೆ ಈ ವ್ಯತ್ಯಾಸ ಗೊತ್ತಾಗುವುದಿಲ್ವೋ?’ ಎಂದು ನಿರ್ಣಯಿಸುವ ಹೊಣೆಯನ್ನು ಬೇರೆಯವನ ಕುತ್ತಿಗೆಗೆ ಹಾಕಿದ ಸಮಾಧಾನ ಅನುಭವಿಸಿ ಸುಮ್ಮನಾದ. ಈಗ ಎಲ್ಲರೂ ಗಂಗಾಧರ ಏನು ಹೇಳುತ್ತಾನೆ ಎನ್ನುವುದರ ಕಡೆ ಗಮನ ಇಟ್ಟರು. ಗಂಗಾಧರನೂ ಕಣ್ಣರಳಿಸಿ ಆಗ ತಾನೆ ಮೊಟ್ಟಮೊದಲ ಬಾರಿಗೆ ಈ ಜಗತ್ತನ್ನು ನೋಡುತ್ತಿರುವನೋ ಎಂಬಂತೆ ಹುಬ್ಬಿನ ಮೇಲೆ ಅಂಗೈಯನ್ನು ಮಾಡಿನಾಕಾರದಲ್ಲಿ ಇಟ್ಟು ಹೊಳೆಯಾಚೆಯ ದಡವನ್ನು ನೋಡಿದ. ‘ಹೌದ್ರೋ ತಮ್ಮಾ, ನೀವು ಅಂದಿದ್ದು ಖರೇ. ನಮ್ಮ ನೆಲದವ್ವ ಮುನಿದಾಳೆ. ಪಡುದಿಕ್ಕಿಗೆ ಸರ್ಕೊಂಡು ಬಿಟ್ಟಾಳೆ’ ಎಂದ. ಇಷ್ಟು ಹೇಳಿದ ಅಂವ್ನಿಗೆ ಏನಾಯ್ತೋ ಏನೋ ಕಣ್ಣು ಕತ್ತಲೆ ಬಂದಂತೆ ನಿಂತಲ್ಲೇ ಕುಕ್ಕರಿಸಿ ಕಾಲು ನೀಡಿ ಮಗ್ಗುಲಾದ. ಯಾರೋ ಅದೇ ಹೊಳೆಯ ನೀರು ತಂದು ಮೊಖಕ್ಕಿಷ್ಟು ಉಗ್ಗಿದರು. ಬಾಯಿಗಿಷ್ಟು ಹಾಕಿದರು. ಸ್ವಲ್ಪ ಕಣ್ಣು ತೆರೆದ ಅಂದಮೇಲೆ ಅವನ ಹೆಂಡತಿ ನಾಗಿಯನ್ನು ಕರೆಯಲು ಒಬ್ಬರು ಓಡಿದರು. ನಾಗಿ ಬಂದದ್ದೆ ತಡ ಅಲ್ಲಿ ನೆರೆದವರೆಲ್ಲ ಗಂಗಾಧರನನ್ನು ಅವನ ಪಾಡಿಗೆ ಬಿಟ್ಟು ತಮಗೇನೋ ಜಗತ್ತಿಗೆ ಸಾರುವ ಅಮೂಲ್ಯ ಸುದ್ದಿ ಗೊತ್ತಿದೆ ಎಂಬವರಂತೆ ಓಡುತ್ತ, ಬೀಸುಗಾಲು ಹಾಕುತ್ತ ಜಾಗ ಖಾಲಿ ಮಾಡಿದರು. ಕ್ಷಣಾರ್ಧದಲ್ಲಿ ಮಾವಿನಕುರುವದ ಮೂಲೆ ಮೂಲೆಗಳಲ್ಲಿ ನೆಲದವ್ವ ಸರಿದಾಡಿದ ಸುದ್ದಿ ವಿವಿಧ ನಮೂನೆಗಳಲ್ಲಿ ರೆಕ್ಕೆ ಪುಕ್ಕ ಹಚ್ಚಿಕೊಂಡು ಹಾರಾಡತೊಡಗಿತು. ವೈಶಾಲಿಯ ತಲೆ ಬಾಚುತ್ತಿದ್ದ ಅವಳವ್ವ ತಲೆಗೆ ಗಂಟು ಹಾಕದೆ ಹಾಗೇ ಬಿಟ್ಟು ಗಂಡ ಎಲ್ಲಿ ಹೋದ ಎಂದು ಹುಡುಕಲಾರಂಭಿಸಿದಳು. ವೈಶಾಲಿಯ ತಮ್ಮ ಸುರಿದ ಸುಂಬಳ ತಾನೇ ತೆಗೆಯಲು ಹೋಗಿ ಮೊಖಕ್ಕೆಲ್ಲ ಮೆತ್ತಿಕೊಂಡುಬಿಟ್ಟಿದ್ದ. ತುಟಿಯ ಮೇಲೆ ನಾಲಿಗೆ ಎಳೆದುಕೊಂಡು ಸುಂಬಳದ ರುಚಿಯನ್ನೂ ನೋಡಿದ. ಮಂದ ಬಲೆ ಬೀಸುವುದಕ್ಕೆಂದು ಬಲೆ ಎತ್ತಿಕೊಂಡು ದೋಣಿಯ ಕಡೆ ಹೊರಟವನು ಅಲ್ಲಿಯೇ ಬಲೆ ಇಳಿಸಿಬಿಟ್ಟ. ಹಂಚಿನ ಕಾರ್ಖಾನೆಯಲ್ಲಿ ಮೊದಲ ಪಾಳಿಯ ಕೆಲಸಕ್ಕೆ ಶಿಳ್ಳು ಮೊಳಗಲೇ ಇಲ್ಲ. ಕೋಳಿ, ಕೋಗಿಲೆ, ಕಾಗೆ, ಗಿಳಿ ಗೊರವಂಕಗಳು ಕೂಗಿದ್ದು, ನಾಯಿಗಳು ಬೊಗಳಿದ್ದು ಯಾರ ಗಮನಕ್ಕೂ ಬರಲೇ ಇಲ್ಲ. ಕೊಟ್ಟಿಗೆಯಲ್ಲಿ ದನ ಕರುಗಳ ದಾಬದ ಕಣ್ಣಿ ಕಳಚಿದವರು ಯಾರೂ ಇಲ್ಲ. ಸರ್ವ ವ್ಯಾಪಾರಗಳೂ ನಿನ್ನೆಯಂತೆ ಇಂದೂ ಜರುಗುತ್ತಿದ್ದರೂ ಅದು ಹಾಗೆ ಆಗುತ್ತಿದೆ ಎಂದು ನಂಬಲು ಕುರುವದವರೊಬ್ಬರೂ ಸಿದ್ಧರಿರಲಿಲ್ಲ. ಇದೇನು ಹಿಕ್ಮತ್ತಿನ ಮಾತೆ? ಸಾಧ್ಯವಿಲ್ಲ. ನಂಬದ ಶಿವಾಯ್‌ ಬೇರೆ ದಾರಿಯೇ ಇಲ್ಲವೇನೋ ಅಂದುಕೊಂಡು ಪ್ರತಿಯೊಬ್ಬರೂ ತಾವು ಹುಟ್ಟಿ ಬೆಳೆದ ಹಾಗೂ ಇದೇ ಮಣ್ಣಲ್ಲಿಯೇ ಮಣ್ಣಾಗಿ ಹೋಗುತ್ತೇವೆ ಅಂದುಕೊಂಡಿದ್ದ ಕುರುವದ ಬಗ್ಗೆ ಚಿಂತಿಸತೊಡಗಿದರು. ಮುಳುಗಿದರೂ ಸೈ ಇಲ್ಲಿಯೇ ಇರುತ್ತೇವೆ ಎಂಬುದು ಕೆಲವರ ಹುಂಬಗುತ್ತಿಗೆಯ ಮಾತಾದರೆ, ಕೆಲವರು ತಮ್ಮ ಕಾಲವಂತೂ ಮುಗೀತಾ ಬಂತು. ಇನ್ನು ನಮ್ಮ ಮಕ್ಕಳು ಮೊಮ್ಮಕ್ಕಳ ಕತಿ ಏನು ಎಂದು ಕಳ್ಳು ಬಳ್ಳಿಯ ಚಿಂತೆ ಮಾಡಿದರು. ಕುರುವದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಅಘಟಿತ ಘಟನೆಯೊಂದು ಅಂದು ನಡೆಯಿತು. ಮಾವಿನಕುರುವದ ಹಬ್ಬದಲ್ಲೂ ಹಾಗಾಗಿರಲಿಲ್ಲ. ನವರಾತ್ರಿಯಲ್ಲಿ ಅಮ್ಮನ ದೇವಸ್ಥಾನದ ಉತ್ಸವಗಳ ಸಂದರ್ಭದಲ್ಲೂ ಹಾಗಾಗಿರಲಿಲ್ಲ. ಯಾರೂ ಡಂಗುರ ಸಾರಿರಲಿಲ್ಲ. ಬನ್ನಿ ಎಂದು ಹೇಳಿ ಕಳುಹಿಸಿರಲಿಲ್ಲ. ಆದರೂ ಎಲ್ಲರೂ ಬಂದಿದ್ದರು. ಕುರುವಕಾರರೆಲ್ಲ ಹೊನ್ನೆಮರದ ಗದ್ದೆ ಬಯಲಿನಲ್ಲಿ ಬೆಳಗಿನ ಹತ್ತು ಗಂಟೆ ಸುಮಾರಿಗೆ ಜಮಾವಣೆಯಾಗಿದ್ದರು. ಮನೆಯಲ್ಲಿ ಪಿಳ್ಳೆಗಳೂ ಉಳಿದಿರಲಿಲ್ಲ. ಯಾರೋ ಒಬ್ಬರು ಎದ್ದು ನಿಂತು ಕುರುವ ಪಡುದಿಕ್ಕಿಗ ಸರಿದಿರುವ ಬಗ್ಗೆ ವಿವರಿಸಿದರು. ಇದು ಒಬ್ಬರಿಗೆ ಬಂದ ಕಷ್ಟವಲ್ಲ. ಕುರುವಕಾರರೆಲ್ಲ ಸೇರಿ ಬಗೆಹರಿಸುವಂಥದ್ದು. ಪರಿಹಾರವಾಗಿ ಯಾರಿಗೆ ಏನು ತೋಚುತ್ತದೋ ಅದನ್ನು ಹೇಳಬಹುದು ಎಂದು ನುಡಿದರು. ಮಳೆಯಿಲ್ಲ, ಗಾಳಿಯಿಲ್ಲ, ನೆಗಸೂ ಇಲ್ಲ, ಕುರುವ ಹೇಗೆ ಸರಿಯಿತು? ಎಂಬ ಪ್ರಶ್ನೆ ಎತ್ತಿ ಕುರುವದ ಮಕ್ಕಳಿಗೆ ಅಳಿಗಾಲ ಬಂದಿದೆ ಎಂದು ಒಬ್ಬರು ಹೇಳಿದರು.ಅಮ್ಮನವರಿಗೆ ನಡೆದುಕೊಳ್ಳುವಲ್ಲಿ ಹೆಚ್ಚು ಕಡಿಮೆ ಆಗಿದೆಯೆ? ಅವಾರಿ ಸರಿಯಾಗಲಿಲ್ಲವೆ?’ ಎಂದು ಇನ್ನೊಬ್ಬರು ಅನುಮಾನ ವ್ಯಕ್ತಪಡಿಸಿದರು. ಕಾಲು ಬಂದವರಂತೆ ಸರಿಯುತ್ತಿರುವ ಕುರುವವನ್ನು ತಡೆದು ನಿಲ್ಲಿಸುವ ಶಕ್ತಿ ಯಾವುದು? ಎಂದು ತಮಗೇ ತಾವು ಕೇಳಿಕೊಂಡವರಂತೆ ಒಬ್ಬರು ಹೇಳಿದರು. ಪ್ರತಿಯೊಬ್ಬರು ಮಾತನಾಡುವಾಗಲೂ ಉಳಿದವರು ತಮಗೆ ಅನುಕೂಲವಾಗುವಂಥದ್ದು ಏನಾದರೂ ಹೇಳುತ್ತಾರೆಯೇ ಎಂಬ ಕುತೂಹಲದಿಂದ ಕಿವಿಯಗಲಿಸಿ ಬಾಯಿ ಮುಚ್ಚಿ ಕುಳಿತಿದ್ದರು.
ಹೊತ್ತು ನೆತ್ತಿಗೆ ಬರುತ್ತಿದ್ದಂತೆ ಸಭೆಯಲ್ಲಿ ‘ಮಾವಿನಕುರುವಕಾರರ ಹಿತರಕ್ಷಣ ಸಮಿತಿ’ ಎಂಬ ಸಮಿತಿಯನ್ನು ರಚಿಸಿ ಅದರ ಮೂಲಕ ಸರ್ಕಾರಿ ಮಟ್ಟದಲ್ಲಿ ತಮ್ಮ ರಕ್ಷಣೆಗೆ ಪ್ರಯತ್ನಿಸುವುದು ಎಂಬ ತೀರ್ಮಾನಕ್ಕೆ ಬಂದರು. ಕುರುವದ ಪ್ರತಿಯೊಂದು ಮನೆಯವರೂ ಈ ಸಮಿತಿಯ ಸದಸ್ಯರಾದರು. ಹಿಂದೆಲ್ಲ ವಿವಿಧ ಸಂದರ್ಭಗಳಲ್ಲಿ ಸಮಿತಿ, ಸಂಘಗಳನ್ನು ಮಾಡುವಾಗ ಕಂಡುಬರುತ್ತಿದ್ದ ಗುಂಪುಗಾರಿಕೆ, ಒಡಕು ಮಾತುಗಳು ಈ ಸಂದರ್ಭದಲ್ಲಿ ಕೇಳಿ ಬರಲಿಲ್ಲ.

ಮಾವಿನಕುರುವ ಸರಿಯತೊಡಗಿದ್ದು ಬರಿ ಮಾವಿನಕುರುವದವರಿಗಷ್ಟೇ ನೆಮ್ಮದಿ ಕೆಡಿಸಿದ ಸುದ್ದಿಯಾಗಿರಲಿಲ್ಲ. ಹೊನ್ನಾವರ ಪೇಟೆಯಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಬಂದರದ ವಕಾರಗಳಲ್ಲಿ ವ್ಯಾಪಾರ ಅವತ್ತು ಮಂದಿ. ಖರೀದಿಗೆ ಬಂದವರಲ್ಲೂ ಕೊಳ್ಳುವ ಉತ್ಸಾಹ ಇರಲಿಲ್ಲ. ಮಾರುವವರಿಗೂ ಕೊಡುವ ಉತ್ಸಾಹ ಇರಲಿಲ್ಲ. ಇದು ಹೀಗೇ ಆದರೆ ಕುರುವ ಎಲ್ಲಿಗೆ ಬಂದು ಮಟ್ಟಬಹುದು ಎಂದು ಅವರು ತಲೆಕೆಡಿಸಿಕೊಂಡರು. ಶಿಕಾರ ಪ್ರಭುಗಳು, ಬೊಂಡಗಾಯಿಯವರು, ಹೆಗಡೆಯವರು, ಬಾಳೇರಿಯವರು, ನಾಯಕರು, ಕಾಮತರು ಸಂಜೆ ಹೊತ್ತು ಕಂತುವ ಹೊತ್ತಿಗೆ ಬಂದರದಲ್ಲಿ ಅಡ್ಡಾಡುತ್ತ ಇದೇ ವಿಷಯ ಚರ್ಚಿಸಿದರು.
ಮಾವಿನಕುರುವ ಸರಿಯುತ್ತ ಸರಿಯುತ್ತ ಇಲ್ಲಿಗೆ ಬಂದು ಕೂಡಿದರೆ ಮುಂದಿನ ಪರಿಣಾಮ ಏನಾಗಬಹುದು ಎಂಬುದು ಎಲ್ಲರ ಮುಂದಿನ ಅವ್ವಲ್‌ ಪ್ರಶ್ನೆಯಾಗಿತ್ತು. ಪಡುದಿಕ್ಕಿಗೆ ಸರಿಯುತ್ತಿರುವ ಸುದ್ದಿ ನಿಜವಿರಲೇಬೇಕು. ಕುರುವ ಸರಿದಾಡುವ ಸಂಗತಿ ಹಿಂದೆಂದೂ ಇಲ್ಲದ್ದು. ತಲೆ ತಲಾಂತರದಿಂದ ಬೇರಿಳಿದ ಮರದಂತೆ, ಗೂಟ ಬಡಿದು ಕಟ್ಟಿದ ಕೂರ್ಮನಂತೆ ಇದ್ದಲ್ಲೇ ಇದ್ದ ಅದಕ್ಕೆ ಇಂದ್ಹೇಗೆ ಕಾಲ ಬಂತು? ಈ ಮಾತು ಪೊಕ್ಕಿರಲಾರದೆ? ಎಂದು ವಿಚಾರವಿನಿಮಯ ಮಾಡಿದರು.
ಖಂಡಗಳೇ ಹಿಂದೆ ಚಲಿಸಿದ್ದವೆಂತೆ. ಇಂದು ಈ ಕೂರ್ವೆ ಚಲಿಸುವುದೊಂದು ದೊಡ್ಡ ಮಾತೆ? ಐನ ವಿಷಯ ಹೇಳಬೇಕು ಎಂದರೆ ವಿಷ್ಣುವಿನ ಅವತಾರಗಳೆಲ್ಲ ಪೃಥ್ವಿಯ ವಿಕಾಸ ಕ್ರಿಯೆಯನ್ನು ಹೇಳುವುದೇ ಆಗಿದೆಯಂತೆ. ಅಂತಿರುವಾಗ ಇದನ್ನು ಸಾರಾಸಗಟು ತೆಗೆದು ಹಾಕುವ ಮಾತೇನಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇವತ್ತು ಮಾರುದ್ದ ಚಲಿಸಿದ ಕುರುವ ನಾಳೆ ಇನ್ನೆರಡು ಮಾರು ಇತ್ತ ಚಲಿಸುವುದು. ನಾಳಿದ್ದು ಇನ್ನಷ್ಟು. ಇದನ್ನು ತಡೆಯಲೇ ಬೇಕು. ಇಲ್ಲದಿದ್ದರೆ ನಾವು ಮಂಡ ಮಡಚಿಕೊಂಡು ಘಟ್ಟ ಹತ್ತಬೇಕಾಗುತ್ತದೆ. ನಾಳೆಯೇ ವ್ಯಾಪಾರಸ್ಥರ ಸಭೆಯನ್ನು ಕರೆದು ಏನಾದರೂ ತೀರ್ಮಾನ ತೆಗೆದುಕೊಳ್ಳಲೇ ಬೇಕು ಎಂದು ಅವರು ಮಾತನಾಡಿಕೊಂಡರು.
ವ್ಯಾಪಾರಸ್ಥರ ಆತಂಕಕ್ಕೂ ಕಾರಣ ಇಲ್ಲದೆ ಇರಲಿಲ್ಲ. ಮುಂದೊಂದು ದಿನ ಮಾವಿನಕುರುವ ಸರಿದು ಹೊನ್ನಾವರಕ್ಕೇ ಬಂದು ತಾಗಿದರೆ? ಅದರಲ್ಲೂ ಐನ ವ್ಯಾಪಾರಿ ಕೇಂದ್ರ ಬಂದರಕ್ಕೇ ಬಂದು ವಕ್ಕರಿಸಿದರೆ? ಎಂಬ ವ್ಯಾಪಾರಿ ಕಾಳಜಿ ಅವರದು. ಮಾವಿನಕುರುವ ಬಂದು ಬಂದರಿಗೆ ತಾಗಿದರೆ ಅವರೂ ಪೇಟೆಯ ಜನರೇ ಆಗಿಬಿಡುತ್ತಾರೆ. ಅಲ್ಲಿಯೇ ಬಂದರ ತಲೆ ಎತ್ತಿ ಹಳೆಯ ಬಂದರ ಒಳಗಾಗಿಬಿಡುತ್ತದೆ. ಕುರುವದವರೆಲ್ಲ ವ್ಯಾಪಾರ ಶುರುಮಾಡಿಬಿಡುತ್ತಾರೆ. ತಾವು ಬೆಳೆದ ತರಕಾರಿ, ಚಿಲ್ಲರೆ ಮಾರಾಟ ಅವರೇ ಮಾಡುತ್ತಾರೆ. ತೆಂಗು, ಅಡಕೆ, ಅಕ್ಕಿ, ಬೇಳೆ ವ್ಯಾಪಾರವೆಲ್ಲ ಅವರೇ ಮಾಡತೊಡಗಿದರೆ ಮೊದಲಿನ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು? ಅವರು ಯಾರ ಚಮಡಾ ಸುಲಿಯಬೇಕು? ಘಟ್ಟ ಹತ್ತುವುದೊಂದೇ ಆಗ ಅವರಿಗೆ ಉಳಿಯುವ ದಾರಿ.
ಮಾವಿನಕುರುವ ಹಾಗೆಯೇ ಸರಿಯುತ್ತ ಸರಿಯುತ್ತ ಅಳವೆಯ ಬಾಯಿಗೆ ಸಾಗಿ ಸಮುದ್ರ ಸೇರಬಾರದೆ? ಎಂದು ಒಬ್ಬರ ತಲೆಯಲ್ಲಿ ಬಂತು. ಅಳವಿಯ ತನಕ ಸಾಗಿ ಅಳವೆಯ ಬಾಯಿಗೆ ಅಡ್ಡ ನಿಂತರೆ ಶರಾವತಿ ನದಿ ತನ್ನ ಪಾತ್ರವನ್ನು ಬದಲಿಸಲೇಬೇಕಾಗುತ್ತದೆ. ಹಾಗೆ ಪಾತ್ರ ಬದಲಿಸುವಾಗ ಅದು ಬಂದರದ ಮೇಲೆಯೇ ಹರಿದುಬಿಟ್ಟರೆ ನಮಗೆ ಉಳಿಗಾಲವಿದೆಯೇ. ಜೀವ ಆದ್ರೂ ಬಚಾವು ಆಗುತ್ತದೆಯೆ? ಎಂದು ತಮ್ಮ ಆಲೋಚನೆಗೆ ತಾವೇ ಭಯಪಟ್ಟರು ಅವರು.
ಬಂದರದವರ ಚಿಂತೆ ಇದಾದರೆ ನಡುಪೇಟೆಯ ಜವಳಿ ಸಾಲಿನವರದು ಇನ್ನೊಂದು ರೀತಿಯ ಚಿಂತೆ. ಪೇಟೆಯ ಹೃದಯ ಭಾಗದಲ್ಲಿರುವ ನಾವು ಇನ್ನು ಮಾವಿನಕುರುವ ಬಂದು ತಾಗಿದ ಮೇಲೆ ಒಂದು ಮೂಲೆಗೆ ಸೇರಿಬಿಡುತ್ತೇವೆ. ಹಳ್ಳಿಗಳಿಂದ ಬರುವ ಜನರು ಮೂಲೆಗಳನ್ನು ಹುಡುಕಿಕೊಂಡು ವ್ಯಾಪಾರಕ್ಕೆ ಬರುತ್ತಾರೆಯೆ? ಕಾಳುಕಡಿ ವ್ಯಾಪಾರ ಕಳೆದುಕೊಳ್ಳುವ ಬಂದರದ ವ್ಯಾಪಾರಿಗಳು ಜವಳಿ ವ್ಯಾಪಾರ ಶುರು ಮಾಡಿಬಿಟ್ಟರೆ ಹೇಗೆ? ನಮ್ಮ ಕೈಗೆ ಗರಟೆಯಲ್ಲದೆ ಮತ್ತೇನು? ಇದಕ್ಕೆ ಏನಾದರೂ ಪರಿಹಾರ ಹುಡುಕಬೇಡವೆ ಎಂದು ಮಾತನಾಡಿಕೊಂಡರು. ಸಭೆ ಸೇರಬೇಕೆಂಬ ಬಂದರದ ವ್ಯಾಪಾರಿಗಳ ಕರೆಗೆ ಇವರೂ ಓಗೊಟ್ಟರು.
ಹತ್ತುಮಂದಿಯ ಮಠದ ಆವರಣದಲ್ಲಿ ನಡೆದ ವ್ಯಾಪಾರಿಗಳ ಸಭೆಯಲ್ಲಿ ಒಬ್ಬೊಬ್ಬರು ಒಂದೊಂದು ಮಾತನಾಡಿದರು. ಆದರೆ ಒಬ್ಬರೂ ತಮ್ಮ ಮನಸ್ಸಿನಲ್ಲಿದ್ದ ಅಸಲು ವಿಚಾರವನ್ನು ಬಾಯಿಬಿಟ್ಟು ಹೇಳಲಿಲ್ಲ. ಆದರೆ ಮಾವಿನಕುರುವ ಹೀಗೆ ಒಮ್ಮೆಲೇ ಪೇಟೆಗೆ ಬಂದು ಕೂಡುವುದಕ್ಕೆ ಮಾತ್ರ ಎಲ್ಲರ ವಿರೋಧ ಇತ್ತು. ಆದರೆ ಅದನ್ನು ತಡೆಯುವ ಶಕ್ತಿ ಮಾತ್ರ ಯಾರಿಗೂ ಇರಲಿಲ್ಲ. ಕುರುವಕಾರರಂತೆ ಇವರೂ ಒಂದು ಹೋರಾಟ ಸಮಿತಿಯನ್ನು ರಚಿಸಿಕೊಂಡರು. ‘ಮಾವಿನಕುರುವ ಚಲನೆ ವಿರೋಧಿ ಸಮಿತಿ’ ಎಂದು ಅದಕ್ಕೆ ಹೆಸರನ್ನಿಟ್ಟರು. ಈ ಸಮಿತಿಯ ಸದಸ್ಯರು ಕುರುವದ ಜನರನ್ನು ಸಂಪರ್ಕಿಸಬೇಕು. ಕುರುವದ ಚಲನೆಯನ್ನು ತಡೆಯಲು ಅವರೊಂದಿಗೆ ಸಹಕರಿಸಬೇಕು. ಸರ್ಕಾರದ ಜೊತೆ ಈ ಬಗ್ಗೆ ಚರ್ಚಿಸಬೇಕು ಎಂಬ ನಿರ್ಧಾರಗಳನ್ನು ಕೈಗೊಂಡರು.
ಕುರುವದ ಜನರ ಹಿತರಕ್ಷಣೆಗಾಗಿಯೇ ಈ ಸಮಿತಿ ಇದೆ ಎಂಬ ನಂಬಿಕೆ ಕುರುವಕಾರರಲ್ಲಿ ಹುಟ್ಟುವಂತೆ ಕಾರ್ಯನಿರ್ವಹಿಸಬೇಕೇ ಶಿವಾಯ್‌ ಕುರುವದ ಚಲನೆ ತಡೆಯುವುದರಿಂದ ಪೇಟೆಯ ಜನರಿಗೆ ಲಾಭ ಇದೆ ಎಂಬ ಭಾವನೆ ಅವರಲ್ಲಿ ಹುಟ್ಟದಂತೆ ನಾಜೂಕಾಗಿ ಕಾರ್ಯ ನಿರ್ವಹಿಸಬೇಕು ಎಂಬ ಅಂತರಂಗದ ತಿಳಿವಳಿಕೆಗೆ ಈ ಸಮಿತಿಯ ಸದಸ್ಯರು ಬಂದರು.
ಇತ್ತ ವ್ಯಾಪಾರಸ್ಥರ ಸಭೆ ಇಲ್ಲಿ ಸೇರುತ್ತಿದ್ದಂತೆಯೇ ಅತ್ತ ಪುರಸಭೆಯು ಒಂದು ತುರ್ತು ಸಭೆ ನಡೆಸಿ ಮಾವಿನಕುರುವದ ಚಲನೆಯಿಂದ ಹೊನ್ನಾವರ ಪೇಟೆಯ ಮೇಲೆ ಯಾವ ಪರಿಣಾಮಗಳು ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಸಿತು. ಪೇಟೆಯ ಜನಸಂಖ್ಯೆ ಹೆಚ್ಚುವುದರಿಂದ ಪರಸಭೆ ಹೋಗಿ ನಗರಸಭೆ ಆಗುವ ಸಾಧ್ಯತೆ ಹೆಚ್ಚುತ್ತದೆ. ಸರ್ಕಾರದಿಂದ ಹೆಚ್ಚು ಫಂಡು ಬರುತ್ತದೆ. ನಗರಸಭೆ ಸದಸ್ಯರೆಂದು ಗೌರವ ಹೆಚ್ಚುತ್ತದೆ ಎಂದೆಲ್ಲ ಕೆಲವರು ಮಾತನಾಡಿದರು.
ಆದರೆ ಅನುಭವಿಕರಾದ ದೇವದಾಸ ಡಾಕ್ಟರು ಮಾತ್ರ ಇಲ್ಲದ ಸಮಸ್ಯೆಗಳನ್ನು ಕಂಡರು. ಮಾವಿನಕುರುವವನ್ನು ಹೊನ್ನಾವರಕ್ಕೆ ಸೇರಿಸಿ ನಗರಸಭೆ ಮಾಡುವುದೇನೋ ಸರಿ. ಆದರೆ ಏನೇನೂ ಮೂಲ ಸೌಕರ್ಯ ಇಲ್ಲದ ಆ ಕುರುವದ ಜನರನ್ನು ಸೇರಿಸಿಕೊಂಡು ಎಲ್ಲ ವ್ಯವಸ್ಥೆ ಮಾಡುವುದಕ್ಕೆ ಎಷ್ಟು ಕಾಲ ಹಿಡಿಯುತ್ತದೆ? ಎಷ್ಟು ಹಣ ಹಿಡಿಯುತ್ತದೆ? ದೂರದಿಂದಲೇ ಪೇಟೆಯನ್ನು ಕಂಡು ಹೋಗುತ್ತಿದ್ದ ಮಂದಿ ಸ್ವತಃ ಪೇಟೆಯವರೇ ಆಗಿಬಿಟ್ಟರೆ ಅವರ ಬದುಕಿನ ರೀತಿ ರಿವಾಜುಗಳು ಬದಲಾಗಲು ಎಷ್ಟು ಕಾಲ ಬೇಕಾಗಬಹುದು? ಪಂಚಾಯಿತಿಗೆ ತೆರಿಗೆ ಕೊಡಲು ಸತಾಯಿಸುತ್ತಿದ್ದ ಮಂದಿ ನಗರಸಭೆಯ ಮಟ್ಟದ ಕರಭಾರವನ್ನು ತಡೆದುಕೊಳ್ಳಬಲ್ಲರೆ? ಎಂದು ಮುಂತಾಗಿ ಹಲವು ಪ್ರಶ್ನೆಗಳ ಗುಡ್ಡವನ್ನು ಮೆಂಬರುಗಳ ಮುಂದೆ ಬೀಳಿಸಿದರು.
ದೇವದಾಸರ ಮಾತುಗಳನ್ನು ಕೇಳಿಸಿಕೊಂಡ ಮೇಲೆ ನಗರಸಭೆಯ ಸದಸ್ಯರಾಗುವ ಹಂಬಲಹೊತ್ತ ಕೆಲವು ಹೊಂತ್ಕಾರಿ ಸದಸ್ಯರ ಉಮೇದು ಇಳಿದು ಹೋಯಿತು. ಅದೇ ಸಭೆಯಲ್ಲಿಯೇ ತುರ್ತು ಗೊತ್ತುವಳಿಯೊಂದನ್ನು ಅಂಗೀಕರಿಸಿ ಮಾವಿನಕುರುವವನ್ನು ಚಲಿಸುವುದಕ್ಕೆ ಯಾವುದೇ ಕಾರಣಕ್ಕೂ ಬಿಡಬಾರದು. ಶತ ಶತಮಾನಗಳಿಂದ ಅದು ಎಲ್ಲಿದೆಯೋ ಹೇಗಿದೆಯೋ ಹಾಗೆಯೇ ಇರುವಂತೆ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಅಂಚೆಗೆ ಹಾಕಿಸಿಬಿಟ್ಟರು. ಅಗತ್ಯವಾದರೆ ಪುರಸಭೆಯ ಹಿರಿಯ ಸದಸ್ಯರ ನಿಯೋಗವೊಂದು ರಾಜಧಾನಿಗೆ ತೆರಳಿ ಮುಖ್ಯಮಂತ್ರಿಯವರನ್ನು ಕಂಡು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಬೇಕು ಎಂದೂ ತೀರ್ಮಾನಿಸಲಾಯಿತು.
ಶರಾವತಿ ನದಿಯಲ್ಲಿಯ ಕುರುವ ಒಂದು ಸರಿಯತ್ತ ಹೊನ್ನಾವರಕ್ಕೆ ಅಭಿಮುಖವಾಗಿ ಬರುತ್ತಿದೆ ಎಂಬ ಸುದ್ದಿ ದೇಶದ ಎಲ್ಲೆಡೆಗೂ ತಲುಪಿ ಎಲ್ಲೆಲ್ಲಿಂದಲೋ ಪತ್ರಿಕೆಯವರು, ಆಕಾಶವಾಣಿಯವರು, ದೂರದರ್ಶನದವರು ಧಾವಿಸಿ ಬಂದರು. ಹತ್ತು ಹಲವು ಕೋನಗಳಿಂದ ಈ ವಿಷಯವನ್ನು ವಿಶ್ಲೇಷಿಸಿ ಸುದ್ದಿಗಳು ಬಂದವು. ಯಾವ ಪತ್ರಿಕೆಯಲ್ಲಿ ಹೆಚ್ಚು ಕವರೇಜ್‌ ಬಂತು ಎಂದು ಕೆಲವು ಪತ್ರಿಕೆಗಳ ಸಂಪಾದಕರು ಪತ್ರಿಕೆಗಳನ್ನು ಟೇಬಲ್‌ ಮೇಲೆ ಹರವಿಕೊಂಡು ಹೋಲಿಸಿ ನೋಡತೊಡಗಿದರು. ಮಾವಿನಕುರುವದ ಕೆಲವರು ಟಿ.ವಿ.ಗಳಲ್ಲಿ ಕಾಣಿಸಿಕೊಂಡರು. ಟಿ.ವಿ. ಸಂದರ್ಶನದಲ್ಲಿ ತಮ್ಮ ನೆಲದವ್ವ ಮುನಿದಾಳೆ ಎಂದು ಕೆಲವರು ಅತ್ತರು. ಸರಕಾರ ನಮ್ಮ ಕಡೆ ಗಮನ ಕೊಟ್ಟಿಲ್ಲ ಎಂದು ಕೆಲವರು ದೂರಿದರು. ಕುರುವದ ಪಂಚಾಯಿತ ಅಧ್ಯಕ್ಷರು ಅತ್ತ ಸರ್ಕಾರವನ್ನೂ ತೆಗಳದೆ, ಇತ್ತ ಪರಿಸ್ಥಿತಿಯ ಗಾಂಭೀರ್ಯವನ್ನೂ ಅಲ್ಲಗಳೆಯದೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಹಾಗೆ ಮಾತನಾಡಿದರು.
ಕೆಲವು ಪತ್ರಿಕೆಗಳು ಹಿರಿಯ ವಿಜ್ಞಾನಿಗಳ ಸಂದರ್ಶನವನ್ನು ಪ್ರಕಟಿಸಿ ಕುರುವವೊಂದು ಹೀಗೆ ಸರಿದಾಡಲು ಕಾರಣವಾದ ವೈಜ್ಞಾನಿಕ ಅಂಶಗಳ ಬಗ್ಗೆ, ಪ್ರಾಕೃತಿಕ ಸನ್ನಿವೇಶಗಳ ಬಗ್ಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದವು. ಕೆಲವರು ಯಾವ್ಯಾವುದೋ ಸಿದ್ಧಾಂತಗಳನ್ನು ಹೇಳಿ ಕೊನೆಗೆ ಏನೂ ಹೇಳಲಾಗದೆ ಒದ್ದಾಡಿದರು. ಈ ಅವಧಿಯಲ್ಲಿ ಹೊನ್ನಾವರದಲ್ಲಿ ಮತ್ತು ಗೇರುಸೊಪ್ಪೆ ಸೀಮೆಯ ಹೊಳೆಸಾಲಿನಲ್ಲಿ ಪತ್ರಿಕೆ ಓದುವವರ ಮತ್ತು ಟಿ.ವಿ. ನೋಡುವವರ ಸಂಖ್ಯೆ ಮಾತ್ರ ಹೆಚ್ಚಾಯಿತು.

ಮಾವಿನಕುರುವ ಸರಿಯುವುದು ನಿಲ್ಲಲಿಲ್ಲ. ದಿನಕ್ಕೆ ಒಂದು ಮಾರು, ಎರಡು ಮಾರಿನಂತೆ ಅದು ಪಡು ದಿಕ್ಕಿಗೆ ಸರಿಯುತ್ತಲೇ ಇತ್ತು. ಕುರುವವನ್ನು ಖಾಲಿ ಮಾಬೇಕು ಎಂಬ ಸಲಹೆಯನ್ನು ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ನೀಡಿದರು. ನಿರ್ವಸಿತರಾಗುವ ಎಲ್ಲರಿಗೆ ಪಕ್ಕದ ಬೇರೊಳ್ಳಿ, ಮುಗ್ವೆ, ಹಡಿನಬಾಳ, ನಗರೆಗಳಲ್ಲಿ ಉಳಿಯಲು ನೆಲ ನೀಡಬೇಕೆಂದೂ ಅವರು ಹೇಳಿದರು.
ತಮ್ಮ ಉಪಕಾರಕ್ಕೆ ಎಂಬಂತೆ ಮಾಡಿದ ಈ ಸಲಹೆ ಸ್ವತಃ ಕುರುವಕಾರರಿಗೇ ಇಷ್ಟವಾಗಲಿಲ್ಲ. ಅಜ್ಜ ಮುತ್ತಜ್ಜಂದಿರ ಕಾಲದಿಂದ ಉಳಿದು ಬಂದ, ತಮ್ಮ ಅಳು, ನಗು, ಚೇಷ್ಟೆ, ಹಾಸ್ಯ, ಅಪಹಾಸ್ಯಗಳಿಗೆಲ್ಲ ಒಂದೊಂದು ಪುರಾವೆಯನ್ನು ಒದಗಿಸುವ ಸಾಕ್ಷಿಗಲ್ಲುಗಳನ್ನು ಹೊಂದಿದ್ದ ಈ ಕುರುವವನ್ನು ಬಿಡುವುದೆ? ಅಂಥ ಹೆಡ್ಡತನ ಜೀವ ಇರುವ ವರೆಗೆ ಸಾಧ್ಯವೆ? ದೂರದ ರತ್ನಾಗಿರಿಯಲ್ಲೋ, ಗೋವೆಯಲ್ಲೋ ಸತ್ತ ಕುರುವದ ಮಕ್ಕಳನ್ನು ಇದೇ ಇಲ್ಲಿಗೇ ತಂದು ಸುಟ್ಟಿದ್ದಲ್ಲವೆ? ಥತ್ತೇರಿಕೆ, ಕುರುವ ಬಿಡುವ ಸಲಹೆ ಕೊಟ್ಟವನ ಮನೆ ಹಾಳಾಗ ಎಂದು ಶಪಿಸಿದರು.
ಗೇಣು ನೆಲಕ್ಕಾಗಿ ಇಲ್ಲಿ ಎಷ್ಟು ಬಡಿದಾಟವಾಗಿಲ್ಲ? ಎಷ್ಟು ಹೆಣ ಬಿದ್ದಿಲ್ಲ? ನಾಲ್ಕೋ ಐದೋ ಮಂದಿ ಇನ್ನೂ ಕಾರವಾರದ ಜೈಲಿನಲ್ಲಿ ಕೊಳೆಯುತ್ತಿಲ್ಲವೆ? ವರ್ಷಕ್ಕೆ ನಾಲ್ಕು ಪೂಜೆ ಪಡೆದುಕೊಳ್ಳುವ ಕುರುವದ ದುರ್ಗಮ್ಮ, ಜಟುಗಮ್ಮ, ಹುಲಿದೇವರೆಲ್ಲ ಕೈ ಬಿಟ್ಟು ಬಿಡುತ್ತಾರೆಯೆ? ಬೆಳಿಗ್ಗೆ ಬಂದ ನೆಂಟರು ಸಂಜೆ ಹೋಗುವಂತೆ ಕುರುವವನ್ನು ಸಾರಾಸಗಟಾಗಿ ಬಿಟ್ಟು ಹೋಗಿ ಎಂದರೆ ಎದ್ದು ಹೋಗುವುದು ಕುಶಾಲದ ಮಾತೆ? ಇಂಥ ಸಲಹೆ ನೀಡುವವರಿಗೆ ಅಕಲು ಸರಿಯಾಗಿ ಕೆಲಸ ಮಾಡುತ್ತದೆಯೆ? ಇದೆಲ್ಲ ಆಗುವ ಹೋಗುವ ಮಾತಲ್ಲ. ಹೇಗೆ ಇಲ್ಲಿ ಹುಟ್ಟಿದೆವೋ ಹಾಗೆ ಬದುಕುವುದೂ ಇಲ್ಲಿಯೇ ಸಾಯುವುದೂ ಇಲ್ಲಿಯೇ. ಕುರುವ ಸರಿದು ಸರಿದು ಸಮುದ್ರ ಸೇರಿ ಬಿಡುವುದೆ? ಹಾಗೆ ಆಗುವುದಿದ್ದರೆ ಅದನ್ನೂ ನೋಡಿ ಬಿಡುವ ಎಂಬ ಉಳಿದವರಿಗೆ ಮೊಂಡು ಎಂಬಂತೆ ಕಾಣುವ ಆದರೆ ಅವರ ಬದುಕಿಗೆ ಮಾತ್ರ ಅಳಿವು ಉಳಿವಿನ ಹರಕತ್ತಿನ ಪ್ರಶ್ನೆಗೆ ಉತ್ತರ ಎನ್ನಬಹುದಾದ ನಿರ್ಧಾರವನ್ನು ಕುರುವಕಾರರು ತೆಗೆದುಕೊಂಡರು.
ಕುರುವ ಸರಿದಾಡತೊಡಗಿದ ಮೇಲೆ ಈ ಊರಿನ ಗಂಡುಗಳಿಗೆ ಹೆಣ್ಣು ಕೊಡಲು ನಿರ್ಧರಿಸಿ ಮಾತುಕತೆ ನಡೆಸಿದವರು ಹಿಂದೆ ಹೆಜ್ಜೆ ಇಟ್ಟರು. ಕುರುವದ ಹೆಣ್ಣು ಒಪ್ಪಿಕೊಂಡ ಗಂಡುಗಳು ಮದುವೆಗೆ ಮಿಜಿಮಿಜಿ ಮಾಡಿದರು. ಒಟ್ಟಾರೆ ಸಮಸ್ಯೆ ಒಂದು ನಿಲುಗಡೆಗೆ ಬರುವವರೆಗೆ ಅಲ್ಲಿ ಮಂಗಲಕಾರ್ಯಗಳೇನೂ ಆಗುವುದಿಲ್ಲವೋ ಎಂಬಂಥ ಸ್ಥಿತಿ ನಿರ್ಮಾಣವಾಯಿತು. ಹಾಗೊಂದುವೇಳೆ ಸಂಬಂಧ ಬೆಳೆಸಲು ಒಪ್ಪಿಕೊಂಡಿದ್ದರೂ ವಾದ್ಯ ಮೊಳಗಿಸಲು ಯಾರಿಗೂ ಉಮೇದು ಇರಲಿಲ್ಲ.
ಕುರುವಕಾರರಿಗೆ ತಮ್ಮ ಮಾವಿನಕುರುವದ ಬಗ್ಗೆ ಹರಿದುಕೊಳ್ಳಲಾಗದಂಥ ಭಾವನೆ ಬೆಳೆದಿದ್ದರೂ ಅದರ ಕುರುವತನದಿಂದಲೇ ಕೆಲವು ಸಮಸ್ಯೆಗಳು ಹುಟ್ಟಿದ್ದವು. ಸರಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳು ಅಲ್ಲಿಗೆ ತಲುಪುವುದು ತೀರ ತಡವಾಗಿಬಿಡುತ್ತಿತ್ತು. ಸುತ್ತಲಿನ ಹೊಸಾಡ, ಬೇರೊಳ್ಳಿ, ಕೂಡ್ಲ, ನಗರೆಗಳಿಗ ಹೋಲಿಸಿದರೆ ಅದಿನ್ನೂ ಎರಡು ದಶಕ ಹಿಂದಿದ್ದ ಹಾಗೇ ಆಗಿತ್ತು. ಕುರುವಕ್ಕೆ ಹೋಗುವುದು ಎಂದರೆ ಸರಕಾರಿ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದರು. ಯಾವುದರಲ್ಲೇ ಆಗಲಿ ಪರಿಸ್ಥಿತಿ ಮಿಗಹರಿಯುವವರೆಗೆ ಯಾರ ಗಮನವೂ ಹರಿಯುತ್ತಿರಲಿಲ್ಲ. ಇರುವ ಒಂದು ಶಾಲೆಗೆ ನಾಲ್ಕು ಮಾಸ್ತರರು ಇದ್ದರೂ ಸರತಿಯ ಮೇಲೆ ಒಬ್ಬರೇ ಏಳೂ ವರ್ಗಗಳನ್ನು ನಿಭಾಯಿಸುವ ಪವಾಡವನ್ನು ಅವರು ಮೆರೆಯುತ್ತಿದ್ದರು. ತಾವೆಲ್ಲಿಯಾದರೂ ಇದನ್ನು ಪ್ರಶ್ನಿಸಿದರೆ ಒಬ್ಬರೂ ಇಲ್ಲದಂತಾಗಿಬಿಡಬಹುದು ಎಂಬ ಅಂಜಿಕೆಯಿಂದ ಕುವಕಾರರ್ಯಾರೂ ಮಾತನಾಡುತ್ತಿರಲಿಲ್ಲ ವಾರದಲ್ಲೆಲ್ಲೋ ಒಂದು ಬಾರಿ ಮಾತ್ರ ಅಂಚೆ ಬರುತ್ತಿತ್ತು. ಕುರುವಕ್ಕೆ ಕರೆಂಟು ಬಂದದ್ದು ಒಂದು ಯಮ ಸಾಹಸವೇ ಆಗಿತ್ತು. ಕರೆಂಟು ಹೋದರೆ ರಿಪೇರಿ ಮಾಡುವವನನ್ನು ಹುಡುಕಿ ತರಲು ನಾಲ್ಕೈದು ದಿನಗಳೇ ಹೋಗಿಬಿಡುತ್ತಿದ್ದವು. ಕುರುವ ಎನ್ನುವ ಕಾರಣಕ್ಕೇ ಲೈನ್‌ಮನ್‌ ಅಲ್ಲಿಗೆ ಬರಲು ಹಿಂದೆಮುಂದೆ ನೋಡುತ್ತಿದ್ದ. ಯಾವ ದಿಕ್ಕಿಗೆ ಹೋಗಬೇಕೆಂದರೂ ಹೊಳೆಯನ್ನು ಪಾರು ಮಾಡದೆ ಗತ್ಯಂತರವೇ ಇರಲಿಲ್ಲ. ಹೊಳೆಯೇ ಅವರ ಹೆದ್ದಾರಿ. ಹೀಗಾಗಿ ಹೆಚ್ಚು ಕಡಿಮೆ ಕುರುವದ ಪ್ರತಿ ನಾಲ್ಕು ಮನೆಗೆ ಒಂದಾದರೂ ದೋಣಿ ಇದ್ದೇ ಇತ್ತು. ಹೊರ ಜಗತ್ತಿಗೆ ಹೋಗಬೇಕೆಂದರೆ ದೋಣಿ ಹತ್ತಲೆ ಬೇಕಿತ್ತು. ಹೀಗಾಗಿ ಹೆಂಗಸರು, ಮಕ್ಕಳೂ ಎಡಗೈಯಲ್ಲೂ ದೋಣಿ ನಡೆಸಬಲ್ಲಷ್ಟು ಹಿಕ್ಮತಿಗರಾಗಿದ್ದರು. ಮಳೆಯೋ ಗಾಳಿಯೋ ನೆಗಸೋ ಯಾವುದಕ್ಕೂ ಕೇರ್‌ ಮಾಡುವ ಜನ ಆಗಿರಲಿಲ್ಲ ಅವರು. ಹೀಗಾಗಿ ಒಂದು ರೀತಿಯ ಧಾರ್ಷ್ಟ್ಯ ಅವರಲ್ಲಿ ಹುಟ್ಟಿನಿಂದಲೇ ಬಂದಿತ್ತು. ಹೊನ್ನಾವರದ ಪೇಟೆ ಜನ ಇದನ್ನೇ ಅಮಸಾಣಿ ಅಂತಿದ್ದರು. ಅವರು ಹಾಗಂದುಕೊಂಡರೆ ಅದರಲ್ಲಿ ಇವರದೇನೂ ತಪ್ಪಿಲ್ಲ ಬಿಡಿ.
ಹೊನ್ನಾವರದ ಜನ ಕುರುವಕಾರರಿಗೆ ಅಮಸಾಣಿ ಅಧಿಕ ಎಂದು ಹಣೆಪಟ್ಟಿ ಹಚ್ಚಿದ್ದರೂ ತಮ್ಮ ಕೂಲಿ ಕಸರೆಗಳಿಗೆಲ್ಲ ಅವರನ್ನೇ ಅವಲಂಬಿಸಿದ್ದರು. ಲಾರಿಗಳಿಂದ ಕ್ವಿಂಟಲ್‌ ಚೀಲಗಳನ್ನೇ ತಲೆಗೇರಿಸಿ ಗೋಡವನಿಗೆ ತಂದು ಎಸೆಯುವ ಕುರುವದವರ ತಾಕತ್ತು ಗಂಜಿ ಸುರಿಯುವ ಪೇಟೆ ಜನರಿಗೆ ಎಲ್ಲಿಂದ ಬರಬೇಕು ಹೇಳಿ. ಚರಂಡಿ ಬಗಿಯುವುದು, ಬಾವಿ ತೋಡುವುದು, ಗುಡ್ಡ ಕಡಿದು ನೆಲಸಮ ಮಾಡುವುದು ಇವೆಲ್ಲ ಕುರುವದವರಿಗೇ ಮೀಸಲಿಟ್ಟಂತೆ ಇತ್ತು. ಕುರುವದ ಕೇಶವನೇ ಪೇಟೆಯ ಪ್ರಭುಗಳ, ಕಾಮತರ ಹಿತ್ತಿಲದಲ್ಲಿಯ ತೆಂಗಿನ ಮರದ ಕಾಯಿ ಇಳಿಸಬೇಕಿತ್ತು. ಕುರುವದಿಂದಲೇ ಪೇಟೆಯವರಿಗೆ ಹಾಲು ಬರಬೇಕಿತ್ತು. ಕುರುವದ ಬೇಲೆಯ ಮೇಲಿನ ಜಡ್ಡು ಮೆಂದು ಕೊಬ್ಬಿದ ಎಮ್ಮೆಗಳು ಹಿಂಡುವ ಹಾಲಿಗೆ ಬೆಣ್ಣೆ ಹೆಚ್ಚು ಎಂಬ ನಂಬಿಕೆ ಪೇಟೆಯ ಹೆಂಗಸರದ್ದು. ಹೆಂಗಸರೆಂದ ಮಾತನ್ನು ಮೀರುವವರಲ್ಲ ಪೇಟೆಯ ಗಂಡಸರು. ಖರ್ಚು ಮಾಡುವುದರಲ್ಲಿ ಹೇಗೆ ಚೌಕಾಸಿಯೋ ಸಿಟ್ಟು ಸೆಡವು ಪ್ರೀತಿ ಪ್ರೇಮ ತೋರುವುದರಲ್ಲೂ ಅವರು ಕಂಜೂಸು. ಕುರುವದ ಕೂಲಿಗಳಿಗೆ ಕೂಲಿ ಕೊಡಬೇಕಿದ್ದರೆ ಹೆಂಗಸರಿಂದಲೇ ಇಸಿದು ಕೊಡುವವರು ಅವರು.
ತೆಂಗಿನಕಾಯಿ ಉದುರಿಸಲು ಬಂದಿದ್ದ ಕೇಶವನಿಗೆ ರಾಮಪ್ರಭುಗಳು ಕೇಳಿದರು, ‘ಏನೋ ಕೇಶ, ಕುರುವ ಸರ್ದಾಡುಕೆ ಹತ್ತಿದೆ ಅಂಬ ಸುದ್ದಿ ಕೇಳ್ದೆ. ಹೌದೇನೋ?’ ಅದೊಂದು ಸಹಜ ಪ್ರಶ್ನೆ ಎಂಬಂತೆ ಕೇಶವ ಸ್ವೀಕರಿಸಿದ. ‘ಹೌದ್ರಾ ಒಡ್ಯಾ, ಕಲಿಗಾಲ ಬಂದಂಗೇ ಕಾಣ್ತದೆ. ಇಲ್ದಿದ್ರೆ ಇದು ಹೀಂಗಾಗುತ್ತಿತ್ತಾ?’ ಎಂದು ಅವನೇ ಮರುಪ್ರಶ್ನೆ ಹಾಕಿದ. ಪ್ರಭುಗಳು ಮತ್ತೆ ತಿರುಗಿ ಮಾತನಾಡಲಿಲ್ಲ. ಪ್ರತಿ ಸಲ ನಾಲ್ಕು ಮರ ಹತ್ತಿದರೆ ಒಂದು ಕಾಯಿ ಕೊಡುತ್ತಿದ್ದ ಅವರು ಈ ಸಲ ಐದು ಮರಕ್ಕೆ ಒಂದು ಕಾಯಿಯಂತೆ ಲೆಕ್ಕ ಮಾಡಿ ಕೊಟ್ಟರು. ‘ಹಿಂಗ್ಯಾಕ್ರಿ ಒಡ್ಯಾ?’ ಎಂದು ಕೇಶವ ಕೇಳಿದ್ದಕ್ಕೆ, ‘ಮುಂದಿನ ಸಲ ನೋಡ್ಕಂಬಾ, ಈಗ ಹೀಗೇ ಒಯ್ಯಿ’ ಎಂದು ಲಕ್ಷ್ಯಕ್ಕೆ ತೆಗೆದುಕೊಳ್ಳದವರಂತೆ ಒಳಗೆ ಹೋಗಿಬಿಟ್ಟರು.
ಕೇಶವನಿಗೆ ಸಿಟ್ಟು ಬಂತು. ನಿಜ, ಆದರೆ ಏನೂ ಮಾಡುವ ಹಾಗೆ ಇರಲಿಲ್ಲ. ಮನಸ್ಸಿನಲ್ಲಿ ಮಾತ್ರ, ‘ಕುರುವ ಒಂದು ಸಲ ಬಂದರಕ್ಕೆ ಬಂದು ಕೂಡಲಿ, ಆಗ ಕಾಣೂರಂತೆ ನಮ್ಮ ತಡಾಕಿ’ ಅಂದುಕೊಂಡ. ರಾಮ ಪ್ರಭುಗಳು ಕಡಿಮೆ ಲೆಕ್ಕಹಾಕಿ ಕೊಡುವುದಕ್ಕೂ ಇದೇ ಕಾರಣವಾಗಿತ್ತು. ಕುರುವದವರು ಇಲ್ಲಿ ಬಂದು ಸೇರಿದರೆ ಆಗುವ ಸ್ಥಿತ್ಯಂತರದಲ್ಲಿ ಏನೇನು ಸಂಭವಿಸುವುದೋ ಯಾರು ಬಲ್ಲ? ಮುಷ್ಟಿ ಬಿಚ್ಚಿ ಕೊಟ್ಟರೆ ಮುಂದೆ ನಮ್ಮ ಕಷ್ಟ ಕಾಲದಲ್ಲಿ ನಮಗೆ ಆಗುವವರು ಯಾರು? ಎಂಬ ಲೆಕ್ಕಾಚಾರ ಅವರದು.
ಇದು ಕೇಶವನೊಬ್ಬನ ಅಥವಾ ರಾಮ ಪ್ರಭುಗಳು ಒಬ್ಬರ ಅನುಭವ ಅಥವಾ ವರ್ತನೆಯಲ್ಲ. ಕುರುವಕ್ಕೆ ಕಾಲು ಬಂದ ಸುದ್ದಿ ಕೇಳಿದ ಮೇಲೆ ಹೊನ್ನಾವರ ಪೇಟೆಗೆ ಹೋಗುವ ಎಲ್ಲ ಕುರುವಕಾರರ ಅನುಭವ ಇದು. ಕೆಲವರು ಮುಗುಂ ಆಗಿ ತೋರಿಸಿಕೊಂಡರೆ ಕೆಲವರು ಪರಸ್ಪರ ಪ್ರತಿಸ್ಪರ್ಧಿಗಳೋ ಎಂಬಂತೆ ವರ್ತಿಸತೊಡಗಿದರು.
ತಮ್ಮ ಕುರುವತನದಿಂದ ಆಗಿರುವ ಅನನುಕೂಲತೆಗಳು, ಜೊತೆಯಲ್ಲಿ ಪೇಟೆಯವರು ತೋರಿಸುತ್ತಿರುವ ವರ್ತನೆಯಿಂದಾಗಿ ಕುರುವಕಾರರಲ್ಲಿ ಮಹತ್ವದ ಬದಲಾವಣೆಯೊಂದು ತೋರತೊಡಗಿತು. ಕುರುವ ಸರಿದಾಡತೊಡಗಿದಾಗ ಅದು ಇದ್ದಲ್ಲೇ ಇರಲಿ ಎಂದು ಹಾರೈಸಿದವರು ಈಗ ಕುರುವ ಆದಷ್ಟು ಬೇಗ ಎಲ್ಲಿಯಾದರೂ ಹೋಗಿ ದಡ ಕೂಡಲಿ ಎಂದು ಬಯಸತೊಡಗಿದರು. ಹೆಚ್ಚಿನವರಂತೂ ಎಲ್ಲಿಯಾದರೂ ಏಕೆ ಹೊನ್ನಾವರ ಪೇಟೆಗೇ ಹೋಗಿ ಕೂಡಿಬಿಡಲಿ ಎಂದು ಬಯಸತೊಡಗಿದರು. ಇಲ್ಲಿಯವರೆಗೆ ಅಷ್ಟೊಂದು ವಿಶ್ವಾಸದಿಂದ ನಮ್ಮೊಡನೆ ಇದ್ದ ಪೇಟೆಯವರು ಈಗ ಏಕದಂ ಬದಲಾಗಿ ನಮ್ಮನ್ನು ಪ್ರತಿಸ್ಪರ್ಧಿಗಳಂತೆ ನೋಡತೊಡಗಿದ್ದಾರಲ್ಲ? ನಾವೇನು ಇವರ ಗಂಟು ಕದ್ದಿದ್ದೇವೆಯೇ? ನಮ್ಮ ಕುರುವತನದ ಲಾಭವನ್ನು ಇವರು ಇಷ್ಟುದಿನ ಪಡೆಯಲಿಲ್ಲವೆ? ಕುರುವದಲ್ಲಿ ಇದ್ದ ಕಾರಣಕ್ಕಾಗಿಯೇ ನಾವು ಇಷ್ಟುದಿನ ಇವರ ಗುಲಾಮರಂತೆ ಬದುಕಲಿಲ್ಲವೆ? ಇವರು ಹೇಳಿದ್ದು ಮಾಡಲಿಲ್ಲವೆ? ಕೇಳಿದ್ದು ಒಯ್ದು ಮನೆ ಬಾಗಿಲಲ್ಲಿ ಹಾಕಲಿಲ್ಲವೆ? ಆ ವಿಶ್ವಾಸ ಇಂದು ಎಲ್ಲಿ ಹೋಯಿತು? ಅದು ವಿಶ್ವಾಸ ಆಗಿರಲಿಕ್ಕಿಲ್ಲ. ಅವರ ಅನುಕೂಲಕ್ಕೆ ಆಗುವವರು ಎಂಬ ಸ್ವಾರ್ಥ ಬುದ್ಧಿ ಇದ್ದಿರಬೇಕು ಅದು. ಅದ್ಯಾವ ದೇವನ ಮಾಯೆಯೋ ಇಂದು ನಾವು ನಮ್ಮ ಕುರುವತನವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಕುರುವ ಅಲ್ಲಿಗೆ ಹೋಗದಂತೆ ತಡೆಯುವುದಕ್ಕೆ ಅವರ್ಯಾರು? ನಮ್ಮ ಆಗುಹೋಗುಗಳಲ್ಲಿ ಅವರದೇನು ಜಂಬರ? ಇದೆಲ್ಲ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಮೂಡಿತು. ಇದು ಯಾರೊಬ್ಬರ ಖಾಸಗಿ ವಿಚಾರವಾಗಿ ಮಾತ್ರ ಉಳಿಯಲಿಲ್ಲ. ‘ಮಾವಿನಕುರುವಕಾರರ ಹಿತರಕ್ಷಣೆ ಸಮಿತಿ’ಯೇ ಈ ನಿರ್ಧಾರ ತಳೆಯಿತು.
ಈ ನಿರ್ಧಾರಕ್ಕೆ ಒಂದು ದೃಢ ಸ್ವರೂಪ ಬಂದದ್ದು ಅವತ್ತೇ. ಅದೂ ಕೂಡ ಪೇಟೆಯವರ ‘ಮಾವಿನಕುರುವ ಚಲನೆ ವಿರೋಧಿ ಸಮಿತಿ’ಯ ಸದಸ್ಯರು ಚರ್ಚೆಗೆ ಬಂದಾಗಲೇ. ಬಂದರದ ವಕಾರದ ವ್ಯಾಪಾರಿಗಳು, ನಡುಪೇಟೆಯ ಜವಳಿ ಸಾಲಿನ ವರ್ತಕರು, ಪುರಸಭೆಯ ಕೆಲವರು ಇದ್ದ ಸಮಿತಿಯ ಸದಸ್ಯರು ಮಾವಿನಕುರುವಕ್ಕೆ ಭೆಟ್ಟಿಗಾಗಿ ಬಂದಿದ್ದರು. ಮತ್ತೆ ಅವರೆಲ್ಲ ಹೊನ್ನೆಮರದ ಬಯಲಿನಲ್ಲಿಯೇ ಸಭೆ ಸೇರಿದರು. ಚಲನೆ ವಿರೋಧ ಸಮಿತಿಯ ಸದಸ್ಯರು ಇಂಥ ಅಘಟಿತ ಘಟನೆಯೊಂದು ನಮ್ಮ ಕಾಲದಲ್ಲಿಯೇ ನೋಡಬೇಕಾಗಿ ಬಂದ ಬಗ್ಗೆ ದುಃಖ ವ್ಯಕ್ತಪಡಿಸಿದರು. ಇದನ್ನು ತಡೆಯಲು ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು. ಕುರುವಕಾರರ ರಕ್ಷಣೆಗೆ ತಾವು ಎಲ್ಲ ರೀತಿಯ ನೆರವು ನೀಡುವುದಾಗಿಯೂ, ರಾಜಧಾನಿ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿಯೂ ಹೇಳಿದರು. ಸರಿಯುತ್ತಿರುವ ಕುರುವವನ್ನ ಗೂಟ ಬಡಿದು ಹಗ್ಗ ಕಟ್ಟಿ ನಿಲ್ಲಿಸಲು ಆಗುತ್ತದೆಯೇ? ಸಾಧ್ಯವೇ ಇಲ್ಲ. ಅದು ಚಲಿಸುತ್ತಿರುವ ದಿಕ್ಕಿನಲ್ಲಿ ಹೊಳೆಗೆ ಅಡ್ಡವಾಗಿ ಬೃಹತ್‌ ಗಾತ್ರದ ಸಿಮೆಂಟು ಕಂಬಗಳನ್ನು ನಿರ್ಮಿಸಬೇಕು. ಇದು ಯುದ್ಧೋಪಾದಿಯಲ್ಲಿ ಆಗಬೇಕಾದ ಕಾರ್ಯ. ಈ ಸಲಹೆಯನ್ನು ಸರಕಾರದ ಮುಂದೆ ಇಡುತ್ತೇವೆ ಅಂದೆಲ್ಲ ಹೇಳಿದರು.
ಕುರುವಕಾರರು ಮಾತ್ರ ಯಾವ ಪ್ರತಿಕ್ರಿಯೆಯನ್ನೂ ಆಗ ವ್ಯಕ್ತಪಡಿಸಲಿಲ್ಲ. ‘ಹಾಗೇ ಮಾಡಿ, ನಮ್ಮ ಬಚಾವು ಮಾಡಿ ಪುಣ್ಯ ಕಟ್ಕೊಳ್ಳಿ’ ಎಂದು ಹೇಳಿದರು. ಪೇಟೆ ಜನರ ಸಮಿತಿಯ ಸದಸ್ಯರು ತೆರಳಿದ ಮೇಲೆ ಕುರುವಕಾರರು ತಮ್ಮ ಸಭೆ ಮುಂದುವರಿಸಿದರು. ‘ಪೇಟೆಯವರಿಗೇಕೆ ಇದರ ಉಸಾಬರಿ?’ ಎಂದು ಪ್ರಶ್ನೆ ಮಾಡಿಕೊಂಡು ಉತ್ತರ ಹುಡುಕಿದರು. ಇದರಲ್ಲಿ ಅವರ ಸ್ವಾರ್ಥದ ವಾಸನೆ ಇವರಿಗೆ ಸರಿಯಾಗಿಯೇ ಬಡಿಯಿತು. ಸಿಮೆಂಟು ಕಂಬ ನಿರ್ಮಿಸುವುದೂ ಬೇಡ ಎಂಥದೂ ಬೇಡ. ಎಲ್ಲಿಗೆ ಹೋಗಿ ದಡ ಸೇರುವುದೋ ಸೇರಲಿ ನೋಡುವಾ. ಒಂದು ವೇಳೆ ಪೇಟೆಯವರು ಅಡ್ಡಿಪಡಿಸಲು ಬಂದರೆ ಅದನ್ನು ಎಲ್ಲರೂ ಒಕ್ಕಟ್ಟಾಗಿ ವಿರೋಧಿಸಬೇಕು ಎಂದು ನಿರ್ಧರಿಸಿದರು. ಕುರುವ ವಾಸದ ಜಂಜಾಟವೆಲ್ಲ ಒಂದೇ ಸಾರಿ ಹರಿದುಹೋಗಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡರು.

ಕುರುವಕಾರ ಸಹಕಾರ ನಮಗೆ ಸಿಗುತ್ತಿಲ್ಲ ಎಂಬ ಅಂಶ ಹೊನ್ನಾವರ ಪೇಟೆಯ ಜನರಿಗೆ ತಿಳಿಯಲು ಹೆಚ್ಚುಹೊತ್ತು ಹಿಡಿಯಲಿಲ್ಲ. ಕುರುವಕಾರರೆಲ್ಲ ಪೇಟೆಯವರ ವಿರುದ್ಧ ಸಂಚು ಮಾಡುತ್ತಿದ್ದಾರೆ ಎಂದೇ ಅವರು ಭಾವಿಸಿದರು. ಅವರಿಗೆ ಬುದ್ಧಿ ಕಲಿಸದಿದ್ದರೆ ನಾವು ಪೇಟೆಯಲ್ಲಿ ಹುಟ್ಟಿ ಏನು ಬಂತು? ಅಂದುಕೊಂಡರು.
ಅದೇ ದಿನ ರಾತ್ರಿ ಬಸ್ಸಿನಲ್ಲಿ ರಾಜಧಾನಿಗೆ ಪೇಟೆಯವರ ನಿಯೋಗವೊಂದು ತೆರಳಿತು. ಶತಾಯುಗತಾಯು ಕುರುವವನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸರಕಾರದ ಮನವೊಲಿಸುವುದೇ ಅವರ ಉದ್ದೇಶವಾಗಿತ್ತು. ದಿನಕ್ಕೆ ಮಾರು ಎರಡು ಮಾರಿನಂತೆ ಸರಿಯುತ್ತಿರುವ ಕುರುವವನ್ನು ಒಂದು ಟೇಬಲ್ಲಿನಿಂದ ಇನ್ನೊಂದು ಟೇಬಲ್ಲಿಗೆ ಕಡತವನ್ನು ಓಡಾಡಿಸಲೇ ತಿಂಗಳೊಪ್ಪತ್ತು ತೆಗೆದುಕೊಳ್ಳುವ ಸರಕಾರದಿಂದ ತಡೆದು ನಿಲ್ಲಿಸಲು ಸಾಧ್ಯವೇ ಎಂಬ ಬಗ್ಗೆ ಅವರು ವಿಚಾರಿಸಲಿಲ್ಲ. ನಿಯೋಗ ಕಾಣದೆ ಇದ್ದ ಮಂತ್ರಿ ಒಬ್ಬರೂ ಉಳಿಯಲಿಲ್ಲ. ಆದರೆ ಮಾವಿನಕುರುವದ ಚಲನೆಯನ್ನು ಏಕೆ ತಡೆಯಬೇಕು ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡುವಲ್ಲಿ ನಿಯೋಗದ ಸದಸ್ಯರು ವಿಫಲರಾದರು. ಎಲ್ಲದಕ್ಕೂ ಹೆಚ್ಚಿನದೆಂದರೆ ಮೊದಮೊದಲು ಹುಯಿಲೆಬ್ಬಿಸಿದ ಕುರುವಕಾರರು ಈಗಂತೂ ಆ ಬಗ್ಗೆ ಮಾತನಾಡುವುದನ್ನೇ ಬಿಟ್ಟಿರುವುದು ಅವರಿಗೆ ಆಶ್ಚರ್ಯಕರವಾಗಿ ಕಂಡಿತು.
ಪೇಟೆಯವರೆಲ್ಲ ಮತ್ತೊಮ್ಮೆ ಹತ್ತು ಮಂದಿಯ ಮಠದಲ್ಲಿ ಸೇರಿದರು. ಕುರುವದವರಿಗೆಲ್ಲ ಪೇಟೆಯಲ್ಲಿ ಕೆಲಸ ಕೊಡಬಾರದು ಎಂಬ ಅಂತರಂಗದ ನಿರ್ಣಯ ಸ್ವೀಕರಿಸಿದರು.
ಅದರ ಮರುದಿನ ಪೇಟೆಗೆ ಕೂಲಿಗೆ ಬಂದ ಕುರುವದವರಿಗೆ ಮೊದಲು ಕಣ್ಣಿಗೆ ಬಿದ್ದದ್ದು ಬಯಲು ಸೀಮೆಯ ಜನ ಟ್ರಕ್ಕುಗಳಿಂದ ಸಾಮಾನು ಇಳಿಸುತ್ತಿದ್ದದ್ದು. ಪೇಟೆಯಲ್ಲಿ ಅಂದು ಅವರಿಗೆ ಯಾವ ಕೆಲಸವೂ ಸಿಗಲಿಲ್ಲ. ವಿಶ್ವಾಸದಿಂದ ನಿತ್ಯ ಮಾತನಾಡಿಸುತ್ತಿದ್ದವರು ಅಂದು ಮಾತನಾಡುವುದಕ್ಕೂ ಹಿಂದುಮುಂದು ನೋಡಿದರು. ಪೇಟೆಯ ಅಂಗಡಿಗಳಲ್ಲಿ ದೊರೆತ ಕೂಲಿಯ ಹಣದಲ್ಲಿ, ಕೆಲಸ ಕೊಟ್ಟವರ ಮನೆಗಳಲ್ಲಿ ಏನಾದರೂ ತಿನ್ನಬಹುದು ಎಂದು ತಂಗಳನ್ನ ಉಂಡು ಬಂದಿದ್ದ ಕುರುವಕಾರರು ಸಂಜೆ ಹೊತ್ತಿಗೆ ಜೋಲು ಮೋರೆ ಹೊತ್ತು ಕುರುವಕ್ಕೆ ಮರಳಿದರು.
ನಾವು ಮಾಡಿದ ಅಪರಾಧವಾದರೂ ಏನು? ನಮ್ಮ ಕೆಲಸವನ್ನು ಕಸಿದು ಬೇರೆಯವರಿಗೆ ಕೊಡುವುದಕ್ಕೆ ಅವರ ಕೆಲಸ ನಾವು ಕಸಿದಿದ್ದೇವೆಯೆ? ದೇವರು ಮೆಚ್ಚುವ ವರ್ತನೆಯಾ ಇದು? ಹಾಲುಂಬ ಕೂಸಿಗೆ ವಿಷ ಇಕ್ಕಿದಕ್ಕಿಂತ ಹೇಯ ಅಲ್ಲವಾ? ಇವರಿಗೆ ತಿಳಿಹೇಳುವವರು ಯಾರು? ಇದು ಹೀಗೆಯೇ ಮುಂದುವರಿದರೆ ನಮ್ಮ ಹೊಟ್ಟೆಯ ಪಾಡಿಗೆ ಬೇರೆಯೇ ಕೆಲಸವನ್ನು ಹಿಡಿಯಬೇಕಲ್ಲವೆ? ಇದೇ ವಿಚಾರದಲ್ಲಿ ಕುರುವಕಾರರು ತಿಂಗಳು ಬೆಳಕಿನಲ್ಲಿ ಮತ್ತೆ ಹೊನ್ನೆಮರದ ಗದ್ದೆ ಬಯಲಿನಲ್ಲಿ ಸಭೆ ಸೇರಿದರು.
ನಮ್ಮ ಅನ್ನ ಕಸಿಯುವ ಅಧಿಕಾರ ಹೊನ್ನಾವರ ಪೇಟೆಯವರಿಗೆ ಇಲ್ಲವೇ ಇಲ್ಲ. ಬಯಲುಸೀಮೆ ಜನ ಇಲ್ಲೇ ಬಂದು ತಳ ಊರಿದರೆ ಶಾಶ್ವತವಾಗಿ ನಾವು ಮಣ್ಣು ತಿನ್ನಬೇಕಾಗುತ್ತದೆ. ಅವರಿಗೆ ಬುದ್ಧಿ ಕಲಿಸಲೇ ಬೇಕು ಎಂದು ಒಂದು ನಿರ್ಧಾರ ಮಾಡಿದರು.
ಮಾರನೆ ದಿನ ಬೆಳಿಗ್ಗೆ ಮೂಡು ದಿಕ್ಕಿನ ಗುಡ್ಡದ ದೋಮಗಿಯಲ್ಲೆಲ್ಲೋ ಸೂರ್ಯ ಇನ್ನೂ ಅವಿತಿಟ್ಟುಕೊಂಡಿರುವಾಗಲೆ ಕುರುವಕಾರರ ದೊಡ್ಡ ದಂಡು ಪೇಟೆಗೆ ಬಂದುಬಿಟ್ಟಿತು. ತಾವು ಮೊದಲು ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದೆವೋ ಅಲ್ಲೆಲ್ಲ ಒಬ್ಬರಿಗೆ ಮೂವರಾಗಿ ನಿಂತುಬಿಟ್ಟರು. ಮಾರಕಾಸ್ತ್ರವೇನೂ ಅವರಲ್ಲಿ ಇರಲಿಲ್ಲ. ಹಾರೆಗಳು, ಪಿಕಾಸೆ, ಗುದ್ದಲಿಗಳು, ಮಸೆದು ತಂದ ಕತ್ತಿಗಳು, ತುಂಬಿದ ಚೀಲಗಳನ್ನು ಬೆನ್ನಿಗೇರಿಸಿಕೊಳ್ಳುವಾಗ ಹಿಡಿತಕ್ಕೆ ಬಳಸುತ್ತಿದ್ದ ಕಬ್ಬಿಣದ ಚಿಕ್ಕ ಕೊಕ್ಕೆಗಳು ಹೀಗೆ ನಿತ್ಯ ತಮ್ಮ ಕೆಲಸಕ್ಕೆ ಬಳಸುತ್ತಿದ್ದ ಆಯುಧಗಳೇ ಅವು. ಹೊಡೆದಾಟಕ್ಕೆ ಬಂದಿದ್ದಾರೆ ಅವರು ಎಂದು ಯಾರಿಗೂ ಹೇಳಲು ಸಾಧ್ಯವಾಗುತ್ತಿರಲಿಲ್ಲ.
ಕೂಲಿಗೆಂದು ಪೇಟೆಯವರು ಬಯಲು ಸೀಮೆಯಿಂದ ಕರೆದು ತಂದ ಜನರು ಕಣ್ಣಿಗೆ ಬಿದ್ದಲ್ಲಿ ಗುದ್ದತೊಡಗಿದರು. ಅವರಿಗೆ ತಿಳಿಯದ ತಮ್ಮದೇ ಖಾಸ ಬಯ್ಗುಳಗಳಿಂದ ಬೆವರು ಹುಟ್ಟಿಸಿದರು. ನಿಂತೀರೆಂದರೆ ಕಾಲು ಮುರಿಯುತ್ತೇವೆ ಎಂದು ಧಮಕಿ ಹಾಕಿದರ. ಅಲ್ಲಿಂದ ಬಂದವರೆಲ್ಲ ಒಟ್ಟಾಗಿ ಏನು ಎಂತು ಎಂದು ಮಾತನಾಡುವುದಕ್ಕೂ ಅವಕಾಶ ನೀಡಲಿಲ್ಲ ಅವರಿಗೆ. ಪೊಲೀಸು ಠಾಣೆಗೆ ದೂರು ನೀಡುವ ವಿಚಾರ ಕೆಲವರ ತಲೆಯಲ್ಲಿ ಬಂತು. ಆದರೆ ಕೂಲಿನಾಲಿ ಮಾಡುವ ನಾವು ಕೋರ್ಟು ಕಚೇರಿ ಎಂದು ಎಲ್ಲಿ ಅಲೆಯುವುದು, ಹಣ ಎಲ್ಲಿ ಖರ್ಚು ಮಾಡುವುದು? ಕೈ ಕಾಲು ಸಾಬೀತು ಇದ್ದರೆ ಇಲ್ಲಲ್ಲ ಬೇರೊಂದೂರಲ್ಲಿ ಬೇಡಿ ತಿಂದೇವು ಎಂದುಕೊಂಡು ಬಸ್ಸು ನಿಲ್ದಾಣ ಎಲ್ಲಿದೆ ಎಂದು ಹುಡುಕಿ ಓಡಿ ಸಿಕ್ಕಿದ ಬಸ್ಸು ಏರಿ, ಡ್ರೈವರು ಕಂಡಕ್ಟರ್‌ಗೆ ಬಸ್ಸನ್ನು ಬೇಗ ಬಿಡುವಂತೆ ಅವಸರಿಸತೊಡಗಿದರು.
ಹಿಂದಿನ ದಿನವಷ್ಟೇ ಕುರುವದವರನ್ನು ಕೆಲಸವಿಲ್ಲದೆ ಬರಿಗೈಯಲ್ಲಿ ಕಳುಹಿಸಿ ಮೀಸೆಯಲ್ಲಿಯೇ ನಗೆಯಾಡಿದ್ದ ಪೇಟೆಯ ಜನರಿಗೆ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂಬುದು ಬಹು ಹೊತ್ತಿನ ವರೆಗೆ ಗೊತ್ತಾಗಲೇ ಇಲ್ಲ. ವಕಾರಗಳ ಮುಂದೆ ಟ್ರಕ್ಕುಗಳು ನಿಂತು ಮಾಲು ಇಳಿಸಲು ಹಾರ್ನ್‌ ಮಾಡತೊಡಗಿದಾಗ ಬಯಲು ಸೀಮೆಯ ಕೂಲಿಗಳು ಒಬ್ಬರೂ ಕಣ್ಣಿಗೆ ಬೀಳಲಿಲ್ಲ. ಅವರನ್ನು ಇಲ್ಲಿಯೇ ನೆಲೆ ಮಾಡಿಸಬೇಕು ಎಂದು ಕೆಲವರು ಅವರಿಗೆ ತಿಂಗಳೆರಡು ತಿಂಗಳ ಅಡ್ವಾನ್ಸು ಕೂಡ ಕೊಟ್ಟಿದ್ದರು. ಎಲ್ಲ ಮಂಗಮಾಯ ಮಾಡಿ ಓಡಿಹೋದ್ರಾ ಮಕ್ಳು ಎಂದು ನಾಜೂಕು ಶಬ್ದಗಳಲ್ಲೇ ಬಯ್ದರು. ತಮ್ಮದು ಅಷ್ಟು ಹೋಯಿತು, ತಮ್ಮದು ಇಷ್ಟು ಹೋಯಿತು ಎಂದು ಒಬ್ಬರೂ ಬಾಯಿಬಿಡಲಿಲ್ಲ. ಪೊಲೀಸರಿಗೆ ದೂರು ಕೊಡುವುದೋ ಬಿಡುವುದೋ ಎಂಬುದೂ ಅಂತಪಾರ ಹರಿಯಲಿಲ್ಲ. ಅವರ ಊರು, ವಿಳಾಸ ಯಾರಿಗೆ ಗೊತ್ತು? ಪೊಲೀಸರೊಂದಿಗೆ ಎಲ್ಲಿಯ ಗುದ್ದಾಟ ಅಂದುಕೊಂಡರು. ಕುರುವದವರ ಮೇಲೆ ದೂರು ಕೊಡೋಣವೆಂದರೆ ಅವರ ವಿರುದ್ಧ ಸಾಕ್ಷ್ಯ ಹೇಳುವವರ್ಯಾರು? ತಮ್ಮನ್ನು ಹೊಡೆದರು ಎಂದು ಪಿರ್ಯಾದಿ ನೀಡುವವರು ಯಾರು? ಅವರ ಪರವಾಗಿ ತಾವೇ ದೂರು ನೀಡಿದರೂ ಅವರನ್ನು ಕರೆ ತಂದು ಕೋರ್ಟಿನಲ್ಲಿ ಸಾಕ್ಷ್ಯ ಹೇಳಿಸುವುದು ಹೇಗೆ? ಹಾಳಾಗಿ ಹೋಗಲಿ ಈ ಜಂಜಾಟ ಎಂದು ಬಹುತೇಕರಿಗೆ ಅನ್ನಿಸಿತು. ಪರವೂರಿನ ಜನರನ್ನು ನಂಬಿಕೊಂಡು ನೆರೆಯವರ ಕೆಡಿಸಿಕೊಂಡರೆ ಮುಖಭಂಗವಲ್ಲದೆ ಮತ್ತೇನು ಎಂದು ಹಳಹಳಿಸಿದರು.
ಕುರುವದ ಕೂಲಿಗಳೆಲ್ಲ ರಸ್ತೆಯ ಬದಿಯಲ್ಲಿ ಮೋರಿಗಳ ಮೇಲೆ ಕುಳಿತಿದ್ದರೂ ತಾವು ಮಾಲು ಇಳಿಸುತ್ತೇವೆ ಎಂದು ಮುಂದೆ ಹೋಗಲಿಲ್ಲ. ಕೊನೆಗೆ ವರ್ತಕರ ಸಂಘದ ಅಧ್ಯಕ್ಷರಾದ ಶಿಕಾರ ಪ್ರಭುಗಳು ಮುಂದೆ ಬಂದು ಮಾತುಕತೆ ನಡೆಸಿದರು. ಕುರುವ ಚಲಿಸದ ಹಾಗೆ ತಾವು ಎಷ್ಟೆಲ್ಲ ತ್ರಾಸು ತೆಗೆದುಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು. ನಮ್ಮ ಖರ್ಚಿನಲ್ಲಿಯೇ ನಾವು ರಾಜಧಾನಿಯ ವರೆಗೆ ಹೋಗಿ ಬಂದುದಾಗಿ ಹೇಳಿದರು. ಹೇಗಾದರೂ ಮಾಡಿ ನಿಮ್ಮ ಕುರುವ ಮೊದಲಿದ್ದ ಜಾಗದಲ್ಲಿಯೇ ಇರವ ಹಾಗೆ ಮಾಡುತ್ತೇವೆ ಎಂದು ಹೇಳಿದರು.
ಒಬ್ಬ ಕುರುವಕಾರ ಕೂಗಿಕೊಂಡ, ಮುಚ್ಕೋರಿ ಮೊದ್ಲು ಬಾಯಿ. ನಾಲ್ಕು ಕಾಸು ಕಡಿಮೆಗೆ ಬರುತ್ತಾರೆ ಎಂದು ಬೇರೆಯವರನ್ನು ಕೂಲಿಗೆ ಕರೆಸಿ ನಿನ್ನೆ ನಾವು, ನಮ್ಮ ಮಕ್ಕಳು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತೆ ಮಾಡಿದ ನೀವು ನಮ್ಮ ಸುಖ ದುಃಖ ನೋಡ್ಕಂತಿರಾ? ಚಲೋ ಮಾತು ಹೇಳಿದಿರಿ. ನೀವು ಇದುವರೆಗೆ ಮಾಡಿದ ಉಪಕಾರ ಸಾಕು. ನಮ್ಮ ಪಾಡಿಗೆ ನಮ್ಮ ಬಿಟ್ಟುಬಿಡಿ. ನಿಮ್ಮ ಪಾಡಿಗೆ ನೀವು ಇದ್ದುಬಿಡಿ. ಕಾಲು ಬಂದ ಕುರುವನ ತಡೆಯೂದು ನಿಮ್ಮ ತಾಕತ್ತ? ಉದ್ಧಾರವಾಯಿತು. ಕೇಳಿದವರು ನಗದೆ ಇರ್ತಾರಾ? ಕುರುವ ಎಲ್ಲಿ ಬಂದು ದಡ ಹತ್ತುವುದೋ ಹತ್ತಲಿ. ಅದನ್ನು ತಡೆಯೂಕೆ ನೀವೇನಾದ್ರೂ ಮುಂದಾದ್ರಿ ಅಂದ್ರೆ ನಾವು ಮನುಷ್ಯರಾಗಿ ಇರುವುದಿಲ್ಲ. ಅದೆಲ್ಲ ಬಿಟ್ಟುಬಿಡಿ. ಈಗ ನಿಮ್ಮ ವ್ಯವಹಾರದ ಮಾತು ಏನು ಹೇಳಿ ಎಂದು ಸುಮ್ಮನಾದ.
ಬಂದರದ ಗಿಜಿಗಿಜಿಯಲ್ಲಿ ಟ್ರಕ್ಕು, ರಿಕ್ಷಾ, ಮೋಟಾರು ವಾಹನಗಳ ಸದ್ದಿನಲ್ಲಿ, ಸುತ್ತು ಗೋಡೆಗಳು, ಅವುಗಳ ಒಳಗೆಲ್ಲೆಲ್ಲೋ ನಿಂತು ತಮ್ಮ ಕೆಲಸಗಳಲ್ಲಿ ಗರ್ಕಾಗಿದ್ದ ಪೇಟೆಯವರ ತಲೆಗೆ ಗುಂಡು ನಾಟಿದಂತೆ ಆ ಕುರುವಕಾರನ ಮಾತುಗಳು ಕೇಳಿಸಿದವು. ತಕಪಕ ಇದ್ದುದ್ದನ್ನು ಇದ್ದಂತೆ ಬಿಟ್ಟು ಹೊರಗೋಡಿ ಬಂದರು. ನಿಮ್ಮ ತಾಕತ್ತ… ? ನಿಮ್ಮ ತಾಕತ್ತ… ? ಎಂಬ ಅವನ ಮಾತು ಮತ್ತೆ ಮತ್ತೆ ಕೇಳಿಸಿತು. ಹೌದು ಅದು ನಮ್ಮ ತಾಕತ್ತಲ್ಲ ಎಂದು ಮರಳಿ ತಮ್ಮ ತಮ್ಮ ಕಾಯಕದಲ್ಲಿ ತೊಡಗಿದರು.
ಮಾತುಕತೆಗೆ ಬಂದವರು ಈಗ ಸುತ್ತು ಬಳಸಲಿಲ್ಲ. ನೇರವಾಗಿಯೇ ಮೊದಲು ಕೊಡುತ್ತಿದ್ದ ಕೂಲಿಗಿಂತ ಹೆಚ್ಚಿಗೆ ಕೊಡುತ್ತೇವೆ ಅಂದರು. ಮತ್ತೆ ಹೊರಗಿನವರನ್ನು ಕರೆಸುವುದಿಲ್ಲ ಎಂದರು. ಕೊನೆಗೆ ಕುರುವದವರು ಹೇಳಿದ ರೇಟಿಗೆ ಒಪ್ಪಿಕೊಂಡು ಕೆಲಸ ಚಾಲು ಮಾಡಿ ಎಂದರು.
ಬರಬರನೆ ಟ್ರಕ್ಕುಗಳಲ್ಲಿಯ ಮಾಲುಗಳು ಗೋಡವನು ಸೇರತೊಡಗಿದವು. ತೆಂಗಿನ ಮರಗಳಿಂದ ಕಾಯಿಗಳು ಉದುರತೊಡಗಿದವು. ಕೆರೆಗಳಲ್ಲಿ ನೀರು ಜಿನುಗತೊಡಗಿದವು. ಹೊಸ ಮನೆಗಳಿಗೆ ಕಲ್ಲು ಗೋಡೆಗಳು ಏಳತೊಡಗಿದವು. ಕಾಮತರ ಮನೆಯ ತೋಟದಲ್ಲಿ ಕಳೆ ಕೀಳಲು ಹೋದ ಬೊಮ್ಮಿ ನೀರು ಕೇಳಿದರೆ ಅವರು ಮಜ್ಜಿಗೆಯನ್ನೇ ಕೊಟ್ಟರು. ನಾಳೆ ಇವರಿಗೆ ನಾಲ್ಕು ಬದನೆಕಾಯ ಎರಡು ಹೀರೇಕಾಯಿ ತಂದುಕೊಡಬೇಕು ಅಂದುಕೊಂಡಳು ಅವಳು. ಕುರುವದವರು ಬಂದರದ ವೆಂಕಟೇಶನ ಚಾದಂಗಡಿಯಲ್ಲಿ ಬನ್ಸ್‌ ಬಾಜಿ ತಿಂದು ಚಾ ಕುಡಿದು ತೇಗಿದರು. ಈ ಇಂಡಿಯಾದಲ್ಲಿ ಎಲ್ಲೂ ಇವನ ಥರ ಬನ್ಸ್‌ ಬಾಜಿ ಮಾಡೂದು ಯಾರ ಹಣೇಲೂ ಬರ್ದಿಲ್ಲ ಎಂದು ಹೇಳುತ್ತ ಎಲೆಗೆ ಸುಣ್ಣ ಒರಸಿಕೊಳ್ಳುತ್ತ, ಮಧ್ಯದಲ್ಲಿ ಅಡಕೆ ಹೋಳನ್ನು ಬಾಯಿಗೆ ಎಸೆದುಕೊಳ್ಳುತ್ತ, ಸಣ್ಣ ಮಲಬಾರ ತಂಬಾಕು ಚಿವುಟಿ ಅದಕ್ಕೆ ಸುಣ್ಣ ಒರಸಿ ಬೆರಳ ತುದಿಯಲ್ಲಿಟ್ಟು ಠಣ್‌ ಅಂತ ಬಾಯಲ್ಲಿ ಬೀಳಿಸಿಕೊಳ್ಳುತ್ತ, ತಮ್ಮದೇ ಆದ ಕುರುವದ ಕಡೆ, ಕುರುವವಾಗಿ ಇನ್ನೆದೂ ಇಲ್ಲವಾಗಿ ಹೋಗಿರುವ ಮಾವಿನಕುರುವದ ಕಡೆ ಬೀಸುಗಾಲು ಹಾಕತೊಡಗಿದರು.

ಕನ್ನಡಪ್ರಭ- 1999
6.ಸಂಕರ

ಕತ್ತಲು ಆಗಷ್ಟೇ ಮುಕುರಿತ್ತು. ಶರಾವತಿ ತುಳುಕತೊಡಗಿದಂತೆ ಸಳ ಸಳ ಸದ್ದು ಮಾಡುತ್ತ ಮುರ್ಕೋಡಿ ಕಟ್ಟೆಯ ಹತ್ತಿರ ಹರಿಯುತ್ತಿದ್ದಾಗ ಗಣಪು ಕೊಳಗದ್ದೆ ಗುಡ್ಡದಲ್ಲಿ ಕೋಳಿಪಡೆ ಮುಗಿಸಿ ಬಾಳಕಳಿ ತೇಂವ್ಪ ಗೌಡನ ಕೊಟ್ಟಿಗೆ ಸಂಧಿಯಲ್ಲಿ ಮೂರು ಪಾಕೀಟು ಸಾರಾಯಿ ಗಂಟ್ಲಲ್ಲಿ ಇಳಿಸಿ ತೂರಾಡುತ್ತ ಬಂದಿದ್ದ. ತಾರೆಗಳು ಆಕಾಶದಲ್ಲಿ ಹೊಳೆಯತೊಡಗಿದ್ದವು. ತಾರಿಯವನು ಆಗಲೇ ಮನೆಗೆ ಹೋಗಿಬಿಟ್ಟಿದ್ದ. ಹತ್ತಿರ ಎಲ್ಲಾದರೂ ಇದ್ದರೆ ಬರಬಹುದು ಎಂಬ ಆಸೆಯಿಂದ ಗಣಪು ಎರಡು ಮೂರು ಸಲ ‘ಕೂ’ ಹಾಕಿದ. ಆ ‘ಕೂ’ಗೆ ಪ್ರತಿಧ್ವನಿ ಬಂತೇ ಹೊರತು ತಾರಿ ಹನುಮಂತ ಮರು ಕೂ ಕೊಡಲಿಲ್ಲ. ಈ ತಾರಿಯವ್ನಿಗೆ ಗೂಡಿಗೆ ಹೋಗಿ ಸೇರ್ಕಂಬೂವರೆಗೆ ಪುರುಸೊತ್ತು ಇಲ್ಲ ಎಂದು ಬಯ್ಕೊಂತ, ಈ ಕತ್ತಲೆಯಲ್ಲಿ ಯಾರೂ ತನ್ನನ್ನು ಕಾಣುವುದಿಲ್ಲ ಎಂಬ ಭರವಸೆಯೊಂದಿಗೆ ಉಟ್ಟ ಪಂಚೆ ಬಿಚ್ಚಿ ತಲೆಗೆ ಸುತ್ತಿಕೊಂಡು ಗಣಪು ನೀರಿಗೆ ಇಳಿದೇ ಬಿಟ್ಟ.
ಜಲವಳ್ಳಿ-ಪಡುಕುಳಿ-ಕರಿಕುರುವ ಈ ಮೂರು ಊರುಗಳಿಗೂ ಮುರ್ಕೋಡಿ ಕಟ್ಟೆಯಲ್ಲಿ ಒಂದೇ ತಾರಿ. ಅಂಬಿಗರ ಹನುಮಂತನ ಮನೆಯವರೇ ತಾರಿ ದಾಟಿಸುವವರು. ದೊಡ್ಡ ತಾರಿ ಏನಲ್ಲ ಇದು. ಈ ಕಡೆ ಐದು ಮಾರು, ಆ ಕಡೆ ಏಳು ಮಾರು. ಶರಾವತಿಗೆ ಭರಿತ ಇದ್ದಾಗ ದೋಣಿ ಇಲ್ಲದೆ ದಾಟುವ ಹಾಗೇ ಇರಲಿಲ್ಲ. ನದಿಗೆ ಇಳಿತ ಇದ್ದಾಗ ದೋಣಿಯ ಹಂಗಿಲ್ಲದೆ ಹಾಯ್ದು ದಾಟಬಹುದಿತ್ತು. ಅಲ್ಲಿ ಎಲ್ಲಿ ಗುಂಡಿ ಇದೆ, ಎಲ್ಲಿ ಕೊರಕಲು ಇದೆ ಎಂಬುದು ಅವನ ಕಾಲಿಗೆ ರೂಢಿಯಿಂದ ಗೊತ್ತಾಗಿಬಿಟ್ಟಿತ್ತು. ಹೊಳೆ ದಾಟುವುದೆಂದರೆ ಹೊಳೆಯ ಕಡೆ ಹೋಗಿ ಬಂದಷ್ಟೇ ಸಲೀಸಾಗಿತ್ತು ಅವನಿಗೆ. ಹಗಲಿನಲ್ಲಿ ಹಾಗೆಲ್ಲ ದಾಟಿದ ಅನುಭವ ಇದ್ದುದರಿಂದಲೇ ಗಣಪು ಆ ಕತ್ತಲೆಯಲ್ಲಿ ಅದನ್ನು ದಾಟುವ ಧೈರ್ಯ ಮಾಡಿದ್ದು.
ಗಣಪು ಹೀಗೆ ಕೋಡಿ ದಾಟುವಾಗ ದೂರದಲ್ಲಿ ನೀರಿನಲ್ಲಿ ಬೋಸ್‌ ಅಂತ ಏನೋ ಬಿದ್ದ ಹಾಗೆ ಆಗಿ ಅಲ್ಲೋಲಕಲ್ಲೋಲ. ಆ ಸದ್ದಿಗೆ ಅವನು ಒಮ್ಮೆ ಬೆಚ್ಚಿ ಬಿಟ್ಟ. ಅದೇನು ಹಾಯ್ಗೂಳಿಯೇ? ತನ್ನ ಆಯಸ್ಸು ಮುಗಿಯಿತೇ ಅಂದುಕೊಂಡು ಹೊಳೆ ದಾಟುತ್ತಿದ್ದಾಗಲೂ ಒಮ್ಮೆ ಬೆವರಿಬಿಟ್ಟ.
ಹಾಯಗೂಳಿಗಳು ಒಮ್ಮೊಮ್ಮೆ ಹೀಗೆ ರಾತ್ರಿ ಕಾಲದಲ್ಲಿ ಅಡ್ಡಾಡುತ್ತವೆಯಂತೆ. ಅದರ ಎದುರಿಗೆ ಸಿಕ್ಕಿದರೆ ಮುಗಿದೇ ಹೋಯಿತಂತೆ. ಇವೆಲ್ಲ ಗಣಪುನ ವಿಷಯದಲ್ಲಿ ಅಂತೆ ಕಂತೆಗಳೇ. ಏಕೆಂದರೆ ಅವನು ಎಂದೂ ಅದನ್ನು ಕಂಡವನಲ್ಲ. ಅವನ ಅಪ್ಪ ತಾನು ಸಣ್ಣವ ಇದ್ದಾಗಿನ ಅನುಭವ ಅವನಿಗೆ ಹೇಳಿದ್ದ. ಹಿತ್ತಿಲದಲ್ಲಿ ಗೂಳಿ ಬಂದಿದೆ ಎಂದು ಅಟ್ಟಿಸಿಕೊಂಡು ಹೋಗಿದ್ದನಂತೆ ಅವನ ಅಪ್ಪ. ಆಗ ಅವನ ಪ್ರಾಯ ಹತ್ತೋ ಹನ್ನೆರಡೋ ಇದ್ದಿರಬಹುದಂತೆ. ನೋಡುತ್ತ ನೋಡುತ್ತ ಇದ್ದಂತೆ ಅದು ಮಾಯ ಆಗಿಬಿಟ್ಟಿತಂತೆ. ಪಕ್ಕದ ಹೊಳೆಯಲ್ಲಿ ಧಡಾರ್‌ ಎಂದು ಹಾರಿದ್ದು ಎದ್ದೇ ಇಲ್ವಂತೆ. ಅಪ್ಪ ಎಂಟು ದಿನ ಜ್ವರ ಬಂದು ಹಾಸುಗೆ ಹಿಡಿದಿದ್ದನಂತೆ. ಮೂರು ಕೋಳಿ ಬಿಟ್ಟು ಗ್ರಹಚಾರಕ್ಕೆ ನೋಡಿಸಿದ ಮೇಲಷ್ಟೇ ಆತ ಸುಧಾರಿಸಿಕೊಂಡಿದ್ದಂತೆ.
ಹಾಯ್ಗೂಳಿ ಅಂದರೆ ರಾಹುವಿನ ಪ್ರಾಣಿ ರೂಪ ಎಂಬ ನಂಬಿಕೆ. ಪ್ರಾಣಿಗಳಿಗೆ ಒಳಿತು ಮಾಡುವ ರಾಹು ಮನುಷ್ಯರಿಗೆ ಕೇಡು ತರುತ್ತಾನೆ ಎಂಬುದು ಇನ್ನೊಂದು ನಂಬಿಕೆ. ಕೊಟ್ಟಿಗೆ ಕಟ್ಟುವಾಗಲೆಲ್ಲ ರಾಹುನ ನಡೆ ಆಯದಲ್ಲಿ ಬರುವುದೋ ಎಂದು ನೋಡಿಕೊಂಡೇ ಕಟ್ಟುತ್ತಾರೆ. ರಾಹು ನಡೆ ಇದ್ದ ಜಾಗದಲ್ಲಿ ಕೊಟ್ಟಿಗೆ ಕಟ್ಟಿದರೆ ಹೈನಿಗೆ ಬರ ಇಲ್ಲವಂತೆ.
ಗಣಪುಗೆ ಅದೆಲ್ಲ ನೆನಪು ಬಂತು. ಕೋಡಿ ದಾಟಿದ ಮೇಲೆ ಸರಿಯಾಗಿ ಮೈಯನ್ನೂ ಒರಸಿಕೊಳ್ಳಲಿಲ್ಲ. ಪಂಚೆಯ್ನೂ ಸರಿಯಾಗಿ ಉಟ್ಟಿಕೊಳ್ಳಲಿಲ್ಲ. ಯಾರೋ ಅಟ್ಟಿಸಿಕೊಂಡು ಬರುತ್ತಿದ್ದಾರೆ ಎಂಬಂತೆ, ಅವರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟವನಂತೆ ಗಣಪು ಮನೆಯ ಕಡೆ ಹೆಜ್ಜೆ ಹಾಕತೊಡಗಿದ. ದಾರಿಯಲ್ಲಿ ಶಂಕರ ನಾಯ್ಕ, ಹಾದಿ ಬದಿಯ ಅಂಗಡಿ ಮಂಜು, ಕೋಲಕಾರ ಗೋಯ್ದ ಇವರ್ಯಾರೂ ಕರೆದದ್ದು ಅವನ ಕಿವಿಗೆ ಬೀಳಲೇ ಇಲ್ಲ.
ಮನೆಗೆ ಬಂದ ಗಣಪು ಊಟ ಮಾಡಿದನೋ ಬಿಟ್ಟನೋ ಅವನಿಗೇ ಅಕಲು ಇಲ್ಲದೆ ಹೋಯಿತು. ಮುಸುಕು ಎಳೆದು ಮಲಗಿಬಿಟ್ಟ. ಜ್ವರವೋ ಮುಟ್ಟಿದರೆ ಸುಡುವಷ್ಟು. ಮೈ ಕೈ ನೋವು, ನೆರಕುವುದೊಂದೇ ಮಾಡಿದ. ಮೂಡಲದಲ್ಲಿ ಭಗವಂತ ಹುಟ್ಟಿ ಮಾರು ಮೇಲೇರುವುದರೊಳಗೇ ಗಣಪುನ ಮಗ ವೈತಾನದ ಬೊಬ್ಬೆ ಮನೆಯ ಬಾಗಿಲಲ್ಲಿ ಇದ್ದ. ಬೊಬ್ಬೆ ಇಂಥ ಅವಕಾಶ ಎಲ್ಲ ಬಿಡುವವನೇ ಅಲ್ಲ. ಬಂದವನು ಆಯ ಹಾಕಿ ಮುರ್ತು ಸೋಕಿದೆ ಎಂದು ಬಿಟ್ಟ.
ಮುರ್ಕೋಡಿ ಮುರ್ತು ಅಂದರೆ ಸಾಮಾನ್ಯವೆ? ಎಷ್ಟು ಜನ ಮನೆ ಮುಟ್ಟುವುದರೊಳಗೇ ರಕ್ತ ಕಾರಿ ಸತ್ತಿಲ್ಲ? ಗಣಪುನ ‘ಸಾಯದ ಗಾಳಿ’ ಚಲೋ ಇತ್ತು. ಅದಕ್ಕೇ ಬದುಕಿಕೊಂಡು ಮನೆ ಸೇರಿದ್ದ ಎಂಬ ತೀರ್ಮಾನಕ್ಕೆ ಎಲ್ಲರೂ ಬಂದರು. ಪಂಚರಂಗಿ ಕೋಳಿ ತಂದು ಬಿಟ್ಟರು.
ಮುರ್ತು ಸೋಕಿದ್ದು ಪರೀಕ್ಷೆ ಮಾಡಿಸಲು ಗಣಪುನ ಬೆನ್ನಿಗೆ ತೆಂಗಿನ ಎಣ್ಣೆ ಸವರುವಂತೆ ಬೊಬ್ಬೆ ಹೇಳಿದ. ಆ ಮೇಲೆ ಕರಿಯ ನಾಯಿಯೊಂದನ್ನು ತಂದು ಅದರಿಂದ ಎಣ್ಣೆ ಸವರಿದ ಭಾಗ ನೆಕ್ಕಿಸಿದರೆ ಮುರ್ತುವಿನ ಹಸ್ತ ಮೂಡಿರುವುದು ಕಾಣುವುದು ಎಂದ. ಕರಿ ನಾಯಿ ಆ ಕೇರಿಯಲ್ಲಿ ಒಂದಾದರೂ ಇರಬೇಡವೆ? ಕಡೆಗೆ ಹೊಳೆಬದಿ ಕೇರಿಯ ಸಣಕೂಸನ ಮನೆಯಲ್ಲಿ ಇದ್ದ ಕರಿನಾಯಿಯನ್ನು ಹ್ಯೆಂಗ್ಯೆಂಗೋ ಮಾಡಿ ತಂದರು. ಸರಪಳಿ ಕಟ್ಟಿದ ನಾಯಿ ಅಲ್ಲ ಅದು. ಮೊದಲ ಬಾರಿಗೆ ಸರಪಳಿ ಹಾಕಿದ ಕೂಡಲೆ ಅದಕ್ಕೆ ಅಲವರಿಕೆ. ಕುಂಯ್‌ಗುಡುತ್ತಿದ್ದ ಅದನ್ನು ಎಳೆದುಕೊಂಡೇ ಬಂದರು.
ಗಣಪುನ ಬೆನ್ನನ್ನು ನೆಕ್ಕಿಸುವ ಸಂದರ್ಭದಲ್ಲಿ ಕೊಸರಾಡದ ನಾಯಿ ತನ್ನೆರಡೂ ಕಾಲಗಳನ್ನು ಗಣಪುನ ಬೆನ್ನಿನ ಮೇಲೆ ಊರಿ ಬಿಟ್ಟಿತು. ಅದರ ಉಗುರುಗಳು ಪರಚಿದಂತೆ ಆಯಿತು. ಆಮೇಲೆ ಹ್ಯೆಂಹ್ಯೆಂಗೋ ನೆಕ್ಕಿದಂತೆ ಮಾಡಿತು. ನಿಂತವರೆಲ್ಲ ಸಮ್ಮೋಹಿನಿಗೆ ಒಳಗಾದವರಂತೆ, ‘ಅಕಾ. ಕಂಡ್ಯಾ, ಹೆಂಗೆ ಮೂಡಿದೆ ನೋಡು ಹಸ್ತ’ ಅನ್ನುವುದಕ್ಕೆ ಶುರು ಮಾಡಿದರು. ಗಣಪು ಬದುಕಿ ಬಂದದ್ದೇ ದೊಡ್ಡದು ಎನ್ನುವುದು ಕೆಲವರ ಅಭಿಮತ. ಹೆಂಡ್ತಿ ನಸೀಬು ಚಲೋ ಅದೆ ಎಂಬುದು ಕೆಲವರ ತೀರ್ಮಾನ. ಕೊಳಗದ್ದೆ ಜೋಯಿಸರ ಮನೆಯಿಂದ ಮುರ್ತು ಸೋಕಿದ್ದಕ್ಕೆ ನೀಡುವ ಔಷಧ ತಂದು ಹಾಕಬೇಕು ಎಂಬುದು ಕೆಲವರ ಸಲಹೆ.
ಕೋಳಿ ಸ್ವರಗೈಯುವ ಹೊತ್ತಿಗೆ ಮನೆ ಬಿಟ್ಟು ಯಾರ ಜೊತೆಗೂ ಮಾತನಾಡದೆ ಈ ಔಷಧ ತಂದು ಕುಡಿಸಬೇಕಂತೆ. ಮರುದಿನ ಗಣಪುನ ಮಗ ಜೋಯಿಸರ ಮನೆಗೆ ಹೋಗಿ ಔಷಧ ತಂದು ಹಾಕಿದ. ಎಂಟು ದಿನದ ಮೇಲೆ ಗಣಪು ಮಗ್ಗಲು ಬದಲಿಸುವಷ್ಟು ತಯಾರಾದ. ಬಚಾವಾದ ಬಡಪಾಯಿ ಅಂದುಕೊಂಡರು ಎಲ್ಲರೂ.
ಹಾಸುಗೆ ಹಿಡಿದ ಹದಿನೈದು ದಿನಗಳಲ್ಲಿ ಗಣಪುನ ಗಣಪುತನ ಬಹಳಷ್ಟು ಮಾಯವಾಗಿತ್ತು. ನೋಡಿದವರೆಲ್ಲ, ‘ಗಣಪು ಮುರ್ತು ಸೋಕಿದ ಮೇಲೆ ಬಗೀಲೆ ಮಂದ ಆಗ್ಯಾನೆ’ ಅನ್ನುವುದಕ್ಕೆ ಆರಂಭಿಸಿದರು. ಮೊದಲಾದರೆ ಗಣಪು ಬಾಯಿ ತೆರೆದ ಅಂದರೆ ಕೋಳಿನ ಹುಲ್ಲು ಹೊದಿಕೆ ಹಾರಿ ಹೋಗುವಂತೆ ಆಗುತ್ತಿತ್ತು. ಈಗ ಅವನ ಧ್ವನಿ ಸೋತು ಹೋಗಿದೆ. ಸಾವನ್ನು ಸಂದರ್ಶಿಸಿ ಬಂದವರ ಹಾಗೆ ಜೀವನದಲ್ಲಿ ಇನ್ನೇನೂ ಉಳಿದಿಲ್ಲ ಎಂಬ ಭಾವ ತಳೆದವರ ಹಾಗೆ ಅವನು ಕಾಣುತ್ತಿದ್ದ. ಒಟ್ಟಾರೆ ಆ ಹದಿನೈದು ದಿನಗಳಲ್ಲಿ ಹದಿನೈದು ಮಳೆಗಾಲ ಹೆಚ್ಚು ಕಂಡವರಂತೆ ಆತ ಕಂಡುಬಂದ.
ಮತ್ತೆ ಗಣಪು ಮೊದಲಿನ ಹಾಗೆ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಎಲ್ಲರೂ ಬಂದಿದ್ದರು. ಅದೇ ಸಮಯಕ್ಕೆ ಊರಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆಗಳು ಬಂದವು. ಚುನಾವಣೆ ಎಂದರೆ ಏನು ಅನ್ನುವುದು ಇನ್ನೂ ಅಷ್ಟಾಗಿ ಗೊತ್ತಾಗಿರಲಿಲ್ಲ ಜನರಿಗೆ. ಗ್ರಾಮ ಪಂಚಾಯಿತಿಗಳಿಗೆ ಅದೇ ಮೊದಲ ಬಾರಿಗೆ ಚುನಾವಣೆಗಳು ನಡೆಯುವುದಾಗಿತ್ತು. ಊರಲ್ಲಿ ಯಾರ್ಯಾರೋ ಚುನಾವಣೆಗೆ ನಿಂತಿದ್ದರು. ಚುನಾವಣೆಗಳೂ ಮುಗಿದು ಹೋದವು. ಈ ಚುನಾವಣೆ ಮುಗಿದ ಒಂದು ವಾರದ ಮೇಲೆ ಊರ ಶ್ಯಾನುಭೋಗರ ಉಗ್ರಾಣಿ ಗಣಪುನ ಮನೆಯ ಮುಂದೆ ನಿಂತಿದ್ದ. ‘ಪೇಟೆಯಿಂದ ಸಾಹೇಬ್ರು ಬಂದಿದ್ದಾರೆ. ಶ್ಯಾನುಭೋಗರು ಕರ್ಕೊಂಡು ಬರ್ಲಿಕ್ಕೆ ಹೇಳಾರೆ’ ಎಂದು ಕುದುರೆ ಮೇಲೆ ಬಂದವನ ಹಾಗೆ ಆತುರ ಮಾಡಿ ಅವನನ್ನು ಚಾವಡಿಗೆ ಕರೆದುಕೊಂಡು ಹೋದ.
ಅಲ್ಲಿ ನೋಡಿದರೆ ಗೌಡರು, ಹೆಗಡೆಯವ್ರು, ಸೆಟ್ಟರು, ನಾಯ್ಕರು ಎಲ್ಲ ಜಮಾಯಿಸಿಕೊಂಡವ್ರೆ. ‘ಬಾರೋ ಗಣಪು’ ಎಂದು ಶ್ಯಾನುಭೋಗರು ಚಾವಡಿ ಬಾಗಿಲಿನಿಂದ ಎರಡು ಮಾರು ದೂರ ನಿಂತಿದ್ದ ಅವನನ್ನು ಕರೆದರು. ಈ ಎಲ್ಲ ಅಹಿರಾವಣ ಮಹಿರಾವಣರು ಕುಂತಿರುವಾಗ ಶ್ಯಾನುಭೋಗರಿಗೆ ನಂದೇನು ಜಂಬ್ರ ಅಂದುಕೊಂಡು ಅಲ್ಲೇ ಕುಕ್ಕರಿಸಲು ಉಪಕ್ರಮಿಸಿದ ಎರಡಿಪ್ಪತ್ತು ಸಂದ ಗಣಪು ಮತ್ತೆ ಸೊಂಟ ನೆಟ್ಟಗೆ ಮಾಡಿ ಎದ್ದು ನಿಂತ. ಅವನು ಅಲ್ಲೇ ನಿಂತದ್ದು ನೋಡಿ, ‘ಒಳಗೆ ಬಾರೋ ಗಣಪು’ ಎಂದು ಮತ್ತೆ ಅವರು ಕರೆದರು. ಎಂದಾದರೂ ಅವರೆಲ್ಲ ಕುಳಿತಿರುವ ಒಳಗೆ ಹೋಗಿದ್ದೇ ಇಲ್ಲ. ಅಂತಿರುವಾಗ ಈ ಶ್ಯಾನುಭೋಗರು ಮಸ್ಕಿರಿ ಮಾಡ್ತಾರೆ ಅಂದುಕೊಂಡ ಗಣಪು. ಮತ್ತೂ ಒಮ್ಮೆ ಕರೆದಾಗ ಆ ಕಡೆ ಈ ಕಡೆ ನೋಡಿ ತನ್ನನ್ನೇ ಕರೆಯುವುದು ಎಂಬುದನ್ನು ಖಾತರಿ ಪಡಿಸಿಕೊಂಡು ಗಣಪು ಹತ್ತು ಹೆಜ್ಜೆ ಮುಂದೆ ಬಂದ. ಹೊಸ್ತಿಲಲ್ಲಿ ಹೆಜ್ಜೆ ಇಡುವಾಗ ಎಡಗಾಲು ಮೊದಲು ಇಡಲೆ ಬಲಗಾಲು ಮೊದಲು ಇಡಲೆ ಎಂದು ಕ್ಷಣಕಾಲ ಚಿಂತಿಸಿದ. ತಾನೇನು ಮದುವೆ ಹೆಣ್ಣೇ ಎಂದು ಕೊಂಡು ತನ್ನ ಆಲೋಚನೆ ಬಗ್ಗೆ ಅವನಿಗೇ ನಗು ಬಂತು. ‘ಬಾ, ಬಾ’ ಎಂದು ಈಗ ಮತ್ಯಾರೋ ಕರೆದಂತಾಯಿತು. ಆ ಗಡಿಬಿಡಿಯಲ್ಲಿ ಎಡಗಾಲು ಯಾವುದು ಬಲಗಾಲು ಯಾವುದು ಎನ್ನುವುದನ್ನು ಗಮನಿಸದೆ ಶ್ಯಾನುಭೋಗರ ಮುಂದೆ ಬಂದು ಆತ ನಿಂತು ಬಿಟ್ಟಿದ್ದ. ಆ ಹತ್ತು ಹೆಜ್ಜೆಗಳಲ್ಲಿ ಆತ ಹತ್ತು ನೂರು ವರ್ಷಗಳನ್ನು ದಾಟಿ ಬಂದಂತೆ ಆಗಿತ್ತು.
ಇಲ್ಲಿ ಹೆಬ್ಬೆಟ್ಟು ಊರು ಅಂದರು ಅವರು. ಮಸಿ ಪ್ಯಾಡಿಗೆ ಆತ ತನ್ನ ಹೆಬ್ಬೆಟ್ಟು ಒತ್ತಿ ಮಸಿ ಮಾಡಿಕೊಂಡ. ಇದನ್ನು ಎಲ್ಲಿ ಒತ್ತುವುದು, ಯಾಕೆ ಒತ್ತುವುದು ಒಂದೂ ಅಕಲಿಗೆ ಬರದೆ ಬಿಟ್ಟ ಕಣ್ಣು ಬಿಟ್ಟಂತೆ ಇಟ್ಟುಕೊಂಡು ನಿಂತಾಗ ಪೇಟೆಯಿಂದ ಬಂದ ಸಾಹೇಬರೊಬ್ಬರು ಅವನ ಕೈ ಹಿಡಿದು ಕಾಗದದ ಒಂದು ಕಡೆ ಊರಿಸಿಯೇ ಬಿಟ್ಟರು. ‘ಅರೇ ಅವ್ರು ನನ್ನ ಮುಟ್ಟಿಬಿಟ್ಟರೆ?’ ಎಂದು ಮೈಯೆಲ್ಲ ಜುಮ್ಮಂದು ಕಣ್ಣಿಗೆ ಒಂದು ಸಲ ಅವನಿಗೆ ಕತ್ತಲು ಕವಿದಂತೆ ಆಯಿತು. ಅಯ್ಯೋ ನಾಳೆ ಮೂಡಲದಲ್ಲಿ ಭಗವಂತ ಹುಟ್ಟುತ್ತಾನೆಯೆ? ಮಾವಿನ ಮರದಲ್ಲಿ ಬಿಟ್ಟಿರುವ ಹೂವುಗಳು ಮಿಡಿಯಾದಾವೇ ಇಲ್ಲ ಮುರುಟಿ ಕೆಳಗೆ ಬಿದ್ದಾವೆ? ಎಂಬೆಲ್ಲ ವಿಚಾರಗಳ ಅಯೋಮಯ ಸ್ಥಿತಿಯಲ್ಲಿ ಅವನಿಗೆ ‘ಅಲ್ಲಿ ಕೂತ್ಗೋ’ ಎಂದು ಯಾರೋ ಹೇಳಿದರು. ಆಕಾಶದಿಂದ ಅಶರೀರವಾಣಿಯನ್ನು ಕೇಳಿ ಅದನ್ನು ಅನುಸರಿಸುವ ತೆರದಲ್ಲಿ ಅವರು ಕೈ ತೋರಿಸಿದ ಕಡೆ ಗಣಪು ಕುರ್ಚಿಯಲ್ಲಿ ಕುಳಿತನು.
ಊರಿನ ಘಟಾನುಘಟಿಗಳ ಸರಿಸಮಾನ ಸಾಲಿನಲ್ಲಿ ಕುಳಿತ ತನ್ನನ್ನು ತಾನು ಒಮ್ಮೆ ನೋಡಿಕೊಂಡ ಗಣಪು ಮುರ್ಕೋಡಿ ಕಟ್ಟೆಯ ಮುರ್ತು ತನ್ನನ್ನು ಸೋಕಿ ಸಾಯಿಸದೆ ಆಗ ಉಳಿಸಿತು. ಈಗ ಜೀವಂತ ಸ್ವರ್ಗಕ್ಕೆ ಒಯ್ಯುತ್ತಿದೆಯೇನೋ ಅಂದುಕೊಂಡ. ಮುರ್ತು ಸೋಕಿ ಸಾಯದೆ ಉಳಿದ ತನಗೆ ಪುನರ್‌ಜನ್ಮ ಬಂತೇನೋ ಅಂದುಕೊಂಡ. ಅದೇ ಹೊತ್ತಿನಲ್ಲಿ ಬದಿಯಲ್ಲೇ ತಟ್ಟಿ ಬಿಡಾರದಲ್ಲಿ ಚಾದಂಗಡಿ ನಡೆಸುತ್ತಿದ್ದ ಗೋಪಾಳ ಕಿಣಿ ಚಾ ತಗೊಂಡು ಬಂದನು. ಎಲ್ಲರಿಗೂ ಚಾ ಕೊಡುತ್ತ ಬಂದವನು ಗಣಪುನ ಹತ್ತಿರ ಬಂದು ನಿಂತು ಅನುಮಾನಿಸಿದ. ಮತ್ತೆ ಮರುಕ್ಷಣದಲ್ಲೇ ಅವನಿಗೂ ಒಂದು ಗ್ಲಾಸು ಎತ್ತಿ ಕೊಟ್ಟುಬಿಟ್ಟ. ಗೋಪಾಳ ಕಿಣಿಯ ಚಾದಂಗಡಿಯನ್ನು ಗಣಪು ಈ ಜನ್ಮದಲ್ಲಿ ಒಮ್ಮೆಯೂ ಪ್ರವೇಶಿಸಿರಲಿಲ್ಲ. ಚಾ ಕುಡಿಯಬೇಕು ಅನ್ನಿಸಿದಾಗ ಅವನ ಅಂಗಡಿಯ ಹೊರಗೆ ಹೊಳ್ಳಿಯ ಮೇಲೆ ಕುಂತೋ ನಿಂತೋ ಕೂಗಬೇಕಿತ್ತು. ಹೊರಗೆ ಇವನಿಗಾಗಿಯೇ ಇರಿಸಿದ್ದ ಗ್ಲಾಸು ಹಿಡಿದುಕೊಂಡಿದ್ದರೆ ಗೋಪಾಳ ಕಿಣಿ ಚಾ ತಂದು ಸುರಿಯುತ್ತಿದ್ದ. ಆಮೇಲೆ ಆತ ನೀರು ಸುರಿಯುತ್ತಿದ್ದ. ಅದರಲ್ಲಿ ಗ್ಲಾಸು ತೊಳೆದು ಅವನು ಸ್ವಸ್ಥಾನದಲ್ಲಿ ಅದನ್ನು ಇರಿಸಬೇಕಿತ್ತು. ಆದರೆ ಇವನು ಕೊಟ್ಟ ಕಾಸು ಮಾತ್ರ ಕಿಣಿಯ ಗಲ್ಲಾ ಪೆಟ್ಟಿಗೆ ಸೇರುತ್ತಿತ್ತು.
ಹೀಗಿರುತ್ತ ಇಂದು ಹೇಳದೆ ಕೇಳದೆ ತನ್ನ ಕೈಯಲ್ಲಿ ಚಾ ತುಂಬಿದ ಗ್ಲಾಸು ಇಟ್ಟು ಹೋದದ್ದು ಕಂಡು, ಕಿಣಿ ಮರೆತು ಕೊಟ್ಟರೇನೋ ಅಂದುಕೊಂಡು ಕುಡಿದೆ ಕೈಯಲ್ಲಿಯೇ ಹಿಡದುಕೊಂಡಿದ್ದ. ಚಾ ತಣ್ಣಗಾಗತೊಡಗಿತು. ಅವನು ಹಾಗೆ ಕುಡಿಯದೆ ಇದ್ದುದನ್ನು ಕಂಡು ಶ್ಯಾನುಭೋಗರು ‘ಗಣಪು ಚಾ ಕುಡಿಯೋ’ ಅಂದರು. ಸಮ್ಮೋಹಿನಿಗೆ ಒಳಗಾದವನಂತೆ ಅವನು ಒಂದೇ ಗುಟುಕಿಗೆ ಚಾ ಮೇಲಿಂದ ಬಾಯಿಗೆ ಸುರಿದುಕೊಂಡು ನುಂಗಿಬಿಟ್ಟ. ಪುಣ್ಯಕ್ಕೆ ಚಾ ಥಂಡಾಗಿತ್ತು. ಇಲ್ಲದಿದ್ದರೆ ಬಾಯಿ ಸುಟ್ಟು ಹೋಗುತ್ತಿತ್ತು.
ಚಾ ಕುಡಿದ ಮೇಲೆ ಪೇಟೆಯಿಂದ ಬಂದ ಸಾಹೇಬ್ರು, ‘ಗಣಪು, ಪರಿಶಿಷ್ಟ ಜಾತಿಯವರಿಗೆ ಇರುವ ಕೋಟಾದಲ್ಲಿ ಸರಕಾರ ನಿನ್ನನ್ನು ಪಂಚಾಯ್ತಿ ಸದಸ್ಯ ಎಂದು ನಾಮಕರಣ ಮಾಡಿದೆ’ ಎಂದು ಹೇಳಿದರು. ಹಾಗೆಂದರೆ ಏನೆಂದು ಅವನಿಗೆ ಅರ್ಥವಾಯತೋ ಇಲ್ಲವೋ, ಆದರೆ ಪ್ರತಿ ತಿಂಗಳು ಶ್ಯಾನುಭೋಗರ ಉಗ್ರಾಣಿ ಬಂದು ಮೀಟಿಂಗು ಇದೆ ಎಂದು ಹೇಳಿ ಹೋಗುತ್ತಿದ್ದ. ಇವನು ಹೋಗಿ ಹೆಬ್ಬೆಟ್ಟು ಒತ್ತಿ ಬರುತ್ತಿದ್ದ.
ಅದೆಷ್ಟು ಮೀಟಿಂಗುಗಳಿಗೆ ಗಣಪು ಹಾಜರಿ ಕೊಟ್ಟು ಬಂದನೋ ದೇವರೇ ಬಲ್ಲ. ಆ ಊರಲ್ಲಿ ಗ್ರಾಮ ಪಂಚಾಯಿತಿಗೆ ಮೆಂಬರು ಆಗಿ ನಾಮಕರಣ ಆಗುವ ಪುಣ್ಯ ಗಣಪುನ ಬಿಟ್ಟು ಬೇರೊಬ್ಬರಿಗೆ ಬರಲೇ ಇಲ್ಲ. ಮೀಟಿಂಗಿನಲ್ಲಿ ಒಂದಾದ್ರೂ ಮಾತೆ, ಕಥೆಯೆ? ಗಣಪು ತಾನಾಯಿತು ತನ್ನ ನೂಲುಂಡೆ ಅಂದ್ಕೊಂಡು ಉಳಿದವರು ಅಂದಿದ್ದನ್ನು ಕೇಳಿಸಿಕೊಳ್ಳುತ್ತ ಊರು ಎಂದಲ್ಲಿ ದೂಸರಾ ಮಾತಿಲ್ಲದೆ ಹೆಬ್ಬೆಟ್ಟು ಊರುತ್ತ ಬಂದ. ಪರಿಶಿಷ್ಟರ ಕಲ್ಯಾಣಕ್ಕೆ ಬಂದ ಎಷ್ಟೋ ಯೋಜನೆಗಳು ಎಲ್ಲೆಲ್ಲೋ ಜಾರಿಯಾದವು. ಇವನು ಮಾತ್ರ ಕಮಕ್‌ ಕಿಮಕ್‌ ಅನ್ಲಿಲ್ಲ. ಹರಿಜನ ಕೇರಿಗೆ ಬಾವಿ ಮಂಜೂರಾದದ್ದು ಹೆಗಡೆಯವರ ತೋಟದಲ್ಲಿ ತೋಡಿದ್ದಾಯಿತು. ಹಾಗೇ ಗಣಪನ ಕುಟುಂಬಕ್ಕೆ ಮಂಜೂರಾದ ಎರಡೆಕರೆ ಸರಕಾರಿ ಭೂಮಿ ಸಾಗು ಮಾಡುವ ತ್ರಾಸನ್ನು ಗಣಪಯ್ಯ ನಾಯ್ಕ ಹೊತ್ತುಕೊಂಡ. ಇವರ ಕೇರಿಗೆ ಬಂದ ತೆಂಗಿನ ಮಾವಿನ ಸಸಿಗಳು ಮರವಾಗಿ ಕಾಯಿಬಿಡತೊಡಗಿದ್ದು ಗೋವಿಂದ ನಾಯಕರ ತೋಟದಲ್ಲಿ. ಇವರ ಹೆಸರಿಗೆ ಬಂದ ಎಮ್ಮೆಯನ್ನು ಕಟ್ಟಿ ಹಾಲು ಕುಡಿದವರು ಪದ್ಮನಾಭ ಸೆಟ್ಟರು. ರೇಶನ್ನಿಗೆ ಹೋದರೆ, ನೀವೆಲ್ಲಿ ಸಕ್ಕರೆ ಹಾಕಿದ ಚಾ ಕುಡಿಯುತ್ತೀರೋ ಎಂದು ಚಾದಂಗಡಿಯ ಕಿಣಿಯೇ ಸಕ್ಕರೆ ತೂಗಿಸಿಕೊಳ್ಳುತ್ತಿದ್ದ.
ಇವೆಲ್ಲ ದೊಡ್ಡ ಉಸಾಬರಿ ಅಲ್ವಾ? ಅವಿಲ್ಲದೆ ಬದುಕಿ ಬಂದಿಲ್ಲವೆ ನಾವು? ಕೈ ಕಾಲುಗಳಲ್ಲಿ ಸತುವು ಇದೆ. ಗೇಯ್ಕೊಂಡು ತಿನ್ನೂಕೆ ಯಾರ ಅಡ್ಡಿ ಎಂಬ ಸಿದ್ಧಾಂತದವನು ಗಣಪು. ಮಗ ಹೊಂತ್ಕಾರಿ ಆಗಾನೆ. ಕಡ್ದರೆ ನಾಲ್ಕಾಳು ಆಗೂವಂಗೆ ಅಂವ್ನೆ ಅಂತ ಮೊನ್ನೆ ಮೊನ್ನೆ ತೇಂವ್ಪ ಗೌಡ ಹೇಳಿದ್ದ. ಅದ ಕೇಳಿ ಇವನಿಗೆ ಒಳಗೊಳಗೇ ಖುಷಿ. ಮಂದಿ ಆಡಿಕೊಳ್ಳುವಂಥ ಬೆಳವಣಿಗೆ ಅವನ ಮಗ ಧರ್ಮನದು. ಗೌಡರ ಮನೆಯಲ್ಲೋ, ಹೆಗಡೆಯವರ ಮನೆಯಲ್ಲೋ, ಸೆಟ್ಟರ ಮನೆಯಲ್ಲೋ ಹಬ್ಬ ಹುಣ್ಣಿಮೆ ಆದರೆ ತೋಟದಲ್ಲಿ ನಿಂತು ಕೂಗಿ ಅಡಕೆ ಮರದ ಹಾಳೆಯಲ್ಲೋ ಹೊಂಬಾಳೆಯಲ್ಲೋ ನೀಡಿಸಿಕೊಂಡು ಉಂಡರೂ ಮಗ ಇಷ್ಟೊಂದು ಸಂಪಾಗಿ ಬೆಳೆದಿದ್ದಾನೆ ಅಂದರೆ ಹುಲಿದೇವ್ರ ವರವೇ ಅದು ಅಂದ್ಕೊಂಡಿದ್ದಾನೆ ಗಣಪು.
ಗಣಪುನ ಮಗಳೊಬ್ಳು ಆಗಲೇ ಮದುವೆಯಾಗಿ ಗಂಡನ ಮನೆಗೆ ಹೋದವಳು ಗಂಡ ಸತ್ತ ಕಾರಣ ಮರಳಿ ಮನೆಗೆ ಬಂದಿದ್ದಾಳೆ. ಅವಳೇನು ಅಪ್ಪನ ಮನೆಗೆ ಭಾರವಾಗಿ ಇಲ್ಲ. ತನ್ನ ಪಾಡಿಗೆ ತಾನು ಕರೆದವರ ಮನೆಯ ತೋಟದಲ್ಲಿ ಕಳೆ ಕೀಳುವುದು, ನಾಟಿಗೆ ಹೋಗುವುದು, ಕೆಯ್‌ ಬಡಿಯಲು ಹೋಗುವುದು ಮಾಡುತ್ತಿದ್ದಳು. ಈಗೀಗ ಅವಳು ಮೀನು ವ್ಯಾಪಾರವನ್ನೂ ಮಾಡುತ್ತಿದ್ದಳು. ಹೊನ್ನಾವರದಿಂದ ಬುಟ್ಟಿಗಳಲ್ಲಿ ಮೀನು ತಂದು ಮನೆ ಮನೆಗೆ ಒಯ್ದು ಮಾರುತ್ತಿದ್ದಳು. ಮೀನಗೇನು ಮಡಿ ಮೈಲಿಗೆ ಶಾಸ್ತ್ರ ಎಂದುಕೊಂಡು ಗೌಡರು, ನಾಯ್ಕರು ಎಲ್ಲ ಅವಳಿಂದಲೇ ಖರೀದಿಸುತ್ತಿದ್ದರು.
ಹೀಗೆ ಮೀನು ಮುಟ್ಟಿಯನ್ನು ಹೊತ್ತುಕೊಂಡು ಮೈಯ ಗುಲ್ಲಿಸುತ್ತ ಆಕೆ ಹೋಗುವಾಗ ಕೇರಿಯ ಹೊಂತ್ಕಾರಿಗಳು ಆಕೆಯ ಹಿಂಭಾಗದಲ್ಲೇ ಕಣ್ಣು ನಟ್ಟಿರುತ್ತಿದ್ದರು. ಅನೇಕ ಹೊಂತ್ಕಾರಿಗಳಿಗೆ ಆ ಅದರ ಓ ನಾಮ ಹೇಳಿಕೊಟ್ಟವಳೇ ಅವಳು. ಕೇರಿಯ ಕೆಲವರಾದರೂ ಅವಳ ಮೈಮೇಲೆ ಎಲ್ಲೆಲ್ಲಿ ಯಾವ ನಮೂನೆಯ ಕಲೆ ಇದೆ ಎಂದು ನಿಖರವಾಗಿ ಹೇಳಬಲ್ಲವರಾಗಿದ್ದರು. ಅದೇ ರೀತಿ ಅವಳಾದರೂ ಯಾರ ತಾಕತ್ತು ಎಷ್ಟು ನಿಮಿಷದ್ದು ಎಂಬ ರಹಸ್ಯ ಬಿಚ್ಚಿಡಬಲ್ಲವಳಾಗಿದ್ದಳು.

ಶರಾವತಿ ಅದೆಷ್ಟೋ ಮಳೆಗಾಲದ ನೀರನ್ನು ಹೊತ್ತೊಯ್ದು ಸಮುದ್ರಕ್ಕೆ ಸೇರಿಸಿದ್ದೇ ಸೇರಿಸಿದ್ದು. ಗಣಪುನ ಬೆನ್ನು, ಎದೆ, ಹಣೆಗಳಿಂದ ಸುರಿದ ಬೆವರನ್ನು ಮಾಪು ಇಟ್ಟು ಅಳೆದವರು ಯಾರು? ನಾನು ಹೆಬ್ಬಟ್ಟು, ನನ್ನ ಮಗ ಧರ್ಮನೂ ಹೆಬ್ಬಟ್ಟು. ಇದು ಹೀಗೆಯೇ ಮುಂದುವರಿಯಬೇಕೆ ಎಂದು ಒಮ್ಮೊಮ್ಮೆ ಸೊಂಟದಲ್ಲಿ ಕಸುವು ಕಾಣಿಸಿಕೊಂಡಾಗ ಅವನು ಚಿಂತಿಸುವನು. ಧರ್ಮನ ಮಗ ಸಂಕ್ರುಗೆ ನಾಲ್ಕಕ್ಷರ ಹತ್ತಿದರೆ ಏನಾದ್ರೂ ದಾರಿ ಆಗುತ್ತಿತ್ತೇನೋ ಎಂದು ಒಂದು ಕ್ಷಣ ಅನ್ನಿಸುವುದು. ಇನ್ನೊಂದು ಕ್ಷಣ, ಅದೊಂದು ಶೇಖಮಾಮನ ಕನಸಲ್ಲವೆ ಅನ್ನಿಸಿ ಪೆಚ್ಚಾಗುವನು. ಒಮ್ಮೊಮ್ಮೆ ಗೇರು ಮರದ ಬುಡದಲ್ಲಿ ಒರಗಿ ಕಣ್ಣು ಮುಚ್ಚಿಕೊಂಡು ತನ್ನ ಸಂಕ್ರು ಪ್ಯಾಂಟು, ಬೂಟು, ಟೈ ಹಾಕ್ಕೊಂಡು ದೊಡ್ಡ ಸಾಹೇಬನಾದ ಹಾಗೆ ಕನಸು ಕಾಣುವನು. ಅದೇನೋ ಪರಂಗಿಯವರ ಭಾಷೆಯಲ್ಲಿ ಠುಸ್‌ ಪುಸ್‌ ಅನ್ನುತ್ತ, ಬಾಯಲ್ಲಿ ಪೈಪ್‌ ಇಟ್ಟುಕೊಂಡು ಥೇಟ್‌ ಸಾಹೇಬರ ಹಾಗೆ ಸಂಕ್ರುನ ಕಲ್ಪಿಸಿಕೊಂಡು, ಖುಷಿಯ ಕಂದರದಲ್ಲಿ ಬಿದ್ದವನಂತೆ ಆ ಖುಷಿಗೆ ತಾನೇ ಭಯಪಟ್ಟು ಬೆವರುತ್ತ ಎಚ್ಚರಾಗುವನು.
ಹೀಗೆ ಗಣಪುನ ಅಕ್ಷರ ಧ್ಯಾನ ಒಂದು ವ್ಯಸನದಂತೆ, ಉಂಬಳದ ಹುಳುವಿನಂತೆ, ಬೆವರು- ರಕ್ತ- ಮಸ್ತಿಸ್ಕದ ಅನೂಹ್ಯ ಬಂಧನದಂತೆ ಕಾಡಿ ಕಾಡಿ ಒಂದು ಗುಂಗನ್ನಾಗಿ ಮಾಡಿ ಬಿಟ್ಟಿತು. ಪಂಚಾಯಿತಿಯ ಹತ್ತಾರು ನೂರಾರು ಮೀಟಿಂಗುಗಳಿಗೆ ಹೋಗಿ ಹೋಗಿ ಹೆಬ್ಬೆಟ್ಟು ಒತ್ತಿ ಒತ್ತಿ ತನ್ನ ಎಡಗೈಯ ಹೆಬ್ಬೆಟ್ಟು ಸವೆದು ಸವೆದು ಸಣ್ಣಾಗಿ ಹೋದಂತೆ ಕನವರಿಸುವನು ಅವನು. ಸರಕಾರ ಅದೇನೇನೋ ನಮ್ಮವರ ಉದ್ಧಾರಕ್ಕೆ ಖಂಡುಗ ಖಂಡುಗ ಸುರಿಯಲಿಕ್ಕೆ ಸಿದ್ಧ ಆಗಿದೆ ಎಂಬುದು ಮೀಟಿಂಗಿಗೆ ಹೋದಾಗ ಕಿವಿಗೆ ಬಿದ್ದು ಅವನ ಅಕಲಿನ ಮೇಲೆ ಅಚ್ಚಾಗತೊಡಗಿತು. ಆದರೆ ಅದೊಂದೂ ತನ್ನ ಮನೆಯ ತನಕ, ತನ್ನವರ ಕೇರಿಯ ತನಕ ಬರದೆ ಹೋಯಿತಲ್ಲ ಎಂಬ ಸಂಗತಿಯೂ ಗಮನಕ್ಕೆ ಬಂತು. ಹಾಗೆಂದು ಬಾಯಿ ಒಡೆದನೆ ಅವನು? ಅದು ಎಂದಿಗೂ ಸಾಧ್ಯವಿಲ್ಲ ಅವನಿಂದ. ಅದೆಂದೋ ಬಿಚ್ಚಲಾಗದ ಹೊಲಿಗೆಯಂತೆ ಹೊಲಿದುಕೊಂಡುಬಿಟ್ಟಿದೆ. ಅದೆಂಥ ಹರಿತ ಆಯುಧದಿಂದ ಇಕ್ಕರಿಸಿದರೂ ಬಿಚ್ಚಿಕೊಳ್ಳಲಾಗದಂಥ ಹೊಲಿಗೆ ಅದು.
ಬಾಯನ್ನು ಬಾನಗಲಕ್ಕೆ ತೆರೆಯುವವರ ಮುಂದೆ ಮಾತಿಲ್ಲದವನಾದ ಗಣಪು ಈ ಜಲವಳ್ಳಿಯ ಗಡಿ ಸುತ್ತುಗಳನ್ನೆಲ್ಲ ದಾಟಿ, ತಳಭಾಗದವರ ತಲೆಯ ಇಕ್ಕಿ ಮೆಟ್ಟಿದವನಂತೆ ಒಂದು ದಿನ ತನ್ನ ಕನಸಿನ ಕೂಸು ಮೊಮ್ಮಗ ಸಂಕ್ರುನ ಊರ ಕೋಳಿಗಳು ಸ್ವರ ಗೆಯ್ಯುವುದಕ್ಕೆ ಮೊದಲೇ ಎಬ್ಬಿಸಿಕೊಂಡು ಪಡು ದಿಕ್ಕಿನ ಕಡೆ ಪಡುಕುಳಿ, ಹೊಸಾಡ, ಕೂಡ್ಲ, ಮಾವಿನಕುರುವಗಳನ್ನೆಲ್ಲ ದಾಟಿ ಹೊನ್ನಾವರಕ್ಕೆ ಕರೆದುಕೊಂಡು ಬಂದನು. ಮೊಟ್ಟಮೊದಲ ಬಾರಿಗೆ ಮೋಟಾರು ವಾಹನ, ಸೈಕಲ್ಲುಗಳನ್ನೆಲ್ಲ ಕಂಡು ಬೆಕ್ಕಸ ಬೆರಗಾಗಿ ತೆರೆದ ಬಾಯಿ ಮುಚ್ಚದೆ ನೋಡುತ್ತ ಅಲ್ಲಲ್ಲೇ ನಿಲ್ಲುತ್ತ, ಮಂದೆ ಹೆಜ್ಜೆ ಇಕ್ಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೋ ಎಂಬಂತೆ ಅಜ್ಜನಿಗೆ ಅಲವರಿಕೆ ಮಾಡುತ್ತ, ಹೆಜ್ಜೆಗೊಮ್ಮೆ ಎಳೆಯಿಸಿಕೊಳ್ಳುತ್ತ ಸಾಗಿದ ಸಂಕ್ರುನ ಪಾಲಿಗೆ ಅಜ್ಜ ಸ್ವರ್ಗಕ್ಕೆ ಕಿಚ್ಚು ಹಚ್ಚುವವನಂತೆ ಕಂಡಿದ್ದು ಸುಳ್ಳಲ್ಲ.
ಗಣಪು ಪಂಚಾಯಿತಿ ಮೀಟಿಂಗಿಗೆ ಒಮ್ಮೊಮ್ಮೆ ಊರಿಗೆ ಬರುತ್ತಿದ್ದ ಪೇಟೆಯ ಸಾಹೇಬರು ಎಲ್ಲಿದ್ದಾರೆ ಎಂದು ಹುಡುಕಿ ಅವರ ಕಚೇರಿಯ ಟೇಬಲ್ಲಿನ ಮುಂದೆ ಮಾರುದ್ದ ದೇಹವ ಗೇಣುದ್ದ ಮಾಡಿಕೊಂಡು ಮೊಮ್ಮಗನ ಬಗ್ಗೆ ತಾನು ಕಂಡ ಕನಸನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕಾಗಿ ಬೇಡಿಕೆ ಸಲ್ಲಿಸಲು ಶಬ್ದಗಳಿಗಾಗಿ ತಡಕಾಡತೊಡಗಿದ. ಆ ಸಾಹೇಬರು ಗಣಪುನ ಪಾಲಿಗೆ ಸಾಕ್ಷಾತ್‌ ಪರಮೇಶ್ವರನೇ ಆಗಿ ಕಂಡರು. ಆತನ ಬಡಬಡಿಕೆಯನ್ನೆಲ್ಲ ಆಲಿಸಿದ ಅವರು ಮೊಮ್ಮಗನಿಗೆ ನಾಲ್ಕಕ್ಷರ ಕಲಿಸಲು ಅವನು ಬಯಸುತ್ತಾನೆ ಎಂಬುದನ್ನು ಅರ್ಥಮಾಡಿಕೊಂಡರು. ಸರಿ, ಅವರೊಂದು ಚೀಟಿ ಬರೆದು ಅವನ ಕೈಯಲ್ಲಿ ಕೊಟ್ಟು ಇದು ನಿಮ್ಮ ಜನಕ್ಕೆ ಸರಕಾರ ಕಟ್ಟಿಸಿರುವ ಹಾಸ್ಟೆಲ್ಲಿನ ವಿಳಾಸ ಮತ್ತು ಅಲ್ಲಿರುವ ಅಧಿಕಾರಿಗೆ ಪತ್ರ ಇದೆ. ಇದನ್ನು ತಗೊಂಡು ಹೋಗಿ ಅವರಿಗೆ ತೋರಿಸು. ನಿನ್ನ ಮೊಮ್ಮಗನ ಅಲ್ಲಿಯೇ ಬಿಟ್ಟು ಹೋಗಬೇಕು. ಊಟ ವಸತಿ ಎಲ್ಲ ಸರಕಾರದ ಖರ್ಚಿನಲ್ಲಿಯೇ ಆಗುತ್ತದೆ ಎಂದು ಹೇಳಿದರು. ಒಹೋ ಕನಸಿನೂರಿಗೆ ಇನ್ನೊಂದು ಹೆಜ್ಜೆ ಹತ್ತಿರ ಎಂದು ಗಣಪು ಅತ್ಯಾನಂದ ತುಂದಿಲನಾಗಿ ಆ ವಿಳಾಸವನ್ನು ಹುಡುಕಿಕೊಂಡು ಹೋಗಿ ಮೊಮ್ಮಗನನ್ನು ಅಲ್ಲಿ ಬಿಟ್ಟು ತನಗೆ ತಿಳಿದ ಭಾಷೆಯಲ್ಲಿ ಏನೇನೋ ಗೊಣಗುತ್ತ ಆತನ ತಲೆಯ ಮೇಲೆ ಕೈ ಇಟ್ಟು ಕಣ್ಣು ಮಂಜಾಗಿಸುತ್ತ ವಾರ್ಡನ್‌ ಹತ್ತಿರ ತನ್ನ ಕಳ್ಳು ಬಳ್ಳಿಯನ್ನು ನಿಮ್ಮ ಉಡಿಯಲ್ಲಿ ಹಾಕಿದ್ದೇನೆ, ಒಪ್ಪಿಸಿಕೊಳ್ಳಿ ಎಂದು ಹೇಳುತ್ತ ಅಲ್ಲಿಂದ ಹೆಜ್ಜೆ ಕಿತ್ತಿದ್ದ.
ಗಣಪುನ ಕನಸಿನ ಕುಡಿ ಮುಂದೆ ಬೆಳೆದು ದೊಡ್ಡವನಾದ ಪರಿ ಹತ್ತಾರು ಜನರ ಬಾಯ ಕವಳ ಆಗಿತ್ತು. ಅದನ್ನು ಅಗಿದವರು ಹಲವರು, ನುಂಗಿದವರು ಕೆಲವರು, ನುಂಗಲಾಗದೆ ಉಗುಳಿದವರು ಮತ್ತೆಷ್ಟೋ ಜನ. ಗಣಪು ಮೊಮ್ಮಗನನ್ನು ಬೆಳಕು ಮೂಡುವ ಮೊದಲೇ ಊರು ದಾಟಿಸಿದ್ದು ಅಂಥ ಸುದ್ದಿಯೇನಾಗಿರಲಿಲ್ಲ. ಜಲವಳ್ಳಿಯೆಂಬ ಗ್ರಾಮದಲ್ಲಿ ಹುಲುಮಾನವನಾದ ಗಣಪುನ ಮೊಮ್ಮಗ ಸಂಕ್ರುನ ಅಸ್ತಿತ್ವ ಇಲ್ಲವಾಗಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಸೃಷ್ಟಿಯ ಯಾವ ಕ್ರಿಯೆಯಲ್ಲಿಯೂ ಯಾವ ವ್ಯತ್ಯಾಸವನ್ನೂ ಅದು ಉಂಟು ಮಾಡಲಿಲ್ಲ. ಆದರೆ ಬರುತ್ತ ಬರುತ್ತ…..

ಅಜ್ಜ ವಾರ್ಡನ್‌ಗೆ ಸಣ್ಣ ಮಾಡಿ ಕಾಲು ಕಿತ್ತಿದ್ದೇ ತಡ ಸಂಕ್ರುಗೆ ದುಃಖ ಒತ್ತರಿಸಿ ಬಂತು. ಅದೆಲ್ಲಿ ಒಳಗೆ ಹುದುಗಿತ್ತೋ ಏನೋ ಅಖಂಡ ಎರಡು ತಾಸು ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ವಾರ್ಡನ್‌ ಮಾಮಾಗೂ ಅವನನ್ನು ನೋಡಿ ಅಯ್ಯೋ ಪಾಪ ಅನ್ನಿಸಿತು. ತಮ್ಮಾ ಸಂಬಾಳಿಸಿಕೋ ಅಂದು ಅವನೂ ನಾಲ್ಕಾರು ಬಾರಿ ಹೇಳಿ ನೋಡಿದ. ಕೊನೆಗೆ ದುಃಖ ಕಡಿಮೆಯಾದ ಮೇಲೆ ಸರಿಹೋಗುತ್ತಾನೆ ಎಂದು ಅವನೂ ಸುಮ್ಮನೆ ಉಳಿದ. ಸಕಲ ಚರಾಚರ ಸೃಷ್ಟಿಯಲ್ಲಿ ತನ್ನವರೆಂಬವರು ಯಾರೂ ಇಲ್ಲದೆ ಹೋದರೆ ಎಂದು ಸಂಕ್ರುಗೆ ಅನ್ನಿಸಿ ದುಃಖವಾಯಿತು. ಬೋಂವ್‌ ಎಂದು ಬಂದ ಗಾಡಿ ತನ್ನ ಮೇಲೆಯೇ ಹಾಯ್ದು ಹೋಯಿತೇನೋ ಎಂದುಕೊಂಡು ರಾತ್ರಿ ಕನಸಿನಲ್ಲಿ ಕನವರಿಸಿ ಒಂದು ಮಾಡಿಕೊಂಡುಬಿಟ್ಟಿದ್ದ. ಆ ಹಾಸ್ಟೆಲ್ಲಿನಲ್ಲಿ ಅವನೊಬ್ಬನೇ ಅಲ್ಲ, ಅವನಂಥ ಇನ್ನೂ ಹದಿನೈದು ಇಪ್ಪತ್ತು ಮಕ್ಕಳು ಇದ್ದರು. ಅವರ ಅಪ್ಪಂದಿರೂ ಅಜ್ಜಂದಿರೂ ಗಣಪುನ ಹಾಗೇ ಕನಸು ಕಂಡವರು. ಆದರೆ ಅವರೆಲ್ಲರಿಗಿಂತ ಭಿನ್ನವಾಗಿ ಗಣಪು ಚಿಂತಿಸಿದ್ದ. ಮೊಮ್ಮಗನನ್ನು ಶಾಲೆಗೆ ಸೇರಿಸುವಾಗ ಅಡ್ಡ ಹೆಸರು ಬೇಡ ಎಂದು ವಾರ್ಡನ್‌ ಸಾಹೇಬ್ರಿಗೆ ತಿಳಿಸಿದ್ದ. ಹೆಸರಿನಿಂದಲೇ ಜಾತಿ ಗುರುತಿಸಿ ಅವಮಾನ ಆಗುವುದರಿಂದ ಮೊಮ್ಮಗನನ್ನು ಉಳಿಸುವುದು ಅವನ ಉದ್ದೇಶವಾಗಿತ್ತು. ಗಣಪುನ ಮನದಾಳದ ಅಭಿಲಾಶೆಯಂತೆ ವಾರ್ಡನ್‌ ಸಾಹೇಬ್ರು ಸಂಕ್ರುನ ಹೆಸರಿನ ಹಿಂದೆ ಅವನ ಊರಿನ ಹೆಸರನ್ನು ಜೋಡಿಸಿಬಿಟ್ಟರು. ಜಲವಳ್ಳಿ ಶಂಕರ ಸಂಕ್ಷಿಪ್ತದಲ್ಲಿ ಜೆ.ಶಂಕರ ಆಗಿಬಿಟ್ಟಿದ್ದ. ಶಾಲೆಯಲ್ಲಿ ಮೊದಲ ಬಾರಿಗೆ ಮಾಸ್ತರು ಜೆ.ಶಂಕರ ಎಂದು ಹೆಸರನ್ನು ಕೂಗಿದಾಗ ಅದ ಯಾರ ಹೆಸರು ಎಂಬುದು ಸ್ವತಃ ಸಂಕ್ರುಗೇ ಗೊತ್ತಾಗಲಿಲ್ಲ. ಯಾರ ಹೆಸರನ್ನೋ ಕೂಗುತ್ತಿದ್ದಾರೆ ಎಂದು ಸುಮ್ಮನುಳಿದುಬಿಟ್ಟ. ಕೊನೆಗೆ ಮಾಸ್ತರು ಜಲವಳ್ಳಿಯಿಂದ ಬಂದವ ಯಾರು ಎಂದು ಕೇಳಿದಾಗ ತಾನು ಎಂದು ಅವನು ಎದ್ದು ನಿಂತ. ನಿನ್ನ ಹೆಸರೇ ನಿನಗೆ ಗೊತ್ತಿಲ್ಲ ಅಂದ್ರೆ ಹೇಗೋ ಎಂದು ಮಾಸ್ತರು ಮತ್ತೊಮ್ಮೆ ಅವನ ಹೆಸರು ಕೂಗಿದಾಗ ಸಂಕ್ರು ರೋಮಾಂಚಿತನಾಗಿ ಉಳಿದ ಹುಡುಗರಂತೆ ಹಾರಜ್‌ ಎಂದ.
ಸಂಕ್ರುಗೆ ತನ್ನ ಹೆಸರು ಸಂಕ್ರು ಎನ್ನುವುದೇ ಮರೆತು ಹೋಗಿ ಶಂಕರ ಎಂಬ ಹೆಸರಿನಿಂದಲೇ ಜನಜನಿತನಾದ. ದೋಸ್ತಿಯ ಹುಡುಗರು ಶಂಕರ ಎಂದು ಕರೆದಾಗ ಪುಳಕಿತನಾಗುತ್ತಿದ್ದ. ಶಂಕರ ಎಂದು ಕರೆದು ಯಾರಾದರೂ ಪ್ರೀತಿಯಿಂದ ಹೆಗಲ ಮೇಲೆ ಕೈ ಹಾಕಿದರೆ ಅವರ ದಾಸಾನುದಾಸನಂತೆ ವರ್ತಿಸುತ್ತಿದ್ದ. ಅವರು ಏನು ಹೇಳಿದರೂ ಮಾಡಲು ಸಿದ್ಧ ಎಂಬಂಥ ಮನಸ್ಥಿತಿಗೆ ಅವನು ತಲುಪುತ್ತಿದ್ದ. ಅಂತಿರುವಾಗ ಎಂದಾದರೂ ರಜೆಯ ಸಮಯದಲ್ಲಿ ಊರಿಗೆ ಹೋದ ಎಂದರೆ ಅಲ್ಲಿ ಯಾರಾದರೂ ಸಂಕ್ರು ಎಂದು ಕರೆದರೆ ಅದು ಚೊಗರೆನಿಸಿ ಅವನಿಗೆ ಕಿರಿಕಿರಿ ಆಗುತ್ತಿತ್ತು. ತನ್ನನ್ನು ಹೀಯಾಳಿಸುತ್ತಿದ್ದಾರೇನೋ ಎಂದು ಅನ್ನಿಸಿ ಮುಖವನ್ನು ಹಾಗಲಕಾಯ ಹಾಗೆ ಗಂಟು ಮಾಡಿಕೊಳ್ಳುತ್ತಿದ್ದ. ಆಮೇಲೆ ಸರಿಹೋಗಲು ಕೆಲವು ಸಮಯವೇ ಹಿಡಯುತ್ತಿತ್ತು.
ಜೆ.ಶಂಕರ ಓದಿನಲ್ಲಿ ಚುರುಕುತನ ತೋರಿಸಿದ. ಊರಲ್ಲಿ ಹಕ್ಕಿಗೆ ಉರುಳು ಎತ್ತುವುದರಲ್ಲಿ, ಮೀನಿಗೆ ಗಾಳ ಹಾಕಿ ಹಿಡಿಯುವುದರಲ್ಲಿ ಎತ್ತಿದ ಕೈ ಆಗಿದ್ದ ಅವನು ಇಲ್ಲಿಯೂ ಹಿಂದೆ ಬೀಳಲಿಲ್ಲ. ಪ್ರತಿ ಸಲವೂ ಯಾವ ವಿಷಯದಲ್ಲೂ ನಪಾಸಾಗದೆ ಮುಂದೆ ಹೋಗುತ್ತಿದ್ದ ಅವನು ಓದಿನಲ್ಲಿ ತೋರಿಸುತ್ತಿದ್ದ ಶ್ರದ್ಧೆ ಮಾಸ್ತರೂ ಅವನ ಬಗ್ಗೆ ಗಮನ ಹರಿಸುವ ಹಾಗೆ ಮಾಡಿತು. ಹಾಗೆ ಮಾಡು ಹೀಗೆ ಮಾಡು ಎಂದು ಅವರೂ ಆಸ್ಥೆಯಿಂದ ಹೇಳುತ್ತಿದ್ದರು. ಹೇಳಿದ್ದನ್ನು ಮಾಡಿ ತೋರಿಸಿ ಸೈ ಅನ್ನಿಸಿಕೊಳ್ಳುವುದು ಸಂಕ್ರುಗೆ ಖುಷಿಯ ಸಂಗತಿಯಾಗಿತ್ತು. ಹಾಗೆ ಹೀಗೆ ಗಣಪುನ ನೆತ್ತಿಯ ಮೇಲಿನ ಕೂದಲು ಒಂದೊಂದೇ ಬಿದ್ದುಹೋಗುತ್ತಿದ್ದ ಹಾಗೆ ವರ್ಷಗಳೂ ಒಂದೊಂದೇ ಜಾರಿ ಹೋಗುತ್ತಿದ್ದವು. ಜೆ.ಶಂಕರನ ಹೈಸ್ಕೂಲು ಮುಗಿದು ಹೋಯಿತು. ಜಲವಳ್ಳಿಯ ಪೋರನೊಬ್ಬ ಕಾಲೇಜು ಕಟ್ಟೆ ಹತ್ತಿದ್ದು ಅದೇ ಮೊದಲ ಬಾರಿಗೆ. ಊರಿನ ಗೌಡರ ಮಕ್ಕಳು, ಹೆಗಡೆಯವರ ಮಕ್ಕಳು, ಸೆಟ್ಟರ ಮಕ್ಕಳು, ನಾಯಕರ ಮಕ್ಕಳು ಊರಲ್ಲಿಯ ಶಾಲೆಯಲ್ಲಿಯೇ ಕಲಿತು ಮುಲ್ಕಿ ಪರೀಕ್ಷೆಯಲ್ಲಿಯೋ ಮೆಟ್ರಿಕ್‌ ಪರೀಕ್ಷೆಯಲ್ಲಿಯೋ ಹರಹರ ಹೇಳಿ ಮುಂದೆ ಓದಿಲ್ಲದವರಾಗಿ ತಮ್ಮ ತಮ್ಮ ಅಪ್ಪಂದಿರ ದೌಲತ್ತಿನಲ್ಲಿ ತಮ್ಮ ಡೌಲು ತೋರಿಸುತ್ತ ಮದುವೆ ಮಕ್ಕಳು ಜಾತ್ರೆ ತೇರು ಹಬ್ಬ ಯಕ್ಷಗಾನ ಕೋಳಿಪಡೆ ಎಂದು ಕಾಲ ತಳ್ಳುತ್ತಿದ್ದಾಗ ಗಣಪುನ ಮೊಮ್ಮಗ ಸಂಕ್ರು ಒಂದೊಂದೇ ತರಗತಿ ಮೇಲೆ ಜಿಗಿಯುತ್ತ ಜಿಗಿಯುತ್ತ ಹೋದ.
ಕಾಲೇಜು ಮುಗಿಯಿತು. ಮುಂದೇನು ಎಂಬ ಪ್ರಶ್ನೆ ಬಂದಾಗ ಹಣ್ಣು ಮುದುಕನಾಗಿದ್ದ ಗಣಪು ಎಲ್ಲಾದ್ರೂ ನೌಕರಿ ಹುಡ್ಕೋ ಎಂದು ಹೇಳಿದ. ಸಂಕ್ರುಗೆ ಓದುವ ಹುಚ್ಚು ತಲೆಯಲ್ಲಿ ಹೊಕ್ಕಿ ಬಿಟ್ಟಿತ್ತು. ಯಾರೂ ಓದದಷ್ಟು ತಾನು ಒಬ್ಬನೇ ಓದಬೇಕು ಎಂಬ ಸಾಗರದಷ್ಟು ಆಸೆ ಅವನಿಗೆ. ತನ್ನೆಲ್ಲ ಜನಾಂಗದವರು ಓದಿನಿಂದ ವಂಚಿತರಾಗಿ ಅದೇನು ಕಳೆದುಕೊಂಡಿದ್ದರೋ ಅದನ್ನೆಲ್ಲ ತಾನು ಗಳಿಸಿ ಸೇರಿಗೆ ಸವ್ವಾ ಸೇರು ಆಗಬೇಕು ಎಂಬ ತುಡಿತ. ತಂಪು ಹೊತ್ತಿನಲ್ಲಿ ಅಜ್ಜನ ಜೊತೆ ಜಗುಲಿಯ ಮೇಲೆ ಕುಳಿತುಕೊಂಡು ಸಂಕ್ರು ತನ್ನ ಮನದಾಳದ ಆಸೆಯನ್ನು ಹಂಚಿಕೊಂಡ. ಹಾಗೆಲ್ಲ ಬಾಯಿತೆಕ್ಕೆಯಲ್ಲ ಅವನು. ಸದಾ ಮೌನಿ. ಓದಿದ್ದನ್ನು ಆಗಾಗ ಮೆಲಕು ಮಾಡುತ್ತ ಗುಂಗಿನಲ್ಲಿ ಇರುವವನು. ಆದರೆ ಅಜ್ಜನ ಜೊತೆ ಮಾತ್ರ ಎಲ್ಲವನ್ನೂ ಹೇಳಿಬಿಡಬೇಕು ಎಂದು ಅವನ ಅಂತರಾತ್ಮ ಒತ್ತಾಯ ಮಾಡುತ್ತಿತ್ತು. ಅಜ್ಜಾ ನಾನು ಮತ್ತೂ ಓದಬೇಕು. ಮತ್ತೂ ಓದಬೇಕು. ಏನೇನು ಉಳಿದಿದೆಯೋ ಎಲ್ಲವನ್ನೂ ಓದಬೇಕು ಎಂದು ಹೇಳಿದ. ಓದಿಗೆ ಖರ್ಚು ಏನಿಲ್ಲ. ಇಷ್ಟು ದಿನ ಓದಿದ ಹಾಗೆ ಹಾಸ್ಟೆಲ್ಲು, ಫೀ ಮಾಪಿ ಎಲ್ಲ ಇರುತ್ತದೆ ಎಂದು ವಿವರಿಸಿದ. ನೌಕರಿಗೆ ಅರ್ಜಿ ಹಾಕಿದರೆ ಸಿಗುವುದು ದೊಡ್ಡ ಮಾತಲ್ಲ ಎಂದೂ ಸೇರಿಸಿದ. ನೌಕರಿ ಯಾರದೋ ಕೊಡುಗೆಯಾಗಿ ತನಗೆ ದಕ್ಕುವುದು ಬೇಡ. ಅದನ್ನು ನಾವು ಕಸಿದುಕೊಳ್ಳುವಂತೆ ಆಗಬೇಕು ಎಂದ. ಸಾಹೇಬನ ಗತ್ತಿನಲ್ಲಿ ಮೊಮ್ಮಗನನ್ನು ನೋಡಬೇಕು ಎಂದುಕೊಂಡಿದ್ದ ಗಣಪುಗೆ ಸಂಕ್ರು ಏನು ಹೇಳುತ್ತಾನೆ ಎನ್ನುವುದು ಸರಿಯಾಗಿ ಅರ್ಥವಾಗದಿದ್ದರೂ ಮನಸ್ಸು ಮಾತ್ರ ಮುರುಟಿಕೊಂಡಿತು. ಗಿಡ ಬೆಳೆದು ಈಗ ಮರ ಆಗಿದೆ. ತಾನು ಹೇಳೂದು ಏನೂ ಉಳಿದಿಲ್ಲ ಅಂದುಕೊಂಡು ತೆಪ್ಪಗಾದ.
ತಾ ನೆಟ್ಟ ಗಿಡ ಮರವಾಗುವುದಷ್ಟೇ ಅಲ್ಲ ಹೂ ಬಿಟ್ಟು ನಳನಳಿಸಬೇಕು. ಹೂವೆಲ್ಲ ಕಾಯಾಗಿ ತೂಗಿ ತೊನೆಯಬೇಕು, ಕಾಯಿ ಮಾಗಿ ಹಣ್ಣಾಗಿ ಹಸಿದವರ ಹೊಟ್ಟೆ ತಣಿಸಬೇಕು ಎಂಬ ಆಸೆ ಹೊತ್ತ ಗಣಪುಗೆ ಮೊಮ್ಮಗ ಬೇಜಾರು ಪಟ್ಟುಕೊಳ್ಳುವುದನ್ನು ಕಾಣಲಾಗದೆ ಹೂಂಗುಟ್ಟಿದ. ಸಂಕ್ರು ಮತ್ತಷ್ಟು ಓದಲು ದೂರದ ಧಾರವಾಡ ಸೇರಿಕೊಂಡ. ಅಲ್ಲಿ ಹೋದಮೇಲೆ ಓದಿನ ಜೊತೆಯಲ್ಲಿ ಅದೇನೇನೋ ಸಂಘಟನೆಗಳ ಪರಿಚಯ ಎಲ್ಲ ಅವನಿಗೆ ಆಯಿತು. ಚುರುಕು ಅನ್ನಿಸಿಕೊಂಡ ಜೆ.ಶಂಕರನ ಅಗತ್ಯ ಎಲ್ಲ ಸಂಘಟನೆಗಳಿಗೆ ಇರುವಂತೆ ತೋರಿತು. ದಲಿತ ಸಂಘರ್ಷ ಸಮಿತಿ, ದಲಿತ ಜಾಗರಣ ವೇದಿಕೆ, ದಲಿತ ಪ್ಯಾಂಥರ್‌, ಬಂಡಾಯ ವೇದಿಕೆಗಳ ಸಭೆಗಳಲ್ಲಿ ಜೆ.ಶಂಕರ ಸಕ್ರಿಯವಾಗಿ ಭಾಗವಹಿಸತೊಡಗಿದ. ವೇದಿಕೆ ಎಂದರೆ ಕೈಕಾಲುಗಳಲ್ಲಿ ನಡುಕ ಬರುತ್ತಿದ್ದ ಶಂಕರಗೆ ಈಗ ತಾಸು ಎರಡು ತಾಸು ಭಾಷಣ ಬಿಗಿಯುವುದೆಂದರೆ ಬಂಗಡೆ ಮೀನಿನ ಮುಳ್ಳು ಸೀಬಿ ಎಸೆದಷ್ಟೇ ಸುಲಭವಾಗಿತ್ತು.
ಹೀಗೆ ಅನ್ಯ ಜಗತ್ತಿನ ಪರಿವೇ ಇಲ್ಲವೇನೋ ಎನ್ನುವಂತೆ ಓದು, ಸಭೆಗಳು, ಭಾಷಣಗಳಲ್ಲಿ ಮುಳುಗಿಹೋಗಿದ್ದ ಶಂಕರನನ್ನು ಅವನ ಸಹಪಾಠಿಗಳು ಗಮನಿಸುತ್ತಲೇ ಇದ್ದರು. ಅವರಲ್ಲಿ ಸೀಮಂತಿನಿ ಎಂಬ ಹುಡುಗಿ ಅವನ ಫ್ಯಾನ್‌ ಆಗಿಬಿಟ್ಟಳು. ಅದೇ ಕಡೆಗೆ ಲವ್‌ ಅನ್ನಿಸಿಕೊಂಡು ಗೆಳೆಯರ ಸಮ್ಮುಖದಲ್ಲಿ ಶಂಕರ ಆಕೆಯನ್ನು ರಜಿಸ್ಟರ್ಡ್‌ ಮದುವೆಮಾಡಿಕೊಂಡುಬಿಟ್ಟ. ಆ ಹುಡುಗಿ ಬ್ರಾಹ್ಮಣರ ಹುಡುಗಿ ಎಂಬುದು ಕ್ಯಾಂಪಸ್ಸಿನಲ್ಲೆಲ್ಲ ದೊಡ್ಡ ಸುದ್ದಿಯಾಗಿ ಕೆಲವು ದಿನ ಹಲವರ ಬಾಯಲ್ಲಿ ನಲಿದಾಡಿತು. ಉದ್ಯೋಗ ಇಲ್ಲದ ಕಾರಣ ಅವರು ಒಟ್ಟಿಗೆ ವಾಸ ಮಾಡುವುದನ್ನು ಆರಂಭಿಸಿರಲಿಲ್ಲ. ತನ್ನ ಮದುವೆಯ ವಿಷಯವನ್ನು ಶಂಕರ ಉದ್ದೇಶಪೂರ್ವಕವಾಗಿಯೇ ತನ್ನ ಮನೆಗೆ ತಿಳಿಸಿರಲಿಲ್ಲ.
ಅವನು ತಿಳಿಸದಿದ್ದರೂ ಸುದ್ದಿ ಗಾಳಿಯಲ್ಲಿ ಹೇಗೋ ತೇಲಿಕೊಂಡು ಜಲವಳ್ಳಿಯೆಂಬ ಗ್ರಾಮವನ್ನು ತಲುಪಿಯೇ ಬಿಟ್ಟಿತು. ಗಣಪುನ ಮಗ ಅದೇನೋ ಓದಲು ಊರ ಹೊರಗೆ ಇದ್ದಾನೆ ಅಂದುಕೊಂಡವರಿಗೆ ಇದು ತೀರ ಆಘಾತಕಾರಿ ಆಗಿತ್ತು. ಊರಲ್ಲಿಯ ಎಷ್ಟೋ ಜನ ಇತ್ತೀಚೆ ಶಂಕರನ ಮುಖವನ್ನೇ ನೋಡಿರಲಿಲ್ಲ. ‘ಗಣಪುನ ಪೋರನ ನೋಡ್ರೋ, ಪ್ಯೂರ್‌ ಬ್ರಾಂಬ್ರ ಹುಡ್ಗೀನೇ ಹೊಡ್ಕಂಡ್‌ ಬಿಟ್ಟಾನಂತೆ’ ಎಂದು ಗದ್ದೆ ಬಯಲಿನ ಹಾಳೆಯ ಕಂಟದ ಮೇಲೆ ಕುಳಿತೋ, ವೆಂಕಟೇಶನ ಸಾರಾಯಿ ಅಂಗಡಿಯ ಹೊಳ್ಳಿಯ ಮೇಲೆ ಕುಂಡೆ ಊರಿಯೋ, ಮಂಜು ಅಂಗಡಿ ಅಂಗಳದಲ್ಲಿ ನಿಂತೋ ಜನ ಗುಂಪು ಗುಂಪಾಗಿ ಮಾತಾಡಲಿಕ್ಕೆ ಹತ್ತಿದರು. ಗಣಪುಗೆ ಈ ಎಲ್ಲ ಆವಾಂತರ ಕೇಳಿ ಮೈಯಲ್ಲಿ ದೆವ್ವ ಹೊಕ್ಕಂಗೆ ಆಗಿ ಏನೇನೋ ಬಡಬಡಿಸಲು ಆರಂಭಿಸಿದ.
ಕೊನೆಗೆ ಅಪ್ಪನ ಸ್ಥಿತಿ ನೋಡಲಾರದೆ ಧರ್ಮ ಮಗನಿಗೆ ಪತ್ರವೊಂದನ್ನು ಬರೆಸಿ ಹಾಕಿ ಕೂಡಲೆ ಬಂದು ಅಜ್ಜನನ್ನು ನೋಡಬೇಕು ಎಂದು ತಿಳಿಸಿದ. ಪತ್ರ ಬರೆದವನು ಧರ್ಮ ಹೇಳದಿದ್ದರೂ ತನ್ನ ಕೈಯಲ್ಲಿಯ ಹತ್ತು ಮಾತು ಹೆಚ್ಚಿಗೆ ಸೇರಿಸಿ ಆತ ತಕ್ಷಣ ಬರಲೇ ಬೇಕು ಅನ್ನುವ ಹಾಗೆ ಒಕ್ಕಣಿಸಿದ. ಅಜ್ಜನಿಗೆ ಹುಷಾರಿಲ್ಲದ್ದು ತಿಳಿದು ಸಂಕ್ರು ಆಕಾಶದಲ್ಲಿ ಹಾರಿ ಬಂದವನಂತೆ ಒಂದೇ ಉಸಿರಿಗೆ ಬಂದು ಮುಟ್ಟಿದ. ಗಣಪು ಮೊಮ್ಮಗನನ್ನು ಕಂಡು ಕೂಡಲೇ, ‘ನೀ ಮಾಡಿದ್ದಕ್ಕೆಲ್ಲ ನಾ ಹೂಂ ಅಂತಾನೆ ಬಂದೆ. ಆದ್ರೆ ಹಾರವ್ರ ಹುಡ್ಗಿನ ಯಾಕೆ ಕಟ್ಟಿಕೊಂಡ್ಯೋ ಮನೆಹಾಳ’ ಎಂದು ಬಯ್ದು ಸಮಾಧಾನ ಮಾಡಿಕೊಂಡ. ಊರಲ್ಲಿ ಯಾರ್ಯಾರೋ ಏನೇನೋ ಮಾತಾಡ್ತಾರೆ ಎಂದೂ ಸೇರಿಸಿದ. ಎಂಥ ಮಾತು ಅಂಬೂದು ಶಂಕರನಿಗೆ ಗೊತ್ತಾಗಲಿಲ್ಲ.
ಕೇರಿಯಲ್ಲಿ ಶಂಕರನ ಪ್ರಕರಣವನ್ನು ಗುಂಪುಗಳಲ್ಲಿ ನಿಂತು, ಕುಂತು ಚರ್ಚಿಸುತ್ತಿದ್ದವರೆಲ್ಲ ಕೆರೆಯ ನೀರು ಕೆರೆ ಸೇರಿತು ಅಂತಲೋ, ಕಟ್ಟೆ ಕಲ್ಲು ಕಟ್ಟೆ ಕೂಡಿತು ಎಂತಲೋ ಮೊಗಂ ಆಗಿ ಮಾತನಾಡಲಾರಂಭಿಸಿದರು. ‘ಅಂಗಂದ್ರೆ ಏನು?’ ಎಂದು ಯಾರಾದ್ರೂ ಕೆದಕಿ ಕೇಳಿದರೆ ಬಿಡಿಸಿ ಹೇಳಲು ಮುಂದಾಗುತ್ತಿದ್ದರು. ಗಣಪುನ ಮೊಮ್ಮಗ ಅಷ್ಟೆಲ್ಲ ಓದೋದು ಅಂದ್ರೇನು ಎಂದು ಮಾತು ಚಾಲು ಮಾಡುತ್ತಿದ್ದರು. ಆಮೇಲೆ ಗಣಪುನ ಸೊಸೆ, ಧರ್ಮನ ಹೆಂಡತಿ ಹೆಗಡೆಯವರ ತೋಟದ ಕಳೆ ಕೀಳೂಕೆ ಮೊದ್ಲು ಹೋಗುತ್ತಿದ್ಲು ಅಂತಿದ್ರು. ಒಟ್ಟಾರೆ ಅದು ಹೀಗೇ ಅನ್ನದೆ ಏನೋ ಅನುಮಾನದ ಬೀಜ ಬಿತ್ತಿ ಸುಮ್ಮನಾಗುತ್ತಿದ್ದರು. ಈ ಮಾತುಗಳ ತಾತ್ಪರ್ಯ ಅಂದರೆ ಸಂಕ್ರುನ ಅಪ್ಪ ಧರ್ಮ ಅಲ್ಲ ಎಂದು ಹೇಳುವುದಾಗಿತ್ತು. ಅಷ್ಟೆಲ್ಲ ಓದೋ ಸಾಮರ್ಥ್ಯ ಧರ್ಮನ ಪಿಳ್ಳೆಗೆ ಹೇಗೆ ಬರುವುದು ಸಾಧ್ಯ ಎಂಬ ಲೆಕ್ಕಾಚಾರ ಅವರದು.
ಇಂಥ ಮಾತುಗಳು ಧರ್ಮನ ಕಿವಿಗೂ ಬಿತ್ತು. ಅವನು ಕೆಂಪು ಬಿಳಿದು ಆಗಿ, ‘ಯಾರ್ಗಾದ್ರೂ ಕಾಲೇಜಿಗೆ ಹೋಗುವಂಥ ಮಗ ಬೇಕಿದ್ರೆ ಹೇಳಿ. ನಾ ಹುಟ್ಸಿ ಕೊಡ್ತೀನಿ’ ಎಂದು ತನ್ನ ಮಗನ ಬಗ್ಗೆ ಕುಂಯ್ಕು ಮಾತು ಆಡಿದವರಿಗೆ ತಲುಪುವ ಹಾಗೆ ಹೇಳಿ ಕಳುಹಿಸಿದ. ಸಂಕ್ರು ಒಬ್ನೇ ಅಲ್ಲ, ಇನ್ನೂ ನಾಲ್ಕು ಜನ ನನಗೆ ಹುಟ್ಟಿದವ್ರೆ ಕಾಲೇಜಿಗೆ ಹೋಗ್ತಿದ್ದಾರೆ ಎಂದೂ ಸೇರಿಸಿದ. ಸಂಕ್ರು ಕಾಲೇಜು ದಿಗ್ವಿಜಯ ಮಾಡಿದ ಮೇಲೆ ಅದೇ ಪ್ರೇರಣೆಯಲ್ಲಿ ಅದೇ ಊರಿನ ಹತ್ತಾರು ಹುಡುಗರು ಕಾಲೇಜು ಕಟ್ಟೆ ಹತ್ತಿದ್ದರು. ಧರ್ಮನ ಈ ಮಾತು ಕೇಳಿದ ಮೇಲೆ ಸಂಕ್ರುನ ಬಗ್ಗೆ ಮಾತನಾಡಿದವರು, ಇಂವ ತಮ್ಮ ಬುಡಕ್ಕೇ ಬಂದ್ನಲ್ಲಾ ಎಂದು ಸುಮ್ಮನಾದರು.
ಶಂಕರನ ಸಮಸ್ಯೆಗೆ ಪರಿಹಾರ ಎಂಬಂತೆ ಅವನು ಮದುವೆಯಾದ ಹುಡುಗಿಗೆ ಕಾಲೇಜೊಂದರಲ್ಲಿ ಲೆಕ್ಚರರ್‌ ನೌಕರಿ ಸಿಕ್ಕಿತು. ಆದರೆ ಶಂಕರ ತಾನು ಸ್ವತಃ ನೌಕರಿಗಾಗಿ ಪ್ರಯತ್ನಿಸಲೇ ಇಲ್ಲ. ಅದು ಇದು ಸಂಘಟನೆಗಳಲ್ಲಿ ನುಗ್ಗಿ ನುಸುಳಿ ಭಾಷಣ ಬಿಗಿದು ನಾಯಕನ ಇಮೇಜು ಅವನಿಗೆ ಬಂದುಬಿಟ್ಟಿತು. ಹೀಗಿದ್ದಾಗಲೇ ಅವನು ಒಬ್ಬ ಪ್ರಸಿದ್ಧ ದಲಿತ ಕವಿಯ ಭಾಷಣ ಕೇಳುವ ಪ್ರಸಂಗ ಬಂತು. ವಿಶ್ವವಿದ್ಯಾಲಯದ ಆವರಣದಲ್ಲಿ ಆತ ಭಾಷಣ ಮಾಡಿದ್ದ. ಈ ಭಾರತ ದೇಶದಲ್ಲಿ ಇರುವುದು ಎರಡೇ ವರ್ಗ- ಒಂದು ಜಾತಿಯನ್ನು ಸಂಕೋಚವಿಲ್ಲದೆ ಹೇಳಿಕೊಳ್ಳುವ ವರ್ಗ. ಇನ್ನೊಂದು ಜಾತಿ ಹೇಳಿಕೊಳ್ಳಲು ನಾಚಿಕೊಳ್ಳುವ, ಅಪಮಾನ ಅನುಭವಿಸುವ ವರ್ಗ. ಈ ಮಾತು ಶಂಕರನ ತಲೆಯಲ್ಲಿ ಬಾಣದಂತೆ ನಾಟಿತು. ತನ್ನ ಅಜ್ಜ ತನ್ನನ್ನು ಸಂಕ್ರುನಿಂದ ಜೆ.ಶಂಕರ ಎಂದು ಏಕೆ ಬದಲಾಯಿಸಿದ. ತನಗೇಕೆ ಅಡ್ಡ ಹೆಸರಿಲ್ಲ ಎಂಬ ಸತ್ಯದ ಅರಿವಾಯಿತು. ಆವತ್ತಿಂದ ಆ ಕವಿ ಅವನ ಆರಾಧ್ಯನಾದ. ತನ್ನ ಅಜ್ಜನ ಹದಿನೈದಿಪ್ಪತ್ತು ವರ್ಷಗಳ ಹಿಂದಿನ ತರ್ಕ ಅರ್ಥವಾಗಿ ಏನೋ ವೇದನೆ ಅನುಭವಿಸತೊಡಗಿದ.
ರಾಜ್ಯದಲ್ಲಿ ದಲಿತ ಶಕ್ತಿಯನ್ನು ಹುಚ್ಚು ಹೊಳೆಯಂತೆ ಹರಿಯಿಸಬೇಕು, ಬಹುಜನರ ಆಡಳಿತ ಬರಬೇಕು ಎಂಬ ಕನಸು ಕಂಡ. ರಾಜಕೀಯ ಶಕ್ತಿಯನ್ನಾಗಿ ದಲಿತ ಶಕ್ತಿಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ದಲಿತರೆಲ್ಲ ಒಂದು ವೇದಿಕೆಯಡಿ ಸೇರಬೇಕು ಎಂದು ಕರೆ ನೀಡಿದ. ಅಧಿಕಾರದ ರುಚಿ ಹತ್ತಿದವರು ಇವನಾವ ಪೋರ ಎಂದು ಅವನನ್ನು ನಿರ್ಲಕ್ಷ್ಯಿಸಿ ಬಿಟ್ಟರು. ಆದರೂ ಆತ ತನ್ನ ಪ್ರಯತ್ನ ಮುಂದುವರಿಸಿಯೇ ಇದ್ದ. ಹಳ್ಳಿಯಿಂದ ದಿಲ್ಲಿಗೆ ಎಂಬ ಮಾತನ್ನು ಗಮನದಲ್ಲಿಟ್ಟು ತನ್ನ ಹಳ್ಳಿಯಲ್ಲಿಯೇ ದಲಿತ ಶಕ್ತಿಯನ್ನು ಸಂಘಟಿಸಿದ. ತನ್ನ ಕೇರಿಯ ಹುಡುಗರನ್ನೆಲ್ಲ ಸೇರಿಸಿ ಸಂಘ ಕಟ್ಟಿದ. ಪಂಚಾಯಿತಿ ಚುನಾವಣೆ ಬಂದಾಗ ಅದರಲ್ಲಿ ತನ್ನ ಅಪ್ಪ ಧರ್ಮನನ್ನು ನಿಲ್ಲಿಸಿದ. ಧರ್ಮನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದ ವಿಠ್ಠಪ್ಪ ನಾಯ್ಕ, ಸರಕಾರದ ವತಿಯಿಂದ ನಾಮಕರಣ ಮಾಡಿಸುತ್ತೇವೆ. ಕಣದಿಂದ ಹಿಂದೆ ಸರಿ ಎಂದು ಹೇಳಿ ಕಳುಹಿಸಿದ. ನಮಗೆ ಈ ನಾಮಕರಣದ ಭಿಕ್ಷೆ ಬೇಡ. ನಾವು ಆಯ್ಕೆಯಾಗಿಯೇ ಸದಸ್ಯರಾಗುತ್ತೇವೆ ಎಂದು ಶಂಕರ ಉತ್ತರ ಕಳುಹಿಸಿದ. ಚುನಾವಣೆಯಲ್ಲಿ ಧರ್ಮ ಗೆದ್ದು ಬಂದಾಗ ಗಣಪು ಮೊಮ್ಮಗನನ್ನು ಹತ್ತಿರ ಕರೆದು ನೆತ್ತಿಯ ಮೇಲೆ ಕೈಯಾಡಿಸಿದ. ಮಾತಿಲ್ಲದೆ ಕಣ್ಣಿಂದ ಎರಡು ಹನಿ ನೀರು ಉದುರಿಸಿದ.
ಅದಾದ ಮಾರನೆಯ ದಿನವೇ ಶಂಕರ ಹೊನ್ನಾವರದ ಕೋರ್ಟ್‌ ಆವರಣದಲ್ಲಿದ್ದ. ತನ್ನ ಹೆಸರಿನಲ್ಲಿ ಬಿಟ್ಟುಹೋಗಿದ್ದ ಅಡ್ಡ ಹೆಸರು ‘ಹಳ್ಳೀರ’ ಸೇರಿಸಲು ನೋಟರಿ ಮುಂದೆ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ. ಸ್ಥಳೀಯ ಪತ್ರಿಕೆಯೊಂದರ ಮರುದಿನದ ಸಂಚಿಕೆಯಲ್ಲಿ ಜಾಹೀರಾತು ರೂಪದಲ್ಲಿ ಜೆ. ಶಂಕರ ಅವರು ತಮ್ಮ ಹೆಸರನ್ನು ಶಂಕರ ಧರ್ಮ ಹಳ್ಳೀರ ಎಂದು ಬದಲಾಯಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಕಾನೂನು ಅಗತ್ಯಗಳನ್ನು ಪೂರೈಸಲಾಗಿದೆ ಎಂಬ ಪ್ರಕಟಣೆ ಅಚ್ಚಾಗಿತ್ತು.

ಚೆನ್ನೈನ ಲಹರಿ ಪತ್ರಿಕೆ ಕಥಾಸ್ಪರ್ಧೆಯಲ್ಲಿ ಮೂರನೆ ಬಹುಮಾನ ಪಡೆದ ಕಥೆ.
ಕನ್ನಡಪ್ರಭ- 1999

7.ವಿಲೋಮ

ನಮ್ಮೂರಿಗೆ ಕರೆಂಟೂ ಬಂದಿರಲಿಲ್ಲ, ಬಸ್ಸೂ ಬಂದಿರಲಿಲ್ಲ. ಅಂಥದ್ದೊಂದು ಕಾಲದಲ್ಲಿ ಊರಲ್ಲಿದ್ದ ಏಕೈಕ ಶಾಲೆಗೆ ಎಲ್ಲಿಂದಲೋ ದೇವಣ್ಣ ಮಾಸ್ತರು ವರ್ಗವಾಗಿ ಬಂದರು. ಹೊಳೆಸಾಲನಲ್ಲಿ ಅತ್ತ ಹೊನ್ನಾವರ ಇತ್ತ ಗೇರುಸೊಪ್ಪ ನಡುವೆ ಎರಡು ಮೂರು ಗುಡ್ಡಗಳ ಸಂಧಿಯಲ್ಲಿ ಹೊಳೆ ದಂಡೆಗೆ ಅವುಚಿಕೊಂಡು ಯಾರ ಸಹವಾಸವೂ ಬೇಡ ಎಂಬಂತೆ ಇದ್ದ ಈ ಊರನ್ನು ಹೊಸದಾಗಿ ಪತ್ತೆ ಮಾಡಿದವರಂತೆ ಅದು ಹೇಗೋ ದೇವಣ್ಣ ಮಾಸ್ತರು ಹೇಳಿ ಕೇಳಿ ವರ್ಗ ಮಾಡಿಸಿಕೊಂಡು ಬಂದಿದ್ದರು.
ನಸುಕಿನಲ್ಲೆದ್ದು ನಡೆದರೆ ಹೊನ್ನಾವರಕ್ಕೆ ಹೊತ್ತು ಎರಡು ಮಾರು ಮೇಲೇರಿದ ಮೇಲೆ, ಗೇರುಸೊಪ್ಪಗೆ ಹೊತ್ತು ನೆತ್ತಿಗೆ ಬದ ಮೇಲೆ ಮುಟ್ಟುವಷ್ಟು ದೂರದಲ್ಲಿದ್ದ ನಮ್ಮೂರಿನ ಜನರು ತಮ್ಮ ಸ್ವಂತ ಕಾಲಿನ ತಾಕತ್ತನ್ನು ಅವಲಂಬಿಸಿಯೇ ಎಲ್ಲಿಗೆ ಬೇಕೋ ಅಲ್ಲಿಗೆ ಪಯಣಿಸಬೇಕಿತ್ತು. ಇಲ್ಲವೆಂದರೆ ದೋಣಿಯಲ್ಲಿ ಎರಡು ಮೂರು ತಾಸು ಕುಳಿತು ಹೋಗಬೇಕಿತ್ತು. ತೀರ ಇತ್ತೀಚೆ ಕೇರಳ ಕಡೆಯವರು ಹೊಳೆಯಲ್ಲಿ ಲಾಂಚ್‌ ಸರ್ವಿಸ್‌ ಇಟ್ಟಿದ್ದರು.
ದೇವಣ್ಣ ಮಾಸ್ತರು ಒಂದು ದಿನ ಮಧ್ಯಾಹ್ನ ಇದೇ ಲಾಂಚಿನ ಮೇಲೆ ಬಂದು ಇಳಿದರು. ಊರಿಗೆ ಹೊಸಬರಾದ ಇವರನ್ನು ಕಂಡು ಊರವರಿಗೆ ಇವರ ಇತ್ಯೋಪರಿ ಅರಿಯುವ ಕುತೂಹಲ. ಪರಿಚಿತರು ಇಲ್ಲದ ಈ ಊರಲ್ಲಿ ಯಾರನ್ನಾದರೂ ಕೇಳಿ ಶಾಲೆ ಎಲ್ಲಿದೆ ಎಂದು ತಿಳಿದುಕೊಳ್ಳುವ ತಜವೀಜು ನಡೆಸಿದರು ಮಾಸ್ತರು. ಇಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಹೇಗೆ? ಊಟಕ್ಕೆ ಹಾಕುವ ಧರ್ಮಾತ್ಮರು ಸಿಕ್ಕಬಹುದೆ? ಎಂಬಿತ್ಯಾದಿ ಗೊಂದಲದಲ್ಲಿ ಅವರು ಇದ್ದರು. ಕೊನೆಗೆ ಲಾಂಚು ಬಂದರದ ಹತ್ತಿರವೇ ಮನೆ ಇದ್ದ ನಾರಾಯಣ ಗೌಡರು ದೇವಣ್ಣ ಮಾಸ್ತರಿಗೆ ಎಲ್ಲಿ, ಏನು, ಎಂಥ ಇತ್ಯಾದಿ ಪ್ರಶ್ನೆ ಕೇಳಿದರು. ಅದಕ್ಕೇ ಕಾದಿದ್ದವರು ಎಂಬಂತೆ ಮಾಸ್ತರು ತಾವು ಈ ಊರಿನ ಶಾಲೆಗೆ ವರ್ಗವಾಗಿ ಬಂದಿರುವುದನ್ನು ಹೇಳಿದರು.
ಅರೇರೇ ಹೀಗಾ ಮತ್ತೆ. ಮೊದಲೆ ಹೇಳಬಾರದಿತ್ತಾ?' ಎಂದು ದೇವಣ್ಣ ಮಾಸ್ತರನ್ನು ಗೌಡರು ತಮ್ಮ ಮನೆಗೆ ಕರೆದು ಕೂರಿಸಿದರು. ಆಸ್ರಿಗೆ ಬೇಕಾ ಕೇಳಿದರು. ಬಾಯಾರಿದ್ದ ಮಾಸ್ತರು, ಸ್ವಲ್ಪ ಕೊಡಿ ಎಂದರು. ಗೌಡರ ಹೆಂಡತಿ ಮಜ್ಜಿಗೆ ನೀರು ಮಾಡಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ತಂದು ಕೊಟ್ಟರು. ಗಟಗಟ ಕುಡಿದ ಮಾಸ್ತರು ಬೆವರು ಒರೆಸಿಕೊಳ್ಳುತ್ತ,ಶಾಲೆ ಎಷ್ಟು ದೂರ ಆಗ್ತದೆ ಗೌಡ್ರೆ?’ ಎಂದು ಕೇಳಿದರು.
ಬಹಳ ದೂರ ಇಲ್ಲ, ಇಲ್ಲೇ ಎರಡು ಫರ್ಲಾಂಗದೊಳಗೆ. ನಮ್ಮನೆ ಹುಡ್ಗುರೂ ಹೋಗ್ತಾರೆ ಶಾಲೆಗೆ. ಬೆಳಗಿನ ಶಾಲೆ ಮುಗ್ಸಿ ಬಂದಾರೆ. ಇನ್ನು ಊಟ ಮಾಡಿ ಮಧ್ಯಾಹ್ನ ಶಾಲೆಗೆ ಹೋಗ್ತಾರೆ. ಅವ್ರ ಜೊತೆ ನೀವೂ ಹೋದ್ರೆ ಆಯ್ತು ಅಂದ್ರು.
ಮಾಸ್ತರ ಜಾತಿ, ಕುಲ, ಗೋತ್ರ ಗೊತ್ತಿಲ್ಲದ ಗೌಡರು ಅವ್ರು ತಮ್ಮನೆಯಲ್ಲಿ ಊಟ ಮಾಡುವರೋ ಇಲ್ಲವೋ ಗೊತ್ತಾಗದೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟವರ ಹಾಗೆ ಇನ್ನರ್ಧ ಗಂಟೆಯೊಳಗೆ ಊಟಕ್ಕೆ ಆಗ್ತದೆ. ನೀವು ಸ್ನಾನ ಮಾಡೂದಿದ್ರೆ ಮಾಡ್ಕೊಳ್ಳಿ. ಇಲ್ಲ ಅಂದ್ರೆ ಆರಾಮಾಗಿ ಕೈಕಾಲು ಮೊಖ ತೊಳ್ಕಂಡು ಬನ್ನಿ. ಸುದ್ದಿ ಸುಖಾಲು ಎಲ್ಲ ಮಾತಾಡೂರಂತೆ ಎಂದರು.
ಗೌಡರ ದ್ವಂದ್ವ ಅರ್ಥ ಆದವರಂತೆ ಮಾಸ್ತರು, ನನ್ನದು ಸ್ನಾನ ಆಗಿದೆ. ಕೈಕಾಲು ಮೊಖ ಅಷ್ಟು ತೊಳ್ಕಂಡ್ರೆ ಆಯ್ತು ಎಂದರು. ಈಗಿರುವ ಮಾಸ್ತರಿಗೆ ವರ್ಗ ಆಗಿದೆ. ಅವರ ಸ್ಥಳಕ್ಕೆ ತಾವು ಬಂದಿರುವುದಾಗಿ ಅವರು ಹೇಳಿದರು. ಗೌಡರು ಶಾಲೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ತಾವೇ ಇದ್ದುದಾಗಿ ಹೇಳಿದರು. ಅದೆಲ್ಲಿಂದಲೋ ಈ ಊರಿಗೆ ಹೇಗೆ ವರ್ಗ ಆಯ್ತು ಎಂದು ಗೌಡರು ಕೇಳಿದರು. ಮಾಸ್ತರು, ತಮ್ಮ ಹೆಂಡತಿ ನರ್ಸಮ್ಮ ಇದ್ದಾಳೆ. ಈ ಊರಲ್ಲಿ ನರ್ಸಮ್ಮನ ಸೀಟು ಖಾಲಿ ಇದೆ. ಗಂಡ ಹೆಂಡತಿ ಒಂದೇ ಊರಲ್ಲಿ ಇರಬೇಕು ಅಂದ್ರೆ ಇದೊಂದೇ ಜಾಗ ಇತ್ತು. ಹಾಗಾಗಿ ತಾವು ಬಂದುದಾಗಿ ಹೇಳಿದರು.
ಊಟ ಮಾಡುತ್ತ ತಮಗೆ ಮೂವರು ಮಕ್ಕಳೆಂದೂ ತಿಳಿಸಿದರು. ಈ ಊರಲ್ಲಿ ಉಳಿಯಲಿಕ್ಕೆ ಸಣ್ಣದೊಂದು ಬಿಡಾರದ ವ್ಯವಸ್ಥೆ ಆಗಬೇಕು ಎಂದೂ ಕೋರಿಕೆ ಸಲ್ಲಿಸಿದರು.
ಮಂದೆ ಕೆಲವು ದಿನಗಳಲ್ಲೇ ಮಾಸ್ತರ ಬಿಡಾರ ನಮ್ಮೂರಿಗೆ ಬಂತು. ಪುಟ್ಟ ಪುಟ್ಟ ಮಕ್ಕಳು ಮೂವರು. ನರ್ಸಮ್ಮ ಎತ್ತರದಲ್ಲಿ ಮಾಸ್ತರರಷ್ಟೇ ಇದ್ದರು. ಸ್ವಲ್ಪ ತೋರ ಮೈಗಟ್ಟು. ಅಷ್ಟೇನು ಬೆಳ್ಳಗಲ್ಲದ ಬಣ್ಣ. ಮಾತು ಆಡುವುದರಲ್ಲಿ ಮಾಸ್ತರು ಜೋರೋ ನರ್ಸಮ್ಮ ಜೋರೋ ಎಂದು ಗೆರೆ ಕೊರೆದ ಹಾಗೆ ಹೇಳುವುದು ಕಷ್ಟವೇ ಆಗಿತ್ತು. ಇಬ್ಬರ ಬಳಿಯೂ ತಮ್ಮ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ತಾಸುಗಟ್ಟಲೆ ಪೊಕಳೆ ಕೊಚ್ಚುವಷ್ಟು ಸುದ್ದಿಗಳು ಇದ್ದವು. ಎದುರು ನಿಂತು ಕೇಳುವವರಿಗೆ ಇವರು ಯಾವಾಗ ಮಾತು ನಿಲ್ಲಿಸುತ್ತಾರೋ ಎಂಬಂತೆ ಆಗುತ್ತಿತ್ತು. ಸಣ್ಣಯ್ಯನ ಮನೆಯ ಓರಿಯಲ್ಲಿ ಅವರು ಬಿಡಾರ ಮಾಡಿದರು. ಮಾಸ್ತರು ಸಣ್ಣಯ್ಯನಿಗೆ ಪಾಲಿಸಿ ಮಾಡಿ ಇದ್ದ ಓರಿಗೇ ಮತ್ತೊಂದು ಓರಿ ಕಟ್ಟಿಸಿಕೊಂಡು ಇದ್ದ ಜಾಗವನ್ನೇ ಸ್ವಲ್ಪ ವಿಸ್ತರಿಸಿಕೊಂಡಿದ್ದರು. ಮೊದಲಿದ್ದ ಓರಿ ಹಂಚಿನ ಮಾಡನ್ನು ಹೊಂದಿತ್ತು. ಹೊಸದಾಗಿ ಕಟ್ಟಿದ ಓರಿಗೆ ಸೋಗೆ ಹೊದಿಕೆ. ಮಾಸ್ತರು ಕೇಳಿದರೆ ಊರಲ್ಲಿ ಇಲ್ಲ ಅನ್ನುವವರು ಯಾರು? ಮನೆಗೆ ಎರಡರಂತೆ ಸೋಗೆ ಕೊಟ್ಟರೂ ಮಾಸ್ತರರ ಓರಿಯ ಮಾಡನ್ನು ಮೂರು ವರ್ಷ ಹೊದಿಸುವಷ್ಟು ಆಗುತ್ತಿತ್ತು. ಮಾಸ್ತರರಿಗಿಂತ ಊರಿನವರಿಗೆ ನರ್ಸಮ್ಮನ ಮರ್ಜಿ ಕಾಯ್ದುಕೊಳ್ಳಬೇಕಿತ್ತು. ಸುತ್ತ ಮುತ್ತಲ ನಾಲ್ಕೂರಿಗೆ ಅವರೊಬ್ಬರೇ ನರ್ಸಮ್ಮ ಆಗಿದ್ದರು. ಒಂದಲ್ಲ ಒಂದು ದಿನ ಪ್ರತಿ ಮನೆಯವರೂ ಈ ನರ್ಸಮ್ಮನ ಮನೆಯ ಬಾಗಿಲನ್ನು ಬಡಿಯಲೇ ಬೇಕಿತ್ತು. ಯಾರದೋ ಮಗಳಿಗೋ, ಯಾರದೋ ಹೆಂಡತಿಗೋ, ಯಾರದೋ ಅಕ್ಕನಿಗೋ ತಂಗಿಗೋ ಹೆರಿಗೆ ಸಮಯ ಬಂದೇ ಬರುತ್ತಿತ್ತು.
ಮಾಸ್ತರು ಶಾಲೆಯಲ್ಲಿ ಕುಳಿತರೆಂದರೆ ಆ ದಾರಿಯಲ್ಲಿ ಹೋಗುವವರು ಅವರಿಗೆ ನಾಲ್ಕು ಕವಳಕ್ಕೆ ಅಡಕೆ ಕೊಡದೆ ಮುಂದೆ ಹೋಗುತ್ತಿರಲಿಲ್ಲ. ಯಾರೋ ತಮ್ಮ ಮಕ್ಕಳು ಶಾಲೆಗೆ ಹೋಗುವಾಗ ಎಲೆ, ಸುಣ್ಣ, ಹೊಗೆಸೊಪ್ಪು ಕಳುಹಿಸುತ್ತಿದ್ದರು. ಮಾಸ್ತರ ಕವಳದ ಚಟ ಹೊರಗಿಂದಹೊರಗೆ ತೀರಿ ಹೋಗುತ್ತಿತ್ತು. ಅವರಾಗಲಿ ನರ್ಸಮ್ಮನಾಗಲಿ ಗುಡ್ಡದ ದಾರಿಯಲ್ಲಿ ಬರುವುದು ಕಂಡರೆ ಕುಂಬರಿಯಲ್ಲಿ ಇರುತ್ತಿದ್ದ ಜನ ತಾವು ಬೆಳೆದ ತರಕಾರಿಯನ್ನು ಅವರಿಗೆ ಕರೆದು ಕೊಡುತ್ತಿದ್ದರು. ಮೊಗೆ ಕಾಯಿಯೋ, ಹೀರೇಕಾಯಿಯೋ, ಸೌತೆ ಕಾಯಿಯೋ ಬೇಡಬೇಡ ಬಹಳ ಆಯ್ತು ಎಂದು ಅವರು ಹೇಳಿದರೂ ನಮ್ಮೂರ ಜನ ಒತ್ತಾಯ ಮಾಡಿ ಕೊಟ್ಟೇ ಕೊಡುತ್ತಿದ್ದರು. ಹೀಗೆ ಕೊಟ್ಟಿದ್ದು ಒಜ್ಜೆಯಾಗಿ ಕೈ ಚೀಲ ಆ ಕೈಗೊಮ್ಮೆ ಈ ಕೈಗೊಮ್ಮೆ ಬದಲಾಯಿಸುತ್ತ ಅವರು ಬರುವುದನ್ನು ಕಂಡು ಎದುರಿಗೆ ಬಂದ ಊರವರ್ಯಾರಾದರೂ ಮನೆವರೆಗೆ ತಂದು ಕಡಲೇನ್ರಾ ಎಂದು ಕೇಳಿದರೆ ಅದು ಫಾರ್ಸೋ ಇಲ್ಲ ನಿಜವೋ ಎಂಬುದು ಗೊತ್ತಾಗದೆ ನರ್ಸಮ್ಮನಾಗಲಿ ಮಾಸ್ತರಾಗಲಿ ದಾಕ್ಷಿಣ್ಯದಿಂದ ಎಂಬಂತೆ ಹೇಹೇಹೇ ಇದೆಂಥ ಒಜ್ಜೆ. ಮತ್ತೆ ನಾಲ್ಕಿದ್ದರೂ ನಡೀತಿತ್ತು' ಎಂದು ಕೇಳಿದವರೇ ಮುಜುಗರ ಪಡುವ ಹಾಗೆ ಉತ್ತರಿಸುತ್ತಿದ್ದರು. ಊರವರಲ್ಲೇ ಕೆಲವರು ಮಾಸ್ತರು ಒಳ್ಳೆಯವರು ಎಂದು ಹೇಳಿದರೆ ಇನ್ನು ಕೆಲವರು ನರ್ಸಮ್ಮ ಒಳ್ಳೆಯವರು ಅಂತಿದ್ದರು. ಮಾಸ್ತರಿಗೆ ಮುಂಗೋಪ ಜಾಸ್ತಿ ಎಂದು ಒಬ್ಬರು ಹೇಳಿದರೆ, ಅವರನ್ನು ವಹಿಸಿ ಮಾತನಾಡುವವರು, ಗಂಡಸು ಅಂದ ಮೇಲೆ ಅಷ್ಟೂ ಇಲ್ಲ ಅಂದ್ರೆ ಹೇಗೋ ಎಂದು ಅವರ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದರು. ಮಾಸ್ತರಿಗೆ ಸಿಟ್ಟು ಜಾಸ್ತಿ ಅಂತ ಊರವರಿಗೆ ಅನ್ನಿಸಲಿಕ್ಕೆ ಒಂದು ಸಣ್ಣ ಕಾರಣ ಸಿಕ್ಕಿತ್ತು. ತಾವು ಬಂದ ಒಂದು ವಾರದೊಳಗೇ ಅವರು ನಮ್ಮೂರ ಶಾಲೆಯಲ್ಲಿ ಇದ್ದ ಅವರಿಗಿಂತ ಸೀನಿಯರ್‌ ಮಾಸ್ತರನ್ನು ವರ್ಗ ಮಾಡಿಸಿ ತಾವೇ ಹೆಡ್ಮಾಸ್ಟರು ಆಗಿದ್ದರು. ಕೇಳಿದ್ದಕ್ಕೆ ಅವರು ಹೇಳಿದ್ದು ಇಷ್ಟು, ಎಇಓ ಸಾಹೇಬ್ರು ನಾನು ಈ ಊರಿಗೆ ವರ್ಗ ಕೇಳಿದಾಗ ನೀವೇ ಹೆಡ್ಮಾಸ್ಟರು ಅಂದಿದ್ರು. ಏಕೆಂದರೆ ಇಲ್ಲಿದ್ದ ಹೆಡ್ಮಾಸ್ಟರೇ ವರ್ಗ ಆಗಿದ್ದಲ್ಲವಾ? ಇಲ್ಲಿ ನನಗಿಂತ ಸೀನಿಯರ್‌ ಒಬ್ಬರು ಇದ್ದಾರೆ ಅನ್ನೂದು ನನಗೆ ಗೊತ್ತಿರಲಿಲ್ಲ. ಎಇಓ ಸಾಹೇಬ್ರಿಗೂ ಗೊತ್ತಿರಲಿಲ್ಲ. ಹೆಡ್ಮಾಸ್ಟರು ಅಂದ್ಕೊಂಡು ಎಲ್ಲರ ಕೂಡ ಹೇಳ್ಕೊಂಡು ಬಂದು ಇಲ್ಲಿ ಇನ್ನೊಬ್ಬರ ಕೆಳಗೆ ಕೆಲಸ ಮಾಡೂದು ಹೇಗೆ ನೀವೇ ಹೇಳಿ. ಅದ್ಕೇ ಅವ್ರಿಗೆ ಅವರ ಊರ ಹತ್ತಿರವೇ ವರ್ಗ ಮಾಡಿಸಿಬಿಟ್ಟೆ. ಅಲ್ಲಿ ಹೆಡ್ಮಾಸ್ಟರೂ ಅವರೇ, ಅಸಿಸ್ಟಂಟೂ ಅವರೇ ಎಂದು ಸಮಜಾಯಿಸಿ ಹೇಳುತ್ತಿದ್ದರು. ಹೆಂಗಸರ ಕೆನ್ನೆಗಿಂತ ನುಣುಪಾಗುವ ಹಾಗೆ ತಮ್ಮ ದಾಡಿ ಬೋಳಿಸಿಕೊಳ್ಳುತ್ತಿದ್ದ ಮಾಸ್ತರನ್ನು ಕೆಲವು ಜನ ಹಿಂದುಗಡೆ ಸುಂದರ ರಾವಣ ಅಂತಿದ್ದರು. ಮಾಸ್ತರ ಕಿವಿಗೆ ಅದು ಬಿದ್ದಿರಲಿಲ್ಲ. ಸುಂದರ ಸರಿ. ರಾವಣ ಏಕಪ್ಪ ಅದರ ಹಿಂದೆ? ಒಂದು ದಿನ ನರ್ಸಮ್ಮ ಹೊನ್ನಾವರಕ್ಕೆ ಮೀಟಿಂಗಿಗೆ ಎಂದು ಹೋಗಲು ಲಾಂಚು ಹತ್ತಲು ಬಂದರು. ಬಲದ ಕೆನ್ನೆಗೆ ಅವರು ಸೀರೆಯ ಸೆರಗನ್ನು ಮರೆ ಮಾಡಿಕೊಂಡಿದ್ದರು. ಏಕಪ್ಪ ಹೀಗೆ ಎಂದು ಕುತೂಹಲಕ್ಕೆ ನೋಡಿದರೆ ಅವರ ಕೆನ್ನೆಯ ಮೇಲೆ ದೋಸೆ ಹೊಯ್ದಂತೆ ಗೋಲವಾಗಿ ಸುಟ್ಟ ಗಾಯವಾಗಿತ್ತು. ನರ್ಸಮ್ಮ ಏನಾಯ್ತು ಎಂದು ಕೆಲವರು ಕಕ್ಕುಲಾತಿ ಮಾಡಿ ಕೇಳಿದರೂ ಅವರು ಬಾಯಿಬಿಡಬೇಕಲ್ಲ? ಅವರು ಬಾಯಿ ಬಿಡದಿದ್ದರೇನಾಯಿತು ಅವರ ಬಿಡಾರದ ಮಾಲೀಕ ಸಣ್ಣಯ್ಯನ ಮನೆಯವರಿಂದ ಸುದ್ದಿ ಸಣ್ಣದಾಗಿ ಹೊರಬಿತ್ತು. ರಾತ್ರಿ ಮಾಸ್ತರು ನರ್ಸಮ್ಮನ ನಡುವೆ ಜಗಳ ಆಗಿತ್ತಂತೆ. ಸಿಟ್ಟಿಗೆದ್ದ ಮಾಸ್ತರು ಹಚ್ಚಿಟ್ಟಿದ್ದ ಲಾಟೀನು ನರ್ಸಮ್ಮನ ಮೊಖಕ್ಕೆ ಒತ್ತಿಬಿಟ್ಟರಂತೆ. ಬಿಸಿಯಾಗಿದ್ದ ಗಾಜು ತಾಗಿ ನರ್ಸಮ್ಮನ ಕೆನ್ನೆಯ ಮೇಲೆ ದೋಸೆ ಹೊಯ್ದಹಾಗೆ ಸುಟ್ಟುಬಿಟ್ಟಿತ್ತು. ನರ್ಸಮ್ಮನ ಕೆನ್ನೆ ಸುಟ್ಟ ಪ್ರಕರಣದ ಬಳಿಕ ಮಾಸ್ತರನ್ನು ಕಂಡರೆ ಶಾಲೆಯಲ್ಲಿ ಹುಡುಗರು ಹೆದರಲಾರಂಭಿಸಿದರು. ಮಾಸ್ತರು ಸಹಜವಾಗಿ ಅವರ ಬೆನ್ನ ಮೇಲೆ ಕೈ ಇಟ್ಟರೂ ಅವರು ಬೆಚ್ಚಿಬೀಳಲಾರಂಭಿಸಿದರು. ಒಂದು ದಿನ ಒಬ್ಬ ಹುಡುಗನಿಗೆ ಅವರು ಕಣ್ಣು ಬಿಟ್ಟಿದ್ದಕ್ಕೇ ಅವನು ಚಡ್ಡಿಯಲ್ಲೇ ಒಂದು ಮಾಡಿಕೊಂಡುಬಿಟ್ಟ. ಇಷ್ಟಾಗಿಯೂ ಮಾಸ್ತರು ಹುಡುಗರಲ್ಲಿ ಶಿಸ್ತು ಇರಬೇಕು ಎಂದು ಬಯಸಿದರು. ಹುಡುಗರ ಉಗುರು ಪರೀಕ್ಷೆ ಮಾಡಿಸುತ್ತಿದ್ದರು. ಉಗುರು ಇರಲೇಬಾರದು, ಇದ್ದರೂ ಅದರಲ್ಲಿ ಮಣ್ಣು ಇರಬಾರದು ಅನ್ನುತ್ತಿದ್ದರು. ಪರಿಸರದಲ್ಲಿ ಶುದ್ಧ ಹವೆ ಇರಬೇಕು ಎಂದು ಅವರು ಶಾಲೆಯ ಅಂಗಳದಲ್ಲಿ ತುಳಸಿ ಗಿಡ ಬೆಳೆಸಿದ್ದರು. ತುಳಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದೆಂದು ಮಕ್ಕಳಿಂದ ಬೊಗಸೆಯಷ್ಟು ತುಳಸಿ ಕೊಯ್ಯಿಸಿ ಅವರಿಗೆ ತಿನ್ನಿಸುತ್ತಿದ್ದರು. ನಾರಾಯಣ ಗೌಡರ ಮನೆಯಿಂದ ಎರಡು ತೆಂಗಿನ ಸಸಿ ತಂದು ಶಾಲೆಯ ಅಂಗಳದಲ್ಲಿ ಎರಡು ಮೂಲೆಗಳಲ್ಲಿ ನೆಡಿಸಿದ್ದರು. ಅದಕ್ಕೆ ನಾರಾಯಣಿ ವೃಕ್ಷ ಎಂದು ಹೆಸರಿಟ್ಟಿದ್ದರು. ಸಸಿಗಳನ್ನು ಕೊಟ್ಟ ಗೌಡರ ಹೆಸರು ನಾರಾಯಣ, ನನ್ನ ತಂದೆಯ ಹೆಸರೂ ನಾರಾಯಣ. ಅದಕ್ಕೇ ಈ ತೆಂಗಿನ ಮರಗಳಿಗೆ ನಾರಾಯಣೀ ವೃಕ್ಷ ಎಂದು ಹೆಸರಿಟ್ಟಿದ್ದೇನೆ ಎಂದು ಅನ್ನುತ್ತಿದ್ದರು. ಅದರಲ್ಲಿ ಊರವರಿಗೆ ಮಾಸ್ತರರ ನ್ಯಾಯಬುದ್ಧಿಯೇ ಕಾಣುತ್ತಿತ್ತು. ಮಕ್ಕಳಲ್ಲಿ ಕುಶಲಕಲೆ ಬೆಳೆಯಬೇಕೆಂದು ಅವರು ಸೇಡಿಮಣ್ಣಿನಲ್ಲಿ ಹಣ್ಣು, ತರಕಾರಿ ಇತ್ಯಾದಿಗಳನ್ನು ಮಾಡಲು ಮಕ್ಕಳನ್ನು ಹಚ್ಚಿದರು. ಮಕ್ಕಳು ಅದೇನೇನೋ ಮಾಡಿ ಇಟ್ಟಿದ್ದಕ್ಕೆ ತಮ್ಮ ದುಡ್ಡಿನಲ್ಲೇ ಬಣ್ಣ ತರಿಸಿ ಅವುಗಳಿಗೆ ಹಚ್ಚಿಸಿದ್ದರು. ಮಾಡಿದವರ ಹೆಸರನ್ನು ಅದರ ಮೇಲೆ ಬರೆಯಿಸಿ ಶಾಲೆಗೆ ಬಂದವರಿಗೆ ತೋರಿಸುತ್ತಿದ್ದರು. ಹಾಗೆ ತೋರಿಸುವಾಗ ಮಕ್ಕಳ ಕಣ್ಣಲ್ಲಿ ಮಿಂಚುತ್ತಿದ್ದ ಹೊಳಪಿನಲ್ಲಿ ತಮ್ಮನ್ನು ತಾವು ಅವರು ಮರೆಯುತ್ತಿದ್ದರು. ಶಾಲೆಯ ಇನ್ಸಪೆಕ್ಸನ್ನಿಗೆ ಸಾಹೇಬ್ರು ಬಂದಾಗ ಅದನ್ನು ಅವರು ತೋರಿಸಿ ಹೆಮ್ಮೆ ಪಡುತ್ತಿದ್ದರು. ಹಿಂದಿನ ಮಾಸ್ತರ ಹಾಗೆ ಅಲ್ಲ ಈ ದೇವಣ್ಣ ಮಾಸ್ತರು ಅನ್ನುವ ಭಾವನೆ ಊರ ಜನರಲ್ಲಿ ಮೂಡುತ್ತಿತ್ತು. ಮಾತಿಗೆ ತೊಡಗಿದರೆ ತಮ್ಮದೇ ಸರಿ ಎಂದು ಸಾಧಿಸಿಕೊಂಡು ಬರುತ್ತಿದ್ದ ಮಾಸ್ತರರ ಮಾತೆಂದರೆ ಕಚ್ಚೊಂದು ತುಂಡೆರಡು. ಬರೀ ಮಾತೇನು ಘನ ಅಂತೀರಿ ಕೃತಿಯೂ ಹಾಗೆ. ಒಂದು ಸಲ ನಮ್ಮೂರಿನ ಮಂಜಪ್ಪನ ಅಂಗಡಿಯಲ್ಲಿ ಯಾರೊಂದಿಗೋ ಮಾತಿಗೆ ಮಾತು ಬಂದು ಹಲ್ಲಿನಲ್ಲಿಯೇ ತೆಂಗಿನ ಕಾಯಿ ಅವರು ಸುಲಿದುಬಿಟ್ಟಿದ್ದರು. ಮನೆಗೆ ತಂದು ಸಣ್ಣಯ್ಯನಿಗೆ ತೋರಿಸುತ್ತ, ನೋಡಿ ಸಣ್ಣಯ್ಯನವರೇ ಎಂದು ತಮ್ಮ ಸಾಹಸ ಹೇಳಿಕೊಳ್ಳುತ್ತಿದ್ದರು. ಅದರಲ್ಲೇ ಗರ್ಕಾದವರಂತೆ ತೆಂಗಿನ ಕಾಯಿಯ ಮೇಲೆ ಕೈಯಾಡಿಸುತ್ತ ಅದರ ಜುಬರನ್ನೆಲ್ಲ ತೆಗೆದು ಅದೇ ಆಗ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದವರ ತಲೆಯ ಹಾಗೆ ಮಾಡಿಬಿಟ್ಟಿದ್ದರು. ನರ್ಸಮ್ಮನೂ ಹಾಗೇ. ಅವರೂ ತಮ್ಮ ಮಾತು ಕೆಳಗೆ ಬೀಳುವುದಕ್ಕೆ ಬಿಡುತ್ತಿರಲಿಲ್ಲ. ತಮ್ಮದನ್ನೇ ಸಾಧಿಸುವವರು ಅವರು. ತಮ್ಮ ವೃತ್ತಿಯಲ್ಲಂತೂ ಸುತ್ತ ಹತ್ತೂರಲ್ಲಿ ಅವರಿಗೆ ಸರಿಸಾಟಿ ಯಾರೂ ಇರಲಿಲ್ಲ. ಅವರ ವ್ಯಾಪ್ತಿಯನ್ನು ಮೀರಿದ ಹಳ್ಳಿಗಳ ಜನರೂ ಅವರನ್ನು ಅಗತ್ಯ ಬಿದ್ದಾಗ ಹೆರಿಗೆಗೆ ಕರೆದೊಯ್ಯುತ್ತಿದ್ದರು. ಅವರು ಕೊಡುವ ಕಾಸಿಗಾಗಿ ಮಾತ್ರ ಅಲ್ಲ ತಮ್ಮ ಕಸಬುಗಾರಿಕೆ ತೋರಿಸುವುದಕ್ಕೆ ದೊರೆತ ಒಂದು ಅವಕಾಶ ಅದು. ಅದನ್ನು ವ್ಯರ್ಥವಾಗುವುದಕ್ಕೆ ಬಿಡಬಾರದು ಎಂದು ಅವರು ಅಂದುಕೊಳ್ಳುತ್ತಿದ್ದರು. ಹಾಗೆ ಹೋಗಿ ಬಂದಾಗಲೆಲ್ಲ ಕಾಸಿನಿಂದ ಹಿಡಿದು ತೆಂಗಿನಕಾಯಿ ವರೆಗೆ, ಎಣ್ಣೆಯಿಂದ ಹಿಡಿದು ಬೆಣ್ಣೆ ತುಪ್ಪದ ವರೆಗೆ ಅವರು ಚೀಲದಲ್ಲಿ ತುಂಬಿ ತರುತ್ತಿದ್ದರು. ಅವರು ಅದನ್ನೆಲ್ಲ ಕೇಳುತ್ತಿದ್ದರು ಅಂದಲ್ಲ. ಜನರೇ ಕೃತಜ್ಞರಾಗಿ ಒಪ್ಪಿಸುತ್ತಿದ್ದರು. ತಮಗೆ ಗೊತ್ತಿಲ್ಲದ್ದು ಗೊತ್ತಿದ್ದವರ ಎದುರು ಸಣ್ಣವರಾಗಲು ಅವರಿಗೆ ಸಂತೋಷವೇ. ಅಷ್ಟೆಲ್ಲ ಕೊಟ್ಟ ಮೇಲೂ ತಾವು ಕಡಿಮೆ ಕೊಟ್ಟವೇನೋ ಎಂಬ ಸಂಕೋಚ ಅವರದು. ದೇವಣ್ಣ ಮಾಸ್ತರು ನರ್ಸಮ್ಮ ತಮ್ಮ ತಮ್ಮ ಉದ್ಯೋಗದಲ್ಲಿ ಇನ್ನೊಬ್ಬರಿಗೆ ಎರಡನೆಯವರಾಗದ ಕಾರಣ ಅದು ಅವರ ಸಂಸಾರದ ಮೇಲೂ ನೆರಳು ಚಾಚುತ್ತಿತ್ತು. ನರ್ಸಮ್ಮ ಮಾಸ್ತರಿಗೆ ಒಮ್ಮೊಮ್ಮೆ ಎದುರು ಉತ್ತರ ಕೊಡುತ್ತಿದ್ದರು. ಊರಿಗೆ ಊರೇ ನಾನಂದ ಮಾತಿಗೆ ಹೌದೆನ್ನುತ್ತಿರುವಾಗ ಈಕೆ ಎದುರುತ್ತರ ಕೊಡುತ್ತಾಳಲ್ಲ ಎಂದು ಮಾಸ್ತರು ಒಮ್ಮೊಮ್ಮೆ ಕೆಂಪು ಬಿಳಿದು ಆಗುತ್ತಿದ್ದರು. ಹಾಗೆ ಆದ ಒಂದು ದಿನವೇ ಅವರು ನರ್ಸಮ್ಮನ ಕೆನ್ನೆಗೆ ಬಿಸಿಯಾದ ಲಾಟೀನಿನ ಗಾಜು ಒತ್ತಿದ್ದು. ದಿನ ಕಳೆದ ಹಾಗೆ ನರ್ಸಮ್ಮನ ಗಾಯ ಮಾಸುತ್ತ ಹೋಯಿತು. ಆದರೆ ಅವರ ಎದೆಯಲ್ಲಿ ಮಾತ್ರ ಆ ಗಾಯದ ಕಲೆ ಉಳಿದುಬಿಟ್ಟಿತು. ಅದಕ್ಕೆ ಯಾವ ಔಷಧ ಮಾಡಿದರೂ ಅದು ಮಾಸುವ ಹಾಗಿರಲಿಲ್ಲ. ನರ್ಸಮ್ಮ ಒಮ್ಮೆ ಮೀಟಿಂಗಿಗೆ ಎಂದು ಹೋದವರು ಮೂರು ದಿನವಾದರೂ ಬರಲೇ ಇಲ್ಲ. ನಾಲ್ಕನೆ ದಿನ ಬಂದಾಗ ಗಂಡ ಹೆಂಡತಿ ನಡುವೆ ದೊಡ್ಡ ಜಗಳ. ಸಿಟ್ಟಿಗೆದ್ದ ಮಾಸ್ತರು ಅವರ ಕರಿಮಣಿಯನ್ನೇ ಕಿತ್ತುಬಿಟ್ಟರು. ನನಗೆ ನಿನಗೆ ಸಂಬಂಧ ಕಡಿದು ಹೋಯಿತು ಎಂದರು. ಇಬ್ಬರ ಬಾಯಿಯ ಪರಿಚಯ ಇದ್ದ ಜನರು ಯಾರ ಪರವಾಗಿಯೂ ಮುಂದೆ ಬಂದು ಮಾತನಾಡಲಿಲ್ಲ. ಮಾಸ್ತರು ಹೆಂಡತಿಯನ್ನು ಹೊಡೆದರಂತೆ, ನರ್ಸಮ್ಮ ಎರಡು ದಿನದಿಂದ ಸಣ್ಣಯ್ಯನ ಮನೆಯಲ್ಲೇ ಮಲಗುತ್ತಿದ್ದಾರಂತೆ ಹಾಗೆ ಹೀಗೆ ಅದು ಇದು ಸುದ್ದಿ ಹಬ್ಬಿತು. ನಾಲ್ಕು ದಿನ ನರ್ಸಮ್ಮ ಕರಿಮಣಿ ಇಲ್ಲದೆಯೇ ತಿರುಗಿದರು. ಕೊನೆಗೆ ಸಣ್ಣಯ್ಯ ಮತ್ತು ನಾರಾಯಣಗೌಡರು ಸೇರಿ ಪಂಚಾಯಿತಿ ನಡೆಸಿದರು. ಗಂಡ ಹೆಂಡತಿ ಇಬ್ಬರನ್ನೂ ಜೊತೆಗೆ ಕೂಡಿಸಿ ಬುದ್ಧಿ ಹೇಳಿದರು. ನೀವಿಬ್ಬರೂ ಈ ಊರಿನ ಆಸ್ತಿ. ಹೀಗೆ ಜಗಳ ಆಡಬಾರದು. ಒಬ್ಬರು ಇನ್ನೊಬ್ಬರನ್ನು ಗೌರವಿಸಬೇಕು ಎಂದು ಹೇಳಿದರು. ಸಣ್ಣಯ್ಯನ ಮಕ್ಕಳು ಸುರಿದು ಕೊಟ್ಟ ಕರಿಮಣಿ ಸರವನ್ನು ಮಾಸ್ತರು ಈ ಗೃಹಸ್ಥರಿಬ್ಬರ ಸಮ್ಮುಖದಲ್ಲಿ ಮತ್ತೊಮ್ಮೆ ಕಟ್ಟಿದರು. ಮಾಸ್ತರು ನರ್ಸಮ್ಮನ ಮೇಲೆ ಗದರುವುದು ಹೊಡೆಯುವುದು ಮಾಮೂಲು ಅನ್ನುವ ಹಾಗೆ ಆಗಿತ್ತು. ಮೊದಮೊದಲು ಅವರ ಜಗಳ ಊರವರ ಬಾಯೊಳಗಿನ ಕವಳ ಆಗಿತ್ತು. ಕವಳವನ್ನು ಹೊರಳಿಸಿ ಹೊರಳಿಸಿ ಅಗಿದ ಹಾಗೆ ಈ ಸುದ್ದಿಯನ್ನು ತಿರುಗಿ ತಿರುಗಿ ಆಡುತ್ತಿದ್ದರು. ಈಗ ಅದು ಸುದ್ದಿಯೇ ಅಲ್ಲ ಅನ್ನುವ ಹಾಗೆ ಆಗಿಬಿಟ್ಟಿತ್ತು. ಒಮ್ಮೆ ಅಡುಗೆ ಮಾಡಿದ್ದು ಸರಿ ಆಗಿಲ್ಲವೆಂದೋ, ಮಕ್ಕಳು ಅಳುತ್ತಾರೆಂದೋ, ಮೀಟಿಂಗಿಗೆ ಹೋದವರು ತಮ್ಮ ಅಕ್ಕನ ಮನೆಗೆ ಹೋದರೆಂದೋ, ಮೀಟಿಂಗು ನಡೆಸುವ ವೈದ್ಯಾಧಿಕಾರಿ ತಮ್ಮಲ್ಲಿ ನರ್ಸಮ್ಮನ ಬಗ್ಗೆ ವಿಚಾರಿಸಿದರೆಂದೋ ಈ ಜಟಾಪಟಿ ನಡೆಯುತ್ತಿತ್ತು. ತಾವು ಜಗಳವಾಡುವುದು ಇತರರು ಕೇಳುತ್ತಾರೆ ಎಂಬ ಹಿಂಜರಿಕೆ ಸ್ವಲ್ಪವೂ ಇರಲಿಲ್ಲ. ಯಾರಿಗೂ ಕೇರ್‌ ಮಾಡುವಂಥ ಜನರೇ ಆಗಿರಲಿಲ್ಲ ಅವರು. ಮನೆಯಲ್ಲಿ ಜಗಳವಾದಾಗಲೆಲ್ಲ ಮಾಸ್ತರು ಶಾಲೆಯಲ್ಲಿ ಮಕ್ಕಳನ್ನು ತೀರ ಹಚ್ಚಿಕೊಂಡು ಮಾತನಾಡಿಸುವವರು. ಅವರ ತಲೆ ಸವರುತ್ತ ಬೆನ್ನು ಸವರುತ್ತ ತಮ್ಮ ಮಕ್ಕಳೋ ಎಂಬಂತೆ ವರ್ತಿಸುವರು. ಕಲಿಸುವಿಕೆಯಲ್ಲಿ ಅಂಥ ದಿನಗಳಲ್ಲೆಲ್ಲ ಅವರು ತನ್ಮಯರಾಗುತ್ತಿದ್ದರು. ಬಣ್ಣದ ತಗಡಿನ ತುತ್ತೂರು, ಕಾಸಿಗೆ ಕೊಂಡನು ಕಸ್ತೂರಿ ಎಂಬ ಹಾಡನ್ನ ರಾಗವಾಗಿ ಹಾಡುತ್ತ ಕೈಯಲ್ಲಿಯೇ ತುತ್ತೂರಿ ಊದಿದಂತೆ ಮಾಡಿ ತೋರಿಸುತ್ತ ಕಸ್ತೂರಿ ಜಾರಿ ಬಿದ್ದಂತೆ ತಾವೂ ಬಿದ್ದು ತೋರಿಸುತ್ತ ಅದನ್ನು ಕಂಡು ಮಕ್ಕಳು ಹೋ ಹೋ ಎಂದು ನಿರುಂಬಳವಾಗಿ ನಗತೊಡಗಿದಾಗ ತಾವೂ ನಗುತ್ತ ಹಗುರಾಗುತ್ತಿದ್ದರು. ಇಂಥ ಜಗಳದ ದಿನಗಳಲ್ಲಿಯೇ ಅವರು ಗುಂಗಾಗಿ ತಮ್ಮಷ್ಟಕ್ಕೆ ತಾವೇ ಏನನ್ನೋ ಚಿಂತಿಸುತ್ತ ಕೂಡುವರು. ನರ್ಸಮ್ಮನ ಖುಷಿ ಮಾಡುವ ಉದ್ದೇಶದಿಂದ ಒಮ್ಮೊಮ್ಮೆ ಮಿಡುಕಾಡುವ ಹೊಳೆ ಮೀನನ್ನು ತಂದು ಕೊಡುವರು. ನರ್ಸಮ್ಮ ಮೀನಿಗೆ ಬೂದಿ ಹಚ್ಚಿ ಮೆಟ್ಟುಕತ್ತಿಗೆ ಅದನ್ನು ಒತ್ತಿ ಹಿಂದೆ ಮುಂದೆ ಎಳೆಯತೊಡಗಿದಾಗ ಹಾರಿದ ಮೀನಿನ ಹಿಜರು ಕಂಡು ಮಾಸ್ತರ ತಲೆಯಲ್ಲಿ ಏನೋ ಒಂದು ಮಿಂಚು ಹಾಯ್ದು ಹೋಯಿತು. ಅದೇ ಮುಂದೆ ಅವರು ಒಂದು ಲೇಖನ ಬರೆಯುವುದಕ್ಕೆ ಸ್ಫೂರ್ತಿ ಆಯಿತು. ಮೀಜಿನ ಹಿಜರು ಗ್ಯಾಸ್ ಲೈಟಿನ ಅಬ್ರಕದ ಗಾಜಿನ ಹಾಗೆಯೇ ಇತ್ತು. ಈ ಮೀನಿನ ಹಿಜರನ್ನು ಬಳಸಿ ಅಬ್ರಕವನ್ನು ಪ್ರಯೋಗ ಶಾಲೆಯಲ್ಲಿ ತಯಾರಿಸಬಹುದು ಎಂದು ಸಯುಕ್ತಿಕವಾಗಿ ಅವರು ವಾದ ಮಂಡಿಸಿದರು. ಅದು ಪತ್ರಿಕೆಯಲ್ಲಿ ಪ್ರಕಟವಾಯಿತು ಕೂಡ. ನಂತರ ಮಾಸ್ತರ ಇಮೇಜ್‌ ಬದಲಾಗಿಬಿಟ್ಟಿತು. ಅವರನ್ನು ಮಾಸ್ತರರ ವಲಯದಲ್ಲಿ ವಿಜ್ಞಾನ ಲೇಖಕರು ಎಂಬಂತೆ ಗುರುತಿಸಲಾಗುತ್ತಿತ್ತು. ನರ್ಸಮ್ಮನ ಬಗ್ಗೆ ಸದಾ ಗುಮಾನಿ ಪಡುವ ಮಾಸ್ತರರಿಗೆ ತಮ್ಮ ಗುಮಾನಿಯ ಮೂಲ ಯಾವುದು ಎಂಬುದು ಗೊತ್ತಾಗುತ್ತಿರಲಿಲ್ಲ. ನರ್ಸಮ್ಮನ ಬಗ್ಗೆ ತನಗೆ ಅಸೂಯೆಯೇ ಎಂದು ಹಲವು ಬಾರಿ ಪ್ರಶ್ನಿಸಿಕೊಂಡಿದ್ದಾರೆ. ತನ್ನ ಅನುಮಾನವೆಲ್ಲ ನಿಜವಿರಬಹುದೆ ಎಂದೂ ಪ್ರಶ್ನಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಉತ್ತರವನ್ನು ಹುಡುಕಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು ಮಾತ್ರ ಯಾವತ್ತೂ ಇರಲಿಲ್ಲ. ಏಕೆಂದರೆ ಅದರ ಫಲಿಂತಾಂಶವನ್ನು ಎದುರಿಸುವ ಧೈರ್ಯ ಅವರಲ್ಲಿ ಇರಲಿಲ್ಲ. ನರ್ಸಮ್ಮನಿಗಿಂತ ಬೆಳ್ಳಗೆ ಇದ್ದ ದೇವಣ್ಣ ಮಾಸ್ತರು ಸಹಜವಾಗಿಯೇ ಸುಂದರರು. ಇನ್ನಷ್ಟು ಸುಂದರವಾಗಿ ಕಾಣಬೇಕೆಂದು ಬುದ್ಧಿಪೂರ್ವಕವಾಗಿ ಅವರು ಯತ್ನಿಸುತ್ತಿದ್ದರು. ಒಮ್ಮೊಮ್ಮೆ ಮೀಸೆಯನ್ನು ಬೋಳಿಸಿಕೊಂಡು ಅದರ ಜಾಗದಲ್ಲಿ ಕಪ್ಪು ಪೆನ್ಸಿಲ್ಲಿನಿಂದ ಸಿನಿಮಾದ ರಾಜಕುಮಾರನ ಹಾಗೆ ಮೀಸೆ ಬಿಡಿಸಿಕೊಂಡು ಬರುವವರು. ತಮ್ಮ ಅಸಿಸ್ಟಂಟ್‌ಗಳಾದ ನಾಯ್ಕ ಮಾಸ್ತರು, ಗೌಡ ಮಾಸ್ತರು, ಆಚಾರಿ ಮಾಸ್ತರರಿಗೆಲ್ಲ ತಮ್ಮ ಮೀಸೆಯ ಬಗ್ಗೆ ಕಮೆಂಟ್‌ ಮಾಡಲಿಕ್ಕೆ ಹಚ್ಚುವರು. ಹೆಡ್ಮಾಸ್ಟರರ ಮೀಸೆಯನ್ನು ಅವರು ಹೊಗಳದೆ ಇರುತ್ತಾರೆಯೇ? ಇವರೆಲ್ಲ ಹೊಗಳಿದ ಮೀಸೆಯನ್ನು ನರ್ಸಮ್ಮ ಮನೆಯಲ್ಲಿ ಲೇವಡಿ ಮಾಡಿದಾಗ ಮಾಸ್ತರರಿಗೆ ರೇಗುವುದು ಸಹಜವಲ್ಲವೆ? ಮೀಸೆ ಇಲ್ಲದೆ ನೀವು ಹಾಗೇ ಇದ್ದರೂ ಚಿಂತೆ ಇಲ್ಲ. ನಾಟಕದವರ ಹಾಗೆ ಹೀಗೆಲ್ಲ ಮಾಡ್ಕೊಂಡ್ರೆ ನನಗೆ ಚೆಂದ ಕಾಣೂದಿಲ್ಲ ಎಂದು ನರ್ಸಮ್ಮ ಹೇಳಿಯೇ ಬಿಟ್ಟರು. ಉಳಿದವರಿಗೆ ಪ್ರಿಯವಾದ ಈ ಮೀಸೆ ಈಕೆಗೇಕೆ ಪ್ರಿಯವಾಗಲಿಲ್ಲ ಎಂದು ಮೂರ್ನಾಲ್ಕು ದಿನಗಳ ವರೆಗೆ ಆಲೋಚಿಸುತ್ತ ತಲೆ ಬಿಸಿ ಮಾಡಿಕೊಳ್ಳುವವರು ಮಾಸ್ತರು. ಮಾಸ್ತರಿಗೆ ಒಂದು ತಿಂಗಳು ಮೈಸೂರಿಗೆ ಯಾವುದೋ ಟ್ರೇನಿಂಗ್‌ ಬಂತು. ಹೋಗಿಯೂ ಬಂದರು. ಅಲ್ಲಿಯ ಟ್ರೇನಿಂಗ್‌ ಕ್ರಮ, ತಾವು ಅಲ್ಲಿ ಉಳಿದವರಿಗಿಂತ ಹೇಗೆ ಭಿನ್ನವಾಗಿ ಗಮನ ಸೆಳೆದದ್ದು, ಅಲ್ಲಿಯ ಅಧಿಕಾರಿಗಳು ತಮ್ಮ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು ಇತ್ಯಾದಿ ಸಂಗತಿಗಳನ್ನು ಸುಮಾರು ಆರು ತಿಂಗಳ ವರೆಗೆ ಗುರುತು ಪರಿಚಯದವರ ಮುಂದೆಲ್ಲ ಹೇಳಿದ್ದೇ ಹೇಳಿದ್ದು. ನರ್ಸಮ್ಮನ ಮುಂದೆಯೂ ಅವರು ಹೇಳಲು ಹೋದರು. ಅವರು ಅದೇನು ಮಹಾ ಎಂಬಂತೆ ವರ್ತಿಸಿದರು. ಇವರು ಮತ್ತೊಮ್ಮೆ, ಮಗದೊಮ್ಮೆ ತಮ್ಮ ಸಾಹಸ ಹೇಳಿಕೊಳ್ಳಲು ಉಪಕ್ರಮಿಸಿದಾಗ ಅವರು ತಮ್ಮ ಟ್ರೇನಿಂಗ್‌ನಲ್ಲಿ ಆದ ಯಾವುದೋ ಮಜಾ ಸುದ್ದಿ ಇವರಿಗೆ ಹೇಳಲು ಮುಂದಾದರು. ಅಲ್ಲಿಗೆ ಮಾಸ್ತರು ತಮ್ಮ ಚಾಪ್ಟರು ಕ್ಲೋಸ್‌ ಮಾಡಿದವರ ಹಾಗೆ ಮಂಡ ಮಡಚಿ ಎದ್ದುಬಿಡುತ್ತಿದ್ದರು. ಜಗತ್ತೇ ತಮ್ಮ ಸಾಹಸ ಗಾಥೆ ಕೇಳಲು ಬಾಯ್ದೆರೆದು ನಿಂತಾಗ ಇವಳಿಗೆ ಅದೇನು ದೆವ್ವ ಬಡಿದಿದೆ ಎಂದುಕೊಳ್ಳುವರು. ಮಾಸ್ತರು ಟ್ರೇನಿಂಗಿಗೆ ಹೋಗಿ ಬಂದ ಮೇಲೆ ನರ್ಸಮ್ಮನಿಗೂ ಅದೇನೋ ಟ್ರೇನಿಂಗು ಬಂತು. ಹೋಗದಿದ್ದರೆ ಆಗದೆ ಎಂದು ಮಾಸ್ತರು ಕೇಳಿದರು. ಟ್ರೇನಿಂಗ್‌ ಆಗಿಲ್ಲ ಎಂದರೆ ಇಂಕ್ರಿಮೆಂಟ್‌ ಸಿಗುವುದಿಲ್ಲ, ಪ್ರಮೋಶನ್‌ ಬರುವುದಿಲ್ಲ, ವೃತ್ತಿ ಪರಿಣತೆ ಹೆಚ್ಚುವುದಿಲ್ಲ ಎಂದೆಲ್ಲ ಕಾರಣಗಳ ಗುಡ್ಡ ಮುಂದೆ ಮಾಡಿದರು ನರ್ಸಮ್ಮ. ಜೊತೆಗೆನೀವು ಟ್ರೇನಿಂಗಿಗೆ ಹೋಗುವಾಗ ನಾನು ಬೇಡ ಅಂದಿದ್ನಾ?’ ಎಂಬ ಪ್ರಶ್ನೆ ಬೇರೆ. ಚಿಕ್ಕ ಮಕ್ಕಳು ಮನೆಯಲ್ಲಿ ಇರುವಾಗ ಈ ರೀತಿ ತಿಂಗಳೋ ಹದಿನೈದು ದಿನವೋ ಮನೆ ಹೆಂಗಸು ಟ್ರೇನಿಂಗಿಗೆ ಹೋದರೆ ಹೇಗೆ? ಮಾಸ್ತರೇ ಅಡುಗೆ ಮಾಡುವ ಪ್ರಸಂಗ. ಅಂತೂ ನರ್ಸಮ್ಮ ಟ್ರೇನಿಂಗಿಗೆ ಹೋಗಿಯೇ ಬಿಟ್ಟರು.
ಮನೆಯಲ್ಲಿ ಹೆಂಗಸು ಇಲ್ಲ ಅಂದ್ಕೊಂಡು ಮಾಸ್ತರು ತಮ್ಮ ಶಾಲೆಯಲ್ಲಿಯ ದೊಡ್ಡ ಹುಡುಗರು ಒಂದಿಬ್ಬರಿಗೆ ತಮ್ಮ ಮನೆಗೆ ಬಂದು ಮಲಗಲು ಹೇಳಿದರು. ರಾತ್ರಿ ತಾವೇ ಆ ಮಕ್ಕಳಿಗೆ ಮನೆ ಪಾಠ ಹೇಳಿಕೊಡುವುದಾಗಿ ಅವರ ಅಪ್ಪ ಅಮ್ಮಂದಿರಿಗೆ ಹೇಳಿದರು. ಅವರೂ ಹೂಂ ಅಂದರು. ಎರಡು ದಿನ ಮಾಸ್ತರ ಮನೆಗೆ ಹೋದ ಮಕ್ಕಳು ಮೂರನೆ ದಿನ ತಾವು ಅಲ್ಲಿಗೆ ಹೋಗುವುದೇ ಇಲ್ಲ ಅಂದು ಹಟ ಹಿಡಿದರು. ಆಮೇಲೆ ತಾವು ಶಾಲೆಗೂ ಹೋಗುವುದಿಲ್ಲ ಅನ್ನಲಾರಂಭಿಸಿದರು. ಮಾಸ್ತರ ಮನೆಗೆ ಹೋಗುವುದಿಲ್ಲ ಅಂದರೆ ಅವರ ಅಪ್ಪ ಅಮ್ಮ ಅಷ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಶಾಲೆಗೇ ಹೋಗುವುದಿಲ್ಲ ಅಂದಾಗ ಮಾತ್ರ ಅವರಿಗೆ ಕಾರಣ ಹುಡುಕಬೇಕಾಯಿತು. ಅವರು ಬಹಳ ಕೆದಕತೊಡಗಿದಾಗ ಆ ಮಕ್ಕಳು ಬಾಯಿಬಿಟ್ಟರು. ಮಾಸ್ತರು ರಾತ್ರಿ ಅವರಿಗೆ ಏನೇನೋ ಮಾಡಿದರಂತೆ. ಇವರಿಗೆ ಉಸಿರು ಕಟ್ಟಿದಂತೆ ಆಯಿತಂತೆ. ಅವರ ಮನೆಗೆ ಹೋಗುವುದು ಬಿಟ್ಟಿದ್ದಕ್ಕೆ ಶಾಲೆಯಲ್ಲಿ ಅವರು ಹೊಡೆಯಬಹುದೆಂದು ಅಂಜಿದ್ದಾರಂತೆ.
ಅದುವರೆಗೆ ದೇವಣ್ಣ ಮಾಸ್ತರು ಏನೋ ಅದ್ಭುತ ಎಂಬಂತೆ ನೋಡುತ್ತಿದ್ದ ಊರ ಜನ ಈಗ ಅವರನ್ನು ನೋಡುವ ರೀತಿಯೇ ಬದಲಾಯಿತು. ಆ ಮಕ್ಕಳ ಅಪ್ಪಂದಿರು ಮಾಸ್ತರ ಏನೂ ಮಾಡುವುದಿಲ್ಲ ಎಂದು ಪುಸಲಾಯಿಸಿ ಶಾಲೆಗೆ ಕಳುಹಿಸಿದರು. ಈ ಸುದ್ದಿ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಯಾರಿಗೂ ಗೊತ್ತಿಲ್ಲದ ಗುಟ್ಟು ಎಂಬಂತೆ ಹಬ್ಬತೊಡಗಿತು. ದೇವಣ್ಣ ಮಾಸ್ತರು ಹೋಮೋ ಅಂತೆ ಎಂದು ಯಾರೋ ಹೇಳಿದರು. ನಾನೂ ಕೇಳ್ದೆ ಸುದ್ದಿ ಎಂದು ಇನ್ನೊಬ್ಬರೆಂದರು. ನರ್ಸಮ್ಮ ಮತ್ತು ಮಾಸ್ತರಿಗೆ ಜಟಾಪಟಿ ನಡೆಯುವುದಕ್ಕೆ ಇದೇ ಕಾರಣ ಅಂತೆ ಎಂದು ಮತ್ತೊಬ್ಬರು ಏನೋ ಹೊಸದನ್ನು ಕಂಡುಕೊಂಡವರಂತೆ ಹೇಳಿದರು.
ನರ್ಸಮ್ಮ ಟ್ರೇನಿಂಗ್‌ ಮುಗಿಸಿ ಬಂದರು. ನಾಲ್ಕಾರು ತಿಂಗಳು ಮತ್ತೆ ಹಾಗೇ ಸಾಗಿತು. ಆಗಲೇ ಈ ಜೋಡಿ ನಮ್ಮೂರಿಗೆ ಬಂದು ಐದು ವರ್ಷ ದಾಟಿ ಹೋಗಿತ್ತು. ಹೀಗಾಗಿ ಇಬ್ಬರಿಗೂ ವರ್ಗ ಆಯಿತು. ವರ್ಗವಾಗಿ ಹೋದ ಮೇಲೆಯೂ ಮಾಸ್ತರು ನಮ್ಮೂರಿನ ಒಂದಿಬ್ಬರಿಗೆ ಪತ್ರ ಬರೆಯುತ್ತಿದ್ದರು. ಆ ಪತ್ರದಲ್ಲಿ ತಮಗೆ ಸಂಬಂಧಿಸಿದ ಕೀಲು ಮೂಲ ಎಲ್ಲ ಬರೆಯುತ್ತಿದ್ದರು. ನಮ್ಮೂರಿನ ಹತ್ತು ಸಮಸ್ತರ ಬಗ್ಗೆ ವಿಚಾರಿಸುತ್ತಿದ್ದರು. ಹೀಗೆ ಪತ್ರ ಬಂದವರು ಅವರಿಗೆ ಉತ್ತರಿಸುವ ಉಸಾಬರಿಗೆ ಹೋಗುತ್ತಿರಲಿಲ್ಲ. ದೇವಣ್ಣ ಮಾಸ್ತರರ ಜಾಗೆಗೆ ಮತ್ತಾರೋ ಮಾಸ್ತರು, ನರ್ಸಮ್ಮನ ಜಾಗೆಗೆ ಇನ್ನಾರೋ ನರ್ಸಮ್ಮ ಬಂದುದರಿಂದ ಇಲ್ಲಿಯ ಸಮಸ್ತ ಕಾರ್ಯಗಳೆಲ್ಲ ಯಾವೊಂದು ಊನವಿಲ್ಲದಂತೆ ನಡೆದು ಹೋಗುತ್ತಿತ್ತು. ಹೀಗಾಗಿ ನಮ್ಮೂರಿಗೆ ಅನಿವಾರ್ಯ ಅಂಗವಲ್ಲದ ದೇವಣ್ಣ ಮಾಸ್ತರು ಬರೆಯುವ ಪತ್ರಗಳಿಗೆ ಉತ್ತರಿಸುವ ಗರಜು ಕಾಣಲಿಲ್ಲ ನಮ್ಮೂರಿನ ಜನರಿಗೆ.
ಹಾಗೇ ಮತ್ತೆ ಐದಾರು ವರ್ಷಗಳು ಉರುಳಿ ಹೋದವು. ದೇವಣ್ಣ ಮಾಸ್ತರು, ನರ್ಸಮ್ಮ ನಮ್ಮೂರಲ್ಲಿ ಇದ್ದರು ಎಂಬ ಸಂಗತಿಯೇ ಮರೆತುಹೋಗುವ ಹಾಗೆ ಆಗಿತ್ತು. ಅಷ್ಟರಲ್ಲಿ ನಮ್ಮೂರವರೊಬ್ಬರು ಕುಮಟೆಯ ಅಡಕೆವಖಾರಿಗೆ ಅಡಕೆ ಒಯ್ದವರು ತಂದ ಸುದ್ದಿ ಮಾತ್ರ ನಮ್ಮೂರ ಜನರಿಗೆ ಜೀರ್ಣ ಆಗುವ ಹಾಗೆ ಇರಲಿಲ್ಲ. ಕುಮಟೆ ಬಸ್‌ ಸ್ಟ್ಯಾಂಡಿನಲ್ಲಿ ನರ್ಸಮ್ಮ ಯಾರ ಜೊತೆಗೋ ಇದ್ದರಂತೆ. ಅಘನಾಶಿನಿ ಕಡೆಯ ಹೆಗಡೆ ಮಾಸ್ತರಂತೆ ಅವರು. ಇಬ್ಬರೂ ಕ್ಯಾಂಟೀನಿನಲ್ಲಿ ಚಾ ಕುಡಿದು ಹೊರ ಬಂದರಂತೆ. ಹೆಗಡೆ ಮಾಸ್ತರು ಸ್ವಲ್ಪ ಕುಂಟುತ್ತಿದ್ದರಂತೆ. ಒಂದು ಕಾಲು ಉದ್ದ ಇನ್ನಂದು ಕಾಲು ಗಿಡ್ಡ ಅವರದು. ಅವರ ಬಾಯಿಂದ ಸುರಿದ ಜೊಲ್ಲನ್ನು ನರ್ಸಮ್ಮ ತಮ್ಮ ಟವೆಲ್ಲಿನಿಂದ ಒರಸಿದರಂತೆ. ನಮ್ಮೂರ ಮನುಷ್ಯ ಭಾರೀ ಫಾಕಡಾ ಇದ್ದ. ಏನು ಇದರ ಮರ್ಮ ಎಂದು ನೋಡೇಬಿಡುವ ಎಂದು ಅವರ ಎದುರಿಗೇ ಸುಳಿದಾಡಿದನಂತೆ. ನರ್ಸಮ್ಮ ಅವರ ಗುರುತು ಹಿಡಿದು ತಾವೇ ಮಾತನಾಡಿಸಿದರಂತೆ. ಅವರದು ಇವರದು ಎಲ್ಲ ಸುದ್ದಿ ಕೇಳಿದರಂತೆ. ನಾವು ಈಗ ತ್ಯಾಗಲಿಯಲ್ಲಿ ಇರುತ್ತೇವೆ. ಇವರು ಅಲ್ಲೇ ಶಾಲೆಲಿ ಮಾಸ್ತರು ಎಂದು ತಮ್ಮ ಜೊತೆಗಿದ್ದ ಗಂಡಸನ್ನು ಪರಿಚಯಿಸಿದರಂತೆ.
ನಮ್ಮೂರ ಮನುಷ್ಯ ಎಷ್ಟೇ ಫಾಕಡಾ ಅಂದ್ರೂ ನರ್ಸಮ್ಮನ ಹತ್ತಿರ ದೇವಣ್ಣ ಮಾಸ್ತರ ಸುದ್ದಿ, ಅವರ ಮಕ್ಕಳ ಸುದ್ದಿ ಕೇಳೂದು ಸಾಧ್ಯ ಆಗಲಿಲ್ಲ ಅವನಿಗೆ. ನರ್ಸಮ್ಮನೇ, ತ್ಯಾಗಲಿಗೆ ನಮ್ಮನೆಗೆ ಬನ್ನಿ ಎಂದು ಕರೆದರಂತೆ. ಅವರು ಹೂಂ ಅಷ್ಟು ಹಾಕಿದವರು ಅಲ್ಲಿಂದ ಜಾಗ ಖಾಲಿ ಮಾಡಿದ್ದರು.
ನರ್ಸಮ್ಮ ಹೀಗೆ ಯಾರೊಂದಿಗೋ ತ್ಯಾಗಲಿಯಲ್ಲಿ ಸಂಸಾರ ಹೂಡಿದ್ದಾರೆ ಎಂಬ ಸಂಗತಿ ನಮ್ಮೂರಲ್ಲಿ ಕೆಲವು ದಿನಗಳ ವರೆಗೆ ಎಲ್ಲರ ಬಾಯ ಅವಲಕ್ಕಿ ಆಗಿಬಿಟ್ಟಿತು. ಹೇಳಿ ಹೇಳಿಕೊಂಡು ಕೆಲವರು ನಗೆಯಾಡಿದರು. ಕಾಲ ಕೆಟ್ಟುಹೋಯ್ತು ಎಂದು ಕೆಲವರು ಅಲವತ್ತುಕೊಂಡರು. ಅದಕ್ಕೇನು ಹಿನ್ನೆಲೆ ಮುನ್ನೆಲೆ ಗೊತ್ತಾಗದೆ ಕೆಲವರು ಅರ್ಧ ಸುದ್ದಿ ಕೇಳಿದೆವಲ್ಲ ಎಂಬ ಅಸಮಾಧಾನದಲ್ಲಿದ್ದರು. ಅಂಥವರಿಗೆ ಸಮಾಧಾನ ಸಿಗುವ ಹಾಗೆ ಬಾತ್ಮಿಯೂ ಬಂತು.
ಈ ಬಾತ್ಮಿ ತಂದವರು ಬೇರೆ ಯಾರೂ ಅಲ್ಲ. ದೇವಣ್ಣ ಮಾಸ್ತರಿಗೆ ನಮ್ಮೂರಲ್ಲಿ ಮೊಟ್ಟ ಮೊದಲ ಸಲ ಸ್ವಾಗತ ಕೋರಿ ಊಟ ಇಕ್ಕಿದ್ದರಲ್ಲ ಆ ನಾರಾಯಣ ಗೌಡರು. ಗೌಡರಿಗೆ ದೇವಣ್ಣ ಮಾಸ್ತರು ಗೋಕರ್ಣಕ್ಕೆ ಹೋಗಿದ್ದಾಗ ಸಿಕ್ಕಿದ್ದರಂತೆ.
ಮಾದನಗೇರಿ ಕತ್ತರಿಯಲ್ಲಿ ಗೌಡರು ಗೋಕರ್ಣಕ್ಕೆ ಹೋಗುವ ಟೆಂಪೋ ಕಾಯುತ್ತ ಇದ್ದರು. ದೇವಣ್ಣ ಮಾಸ್ತರು ಅಂಕೋಲಾದಿಂದ ಬಂದ ಬಸ್ಸಿನಿಂದ ಇಳಿದರು. ಅರೇ ಅರೇ ಗೌಡ್ರು ಯಾವಾಗ ಬಂದಿರಿ ಎಂದು ಮಾಸ್ತರು ಅದೇ ಮೊದಲಿನ ಸಲಿಗೆಯಿಂದಲೇ ಕೇಳಿದರು. ಅದೇ ಸುಂದರ ರಾವಣ ರೂಪ. ತಲೆ ಕೂದಲು ಮಾತ್ರ ಅಲ್ಲಲ್ಲಿ ನೆರೆತಿತ್ತು. ಸ್ವಲ್ಪ ಸೊರಗಿದ್ದಾರೆ. ಉಭಯ ಕುಶಲೋಪರಿ ಆದ ಮೇಲೆ ಪಕ್ಕದ ಹೊಟೇಲಿಗೆ ಕರೆದುಕೊಂಡು ಹೋಗಿ ಚಾ ಕುಡಿಸಿದರು. ಒಬ್ಬ ಮಗ ನನ್ನ ಹಾಗೇ ಮಾಸ್ತರ ಆಗಿದ್ದಾನೆ. ನಿಮ್ಮೂರಿನ ಹತ್ತಿರ ಹಡಿನಬಾಳದಲ್ಲಿ ಅವನ ನೌಕರಿ ಎಂದರು ಮಾಸ್ತರು. ಮತ್ತೊಬ್ಬ ಮಗನಿಗೆ ಟೆಂಪೋ ತೆಗೆಸಿ ಕೊಟ್ಟಿದ್ದೇನೆ. ಕುಮಟಾ, ಅಂಕೋಲಾ, ಕಾರವಾರ, ಗೋಕರ್ಣಕ್ಕೆಲ್ಲ ಬಾಡಿಗೆ ಹೊಡಿತಾನೆ. ಇನ್‌ಕಂ ಚೆನ್ನಾಗಿದೆ. ಮಗಳು ಚಿಕ್ಕವಳು, ಈ ವರ್ಷ ಕಾಲೇಜು ಕಡೆ ವರ್ಷ. ಅವಳಿಗೆ ಒಂದು ಎಲ್ಲಾದ್ರೂ ನೌಕರಿ ಹತ್ತಿ ಮದುವೆ ಮಾಡಿ ಬಿಟ್ಟೆ ಅಂದ್ರೆ ನನ್ನ ಜವಾಬ್ದಾರಿ ಕಳೀತಿ ಎಂದರು.
ಗೌಡರಿಗೆ ನರ್ಸಮ್ಮನ ಸುದ್ದಿ ತಮಗೆ ಗೊತ್ತಿದೆ ಎಂದು ತೋರಿಸಿಕೊಳ್ಳುವುದೋ ಹೇಗೆ ಎಂಬ ಸಂದಿಗ್ಧ. ಕೊನೆಗೆ ನರ್ಸಮ್ಮ ಏನು ಮಾಡ್ತಾರೆ ಎಂದು ಕೇಳಿದರು. ಅಷ್ಟು ಹೊತ್ತು ನಗುತ್ತಿದ್ದ ಮಾಸ್ತರ ಮೊಖ ಮ್ಲಾನವಾಯಿತು. ಅದೊಂದು ಹೇಳೂದು ಬಾಕಿ ಉಳ್ದಿದೆ. ನನ್ನ ಬಾಯ್ಲೇ ನಾ ಹ್ಯಾಗೆ ಹೇಳ್ಲಿ? ಅದರಾಗೆ ಏನೈತಿ ಮತ್ತೆ? ಇಡೀ ಜಗತ್ತಿಗೇ ಗೊತ್ತಾಗಿದೆ, ನಿಮ್ಗೆ ಗೊತ್ತಾದ್ರೊಂದು ಹೆಚ್ಚೆ? ಕೇಳಿ', ಎಂದು ಎಲ್ಲ ಹೇಳಿಬಿಟ್ಟರು. ನಮ್ಮೂರಿಂದ ವರ್ಗ ಆದಮೇಲೂ ಮಾಸ್ತರು ಮತ್ತು ನರ್ಸಮ್ಮನ ನಡುವೆ ಜಗಳ ಆಗ್ತಾ ಇತ್ತಂತೆ. ನರ್ಸಮ್ಮ ಸರಿ ಇಲ್ಲ ಎಂಬ ಗುಮಾನಿ ಮಾಸ್ತರಿಗೆ. ವಯಸ್ಸು ಕಳೀತಾ ಬಂತು. ಮಕ್ಕಳು ದೊಡ್ಡವರಾದರು. ಇನ್ನಾದರೂ ಸರಿ ಆಗ್ತಾಳೆ ಅಂದ್ಕೊಂಡು ಸುಮ್ಮನೆ ಉಳಿದರಂತೆ. ಒಂದು ವರ್ಷದ ಹಿಂದೆ ನರ್ಸಮ್ಮನಿಗೆ ಘಟ್ಟದ ಮೇಲಿನ ತ್ಯಾಗಲಿ ಊರಿಗೆ ವರ್ಗ ಆಯ್ತಂತೆ. ಮಕ್ಕಳು ಕಾಲೇಜಿಗೆ ಹೋಗ್ತಾರೆ ಅಂದ್ಕೊಂಡು ಮಾಸ್ತರು ತಾವೂ ವರ್ಗ ಮಾಡಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಮಗಳು ಅಡುಗೆ ಮಾಡುವಷ್ಟು ದೊಡ್ಡವಳಾಗಿದ್ದಳು. ನರ್ಸಮ್ಮ ಮಾತ್ರ ಹೊಸ ಊರಿಗೆ ಹೋದರು. ಮೊದಲೆಲ್ಲ ವಾರಕ್ಕೊಮ್ಮೆ ಬರುತ್ತ ಇದ್ದರು. ಒಂದು ಸಲ ಅವರು ತಿಂಗಳಾದರೂ ಬರದೆ ಇದ್ದಾಗ ದೇವಣ್ಣ ಮಾಸ್ತರೇ ನೋಡಿ ಬರುವಾ ಎಂದು ಹೋದರಂತೆ. ನರ್ಸಮ್ಮನ ಮನೆಯಲ್ಲಿ ಕುಂಟ ಹೆಗಡೆ ಮಾಸ್ತರೂ ಇದ್ದರಂತೆ. ನರ್ಸಮ್ಮ ನಿಮ್ಮ ಸಂಗ ನನಗೆ ಬೇಡ ಎಂದು ದೇವಣ್ಣ ಮಾಸ್ತರ ಮೊಖದ ಮೇಲೇ ಹೇಳಿಬಿಟ್ಟರಂತೆ. ಬರೀ ಹೇಳಿದ್ದಷ್ಟೇ ಅಲ್ಲನೀ ಕಟ್ಟಿದ ಕರಿಮಣಿ ತಕ್ಕೊಂಡು ಹೋಗು’ ಎಂದು ಅವರ ಕಡೆ ಎಸೆದ ಹಾಗೆ ಮಾಡಿ ಕಿತ್ತುಕೊಟ್ಟುಬಿಟ್ಟರಂತೆ.
ಇಷ್ಟೆಲ್ಲ ಹೇಳಿದ ದೇವಣ್ಣ ಮಾಸ್ತರು, ಆಕೆ ಹಾಗೆ ಮಾಡಿದ ಮೇಲೆ ನಾನೇನು ಮಾಡ್ಲಿ ಹೇಳಿ? ಆಕಿಗೆ ಹೊಡೆಯಬೇಕು ಎಂದೂ ನನಗೆ ಅನ್ನಿಸಲಿಲ್ಲ. ಬಯ್ಯಲು ಬಾಯಿಂದ ಮಾತು ಹೊರಡಲಿಲ್ಲ. ಉಪ್ಪು ಚಪ್ಪೆ ಅನ್ನಲಿಲ್ಲ. ಆ ಊರಲ್ಲಿ ಒಂದು ಹನಿ ನೀರೂ ಕುಡಿಯದೆ ಬಂದುಬಿಟ್ಟೆ ಆಗಿಂದಾಗ್ಲೇ ಎಂದು ಸುಮ್ಮನಾದರು.
ನಾರಾಯಣ ಗೌಡರಿಗೆ ಏನು ಮಾತಾಡುವುದು ಎಂದು ತೋಚಲಿಲ್ಲ. ಗ್ಲಾಸು ತುಂಬ ನೀರು ಬಗ್ಗಿಸಿಕೊಂಡು ಕುಡಿದುಬಿಟ್ಟರು. ಅತ್ತ ಇತ್ತ ನೋಡಿದರು. ಸುಮಾರು ಜನ ಇದ್ದರು. ಅವರೆಲ್ಲ ಮಾಸ್ತರ ಪರಿಚಯದವರೇ ಇದ್ದಿರಬಹುದು. ಅವರೆಲ್ಲ ಕೇಳುತ್ತಾರೆ ಎಂಬ ಆಲೋಚನೆಯೂ ಇಲ್ಲದೆ, ಕೇಳಿಸಿಕೊಂಡು ಏನು ಮಾಡ್ತಾರೆ ಎಂಬ ಉಡಾಪೆ ಎಂಬಂತೆ ಮಾಸ್ತರು ಮಾತಾಡಿದ್ದರು.
ಒಳ್ಳೇ ಫಜೀತಿ ಆಯ್ತು ನಿಮಗೆ ಎಂದರು ಗೌಡರು, ಏನಾದರೂ ಮಾತನಾಡಲೇಬೇಕಲ್ಲ ಎಂಬ ಗರಜಿಗಾಗಿ. ಫಜೀತಿ ಏನು ಬಂತು ಇದರಲ್ಲಿ. ಈಗ ನಾನು ಆರಾಂ ಇದ್ದೇನೆ. ಯಾರು ಏನು ಅಂತಾರೆ ಎನ್ನುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವವನಲ್ಲ. ಇನ್ನು ಮುಂದೆಯೂ ಅಷ್ಟೇ ವಿಚಾರ ಮಾಡೂದು. ನನ್ನ ಮಗಳ ಮದುವೆಗೆ ಲಗ್ನಪತ್ರಿಕೆ ಕಳುಹಿಸುತ್ತೇನೆ. ನೀವು ಮುದ್ದಾಂ ಬರಬೇಕು ಎಂದು ದೇವಣ್ಣ ಮಾಸ್ತರು ಗೌಡರ ಕೈ ಹಿಡಿದುಕೊಂಡು ಹೇಳಿದಾಗ ಅವರ ಕಣ್ಣುಗಳಲ್ಲಿ ನೀರು ಮಡುಗಟ್ಟಿತ್ತು.

 • ಉತ್ಥಾನ ಕಥಾಸ್ಪರ್ಧೆಯಲ್ಲಿ ಬಹುಮಾನಿತ, 1999

8.ಪತ್ತೆ

ನಿಶ್ಶಬ್ದ ರಾತ್ರಿಯಲ್ಲಿ ಚರ್ಚಿನ ಬಾಗಿಲನ್ನು ಓರ್ವ ಆಗಂತುಕ ಬಡಿಯುತ್ತಾನೆ. ಟಕ್‌… ಟಕ್‌… ಟಕ್‌… ಯೋಹಾನನ ಸತ್ಯ ವಾರ್ತೆಗಳನ್ನು ಅಧ್ಯಯನ ಮಾಡುತ್ತ ಅದರ ಮೇಲೆ ಟೀಕೆಗಳನ್ನು ಬರೆಯುವುದರಲ್ಲಿ ಮಗ್ನರಾಗಿದ್ದ ಫಾದರ್‌ ಪಾವೆಲ್‌ ಅವರ ಏಕಾಗ್ರತೆಗೆ ಭಂಗ ಬರುತ್ತದೆ.
ಯಾರಿರಬಹುದು? ಈ ಅಪರ ರಾತ್ರಿಯಲ್ಲಿ ಬಂದು ದೇವರ ಸನ್ನಿಧಿಯಲ್ಲಿ ಈ ರೀತಿ ಬಾಗಿಲು ಬಡಿಯುವವರು? ಕಳ್ಳನಿರಬಹುದೆ ಎಂದು ಒಂದು ಕ್ಷಣ ತಲೆಯಲ್ಲಿ ಮಿಂಚಿತು. ಆಮೇಲೆ ಅಂಥ ವಿಚಾರ ತಮ್ಮ ತಲೆಯಲ್ಲಿ ಹೇಗೆ ಬಂತು ಎಂದು ಅವರಿಗೇ ನಾಚಿಕೆ ಎನಿಸಿತು. ಕದ್ದೊಯ್ಯಲು ಏನಿದೆ ಇಲ್ಲಿ, ಸತ್ಯವಾಕ್ಯನ ಉಪದೇಶಗಳನ್ನು ಹೊರತುಪಡಿಸಿ? ಪವಿತ್ರಾತ್ಮನ ಪವಿತ್ರ ಆತ್ಮದ ಹೊರತು ಸೂರೆಗೊಳ್ಳಲು ಏನಿದೆ ಇಲ್ಲಿ? ಯಾರೋ ಆರ್ತನಿರಬೇಕು. ಪವಿತ್ರಾತ್ಮನ ನಿಲಯ ಸದಾಕಾಲ ತೆರೆದಿಡಬೇಕು ಅಲ್ಲವೆ? ಬರಲಿ, ನೋಡುವಾ ಎಂದು ಫಾದರ್‌ ತಮ್ಮ ಪದ್ಮಾಸನದಿಂದ ಮೇಲೆದ್ದರು.
ನೀಳಕಾಯದ ಪಾವೆಲ್‌ ಅವರಿಗೆ ಬಿಳಿಯ ಗಡ್ಡ, ಅಧ್ಯಯನದಿಂದ ತುಂಬಿ ತುಳುಕುವ ಮುಖದಲ್ಲಿಯ ಕಾಂತಿ ಅಪೂರ್ವ ತೇಜಸ್ಸನ್ನು ತಂದುಕೊಟ್ಟಿತ್ತು.
ನಿಧಾನವಾಗಿ ಹೆಬ್ಬಾಗಿಲಿನ ಕಡೆ ಸಾಗಿದರು. ಈಗ ಅವರಲ್ಲಿ ಯಾವುದೇ ಶಂಕೆ, ಸಂದೇಹಗಳು ಉಳಿಯಲಿಲ್ಲ. ಆರ್ತನನ್ನು ಉದ್ಧರಿಸಬೇಕು ಎಂಬುದಷ್ಟೇ ಅವರ ಮನದಾಳದ ಅಭೀಷ್ಟೆ. ಅಗಳಿ ಸರಿಸಿ, ಬಾಗಿಲು ತೆರೆದರು. ಒಳಗಿನ ಬೆಳಕಿಗೂ ಹೊರಗಿನ ಕತ್ತಲೆಗೂ ದೃಷ್ಟಿಯನ್ನು ಸರಿಹೊಂದಿಸಿ ನೋಡಲು ಅವರಿಗೆ ಸ್ವಲ್ಪ ಕಾಲವೇ ಹಿಡಿಯಿತು.
ಒಂದು ಮನುಷ್ಯಾಕಾರ ಅವರಿಗೆ ಕಾಣಿಸಿತು.ಯಾರು?' ಎಂದು ಪ್ರಶ್ನಿಸಿದರು. ಪ್ರತ್ಯುತ್ತರ ಬರಲಿಲ್ಲ. ಹೊರಗೆ ತಣ್ಣಗೆ ಕೊರೆಯುವ ಚಳಿಗಾಳಿ. ಬಹುಶಃ ಚಳಿಯಿಂದ ಬಾಧೆ ಪಟ್ಟಿರಬೇಕು. ಹೊರಗೆ ನಿಲ್ಲಿಸಿಯೇ ಪ್ರಶ್ನಿಸುತ್ತಿದ್ದೇನೆಯೇ ನಾನು ಈ ಪವಿತ್ರಾತ್ಮನ ಸನ್ನಿಧಿಯಲ್ಲಿ ಎನ್ನಿಸಿ ತಮ್ಮ ಬಗೆಗೆ ಫಾದರ್‌ಗೆ ನಾಚಿಕೆ ಎನಿಸಿತು.ಇಷ್ಟು ಕಾಲ ಅನವರತವೂ ಪವಿತ್ರಾತ್ಮನ ಸನ್ನಿಧಿಯಲ್ಲಿ ಇದ್ದರೂ ನಾನೇಕೆ ಸದಾ ಎಚ್ಚೆತ್ತ ವ್ಯಕ್ತಿಯಾಗುತ್ತಿಲ್ಲ?’ ಎಂದು ಪ್ರಶ್ನಿಸಿಕೊಂಡರು. ಜೊತೆಯಲ್ಲೇ, ಅದೆಷ್ಟೋ ಹುಲುಮಾನವರು ಸಂದರ್ಭ ಸನ್ನಿವೇಶಗಳ ವಶಕ್ಕೆ ಒಳಗಾಗಿ ಪಾಪ ಮಾಡುವುದರಲ್ಲಿ ಏನೂ ಆಶ್ಚರ್ಯವಿಲ್ಲ ಎಂದುಕೊಂಡರು.
ಬಾ, ಒಳಗೆ ಬಾ. ಪವಿತ್ರಾತ್ಮನ ಈ ನಿಲಯಕ್ಕೆ ನಿನ್ನನ್ನು ಸ್ವಾಗತಿಸುತ್ತಿದ್ದೇನೆ ಎಂದು ಆತ್ಮೀಯವಾಗಿ ಕರೆದರು ಪಾವೆಲ್‌. ಫಾದರ್‌ ಅವರ ಧ್ವನಿಯಲ್ಲಿಯ ಪ್ರೀತಿಯ ಸಂವೇದನೆಗಳನ್ನು ಗುರುತಿಸಿದ ಆಗಂತುಕ ನಿಧಾನವಾಗಿ ಚರ್ಚಿನ ಒಳಗೆ ಕಾಲಿರಿಸಿದ.
ಬೆಳಕಿನಲ್ಲಿ ಆತನನ್ನು ನೋಡಿದರು. ನಾಲ್ವತ್ತರ ಎಡಬಲದ ಪ್ರಾಯ. ದಟ್ಟ ಕಪ್ಪು ಕೂದಲಲ್ಲಿ ಅಲ್ಲಲ್ಲಿ ಬಿಳಿ ಕೂದಲುಗಳು ಇದ್ದವು. ತೀಕ್ಷ್ಣವಾದ ಕಣ್ಣುಗಳು. ಅಷ್ಟು ಎತ್ತರವೂ ಅಲ್ಲದ, ಗಿಡ್ಡವೂ ಅಲ್ಲದ, ದಪ್ಪವೂ ಅಲ್ಲದ, ಸಪೂರವೂ ಅಲ್ಲದ ಮೈಕಟ್ಟು. ಮುಖದಲ್ಲಿ ಒಂದು ತಿಂಗಳ ಗಡ್ಡ. ಹೊರಗಿನ ಚಳಿಯಿಂದ ಆತ ಇನ್ನೂ ಚೇತರಿಸಿಕೊಂಡಿರಲಿಲ್ಲ. ಆತ ಹೊದ್ದ ಉಣ್ಣೆಯ ಕಂಬಳಿ ಆತನಿಗೆ ಚಳಿಯಿಂದ ಪೂರ್ಣ ರಕ್ಷಣೆ ಒದಗಿಸಿರಲಿಲ್ಲ.
ಫಾದರ್‌ ಆತನ ಸ್ಥಿತಿಯನ್ನು ಗಮನಿಸಿದರು. ಬಾ ಎಂದು ಆತನ ಕೈ ಹಿಡಿದು ಕುಂಡದಲ್ಲಿ ಹಾಕಿಟ್ಟ ಇದ್ದಲಿಯ ಬೆಂಕಿಯ ಕಡೆ ಆತನನ್ನು ಕರೆದೊಯ್ದರು. ಕುಂಡದೆದುರು ಆತ ಕುಕ್ಕರಿಸಿದ. ಬಾಯಿಂದ ಕೆಂಡವನ್ನು ಊದಿ ಉರಿ ಹೆಚ್ಚಿಸಿ ಕೈಯನ್ನು ಮುಂದೆ ಮಾಡಿ ಅಂಗೈಗಳನ್ನು, ಬೆರಳುಗಳನ್ನು ಕಾಯಿಸಿಕೊಂಡ.
ಅವನು ಬೆಂಕಿಯ ಎದುರು ಬೆಚ್ಚಗಾಗುತ್ತಿದ್ದಂತೆ ಫಾದರ್‌‌ ಕೋಣೆಯ ಒಳಗೆ ಹೋಗಿ ಬಿಸಿ ಚಹಾ ತಂದು ಆತನಿಗೆ ಕೊಟ್ಟರು. ಆತ ಗುಟುಕರಿಸಿದ. ಒಳಗೆ ಬಿಸಿ ಸೇರಿದಂತೆ ಆತ ಕೃತಜ್ಞತೆಯಿಂದ ಫಾದರ್ ಕಡೆ ನೋಡಿದ. ಶಿಲುಬೆ ನಮಸ್ಕಾರ ಮಾಡಿದ.
ಪವಿತ್ರಾತ್ಮನ ಸನ್ನಿಧಿಯಲ್ಲಿ ಆತ ಒಳಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಂತೆ, “ತಮ್ಮಾ ಎಲ್ಲಿಂದ ಬಂದೆ? ನನ್ನಿಂದ ಏನಾಗಬೇಕು?” ಎಂದು ಪಾವೆಲ್‌ ಪ್ರಶ್ನಿಸಿದರು.
ಪ್ರಶ್ನೆ ಎದುರಾದಂತೆ ಆಗಂತುಕ ಅಧೀರನಾದ. “ಹಾಳು ಸಂಕೋಚ ಪಡಬೇಡ. ಪವಿತ್ರಾತ್ಮನ ಸನ್ನಿಧಿಯಲ್ಲಿ ಯಾರೂ ದೊಡ್ಡವರೂ ಅಲ್ಲ ಸಣ್ಣವರೂ ಅಲ್ಲ. ಎಲ್ಲರೂ ಸಮಾನರು. ಆತನ ಎದುರು ಪಾಪ ನಿವೇದನೆ ಮಾಡಿಕೊಂಡರೆ ಎಂಥ ದೊಡ್ಡ ಪಾಪಗಳಿಗೂ ಪರಿಹಾರ ಇದೆ. ಪಶ್ಚಾತ್ತಾಪ ಎಂಥ ಪಾಪಗಳನ್ನೂ ಸುಟ್ಟುಬಿಡುತ್ತದೆ. ನಿನ್ನನ್ನು ನೋಡಿದರೆ ನೀನು ಪಶ್ಚಾತ್ತಾಪದಲ್ಲಿ ಬೆಂದವನಂತೆ ಕಾಣುತ್ತಿರುವಿ. ನಿನ್ನ ಪೂರ್ವೋತ್ತರಗಳನ್ನು ಹೇಳು” ಎಂದರು ಫಾದರ್‌.
ಆಗಂತುಕ ಅತ್ತ ಅತ್ತ ನೋಡಿದ. ನಂತರ ಫಾದರ್‌ ಅವರ ಕಣ್ಣಲ್ಲಿ ಕಣ್ಣಟ್ಟು ನೋಡಿ, “ನಾನೊಬ್ಬ ಕೊಲೆಗಾರ” ಎಂದ. ಅವರ ಮುಖದ ಭಾವನೆಗಳಲ್ಲಿ ಏನಾದರೂ ಬದಲಾವಣೆಗಳು ಆಗುತ್ತವೆಯೋ ಎಂದು ಗಮನಿಸಿದ. ಹಾಗೇನೂ ಆಗಲಿಲ್ಲ. ಅವರ ಮುಖದಲ್ಲಿ, ದೃಷ್ಟಿಯಲ್ಲಿ, ಮುಖದ ನರಗಳಲ್ಲಿ ಪರಿವರ್ತನೆ ಕಾಣಲಿಲ್ಲ.
“ಅಷ್ಟೇನಾ? ಇನ್ನೂ ಇದೆಯೋ?” ಎಂದು ಪ್ರಶ್ನಿಸಿದರು ಪಾವೆಲ್‌. ಅವರ ಧ್ವನಿಯಲ್ಲಿ ಮೊದಲಿನದೇ ಮೃದುತ್ವ ಇತ್ತು.
“ಹೌದು ಅಷ್ಟೇ, ಜೊತೆಗೆ ಧನ ಪಿಶಾಚಿ, ನಂಬಿದವರಿಗೆ ದ್ರೋಹ ಬಗೆದವನು ನಾನು.”
“ನಾನು ನಿನಗೆ ಮೊದಲೇ ಹೇಳಿದ್ದೇನೆ. ಪವಿತ್ರಾತ್ಮನ ಮುಂದೆ ತಪ್ಪೊಪ್ಪಿಸಿಕೊಂಡು ಪಶ್ಚಾತ್ತಾಪ ಪಡು. ನಿನಗೆ ಕ್ಷಮೆ ಇದೆ.”
“ಆತ ನನಗೆ ಈಗಾಗಲೆ ತಕ್ಕ ಶಿಕ್ಷೆ ವಿಧಿಸಿಬಿಟ್ಟಿದ್ದಾನೆ. ಕಾನೂನಿನ ಮಿತಿಯಲ್ಲಿ ಶಿಕ್ಷೆಯಾಗಬೇಕು ನನಗೆ.”
“ತಮ್ಮಾ, ನೀನು ಯಾರು? ನಿನ್ನ ಪಾಪ ಕೃತ್ಯದ ಮೂಲ ಕಾರಣವೇನು? ಅದನ್ನು ಹೇಗೆ ಮಾಡಿದೆ? ನಿನ್ನ ಮನಸ್ಸಿಗೆ ನೋವಾಗದಿದ್ದರೆ ನನಗೆ ನಿವೇದಿಸುವೆಯಾ?” ಪಾವೆಲ್‌ ಪ್ರಶ್ನಿಸಿದರು.
“ಯಾರ ಎದುರಾದರೂ ನಾನು ಇದುವರೆಗೆ ಅಡಗಿಸಿಟ್ಟುಕೊಂಡ ರಹಸ್ಯವನ್ನು ಬಹಿರಂಗಪಡಿಸಲೇ ಬೇಕಾಗಿದೆ. ಇಲ್ಲದಿದ್ದರೆ ಒಳಗಿಂದೊಳಗೆ ಲಾವ್ಹಾರಸದಂತೆ ಕುದಿಯುತ್ತಿರುವ ಅದು ಸ್ಫೋಟಗೊಂಡರೆ ನಾನು ನಾಶವಾಗಿಬಿಡುವೆ. ಪವಿತ್ರಾತ್ಮನ ಸನ್ನಿಧಿಯಲ್ಲಿ ನಿಮ್ಮೆದುರು ನಾನು ಎಲ್ಲವನ್ನು ಹೇಳಿಬಿಡುವೆನು.”
“ಹೇಳು, ಭಯಪಡಬೇಡ, ಹೇಳು, ಪವಿತ್ರಾತ್ಮನ ಎದುರು ಬಿಕ್ಕಿ ನಿನ್ನನ್ನು ನೀನು ಹಗುರಗೊಳಿಸಿಕೋ.”
“ಫಾದರ್‌ ನಾನೊಬ್ಬ ಕೊಲೆಗಾರ.”
“ಅದನ್ನು ಈಗಾಗಲೆ ಹೇಳಿರುವಿಯಲ್ಲವೆ?”
“ಹೌದು ಫಾದರ್‌, ಮತ್ತೆ ಮತ್ತೆ ಹೇಳಬೇಕೆನ್ನಿಸುತ್ತದೆ. ನನ್ನ ಹೆಸರು ಕುಲ, ವೃತ್ತಿಗಳತ್ತ ನಿಮ್ಮ ಕುತೂಹಲವಿಲ್ಲವೆ? ಹೇಳುತ್ತೇನೆ ಕೇಳಿ. ನಾನು ಪೀಟರ್‌. ನಮ್ಮೂರು ಸಿಂಧನೂರು. ಬ್ಯಾಂಕಿನಲ್ಲಿ ನಾನು ಅಟೆಂಡರ್‌. ಹಿರಿಯರು ನೋಡಿ ನನಗೊಂದು ಮದುವೆ ಮಾಡಿದರು. ಸಂಸಾರದ ತಾಪತ್ರಯ ಹೇಳತೀರದು. ಬರುವ ಸಂಬಳ ನನ್ನ ಪತ್ನಿಯ ಆಸೆ, ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ದಿನವೂ ಕಿರಿಕಿರಿ.”
“ಹಾಸುಗೆ ಇದ್ದಷ್ಟು ಕಾಲು ಚಾಚು ಎಂದು ನಾನು ಹೇಳುತ್ತ ಹೋದೆ. ಗೊಳ್ಳು ಪುರಾಣ. ಕೈಲಾಗದವರ ಮಾತು ಎಂದು ಅಪಹಾಸ್ಯ ಮಾಡಿದಳು. ಟೇಪು. ಟಿ.ವಿ., ಪ್ರಿಡ್ಜ್‌, ಅಲ್ಮೆರಾ, ವಾಶಿಂಗ್‌ ಮಶಿನ್‌ಗಳ ಕನಸು ಆಕೆಗೆ. ನನಗೆ ಬರುವ ಸಂಬಳವೋ ಉದರ ನಿರ್ವಹಣೆ, ತಿಂಗಳಿಗೊಮ್ಮೆ ಸಿನಿಮಾ, ಒಮ್ಮೆ ಹೊಟೇಲ್‌ನಲ್ಲಿ ತಿನ್ನುವುದಕ್ಕೆ ಮಾತ್ರ ಸಾಲುತ್ತಿದ್ದವು. ಉಳಿದ ಆಸೆಗಳನ್ನು ಪೂರೈಸಿಕೊಳ್ಳುವುದು ಹೇಗೆ?”
“ಹಣ ಗಳಿಸುವ ಮಾರ್ಗದ ಸತತ ಚಿಂತನೆ ನನ್ನಲ್ಲಿ ಒಂದು ಸಂಚು ಹೊಳೆಯಿಸಿತು. ಒಮ್ಮೆಲೆ ಲಕ್ಷಾಧೀಶನಾಗುವ ಅದ್ಭುತ ಆಲೋಚನೆ ಅದು.”
ಕುತೂಹಲ ತಡೆಯಲಾರದೆ ಫಾದರ್‌, “ಏನು ಅದು?” ಎಂದರು.
“ಅದು ನಮ್ಮ ಬ್ಯಾಂಕನ್ನು ಲೂಟಿ ಮಾಡುವುದು. ನಾನು ಆ ಕಾರ್ಯವನ್ನು ಎಷ್ಟೊಂದು ಚತುರತೆಯಿಂದ ಮಾಡಿದೆನೆಂದರೆ ಇಂದಿನವರೆಗೂ ಪೊಲೀಸರಿಗೆ ಅದರ ರಹಸ್ಯ ಭೇದಿಸಲಾಗದೆ, ಅಪ್ಪಟ ಸುಳ್ಳನ್ನೇ ಸತ್ಯವೆಂದು ಭಾವಿಸಿದ್ದಾರೆ.”
“ನಮ್ಮ ಬ್ಯಾಂಕಿನ ಮ್ಯಾನೇಜರ್‌ ಕೇರಳದವರಾಗಿದ್ದರು. ಅವರ ಮೈಕಟ್ಟು ಎತ್ತರ ಹೆಚ್ಚು ಕಡಿಮೆ ನನ್ನಷ್ಟೇ ಇತ್ತು. ರಜೆಯ ದಿನವೂ ಅವರಿಗೆ ಒಮ್ಮೊಮ್ಮೆ ಬ್ಯಾಕಿಗೆ ಹೋಗಿ ಬಾಗಿಲು ತೆರೆದು ಕುಳಿತು ಕೆಲಸ ಮಾಡುವ ಹವ್ಯಾಸವಿತ್ತು. ಒಮ್ಮೊಮ್ಮೆ ಅವರು ನನ್ನನ್ನು ಕರೆಯುತ್ತಿದ್ದರು. ಅವರ ಕೆಲಸ ಮುಗಿಯುವವರೆಗೂ ನಾನು ಸುಮ್ಮನೆ ಕುಳಿತಿರುತ್ತಿದ್ದೆ. ಮನೆಗೆ ಹೋಗುವಾಗ ಅವರು ನನಗೆ ಹೊಟೇಲ್‌ಗೆ ಕರೆದುಕೊಂಡು ಹೋಗಿ ಚಹಾ ಕುಡಿಸಿ ಕಳುಹಿಸುತ್ತಿದ್ದರು.”
“ಒಂದು ದಿನ ಬ್ಯಾಂಕಿನ ಟ್ರಜರಿಯಲ್ಲಿ ಐದು ಲಕ್ಷಕ್ಕೂ ಮಿಕ್ಕಿದ ಹಣ ಇತ್ತು. ಪಾರ್ಟಿಯೊಬ್ಬರು ನಾಳೆ ಹಣ ತೆಗೆಸುತ್ತೇವೆ ಎಂದು ಸೂಚನೆ ಕೊಟ್ಟ ಕಾರಣ ಬ್ಯಾಂಕಿಗೆ ಅಂದು ಅಷ್ಟು ಹಣವನ್ನು ತರಲಾಗಿತ್ತು. ಆದರೆ ಅವರು ಬರಲಿಲ್ಲ. ಬ್ಯಾಂಕಿನ ಬಾಗಿಲು ಹಾಕುವ ವೇಳೆಗೆ ನಾಳೆ ಬರುತ್ತೇವೆ ಎಂದು ಫೋನ್‌ ಮಾಡಿದರು. ಸರಿ. ಹಣ ಬ್ಯಾಂಕಿನಲ್ಲೇ ಉಳಿಯಿತು. ಸಂಜೆ ಮ್ಯಾನೇಜರ್‌ ಬ್ಯಾಂಕಿಗೆ ಹೋದರು. ಹೋಗುವಾಗ ನನ್ನನ್ನೂ ಕರೆದೊಯ್ದರು. ನಾನು ಅಂದೇ ನನ್ನ ಅದ್ಭುತ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದೆ.”
“ಟ್ರೆಜರಿ ಕೀಲಿಯನ್ನು ಮ್ಯಾನೇಜರ್‌ ತಂದಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡೆ. ಕುರ್ಚಿಯಲ್ಲಿ ಕುಳಿತ ಅವರಿಗೆ ಅನುಮಾನ ಬರದಂತೆ ಹಿಂದಿನಿಂದ ಹೋಗಿ ಬಾಯಿ ಒತ್ತಿ ಹಿಡಿದು ಕಬ್ಬಿಣದ ಸಳಿಯಿಂದ ತಲೆಯ ಮೇಲೆ ಬಡಿದೆ. ಪಾಪ, ಅದು ಒಂದೇ ಹೊಡೆತಕ್ಕೆ ನೆಗೆದುಬಿತ್ತು. ಟ್ರೆಜರಿಯ ಬಾಗಿಲು ತೆಗೆದು ಎಲ್ಲ ಹಣವನ್ನೂ ಚೀಲಕ್ಕೆ ತುಂಬಿಕೊಂಡೆ. ನಾನು ನನ್ನೆಲ್ಲ ಬಟ್ಟೆಯನ್ನು ತೆಗೆದುಬಿಟ್ಟೆ. ಮ್ಯಾನೇಜರ ಶವದ ಮೇಲಿದ್ದ ಬಟ್ಟೆಯನ್ನೆಲ್ಲ ತೆಗೆದು ನಾನು ಹಾಕಿಕೊಂಡೆ. ನನ್ನ ಬಟ್ಟೆಯನ್ನು ಆ ಶವಕ್ಕೆ ತೊಡಿಸಿದೆ. ಗುರುತು ಸಿಗದಂತೆ ಮುಖವನ್ನು ಜಜ್ಜಿಬಿಟ್ಟೆ. ಕತ್ತಲು ಮುಸುಕುವವರೆಗೆ ಅಲ್ಲಿಯೇ ಇದ್ದು ಅನಂತರ ಊರು ಬಿಟ್ಟು ಹೊರಟೆನು.”
“ನಾನು ನನ್ನ ಯೋಜನೆ ಎಲ್ಲಿಯೂ ವಿಫಲವಾಗಬಾರದು ಎಂಬ ಉದ್ದೇಶದಿಂದ ನನ್ನ ಹೆಂಡತಿಗೂ ಹೇಳಿರಲಿಲ್ಲ. ನಟನೆ ಎಷ್ಟೆಂದರೂ ನಟನೆಯೇ. ಸಹಜತೆ ಎನ್ನುವುದು ಇರುವುದಿಲ್ಲ ಅಲ್ಲವೆ? ಮರುದಿನ ಪತ್ರಿಕೆಗಳಲ್ಲಿ ಓದಿದೆ, ‘ಬ್ಯಾಂಕಿನ ಅಟೆಂಡರ್‌ ಕೊಲೆ. 5.5 ಲಕ್ಷ ರು.ಗಳೊಂದಿಗೆ ಮ್ಯಾನೇಜರ್‌ ನಾಪತ್ತೆ.’ ನನ್ನ ಯೋಜನೆ ಫಲಿಸಿತ್ತು.”
“ನನ್ನದೇ ಶವವೆಂದು ನನ್ನ ಹೆಂಡತಿ ಅದನ್ನು ಗುರುತಿಸಿದ್ದಳು. ಮ್ಯಾನೇಜರನ ಶವವನ್ನು ಅವಳೇ ನಮ್ಮ ಪದ್ಧತಿಯಂತೆ ಹುಗಿಸಿದ್ದಳು. ವೈಧವ್ಯದ ಬದುಕನ್ನು ಬದುಕುತ್ತಿದ್ದಳು. ಆನಂತರದ ಹತ್ತು ವರ್ಷಗಳ ವರೆಗೆ ನಾನು ನನ್ನ ಇರುವಿನ ಬಗ್ಗೆ ಯಾವುದೇ ಸೂಚನೆ ನೀಡಿರಲಿಲ್ಲ. ನನ್ನ ವೇಷ ಬದಲಿಸಿ, ಹೆಸರು ಬದಲಿಸಿ ಹೈದ್ರಾಬಾದದಲ್ಲಿ ದೊಡ್ಡ ಉದ್ದಿಮೆ ಪ್ರಾರಂಭಿಸಿದೆ. ಯಶಸ್ವಿಯಾದೆ. ಹಣದ ಹೊಳೆ ಹರಿದು ಬರತೊಡಗಿತು. ಪೊಲೀಸರು ನನ್ನ ಕೊಲೆಯಾಗಿದೆ ಎಂದೇ ತಿಳಿದುಬಿಟ್ಟಿದ್ದರು. ಮ್ಯಾನೇಜರ್‌ ಹಣದೊಂದಿಗೆ ಓಡಿಹೋಗಿದ್ದಾನೆ ಎಂದು ಆತನ ಶೋಧದಲ್ಲಿ ತೊಡಗಿದ್ದರು.”
“ನನಗೆ ನನ್ನ ಹೆಂಡತಿ, ಮಕ್ಕಳ ನೆನಪು ಕಾಡತೊಡಗಿತು. ಅವರನ್ನು ಕರೆಯಿಸಿಕೊಳ್ಳಬೇಕು ಎಂದು ಬಯಸಿದೆ. ನನ್ನ ಕಥೆಯನ್ನೆಲ್ಲ ಬರೆದು ನನ್ನ ಈಗಿನ ವಿಳಾಸ, ಸ್ಥಿತಿಗತಿ ತಿಳಿಸಿ, ಆಕೆಗೆ, ಯಾರಿಗೂ ಹೇಳದೆ ಕೂಡಲೇ ಹೊರಟು ಬರುವಂತೆ ಪತ್ರ ಬರೆದೆ. ಒಂದು ವಾರದ ಹಿಂದೆ ನೀವು ಪೇಪರಿನಲ್ಲಿ ಓದಿರಬೇಕಲ್ಲ? ‘ಬಸ್ಸು ಪಲ್ಟಿ, 16 ಜನರ ದುರ್ಮರಣ‘ ಎಂಬ ದೊಡ್ಡ ಮುಖ ಪುಟದ ಸುದ್ದಿಯನ್ನು. ಸತ್ತವರ ಹೆಸರಿನಲ್ಲಿ ನನ್ನ ಪತ್ನಿ ಹಾಗೂ ಮಕ್ಕಳ ಹೆಸರೂ ಸೇರಿದ್ದವು. ‘ನನ್ನ ಅನ್ಯಾಯದ ಗಳಿಕೆಗೆ ಇದಕ್ಕಿಂತ ದೊಡ್ಡ ಶಿಕ್ಷೆ ಬೇಕೆ?‘ ಎಂದು ಪ್ರಶ್ನಿಸಿಕೊಂಡೆ.”
ಪೀಟರ್‌ ಹೇಳುವುದನ್ನು ನಿಲ್ಲಿಸಿದ. ಆತನ ಕಣ್ಣುಗಳಿಂದ ನೀರಿಳಿಯುತ್ತಿತ್ತು. ಫಾದರ್‌ ಹೇಳಿದರು, “ಮಗು ನೀನು ಪವಿತ್ರಾತ್ಮನ ಎದುರು ಮಂಡಿಯೂರು. ನಿನಗೆ ಕ್ಷಮೆ ಇದೆ.”
ಪೀಟರ್‌ ಮಂಡಿಯೂರಿದ. ಬಿಕ್ಕಳಿಸಿದ. ಹಗುರಾಗುವವರೆಗೂ ಬಿಕ್ಕಳಿಸಿದ. ದೂರದಲ್ಲೆಲ್ಲೋ ಕೋಗಿಲೆ ಕುಹೂ ಅನ್ನುತ್ತಿತ್ತು. ಮುಂಜಾನೆಯ ಪಕ್ಷಿಗಳ ಕಲರವ. ಪೀಟರ್‌ ಅಲ್ಲಿಯೇ ನಿದ್ರಾವಶನಾಗಿದ್ದ.
ಆತ ಮೈ ತಿಳಿದೆದ್ದಾಗ ಫಾದರ್‌ ಮತ್ತು ಇನ್ನಿಬ್ಬರು ಅಪರಿಚಿತರು ಇರುವುದನ್ನು ಕಂಡ.
“ಮೈ ಮನಸ್ಸುಗಳೆಲ್ಲ ಹಗುರಾದವೆ ಪೀಟರ್‌?” ಎಂದು ಫಾದರ್‌ ಪ್ರಶ್ನಿಸಿದರು.
“ಈಗ ನನ್ನಲ್ಲಿ ಯಾವ ದುಗುಡವೂ ಇಲ್ಲ. ಈಗ ತಾನೆ ಜನಿಸಿದ ಮಗುವಿನಷ್ಟು ಹಗುರವಾಗಿದ್ದೇನೆ ನಾನು” ಎಂದ ಪೀಟರ್‌.
”ಪೀಟರ್‌ ನೀನು ಹನ್ನೊಂದು ವರ್ಷ ಕಾನೂನಿನ ಕಣ್ಣಿಂದ ತಪ್ಪಿಸಿಕೊಂಡು ನಿನ್ನ ರಹಸ್ಯ ಕಾಪಾಡಿಕೊಂಡು ಬಂದೆ. ಆದರೆ ಕೊನೆಯಲ್ಲಿ ನೀನು ಒಂದು ಚಿಕ್ಕ ತಪ್ಪು ಮಾಡಿ ಸಿಕ್ಕು ಬಿದ್ದಿ” ಎಂದು ಫಾದರ್‌ ಪಕ್ಕದಲ್ಲಿದ್ದ ಒಬ್ಬ ಆಗಂತುಕ ಹೇಳಿದ.
“ಯಾವ ತಪ್ಪು? ತಾವು ಯಾರು?” ಎಂದು ಪೀಟರ್‌ ಪ್ರಶ್ನಿಸಿದ. ಆತನಲ್ಲಿ ಯಾವುದೇ ಉದ್ವೇಗವಿರಲಿಲ್ಲ.
“ನಾವು ಪೊಲೀಸ್‌ ಅಧಿಕಾರಿಗಳು. ಇಷ್ಟು ದಿನ ನೀನು ನಿನ್ನ ಪತ್ನಿಯಿಂದಲೂ ಮುಚ್ಚಿಟ್ಟ ರಹಸ್ಯವನ್ನು, ಆಕೆಯನ್ನು ನಿನ್ನ ಬಳಿಗೆ ಕರೆಯಿಸಿಕೊಳ್ಳಲು ಪತ್ರಬರೆದು ಬಹಿರಂಗಪಡಿಸಿಬಿಟ್ಟೆ. ನಿನ್ನ ಪತ್ರದೊಂದಿಗೆ, ವಿಳಾಸದೊಂದಿಗೆ ಆಕೆ ಬರುತ್ತಿದ್ದ ಬಸ್ಸು ಅಪಘಾತಕ್ಕೀಡಾಯಿತಲ್ಲವೆ? ಅದರಲ್ಲಿಯ ಶವಗಳ ವಾರಸುದಾರರನ್ನು ಪತ್ತೆ ಮಾಡಲು ಅವರ ಸಾಮಾನುಗಳನ್ನು ತಪಾಸಿಸಿದಾಗ ನಿನ್ನ ವಿಳಾಸ, ಇತಿವೃತ್ತಗಳೆಲ್ಲ ಬಯಲುಗೊಂಡವು. ನಿನ್ನನ್ನು ಅನುಸರಿಸಿ ಬಂದೆವು. ಫಾದರ್‌ ಎದುರು ನೀನೇ ನಿನ್ನ ಬಾಯಾರೆ ಹೇಳಿದ್ದನ್ನು ಕೇಳಿಸಿಕೊಂಡೆವು. ನಿನ್ನನ್ನು ಆಗಲೇ ಬಂಧಿಸುತ್ತಿದ್ದೆವು. ಆದರೆ ಫಾದರ್‌ ತಡೆದರು. ನೀನು ನಿದ್ದೆಯಿಂದ ನೀನಾಗಿಯೇ ಏಳುವವರೆಗೂ ಕಾಯ್ದೆವು.”
ಪೀಟರ್‌ ಎರಡು ಮಾತನಾಡಲಿಲ್ಲ. ಫಾದರ್‌ಗೆ ಸಿಲುಬೆ ನಮಸ್ಕಾರ ಮಾಡಿ ತನ್ನೆರಡೂ ಕೈಗಳನ್ನು ಕೋಳ ತೊಡಿಸುವಂತೆ ಮುಂದೆ ಒಡ್ಡಿದ.

ಕನ್ನಡಮ್ಮ- 1995

9.ಕ್ಷೇತ್ರೋತ್ಸವ

ಭಾಗ 1- ಬೀಜ ದಾನ

ಹೊನ್ನಾವರ ದಕ್ಕೆಯಿಂದ ಲಾಂಚನ್ನು ಜಲ್ಲದಿಂದ ಒತ್ತಿ ಹೊರಗೆ ಮಾಡಿದರು. ನರಹರಿ ಲಾಂಚನ್ನು ಹತ್ತಿದ್ದು ಅದೇ ಮೊದಲು. ಪಕ್ಕದ ಕುಮಟಾ ತಾಲೂಕಿನವನಾದರೂ ಲಾಂಚಿನ ಬಗ್ಗೆ ಅವರಿವರಿಂದ ಕೇಳಿ ಅಷ್ಟೇ ಗೊತ್ತಿತ್ತು ಅವನಿಗೆ. ಆರೇಳು ನೂರು ಜನರನ್ನು ಹೊನ್ನಾವರದಿಂದ ಗೇರುಸೊಪ್ಪೆಯ ವರೆಗೆ ಒಯ್ಯುವುದಂತೆ, ಶರಾವತಿ ನದಿಯನ್ನು ಬಗಿಯುತ್ತ ತೇರು ಹೋದಂತೆ ಹೋಗುವ ಅದನ್ನು ನೋಡುವುದೇ ಒಂದು ಚೆಂದ ಅಂದೆಲ್ಲ ಕೇಳಿದ್ದ ಅವನು ಲಾಂಚಿನ ಬಗ್ಗೆ ಅಜ್ಜಿ ಹೇಳಿದ ಕಥೆಯಲ್ಲಿಯ ಮಾಯಾವಿ ಮಂತ್ರವಾದಿಯ ಬಗೆಗಿದ್ದ ಕುತೂಹಲವನ್ನೇ ಇರಿಸಿಕೊಂಡಿದ್ದ. ಮೇಲೆ ಗೂಡಿನಲ್ಲಿ ಕುಳಿತು ಚಾಲಕ ಹಗ್ಗ ಎಳೆದು ಗಂಟೆಯನ್ನು ಬಾರಿಸುತ್ತಿದ್ದ. ಕೆಳಗಡೆ ಯಮಗಾತ್ರದ ಎಂಜಿನ್ನು. ಎಂಜಿನ್‌ ಮೇಲೆ ದೇವಸ್ಥಾನದಲ್ಲಿರುವಂಥದ್ದೇ ಗಂಟೆ. ಎಂಜಿನ್ನಿನ ವೇಗ ಹೆಚ್ಚು ಮಾಡುವುದು, ಕಡಿಮೆ ಮಾಡುವುದು, ಹಿಂದಕ್ಕೆ ತೆಗೆದುಕೊಳ್ಳುವುದು ಇವೆಲ್ಲ ಆ ಗಂಟೆಯ ಸಂಜ್ಞೆಯ ಮೇಲೆಯೇ ನಡೆಯುತ್ತಿತ್ತು. ಆ ಸಂಕೇತ ಭಾಷೆ ಮೇಲೆ ಕುಳಿತು ಗಂಟೆ ಬಾರಿಸುವವನಿಗೆ, ಕೆಳಗೆ ಎಂಜಿನ್‌ ಬಳಿ ಕುಳಿತು ಅದನ್ನು ಆಲಿಸುವವನಿಗೆ ಇಬ್ಬರಿಗೇ ಗೊತ್ತಾಗುವಂಥದ್ದು. ಮೊದಲು ನರಹರಿ ಆ ಲಾಂಚಿನಲ್ಲಿ ಗಂಟೆ ಶಬ್ದ ಕೇಳಿದಾಗ ಅದರಲ್ಲಿ ಸಣ್ಣ ದೇವರ ಗುಡಿ ಇದೆಯೇನೋ ಅಂದುಕೊಂಡಿದ್ದ. ಅದಾದ ಮೇಲೆ ಅವನು ಆ ಲಾಂಚಿನಲ್ಲಿ ಹತ್ತಿದ್ದಕ್ಕೂ ಇಳಿದಿದ್ದಕ್ಕೂ ಲೆಕ್ಕವೇ ಇಲ್ಲ.
ಬರೀ ಒಂದು ಬಗಲು ಚೀಲದಲ್ಲಿ ಎರಡು ಜತೆ ಪ್ಯಾಂಟು, ಎರಡು ಲುಂಗಿ, ಟವೆಲ್ಲು, ಸಬಕಾರ, ಮಂಕಿ ಪೌಡರ್‌ ಇತ್ಯಾದಿ ತೀರ ಅಗತ್ಯದ ಸಾಮಗ್ರಿಗಳನ್ನು ಮಾತ್ರ ಹಾಕಿಕೊಂಡು ಬಂದವನು ಅವನು. ಶರಾವತಿ ದಂಡೆಯ ಮೇಲಿದ್ದ ಆ ಊರಿಗೆ ನರಹರಿ ಗ್ರಾಮ ಸಹಾಯಕನಾಗಿ ನೇಮಕಗೊಂಡಿದ್ದ. ಇನ್ನೂ ಯುವಕ. ತನ್ನ ಕೆಲಸದಲ್ಲಿ ಏನೋ ಮಾಡಿ ಸಾಧಿಸಬೇಕು ಎಂಬ ತವಕ.
ಲಾಂಚು ಅವನನ್ನು ಆ ಊರಲ್ಲಿ ಇಳಿಸಿ ಹೋಯಿತು. ಅವನೊಂದಿಗೆ ಇನ್ನೂ ಹತ್ತಾರು ಜನ ಅಲ್ಲಿ ಇಳಿದರು. ಹೊಳೆಸಾಲಿನ ಇತರ ಊರುಗಳಂತೆಯೇ ಅದೂ ಒಂದು ಊರು. ಆ ಊರಲ್ಲಿ ಅಂಥ ವಿಶೇಷವೇನೂ ಇರಲಿಲ್ಲ. ಡಿಸೆಂಬರ್‌ ತಿಂಗಳ ನಡು ಮಧ್ಯಾಹ್ನ ಬಯಲಿಗಿಳಿಯುತ್ತಿದ್ದಂತೆ ಬಿಸಿಲಿಗೆ ಕಾಯ್ದ ಉರಿ ಮಣ್ಣಿನ ವಾಸನೆ ಮೂಗಿಗೆ ರಾಚಿತು. ಬಣಬಣ ಬಯಲು. ಅಲ್ಲಲ್ಲಿ ತುಂಬೆ ಗಿಡಗಳು. ಅವುಗಳ ಹೂವಿನಿಂದ ಮಕರಂದ ಹೀರಲು ಹಾರಾಡುತ್ತಿದ್ದ ಜೇನ್ನೊಣಗಳ ಗುಂಯ್‌ ಶಬ್ದ. ಬಯಲಿಗೆ ಬಯಲೇ ಹೀಗೆ. ಬೇಸಿಗೆಯಲ್ಲಿ ಇವರು ಯಾವುದೂ ಪೀಕು ಬೆಳೆಯುವುದೇ ಇಲ್ಲವೆ? ಈ ಬಯಲಿಗೆ ಹಸಿರು ಹೊದೆಸಬೇಕು ಎಂದು ಅವನು ಆ ಕ್ಷಣದಲ್ಲೇ ಪಣತೊಟ್ಟ.
ಲಾಂಚಿನಿಂದ ಇಳಿದು ತನ್ನೊಟ್ಟಿಗೇ ಬರುತ್ತಿದ್ದ ಒಬ್ಬರನ್ನು ತಡೆದು, ತಾನು ಈ ಊರಿನಲ್ಲಿ ಕೃಷಿಕರಿಗೆ ಸಹಾಯ ಮಾಡುವ ನೌಕರಿಗೆ ಬಂದಿದ್ದೇನೆ ಎಂದು ಪರಿಚಯಿಸಿಕೊಂಡ. ಊರಲ್ಲಿ ಹೆಚ್ಚು ಜಮೀನು ಉಳ್ಳವರು ಯಾರು ಎಂದು ಕೇಳಿದ. ಊರಿನ ಮರಿಗೌಡರಿಗೆ ಹತ್ತು ಎಕರೆ ಭಾಗಾಯ್ತು, 15 ಎಕರೆ ತರಿ, 50 ಎಕರೆ ಖುಷ್ಕಿ ಜಮೀನು ಇದೆ ಎಂಬುದನ್ನು ಅರಿತ. ನೂರೈವತ್ತು ವರ್ಷಗಳ ಹಿಂದಿನ ಇಪ್ಪತ್ತಂಕಣದ ಬೃಹತ್‌ ಮನೆ. ‘ಓ ಅಲ್ಲಿ ಅದೆ ನೋಡಿ’ ಎಂದು ಮೂಡು ದಿಕ್ಕಿಗೆ ಕೈ ಮಾಡಿ ತೋರಿಸಿದರು ಅವರು.
ನರಹರಿ ಮರಿಗೌಡರ ಹಿತ್ತಲ ಪಾಗಾರದ ದಣಪೆ ದಾಟಿ ನಡೆದ. ಅಡಕೆ ಮರಗಳು, ಅವುಗಳಿಗೆ ಹಬ್ಬಿದ ಎಲೆ ಬಳ್ಳಿಗಳು, ಮೆಲ್ಲಗೆ ಸುಳಿಯುತ್ತಿದ್ದ ಗಾಳಿ. ಹೊಸ ಲೋಕದಲ್ಲಿ ಬಂದಂತಾಯಿತು ಅವನಿಗೆ. ಗೌಡರ ಮನೆಯ ಮುಂದೆ ದೊಡ್ಡ ತೆಂಗಿನಕಾಯಿಯ ರಾಶಿ. ಅಂಗಳದ ಮೂಲೆಯಲ್ಲಿ ಅಡಕೆ ತುಂಬಿದ ಚೀಲಗಳನ್ನು ಪೇರಿಸಿ ಇಟ್ಟಿದ್ದರು. ಮನೆಯ ಪಕ್ಕದಲ್ಲೇ ದೊಡ್ಡದೊಂದು ಕೊಟ್ಟಿಗೆ. ಅದರಾಚೆಗೆ ಗೊಬ್ಬರದ ಗುಂಡಿ. ಹರಿನೀರು ಎಲ್ಲಿಂದಲೋ ಹರಿದು ಬರುತ್ತಿತ್ತು. ಅವರ ತೋಟದ ಹೊರಗಿದ್ದ ಉರಿಗಾಳಿ ಇಲ್ಲಿ ಇರಲಿಲ್ಲ. ಐದಡಿ ಅಗಲದ ಬಾಗಿಲು ಇತ್ತು ಮನೆಯ ಚೌಕಿಗೆ. ಒಳಗೆ ಕಾಲಿಟ್ಟರೆ ಏಳೆಂಟು ಹೆಂಗಸರು ಅಡಕೆ ಸುಲಿಯುತ್ತಿದ್ದರು. ಹೊಸಬನನ್ನು ಅವರೆಲ್ಲ ಒಂದು ಕ್ಷಣ ತಲೆ ಎತ್ತಿ ನೋಡಿ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿದರು. ಚೌಕಿಯಲ್ಲಿದ್ದ ಒಂದು ಜಗುಲಿಯ ಮೇಲೆ ಆರಡಿಗೂ ಮೀರಿದ ಭಾರೀ ಗಾತ್ರದ ವ್ಯಕ್ತಿಯೊಬ್ಬರು ಕುಳಿತಿದ್ದರು. ಅವರೇ ಮರಿಗೌಡರು ಇರಬೇಕು ಎಂದು ನರಹರಿ ತರ್ಕಿಸಿದ. ಗೌಡಿಕೆಯ ಧರ್ತಿ ಅವರ ಇಡೀ ಚಹರೆಯಲ್ಲಿಯೇ ಬೆರೆತುಕೊಂಡಿತ್ತು. ಮರಿಗೌಡರು ಬಾಯ್ಬಿಟ್ಟು ಬಾ ಎಂದು ಅವನನ್ನು ಕರೆಯಲಿಲ್ಲ. ಆದರೆ ಆಗಂತುಕನನ್ನು ಸ್ವಾಗತಿಸುವ ಭಂಗಿಯಲ್ಲಿ ಜಗಲಿಯ ಮೇಲಿಂದ ಕಾಲುಗಳನ್ನು ಕೆಳ ಬಿಟ್ಟು ಕುಳಿತರು.
ಒಳ ಬಂದ ನರಹರಿ ಅವರನ್ನು ನೋಡಿ, ‘ನಮಸ್ಕಾರ ಗೌಡ್ರಿಗೆ’ ಅಂದ. ಗೌಡರು ಪ್ರತಿಯಾಗಿ ನಮಸ್ಕರಿಸಿದರು. ಹೊರಗಿದ್ದ ಆಳುಮಗನನ್ನು ಕೂಗಿ, ‘ಒಂದು ಹಸೆ ಹಾಕಿ ಇವರಿಗೆ ಕುಳಿತುಕೊಳ್ಳಲಿಕ್ಕೆ’ ಎಂದು ಆಜ್ಞೆ ಮಾಡಿದರು. ನರಹರಿ ಗೌಡರ ಹತ್ತಿರ ಹೋಗಿ ಜಗುಲಿಯ ಮೇಲೆ ಕುಳಿತ. ತಾನು ಈ ಊರಿಗೆ ಹೊಸದಾಗಿ ಬಂದ ಕೃಷಿ ಸಹಾಯಕ ಎಂದು ಪರಿಚಯಿಸಿಕೊಂಡು ತನ್ನ ಕಾರ್ಯವ್ಯಾಪ್ತಿ ಏನೇನು ಎಂದು ವಿವರಿಸಿದ.
ಅರವತ್ತರ ಅಂಚನ್ನು ತಲುಪಿದ್ದ ಮರಿಗೌಡರು ಮಣ್ಣಿನೊಂದಿಗೆ ಗುದ್ದಾಡಿಯೇ ಮೇಲೆದ್ದು ಬಂದವರು. ಪ್ರತಿ ಊರಿಗೂ ಯಾವ ಬೆಳೆ ಹೇಗೆ ಬೆಳೆಯಬೇಕು, ಯಾವ ಮಣ್ಣಿಗೆ ಯಾವ ಬೀಜ ಬಿತ್ತಬೇಕು, ಮಣ್ಣನ್ನು ಹದ ಮಾಡುವುದು ಹೇಗೆ, ಯಾವ ಗೊಬ್ಬರವನ್ನು ಸೇರಿಸಬೇಕು, ಎಷ್ಚು ನೀರು ಹಾಯಿಸಬೇಕು ಎಂಬುದನ್ನೆಲ್ಲ ವಿವರಿಸಲು ಒಬ್ಬ ಸರಕಾರಿ ನೌಕರ ಇರುತ್ತಾನೆ ಎಂಬುದು ಅವರಿಗೆ ಗೊತ್ತಾಗಿದ್ದು ಅದೇ ಮೊದಲು.
ಗೌಡರು ನರಹರಿಗೆ ಆಸರಿಗೆ ಏನು ಬೇಕು ಎಂದು ಕೇಳಿದರು. ಮಜ್ಜಿಗೆ ಆಗುತ್ತದೆಯೆ? ಹಾಲು ನಡೆಯುತ್ತದೆಯೆ? ಸಿಯಾಳ ತೆಗೆಯಿಸಲೆ? ಎಂದೆಲ್ಲ ವಿಚಾರಿಸಿದರು. ನರಹರಿ ಏನೂ ಬೇಡವೆಂದ. ಗೌಡರಿಗೆ ನರಹರಿ ಯಾವ ಜಾತಿಯವನು ಎಂಬುದು ನಿಗೂಢವಾಗಿತ್ತು. ಬಾಯಿ ಬಿಟ್ಟು ಕೇಳುವುದು ಉಚಿತವೆನಿಸಲಿಲ್ಲ. ಹೀಗಾಗಿ ಅವರು ಆಳುಮಗನಿಗೆ ಹೇಳಿ ಒಂದು ಸಿಯಾಳ ತೆಗೆಯಿಸಿಕೊಟ್ಟರು. ಅದೇ ತಾನೆ ಇಳಿಸಿದ ಸಿಯಾಳದ ಸಿಹಿ ನೀರನ್ನು ಗುಟುಕು ಗುಟುಕಾಗಿ ಚಪ್ಪರಿಸುತ್ತ ನರಹರಿ ಆ ಊರಿನ ತನಗೆ ಬೇಕಾದ ಮಾಹಿತಿಗಳನ್ನೆಲ್ಲ ಗೌಡರಿಂದ ಸಂಗ್ರಹಿಸಿದ.
‘ಊಟ ನಮ್ಮಲ್ಲಿ ನಡೆಯುತ್ತದೆಯೇ?’ ಎಂದು ಗೌಡರು ಕೇಳಿದರು.
‘ಊರು ಬಿಟ್ಟ ಮೇಲೆ ಎಲ್ಲ ಬಿಟ್ಟ ಹಾಗೆ. ಸ್ವಚ್ಛತೆ ಇದ್ದಲ್ಲಿ ಎಲ್ಲಿ ಉಣ್ಣಲೂ ತಯಾರಿ ನೋಡಿ’ ಎಂದ ನರಹರಿ.
ಗೌಡರು ಅದೂ ಇದೂ ಲೋಕಾಭಿರಾಮವಾಗಿ ಮಾತನಾಡಿದರು. ಊರಲ್ಲಿ ಒಂದು ಸುತ್ತು ಹಾಕಿ ಬರುವೆನು ಎಂದ ನರಹರಿ.
ಧಾರಾಳವಾಗಿ ಹೋಗಿ ಬನ್ನಿ ಎಂದು ಗೌಡರು ಹೇಳಿ, ಜೊತೆಯಲ್ಲಿ ಆಳೊಬ್ಬನನ್ನು ದಾರಿ ತೋರಿಸಲು ಕಳುಹಿಸಿದರು. ಆ ಊರಿನ ಗದ್ದೆಗಳೆಲ್ಲ ಬಯಲು ಬಯಲಾಗಿ ಬೇಸಿಗೆಯಲ್ಲಿ ನಿರುಪಯುಕ್ತವಾಗಿದ್ದು ಕಂಡು ನರಹರಿಗೆ ಕೆಡುಕೆನಿಸಿತು. ಪಕ್ಕದಲ್ಲಿಯೇ ಜೀವನದಿಯಾಗಿ ಶರಾವತಿ ಹರಿದಿದ್ದರೂ ಈ ಗದ್ದೆಗಳೆಲ್ಲ ತುಂಬೆ ಗಿಡಗಳಿದ ತುಂಬಿಕೊಂಡು ಜೇನು ಹುಳುಗಳಿಗೆ ಮಕರಂದ ಪೂರೈಕೆಯಲ್ಲಿ ಮುಳುಗಿದ್ದುದು ಅವನನ್ನು ಚಿಂತೆಯಲ್ಲಿ ಮುಳುಗಿಸಿತು. ಇದಕ್ಕೆ ಪರಿಹಾರ ಕಾಣದಿದ್ದರೆ ತಾನು ಈ ಊರಿಗೆ ಬಂದು ಸಾಧಿಸಿದ್ದೇನು ಎಂಬುದು ಪ್ರಶ್ನೆಯಾಗಿಯೇ ಉಳಿಯುವುದಿಲ್ಲವೆ? ಮೇಲಿನವರಿಗೆ ತನ್ನ ಸಾಧನೆ ಏನೆಂದು ಹೇಳುವುದು? ಎಂಬೆಲ್ಲ ಪ್ರಶ್ನೋತ್ತರಗಳ ಉಜಳಣೆಯಲ್ಲಿ ನರಹರಿ ಗರ್ಕಾದ. ರಾತ್ರಿ ಮರಿಗೌಡರ ಹತ್ತಿರ ಮಾತನಾಡುತ್ತಿರುವಾಗಲೆ ಅವನ ಅಸ್ಪಷ್ಟ ಆಲೋಚನೆ ಒಂದು ರೂಪ ತಳೆದದ್ದು.
ಊಟ ಮುಗಿಸಿದ ಮೇಲೆ ರಾತ್ರಿ ಅವರಿಬ್ಬರೂ ಮಾತನಾಡುತ್ತ ಕುಳಿತಾಗ ನರಹರಿ ಹೊಸ ತಳಿಗಳ ಬಗ್ಗೆ ಗೌಡರಿಗೆ ವಿವರಿಸಿದ. ಇವರು ಬೆಳೆಯುವ ಬತ್ತಕ್ಕೂ ಹೈಬ್ರಿಡ್‌ ಬತ್ತಕ್ಕೂ ಇರುವ ಇಳುವರಿ ವ್ಯತ್ಯಾಸ ವಿವರಿಸಿದ. ಹೊಸದಾಗಿ ಬಳಸುವ ರಾಸಾಯನಿಕ ಗೊಬ್ಬರಗಳ ಬಗೆಗೆ ಹೇಳಿದ. ಕೊಟ್ಟಿಗೆ ಗೊಬ್ಬರಕ್ಕಿಂತ ಅದು ಹೇಗೆ ಶೀಘ್ರ ಫಲಕಾರಿ ಎಂಬುದನ್ನು ವಿವರಿಸಿದ. ಕ್ರಿಮಿನಾಶಕಗಳನ್ನು ಬಳಸಿ ರೋಗಗಳನ್ನು ಪವಾಡವೆಂಬಂತೆ ನಿಯಂತ್ರಿಸಬಹುದು ಎಂದ.
ಗೌಡರಿಗೆ ನರಹರಿಯ ವಿವರಣೆಗಳೆಲ್ಲ ಅದ್ಭುತವೆಂಬಂತೆ ತೋರಿತು. ಅವನೊಬ್ಬ ಸಾಮಾನ್ಯ ಕೃಷಿ ಸಹಾಯಕನಂತೆ ಕಂಡು ಬರಲಿಲ್ಲ ಅವರಿಗೆ. ಯಕ್ಷಗಾನದಲ್ಲಿ ಮುಖ್ಯ ಘಟನೆಗೆ ತಿರುವು ಕೊಡುವ ಕಾರಣಿಕ ಪುರುಷನಂತೆ ನರಹರಿ ಕಂಡುಬಂದ. ಗುಂಟೆಗೆ ಒಂದು ಮುಡಿ ಬೆಳೆಯುವ ಚಿಟ್ಗ, ಹಳ್ಗ, ರತ್ನಚೂಡಗಳೆಲ್ಲಿ, ಇವನು ಹೇಳುವ ಗುಂಟೆಗೆ 4 ಮುಡಿ ಬೆಳೆಯುವ ಜಯಾ, ಐಆರ್‌8ಗಳೆಲ್ಲಿ?
ಬಿರು ಬೇಸಿಗೆಯಲ್ಲೂ ಬಯಲನ್ನು ಹಸಿರುಗೊಳಿಸಬಹುದೆಂಬ ನರಹರಿಯ ಆಲೋಚನೆಯಂತೂ ಇನ್ನೂ ಅದ್ಭುತವಾಗಿ ತೋರಿತು ಗೌಡರಿಗೆ. ಶರಾವತಿಯ ಒಳ ನುಗ್ಗಿದ ಕೋಡಿಗೆ ಒಂದು ಮಣ್ಣಿನ ಒಡ್ಡು ಕಟ್ಟಿದರೆ ಬಯಲಿಗೆ ನೀರು ಏರುವುದು, ಇಳಿಯುವುದನ್ನು ನಿಯಂತ್ರಿಸಬಹುದು ಎಂದು ನರಹಿರಿ ಹೇಳಿದ್ದ. ಈ ಬಗ್ಗೆ ಚರ್ಚಿಸಲು ನಾಳೆಯೇ ಊರ ಪ್ರಮುಖರ ಸಭೆ ಕರೆಯಲು ಗೌಡರು ನಿರ್ಧರಿಸಿದರು.
ನರಹರಿಯ ಯೋಜನೆಯಂತೆ ನದಿಗೆ ಕಟ್ಟು ಕಟ್ಟಲಾಯಿತು. ನೀರಿನ ಏರಿಳಿತವನ್ನು ನಿಯಂತ್ರಿಸಲು ಒಂದು ಬಾಗಿಲನ್ನು ಇರಿಸಲಾಗಿತ್ತು. ಜನರೇ ಎಕರೆವಾರು ವಂತಿಗೆ ಕೂಡಿಸಿ ಒಬ್ಬನಿಗೆ ಒಡ್ಡು ಕಟ್ಟಲು ಗುತ್ತಿಗೆ ಕೊಟ್ಟಿದ್ದರು. ಈ ಕಟ್ಟಿನ ನಿರ್ಮಾಣದಿಂದ ಬತ್ತ ಬೆಳೆಯಬಹುದಾದ ಊರಿನ ಅರ್ಧಭಾಗದಲ್ಲಿ ನಾಟಿ ಮಾಡಿಸಬಹುದಿತ್ತು. ಉಳಿದರ್ಧ ಭಾಗ ಎತ್ತರ ಪ್ರದೇಶದಲ್ಲಿತ್ತು. ಊರಿನ ಐದಾರು ಜನರನ್ನು ಪುಸಲಾಯಿಸಿ ಅವರು ಪಂಪ್‌ಸೆಟ್‌ ಖರೀದಿಸುವಂತೆ ನರಹರಿ ಮಾಡಿದ. ಆ ಮೂಲಕ ಇಡೀ ಬಯಲನ್ನು ನೀರಾವರಿಗೆ ಅನುವುಗೊಳಿಸಿದ.
ನರಹರಿ ಎಲ್ಲಿಂದಲೋ ಹೈಬ್ರಿಡ್‌ ಬೀಜವೆಂದು ಮಿರಮಿರನೆ ಮಿರುಗುವ ಬಂಗಾರದ ಬಣ್ಣದ ಬೀಜಗಳನ್ನು ತಂದುಕೊಟ್ಟ. ಮೊದಲ ವರ್ಷವೆಂದು ಎಲ್ಲರಿಗೂ ಸ್ವಲ್ಪಸ್ವಲ್ಪವನ್ನು ಕೊಟ್ಟ. ಗೌಡರಿಗೆ ದೊಡ್ಡ ಪಾಲು. ಅವರ ಎರಡು ಎಕರೆ ಗದ್ದೆಯಲ್ಲಿ ಬೆಳೆ ತೆಗೆಯುವ ಯೋಜನೆಯನ್ನು ನರಹರಿ ರೂಪಿಸಿದ. ಯಾವ ಔಷಧದ ಮಿಶ್ರಣದಲ್ಲಿ ಬೀಜವನ್ನು ಅದ್ದಿ ಜೊಳ್ಳನ್ನು ಬೇರ್ಪಡಿಸಬೇಕು, ನೆರಳಿನಲ್ಲಿ ಅದನ್ನು ಹೇಗೆ ಒಣಗಿಸಬೇಕು ಎಂಬುದನ್ನು ಅವನೇ ಮುಂದಾಗಿ ನಿಂತು ಮಾಡಿಸಿದ. ಯಾವ ರೀತಿ ನಾಟಿ ಮಾಡಬೇಕು, ಸಸಿಯಿಂದ ಸಸಿಗೆ ಎಷ್ಚು ಅಂತರವಿರಬೇಕು ಎಂಬುದನ್ನೆಲ್ಲ ಅವನು ತೋರಿಸಿಕೊಟ್ಟ.
ಕೃಷಿಯಲ್ಲಿಯ ಅವನ ಪ್ರೀತಿ ಅವನಿಗೇ ಒಮ್ಮೊಮ್ಮೆ ಆಶ್ಚರ್ಯ ಉಂಟು ಮಾಡುವುದು. ನರಹರಿಯ ತೆಂದೆಯಾಗಲಿ ಪೂರ್ವಜರು ಇನ್ನಾರೇ ಆಗಲಿ ಕೃಷಿಕರಾಗಿರಲಿಲ್ಲ. ಇವನೂ ಉದ್ದೇಶಪಟ್ಟು ಇದಕ್ಕೆ ಬಂದವನೂ ಅಲ್ಲ. ಆದರೆ ಒಂದು ಕೆಲಸಕ್ಕೆ ಇಳಿದ ಮೇಲೆ ಅದನ್ನು ಪರಿಪೂರ್ಣವಾಗಿ ಮುಗಿಸುವವರೆಗೆ ಅವನು ವಿಶ್ರಮಿಸುತ್ತಿರಲಿಲ್ಲ. ಸಂಪೂರ್ಣ ತಲ್ಲೀನನಾಗಿಬಿಡುತ್ತಿದ್ದ. ಪದವಿ ಮುಗಿಸಿ ನೌಕರಿಗೆ ಅರ್ಜಿ ಹಾಕುತ್ತಿರುವಾಗ ಕೃಷಿ ಇಲಾಖೆಯ ಒಂದು ತರಬೇತಿಗೂ ಅರ್ಜಿ ಹಾಕಿದ್ದ. ತರಬೇತಿಗೆ ಆಯ್ಕೆಯಾದ. ಆಗಲೇ ಅವನಿಗೆ ಕೃಷಿಯ ಅನುಭವ. ಕ್ಷೇತ್ರಕಾರ್ಯ ಇನ್ನಿತರ ವಿಷಯಗಳಲ್ಲಿ ಅವನು ಇತರರಿಗಿಂತ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ. ಮುಂದೆ ಆ ತರಬೇತಿಯೇ ಅರ್ಹತೆಯಾಗಿ ನೌಕರಿ ಸಿಕ್ಕಿತ್ತು.
ಮರಿಗೌಡರು ತಮ್ಮ ತೋಟದ ಮನೆಯಲ್ಲಿ ನರಹರಿ ತನ್ನ ಸಂಸಾರದೊಂದಿಗೆ ಬಂದಿಳಿಯಲು ಅವಕಾಶ ಕಲ್ಪಿಸಿದರು. ತೋಟದ ಮನೆ ಖಾಲಿ ಇತ್ತು. ರಾತ್ರಿ ಕಾವಲಿಗೆ ಒಂದು ಜನ ಆಯಿತು. ಕೃಷಿಯ ಬಗೆಗೆ ಇಷ್ಟು ಜ್ಞಾನವುಳ್ಳ ವ್ಯಕ್ತಿ ತಮ್ಮೊಳಗೇ ಇದ್ದರೆ ಏನಾದರೂ ಲಾಭ ಗಿಟ್ಟಿಸಿಕೊಳ್ಳಬಹುದು ಎಂಬುದು ಅವರ ವಿಚಾರ. ಗೌಡರ ಮಗ ನೀಲಕಂಠ ಬಳ್ಳಾರಿಯಲ್ಲಿ ಇಂಜಿನಿಯರಿಂಗ್‌ ಓದಲು ಹೋದ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಅದು ಖಾಲಿ ಇದ್ದಿತ್ತು. ರಜೆಯಲ್ಲಿ ನೀಲಕಂಠ ಮನೆಗೆ ಬಂದರೂ ಅವನು ಇರುವುದು ಕೆಲವೇ ದಿನ ಆಗಿತ್ತು.
ನರಹರಿ ಪತ್ನಿ ಲಲಿತೆಯೊಂದಿಗೆ ಗೌಡರ ತೋಟದ ಮನೆಯಲ್ಲಿ ಬಿಡಾರ ಹೂಡಿದ. ಮದುವೆಯಾಗಿ ಮೂರು ವರ್ಷವಾಗಿತ್ತು. ವಂಶೋದ್ಧಾರಕ ಇನ್ನೂ ಹುಟ್ಟಿ ಬಂದಿರಲಿಲ್ಲ. ಗಂಡ ಹೆಂಡಿರಿಬ್ಬರಿಗೂ ಅದೊಂದೇ ಕೊರಗು. ದಾಂಪತ್ಯ ಅನ್ಯೋನ್ಯವಾಗಿತ್ತು. ಊರವರ ದೃಷ್ಟಿಯಲ್ಲಿ ಅವರು ಆದರ್ಶ ಜೋಡಿಯಾಗಿದ್ದರು.
ತುಂಬೆ ಗಿಡಗಳು ತುಂಬಿಕೊಂಡು ಬೆಂಗಾಡಾಗಿದ್ದ ಊರ ಬಯಲಲ್ಲಿ ಕೆಸರೆದ್ದು ನಾಟಿ ಮಾಡುವ ಹೆಂಗಸರು ಆ ಕೆಸರೊಡಲಲ್ಲಿ ಎಳೆಯ ಬತ್ತದ ಸಸಿಗಳನ್ನು ಊರುತ್ತ ಹಾಡು ಹೇಳುವ ದೃಶ್ಯ ಊರವರ ಕಣ್ಣಿಗೆ ಹಬ್ಬವಾಗಿತ್ತು. ನರಹರಿಯನ್ನು ತಮ್ಮ ಪಾಲಿನ ಭಾಗ್ಯದೇವತೆಯೆಂದೇ ಅವರು ಭಾವಿಸಿದ್ದರು.
ಗಂಡ ರೈತರಿಗೆ ಸಲಹೆಗಳನ್ನು ನೀಡಲು ಹೊರಗೆ ಹೋದಾಗ ಒಬ್ಬಳೇ ಕುಳಿತ ಲಲಿತೆಗೆ ಬೇಸರ. ಹೊಳೆಯಂಚಿಗೋ ಗೌಡರ ತೋಟದ ಪಾಗಾರದ ಅಂಚಿಗೋ ನಿಂತು ನೀರನ್ನು, ಬಯಲನ್ನು, ಆಗಸವನ್ನು, ಹಾರುವ ಹಕ್ಕಿಯನ್ನು, ತಿರುಗುವ ಜನರನ್ನು ನೋಡುವಳು. ಗದ್ದೆ ನಾಟಿ ಮಾಡುವ ಹೆಂಗಸರ ಹಾಡು ಅದೆಲ್ಲಿಂದಲೋ ತೇಲಿ ಬಂದು ಲಲಿತೆಯ ಕಿವಿಯನ್ನು ಅಪ್ಪಳಿಸುವುದು. ‘ಕಂದನಿಲ್ಲದ ಬಾಳು ಕಂದೀಲ ಬೆಳಕಂತೆ, ಕಂದ ಕಂದರ್ಪದೇವ ಉದಯಿಸೆ, ಕುಂದಣವೆಂದೆ ಬಾಳಿಗೆ…’ ಹಾಡು ಎತ್ತಿದವಳೊಬ್ಬಳು, ಅದಕ್ಕೆ ಸೊಲ್ಲು ಸೇರಿಸಿದವರು ಹಲವರು. ಲಲಿತೆ ಆಲಿಸುವಳು. ಅರ್ಥವನ್ನು ಪರಿಭಾವಿಸುವಳು. ಅವಳು ಮರಗಟ್ಟುವಳು. ಕ್ರಮೇಣ ಮೈ ತಿಳಿದಂತೆ ಆರ್ತಳಾಗುವಳು. ಹೃದಯ ದ್ರವಿಸುವುದು. ಕಣ್ಣಲ್ಲಿ ನೀರಾಡುವುದು.
ಊರಲ್ಲಿ ಹುಡಿ ಹಾರುವ ಬಂಜರು ಗದ್ದೆಯಲ್ಲಿ ಹಸಿರು ಹಬ್ಬಿಸಿದ ನರಹರಿ ಅವಳ ಬದುಕಿನಲ್ಲಿ ಹಸಿರು ಮೂಡಿಸಿರಲಿಲ್ಲ. ಆಸೆಯ ಕಿಡಿ ಹೊತ್ತಿ ಉರಿದು ಅವಳ ಮೈ ಮನಗಳೆರಡೂ ಹುಡಿ ಹಾರುತ್ತಿದ್ದವು. ನರಹರಿ ದಟ್ಟನೆಯ ಕರಿ ಮುಗಿಲಾಗಿ ಅವಳ ಬದುಕನ್ನು ಆವರಿಸಲಿಲ್ಲ. ಮುಸಲಧಾರೆಯಾಗಿ ಮಳೆ ಹನಿಸಲಿಲ್ಲ. ಕೆಸರೇಳದ ಕ್ಷೇತ್ರದಲ್ಲಿ ಯಾವ ಬೀಜ ಬಿತ್ತಿದರೇನು? ಯಾವ ಸಸಿ ಊರಿದರೇನು?
ಲಲಿತೆ ನಿಧಾನಕ್ಕೆ ಮನೆಗೆ ತೆರಳುವಳು. ನರಹರಿ ರಾತ್ರಿ ಬಂದಾಗ ಬಾಡಿದ ಆಕೆಯ ಮುಖವನ್ನು ನೋಡುವನು. ಅವಳ ಅಂತರಾಳದ ಬೇಗುದಿ ಅವನು ಬಲ್ಲ. ಯಾಕೆ, ಏನು, ಎಂತು ಎಂದು ಆಕೆಯನ್ನು ಕಾಡಿಸಿ ಪೀಡಿಸಿ ಕೇಳುವ ಗೋಜಿಗೆ ಅವನು ಹೋಗಲಿಲ್ಲ. ಲಲಿತೆಯ ದುಃಖ ಮನದಲ್ಲಿ ಮತ್ತೆ ಹೆಪ್ಪುಗಟ್ಟುವುದು.
ಹೊಸ ಬೆಳೆಯನ್ನು ಬೆಳೆದ ರೈತರಲ್ಲಿ ಉತ್ಸಾಹ. ಕೆಲವರು ಇನ್ನೂ ತಾಸು ರಾತ್ರಿ ಇರುವಾಗಲೆ ಎದ್ದು ಹೆಣೆ ಮರದಿಂದ ನೀರೆತ್ತಲು ಹೋಗುತ್ತಿದ್ದರು. ಇನ್ನು ಕೆಲವರು ತೊಯ್ಯುವ ಹಾಳೆ ಹಿಡಿದು ನೀರು ತೊಯ್ಯಲು ನಡೆಯುತ್ತಿದ್ದರು. ಹೆಣೆ ಮರದ ತಿಕ್ಕಾಟದ ಕೀರಲು ಸ್ವರ, ತೊಯ್ಯುವ ಹಾಳೆಯ ಹಗ್ಗದ ಜೀಕು ಹಾಗೂ ತೊಯ್ದ ನೀರಿನ ಭೋಸ್‌ ಎಂಬ ಶಬ್ದದ ಏಕತಾನತೆ ಮತ್ತೆ ಕೋಳಿ ಕೂಗುವ ಹೊತ್ತಿನಲ್ಲಿ ಲಲಿತೆಯ ಕಿವಿಗಳಿಗೆ ಅಪ್ಪಳಿಸುವುದು. ನರಹರಿ ಕಟ್ಟಿಸಿದ ಒಡ್ಡಿನಲ್ಲಿ ನೀರು ಒಳಕ್ಕೆ ತುಂಬುವ ಅಬ್ಬರದ ಮೊರೆತ. ಅವಳಿಗೆ ಇನ್ನು ಮಲಗಿರುವುದು ಸಾಧ್ಯವಾಗುವುದಿಲ್ಲ. ನಸುಕು ಹರಿಯುತ್ತಿರುವಾಗಲೆ ಹೊಳೆಯಂಚಿಗೆ ಬರುವಳು. ದೂರದಲ್ಲಿ ನಿಂತು ಕಟ್ಟಿನ ಆಚೆಯ ನೀರಿನ ಉಬ್ಬರ, ಈಚಿನ ಇಳಿತ, ಅವೆರಡನ್ನೂ ಸಮಪಾತಳಿಗೊಳಿಸಲು ಉಕ್ಕಿ ಹರಿಯುವ ನೀರಿನ ಭೋರ್ಗೆರೆತ. ಏಕೆ ಬೇಕಿತ್ತು ಈ ಕಟ್ಟು. ಇದೊಂದು ಒಡ್ಡು ಇಲ್ಲದಿದ್ದರೆ ಈ ಏರು, ತಗ್ಗು, ಮೊರೆತ ಒಂದೂ ಇರುತ್ತಿರಲಿಲ್ಲವಲ್ಲ ಎಂದೆನಿಸುವುದು ಆಕೆಗೆ.
ಉಚ್ಛ್ವಾಸ ನಿಶ್ವಾಸದ ಸದ್ದು ಕೇಳಿ ಲಲಿತೆ ತಿರುಗಿ ನೋಡುವಳು. ನರಹರಿ ನಿಂತಿದ್ದ. ಮೆಲ್ಲಗೆ ಅವಳ ಕೈ ಹಿಡಿದ. ಅದರಲ್ಲಿ ಬಿಸಿ ಇರಲಿಲ್ಲ. ಆದರೆ ಏನೋ ಭರವಸೆ ಕೊಡುವಂಥ ಭದ್ರತೆ ಆ ಹಿಡಿತದಲ್ಲಿರುವಂತೆ ಲಲಿತೆಗೆ ಭಾಸವಾಯಿತು.
ಕಾಲಕ್ಕೆ ಸರಿಯಾಗಿ ಕೊಟ್ಟ ನೀರು, ಗೊಬ್ಬರ, ಕ್ರಿಮಿನಾಶಕಗಳ ಸಿಂಪರಣೆ ಇವುಗಳಿಂದ ಬತ್ತದ ಬೆಳೆ ಚೆನ್ನಾಗಿ ಬಂದಿತ್ತು. ಆಳೆತ್ತರದ ಕೆಯ್‌ ನೋಡಿದ್ದ ಜನರಿಗೆ ಮೊಣಕಾಲಿಗೂ ಬಾರದ ಈ ಸಸ್ಯಜಾತಿ ವಿಚಿತ್ರ ಎನಿಸಿತು. ಅದು ಹೊತ್ತ ತೆನೆಗಳಲ್ಲಿಯ ಕಾಳಿನ ಸಮೃದ್ಧಿ ಕಂಡು ಅವರು ಉಬ್ಬಿದರು. ಎಲ್ಲಿ ತಮ್ಮದೇ ದೃಷ್ಟಿ ತಗಲುವುದೋ ಎಂದು ಗೊಂದಲದಲ್ಲಿ ಬೀಳುವರು. ಒಡಕು ಮಡಿಕೆಗೆ ಸುಣ್ಣದ ಬೊಟ್ಟಿಟ್ಟು ಒಂದು ಗೂಟ ಹುಗಿದು ಅದರ ಮೇಲೆ ಬೋರಲು ಇಟ್ಟಿದ್ದರು. ಕೆಲವರು ದೊಡ್ಡ ಬೆಚ್ಚುಗಳನ್ನೇ ಮಾಡಿ ನಿಲ್ಲಿಸಿದ್ದರು. ಬಹುಶಃ ಮನೆಯಲ್ಲಿ ಹಿರಿಯ ಮಗನ ಹೆಂಡತಿ ಮೊದಲ ಸಲ ಬಸಿರಾದಾಗಲೂ ಇಂಥ ಸಂಭ್ರಮ ಪಡತ್ತಿರಲಿಲ್ಲವೇನೋ ಆ ಜನ.
ಒಂದು ದಿನ ಮಧ್ಯಾಹ್ನದ ಅಡಗೆಗೆಂದು ಲಲಿತೆ ತರಕಾರಿ ಹೆಚ್ಚುತ್ತ ಕುಳಿತಿದ್ದಳು. ನರಹರಿ ಯಾರೊಂದಿಗೋ ಮಾತನಾಡುತ್ತ ಬರುತ್ತಿರುವುದು ಕೇಳಿಸಿತು. ಮನೆಯ ಅಂಗಳದಲ್ಲಿ ನಿಂತಾಗ ಲಲಿತೆ ತಲೆ ಎತ್ತಿ ನೋಡಿದಳು. ಆಜಾನುಬಾಹು. ಮುಖದಲ್ಲಿ ಉಕ್ಕುವ ತೇಜಸ್ಸಿನ ಯುವಕ. ಎಲ್ಲಿಯೋ ನೋಡಿದ್ದೇನೆ ಎನಿಸುವಂಥ ಮುಖ.
ಒಳ ಬಂದ ನರಹರಿ, ‘ಗೌಡ್ರ ಮಗ, ಬಳ್ಳಾರಿಯಲ್ಲಿ ಓದುತ್ತ ಇದ್ದವರು’, ಎಂದು ಹೆಂಡತಿಗೆ ಹೇಳಿದ. ಲಲಿತೆ ಎದ್ದು ಒಳಗೆ ನಡೆದಳು. ನೀಲಕಂಠನ ಹೆಸರನ್ನು ಆಕೆ ಆಳುಮಕ್ಕಳ ಬಾಯಲ್ಲಿ ಕೇಳಿದ್ದಳು. ಪ್ರತ್ಯಕ್ಷ ನೋಡಿದ್ದು ಇದೇ ಮೊದಲು. ಮರಿಗೌಡರ ಥೇಟ್‌ ಹರೆಯದ ಪ್ರತಿರೂಪ ನೀಲಕಂಠ. ಹೀಗಾಗಿ ಅವನನ್ನು ನೋಡಿದಾಗ ಮೊದಲೆಲ್ಲೋ ಅವನನ್ನು ನೋಡಿದ್ದೇನೆ ಎಂದು ಲಲಿತೆಗೆ ಅನಿಸಿದ್ದು.
ಅಡುಗೆ ಮನೆಯಿಂದಲೇ ಆಕೆ ಗಂಡನನ್ನು ಕೂಗಿದಳು. ನೀಲಕಂಠನಿಗೆ ತಿನ್ನಲು ಕುಡಿಯಲು ಏನು ವ್ಯವಸ್ಥೆ ಮಾಡಬೇಕು ಎಂದು ಕೇಳಿದಳು. ಅವರ ಮಾತನ್ನು ಹೊರಗೆ ಕುಳಿತೇ ಕೇಳಿಸಿಕೊಂಡ ನೀಲಕಂಠ, ನಮ್ಮದೇ ಮನೆ, ನನಗೇಕೆ ಆತಿಥ್ಯ ಎಂದು ನಯವಾಗಿ ನಿರಾಕರಿಸಿದ. ಅವರಿಬ್ಬರೂ ಬಹಳ ಹೊತ್ತು ಕೃಷಿಗೆ ಸಂಬಂಧಿಸಿ ಏನೇನೋ ವಿಚಾರ ಚರ್ಚಿಸಿದರು. ಹೈಬ್ರಿಡ್‌ ಬೀಜ ಹೇಗೆ ತಯಾರಿಸುತ್ತಾರೆ, ರಾಸಾಯನಿಕ ಗೊಬ್ಬರದ ಮಹತ್ವವೇನು ಎಂಬುದನ್ನೆಲ್ಲ ನರಹರಿ ವಿವರಿಸಿದ. ಸಿವಿಲ್‌ ಇಂಜಿನಿಯರಿಂಗ್‌ ಓದುತ್ತಿದ್ದ ನೀಲಕಂಠ ಊರಿಗೆ ಅನುಕೂಲವಾಗುವಂತೆ ಮಣ್ಣಿನ ಒಡ್ಡಿನ ಬದಲಾಗಿ ಶಾಶ್ವತವಾಗುವಂಥ ಶಿಲೆಯ ಒಡ್ಡನ್ನು ನಿರ್ಮಿಸಿಕೊಡುವಂತೆ ನರಹರಿ ಹೇಳಿದ. ಅದಕ್ಕೆ ನೀಲಕಂಠ ಸಮ್ಮತಿಸಿದ.
ಇದೇ ಮೊದಲ ಬಾರಿಗೆ ಊರಲ್ಲಿ ಹೊಸ ಬೇಳೆಯನ್ನು ತೆಗೆದ ಕಾರಣ ಕ್ಷೇತ್ರೋತ್ಸವವೊಂದನ್ನು ಮಾಡಬೇಕೆಂದು ನರಹರಿ ಹೇಳಿದ. ಯಾಕಾಗಿ ಅದನ್ನು ಮಾಡುವುದು ಮತ್ತು ಹೇಗೆ ಎಂದು ನೀಲಕಂಠ ಕೇಳಿದ. ಹೊಸ ಬೆಳೆಗೆ ಇಳುವರಿ ಎಷ್ಟು ಬಂತು ಎನ್ನುವುದನ್ನು ಅಧಿಕಾರಿಗಳ ಮುಂದೆಯೇ ಕೊಯ್ಲು ಮಾಡಿ ಒಕ್ಕಿ ಕಾಳು ತೆಗೆದು ನೋಡುವುದು ಕ್ಷೇತ್ರೋತ್ಸವ. ಇದಕ್ಕೆ ರಸಗೊಬ್ಬರ ಕಂಪನಿಗಳು ಧನಸಹಾಯ ಮಾಡುವವು. ಅವರ ಗೊಬ್ಬರದ ಪ್ರಚಾರವಾಗವುದು. ಬೆಳೆಯ ಪ್ರಚಾರವಾಗುವುದೆಂದು ಬೀಜಕಂಪನಿಗಳೂ ಸಹಾಯ ಮಾಡುವವು. ಪತ್ರಿಕೆಗಳಲ್ಲಿ ಪ್ರಚಾರ ದೊರೆಯುವುದು ಎಂದೆಲ್ಲ ನರಹರಿ ವಿವರಿಸಿದ. ಅದ್ಭುತ ಎನಿಸಿತು ನೀಲಕಂಠನಿಗೆ ನರಹರಿಯ ವಿಚಾರಗಳು. ಗೌಡರ ಹತ್ತಿರ ಕೇಳಿ ಯಾವ ದಿನ ಕ್ಷೇತ್ರೋತ್ಸವ ಮಾಡುವುದೆಂದು ನಿರ್ಧರಿಸುವುದೆಂದು ಗೊತ್ತುಮಾಡಿಕೊಂಡರು.
ಹೊರಟು ನಿಂತ ನೀಲಕಂಠನಿಗೆ ಲಲಿತೆ ಒಂದು ತಟ್ಟೆಯಲ್ಲಿ ಉಪ್ಪು ಬೆರೆಸಿದ ಮಜ್ಜಿಗೆ ತಂದು ಕೊಟ್ಟಳು. ನೀಲಕಂಠ ಆಕೆಯನ್ನು ಮೊದಲ ಸಲ ಕಣ್ಣು ತುಂಬ ನೋಡಿದ. ಅವಳಿಂದ ತಟ್ಟೆ ತೆಗೆದುಕೊಂಡು ಮಜ್ಜಿಗೆ ಕುಡಿದ. ತಂಪು ಮಜ್ಜಿಗೆ ದಾಹ ಆರಿಸುವ ಬದಲು ಅವನಲ್ಲಿ ಹೊಸ ದಾಹ ಹುಟ್ಟುಹಾಕಿತು.
ನೀಲಕಂಠನಿಗೆ ನರಹರಿಯು ಗದ್ದೆ ಹಣ್ಣಾಗಿದೆ, ತೆನೆ ಬಾಗಿದೆ, ಕೊಯಿಲಿಗೆ ಕಾಲ ಪಕ್ವವಾಗಿದೆ. ಬೇಗನೆ ಕ್ಷೇತ್ರೋತ್ಸವ ಮಾಡಿಬಿಡೋಣ. ನೀವು ಬಳ್ಳಾರಿಗೆ ಹೋಗುವುದರ ಒಳಗೆ ಆಗಿಬಿಡಲಿ ಎಂದು ಹೇಳಿದ. ಮನೆಯ ದಾರಿ ತುಳಿದ ನೀಲಕಂಠನಿಗೆ ನರಹರಿಯ ಮಾತುಗಳು, ಲಲಿತೆ, ಆಕೆ ಕೊಟ್ಟ ಮಜ್ಜಿಗೆ ಪುನಃ ತಲೆಯಲ್ಲಿ ಬಂದವು. ನರಹರಿಯ ಮಾತುಗಳನ್ನು ತನ್ನಲ್ಲೇ ಮತ್ತೊಮ್ಮೆ ಗೊಣಗಿಕೊಂಡ. ಗದ್ದೆ ಹಣ್ಣಾಗಿದೆ, ತೆನೆ ಬಾಗಿದೆ, ಕೊಯ್ಲಿಗೆ ಸಕಾಲ. ಕ್ಷೇತ್ರೋತ್ಸವ ಆದಷ್ಟು ಬೇಗ ಮಾಡಿಬಿಡಬೇಕು. ಹೌದು, ಹೌದು, ಕ್ಷೇತ್ರೋತ್ಸವ ಆದಷ್ಟು ಬೇಗ ಮಾಡಿಬಿಡಬೇಕು ಎಂದುಕೊಂಡ ನೀಲಕಂಠ.

ಕ್ಷೇತ್ರೋತ್ಸವದ ದಿನ: ವಿಭಾಗದ ಕೃಷಿ ನಿರ್ದೇಶಕರು ಬಂದಿದ್ದಾರೆ. ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು, ಆ ಕಚೇರಿಯ ಸಿಬ್ಬಂದಿ, ಬೀಜ ನಿಗಮದ ಅಧಿಕಾರಿಗಳು, ರಸಗೊಬ್ಬರ ಕಾರ್ಖಾನೆಯ ಅಧಿಕಾರಿಗಳು ಎಲ್ಲ ಬಂದಿದ್ದಾರೆ. (ನೀಲಕಂಠ ತನ್ನ ತೋಟದ ಮನೆಯ ಹಾದಿ ಹಿಡಿದಿದ್ದ.)
ನರಹರಿ ಸ್ವಾಗತ ಭಾಷಣ ಮಾಡಿದ; ವೇದಿಕೆಯಲ್ಲಿದ್ದವರನ್ನು, ನೆರೆದ ರೈತರನ್ನು ಅವನು ಹೃತ್ಪೂರ್ವಕವಾಗಿ ನೆನೆದ. ತಾನು ಈ ಊರಿನಲ್ಲಿ ಕೈಗೊಂಡ ಹೊಸ ಬೆಳೆಯ ಯೋಜನೆ, ಅದಕ್ಕೆ ಈ ಊರವರು ಸ್ಪಂದಿಸಿದ ರೀತಿ, ಅದರಿಂದ ದೊರೆತ ಪ್ರತಿಫಲ ಎಲ್ಲವನ್ನೂ ವಿವರಿಸಿದ. ಜನರು ಚಪ್ಪಾಳೆ ಹಾಕಿದರು.
(ತೋಟ ಪ್ರವೇಶಿಸಿದ ನೀಲಕಂಠ ನರಹರಿಯ ಮನೆಯ ಮುಂದೆ ಬಂದು ನಿಂತ. ಯಾರೋ ಬಂದಿರುವರೆಂದು ಅರಿತ ಲಲಿತೆ ಲಗುಬಗನೆ ಬಾಗಿಲಿಗೆ ಬಂದಳು. ಅವನನ್ನು ನೋಡಿ ಕಣ್ಣರಳಿಸಿ ನಿಂತಳು. ಒಳಗೆ ಬಾ ಎನ್ನಲೆ, ಏನೆಂದು ಕರೆಯುವುದು, ಏನೆಂದು ಉಪಚರಿಸುವುದು ಒಂದೂ ಹೊಳೆಯಲಿಲ್ಲ ಅವಳಿಗೆ. ಮಾತಿಲ್ಲದೆ ನಿಂತಳು. ಹಾಗೇ ನಿಲ್ಲುವುದು ಅದೆಷ್ಟು ಹೊತ್ತು ಚೆಂದ. ನೀಲಕಂಠ ಒಳಗೆ ಬರಲೆ ಎಂದು ಕೇಳಿದ. ಆಗ ಅವಳು ಬಾಗಿಲಿಂದ ಸರಿದು ಅವನು ಬರುವುದಕ್ಕೆ ಅನುವುಮಾಡಿಕೊಟ್ಟಳು.)
ಗೌಡರು ಊರ ರೈತರ ಪರವಾಗಿ ಮಾತನಾಡಲು ಎದ್ದು ನಿಂತರು. ನರಹರಿ ನಮ್ಮ ಊರಿಗೆ ದೇವರಂತೆ ಬಂದ. ಬಯಲಲ್ಲಿ ಹಸಿರಾಡಿಸಿದ. ಹುಡಿ ಮಣ್ಣು ಕೆಸರಾಗುವಂತೆ ಮಾಡಿದ. ನಮ್ಮೆಲ್ಲರ ಕೈ ಕೆಸರಾಗಿಸಿ ಮೊಸರುಣ್ಣುವ ಈ ದಿನವನ್ನು ಕಲ್ಪಿಸಿಕೊಟ್ಟ ಎಂದು ಹೇಳಿದರು.
(ನೀಲಕಂಠನಿಗೂ ಲಲಿತೆಗೂ ಮಾತನಾಡಲು ವಿಷಯವೇ ಇರಲಿಲ್ಲ. ಏನೆಂದು ಮಾತನಾಡುವುದು. ಮಾತಿಲ್ಲದೆಯೇ ಅವರು ಸಂಭಾಷಿಸಿದರು. ನೀನು ನನ್ನ ಪಾಲಿನ ದೇವತೆ ಎಂದು ನೀಲಕಂಠ ಹೇಳಿದಂತೆ ಆಕೆಗೆ ಭಾಸವಾಯಿತು. ನನ್ನ ಕನಸಿನ ರಾಜಕುಮಾರ ನೀನು ಎಂದು ಆಕೆ ಅವನಿಗೆ ತಿರುಗಿ ಹೇಳಿದಳೆ?)
ಕೃಷಿ ಮಾಡುವವನಿಗೆ ಮಣ್ಣಿನ ಗುಣ ಮೊದಲು ಗೊತ್ತಿರಬೇಕು. ಈ ಮಣ್ಣಿಗೆ ಹೇಗೆ ಉಳುಮೆ ಮಾಡಬೇಕು, ನೇಗಿಲನ್ನು ಎಷ್ಟು ಆಳಕ್ಕೆ ಕಟ್ಟಬೇಕು, ಇಲ್ಲ ಏರಿಸಿ ಕಟ್ಟಬೇಕು ಎಂಬುದನ್ನೆಲ್ಲ ಅರಿತಿರಬೇಕು. ಮಣ್ಣಿಗೂ ನವಿರೇಳುವ ಗುಣವಿರುತ್ತದೆ. ಕೃಷಿಕ ಅದರೊಟ್ಟಿಗೆ ಎಷ್ಟೆಷ್ಟು ತಾದಾತ್ಮ್ಯ ಹೊಂದುತ್ತಾನೋ ಅಷ್ಟಷ್ಟು ಪ್ರತಿಫಲ ಹೆಚ್ಚು ಪಡೆಯಬಹುದು ಎಂದು ಬಿಡಿಓ ಹೇಳಿದರು.
(ಲಲಿತೆ, ನೀಲಕಂಠ ಮಾತಿನಲ್ಲಿ ತೊಡಗಿದ್ದರು. ಆದರೆ ತಮ್ಮ ಮನಸ್ಸಿನಲ್ಲಿದ್ದುದನ್ನು ಬಿಟ್ಟು ತಾವು ಬೇರೆಯೇ ಮಾತನಾಡುತ್ತಿದ್ದೇವೆ ಎಂಬುದು ಇಬ್ಬರಿಗೂ ಅರಿವಾಗಿತ್ತು.)
ನರಹರಿಯಂಥವರು ಊರೂರಿಗೂ ಇರಬೇಕು. ಮಣ್ಣು ಪರೀಕ್ಷೆ ಗುಣ, ಬೀಜ ಪರೀಕ್ಷೆ ಪರಿಣತಿ ಇದರಲ್ಲೆಲ್ಲ ಹುಟ್ಟು ಕೃಷಿಕರಾದ ನಮಗಿಂತ ನರಹರಿಯೇ ಮೇಲೆಂದು ಸಾಬೀತಾಗಿದೆ. ಊರ ಜನರ ಪರವಾಗಿ ಅವರಿಗೆ ಈ ಹೂವಿನ ಹಾರ ನಾನು ಹಾಕುತ್ತೇನೆ ಎಂದು ಗೌಡರು ನರಹರಿಯ ಕೊರಳಿಗೆ ಮಲ್ಲಿಗೆ ಹೂವಿನಿಂದ ವಿಶೇಷವಾಗಿ ತಯಾರಿಸಿದ ಮಾಲೆ ಹಾಕಿದರು.
(ನರಹರಿ ಊರ ಗದ್ದೆಯಲ್ಲೆಲ್ಲ ಹಸಿರು ಮೂಡಿಸಿದರೂ ನಿನ್ನಲ್ಲೇಕೆ ಹಸಿರು ಮೂಡಿಸಲು ಅಸಮರ್ಥ ಎಂದು ನೀಲಕಂಠ ಕೇಳಿದ. ಅವರವರು ಪಡೆದು ಬಂದದ್ದು ಎಂದು ಹೇಳುವ ಹೊತ್ತಿಗೆ ಲಲಿತೆಯ ಕಣ್ಣಲ್ಲಿ ನೀರಾಡಿತ್ತು. ನಿಲಕಂಠ ಎದ್ದು ಅವಳ ಬಳಿಸಾರಿ ಕಂಬನಿ ಒರೆಸಿದ. ತೋಳುಗಳಿಂದ ಬರಸೆಳೆದು ಅವಳನ್ನು ಬಿಗಿದಪ್ಪಿದ.)
ಜನರು ಚಪ್ಪಾಳೆ ತಟ್ಟಿದರು. ಸಿಳ್ಳು ಹೊಡೆದರು. ಗೌಡರು ಹೇಳಿದರು, ನರಹರಿಯ ಮಹಿಮೆಯಿಂದ ಮಳೆ ಹೊಯ್ಯದೆ ಗದ್ದೆಗಳಲ್ಲಿ ಕೆಸರೆದ್ದಿತು. ಗದ್ದೆಯ ಕೆಸರೊಡಲಿಗೆ ಇಟ್ಟ ಸಸಿ ನಮಗೆ ಬಂಗಾರ ನೀಡಿದೆ. ಇಂದು ಅದರ ಉತ್ಸವ.
(ನೀಲಕಂಠ ಶರಾವತಿಯ ಅಮಾವಾಸ್ಯದ ಉಬ್ಬರವಾಗಿ ಉಕ್ಕಿದ. ಮಧ್ಯಾಹ್ನದ ಸೂರ್ಯನಾಗಿ ಪ್ರಕರಿಸಿದ. ಸಾಸಿವೆಯ ಮೇಲೆ ಸಾಗರವರಿದಿತ್ತು. ಲಲಿತೆ ಬೆಚ್ಚಗಾದಳು. ತೋಯ್ದು ಮುದ್ದೆಯಾದಳು. ಸಸಿ ಊರಲು ಹದಗೊಂಡ ಕೆಸರೊಡಲಿನ ಗದ್ದೆಯಂತೆ ಮಿದುವಾದಳು.)
ನರಹರಿ ಗುರುತುಮಾಡಿ ತೋರಿಸಿದಷ್ಟು ಜಾಗದಲ್ಲಿ ಗದ್ದೆಯನ್ನು ಕೆಲವರು ಕೊಯ್ದರು. ಕೆಲವರು ಕೆಯ್‌ ಸೆಳೆದು ಬಡಿದರು. ಸೆಳೆದ ಕೆಯ್ಯನ್ನು ಕೆಲವರು ಒಕ್ಕಿದರು. ಕಾಳು ಬೇರೆ ಮಾಡಿ ರಾಶಿ ಮಾಡಿದರು.
(ಇಬ್ಬರೂ ಬೆಸೆದುಕೊಂಡಿದ್ದರು. ಬತ್ತ ತುಂಬಿದ ಚೀಲದಂತೆ ಮುದ್ದೆಯಾಗಿದ್ದರು. ಸಣ್ಣ ನರಳಿಕೆ. ಏದುಸಿರು.)
ಅಧಿಕಾರಿಗಳ ಎದುರಿಗೆ ಅಳೆದರು. ಅವರ ನಿರೀಕ್ಷೆಗೂ ಮೀರಿದ ಫಸಲು. ಪ್ರತಿಯೊಬ್ಬರ ಮನಸ್ಸೂ ನರ್ತಿಸುತ್ತಿತ್ತು. ಅಂದು ಆ ಊರಲ್ಲಿ ಅತೃಪ್ತರು ಯಾರೂ ಇರಲಿಲ್ಲ.
(ಸುಖವನ್ನು ಕೊಟ್ಟವರು ಯಾರು, ಪಡೆದುಕೊಂಡವರು ಯಾರು? ನೀಲಕಂಠ ಪಡೆದ ಸುಖ ಅಧಿಕವೋ ಲಲಿತೆ ಪಡೆದ ಸುಖ ಅಧಿಕವೋ? ಅದನ್ನು ಅಳೆಯುವ ಮಾಪನ್ನು ಈ ಜಗದಲ್ಲಿ ಸೃಷ್ಟಿಸಿದವರು ಒಬ್ಬರೂ ಇಲ್ಲ.)
ನರಹರಿ ಆ ಊರಲ್ಲಿ ಬಹು ಬೇಡಿಕೆಯ ವ್ಯಕ್ತಿಯಾದ. ಜೇಷ್ಠದ ಆಕಾಶದಲ್ಲಿ ಮೋಡ ತುಂಡುತುಂಡಾಗಿ ಬಂದು ದೊಡ್ಡ ಆಕಾರ ತಳೆಯುವಂತೆ ಲಲಿತೆಯ ಹೊಟ್ಟೆ ದೊಡ್ಡದಾಗುತ್ತ ಹೋಯಿತು. ನರಹರಿಯ ಸಂತೋಷದಲ್ಲಿ ಊರವರೂ ಭಾಗಿಗಳಾದರು. ಮುಂದಿನ ಸುಗ್ಗಿಯ ನಾಟಿಯ ವೇಳೆಗೆ ಲಲಿತೆಯ ತೊಡೆಗಳ ಮೇಲೆ ಮುದ್ದಾದ ಮಗುವು ನಗುತ್ತಿತ್ತು.
ಭಾಗ 2- ಬೀಜಾಂತ
ಮತ್ತೆ ಹತ್ತಾರು ಮಳೆಗಾಲಗಳು ಕಳೆದವು. ಶರಾವತಿ ಅದೆಷ್ಟೋ ನೀರನ್ನು ಸಮುದ್ರಕ್ಕೆ ಸೇರಿಸಿತ್ತು. ನರಹರಿ ಈ ಊರಿನಿಂದ ಮತ್ತೊಂದು ಊರಿಗೆ ವರ್ಗವಾಗಿ ಹೋಗಿ ಅಲ್ಲಿ ಕೆಲವು ವರ್ಷ ಕೆಲಸ ಮಾಡಿ ಮತ್ತೆ ಮರಳಿ ಈ ಊರಿಗೇ ವರ್ಗವಾಗಿ ಬಂದಿದ್ದ. ಅವನ ಮಗ ಈಗ ಕುಮಟೆಯಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದ. ಹೀಗಾಗಿ ಹೆಂಡತಿಯನ್ನು ಕರೆದುಕೊಂಡು ಬಂದಿರಲಿಲ್ಲ. ಹೆಂಡತಿ ಮತ್ತು ಮಗನಿಗೆ ಕುಮಟೆಯ ಬಸ್ತಿಪೇಟೆಯಲ್ಲಿ ಎರಡು ಕೋಲಿಯ ಮನೆ ಬಾಡಿಗೆ ಹಿಡಿದು ಇಟ್ಟಿದ್ದ. ವಾರಕ್ಕೊಮ್ಮೆ ಹೋಗಿಬರುತ್ತಿದ್ದ.
ತನ್ನ ನೌಕರಿಯ ಮೊದಲ ವರ್ಷಗಳಲ್ಲಿ ಈ ಊರಲ್ಲಿ ಆತ ಮಾಡಿದ ಕಾರ್ಯಗಳಿಂದ ಅವನ ಆತ್ಮವಿಶ್ವಾಸ ಹೆಚ್ಚಿತ್ತು. ಊರ ಜನರಿಗೂ ಅವನಲ್ಲಿ ಗೌರವ ಆದರಗಳು ಇದ್ದವು. ಮೊದಲ ಅವಧಿಯಲ್ಲಿ ಈ ಊರಿನಲ್ಲಿ ಅವನು ಮಾಡಿದ ಕಾರ್ಯಗಳಿಂದಾಗಿ ಊರಿನ ಅರ್ಥ ವ್ಯವಸ್ಥೆಯೇ ಬದಲಾಗಿ ಹೋಗಿತ್ತು. ಮೊದಲಾದರೆ ಊರ ಗಂಡಸರು ಕೆಲಸ ಹುಡುಕಿಕೊಂಡು ಘಟ್ಟಕ್ಕೆ ಅಡಕೆ ತೋಟಗಳಲ್ಲಿ ಕೊಟ್ಟೆಕೊನೆ ಮಾಡಲು, ಗುತ್ತಿಗೆ ಕೆಲಸಕ್ಕೆ ಹೋಗುತ್ತಿದ್ದರು. ಇಲ್ಲದಿದ್ದರೆ ಗೋವೆಗೋ ರತ್ನಾಗಿರಿಗೋ ಮೀನು ಲಾಂಚಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಊರಲ್ಲಿಯೇ ಇದ್ದರೆ ಹೊಟ್ಟೆಗೆ ಬಟ್ಟೆಗೆ ಸಾಕಾಗುತ್ತಿರಲಿಲ್ಲ. ಆದರೆ ಈಗ ಯಾರೂ ಊರು ಬಿಟ್ಟು ಹೋಗಲು ಇಷ್ಟ ಪಡುತ್ತಿರಲಿಲ್ಲ. ತಮ್ಮ ಗದ್ದೆಗಳಲ್ಲಿಯೇ ಎರಡೆರಡು ಬೆಳೆ ತೆಗೆಯುತ್ತಿದ್ದರು. ಕೈಯಲ್ಲಿ ನಾಲ್ಕು ಕಾಸು ಓಡಾಡುತ್ತಿತ್ತು. ತಮ್ಮ ಭೂಮಿಯ ಬಂಜೆತನವನ್ನು ನೀಗಿದ ನರಹರಿಯ ಬಗೆಗೆ ಅವರಿಗೆ ಕೃತಜ್ಞತೆ ಇತ್ತು.
ಕಳೆದ ಮಳೆಗಾಲದಲ್ಲಿಯೇ ಮರಿಗೌಡರು ಹೋಗಿಬಿಟ್ಟರು. ನೀಲಕಂಠ ಸಿವಿಲ್‌ ಇಂಜಿನಿಯರಿಂಗ್‌ ಓದಿದ್ದರೂ ನೌಕರಿಗೆ ಹೋಗಿರಲಿಲ್ಲ. ಗೌಡರಿಗೆ ಒಬ್ಬನೇ ಮಗನಾದುದರಿಂದ, ಕಂಡಾಪಟ್ಟೆ ಜಮೀನಿನ ಒಡೆಯರು ಅವರು ಆಗಿದ್ದರಿಂದ ಅದೆಲ್ಲ ಸಂಬಾಳಿಸಿಕೊಳ್ಳಲು, ಊರಲ್ಲಿಯೇ ಮನೆತನವನ್ನು ಮುಂದುವರಿಸಲು ನೀಲಕಂಠ ಮನೆಯಲ್ಲಿ ಇರುವುದು ಅನಿವಾರ್ಯವಾಗಿತ್ತು. ಊರಿಗೆ ಮೊದಲ ಮೋಟರು ಸೈಕಲ್‌ ತಂದದ್ದು ನೀಲಕಂಠನೇ. ಟಾರು ಕಾಣದ ರಸ್ತೆಯಲ್ಲಿ ಧೂಳೆಬ್ಬಿಸುತ್ತ ತನ್ನ ಗಾಡಿಯನ್ನು ಓಡಿಸುವುದೆಂದರೆ ಅವನಿಗೆ ಖುಷಿ. ಮನೆಯಲ್ಲಿ ಕೊಳೆತು ಹೋಗುವಷ್ಟು ಸಂಪತ್ತಿದ್ದರೂ, ಜಮೀನಿನಿಂದ ಧಾರಾಳ ಉತ್ಪನ್ನ ಹರಿದು ಬರುತ್ತಿದ್ದರೂ ಸುಮ್ಮನೆ ಕೂಡುವ ಜಾಯಮಾನ ಅವನದಲ್ಲ. ಕಾಮಗಾರಿ ಇಲಾಖೆಯ ಅದು ಇದು ತುಂಡು ಗುತ್ತಿಗೆಯ ಕೆಲಸ ಹಿಡಿಯುತ್ತಿದ್ದ. ಕಲಿತದ್ದು ಸ್ವಲ್ಪಾದರೂ ಪ್ರಯೋಜನ ಆಗಬೇಕಲ್ಲವೆ ಎಂಬುದು ಅವನ ಅಂಬೋಣ. ಅವನೇ ಕಟಿಪಿಟಿ ಮಾಡಿ ನರಹರಿ ಕಟ್ಟಿಸಿದ್ದ ಮಣ್ಣಿನ ಕಟ್ಟಿಗೆ ಬದಲಾಗಿ ಕಾಂಕ್ರೀಟ್‌ ಕಟ್ಟು ಕಟ್ಟಿಸಿದ್ದ. ಇದರಿಂದಾಗಿ ಊರಲ್ಲಿ ನೀಲಕಂಠ ಗೌಡರಿಗೂ ವಜನು ಬೆಳೆಯಿತು. ಅವರೊಂದು ಮಾತು ಒಗೆದರೆ ಊರ ಜನ ಅದನ್ನು ಪೊಕ್ಕು ಮಾತು ಎಂದು ತಿಳಿಯುತ್ತಿರಲಿಲ್ಲ. ತಮ್ಮ ಮನೆತನದ ಹಿರಿಯನೇ ಹೇಳಿದ್ದು ಎಂದು ಶಿರಸಾವಹಿಸಿ ಪಾಲಿಸತ್ತಿದ್ದರು. ಊರಲ್ಲಿಯ ಕೆಲವು ಹೊಂತ್ಕಾರಿಗಳಿಗೂ ನೀಲಕಂಠ ಗೌಡರೇ ಮೋಟಾರುಸೈಕಲ್‌ ಹೊಡೆಯುವುದಕ್ಕೆ ಕಲಿಸಿಕೊಟ್ಟಿದ್ದರು. ಹೊಡೆಯಲು ಕಲಿತವರಿದ್ದರೆ ಊರಲ್ಲಿಯೇ ಕುಳಿತು ಗಾಡಿ ಕೊಟ್ಟು ಕಳುಹಿಸಿ ಏನನ್ನಾದರೂ ತರಿಸಬಹುದು ಎಂಬುದು ಅವರ ಲೆಕ್ಕ.
ಈ ಸುಮಾರಿಗೇ ಅವರಿಗೆ ಬತ್ತದ ಬೆಳೆಯ ಬಗೆಗೆ ಸಂಶೋಧನೆ ನಡೆಸುವ ಬಹುರಾಷ್ಟ್ರೀಯ ಕಂಪನಿಯೊಂದರ ಜೊತೆ ಸಂಪರ್ಕ ಬಂತು. ಈಗಾಗಲೇ ಹಲವು ಬೆಳೆಗಳಲ್ಲಿ ಪ್ರಯೋಗ ಮಾಡಿ ಅಧಿಕ ಇಳುವರಿ ಕೊಡುವ ತಳಿಗಳನ್ನು ಅವರು ಸೃಷ್ಟಿಸಿದ್ದರು. ಇದೀಗ ಆ ಕಂಪನಿ ಬತ್ತದ ಬೆಳೆಯ ಬಗೆಗೆ ಪ್ರಯೋಗ ಮಾಡಲು ಸಿದ್ಧವಾಗಿತ್ತು. ಅದಕ್ಕೆ ಸೂಕ್ತವಾದ ಸ್ಥಳವನ್ನು ಅದು ಹುಡುಕುತ್ತಿತ್ತು. ಅದೇ ಸಮಯದಲ್ಲಿಯೇ ಕಂಪನಿಗೆ ನೀಲಕಂಠ ಗೌಡರ ಸಂಪರ್ಕ ಬಂದುದು. ಗೌಡರಿಗೆ ನೂರಾರು ಎಕರೆ ಭೂಮಿ ಇದೆ ಎಂಬುದನ್ನು ಗೊತ್ತುಮಾಡಿಕೊಂಡ ಕಂಪನಿಯ ಪ್ರಮುಖರು ತಮ್ಮ ಪ್ರಯೋಗಕ್ಕೆ ಇವರೇ ಸರಿಯಾದ ವ್ಯಕ್ತಿ ಎಂದು ತೀರ್ಮಾನಿಸಿದರು. ನೀಲಕಂಠ ಗೌಡರು ತಮ್ಮ ಗದ್ದೆಗಳಲ್ಲಿಯ ಅರ್ಧದಷ್ಟನ್ನು ಬಹುರಾಷ್ಟ್ರೀಯ ಕಂಪನಿಯ ಬೀಜ ಪ್ರಯೋಗಕ್ಕೆ ಬಿಟ್ಟುಕೊಟ್ಟರು. ಈ ಬಗೆಗೆ ಅವರು ನರಹರಿಯ ಹತ್ತಿರ ಒಂದು ಮಾತನ್ನೂ ಕೇಳಲಿಲ್ಲ.
ನರಹರಿ ಕೃಷಿ ಇಲಾಖೆಯಲ್ಲಿಯೇ ಕೆಲಸ ಮಾಡುವವನಾದುದರಿಂದ ಬಹುರಾಷ್ಟ್ರೀಯ ಕಂಪನಿಗಳ ಬೀಜ ಸಂಶೋಧನೆಯ ಬಗೆಗೆ ಅಷ್ಟಿಷ್ಟು ಅರಿತುಕೊಂಡಿದ್ದ. ನಮ್ಮಲ್ಲಿಯೇ ಕೃಷಿ ವಿಶ್ವವಿದ್ಯಾಲಯಗಳು ಇವೆ. ಬೀಜ ಸಂಶೋಧನ ಕೇಂದ್ರಗಳು ಇವೆ. ಅವು ಮಾಡುವ ಬೀಜ ಸಂಶೋಧನೆಯೇ ಸರಿ ಎಂಬುದು ಅವನ ವಿಚಾರವಾಗಿತ್ತು. ಬಹುರಾಷ್ಟ್ರೀಯ ಕಂಪನಿಗಳನ್ನು ಅವನು ಸಂಶಯದಿಂದಲೇ ನೋಡುತ್ತಿದ್ದ. ಅವು ದುಡ್ಡು ಮಾಡುವುದಕ್ಕಾಗಿಯೇ ಇಲ್ಲಿಗೆ ಬರುತ್ತವೇ ಶಿವಾಯ್‌ ಇಲ್ಲಿಯ ರೈತರ ಬಗೆಗೆ ಸಾಸಿವೆಯಷ್ಟೂ ಕಾಳಜಿ ಅವುಗಳಿಗೆ ಇಲ್ಲ ಎಂದು ಅವನು ನಂಬಿದ್ದ.
ಈ ದೇಶದ ಇತಿಹಾಸ ಗೊತ್ತಿದ್ದವರು, ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಇದ್ದವರು ಬಹುರಾಷ್ಟ್ರೀಯ ಕಂಪನಿಗಳ ಬಣ್ಣದ ಮಾತುಗಳಿಗೆ ಕಿವಿಗೊಡಬಾರದು ಎಂಬುದು ಅವನು ಸ್ಪಷ್ಟ ವಿಚಾರವಾಗಿತ್ತು. ಹಿಂದೆ ಬ್ರಿಟಿಷರು ಈ ದೇಶಕ್ಕೆ ವ್ಯಾಪಾರಕ್ಕೆ ಎಂದು ಬಂದರು. ಇಲ್ಲಿಯೇ ಸಾಮ್ರಾಜ್ಯ ಕಟ್ಟಿದರು. ಅವರನ್ನು ಓಡಿಸಬೇಕಾದರೆ ಶತಮಾನದ ಹೋರಾಟ ಬೇಕಾಯಿತು. ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ಗುಲಾಮಗಿರಿಯನ್ನು ನಮ್ಮ ಮೇಲೆ ಹೇರುತ್ತವೆ ಎಂದು ನರಹರಿ ಆಗಾಗ ಹೇಳುತ್ತಿದ್ದ. ಈಗೀಗ ಬಹುರಾಷ್ಟ್ರೀಯ ಕಂಪನಿಗಳು ಬೀಜಾಂತ ತಳಿಗಳನ್ನು ಸೃಷ್ಟಿಸುತ್ತಿವೆ ಎಂದು ಕೇಳಿದ್ದ. ಒಮ್ಮೆ ಇಂಥ ಬೆಳೆಗಳನ್ನು ನಾವು ಬೆಳೆದರೆ ನಿರಂತರವಾಗಿ ಬೀಜಗಳಿಗಾಗಿ ಅವರಿಗೆ ಸೆರಗೊಡ್ಡಬೇಕಾಗುತ್ತದೆ. ಆರಂಭದಲ್ಲಿ ಪುಕ್ಕಟೆಯಾಗಿ ಹಂಚುವುದಕ್ಕೂ ಅವರು ಹಿಂದೆ ಮುಂದೆ ನೋಡುವುದಿಲ್ಲ. ಒಮ್ಮೆ ಇಡೀ ವ್ಯವಸ್ಥೆಯೇ ಅವರ ಮಡಿಲೊಳಗೆ ಬಿತ್ತು ಅಂದ ಮೇಲೆ ಅವರು ಆಡಿದ್ದೇ ಆಟ, ತೊಟ್ಟಿದ್ದೇ ವೇಷವಾಗುತ್ತದೆ ಎಂದು ನರಹರಿ ಸರಿಯಾಗಿಯೇ ಊಹಿಸಿದ್ದ. ಪರಿಣಾಮದ ಘೋರತೆಯನ್ನು ಕಲ್ಪಿಸಿಕೊಂಡೇ ಅವನು ಥಕ್ಕಾಗಿದ್ದ. ಇದನ್ನು ಹೇಗಾದರೂ ತಡೆಯಬೇಕು ಎಂಬುದು ಅವನ ಅಂತರಂಗದ ತುಡಿತವಾಗಿತ್ತು.
ನರಹರಿ ನೀಲಕಂಠ ಗೌಡರನ್ನು ಭೆಟ್ಟಿಯಾಗಿ ಅವರ ಜಮೀನಿನಲ್ಲಿ ಬಹುರಾಷ್ಟ್ರೀಯ ಕಂಪನಿಯವರು ಯಾವ ಬೀಜವನ್ನು ಬೆಳೆಯುತ್ತಿದ್ದಾರೆ ಎಂಬುದನ್ನು ಅರಿಯಲು ಪ್ರಯತ್ನಿಸಿದ. ಕರೇ ಹೇಳಬೇಕು ಎಂದರೆ ನೀಲಕಂಠ ಗೌಡರಿಗೇ ಅಸಲು ವಿಚಾರ ಗೊತ್ತಿರಲಿಲ್ಲ. ಬತ್ತ ಬೆಳೆಯಲು ನೆಲೆ ಕೇಳಿದ್ದಾರೆ. ಮೂರು ವರ್ಷದ ಗುತ್ತಿಗೆಗೆ ಕೊಟ್ಟಿದ್ದೇನೆ. ಏನಾದ್ರೂ ಬೆಳ್ಕೊಂಡು ಹಾಳಾಗಿ ಹೋಗಲಿ. ಆದ್ರೆ ನಾನೇ ಸ್ವತಃ ಬೇಸಾಯ ಮಾಡಿದ್ರೆ ಸಿಗುತ್ತಿದ್ದ ಮೂರು ಪಟ್ಟು ಹೆಚ್ಚು ಹಣ ಕೊಡ್ತಾ ಇದ್ದಾರೆ. ಪರದೇಶಿ ಕಂಪನಿಗಳಿಗೆ ದುಡ್ಡು ಅಂದ್ರೆ ಕ್ಯಾರೇ ಇಲ್ಲ. ಕಾಸು ಅನ್ನೂದನ್ನು ಹೊಟ್ಟು ತೂರಿದ ಹಾಗೆ ತೂರ್ತಾ ಇವೆ ಎಂದು ಗೌಡರು, ಯಾರಿಗೂ ದೊರಕದ ಭಾಗ್ಯ ತಮಗೊಬ್ಬರಿಗೇ ದೊರೆತಿದೆ ಎಂಬಂತೆ, ಮೀಸೆಯ ಮೇಲೆ ಕೈಯಾಡಿಸತ್ತ ಹೇಳಿಕೊಂಡರು.
ನರಹರಿಗೆ ಮಾತ್ರ ಇಂಥ ದುಡ್ಡಿನ ಮೋಹ ಆತ್ಮಘಾತುಕ ಅನ್ನಿಸದೇ ಇರಲಿಲ್ಲ. ಮರಿಗೌಡರೇ ಮೂರು ತಲೆಮಾರು ಕುಳಿತು ತಿಂದರೂ ಖಾಲಿ ಆಗದಷ್ಟು ಸಂಪತ್ತನ್ನು ಕೂಡುಹಾಕಿ ಹೋಗಿದ್ದಾರೆ. ಈ ನೀಲಕಂಠನಿಗೇಕೆ ಇಂಥ ಅಭಿಲಾಸೆ. ನಾಳೆ ನಾವೇ ಬೆಳೆಯುತ್ತೇವೆ ಅಂದರೆ ಬೀಜ ಸಿಗದಿದ್ದ ಕಾಲಕ್ಕೆ ದುಡ್ಡನ್ನೇ ಬಾಳೆಯ ಎಲೆಯಲ್ಲಿ ಹಾಕ್ಕೊಂಡು ತಿನ್ನೂದಕ್ಕೆ ಆಗುತ್ತದೆಯೇ ಎಂಬ ಪ್ರಶ್ನೆ ಭೂತಾಕಾರವಾಗಿ ಅವನನ್ನು ಕಾಡತೊಡಗಿತು. ಅತಿಯಾದ ಆಸೆ ದುರಾಸೆಯೇ ಸೈ. ಕೆಲವರ ದುರಾಸೆಯಿಂದಲೇ ಇಡೀ ದೇಶ ಗುಲಾಮಗಿರಿಗೆ ಒಳಗಾಗಿತ್ತು. ವ್ಯಾಪಾರಕ್ಕೆಂದು ಇಲ್ಲಿಗೆ ಬಂದವರು ದೇಶೀಯ ರಾಜರು ಸಂತಾನ ಇಲ್ಲದಿದ್ದರೆ ದತ್ತುಪುತ್ರನನ್ನು ಹೊಂದಬಾರದು. ಹಾಗೆ ಹೊಂದುವುದಕ್ಕೆ ಕಂಪನಿ ಸರಕಾರದ ಪರವಾನಿಗೆ ಬೇಕು ಎಂದೆಲ್ಲ ಕಾನೂನು ಮಾಡಿದರು. ಮಕ್ಕಳಿಲ್ಲದ ಸಂಸ್ಥಾನಿಕರ ಸಂಸ್ಥಾನ ಕಂಪನಿ ಸರಕಾರದ ವಶಕ್ಕೆ ತೆಗೆದುಕೊಂಡರು. ಇದು ಅವರು ಆಡಿದ್ದೇ ಆಟ ತೊಟ್ಟಿದ್ದೇ ವೇಷ ಅಲ್ಲವಾ? ಇದರ ವಿರುದ್ಧ ಝಾನ್ಸಿ ರಾಣಿ ಹೋರಾಡಿದಳು. ಅದಕ್ಕೂ ಪೂರ್ವದಲ್ಲಿ ಕನ್ನಡತಿ, ಕಿತ್ತೂರು ರಾಣಿ ಚೆನ್ನಮ್ಮನೇ ಹೋರಾಡಲಿಲ್ಲವಾ? ಆಕೆಯ ಹೋರಾಟಕ್ಕೆ ಜಯ ಸಿಗಲಿಲ್ಲ. ಮಲ್ಲಪ್ಪಸೆಟ್ಟಿಯಂಥವರ ಕುತಂತ್ರದಿಂದ ಆಕೆಗೆ ಗೆಲವು ದೊರೆಯಲಿಲ್ಲ. ನರಹರಿಗೆ ಥಟ್ಟನೆ ನೀಲಕಂಠ ಗೌಡರು ಮತ್ತು ಮಲ್ಲಪ್ಪಸೆಟ್ಟಿಯ ನಡುವೆ ಸಾಮ್ಯ ಕಂಡುಬಂತು. ಬೀಜಾಂತ ತಳಿಗಳ ಸೃಷ್ಟಿಗೂ ದತ್ತು ಪುತ್ರರನ್ನು ಹೊಂದಬಾರದೆಂಬ ಕಂಪನಿ ಸರಕಾರದ ಕಾಯಿದೆಗೂ ಯಾವುದೇ ಅಂತರ ಕಾಣಲಿಲ್ಲ ಅವನಿಗೆ. ಬೀಜಾಂತ ತಳಿಗಳನ್ನು ಸೃಷ್ಟಿಸಿ ಇಡಿ ದೇಶದ ಕೃಷಿಯನ್ನೇ ತಮ್ಮ ವಶದಲ್ಲಿ ಇಟ್ಟುಕೊಳ್ಳುವ ಪರದೇಶಿ ಕಂಪನಿಗಳ ಹುನ್ನಾರದ ವಿರುದ್ಧ ಸ್ವದೇಶಿ ಹೋರಾಟವನ್ನು ರೂಪಿಸಬೇಕು ಎಂದು ನರಹರಿ ಆ ಕ್ಷಣದಲ್ಲೇ ಪ್ರತಿಜ್ಞೆ ಮಾಡಿದ. ಅದಕ್ಕೂ ಪೂರ್ವದಲ್ಲಿ ಆ ಕಂಪನಿಯ ಬಗೆಗೆ ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿದ. ತಾನು ಸಂದೇಹಿಸಿದ ಹಾಗೆಯೇ ಬೀಜಾಂತ ತಳಿಗಳನ್ನು ಅವರು ಬೆಳೆಯುತ್ತಿದ್ದಾರೆ ಎಂಬುದನ್ನು ಕಂಡುಕೊಂಡ.
ಒಂದು ತಂಪು ಸಮಯದಲ್ಲಿ, ಸೂರ್ಯ ಕಂತುವ ಹೊತ್ತಿನಲ್ಲಿ, ಶರಾವತಿಯ ಮೇಲಿಂದ ಬೀಸುತ್ತಿದ್ದ ತಂಪು ಗಾಳಿಯ ಆಸರೆಯಲ್ಲಿ ನೀಲಕಂಠಗೌಡರ ತೆಂಗಿನ ಬಾಗಾಯ್ತದಲ್ಲಿಯೇ ನರಹರಿ ಅವರ ಮನಃಪರಿವರ್ತನೆಯ ಕಾರ್ಯಕ್ಕೆ ಮೊದಲಿಟ್ಟ. ಗೌಡರೇ ನೀವು ಹಿಂದೆ ಮುಂದೆ ವಿಚಾರ ಮಾಡದೆ ದುಡುಕಿಬಿಟ್ಟಿರಿ ಎಂದ. ನಿಮ್ಮ ಜಾಗದಲ್ಲಿ ಬೇರೆ ಯಾರಾದರೂ ಇದ್ದರೂ ಹೀಗೇ ಮಾಡುತ್ತಿದ್ದರೇನೋ ಎಂದೂ ಸೇರಿಸಿದ. ಇತಿಹಾಸದ ಪುಟಗಳನ್ನು ಬಿಚ್ಚಿಟ್ಟ. ಊಹೂಂ, ಏನು ಹೇಳಿದರೂ ನೀಲಕಂಠ ಗೌಡರು ಹೂಂ ಅನ್ನುವುದೇ ಇಲ್ಲ. ಇದೇನು ಹೊಸ ಕಿರಿಕ್ಕು ಸುರುವಾಯಿತಲ್ಲ. ಈ ಊರಲ್ಲಿ ತಾನು ಹೇಳಿದ್ದಕ್ಕೆ ಅಲ್ಲ ಅನ್ನುವವರು ಯಾರೊಬ್ಬರೂ ಇಲ್ಲ. ಹೀಗಿರುವಾಗ ಎಲ್ಲಿಂದಲೋ ಬಂದ ಈ ನರಹರಿ ಯಾವನು? ಯಾವುದೋ ಹಿಂದಿನ ಸೇಡನ್ನು ಈಗ ತೀರಿಸಿಕೊಳ್ಳುತ್ತಿದ್ದಾನೆ ಎಂದು ನೀಲಕಂಠ ಗೌಡರಿಗೆ ಅನ್ನಿಸಿತು. ನರಹರಿಯ ಹೆಂಡತಿ ಲಲಿತೆ ಮತ್ತು ತಮ್ಮ ಸಂಬಂಧ ನೆನಪಿಗೆ ಬಂದು ಗೌಡರಿಗೆ ನರಹರಿ ತಮ್ಮ ಪ್ರತಿಸ್ಪರ್ಧಿ ಅನ್ನಿಸಿಬಿಟ್ಟಿತು.
ನೀಲಕಂಠ ಗೌಡರ ಮನಸ್ಸನ್ನು ಬದಲಿಸುವುದು ಸುಲಭದ ಕೆಲಸವಲ್ಲ ಎಂದು ನರಹರಿಗೆ ಗೊತ್ತಾಯಿತು. ಇದಕ್ಕೆಲ್ಲ ಪ್ರತಿಭಟನೆ ವ್ಯಕ್ತಪಡಿಸುವುದು ತನ್ನಂಥ ಪಾಮರನಿಂದ ಆಗುವಂಥದ್ದಲ್ಲ ಎಂದೂ ತೋರಿತು. ರಾಷ್ಟ್ರವ್ಯಾಪಿ ಜಾಲವುಳ್ಳ ಸ್ವದೇಶಿ ಸಂಘಟನೆಗಳ ನೆರವು ಬೇಕು ಎಂದು ಅವನಿಗೆ ತೋರಿತು. ಕುಗ್ರಾಮದಲ್ಲಿಯೇ ಕುಳಿತು ಅವನು ಎಲ್ಲ ಕಡೆಗೆ ಪತ್ರವ್ಯವಹಾರ ಮಾಡಿದ. ನೀಲಕಂಠ ಗೌಡರು ಬೆಳೆದಿರುವ ಬೀಜಾಂತ ತಳಿಯಿಂದ ಇಡೀ ಕೃಷಿ ವ್ಯವಸ್ಥೆಯ ಮೇಲೆ ಆಗುವ ಪರಿಣಾಮವನ್ನು ನರಹರಿ ಈ ಹಳ್ಳಿಯ ಜನರಿಗೆ ವಿವರಿಸತೊಡಗಿದ.
ಅರೇ, ನರಹರಿ ಹೇಳೂದ್ರಲ್ಲೂ ಕುಬಿ ಇದೆ. ನಮ್ಮ ಚಲೋದಕ್ಕೇ ಅಲ್ವಾ ಅವರು ಹೇಳೂದು. ಅವರದೇನು ಸ್ವಂತ ಗದ್ದೆ ಇದೆಯಾ? ಈ ನೀಲಕಂಠ ಗೌಡರಿಗೆ ಅದೇನು ದೊಡ್ಡ ರೋಗ ಬಂತು ಅಂತ? ಕೊಳೆತು ಹೋಗುವಷ್ಟು ದುಡ್ಡು ಇದೆ. ಮತ್ತೆ ದುಡ್ಡಿನ ಆಸೆಗೆ ಹೀಗೆ ಮಾಡುವುದಾ ಎಂದೆಲ್ಲ ಆಲೋಚಿಸಿದರು. ನೀಲಕಂಠ ಗೌಡರನ್ನು ವಿರೋಧಿಸುವ ಒಂದು ಗುಂಪು ಊರಲ್ಲಿ ತಯಾರಾಯಿತು. ಅವರು ನರಹರಿ ಹೇಳಿದ್ದು ದುರ್ಗಮ್ಮನ ಗುಡಿಯ ಪೂಜಾರಯ ಮೈಮೇಲೆ ದುರ್ಗಮ್ಮನೇ ಆವಾಹನೆಯಾಗಿ ಮಾತನ್ನು ಉದುರಿಸಿದಂತೆ ಎಂದು ತಿಳಿಯುತ್ತಿದ್ದರು.
ನರಹರಿಯ ಪ್ರಯತ್ನ ಮುಂದುವರಿಯುತ್ತಿದ್ದಂತೆಯೇ ನೀಲಕಂಠಗೌಡರ ಗದ್ದೆಯಲ್ಲಿ ಬೀಜಾಂತ ತಳಿ ದಿನದಿನಕ್ಕೆ ಬೆಳೆಯುತ್ತಲೇ ಇತ್ತು. ಬೀಜ ಬೆಳೆದ ಕಂಪನಿ ಅದರ ಕುಯ್ಲು ಮಾಡಿ ಕ್ಷೇತ್ರೋತ್ಸವ ಮಾಡಬೇಕೆಂದು ನಿರ್ಧರಿಸಿತು. ಕ್ಷೇತ್ರೋತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿತು. ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಊರು ತುಂಬ ಹಂಚಿತು. ನರಹರಿ ಆ ಊರಿಗೆ ಬಂದ ಹೊಸತರಲ್ಲಿ ಊರಲ್ಲಿ ಹೊಸ ಬೆಳೆ ಬೆಳೆದಾಗ ಕ್ಷೇತ್ರೋತ್ಸವ ಮಾಡಿಸಿದ್ದ. ಆನಂತರ ಊರಲ್ಲಿ ಯಾವುದೇ ಕ್ಷೇತ್ರೋತ್ಸವ ಆಗಿರಲಿಲ್ಲ. ಇದೀಗ ಎರಡನೆ ಬಾರಿಗೆ ಬಹುರಾಷ್ಟ್ರೀಯ ಕಂಪನಿಯೊಂದು ಊರಲ್ಲಿ ಕ್ಷೇತ್ರೋತ್ಸವ ಮಾಡುವುದಕ್ಕೆ ಸಿದ್ಧತೆ ಮಾಡಿತ್ತು.
ಕ್ಷೇತ್ರೋತ್ಸವದ ದಿನ ನೀಲಕಂಠ ಗೌಡರೊಬ್ಬರನ್ನು ಬಿಟ್ಟರೆ ಆ ಊರಿನ ಬೇರೆ ಯಾರಿಗೂ ಉತ್ಸಾಹ ಇರಲಿಲ್ಲ. ಏನೋ ಅಘಟಿತವೊಂದು ಘಟಿಸಲಿದೆ ಎಂಬ ಆತಂಕ ಎಲ್ಲರ ಮನಸ್ಸಿನಲ್ಲಿ. ಗೌಡರ ಹೊಲದಲ್ಲಿ ಬತ್ತದ ಕೆಯ್‌ ಮದುವಣಗಿತ್ತಿ ತಲೆ ತಗ್ಗಿಸಿದ ಹಾಗೆ ಅವನತಮುಖಿಯಾಗಿತ್ತು. ಐದು ಗಂಟೆಗೆ ಬರಬೇಕಿದ್ದ ಕಂಪನಿಯ ಅಧಿಕಾರಿಗಳು ಆರು ಗಂಟೆಯಾದರೂ ಬರಲೇ ಇಲ್ಲ. ಅವರು ಬರುತ್ತಾರೆಂದು ನಿರ್ದಿಷ್ಟಪಡಿಸಿದ ಪ್ರದೇಶದಲ್ಲಿಯ ಬೆಳೆಯನ್ನು ಕೊಯ್ಲು ಮಾಡಲಾಗಿತ್ತು. ಬಹುರಾಷ್ಟ್ರೀಯ ಕಂಪನಿಯ ಅಧಿಕಾರಿಗಳನ್ನು ದಾರಿಯ ಮಧ್ಯದಲ್ಲಿಯೇ ಸ್ವದೇಶಿ ಆಂದೋಲನದವರು ತಡೆಹಿಡಿದಿದ್ದರು. ಅವರು ಕತ್ತಲು ಕವಿಯುವವರೆಗೂ ಬರದೆ ಇದ್ದಾಗ ಕೊಯ್ಲು ಮಾಡಿದ್ದ ಕೆಯ್‌ಅನ್ನು ಗೊಣಬೆ ಮಾಡಿ ಕ್ಷೇತ್ರೋತ್ಸವ ನಾಳೆಗೆ ಮಾಡಿಸಿದರಾಯಿತು ಎಂದು ನೀಲಕಂಠ ಗೌಡರು ಆಲೋಚಿಸಿದರು.
ಆದರೆ ಉತ್ಸವವನ್ನು ಅದೇ ದಿನ ಮಾಡಬೇಕು ಎಂದು ಅದ್ಯಾರೋ ನಿಶ್ಚಯ ಮಾಡಿದ್ದರು. ಮಾರಿಯ ಮಾರಣ ಹೋಮಕ್ಕೆ ಸಿದ್ಧತೆ ನಡೆದಿತ್ತು. ಅರ್ಧರಾತ್ರಿ ದಾಟಿದ ಮೇಲೆ ಮುಹೂರ್ತ ನಿಶ್ಚಯವಾಗಿತ್ತು. ಊರಿಗೆ ಊರೇ ಗೊರಕೆ ಹೊಡೆಯುತ್ತಿತ್ತು. ನೀಲಕಂಠ ಗೌಡರ ಗದ್ದೆಯಲ್ಲಿ ಒಣಗಿ ಹುಲ್ಲಾಗಿ ನಿಂತಿದ್ದ ಬತ್ತದ ಕೆಯ್‌ಗೆ ಸೀಮೆ ಎಣ್ಣೆಯ ಅಭಿಷೇಕ ನಡೆಯಿತು. ಅಗ್ನಿಯ ಸ್ಪರ್ಶವೂ ಆಯಿತು. ಗೊಣಬೆಯೂ ಬೆಂಕಿಗೆ ಆಹುತಿಯಾಯಿತು. ಗದ್ದೆಯ ಕೆಯ್‌ ಹೊತ್ತಿ ಉರಿಯುತ್ತಿದ್ದಾಗ ನೀಲಕಂಠ ಗೌಡರು ತಮ್ಮ ಮನೆಯ ಮಂಚದ ಮೇಲೆ ನಿದ್ದೆಯಲ್ಲಿಯೇ ಮಗ್ಗಲು ಹೊರಳಿಸಿ ಮುಸುಕೆಳೆದುಕೊಂಡರು.


10.ನಿರಾಕರಣ

ಸದ್ದಿಲ್ಲದೆ ಮದ್ದರೆದನು… ಆ˜s ಆs ಆ….s ಎಂದು ಭಸ್ಮಾಸುರ ಮೋಹಿನಿ ಯಕ್ಷಗಾನದ ಹಾಡನ್ನು ಗುಣಗುಣಿಸುತ್ತ ರಾಮಶೆಟ್ಟಿ ಕಬ್ಬನ ಗದ್ದೆಯ ಮಗ್ಗುಲಿನಲ್ಲಿ ಬೇಲಿಗೆ ಬಡಿದ ಮುಳ್ಳು ಮೈಗೆ ಹತ್ತದಂತೆ ಕಸರತ್ತು ಮಾಡುತ್ತ ಹಾಡಿನ ಪಲ್ಲವಿಗೆ ತಕ್ಕಂತೆ ಒಮ್ಮೊಮ್ಮೆ ಕೈಯನ್ನು ಕುಣಿಸುತ್ತ ಹಸ್ತಾಭಿನಯ ಮಾಡುತ್ತ ಸಾಗಿದ್ದ. ಮೂಡಲದಲ್ಲಿ ನೇಸರು ಮೂಡುವ ಪೂರ್ವದಲ್ಲಿಯೇ ಝರಕ್‌ ಝರಕ್‌ ಮಾಡುವ ಮೆಟ್ಟನ್ನು ಮೆಟ್ಟಿ ಗದ್ದೆಯಲ್ಲೆಲ್ಲ ಹಾಯ್ದು ನೀರು ಎಲ್ಲಿ ಸೋರಿ ಹೋಗುತ್ತಿದೆಯೇ ಎಂದು ನೋಡಿ, ಕುಂಬರಕನ ಬಿಲ ಇದ್ದರೆ ಅದಕ್ಕೆ ಮಣ್ಣು ಒತ್ತಿ ಕಾಲಲ್ಲಿ ಮೆಟ್ಟಿ ಬಂದ ಎಂದರೆ ಸಮಾಧಾನ ಅವನಿಗೆ. ಹಾಗೆ ಹೋಗಿ ಬರುವಾಗಲೆ ಅಂದು ತೋಟಕ್ಕೆ ಯಾವ ಕೆಲಸಕ್ಕೆ ಯಾರಿಗೆ ಬರಲು ಹೇಳಬೇಕು ಅನ್ನುವುದನ್ನೆಲ್ಲ ವಿಚಾರ ಮಾಡಿ ಅವರ ಮನೆ ದಣಪೆಯಲ್ಲಿ ನಿಂತು ಕೂಗಿ ಹೇಳಿ ಬಂದುಬಿಡುತ್ತಿದ್ದ ಅವನು.
ಎರಡು ತಲೆಯ ಹಿಂದೆಯೇ ಹೊಳೆಯ ನೆರೆ ಇದ್ದ ಈ ಊರಿಗೆ ಬಂದು ನಾಲ್ಕೆಕರೆ ಜಮೀನು ಗೇಣಿಗೆ ಹಿಡಿದು ಬೇಸಾಯ ಮಾಡಲು ಆರಂಭಿಸಿ ಅದರಲ್ಲೇ ಬದುಕು ಅರಳಿಸಲು ಪ್ರಯತ್ನಿಸಿ ರಾಮಶೆಟ್ಟಿಯ ಕುಟುಂಬ ಸಫಲ ಆಗಿತ್ತು. ಗಾಣಿಗ ಕುಲದ ವೃತ್ತಿಯಲ್ಲಿ ಆರಂಭದಲ್ಲಿ ಇದ್ದ ಮುನಾಪಿ ಈಗ ಇರಲಿಲ್ಲ. ಯಾರ್ಯಾರೋ ಇವರ ಕುಲಕಸುಬನ್ನು ಮಾಡಲು ಪ್ರಾರಂಭಿಸಿದ ಮೇಲೆ ಇವರು ಬೇರೆ ಇನ್ನೇನೋ ಮಾಡಬೇಕಾಗಿ ಬಂದುದರಿಂದ ರಾಮಶೆಟ್ಟಿ ಜಮೀನು ಮಾಡುವುದರಲ್ಲಿ ಮನಸ್ಸು ಹಾಕಿದ್ದ. ಸುತ್ತ ನಾಲ್ಕೂರಲ್ಲಿ ರಾಮಶೆಟ್ಟಿಯ ತೆಂಗಿನ ಹಿತ್ತಿಲಿನಂಥ ಹಿತ್ತಿಲು, ಅಡಕೆ ತೋಟದಂಥ ತೋಟ ಇಲ್ಲ ಎಂಬ ಪ್ರಸಿದ್ಧಿ ಇತ್ತು. ಅಪ್ಪುಗೆಗೆ ನಿಲುಕದ ಗಾತ್ರದ ತೆಂಗಿನ ಮರ, ಬಗ್ಗುವುದೇ ಇಲ್ಲವೇನೋ ಎಂಬಂತೆ ನೆಟ್ಟಗೆ ಅಂದರೆ ನೆಟ್ಟಗೆ ನಿಂತ ಅಡಕೆ ಮುಂಡಗಳು, ಕಬ್ಬಿನ ಗದ್ದೆಯಲ್ಲಿ ಎರಡಾಳು ಎತ್ತರಕ್ಕೆ ಬೆಳೆದ ಕಬ್ಬುಗಳು ಇದೆಲ್ಲ ನೋಡಿದವರಿಗೆ ರಾಮಶೆಟ್ಟಿ ಅದೆಂಥ ಗೊಬ್ಬರ ಹಾಕ್ತಾನೆ, ಅದ್ಯಾವ ರೀತಿಯಲ್ಲಿ ತೆಂಗಿನ ಮರಕ್ಕೆ ಬುಡಸೊಪ್ಪು ಮಾಡಿಸುತ್ತಾನೆ ಎಂದೆಲ್ಲ ಕಣ್ಣು ಹುಬ್ಬೇರಿಸುವಂತೆ ಮಾಡುತ್ತಿತ್ತು. ಇಂಥ ರಾಮಶೆಟ್ಟಿಗೆ ಒಮ್ಮೊಮ್ಮೆ ಹುರುಪೆದ್ದಿತು ಎಂದರೆ ಶಿಕಾರಿಗೂ ಹೋಗುವವನೇ.
ರಾಮಶೆಟ್ಟಿ ಗದ್ದೆಯಲ್ಲಿ ಬಾಗಾಯ್ತದಲ್ಲೆಲ್ಲ ಒಂದು ಸುತ್ತು ಹಾಕಿ ಬರುವ ಹೊತ್ತಿಗೆ ಅವನ ಅಪ್ಪ ಗಣಪಯ್ಯ ಶೆಟ್ಟರು ಮನೆಯ ಚೌಕಿಯಲ್ಲಿ ಕೋವಿ ನಳಿಗೆಯನ್ನು ಒರಿಸುತ್ತ ಕುಳಿತಿದ್ದರು. ಹಳೆಯ ಬಟ್ಟೆಯ ತುಂಡಿಗೆ ಎಂಥದ್ದೋ ಎಣ್ಣೆ ಬಿಟ್ಟು ಒದ್ದೆ ಮಾಡಿ ಕಬ್ಬಿಣದ ಸರಳ ತುದಿಗೆ ಸಿಗಿಸಿ ಕೋವಿಯ ನಳಿಗೆಯೊಳಗೆ ತೂರಿ ಸ್ವಚ್ಛ ಮಾಡುತ್ತಿದ್ದ ಶೆಟ್ಟರಿಗೆ ಶಿಕಾರಿ ಮಾಡದೆ ಬಾಳ ದಿನ ಆಯ್ತು ಅಂತನ್ನಿಸಿತು. ನನಗೇನೋ ತಲೆಗೂದಲು ನೆರೆತು ದೃಷ್ಟಿ ಮಂದ, ಕಿವಿ ಮಂದ ಆಗಿದೆ. ಶಿಕಾರಿ ಅಂದ್ರೆ ಆಟದಲ್ಲಿ ಕಿರಾತನ ವೇಷ ಹಾಕಿದವನ ಹಾಗೆ ಹುರುಪು ತೋರಿಸುತ್ತಿದ್ದ ಮಗ ರಾಮನೂ ಮೊದಲಿನ ಹಾಗೆ ಉತ್ಸಾಹ ತೋರಿಸುತ್ತಿಲ್ಲವಲ್ಲ. ಇಲ್ದಿದ್ರೆ ಕೋವಿಗೆ ಬೂರ್ಸು ಬರುವ ಹಾಗೆ ಆಗುತ್ತಿರಲಿಲ್ಲ. ಬರಿ ಶಿಕಾರಿಯೇನು, ಹೊಳೆಯಲ್ಲಿ ಕಂಟ್ಲಿ ಬಿಟ್ಟು ಮೀನು ಹಿಡಿಯುವುದು, ಇರುಕುಳಿ ತಗೊಂಡು ಗ್ಯಾಸ್‌ ಲೈಟ್‌ ಹಚ್ಕೊಂಡು ಮೀನು ಹಿಡಿಯುವುದು ಅಂದರೂ ಅವನೇ ಮುಂದಾಗುತ್ತಿದ್ದ. ಈಗ ನೋಡಿದ್ರೆ ಎಲ್ಲ ಮಡ್ಚಕೊಂಡು ಸುಮ್ನೆ ಕುಳಿತಿದ್ದಾನೆ. ಏನು ಗುಂಗೋ ಎಂಥದ್ದೋ. ಕರೆದು ಕೇಳುವಾ ಅಂದ್ರೆ ಸಣ್ಣ ಕೂಸ ಅವನು? ಮಕ್ಕಳು ಕಂಡವನು.
ಒಂದು ಮಾತು ಒಗದ ಅಂದ್ರೆ ತಾನಂದದ್ದೇ ಸರಿ ಎಂದು ಸಾಧಿಸಿಕೊಂಡು ಬರುವವನು ರಾಮಶೆಟ್ಟಿ. ಒಡ್ಡ ಕಟ್ಟಿ ಯಕ್ಷಗಾನದಲ್ಲಿ ಭಸ್ಮಾಸುರನ ವೇಷ ಹಾಕಿ ಅರ್ಥ ಹೇಳುವುದರಲ್ಲಿ ಹೆಜ್ಜೆ ಹಾಕುವುದರಲ್ಲಿ ಮೋಹಿನಿ ವೇಷದ ಶಂಕರ ಹೆಗಡೆಯವರನ್ನು ಸೋಲಿಸಿಬಿಟ್ಟವನು. ನಾಲ್ಕು ದಿನ ರಾಮಶೆಚ್ಚಿಯ ಭಸ್ಮಾಸುರನ ವೇಷವೇ ಎಲ್ಲರ ಬಾಯಲ್ಲೂ. ಎಲ್ಲದರಲ್ಲೂ ತಾ ಮುಂದು ಎಂದು ತುದಿಗಾಲಲ್ಲಿ ಬರುತ್ತಿದ್ದ ರಾಮನ ನಿರುತ್ಸಾಹಕ್ಕೆ ಕಾರಣ ಏನಿರಬಹುದು ಎಂಬ ಚಿಂತೆಯಲ್ಲಿ ಬಿದ್ದರು ಗಣಪಯ್ಯ ಶೆಟ್ಟರು.
ವಾರದ ಹಿಂದೆ ನಡೆದ ಘಟನೆ ಅವರ ನೆನಪಿನಲ್ಲಿ ಸುಳಿಯಿತು. ಊರಿನ ಕೇಶವ ದೇವರ ಗುಡಿಯಲ್ಲಿ ಕಾರ್ತಿಕ ಪೂಜೆ ನಿಮಿತ್ತ ಊಟ ಇತ್ತು. ಊರ ಜನರು ವಂತಿಗೆ ಹಾಕಿ ನಡೆಸಿದ ಕಾರ್ಯಕ್ರಮ ಅದು. ಊರವರಿಗೆಲ್ಲ ಊಟದ ವ್ಯವಸ್ಥೆಯನ್ನು ಮೊಕ್ತೇಸರ ಗಣೇಶ ಹೆಗಡೆಯವರೇ ಮಾಡಿದ್ದರು. ಊಟದ ಒಂದು ಪಂಕ್ತಿ ಆದ ಮೇಲೆ ಎಲೆ ತೆಗೆದು ಕಸಬರಿಗೆಯಲ್ಲಿ ಗುಡಿಸಿಬಿಟ್ಟಿದ್ದರು. ಅಲ್ಲಿಯೇ ಇದ್ದ ರಾಮಶೆಟ್ಟಿ ಸಗಣಿ ಸಾರಿಸದೆ ಹಾಗೆಯೇ ಎರಡನೆ ಪಂಕ್ತಿಗೆ ಬಾಳೆ ಎಲೆ ಹಾಕುವುದು ಸರಿಯಲ್ಲ ಎಂದು ಹೆಗಡೆಯವರಲ್ಲಿ ವಾದಿಸಿದ. ಸೂರ್ಯನ ಕಿರಣ ಬಿದ್ದಕೂಡಲೇ ಎಲ್ಲವೂ ಶುದ್ಧವಾಗುವುದು ಎಂದು ಗಣೇಶ ಹೆಗಡೆಯವರು ಹೇಳಿದರಂತೆ. ಇವನು ಕಾರ್ತಿಕ ಉತ್ಸವದಲ್ಲಿ ಊಟ ಮಾಡದೆ ಮನೆಗೆ ಬಂದ. ಮಾರನೆ ದಿನ ಇನ್ನೊಂದು ಊರಿನವರು ಪೂಜೆ ಮಾಡಿಸುವವರಿದ್ದರು. ಅದೇ ಗಣೇಶ ಹೆಗಡೆಯವರು ರಾಮನ ಮನೆಗೆ ಬಂದು ನಾಲ್ಕು ಕಟ್ಟು ಬಾಳೆ ಎಲೆ ಕೊಯ್ದು ಕೊಡಲು ಹೇಳಿದರು. ತೋಟದಲ್ಲಿ ಬಾಳೆ ಗಿಡಗಳಿಗೆ ಏನೂ ಬರಗಾಲ ಇರಲಿಲ್ಲ. ಗುಡಿಯಲ್ಲಿ ಯಾವುದೇ ಕಾರ್ಯ ನಡೆದರೂ ರಾಮನ ತೋಟದಿಂದಲೇ ಬಾಳೆ ಎಲೆ ಹೋಗುವುದು. ಆದರೆ ರಾಮಶೆಟ್ಟಿ ಗಣೇಶ ಹೆಗಡೆಗೆ ಬಾಳೆ ಎಲೆ ಕೊಡುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟ. ಏಕೆ ಎಂದು ಕೇಳಿದರೆ, ನಿನ್ನೆ ಊಟ ಮಾಡಿ ಎಸೆದ ಬಾಳೆ ಎಲೆಗೆ ಸೂರ್ಯನ ಕಿರಣ ಬಿದ್ದಿದೆ. ಅದು ಈಗ ಶುದ್ಧವಾಗಿದೆ. ಅದನ್ನೇ ಎತ್ತಿಕೊಂಡು ಬಂದು ಬಡಿಸಿ ಎಂದುಬಿಟ್ಟ.
ರಾಮ ಹೀಗೆ ರಾಂಗ್‌ ಆಗುತ್ತಾನೆ ಎಂಬುದು ಗಣೇಶ ಹೆಗಡೆಗೆ ಗೊತ್ತಿರಲಿಲ್ಲ. ಇಬ್ಬರೂ ಹೆಚ್ಚುಕಡಿಮೆ ಒಂದೇ ಪ್ರಾಯದವರು. ಸಣ್ಣವರು ಇರುವಾಗ ಒಟ್ಟಿಗೆ ಆಡಿದವರು. ಕೊನೆಗೆ ಗಣಪಯ್ಯ ಶೆಟ್ಟರೇ ಮಧ್ಯಸ್ಥಿಕೆ ಮಾಡಿ ಆಳಿಗೆ ಹೇಳಿ ಬಾಳೆ ಎಲೆ ಕೊಯ್ಸಿ ಕೊಟ್ಟಿದ್ದರು. ಇದಾದ ಮೇಲೆಯೇ ರಾಮಶೆಟ್ಟಿ ಮನೆಯಲ್ಲಿ ಮಾತು ಕಡಿಮೆ ಮಾಡಿದ್ದ.
ರಾಮಶೆಟ್ಟಿ ಇನ್ನೂ ಹಲವು ಹರಕತ್ತು ಮಾಡಿದ್ದ. ಗಣೇಶ ಹೆಗಡೆ ಮತ್ತು ರಾಮಶೆಟ್ಟಿ ಸರೀಕರು. ಸಣ್ಣವರಿರುವಾಗ ಒಟ್ಟಿಗೆ ಆಡಿದ ಸಲಿಗೆಯಿಂದ ರಾಮಶೆಟ್ಟಿ ಬಾರೋ ಹೋಗೋ ಎಂದು ಏಕವಚನದಲ್ಲಿಯೇ ಮಾತನಾಡುತ್ತಿದ್ದ. ಒಂದಿನ ಗಣೇಶ ಹೆಗಡೆ ಅಪ್ಪ ರಾಮನಿಗೆ, ‘ನಮ್ಮ ಗಣೇಶನ್ನ ಹೆಗಡೆಯವರೇ ಎಂದು ಗೌರವದಿಂದ ಕರೆ. ಬಾ ಹೋಗು ಅನ್ಲಿಕ್ಕೆ ಅವನೇನು ನಿಮ್ಮನೆ ಆಳಾ?’ ಎಂದು ಕಣ್ಣು ಕೆಕ್ಕರಿಸಿ ಹೇಳಿದ್ದರು. ಆದರೆ ಗಣೇಶ ಮಾತ್ರ ಇವನಿಗೆ ಬಾರೋ ಹೋಗೋ ಅಂತಿದ್ದ. ಬರೀ ಇವನಿಗಷ್ಟೇ ಅಲ್ಲ, ಇವನ ತಂದೆ ಗಣಪಯ್ಯ ಶೆಟ್ಟರನ್ನೂ ಏಕವಚನದಲ್ಲೇ ಸಂಬೋಧಿಸುತ್ತಿದ್ದ. ಈ ಬಗ್ಗೆ ರಾಮಶೆಟ್ಟಿ ಅಪ್ಪನ ಹತ್ತಿರ ಪುಕಾರು ಹೇಳಿದ್ದ. ಅವರೇ ರಾಮನಿಗೆ ಸಮಾಧಾನ ಹೇಳಿದ್ದರು. ‘ರಾಮ ಇದೆಲ್ಲ ನಮ್ಮ ಸಮಾಜದ ಪದ್ಧತಿ. ತಲೆತಲಾಂತರದಿಂದ ನಡೆದು ಬಂದಿರುವುದು. ನೀರು ಮೇಲಿನಿಂದ ಕೆಳಗೇ ಹರಿಯುವುದು. ಕೆಳಗಿನ ನೀರು ಮೇಲಕ್ಕೆ ಹರಿಯುವುದು ಸಾಧ್ಯವೆ? ಕೆಳಗೆ ಹರಿಯುವ ನೀರು ಕೆಳಗೇ ಹರಿಯಬೇಕು’ ಎಂದು. ಅಪ್ಪನ ತರ್ಕ ರಾಮಶೆಟ್ಟಿಗೆ ಬಿಲ್‌ಕುಲ್‌ ಸರಿ ಎನ್ನಿಸುವುದಿಲ್ಲ. ಕೆಳಗೆ ಹರಿದ ನೀರನ್ನು ಮೋಟಾರ್‌ ಹಚ್ಚಿ ಮೇಲಕ್ಕೆತ್ತಿ ತೋಟಕ್ಕೆ ಹರಿಸಿದರೆ ಒಳ್ಳೆಯ ಬೆಳೆ ತೆಗೆಯಬಹುದು. ಮೋಟಾರು ಕಂಡು ಹಿಡಿಯುವ ಪೂರ್ವದ ರೀತಿ ರಿವಾಜುಗಳನ್ನೆಲ್ಲ ಬಿಟ್ಟುಬಿಡಬೇಕು ಎಂದು ವಾದಿಸಿಯೇ ವಾದಿಸುತ್ತಿದ್ದ.
ಆದರೆ ಗಣಪಯ್ಯ ಶೆಟ್ಟರು ಹೇಳಿದ್ದರಲ್ಲೂ ಒಂದು ಗೃಹಸ್ಥನ ಮಾತಿತ್ತು. ಇವನ ಮನೆಗೆ ಕೆಲಸಕ್ಕೆ ಬರುವವರಿಗೆ ಇವರೇನು ಬನ್ನಿ ಹೋಗಿ ಎಂದು ಹೇಳುವುದು ಇತ್ತೇನು? ನಾವೇನು ಹೆಗಡೆಯವರ ಮನೆಗೆ ಕೆಲಸಕ್ಕೆ ಹೋಗುವುದಿಲ್ಲ ಕರೆ, ಸಂಪತ್ತಿನಲ್ಲಿ ಅವರಿಗೇನು ಕಡಿಮೆಯವರಲ್ಲ ಕರೆ, ಊರಲ್ಲಿ ಯಾರೇ ಕೈಗಡ ಕೇಳಿದರೂ ಬಡ್ಡಿಯ ಆಸೆ ಇಲ್ಲದೆ ಕೊಟ್ಟೇವು ಕರೆ, ಆದರೆ ಅವರಿಗೂ ನಮಗೂ ಸರಿಯಲ್ಲ ಎಂಬುದು ಗಣಪಯ್ಯ ಶೆಟ್ಟರ ಖಂಡಿತದ ಮಾತಾಗಿತ್ತು. ಆದರೆ ಅದರ ಅಸಲು ರಾಮಶೆಟ್ಟಿಯ ತಲೆಗೆ ಹೋಗಬೇಕಲ್ಲ. ಗಣೇಶ ಹೆಗಡೆಯ ಮನೆಯಲ್ಲಿ ಬಾಳೆ ಎಲೆಯಲ್ಲಿ ಅವಲಕ್ಕಿ ಹಾಕಿ ಹಿತ್ತಾಳೆ ತಟ್ಟೆಯಲ್ಲಿ ಚಾ ತಂದು ಜಗುಲಿಯ ಮೇಲೆ ಕೊಟ್ಟಿದ್ದಕ್ಕೆ ರಾಮಶೆಟ್ಟಿ ಒಂದು ಸಲ ಕುಡಿಯದೆ ಅವರ ಎದುರಿನಲ್ಲೇ ತೆಂಗಿನ ಮರದ ಬುಡಕ್ಕೆ ಚೆಲ್ಲಿ ಬಂದಿದ್ದ. ರಾಮಶೆಟ್ಟಿಯ ಮದುವೆಯ ದಿನವೇ ಅಲ್ಲವಾ, ಮಂಟಪದಲ್ಲಿಯೇ ಅವನು ಗದ್ದಲ ಎಬ್ಬಿಸಿದ್ದು. ಗಣೇಶ ಹೆಗಡೆಯೇ ಮುಂದಾಗಿ ಒಬ್ಬರು ಭಟ್ಟರನ್ನು ಕಳುಹಿಸಿ ಕೊಟ್ಟಿದ್ದರು. ಮಂಟಪದಲ್ಲಿ ರಾಮಶೆಟ್ಟಿಗೆ ಆಚಮ್ಯ ಮಾಡು ಎಂದು ಹೇಳುವುದಕ್ಕೆ ಅವರು ಮೂರು ಸಲ ನೀರು ಕುಡಿ ಎಂದರು. ರಾಮಶೆಟ್ಟಿಗೆ ಸಿಟ್ಟು ಬಂತು. ನನಗೇನು ಆಚಮ್ಯ ಎಂದರೆ ಗೊತ್ತಾಗುವುದಿಲ್ಲವೆ ಎಂದು ಅವನು ಕೆರಳಿದ. ಅದಕ್ಕಾಗಿ ನೀರಿನ ಚಂಬನ್ನು ಎತ್ತಿ ಘಟಘಟನೆ ಮೂರು ಗುಟುಕು ನೀರು ಕುಡಿದು ಚಂಬನ್ನು ಕೆಳಗೆ ಇಟ್ಟ. ಪೌರೋಹಿತ್ಯಕ್ಕೆ ಬಂದ ಭಟ್ಟರು ಮುಖ ನೋಡಲು ತೊಡಗಿದರು. ‘ಏನ್‌ ಮಖ ನೋಡುತ್ತೀರಿ. ನೀರು ಕುಡಿ ಎಂದಿರಿ, ನೀರು ಕುಡಿದಿದ್ದೇನೆ’ ಎಂದು ಅವರನ್ನು ಕೆಕ್ಕರಿಸಿ ನೋಡಿದಾಗ ಅವರು ಬೆವರಿಬಿಟ್ಟಿದ್ದರು. ಕೊನೆಗೆ ತಪ್ಪನ್ನು ತಿದ್ದಿಕೊಂಡು ಆಚಮ್ಯ ಮಾಡು ಎಂದು ಹೇಳಿ ಮಂತ್ರವನ್ನು ಮುಂದುವರಿಸಿದ್ದರು. ಮದುವೆಗೆ ಬಂದವರಿಗೆ ರಾಮಶೆಟ್ಟಿ ಪುಕ್ಕಟೆ ಮನರಂಜನೆ ಒದಗಿಸಿದ್ದ.
ರಾಮಶೆಟ್ಟಿ ಇನ್ನೊಮ್ಮೆ ಪುರೋಹಿತರ ಬೆವರಿಳಿಸಿದ್ದು ಅವನ ಮಗನ ಮುಂಜಿ ಸಮಯದಲ್ಲಿ. ಮುಂಜಿ ಮಾಡಿದ ಮೇಲೆ ತ್ರಿಕಾಲ ಸಂಧ್ಯಾವಂದನೆ ಮಾಡಬೇಕು. ನೇಮ ನಿಷ್ಠೆಯಿಂದ ಇರಬೇಕು. ನಮಗೇಕೆ ಇವೆಲ್ಲ. ಅದೆಲ್ಲ ಮಾಡುತ್ತ ಕುಳಿತುಕೊಳ್ಳಲು ನಾವೇನು ಗುಡಿಯಲ್ಲಿ ದೇವರಿಗೆ ಗಂಟೆ ತೂಗುವವರೆ ಎನ್ನುವುದು ಅವನ ತರ್ಕವಾಗಿತ್ತು. ಅಷ್ಟಕ್ಕೂ ಮುಂಜಿ ಮಾಡಲು ಬರುವ ಪುರೋಹಿತರು ಗಾಯತ್ರಿ ಮಂತ್ರವನ್ನು ಹೇಳಿಕೊಡುವುದಿಲ್ಲ ಎನ್ನುವುದು ಅವನ ದೊಡ್ಡ ಆಕ್ಷೇಪ. ನಿನಗೆ ಮುಂಜಿ ಮಾಡುವಾಗ ನಿನ್ನ ತಂದೆ ನಿನಗೆ ಉಪದೇಶ ಮಾಡಿದ ಗಾಯತ್ರಿ ಮಂತ್ರವನ್ನು ನೀನು ನಿನ್ನ ಮಗನಿಗೆ ಉಪದೇಶ ಮಾಡು ಎಂದು ಹೇಳಿ ಪುರೋಹಿತರು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಇವರು ಎಂದಾದೂ ಗಾಯತ್ರಿ ಮಂತ್ರವನ್ನು ಹೇಳಿದ್ದು ಇದೆಯೇ? ಪುರೋಹಿತರ ಹತ್ತಿರ ತಿರುಗಿ ವಾದಿಸಿದರೆ, ಅದನ್ನು ಪಿತೃ ಮುಖೇನ ಗ್ರಹಣ ಮಾಡಬೇಕು. ಪುರೋಹಿತರಾದ ನಾವು ಹೇಳಿಕೊಡುವುದಲ್ಲ ಎಂದು ಹೇಳಿ ಇರಿಸು ಮುರಿಸಿಗೆ ಸಿಗಿಸುತ್ತಿದ್ದರು. ಇದೆಲ್ಲ ತಮಗೆ ಅಪಮಾನ ಮಾಡಲೆಂದೇ ಪುರೋಹಿತರು ಮಾಡುವ ತಂತ್ರ ಎನ್ನುವುದು ರಾಮಶೆಟ್ಟಿಯ ಖಡಾಖಂಡಿತ ಮಾತಾಗಿತ್ತು. ತನ್ನ ಮಗನ ಮುಂಜಿಯಲ್ಲಿ ಹಾಗಾಗಲು ಬಿಡುವುದಿಲ್ಲ ಎಂದು ನಿಶ್ಚಯ ಮಾಡಿಕೊಂಡ ಆತ ಸಂಧ್ಯಾವಂದನೆಯ ಪುಸ್ತಕವನ್ನು ತಂದು ಗಾಯತ್ರಿ ಮಂತ್ರವನ್ನು ಬಾಯಿಪಾಠ ಮಾಡಿಬಿಟ್ಟಿದ್ದ. ಮುಂಜಿಯ ದಿನ ತಂದೆ ಮತ್ತು ಮಗನಿಗೆ ಒಂದೇ ಬಟ್ಟೆಯಲ್ಲಿ ಮುಸುಕು ಹಾಕಿ ಗಾಯತ್ರಿ ಮಂತ್ರವನ್ನು ನಿನ್ನ ಮಗನಿಗೆ ಕಿವಿಯಲ್ಲಿ ಉಪದೇಶ ಮಾಡು ಎಂದು ಪುರೋಹಿತರು ಹೇಳಿದಾಗ ರಾಮಶೆಟ್ಟಿ ಸುಶ್ರಾವ್ಯವಾಗಿ ಯಕ್ಷಗಾನದ ಪದ ಹಾಡುವ ಹಾಗೆಯೇ ಗಾಯತ್ರಿ ಮಂತ್ರವನ್ನು ದೊಡ್ಡದಾಗಿ ಮಗನ ಕಿವಿಯಲ್ಲಿ ಹೇಳಿಬಿಟ್ಟ. ಅದನ್ನು ಕೇಳಿದ ಪುರೋಹಿತರಿಗೆ ಹರಳೆಣ್ಣೆ ಕುಡಿದ ಹಾಗೆ ಆಗಿತ್ತು.
ದೇವರ ಪೂಜೆ ಮಾಡುವುದು ಅವರ ಕುಲಧರ್ಮ. ಅದನ್ನು ಅವರು ಮಾಡುತ್ತಾರೆ. ಒಬ್ಬೊಬ್ಬರದು ಒಂದೊಂದು ಕುಲಧರ್ಮ ಇರುತ್ತದೆ. ಅದರಲ್ಲಿ ಅವರವರು ಪ್ರಾವೀಣ್ಯ ಗಳಿಸಿರುತ್ತಾರೆ. ಅವರವರ ವೃತ್ತಿಯಲ್ಲಿ ಅವರವರು ಗಳಿಸಿರುವ ಪ್ರಾವೀಣ್ಯತೆಯ ಮೇಲೆಯೇ ಅವರವರಿಗೆ ಮಾನ್ಯತೆ ನೀಡಬೇಕು ಎಂಬ ವ್ಯಕ್ತಿನಿಷ್ಠ ನಿಲುವು ರಾಮಶೆಟ್ಟಿಯದು. ಮಂತ್ರಹೇಳಲು ನಮಗೆ ಬರುವುದಿಲ್ಲ ನಿಜ. ಆದರೆ ನಮ್ಮಂತೆ ಎಣ್ಣೆ ತೆಗೆಯಲು, ಕೊಬ್ಬರಿ ಮಾಡಲು ಗಣೇಶ ಹೆಗಡೆಗೆ ಬರುತ್ತದೆಯೆ? ಚಪ್ಪಲಿ ಹೊಲಿಯುವವನಲ್ಲೂ ಅವನದೇ ವಿಶೇಷತೆ ಇರುತ್ತದೆ ಎಂದೆಲ್ಲ ಉಲ್ಟಾ ಸವಾಲು ಹಾಕುವ ಅವನ ತಂಟೆಯೇ ಬೇಡ ಎಂದು ಕೆಲವರು ದೂರ ಸರಿದರೆ ಕೆಲವರು ರಾಮಶೆಟ್ಟಿಯನ್ನು ರಾಮಭಟ್ಟರೇ ಎಂದೂ ಕರೆಯುತ್ತಿದ್ದರು. ರಾಮಭಟ್ಟರು ಎಂಬ ಒಬ್ಬರು ಪ್ರಸಿದ್ಧ ಪುರೋಹಿತರಿದ್ದರು. ಹೀಗಾಗಿ ರಾಮಶೆಟ್ಟಿ ಒಳಗೊಳಗೇ ಖುಷಿ ಪಡುತ್ತಿದ್ದ.
ತನ್ನನ್ನು ತಾನು ಕೆಳಗೆ ಬೀಳುವುದಕ್ಕೆ ರಾಮಶೆಟ್ಟಿ ಯಾವತ್ತೂ ಅವಕಾಶ ಕೊಟ್ಟವನೇ ಅಲ್ಲ. ಎಣ್ಣೆ ಮಿಲ್ಲು ತೆಗೆದು ನಮ್ಮ ಕುಲದ ಕಾಯಕಕ್ಕೆ ಕಲ್ಲು ಹಾಕಿದ ಹರಿ ಪ್ರಭುವನ್ನು ಕಂಡರೂ ಅವನಿಗೆ ಇನ್ನಿಲ್ಲದಷ್ಟು ಉರಿ. ಗಾಣಗಳೆಲ್ಲ ಮೂಲೆ ಸೇರಿ ತುಕ್ಕು ಹಿಡಿಯುತ್ತ ಬಿದ್ದಿದ್ದವು. ಮಿಲ್ಲಿನಲ್ಲಿ ಹಿಂಡಿದ ಕೊಬ್ಬರಿಗೆ ಹೆಚ್ಚು ಎಣ್ಣೆ ಬರುತ್ತದೆ ಎಂದು ಪ್ರಚಾರ ಮಾಡಿದ್ದ ಅವನು ಗಿರಾಕಿಗಳನ್ನೆಲ್ಲ ಆಕರ್ಷಿಸಿ ಬಿಟ್ಟಿದ್ದ. ಅವನ ಪ್ರಚಾರದಲ್ಲಿ ಸುಳ್ಳು ಏನಿರಲಿಲ್ಲ. ಮಿಲ್ಲಿನಲ್ಲಿ ಹಿಂಡಿದ ಕೊಬ್ಬರಿಗೆ ಸಹಜವಾಗಿಯೇ ಹೆಚ್ಚು ಎಣ್ಣೆ ಬರುತ್ತಿತ್ತು. ಇವರಲ್ಲಿಯಾದರೋ ಹಿಂಡಿಯಲ್ಲಿಯೇ ಹೆಚ್ಚು ಎಣ್ಣೆ ಹೋಗುತ್ತಿತ್ತು. ಮೊದಮೊದಲು ಹೆಚ್ಚು ಎಣ್ಣೆ ಕೊಟ್ಟ ಹರಿಪ್ರಭು ಕ್ರಮೇಣ ಎಣ್ಣೆ ಕದಿಯುವುದಕ್ಕೆ ಸುರು ಮಾಡಿದ. ಇದೆಲ್ಲ ಗಿರಾಕಿಗಳಿಗೆ ಎಲ್ಲಿ ಗೊತ್ತಾಗಬೇಕು. ಮಿಲ್ಲಿನ ಬುಡದಲ್ಲಿಯೇ ತಾನೇ ಚಾದಂಗಡಿ ತೆಗೆದು ಬೇರೆಯವರಿಗೆ ನಡೆಸಲು ಕೊಟ್ಟಿದ್ದ. ಕೊಬ್ಬರಿ ತಂದ ಗಿರಾಕಿ ಕಾದು ಕುಳಿತರೆ, ಅವರ ಮೇಲೆ ವಿಪರೀತ ಪ್ರೀತಿ ಉಕ್ಕಿದ ಹಾಗೆ ಮಾಡಿ ಪಕ್ಕದ ಅಂಗಡಿಯಲ್ಲಿ ತನ್ನ ದುಡ್ಡಿನಲ್ಲಿ ಚಾ ಕುಡಿದು ಬಾ ಎಂದು ಕಳುಹಿಸುತ್ತಿದ್ದ. ಅವನು ಅತ್ತ ಹೋದಾಗ ಇವನು ಎಣ್ಣೆ ಕದ್ದುಬಿಡುತ್ತಿದ್ದ.
ತಮಾಷೆಯ ಮಾತೆಂದರೆ ರಾಮಶೆಟ್ಟಿಯ ತೆಂಗಿನ ಹಿತ್ತಿಲದಲ್ಲಿ ಬೆಳೆದ ತೆಂಗಿನ ಕಾಯಿ ಕೊಬ್ಬರಿಯಾಗಿ ಎಣ್ಣೆಯಾಗಲು ಬರುವುದು ಹರಿಪ್ರಭುವಿನ ಮಿಲ್ಲಿಗೇ ಆಗಿತ್ತು. ಒಂದೆರಡು ಬಾರಿ ರಾಮಶೆಟ್ಟಿ ಹರಿಪ್ರಭುವನ್ನು ಎಣ್ಣೆ ಕದಿಯುತ್ತಿದ್ದಾಗಲೇ ಹಿಡಿದುಬಿಟ್ಟಿದ್ದ. ಕಸುಬಿಗೇ ದ್ರೋಹ ಬಗೆಯುತ್ತಿದ್ದಿಯಾ ಎಂದು ಅವನ ಮುಖಕ್ಕೆ ಉಗಿದಿದ್ದ.
ಇವರೂ ಮೊದಲು ಅದೇ ಕಸುಬನ್ನು ಮಾಡಿದವರಲ್ಲವೆ? ಗಾಣ ನಡೆಸಿದವರಲ್ಲವೆ? ಎಂದಾದರೂ ಹೀಗೆ ಎಣ್ಣೆ ಕದ್ದಿದ್ದು ಇರಲಿಲ್ಲ. ಕುಲಕಸುಬು ಅಲ್ಲದ ವೃತ್ತಿ ಹಿಡಿದ ಹರಿಪ್ರಭುವು ವೃತ್ತಿಗೆ ದ್ರೋಹ ಬಗೆಯುವುದು ನೋಡಿ ರಾಮಶೆಟ್ಟಿಗೆ ಆಶ್ಚರ್ಯವಾಯಿತು.
ರಾಮಶೆಟ್ಟಿಯ ಅಪ್ಪ ಗಣಪಯ್ಯ ಶೆಟ್ಟರ ಪ್ರಾಯದ ಕಾಲದಲ್ಲಿ ಅದೇನು ಕಾಯಿ ವ್ಯಾಪಾರದ ಭರಾಟೆ. ಸುತ್ತ ಹತ್ತೂರಿನ ಕಾಯಿಗಳೆಲ್ಲ ಇವರ ಮನೆಯ ಅಗಳದಲ್ಲೇ ಬಂದು ಬೀಳುತ್ತಿದ್ದುದು. ನೂರು ಇನ್ನೂರು ಸಂಖ್ಯೆಯಲ್ಲಿ ಹಲಗೆ ದೋಣಿಗಳಲ್ಲಿ ತುಂಬಿ ಗೇರುಸೊಪ್ಪೆಗೆ, ಅಲ್ಲಿಂದ ಎತ್ತಿನ ಗಾಡಗಳಲ್ಲಿ ತುಂಬಿ ಸಿದ್ದಾಪುರ, ಮುಂದೆ ಅಲ್ಲಿಂದ ಇನ್ನೆಲ್ಲಿಯೋ ಹೋಗುತ್ತಿದ್ದವು. ಸಿದ್ದಾಪುರದಲ್ಲಿ ಇವರದೇ ಒಂದು ಕಾಯಿ ಮಳಿಗೆಯೂ ಇತ್ತು. ಗಣಪಯ್ಯ ಶೆಟ್ಟರದು ಎಂಥ ಗಟ್ಟಿ ಜೀವ ಎಂದರೆ ಅವರೇ ತೆಂಗಿನ ಎಣ್ಣೆಯ ಹಾಡವನ್ನು ತಲೆಯ ಮೇಲೆ ಹೊತ್ತುಕೊಂಡು ಗೇರುಸೊಪ್ಪೆಯಿಂದ ಸಿದ್ದಾಪುರಕ್ಕೆ ನಡೆದೇ ಹೋಗಿದ್ದರಂತೆ. ಹುಡಿ ಅವಲಕ್ಕಿ ನಾಲ್ಕಾರು ಬಾಳೆ ಹಣ್ಣು ತಿಂದು ದಿನ ಕಳೆದು ದುಡ್ಡು ಮಾಡಿದ ಅವರು ಯಾರಿಗೂ ಸುಮ್ಮನೆ ಒಂದು ಪೈಸೆ ಕೊಟ್ಟವರೂ ಅಲ್ಲ. ಯಾರದೇ ಒಂದು ಪೈಸೆಯನ್ನೂ ಇಟ್ಟುಕೊಂಡವರೂ ಅಲ್ಲ. ಸಾಲ ಪಡೆದವರು ಹೇಳಿದ ದಿನ ಮರಳಿ ಕೊಡದಿದ್ದರೆ ಅವರ ಮನೆಯ ಮುಂದೆ ಕಂಬಳಿ ಹಾಸಿ ಉಪವಾಸ ಕುಳಿತು ಸಾಲ ವಸೂಲಿ ಮಾಡುವ ಅವರ ನಿಷ್ಠುರತೆ ಅವರಿಗೆ ಕಂಜೂಸು ಎಂಬ ಹೆಸರನ್ನೂ ತಂದುಕೊಟ್ಟಿತ್ತು. ದುಡ್ಡು ಗಳಿಸುವುದು ಎಷ್ಟು ಕಷ್ಟ ಎಂದು ಗೊತ್ತಿದ್ದ ಅವರು ಯಾರಿಗೂ ಸುಮ್ಮನೆ ದುಡ್ಡು ಕೊಡುವುದು ಸಾಧ್ಯವಿರಲಿಲ್ಲ. ಹರಿಪ್ರಭುವಿನಂತೆ ಎಣ್ಣೆ ಕದ್ದು ದುಡ್ಡು ಮಾಡಿದ್ದರೆ ಕೇಳಿದವರಿಗೆಲ್ಲ ಸಾಲ ಕೊಡುತ್ತಿದ್ದರು. ಸಾಲ ಮುಳುಗಿದರೂ ಚಿಂತೆ ಮಾಡುತ್ತಿರಲಿಲ್ಲ.
ಗಣಪಯ್ಯ ಶೆಟ್ಟರು ರಕ್ತ ವ್ಯಯಿಸಿ ಬೆವರು ಸುರಿಸಿ ಅರೆ ಹೊಟ್ಟೆ ಉಂಡು, ಗಾಣಕ್ಕೆ ಎತ್ತು ಕೊಳ್ಳುವುದಕ್ಕೆ ದುಡ್ಡಿಲ್ಲದ ದಿನಗಳಲ್ಲಿ ತಮ್ಮ ಸೊಂಟಕ್ಕೇ ಹಗ್ಗ ಬಿಗಿದುಕೊಂಡು ಗಾಣ ಎಳೆದು ಪುಟ್ಟ ಗಂಟು ಮಾಡಿದ್ದರಲ್ಲ, ಅದರಿಂದಲೇ ಈಗ ಅವರು ಇರುವ ಹತ್ತು ಅಂಕಣದ ಮನೆಯನ್ನು ಕಟ್ಟಿಸಿದ್ದು. ಅವರ ವ್ಯಾಪಾರದ ಚಲೋ ದಿನಗಳಲ್ಲಿ ನಾಲ್ಕಂಕಣದ ಚೌಕಿಯ ತುಂಬ ಕಾಯಿ ರಾಶಿ ಬೀಳುತ್ತಿದ್ದವು. ಗೇರುಸೊಪ್ಪೆ ಸೀಮೆಯಲ್ಲಿ ಗಣಪಯ್ಯ ಶೆಟ್ಟರು ಕಟ್ಟಿಸಿದಂಥ ದೊಡ್ಡ ಮನೆ ಇರಲಿಲ್ಲ. ಅವರಿಗೆ ಇರುವಷ್ಟು ದೊಡ್ಡ ವ್ಯಾಪಾರ ವಹಿವಾಟು ಇತರರಿಗೆ ಇರಲಿಲ್ಲ. ಗಣಪಯ್ಯ ಶೆಟ್ಟರು ವ್ಯಾಪಾರದಲ್ಲಿ ಪಟ್ಟ ಕಷ್ಟವನ್ನು ಕಣ್ಣಾರೆ ಕಂಡಿದ್ದ ರಾಮಶೆಟ್ಟಿಗೆ ವ್ಯಾಪಾರಕ್ಕಿಂತ ಜಮೀನು ಮಾಡುವುದರಲ್ಲಿ ಆಸಕ್ತಿ ಕುದುರಿತ್ತು. ಇದಕ್ಕೆ ಕಾರಣ ಹರಿಪ್ರಭುವಿನಂಥವರು ಇವರ ಕುಲಕಸುಬನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದು. ವ್ಯಾಪಾರ ಇಲ್ಲದಿದ್ದರೆ ಏನಾಯ್ತು ತೆಂಗಿನ ಬಾಗಾಯ್ತ ಇದೆಯಲ್ಲ. ಗಂಡು ಹೆತ್ತವನು ತೆಂಗು ನೆಟ್ಟವನು ಯಾರಿಗೂ ಹೆದರಬೇಕಿಲ್ಲ ಎಂದು ಜಾತಿ ಬಾಂಧವರಲ್ಲಿ ಆಗಾಗ ರಾಮಶೆಟ್ಟಿ ಹೇಳಿಕೊಳ್ಳುತ್ತಿದ್ದ. ಒಂದೊಂದು ತೆಂಗಿನ ಸಸಿಯನ್ನು ಮರವನ್ನಾಗಿ ಮಾಡುವಾಗ ಏನೇನು ಕಷ್ಟವಾಯ್ತು ಎನ್ನುವುದನ್ನು ಕಥೆಯಾಗಿ ಹೇಳುವುದರಲ್ಲಿ ಅವನಿಗೆ ಎಲ್ಲಿಲ್ಲದ ಆಸಕ್ತಿ. ಕೇಳುವವರಿಗೆ ಆಸಕ್ತಿ ಇದೆಯೋ ಇಲ್ಲವೋ ಎನ್ನುವುದು ಅವನಿಗೆ ಮುಖ್ಯ ಆಗಿರಲಿಲ್ಲ. ಒಟ್ಟಿನಲ್ಲಿ ಹೇಳುತ್ತ ಹೋಗುವುದು. ಎದುರಿಗೆ ಕುಳಿತವನಿಗೆ ಕೇಳುವುದು ಒಂದು ಕರ್ಮ. ಹಾಗಂತ ರಾಮಶೆಟ್ಟಿಯನ್ನು ಯಾರೂ ಲಘುವಾಗಿ ತೆಗೆದುಕೊಂಡಿರಲಿಲ್ಲ.
ತೆಂಗಿನ ಮತ್ತು ಗಂಡಿನ ಸಮೀಕರಣವನ್ನು ರಾಮಶೆಟ್ಟಿ ಮಾಡುವುದಕ್ಕೂ ಒಂದು ಬಲವಾದ ಕಾರಣ ಇತ್ತು. ಅವನ ಹೆಂಡತಿ ಹೆತ್ತಿದ್ದು ಒಂದೇ ಹೆಣ್ಣು. ಆ ಬಳಿಕ ಸಾಲಾಗಿ ನಾಲ್ಕು ಗಂಡು ಮಕ್ಕಳನ್ನು ಹೆತ್ತಿದ್ದಳು. ರಾಮಶೆಟ್ಟಿ ಮಗಳ ಮದುವೆ ಮಾಡಿ ಮುಗಿಸಿದ್ದ. ಎರಡನೆ ಮಗ ದತ್ತ ಅಪ್ಪ ಸೇರಾದರೆ ಅವನು ಸವ್ವಾಸೇರಾಗಿದ್ದ. ಹೀಗಾಗಿ ಮನೆಯಲ್ಲಿ ಹೊಂದಿಕೆಯಾಗದೆ ಒಂದು ದಿನ ನಾಪತ್ತೆಯಾಗಿದ್ದ. ಎಲ್ಲಿದ್ದಾನೆ, ಏನು ಮಾಡಿಕೊಂಡಿದ್ದಾನೆ ಎಂಬುದೆಲ್ಲ ಗೊತ್ತಾಗದೆ ರಾಮಶೆಟ್ಟಿಯ ಹೆಂಡತಿ ಪಾರ್ವತಿ ಅದೆಷ್ಟೋ ದಿನ ಕಣ್ಣಲ್ಲಿ ನೀರು ಹಾಕಿದ್ದಳು. ಗಂಡನ ಎದುರಿನಲ್ಲಿ ಅಳುವ ಹಾಗೂ ಇರಲಿಲ್ಲ. ಆಕೆಯೇನಾದರೂ ಅತ್ತರೆ, `ಕಲ್ಲುಗುಂಡಿನ ಹಾಗೆ ಜೀವಂತ ಇದ್ದೀನಿ ನಾನು. ಮತ್ತೆ ಯಾರು ಸತ್ತರು ಅಂತ ಅಳ್ತೀಯೆ? ನಿನ್ನ ಅಪ್ಪ ಸತ್ತನೇನು?'' ಎಂದು ಅಬ್ಜಾಕು ಮಾಡಿಬಿಡುತ್ತಿದ್ದ ರಾಮಶೆಟ್ಟಿ. ಆಗ ಆಕೆಯ ಅಳುವೆಲ್ಲ ಸೊಡ್ಲೆಕಟ್ಟೆ ಆಚೆಗೆ ಹೋಗಿಬಿಡುತ್ತಿತ್ತು. ಒಮ್ಮೊಮ್ಮೆ ರಾಮಶೆಟ್ಟಿ ಸಮಾಧಾನದಲ್ಲಿ ಇದ್ದ ಅಂದರೆ ಹೆಂಡತಿ ಕೆಲಸ ಮಾಡುತ್ತಿದ್ದ ಕಡೆಗೇ ಹೋಗಿ ಹೊಟ್ಟೆ ತಂಪಾಗುವಂಥ ಮಾತನಾಡುತ್ತಿದ್ದ. ಮಗ ಮನೆ ಬಿಟ್ಟು ಹೋದ ಅಂದು ನನಗೆ ದುಃಖ ಇಲ್ಲ ಅಂತ ಮಾಡಿದ್ದೀಯಾ? ಅವನು ನನ್ನ ಮೀರಿಸಿದವನು. ಕಲ್ಲು ಅರೆಯಲ್ಲಿ ನೀರು ಬರಿಸುವ ತಾಕತ್ತು ಅವನಲ್ಲಿದೆ. ಎಲ್ಲಿದ್ದರೂ ಚೆನ್ನಾಗಿ ಇರ್ತಾನೆ. ನನಗೂ ಒಮ್ಮಮ್ಮೆ ಅಪ್ಪನ ಕಿರಿಕಿರಿ ಜಾಸ್ತಿ ಆದಾಗ ನಮ್ಮಪ್ಪ ಸತ್ತುಬಿಡಬಾರದೆ ಅಂತ ಅನ್ನಿಸುತ್ತಿತ್ತು. ಬಿಸಿ ರಕ್ತ ಅಲ್ವಾ. ಒಂದಿನ ಚಲೋ ಸುದ್ದಿ ತಗೊಂಡು ಬರ್ತಾನೆ ಅಂತಿದ್ದ.

ಗಣಪಯ್ಯ ಶೆಟ್ಟರ ಕಾಲದಲ್ಲಾದರೆ ಮನೆಯಲ್ಲಿ ಆಗಾಗ ದೇವರಕಾರ್ಯ, ಹಿರಿಯರ ಕಾರ್ಯ ಎಲ್ಲ ನಿಯಮದಂತೆ ನಡೆಯುತ್ತಿದ್ದವು. ಮೀನು ತಿನ್ನುತ್ತಿದ್ದರೂ ಯಾರಿಗೂ ಅದು ಗೊತ್ತಾಗುತ್ತಿರಲಿಲ್ಲ. ಕದ್ದುಮುಚ್ಚಿ ತಿನ್ನುವುದು. ಶೆಟ್ಟರ ಮನೆಯಲ್ಲಿ ಎಲ್ಲ ಹಾರವರದೇ ಆಚಾರ ವಿಚಾರ ಎಂದು ಯಾರಾದರೂ ಹೇಳಿದರೆಂದರೆ ಅವರಿಗೆ ಖುಷಿಯಾಗುತ್ತಿತ್ತು. ಮೀನು ತಂದು ಕೊಡುವವರಿಗೆ ಮಾತ್ರ ಶೆಟ್ಟರ ಮನೆಯವರು ಮೀನು ತಿನ್ನುತ್ತಾರೆ ಎಂಬುದು ಗೊತ್ತಿರುತ್ತಿತ್ತು. ಯಾರಾದರೂ ಕೇಳಿದರೆ ನಾವು ಮೀನು ತಿನ್ನುವುದಿಲ್ಲ ಎಂದೇ ಇವರು ಹೇಳುತ್ತಿದ್ದರು. ಎಲ್ಲದರಲ್ಲಿಯೂ ಗಣೇಶ ಹೆಗಡೆ ಮನೆಯವರದೇ ಅನುಕರಣೆ ಅವರದು. ದೇವರಿಗೆ ನಿತ್ಯ ಪೂಜೆ, ನೈವೇದ್ಯ, ಮನೆಯಲ್ಲಿ ಮಕ್ಕಳಿಗೆ ಮುಂಜಿ, ಅಶ್ವತ್ಥವೃಕ್ಷಕ್ಕೆ ಮುಂಜಿ, ಪೂಜೆಯ ಸಮಯದಲ್ಲಿ ಶಂಖ ಜಾಗಟೆಗಳ ವಾದನ, ಅಷ್ಟೋ ಇಷ್ಟೋ ದೇವರ ಸ್ತ್ರೋತ್ರ ಪಠಣ ಇತ್ಯಾದಿ ಎಲ್ಲ ಇತ್ತು. ರಾಮಶೆಟ್ಟಿ ಪ್ರಾಯಕ್ಕೆ ಬಂದು ಮನೆಯಲ್ಲಿ ಅವನದೇ ಮಾತು ನಡೆಯತೊಡಗಿದ ಮೇಲೆ ಸ್ವಲ್ಪ ಅತ್ತಇತ್ತ ಆಯಿತು. ಕದ್ದುಮುಚ್ಚಿ ಮೀನು ತಿನ್ನುತ್ತಿದ್ದವರು ರಾಜಾರೋಷಾಗಿ ಮೀನು ತಿನ್ನತೊಡಗಿದರು. ಹೀಗೆಲ್ಲ ಮಾಡಬಾರದು ಎಂದು ಗಣಪಯ್ಯ ಶೆಟ್ಟರು ಹೇಳಿದರೆ, “ಮೀನು ತಿನ್ನುವ ಜಾತಿಯಲ್ಲಿ ಹುಟ್ಟಿ ಕದ್ದು ಮುಚ್ಚಿ ಏಕೆ ತಿನ್ನಬೇಕು. ತಿಂದು ಸುಳ್ಳು ಏಕೆ ಹೇಳಬೇಕು. ಹಾರವರ ಜೊತೆ ಏನ್‌ ನಾವು ಸಂಬಂಧ ಬೆಳೆಸುವವರು ಇದ್ದೀವೇನು?” ಎಂದೆಲ್ಲ ಕೇಳುತ್ತಿದ್ದ. ರಾಮಶೆಟ್ಟಿ ಎಷ್ಚು ಮುಂದುವರಿದಿದ್ದ ಎಂದರೆ ಊರಿಗೆ ಹೊಸದಾಗಿ ಕರೆಂಟು ಬಂದಾಗ ಇವರ ಮನೆಗೆ ವಯರಿಂಗ್‌ ಮಾಡಲು ಬಂದಿದ್ದ ಸಾಲ್ಕೋಡು ಸೀಮೆಯ ಸುಬ್ರಾಯ ಹೆಗಡೆಯನ್ನು ಕರೆದುಕೊಂಡು ಶಿಕಾರಿಗೆ ಹೋಗಿದ್ದ. ದೊಡ್ಡ ಮಿಗವನ್ನು ಬೇಟೆಯಾಡಿ ಅದೇ ರಾತ್ರಿ ಹನ್ನೆರಡೆಂದರೆ ಬಿಸಿಬಿಸಿ ಬಾಡೂಟ ಮಾಡಿಸಿದ್ದ. ಇನ್ನೊಂದು ರಾತ್ರಿ ಇರುಕುಳಿ ತಗೊಂಡು ಆ ಹೆಗಡೆಯನ್ನು ಕರೆದುಕೊಂಡು ಅಮಾವಾಸ್ಯದ ಕೊರೆ ಇಳಿತದಲ್ಲಿ ಲೈಟಿಗೆ ಹೋಗಿದ್ದ. ಇದೆಲ್ಲ ನೋಡಿದ ಗಣಪಯ್ಯ ಶೆಟ್ಟರಿಗೆ ಕಾಲ ಕೆಟ್ಟುಹೋಯ್ತು ಅನ್ನಿಸದೆ ಇರಲಿಲ್ಲ. ಈ ಹೆಗಡೆಯೇ ಮೀನು ತಿನ್ನುವಾಗ ಮೀನು ತಿನ್ನುವ ಜಾತಿಯಲ್ಲಿ ಹುಟ್ಟಿದ ನಾವು ಏಕೆ ಕದ್ದು ಮುಚ್ಚಿ ತಿನ್ನಬೇಕು ಎನ್ನುವುದು ಅವನ ಸವಾಲಾಗಿತ್ತು. ಅದಕ್ಕೆ ಗಣಪಯ್ಯ ಶೆಟ್ಟರಲ್ಲಿ ಉತ್ತರ ಇರಲಿಲ್ಲ.

ಗಣಪಯ್ಯ ಶೆಟ್ಟರಿಗೆ ಒಂದು ರೀತಿಯಲ್ಲಿ ಕಾಲ ಕೆಟ್ಟುಹೋಯ್ತು ಅನ್ನಿಸಿದರೆ ರಾಮಶೆಟ್ಟಿಗೂ ಇನ್ನೊಂದು ರೀತಿಯಲ್ಲಿ ಕಾಲ ಕೆಟ್ಟುಹೋಯ್ತು ಅನ್ನಿಸದೆ ಇರಲಿಲ್ಲ. ಭೂಮಿಯಲ್ಲಿ ಬೆವರು ಸುರಿಸಿ ಅವರು ಬೆಳೆದ ಬೆಳೆಯ ದರ ನೆಲ ಕಚ್ಚಿತ್ತು. ತೆಂಗಿಗೂ ಬೆಲೆ ಇಲ್ಲ. ಅಡಕೆಗೂ ಬೆಲೆ ಇಲ್ಲ. ಆರು ನೂರು ಎಂಟು ನೂರರ ದರ ಕಂಡಿದ್ದ ತೆಂಗನ್ನು ಮೂರು ನೂರಕ್ಕೂ ಮೂಸುವವರು ಇಲ್ಲದಿದ್ದಾಗ ಅವನ ಆಟೋಪದ ಮಾತುಗಳೂ ತಣ್ಣಗಾಗಿದ್ದವು. ತೆಂಗು ನೆಟ್ಟ ಗಂಡು ಹೆತ್ತ ಹಮ್ಮು ಈಗ ಅವನಲ್ಲಿ ಇರಲಿಲ್ಲ. ತನ್ನ ಎರಡನೆಯ ಮಗ ಮನೆ ಬಿಟ್ಟು ಹೋಗಿಯೇ ಚಲೋ ಮಾಡಿದನೇನೋ ಅನ್ನಿಸಿತು. ಮನೆಯಲ್ಲಿ ಇರುವ ಮೂರು ಗಂಡು ಮಕ್ಕಳು, ಮುಂದೆ ಆಗುವ ಅವರ ಸಂಸಾರ ತಿಂದುಣ್ಣುವಷ್ಟು ಆದಾಯ ಬರುತ್ತಿದೆಯೇ ಎಂದು ಲೆಕ್ಕಹಾಕತೊಡಗಿದ. ಎರಡನೆಯ ಮಗನ ಹಾಗೆ ಉಳಿದವೂ ಸಿಟ್ಟುಮಾಡಿಕೊಂಡು ಮನೆ ಬಿಟ್ಟು ಹೋಗಿ ಯಾವುದಾದರೂ ದಂಧೆ ಕಲಿಯಬಾರದೇ ಎಂದು ಒಳಗೊಳಗೇ ಯೋಚಿಸತೊಡಗಿದ. ತನ್ನ ಆಲೋಚನೆಯ ಬಗ್ಗೆ ತಾನೇ ಒಮ್ಮೊಮ್ಮೆ ಅಸಹ್ಯ ಪಟ್ಟುಕೊಳ್ಳುತ್ತಿದ್ದ. ಕಾಯಿ ತಿನ್ನುವವರು ಕಡಿಮೆಯಾದರೆ? ಹಾಗೇನೂ ಇಲ್ಲ. ಜನಸಂಖ್ಯೆ ಮಾತ್ರ ಸರ್ಕಾರದ ಹಿಡಿತಕ್ಕೆ ಸಿಗದೆ ಹೆಚ್ಚುತ್ತಲೆ ಇದೆ. ಹೀಗಿದ್ದೂ ಕಾಯಿಗೆ ಏಕೆ ಬೆಲೆ ಇಲ್ಲವಾಯ್ತು? ಆಗೀಗ ಪೇಪರು ಓದುವ ರೂಢಿ ಇಟ್ಟುಕೊಂಡಿದ್ದ ರಾಮಶೆಟ್ಟಿಗೆ ಅದ್ಯಾವುದೋ ಬೇರೆ ದೇಶಗಳಿಂದ ತೆಂಗಿನಕಾಯಿ, ತೆಂಗಿನ ಎಣ್ಣೆ ನಮ್ಮ ದೇಶಕ್ಕೆ ಕಡಿಮೆ ದರದಲ್ಲಿ ಬರುತ್ತಿದೆ ಎಂಬ ವರ್ತಮಾನ ಹತ್ತಿತ್ತು. ಇಲ್ಲಿ ಬೆಳೆದ ಬೆಳೆಗೇ ದರ ಇಲ್ಲದೆ ಇರುವಾಗ ಬೇರೆ ದೇಶದಿಂದ ಇಲ್ಲಿಗೆ ತರುವುದಕ್ಕೆ ಸರಕಾರ ಯಾಕಾದರೂ ಒಪ್ಪಿಗೆ ಕೊಟ್ಟಿದೆಯೋ ಎಂಬುದು ಅವನಿಗೆ ಒಗಟಾಗುವುದು. ಒಗಟು ಬಿಡಿಸಲಾಗದ ಅವನ ಕಷ್ಟದ ಆ ಕ್ಷಣದಲ್ಲಿ ಸರಕಾರ ನಡೆಸುವವರು ಯಾರಾದರೂ ಸಿಕ್ಕಿದ್ದರೆಂದರೆ ಹಿಂಡಿಯ ಹೆಟ್ಟೆಯನ್ನು ನೀರಿನಲ್ಲಿ ಹಾಕಿ ಬಿಂಜಿಸುವ ಹಾಗೆ ಮಾಡಿಬಿಡುತ್ತಿದ್ದ ಅವರನ್ನು. ಹೀಗಿರುವಾಗ ಅವನಿಗೆ ಹುರುಪು ಬರಬೇಕು ಎಂದರೆ ಅದು ಬರುವುದು ಹೇಗೆ ಸಾಧ್ಯ? ಶಿಕಾರಿಗೆ ಹೋಗಬೇಕು ಎಂದರೆ ಅದು ಹೇಗೆ ಸಾಧ್ಯ? ಗಣಪಯ್ಯ ಶೆಟ್ಟರಿಗೆ ಇದೆಲ್ಲ ವ್ಯವಹಾರದ ಬಿಸಿ ಹತ್ತುವ ಹಾಗೆ ರಾಮಶೆಟ್ಟಿ ಮಾಡಿರಲಿಲ್ಲ. ಪ್ರಾಯದಲ್ಲಿ ತುಂಬ ಕಷ್ಟಪಟ್ಟ ಜೀವ ಅದು. ಮುದಿ ಕಾಲದಲ್ಲಿ ತಣ್ಣಗೆ ಇರಲಿ ಎಂಬುದು ಅವನ ಲೆಕ್ಕಾಚಾರ.

ಗಣಪಯ್ಯ ಶೆಟ್ಟರು ಕೋವಿ ಒರಸಿ ಮುಗಿದು ಹತ್ತು ಗಂಟೆಯ ಚಾ ಹೊತ್ತಾದರೂ ಮಗ ಬರದೆ ಇದ್ದಾಗ ಕುಳಿತಲ್ಲಿಯೇ ಚಡಪಡಿಸಿದರು. ಅದೇ ಹೊತ್ತಿಗೆ ರನ್ನರ್‌ ಒಂದು ಪತ್ರ ಒಗೆದು ಹೋದ. ಗಣಪಯ್ಯ ಶೆಟ್ಟರು ಸೊಸೆಯನ್ನು ಕೂಗಿ ಪತ್ರ ಕೊಟ್ಟರು.

ಪತ್ರದ ಮೇಲೆ ಕಣ್ಣಾಡಿಸಿದ ಅವಳಿಗೆ ಅದು ತನ್ನ ಎರಡನೆಯ ಮಗ ದತ್ತನದು ಎನ್ನುವುದು ತಿಳಿದು ಕಾಲುಗಳು ನೆಲದ ಮೇಲೆ ಇಲ್ಲವೇನೋ, ಎಣ್ಣೆ ಚೆಲ್ಲಿದ ನೆಲದ ಮೇಲೆ ನಡೆಯುತ್ತಿದ್ದೇನೆಯೋ ಅನ್ನಿಸಿ, ದತ್ತನ ಪತ್ರ, ದತ್ತನ ಪತ್ರ ಬಂದಿದೆ ಎಂದು ಮೊದಲು ತನಗೆ ತಾನೇ, ನಂತರ ಮಾವನಿಗೆ, ಬಳಿಕ ಉಳಿದ ಮಕ್ಕಳಿಗೆ, ಕೊನೆಗೆ ಇಡೀ ಊರಿಗೆ, ಅದಾದ ಮೇಲೆ ಇಡೀ ಜಗತ್ತಿಗೇ ಸಾರುವಂತೆ ಹೇಳತೊಡಗಿದಳು. ಸುಳಿಗಾಳಿಗೆ ಕಾಗದದ ಚೂರೆಲ್ಲ ಸುತ್ತಿ ಸುಳಿದು ಒಂದು ಕಡೆ ಗುಪ್ಪೆಯಾಗುವಂತೆ ಮನೆಮಂದಿಯೆಲ್ಲ ಒಂದೆಡೆ ಗುಪ್ಪೆಯಾಗಿ ಪತ್ರವನ್ನು ಹಿಸಿದು ಹಿಸಿದು ಓದಿದರು. ಅಷ್ಟು ಹೊತ್ತಿಗೆ ರಾಮಶೆಟ್ಟಿಯೂ ಬಂದು ಸೇರಿದ. ದತ್ತ ಚಿಕ್ಕಮಗಳೂರಿನ ಕಡೆ ಒಂದು ಪಟ್ಟಣದಲ್ಲಿ ಹೊಟೇಲೊಂದರ ಮಾಲೀಕನಾಗಿದ್ದಾನೆ ಎನ್ನುವುದು ಆ ಪತ್ರದ ಒಕ್ಕಣೆಯಿಂದ ತಿಳಿಯಿತು. ಮನೆಮಂದಿಯ ಎಲ್ಲರ ಕ್ಷೇಮ ಸಮಾಚಾರ ಕೇಳಿದ್ದ ಅವನು, ತಾನು ಇಲ್ಲಿ ಕ್ಷೇಮವಾಗಿ ಇದ್ದೇನೆ ಎಂದು ತಿಳಿಸಿದ್ದ. ಇವರ್ಯಾರಿಗೂ ಬನ್ನಿ ಎಂದು ಬರೆದಿರಲಿಲ್ಲ. ತಾನು ಬರುತ್ತೇನೆ ಎಂದೂ ತಿಳಿಸಿರಲಿಲ್ಲ. ತಾನು ಅಲ್ಲಿಯೇ ಮದುವೆ ಮಾಡಿಕೊಂಡಿದ್ದೇನೆ ಎಂದೂ ಬರೆದಿದ್ದ. ತಾನು ಮದುವೆಯಾದವಳು ಹಾರವರ ಹುಡುಗಿ ಎಂದೂ ಸೇರಿಸಿದ್ದ.

ಮನೆಯವರನ್ನೆಲ್ಲ ಖುಷಿ, ಕೋಪ, ಅಸೂಯೆ ಎಂಬೆಲ್ಲ ಭಾವನೆಗಳು ಏಕಕಾಲದಲ್ಲಿ ದಾಳಿ ಮಾಡಿ ಹಣ್ಣು ಮಾಡಿತು. ಹೋಗಿ ನೋಡಿ ಬರಬೇಕು ಎಂದರೆ ವಿಳಾಸವನ್ನೇ ಬರೆದಿರಲಿಲ್ಲ. ಸಿಟ್ಟಿನಲ್ಲಿ ಹಾಗೆ ಮಾಡಿರಬೇಕು ಎಂದು ಹೆತ್ತ ಕರುಳು ತರ್ಕಿಸಿತು. ರಾಮಶೆಟ್ಟಿಗೆ ಒಂದೇ ಸಮನೆ ಹೆಂಡತಿಯ ವರಾತ. ಹೋಗಿ ನೋಡಿ ಬನ್ನಿ. ಮದುವೆಗೆ ಹೇಳದಿದ್ದರೆ ಏನಾಯ್ತು. ಸೊಸೆಯನ್ನು ನೋಡಿಯಾದರೂ ಖುಷಿ ಪಡುವಾ ಎಂಬ ನುಡಿಗಳನ್ನು ಹೇಳಿದ್ದೇ ಹೇಳಿ ಕಲ್ಲು ಮನಸ್ಸಿನ ರಾಮಶೆಟ್ಟಿಯೂ ಅಲ್ಲಿಗೆ ಹೋಗಿ ಬರುವ ಮನಸ್ಸು ಮಾಡುವ ಹಾಗೆ ಆಯಿತು.

ಕಾಣದ ಕೇಳದ ಊರಲ್ಲಿ ಹೋಗಿ ಒಂದು ಹೊಟೇಲಿನ ಮಾಲೀಕನಾಗಿದ್ದಾನೆ ಎಂದರೆ ಧೈರ್ಯವಾನ್‌ ಮಗನೇ ಇದ್ದಾನೆ ಅಂದುಕೊಂಡ. ಎಷ್ಟೆಂದರೂ ನನ್ನ ಮಗ ಅಲ್ಲವಾ ಅವನು ಎಂದು ಹೆಂಡತಿ ಪಾರ್ವತಿಯ ಹತ್ತಿರ ಹೇಳಿಕೊಂಡ ರಾಮಶೆಟ್ಟಿ. ಮಗನ ಪತ್ರ ಬಂದಮೇಲೆ ರಾಮಶೆಟ್ಟಿ ಗಣೇಶ ಹೆಗಡೆ ಮನೆಯವರಿಗೆಲ್ಲ, ತನ್ನ ಮಗ ದತ್ತ ಅವರ ಪೈಕಿಯ ಹುಡುಗಿಯ ಕೈ ಹಿಡಿದಿದ್ದಾನೆ ಎಂದು ಸುದ್ದಿ ಮುಟ್ಟಿಸಿದ. ಒಳಗೊಳಗೇ ಎಂಥದ್ದೋ ಖುಷಿ ಅವನಿಗೆ ಹಾಗೆ ಹೇಳುವಾಗ. ಮಗ ವಿಳಾಸ ಬರೆಯದಿದ್ದರೂ ಪತ್ರದ ಮೇಲೆ ಯಾವ ಊರಿನ ಸಿಕ್ಕಾ ಬಿದ್ದಿದೆ ಎಂಬುದನ್ನು ರನ್ನರ್‌ ಸಹಾಯದಿಂದ ತಿಳಿದುಕೊಂಡು ತಿಪಟೂರಿಗೆ ಹೋಗುವ ಬಸ್ಸನ್ನು ಹತ್ತಿ ಹೊರಟುಬಿಟ್ಟ. ಆ ಊರಿನಲ್ಲಿ ಇರುವ ಹತ್ತೆಂಟು ಹೊಟೇಲುಗಳನ್ನು ಅಲೆದು ಅದರಲ್ಲಿ ತನ್ನ ಮಗನನ್ನು ಕಂಡು ಹಿಡಿಯುವುದು ಅವನಿಗೆ ಕಷ್ಟವೇನೂ ಆಗಲಿಲ್ಲ.

ಅಪ್ಪನನ್ನು ಕಂಡು ಮಗನಿಗೆ ಖುಷಿ ಏನೂ ಆಗಲಿಲ್ಲ.ನೀನು ಇಲ್ಲಿಯ ವರೆಗೆ ಯಾಕೆ ಬಂದೆ?’ ಎಂದು ಮಗ ಪ್ರಶ್ನಿಸಿದ್ದು ರಾಮಶೆಟ್ಟಿಗೂ ಸರಿ ಕಾಣಲಿಲ್ಲ. ದತ್ತ ಅಲ್ಲಿ ತಾನು ಬ್ರಾಹ್ಮಣರ ಮನೆಯ ಹುಡುಗ ಎಂದು ಹೇಳಿಕೊಂಡು ಆ ಹೊಟೇಲಿನ ಮಾಲೀಕರ ವಿಶ್ವಾಸ ಗಳಿಸಿಕೊಂಡಿದ್ದ. ಅವರಿಗಿದ್ದ ಒಬ್ಬಳೇ ಮಗಳನ್ನು ಮದುವೆಯಾಗಿದ್ದ. ಇದೀಗ ರಾಮಶೆಟ್ಟಿಯ ಆಗಮನದಿಂದ ಅವನ ಜನುಮದ ನಿಜ ತಿಳಿದುಹೋಯಿತು. ತನ್ನ ಹೆಂಡತಿಗೆ ಮುಖ ತೋರಿಸುವುದು ಅವನಿಗೆ ಸಾಧ್ಯ ಆಗಲಿಲ್ಲ. ವಿಶ್ವಾಸದ್ರೋಹದ ಕೆಲಸ ಮಾಡಿದೆ ಎಂದು ದತ್ತನಿಗೇ ಅನ್ನಿಸಿ ಪಾಪಪ್ರಜ್ಞೆ ಕಾಡತೊಡಗಿತು. ತನ್ನ ನಿಜವನ್ನು ತಾನಾಗಿಯೇ ತನ್ನ ಹೆಂಡತಿಯ ಮುಂದೆ ಬಯಲು ಮಾಡಬಹುದಿತ್ತಲ್ಲ. ಆ ಅವಕಾಶವೂ ಈಗ ಅಪ್ಪನ ಆಗಮನದಿಂದ ತಪ್ಪಿಹೋಯಿತಲ್ಲ ಎಂದು ಹಳಹಳಿಸಿದ.
ಮಗನ ಮ್ಲಾನವಾದ ಮುಖವನ್ನು ನೋಡಿ ರಾಮಶೆಟ್ಟಿಗೆ ತಾನು ಇಲ್ಲಿಗೆ ಬಂದದ್ದು ಮಗನ ಮನಸ್ಸಿಗೆ ಬರಲಿಲ್ಲ ಎನ್ನುವುದು ಅರಿತುಹೋಯಿತು. ಆದರೆ ಏನು ಮಾಡುವುದು, ಬಂದದ್ದು ಆಗಿಬಿಟ್ಟಿದೆ. ಸಮಯ ಸಂದರ್ಭ ನೋಡಿ ರಾಮಶೆಟ್ಟಿ ಊರು ನೋಡುವ ನೆಪ ಮಾಡಿಕೊಂಡು ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋದ. ಮಗ ದತ್ತ ತನ್ನ ಮನಸ್ಸಿನ ಅಳಲನ್ನು ಅಪ್ಪನ ಮುಂದೆ ತೋಡಿಕೊಂಡ. ಸುಳ್ಳು ಹೇಳಿಕೊಂಡು ಮದುವೆ ಮಾಡಿಕೊಂಡಿದ್ದು ರಾಮಶೆಟ್ಟಿಗೂ ಸರಿ ಬರಲಿಲ್ಲ. ತಾನು ಇದುವರೆಗಿನ ತನ್ನ ಬದುಕಿನಲ್ಲಿ ಎಲ್ಲವನ್ನೂ ಮುಖದ ಮೇಲೆ ಹೊಡೆದಹಾಗೆಯೇ ಸಾಧಿಸಿಕೊಂಡು ಬಂದವನು. ಮಗನ ಒಳ್ಳೆಯ ಗುಣ, ಪ್ರಾಮಾಣಿಕತೆಗಳು ಗಣನೆಗೆ ಬಂದು ಹೊಟೇಲ್‌ ಮಾಲೀಕ ತನ್ನ ಮಗಳನ್ನು ಮದುವೆಮಾಡಿಕೊಟ್ಟಿದ್ದರೆ ರಾಮಶೆಟ್ಟಿ ತನ್ನ ಮೀಸೆಯನ್ನು ಹುರಿಮಾಡಿಕೊಳ್ಳುತ್ತಿದ್ದ. ತನ್ನ ಮಗನ ಎಲ್ಲ ಸದ್ಗುಣಗಳ ಹೊರತಾಗಿಯೂ ಜಾತಿಯ ಮಾನದಂಡವೊಂದು ಅಂತಿಮ ಪ್ರಮಾಣವಾಗಿ ಪರಿಗಣಿತವಾದದ್ದು ಅವನ ಮನಸ್ಸಿಗೆ ಹಿತವಾಗಲಿಲ್ಲ. ನಿನ್ನ ಅಪ್ಪ ಇಷ್ಟು ದಿನ ತಲೆ ಎತ್ತಿಕೊಂಡು ತಿರುಗುತ್ತಿದ್ದ. ಇದೀಗ ನಿನ್ನ ಒಂದು ಸುಳ್ಳಿನಿಂದ ನಾನು ತಲೆ ತಗ್ಗಿಸುವ ಹಾಗೆ ಮಾಡಿದೆಯಲ್ಲೋ ಎಂದು ದೂಷಿಸಿದ. ನಿನ್ನ ಹೆಂಡತಿ ಮದುವೆಗೆ ಮೊದಲೇ ನಿನ್ನನ್ನು ಪ್ರೀತಿಸಿದ್ದರೆ ಅವಳಲ್ಲಿಯಾದರೂ ನೀನು ನಿನ್ನ ರಹಸ್ಯವನ್ನು ಹೇಳಿಕೊಳ್ಳಬಹುದಾಗಿತ್ತಲ್ಲ ಎಂದು ಹೇಳಿದ.
ಕೊನೆಗೆ, ಇದೆಲ್ಲ ಮುಗಿದುಹೋದ ಮಾತು. ಈಗ ಏನೂ ಮಾಡುವ ಹಾಗೆ ಇಲ್ಲ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅಂದುಕೊಂಡು, ಸುಳ್ಳಿನ ಪರದೆಯನ್ನು ಕಳಚಿ ಒಗೆ. ಬಂದುದನ್ನು ಅನುಭವಿಸು ಎಂದು ಮಗನಿಗೆ ಉಪದೇಶ ಮಾಡಿದ.
ರಾಮಶೆಟ್ಟಿ ಅಲ್ಲಿದ್ದಷ್ಟು ದಿನ ಆತನಿಗೆ ಯಾವ ಕೊರತೆಯೂ ಆಗದ ಹಾಗೆ ದತ್ತನ ಹೆಂಡತಿ ನೋಡಿಕೊಂಡಳು. ಮಾವ ಎಂದು ವಿಶ್ವಾಸದಿಂದ ಕರೆದು ಅವನ ಬೇಕು ಬೇಡಗಳನ್ನು ವಿಚಾರಿಸಿಕೊಂಡಳು. ತನ್ನ ಅತ್ತೆಯ ಬಗ್ಗೆ, ಮೈದುನರ ಬಗ್ಗೆ ಕೇಳಿದಳು. ತಾನೂ ಒಂದು ಸಲ ಬರುತ್ತೇನೆ ಗಂಡನ ಜೊತೆಗೆ ಎಂದಳು. ಎಂಥ ಘನ ಮಗು. ಪಾರ್ವತಿಯನ್ನೂ ಕರೆದುಕೊಂಡು ಬರಬೇಕಿತ್ತು ಅಂದುಕೊಂಡ ರಾಮಶೆಟ್ಟಿ ಮೂರ್ನಾಲ್ಕು ದಿನ ಅಲ್ಲಿಯೇ ಇದ್ದು ಮಹಾಲಕ್ಷ್ಮಿಯಂಥ ಸೊಸೆ ಎಂದು ಹೊಗಳುತ್ತ ಮನೆಗೆ ಮರಳಿದ.
ರಾಮಶೆಟ್ಟಿ ಇತ್ತ ಮರಳಿದ ಮೇಲೆ ಅತ್ತ ದತ್ತ ಮತ್ತು ಅವನ ಹೆಂಡತಿಯ ನಡುವೆ ಏನು ನಡೆಯಿತೋ ಏನೋ? ಅವನು ಇನ್ನೂ ಮನೆಗೆ ಬಂದು ಮುಟ್ಟಿದನೋ ಇಲ್ಲವೋ ಗಣೇಶ ಹೆಗಡೆಯ ಮನೆಯಿಂದ ಫೋನ್‌ ಬಂದಿದೆ ತಿಪಟೂರಿನಿಂದ ಎಂಬ ಕರೆ ಬಂತು. ಕುತ್ತಿಗೆಯ ಮೇಲಿನ ಬೆವರನ್ನು ಬೈರಾಸದಿಂದ ಒರಿಸಿಕೊಳ್ಳುತ್ತಲೇ ಫೋನು ಹಿಡಿದ ರಾಮಶೆಟ್ಟಿ ಅತ್ತ ಕಡೆಯ ಸುದ್ದಿ ಕೇಳಿ ಗಾಣ ಮುರಿದು ಬೆನ್ನ ಮೇಲೆ ಬಿದ್ದವನಂತೆ ನರಳಿದ.
ಅವನ ಮಗ ದತ್ತ ಮತ್ತು ಸೊಸೆ ಇಬ್ಬರೂ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರಂತೆ.

ಮುಂಬಯಿ ‘ಅಕ್ಷಯ’ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ- 2005

ಬೆನ್ನುಡಿ

ಆಧುನಿಕ ಕಥನಕಾರನಿಗೆ ಆತ ಹುಟ್ಟಿ ಬೆಳೆದ ಊರು, ಪರಿಸರವೇ ಆಸ್ತಿ. ತನ್ನ ಪರಿಸರದ ಚರಿತ್ರೆಯ ಗಾಢ ಅನುಭವಗಳು ಕಥನದಲ್ಲಿ ಆಕಾರ ಪಡೆಯುತ್ತ ಪುನಾರಚನೆಗೊಳ್ಳುತ್ತವೆ. ಹೆಚ್ಚಾಗಿ ಬಾಲ್ಯದ ಅನುಭವಗಳೇ ಕಥನದಲ್ಲಿ ರೂಪ ಪಡೆಯುತ್ತವೆ. ಇದರಿಂದ ಹೊರತಾದ ಕಥನಕಾರರಿಲ್ಲ. (ಶಾಂತಿನಾಥ ದೇಸಾಯಿ ಇದರಿಂದ ಹೊರತಾಗಿದ್ದಾರೆಂದು ಕಾಣುತ್ತದೆ.) ಬಾಲ್ಯದಲ್ಲಿ ತನ್ನ ಪರಿಸರದಿಂದ ವಂಚಿತನಾದರೆ ಕಥನಕಾರನಾಗುವುದು ಕಷ್ಟ. ಆಧುನಿಕ ಕನ್ನಡ ಕಥನಕಾರರ ಚರಿತ್ರೆಯನ್ನು ಗಮನಿಸಿದರೆ ಇದು ಅರಿವಿಗೆ ಬರುತ್ತದೆ. ಬಾಲ್ಯದ ಅನುಭವಗಳು ಸಣ್ಣ ಪ್ರಮಾಣದಲ್ಲಿ ಇದ್ದರೆ ಅಂಥವರು ಕಥನವನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟಲು ಆಗುವುದಿಲ್ಲ. ಕುವೆಂಪು, ಕಾರಂತ ಮೊದಲಾದವರು ಬಾಲ್ಯದಲ್ಲಿ ತಮ್ಮ ಪರಿಸರದ ಜತೆ ಗಾಢ ಸಂಬಂಧವನ್ನು ಹೊಂದಿದ್ದರಿಂದ ಅಗಾಧ ರೀತಿಯಲ್ಲಿ ಕಥನವನ್ನು ಕಟ್ಟಲು ಸಾಧ್ಯವಾಗಿದೆ. ಈಚಿನ ದಿನಗಳಲ್ಲಿ ವ್ಯಕ್ತಿ ತಾನು ಹುಟ್ಟಿ ಬೆಳೆದ ಪರಿಸರದ ಜೊತೆ ನಿಕಟ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಥನಕಾರನಾಗಲು ವಿಫಲನಾಗುತ್ತಿದ್ದಾನೆ. ಈಚಿನ ಕನ್ನಡ ಕಥನಕಾರರನ್ನು ಗಮನಿಸಿದರೆ ಒಂದು ಅಂಶ ಎದ್ದು ಕಾಣುತ್ತದೆ, ಬದುಕಿನೊಂದಿಗೆ ಬೆಸೆದಿರುವ ಪರಿಸರದ ಚಿತ್ರಣವೇ ದುರ್ಬಲವಾಗಿರುವುದು. ಬಾಲ್ಯದ ಅನುಭವಗಳು ದಕ್ಕದೇ ಇರುವುದು ಇದಕ್ಕೆ ಕಾರಣವೆಂದು ತೋರುತ್ತದೆ.
ಶ್ರೀ ವಾಸುದೇವ ಶೆಟ್ಟಿ ಅವರ ಕಥೆಗಳ ಪರಿಸರ ಉತ್ತರಕನ್ನಡ ಜಿಲ್ಲೆಯದು. ಅವರು ಈಗ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಪರಿಸರದ ಬದುಕನ್ನು ಕಥೆಗಳಲ್ಲಿ ತರಲು ಪ್ರಯತ್ನಿಸಿದ್ದಾರೆ. ಅವರು ಉತ್ತರಕನ್ನಡ ಜಿಲ್ಲೆಯ ಹಳ್ಳಿ ಪರಿಸರದಿಂದ ಈಗ ದೂರವಿದ್ದರೂ ಅವರ ಕಥೆಗಳಲ್ಲಿ ಗ್ರಾಮೀಣ ಬದುಕು ವ್ಯಕ್ತವಾಗಿದೆ. ಮನುಷ್ಯ ಸಂಬಂಧಗಳ ವಿವಿಧ ಮುಖಗಳು ಇಲ್ಲಿ ಕಾಣುತ್ತವೆ. ಜಾಗತೀಕರಣದ ಪರಿಣಾಮಗಳೂ ಇಲ್ಲಿ ಸಿಗುತ್ತವೆ. ಯಾವುದೇ ವಸ್ತು- ವಿಷಯಗಳು ಸಂಕೀರ್ಣಗೊಳ್ಳದೆ ಸರಳ ನಿರೂಪಣೆಯಲ್ಲಿವೆ. ಈ ಸರಳ ನಿರೂಪಣೆ ಗುಣಾತ್ಮಕವಾಗಿ ಕೆಲವು ಕಥೆಗಳಲ್ಲಿ ಕಾಣುತ್ತದೆ. ಶ್ರೀ ವಾಸುದೇವ ಶೆಟ್ಟಿಯವರು ಉತ್ತಮ ಕಥೆಗಾರರು ಎಂಬುದರಲ್ಲಿ ಯಾವ ಅನುಮಾನಗಳಿಲ್ಲ. ಈಗ ಇರವ ಮಿತಿಗಳನ್ನು ಮೀರಿ ಬರೆಯಬೇಕು. ಉತ್ತರಕನ್ನಡ ಜಿಲ್ಲೆಯ ಪರಿಸರದೊಂದಿಗೆ ಸಮಕಾಲೀನ ತಲ್ಲಣಗಳನ್ನು, ಸಂಘರ್ಷಗಳನ್ನು ಬಿಂಬಿಸುವ ಕಥೆಗಳನ್ನು ಬರೆಯುವಂತಾಗಲಿ ಎಂದು ಆಶಿಸುತ್ತೇನೆ.

ಡಾ.ಅಮರೇಶ ನುಗಡೋಣಿ
ಹಂಪಿ ಕನ್ನಡ ವಿಶ್ವವಿದ್ಯಾನಿಲಯ